Wednesday, December 31, 2008

ನಿಮ್ಮ ಪ್ರೀತಿಗಾಗಿ..ಖುಷಿ ಖುಷಿ ಸಾಲುಗಳು!

ಬೆಳ್ಳಂಬೆಳಗ್ಗಿನ ಚುಮು ಚುಮು ಚಳಿಗೆ ಮುಂಜಾವು ಊರಿಂದ ಬೆಂಗಳೂರಿಗೆ ಬಂದು ಇಳಿದವಳಿಗೆ ಬಸ್ಸ್ಟಾಂಡ್, ಬಸ್ಸುಗಳಲ್ಲಿ ಏನೋ ಹೊಸವರ್ಷದ ಗುಂಗಿತ್ತು. ಯುಗಾದಿ ನಮಗೆ ಹೊಸವರ್ಷ ಆದ್ರೂ ಜನವರಿ 1 ಅಂದ್ರೆ ಅದೇ ಸಡಗರದ ಹೊಸವರ್ಷವಾಗಿಬಿಟ್ಟಿದೆ.. .ಇರಲಿ ಬಿಡಿ, ಈಗ ಮತ್ತೊಂದು ಜನವರಿ 1 ಬಂದಿದೆ..ಡುಂಡಿರಾಜ್ ಹೇಳಿದಂತೆ ಅದೇ ಹಳೆಯ ಮೊಳೆಗೆ ಹೊಸ ಕ್ಯಾಲೆಂಡರ್ ನೇತುಹಾಕುವುದು. ಏನೇ ಇರಲಿ..ಹೆಚ್ಚೇನೂ ಬರೆಯಲ್ಲ...ಒಂದಿಷ್ಟು ಖುಷಿ ಖುಷಿ ಸಾಲುಗಳನ್ನು ನಿಮಗಾಗಿ...ನಿಮ್ಮ ಪ್ರೀತಿಗಾಗಿ ಇಲ್ಲಿ ಚೆಲ್ಲಿ ಬಿಟ್ಟಿದ್ದೀನಿ..ಎಲ್ಲೋ ಓದಿದ್ದು,...ಯಾರೋ ಹೇಳಿದ್ದು..ಯಾರೋ ಬರೆದಿದ್ದು..ನನ್ನ ಕಿವಿಗೆ ಕೇಳಿದ್ದು ಎಲ್ಲವೂ ಇಲ್ಲಿದೆ...ಪುರುಸೋತ್ತು ಇದ್ರೆ ಓದಿಕೊಳ್ಳಬಹುದು.

"ಗೆದ್ದ ಕಲಿಗಳು ಬಾಳನ್ನು ಆಳಿ ಇತಿಹಾಸಕ್ಕೆ ವಸ್ತುವಾಗುತ್ತಾರೆ. ಸೋತ ವೀರರು ತಮ್ಮ ಬಾಳಿನ ಇತಿಹಾಸ ತಾವೇ ಬರೆಯುತ್ತಾರೆ"

"ನಿಟ್ಟುಸಿರಿನ ಬಿರುಗಾಳಿಯೊಡನೆ ಸುರಿಸುವ ಕಣ್ಣೀರಿನ ಜಡಿಮಳೆಯಲ್ಲಿ ಗಂಡಿನ ಸಿಡಿಗುಂಡುಗಳೆಲ್ಲ ತೊಯ್ದು ಹಾಳಾಗುವುವು. ಅವನ ಗಂಡೆದೆಯೂ ಕರಗಿ ತಣ್ಣಗಾಗುವುದು. ಕಣ್ಣೀರಿನ ಈ ಪರ್ಜನ್ಯಾಸ್ತ್ರದ ಪ್ರಯೋಗ ತಂತ್ರ ಹೆಣ್ಣಿಗೆ ಚೆನ್ನಾಗಿ ಗೊತ್ತು"

"ಒಳಗೊಳಗೆ ಕುದಿವ ಭೂಕಂಪವಿದ್ದರೂ ಮೇಲೆ ಹುಲ್ಲಿನ ಹಸಿರು ತಂಪನ್ನೂ ಹೂವಿನ ನರುಗಂಪನ್ನೂ ಹಬ್ಬಿಸುವ ಭೂತಾಯಂತೆ ಹೆಣ್ಣಿನ ಹೃದಯ"

"ಒಲವೆಂಬ ಹೊತ್ತಗೆಯ ಓದಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುವಿಯೋ ಹುಚ್ಚ?
ಹಗಲಿರುಳು ದುಡಿದರೂ ಹಲಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆ ವೆಚ್ಚ"

"ತಾರುಣ್ಯದ ಉನ್ಮಾದದಲ್ಲಿ ಜಗತ್ತೆಲ್ಲ ಸುಂದರಕಾಂಡ ವೆನಿಸುತ್ತದೆ. ಜೀವನವೆಲ್ಲ ಉದ್ಯೋಗಪರ್ವ ವೆನಿಸುತ್ತದೆ. ಪ್ರತಿಯೋರ್ವ ಗರ್ದಭನೂ ಗಂಧರ್ವನಾಗುತ್ತಾನೆ. ಅಪಸ್ಮಾರಿಯೂ ಅಪ್ಸರೆಯೆನಿಸುತ್ತಾಳೆ"

"ತನ್ನ ಕಿರಣ ತನಗೆ ಹಗಲು ಉಳಿದ ಬೆಳಕು ಕತ್ತಲು"

"ಧರ್ಮ ಎಂದರೆ ಆತ್ಮಸಾಕ್ಷಾತ್ಕಾರ, ಆತ್ಮಜ್ಞಾನ"

"ಪೆಟ್ಟಾಗಿರುವ ಕಡೆಗೆ ಏಟು ಬೀಳುವುದು, ಒಂಟಿ ಮರಕ್ಕೆ ಸಿಡಿಲು ಬಡಿಯೋದು ಪ್ರಕೃತಿ ನಿಯಮ"

"ಮನುಷ್ಯರನ್ನು ಪ್ರೀತಿಸುವುದಕ್ಕಿಂತ ನಿಸರ್ಗವನ್ನು ಪ್ರೀತಿಸುವುದರಲ್ಲೇ ನಿರಾಶೆಗೊಳಗಾಗುವ ಭೀತಿ ಕಡಿಮೆ"

"ಭಾವನೆ ಅಳಿದ ಮೇಲೆ ಉಳಿಯೋದು ಕೊಳೆತು ನಾರುವ ಶವ ಮಾತ್ರ"

"ನಿಜವಾದ ಅಪ್ಪ ಹೇಗಿರಬೇಕೆಂದರೆ ಯಾವ ಕಾರಣಕ್ಕೂ ಅನಾಥ ಮಕ್ಕಳೆದುರು ತಮ್ಮ ಮಕ್ಕಳನ್ನು ಮುದ್ದು ಮಾಡಬಾರದು"

"ಪುಟವಿಟ್ಟ ಚಿನ್ನದಂತಹ ಪಾರದರ್ಶಕರ ಸಾಲಿನಲ್ಲಿ ಇಂದಿನ ಅಧಿಕಾರಶಾಹಿಗಳ ನಂಬಿಕೆ, ನಡವಳಿಕೆಗಳು ಫ್ರಟ್ ಸಲಾಡ್ ನಲ್ಲಿ ಸಿಕ್ಕ ಸಿಕ್ಕೆ"

"ಒಬ್ಬ ಲಕ್ಷಾಧೀಶನ ಜೀವನ ಒಂದು ಕತೆಯಾಗಬಹುದಾದರೆ, ಭಿಕ್ಷುಕನ ಬಾಳು ಇನ್ನೂ ಸ್ವಾರಸ್ಯಕರವಾದ ಕತೆಯಾಗುವುದರಲ್ಲಿ ಸಂಶಯವಿಲ್ಲ. ಕತ್ತೆ ಜೀವನವೂ ಒಂದು ಸುಂದರವಾದ ಜೀವನಚರಿತ್ರೆಯಾಗಲಾರದೇ?"

"ರಾಜಬೀದಿಯಾಗಲು ಸಾಧ್ಯವಿಲ್ಲದಿದ್ದರೂ, ಕಾಲುದಾರಿಯಾಗಲು ಸಾಧ್ಯವಿದೆ. ಸೂರ್ಯನಾಗಲು ಸಾಧ್ಯವಾಗದಿದ್ದರೂ ಪುಟ್ಟ ನಕ್ಷತ್ರವಾಗಿ ಹೊಳೆಯುವುದು ಕಷ್ಟವೇನಲ್ಲ"

"ಕೆಲವೊಮ್ಮೆ ಸಮಸ್ಯೆಗಳಿಗೂ ನಮ್ಮನ್ನು ಸೋಲಿಸಲು ಧೈರ್ಯವಿರುವುದಿಲ್ಲ"

"ಮನುಷ್ಯನಲ್ಲಿರುವ ದೌರ್ಬಲ್ಯಕ್ಕೆ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಔಷಧವಲ್ಲ. ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ"

"ಮಾಡದಿರು ಬಾಳನ್ನು ಬೇಳೆಯಂತೆ..ಮಾಡು ಬಾಳನ್ನು ಇಡಿಗಾಳಿನಂತೆ"

"ಕಣ್ಣೀರು ತುಂಬಾ ಬೆಲೆಬಾಳಿವಂತದ್ದು. ಕಣ್ಣೀರಿನ ಬೆಲೆ ಅರಿಯದವರೆದುರು ಕಣ್ಣೀರು ಹಾಕಬಾರದು"

"ನಿನ್ನ ಕಣ್ಣು ಮತ್ತು ನಗುವನ್ನು ನಾ ಪ್ರೀತಿಸುವೆ..ನೀ ಖುಷಿಯಲ್ಲಿದ್ದಾಗ ಬೆಳಕು ನೀಡು"

"ಪ್ರೀತಿಯ ಸ್ಪರ್ಶವಿಲ್ಲದವನು ಕತ್ತಲಲ್ಲಿ ನಡೆಯುತ್ತಾನೆ"

Tuesday, December 23, 2008

ನೋಡಲು ಬಂದ..ಮೊಬೈಲು ಹುಡುಗ..!!

ಆವಾಗ ದ್ವಿತೀಯ ಪಿಯುಸಿ..ಅಕ್ಟೋಬರ್ ರಜಾ ಸಮಯ. ರಜೆಯಲ್ಲಿ ಮನೆಗೆ ಬಂದು
ಆರಾಮವಾಗಿ ಮನೆಯಲ್ಲಿ ಅಮ್ಮ ಮಾಡಿಟ್ಟಿದ್ದನ್ನು ತಿಂದು ತೇಗೋ ದೀನಗಳು. ನಮ್ಮೂರಿನ ಆನಂದನಿಗೆ ಊರ ಹುಡುಗಿಯರಿಗೆಲ್ಲ ಗಂಡು ಹುಡುಕೋ ಚಾಳಿ. ನಮ್ಮನೆಗೆ ಬಂದರೆ 'ಬಾಲೆಕ್ಕ'ನಿಗೆ ಹುಡುಗ ನೋಡ್ತೀನಿ ಅಂತ ಹೇಳುತ್ತಲೇ ಇದ್ದ. ಬಾಲೆಕ್ಕ ಅಂತ ಅಮ್ಮ ಪ್ರೀತಿಯಿಂದ ಕರೆಯುವ ಹೆಸರು. ಆನಂದನ ನೋಡಿದರೆ ನಂಗೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಕೆಟ್ಟ ಕೆಟ್ಟ ಪದದಲ್ಲಿ ಬೈಯುತ್ತಿದ್ದೆ. ಅಷ್ಟಾದರೂ ಒಂದು ದಿನ ಹುಡುಕಿಯೇ ಬಿಟ್ಟ!

ಹುಡುಗ ಹುಡುಕಿದ ಖುಷಿಯಲ್ಲಿ ಬೆಳ್ಳಂಬೆಳಿಗ್ಗೆ ನಮ್ಮನೆಗೆ ಬಂದು ಅಮ್ಮನ ಜೊತೆ ರಾಗ ಎಳೆದ. ಆವಾಗಿನ್ನೂ ಹಳ್ಳಿಗಳಿಗೆ ಮೊಬೈಲು ಹೊಸತು. ಆನಂದ ಬಂದು ಅಮ್ಮನ ಜೊತೆ ಹುಡುಗನ ಬಗ್ಗೆ ಹೇಳಿದ್ದೇ , "ಬಾಲೆಕ್ಕನಿಗೆ ಒಳ್ಳೆ ಹುಡುಗ ಹುಡುಕಿದ್ದೀನಿ..ಗೌರ್ನಮೆಂಟ್ ಕೆಲಸದಲ್ಲಿದ್ದಾನೆ. ಓಡಾಟಕ್ಕೆ ಬೈಕ್ ಇದೆ. ಮನೆಯಲ್ಲೊಂದು ಜೀಪು ಇದೆ. ಅವನಿಗೊಂದು ಮತ್ತು ಅವನ ಮನೆಯಲ್ಲೊಂದು ಮೊಬೈಲ್ ಸೆಟ್ ಇದೆ. ಒಬ್ಬನೇ ಮಗ..ತುಂಬಾ ಒಳ್ಳೆಯವನು..." ಹೀಗೇ ಅವನ ಮೊಬೈಲು ಪ್ರತಿಷ್ಠೆ, ಮೈಬಣ್ಣ, ಕುಟುಂಬ, ಅವನ ಸರ್ಕಾರಿ ಕೆಲಸ..ಎಲ್ಲವನ್ನೂ ಪುಂಖಾನುಪುಂಖವಾಗಿ ಕೊಂಡಾಡಿದ್ದೇ ಕೊಂಡಾಡಿದ್ದು. ಅವನು ಹೇಳೋ ಪರಿ ಹೇಗಿತ್ತೆಂದರೆ..ನಮ್ಮಮ್ಮ ಮಗಳಿಗೆ ಮದುವೆನೇ ಆಗಿಬಿಡ್ತು ಅನ್ನುವ ಸಂಭ್ರಮದಲ್ಲಿದ್ದರು!!. ಅಬ್ಬಾ..! ಇವನಿಗೊಂದು ಗತಿ ಕಾಣಿಸಬೇಕು ಅಂದುಕೊಂಡು..ಸುಮ್ಮನಾದೆ. ಅಮ್ಮ, "ಆಯ್ತು..ಆನಂದ ನೋಡಿಕೊಂಡು ಹೋಗಲಿ..ಬಾಲೆಕ್ಕನಿಗೆ ರಜೆ ಮುಗಿಯಕೆ ಮೊದಲು ಕರೆದುಕೊಂಡು ಬಾ" ಅಂದ್ರು. ಬೈಕಿರುವ, ಜೀಪು ಇರುವ, ಮೊಬೈಲು ಹುಡುಗ ಮನೆಗೆ ಹೆಣ್ಣು ನೋಡೋ ದಿನ ಬಂದೇಬಿಟ್ಟಿತ್ತು..ಇನ್ನು ಒಂದೇ ದಿನ ಬಾಕಿಯಿರುವುದು. ಅಮ್ಮನಿಗಂತೂ ಖುಷಿಯೇ ಖುಷಿ..ಅಮ್ಮನತ್ರ ಹೇಳಿದೆ..ಅರ್ಜೆಂಟಾಗಿ ಕಾಲೇಜಿಗೆ ಹೋಗಬೇಕಂತೆ..ಫೋನ್ ಬಂದಿದೆ..ಹುಡುಗನ ಇನ್ನೊಂದ್ಸಲ ನೋಡಿಕೊಂಡು ಹೋಗಕ್ಕೆ ಹೇಳಿ..! ಅಮ್ಮನಿಗೆ ಸಿಟ್ಟು ಬಂತು. ಯಾಕಂದ್ರೆ ಮರುದಿನ ಹುಡುಗ ಬರುವವನಿದ್ದ. ಅಮ್ಮ ಹೇಳೋದನ್ನು ಕೇಳದೆ ಸೀದಾ ಉಜಿರೆಗೆ ಹೋಗಿಬಿಟ್ಟೆ. ನಾಲ್ಕು ದಿವಸ ಹಾಸ್ಟೇಲ್ ನಲ್ಲಿ ಹೋಗಿ ಕುಳಿತು ಆಮೇಲೆ ಮನೆಗೆ ಬಂದೆ. ಅಮ್ಮ ಒಳ್ಳೆ ಹುಡುಗ ಕೈ ತಪ್ಪಿ ಹೋದ ಅಂತ ರೇಗಾಡುತ್ತಿದ್ದರೆ, ಇತ್ತ ಆನಂದ 'ಮೊಬೈಲು, ಜೀಪು ಹುಡುಗ' ತಪ್ಪಿಹೋದನಲ್ಲಾ ಅಂತ ಗೊಣಗುತ್ತಿದ್ದ! ಅವನಿಗೆ ಸಿಗು ಪುಡಿಗಾಸೂ ಕೂಡ ಸಿಗದೆ ಹೋಯ್ತಲ್ಲಾ ಅಂತ ಅವನಿಗೆ ತಲೆಬಿಸಿ ಬೇರೆ.

ಮತ್ತೆ ಕಾಲೇಜು ಆರಂಭವಾಯಿತು. ನಾನು ಉಜಿರೆಗೆ ಹೋದೆ. ಪ್ರತಿ ಎರಡು ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದೆ ನಾನು. ಹಾಗೇ ಒಂದು ದಿನ ಶನಿವಾರ ಕಾಲೇಜಿಂದ ಮನೆಗೆ ಬರುವಾಗ ಪುತ್ತೂರು ಬಸ್ ಸ್ಟಾಂಡಿನಲ್ಲಿ ಆನಂದ ಹುಡುಗನ ಜೊತೆ ಪ್ರತ್ಯಕ್ಷ ಆಗಿದ್ದ. ನಿಜವಾಗಿಯೂ ಆತ ಮೊಬೈಲು ಹುಡುಗನೇ..ಕೈಯಲ್ಲಿರುವ ಮೊಬೈಲನ್ನು ಕುಟ್ಟುತ್ತಾ..ಯಾರಿಯಾರಿಗೋ ಕಾಲ್ ಮಾಡಿ ಏನೇನೋ ಮಾತಾಡುತ್ತಿದ್ದ. ಮೊಬೈಲ್ ಇಲ್ಲದ ನಾನು ಮಾತ್ರ ಅವನ ವಿಚಿತ್ರ ವರ್ತನೆಯನ್ನು ನೋಡಿ ದಂಗಾಗಿದ್ದೆ. ನೇರವಾಗಿ ಆನಂದನಿಗೆ ಹೇಳಿದೆ, "ಇನ್ನು ಮುಂದೆ ಯಾರನ್ನಾದ್ರೂ ಕರೆದುಕೊಂಡು ಬಂದ್ರೆ ನೆಟ್ಟಗಿರಲ್ಲ. ಮೊಬೈಲು, ಜೀಪು ಅಂತ ಗೊಣಗಾಡಿದ್ರೆ...ನೋಡು ನಿನ್ನ. ಅವನ ಮೊಬೈಲು, ಜೀಪನ್ನು ಹಿಡಿದುಕೊಂಡು ನಾನೇನು ಮಾಡ್ಲಿ?" ಅಂದಾಗ ಆ ಹುಡುಗ ಮತ್ತು ಆನಂದ ಇಬ್ಬರು ಬೆಪ್ಪರಂತೆ ನನ್ನನ್ನೆ ನೋಡುತ್ತಿದ್ದರು. ಮನೆಗೆ ಬಂದವಳು..ಅಮ್ಮನೆದುರು ಕೂಡ ರೇಗಾಡಿ ಬಾಯಿ ಮುಚ್ಚಿಸಿದೆ. ಕೊನೆಗೆ ಗಂಡು ನೋಡುವ ಕೈಂಕರ್ಯಕ್ಕೆ ಮಂಗಳ ಹಾಡಿದ್ದೆ.

ನಮ್ಮೂರು ಈಗಲೂ ಹಳ್ಳಿ. ಕೆಲ ಮನೆಗಳಲ್ಲಿ ಟಿವಿ, ಬಲ್ಬ್ ಉರಿಯುತ್ತಿದೆ. ಆವಾಗೆಲ್ಲ ಮೊಬೈಲು ನೆಟ್ ವರ್ಕ್ ಸಿಗ್ತಾ ಇರಲಿಲ್ಲ..ಮೊಬೈಲ್ ಕಾಣಿಸಿಕೊಳ್ಳುತ್ತಿದ್ದೂ ಅಪರೂಪವೇ. ಮೊಬೈಲ್ ಹಳ್ಳಿಗೆ ಕಾಲಿಡುವ ಸಮಯದಲ್ಲಿ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಈವಾಗ ಭಿಕ್ಷುಕರ ಕೈಯಲ್ಲೂ ಮೊಬೈಲು ಇದೆ.

Saturday, December 20, 2008

ನನ್ನಜ್ಜನ ಮೂರ್ತೆ ಕೆಲಸ..ಒಂದು ನೆನಪು...

ಳೆದ ತಿಂಗಳಿಂದ ಬರೇ, ನೋವು ವಿಷಾದಗಳೇ ಅಕ್ಷರರೂಪ ಪಡೆಯುತ್ತಿವೆ. ಅದೇ ಯಾಕೋ ಗೊತ್ತಿಲ್ಲ..ಇನ್ನು ತೀರ ಹಾಸ್ಯಮಯವಾಗಿ, ಚೆನ್ನಾಗಿ, ಖುಷಿಖುಷಿಯಾಗಿ ಬರೆಯೋಕೆ ನಂಗೆ ಬರಲ್ಲ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ.

ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ. ನನ್ನಜ್ಜ ಮೂರ್ತೆದಾರ(ಶೇಂದಿ ತೆಗೆಯುತ್ತಿದ್ದರು). ಬೆಳ್ಳಂಬೆಳಿಗ್ಗೆ ಅಜ್ಜ ಶೇಂದಿ ತೆಗೆಯೋ ಕಥೆ ಹೇಳುತ್ತೇನೆ. ಇದು ನನ್ನಜ್ಜನ ಕಥೆ ಅನ್ನೋದಕ್ಕಿಂತಲೂ ಶೇಂದಿ ತೆಗೆಯೋದು ನಮ್ಮ ಕುಲಕಸುಬು ಅದು. ನಾವು ಚಿಕ್ಕವರಿರುವಾಗ ಅಜ್ಜ ಶೇಂದಿ ತೆಗೆಯುತ್ತಿದ್ದರು. ಆವಾಗ ಅಜ್ಜ ಶೇಂದಿ ತೆಗೆಯೋದ್ರಲ್ಲಿ ನಿಸ್ಸೀಮರು, ಹಾಗೇ ಊರೆಲ್ಲಾ ಭಾರೀ ಫೇಮಸ್ಸು. ನಮ್ಮ ತಲಾತಲಾಂತರಗಳಿಂದ ಮಾಡಿಕೊಂಡು ಬರುತ್ತಿದ್ದ ಕುಲಕಸುಬಿದು. ನಮ್ಮ ಮುತ್ತಜ್ಜನ್ನೂ ಅದೇ ಮಾಡುತ್ತಿದ್ದರು. ಅಜ್ಜ ರಾತ್ರಿ ೪.30ಗೆ ಸರಿಯಾಗಿ ಶೇಂದಿ ತೆಗೆಯೋಕೆ ಹೊರಡೋರು. ಸೊಂಟಕ್ಕೆ ಒಡಂಕ್(ಪಟ್ಟಿ) ಹಾಗೂ ಕೈಯಲ್ಲಿ ಅರ್ಕತ್ತಿ(ಕಳ್ಳು ತೆಗೆಯುವ ಹರಿತವಾದ ಕತ್ತಿ) ಕಟ್ಟಿಕೊಂಡು, ಬೆನ್ನಿಗೆ ಪ್ಲಾಸ್ಟಿಕ್ ಕೊಡಗಳನ್ನು(ಕಳ್ಳು ತುಂಬಿಸಿಕೊಂಡು ಬರಲು) ಹೋಗುವ ಹಣ್ಣು ಹಣ್ಣು ಮುದುಕ ನಮ್ಮಜ್ಜ ಥೇಟ್ ನಮ್ ಥರದ ತರಲೆ ಹುಡುಗರ ಥರ ಕಾಣುತ್ತಿದ್ದರು.

ಹಾಗೇ ಹೋದ ಅಜ್ಜ ತಾಳೆಮರದ ಬುಡಕ್ಕೆ ಹೋದಂತೆ ಅಲ್ಲಿ ಊರಿನ ಗೌಡರೆಲ್ಲ ಶೇಂದಿ ತೆಗೆದು ಮರದಿಂದ ಇಳಿಯುವ ಅಜ್ಜನಿಗಾಗಿ ಕಾಯುತ್ತಿದ್ದರು. ಲೀಟರ್ ನಲ್ಲಿ ಅಜ್ಜ ಅಳೆದು ಶೇಂದಿ ಕೊಡುತ್ತಿದ್ದರು. ಕೆಲವೊಮ್ಮೆ ಶೇಂದಿ ಬೆಳ್ಳಂಬೆಳಿಗ್ಗೆ ತಾಳೆ ಮರದ ಬುಡದಲ್ಲೇ ಶೇಂದಿ ಮೂರ್ತಿ ಮಾರಾಟವಾಗುತ್ತಿತ್ತು. ಉಳಿದರೆ ಮಾತ್ರ ಗುತ್ತಿಗೆಗೆ( ಪರವಾನಗಿ ಶೇಂದಿ ಅಂಗಡಿ) ಮಾರುತ್ತಿದ್ದರು. ಹಾಗೇ ೧೦ ಗಂಟೆಗೆ ಶೆಂದಿ ಮಾರಾಟ ಮುಗಿದು ಬರುವಾಗಲೇ ಅಜ್ಜನೂ ಒಂದು ಲೀಟರ್ ಕುಡಿದು ಬಂದವರೇ ಅಜ್ಜಿಗೆ ಗದರುತ್ತಿದ್ದರು. ಬಂದ ತಕ್ಷಣ ತಂಗಳನ್ನು ಮೊಸರು ತಿಂದು ಮಲಗಿದವರೆ ಮತ್ತೆ ಮದ್ಯಾಹ್ನ ೧೨ ಗಂಟೆಗೆ ಮೂರ್ತೆ ಕೆಲಸಕ್ಕೆ ಹೋಗೋರು...ಆಮೇಲೆ ೨ ಗಂಟೆಗೆ ಬಂದು ಊಟ ಮಾಡಿ..ಮತ್ತದೆ ಸಂಜೆಗೆ ಮತ್ತೆ ಹೋಗುವರು. ಎಷ್ಟು ನಿಯತ್ತಾಗಿ ಅವರು ಮೂರ್ತೆ ಕೆಲಸ ಮಾಡೋರಂದ್ರೆ ಒಂದು ದಿನನೂ ಚಕ್ಕರ್ ಹಾಕಲ್ಲ. ಒಂದು ವೇಳೆ ಆ ಸಮಯಕ್ಕೆ ಸರಿಯಾಗಿ ಹೋಗಕ್ಕಾಗಲಂದ್ರೆ ಬೇರೆ ಯಾರನ್ನಾದ್ರೂ ಸಂಬಳಕ್ಕೆ ನೇಮಿಸಿ ಹೋಗುವರು ಅಜ್ಜ. ಆವಾಗ ಕುಟಂಬ ನಡೆಯುತ್ತಿದ್ದುದೇ ಮೂರ್ತೆಯಿಂದ. ಶೇಂದಿ ಮಾರಾಟ ಮಾತ್ರವಲ್ಲ ಅದರಿಂದ ಬೆಲ್ಲನೂ (ಓಲೆ ಬೆಲ್ಲ) ಮಾಡುತ್ತಿದ್ದರು. ಅದ್ರಲ್ಲಿ ತುಂಬಾ ಹಣ ಬರುತ್ತಿತ್ತು. ಕೈತುಂಬಾ ಹಣ ಬರುವಾಗ ಮನೆಯ ಯಜಮಾನನಾದ ಅಜ್ಜನ ಮುಖದಲ್ಲಿ ಯಜಮಾನಿಕೆ ಒಂಥರಾ ಏನೋ , ಗತ್ತು -ಗಡುಸು ಇದ್ದಂತೆ ಕಾಣುತ್ತಿತ್ತು. ಮಕ್ಕಳಾದ ನಾವೆಲ್ಲ..ಅಜ್ಜ ಕ್ಯಾಂಡಿಗೆ 5 ಪೈಸೆ ಕೊಡಿ ಅಂದ್ರು ಅಜ್ಜ ಮುಖ ಮೂತಿ ನೋಡದೆ ಬೈಯುತ್ತಿದ್ದರು. ಆವಾಗ ೫ ಪೈಸೆ ಕ್ಯಾಂಡಿಗೆ ಇತ್ತೆನ್ನುವುದು ನೆನಪು.

ಮೇಲೆ ನಮ್ಮಜ್ಜ ಶೇಂದಿಯಿಂದ ಊರಲೆಲ್ಲಾ ಫೇಮಸ್ಸು..ಯಾರಿಗೆ ಶೇಂದಿ ಬೇಕಾದ್ರೂ ಮೊದಲ ದಿನವೇ ಹೇಳಿ ಹೋಗುವರು. ಊರಿನ ಗೌಡ್ರೆಲ್ಲ ಹೇಳಿದ್ರೆ..ಅದನ್ನು ಹಾಗೇ ಇಡಬೇಕೆನ್ನುವುದು ಗೌಡರ ತಾಕತ್ತು. ಮಾರಿದ್ರೆ..ಅಜ್ಜನ ತಲೆನೇ ಹೋಗಬಹುದು. ಆ ನಮ್ಮ ಹಳ್ಳಿಯಲ್ಲಿ ಇದ್ದ ತಾಳೆಮರಗಳೆಲ್ಲ ಹೆಚ್ಚಿನವು ನಮ್ಮ ಅಜ್ಜನ ವ್ಯಾಪ್ತಿಗೆ ಬರುತ್ತಿದ್ದವು. ವರ್ಷಕ್ಕೆ ಇಷ್ಟು ಹಣಕ್ಕೆ ಅಂತ ಬೇರೆಯವರಿಂದ ಗುತ್ತಿಗೆ ಆಧಾರದಲ್ಲಿ ತಾಳೆಮರಗಳನ್ನು ಕೊಂಡುಕೊಳ್ಳಲಾಗುತ್ತಿತ್ತು. ಮತ್ತೆ ತಾಳೆಮರ ಮಾಲೀಕನಿಗೆ ವರ್ಷಕ್ಕೆ ಇಂತಿಷ್ಟು ಹಣದ ಜೊತೆಗೆ ದಿನಾ ಬೆಳಿಗ್ಗೆ ಉಚಿತವಾಗಿ ಒಂದು ಲೀಟರ್ ಗಟ್ಟಲೆ ಶೇಂದಿ ಕೊಡಬೇಕು..ಅದೂ ಬೆಳ್ಳಂಬೆಳಿಗ್ಗೆ ಆತ ತಮ್ಮ ಮನೆಯವರನ್ನು ಕಳಿಸಿಕೊಡುತ್ತಿದ್ದ ಶೇಂದಿ ಮರದ ಬುಡಕ್ಕೆ. ಒಂದು ವೇಳೆ ಕೊಟ್ಟಿಲ್ಲವೋ...ಬರುವ ವರ್ಷ ಅಜ್ಜನಿಗೆ ತಾಳ ಮರ ಇಲ್ಲ! ಕೊಡಲ್ಲಂದ್ರೆ...ಸಂಸಾರದ ಗತಿ?! ಹಾಗೇ ಹೆದರಿಕೊಂಡೇ ಅವರಿಗೆ ಶೇಂದಿ ಕೊಡುತ್ತಿದ್ದರು. ಮತ್ತೆ ಕೆಲವರು ತಾಳೆಮರಕ್ಕಾಗಿಯೇ ಶೇಂದಿ ಕೊಡೋದ್ರಲ್ಲಿ ಪೈಪೋಟಿ ಇರುತ್ತಿತ್ತು.

ಷ್ಟೇ ಅಲ್ಲ, ಶೇಂದಿ ತೆಗೆಯೋದು ಕೂಡ ಒಂದು ಕಲೆ. ನಮ್ಮ ಜಾತೀಲಿ ಅದೊಂದು ಗೌರವ, ಪ್ರತಿಷ್ಠೆಯ ಕೆಲಸ. ಎಲ್ಲರೂ ಮರಕ್ಕೆ ಹತ್ತಿ ಶೇಂದಿ ತೆಗೆಯಕ್ಕೆ ಆಗಲ್ಲ..ಅದಕ್ಕೆ ಅಭ್ಯಾಸ ಬೇಕು. ಆಗಿನ ಕಾಲದಲ್ಲಿ ಶೇಂದಿ ತೆಗೆಯಕನೇ ತರಬೇತಿ ಕೊಡುತ್ತಿದ್ದರು. ಅಷ್ಟುದ್ಧದ ತಾಳೆಮರಕ್ಕೆ ಹತ್ತಬೇಕು..ಅದು ಕತ್ತಿ, ಬಿಂದಿಗೆಗಳನ್ನು ಹಿಡಕೊಂಡು ತುಂಬಾ ಕಷ್ಟ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಅಂಚುಗಳಲ್ಲಿ ಮಾತ್ರ ಇಂಥ ತಾಳೆಮರಗಳು, ಶೇಂದಿ ತೆಗೆಯೋದು ಕಾಣಬಹುದು.

ಹೌದು..ನಮ್ಮ ಕುಲಕಸುಬು ಅಂದೆ. ಈವಾಗ? ಆ ಕಸುಬು ಏನೂಂತ ಗೊತ್ತಿಲ್ಲ. ಹಳ್ಳಿಗಳಲ್ಲಿ ತಾಳೆಮರಗಳೇ ಕಾನುತ್ತಿಲ್ಲ. ಈಗ ಕೆಲವೆಡೆ ತೆಂಗಿನ ಮರದಿಂದಲೂ ಶೇಂದಿ ತೆಗೆಯುತ್ತಾರೆ..ಅದಕ್ಕೆ ಏನೇನೂ ಮಿಶ್ರ ಮಾಡಿ ಶೇಂದಿಯ ನಿಜವಾದ ರುಚಿಯೇ ಸಿಗಲ್ಲ. ನಾವು ಚಿಕ್ಕದಿರುವಾಗ ಶೇಂದಿ ಕುಡಿಯುತ್ತಿದ್ವಿ..ಅದೂ ಚಳಿಗಾಲದಲ್ಲಿ ಸಿಹಿ ಇರುತ್ತೆ..ಅದನ್ನು ಕುಡಿಯಕೆ ಖುಷಿಯಾಗುತ್ತಿತ್ತು. ನಮ್ಮಜ್ಜ ನಮಗೆಲ್ಲಾ ೨-೩ ನಷ್ಟು ಶೇಂದಿ ಬಾಯಿಗೆ ಹಾಕೋರು..ಆದ್ರೆ ಅದೇ ಅಮಲು. ಥೇಟ್ ಇಂಗು ತಿಂದ ಮಂಗನ ಪಾಡು ನಮ್ಮದು. ಈವಾಗ ಊರಿಗೆ ಹೋದ್ರೆ..ಯಾರು ಶೇಂದಿ ತೆಗೆಯಲ್ಲ. ನಮ್ಮ ಕುಟುಂಬದಲ್ಲೇ ಇಲ್ಲ. ಇಡೀ ಹಳ್ಳಿಯಲ್ಲಿ ಒಬ್ಬರಷ್ಟೇ ಶೇಂದಿ ತೆಗೆಯೋದನ್ನು ಉದ್ಯೋಗ ಮಾಡಿಕೊಂಡು ಬಂದಿದ್ದಾರೆ. ಯಾರಾದ್ರೂ ಆ ಬಗ್ಗೆ ಮಾತಾಡಿದ್ರೆ.."ಅಯ್ಯೋ ಅದನ್ನಾರು ಮಾಡುತ್ತಾರೆ" ಎಂದು ಉದಾಸೀನ ತೋರುವವರೇ ಜಾಸ್ತಿ.

ಷ್ಟು ಬೇಗ ಬದುಕು ಬದಲಾಗುತ್ತೆ ನೋಡಿ. ಒಂದು ಸಂಸಾರಕ್ಕೆ ಅನ್ನ ಹಾಕುತ್ತಿದ್ದ ಮೂರ್ತೆ ಕೆಲಸ ಈಗ ಯಾರಿಗೆ ಬೇಕು? ಯಾರೂ ಇಷ್ಟಪಡಲ್ಲ. ಹೊಲದಲ್ಲಿ ದುಡಿಯೋದನ್ನು ಯಾರು ಇಷ್ಟಪಡುತ್ತಾರೆ? ನನ್ನ ಮಗ ಹುಟ್ಟುವಾಗಲೇ ಕಂಪ್ಯೂಟರ್ ಮೌಸ್ ಹಿಡಿಬೇಕು..ಅವನ್ನ ನೋಡಿ ಜಗತ್ತು ಮೂಗಿನ ಮೇಲೆ ಕೈ ಇಡಬೇಕು..ಅನ್ನೋ ಹೆತ್ತವರೇ ಜಾಸ್ತಿ. ಮೊನ್ನೆ ಮೊನ್ನೆ ಆರ್ಥಿಕ ತಜ್ಷರೊಬ್ರು 'ಆರ್ಥಿಕ ಬಿಸಿ' ಕುರಿತು ಮಾತಾಡಿ ಇನ್ನು ವ್ಯವಸಾಯನೇ ಗತಿ ಅನ್ನುತ್ತಿದ್ದರು. ಇನ್ನು 'ಕಂಪ್ಯೂಟರ್ ಮೌಸ್' (ನಾನೂ ಹೊರತಾಗಿಲ್ಲ)ಹಿಡಿದವ್ರು ಏನು ಮಾಡಬೇಕೋ?...!

Friday, December 19, 2008

ಅಂತರ್ವಾಣಿ ಕವನ

'ಏನೂ ಬೇಡ ಹಿಡಿ ಪ್ರೀತಿ ಕೊಡ್ತೀರಾ...? ಬರಹದ ಚಿತ್ರ ನೋಡಿ ಅಂತರ್ವಾಣಿ ಬ್ಲಾಗ್ ನ ಜಯಶಂಕರ್ ಕಳಿಸಿರುವ ಪುಟ್ಟದಾದ ಸರಳ ಕವನ ಇಲ್ಲಿದೆ. ..

ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು,
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?

ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?

ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?

ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!

Monday, December 15, 2008

ಏನೂ ಬೇಡ..ಒಂದು ಹಿಡಿ ಪ್ರೀತಿ ಕೊಡ್ತೀರಾ..?!

ಹಾಲು ಬೆಳದಿಂಗಳಲ್ಲಿ ಚಂದಿರ ಕಣ್ಣಮುಚ್ಚಾಲೆಯಾಡುತ್ತಿದ್ದ. ಮನೆಯ ಟೆರೇಸ್ ಮೇಲೆ ಕುಳಿತು ವಿದ್ಯುತ್ ಬಲ್ಬುಗಳಿಂದ ಝಗಝಗಿಸುತ್ತಿದ್ದ ನಗರವನ್ನ, ಅರ್ಜೆಂಟಾಗಿ, ವೇಗದಿಂದ ಓಡುವ ವಾಹನಗಳನ್ನು ನೋಡುತ್ತಿದ್ದಂತೆ,..ಥತ್! ಪವರ್ ಕಟ್ ಆಗ್ಲಿ..ಈಗ್ಲೇ ಕತ್ತಲಾಗಲೀ ಅನಿಸಿತ್ತು. ಬರೇ ಬೆಳದಿಂಗಳಲ್ಲಿ ಚಂದಿರನ ಕಣ್ತುಂಬಾ ತುಂಬಿಕೊಳ್ಳುವ ಹಂಬಲ ನನ್ನದಾಗಿತ್ತು. "ದಯವಿಟ್ಟು ದೀಪವಾರಿಸು ಗೆಳೆಯಾ, ನನಗೆ ಬೆಳಕು ಬೇಕಿದೆ"ಎನ್ನುವ ತಾವೋ ಬರೆದ ಕವಿತೆಯ ಸಾಲು ನೆನಪಾಯಿತು. ಆದರೆ ಪವರ್ಕಟ್ ಆಗಲಿಲ್ಲ. ಕತ್ತಲಲಲ್ಲಿ 'ಬೆಳದಿಂಗಳು' ನೋಡೋ ನನ್ನಾಸೆ ಫಲಿಸಲಿಲ್ಲ. ಒಬ್ಬಳೇ ಕುಳಿತವಳಿಗೆ ಪುಸ್ತಕ, ಪೆನ್ನು ಸಾಥ್ ನೀಡಿದ್ದವು. ಏನಾದ್ರೂ ಬರೆಯೋಣ ಎಂದುಕೊಂಡವಳಿಗೆ ..ಹೊಳೆದದ್ದು 'ಬದುಕಿನ ಪ್ರೀತಿ'!

ಪ್ರೀತಿ..ಯಾರಿಗೆ ತಾನೇ ಇಷ್ಟವಾಗಲ್ಲ? ನನಗೂ ಇಷ್ಟವಾಗುತ್ತೆ..ನಿಮ್ಮ ಹೃದಯಕ್ಕೂ ಆಪ್ತವಾಗುತ್ತೆ. ಪ್ರೀತಿ..ನಿತ್ಯ ನಮ್ಮ ಪೀಡಿಸಲ್ಲ, ಸವಿಸವಿಯಾಗಿ ಕಾಡಿಸುತ್ತೆ. ಇಡೀ ಜಗತ್ತಿಗೆ ಅಪ್ಯಾಯಮಾನವಾಗುತ್ತೆ. ಸಮಸ್ತ ಜೀವಸಂಕುಲಕ್ಕೂ ಪ್ರೀತಿ ಹತ್ತಿರವೆನಿಸುತ್ತೆ. ನಮಗೆ ಖುಷಿ ಕೊಡುತ್ತೆ..ಮಾತು ಬಾರದ ಪ್ರಾಣಿ ಪ್ರಪಂಚ, ಚಿಲಿಪಿಲಿ ಎನ್ನುವ ಹಕ್ಕಿ ಪ್ರಪಂಚ, ಘಮ್ಮೆನ್ನುವ ಪುಷ್ಪಲೋಕ..ಹೀಗೆ ಎಲ್ಲೆಲ್ಲೂ ಪ್ರೀತಿ ಇರಬಹುದೇನೋ ಅಲ್ವೇ? ಮೊನ್ನೆಮೊನ್ನೆ ತಂದ ನಾಯಿಮರಿ ನನ್ನ ಕಂಡರೆ..ಬಾಲ ಅಲ್ಲಾಡಿಸುತ್ತೆ...ಮನೆಯಲ್ಲಿದ್ದ ಬೆಕ್ಕು ಮರಿ..ಮಿಯಾಂ ಮಿಯಾಂ ಅನ್ನುತ್ತಾ ನಮ್ಮ ಹಿಂದೆ ಸುತ್ತುತ್ತೆ...ನಮ್ಮ ಮುಖ ಕಾಣದಿದ್ದಾಗ ಹಟ್ಟಿಯಲ್ಲಿದ್ದ ಹಸು ಅಂಬಾ ಎಂದು ಕರೆಯುತ್ತೆ..ಗೆಳೆಯ/ಗೆಳತಿ ನಿತ್ಯ ಶುಭೋದಯ ಅಂದಾಗ ಮನಸ್ಸೆಕೋ ಖುಷಿಗೊಳ್ಳುತ್ತೆ..ಅಣ್ಣನೊಂದಿಗೆ ಪುಟ್ಟ ಪುಟ್ಟ ವಿಷ್ಯಗಳಿಗೂ ಜಗಳವಾಡುವುದು..ಅಮ್ಮನತ್ರ ಬೆಳ್ಳಂಬೆಳಿಗ್ಗೆ ಮುನಿಸಿಕೊಳ್ಳೋದು ..ಹೊಸೆದ ಹೊಂಗನಿಸಿದೆ ಅಕ್ಷರ ರೂಪ ನೀಡಿದ ಗುರು ನಿತ್ಯ ಬೈಯುತ್ತಿದ್ದರೂ ನಮ್ಮನ್ನೆಷ್ಟು ಪ್ರೀತಿಸುತ್ತಿದ್ದರು? ಪುಟ್ಟ ಮಗುವಾಗಿದ್ದಾಗ ಎತ್ತಿ ಆಡಿಸಿದ ನಮ್ಮೂರ ಹಣ್ಣು ಹಣ್ಣು ಅಜ್ಜಿ..ನಾನು ಮನೆಗೆ ಹೋದ ತಕ್ಷಣ..ಮನೆಯೆದುರು ಪ್ರತ್ಯಕ್ಷ ಆಗ್ತಾಳೆ...ಈ ಎಲ್ಲವೂ ಪ್ರೀತಿಯ ಒಂದು ಭಾಗ ಎಂದನಿಸುತ್ತೆ.
ಥತ್! ಪ್ರೀತಿಯ ವಿವಿಧ ಮಗ್ಗುಲುಗಳನ್ನು ತೆರೆಯುತ್ತಾ ಹೋದಂತೆ...ಜಗತ್ತಿನ ಇನ್ನೊಂದು ಮುಖ ಕಣ್ಣೆದುರು ಬಂದು ನಿಲ್ಲುತ್ತೆ. ನಾನು ಪ್ರೀತಿ ಪ್ರೀತಿ ಅಂತ ಬಡ್ಕೋತಾ ಇದ್ದೀನಿ. ಆದರೆ..ಜಗತ್ತು?! ಬೆಳಿಗೆದ್ದು ಪತ್ರಿಕೆ ತೆರೆದರೆ, ಟಿವಿ ಆನ್ ಮಾಡಿದರೆ..ಲೋಕಾನ ಕಣ್ತೆರೆದು ನೋಡಿದರೆ..ಬರೇ ರಕ್ತಪಾತ, ಕೊಲೆ, ಮಾರಣಹೋಮ, ವಂಚನೆ, ಮೋಸ, ಕಳ್ಳತನ, ಸುದ್ದಿಗಳೇ ಕಣ್ಣಿಗೆ ಬೀಳುತ್ತವೆ. ಪ್ರೀತಿಯ ಅಕ್ಷಯ ಪಾತ್ರೆ ನೆತ್ತರಲೋಕದಂತೆ ಭಾಸವಾಗುತ್ತೆ. ಉಗ್ರರು ಬಾಂಬು ಹಾಕ್ತಾರೆ, ಅಮಾಯಕರನ್ನು ಕೊಲ್ತಾರೆ..ಹಸಿದ ಹೊಟ್ಟೆಗೆ ಅನ್ನ ಇಲ್ಲದಂತೆ ಮಾಡುತ್ತಾರೆ..ಎಷ್ಟೋ ಬದುಕುವ ಜೀವಗಳಿಗೆ ಜೀವಗಳಿಗೆ ಅಪ್ಪ-ಅಮ್ಮನೆಂಬ ದೇವರನ್ನು ಇಲ್ಲದಂತೆ ಮಾಡ್ತಾರೆ..ಅವರೆದುರು ಪ್ರೀತಿ ಬಗ್ಗೆ ಬೊಬ್ಬಿಟ್ಟರೆ ಅವರಿಗೆ ಕೇಳಿಸುವುದೇ? ಅವರೆದುರು 'ಪ್ರೀತಿಸುತ್ತಿವಿ..ಹಿಡಿಯಷ್ಟು ಪ್ರೀತಿ ನೀಡಿ. ಜಗತ್ತು ನೆಮ್ಮದಿಯಾಗಿರಲಿ' ಅಂದ್ರೆ ಅದಕ್ಕೆ ಅರ್ಥವಿರುತ್ತಾ? ಇಲ್ಲ..ಇಲ್ಲ.
ಜಗತ್ತು ಹೀಗಿದ್ದರೂ ಹಿಡಿಪ್ರೀತಿ ತೋರಿಸಿದ್ದರೆ?! ಹಸಿದ ಹೊಟ್ಟೆ ತುಂಬುತ್ತೆ..ಖಾಲಿ ಹೃದಯದಲ್ಲಿ ಬೆಳಕು ಬೆಳಗಬಹುದು. ದುಃಖದ ಕಾರ್ಮೋಡ ತುಂಬಿದ ಮನಸ್ಸು ಹಗುರವಾಗಬಹುದು. ಬೊಗಸೆ ಹನಿ ಪ್ರೀತಿಯಿಂದ ಜಗತ್ತು ತುಂಬಾ ನೆಮ್ಮದಿಯಿಂದ ಇರಬಹುದು ಅನಿಸಲ್ವೇ? ಜಗದ ನೆಮ್ಮದಿಗೆ, ಸುಖನಿದ್ರೆಗೆ ಸುಖ ಸುಪ್ಪತ್ತಿಗೆ ಬೇಡ..ಮೊಗೆದಷ್ಟು ಬತ್ತದ ಪ್ರೀತಿ ಬೇಕು..ಕೊನೆಗೆ ಒಂದು ಬೊಗಸೆಯಷ್ಟು ಪ್ರೀತಿ ನೀಡಿ..ಅಷ್ಟೇ ಸಾಕು..ಆದ್ರೆ ಒಡೆದ ಕನ್ನಡಿನಾ ಒಂದಾಗಿಸುವವರು ಯಾರು?! ಹಿಡಿಪ್ರೀತಿ ಕುರಿತು ಯೋಚಿಸುತ್ತಾ ಕುಳಿತವಳಿಗೆ..ಕವನ ಹುಟ್ಟಲಿಲ್ಲ..ಬರಹ ಹುಟ್ಟಿತು. ಇದು ನನಗನಿಸಿದ್ದು..ತೋಚಿದ್ದು ಗೀಚಿದ್ದೇನೆ ಅಷ್ಟೇ.

Wednesday, December 10, 2008

ನೆನಪಾಗುವಳು ಅಪ್ಪಿ....

ಅದ್ಯಾಕೋ ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ಅಪ್ಯಾಯಮಾನವಾಗಿ ಬಿಡುತ್ತವೆ.
ಮನುಷ್ಯರಿಗಿಂತ ಅವೇ ಹೆಚ್ಚು ಪ್ರೀತಿ ತೋರಿಸುತ್ತವೆ. ಮೊನ್ನೆ ಮೊನ್ನೆ ಪ್ರಕಾಶ್ ಹೆಗ್ಡೆ ಅವರ ಬ್ಲಾಗ್ ನಲ್ಲಿ ಅವರ ಪ್ರೀತಿಯ ನಾಯಿ ಕುರಿತು ಬರೆದಿರುವುದನ್ನು ಓದುತ್ತಿದ್ದಂತೆ ನನ್ನ ಮುದ್ದಿನ ಅಪ್ಪಿ ನೆನಪಾದಳು. ಚಿಕ್ಕವಳಿರುವಾಗ ನಾನು ತುಂಬಾನೇ ಪ್ರೀತಿ ಮಾಡಿದ್ದ, ನನ್ನ ತಟ್ಟೆಯಲ್ಲೇ ಆಕೆಗೂ ಊಟ ಹಾಕಿದ್ದ, ಅವಳೊಂದಿಗೆ ನಾನು ಮಗುವಾಗುತ್ತಾ, ನನ್ನ ಮಡಿಲಲ್ಲಿ ಮಲಗಿ ಜೋಗುಳ ಹಾಡುತ್ತಿದ್ದ ಆ ಪ್ರೀತಿಯ ಅಪ್ಪಿ ಜೊತೆ ಮೂರು ವರ್ಷ ಕಳೆದ ದಿನಗಳು ನೆನಪಾದುವು.
ನನಗಾಗ ಮೂರ್ನಾಲ್ಕು ವರ್ಷವಾಗಿರಬಹುದು. ನಮ್ಮನೆ ಕೆಂಪಿ ಹಸುವಿನ ಮಗಳು ಅಪ್ಪಿ ಆಗಿನ್ನೂ ಹಸುಗೂಸು. ಕೆಂಪಿಗೆ ಅಪ್ಪಿ ಹುಟ್ಟಿದಾಗ ನನಗಂತೂ ಹೊಸ ಗೆಳತಿ ಸಿಕ್ಕ ಸಂಭ್ರಮ. ಮನೆಯಲ್ಲಿ ಅಮ್ಮನಿಗಿಂತಲೂ ಅಪ್ಪಿ ಜೊತೆ ಇರೋದು ಅಂದ್ರೆ ಭಾಳ ಇಷ್ಟ. ನೋಡಲೂ ಮುದ್ದಾಗಿದ್ದ ಅವಳು ಚಂಗನೆ ನಗೆಯುತ್ತಾ ಬರೋದು, ಅಂಗಳವಿಡೀ ಖುಷಿ ಖುಷಿಯಿಂದ ಓಡುವಾಗ ಅವಳ ಬಾಲ ಹಿಡಿಯಲು ಓಡಿ ನಾನೂ ಎಡವಿ ಬೀಳೋದು..ಅವಳಿಂದ ತುಳಿಸಿಕೊಳ್ಳೋದು ಎಲ್ಲವೂ ಯಾಕೋ ಅಪ್ಯಾಯಮಾನ. ಅದೇ ಖುಷಿ.
ಅಮ್ಜಮ ಬೆಳಿಗ್ಗೆ ಹಾಲು ಕೊಡಕೆ ಡಿಪೋಗೆ ಹೋದರೆ, ನಾನು ಆಗಿನಿಂದಲೇ ನನ್ನ ಬೆಡ್ ಶೀಟ್ ಕೊಂಡೋಗಿ ಅಪ್ಪಿಯನ್ನು ಕಟ್ಟಿಹಾಕುವ ಜಾಗದಲ್ಲಿ ಅವಳ ಜೊತೆ ಮಲಗುತ್ತಿದ್ದೆ. ಅವಳ ಮೈಯಲ್ಲಿದ್ದ ಮಣ್ಣು ತೊಳೆಯುವುದು, ಕಿವಿ ತೊಳೆಯುವುದು, ಮೈಯಲ್ಲಿದ್ದ ಉನುಗು ತೆಗೆಯೋದು..ಹೀಗೆ ಅಲ್ಲಿ ಸ್ಚಚ್ಛಗೊಳಿಸಿ ನಾನು ತಿನ್ನುವ ಆಹಾರವನ್ನೇ ಅವಳಿಗೆ ಕೊಡೋದು..ಅವಳ ಕೊರಳಿಗೆ ಚೆಂದದ ಮಣಿಯುಳ್ಳ ಹಾರ ಹಾಕೋದು ಎಲ್ಲಾವನ್ನೂ ಮಾಡುತ್ತಿದ್ದೆ. ಅಪ್ಪಿನೂ ಅಷ್ಟೇ..ಬೆಳಿಗ್ಗೆ ಹಾಕು ಕುಡಿದ ಮೇಲೆ ನನ್ನ ಬರುವಿಗಾಗಿ ಅಂಬಾ ಎನ್ನುತ್ತಿದ್ದಳು. ಹಟ್ಟಿಯಿಂದ ಓಡಿ ಸೀದಾ ಮನೆಯೊಳಗೆ ಬರುವಳು. ನನ್ನ ಕೈಯನ್ನೆಲ್ಲ ನೆಕ್ಕೋಳು. ಥೇಟ್ ಮನುಷ್ಯರಂತೆ ಆಕೆನೂ ನನ್ನ ತುಂಬಾ ಪ್ರೀತಿ ಮಾಡುತ್ತಿದ್ದಳು. ಒಂದೊಂದು ಬಾರಿ ಅವಳ ಕಣ್ಣಿಂದ ನೀರು ಸುರಿಯುತ್ತಿದ್ದಾಗ, ಅದನ್ನು ಒರೆಸುತ್ತಾ ನಾನೂ ಅಳುತ್ತಿದ್ದೆ. ಪಾಪ! ಮೂಕಪ್ರಾಣಿಗೆ ಹೇಳಲೇನೂ ಬರದು. ಅಮ್ಮ ಹಾಲು ಮಾರಿ ಬರುವಾಗ ದಿನಾ ಬೇಬಿ ಬಿಸ್ಕೀಟು ತರೋದು..ಅದ್ರಲ್ಲಿ ಹೆಚ್ಚು ಪಾಲು ಅಪ್ಪಿಗೆ. ಆವಾಗ ಬೇಬಿ ಬಿಸ್ಕಿಟ್ ಗೆ ಒಂದು ಪ್ಯಾಕ್ ಗೆ ೧.೩೦ ರೂ. ಈಗ? ಅದೇ ಬಬೇಬಿ ಬಿಸ್ಕಿಟು ಇದೆಯಾ ಅಂತಾನೇ ಗೊತ್ತಿಲ್ಲ.
ಅಪ್ಪಿ ಜೊತೆ ಮಲಗಿದ ನನ್ನ ಕಿವಿಯಲ್ಲೂ ಒಂದು ಸಲ ಉನುಗು ಸೇರಿಕೊಂಡಿದ್ದು ದೊಡ್ಡ ಕತೆ. ಉನುಗು ಸೇರಿದ್ರೆ ಈಗ ಆಪರೇಷನ್ ಮಾಡ್ತಾರೆ. ನನ್ನ ಕಿವಿ ಜೋರಾಗಿ ನೋವಾಗಲೂ ಶುರುವಾದಾಗ ಅಮ್ಮ ಕಾಣಿಯೂರಿನ ಡಾಕ್ಟರ್ ಶಶಿಧರ ಹತ್ರ ಕರೆದುಕೊಂಡು ಹೋದಾಗ ಅವರೇನೋ ಕಿವಿಗೆ ಹಾಕೋ ಮದ್ದು ಕೊಟ್ಟರು .ಅದ್ಕೆ ನಮ್ಮಜ್ಜಿ ಇಲ್ಲ, ಈ ಮದ್ದಿಂದ ಎಲ್ಲಾ ಆಗಲ್ಲ..ಅಂತ ಹೇಳಿ ಅಮ್ಮ ಎಲ್ಲೊ ಹೊರಗಡೆ ಹೋದ ಸಮಯದಲ್ಲಿ ಉನುಗು ಹೊರಬರಕ್ಕೆ ಹಲಸಿನ ಹಸಿ ಹಸಿ ಅಂಟು ಕಿವಿಗೆ ಸುರಿದದ್ದು. ಅಬ್ಬಾ! ಬೇಕಾ..ಯಾರಾದ್ರೂ ಅಂಟು ಸುರೀತಾರ? ಸುರಿದ ದಿನ ಏನೂ ಆಗಲಿಲ್ಲ..ನೋವು ನಿಂತುಹೋಯಿತು. ಯಾಕಂದ್ರೆ ಉನುಗು ಅಂಟು ಜೊತೆ ಅಂಟಿ ಸತ್ತೇ ಹೋಗಿತ್ತು. ಆದರೆ ಕಿವಿ ಕೇಳಬೇಕಲ್ಲಾ? ನಂತರ ನನ್ನ ಏಳನೇ ತರಗತಿ ಯವರೆಗೆ ಒಂದು ಕಿವಿನೇ ಕೆಳಿಸಲಿಲ್ಲ. ಆವಾಗಲೇ ಡಾಕ್ಟರ್ ಅದನ್ನು ತೆಗೆದದ್ದು. ಆಮೇಲೆ ಕಿವಿ ಸರಿಯಾಯಿತು ಬಿಡಿ. ಇದು ಅಜ್ಜಿ ಆವಾಂತರ. ಇರಲಿ ಬಿಡಿ.
ಹಾಗೇ ಮೂರು ವರ್ಷ ನಾನು ಅಪ್ಪಿ ಜೊತೆನೇ ಇದ್ದೆ. ರಾತ್ರಿ ಅಮ್ಮನ ಮಡಿಲು, ಹಗಲು ಅಪ್ಪಿ ಜೊತೆ. ಮತ್ತೆ ಅಪ್ಪಿ ದೊಡ್ಡ ಆದ ಮೇಲೆ ಮತ್ತೊಂದು ಕರು ಹಾಕಿದ್ಳು. ಅದಕ್ಕೆ ಅಕತ್ತಿ ಅಂತ ಹೆಸರಿಟ್ಟಿದ್ದೆ. ಆವಾಗ ಮೂರು ಹಸುಗಳನ್ನು ಸಾಕಲು ಆಗುವುದಿಲ್ಲವೆಂದು ಅಮ್ಮ ಮಾರಿಬಿಟ್ಟರು. ಅದ್ರಲ್ಲಿ ಬಂದ ಹಣದಲ್ಲಿ ಅಮ್ಮ ಅಪ್ಪಿ ನೆನಪಿಗೆ ನಂಗೊಂದು ಮೂಗುತಿ ತೆಗೆದುಕೊಟ್ಟಿದ್ದಾರೆ. ಅಪ್ಪಿ ಎಲ್ಲಿದ್ದಾಳೋ ಗೊತ್ತಿಲ್ಲ..ಮೂಗುತಿ ನನ್ನ ಮೂಗ ಮೇಲೆ ಈಗಲೂ ಮಿನುಗುತ್ತಿದೆ..ಥೇಟ್ ಅಪ್ಪಿಯ ಪ್ರೀತಿ ಥರಾನೇ.!
ಫೋಟೋ: flickr.com

Friday, December 5, 2008

ಹೀಗೊಬ್ಬ ಪೇಪರ್ ಹುಡುಗ ಇದ್ದ...!

ಯಾಕೋ ಮನಸ್ಸು, ದುಃಖದ ಕಾರ್ಮೋಡ. ಮೊನ್ನೆ ಮೊನ್ನೆ ನಡೆದ ಮುಂಬೈ ಸ್ಫೋಟ, ಬದುಕಿನ ಕಣ್ಣೀರು, ನೆತ್ತರ ಕೋಡಿ..ಮನಸ್ಸಿನ್ನೂ ಚೇತರಿಸಿಗೊಂಡಿಲ್ಲ. 'ಶರಧಿ'ಗೆ ಬಂದು ಕಣ್ಣುಹಾಯಿಸಿದರೆ ಮನತುಂಬಾ ದುಃಖದ ಹನಿಬಿಂದುಗಳಷ್ಟೇ..ಬರೆಯಲು ಅಕ್ಷರಗಳೇ ಹೊಳೆಯುತ್ತಿಲ್ಲ. ಕೈಗಳು ಚಲಿಸುತ್ತಿಲ್ಲ. ನಿನ್ನೆ ಮಟಮಟ ಮದ್ಯಾಹ್ನ ಯಾವುದೇ ಕಾರ್ಯನಿಮಿತ್ತ ಹೊರಗಡೆ ಹೊರಟವಳಿಗೆ, ಸೂರ್ಯನ ಸುಡುವ ಬಿಸಿಲು ತಲೆನೇ ಒಡೆದುಹೋಗುವಷ್ಟು ತಲೆನೋವು ತರಿಸಿತ್ತು. ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ಮನೆ ಕಡೆ ಹೊರಟವಳಿಗೆ ನನ್ನ ಮನೆ ಕಡೆ ಹೋಗುವ ಬಸ್ಸು ಸಿಕ್ಕಿದ್ದು ಆಫೀಸ್ ನಿಂದ ಹೊರಟ ಮುಕ್ಕಾಲು ಗಂಟೆ ಬಳಿಕ.

ಜನರಿಂದ ಗಿಜಿಗಿಡುವ ಬಸ್ಸ ಸ್ಟಾಂಡಿನಲ್ಲಿ ಆವಾಗಲೇ ಕರೆಂಟು ಹೋಗಿ ಪೂರ್ಣ ಕತ್ತಲು. ಕರೆಂಟು ಬರುತ್ತಿದ್ದಂತೆ ಎದುರಿಗಿದ್ದ ಯುವಕನೊಬ್ಬ, ಹಾಯ್ ಚಿತ್ರಕ್ಕ ಹೇಗಿದ್ದೀರಿ? ಎಂದಾಗ ಯಾವ ಸೀಮೆ ತಮ್ಮ ಈತ? ಎಂದು ದುರುಗಟ್ಟಿ ನೋಡಿದ್ದೆ. ನಂಗೆ ನಂಬಲೇ ಆಗಲಿಲ್ಲ. ಯಾರಪ್ಪಾ ಈತ? ಮಾತು ಪರಿಚಯ, ಮುಖ ನೋಡಿದರೆ ಅಲ್ಪ-ಸ್ವಲ್ಪ ಪರಿಚಯ. ಗೊತ್ತಾಗಲಿಲ್ಲ..ತಾವು? ಎಂದೆ. "ನಿಮಗೆ ಯಾರದು ನೆನಪಿರುತ್ತೆ ಹೇಳಿ. ನಾನು ಅಜ್ಜು. .."ಅಂದಾಗ ನೆನಪಾಯಿತು, ನಮ್ಮೂರ ಪೇಪರ್ ಹುಡುಗ...ಅಜಯ್. ಆತನನ್ನು ಅಜ್ಜು ಎಂದು ನಾವೆಲ್ಲ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು. ತುಂಬಾ ಹಿಂದಿನ ಅಂದರೆ ನಾನಾಗ ಹತ್ತನೇ ಕ್ಲಾಸು. ಆವಾಗ ಅಜ್ಜು 8ನೇ ಕ್ಲಾಸು. ಅಜ್ಜು ಚಿಕ್ಕಂದಿನಿಂದಲೂ ಮನೆಮನೆಗೆ ಪೇಪರ್ ಹಾಗೂ ಹಾಲು ಹಾಕಿ ಓದುತ್ತಿದ್ದ. ನೋಡಲು ಮುದ್ದುಮುದ್ದಾಗಿದ್ದ ಅಜ್ಜು ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ತೀರ ಕಷ್ಟ. ಅವನ ಅಪ್ಪ ಬೇರೆ ಮಹಾ ಕುಡುಕ, ಯಾರಿಗೂ ಇರಬಾರದ ಕೆಟ್ಟ ಚಟಗಳೆಲ್ಲಾ ಆತನಿಗಿದ್ದವು. ಅಂಥವನನ್ನು ಅಪ್ಪನೆನನ್ನಲು ಯಾವ ಮಕ್ಕಳಿಗೂ ಸಹ್ಯ ಎನಿಸದು. ಅಮ್ಮ ರಾತ್ರಿ ಹಗಲೂ ಏನೇನೋ ಕೆಲ್ಸ ಮಾಡಿ ಮಗನನ್ನು ಓದಿಸಬೇಕೆಂಬ ಕನಸು ಕಂಡವರು.

ಅಜ್ಜು ಸೂರ್ಯ ಏಳೋಕೆ ಮುಂಚೆನೇ ಎದ್ದು ಮನೆ-ಮನೆಗೆ ಪೇಪರ್ ಹಾಕೋನು. ಹಾಲು ಹಾಕೋನು. ಊರಲೆಲ್ಲಾ ಈ ಕೆಲ್ಸಕ್ಕೆ ಸಂಬಳ ಕಡಿಮೆ. ಆದ್ರೂ ಅವನ ಬದುಕಿಗೆ, ಹಸಿವ ಹೊಟ್ಟೆಗಷ್ಟೇ ಸಾಕಾಗುತ್ತಿತ್ತು. ರಾತ್ರಿಯಿಡೀ ಕುಡುಕ ಅಪ್ಪನ ಕಾಟದಿಂದ ಸರಿಯಾಗಿ ನಿದ್ದೆ ಮಾಡದ ಅಜ್ಜು..ಅದು ಹೇಗೆ ಓದುತ್ತಿದ್ದೇನೋ/ ಹೇಗೆ ಕೆಲಸ ಮಾಡುತ್ತಿದ್ದಾನೋ ದೇವರೇ ಬಲ್ಲ. ನನಗೆ ಅಜ್ಜು ಅಂದ್ರೆ ತುಂಬಾ ಇಷ್ಟ. ಬೆಳಿಗ್ಗೆ, ಮದ್ಯಾಹ್ನ ಫ್ರೀಟ ಟೈಮಲ್ಲಿ ನನ್ನ ಹತ್ತಿರ ಓಡಿ ಬರುತ್ತಿದ್ದ. ಮನೆಯಲ್ಲಿ ಆದ ಕತೆಯನ್ನೆಲ್ಲಾ ಹೇಳುತ್ತಿದ್ದ. ಓದಿನಲ್ಲೂ ಚುರುಕು, ಆಟದಲ್ಲೂ ಚುರುಕು. ಹಾಗಾಗಿ ಅಧ್ಯಾಪಕರಿಗಳಿಗೂ ಅವನಂದ್ರೆ ಇಷ್ಟ, ನಮಗೂ ಪ್ರೀತಿ, ಅಕ್ಕರೆ.
ನಿನ್ನೆ ಇದ್ದಕ್ಕಿದ್ದಂತೆ ಅವನ ನೋಡಿದಾಗ ಖುಷಿಯ ಜೊತೆಗೆ ಅಚ್ಚರಿಯೂ ಆಯಿತು. ಒಳ್ಳೆ ಕೆಲಸದಲ್ಲಿದ್ದೀನಿ...ಅಮ್ಮನೂ ಜೊತೆಗೇ ಇದ್ದಾರೆ ಅಂದ. ಓದುತ್ತಿದ್ದಾಗಲೇ ಏನೇನೋ ಕೋರ್ಸುಗಳನ್ನು ಮಾಡಿ ಇದೀಗ ಬೆಂಗಳೂರಲ್ಲಿ ಒಳ್ಳೆ ಕೆಲ್ಸದಲ್ಲಿದ್ದಾನೆ. ನಂಗೆ ಹೆಮ್ಮೆ ಅನಿಸ್ತು.
ಹಸಿವಿಗಾಗಿ ಭಿಕ್ಷೆ ಬೇಡಲೂ ಹೇಸದ ಅಮ್ಮನೆಂಬ ದೇವರು, ಕಿತ್ತು ತಿನ್ನುವ ಬಡತನದ ನಡುವೆಯೂ ಬದುಕಬೇಕೆಂಬ ಹಂಬಲದ ಆ ಪುಟ್ಟ ಹುಡುಗನ ಕನಸು..ಇದೀಗ ನನಸಾಗಿದೆ. ದೇವರು ಒಳ್ಳೆಯವರಿಗೆ ಯಾವತ್ತೂ ಒಳ್ಳೆಯದನ್ನೇ ಮಾಡುತ್ತಾನೆ. "ಅಕ್ಕಾ ಬಡತನ ನಂಗೆ ತುಂಬಾ ಕಲಿಸಿದೆ" ಎಂದ. ನಿಜವಾಗಿಯೂ ಆತನ ಮಾತುಗಳನ್ನು ಕೇಳುತ್ತಿದ್ದಂತೆ ಅಜ್ಜು ಎಷ್ಟೊಂದು ಬೆಳೆದಿದ್ದಾನೆ..ಬದುಕು ಅವನಿಗೆ ಎಷ್ಟೊಂದು ಕಲಿಸಿದೆ ಅನಿಸಿತ್ತು. ಬದುಕಿನ ಕ್ಷಣಕ್ಷಣದಲ್ಲೂ ನೋವಿಗಷ್ಟೇ ಸಾಕ್ಷಿಯಾಗಿದ್ದ ಅಜ್ಜು..ಬದುಕಿನಲ್ಲಿ ಖುಷಿಯ ಬೆಳಕು ತುಂಬಿದೆ. ನೊಂದ ಬದುಕಿನ ಕಣ್ಣೀರ ಹಿಂದೆ ಸಾವಿರಾರು ಸುಖದನಿಗಳು ಸಾಲುಗಟ್ಟಿ ನಿಂತಿರುತ್ತವೆ ಎನ್ನೋದು ಇದಕ್ಕೆ ಅಲ್ಲವೇ? ಕೆಲವೊಮ್ಮೆ ಸಮಸ್ಯೆಗಳಿಗೂ ನಮ್ಮನ್ನು ಎದುರಿಸಲು ಧೈರ್ಯವಿರುವಿದಿಲ್ಲ..ಬದುಕೇ ಹಾಗೇ..ಅಜ್ಜು..!!
ಅಜ್ಜುನ ಜೊತೆ ಮಾತನಾಡಿ, ಅದೇ ನಮ್ಮ ಮನೆಗೆ ಹೋಗಿ ಅಡುಗೆ ಮುಗಿಸಿ ಕೋಣೆಯೊಳಗೆ ಕೂತವಳಿಗೆ ಇಷ್ಟೆಲ್ಲಾ ನೆನಪಾದುವು. ನನ್ ಖುಷಿಗೆ ಬ್ಲಾಗ್ ನಲ್ಲಿ ಹಾಕಿದೆ. ರೆಪ್ಪೆ ಮುಚ್ಚಿ ಮಲಗಿದರೂ ಯಾಕೋ ಅಜ್ಜುನ 'ಚಿತ್ರಕ್ಕ' ಧ್ವನಿ ಕೇಳಿಬರುತ್ತಿತ್ತು. ಬಡತನದ ಬದುಕು ತುಂಬಾ ಕಲಿಸಿದೆ ಎಂದ ಆತನ ಪ್ರೌಢ ಮಾತು ಮತ್ತೆ ಮತ್ತೆ ಪ್ರತಿಧ್ವನಿಸುತ್ತಿತ್ತು.

Thursday, December 4, 2008

ಪ್ರೀತಿಯ ಅಭಿನಂದನೆಗಳು

ಬ್ಲಾಗ್ ಲೋಕದಲ್ಲಿ ತಮ್ಮ ವಿಭಿನ್ನ ಮತ್ತು ಆಕರ್ಷಣೀಯ ಛಾಯಾಚಿತ್ರಗಳ ಮೂಲಕ ಮನತಟ್ಟುವ ಫೋಟೋಗ್ರಾಪರುಗಳಾದ ಶಿವಣ್ಣ ಮತ್ತು ಮಲ್ಲಿಯಣ್ಣ ಇದೀಗ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ತೃತೀಯ ಪುರಸ್ಕಾರ ಪಡೆದಿದ್ದಾರೆ.
"ನೆಲದ ಮೇಲೆ ಕಾಮನಬಿಲ್ಲು"
ದಿನಾಂಕ: ೪.೧೨.೨೦೦೮ ರಂದು ಮೈಸೂರಿನಲ್ಲಿ ನಡೆದ ಫೆಡರೇಷನ್ ಅಪ್ ಇಂಡಿಯನ್ ಫೋಟೋಗ್ರಪಿಯಿಂದ ಅಂಗೀಕೃತಗೊಂಡ ಮೈಸೂರಿನ ಡಿಸ್ಟ್ರಿಕ್ಟ್ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಸ್ಥೆ ನಡೆಸಿದ ಸ್ಪರ್ದೆಯಲ್ಲಿ ಶಿವಣ್ಣ ಅವರ ಚಿತ್ರ "ನೆಲದ ಮೇಲೆ ಕಾಮನಬಿಲ್ಲು" ಪ್ರಥಮ ಮತ್ತು ಡಿ.ಜಿ. ಮಲ್ಲಿಕಾರ್ಜುನ ರವರ "ನೀರಿನಾಟ" ತೃತೀಯ ಬಹುಮಾನ ಪಡೆದಿದೆ. ಅವರಿಗೆ ಪ್ರೀತಿಯ ಅಭಿನಂದನೆಗಳು . ಈ ಸ್ಪರ್ಧೆಯಲ್ಲಿ ದೇಶದಾದ್ಯಂತ ೨೦೦ಕ್ಕೂ ಹೆಚ್ಚು ಛಾಯಾಚಿತ್ರಕಾರರು ಸ್ಪರ್ದಿಸಿದ್ದರು. ಮತ್ತು ೨೦೦೦ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧೆಗೆ ಬಂದಿದ್ದವು.
"ನೀರಿನಾಟ"
ಅವರ ಬ್ಲಾಗ್ ಗೆ ನೀವೂ ಭೇಟಿನೀಡಬಹುದು. .http://chaayakannadi.blogspot.com/(ಶಿವು) ಹಾಗೂ http://dgmalliphotos.blogspot.com(ಮಲ್ಲಿಕಾರ್ಜುನ/

Monday, December 1, 2008

ಮೂರು ವರ್ಷಗಳ ಹಿಂದೆ ಅಣ್ಣನಿಂದ ಬಂದ ಪತ್ರ....

ಪದವಿ ಓದು ಮುಗಿಯುವವರೆಗೂ ಮನೆಯಿಂದ ಹಿಡಿದು ಸ್ನೇಹಿತರವರೆಗೆ 'ಪತ್ರ'ದ ಮೂಲಕವೇ ವ್ಯವಹಾರ. ಪತ್ರ ಎಂದರೆ ಭಾವ-ಬದುಕು ಬೆಸೆಯುವ ಕೊಂಡಿ. ಮೂರು ವರ್ಷಗಳ ಹಿಂದೆ ನಾನು ಉಜಿರೆಯಲ್ಲಿ ಪದವಿ ಓದುತ್ತಿದ್ದಾಗ ಮಂಗಳೂರಿನಿಂದ ನನ್ನಣ್ಣ ಜಯಣ್ಣ ಬರೆದ ಪತ್ರವೊಂದು ಇಲ್ಲಿದೆ. ಓದಬೇಕೆನಿಸಿದರೆ..ನೀವೂ ಓದಬಹುದು.

ತಂಗಿ ಚಿತ್ರಾಳಿಗೆ ನಿನ್ನ ಪ್ರೀತಿಯ ಅಣ್ಣ ಮಾಡುವ ಆಶೀರ್ವಾದಗಳು. ನಾವೆಲ್ಲ ಕ್ಷೇಮವಾಗಿದ್ದೇವೆ. ನೀನೂ ಕ್ಷೇಮವೆಂದು ಭಾವಿಸುತ್ತೇನೆ.
ಚಿತ್ರಾ ನಿನ್ನ ತಾರೀಕು ಹಾಕದ, ಗೊಂದಲದಿಂದ ಕೂಡಿದ, ಕಂಗ್ಲೀಷ್ ನಲ್ಲಿ ಬರೆದ, ಫೋನು ಮಾಡದೆ ಎರಡು ವಾರ ಆಯಿತೆಂದು ವೃಥಾರೋಪ ಮಾಡಿರುವ, ನುಡಿಮುತ್ತುಗಳಿಲ್ಲದ, ಪ್ರೀತಿ ತುಂಬಿದ, ಸುಂದರ ಅಕ್ಷರಗಳ ಪತ್ರವು ಆರನೇ ತಾರೀಕಿನಂದು ನನಗೆ ಸಿಕ್ಕಿತ್ತು. ಮೇ ಜೂನ್ ನಲ್ಲಿ ಬರಬೇಕಾದ ಮಳೆ ಆಗಸ್ಟ್ ವರೆಗೂ ಮಳೆ ಬರದೆ ನಂತರ ಅದನ್ನೇ ಕಾಯುತ್ತಿದ್ದ ರೈತನಿಗೆ ಸಂತೋಷವಾಗುವಷ್ಟು ಬರದ ನಾಡಲ್ಲಿ ಒಣಗಿದ ಇಳೆಗೆ ಮೊದಲ ಮಳೆ ತಂದ ತಂಪಿನಷ್ಟು ಸಂತಸವಾಯಿತು.
ಫೋನು ಏಕೆ ಮಾಡಲಿಲ್ಲ?
ಪತ್ರ ಏಕೆ ಬರೀಲಿಲ್ಲ?
ಕೋಪವೇ? ಬೇಸರವೇ
?
ನಿನ್ನ ಪ್ರಶ್ನೆ ಇದಲ್ಲವೇ...?!
ಕೇಳು ಉತ್ತರ....:
ಕೋಪ ಇಲ್ಲ, ಬೇಸರ ಇಲ್ಲ.
ಫೋನು ಮಾಡಿದೆ ಲೈನ್ ಸಿಗಲಿಲ್ಲ,
ಮತ್ತೆ ಪತ್ರ ಬರೀಲಿಲ್ಲ..?!
ನೀನೇ ಹೇಳಿದ್ದಲ್ವೇ ಓದಲು ಪುರುಸೋತ್ತಿಲ್ಲ!!

ಚಿತ್ರಾ ನಿನಗೆ ಪರೀಕ್ಷೆ ಇರುವುದರಿಂದ, ನೀನು ತುಂಬಾ 'ಬಿಸಿ' ಇರುವುದರಿಂದ, ಇನ್ನು ವಾರಕ್ಕೊಮ್ಮೆ ಫೋನು ಮಾಡುವುದೆಂದೂ ಸದ್ಯಕ್ಕೆ ಪತ್ರ ಬರೆಯಲು ನನಗೆ ಸಮಯವಿಲ್ಲವೆಂದು ನೀನೇ 'ಅಕ್ಟೋಬರ್ ಒಪ್ಪಂದ' ದಲ್ಲಿ ಹೇಳಿದ್ದಿಯಲ್ಲ. ಅದಲ್ಲದೆ ಈಗಾಗಲೇ ನಾನು ಬರೆದ ಪತ್ರವೊಂದು ನಿನ್ನ ಬಳಿಯಿತ್ತು. ಅದಕ್ಕೆ ಉತ್ತರ ಹಾಕಿರಲಿಲ್ಲ.(ಅಂದರೆ ಚೆಂಡು ನಿನ್ನ ಅಂಗಣದಲ್ಲಿತ್ತು.) ಅದಾಗ್ಲೂ ನಾನು ನಿನಗೆ ಪತ್ರ ಬರೀಲಿಲ್ಲ..ಫೋನು ಮಾಡದೆ 2 ವಾರ ಆಯ್ತೆಂದು(ಡಿಸೆಂಬರ್ 27ರಿಂದ ಜನವರಿ 4ನೇ ತಾರೀನಕಿನವರೆಗೆ 2 ವಾರವೇ?) ಆರೋಪ ಮಾಡಿದ್ದಿ. ಈ ಆರೋಪವನ್ನು ನಾನು ಬಲವಾಗಿ ನಿರಾಕರಿಸುತ್ತೇನೆ. ಮತ್ತು ಈ ಬಗ್ಗೆ ನಿನ್ನ ವಿರುದ್ಧ ಯಾಕೆ ಕೋರ್ಟು ಹತ್ತಬಾರದೆಂದು ಆಲೋಚಿಸುತ್ತಿದ್ದೇನೆ. ಎದುರಿಸಲು ಸಿದ್ಧಳಾಗು.

ಚಿತ್ರಾ ಯಾವಾಗ್ಲೂ ನಿನ್ನ ಪತ್ರವು ನಮ್ಮೂರ ಭಟ್ಟರ ಹೊಟೇಲಿನ ರುಚಿಕರ ಭೋಜನದಂತೆ ಇರುತ್ತಿತ್ತು. ಆದರೆ ಈ ಸಲ ಭಟ್ಟರ ಹೊಟೇಲಿಗೆ ಅಡುಗೆಯವರು ಹೊಸತು(New) ಬಂದಾಗ ರುಚಿಯಲ್ಲೂ ನ್ಯೂನತೆ(Newನತೆ) ಗಳಾಗುವಂತೆ ನಿನ್ನ ಪತ್ರದಲ್ಲೂ ಆಗಿದೆ.

ಯಾವಾಗಲೂ ರುಚಿಕರ ಭೋಜನದಂತಿರುತ್ತಿತ್ತು ನಿನ್ನ ಪತ್ರ,
ಆದರೀಸಲ ಏನೋ ಕೊರತೆ..ಯಾಕೆ ಚಿತ್ರ?
ಭಟ್ಟರ ಹೊಟೇಲಲ್ಲಿ ..
ಉತ್ತಮ ದರ್ಜೆಯ ಅಕ್ಕಿಯ ಅನ್ನ,
ರುಚಿಕರ ಸ್ವಾದದ ಬೇಳೆಯ ಸಾರು,
ಎಲೆಯ ತುದಿಯಲ್ಲಿ ಉಪ್ಪಿನ ಕಾಯಿ,
ಊಟದ ಕೊನೆಗೆ ಬೆಲ್ಲದ ಪಾಯಸ.,

ನಿನ್ನ ಪತ್ರದಲ್ಲಿ...
ಉತ್ತಮ ದರ್ಜೆಯ ಅಕ್ಷರದನ್ನ,
ರುಚಿಕರ ಸ್ವಾದದ ಬರಹದ ಸಾರು,
ಜೊತೆಗೆ ಪ್ರೀತಿಯ ಉಪ್ಪಿನಕಾಯಿ,
ಪತ್ರದ ಕೊನೆಗೆ ನುಡಿಮುತ್ತುಗಳ ಪಾಯಸ..,
ಆದರೆ ಈ ಸಲ..
ಕಲಬೆರೆಕೆಯ ಅಕ್ಕಿ ಬೇಯಲು ಇತ್ತು ಬಾಕಿ,
ಬೇಳೆಯ ಸಾರು ರುಚಿಯಿಲ್ಲದೆ ಬರೀ ನೀರು,
ಉರಿಯುತ್ತಿತ್ತು ಬಾಯಿ ಖಾರವಾಗಿ ಉಪ್ಪಿನಕಾಯಿ,
ಊಟದ ಕೊನೆಗೆ ಇಲ್ಲದೆ ಪಾಯಸ ನನಗಾಗಿತ್ತು ನೀರಸ..!


ಚಿತ್ರಾ ಚೆನ್ನಾಗಿದ್ದಿಯಾ ಎಂದು ತಿಳಿದು ಸಂತಸವಾಯಿತು. ಅಂಕಗಳು ಕಡಿಮೆಯಾಯಿತೆಂದು ಬೇಸರಪಡಬೇಡ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬೇಡ. ಆತಂಕಪಡಬೇಡ. ಅಂತಿಮ ಪರೀಕ್ಷೆಗೆ ತಯಾರಾಗು ಕಳೆದುದನ್ನು ಮರೆತುಬಿಡು. ಅಂತಿಮ ಪರೀಕ್ಷೆಯಲ್ಲಿ ನಿನಗೆ ಉತ್ತಮ ಅಂಕಗಳು ಬಂದೇ ಬರುತ್ತವೆ..ಶುಭವಾಗಲಿ.
ಚಿತ್ರಾ ಪತ್ರ ಹಾಕಿದ್ದೇನೆ ನೆನಪಿರಲಿ, ನಿನ್ನಿಂದ ಮುಂದಿನ ಪತ್ರವನ್ನು ಬೇಗನೆ ನಿರೀಖ್ಷಿಸುವುದಿಲ್ಲ ಕಾರಣ? ನಿನಗೆ ಪೂರ್ವತಯಾರಿ ಪರೀಕ್ಷೆ, ಅಂತಿಮ ಪರೀಕ್ಷೆ ಎಲ್ಲಾ ಇದೆ ಎಂದು ನನಗೆ ಗೊತ್ತು. ಆದರೂ ಪ್ರೀತಿಯಿರಲಿ.
ಇತೀ ನಿನ್ನ ಪ್ರೀತಿಯ
ಜಯಣ್ಣ

Friday, November 28, 2008

ಇದೂ ನ್ಯೂಸ್ ಸೆನ್ಸಾ...?!


"ನಿಮ್ಮ ಮಗನ ಸಾವಿನ ಬಗ್ಗೆ ಹೇಳಿ" ಎಂದು ಮಗ/ಮಗಳ ಶವದ ಎದುರು ರೋಧಿಸುತ್ತಿರುವ ಅಪ್ಪ/ಅಮ್ಮನ ಬಳಿ ಕೇಳಿದರೆ...! ಹೌದು..ಇಂಥ ಪ್ರಶ್ನೆಗಳನ್ನು ನಿನ್ನೆ ವರದಿಗಾರರು ಕೇಳುತ್ತಿದ್ದುದನ್ನು ನೋಡಿ ವರದಿಗಾರರ ಇಂಥ ನೀಚತನದಿಂದ ಮನಸ್ಸು ರೋಸಿಹೋದರೆ, ಮಗನ ಕಳೆದುಕೊಂಡ ಹೆತ್ತ ಕರುಳ ದುಃಖ ನೋಡಿ ನಾನೂ ಕರಗಿ ಕಣ್ಣಿರಾದೆ. ನಿನ್ನೆ ಮುಂಬೈ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಮೇಜರ್ ಸಂದೀಪ್ ಅವರ ಶವ ಬೆಂಗಳೂರಿನ ಯಲಹಂಕಕ್ಕೆ ಬರಲು ಇನ್ನೇನು ಕೆಲ ಕ್ಷಣಗಳಿವೆ ಎಂದಾಗ ಟಿವಿ ಮಾಧ್ಯಮದ ಕೆಲ ವರದಿಗಾರರು ಇಂಥ ಪ್ರಶ್ನೆಗಳನ್ನು ಅವರ ತಂದೆ ಮತ್ತು ಸಂಬಂಧಿಕರ ಜೊತೆ ಕೇಳುತ್ತಿದ್ದರು. ನಿಮ್ಮ ಮಗನ ಬಗ್ಗೆ ಹೇಳಿ, ಅವನ ಸಾವಿನ ಕುರಿತು ಹೇಳಿ..ಹೀಗೆ ದುಃಖದ ಮನೆಯಲ್ಲಿ ಇನ್ನಷ್ಟು ದುಃಖ ತುಂಬಿಸುವ, ಈಗಾಗಲೇ 'ಸತ್ತಿರುವವರನ್ನು' ಮತ್ತೊಮ್ಮೆ ಸಾಯಿಸುವ ಪಾಪಕೃತಗಳಿಗೆ ಕೈ ಹಾಕುತ್ತಿರುವ ಇಂಥ ವರದಿಗಾರರಿಗೆ ಕನಿಷ್ಠ ಜ್ಞಾನವೂ ಇಲ್ಲ ಅನಿಸಿತ್ತು.
ನಾನು ಎಲ್ಲರನ್ನು ಬೈಯುತ್ತಿಲ್ಲ..ಎಲ್ಲಾ ವರದಿಗಾರರು ಹೀಗೆ ಮಾಡುತ್ತಾರಂತಲ್ಲ..ಆದರೆ ಕೆಲವು ವರದಿಗಾರರ ಅವಿವೇಕತನದಿಂದಾಗಿ ಇಂದು ಮಾಧ್ಯಮಗಳ ಮೇಲೆ ಜನ ಯಾವಾಗ ನಂಬಿಕೆ ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ. ನಿನ್ನೆಯ ಕೆಲ ಟಿವಿಗಳ ವರದಿ ನೋಡಿದ್ರೆ..ನ್ಯೂಸ್ ಕೊಡೋ ವೇಗದಲ್ಲಿ ಮುಂಬೈನಲ್ಲಿ ನಡೆಯುತ್ತಿರುವ ದಾಳಿಯೇ ಪೂರ ಕನ್ ಫ್ಯೂಸ್ ಆಗುತ್ತಿತ್ತು.
ಇತ್ತೀಚೆಗೊಬ್ಬರು ಆಸ್ಟ್ರೇಲಿಯಾದಲ್ಲಿ ನಮ್ಮ ದೇಶದ ಫೈಲಟ್ ಒಬ್ರು ಸತ್ತಿರುವುದು ನೆನಪಿರಬಹುದು(ಹೆಸರು ಮರೆತು ಹೋಗಿದೆ..ಗೊತ್ತಿದ್ರೆ ಹೇಳಿ)..ಅವರ ಹೆತ್ತವರ ಬಳಿ ಹೋಗಿ ನಿಮ್ಮ ಮಗನ ಸಾವಿನ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಿ ಅಂದಾಗ, ಅಯ್ಯೋ ನಮ್ಮ ಮಗನ ಸಾವಿನ ಬಗ್ಗೆ ಹೇಳಬೇಕಾಯ್ತಲ್ಲಾ..ಅಂತ ಗೋಳೋ ಅಂತ ಅತ್ತುಬಿಟ್ಟರು. ಎರಡು ವರ್ಷಗಳ ಹಿಂದೆ ರಾಯಾಚೂರಿನಲ್ಲಿ ಕೊಳವೆ ಬಾವಿ ಒಳಗೆ ಬಿದ್ದ ಸಂದೀಪ್ ಅನ್ನು ಹೊರತೆಗೆದರೂ ಆತ ಬದುಕಿ ಉಳಿಯಲಿಲ್ಲ. ಕೊಳವೆ ಬಾವಿ ಒಳಗೆ ಬಿದ್ದ ಮಗ ಬದುಕಿ ಉಳಿಯುತ್ತಾನೆ ಅನ್ನೋ ನಿರೀಕ್ಷೆಯಿಂದ ಮತ್ತು ದುಃಖ ತಡೆಯಲಾಗದೆ ಅಳುತ್ತಿದ್ದ ಅಪ್ಪನ ಬಳಿ, ಟಿವಿ ವರದಿಗಾರನೊಬ್ಬ ಹೋಗಿ, "ನಿಮ್ಮ ಮಗ ಬದುಕಿ ಉಳಿಯುತ್ತಾನೆ ಅಂತ ಅನಿಸುತ್ತದೆಯೇ? ' ಎಂದು ಕೇಳಿದಾಗ, ಯಾಕಪ್ಪ ಇಂಥ ಪ್ರಶ್ನೆಗಳನ್ನು ಕೇಳ್ತಿಯಾ,...ನನ್ ಮಗ ಬದುಕಿ ಬರ್ತಾನೆ ಅಂತ ಹೇಳುತ್ತಾ ಅಳುತ್ತಾನೇ ಇದ್ರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಳ್ಳಭಟ್ಟಿ ದುರಂತದ ಬಗ್ಗೆ ನೀವೂ ತಿಳಿದಿರಬಹುದು. ಅಲ್ಲಿ ಹೆಣಗಳು ಬಿದ್ದಿದ್ದರೆ, ಹೆಣಗಳ ಸುತ್ತ ಅಳುತ್ತಿರುವ ಅವರ ಸಂಬಂಧಿಕರ ಬಳಿ ಹೋಗಿ ಅವರನ್ನು ಮಾತಾಡಿಸೋದು...ಮಾತಾಡಿಸುವುದು ತಪ್ಪಲ್ಲ..ಆದರೆ ಇಂಥ ಅಸಂಬದ್ಧ ಪ್ರಶ್ನೆಗಳನ್ನು ಕೇಳುವಾಗ ನಿಜಕ್ಕೂ ಅಹನೀಯವೆನಿಸುತ್ತೆ. ಇದು ಖಂಡಿತಾ ಸರಿಯಲ್ಲ..ಅವನು ಪತ್ರಿಕಾ ಅಥವಾ ಟಿವಿ, ಯಾವ ವರದಿಗಾರನಾದ್ರೂ ಸರಿ..ಹೀಗೆ ಕೇಳೋದು ಸರಿಯಲ್ಲ. ಆದರೆ ಕೇಳೋರು ಕೇಳ್ತಾನೆ ಇರ್ತಾರೆ. ಮುಂಬೈನಲ್ಲಿ ಮದ್ಯಾಹ್ನ ನಡೆದ ಸ್ಫೋಟವನ್ನು ರಾತ್ರಿ ಒಂಬತ್ತು ಗಂಟೆಗೆ ಬರೋ ನ್ಯೂಸ್ ನಲ್ಲಿ "ಬನ್ನಿ..ತಾಜ್ನಲ್ಲಿ ನಡೆಯುತ್ತಿರುವ ಸ್ಫೋಟದ ಕುರಿತು ತಿಳ್ಕೋಳ್ಳದಕ್ಕೆ ನೇರವಾಗಿ ಅಲ್ಲಿ ಹೋಗಿ ಬರೋಣ" ಅಂದ್ರೆ ಮನೆಯಲ್ಲಿ ಟಿವಿ ಎದುರು ಕುಳಿತವರು ಏನಪ್ಪಾ..ಮಧ್ಯಾಹ್ನದ ಸ್ಫೋಟನೋ ಅಥವಾ ಮತ್ತೆ ಸ್ಫೋಟ ಆಯಿತಾ ಅಂತ ಗೊಂದಲದಲ್ಲಿ ಸಿಕ್ಕಿಬಿಡ್ತಾರೆ. ಇದು ನ್ಯೂಸ್ ಸೆನ್ಸಾ? ನಾನ್ ಸೆನ್ಸಾ? ಗೊತ್ತಾಗುತ್ತಿಲ್ಲ. ನಿನ್ನೆ ರಾತ್ರಿ ಕುಳಿತು ಮೇಜರ್ ಸಂದೀಪ್ ಸಾವು ಕುರಿತು ಟಿವಿ ಚಾನೆಗಳ ಅವಿವೇಕತನದ ಪ್ರಶ್ನೆಗಳನ್ನು ನೋಡಿದಾಗ ಮನದೊಳಗೆ ಬೈಯೋದು ಬಿಟ್ಟು ಬ್ಲಾಗ್ ನಲ್ಲಿ ತುಂಬಿಸೋಣ ಅನಿಸ್ತು.

ಮನಸ್ಸು ಹಗುರವಾಗಿಸಲು...

ಮೊನ್ನೆ ಬುಧವಾರ ರಾತ್ರಿ ಮುಂಬೈಯ ತಾಜ್ ಹೊಟೇಲ್ ನಲ್ಲಿ ಸಿಡಿದ ಬಾಂಬುಗಳ ಸದ್ದು. ನೂರಾರು ಜೀವಗಳ ಮಾರಣಹೋಮ, ಗಾಯಾಳುಗಳು, ಕುಟುಂಬದವರ ಆಕ್ರಂದನ. ಆ ರಕ್ತದೋಕುಳಿಯನ್ನು ನೋಡುತ್ತಿದ್ದ ಮನಸ್ಸೇಕೋ ಅಸಹನೀಯವಾಗಿ ನೋವನನ್ನುಭವಿಸುತ್ತಿದೆ. ಭಾರತ ಎಂದರೆ ಭಯೋತ್ಪಾದನೆ, ಭಾರತ ಎಂದರೆ ಭ್ರಷ್ಟಾಚಾರ ಅನ್ನುವ ಸ್ಥಿತಿ ನಮ್ಮದು. ಅಂದು ಜೈಪುರದಲ್ಲಿ ಬಾಂಬು ಸ್ಫೊಟವಾದಾಗ ಪ್ರಧಾನಿ, ಗೃಹಸಚಿವರು ಹೇಳಿದ್ದು ; ಇನ್ನೆಂದೂ ದೇಶದಲ್ಲಿ ಬಾಂಬು ದಾಳಿ ನಡೆಸದಂತೆ ಎಚ್ಚರಿಕೆ ವಹಿಸುತ್ತೇವೆ. ಆಮೆಲೆ ಬೆಂಗಳೂರು, ಅಹಮದಾಬಾದ್, ದೆಹಲಿ ಎಲ್ಲಿ ರಕ್ತದೋಕುಳಿ ನಡೆದರೂ ಇದೇ ಮಾತನ್ನು ಪುನರುಚ್ಚರಿಸಿದರು. ಇದೀಗ ಮುಂಬೈ ಇನ್ನೂ ಚೇತರಿಸಿಕೊಂಡಿಲ್ಲವಾದರೂ ಇದೇ ಮಾತು ಗಣ್ಯರ ಬಾಯಿಂದ ಉದುರುತ್ತಿದೆ. ಒಂದೇ ಸಮನೆ ಚಾನೆಲ್ ಗಳು ಪ್ರಸಾರ ಮಾಡುತ್ತಲೇ ಇವೆ..ನಿರಂತರ ಕಾರ್ಯಾಚರಣೆ, ಬಿಳುವ ಹೆಣಗಳ ರಾಶಿ ನೋಡಿ ಬದುಕೇ ಬೇಡ ಅನ್ನುವಷ್ಟು ಮನಸ್ಸು ರೋಸಿಹೋಗುತ್ತಿದೆ. ಬೆಳಿಗೆದ್ದು ಟಿವಿ ಆನ್ ಮಾಡಿದರೆ ರಕ್ತದೋಕುಳಿಯ ಸುಫ್ರಭಾತ, ಪೇಪರ್ ನೋಡಿದ್ರೂ ಅದೇ. ಆಫಿಸ್ ನಲ್ಲಿ ಬಂದು ಕುಳಿತರೆ ಕೆಲಸ ಮಾಡಕ್ಕಾಗದಷ್ಟು ದುಃಖವಾಗುತ್ತಿದೆ. ಭಯೋತ್ಪಾದನೆ ದಾಳಿ ಆದಾಗಲೆಲ್ಲಾ ಸತ್ತವರಿಗೆ, ಗಾಯಾಳುಗಳಿಗೆ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತದೆ ನಮ್ಮ ಆಡಳಿತ ವ್ಯವಸ್ಥೆ. ಮತ್ತದೇ ರಾಗ..ಅದೇ ನರಕದ ಬದುಕು. ಉಗ್ರರು ದಾಳಿ ಮಾಡಿದ ತಕ್ಷಣ, ಪೇಪರ್, ಟಿವಿ ಯವ್ರು ದುಂಬಾಲು ಬಿದ್ದಾಗ ನಮ್ಮ ಗೃಹಸಚಿವರು ಹೇಳೋ ಮಾತು, "ಉಗ್ರರ ಮಹತ್ವದ ಸುಳಿವು ಸಿಕ್ಕಿದೆ. ತನಿಖೆ ಮುಂದುವರೆಯುತ್ತಿದೆ" . ಶಿವರಾಜ್ ಪಾಟೀಲ್ ಇಂದೂ ಅದೇ ಮಾತನ್ನು ಹೇಳುತ್ತಿದ್ದಾರೆ. ಅವರನ್ನು ರಾಜೀನಾಮೆಗೆ ಒತ್ತಾಯಿಸುವ, ಸರ್ಕಾರದ ವೈಫಲ್ಯ, ಪಿತೂರಿ ಅನ್ನೋ ಟೀಕಿಸುವ ಎದುರು ಪಕ್ಷಗಳು ಅಧಿಕಾರದಲ್ಲಿದ್ದರೂ ಶಿವರಾಜ್ ಪಾಟೀಲ್ ಗೆ ಮತ್ತು ದೂರೋವರಿಗೆ ಏನೂ ವ್ಯತ್ಯಾಸ ಕಾಣುತ್ತಿರಲಿಲ್ಲ ಬಿಡಿ.

ಅಮೇರಿಕದಲ್ಲಿ ನಡೆದ 9/11 ಘಟನೆ ಬಳಿಕ ಅಲ್ಲಿ ಒಂದೇ ಒಂದು ಭಯೋತ್ಪಾದನಾ ಕೃತ್ಯಗಳು ನಡೆದಿಲ್ಲ. ಕಾರಣ? ಅಲ್ಲಿಯ ಕಾನೂನು, ಆಡಳಿತ ವ್ಯವಸ್ಥೆ. ನಮ್ಮಲ್ಲಿ ನಿತ್ಯ ಬಾಂಬುಗಳದ್ದೇ ಸುದ್ದಿ. ಬಾಂಬುಸ್ಫೋಟ ಆಗಿ ಒಂದು ವಾರದ ತನಕ ಭಾರೀ ಸುದ್ದಿಗಳಬ್ಬುತ್ತವೆ..ಆಮೇಲೆ ಸುದ್ದಿ ತಣ್ಣಗಾಗುತ್ತದೆ. ಉಗ್ರರು, ಬಂಧನ ಅದೇನಾಯಿತೋ ಯಾರಿಗೂ ಗೊತ್ತಾಗಲ್ಲ. ನಮ್ಮವರು ಬಿಗಿಭದ್ರತೆ ಎಂದರೆ ವಿಧಾನಸೌಧ, ಇಂಡಿಯಾ ಗೇಟ್, ಪಾರ್ಲಿಮೆಂಟ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಎಂದಷ್ಟೇ ತಿಳಿದುಕೊಂಡಿದ್ದಾರೆ.

ಮೊನ್ನೆ ಮಂಗಳವಾರ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಓದಿದೆ. ಭವಿಷ್ಯದ ಪ್ರಧಾನಿ ಎಂದು ಆಗಾಗ ಹಳಸಲು ಸುದ್ದಿಯಾಗುತ್ತಿರುವ ಯುಪಿ ಮುಖ್ಯಮಂತ್ರಿ ಮಾಯಾವತಿ ಭದ್ರತೆಗೆ 350 ಪೊಲೀಸ್, 34 ವಾಹನಗಳಂತೆ! ಅಷ್ಟೇ ಅಲ್ಲ, ಮಾಯಾವತಿ ಬೀದಿಗಿಳಿದು ಹೊರಟೆಂದರೆ ಆ ಪ್ರದೇಶದಲ್ಲಿ ಸಂಪೂರ್ಣ ಬಂದೋಬಸ್ತು ಅಂತೆ.!! ಮಾಯಾವತಿ ಒಬ್ಬರಿಗೆ 350 ಮಂದಿ ಭದ್ರತಾ ಸಿಬ್ಬಂದಿಗಳಿದ್ದರೂ, ನಮ್ಮ ದೇಶದ ಪೊಲೀಸ್ ಠಾಣೆಗಳನ್ನು ನೋಡಿದ್ರೆ ಪೊಲೀಸ್ ಸಿಬ್ಬಂದಿಗಳ ಕೊರತೆ, ಭದ್ರತಾ ಸಿಬ್ಬಂದಿಗಳ ಕೊರತೆ. ದೇಶದಲ್ಲಿ ಬಾಂಬು ದಾಳಿಯಾದಾಗಲೆಲ್ಲಾ ಅಗತ್ಯ ಭದ್ರತಾ ಸಿಬ್ಬಂದಿಗಳ ಮಾತು ಕೇಳಿ ಬಂದರೂ, ಆಮೇಲೆ ಅದಕ್ಕೆ ಬೆಲೆನೇ ಇಲ್ಲ. ಮಾಯಾವತಿ ಅಥವಾ ನಮ್ಮ ಕೆಲಸಕ್ಕೆ ಬಾರದ ಜನನಾಯಕರಿಗೆ ಇಷ್ಟೊಂದು ದೊಡ್ಡ ಮಟ್ಟದ ಭದ್ರತೆ ಒದಗಿಸುವ ಬದಲು, ಈ ರೀತಿಯ ಬಾಂಬು ದಾಳಿಗಳಿಂದ ಏನೂ ತಪ್ಪು ಮಾಡದ ಅಮಾಯಕರು ಬಲಿಯಾಗುತ್ತಿದ್ದಾರೆ. ಅದನ್ನು ತಪ್ಪಿಸಿ. ಬಾಂಬು ದಾಳಿಯಂಥ ಘೋರ ಸನ್ನಿವೇಶಗಳು ಎದುರಾದಾಗ ನಮ್ಮ ರಾಜಕೀಯ ಪಕ್ಷಗಳು ಟೀಕಿಸುವ ಬದಲು ಜೊತೆಯಾಗಿ ಹೆಜ್ಜೆಹಾಕಬೇಕು. ಪರಸ್ಪರ ದೂರುತ್ತಿರುವುದರಿಂದ ಯಾವುದೇ ಪ್ರಯೋಜವಿಲ್ಲ. ಮತ ಬ್ಯಾಂಕ್ ಗಾಗಿ ತಪ್ಪಿತಸ್ಥರನ್ನು ಶಿಕ್ಷಿಸದೆ ಸುಮ್ಮನಿರುವ ನೀಚ ಬುದ್ಧಿ ಬಿಟ್ಟುಬಿಡಬೇಕು. ಆದರೆ ಯಾರು ಬಿಡ್ತಾರೆ ಬೇಕಲ್ಲಾ..?! ಮೊನ್ನೆಯಿಂದ ಬಾಂಬು ದಾಳಿಯ ನಿರಂತರ ಸನ್ನಿವೇಶವನ್ನು ನೋಡುತ್ತಿದ್ದಂತೆ ಏನೇನೋ ನೆನಪಾಗುತ್ತದೆ. ಭಾರವಾದ ಮನಸ್ಸು, ಹೃದಯನ ಇಲ್ಲಿ ಹಂಚಿಕೊಂಡೆ. ಭಯೋತ್ಪಾದಕರನ್ನು ಮಟ್ಟಹಾಕಲೂ ನಾವು ದುರ್ಬಲರೇ? ದೇಶಕ್ಕೆ ಎಂಥ ದುರ್ಗತಿ ಬಂತು? ಬದಲಾವಣೆ ಸಾಧ್ಯನೇ ಇಲ್ವಾ?!...

Thursday, November 27, 2008

ಕಂಡಿದ್ದು..ಕೇಳಿದ್ದು..!

ಜೋಕೆ ಸುಳ್ಳು ಹೇಳ್ತಾರೆ
ನಮ್ಮ ತಂದೆ, ತಾತ, ಮುತ್ತಾತರ ಕಾಲದಲ್ಲಿ ಬಸ್ಸಲ್ಲಿ ಯಾರು ಎಲ್ಲಿ ಬೇಕಾದ್ರೂ ಕುಳಿತುಕೊಳ್ಳಬಹುದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರಿಗೆ ಮತ್ತು ಗಂಡಸರಿಗೆ ಪ್ರತ್ಯೇಕ ಸೀಟುಗಳಿವೆ. ಇಂತಹ ನಿಮಯ ಇಲ್ಲಾಂದ್ರೆ ಬಸ್ಸಲ್ಲಿ ಆಗುವ ಕೆಲವು ಅನಾಹುತಗಳಿಂದ ತಪ್ಪಿಸಿಕೊಳ್ಳಬೇಕಲ್ಲಾ?ಎರಡು ದಿನದ ಹಿಂದೆ ಬಿಎಂಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆ. ಬಸ್ಸಲ್ಲಿ ತುಂಬಾ ರಶ್. ಮಹಿಳೆಯರಿಗಾಗಿ ಮೀಸಲಿಟ್ಟ ಸೀಟಿನ ಪಕ್ಕ ಅಂಗವಿಕರಿಗೆ ಎಂದು ಬರೆದ ಸೀಟಿತ್ತು. ಅದರಲ್ಲಿ ಇಬ್ಬರು ಮಧ್ಯವಯಸ್ಸಿನ ವ್ಯಕ್ತಿಗಳು ಕುಳಿತಿದ್ದರು. ಇಬ್ಬರು ಹುಡುಗೀರು ಬಸ್ಸು ಹತ್ತಿ ದಬಾಯಿಸಿದ್ದೇ ದಬಾಯಿಸಿದ್ದು. "ಏನ್ರೀ ಮಹಿಳೆಯರ ಸೀಟಲ್ಲಿ ಕುಳಿತಿದ್ದೀರಿ. ಏಳ್ರೀ.." ಎಂದಾಗ ಆ ಇಬ್ಬರೂ "ನಾವು ಅಂಗವಿಕಲರು ಕಣ್ರೀ. ಬೇಕಾದ್ರೆ ಇಳಿವಾಗ ನೋಡ್ರೀ" ಎಂದುಬಿಟ್ಟರು. ಅಷ್ಟೋತ್ತಿಗೆ ಬಸ್ಸಲ್ಲಿರುವ ಗಂಡಸರೆಲ್ಲರೂ ಅವರಿಬ್ಬರ ಪರ ಮಾತಾಡಿದ್ರೆ, ಹೆಂಗಸರೆಲ್ಲ ಹುಡುಗೀರ ಪರ ಮಾತಾಡಿದ್ರು. ಯಾರ ಪರ ಮಾತಾಡಬೇಕೆಂದು ತೋಚದ ಕಂಡಕ್ಟರ್ "ಬಸ್ಸು ಸ್ಟ್ಯಾಂಡಿನಲ್ಲಿ ಇಳಿತಾರಮ್ಮ..ನೋಡ್ಕೊಳ್ಳಿ" ಅಂದುಬಿಟ್ಟ.ಕೋರಮಂಗಲ ಕೊನೆಯ ಸ್ಟಾಪಿನಲ್ಲಿ ಇಳಿದ ಆ ಇಬ್ಬರು ಅಂಗವಿಕಲ ಗಂಡಸರು, 25 ವರ್ಷದ ಉತ್ಸಾಹದ ಯುವಕರಂತೆ ನಗುತ್ತಾ, "ಇನ್ನು ನೋಡ್ಕೊಳ್ಳಿ' ಅಂತ ಅವರ ಪಾಡಿಗೆ ಹೋದರು. ಹೇಗಿದೆ ಬಸ್ಸು ಪುರಾಣ..ಜೋಕೆ ಸುಳ್ಳು ಹೇಳ್ತಾರೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆ
ಆತ ನಮ್ಮೂರ ಪಕ್ಕದವನು. ಬೆಂಗಳೂರಿನ ಪ್ರಮುಖ ಕಂಪನಿಯಲ್ಲಿ ಕೆಲ್ಸ. ಆರು ತಿಂಗಳ ಹಿಂದೆ ಮದುವೆಯಾಗಿತ್ತು. ಮನೆಯವರು ನೋಡಿದ ಹುಡುಗೀನ ಮದುವೆಯಾದ. ಆಕೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯೆ. ವರದಕ್ಷಿಣೆನೂ ಈತ ಕೇಳಿಲ್ಲ..ಚಿನ್ನನ್ನೂ ಕೇಳಿಲ್ಲ. ಅಂತೂ ತುಂಬಾ ಗ್ಯ್ರಾಂಡ್ ಆಗಿ ಊರಲ್ಲೇ ಮದುವೆಯಾಯಿತು. ಗಂಡ-ಹೆಂಡತಿ ಇಬ್ಬರೂ ಬೆಂಗಳೂರಿಗೆ ಬಂದರು. ಆವಾಗಿನಿಂದ ಏನಾಯಿತೋ? ಇಬ್ಬರಿಗೂ ಜಗಳ. ಆಕೆ ದಿನಾ ಹುಚ್ಚರಂತೆ ವರ್ತಿಸುತ್ತಿದ್ದಳು. ಆಸ್ಪತ್ರೆಗೆ ಹೋದರೆ ಅವಳಿಗೇನೂ ಆಗಿಲ್ಲ ಅನ್ನೋರು ಡಾಕ್ಟರ್. ಸರಿಯಾಗಿ ದಿನಾ ಡ್ಯೂಟಿಗೆ ಹೋಗುತ್ತಿದ್ದಳು..ಆದರೆ ಡ್ಯೂಟಿ ಸಮಯದಲ್ಲಿ ಅವಳೆಂದೂ ಹುಚ್ಚಳಂತೆ ವರ್ತಿಸಿಲ್ಲ. ರಾತ್ರಿ ಮನೆಗೆ ಬಂದ್ರೆ..ಗಂಡನಿಗೆ ಹೊಡೆಯುವುದು,...ಏನೇನೋ ಹೇಳೋದು ಬೈಯೋದು..ಹಾಗೇ ಆರು ತಿಂಗಳು ಕಳೆಯಿತು. ಅಂದಿನಿಂದಲೇ ಆತ ಕುಡಿಯಾಕೆ ಆರಂಭಿಸಿದ. ನೆಮ್ಮದಿಯಿಲ್ಲ...ಯಾರಲ್ಲೂ ಹೇಳಿಕೊಳ್ಳಲಾಗದ ಅರ್ಥವಾಗದ ಸಮಸ್ಯೆ. ಆತ ತುಂಬಾ ಒಳ್ಳೆ ಹುಡುಗ. ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ. ಅದೇನಾಯಿತೋ,,ಕುಡಿಯಾಕೆ ಆರಂಭಿಸಿದ. ಹಾಗೇ ಆರು ತಿಂಗಳು ಬದುಕು ಸಾಗಿತ್ತು. ಮೊನ್ನೆ ಆಕೆ ಅವಳ ಅಪ್ಪ-ಅಮ್ಮನ ಜೊತೆ ಹೋಗಿ ಇವನ ಮೇಲೆ, ಇವನ ಇಡೀ ಕುಟುಂಬದ ಮೇಲೆ 'ಕೌಟುಂಬಿಕ ದೌರ್ಜನ್ಯ ಕಾಯ್ದೆ' ಯಡಿಯಲ್ಲಿ ಕೇಸು ಕೊಟ್ಟಿದ್ದಾಳೆ. ಆತ ವರದಕ್ಷಿಣೆಗೆ ಪೀಡಿಸಿದ ಇನ್ನು ಏನೇನೋ ಹೇಳಿದ್ದಾಳೆ. ಇದು ಕೌಟುಂಬಿಕ ದೌರ್ಜನ್ಯ...ಆತನ ತಪ್ಪೇನಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಕಾನೂನು ಎದುರು ಅವನು ತಲೆಬಾಗಬೇಕು..ಜೈಲಿಗೂ ಹೋಗಬೇಕು. ಕೌಟುಂಬಿಕ ದೌರ್ಜನ್ಯ ಕಾಯ್ದೆ ಹೇಗೆ ದುರುಪಯೋಗವಾಗುತ್ತಿದೆ ಎಂಬುದಕ್ಕೆ ಇಂಥ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ವಿದ್ಯುತ್ ಕ್ಷಾಮ
ಈಗ ವಿದ್ಯುತ್ ಸಮಸ್ಯೆ ಅಲ್ಲ, ವಿದ್ಯುತ್ ಕ್ಷಾಮ ಆರಂಭವಾಗಿಬಿಟ್ಟಿದೆ. ಬೆಳಿಗ್ಗೆ ನಾನು ಹೆಚ್ಚೆಂದರೆ ಆರು ಗಂಟೆಗೇ ಎದ್ದೇಳುತ್ತೇನೆ. ಎದ್ದಾಗ ನನ್ನ ಚಿಂತೆ ಬೇರೇನಲ್ಲ...ಅಯ್ಯೋ ಕರೆಂಟು ಹೋಗಿಬಿಟ್ರೇ..ಅಂತ. ಬೆಳಿಗ್ಗೆ ಏಳೋದೇ ತಿಂಡಿ ರೆಡಿ ಮಾಡೋ ಹೊತ್ತಿಗೆ ಕರೆಂಟು ಮಾಯ. ನಮ್ಮದು ಕೋರಮಂಗಲ..ಇಲ್ಲಿ ಬೆಳಿಗ್ಗೆ ಏಳು ಗಂಟೆಗೇ ಕರೆಂಟು ಹೋಗಿರುತ್ತೆ. ಕರೆಂಟಿಲ್ಲಾಂದ್ರೆ ನೀರೂ ಬರಲ್ಲ..ಮಿಕ್ಸಿ ತಿರುಗಲ್ಲ. ಮಧ್ಯಾಹ್ನಕ್ಕೆ ಅಡುಗೆ..ಸಾರು ರೆಡಿ ಆಗಬೇಕು..ನಮ್ಮ ಸರ್ಕಾರಕ್ಕೆ ಶಾಪ ಹಾಕೊಂಡು ಬೆಳಿಗ್ಗೆ ಆರು ಗಂಟೆಗೆ ಎದ್ದು ಅಡುಗೆ ರೆಡಿ ಮಾಡುವುದು. ಇದು ಬೆಳಿಗ್ಗೆಯ ಕತೆ ಆದ್ರೆ..ನಾನು ಸಂಜೆ ಆರು ಗಂಟೆಗೆ ಆಫೀಸು ಬಿಟ್ಟು ಹೋದಾಗಲೂ ..ಸಂಜೆ ಏಳು ಗಂಟೆಗೆ ಹೋದ ಕರೆಂಟು ಮತ್ತೆ ಬರೋದು 10.30ಗೆ. ಅಷ್ಟೊತ್ತಿನವರೆಗೆ ಕ್ಯಾಂಡಲ್ ಅಡಿಯಲ್ಲಿ ಪರದಾಡಬೇಕು. ಕರ್ಮಕಾಂಡ..ಆಮೇಲೆ ಸಾರು ರೆಡಿ. ಮಲಗುವಾಗಲೂ ತಡ ಆಗಿ ಹೋಗುತ್ತೆ. ಮತ್ತೆ ಊರಲೆಲ್ಲ ಇಡೀ ದಿನ ಕರೆಂಟಿಲ್ಲಂತೆ..ಕರೆಂಟು ನಂಬಿದ್ರೆ ಕೆಲ್ಸಾಸನೇ ಆಗಲ್ಲ ಅಂತಾರೆ. ಬಹುಶಃ ಎಲ್ಲರಿಗೂ ವಿದ್ಯುತ್ ಕ್ಷಾಮದ ಅನುಭವ ಆಗಿರಬೇಕು. ಆದರೆ ನಮ್ಮ ಮುಖ್ಯಮಂತ್ರಿ ಹೇಳೋದೇನು? ಉತ್ತರ ಭಾರತದ ರಾಜ್ಯಗಳಲ್ಲಿ ಚುನಾವಣೆ ನಡೆದೇ ಬಳಿಕವೇ ಕರೆಂಟು ಕೊಡ್ತಾರಂತೆ. ಅವತ್ತಿನವರೆಗೆ ಕರೆಂಟಿಲ್ಲದೆ, ನೀರಿಲ್ಲದೆ ಸಾಯುವವರೆಲ್ಲ ಸಾಯಲಿ ಅಂತೇನು? ಹೌದು.. 'ಬಿಜೆಪಿಯೇ ಪರಿಹಾರ'!!! ಅಂತೆ.

Wednesday, November 26, 2008

ಕಲ್ಲಿನಲ್ಲೂ ಅಡಗಿದೆ ಸೌಂದರ್ಯ....!

ನಿತ್ಯ ತೂರಿಬರುವ ಸೂರ್ಯನ ಹೊಂಗಿರಣ ಚೆಲುವನ್ನು ಆತ ಕಂಡವನಲ್ಲ. ಬೆಳದಿಂಗಳ ರಾತ್ರೀಲಿ ನಗುವ ತಂಪು ಚಂದಿರ, ನಕ್ಷತ್ರ ಪುಂಜಗಳ ಮಿನುಗನ್ನೂ ಆತ ಕಂಡಿಲ್ಲ. ಹೂವು, ಹಣ್ಣು ಪ್ರಕೃತಿಯ ರಮ್ಯತೆ ನೋಡಿಲ್ಲ. ಝುಳು ಝುಳು ಹರಿಯುವ ನದಿ ನಿನಾದವನ್ನು ಕೇಳುತ್ತಾನೆ, ಆದರೆ ನದಿಯ ಸೌಂದರ್ಯ ಕಣ್ಣಾರೆ ನೋಡೀ ಭಾಗ್ಯ ಆತನಿಗಿಲ್ಲ. ಸಂಜೆಯ ಶುಭ್ರ ಕಾಂತಿಯ ಖುಷಿಯನ್ನು ಆತ ಅನುಭವಿಸಿಲ್ಲ. ಆದರೂ ಆತನ ಕಣ್ಣುಗಳಲ್ಲಿ ನಗುವಿನ ಬೆಳಕಿತ್ತು. ಅಮಾವಾಸ್ಯೆಯ ರಾತ್ರಿಗಳನ್ನು ಹುಣ್ಣಿಮೆಯ ಬೆಳದಿಂಗಳನ್ನಾಗಿಸುವ ಕಲೆ ಅವನಿಗೆ ಗೊತ್ತಿತ್ತು. ಮುಖದಲ್ಲಿ ಖುಷಿ ಖುಷಿಯ ಮಂದಹಾಸವಿತ್ತು. ಆತ ನಡೆದಿದ್ದು ಕತ್ತಲಲ್ಲೇ...ಆತನಿಗೆ ನಡೆದಿದ್ದೆಲ್ಲಾ ದಾರಿ. ನಡೆದಿದ್ದೆಲ್ಲಾ ಬದುಕು. ಇದು ಬದುಕುವ ಕೆಲವರ ಬದುಕು.

ನಿನ್ನೆ ರಾತ್ರಿ Zee TV Sa Re Ga Ma Little Champs ಕಾರ್ಯಕ್ರಮದ ಹಳೆಯ ಎಪಿಸೋಡ್ ಗಳನ್ನು ನೋಡುತ್ತಿದೆ. ಲೇಖನಿ ಹಿಡಿದು ಕುಳಿತೆ. ಕಾರ್ಯಕ್ರಮದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಯಿತು. ಮೊದಲ ಬಹುಮಾನವನ್ನು ಸಂಚಿತಾ(14) ಎಂಬ ಕೋಲ್ಕತ್ತಾ ಬಾಲಕಿ ಪಡೆದರೆ, 13 ವರ್ಷದ ದಿವಾಕರ್ ಎಂಬ ದೆಹಲಿಯ ಅಂಧ ಬಾಲಕ ದ್ವಿತೀಯ ಬಹುಮಾನ ಪಡೆದ. ವೇದಿಕೆ ಎದುರು ಸಾವಿರಾರು ಜನರು. ನಿರೀಕ್ಷೆಯಿಂದ ಕಣ್ಣು, ಕಿವಿಗಳನ್ನು ಬಿಟ್ಟು ನೋಡುತ್ತಿದ್ದಾರೆ. ಶಾರುಖ್ ಖಾನ್ ವಿಜೇತರ ಹೆಸರುಗಳನ್ನು ಘೋಷಿಸುತ್ತಿದ್ದಂತೆ ಚಪ್ಪಾಳೆ, ನಗುವಿನ ಸಂಭ್ರಮ ಮುಗಿಲುಮುಟ್ಟಿತ್ತು. ಒಂದೆಡೆ ಪುಷ್ಯಗಳ ಸುರಿಮಳೆ. ಖುಷಿಯಿಂದ ನನ್ನ ಕಣ್ಣಾಲಿಗಳು ತುಂಬಿ ನದಿಯಾದುವು. ಆ ಹುಡುಗನ ಹೆತ್ತವರ ಪ್ರೀತಿಯ ಸಂತೋಷ, ಸಂಭ್ರಮ ವನ್ನು ಕಣ್ಣಾರೆ ಕಾಣಲು ದೇವರು ಮೋಸ ಮಾಡಿದ್ದಾನೇನೋ, ಇದು ಸರಿಯೇ? ಅನಿಸಿತ್ತು..ಆದರೆ ಆತನ ಮುಖದಲ್ಲಿ ಅರಳಿದ ಸಂತೋಷ ಕಂಡು ನಾನೂ ಖುಷಿಪಟ್ಟೆ..ಆತನ ನಗುವಿನಲ್ಲಿ ನಾನೂ ಒಂದಾಗಿ.

ಎರಡು ವರ್ಷಗಳ ಹಿಂದೆ. ಧಿಢೀರ್ ಬೆಂಗಳೂರಿಗೆ ಬಂದವಳು ನಾನು. ಕಾಲೇಜು ಪ್ರೀತಿ, ಅಮ್ಮನ ಮಡಿಲು ಎಲ್ಲವನ್ನೂ ಬಿಟ್ಟು ಈ ಕಾಂಕ್ರೀಟ್ ನಗರಕ್ಕೆ ಬಂದಾಗ ಬದುಕಿನ ಇನ್ನೊಂದು ಮುಖ ಪರಿಚಯವಾಗಿತ್ತು. ಹಳ್ಳಿಯ ಮಡಿಲಿಂದ ಬಂದ ನನಗೆ ಏಕಾಂತ ಸವಿಯಲು ಮನತಣಿಸುವ ಜಾಗಗಳೇ ಇಲ್ಲ. ಬತ್ತದ ಪ್ರೀತಿಯ ತೊರೆ ಹರಿಸುವ ಜೀವಗಳಿಲ್ಲ. ಕುರುಡರು, ಕಿವುಡರು, ಭಿಕ್ಷುಕರು, ಕೈ-ಕಾಲು ಇಲ್ಲದವ್ರು, ಹುಚ್ವರು..ರಸ್ತೆ ಬದಿಯಲ್ಲೇ ಆಕ್ಸಿಡೆಂಟ್ ಆಗಿ ಹೆಣ ಬಿದ್ದರೂ ಏನಾಯ್ತು ಎನ್ನೋರೇ ಇಲ್ಲ..! ಅಬ್ಬಬ್ಬಾ! ನೋಡಿ ಹಳ್ಳಿಯ ಮಡಿಲಿಗೆ ಹೋಗಿಬಿಡೋಣ..ಇಲ್ಲಿ ಜೀವನ ಪ್ರೀತಿನೇ ಇಲ್ಲ ಎಂದನಿಸುತ್ತಿತ್ತು.

ನಾನು ಬಸ್ಸಲ್ಲಿ ಬರುವಾಗ ಹೆಚ್ಚಾಗಿ ಕುರುಡರನ್ನು ನೋಡುತ್ತೇನೆ..ಅವರು ಬಸ್ಸಿಗೆ ಹತ್ತೋದು, ಇಳಿಯೋದು, ರಸ್ತೆ ದಾಟೋದು, ಫೋನಲ್ಲಿ ಮಾತಾಡೋದು, ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡೋದು..ಎಲ್ಲವನ್ನು ಕಂಡಾಗ ನಿಜಕ್ಕೂ ಅವರು ಅಂಗವಿಕಲರಂತಾನೇ ಅನಿಸಲ್ಲ. ನಾವೇ ಕಣ್ಣಿದ್ದರೂ ಕುರುಡರು ಅನಿಸುತ್ತೆ. ದೇವ್ರು ಜಗತ್ತು ನೋಡಕ್ಕೆ ನಮಗೆ ಕಣ್ಣುಗಳನ್ನು ಕೊಟ್ಟಿದ್ದಾನೆ. ಕೈ-ಕಾಲು ನೀಡಿದ್ದಾನೆ. ಆದರೆ ನಾವು ನಡೆಯುತ್ತಿರುವುದು ಬೆಳಕಿನಲ್ಲಿ...ಹಾಗಾಗಿ ನಮಗೆ ನಡೆದಿದ್ದೆ ದಾರಿ. ಕತ್ತಲಲ್ಲಿ ನಡೆದವಂಗೆ ನಡೆದಿದ್ದೆಲ್ಲಾ ದಾರಿ. ಕಣ್ಣಿಲ್ಲದವ್ರು ಜಗತ್ತು ಕಾಣ್ತಾರೆ..ಬದುಕು ಕಾಣ್ತಾರೆ..ಆದರೆ ನಮಗೆ ಕಣ್ಣಿದ್ದರೂ ಕೆಲವೊಮ್ಮೆ ಕುರುಡರಾಗಿರುತ್ತೇವೆ.
ಕೆಲವರು ಅಂಗವಿಕರನ್ನು ಕಂಡಾಗ ಅಯ್ಯೋ ಪಾಪ ಅಂತಾರೆ..ಬೇಡ ಬಿಡಿ ಕನಿಕರದ ಮಾತು. ಅವರಿಗೆ ಬೇಕಾಗಿರೋದು ಪ್ರೀತಿ, ಸ್ಫೂರ್ತಿ, ನಮ್ಮಂತೆ ಅವರನ್ನು ಭಾವಿಸಬೇಕು. ಜಗತ್ತನ್ನು ಕಣ್ಣಾರೆ ಕಾಣದವರಾದರೂ, ಮನದಲ್ಲಿ ಜಗತ್ತು ಕಾಣೋರು ಅವರು. ಅವರಿಗೆ ಜೀವ ಪ್ರೀತೀನ ನೀಡಬೇಕು. ನಮ್ಮಂತೆ ಅವರೂ ಎಂದು ಭಾವಿಸಬೇಕು. ಅಂಧ ಮಕ್ಕಳಿದ್ದರೆ, ಅವರನ್ನು ಅಂಧರ ಆಶ್ರಮಕ್ಕೆ ಸೇರಿಸಿಬಿಡುವ ಎಷ್ಟೋ ಹೆತ್ತವರಿದ್ದಾರೆ..ಬೇಡ, ಬೇಡ..ನಮ್ಮ ಮಡಿಲಲ್ಲಿ ಮಲಗಿಸಿ ಪ್ರೀತೀನ ಉಣಬಡಿಸಿ. ಇತರ ಮಕ್ಕಳಂತೆ ಕಾಣಿ. ಪ್ರೋತ್ಸಾಹ ನೀಡಿ..ಅವರಿಗೂ ದೇವರು ಅದ್ಯಾವುದೋ ಒಂದು ಶಕ್ತಿ, ಚೈತನ್ಯ ನೀಡೇ ನೀಡಿರುತ್ತಾನೆ. ಇಂದು ದಿವಾಕರ್ ನಂತಹ ಎಷ್ಟೋ ಮಕ್ಕಳಿದ್ದಾರೆ. ಅವರಲ್ಲಿ ಪ್ರತಿಭೆಗಳಿವೆ. ಅದನ್ನು ಹೆಕ್ಕಿ ತೆಗೆಯೋ ಕೆಲಸ ನಮ್ಮಿಂದಾಗಬೇಕು. ಅವರಿಗೆ ಬೇಕಾಗಿರೋದು ಪ್ರೀತಿ..ಪ್ರೋತ್ಸಾಹ ಅಷ್ಟೇ. ಆ ಪುಟ್ಟ ಬಾಲಕನನ್ನು ನೋಡುತ್ತಿದ್ದಂತೆ ನನಗೆ ನೆನಪಾಯಿತು..ಎಫ್. ಅಸಾದುಲ್ಲಾ ಬೇಗ್ ಅವರ ಒಂದು ಶಾಯರಿ:
ಕಲ್ಲಿನಲ್ಲೂ ಅಡಗಿದೆ
ಸೌಂದರ್ಯ
ಕೆತ್ತುವ ಸಾಮರ್ಥ್ಯವಿದ್ದರೆ!
ಪ್ರತಿ ಮಾತಿನಲ್ಲೂ ಅಡಗಿದೆ
ಸಾಹಿತ್ಯ
ಗ್ರಹಿಸುವ ಸಾಮರ್ಥ್ಯವಿದ್ದರೆ!

Monday, November 24, 2008

I Hate U...

I hate u..ಥತ್! ನಿಮಗಲ್ಲ..ಸಿಟ್ಟಿಗೆ..ಸಿಟ್ಟನ್ನು ನಾ ತುಂಬಾ ದ್ವೇಷಿಸುತ್ತೇನೆ. ಆದರೆ ಸಿಟ್ಟು ನನ್ನ ಬೆಂಬಿಡದ ಬೇತಾಳ. ಬೆಳಿಗೆದ್ದಾಗ ಕರೆಂಟಿಲ್ಲಾದ್ರೆ ಸಿಟ್ಟು..ಸರಿಯಾಗಿ ಏಳು ಗಂಟೆಗೆ ನನ್ ತಮ್ಮ ಬೆಡ್ ಶಿಟ್ ಹೊದ್ದು ಗೊರಕೆ ಹೊಡೆದ್ರೆ ಅದ್ಕೂ ಸಿಟ್ಟು, ನಲ್ಲಿ ತಿರುಗಿಸಿದಾಗ ನೀರು ಬರದಿದ್ರೆ ಅದ್ಕೂ ಕೆಟ್ಟ ಸಿಟ್ಟು..ಪೇಪರ್ ಹುಡುಗ ಸರಿಯಾದ ಸಮಯಕ್ಕೆ ಪೇಪರ್ ತಂದು ಮನೆಯೆದುರು ಬಿಸಾಡದಿದ್ರೆ ಸಿಟ್ಟು..ಬೆಳಿಗೆದ್ದಾಗಲೇ ಅಮ್ಮ ಫೋನು ಮಾಡಿ ಮನೆಯಲಿದ್ದ ತಮ್ಮನ ಬಗ್ಗೆ ದೂರು ಕೇಳಿದಾಗಲೂ ಮುಸು ಮುಸು ಅಂತೀನಿ..ಸಿಗ್ನಲ್ ಹತ್ರ ನಿಂತ ಬಸ್ಸಿಗೆ ಹತ್ತಿದಾಗ ಡ್ರೈವರ್ ದುರುಗುಟ್ಟಿ ನೋಡಿದರೆ..ಅದ್ಕೂ ರೇಗಾಡಿಬಿಡ್ತೀನಿ..
ಹೀಗೇ ನಾ ಎದ್ದಾಗ, ಕುಂತಾಗ..ಮಲಕೊಂಡಾಗ..ನಿದ್ದೆಯಲ್ಲಿ ಗೊರಕೆ ಹೊಡೆದಾಗ, ಕನಸಿನಾಂಗ...ಸಿಟ್ಟು ನನ್ನ ಬೆನ್ನು ಬಿಡಲ್ಲ. ನಡೆಯೋ ದಾರಿಯ ಪ್ರತಿ ಹೆಜ್ಜೆಯಲ್ಲೂ ಸಿಟ್ಟು ನನ್ನ ಜೊತೆ ಇರುತ್ತೆ..ಬೇಡ ಬೇಡ ಹೋಗು ಹೋಗು ಎಂದರೂ ..ಮತ್ತೆ ಮತ್ತೆ ನನ್ನ ಕಾಡಿಸುತ್ತೆ. ರೇಗುವಂತೆ ಮಾಡುತ್ತೆ...ಮತ್ತೆ ನನ್ನ ಪಶ್ಚಾತ್ತಾಪ ಪಡುವಂತೆ ಮಾಡುತ್ತೆ.
ಆಫೀಸ್ ನಲ್ಲಿ ಬಾಸ್..ಬೆಳಿಗ್ಗೆಯಿಂದ ಏನು ಮಾಡಿದ್ರಿ ಅಂದ್ರೆ ಗುರ್ ರ್ ಅಂತೀನಿ..ಸಂಜೆ ಮನೆಗೆ ಹೊರಟಾಗ ಲೇಟಾಗಿ ಮನೆಗೆ ಹೋಗುವ ಬಾಸ್ ನಾಳೆ ಬಂದು ಏನ್ ಮಾಡ್ತೀರಿ ಎಂದು ಕೇಳಿದಾಗಲೂ ಇಲ್ಲದ ಉಸಾಬರಿ ಇವರಿಗ್ಯಾಕೆ ಅಂತ ಮುಖ ಸಿಂಡರಿಸ್ತೀನಿ.. ಮೊನ್ನೆ ಮೊನ್ನೆ ಸಿಕ್ಕ ನಮ್ಮೂರ ಗೆಳೆಯನತ್ರ ಪರಿಚಯ ಆದ ಮೂರೇ ದಿನದಲ್ಲಿ ಮುನಿಸಿಕೊಂಡಿದ್ದೀನಿ...ಚಾಟ್ ಮಾಡುತ್ತಿದ್ದ ಗೆಳತಿ ಇದ್ದಕಿದ್ದಂತೆ ಆಫ್ ಲೈನ್ ಆದಾಗ ಮತ್ತೆ ಫೋನ್ ಮಾಡಿ ಬೈದು ಬಿಡ್ತೀನಿ..ಪ್ರೀತಿಯ ಗೆಳೆಯ/ಗೆಳತೀರು ಪ್ರೀತಿಯಿಂದ ತಮಾಷೆ ಮಾಡಿದ್ರೂನು ಒಮ್ಮೊಮ್ಮೆ ..i dont like ಅಂತೀನಿ..ಹಾಗಾಗಿ ಎಲ್ರ ದೃಷ್ಟೀಲಿ ನಾ 'ರೆಬೆಲ್ ಸ್ಟಾರ್ 'ಆಗಿಬಿಟ್ಟಿದ್ದೀನಿ.
ನಂಗೊತ್ತು ಸಿಟ್ಟು ನಮ್ಮನ್ನು ತುಂಬಾ ಕೆಟ್ಟವರನ್ನಾಗಿ ಮಾಡುತ್ತೆ..ನೋಡೋರ ಕಣ್ಣಲ್ಲಿ ತೀರ ಕೆಟ್ಟವಳು ಅನಿಸಿಕೊಂಡಿದ್ದೀನಿ..ನಿತ್ಯ ನನ್ ತಮ್ಮ ಆಫೀಸಿಗೆ ಹೊರಡುವಾಗ ಅಕ್ಕ..ನೀಟಾಗಿ ಕೆಲ್ಸ ಮಾಡು..ಬಾಸ್ ಜೊತೆ ಜಗಳ ಮಾಡ್ಬೇಡ ಅಂತಾನೆ...ಅಮ್ಮ ಫೋನು ಮಾಡಿ ಪ್ರೀತಿಯಿಂದ 'ಮಂಡೆ ಬೆಚ್ಚ ಮಲ್ಪೊಡ್ಚಿ ಮ್ಮ" ಅಂತಾರೆ..ಇಷ್ಟಾದ್ರೂ ನನ್ ಸಿಟ್ಟು ಹಾಗೇ ಇದೆ..ಯಾಕೋ ಬಿಟ್ಟು ಹೋಗ್ತಿಲ್ಲ.ಸಿಟ್ಟು ಮಾಡ್ಕೊಂಡು ಎದುರಿಗಿದ್ದವರಿಗೂ ಸಿಟ್ಟು ಬರಿಸ್ತೀನಿ. ಮತ್ತೆ ಪಶ್ಚಾತ್ತಾಪ ಪಡ್ತೀನಿ.
ಮೊದ್ಲು ಹಾಸ್ಟೇಲ್ ಜೀವನ. ಅಲ್ಲೂ ಅಷ್ಟೇ. ನಾನು ಗುರ್ ಅಂದ್ರೆ ಒಂಬತ್ತು ರೂಂಗಳ ಹುಡುಗೀರು ಸುಮ್ಮನಾಗುತ್ತಿದ್ರು. ಶೌಚಾಲಯದಲ್ಲಿ ಕಸ ಬಿದ್ರೆ, ಹೂವಿನ ಗಿಡಗಳಿಗೆ ನೀರು ಹಾಕದಿದ್ರೆ, ಸಂಜೆ ಶುರುವಾಗುವ ಭಜನೆಗೆ ಚಕ್ಕರ್ ಹಾಕಿದ್ರೆ..ರಂಪಾಟ ಮಾಡೋ ನನ್ನ ಮನಸ್ಸು ಮತ್ತೆ ಸ್ವಲ್ಪ ಹೊತ್ತಿನಲ್ಲಿ ಹೋಗಿ ಅವರನ್ನು ಸಮಧಾನಿಸುತ್ತಿತ್ತು. ಆದರೆ ಆವಾಗಲೇ ಕಾಲ ಮಿಂಚಿ ಹೋದ ಘಟನೆಗಳು ಅದೆಷ್ಟೋ. ನಂಗೆ ಶಾಪ ಹಾಕಿದೋರು ಅದೆಷ್ಟೋ ಮಂದಿ.
ಸಿಟ್ಟು ನಮ್ಮನ್ನು ತುಂಬಾ ಹಾಳು ಮಾಡುತ್ತೆ..ಸಿಟ್ಟು ಬೇಡ ಪ್ರೀತಿಯಷ್ಟೇ ಸಾಕು. ಅಸಹನೆ, ಕೆಟ್ಟ ಸಿಟ್ಟು ಬೇಡ..ಪ್ರೀತಿಯ ಹುಸಿಮುನಿಸು, ಪ್ರೀತಿಯ ಸಿಟ್ಟು ಬೇಕು..ಆದ್ರೆ ನಂಗಿನೂ ಇದರಿಂದ ಬಿಡುಗಡೆ ಸಿಕ್ಕಿಲ್ಕ. ಸಿಟ್ಟು ಬರುತ್ತೆ..ಹೋಗುತ್ತೆ...ಏನೋ ಮಾಡುತ್ತೆ..ನನ್ನ ತೀರ ಕೆಟ್ಟವಳನ್ನಾಗಿ..ಕೆಲವರ ಶತ್ರುವನ್ನಾಗಿ. ಇದಕ್ಕೆ ಏನು ಪರಿಹಾರ ಅಂತೀರಾ?

Saturday, November 15, 2008

ನಿದ್ದೆಯಲ್ಲಿ ನನ್ನ 'ಯಕ್ಷಗಾನ'...!

"ಪೊಂಜನಕುಳು, ಆಂಜನಕುಳು, ಜೋಕುಳು, ಅಕ್ಕನಕುಲು, ಅಣ್ಣನಕುಳು, ಅಜ್ಜಿ-ಅಜ್ಜನಕುಳು ಮಾತೆರ್ಲ ಬಲೇ..ಒಂಜೆ ಒಂಜಿ ಆಟೋ ರಾತ್ರಿ 9 ಗಂಟೆಗ್..ದೇವಿಮಹಾತ್ಮೆ..ಮಾತೆರ್ಲ ಬಲೆ..."ಹೀಗೆಂದ ತಕ್ಷಣ ಸಂಜೆಯ ಅಡುಗೆ ಕೆಲಸ ಮುಗಿಸಿ ಮನೆ ಜಗುಲಿಯಲ್ಲಿ ಕುಳಿತು ಹರಟುತ್ತಿದ್ದ ಅಜ್ಜಿಯರು, ಕೂಲಿ ಕೆಲಸ ಮುಗಿಸಿ ಮನೆಗೆ ಆತುರದಿಂದ ಓಡಿಬರುತ್ತಿದ್ದ ಹೆಂಗಸರು, ಗದ್ದೆ ಕಟ್ಟೆಯ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ ಗಂಡಸರು, ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ನಮ್ಮಂಥ ಫೋಲಿ ಹುಡುಗರು ಎಲ್ಲರ ಕಿವಿಗಳೂ ಈ ಪ್ರಚಾರದ ಅಬ್ಬರಕ್ಕೆ ನೆಟ್ಟಗಾಗುತ್ತಿದ್ದವು.

ಆವಾಗ ನಾನಿನ್ನೂ ಪುಟ್ಟ ಹುಡುಗಿ. ಯಕ್ಷಗಾನ ಎಂದರೆ ಪಂಚಪ್ರಾಣ. ಊರಿಗೆ ಬಂದ ಯಕ್ಷಗಾನಗಳನ್ನೆಲ್ಲ ನೋಡೋ ಚಾಳಿ. ದೇವಿ ಮಹಾತ್ಮೆ, ಕಂಸವಧೆ. ಕೃಷ್ಣಲೀಲೆ..ಹೀಗೇ ನೋಡಿದ ಯಕ್ಷಗಾನಗಳಿಗೆ ಲೆಕ್ಕವೇ ಇಲ್ಲ. ಚಳಿಗಾಲ ಶುರುವಾಗುತ್ತಿದ್ದಂತೆ ಕರಾವಳಿಯಲ್ಲಿ ಯಕ್ಷಗಾನ ಮೇಳಗಳ ಅಬ್ಬರದ ಹಬ್ಬ. ಊರಲ್ಲೊಂದು ಯಕ್ಷಗಾನ ನಡೆಯೋದಾದ್ರೆ ..ಒಂದು ವಾರಕ್ಕೆ ಮೊದಲೇ ಪ್ರಚಾರ ಶುರುವಾಗುತ್ತೆ..ಥೇಟ್ ಚುನಾವಣಾ ಪ್ರಚಾರದಂತೆ! ಊರಲ್ಲಿ ಯಾರಾದ್ರೂ ಒಳ್ಳೆ ಮಾತುಗಾರ ಇದ್ರೆ ಆಟದ ಪ್ರಚಾರಕ್ಕೆ ಅವನೇ ಪ್ರಚಾರ ಮಾಡೋನು. ಒಂದಿಷ್ಟು ಜೋಕ್...ಮಸಾಲೆ ಸೇರಿಸಿ ಅವನ ಪ್ರಚಾರ ಕೇಳೋ ಕಿವಿಗೆ ಖುಷಿ ಕೊಡುತ್ತೆ..ಹಾಗಾಗಿ ಆಟ(ಯಕ್ಷಗಾನ) ಪ್ರಚಾರ ಮಾಡುವವನು ಯಾರು? ಏನ್ ಹೇಳ್ತಾನೆ? ಅನ್ನೋದೇ ಕೆಲವರಿಗೆ ಕುತೂಹಲದ ಸಂಗತಿ.

ಪ್ರಚಾರ ಕಿವಿಗೆ ಬಿದ್ದ ದಿನವೇ ನಾನು, ತಮ್ಮಾ ಅಮ್ಮನತ್ರ ಟಿಕೆಟ್ ಗೆ ಹಣ ಫಿಕ್ಸ್ ಮಾಡಿ ಇಡ್ತೀವಿ. ಹೆಚ್ಚಾಗಿ ಶನಿವಾರನೇ ಯಕ್ಷಗಾನ ಆಗೋದು..ಮರುದಿನ ಜನರಿಗೆ ನಿದ್ದೆ ಮಾಡಲೂ ಅನುಕೂಲವಾಗುತ್ತೆ ಅದ್ಕೆ. ಆವಾಗಲ್ಲೆ ಯಕ್ಷಗಾನ ಎಂದರೆ ಊರಿಗೆ ಊರೇ ಯಕ್ಷಗಾನ ಹೋಗುತ್ತಿತ್ತು..ಸುಮಾರು ರಾತ್ರಿ 9 ಗಂಟೆಗೆ ಯಕ್ಷಗಾನ ಶುರುವಾಗುವುದೆಂದರೆ, ಅಂದಿನ ಬೆಳಿಗ್ಗೆಯೇ ಜನ ಎಲ್ಲಾ ರೆಡಿಯಾಗುತ್ತಿದ್ದರು. ಹಣ್ಣು ಹಣ್ಣು ಅಜ್ಜ-ಅಜ್ಜಂದಿರು ಕೂಡ ದೊಣ್ಣೆ ಕುಟ್ಟುತ್ತಾ ಮೊಮ್ಮಕ್ಕಳ ಜೊತೆ ಹೋಗುತ್ತಿದ್ದರು. ನಮ್ಮ ಅಮ್ಮ ಯಾವಾಗ್ಲೂ ಯಕ್ಷಗಾನಕ್ಕೆ ಬರೋಲ್ಲ..ಹಾಗಾಗಿ ನಾವು ಹಿಂಡು ಹಿಂಡಾಗಿ ಹೋಗುತ್ತಿದ್ದ ಊರಮಂದಿ ಜೊತೆಗೇ ಹೋಗುತ್ತಿದ್ದವು. ನಮಗೆ ಬೆಡ್ ಶೀಟ್ ಕೊಟ್ಟು ಅಮ್ಮ ಕಳಿಸುತ್ತಿದ್ರು. ಯಾಕಂದ್ರೆ ರಾತ್ರಿಯ ಚಳಿ ಸಹಿಸಾಕೆ ಆಗಲ್ಲ. ಯಾರ ಜೊತೆಗಾದ್ರೂ ಹೋಗಿ ವೇದಿಕೆಯ ಎದುರು ಮುಂದಿನ ಸಾಲಿನಲ್ಲೇ ಕುಳಿತುಕೊಳ್ಳುತ್ತಿದ್ದೇವು. ನಾನು ರಾತ್ರಿ ಇಡೀ ಬಿಟ್ಟ ಕಣ್ಣುಗಳಿಂದ ಪಿಳಿಪಿಳಿ ಎಂದು ಯಕ್ಷಗಾನ ನೋಡುತ್ತಿದ್ದರೆ, ನನ್ನ ತಮ್ಮ ಚಂಡೆಯ ಸದ್ದಿಗೆ ಏಳೋದು...ಭಾಗವತಿಕೆ ಕೇಳಿದಾಗ ಮಲಗೋದು ಮಾಡುತ್ತಿದ್ದ. ಮಧ್ಯರಾತ್ರೀಲಿ ದೊಡ್ಡ ವೇಷಗಳು ವೇದಿಕೆಗೆ ಬಂದು, ಆಕಾಶ ಭೂಮಿ ಒಂದಾಗುವಂತೆ ಕುಣಿದು ಅಬ್ಬರಿಸಿದಾಗ ನನ್ನ ತಮ್ಮ ಬೆದರಿ ಅದೆಷ್ಟು ಬಾರಿ ಉಚ್ಚೆ ಮಾಡಿದ್ನೋ. ಆದ್ರು ಅವ ಬರೋದನ್ನು ಬಿಡಲ್ಲ.

ಯಕ್ಷಗಾನ ನೋಡಿದ ಮರುದಿನ ನನ್ನ ಕಿತಾಪತಿಯೇ ಬೇರೆ. ಬಂದು ಮನೆಯಲ್ಲಿ ನಿದ್ದೆ ಮಾಡಿದ್ರೆ, ನಿದ್ದೆ ಅಮಲಿನಲ್ಲಿ ಎದ್ದು ರಾತ್ರಿ ನಡೆದ ಯಕ್ಷಗಾನ ಡೈಲಾಗ್ ಗಳು, ಚಂಡೆ ಬಡಿಯೋದು ಎಲ್ಲವನ್ನು ಮಾಡುತ್ತಿದ್ದ ನಾನು ಕೊನೆಗೆ ಎದ್ದು ಕುಣಿಯುತ್ತಿದ್ದೆ ಅಂತೆ. ಅದ್ಕೆ ಅಮ್ಮ ನಿದ್ದೆ ಮಾಡುವಾಗ ನನ್ನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆ ಹುಚ್ಚು ಕನಸು ಎಷ್ಟರಮಟ್ಟಿಗೆ ಇತ್ತೆಂದರೆ ಅಡುಗೆ ಮನೆಗೆ ಹೋಗಿ ಸೌಟು ಮತ್ತು ಪಾತ್ರೆ ತಂದು ಚೆಂಡೆ ಎಂದು ಬಡಿಯುತ್ತಿದ್ದೆ! ಈಗ ನೆನೆಸಿದಾಗ ನಗು ಬರುತ್ತಿದೆ. ಎಂಥ ಅವಸ್ಥೆ ನನ್ನದೂಂತಾ.

ಈಗ ಯಕ್ಷಗಾನ ನೋಡದೆ ಏಳೆಂಟು ವರ್ಷಗಳಾಯ್ತು. ಹೈಸ್ಕೂಲು ಮುಗ್ಸಿ ಪಿಯು, ಡಿಗ್ರಿಗೆ ಹಾಸ್ಟೇಲು ಸಹವಾಸ..ಈಗ ಈ ರೀತಿ ಯಕ್ಷಗಾನ ನೋಡೋದೇ ಅಪರೂಪ. ಅಷ್ಟೇ ಅಲ್ಲ, ಈಗ ಊರಿಗೆ ಹೋದರೆ ಎಂದಿನಂತೆ ಜನ ಯಕ್ಷಗಾನ ಅಂದ್ರೆ ಕಿವಿ ನೆಟ್ಟಗೆ ಮಾಡಲ್ಲ. ಮನೆಯಲ್ಲಿ ಟಿವಿ ಇದೆ, ಸಿಡಿ ತರೋಣ ಹೊಸ ಸಿನಿಮಾ ನೋಡೊಣ ಅಂತಾರೆ. ಕಲೆಗಳು ಜೀವಂತವಾಗಿರುತ್ತವೆ..ಆದರೆ ಜನರ ಅಭಿರುಚಿಗಳು....?!
ಫೋಟೋ: flickr.com

Tuesday, November 11, 2008

ಅಪ್ಪನಿಗೆ ಒಂದು ಪತ್ರ...

ಅಪ್ಪಾ..
ಯಾಕೋ ಮೊನ್ನೆಯಿಂದ ನಿನ್ನ ನೆನಪು ಭಾಳ ಕಾಡ್ತಿದೆ ಅಪ್ಪ. ಅದೇ ಮಕ್ಕಳ ದಿನಾಚರಣೆ ಬಂತಲ್ಲ..ಅದ್ಕೆ ಆಗಿರಬೇಕು. ನನ್ನ ಸ್ಲೂಲ್ ಮಕ್ಕಳೆಲ್ಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲು ತಮ್ಮ ಅಪ್ಪ-ಅಮ್ಮಂದಿರ ಜೊತೆ ಬರ್ತಾರೆ. ನಾನು ಮಾತ್ರ ಯಾವತ್ತೂ ಅಪ್ಪನ ಜೊತೆ ಹೋಗಲ್ಲ..ಅಮ್ಮನ ಜೊತೆ ಹೋಗ್ತಿನಿ. ಅದೇ ಕಳೆದ ಸಲ ಶಾಲೆಗೆ ಹೋದಾಗ ಅಮ್ಮನ ಜೊತೆ ಹೋದಾಗ, ಶಾಲೆಗೆ ಹೊಸದಾಗಿ ಸೇರಿದ ಟೀಚರ್ರು, ಅಪ್ಪನ ಯಾಕೆ ಕರೆದುಕೊಂಡು ಬಂದಿಲ್ಲಾ ಪುಟ್ಟಾ? ಎಂದು ನನ್ ಕೇಳಿದಾಗ ನಾನು ಅಮ್ಮನ ಮುಖ ನೋಡಿದೆ..ನೀನಿರಲಿಲ್ಲ ಅಲ್ವಾ? ಅಮ್ಮ ಒಡಲಲ್ಲಿ ದುಃಖ ತುಂಬಿಕೊಂಡು, ಕಣ್ಣಲ್ಲೇ ನಕ್ಕುಬಿಟ್ಟಳು. ನಾನೂ ನಗಬೇಕಲ್ಲಾ ಅದ್ಕೆ.
ಆದ್ರೂ ನಿನಗೆ ಒಂದು ದಿನವಾದ್ರೂ ನನ್ನ ಮಗಳ ಬೆಳಕಿನ ನಗು ಕಾಣಬೇಕು ಎಂದನಿಸಿದೆಯೇ? ಇಲ್ಲ ಬಿಡು. ಅಪ್ಪಾ, ನೀನು ನನ್ನ ಮತ್ತು ಅಮ್ಮನ ಬಿಟ್ಟು ಹೋಗಿ ಬಹುಶಃ ದಶಕಗಳೇ ಸರಿದುಹೋಗಿವೆ..ನೆನಪುಗಳೂ ಮರೆತುಹೋಗುವಷ್ಟು ದಿನಗಳಾಗಿವೆ..ಆದ್ರೂ 'ಅಪ್ಪ' ನಿನ್ನ ನೆನಪು ಕಾಡುತ್ತೆ. ಕಾಡಿಸುವ, ಪ್ರೀತಿಸುವ, ಮುದ್ದುಮಾಡುವ ಒಳ್ಳೆಯ ಅಪ್ಪ ನೀನಾಗಬೇಕಿತ್ತು ಎಂದನಿಸುತ್ತೆ..ಆಗಾಗ ನನ್ನೊಳಗೆಯೇ ಇದನ್ನೆಲ್ಲಾ ಅಂದುಕೊಳ್ತಿನಿ. ಹೌದು, ಅಪ್ಪ ನೀನು ತುಂಬಾ ಮೋಸಮಾಡಿದೆ. ಅಪ್ಪ, ಅಂದ್ರೇನು ಎಂದು ತಿಳಿಯುವ ಮೊದಲೇ ನೀನು ನನ್ನ ಮತ್ತು ಅಮ್ಮನಿಂದ ದೂರವಾಗಿ ಬೇರೊಂದು ಹೆಣ್ಣಿನ ಕತ್ತಿಗೆ 'ತಾಳಿ'ಯಾಗಿದ್ದೆ. ನೀನು ನಮ್ಮ ಜೊತೆ ಇದ್ದಷ್ಟು ದಿನ ನೀನು ಅಮ್ಮನಿಗೆ ನೀಡಿದ್ದು ಕ್ರೂರ ಹಿಂಸೆನೇ. ನಾನಿನ್ನೂ ಎದ್ದು-ಬಿದ್ದು ನಡೆಯುವ ಮಗುವಾಗಿದ್ದಾಗ ನೀನು ಮೂಗಿನತನಕ ಕುಡಿದು ಬಂದು ಅಮ್ಮನ ಪೀಡಿಸುತ್ತಿದ್ದೆ. ಅಮ್ಮ ದುಡಿದ ಚಿಲ್ಲರೆ ಕಾಸಿಗಾಗಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದೆ..ನೋಡು ಆವಾಗ ನಿನ್ನ ಕೊಲೆಮಾಡುವಷ್ಟು ಸಿಟ್ಟು ಬರ್ತಿತ್ತು. ಹೊಡೆದು, ಬಡಿದು ಅಮ್ಮನಿಂದ ಪುಡಿಗಾಸನ್ನೂ ಬಾಚಿಕೊಂಡು ಹೋದರೆ, ಮತ್ತೆ ನೀನು ಎದುರುಗೊಳ್ಳುತ್ತಿದ್ದು ಸಂಜೆಯ ಕಪ್ಪುಕತ್ತಲಲ್ಲಿ ತೂರಾಡುತ್ತಲೇ. ಸಂಜೆಯ ತನಕ 'ಗಂಡನೇ ದೇವರು' ಎಂದು ಬಟ್ಟಲು ತುಂಬಾ ಪ್ರೀತಿಯನ್ನಿಟ್ಟು ಕಾಯುತ್ತಿದ್ದ ನೀನು ಅಮ್ಮನಿಗೆ ಕೊಡುತ್ತಿದ್ದ ಉಡುಗೊರೆ ಬರೇ ಕಣ್ಣೀರು.
ಪುಟ್ಟ ಪುಟ್ಟ ಪಾದಗಳಿಂದ ಹೆಜ್ಜೆಗಳನ್ನೂರುತ್ತಾ ಸಾಗುತ್ತಿದ್ದ ನಾನು, ಎಲ್ಲವನ್ನೂ ಕಣ್ಣಾರೆ ನೋಡುತ್ತಿದ್ದೆ..ಆದರೆ ಅದ್ಯಾವುದಕ್ಕೂ ಆಗ ಅರ್ಥ ಇರಲಿಲ್ಲ. ನಿನ್ನ ಮೇಲೆ ಸಿಟ್ಟು ಮಾತ್ರ ಇತ್ತು..ಪ್ರೀತಿಯಲ್ಲ. ನನ್ನ ನಿನ್ನ ಸಂಬಂಧ, ಅಮ್ಮ-ನಿನ್ನ ಸಂಬಂಧ ಅದ್ಯಾವುದೂ ನನಗೆ ಆಗ ತಿಳಿಯಲೇ ಇಲ್ಲ..ಆದರೆ ಪ್ರಪಂಚಾನ ನನ್ನ ಕಣ್ಣುಗಳಿಂದ ನೋಡೋ ವಯಸ್ಸಲ್ಲಿ ನೋಡು ನೀನು ನೆನಪಾಗ್ತಿ, ಸಂಬಂಧಗಳು ನೆನಪಾಗ್ತವೆ,..ನಿನ್ನ ಪ್ರೀತಿ ಬೇಕು ಅನಿಸುತ್ತೆ..ಪ್ರೀತಿಯಿಂದ ಅಪ್ಪಾ ಎಂದು ಕರೆಯಲು ನನ್ನೆದುರು ಅಪ್ಪ ಇರಬೇಕಿತ್ತು...ಅಪ್ಪ-ಅಮ್ಮನ ಜೊತೆ ಖುಷಿಯಾಗಿರಬೇಕು ಎಲ್ಲಾ ಅನಿಸ್ತದೆ. ಎಂಥ ಮೋಸ, ಎಂಥ ಕ್ರೂರಿ ಅಪ್ಪ ನೀನು. ನಮ್ಮ ನೆನಪೇ ಆಗಲ್ವೇ ನಿಂಗೆ? ಅಮ್ಮನ ಕಣ್ನೀರು ನಿನಗೇ ಅರ್ಥವೇ ಆಗಲ್ವೇ? ಥೂ..ನಿನ್ನಂಥ ಅದೆಷ್ಟೋ ಗಂಡಸರನ್ನು ಭೂಮಿ ಇನ್ನೂ ಸಹಿಸಿಕೊಂಡಿದೆಯಲ್ಲಾ ಎಂದನಿಸುತ್ತದೆ. ಒಂದು ಹಿಡಿಯಷ್ಟು ಪ್ರೀತೀನ ನಿನಗೆ ಕೊಡಕ್ಕೆ ಆಗಿಲ್ಲ. ಹಾಗಾಗಿ ಅಪ್ಪ ಎನ್ನುವ ಪ್ರೀತೀನ ಪಡೆಯಲು ನನ್ನಿಂದಾಗಿಲ್ಲ.
ನೋಡಪ್ಪಾ, ಯಾಕೋ ನಿನ್ನ ನೆನಪಾಯಿತು..ಪತ್ರ ಬರೆದೆ. ಅಪ್ಪನ ಪ್ರೀತಿ ಬೇಕು ಅಂತ ಅನಿಸಿದ್ದರೂ, ನೀನು ಬೇಕು ಅಂತ ಅನಿಸುವುದೇ ಇಲ್ಲ. ನೀನು ಕೊಟ್ಟ ನೋವಿನ ಮಧ್ಯೆ ಪ್ರೀತಿ ಎಂಬ ಪದವೇ ಅರ್ಥ ಕಳಕೊಂಡಿದೆ. ನನಗೆ-ನಿನಗೆ ಸಂಬಂಧವೇ ಇಲ್ಲಂತ ಅನಿಸುತ್ತೆ. ನೀನು ಬೇಡಪ್ಪಾ. ನೀನು ಎಲ್ಲಿದ್ದಿಯೋ..ಆದ್ರೆ ನೋಡು ನಾನು-ಅಮ್ಮ ತುಂಬಾ ಖುಷಿಯಾಗಿದ್ದೀವಿ. ಅಮ್ಮ ನನ್ನ ಸುಖ, ನನ್ನ ಬದುಕು. ಈಗ ನಾನು ಐದನೇ ಕ್ಲಾಸು..ಅಮ್ಮ ನಂಗೆ ಒಳ್ಳೆ ಟೀಚರ್ ಆಗಿದ್ದಾಳೆ. ಅಮ್ಮ ನೀಡುವ ಪುಟ್ಟ ಪುಟ್ಟ ಸಂತೋಷಗಳು ನನಗೆ ಬದುಕು ನೀಡುತ್ತವೆ.
ಇಂತೀ,
ಮಗಳು

ಫೋಟೋ: http://www.flickr.com/

Thursday, November 6, 2008

'ಶರಧಿ'ಗೆ ವರ್ಷ! ನನ್ನೊಳಗೆ ಹರ್ಷ...

ನನ್ನ ಕನಸು, ಭಾವನೆ, ಬರಹಗಳಿಗೆ ವೇದಿಕೆಯಾಗಿದ್ದ ಪ್ರೀತಿಯ 'ಶರಧಿ'ಗೆ ಇದೀಗ ವರ್ಷ ತುಂಬಿದೆ. ಕಳೆದ ನವೆಂಬರ್ 2ರಂದು 'ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ?' ಎಂಬ ಪುಟ್ಟ ಬರಹವನ್ನು 'ಶರಧಿ'ಯೊಳಗೆ ಹಂಚಿಕೊಂಡಿದ್ದೆ. ಭಾವನೆಗಳ ಸಂತೆಯೊಳಗೆ ಕನಸುಗಳ ಮೂಟೆ ಹೊತ್ತು, ಹುಡುಕಾಟದಲ್ಲೇ ಕಳೆಯುತ್ತಿದ್ದ ನನ್ನ ಬರಹಗಳ ತುಡಿತಕ್ಕೆ 'ಶರಧಿ' ವೇದಿಕೆಯಾಯಿತು. ನಾನು 'ದ ಸಂಡೆ ಇಂಡಿಯನ್' ಪತ್ರಿಕೆಗೆ ಸೇರಿದಾಗ ಪರಿಚಯವಾಗಿದ್ದ ತರ್ಲೆ ಗೆಳತಿ ಕಲಾ ಕನ್ನಡ ಬ್ಲಾಗ್ ಲೋಕವನ್ನು ಪರಿಚಯಿಸಿದವಳು. ಆವಾಗ ಬ್ಲಾಗ್ ಅಂದರೆ ಏನು? ಎಂಬುದೇ ನನಗೇ ಗೊತ್ತಿರಲಿಲ್ಲ. ಸಮಯವಿದ್ದಾಗ, ಮನಸ್ಸು ಸರಿಯಿದ್ದಾಗ ಏನಾದ್ರೂ ಗೀಚಿ ಡೈರಿಯೊಳಗೇ ಮುಚ್ಚಿಡುವ ಅಭ್ಯಾಸ ನನ್ನದು. ಅದೇನೋ ಅವಳು ಯಾವಾಗ ನೋಡಿದರೂ ಅವಳ ಅಣ್ಣನ ಬ್ಲಾಗ್ 'ತುಂತುರು ಹನಿಗಳು'(ಶ್ರೀನಿಧಿ) ಸೇರಿದಂತೆ ತುಂಬಾ ಬ್ಲಾಗ್ ಗಳನ್ನು ತೆರೆದು ಓದುತ್ತಿದ್ದಳು. ನಾನು ಕುತೂಹಲದಿಂದ ಏನೇ ಅದು, ನಂಗೂ ಹೇಳಿಕೊಡು ಎನ್ನುತ್ತಿದ್ದೆ. ಕೊನೆಗೆ ಅವಳೇ ನನ್ನ ಹೆಸರಲ್ಲಿ ಬ್ಲಾಗ್ ತೆರೆದು, ಅಲ್ಲಿ ಬರೆಯುವ ಕುರಿತೆಲ್ಲಾ ಹೇಳಿದಳು. ಅಲ್ಲಿಂದ ಶರಧಿಯಲ್ಲಿ 'ಭಾವದಲೆಗಳ ಪಯಣ' ಮುಂದುವರಿದಿತ್ತು. ನನ್ನ ಗೆಳತಿಗೆ ಪ್ರೀತಿಯಿಂದ ಥ್ಯಾಂಕ್ಸ್ ಹೇಳಲೇಬೇಕು. ಜೊತೆಗೆ ಒಳ್ಳೆಯ ವಿನ್ಯಾಸವನ್ನೂ ಮಾಡಿಕೊಟ್ಟ ನನ್ನ ಪ್ರೀತಿಯ ಅಣ್ಣ' ರೋಹಿ'ಗೂ...

ಒಂದು ವರ್ಷದ ಪಯಣ ನೋಡಿದರೆ ನಾನು ಬರೆದಿದ್ದು ತೀರಾ ಕಡಿಮೆ. ಕೇವಲ 91 ಬರಹಗಳನ್ನು ಮಾತ್ರ ಬರೆದಿದ್ದೇನೆ. ಸೆಂಚುರಿ ಬಾರಿಸಕ್ಕೂ ನನಗೆ ಆಗಲಿಲ್ಲ. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಬ್ಲಾಗ್ ಕಡೆ ಕಣ್ಣುಹಾಯಿಸಲೂ ಸಮಯವಿರಲಿಲ್ಲ..ಕಾರಣ ಚುನಾವಣೆ! ತುಂಬಾ ಭರವಸೆಯಿಂದ, ಆಸಕ್ತಿಯಿಂದ ಆರಂಭಿಸಿದ ಶರಧಿಯಲ್ಲಿ ನಿತ್ಯ ಪಯಣಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಈಗ್ಲೂ ನಂಗಿದೆ. ಆದರೆ ಇಷ್ಟಾದರೂ ಬರೆದೆನಲ್ಲ ಅಂತ ನನಗೆ ಖುಷಿಯಿದೆ, ಏನೋ ಒಂದು ರೀತಿಯ ತೃಪ್ತಿ. ಯಾವತ್ತೂ ನ್ಯಾಯಬದ್ಧವಾದ ಬರಹ, ಸಾಹಿತ್ಯವನ್ನು ಬ್ಲಾಗ್ ಮೂಲಕ ನೀಡಬೇಕನ್ನುವ ಉದ್ದೇಶ ನನ್ನದಾಗಿರಿಲಿಲ್ಲ. ಅದು ನನ್ನಿಂದ ಸಾಧ್ಯನೂ ಇಲ್ಲ. ನನ್ನಾಸೆ ಇಷ್ಟೇ: ಮನಸ್ಸಿಗೆ ತೋಚಿದ್ದನ್ನು, ಕಂಡಿದ್ದನ್ನು , ಕೇಳಿದ್ದನ್ನು ಬ್ಲಾಗ್ ನಲ್ಲಿ ಬರೆಯುವುದು. ಅದೂ ನನ್ನ ತೃಪ್ತಿಗಾಗಿ ಅಷ್ಟೇ.

ನನ್ನ ಬ್ಲಾಗಿನಲ್ಲಿ ತುಂಬಾ ಒಳ್ಳೆಯ ಬರಹಗಳನ್ನು ನಾನೆಂದೂ ಬರೆದಿಲ್ಲ. ಆದರೂ ಬರೆದಿರುವುದಕ್ಕೆ ಎಷ್ಟೋ ಜನ ಬೆನ್ನುತಟ್ಟಿದ್ದಾರೆ. ಇನ್ನಷ್ಟು ಬರೆ ಅಂದಿದ್ದಾರೆ. ಏನೋ ಸುಮ್ನೆ ಗೀಚಿದಾಗ ಬರಹ ಚೆನ್ನಾಗಿತ್ತು, ಆದರೆ ಹೀಗಿರಬೇಕಿತ್ತು ಎಂದಿದ್ದಾರೆ..ಅದೇ ನನಗೆ ತುಂಬಾ ಖುಷಿ ತಂದಿರುವ ವಿಚಾರ. ನಾನು ಅಕ್ಷರಲೋಕಕ್ಕೆ ಹೆಜ್ಜೆಯಿಟ್ಟ ದಿನಗಳಿಂದಲೇ 'ಚಿತ್ರಾ , ಬ್ಲಾಗ್ ಶುರು ಮಾಡು' ಎನ್ನುತ್ತಿದ್ದವರು, ಪ್ರೀತಿಯಿಂದ ಪ್ರೋತ್ಸಾಹ ನೀಡುತ್ತಿದ್ದವರು, ಒಂದು ರೀತೀಲಿ ನನ್ನ ಪಾಲಿಗೆ 'ಮೇಷ್ಟ್ರು' ಆಗಿದ್ದ 'ಕುಂಟಿನಿ'ಸರ್ ಗೆ ಎಷ್ಟೇ ಥ್ಯಾಂಕ್ಸ್ ಹೇಳಿದ್ರೂ ಸಾಲದು. ಬ್ಲಾಗ್ ಬರೆದಾಗ 'ಆಗಲ್ಲ..ಹೀಗೆ ಬರೀಮ್ಮಾ' ಎನ್ನುತ್ತಿದ್ದ ರಶೀದ್ ಸರ್, ಆರಂಭದಿಂದಲೇ ಪ್ರತಿ ಬರಹಗಳನ್ನು ಓದಿ 'ನೋಡಮ್ಮಾ ಚಿತ್ರಾ..ಯಾರಿಗೂ ನೋವಾಗದಂತೆ ನಿನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸು' ಎನ್ನುತ್ತಿದ್ದ ಗೆಳೆಯ ರಾಜೇಶ್, ನನ್ನ ಬ್ಲಾಗ್ ಅನ್ನು ಪ್ರಕಟಿಸಿ ಪ್ರೋತ್ಸಾಹಿಸಿರುವ ಕೆಂಡಸಂಪಿಗೆ, ಕನ್ನಡಪ್ರಭ, ಅವಧಿ ಎಲ್ಲರೂ ನನ್ನನ್ನು ಬೆನ್ನುತಟ್ಟಿದವರೇ. ..ಜೊತೆಗೆ ಒಂದಷ್ಟು 'ಬ್ಲಾಗ್ ಗೆಳೆಯರೇ' ನನಗೆ ಸ್ಫೂರ್ತಿ.

'ಶರಧಿ' ಅಂದ್ರೆ ನನ್ನ ಕನಸು. ಇದು ನಾನು ತುಂಬಾ ಇಷ್ಟಪಟ್ಟ ಹೆಸರು. ನನ್ನ ಅಮ್ಮನ ಜೊತೆ ಹೇಳ್ತಾ ಇದ್ದೆ, 'ಜಗತ್ತಿನಲ್ಲಿ ಒಳ್ಳೊಳ್ಳೆ ಹೆಸ್ರು ಇರುವಾಗ ನನಗೇಕೆ ಈ ಚಿತ್ರಾ ಅನ್ನೋ 'ವಿಚಿತ್ರ ಹೆಸರು ಇಟ್ಟೆಂತ?'. ಅದಕ್ಕೇ ಪ್ರೀತಿಯಿಂದ 'ಶರಧಿ' ಅಂತ ಹೆಸರಿಟ್ಟೆ. ನನ್ನ ಶರಧಿ ಇನ್ನೂ ಪುಟ್ಟದಾದ, ಒಂದು ವರ್ಷದ ಹಸುಗೂಸು. ನಾನಿಲ್ಲಿ ಇನ್ನೂ ತುಂಬಾ ದೂರ ದೂರ ಪಯಣಿಸಬೇಕಿದೆ. ಏನೇನೋ ಬರೆಯಬೇಕೆಂದುಕೊಂಡಿದ್ದೇನೆ..ಕತೆ, ಕವನ, ವಿಮರ್ಶೆಗಳನ್ನು ಬಿಟ್ಟು. ಯಾಕೆಂದರೆ ಎಂಥ ಪುಸ್ತಕಗಳನ್ನು ಓದಿದರೂ ಈ ಮೂರು ಅಭ್ಯಾಸಗಳಿನ್ನೂ ಒಲಿದಿಲ್ಲ. ಇದಕ್ಕೆ ಮಂಡೆನೇ ಒಡುತ್ತಿಲ್ಲ. ಆದರೂ ನನ್ನ ಪ್ರೀತಿಯ ಶರಧಿಯಲ್ಲಿ ಏನಾದ್ರೂ ಬರೆಯಲೇಬೇಕು...ಬರೀತಾಲೇ ಇರಬೇಕು..ಶರಧಿ ನಿರಂತರವಾಗಿ ಹರಿಯುತ್ತಲೇ ಇರಬೇಕು. ನನ್ನೊಳಗಿನ ಖುಷಿ, ಅಳಲಿನ ಭಾವಗಳ 'ಸವಿಹಾಡು'ಗಳು ಆಗಾಗ 'ಶರಧಿಯಲ್ಲಿ' ಪಯಣಿಸುತ್ತಿರಬೇಕು ಎಂಬುದು ನನ್ನಾಸೆ. ನನ್ನೊಳಗಿನ ಭಾವದಲೆಗಳ ಪಯಣಕ್ಕೆ 'ಶರಧಿ' ಪುಟ್ಟ ವೇದಿಕೆ. ನನಗೆ ಬೆನ್ನು ತಟ್ಟಬೇಕು,.ಶರಧಿಯಲ್ಲಿ ನನ್ನ ಜೊತೆಗೆ ನೀವೂ ಖುಷಿಖುಷಿಯಾಗಿ ಪಯಣಿಸಬೇಕು. ''ಶರಧಿ' ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.
ಪ್ರೀತಿಯಿಂದ,
ಚಿತ್ರಾ
(ಫೋಟೋ: ರೋಹಿ ಅಣ್ಣ)



Wednesday, October 29, 2008

ಕಂಡಿದ್ದು..ಕೇಳಿದ್ದು!

ಆಶೀರ್ವಾದ ಅಂದ್ರೆ....
ದೀಪಾವಳಿ ಹಬ್ಬ. ಆಫೀಸ್ನಲ್ಲಿ ಬಿಡುವಿಲ್ಲದ ಕೆಲಸ. ಹಾಗಾಗಿ ರಜೆ ಮಾಡಲಾಗಿಲ್ಲ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ನನ್ನ ತಮ್ಮನ ಕರೆದುಕೊಂಡು ಮನೆಯ ಸಮೀಪ ಇರುವ ದೇವಸ್ಥಾನವೊಂದಕ್ಕೆ ಹೋಗಿದ್ದೆ. ಅಲ್ಲಿ ಸುಮರು 80 ವರ್ಷದಷ್ಟು ವಯಸ್ಸಾಗಿರುವ ಅಜ್ಜನೊಬ್ಬ ಬಂದಿದ್ದರು. ದೇವಸ್ಥಾನಕ್ಕೆ ಹೋಗಲಾಯಿತು, ಪೂಜೆ ಆಯಿತು. ನಾವು ಹೊರಡಲನುವಾದೆವು. ಅ ದೇವಸ್ಥಾನದ ಅರ್ಚಕನೊಬ್ನನಿಗೆ ಸುಮಾರು 20-23 ವರ್ಷವಾಗಿರಬಹುದು. ಯುವಕ. ನಮ್ಮ ಪಕ್ಕದಲ್ಲೇ ಇದ್ದ ಅಜ್ಜ ಹೋಗಿ ಆ ಯುವಕನ ಕಾಲಿಗೆ ಅಡ್ಡ ಬಿದ್ದರು. ಅವನು ತಥಾಸ್ತು ಅಂದ. ಅಜ್ಜನಿಗೆ ಮೊಮ್ಮಗನಷ್ಟು ವಯಸ್ಸಿನ ಯುವ ಅರ್ಚಕ ಆಶೀರ್ವಾದ ಮಾಡಿದ್ದ. ನಂಗೆ ಯಾವ ದೇವಸ್ಥಾನಗಳಿಗೆ ಹೋದರೂ ಸ್ವಾಮೀಜಿ. ಅರ್ಚಕರಿಗೆ ಕಾಲಿಗೆ ಬೀಳುವ ಅಭ್ಯಾಸ ಇಲ್ಲ. ಅದಿರಲಿ, ಆಶೀರ್ವಾದ ಎಂದರೇನು? ಹಿರಿಯರು ನೀಡಬೇಕೋ/ಕಿರಿಯರು ನೀಡಬೇಕೋ ನಂಗಂತೂ ಹಿಂದಿನಿಂದಲೂ ಕನ್ ಪ್ಯೂಶನ್!

ಕಳ್ಳ ವರದಿಗಾರ!
ನಾನು ನಿನ್ನೆ ಕಾರ್ಯನಿಮಿತ್ತ ಕನ್ನಡದ ಜನಪ್ರಿಯ ಟಿವಿ ಚಾನೆಲ್ ಒಂದರ ಕಚೇರಿಗೆ ಹೋಗಿದ್ದೆ. ಕೈಯಲ್ಲಿ ನೇತಾಡುತ್ತಿದ್ದ ಬ್ಯಾಗ್, ಫೈಲ್ ಎಲ್ಲವನ್ನೂ ಕಾರಲ್ಲೇ ಬಿಟ್ಟು ಟಿವಿ ಕಚೇರಿಗೆ ಹೋದೆ. ನಮ್ಮ ಕಾರು ಡ್ರೈವರ್ ಏನು ಮಾಡಿದ್ದರೆಂದರೆ...ಪಕ್ಕದಲ್ಲೇ ಮಕ್ಕಳು ಪಟಾಕಿ ಹಚ್ಚುವುದನ್ನು ನೋಡುತ್ತಾ ನಿಂತಿದ್ದರು. ಕಾರಿಗೆ ಡೋರ್ ಹಾಕಿದ್ರೂ ಲಾಕ್ ಮಾಡಿರಲಿಲ್ಲ. ಅಲ್ಲೇ ಒಬ್ಬ ಅದೇ ಟಿವಿಯ ವರದಿಗಾರನೂ ನಿಂತು ಮಕ್ಕಳು ಪಟಾಕಿ ಹಚ್ಚುವುದನ್ನು ನೋಡಿ ಖುಷಿಪಡುತ್ತಿದ್ದ. ಈ ಡ್ರೈವರ್ ಅವರ ಪಾಡಿಗೆ ಅವರು ನೋಡುತ್ತಿದ್ದರು. ಕಾರಿನ ಡೋರ್ ತೆಗೆದ ಶಬ್ಧ ಬಂದಾಗ ತಿರುಗಿ ನೋಡಿದ್ದರು. ಆ ವರದಿಗಾರ ನನ್ನ ಬ್ಯಾಗ್ ಎತ್ತಿದ್ದ. ಟಿವಿ ಗುರುತಿನ ಚೀಟಿ ಕುತ್ತಿಗೆಗೆ ಹಾಕೊಂಡಿದ್ದ ಆ ಸುಂದರ ಯುವಕ, ನನ್ನ ಬ್ಯಾಗ್ ಕದಿಯಲು ನೋಡಿದ್ದ. ಆತನನ್ನು ಬೈದಾಗ ನಗುತ್ತಾ ಬ್ಯಾಗನ್ನು ಅಲ್ಲೇ ಬಿಟ್ಟು ಹೋದ. ನಾನು ನನ್ನ ಕೆಲಸ ಮುಗಿಸಿ ಬರುವಾಗ ಡ್ರೈವರ್ ಈ ಕಥೆ ನನಗೆ ಹೇಳಿದ್ದರು. ಇವನೂ ಒಬ್ಬ ಸಮಾಜದ ಧ್ವನಿ!!

ಇಂಥವರೂ ಇದ್ದಾರೆ!
ಇತ್ತೀಚೆಗೆ ಕೆಲಸದ ನಿಮಿತ್ತ ತಮಿಳುನಾಡು ಕಡೆ ಹೋಗಿದ್ದೆ. ಅದೇ ಮೊದಲು ಕರ್ನಾಟಕ-ತಮಿಳು ಗಡಿ ದಾಟಿ ಹೋಗಿದ್ದು. ಚೆಕ್ ಪೋಸ್ಟ್ ಬಳಿ ಗಾಡಿ ನಿಲ್ಲಿಸಿದೆವು. ನಡುವಯಸ್ಸಿನ ಭಿಕ್ಷುಕಿಯೊಬ್ಬಳು ತನ್ನ ಮಗುವನ್ನು ಕಂಕುಳಲ್ಲಿ ಹಾಕಿಕೊಂಡು 'ಅಮ್ಮಾ...' ಎನ್ನುತ್ತಾ ಬಂದಳು. ನಾನು ಚಿಲ್ಲರೆಗಾಗಿ ಹುಡುಕಾಡಿದಾಗ ಕೊನೆಗೂ ಚಿಲ್ಲರೆ ಸಿಗಲಿಲ್ಲ. ಇರ್ಲಿ ಬಿಡಿ ಅಂತ ಸುಮ್ಮನಾದೆ. ಆದ್ರೂ ಆ ಹೆಂಗಸು ಹೋಗವಂತೆ ಕಾಣಲಿಲ್ಲ. ಕಾರಿನ ಸಮೀಪ ನಿಂತು ಏನೇನೋ ಗೊಣಗುತ್ತಿದ್ದಳು. ಮತ್ತೆಲ್ಲೋ ಸಿಕ್ಕಿದ ಎರಡು ರೂ. ನಾಣ್ಯ ಕೈಗೆ ಹಾಕಿದೆ. 10 ನಿಮಿಷ ಆದ್ರೂ ಕಂಕುಳಲಿದ್ದ ಮಗು ಅಳಲಿಲ್ಲ, ಮಿಸುಕಾಡಲಿಲ್ಲ. ಮಗು ಕಾಣದಂತೆ ಪೂರ್ತಿಯಾಗಿ ಬಟ್ಟೆಯಿಂದ ಸುತ್ತಿದ್ದಳು. ಆವಾಗ್ಲೇ ನನಗೆ ಗೊತ್ತಾಗಿದ್ದು ಕಂಕುಳಲಿದ್ದುದು ಮಗುವಲ್ಲ, ಬಟ್ಟೆಯನ್ನೇ ಮಗು ರೀತಿ ಮಾಡಿ ಕಂಕುಳಿಗೆ ಹಾಕೊಂಡಿದ್ದಾಳೆಂದು!

Friday, October 10, 2008

ಕನ್ನಡದ ನುಡಿಮುತ್ತುಗಳನ್ನೊಳಗೊಂಡ ಟಿ-ಶರ್ಟ್ ಗಳು ಬೇಕೇ?

ಕನ್ನಡ ರಾಜ್ಯೋತ್ಸವ ಬರುತ್ತಿದ್ದಂತೆ ನಗರದ ಸಮಾಜ ಸೇವಕರ ಸಮಿತಿಯ ಯುವಕರು ಸಿದ್ಧಪಡಿಸಿದ ಡಿ.ವಿ. ಜಿ. ಅವರ ಕಗ್ಗ ಮತ್ತು ಜಿ. ಪಿ. ರಾಜರತ್ನಂ ಅವರ ನುಡಿಗಳನ್ನು ಒಳಗೊಂಡ ಸುಂದರ ಟಿ-ಶರ್ಟ್ ಗಳ ಭರಾಟೆ ಆರಂಭವಾದಂತಿದೆ. ನಿನ್ನೆ 200 ರೂ. ಕೊಟ್ಟು ನಾನೂ ಒಂದು ಕೊಂಡುಕೊಂಡೆ. ಈ ಸಮಾಜ ಸೇವಕರ ಸಮಿತಿ ವರ್ಷವಿಡೀ ಈ ಟಿ-ಶರ್ಟ್ಗಗಳನ್ನು ಸಿದ್ಧಪಡಿಸಿ, ಮಾರಾಟ ಮಾಡುತ್ತಿದ್ದರೂ ನಮ್ಮಲ್ಲಿ ಅದು ಸುದ್ದಿಯಾಗುವುದು ಕೇವಲ ರಾಜ್ಯೋತ್ಸವ ಬಂದಾಗ,...ಮಾತ್ರ! ಅದೇ ತಾಂಜಾನೀಯಾ, ಇಂಗ್ಲೇಡ್, ಫ್ರಾನ್ಸ್, ಸಿಂಗಾಪುರ ಸೇರಿದಂತೆ ಹೊರರಾಷ್ಟ್ರಗಳಲ್ಲಿ ಕನ್ನಡಿಗರನ್ನು ಆಕರ್ಷಿಸುತ್ತಿದ್ದರೂ, ನಮ್ಮಲ್ಲಿ ಮಾತ್ರ ಅಯ್ಯೋ ಮಾರಾಯ, ಇದ್ಯಾಕೆ..ಹೀಗೆಲ್ಲ ಬರೆದ ಟಿ-ಶರ್ಟ್ಗಳನ್ನು ಹಾಕೋಲ್ಲ. ಇನ್ನು ಸ್ಪಲ್ಪ ಹಣ ಕೊಟ್ಟರೆ ಜಾಕಿ ಟಿ-ಶರ್ಟ್ ಸಿಗುತ್ತೆ ಅನ್ನೋರೇ ಜಾಸ್ತಿ. ಏನೇ ಇರ್ಲಿ ಪ್ರತಿ ವರ್ಷದ ರಾಜ್ಯೋತ್ಸವ ದಿನದಂದು ಪ್ರೀತಿಯೋ, ಕನ್ನಡದ ಬಗೆಗಿನ ಅಭಿಮಾನವೋ ಅಕ್ಕರೆಯೋ ಅಥವಾ ಫ್ಯಾಶನ್ನೋ ಅದೇನೋ ಈ ಕನ್ನಡ ಟಿ-ಶರ್ಟ್ಗಳು ಕನ್ನಡಿಗರ ಮನಸ್ಸು ಆಕರ್ಷಿಸುತ್ತವೆ ಅನ್ನೋದು ಸುಳ್ಲಲ್ಲ. ಏನೇ ಆಗಲಿ, ಈ ಟಿ-ಶರ್ಟ್ಗಳ ಮಾರಾಟದಿಂದ ಬಂದ ಹಣವನ್ನುಸಮಾಜ ಸೇವಕರ ಸಮಿತಿ ತಮ್ಮ ಸಂಘದ ವತಿಯಿಂದ ಬಡಮಕ್ಕಳಿಗಾಗಿ ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗಿಸುತ್ತಿದೆ.



ನಿಮಗೂ ಬೇಕನಿಸಿದ್ದಲ್ಲಿ..
Email: sssamaja@gmail.comsssglobal@yahoogroups.com ಸಂಪರ್ಕಿಸಬಹುದು.
ಅಥವಾ 9448171069, 9886683008 ಸಂಪರ್ಕಿಸಿ.


Sunday, October 5, 2008

ಬೇಡ ಬಿಡು...ಕಣ್ಣೀರಿನ ಅನುಕಂಪ ನನಗೇಕೆ?

ಪರಿಚಯಕ್ಕೆ ಕಾಲದ ಹಂಗುರಲಿಲ್ಲ. ಬದುಕು ಕುತರ್ಕದ ಪ್ರಶ್ನೆ ಎದುರಾದಾಗ ಬದುಕಿನ ಬಂಡಿಯಲ್ಲಿ ನಾವಿಬ್ಬರೇ ಪಯಣಿಗರು. ಸ್ನೇಹದ ಪ್ರತಿ ಸೀಮೆಯನ್ನು ದಾಟುವಾಗಲೂ..ನಾನು ನೀನಾಗಿದ್ದೆ, ನೀನು ನಾನಾಗಿದ್ದೆ. ನನ್ನ ಮನ ತಟ್ಟಿ ಮಡಿಲಲ್ಲಿ ಮಗುವಂತೆ ಹುದುಗಿಸಿ ಪ್ರೀತಿಯ ಕಚಗುಳಿಯಿಟ್ಟಾಗ ಬರಡು ಹೃದಯಕ್ಕೆ ಅಮೃತ ಕ್ಷಣ ನೀನು. ಕುರುಡುಕತ್ತಲಲ್ಲಿ ಕಣ್ಣು ಕೊಟ್ಟವಳು ನೀನಾಗಿದ್ದೆ.

ಸಹಜವಾಗಿ ಭಾವನೆಗಳೂ ನನ್ನೊಳಗೆ ಮಾತಾಡಿದ್ದವು. ನಿನ್ನ ಕುಡಿನೋಟ, ನಗು, ತಿಳಿಹಾಸ್ಯ, ಕೇಕೆಯ ಮಾತುಗಳು, ಅಕ್ಕರೆಯಿಂದ ನೀಡಿದ ಚಾಕಲೇಟು, ಕಿವಿ ಹಿಂಡಿದ್ದು, ಮಕ್ಕಳಂತೆ ಹೊಡೆದಾಟ..ನೋವಿನ ಕರಾಳತೆಯನ್ನೂ ಹಂಚಿಕೊಂಡ ಮನ..ಎಲ್ಲವೂ ಭವಿಷ್ಯದ ಕರಾಳ ನೆರಳಿನಲ್ಲಿ ಬರೇ ನೆನಪುಗಳು ಅಂತ ನಾನಂದುಕೊಂಡಿರಲಿಲ್ಲ..ರಣಬಿಸಿಲಿಗೆ ಮೈಯೊಡ್ಡಿ ಬೆಂದರೂ.. ಹೊಸ ಚಿಗುರು ಆ ನಿನ್ನ ನಗು..ನನ್ನ ಪಾಲಿಗೆ ನೀನೇ ಧರಿತ್ರೀ. ಬಿರುಮಳೆಗೆ ತೊಯ್ದರೂ ..ಪ್ರೀತಿ ಹೊಸ ಬೆಳೆಯ ಬೆಳೆಯುತ್ತಿತ್ತು. ನೋವೆಂಬ ಕಳೆಯ ಕಿತ್ತು ನಗುತಾ, ಸಹನೆಯಿಂದ ನನ್ನ ಜೊತೆಗೆ ನೀನೂ ಹೆಜ್ಜೆಹಾಕಿದ್ದೆ ಸ್ವಲ್ಪ ದೂರ..! ಸಹನೆ ನನಗೆಲ್ಲಿದೆ? ಎಂದಾಗ ಕಿವಿಹಿಂಡಿ ತಾಳಿಕೋ..ಎಂದು ಬುದ್ಧಿಹೇಳಿದವಳೂ ನೀನೇ.

ಕಷ್ಟವೇ ಇಷ್ಟವೆಂಬಂತೆ ..ಬದುಕುವ ಕಲೆ..ಹೇಗೆ ಕಲಿತೇ? ನನಗೂ ಕಲಿಸಿಕೊಡು ಗೆಳತೀ..ಎಂದಾಗ ಹುಣ್ಣಿಮೆಯ ಚಂದ್ರನಂತೆ ತುಂಬು ಬೆಳದಿಂಗಳ ನಗು ಚೆಲ್ಲಿದ್ದೆ.
ಆ ನಗುವಿನಲ್ಲಿ ನಿನ್ನ ಆ ಬೆಳ್ಳಿಮೂಗುತಿ ಎಷ್ಟು ಚೆನ್ನಾಗಿ ಹೊಳೆಯುತ್ತಿತ್ತು. ..ಚಂದಿರನಂತೆ, ಬೆಳದಿಂಗಳಂತೆ..ಆ ನಿನ್ನ ನಗುವಿನಂತೆ! ಅದಕ್ಕೆ ಕವಿಯೊಬ್ಬ ಹೇಳಿದ್ದು: "ಬೆಳಗು ಇಬ್ಬನಿಯಲ್ಲಿ ನಗುವ ಹುಲ್ಲ ಹನಿಗಿಂತ ಚೆಂದಕೆ ಮಿನುಗುವುದು ಅವಳ ಮೂಗುತಿ ಅಡಿಯ ನಗು"!!
ನೀನಿದ್ದ ಜೀವನದ ಹಾದಿಯಲ್ಲಿ ನಲಿವಿರದಿದ್ದರೂ..ಗೆಲುವಿತ್ತು. ಪ್ರೀತಿ ಹೃದಯಾನ ಭಾರವಾಗಿಸದೆ, ಹಗುರವಾಗಿಸಿತ್ತು. "ನಿನ್ನ ಜೊತೆ ಹೆಜ್ಜೆಹಾಕಿದವರಲ್ಲಿ ನನ್ನನ್ನು ಒಬ್ಬಳನ್ನಾಗಿಸಿ..ಕನಸುಗಳಲ್ಲಿ ಪುಟ್ಟ ತುಣುಕಕಾಗಿಸಿ..ನಿನ್ನ ಹಸುಳೆಗಣ್ಣಿನ ಪಟಲದ ಮೂಲೆಯಲ್ಲಿ ನನ್ನ ಬಚ್ಚಿಡ್ತೀಯಾ..ನಿನ್ನೆದೆ ಗೂಡಲ್ಲಿ ಪುಟ್ಟ ಮರಿಯಾಗಿ ಗರಿಬಿಚ್ಚಿ ಹಾರಾಡ್ತೀರ್ತೀನಿ.." ಎಂದು ಮುದ್ದಾದ ಅಕ್ಷರಗಳೊಂದಿಗೆ ಬರೆದು ಕಳಿಸಿದ ಪುಟ್ಟ ಪತ್ರ ಈಗಲೂ ನನ್ನನ್ನು ತುಂಬಾ ಡಿಸ್ಟರ್ಬ್ ಮಾಡುತ್ತೆ. ಭಾವನೆಗಳನ್ನು ಕೊಲ್ಲದಿರು...ಎಂದು ಪದೇಪದೇ ಮೆಸೇಜ್ ಮಾಡಿ, ಕಲ್ಲಾದ ಹೃದಯದಲ್ಲಿ ಮತ್ತೆ ಭಾವ-ಜೀವ ತುಂಬಿದವಳೂ ನೀನೇನೇ. ನೀನಿದ್ದಾಗ ಅಮಾವಾಸ್ಯೆಯ ಕರಾಳ ರಾತ್ರೀಯಲ್ಲೂ ಹುಣ್ಣಿಮೆಯ ಚಂದ್ರ ಮುಗ್ಧವಾಗಿ ನಗುತ್ತಿದ್ದ.

ಅದೇ ನೆನಪು..ಕನವರಿಕೆಯಲ್ಲಿ ದೇವರಿಗೆ ಹಿಡಿ ಹಿಡಿ ಶಾಪ ಹಾಕುತ್ತಿದ್ದೇನೆ. ಎಲ್ಲೋ ಓದಿದ ಹುಚ್ಚುಚ್ಚು ಕವನದ ಸಾಲುಗಳು, ಕವಿಯ ಮಾತುಗಳು ಮತ್ತೆ ಮತ್ತೆ ತಲೆ ಕೊರೆಯುತ್ತಿವೆ. "ಉಜ್ವಲ ಮುಖಗಳುಳ್ಳ ಈ ಸುಂದರ ಮಣ್ಣಿನ ಗೊಂಬೆಗಳನ್ನೇಕೆ ನೀನು ತಯಾರಿಸಿದೆ...ಇಷ್ಟೊಂದು ಪ್ರಿಯವಾದ ಭೂಮಿಯನ್ನು ಏಕೆ ಸೃಷ್ಟಿಸಿದೆ...ಜಗತ್ತಿನ ಆಟ ಹೂಡಿ ಅದರಲ್ಲಿ ಯೌವನದ ಜಾತ್ರೆ ಏರ್ಪಡಿಸುವ ಅವಶ್ಯಕತೆ ನಿನಗೇನಿತ್ತು?" ಕವಿಯೊಬ್ಬ ದೇವರಿಗೆ ಸವಾಲು ಹಾಕಿದ ಹಾಗೇ ನನಗೂ ದೇವರಲ್ಲಿ ಕೇಳಬೇಕೆನಿಸುತ್ತದೆ. ಆದರೆ ಆತನೂ ನಿನ್ನಂತ ಕಾಣುವ ಕಣ್ಣಿಗೂ ಕಾಣಲ್ಲ ನೋಡು. ಈ ಯೌವನದ ಯಾನ, ಮನಸ್ಸಿನ ತಾಕಲಾಟ..!ನಾವು ಮಣ್ಣಿನ ಸುಂದರವಾದ ಗೊಂಬೆಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಆದರೆ ಹಾಗಾಗಲಿಲ್ಲ...ಎಲ್ಲರಂತೆ ನನಗೂ ಮನಸ್ಸು, ಪ್ರೀತಿಸುವ ಹೃದಯ ಕೊಟ್ಟ. ಪ್ರೀತೀನ ಪ್ರೀತಿಯಿಂದಲೇ ಗೆಲ್ಲುವ ಕಲೆಯನ್ನೂ ಕಲಿಸಿಕೊಟ್ಟ. ಪ್ರೀತಿಸುವುದನ್ನು, ಮನಸ್ಸನ್ನು, ಬದುಕುವುದನ್ನು, ಮಿಲನದ ಸುಖವನ್ನು ಜೊತೆಗೆ ವಿರಹದ ಬೇಗೆಯನ್ನು ಜೊತೆಜೊತೆಗೆ ತಂದುಕೊಟ್ಟ ಸತ್ಯ ಎಂದು ಕರೆಯುವ ಆ ದೇವರ ಮೇಲೆಯೇ ಅಪನಂಬಿಕೆ ನನಗೆ.

ವಿರಹದಲ್ಲಿ ಮಮ್ಮರಗುವುದು ದೇವರಿಗೂ ಪ್ರೀತಿ ಅನಿಸುತ್ತೆ ನೋಡು...ನನ್ನನ್ನು ನೋಡಿ ಅವನೂ ಸಮಾಧಾನಿಸುವ ಬದಲು ಮೌನವಾಗಿದ್ದಾನೆ. ಪ್ರೀತಿಸಿದ ನಿನಗೂ ಇದನ್ನು ನೋಡಿ ಹೃದಯ ಭಾರವಾಗೋಲ್ವೆ? ನನಗಾಗಿ ಹನಿಬಿಂದು ಉದುರುವುದಿಲ್ಲವೇ..ಅಯ್ಯೋ ಎನಿಸಲ್ವೇ? ಬೇಡ ಬಿಡು...ಕಣ್ಣೀರಿನ ಅನುಕಂಪ ನನಗೇಕೆ? ಬದುಕಿನ ಕತ್ತಲು ಕೋಣೆಯಲ್ಲಿ..ಮಬ್ಬಿಗೆ ಹಣತೆ ಹಚ್ಚಿ..ಅಲ್ಲಿ ನಿನ್ನ ಮುಖ ಕಾಣಲು ಬಯಸುತ್ತೇನೆ..ಆದರೆ ತೈಲವಿಲ್ಲದೆ ಹಣತೆ ಹೇಗೆ ಬೆಳಗೀತು? ಬದಲಾಗಿ ಅದು ಉರಿಯುತ್ತದೆ..ಹೃದಯವನ್ನೇ ದಹಿಸಿ ಬೂದಿ ಮಾಡುತ್ತೆ. ಸಾಗರದ ಅಲೆಗಳಂತೆ ಭೋರ್ಗರೆಯುತ್ತಾ ಬರುವ ಭಾವದಲೆಗಳು..ಈ ನಡುವೆ ಯಾಕೋ ಮನ ತಂಪಾಗಿಸೋದು ಕೆ.ಎಸ್. ಎನ್ ಅವರ ಜೀವ ತುಂಬುವ ಭಾವಗೀತೆಗಳು. ನೆನಪುಗಳನ್ನಷ್ಟೇ ಬಿಚ್ಚಿದೆ..ಮನದ ಹಗುರಕ್ಕೆ..ನಿನಗೆ ಡಿಸ್ಟರ್ಬ್ ಮಾಡೋಕೆ ಅಲ್ಲ....

Friday, September 26, 2008

ಕಣ್ಣಂಚಿನಲ್ಲಿ ರೇಡಿಯೋ ನೆನಪು..

ಹೌದು..ನಮ್ಮನೆಲ್ಲೊಂದು ಫಿಲಿಪ್ ರೇಡಿಯೋ ಇತ್ತು. ಅಂದ್ರೆ ಸುಮಾರು 20 ವರ್ಷಗಳ ಹಿಂದೆ. ಆವಾಗ ನಮ್ಮ ಹಳ್ಳಿಯಲ್ಲಿ ಎಲ್ಲಿಯೂ ಟಿ.ವಿ. ಇರಲಿಲ್ಲ. ಎಲ್ಲರ ಮನೆಯಲ್ಲೂ ರೇಡಿಯೋ. ಬೆಳಿಗೆದ್ದಾಗ ಎಲ್ಲರ ಮನೆಯ ರೇಡಿಯೋ ಗಳಿಂದ ಸುಪ್ರಭಾತ, ವಾರ್ತೆ...! ರೇಡಿಯೋದಲ್ಲಿ ಬಂದ ವಾರ್ತೆ ಎಲ್ಲರ ಮನೆಮನೆಯಲ್ಲೂ ದೊಡ್ಡ ಸುದ್ದಿ. ಪ್ರತಿ ಮನೆಯವರೂ ವಾರ್ತೆಯಲ್ಲಿ ಏನು ಬರುತ್ತದೆ? ಎಂದು ಕಾದು ಕುಳಿತಿರುತ್ತಿದ್ದರು. ಪತ್ರಿಕೆ, ಟಿ.ವಿ.ಗಳ ಗಂಧಗಾಳಿಯೇ ಇಲ್ಲದ ನಮ್ಮ ಪುಟ್ಟ ಹಳ್ಳಿಗೆ ರೇಡಿಯೋ ನೇ ಎಲ್ಲ ಸುದ್ದಿಗಳನ್ನು ಹೇಳುತ್ತಿದ್ದು. ವಿಶೇಷವೆಂದರೆ, ಆ ಸುದ್ದಿಗಳು ಎಲ್ಲರಿಗೂ ಚೆನ್ನಾಗಿ ನೆನಪಿರುತ್ತಿದ್ದವು. ಆಮೇಲೆ ಕೆಲವು ಮಹತ್ವದ ಸುದ್ದಿಗಳು ಗದ್ದೆಗಳಲ್ಲಿ, ತೋಟಗಳಲ್ಲಿ, ಹುಲ್ಲು-ಸೊಪ್ಪು ಕೊಯ್ಯುಲು ಹೋಗುವ ಹೆಂಗಳೆಯರ ಬಾಯಲ್ಲಿ ದೊಡ್ಡ ಚರ್ಚೆಯಾಗುತ್ತಿದ್ದವು. ನಮ್ಮಜ್ಜ ಬೇಗನೆ ಮೂರ್ತೆಗೆ ಹೋದರೆ, ಆಮೇಲೆ ಬಂದು ವಾರ್ತೆಯಲ್ಲಿ ಏನಿತ್ತು? ಎಂದು ಅಜ್ಜಿಯನ್ನು ಕೇಳುವುದು ರೂಢಿ. ಗಡಿಯಾರಗಳೇ ಇಲ್ಲದ ಮನೆಯಲ್ಲಿ ರೇಡಿಯೋ ದಲ್ಲಿ ಗಂಟೆ ಹೇಳುವುದನ್ನೇ ಕಾಯುತ್ತಿದ್ದರು.

ನಮ್ಮನೆಯಲ್ಲಿಯೂ ಒಂದು ಫಿಲಿಪ್ ರೇಡಿಯೋ. ನಮ್ಮ ದೊಡ್ಡಮ್ಮನ ಮಗ ದೊಡ್ಡಣ್ಣ ಅದನ್ನು ಅಜ್ಜಿ ಮನೆಯಲ್ಲಿ ತಂದಿಟ್ಟಿದ್ದ. ಅವನಿಗೆ ಮನೆಗೆ ರೇಡಿಯೋ ತಂದಿದ್ದೇನೆಂಬ ಅಹಂ ಒಂದೆಡೆಯಾದರೆ, ನಮ್ಮನೆಯಲ್ಲಿ ಆ ರೇಡಿಯೋ ವನ್ನು 'ದೊಡ್ಡಣ್ಣನ ರೇಡಿಯೋ' ಅಂತಾನೇ ಕರೆಯುತ್ತಿದ್ದರು. ನಾವು ಮಕ್ಕಳಾರೂ ಮುಟ್ಟಬಾರದೆಂದು ಮಣ್ಣಿನ ಗೋಡೆಗೆ ದೊಡ್ಡ ಕಬ್ಬಿನ ಮೊಳೆ ಬಡಿದು ನೇತುಹಾಕಿದ್ದರು ನಮ್ಮಜ್ಜ..ಮುದ್ದಿನ ಮೊಮ್ಮಗನ ಪ್ರೀತಿಯ ರೇಡಿಯೋವನ್ನು. ನಮಗಂತೂ ದಿನ ಮೇಲೇ ಕತ್ತು ಮಾಡಿ..ರೇಡಿಯೋ ನೋಡಿ ನೋಡಿ ಕತ್ತೇ ನೋವಾಗಿಬಿಡ್ತಿತ್ತು. ರೇಡಿಯೋ ಕೇಳೊಂದ್ರೆ ನಮಗೆ ಏನೋ ಖುಷಿ, ಸಂಭ್ರಮ. ದೊಡ್ಡಣ್ಣ ಬಂದ ತಕ್ಷಣ ರೇಡಿಯೋ ಆನ್ ಮಾಡು ಅಂತಿದ್ದೀವಿ. ಬೆಳಿಗ್ಗಿನ ವಾರ್ತೆ ಕೇಳಕ್ಕೆ, ಮಧ್ಯಾಹ್ನದ ವಾರ್ತೆ, ಚಿತ್ರಗೀತೆಗಳು, ಸಂಜೆ ನಾಲ್ಕು ಗಂಟೆಯಿಂದ ಶುರುವಾಗುವ ಎಲ್ಲಾ ಕಾರ್ಯಕ್ರಮಗಳನ್ನು ನೋಡುತ್ತಿದ್ದೇವು. ಬುಧವಾರ ಬಂತೆಂದರೆ ರೇಡಿಯೋದಲ್ಲಿ ಬರುವ ಯಕ್ಷಗಾನ ಕೇಳಲು, ನಮ್ಮಮ್ಮನ ಜೊತೆ ಗಂಟು-ಮೂಟೆ ಕಟ್ಟಿಕೊಂಡು ಅಜ್ಜಿ ಮನೆಯಲ್ಲಿ ಹಾಜರ್. ಅವತ್ತು ಬೆಳಿಗ್ಗೆಯೇ ಮನೆಯಲ್ಲಿ ಎಲ್ಲರು ;'ಇವತ್ತು ಯಕ್ಷಗಾನ ಕೇಳಬೇಕು.,.ಯಾವ ಯಕ್ಷಗಾನವೋ.." ಅನ್ತಾ ಸಂಜೆಗೆ ಕಾಯುತ್ತಿರುತ್ತಾರೆ.

ವಾರದ ಕೆಲದಿನಗಳಲ್ಲಿ ಮಾತ್ರ ಮಂಗಳೂರು ಆಕಾಶವಾಣಿಯಿಂದ ಬಿತ್ತರವಾಗುತ್ತಿದ್ದ ತುಳು ಕಾರ್ಯಕ್ರಮಗಳನ್ನು ಮಾತ್ರ ಯಾರೂ ಮಿಸ್ ಮಾಡಿಕೊಳ್ಳುವಂತಿಲ್ಲ. ಅದನ್ನು ಕೇಳಿ ಆದ ಮೇಲೆ ಅಜ್ಜಿ ಮನೆಯ ಅಂಗಳದಲ್ಲಿ ಮನೆಯ ಎಲ್ಲರೂ ಕುಳಿತು ಚರ್ಚೆ ಮಾಡುತ್ತಾರೆ. ರಾಮಾಯಣ, ಮಹಾಭಾರತ ಕಥೆಗಳೇನಾದರೂ ಬಂದುವಾ..ಇಡೀ ರಾಮಾಯಣವೇ ಚರ್ಚೆಯ ವಸ್ತು. ನಾವು ಮಕ್ಕಳಂತೂ ಅದನ್ನೆಲ್ಲ ಅಚ್ಚರಿಯಿಂದ ಕೇಳುತ್ತಿದ್ದೇವು. ರಾಮಾಯಣದ ಕಥೆ ಹೇಳಿದ್ರೆ, 'ಅಯ್ಯೋ ರಾಮನಿಗೆ, ಸೀತೆಗೆ ಕಾಡಿನಲ್ಲಿ ಹೆದರಿಕೆಯಾಗುತ್ತಿರಲಿಲ್ಲವೇ? . ಪಾಪ,..ಅಪ್ಪನೇ ಮಗನನ್ನು ಕಾಡಿಗೆ ಕಳಿಸಬಾರದಿತ್ತು ಅಲ್ವಾ? ಕಾಡಿನಲ್ಲಿ ಮಳೆ, ಗುಡುಗು, ಗಾಳಿ ಬಂದಾಗ ಅವರು ಹೇಗೆ ಇರುತ್ತಿದ್ದರು?' ಇಂಥ ಅಸಂಬದ್ಧ ಪ್ರಶ್ನೆಗಳಿಗೆ ನಮ್ಮಮ್ಮ, ಅಜ್ಜಿ, ಮನೆಯವರೆಲ್ಲ ಉತ್ತರ ಹೇಳಿ ಹೇಳಿಯೇ ಸುಸ್ತಾಗುವರು. ವಾರ್ತೆಯಲ್ಲಿ ವೀರಪ್ಪನ್ ಸುದ್ದಿ ಏನಾದ್ರೂ ಹೇಳಿದ್ರೋ...ನಮ್ಮ ದೊಡ್ಡಣ್ಣನ ಪೂರ್ತಿ ವೀರಪ್ಪನ್ ಕಥೆ ಹೇಳಿಬಿಡುತ್ತಿದ್ದ. ಅಬ್ಬಾ! ನಮ್ಮೂರಿಗೂ ವೀರಪ್ಪನ್ ಬಂದ್ರೆ..ಅಂತ ನಾವೂ ಭಯಗೊಳ್ಳುತ್ತಿದ್ದೇವು.

ನಮ್ಮನೆಗೆ ಬಂದಿದ್ದು ಅದೇ ಒಂದು ರೇಡಿಯೋ..ತುಂಬಾ ವರ್ಷಗಳ ಕಾಲ ಬಾಳಿಕೆ ಬಂದಿತ್ತು. ಅದದ ಒಳಗೆ ಜಿರಲೆ ನುಗ್ಗಿದರೆ, ದೊಡ್ಡಣ್ಣ ರಿಪೇರಿಗೆ ಕೂರುವನು. ಅವನು ರಿಪೇರಿ ಮಾಡುವಾಗ ಇಷ್ಟೊಂದು ಮಾತನಾಡುವ ರೇಡಿಯೋ ಒಳಗೆ ಏನಿದೆ ಎನ್ನುವ ಕುತೂಹಲ ನಮಗೆ. ಮಕ್ಕಳೆಲ್ಲ ಸುತ್ತಲು ಕುಳಿತು ಅವನು ಅದನ್ನು ತೆರೆಯುವುದನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದೇವು. ಆದರೆ ಅದರ ಒಳಗಿರುವ ವಯರ್ ಗಳು, ಸಣ್ಣ ಸಣ್ಣ ಸಾಧನಗಳನ್ನು ಕಂಡಾಗಲೆಲ್ಲಾ ನಮಗೆ ನಿರಾಶೆಯಾಗುತ್ತಿತ್ತು. ಅದೇಗಪ್ಪಾ..ಈ ರೇಡಿಯೋದ ಒಳಗೆ ನುಗ್ಗಿ ಜನ ಮಾತಾಡ್ತಾರೆ..ಅನ್ನೋದಯ ನಮ್ಮ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.
ಮಳೆ ಬಂದರೆ ಸಾಕು..ನಮ್ಮ ರೇಡಿಯೋಗೆ ಜ್ಷರ ಬರುತ್ತಿತ್ತು..ಶೀತ ಆಗಿ ನೆಗಡಿಯಿಂದ ಬಳಲುತ್ತಿದ್ದವರಂತೆ ನಮ್ಮ ರೇಡಿಯೋನು ಕೊಯ್ ಕೊಯ್ ಅನ್ತಾ ಇತ್ತು ವಿನಹಃ ಮಾತಾಡುತ್ತಿರಲಿಲ್ಲ. ಆವಾಗ ಅಮ್ಮನವರು, ಮಳೆ ಅಲ್ವಾ? ರೇಡಿಯೋಗೂ ಜ್ವರ! ಅಂದು ಹೇಳುತ್ತಿದ್ದರು. ಆಮೇಲೆ ಏನಾಯ್ತೋ ರೇಡಿಯೋ ಕೆಟ್ಟು ಹೋಯಿತು..ಅದನ್ನು ದೊಡ್ಡಣ್ಣ ರಿಪೇರಿ ಮಾಡಿದರೂ ಅದು ಸರಿಯಾಗಲೇ ಇಲ್ಲ. ಅದಕ್ಕೆ ರಿಪೇರಿ ಅಂಗಡಿಗೆ ಕೊಟ್ಟ. ಆದರೆ ಮತ್ತೆ ರಿಪೇರಿ ಆಗಿ ವಾಪಸ್ ಮನೆಗೆ ಬರಲೇ ಇಲ್ಲ..! ಬೇರೇ ರೇಡಿಯೋನು ಮನೆಗೆ ಬರಲೇ ಇಲ್ಲ. ಬಹುಶಃ ನಮ್ಮನೆಯಲ್ಲೂ ರೇಡಿಯೋದ ನೆನಪಿನ ಹೆಜ್ಜೆಗಳೂ ಮರೆತೇ ಹೋಗಿರುವಂತಿದೆ. ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ!!

ಪುಟ್ಟಿಗೆ ಇಂದು ದಿಲ್ ಖುಷಿ..

ಇಂದು ಬೆಳಿಗ್ಗೆ ಬೇಗ ಆಫೀಸ್ ಗೆ ಬಂದಿದ್ದೆ. ಯಾವಾಗಲೂ ಅಷ್ಟೇ..ಆಫೀಸಿಗೆ ಬೇಗ ಬರುವುದು ನನ್ನ ಚಾಳಿ. ಬೇಗ ಬಂದ್ರೆ ಕೆಲಸ ಬೇಗ ಆಗುತ್ತೆ..ಆಫೀಸಿನಲ್ಲಿ ಏನೂ ಕಿರಿಕಿರಿ ಇರುವುದಿಲ್ಲ. ಅದರಿಲಿ, ಇವತ್ತು ಬಂದವಳೇ ಶಿವಪುರದ ಬಿ.ಸಿ.ರಾವ್ ಗೆ ಕರೆ ಮಾಡಿದ್ದೆ. ಯಾರಿಗೋ ಕರೆ ಮಾಡಿ..ಅಲ್ಲಿ ನನಗೆ ಬೇಕಾದ ಮಾಹಿತಿ ಸಿಗದಾಗ..ಕೊನೆಗೆ ಯಾರೋ ನಂಬರ್ ಕೊಟ್ಟು ಬಿ.ಸಿ.ರಾವ್ ಗೆ ಫೋನ್ ಮಾಡಿದ್ದೆ. ಮಾಹಿತಿನೂ ನೀಡಿದರು.
***
ಮೂರು ವರ್ಷಗಳ ಹಿಂದೆ. ಮಂಗಳೂರಿನ ಯುವವಾಹಿನಿ ಘಟಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪುರಸ್ಕಾರ ಪಡೆದವರಲ್ಲಿ ನಾನೂ ಒಬ್ಬಳಾಗಿದ್ದೆ. ಅಲ್ಲಿಗೆ ಹರಿದಾಸರೂ ಆಗಿದ್ದ ಬಿ.ಸಿ.ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು. ನಮಗೆ ಪುರಸ್ಕಾರ ಎಲ್ಲಾ ನೀಡಿ ಆದ ಮೇಲೆ ರಾವ್ ಅವರ ಉಪನ್ಯಾಸ. ಸುಮಾರು 500 ಜನ ಸೇರಿದ್ದರು. ರಾವ್ ಉಪನ್ಯಾಸ ಅಂದ್ರೆ..ಸೂಜಿ ಬಿದ್ದರೂ ಸದ್ದು ಕೇಳುತ್ತೆ ಎನ್ನುತ್ತಿದ್ದರು ಕೆಲವರು. ನಾನೂ ಅವರ ಹೆಸರು ಕೇಳಿದವಳು..ರಾವ್ ಯಾರೆಂಬುದೇ ಗೊತ್ತಿಲ್ಲ. ಸುಮಾರು ಎರಡೋ-ಮೂರು ಗಂಟೆಯೋ ಉಪನ್ಯಾಸ. ಸ್ವಲ್ಪನೂ ಬೋರ್ ಹಿಡಿಸುವುದಿಲ್ಲ. ಅವರು ಬಾಯಿತೆಗೆದರೆ ಮತ್ತೂ ಕೇಳೋಣ ಅನ್ನುವಷ್ಟು ವಿಚಾರಧಾರೆ. ರಾಮಾಯಣ, ಮಹಾಭಾರತ, ಕುವೆಂಪು, ಶಿಶುನಾಳ ಶರೀಫ, ವಿವೇಕಾನಂದ. ಯೇಸು. ಪೈಗಂಬರ..ಎಲ್ಲರನ್ನು ತಮ್ಮ ಉಪನ್ಯಾಸದಲ್ಲಿ ತಂದುಬಿಡುತ್ತಿದ್ದರು. ಉಪನ್ಯಾಸ..ಮಾತು..ಮಾತು
ನಾನೇನೂ ಎದುರಿನ ಚೇರ್ ನಲ್ಲೇ ಕುಳಿತಿದ್ದೆ. ಮಾತು-ಮಾತಿಗೂ ನನ್ನ ಬಳಿಗೆ ಪ್ರಶ್ನೆಗಳು ಬರುತ್ತಿದ್ದವು. ನನ್ನ ತಲೆಯಲ್ಲಿ ಹೊಳೆದೆದೆಲ್ಲ ಅವರ ಪ್ರಶ್ನೆಗೆ ಉತ್ತರವಾಗುತ್ತಿದ್ದವು. ಸರಿಯೋ/ತಪ್ಪೋ ಅವರ ಭಾಷಣ ನಮಗೇ ಪ್ರೇರಣೆ ಆದಂತೆ ಉತ್ತರ ಹೇಳುತ್ತಿದ್ದೆ. ಅವರಿಗಂತೂ ಖುಷಿಯೋ ಖುಷಿ. ಎಲ್ಲರೆದುರು ನನ್ನನ್ನು 'ಪುಟ್ಟಿ..ಪುಟ್ಟಿ..'ಅಂತ ಕರೆದು ಅವತ್ತಿನ ಸಮಾರಂಭದಲ್ಲಿ ನಾನೇ ನಾಯಕಿಯಾಗಿಬಿಟ್ಟೆ. ಮಧ್ಯದಲ್ಲಿ ಅವರು 'ಗಂಡಸರು ಸೀರೆ ಉಡುತ್ತಿದ್ದರೆ ಏನಾಗುತ್ತಿತ್ತು?' ಅಂತ ಕೇಳಿದ್ರು..ಅಬ್ಬಬ್ಬಾ! ಗೋಳೋ ನಗು..ನೆರೆದವರೆಲ್ಲರೂ ನಗುತ್ತಿದ್ದರು. ನನ್ನನ್ನು ಕೇಳಿದ್ರು..ಎಲ್ಲೋ ಓದಿದ ನೆನಪೋ..ಬೀಚಿ ಹೇಳಿದ್ದೋ..ನೆನಪಾಯಿತು. 'ಗಂಡಸರು ಸೀರೆ ಉಡುತ್ತಿದ್ದರೆ..ದಾರಿ ಬದಿಯಲ್ಲಿ ಮೂತ್ರ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿತ್ತು'!! ಅದನ್ನು ಬಾಯ್ಬಿಟ್ಟು ಹೇಳಿಬಿಟ್ಟೆ..ಸಭೆಯ ನಗು ಇನ್ನೂ ಹೆಚ್ಚಾಗಿತ್ತು..ಸ್ವಲ್ಪ ತರಲೆ ತಲೆ..ಮುಜುಗರ ಇಲ್ಲದೆ ಹೇಳುವಂತೆ ಮಾಡಿತ್ತು.
ರಾವ್ ಸರ್ ಅಂತೂ, ನಮ್ಮ ಪುಟ್ಟಿ ಉತ್ತರ ಹೇಳಿದ್ಳು..ಅಂತ ಖುಷಿಪಟ್ಟರು. ಸಂಜೆ ಉಪನ್ಯಾಸ ಮುಗಿದ ಮೇಲೂ..ಒಂದಿಷ್ಟು ವಿಚಾರಗಳನ್ನು ನನ್ನ ತಲೆಗೆ ತುರುಕಿ, ಬೆನ್ನು ತಟ್ಟಿದರು. ಅಂದು ಅವರ ದೂರವಾಣಿ ಸಂಖ್ಯೆ, ವಿಳಾಸ ಎಲ್ಲವನ್ನೂ ತೆಗೆದಿರಿಸಿಕೊಂಡಿದ್ದೆ. ಆದರೆ ಅಂದೇ ಬಸ್ಸಲ್ಲಿ ಕಳಕೊಂಡಿದ್ದೆ. ಮತ್ತೆ ಅವರನ್ನು ಭೇಟಿ ಆಗಲೇ ಇಲ್ಲ..
***
ಇಂದು ಮಾತನಾಡಬೇಕಾದರೆ, ನಾನು ಚಿತ್ರಾಕರ್ಕೇರಾ ಅಂಥ ಹೇಳಿಲ್ಲ..ಚಿತ್ರಾ ಬೆಂಗಳೂರಿಂದ ಮಾತನಾಡುತ್ತಿದ್ದೇನೆ ಅಂದೆ. ನಂಗೆ ಬೇಕಾದ ಎಲ್ಲಾ ಮಾಹಿತಿ ನೀಡಿದ ಮೇಲೆ ರಾವ್ ಅವರು, "ನಿನ್ನ ಹೆಸರು ಚಿತ್ರನಾ..ನಂಗೆ ಮಂಗಳೂರಿನಲ್ಲಿ ಭೇಟಿಯಾದ ನಿನ್ನ ಹೆಸರಿನ ಹುಡುಗಿಯ ನೆನಪಾಯತ್ತಮ್ಮ..ಅವಳು ತುಂಬಾ ಚೂಟಿ ಹುಡುಗಿ..ನಾನು ಕೇಳಿದ ಪ್ರಶ್ನೆಗೆ ತರಲೆ ಉತ್ತರಗಳನ್ನೂ ನೀಡಿದ್ದಳು. ಹೀಗೇ ಯುವವಾಹಿನಿ ಪ್ರತಿಭಾ ಪುರಸ್ಕಾರದಲ್ಲಿ ನಡೆದ ಕತೆಯನ್ನೆಲ್ಲ ಹೇಳಿಕೊಂಡರು. ಅಷ್ಟೇ ಅಲ್ಲ, ಅವಳನ್ನು ಪುಟ್ಟಿ ಅಂತ ಕರೆದಿದ್ದೆ ಅಂದರು.."! ಎಲ್ಲ ಕೇಳಿಸಿಕೊಂಡು ಆಮೇಲೆ ಹೇಳಿದೆ; ಸರ್..ಅದೇ ಚಿತ್ರಾಕರ್ಕೇರಾ ನಾನು...!! ನಂಗೂ ಖುಷಿ..ಅವರಿಗೂ ಖುಷಿ..ಪುಟ್ಟೀ ನಿನ್ ನಂಬರು ಕೊಡು ಅಂತ ಕೇಳಿಕೊಂಡು. ಒಂದಷ್ಟು ಹೊತ್ತು..ಹಿತನುಡಿಗಳನ್ನು ಹೇಳಿ, ಈ ಕಡೆ ಬಂದಾಗ ಮನೆಗೆ ಬಾಮ್ಮಾ..ಅನ್ನಲು ಮರೆಯಲಿಲ್ಲ.
ನಾನಂತೂ ಇವತ್ತು ಫುಲ್ ಖುಷಿ. ಮೂರು ವರ್ಷದ ಹಿಂದಿನ ಆ ಖುಷಿ ಖುಷಿ ದಿನಗಳ ಮೆಲುಕಿನಲ್ಲೇ ಇದ್ದೇನೆ.. ಮತ್ತೊ,ಮ್ಮೆ ಬಿ.ಸಿ.ರಾವ್ ಅವರ ಉಪನ್ಯಾಸ ಕೇಳಬೇಕು ಎಂದು ಮನಸ್ಸು ಹೇಳುತ್ತಿದೆ.

ಕಥೆ ಹೇಳುವ ಅಮ್ಮ..

ದಶಕಗಳ ಹಿಂದೆ ತಿರುಗಿ ಕಣ್ಣಾಯಿಸಿ. ಮನೆಯಲ್ಲಿ ಅಜ್ಜಿ ಇದ್ದರೆ ಕಥೆ ಹೇಳುತ್ತಿದ್ದರು. ಒಂದು ಕಾಲದಲ್ಲಿ ಅಜ್ಹಿ ಕತೆ ತುಂಬಾ ಫೇಮಸ್ಸು. ಅಷ್ಟೇ ಅಲ್ಲ, ಅಜ್ಜಿ ಕಥೆ ಹೇಳುವುದನ್ನು ಕೇಳಲೂ ಅಷ್ಟೇ ಹುಮ್ಮಸ್ಸು. ಆದರೆ ನಮ್ಮನೆಯಲ್ಲಿ ಅಮ್ಮ ಕತೆ ಹೇಳುತ್ತಿದ್ದ ನೆನಪು. ನಮ್ಮಮ್ಮನಿಗೆ ಮದುವೆ ಆದ ನಂತರ ಬೇರೆ ಮನೆ ಮಾಡಿಕೊಡಲಾಗಿತ್ತು. ಹಾಗಾಗಿ ದಿನಾ ಕತೆ ಹೇಳಕೆ ಅಜ್ಜಿ ನಮ್ಮ ಜೊತೆ ಇರುತ್ತಿರಲಿಲ್ಲ. ಅಮ್ಮನೇ ಕತೆ ಹೇಳುತ್ತಿದ್ದರು.

ಕಿಟ್ಟ-ಕಿಟ್ಟಿ ಕತೆ, ರಾಮ-ರಾವಣ ಕತೆ, ಪಾಂಡವರ ಕತೆ, ಮೊಲ-ಆಮೆಯ ಕತೆ, ಪುಣ್ಯಕೋಟಿಯ ಕತೆ. ಕೋಟಿ-ಚೆನ್ನಯ ಕಥೆ, ಗಣಪತಿ ಹುಟ್ಟಿದ ಕತೆ..ಹೀಗೆ ಎಷ್ಟೋ ಕತೆಗಳನ್ನು ಅಮ್ಮ ರಾತ್ರಿ ಹೊತ್ತು ನನ್ನ-ತಮ್ಮನ ತಲೆಗೆ ತುಂಬುತ್ತಿದ್ದರು.ಎಲ್ಲವೂ ಅಮ್ಮನಿಗೆ ನೀರು ಕುಡಿದಷ್ಟು ಸುಲಭ. ರಾತ್ರಿ ಹೊತ್ತು ನಾವು ನಿದ್ದೆ ಮಾಡಬೇಕಾದರೆ ಅಮ್ಮ ಕತೆ ಹೇಳಲೇಬೇಕು..ಅಮ್ಮ ಕತೆ ಹೇಳಕ್ಕೆ ಶುರು ಮಾಡಿದರೆ ಅದು ಎಕ್ಸ್ ಪ್ರೆಸ್ ಬಸ್ಸು ತರ..ನಿಲ್ಲಲು ತುಂಬಾ ಹೊತ್ತು ಬೇಕು.
ನಾನು , ತಮ್ಮ ಕಿವಿ-ಕಣ್ಣುಗಳನ್ನು ನೆಟ್ಟಗೆ ಮಾಡಿ ಅಮ್ಮನ ಬಾಯಿ ನೋಡುತ್ತಾ ಕುಳಿತರೆ, ಅಲ್ಲೇ ಬಾಕಿ. ಕಥೆ ಮುಗಿದ ಮೇಲೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಅಮ್ಮನಿಗೆ ತಲೆನೋವು ಬರಿಸುತ್ತಿದ್ದೇವು. ಆದರೆ ಅಮ್ಮನ ತಾಳ್ಮೆ ತಪ್ಪುತ್ತಿರಲಿಲ್ಲ..ತಾಳ್ಮೆಯಿಂದ ಕಥೆ ಹೇಳುತ್ತಿದ್ದರು. ನಾವು ಹಾಗೇ ಕೇಳುತ್ತಾ ನಿದ್ದೆ ಹೋಗುತ್ತಿದ್ದೇವು.

ಮರುದಿನ ರಾತ್ರಿ ಮತ್ತೆ ಕಥೆಯ ಆರಂಭ. ಆವಾಗ ಅಮ್ಮ ಹೇಳಿದ ಕಥೆಯನ್ನು ನಾವು ಮತ್ತೆ ಹೇಳುವುದು. ಆಗ ನನಗೂ-ತಮ್ಮಂಗೂ ಪೆಟ್ಟೇ ಪೆಟ್ಟು. ಆದರೂ ಅವನದೇ ಮೇಲುಗೈ..ಅವನೇ ಮೊದಲು ಕತೆ ಹೇಳುವುದು..ಆಮೇಲೆ ನನ್ನ ಸರದಿ. ಎಷ್ಟೋ ಬಾರಿ ನಮಗೆ ಕಥೆ ಅರ್ಥವಾಗದಿದ್ದರೆ ಅಮ್ಮ ಕಥಾಚಿತ್ರಗಳಿರುವ ಪುಸ್ತಕಗಳನ್ನು ತರುತ್ತಿದ್ದರು. ರಾಮಾಯಣ ಕಥೆ ಹೇಳಬೇಕಾದರೆ ಅಮ್ಮ ಕಥಾ ಪುಸ್ತಕಗಳನ್ನು ತಂದು ವಿವರಿಸುತ್ತಿದ್ದರು. ಅದರಲ್ಲಿ ರಾಮನ ವನವಾಸದಿಂದ ಹಿಡಿದು, ಸೀತಾ ಅಪಹರಣ, ರಾವಣನ ವಧೆ, ಹನುಮಂತ ಕಥೆ ಎಲ್ಲವನ್ನೂ ಘಟನಾವಳಿಗೆ ಸಂಬಂಧಪಟ್ಟಂತೆ ಚಿತ್ರಗಳಲ್ಲಿ ತೋರಿಸಲಾಗುತ್ತಿತ್ತು. ಆವಾಗ ಕಥೆ ಬೇಗನೆ ಅರ್ಥವಾಗುತ್ತಿತ್ತು. ಏಕೆಂದರೆ ಅಮ್ಮನಿಗೆ ಓದಲು ಬರುತ್ತಿರಲಿಲ್ಲ!

ನಮಗೆ ಅಮ್ಮ ಕಥೆ ಹೇಳುವುದು ಎಷ್ಟು ಅಭ್ಯಾಸವಾಗಿಬಿಟ್ಟಿತೆಂದರೆ ಅಮ್ಮ ಕಥೆ ಹೇಳದೆ ನಾವು ಮಲಗುತ್ತಿರಲೇ ಇಲ್ಲ. ಕಥೆಯಷ್ಟೇ ಅಲ್ಲ, ಅಮ್ಮ ಭಜನೆ, ಪಾಡ್ದನ, ಸಂದಿಗಳನ್ನೂ ಹೇಳಿಕೊಡುತ್ತಿದ್ದರು. ಅಮ್ಮ ಹೇಳುತ್ತಿದ್ದ "ಸೀತಾಪತಿ..ದಾಸರತೆ..ದಶರಥ ನಂದನ ದಯಾನಿಧಿ.." ಭಜನೆ ಈಗಲೂ ನೆನಪಿದೆ. ತುಂಬಾ ಚೆನ್ನಾಗಿ ಅಮ್ಮ ಹಾಡುತ್ತಿದುದನ್ನು ಕೇಳಿ, ನಮ್ಮ ಶಾಲೆಯಲ್ಲಿ ಶನಿವಾರ ನಡೆಯುವ ಭಜನೆಯಲ್ಲಿ ನಾನು ಹಾಡುತ್ತಿದ್ದೆ.

ಆದರೆ ಈಗ..
ಕೂತಲ್ಲಿ ಕೂರಲಾಗದ, ನಿಂತಲ್ಲಿ ನಿಲ್ಲಲಾಗದ ಕಥೆಹೇಳುವ ಅಜ್ಜಿ ಇದ್ದಾರೆಯೇ? ಗಡಿಬಿಡಿ ಕೆಲಸಗಳ ನಡುವೆ ಅಮ್ಮಂದಿರು ಕಥೆ ಹೇಳುತ್ತಾರೆಯೇ? ಹಲ್ಲು ಬರದ ಪುಟ್ಟ ಮಗುನೂ ಕಂಪ್ಯೂಟರ್ ಮೌಸ್ ಹಿಡಿದರೆ, ನಮ್ಮ ಮಕ್ಕಳು ಟಾಟಾ, ಅಂಬಾನಿ, ನಾರಾಯಣಮೂರ್ತಿ ಆಗ್ತಾರೆ ಅನೋ ಕನಸು ಹೆತ್ತವರದ್ದು. ಬೆಳಿಗೆದ್ದು ಬಾಟಲ್ ಹಾಲು, ಒಂದಿಷ್ಟು ಹರಕಲು ಬಿಸ್ಕೀಟು, ತಿಂಡಿ ಜೊತೆ ಬೇಬಿ ಸಿಟ್ಟಿಂಗ್ ನಲ್ಲಿ ಮಗುವನ್ನು ಹಾಕಿಬಿಟ್ರೆ ಮುಗೀತು..ಅಮ್ಮಂದಿರ ಜವಾಬ್ದಾರಿ. ಮಗು ಅಲ್ಲೇ ಆಟವಾಡುತ್ತಾ, ಹೇಳಿದ್ದನ್ನೇ ಹೇಳಿಕೊಡುವ ಟೀಚರ್ ಮುಖ ನೋಡುತ್ತಾ, ಸಂಜೆ ತನಕ ಆಟಿಕೆಗಳ ಜೊತೆ ಆಟವಾಡುತ್ತಾ..ಸಂಜೆ ಅಮ್ಮ ಆಫೀಸಿನಿಂದ ಬರುವ ಹೊತ್ತಿಗೆ ಮತ್ತೆ ಮನೆಗೆ ಬರುತ್ತೆ ಮಗು.
ಸಂಜೆ ಮನೆಗೆ ಬಂದ ಅಮ್ಮನಿಗೆ ರಾಶಿ ರಾಶಿ ಕೆಲಸಗಳು, ಅಷ್ಟೊತ್ತಿಗೆ ಗಂಡ ಆಫೀಸಿನಿಂದ ಬರ್ತಾನೆ..ಅವನಿಗೆ ಕುಳಿತಲ್ಲಿಗೇ ಎಲ್ಲ ರೆಡಿ ಮಾಡ್ಬೇಕು..ಆಮೇಲೆ ಊಟ ಮಾಡ್ಬೇಕು. ಊಟ ಆದ ಬಳಿಕ ಗಂಡ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುತ್ತಾ ಇರ್ತಾನೆ...ಹೆಂಡತಿನೂ ಅಲ್ಲೇ ಕುಳಿತುಬಿಟ್ಟರೆ ಮಾತು..ಮಾತು..ಮಗುವಿಗೆ ನಿದ್ದೆ ಬರುತ್ತದೆ..ಆಕಳಿಸುತ್ತೆ..ಅಲ್ಲೇ ಉಚ್ಚೆ ಒಯ್ಯುತ್ತೆ..ಕೊನೆಗೆ ನಿದ್ದೆ ಹೋಗುತ್ತೆ. ನಂತರ ತೊಟ್ಟಿಲಿಗೆ ಹಾಕಿದ್ರೆ ಮುಗೀತು..ಮಗು ತೆಪ್ಪಗೆ ನಿದ್ದೆ ಮಾಡುತ್ತೆ.
ಮರುದಿನ ಬೆಳಗಾಗುತ್ತದೆ..
ಅದೇ ಬೇಬಿಸಿಟ್ಟಿಂಗು, ಅದೇ ಆಟಿಕೆ, ಅದೇ ಹಾಲಿನ ಬಾಟಲು, ಅದೇ ಪ್ರಾಕ್ಟೀಸು...ಅದೇ ಡ್ಯಾನ್ಸು.....!!

Thursday, September 25, 2008

ಮಹಿಳೆಯರ ವಿಶೇಷ!!

ಇದು ಬಿಎಂಟಿಸಿ ವತಿಯಿಂದ ಮಹಿಳೆಯರಿಗಾಗಿ ಇರುವ ವಿಶೇಷ ಬಸ್ಸು! ಯಾರನ್ನು ಬೈಯಬೇಕು..ಚಾಲಕರನ್ನೋ? ನಿರ್ವಾಹಕರನ್ನೋ? ಬಸ್ಸಿಗೆ ಹತ್ತಿ ಕುಳಿತು ಮಹಿಳೆಯರಿಗೇ ಸೀಟೇ ಸಿಗದಂತೆ ಮಾಡಿದ ಪುರುಷರನ್ನೋ..ಅಥವಾ ಇದನ್ನೆಲ್ಲ ನೋಡಿಕೊಂಡು ಇರುವ ಬಿಎಂಟಿಸಿ ಮೇಲ್ವಿಚಾರಕರನ್ನೋ....ನೀವೇ ಹೇಳಿ!...
-ಚಿತ್ರಾ
(ಫಾರ್ವರ್ಡ್ ಫೋಟೋ)

Saturday, September 20, 2008

ಕೊನೆಗೂ ಅನಾಥರಾದ ಮಕ್ಕಳು...!!

ಅದೊಂದು ಪುಟ್ಟ ಸಂಸಾರ. ಇಬ್ಬರು ಮಕ್ಕಳು. ಆ ಮಕ್ಕಳಿಗೆ ತಂದೆ-ತಾಯಿ ಎರಡೂ ಅಮ್ಮನೇ. ಹೆಣ್ಣುಮಕ್ಕಳಿಗೆ ತಿಳಿವು ಬರುವ ಹೊತ್ತಿಗೆ ತಂದೆಯಾದವ ಎತ್ತಲೋ ಹೋಗಿದ್ದ! ತಂದೆಯ ಪ್ರೀತಿ, ಅಮ್ಮನ ಪ್ರೀತಿ ಎಲ್ಲವನ್ನೂ ಆ 'ಅಮ್ಮ ದೇವರು' ಧಾರೆಯೆರೆದಳು. ಬದುಕಿಗೊಂದು ರೂಪ ನೀಡಿದ್ದಳು. ಗಂಡ ಬಿಟ್ಟು ಹೋದ ಏಕೈಕ ಕಾರಣಕ್ಕಾಗಿ ಆ ಅಮ್ಮ ಇಡೀ ಕುಟುಂಬದಿಂದಲೇ ದೂರವಿರಬೇಕಾಯಿತು. ನೋವಿನಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ, ಆ ಅಮ್ಮನ ಮುಖದಲ್ಲಿ ಮಕ್ಕಳಿಗಾಗಿ ನಗು ತುಂಬಿತ್ತು. ಪ್ರೀತಿ ತುಂಬಿತ್ತು. ಮಕ್ಕಳ ಭವಿಷ್ಯದ ಕುರಿತು ಕನಸಿನ ಮಹಾಗೋಪುರವನ್ನೇ ಕಟ್ಟಿದ್ದಳು. ಬಡತನ ಬದುಕನ್ನೇ ಕಸಿದುಕೊಳ್ಳುತ್ತೇ ಎಂದಾಗ..ಭಿಕ್ಷೆಗೂ ಹಿಂಜರಿಯಲಿಲ್ಲ ಅಮ್ಮ! ಕಾಲಚಕ್ರದೊಂದಿಗೆ ಬಾಳರಥ ದೂಡುತ್ತಿದ್ದಳು.

ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಏಕೈಕ ಕಾರಣದಿಂದ ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದಳು. ತಾಯಿಮನೆಯೆಂಬ ಆಶ್ರಯ ಇದ್ದರೂ, ದಿಕ್ಕಿಲ್ಲದ ಮಕ್ಕಳಿಗಿರುವ ಅನಾಥಶ್ರಮದ ಮಕ್ಕಳಾದುವು ಆ ಇಬ್ಬರು ಹೆಣ್ಣು ಮಕ್ಕಳು. ಅದೇ ಅವರ ಮನೆಯಾಯಿತು. ಇತ್ತ ಮನೆಯಲ್ಲಿ ಅಮ್ಮನೊಬ್ಬಳೇ. ಗಂಡನಿದ್ದೂ ಇಲ್ಲದಾದ, ಮಕ್ಕಳೂ ಕಣ್ಣೆದುರಿಗಿಲ್ಲ. ಆ ಪುಟ್ಟ ಮಕ್ಕಳನ್ನು ಒಂಬತ್ತು ತಿಂಗಳು ಹೊತ್ತು ಸಲಹಿದ ಅಮ್ಮನಿಗೆ ಮಕ್ಕಳ ನೆನಪಿನಲ್ಲಿ ಬದುಕಲಾಗಲಿಲ್ಲ. ಮನೆಯೆಲ್ಲ ಬಿಟ್ಟು ಮಕ್ಕಳಿರುವ ಆಶ್ರಮದ ಹತ್ತಿರವೇ ಯಾವುದೋ ಒಂದು ಸಂಸ್ಥೆಯಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಳು. ಮಕ್ಕಳು ಹೈಸ್ಕೂಲು ಹಂತಕ್ಕೆ ತಲುಪಿದ್ದರು.

ಅದೊಂದು ದಿನ ಮಕ್ಕಳಲ್ಲಿ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಗೆ ವಾಪಾಸಾದಳು. ಅಂದೇ ರಾತ್ರಿ ಮನೆಯ ಹಿಂಬದಿಯಲ್ಲಿರುವ ಗೇರುಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು. ಹೋಗಿ ಬರುತ್ತೇನೆಂದು ಹೇಳಿದ ಅಮ್ಮ ಮತ್ತೆಂದೂ ಬರದ ಲೋಕಕ್ಕೆ ತೆರಳಿದಳು. ತಮ್ಮ ಬದುಕಿನ ಉಸಿರಾಗಿರುವ ಅಮ್ಮನೂ ತಬ್ಬಲಿಗಳನ್ನಾಗಿ ಮಾಡಿ ದೂರಾದಳು. ಕೊನೆಗೂ ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದು ಅನಾಥಾಲಯ!!

ಆಫೀಸ್ ನಲ್ಲಿ ಕುಳಿತಿದ್ದೆ. ನಾನು ಹೊರಡುವ ಸಮಯವೂ ಮೀರಿತ್ತು. ಮನೆಗೆ ಹೋಗಕ್ಕೆ ಮನಸ್ಸಾಗಲಿಲ್ಲ. ಕೆಲಸ ಮಾಡಕ್ಕೂ ಮನಸ್ಸಿಲ್ಲ. ಯಾವುದೋ ಒಂದು ಹಳೆಯ ಗೀತೆ ಕೇಳುತ್ತಿದ್ದೆ. ಮನಸ್ಸು ಯಾಕೋ ಐದು ವರ್ಷಗಳ ಹಿಂದೆ ನಮ್ಮೂರಲ್ಲಿ ನಡೆದ ಘಟನೆಯತ್ತ ಹೊರಳಿತ್ತು. ಯಾಕೋ ನನ್ನ ಕಣ್ಣೆದುರು ಓಡುತ್ತಿದ್ದ ಆ ಮಕ್ಕಳು, ಅಮ್ಮ ನೆನಪಾದರು. ಇತ್ತೀಚೆಗೆ ಊರಿಗೆ ಹೋದಾಗಲೂ ಆ ಮಕ್ಕಳನ್ನು ಕೇಳಿದೆ. ಯಾವುದೋ ಎನ್ ಜಿಒ ಅವರಿಗೆ ಆಶ್ರಯ ನೀಡಿ, ಕೆಲಸ ಕೊಡಿಸಿದೆ ಎಂದರು ಅಮ್ಮ. ಹೀಗಾಗಬಾರದಿತ್ತು..ಹೀಗಾಗಬಾರದು...!!

Wednesday, September 17, 2008

ನನ್ನವರು ಯಾರೂ ಇಲ್ಲ..ರೋಧಿಸುತ್ತಿತ್ತು ಆ ಜೀವ..!!

ಪ್ರಾಣ, ಬದುಕನ್ನು ಅಂಗೈಯಲ್ಲಿಯಲ್ಲಿಟ್ಟುಕೊಂಡು ಸಾಕಿದ, ಬಿಸಿಲನ್ನೇ ಬೆಳದಿಂಗಳಾಗಿಸಿದ ಅಮ್ಮ ಆತನಿಂದ ದೂರವಾಗಿ ಅದೆಷ್ಟೋ ದಶಕಗಳು ಸರಿದಿರಬಹುದು. ಆಗತಾನೇ ಹುಟ್ಟಿದ ಪುಟ್ಟ ಹಸುಗೂಸಿನ ಮುಖ ನೋಡಿ ಅಮ್ಮ ಹೆರಿಗೆ ನೋವನ್ನೂ ಮರೆತಿರಬಹುದು..ಆ ಮಗುವಿನ ನೋವಲ್ಲಿ ಆ ಅಮ್ಮ ಎಂಬ ದೇವರು ಅದೆಷ್ಟೋ ನೋವನ್ನು ಮರೆತಿರಬಹುದು. ಮಗ ದೊಡ್ಡವನಾದಾಗಿನ ಖುಷಿ.. ಹೀಗೇ ಏನೇನೋ ಯೋಚನೆಗಳು ನನ್ನ ತಲೆಯಲ್ಲಿ. ಆದರೆ!! ಆಸ್ಪತ್ರೆಯ ನಾರುವ ಶವಾಗಾರದಲ್ಲಿ ಮಲಗಿದ್ದ ಆ ಕೃಶಕಾಯಕ್ಕೆ ಇದ್ಯಾವುದೂ ನೆನಪಿದ್ದಂತೆ ಕಾಣಿಸುತ್ತಿರಲಿಲ್ಲ. ನನ್ನ ಮನಸ್ಸು 'ಬದುಕು ಇಷ್ಟೇನಾ..?" ಎಂದು ರೋಧಿಸುತ್ತಿತ್ತು.

ಕನಸುಗಳೇ ಬತ್ತಿ, ಗುಳಿಬಿದ್ದ ಕಂಗಳು, ಬಿಳಿಕೂದಲು, ಕೃಶಕಾಯ, ಶಕ್ತಿಹೀನ ಕೈ-ಕಾಲುಗಳು..ಆತನಿಗೆ ವಯಸ್ಸು 80 ಮೀರಿರಬಹುದು ಎಂಬುದನ್ನು ಸೂಚಿಸುತ್ತಿದ್ದವು. ಅದೇ ಜೀವನದಲ್ಲಿ ಮೊದಲ ಬಾರಿಗೆ ಶವಾಗಾರಕ್ಕೆ ಹೊಕ್ಕು ಶವಗಳನ್ನು ನೋಡಿದ್ದು ನನ್ನ ಕನಸು ತುಂಬಿರುವ ಕಣ್ಣುಗಳು. ಹೃದಯದಲ್ಲಿ ಒಂದಿಷ್ಟು ಭಾವಗಳು, ಜಗವನ್ನರಿತ ಮನ, ಯೋಚನೆಯ ಲಹರಿ ಹತ್ತಿರುವ ನನ್ನ ಮಿದುಳು..ಅಲ್ಲಿ ನಿಶ್ಯಬ್ಧವಾಗಿ ಮಲಗಿರುವ ಕೃಶಕಾಯದತ್ತ ದೃಷ್ಟಿ ನೆಟ್ಟಿದ್ದವು. ಆತನಿಗೆ ಕಣ್ಣುಗಳಿದ್ದವು, ಆದರೆ ಕನಸುಗಳಿದ್ದಂತೆ ಕಂಡುಬರುತ್ತಿರಲಿಲ್ಲ. ಹೃದಯ ಇತ್ತೇನೋ..ಲಬ್ ಡಬ್ ಬಡಿತ ಕೇಳಿಬರುತ್ತಿರಲಿಲ್ಲ. ನಾನು ನಗುವನ್ನು ಬಲ್ಲವಳಾಗಿದ್ದೆ..ಆದರೆ ಆತನ ತುಟಿ ನಗುತ್ತಿರಲಿಲ್ಲ..ಪ್ರಪಂಚವನ್ನೇ ಮರೆತು ಮಲಗಿತ್ತು ಆ ದೇಹ..ಯಾರಿಗೂ ಬೇಡವಾದವನಂತೆ!

ನನ್ನ ಹೃದಯ ಚಿರ್ರನೆ ಚೀರಿತ್ತು..ಮತ್ತೆ ಮತ್ತೆ ಬದುಕು ಇಷ್ಟೇನಾ...ಮನ ರೋಧಿಸುತ್ತಿತ್ತು. ಮನುಷ್ಯನ ಸಂಬಂಧಗಳು, ಭಾವನೆಗಳು, ಕನಸು-ಕಲ್ಪನೆಗಳಿಗೆ ಮೂರ್ತರೂಪವನ್ನಿಟ್ಟಂತೆ ಕಾಣುತ್ತಿದ್ದ ಆತ ಅಂದು ಇವೆಲ್ಲವುಗಳಿಂದ ದೂರವಾಗಿ, ಯಾರಿಗೂ ಬೇಡವಾದ ನಿಷ್ಪ್ರಯೋಜಕ ವ್ಯಕ್ತಿಯಂತೆ ಶವಾಗರದಲ್ಲಿ ಮಲಗಿದ್ದ. ಪಕ್ಕದಲ್ಲೇ ಆತನ ಸಂಬಂಧಿಕರ ಒಂದು ಗುಂಪು..ಕೆಲವರ ಕಣ್ಣುಗಳು ಅಳುತ್ತಿದ್ದವು..ಇನ್ನು ಕೆಲವರ ಹೃದಯ ರೋಧಿಸುತ್ತಿತ್ತು. ನನ್ನ ಕಣ್ಣು-ಕಿವಿಗಳು ಅವರನ್ನೇ ನೋಡುತ್ತಿದ್ದವು. ಆತನ ಆಸ್ತಿ ನಾಲ್ಕು ಎಕರೆ..ಐದು ಜನರು ಹೆಣ್ಣುಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ದೊಡ್ಡ ಮಗಳಿಗೆ 50 ವರ್ಷ ದಾಟಿರಬಹುದು..ಸತ್ತು ಮಲಗಿದ್ದ ವ್ಯಕ್ತಿಯ ಆಸ್ತಿ, ಹಂಚಿಕೆಯ ಮಾತುಗಳು ಶವಾಗಾರದ ಪಕ್ಕದಲ್ಲಿದ್ದ ಪಾಳುಕಟ್ಟೆಯ ಮೇಲೆ ಚರ್ಚೆಯಾಗುತ್ತಿದ್ದವು...ಇವೆಲ್ಲವೂ ನನ್ನ ಕಿವಿಗೆ ಬೀಳುತ್ತಲೇ ಇದ್ದವು....ಮನಸ್ಸು ಏನೇನೋ ಅಂದುಕೊಂಡಿತ್ತು. ಭೂತ-ವರ್ತಮಾನ-ಭವಿಷ್ಯದ ಮೂರು ಕಾಲಗಳನ್ನು ತೂಗಿನೋಡಿತ್ತು ನನ್ನ ಎಳೆಮನಸ್ಸು. ಅಷ್ಟೊತ್ತಿಗೆ ಕಿರಿಯ ಮಗಳು ಬಂದಳು..ಬರುವಾಗ ತಡವಾಗಿತ್ತು. ಅದೇನು ಪಾಲೋ ಅಲ್ಲಿದ್ದವರು ಮೊದಲೇ ಮಾತಾಡಿಕೊಂಡಿದ್ದರು. ಹಾಗಾಗಿ ಕಿರಿಮಗಳ ಸಿಟ್ಟು ನೆತ್ತಿಗೇರಿತ್ತು..ಆಮೇಲೆ ಏನೇನೋ ಸಮಾಧಾನದ ಮಾತುಗಳು..ಆದರೆ ಕೃಶಕಾಯ ಇದೆಲ್ಲವನ್ನೂ ಕೇಳಿಸಿಕೊಳ್ಳುವನೋ ಎಂದು ಅತ್ತ ತಿರುಗಿದೆ..ಆದರೆ ಆತನ ಕಣ್ಣುರೆಪ್ಪೆಗಳೂ ಮಿಸುಕಾಡುತ್ತಿರಲಿಲ್ಲ...ತಣ್ಣಗೆ ಮಲಗಿದ್ದ...ಯಾರಿಗೂ ಬೇಡದವನಂತೆ! ಆತ ಹುಟ್ಟಿದಾಗ..ಗಂಡುಮಗುವೆಂದು ಆರತಿ ಬೆಳಗಿದವರೂ ಅಲ್ಲಿ ಯಾರೂ ಇದ್ದಂತೆ ಕಂಡುಬರಲಿಲ್ಲ..ನನ್ನ ಕನಸುತುಂಬಿರುವ ಕಣ್ಣುಗಳಿಗೆ!! ನನ್ನವರು ಯಾರೂ ಇಲ್ಲ...ರೋಧಿಸುತ್ತಿತ್ತು ಆ ಜೀವ...!

Saturday, September 13, 2008

ಮಿಸ್ಡ್ ಕಾಲ್ ಕಿರಿಕಿರಿ!

ನಿಂಗೆ ತಾಳ್ಮೆಯಿಲ್ಲ.ಒಮ್ಮೊಮ್ಮೆ ಮುಖಕ್ಕೆ ರಾಚಿದ ಹಾಗೇ ಮಾತಾಡ್ತೀಯಾ..ಭವಿಷ್ಯದಲ್ಲಿ ಹಿಂಗಾದ್ರೆ ಕಷ್ಟ..ಏನ್ ಮಾತಾಡ್ತಿ ಅನ್ನೋದು ನಿಂಗೇ ಗೊತ್ತಿಲ್ಲ. ಮುಂದೆ ಮದುವೆಯಾದ ಗಂಡ ಹೀಗೆ ಸಿಡ ಸಿಡ ಅಂದ್ರೆ ಸಹಿಸ್ತಾನಾ? ಇಂಥ ಪಾಠಗಳು ನಂಗೆ ತೀರ ಸಾಮಾನ್ಯ. ಮನೆಯಲ್ಲಿ, ಆಫೀಸಿನಲ್ಲಿ ನಂಗೆ ತಾಳ್ಮೆಯ ಪಾಠ ಹೇಳಿದವ್ರು ಅದೆಷ್ಟೋ ಮಂದಿ. ಹೌದು! ಕೆಲವೊಮ್ಮೆ ತಾಳ್ಮೆ ನನ್ ಕೈಯಲ್ಲಿ ಇರಲ್ಲ..ಏನೇನೋ ಅಂತೀನಿ..ಎದುರಿಗಿದ್ದವರು ಯಾರೆನ್ನುವುದನ್ನೂ ನೋಡದೆ! ಆದ್ರೆ..ಮತ್ತೆ ಕ್ಷಮೆ ಕೇಳ್ತೀನಿ. ನಿನ್ನೆ ಇಂಥದ್ದೇ ಒಂದು ಆವಾಂತರ ನಡೆಯಿತು.

ನಿನ್ನೆ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ. ಬೆಳಿಗ್ಗೆ ಹೊಟ್ಟೆಗೇನೂ ತಿಂದಿರಲಿಲ್ಲ. ಆಫೀಸಿಗೆ ಬಂದು ತಿನ್ನೋಣ ಅಂದ್ರೆ ಮೀಟಿಂಗ್ ಇತ್ತು..ಮೀಟಿಂಗು ಮುಗಿದಾಗ ಮಧ್ಯಾಹ್ನ ಆಗಿತ್ತು. ಅಗ ಪತ್ರಿಕಾಗೋಷ್ಟೀಗೆ ಹೋಗಬೇಕಾಯಿತು. ಹೊರಟೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಾಗಿರಲಿ ಟ್ರಾಫಿಕ್ ಜಾಮ್ ಕಟ್ಟಿಟ್ಟ ಬುತ್ತಿ. ಆಟೋದಲ್ಲಿ ಹೋದ್ರೂ ಸಮಯ ಮೀರಿತ್ತು. ಆದರೆ ಬೆಳಿಗ್ಗೆ ಮೀಟಿಂಗ್ ನಲ್ಲಿ ಕೂತಲ್ಲಿಂದ ಒಂದೇ ಸಮನೆ ಮಿಸ್ಡ್ ಕಾಲ್! ವಾಪಸ್ ಕಾಲ್ ಮಾಡೋಣಂದ್ರೆ ಟೈಮಿಲ್ಲ. ಬಂತು..ಒಂದೆರಡಲ್ಲ..50ಕ್ಕಿಂತಲೂ ಹೆಚ್ಚು ಮಿಸ್ಡ್ ಕಾಲ್. ಪ್ರೆಸ್ ಮೀಟ್ ಮುಗೀತು..ಊಟ ಮಾಡಿದೆ..ಆಫೀಸಿಗೆ ಬಂದೆ. ಆಗಾಗ ಮಿಸ್ಡ್ ಕಾಲ್ ದು ಕಿರಿಕಿರಿ. ಇವನಿಗೆ ಒಂದು ಗತಿ ಕಾಣಿಸ್ಬೇಕು ಅಂದುಕೊಂಡು ಆಫಿಸಿಗೆ ಬಂದು ಫೋನು ಮಾಡಿದ್ರೆ ಆ ಮನುಷ್ಯ ಫೋನು ತೆಗೀತಾ ಇಲ್ಲ. ನಂಗೆ ಸಹಿಸಿಕೊಳ್ಳಕೇ ಆಗಿಲ್ಲ..ಏನೇನೋ ಬೈಬೇಕಂದ್ರೆ ಆತ ಫೋನು ತೆಗೀತಿಲ್ಲ..ಎಂಥ ಮಾಡೋದು? ಅದೇ ಸಿಟ್ಟಲ್ಲಿ ಮನೆಗೆ ಹೋಗಿ ತಮ್ಮನ ಮೊಬೈಲಿನಿಂದ ಕರೆ ಮಾಡಿದ್ದೆ. ಪುಣ್ಯಾತ್ಮ ಫೋನು ಎತ್ತಿದ "ಚಿತ್ರಾನಾ...?" ಅಂದಾಗ "ಹೌದು, ನಿಂಗೆ ಅರ್ಜೆಂಟಿದ್ರೆ ಫೋನ್ ಮಾಡ್ಬೇಕಿತ್ತು. ಮಿಸ್ಡ್ ಕಾಲ್ ಏಕೆ ಕೊಡ್ತೀಯಾ?" ಅಂತೇಳಿ ಏಕವಚನದಲ್ಲಿ ಎರ್ರಾಬಿರ್ರೀ ಬೈದೆ. ಆವಾಗ ಫೋನ್ ಕಟ್! ತಡೆದುಕೊಳ್ಳದೆ "ಬೈದು ಮೆಸೇಜ್ ಕಳಿಸಿದೆ..". ಆವಾಗ ಆ ಕಡೆಯಿಂದ ಮೆಸೇಜ್ "ನಾನು ಬಾವ..." ಅಂತೇಳಿ ಹೆಸರು ಬರೆದಿತ್ತು. ನಂಗೆ ಶಾಕ್! ಬಾವ..ಅವರಿಗೆ ಬೈಯೋದು ಬಿಡಿ..ಅವರ ಜೊತೆ ಸರಿಯಾಗಿ ಮಾತೇ ಆಡದವಳು ನಾನು. ಮತ್ತೆ ಫೊನಾಯಿಸಿದೆ,,ಕ್ಷಮೆ ಕೇಳೋಣವೆಂದು..ಆದರೆ ಅವರು ಫೋನೇ ಎತ್ತಿಲ್ಲ.. ಇನ್ನೂ ಬಾವ ಫೋನೇ ಎತ್ತಿಲ್ಲ..ಬಹುಶಃ ನನ್ ಥರನೇ ಅವರಿಗೂ ತಾಳ್ಮೆ ಕೆಟ್ಟಿರಬೇಕು.

ಆದ್ರೆ..ನನ್ ಒಂದೇ ಒಂದು ಮಾತು..
ಯಾರೇ ಆಗಿರಲಿ..ಮಿಸ್ ಕಾಲ್ಡ್ ಕೊಡಬೇಕು..ಅದ್ಕೂ ಒಂದು ಮಿತಿಯಿದೆ, ರೀತಿಯಿದೆ. ಯಾರೋ ಯಾವುದೇ ಟೆನ್ಯ್ಷನ್ ನಲ್ಲಿರ್ತಾರೆ..ಅವರಿಗೆ ಪದೇ ಪದೇ ಮಿಸ್ಡ್ ಕಾಲ್ ಕೊಟ್ಟಾಗ ಕಿರಿಕಿರಿ ಎನಿಸುವುದು ಸಹಜ. ದಯವಿಟ್ಟು..ಒಬ್ಬರಿಗೆ ಕಿರಿಕಿರಿ ಎನಿಸುವಷ್ಟು ಮಿಸ್ಡ್ ಕಾಲ್ ನ್ನೂ ಯಾರಿಗೂ ಯಾರೂ ಕೊಡಬಾರದು. ನನ್ ತಮ್ಮನೇ ಆಗಿರಲಿ..ಈ ರೀತಿ ಕಿರಿಕಿರಿ ಮಾಡಿದರೆ ಸರಿ ಬೈದು ಫೋನ್ ಇಡ್ತೀನಿ..ನಂಗಿದು ಇಷ್ಟ ಆಗಲ್ಲ..ಅಷ್ಟೂ ಅರ್ಜೆಂಟಾಗಿದ್ರೆ ಫೋನ್ ಮಾಡಿ ಮಾತಾಡಬೇಕು..ಅದು ಬಿಟ್ಟು ತೊಂದರೆ ಕೊಡಬಾರದು.

Thursday, September 4, 2008

ಬೇಕೇ ಬೇಕಾ? 'ಮದ್ಯ' ರಾತ್ರಿ..?

'ಇದೇನ ಸಭ್ಯತೆ? ಇದೇನ ಸಂಸ್ಕೃತಿ?
ಇದೇನ ಇಂದು ಸತ್ಯತೆ? ಇದೇನ ನಮ್ಮ ಜಾಗೃತಿ?'
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ.

ರಾಜ್‌ಕುಮಾರ್, ಕಲ್ಪನಾ ಅಭಿನಯದ 'ಮಣ್ಣಿನ ಮಗ' ಚಿತ್ರಕ್ಕಾಗಿ 'ಗೀತಪ್ರಿಯ' ಬರೆದ ಹಾಡು ಅದೇಕೋ ತಲೆಯಲ್ಲಿ ಗುನುಗುಟ್ಟುತ್ತಿದೆ. ಮೊನ್ನೆ ಮೊನ್ನೆ ಗಿರೀಶ್ ಕಾರ್ನಾಡ್ ಬಿದ್ದಪ್ಪ ಜೊತೆ ಬೀದಿಗಿಳಿದು, ಬೆಂಗಳೂರು ಇಮೇಜ್ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹರಡಿಸುವ ಉದ್ದೇಶದಿಂದ ಬೇಕೇ ಬೇಕು..ಬೆಂಗಳೂರು ಜನರು ರಾತ್ರಿಯಡೀ ಸಂಗೀತ ಪಾರ್ಟಿಗಳಲ್ಲಿ ಮೋಜು-ಮಸ್ತಿ ಮಾಡಲು ಅವಕಾಶ ಕೊಡಿ ಎಂದು ಪ್ರತಿಭಟನೆ ಮಾಡಿದ್ದಾರೆ. ಆದಾದ ಬಳಿಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬೀದಿಗಿಳಿದಿಲ್ಲ..ನೇರವಾಗಿ ಮುಖ್ಯಮಂತ್ರಿಗಳಿಗೇ ಪತ್ರ ಬರೆದಿದ್ದಾರಂತೆ. ಮುಂಬೈನಲ್ಲಿ ಮಧ್ಯರಾತ್ರಿ 1 ಗಂಟೆ ಮತ್ತು ದೆಹಲಿಯಲ್ಲಿ 12 ಗಂಟೆ ತನಕ ವಿನೋದಕ್ಕೆ ಅವಕಾಶ ಮಾಡಿಕೊಡುತ್ತಾರೆ. ನಾವೇನು ಕಡಿಮೆ? ನಮಗೂ ಅವಕಾಶ ಕೊಡಿ..ಮನುಷ್ಯ ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು ಎನ್ನುವ ಅರ್ಥದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರಂತೆ. ಇದೀಗ ಕಿಂಗ್ ಫಿಶರ್ ದೊರೆ ವಿಜಯ್ ಮಲ್ಯ ಅವರು ಪತ್ರ ಬರೆದು ಸಮಯ ವ್ಯರ್ಥ ಮಾಡುವ ಬದಲು ಪೊಲೀಸರ ಕ್ರ,ಮದ ವಿರುದ್ಧ ಧರಣೆ ಕೂರುತ್ತೇನೆ ಎಂದಿದ್ದಾರೆ. 'ಬೆಂಗಳೂರು ಕಾಸ್ಮೋಪಾಲಿಟನ್ ನಗರ, ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ನೈಟ್ ಕ್ಲಬ್ ಮತ್ತು ಡಿಸ್ಕೋಥೆಕ್ ಗಳ ತಡರಾತ್ರಿ ಕಾರ್ಯನಿರ್ವಹಿಸಲು ತಡೆ ಹೇರಿರುವ ಪೊಲೀಸರ ಕ್ರಮದ ವಿರುದ್ಧ ಧರಣಿ ಕೂರುತ್ತೇನೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಬಿಟ್ಟಿದ್ದಾರೆ. ಇನ್ನೂ ಧರಣಿಗೆ ದಿನಾಂಕ ನಿಗದಿಯಾಗಿಲ್ಲ. ಏನ್ ಸ್ವಾಮಿ? ಈ 'ಮದ್ಯ' ರಾತ್ರಿಯ ವಿಷಯವನ್ನಿಟ್ಟುಕೊಂಡು ಎಷ್ಟು ಜನರು ಪ್ರತಿಭಟನೆ ಮಾಡ್ತಾರೆ? ಮನೆಯಲ್ಲಿ ತೆಪ್ಪಗೆ ಕುಳಿತವರೂ ಕೂಡ ಎದ್ದು ಬಂದು ಬೇಕೇ ಬೇಕು 'ಮದ್ಯ' ರಾತ್ರಿ ಎನ್ನುತ್ತಿದ್ದಾರೆ. ಏನ್ ಕಾಲ ಬಂತು ಸ್ವಾಮಿ? ಇದಕ್ಕೆಲ್ಲ ಕಾರಣ ಬೆಂಗಳೂರು ನಂ. 1. ಯಾವುದರಲ್ಲಿ..? ಐಟಿ-ಬಿಟಿಯಲ್ಲೇ? ಆಗಿರಬಹುದು ಜೊತೆಗೆ ಭ್ರಷ್ಟಾಚಾರ, ಭಯೋತ್ಪಾದನೆ, ಅತ್ಯಾಚಾರ. ಕೊಲೆ, ದರೋಡೆ, ಅಪಘಾತ, ಅಪರಾಧ, ಆತ್ಮಹತ್ಯೆ..ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಐಟಿ-ಬಿಟಿ ಬಿಟ್ಟರೆ ಈ ಪಟ್ಟಿಯಲ್ಲಿರುವ ಯಾವುದನ್ನೂ ಯಾವ ಮಹಾನುಭಾವರು ಪ್ರಸ್ತಾಪಿಸುವುದಿಲ್ಲ.

ಇತ್ತೀಚೆಗೆ ನವದೆಹಲಿಯ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ನಡೆಸಿದ್ದ ಸಮೀಕ್ಷೆಯ ಪ್ರಕಾರ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಗಳ 'ಲಂಚವತಾರ'ಗಳ ಜೊತೆ ಕರ್ನಾಟಕವೂ ನಂ. 1 ಆಗಿದೆ. 2005ರಲ್ಲಿ ಭ್ರಷ್ಟಾಚಾರದಲ್ಲಿ 20 ರಾಷ್ಟ್ರಗಳ ಪೈಕಿ ಕರ್ನಾಟಕ 17ನೇ ಸ್ಥಾನ ಪಡೆದರೆ, ಈಗ ಅತೀ ಭ್ರಷ್ಟ ರಾಷ್ಟ್ರಗಳ ಪೈಕಿ ಕನ್ನಡ ನಾಡೂ ಒಂದು. ಮಧ್ಯರಾತ್ರಿ ವರೆಗೂ ಮೋಜು-ಮಸ್ತಿ ಬೇಕೆಂದು ಧರಣಿ ಕೂರುವವರು 'ಅಯ್ಯೋ ನಮ್ ಕರ್ನಾಟಕ ಕೆಟ್ಟು ಹೋಯ್ತಪ್ಪ..ಭ್ರಷ್ಟಾಚಾರ, ಭಯೋತ್ಪಾದನೆಯನ್ನು ತೊಲಗಿಸಬೇಕು. ಇದಕ್ಕಾಗಿ ಎಂ.ಜಿ. ರೋಡ್ ನ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಅಮರಣಾಂತ ಉಪವಾಸ ಕೂರುತ್ತೇನೆ' ಎಂದವರು ಯಾರಾದ್ರೂ ಇದ್ದರೆಯೇ? ಇದ್ದರೆ ಹೇಳಿ. ಏನಪ್ಪಾ ಈ ಹುಡ್ಗಿ..ಸಂಸ್ಕೃತಿ, ಸಭ್ಯತೆ, ಸತ್ಯ, ಜಾಗೃತಿ ಬಗ್ಗೆ ಮಾತನಾಡುತ್ತಿದ್ದಾಳೆ ಅನಿಸ್ತಾ..?! ಹೌದು! ಬೆಂಗಳೂರು ಬೆಂಗಳೂರಾಗಿ ಉಳಿದಿಲ್ಲ..ಆದರೆ ಇಂಥ ವಿಚಾರಕ್ಕೆಲ್ಲಾ ಧರಣಿ ಕೂರುವ "ಧಣಿ'ಗಳನ್ನು ಕಂಡಾಗ, ಒಳ್ಳೆಯ ವಿಚಾರಕ್ಕೆ ಬೀದಿಗೆ ಬರಲಿ ಎನ್ನುವುದು ತಪ್ಪಲ್ಲವಲ್ಲ. ಇರ್ಲಿ ಬೆಂಗಳೂರಿನಲ್ಲಿ ಹಗಲು-ರಾತ್ರಿ ಎರಡೂ ಒಂದೇ..ಮಧ್ಯರಾತ್ರಿ ವರೆಗೂ ಸಂಗೀತ ಪಾರ್ಟಿಗಳಿಗೆ ಅವಕಾಶ ಕೊಡಲಿ..ಆದ್ರೆ ಈ ಸಂಗೀತದೊಂದಿಗೆ ಬಾಟಲಿಗಳೂ ಸರಬರಾಜಾಗುತ್ತವೆ...ಮಾದಕ ವಸ್ತುಗಳು ಮಾದಕತೆಗೆ ಇನ್ನಷ್ಟು ಹುರುಪು ತುಂಬುತ್ತವೆ. ತಡರಾತ್ರಿ ವರೆಗೂ ಸಂಗೀತ ಕೇಳಿದವರು ಅಡ್ಡಾದಿಡ್ಡಿಯಾಗಿ ವಾಯಹನ ಚಲಾಯಿಸಿ..ಯಾವುದೋ ಕರೆಂಟು ಕಂಬಕ್ಕೋ ಅಥವಾ ಇನ್ಯಾವುದೋ ವಾಹನಕ್ಕೋ ಢಿಕ್ಕಿ ಹೊಡಿತಾರೇ..ಇವರನ್ನು ನೋಡಿಕೊಳ್ಳೋರು ಯಾರು ಸ್ವಾಮಿ? ಪಾಪ ಪೊಲೀಸರಿಗೂ ನಿದ್ದೆ ಯಿಲ್ಲ..ಇಂಥದ್ದೆಕ್ಕೆಲ್ಲ ಅವಕಾಶ ನೀಡಬಾರದು ಎನ್ನುವುದೇ ಸಭ್ಯ ನಾಗರಿಕರ ಮತ್ತು ಪೊಲೀಸರ ಇಚ್ಚೆಯಷ್ಟೇ, ರಾತ್ರಿ ಪಬ್. ಬಾರ್, ಡಿಸ್ಕೋಥೆಕ್ ಗಳು ಕಾರ್ಯನಿರ್ವಹಿಸಿದರೆ ನಮ್ಮ ಇಮೇಜು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುವುದಲ್ಲ. ಯಾವುದೇ ಕಟ್ಟುನಿಟ್ಟಿನ ಕಾನೂನು ಇಲ್ಲದ ನಮ್ಮ ರಾಜ್ಯದ ಮಾನ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆಯಷ್ಟೇ.

ಗುರುವಿನ ಮಾತು ನೆನಪಲ್ಲ, ನಿತ್ಯ ಬದುಕು!

ಶಿಕ್ಷಕರ ದಿನಾಚರಣೆ ಮತ್ತೆ ಬಂದಿದೆ. ನಾಳೆ ಬೆಳಿಗೆದ್ದು ನನ್ನ ಪ್ರೀತಿಯ ಗುರುಗಳಿಗೆ ಶುಭಾಶಯ ಹೇಳ್ಬೇಕು. ಏನೋ ಒಂಥರಾ ಸಂಭ್ರಮ. ಶಿಕ್ಷಕರ ದಿನಾಚರಣೆ ಬಂದ ತಕ್ಷಣ ನನಗೆ ನೆನಪಾಗುವುದು ನಾನು ಓದಿದ ಪ್ರೀತಿಯ ಹೈಸ್ಕೂಲು ಕಾಣಿಯೂರು. ಯಾವುದೋ ಹಾಸ್ಟೇಲಿಗೆ ಹೋಗಬೇಕಾದವಳು ಕಾಣಿಯೂರು ಹೈಸ್ಕೂಲಿಗೆ ಸೇರಿದ್ದೆ. ನನಗೆ ಚಿಕ್ಕವಯಸ್ಸಿನಿಂದಲೂ ತುಂಬಾ ಭಯ. ಶಾಲೆಗೆ ಹೋದರೂ ಅಮ್ಮ ಜೊತೆಗೆ ಬರಬೇಕು..ಸಂಜೆ ಕರೆದುಕೊಂಡು ಬರಲೂ ಅಮ್ಮ ಬೇಕು. ಎಷ್ಟು ಅಂದ್ರೆ ಕ್ಲಾಸಲ್ಲಿ ಕುಳಿತುಕೊಂಡು ಅಮ್ಮನಿಗೆ ಯಾರಾದ್ರೂ ಏನಾದ್ರೂ ಮಾಡಿಯಾರು ಎಂಬ ಭಯ. ಆವಾಗನೇ ನಮ್ಮಪ್ಪ ನಮ್ಮ ಬಿಟ್ಟು ಹೋಗಿದ್ರು. ಅಮ್ಮ-ಅಪ್ಪ ಎರಡೂ ಅಮ್ಮನೇ. ಆವಾಗ ಏಳನೇ ತರಗತಿ ಮುಗಿಸಿದ ತಕ್ಷಣ ಅಮ್ಮ ನನ್ನನ್ನು ಪುತ್ತೂರಿನ ಹಾಸ್ಟೇಲೊಂದಕ್ಕೆ ಸೇರಿಸಿದ್ದರು. ಆದರೆ ಫೀಸು ಕೊಟ್ಟು, ಹಾಸ್ಟೇಲಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತೆಗೆದುಕೊಟ್ಟು, ಬೇಕಾದ ಯುನಿಫಾರ್ಮ ಡ್ರೆಸ್ಸು ಕೂಡ ತೆಗೆದುಕೊಟ್ಟಿದ್ದರು. ತುಂಬಾ ಖರ್ಚು ಮಾಡಿದ್ದರು ಅಮ್ಮ. ಆದರೆ ಶಾಲೆ ಆರಂಭದ ದಿನ ಹಾಸ್ಟೇಲಿಗೆ ಹೋಗು ಅಂದ್ರೆ, ನಾನು ಒಪ್ಪಲೇ ಇಲ್ಲ. ಅಳುವುದು ಬಿಟ್ಟರೆ ಬೇರೇನಿಲ್ಲ ಉತ್ತರ. ಒಟ್ಟಾರೆ ಅಮ್ಮ ಜೊತೆಗಿರಬ್ಬೇಕು..ನನ್ನ ಕಣ್ಣೀರು ನೋಡಿ ಅಮ್ಮ 'ಇಷ್ಟೆಲ್ಲಾ ಖರ್ಚು ಮಾಡಿದೆ..ನಿಲ್ಲಮ್ಮಾ..ಒಂದು ವರ್ಷ ನಿಲ್ಲು' ಅಂದ್ರೂ ನಾ ಒಪ್ಪಿಲ್ಲ. ಮತ್ತೇನು? ಲಗೇಜಿನೊಂದಿಗೆ ಮತ್ತೆ ಅಮ್ಮನ ಜೊತೆ ವಾಪಾಸಾದೆ. ಅದು ನಡು ಮಧ್ಯಾಹ್ನ. ಆವಾಗ ಕಾಣಿಯೂರಿನಲ್ಲಿ ಊಟಕ್ಕೆಂದು ಬಸ್ಸಿಂದ ಇಳಿದೆವು. ಕಾಣಿಯೂರಿನ ಪರಿಮಳ ಹೊಟೇಲ್ ನಲ್ಲಿ ಊಟಕ್ಕೆ ಕುಳಿತಿದ್ದೇವು. ನನ್ನ ಮುಖವೆಲ್ಲಾ ಅತ್ತು ಅತ್ತು ಚೀಣೀಕಾಯಿ ಥರ ಆಗಿತ್ತು. ಮತ್ತೂ ಅಳುತ್ತಾನೇ ಇತ್ತು. ಅಮ್ಮನ ಮನಸೇ ದುಃಖದ ಕಡಲಾಗಿದ್ದರೂ ತೋರಿಸಿಕೊಳ್ಳಲಿಲ್ಲ ಅಮ್ಮ. ಹಾಗೇ ಊಟ ಮಾಡುತ್ತಿರುವಾಗ ನಮ್ಮೂರ ಸೊಸೈಟಿಯ ಅಂಕಲ್ ಒಬ್ರು ಬಂದ್ರು 'ಏನಾಯ್ತು..ಏಕೆ ಮಗಳು ಅಳ್ತಾ ಇದ್ದಾಳೆ?'ಅಂದಾಗ ಅಮ್ಮ ಎಲ್ಲಾ ಕಥೆ ಹೇಳಿದ್ದರು. ಆವಾಗ ಏಳನೇ ತರಗತಿಯಲ್ಲಿ ಪುತ್ತೂರು ತಾಲ್ಲೂಕಿನಲ್ಲಿ ಡಿಸ್ಟಿಂಕ್ಷನ್ ಪಡೆದ ಕೆಲವರಲ್ಲಿ ನಾನೂ ಒಬ್ಬಳು. ಅಷ್ಟೇ ಅಲ್ಲ ಕಾಣಿಯೂರು ಹೈಸ್ಕೂಲಿಗೆ ಆವರೆಗೆ ಅಡ್ಮಿಷನ್ ಪಡೆದ ಯಾರಿಗೂ ನನ್ನಷ್ಟು ಅಂಕ ಇರಲಿಲ್ಲ. ಸೊಸೈಟಿ ಅಂಕಲ್ ಹೇಳಿದ್ರು, ಈಗಾಗಲೇ ಸೀಟುಗಳು ಭರ್ತಿಯಾಗಿವೆ..ಕೇಳಿನೋಡೋಣ ..ಒಳ್ಳೆ ಅಂಕಗಳಿವೆ..ಅಂತೇಳಿ ಅಲ್ಲಿಂದಲೇ ಲಗೇಜು ಸಹಿತ ಕಾಣಿಯೂರು ಹೈಸ್ಕೂಲಿಗೆ ಕರೆದುಕೊಂಡು ಹೋದರು. ಅಲ್ಲಿಯ ಪ್ರಾಂಶುಪಾಲರಿಗಂತೂ ಖುಷಿಯೇ ಖುಷಿಯೇ. ನನಗೆ ಫೀಜುನಲ್ಲೂ ತುಂಬಾ ಕಡಿಮೆ ಮಾಡಿ, ಅಡ್ಮಿಷನ್ ಮಾಡಿಸಿಕೊಂಡರು. ಅಷ್ಟೇ ಅಲ್ಲ, ನನ್ನನ್ನ ಹಾಡು ಹೇಳಕೆ ಹೆಳಿದ್ರು 'ಜೋಗದ ಸಿರಿ ಬೆಳಕಿನಲ್ಲಿ..' ಊದಿಕೊಂಡ ಮುಖ, ಒಂದೆಡೆ ಹಾಡು..ಅಮ್ಮನಿಗೆ ತುಂಬಾ ಖುಷಿಯಾಯಿತು.

ಅಲ್ಲಿಂದ ನನ್ನ ಹೈಸ್ಕೂಲು ಜೀವನ. ಅಲ್ಲಿ ನಾನೇ ಹೀರೋಯಿನ್. ಕ್ಲಾಸ್ ಟೀಚರಿಂದ ಹಿಡಿದು ಪ್ರಾಂಶುಪಾಲರವರೆಗೆ ನನಗೆ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಕೊಡುತ್ತಿದ್ದರು. ಮೂರು ವರ್ಷವೂ ಕ್ಲಾಸಿನಲ್ಲಿ ಅಂಕಗಳಿಸುವುದರಾಗಲಿ, ಪ್ರಬಂಧ, ಭಾಷಣ, ಹಾಡೋದು ಎಲ್ಲದ್ರಲ್ಲೂ ನಾನು ಮುಂಚೂಣಿಯಲ್ಲಿದ್ದೆ. ಅಮ್ಮನಿಗಂತೂ ಆವಾಗ ಹಬ್ಬ. ಮತ್ತೆ ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆ ಅಮ್ಮನ ಆರೋಗ್ಯವೂ ಕೆಟ್ಟಿತ್ತು. ತಮ್ಮನದೂ ಅದೇ ಪರಿಸ್ಥಿತಿ. ಮುಂದೆ ಪಿಯುಸಿ ಓದಬೇಕು..ಏನ್ ಮಾಡೋದು? ಎಂದಾಗ ನನ್ನ ನೆರವಿಗೆ ಬಂದಿದ್ದು ಇಡೀ ಕಾಣಿಯೂರು ಹೈಸ್ಲೂಲಿನ ಅಧ್ಯಾಪಕರುಗಳು. ಪ್ರತಿಯೊಬ್ಬ ಅಧ್ಯಾಪಕರೂ 'ಚಿತ್ರಾ ನೀನು ಇನ್ನೂ ಓದ್ಬೇಕಮ್ಮಾ..ನಾವಿದ್ದೇವೆ ಜೊತೆಗೆ' ಅಂತೇಳಿ ಸಹಾಯಧನದ ರೂಪದಲ್ಲಿ ನನಗೆ ಫೀಜಿನ ಹಣ ಕೊಟ್ಟಿದ್ದರು. ಬದುಕಿನ ಪ್ರತಿಯೊಂದು ಕ್ಷಣದಲ್ಲೂ ನನ್ನ ಗುರುವೃಂದವನ್ನು ನಿತ್ಯ ನೆನೆಸಿಕೊಳ್ಳುತ್ತೇನೆ..ಶಿಕ್ಷಕರ ದಿನದಂದು ಅವರಿಗೆ ಪುಟ್ಟದಾಗಿ ಶುಭಾಶಯ ಹೇಳುತ್ತೇನೆ..ಅದೇ ಅವರಿಗೆ ಖುಷಿ. ಚಿತ್ರಾ ಹೇಗಿದ್ಯಮ್ಮಾ..ಚೆನ್ನಾಗಿರು..ಬೆಂಗಳೂರು ಜೋಪಾನ..ಬಂದಾಗ ಕಾಲೇಜಿಗೆ ಬಾ ಅನ್ತಾರೆ..ನನ್ನ ಗುರುಗಳು. ಎಷ್ಟೊಂದು ಖುಷಿಯಾಗುತ್ತೆ ಅವರಿಗೆ. ನಮ್ಮ ಬದುಕಿಗೆ ಬೇಕಾದನ್ನೆಲ್ಲಾ ಧಾರೆ ಎರೆಯುವ ಗುರುಗಳಿಗೆ ವರ್ಷಕ್ಕೊಮ್ಮೆ ಶುಭಾಶಯ ಅಂದರೂ, ಅವರು ಹೇಳಿರುವ ಮಾತುಗಳು, ಹಿತನುಡಿಗಳು ಎಲ್ಲವೂ ನಿತ್ಯದ ನೆನಪಲ್ಲ, ಬದುಕು. ಮತ್ತೆ ಉಜಿರೆಗೆ ಹೋದೆ..ಅಲ್ಲೂ ನಂಗೇನೂ ಕಡಿಮೆಯಾಗಿಲ್ಲ..ಪ್ರೀತಿಯ ಮೇಡಂ ಶುಭದಾಸ್, ಸಂಪತ್ ಸರ್, ನಾಗಣ್ಣ ಸರ್, ಭಾಸ್ಕರ ಹೆಗಡೆ ಸರ್..ಎಲ್ಲರೂ ನನಗೆ ಕ್ಷಣ ಕ್ಷಣಕ್ಕೂ ಸ್ಫೂರ್ತಿಯಾಗಿದ್ದರು. ಮನೆಯಲ್ಲಿ ಅಮ್ಮನೇ ನನಗೆ ಗುರು, ಆದರೆ ಶಾಲೆ, ಕಾಲೇಜಿಗೆ ಬಂದಾಗ ನನಗೆ ಗುರುಗಳೇ ಅಮ್ಮ ನೂ ಆಗಿದ್ದರು.ಬದುಕನ್ನೇ ಕಲಿಸಿಕೊಟ್ಟ ನನ್ನ ಪ್ರೀತಿಯ ಗುರುಗಳೇ...ಶಿಕ್ಷಕರ ದಿನದ ಶುಭಾಶಯಗಳು.

Wednesday, September 3, 2008

ವೇದಿಕೆ ಮೇಲೆ ನಿಂತು ಬಡತನ ತೊಲಗಲಿ ಅಂದ್ರೆ..!

'ವಿಜ್ಞಾನ ಮತ್ತು ತಂತ್ರಜ್ಞಾನ ಬಡತನ ನೀಗಿಸಲಿ' ಎಂದು ವಿಜ್ಷಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಗಳಿಸಿದ ಮಹಾನ್ ವ್ಯಕ್ತಿಯೊಬ್ಬರು ಬೆಂಗಳೂರಿನ ಪ್ರತಿಷ್ಠಿತ ಹೊಟೇಲೊಂದರ ಡಯಾಸ್ ಮೇಲೆ ನಿಂತು ಮಾತನಾಡಿದಾಗ ನಗು ಉಕ್ಕಿ ಬಂತು. ಹೌದು! ತುಂಬಾ ಜನ ಹೀಗೇ ಮಾತಾಡ್ತಾರೆ..ನಿಂಗೆ ನಗು ಉಕ್ಕಿ ಬಂದಿಲ್ವಾ ಚಿತ್ರಾ? ಅಂತ ನೀವು ಕೇಳಬಹುದು..ಆದ್ರೆ ಹೀಗೆ ಹೇಳಿದ್ದು ವಿದೇಶದಿಂದ ಬಂದ ವ್ಯಕ್ತಿ ಅಲ್ಲ. ಕನ್ನಡಿಗ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದ, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಇವರು ಮುಕ್ಕಾಲು ಗಂಟೆ ಭಾಷಣ ಮಾಡಿದ್ದು ತೀರ ಹಾಸ್ಯಾಸ್ಪದ ಅನಿಸಿತ್ತು ನಂಗೆ. ಹೌದು! ಬೆಂಗಳೂರು ತಂತ್ರಜ್ಞಾನದಲ್ಲಿ ನಂ.1 ಸ್ಥಾನದತ್ತ ಸಾಗಿದೆ. ಇದಕ್ಕೆ ಕಾರಣಕರ್ತರಾದವರೂ ಇಲ್ಲೇ ಇದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಈ ರೀತಿಯ 'ಕರೆ'ಗಳನ್ನು ಕೊಡುತ್ತಲೇ ಇದ್ದಾರೆ. ವಿದೇಶದಲ್ಲಿ ಹೋಗಿ ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಐಟಿ-ಬಿಟಿಯಲ್ಲಿ ನಂ.1 ಆಗಲಿದೆ ಅನ್ತಾರೆ. ಅಲ್ಲೊಂದಿಷ್ಟು..ಇಲ್ಲೊಂದಿಷ್ಟು..ಚಪ್ಪಾಳೆಗಳ ಸದ್ದು. ಮರುದಿನ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ಅವರ ಭಾಷಣಗಳದ್ದೇ ಕಾರುಬಾರು..ಟಿ.ವಿ, ಚಾನೆಲ್ ಗಳಲ್ಲಿ ಅವರ ಮಾತುಗಳು ವಿಶೆಷ ವರದಿ..ಮಾಧ್ಯಮಗಳು ಪ್ರಚಾರ ನೀಡಬೇಕಾಗಿರುವುದೂ ಕರ್ತವ್ಯವೇ ಬಿಡಿ..ಆದರೆ ಅವರ ಮಾತಿಗೆಷ್ಟು ಪ್ರಚಾರ ಸಿಕ್ಕುತ್ತೆ ನೋಡಿ.

ಈ ರೀತಿ ಭಾಷಣ ಮಾಡೋವರಿಗೆ 'ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಬಡತನ ನೀಗಲಿ' ಎಂದು ಹೇಳಲಷ್ಟೇ ಗೊತ್ತು. ಅದನ್ನು ಹೇಗೆ ಮಾಡೋದು? ನಾವೇನು ಮಾಡಬೇಕು? ಇವರಿಗೇನೂ ಗೊತ್ತಿರಲ್ಲ. ಇನ್ನು ಇಂಥ ಕುಬೇರರಿಂದಲೇ ಅಭಿವೃದ್ಧಿ ಹೊಂದುವ ವಿಜ್ಷಾನ ಮತ್ತು ತಂತ್ರಜ್ಞಾನ ಬಡತನವನ್ನು ನೀಗಿಸುವುದಾದರೂ ಹೇಗೆ? ಮೊನ್ನೆ ಮೊನ್ನೆ ಒಂದು ಸಮೀಕ್ಷಾ ವರದಿ ಬಂದಿತ್ತು..ಅದೂ ವಿಶ್ವಬ್ಯಾಂಕ್ ಜಾಗತಿಕ ಬಡತನ ತಖ್ತೆಯಿಂದ ತಿಳಿದುಬಂದಿದ್ದು. .ಭಾರತದ ಒಟ್ಟು ಜನಸಂಖ್ಯೆಯ 1/3ರಷ್ಟು ಜನ ಬಡವರು! ಬೆಂಗಳೂರಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ಕೊಳಗೇರಿಗಳಲ್ಲಿ ವಾಸಿಸುತ್ತಾರೆ. ಇವರ ಮನೆಯಲ್ಲಿ ಬೆಳಕು ನೀಡುವ ವಿದ್ಯುತ್ ಬಲ್ಬ್ ಗಳಿಲ್ಲ..ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಮಳೆ ಬಂದಾಗಲೆಲ್ಲಾ..ರಸ್ತೆ, ಚರಂಡಿಗಳ ನೀರು ಇವರ ಮನೆಗೆ ಹೋಗುತ್ತದೆ. ಇದು ಇಲ್ಲಿನ ಯಾವ ಮಹಾನ್ ಉದ್ಯಮಿಗಾದ್ರೂ ಅರಿವಿಗೆ ಬರುತ್ತದೆಯೇ? ಅರಿವು ಬಿಡಿ..ಯಾರೋಬ್ಬರ ಭಾಷಣದ ವಸ್ತುವೂ ಇದಾಗಲ್ಲ. ಜಾಗತಿಕ ಮಟ್ಟದಲ್ಲಿ ನಂ. 1ಆದವನು ಯಾವತ್ತೂ ಬಡಜನರ ಅಭಿವೃದ್ಧಿ ಬಗ್ಗೆ ಕನಸು ಕಾಣುವ ಮಾತನಾಡಿದರೆ ..ಅದು ಸತ್ಯವೆಂದು ನಂಬುವುದೇ ಅಪರಾಧವಾದೀತು. ಈ ರೀತಿ ಮೈಕ್ ಎದುರು ನಿಂತು 'ಬಡತನ ತೊಲಗಲಿ, ಬಡಜನರ ಉದ್ಧಾರ ಆಗ್ಲಿ..ಹಾಗೇ ಮಾಡಬೇಕು. ಹೀಗೇ ಮಾಡಬೇಕು' ಎಂದು ಹೇಳುವ ಬದಲು, ಸ್ವತಃ ನಾವೇನಾದ್ರೂ ಮಾಡಿದರೆ ಎಂದು ಯೋಚಿಸಬೇಕು. ತಾಕತ್ತಿದ್ರೆ ಬಡಜನರ ಮನೆಗೆ ಹೋಗಿ ನೋಡಲಿ..ಸತ್ತು ಬದುಕುವ ಬಡವರ ಬದುಕನ್ನು ಕಣ್ಣು ಬಿಟ್ಟು ನೋಡಬೇಕು. ನಮ್ಮ ಸರ್ಕಾರ, ಜನಪ್ರತಿನಿಧಿಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ನಂ.1 ಎನಿಸಿಕೊಂಡ ಉದ್ಯಮಿಗಳು, ವಿಜ್ಞಾನಿಗಳು ಮುಂತಾದವರು ಬಡತನ ಎಂಬ ಶಬ್ಧವನ್ನು ಭಾಷಣದ ವಸ್ತುವಾಗಿಸುವ ಬದಲು, ಬಡಜನರ ಬದುಕಿಗೆ ನೆರವಾಗುವುದು ಹೇಗೇ? ಎಂಬುದನ್ನು ಯೋಚಿಸಬೇಕು.
ಫೋಟೋ: ಎನ್.ಕೆ.ಎಸ್.

ಹೀಗೊಂದು ಸ್ವಾಮೀಜಿಯ ಕಥೆ!

ನನಗಾಗ ಪುಟ್ಟ ವಯಸ್ಸು. ಆವಾಗ ಊರ ಜಾತ್ರೆಗೆ ಹೋಗೋದಂದ್ರೆ ಭಾರೀ ಖುಷಿ. ಪ್ರತಿ ವರ್ಷ ಈ ಜಾತ್ರೆಗೆ ಯಾವುದಾದ್ರೂ ಮಠದ ಸ್ವಾಮೀಜಿಗಳು ವಿಶೇಷ ಅತಿಥಿಗಳಾಗಿ ಬರುತ್ತಿದ್ದರು. ಅವರದ್ದು ಪ್ರತ್ಯೇಕ ಧಾರ್ಮಿಕ ಉಪನ್ಯಾಸ..ಪಕ್ಕಾ ಭಯ, ಭಕ್ತಿ, ತ್ಯಾಗದ್ದೇ ಮಾತು. ನಾನು ಅಜ್ಜಿ ಜೊತೆ ಜಾತ್ರೆಗೆ ಹೋಗುತ್ತಿದ್ದೆ. ಅಮ್ಮನಿಗೆ ಜಾತ್ರೆ, ಜನಜಂಗುಳಿ ತುಂಬಾ ದೂರ. ಜಾತ್ರೆಗೆ ಹೋದಾಗ ಎಲ್ಲರಂತೆ ನಾನೂ ಸರತಿಯ ಸಾಲಿನಲ್ಲಿ ನಿಂತು ಸ್ವಾಮೀಜಿಗೆ ಚಿಲ್ಲರೆ ಹಾಕಿ, ಕಾಲಿಗೆ ನಮಸ್ಕರಿಸುತ್ತಿದ್ದೆ. ಅವರು ಪ್ರಸಾದ ಕೊಟ್ರೆ ಅದನ್ನೂ ಮನೆಗೆ ತರುತ್ತಿದ್ದೆ. ಅಲ್ಲಿ ಸ್ವಾಮೀಜಿಗಳು ಗಂಟೆಗಟ್ಟಲೆ ಹೇಳಿದ್ದನ್ನು ತಪ್ಪದೆ ಕೇಳಿಸಿಕೊಂಡು ಬಂದು ಅಮ್ಮನಿಗೊಪ್ಪಿಸುತ್ತಿದ್ದೆ. ಅಮ್ಮ ಅದನ್ನೆಲ್ಲಾ ಕೇಳಿಸಿಕೊಂಡು ಸ್ವಾಮೀಜಿ, ದೇವರು, ಭಕ್ತಿಯ ಬಗ್ಗೆ ನನಗೂ ಹೇಳುತ್ತಿದ್ದಳು. ಸ್ವಾಮೀಜಿಗಳ ಬಗ್ಗೆ ಹೇಳುವಾಗ ಅಮ್ಮನೆಂಬ ದೇವರ ಮಾತಿನಲ್ಲಿ ಗೌರವಿತ್ತು. ನನಗೆ ಇದೆಲ್ಲಾ ವಿಚಿತ್ರ ಅನಿಸ್ತಾ ಇತ್ತು. ಅದ್ಯಾಕಮ್ಮಾ ಸ್ವಾಮೀಜಿಗಳ ಪಾದಪೂಜೆ ಮಾಡಿ ನೀರು ಕುಡಿಯುತ್ತಾರೆ? ನೀನ್ಯಾಕೆ ದೇವರ ಪ್ರಸಾದವೆಂದರೆ ಅಷ್ಟೊಂದು ಭಕ್ತಿಯಿಂದ ಜೋಪಾನವಾಗಿಟ್ಟು ದಿನಾ ನನಗೆ ಸ್ನಾನ ಮಾಡಿಸಿ ಹಚ್ಚುತ್ತಿ? ಎಂದು ಕೇಳಿದಾಗ 'ಸ್ವಾಮೀಜಿಗೆ ಏನೂ ಹೇಳಬಾರದು ಮಗೂ. ಅವರು ಹೇಳಿದಂತೆ ಆಗುತ್ತದೆ. ಎಲ್ಲೇ ನೋಡಿದ್ರೂ ಅವರಿಗೆ ನಮಸ್ಕಾರ ಮಾಡ್ಬೇಕು" ಎನ್ನುತ್ತಿದ್ದಳು. ಅಮ್ಮ ಹೇಳಿದ ಮೇಲೆ ಮುಗಿದೇ ಹೋಗಿತು..ಮತ್ತೆ ಅದನ್ನು ಪ್ರಶ್ನಿಸುವ ಗೋಜಿಗೆ ನಾನ್ಯವತ್ತೂ ಹೋಗಲ್ಲ. ಸ್ವಾಮೀಜಿಗಳಂದ್ರೆ ಏನೋ ಗೌರವ, ಪ್ರೀತಿ, ಭಯ-ಭಕ್ತಿ. ಸಿಕ್ಕಾಗೆಲ್ಲಾ ಸ್ವಾಮೀಜಿಗಳನ್ನು ಹುಡುಕಿಕೊಂಡು ಹೋಗಿ ನಮಸ್ಕರಿಸುತ್ತಿದ್ದೆ. ಆದರೂ ಮನಸ್ಸಲ್ಲಿ ಹಲವಾರು ಪ್ರಶ್ನೆಗಳು: ಏಕೆ ಸ್ವಾಮೀಜಿಗಳನ್ನು ದೇವರಂತೆ ಕಾಣುತ್ತಾರೆ? ಅವರೇನು ಮಾನವರೂಪದ ದೇವರುಗಳೇ? ಹಿರಿಯರೆಂದು ಅವರನ್ನು ಗೌರವದಿಂದ ಕಾಣುತ್ತಾರೆಯೇ? ಅವರು ನಮ್ಮಂತೆ ನೆಲದ ಮೇಲೆ ನಡೆದಾಡುತ್ತಾರೆ..ಆದ್ರೂ ಥೂ! ಅವರ ಪಾದ ತೊಳೆದು ಅದ್ಯಾಕೆ ನೀರು ಕುಡಿಯಬೇಕು? ಶುದ್ದ ಸಸ್ಯಾಹಾರಿಗಳಾಗಿರಬಹುದು..ಮೂರು ಹೊತ್ತು ಸ್ನಾನ ಮಾಡುತ್ತಾರೆ..ಮದುವೆ ಆಗಲ್ಲ..ಇಷ್ಟಕ್ಕೂ ಅವರೂ ಮನುಷ್ಯರಲ್ವಾ? ಮುಂತಾದ ಪ್ರಶ್ನೆಗಳು ದಿನಾ ತಲೆ ತಿನ್ನುತ್ತಿದ್ದವು. ಇಂಥ ನನ್ನ ಪಾಲಿನ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಅಮ್ಮನದು ಮಾತ್ರ ಒಂದೇ ಉತ್ತರ 'ಹಾಗೆಲ್ಲ ಯೋಚಿಸಬಾರದು ಮಗೂ..ಸ್ವಾಮೀಜಿಗಳು ಮದುವೆ ಆಗಲ್ಲ.ಅವರು ದೇವರಿಗೆ ಸಮಾನ'! ಹೌದು! ಅಂತೆಯೇ ನಾನು ಆಮೇಲೆ ಕೇಳಿಲ್ಲ..ಓದು ಮುಗೀತು..ಬೆಂಗಳೂರಿಗೆ ಬಂದೆ..ಒಳ್ಳೆಯ ಉದ್ಯೋಗನೂ ಪಡೆದೆ.

ಆದರೆ ಬೆಂಗಳೂರು?! ನಮ್ಮೂರಿಗಿಂದ ತುಂಬಾ ಭಿನ್ನ. ಇಲ್ಲಿ ನೋಡಿದ್ದಲ್ಲಿ..ಹೆಜ್ಜೆಯಿಟ್ಟಲ್ಲಿ..ದೇವಸ್ಥಾನಗಳು, ಸ್ವಾಮೀಜಿಗಳು, ಜ್ಯೋತಿಷಿಗಳು ಅಬ್ಬಬ್ಬಾ! ನನಗೇನೋ ಹೊಸದು ಬೆಂಗಳೂರು. ಇಲ್ಲಿ ಬಂದೂ ನನಗೆ ಇಬ್ಬರು ಸ್ವಾಮೀಜಿಯಬರ ಪರಿಚಯವಾಗಿತ್ತು. ನೋಡುವ ಜನರಿಗೆ, ಬೆಂಗಳೂರಿಗೆ ಬೆಂಗಳೂರೇ ಗೌರವದಿಂದ ಕಾಣುವ ಈ ಮಹಾನ್ ಸ್ಮಾಮೀಜಿಗಳು ಮಾತ್ರ ಪಕ್ಕಾ ಬ್ಯುಸಿನೆಸ್ ಸ್ವಾ,ಮೀಜಿಗಳು. ನೈತಿಕತೆ ಬಗ್ಗೆ ಮಾತಾಡುತ್ತಿದ್ದ ಇವರಿನಿಗೆ ನೈತಿಕತೆ ಅಂದ್ರೆ ಏನೂಂತಾನೇ ಗೊತ್ತಿರಲಿಲ್ಲ. ಕಾವಿಧಾರಿ ಆ ಸ್ವಾಮೀಜಿಗಳು ಕಪಟ, ಮೋಸ, ವಂಚನೆ, ಅನೈತಿಕತೆಯ ಇನ್ನೊಂದು ರೂಪವಾಗಿದ್ದರು. ಸ್ವಲ್ಪ ದಿನಗಳ ನಂತರ ಒಟ್ಟಿನಲ್ಲಿ ಸ್ವಾಮೀಜಿಗಳ ಬಗ್ಗೆ ಶೋಧಿಸುವ ಕಾರ್ಯದಲ್ಲೇ ತೊಡಗಿದ್ದೆ. ಅಮ್ಮ ಹೇಳಿದ ಗೌರವ, ಭಕ್ತಿ, ಮಾನವರೂಪದ ದೇವರುಗಳು ಮೌಢ್ಯದ ರೂಪ ತಳೆದು ನಿಂತಿದ್ದವು. ಆವಾಗಲೇ ಅಮ್ಮನಿಗೆ ಫೋನು ಮಾಡಿ ಹೇಳಿದೆ, "ಅಮ್ಮಾ ನೀನು ಹೇಳಿದ್ದು ಸುಳ್ಳು..ನೋಡು ಎಲ್ಲವನ್ನೂ ಸತ್ಯವೆಂದು ನಂಬಬೇಡ". ಆದರೆ ಅಮ್ಮನಿಗೆ ದೇವರ ಬಗ್ಗೆ, ದೇವರ ಸ್ವರೂಪ ಎಂದು ಜನ ನಂಬುವ ಸ್ವಾಮೀಜಿಗಳ ಬಗೆಗಿದ್ದ ನೈಜ ಭಕ್ತಿ ಅವಳ ಮಾತನ್ನು ಸಮರ್ಥಿಸಿಕೊಳ್ಳುವಂತೆ ಮಾಡಿತ್ತು. ಅಮ್ಮನ ಮುಗ್ಧತೆ, ಪ್ರಾಮಾಣಿಕತೆಯೆದುರು ನಾನು ಮೌನವಾಗಿದ್ದೇನೆ. ಆದರೆ ಬೆಂಗಳೂರಿನಂಥ ನಗರಕ್ಕೆ ಬಂದು, ಜಗತ್ತಿನ ಇನ್ನೊಂದು ಮುಖವನ್ನು ನೋಡಿದ್ದೇನೆ. ಮನುಷ್ಯ ಎಷ್ಟೇ ಸುಶಿಕ್ಷಿತನಾಗಿದ್ದರೂ ಮೌಢ್ಯ ಅವನನ್ನು ಬಿಟ್ಟು ಹೋಗಿಲ್ಲ. ಸತ್ಯವನ್ನು ಶೋದಿಸುವ ಕಾರ್ಯ ಮನುಷ್ಯ ಮಾಡುತ್ತಿಲ್ಲ ಏಕೆ? ಎನ್ನುವ ಪ್ರಶ್ನೆ ನನ್ನದು. ಇತ್ತೀಚಿನ ದಿನಗಳಲ್ಲಿ ಹಣ ಮಾಡುವುದಕ್ಕಾಗಿ 'ಸ್ವಾಮೀಜಿ'ಗಳೆನಿಸಿಕೊಂಡವರು, ಕೊನೆಗೆ ಸಿಕ್ಕಿಬಿದ್ದ ನಕಲಿ ಸ್ವಾಮೀಜಿಗಳು ಎಲ್ಲವನ್ನೂ ಬೆಂಗಳೂರಲ್ಲಿ ನೋಡುತ್ತಿದ್ದೇನೆ. ಆದರೂ ಜನ ಹೀಗೇಕೆ? ಎನ್ನುವ ಪ್ರಶ್ನೆ ನನ್ನದು.

ಗೆಳೆಯ ಸಂಜು ಇಷ್ಟನ್ನೂ ಹೇಳಿ ಮುಗಿಸಿದಾಗ ನಾನು ಇಳಿಯುವ ಸ್ಥಳನೂ ಬಂದಿತ್ತು. ಕಾರಿಂದ ಇಳಿದೆ. ಮತ್ತಷ್ಟು ದೂರ ಹೋಗಬೇಕು..ಇನ್ನೊಂದು ಬಸ್ಸು. ಸೀಟುಗಳೆಲ್ಲಾ ಖಾಲಿ ಯಿದ್ದುವು..ಆರಾಮವಾಗಿ ಬಸ್ಸಲ್ಲಿ ಕೂತಾಗ ..ಆತನ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸಿದುವು. ನನ್ನ ಅನುಭವಗಳೂ ಮತ್ತೊಮ್ಮೆ ಕಣ್ಣೆದುರು ಮೂಡಿಬಂದುವು. ಖ್ಯಾತ ಚಿತ್ರನಟರೊಬ್ಬರ ಮನೆಯಲ್ಲಿ ಪೂಜೆಯಿತ್ತು. ಅಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಪಡೆದ ಸ್ವಾಮೀಜಿಗಳಿಂದ ಭಜನೆ ಕಾರ್ಯಕ್ರಮನೂ ಇತ್ತು. ಹಾಗೇ ಸ್ವಾಮೀಜಿಗಳು ತಮ್ಮ ಭಜನಾ ತಂಡದೊಂದಿಗೆ ಕಾರಿನಲ್ಲಿ ಬಂದಿದ್ದರು. ಅವರ ಕಾರಿನ ಚಾಲಕ ಹೇಳುತ್ತಿದ್ದ; ಸ್ವಾಮಿಗಳು ನಿನ್ನೆ ಫಾರಿನ್ ಟೂರ್ ಮುಗಿಸಿ ಬಂದಿದ್ರು...ಇವತ್ತು 2 ಕಡೆ ಭಜನೆ ಇತ್ತು. ಇವರೇನೋ ತಮ್ಮದು ದಾನ ಧರ್ಮ ಅಂತಾರೆ. ಆದರೆ ಇವರನ್ನು ಹೊರತುಪಡಿಸಿ ಭಜನೆ ಹಾಡುವವರು, ತಬಲ ಬಾರಿಸುವವರು ಎಲ್ಲರಿಗೂ ಪ್ರತ್ಯೇಕ ಸಂಬಳ ತೆಗೆದುಕೊಳ್ಳುವಂತೆ ಹೇಳಿರುತ್ತಾರೆ. ದುಬಾರಿ..ಕೆಲವರು ಸ್ವಾಮೀಜಿ ತಂಡವೆಂದು ಬೇಕಾಬಿಟ್ಟಿ ಹಣ ನೀಡುವವರೂ ಇದ್ದಾರೆ. ತಮಗೆ ಬೇಕಾದ ಹಣವನ್ನು ಭಜನೆ ತಂಡದಿಂದ ತೆಗೆದುಕೊಂಡು ಬಳಿಕ ಆ ತಂಡಕ್ಕೆ ಸಂಬಳ ನೀಡುತ್ತಾರೆ!
ಇದು ಸತ್ಯಾನೋ/ಸುಳ್ಲೋ ಎನ್ನುವುದಕ್ಕಿಂತ ಆತ ಹೇಳಿದ್ರಿಲ್ಲಿ ಸತ್ತಾಂಶವಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಪ್ರಸ್ತುತ ಸಮಾಜದಲ್ಲಿ ಹಣಕ್ಕಾಗಿ ಸ್ವಾಮೀಜಿಗಳಾಗಿದ್ದ ಎಷ್ಟೋ ಮಂದಿ ಇದ್ದಾರೆ ಎನ್ನುವುದು ನಂಬಲರ್ಹ ಸತ್ಯವೇ.

Friday, August 29, 2008

ಥ್ಯಾಂಕ್ಯೂ ಕನ್ನಡಪ್ರಭ

ಕನ್ನಡ ಪ್ರಭದ (29.08.2008) ಬ್ಲಾಗಾಯಣ ಅಂಕಣದಲ್ಲಿ ನನ್ನ 'ಶರಧಿ'ಯ ಬಗ್ಗೆ ಮೂಡಿಬಂದಿದ್ದು: ಬದುಕಿನ ಅನುಭವಗಳು ಹರಿದ ಹಾದಿ 'ಶರಧಿ'. ಶರಧಿಯಲ್ಲಿ ಪಯಣ ಬೆಳೆಸಿರುವ ಇವರು ಚಿತ್ರಾಕರ್ಕೇರಾ ದೋಳ್ಪಾಡಿ. ಕರಾವಳಿ ಮಡಿಲಲ್ಲಿರುವ ಪುತ್ತೂರಿನವರಾದರೂ ಈಗ ಬೆಂಗಳೂರಿನ ನಿವಾಸಿ. ಪತ್ರಕರ್ತೆಯಾಗಿರುವ ಇವರು ಸುದ್ದಿ, ಸುತ್ತಾಟಗಳ ಅನುಭವಗಳನ್ನೇ ಹೆಚ್ಚಾಗಿ ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಕನ್ನಡಪ್ರಭ...

Thursday, August 28, 2008

'ಬಿಟ್ಟಿ ಟಿಕೆಟ್,' 'ಸ್ಲೀವ್ ಲೆಸ್ ಸರಸ'ಕ್ಕೆ ಕೊನೆ ಎಂದು?

ಬಿಟ್ಟಿ ಟಿಕೆಟ್', ಸ್ಲೀವ್ ಲೆಸ್ ಸರಸ, ಬೊಂಬಾಟ್ ಭಾಮಾ, ಒನ್ಲಿ ಸೂಪರ್ ಹಿಟ್ ಕನ್ನಡ ಹಾಡುಗಳು, ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ....ಮುಂತಾದ ಪದಗಳನ್ನು ಎಲ್ಲಿ ಕೇಳಲು ಸಾಧ್ಯ? ಹೌದು! ನಿಮಗೂ ಗೊತ್ತು..ಎಫ್.ಎಂ.ಗಳಲ್ಲಿ ಮಾತ್ರವೆಂದು. ಬೆಳಿಗೆದ್ದು ಎಫ್.ಎಂ. ಕೇಳೋಣಾಂದ್ರೂ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ ಬೆಂಗಳೂರು ತಪ್ಪಿದ್ದಲ್ಲ. ಹೌದು! ಎಫ್.ಎಂ.ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ...ಸಮಯ ಕಳೆದಿದ್ದೇ ಗೊತ್ತಾಗಲ್ಲ ಎನ್ನೋರು ಇದ್ದಾರೆ. ಆದರೆ ಅದ್ಯಾಕೋ ಕೆಲವೊಮ್ಮೆ ಜೀವಂತ ನಾಲಗೆಯಿರುವ ಕನ್ನಡಿಗರ ಬಾಯಿಯಿಂದಲೇ ಕನ್ನಡದ ಕೊಲೆಯಾಗುತ್ತಿರುವಾಗ ಅತಿಯಾಯಿತೆನಿಸುತ್ತೆ, ಕೇಳಲೂ ಅಸಹ್ಯವಾಗುತ್ತೆ. ಕೇಳಲೂ ಮಹಾವೇದನೆ. ಮಾತಾಡುತ್ತಾ ಮಜಾ ಮಾಡ್ಲಿ..ವಿಷ್ಯ ಅದಲ್ಲ..ಕಂಗ್ಲೀಷ್ ಮಾತಾಡ್ತಾರಲ್ಲ..ಅದು ಕೇಳುಗರಿಗೇ ಮುಜುಗರ ತರಿಸುತ್ತದೆ.

ಈ ಬಗ್ಗೆ ಹಿಂದೊಮ್ಮೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿದ್ಧಲಿಂಗಯ್ಯ, ಕಟ್ಟಪ್ಪಣೆ ಮಾಡಿದ್ದರು. ಆದದೆ ಅದರಿಂದ ನಯಾಪೈಸೆಯೂ ಲಾಭವಾಗಿಲ್ಲ. ಇದೇನು ಹೊಸತಲ್ಲ ಬಿಡಿ..ಸರ್ಕಾರ ಬುದ್ದಿಜೀವಿಗಳು, ಹಿರಿಯರು ಎಲ್ಲರೂ ಅನ್ಯಭಾಷೆಗಳ ಕುರಿತು ಭಾರೀ ಪ್ರೀತಿಯಿಂದಲೇ ಮಾತನಾಡಿದ್ದಾರೆ. ಆವಾಗೆಲ್ಲಾ ಅವರಿಗೆ ಇಂಥ ಸಣ್ಣ ತಪ್ಪುಗಳಿಂದಲೇ ಕನ್ನಡ ಭಾಷೆ ನೆನೆಗುದಿಗೆ ಬೀಳುತ್ತಿದೆ ಎನ್ನುವುದು ತಲೆಯಲ್ಲಿ ಹೊಳೆದಿರಲಿಕ್ಕಿಲ್ಲ. ಅನ್ಯಭಾಷೆಯನ್ನು ಗೌರವಿಸೊಣ, ಪ್ರೀತಿಸೋಣ. ಆದರೆ ಇದನ್ನೇ ಕನ್ನಡಿಗರ ದೌರ್ಬಲ್ಯವೆಂದು ನಡೆದುಕೊಂಡಾಗ ಕನ್ನಡಿಗರು ಎದುರು ನಿಲ್ಲಲೇಬೇಕಲ್ವೇ? ಬೆಂಗಳೂರಿನ ಎಫ್. ಎಂ., ರೇಡಿಯೋ ಕಾರ್ಯಕ್ರಮಗಳಲಲ್ಲಿ ಕಂಡುಬರುವ ಕಂಗ್ಲೀಷ್ ನ ಕೇಳಲು ಅಸಹ್ಯವೆನಿಸುವ 'ಸ್ಲಿವ್ ಲೆಸ್ ಸರಸ' ದಂತಹ ಮಾತುಗಳು ವ್ಯಾಪಾರ ಮನೋಭಾವದ ಬೇಳೆ ಬೇಯಿಸಿಕೊಳ್ಳಲು ಮಾಡುವ ತಂತ್ರಗಳೇ. ಹಿಂದಿ, ಇಂಗ್ಲೀಷ್, ಕನ್ನಡದಲ್ಲಿ ಹೆಚ್ಚು ಪ್ರಾಶಸ್ತ್ಯ ಇರುವುದು ಹಿಂದಿ ಅಥವಾ ಇಂಗ್ಲೀಷ್ ಗೆ. 'ಕೇವಲ ಮೂರು ಹಾಡುಗಳು ಬ್ಯಾಕ್ ಟು ಬ್ಯಾಕ್' ಅಬ್ಬರದ ಸಂಗೀತದ ಜೊತೆಗೆ.. ಇಂಥ ವಿಕಾರಗಳನ್ನು ಕೇಳುವಾಗ ಯಾರಿಗಾದ್ರೂ ಅಯ್ಯೋ ಎನಿಸದಿರದು. ಏನು ಬೇಕಾದ್ರೂ ಮಾಡ್ಲಿ..ಕನ್ನಡದಲ್ಲಿ ಒಳ್ಳೆಯ ಶಬ್ದಗಳಿವೆ, ಪದಗಳಿವೆ ಅವುಗಳನ್ನು ಕನ್ನಡದಲ್ಲೇ ಹೇಳಿದ್ರೇನು ನಷ್ಟ? ಇಂಗ್ಲೀಷ್, ಹಿಂದಿ..ಅಸಂಬದ್ಧವಾಗಿ ಮಾತಾಡುವಾಗ ಇಂಥ ಎಫ್.ಎಂ. ಗಳಿಗೆ ಕನಿಷ್ಠ ಸೌಜನ್ಯತೆಯೂ ಇಲ್ಲವೇ? ಎಂಬ ಪ್ರಶ್ನೆ ಮೂಡದಿರದು. ಕೆಲವೊಂದಿಷ್ಟು ನಿಮಿಷಗಳು ಬಿಟ್ಟರೆ ದಿನವಿಡೀ ಹಿಂದಿ-ಇಂಗ್ಲೀಷ್ ಕಾರ್ಯಕ್ರಮಗಳೇ ಜಾಸ್ತಿ ಪ್ರಸಾರವಾಗುತ್ತವೆ. ಇನ್ನು ಕನ್ನಡದ ಕಾರ್ಯಕ್ತಮಗಳಲ್ಲಿ 'ಕಂಗ್ಲೀಷ್' ನಲ್ಲಿ ಮಾತನಾಡಿ ಪದ-ಅರ್ಥಗಳನ್ನು ಏನೋನೋ ಮಾಡಿಬಿಡ್ತಾರೆ. ಪ್ರಸ್ತುತ ನಮ್ಮ ಪರಿಸ್ಥಿತಿ ಎಂಥ ಕೀಳುಮಟ್ಟಕ್ಕೆ ಇಳಿದಿದೆಯೆಂದರೆ ಕನ್ನಡದ ಬಗ್ಗೆ ಮಾತನಾಡುವುದೇ ತಪ್ಪು, ಕನ್ನಡಿಗರ ದೌರ್ಬಲ್ಯ ಎನ್ನುವವರೇ ಹೆಚ್ಚು. ಅಷ್ಟೇ ಅಲ್ಲ ಯಾವುದೇ ಕರ್ನಾಟಕದ,., ಸರ್ಕಾರದ ಇಲಾಖೆಗಳಲ್ಲಿ ಹೋಗಿ ಕನ್ನಡದಲ್ಲಿ ಮಾತನಾಡಿದ್ದರೆ ನಮ್ಮನ್ನು ಅಡಿಯಿಂದ ಮುಡಿಯವರೆಗೆ ನೋಡಿ, ಭಾಷೆಯಿಂದ ವ್ಯಕ್ತಿತ್ವ ಅಳೆಯುವವರೇ ಹೆಚ್ಚು. ನಮ್ಮ ಕನ್ನಡದಲ್ಲಿ ಶ್ರೇಷ್ಠರೆನಿಸಿಕೊಂಡ ಕೆಲವರು ಕನ್ನಡ, ನಾಡು-ನುಡಿ ಕುರಿತು ಏನೇ ಬೀದಿರಂಪ ಮಾಡಿದ್ರೂ ಬೆಚ್ಚಗೆ ಮನೆಯೊಳಗೆ ಕೂರುತ್ತಾರೆ. ಬೇಕಾದ್ರೆ ಆ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಕಲ್ಲು ಬಿದ್ದೀತೆಂಬ ಪುಕ್ಜಲುತನದಿಂದ ರಕ್ಷಣೆಗೆ ಪೊಲೀಸ್ ರನ್ನೂ ನೇಮಕ ಮಾಡಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಂಬು ಸ್ಪೋಟ ಆಯಿತು. ಎಷ್ಟು ಮಂದಿ ಕನ್ನಡದ ಶ್ರೇಷ್ಠರು ವಿರೋಧಿಸಿದ್ದಾರೆ? ಭಯೋತ್ಪಾದನೆಯನ್ನು ತಡೆಗಟ್ಟಿ ಎಂದು ವಿಧಾನಸೌಧ, ಮಹಾತ್ಮಾಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟನೆ ಮಾಡಿದ್ದಾರೆ? ಆದರೆ ಅನಗತ್ಯವಾದ ವಿಚಾರಗಳಿದ್ದರೆ ತಕ್ಷಣ ಬೀದಿಗೆ ಬಂದು ಬೊಬ್ಬಿಡ್ತಾರೆ. ಆದರೆ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ನೋಡಿ..ಎಲ್ಲೋ ಇದ್ದವರು ತಕ್ಷಣ ಬೀದಿಗಿಳಿದು..ಸಂಜೆಯವರೆಗೆ ದುಡಿದು ದಣಿದ ದೇಹಕ್ಕೆ, ಮನಸ್ಸಿಗೆ ನೆಮ್ಮದಿ ಬೇಕು..ಅದ್ಕಾಗಿ ತಡರಾತ್ರಿವರೆಗೂ 'ಸಂಗೀತ ಕಚೇರಿಗಳು' ತೆರೆದಿರಬೇಕು ಎಂದು ಬೊಬ್ಬಿಟ್ಟರು! ಇದು ಬೇಕಿತ್ತೆ?

ಕನ್ನಡ ಭಾಷೆಯ ವಿಚಾರ ಬಂದಾಗಲೂ ಆಗುತ್ತಿರುವುದು ಹೀಗೆ. ಯಾರೋಬ್ಬರೂ ಮಾತಾಡಲ್ಲ..ಇಲ್ಲಿ ನಾನೊಬ್ಬಳು ಮಾತಾಡಿದ್ರೂ ಪ್ರಯೋಜನವಿಲ್ಲ. ಎಫ್.ಎಂ. ರೇಡಿಯೋ ಅಥವಾ ಇನ್ಯಾರೋ ಏನ್ ಬೇಕಾದ್ರೂ ಮಾತಾಡ್ಲಿ..ನಮಗೇನು ಎಂಬಂತೆ ತೆಪ್ಪಗಿರುತ್ತಾರಲ್ಲಾ..ಹಾಗಾಗಿಯೇ ಕನ್ನಡ ಸಾಯುತ್ತಿದೆ ನೋಡಿ. ಬಹುಶಃ ನನಗನಿಸಿದ ಪ್ರಕಾರ ಈ ಎಫ್.ಎಂ.ಗಳ ಅವತಾರಗಳನ್ನು ನಮ್ಮ ಗಣ್ಯರು ಆಲಿಸಿರಕ್ಕಿಲ್ಲ. ಪ್ರೇಮಿಗಳ ದಿನ, ಹೋಳಿ ಮುಂತಾದ ದಿನಗಳನ್ನು ವಿಶೇಷವಾಗಿ ಎಡೆಬಿಡದೆ ನಡೆಸಿಕೊಡುವ ಎಫ್.ಎಂ.ಗಳಿಗೆ ಕನ್ನಡದ ಶ್ರೇಷ್ಠ ನಾಟಕಕಾರರು, ನಟರು, ಸಾಹಿತಿಗಳು, ಗಾಯಕರ ದಿನಗಳನ್ನು ನಡೆಸಿಕೊಡಲಿ. ನಾನೇನು ಎಫ್.ಎಂ. ಗಳ ದ್ವೇಷಿಯಲ್ಲ..ಬದಲಾಗಿ ಅಸಂಬದ್ಧ ಮಾತುಗಳಿಂದ ಕನ್ನಡವನ್ನು ಕೊಲ್ಲುವ ಬದಲು ಶುದ್ಧ ಕನ್ನಡ ಬಳಸಿ, ಕನ್ನಡಕ್ಕೆ ತಮ್ಮಿಂದಾದ ಕೊಡುಗೆ ನೀಡಲಿ. ಕನ್ನಡದ ಅಭಿವೃದ್ಧಿ ಬಗ್ಗೆ ಮಾತನಾಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡಪರ ಸಂಘಟನೆಗಳು ಅದೇನು ನಿದ್ದೆ ಮಾಡುತ್ತಿವೆಯೇ?

ಮಳೆಗೆ ನಮ್ಮೂರ ತೋಟದಾಂಗ...

ಮೊನ್ನಯಿಂದ ಬೆಂಗಳೂರಿನಲ್ಲಿ ಮಳೆಯೋ ಮಳೆ..ಸಂಜೆ ಆಫೀಸಿನಿಂದ ಹೊರಡುತ್ತಿದ್ದಂತೆ ಗುಡುಗು-ಮಿಂಚು, ಮಳೆಯದ್ದೇ ಸ್ವಾಗತ. ಛತ್ರಿ ಇದ್ದರೂ ಬೆಂಗಳೂರು ಮಳೆ ಅಂದ್ರೆ ಮಳೆಗೆ ಪೂರ್ತಿ ನೆನೆಯಲೇಬೇಕು. ಮೊನ್ನೆ ರಾತ್ರಿ ಆಫೀಸಿನಿಂದ ಹೊರಟಾಗ ರಾತ್ರಿ ಎಂಟೂವರೆ ಗಂಟೆ. ಮಳೆಯೋನೋ ಬಿಟ್ಟಿತ್ತು..ಆಕಾಶನೂ ಶುಭ್ರವಾಗಿತ್ತು. ಆದರೆ ಅರ್ಧ ದಾರಿಗೆ ತಲುಪುವಾಗ ಜೋರಾಗಿ ಮಳೆ, ಗಾಳಿ. ರಸ್ತೆಗಳೆಲ್ಲ ಸಮುದ್ರಗಳಾದುವು..ಚಲಿಸುತ್ತಿದ್ದ ವಾಹನಗಳು ದಡಕ್ಕನೆ ನಿಂತುಬಿಟ್ಟವು. ನನ್ನ ಛತ್ರಿಯಂತೂ ಡಾನ್ಸ್ ಮಾಡಿ ಉಲ್ಟಾ ಆಗಿ, ಏನೇನೋ ಆಗಿ ಹೋಯಿತು. ಪುಲ್ ಒದ್ದೆ..ಚಳೀ.
ಚಿಕ್ಕದಿರುವಾಗ ಶಾಲೆಗೆ ಹೋಗುತ್ತಿದ್ದ ನೆನಪಾಯಿತು. ಮಳೆ ಬಂದ್ರೆ ಬಟ್ಟೆಗಳನ್ನೆಲ್ಲಾ ಎತ್ತಿಕಟ್ಟಿ ಊರ ಹಳ್ಳಗಳನ್ನು ದಾಟಿ ಮನೆಗೆ ಬರುವುದು, ಶಾಲೆಗೆ ಹೋಗುವುದು.. ಹಾಗೇ ಮಾಡಿದೆ. ಹೊಲದಲ್ಲಿ ಪೈರು ಕೊಯ್ಯುವಾಗ ಅಮ್ಮನವರೂ ಬಟ್ಟೆ ಎತ್ತಿ ಕಟ್ಟಿಕೊಳ್ಳುತ್ತಿದ್ದರು. ಹಾಗೇ ಮಾಡಿದೆ..ಚಪ್ಪಲು ಮಾತ್ರ ಎಲ್ಲೋ ತೇಲುತ್ತಾ ಹೋಗಿತ್ತು. ಕೈಯಲ್ಲೊಂದು ಬ್ಯಾಗ್ ಇರದಿದ್ದರೆ ನಾನಂತೂ ಆ ಮಳೆಯಲ್ಲಿ ಖುಷಿಯಾಗುತ್ತಿದ್ದೆ. ಬೆಂಗಳೂರಿನಲ್ಲಿ ಮಳೆ, ಗಾಳಿ ಬರಕ್ಕೆ ಆರಂಭವಾದರೆ ನಂಗೆ ಅಮ್ಮ ಜಾಸ್ತಿ ನೆನಪಾಗ್ತಾರೆ. ಯಾಕೋ ಊರಲ್ಲಿ ಮಳೆ ಬರುವಾಗ ಒಂಥರಾ ಚಂದ. ಸಣ್ಣವರಿರುವಾಗ ಮಳೆ ಬರೋದನ್ನೇ ಕಾಯುತ್ತಿದ್ದ ನಾವು, ಮೊದಲ ಮಳೆಯಲ್ಲೇ ನೆನೆದು ಶೀತ, ಜ್ವರದಲ್ಲಿ ಮಲಗುತ್ತಿದ್ದುಂಟು .ಅಮ್ಮ ಮನೆಯಲ್ಲಿ ಇಲ್ಲದಿದ್ದಾಗ ನಾನು-ತಮ್ಮ ಇಬ್ಬರು ಅಂಗಳದಲ್ಲಿ ಮಳೆಯಲ್ಲಿ ನೆನೆಯುತ್ತಿದ್ದೇವು. ಮತ್ತೆ ನಮ್ಮನೆ ತುಂಬಾ ಹಳ್ಳಿ..ಇರುವುದು ಕಾಡಿನ ಮಧ್ಯದಲ್ಲಿ..ಆ ಕಾಡಿಗೆ 'ಪೈಕದ ಮಲೆ' ಅಂತಾನೇ ಹೆಸರು. ನಮ್ಮಮ್ಮನಿಗೆ ಮದುವೆಯಾಗುವ ಮುಂಚೆ ಆ ಕಾಡಲ್ಲಿ ಹುಲಿ, ಆನೆಗಳೆಲ್ಲ ಇದ್ದವಂತೆ. ಅಮ್ಮನವರು ಮನೆಯಿಂದ ಹೊರಗೆ ಬರುತ್ತಿರಲಿಲ್ಲವಂತೆ. ದೊಡ್ಡ ದೊಡ್ಡ ಹೆಬ್ಬಲಸು ಮರಗಳಿವೆ. ಮಳೆಗಾಲದಲ್ಲಿ ಆ ಊರೇ ಕತ್ತಲು. ಈಗಲೂ ಅಲ್ಲಿ ಕೆಲವೆಡೆ ಕರೆಂಟಿಲ್ಲ. ವಿದ್ಯುತ್ ಕಂಬಗಳನ್ನು ಹಾಕಿದ್ರೆ ಮಳೆಗಾಲದಲ್ಲಿ ಮರಗಳು ಬಿದ್ದು ಕಂಬಗಳೆಲ್ಲ ನೆಲಕ್ಕೆ. ಕಾಡೇ ಆಗಿದ್ರೂ ಅದೇನೋ ಮಳೆ ಬರುವಾಗ ನಮ್ಮೂರೇ ಚಂದ...ನಮ್ಮೂರಿಗೆ ನಮ್ಮೂರೇ ಸಾಟಿ. ಹಸಿರು, ಕಾಡು, ಮರಗಳು..ಗದ್ದೆ..ಮಳೆ ಬರುವುದೇ ತಡ ನಮ್ಮಜ್ಜ ಹೊಲ ಉಳೋಕೆ ರೆಡಿ. ಆವಾಗ ನಮ್ಮನೆಯಲ್ಲಿ ಎತ್ತುಗಳು, ಕೋಣಗಳಿದ್ದವು. ಅವುಗಳನ್ನು ಕಂಬಳಕ್ಕೂ ಕರೆದುಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲ, ಊರ ಹೊಳೆಯಲ್ಲಿ ಯಾರ್ಯಾರ ತೋಡದ ತೆಂಗಿನ ಮರಗಳಿಂದ ಗಾಳಿಗೆ ಬಿದ್ದ ತೆಂಗಿನ ಕಾಯಿಗಳನ್ನು ಹಿಡಿಯಾಕೆ ಹೋಗುತ್ತಿದ್ದೇವು. ನಮ್ಮಜ್ಜ, ಪಕ್ಕದ್ಮನೆಯವರೆಲ್ಲ ಸೇರಿ ರಾತ್ರಿ ಮೀನು ಹಿಡಿಯಾಕೂ ಹೋಗುತ್ತಿದ್ದುಂಟು. ಮತ್ತೆ ಮಳೆಗಾಲ ಬಂದ್ರೆ ಸಾಕು. ದಿನಾ ಚಳಿಗೆ ತಿನ್ನಕ್ಕೆ ಏನಾದ್ರೂ ಅಮ್ಮ ಮಾಡಿ ಕೊಡುವರು. ಹಲಸಿನ ಬೀಜ, ಹುಣಸೆಬೀಜ, ಹಪ್ಪಳ..ಎಲ್ಲವೂ ಮಳೆಗಾಲಕ್ಕಂತಾನೇ ಮಾಡಿ ಇಡುತ್ತಿದ್ದರು ಅಮ್ಮ.
ನಮ್ಮ ಬಾವಿಯೆಲ್ಲ ಪೂರ್ತಿ ತುಂಬಿದಾಗ ನಮಗೆ ರಾಟೆಯಲ್ಲಿ ನೀರು ಎಳೆಯುವ ಕೆಲಸವಿಲ್ಲ..ಅದಂತೂ ಭಾರೀ ಖುಷಿ ನಮಗೆ. ನಮ್ಮ ಅಮ್ಮನಂತೂ ಮಳೆ ಬಂದ್ರೆ ಸಾಕು ಹಾರೆ, ಗುದ್ದಲಿ ಹಿಡಿದು ಕೆಲಸಕ್ಕೆ ರೆಡಿ. ದಿನವಿಡೀ ತೋಟದಲ್ಲಿ ಏನಾದ್ರೂ ಮಾಡ್ತಾನೇ ಇರ್ತಾರೆ. ಅವ್ರ ಜೊತೆ ನಾವುನೂ..ನಮಗೆ ಆಗ ಅಮ್ಮನೇ ಮಾಡಿದ 'ಮೂಡೆ' ಮಾಡಿ ಕೊಡುತ್ತಿದ್ದರು. ಮೂಡೆ ಅಂದ್ರೆ ಮಳೆಗಾಲದಲ್ಲಿ ಛತ್ರಿ ಬದಲು ಅಡಿಕೆ ಹಾಳೆಯಲ್ಲಿ ಮಾಡಿದ ಮೂಡೆ ಉಪಯೋಗಿಸುವುದು..ಅದು ಛತ್ರಿ ತರಾನೇ ಇರುತ್ತೆ. ಅದನ್ನು ಹಿಡಿದರೆ ನಾವು ಸ್ವಲ್ಪನೂ ನೆನೆಯುವುದಿಲ್ಲ. ಆವಾಗ ನಡೆದ ತಮಾಷೆ ಒಂದು ಹೇಳ್ತೀನಿ ಕೇಳಿ: ನನ್ನ ತಮ್ಮನಿಗೆ ಅಮ್ಮ ಯಾವಾಗಲೂ ಹುಡುಗಿ ತರ ಡ್ರೆಸ್ ಮಾಡೋದು. ಆತ ಪೆಟ್ಟಿಕೋಟ್, ನನಗೆ ತಂದ ಹಾಗೇ ಅವನಿಗೆ ಲಂಗ-ಧಾವಣಿ ತರುತ್ತಿದ್ದರು. ಯಾಕಂದ್ರೆ ಅವನಿಗೆ ನನ್ನ ಡ್ರೆಸ್ ಗಿಂತ ಸ್ವಲ್ಪ ಚೇಂಜ್ ಇದ್ರೆ...ನನ್ನ ಡ್ರೆಸ್ ಬೇಕೆಂದು ಅಳುತ್ತಿದ್ದ. ಹಾಗೇ ಒಂದು ದಿನ ಜೋರು ಮಳೆಯಲ್ಲಿ ನಾವಿಬ್ಬರೂ ಮೂಡೆ ಹಿಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನ ಜೊತೆ ಇದ್ದೇವು. ಆಗ ನಮ್ಮೂರ ಪಕ್ಕದೂರಿನ ಬೆಳ್ಯಪ್ಪಣ್ಣ ಬಂದು ಅಮ್ಮನಿಗೆ 'ಗೊತ್ತೇ ಇಜ್ಜಿಯೇ ಅಕ್ಕ. ಈರೆಗ್ 2 ಜನಲಾ ಪೊಣ್ಣು ಜೋಕುಲೆನಾ? ಅಮರ್ ಜೋಕುಲಾ ಎಂಚ?(ಗೊತ್ತೇ ಇರಲಿಲ್ಲ ಅಕ್ಕ,.ನಿಮಗೆ ಇಬ್ಬರೂ ಹೆಣ್ಣುಮಕ್ಖಳಾ? ಅವಳಿಗಳಾ?) ಅಂದಿದ್ದರು. ಈ ಮಳೆಗಾಲ, ಅಮ್ಮನ ಜೊತೆ ಮೂಡೆ ಹೊತ್ತು ಹೋಗುತ್ತಿದ್ದ ದಿನಗಳೆಲ್ಲಾ ತುಂಬಾ ಖುಷಿ ಕೊಡುತ್ತಿದ್ದವು. ಈವಾಗ ಮಳೆ ಬಂದ್ರೆ ಸಾಕು ಏನೋ ಒಂಟಿತನ, ಮನೆ, ಅಮ್ಮನ ನೆನಪಾಗುತ್ತೆ. ಮಳೆಗಾಲದಲ್ಲಿ ನಮ್ಮೂರ ಹಳ್ಳಿಯಲ್ಲಿ, ಗದ್ದೆಯಲ್ಲಿ, ತೋಟದಲ್ಲೇ ಇದ್ದುಬಿಡೋಣ ಅನಿಸಿಬಿಡುತ್ತೆ.
ಆದರೆ ಬೆಂಗಳೂರು?
ಮಳೆ ಬಂದ್ರೆ ರಸ್ತೆ ಕಾಣಿಸಲ್ಲ..ಬರೇ ಕಟ್ಟಡಗಳು..ಬರೇ ವಾಹನಗಳು..ಅಬ್ಬಬ್ಬಾ! ಹಸಿರೆಲ್ಲಿ ಕಾಣಿಸಿತು? ಹಸಿರು ಕಾಣಬೇಕಾದರೆ..ಲಾಲ್ ಬಾಗ್, ಕಬ್ಬನ್ ಪಾರ್ಕ್ ಗೆ ಹೋಗಬೇಕು. ಮಳೆ ಬಂದ್ರೆ ಸಾಕು, ರಸ್ತೆ ಬದಿಯಲ್ಲಿ ಕೇಬಲ್ ನವರು ತೆಗೆದ ಹೊಂಡಗಳು, ಬಿಬಿಎಂಪಿನವರು ವರ್ಷವಿಡೀ ಕಾಮಗಾರಿ ನಡೆಸುವ 'ಚರಂಡಿ ಹೊಂಡಗಳು' ಅವುಗಳೆಲ್ಲಾ ತುಂಬಿಕೊಂಡು..ಆ ಕೊಳಚೆ ನೀರು ರಸ್ತೆಗೆ ಹರಿದು..ಅಲ್ಲೇ ಜನರು ನಡೆದುಹೋಗಬೇಕು. ಅಬ್ಬಾ! ಮಳೆ ಬಂದ್ರೆ ಸಾಕು ಹೊರಗಡೆ ಹೋಗೋದೇ ಬೇಡ ಅನಿಸುವಷ್ಟು ಹಿಂಸೆಯೆನಿಸುತ್ತೆ. ಬೆಂಗಳೂರಿನಲ್ಲಿ ಕುಳಿತು ಮಳೇನೇ ಬೇಡಪ್ಪಾ ಅನ್ನೋರು ಹಳ್ಳಿಗಳಿಗೆ ಹೋಗಿ ಮಳೆ ಬರಲೀ ಎನ್ನುತ್ತೇವೆ. ನಮ್ಮೂರ ಹಳ್ಳಿಯಾಗೆ ಮಳೆ ಬಂದ್ರೆ ಎಷ್ಟು ಖುಷಿ ಆಗುತ್ತೆ ಅಲ್ವಾ?
ಫೋಟೋ: ಎನ್.ಕೆ.ಎಸ್.