Friday, September 26, 2008

ಕಣ್ಣಂಚಿನಲ್ಲಿ ರೇಡಿಯೋ ನೆನಪು..

ಹೌದು..ನಮ್ಮನೆಲ್ಲೊಂದು ಫಿಲಿಪ್ ರೇಡಿಯೋ ಇತ್ತು. ಅಂದ್ರೆ ಸುಮಾರು 20 ವರ್ಷಗಳ ಹಿಂದೆ. ಆವಾಗ ನಮ್ಮ ಹಳ್ಳಿಯಲ್ಲಿ ಎಲ್ಲಿಯೂ ಟಿ.ವಿ. ಇರಲಿಲ್ಲ. ಎಲ್ಲರ ಮನೆಯಲ್ಲೂ ರೇಡಿಯೋ. ಬೆಳಿಗೆದ್ದಾಗ ಎಲ್ಲರ ಮನೆಯ ರೇಡಿಯೋ ಗಳಿಂದ ಸುಪ್ರಭಾತ, ವಾರ್ತೆ...! ರೇಡಿಯೋದಲ್ಲಿ ಬಂದ ವಾರ್ತೆ ಎಲ್ಲರ ಮನೆಮನೆಯಲ್ಲೂ ದೊಡ್ಡ ಸುದ್ದಿ. ಪ್ರತಿ ಮನೆಯವರೂ ವಾರ್ತೆಯಲ್ಲಿ ಏನು ಬರುತ್ತದೆ? ಎಂದು ಕಾದು ಕುಳಿತಿರುತ್ತಿದ್ದರು. ಪತ್ರಿಕೆ, ಟಿ.ವಿ.ಗಳ ಗಂಧಗಾಳಿಯೇ ಇಲ್ಲದ ನಮ್ಮ ಪುಟ್ಟ ಹಳ್ಳಿಗೆ ರೇಡಿಯೋ ನೇ ಎಲ್ಲ ಸುದ್ದಿಗಳನ್ನು ಹೇಳುತ್ತಿದ್ದು. ವಿಶೇಷವೆಂದರೆ, ಆ ಸುದ್ದಿಗಳು ಎಲ್ಲರಿಗೂ ಚೆನ್ನಾಗಿ ನೆನಪಿರುತ್ತಿದ್ದವು. ಆಮೇಲೆ ಕೆಲವು ಮಹತ್ವದ ಸುದ್ದಿಗಳು ಗದ್ದೆಗಳಲ್ಲಿ, ತೋಟಗಳಲ್ಲಿ, ಹುಲ್ಲು-ಸೊಪ್ಪು ಕೊಯ್ಯುಲು ಹೋಗುವ ಹೆಂಗಳೆಯರ ಬಾಯಲ್ಲಿ ದೊಡ್ಡ ಚರ್ಚೆಯಾಗುತ್ತಿದ್ದವು. ನಮ್ಮಜ್ಜ ಬೇಗನೆ ಮೂರ್ತೆಗೆ ಹೋದರೆ, ಆಮೇಲೆ ಬಂದು ವಾರ್ತೆಯಲ್ಲಿ ಏನಿತ್ತು? ಎಂದು ಅಜ್ಜಿಯನ್ನು ಕೇಳುವುದು ರೂಢಿ. ಗಡಿಯಾರಗಳೇ ಇಲ್ಲದ ಮನೆಯಲ್ಲಿ ರೇಡಿಯೋ ದಲ್ಲಿ ಗಂಟೆ ಹೇಳುವುದನ್ನೇ ಕಾಯುತ್ತಿದ್ದರು.

ನಮ್ಮನೆಯಲ್ಲಿಯೂ ಒಂದು ಫಿಲಿಪ್ ರೇಡಿಯೋ. ನಮ್ಮ ದೊಡ್ಡಮ್ಮನ ಮಗ ದೊಡ್ಡಣ್ಣ ಅದನ್ನು ಅಜ್ಜಿ ಮನೆಯಲ್ಲಿ ತಂದಿಟ್ಟಿದ್ದ. ಅವನಿಗೆ ಮನೆಗೆ ರೇಡಿಯೋ ತಂದಿದ್ದೇನೆಂಬ ಅಹಂ ಒಂದೆಡೆಯಾದರೆ, ನಮ್ಮನೆಯಲ್ಲಿ ಆ ರೇಡಿಯೋ ವನ್ನು 'ದೊಡ್ಡಣ್ಣನ ರೇಡಿಯೋ' ಅಂತಾನೇ ಕರೆಯುತ್ತಿದ್ದರು. ನಾವು ಮಕ್ಕಳಾರೂ ಮುಟ್ಟಬಾರದೆಂದು ಮಣ್ಣಿನ ಗೋಡೆಗೆ ದೊಡ್ಡ ಕಬ್ಬಿನ ಮೊಳೆ ಬಡಿದು ನೇತುಹಾಕಿದ್ದರು ನಮ್ಮಜ್ಜ..ಮುದ್ದಿನ ಮೊಮ್ಮಗನ ಪ್ರೀತಿಯ ರೇಡಿಯೋವನ್ನು. ನಮಗಂತೂ ದಿನ ಮೇಲೇ ಕತ್ತು ಮಾಡಿ..ರೇಡಿಯೋ ನೋಡಿ ನೋಡಿ ಕತ್ತೇ ನೋವಾಗಿಬಿಡ್ತಿತ್ತು. ರೇಡಿಯೋ ಕೇಳೊಂದ್ರೆ ನಮಗೆ ಏನೋ ಖುಷಿ, ಸಂಭ್ರಮ. ದೊಡ್ಡಣ್ಣ ಬಂದ ತಕ್ಷಣ ರೇಡಿಯೋ ಆನ್ ಮಾಡು ಅಂತಿದ್ದೀವಿ. ಬೆಳಿಗ್ಗಿನ ವಾರ್ತೆ ಕೇಳಕ್ಕೆ, ಮಧ್ಯಾಹ್ನದ ವಾರ್ತೆ, ಚಿತ್ರಗೀತೆಗಳು, ಸಂಜೆ ನಾಲ್ಕು ಗಂಟೆಯಿಂದ ಶುರುವಾಗುವ ಎಲ್ಲಾ ಕಾರ್ಯಕ್ರಮಗಳನ್ನು ನೋಡುತ್ತಿದ್ದೇವು. ಬುಧವಾರ ಬಂತೆಂದರೆ ರೇಡಿಯೋದಲ್ಲಿ ಬರುವ ಯಕ್ಷಗಾನ ಕೇಳಲು, ನಮ್ಮಮ್ಮನ ಜೊತೆ ಗಂಟು-ಮೂಟೆ ಕಟ್ಟಿಕೊಂಡು ಅಜ್ಜಿ ಮನೆಯಲ್ಲಿ ಹಾಜರ್. ಅವತ್ತು ಬೆಳಿಗ್ಗೆಯೇ ಮನೆಯಲ್ಲಿ ಎಲ್ಲರು ;'ಇವತ್ತು ಯಕ್ಷಗಾನ ಕೇಳಬೇಕು.,.ಯಾವ ಯಕ್ಷಗಾನವೋ.." ಅನ್ತಾ ಸಂಜೆಗೆ ಕಾಯುತ್ತಿರುತ್ತಾರೆ.

ವಾರದ ಕೆಲದಿನಗಳಲ್ಲಿ ಮಾತ್ರ ಮಂಗಳೂರು ಆಕಾಶವಾಣಿಯಿಂದ ಬಿತ್ತರವಾಗುತ್ತಿದ್ದ ತುಳು ಕಾರ್ಯಕ್ರಮಗಳನ್ನು ಮಾತ್ರ ಯಾರೂ ಮಿಸ್ ಮಾಡಿಕೊಳ್ಳುವಂತಿಲ್ಲ. ಅದನ್ನು ಕೇಳಿ ಆದ ಮೇಲೆ ಅಜ್ಜಿ ಮನೆಯ ಅಂಗಳದಲ್ಲಿ ಮನೆಯ ಎಲ್ಲರೂ ಕುಳಿತು ಚರ್ಚೆ ಮಾಡುತ್ತಾರೆ. ರಾಮಾಯಣ, ಮಹಾಭಾರತ ಕಥೆಗಳೇನಾದರೂ ಬಂದುವಾ..ಇಡೀ ರಾಮಾಯಣವೇ ಚರ್ಚೆಯ ವಸ್ತು. ನಾವು ಮಕ್ಕಳಂತೂ ಅದನ್ನೆಲ್ಲ ಅಚ್ಚರಿಯಿಂದ ಕೇಳುತ್ತಿದ್ದೇವು. ರಾಮಾಯಣದ ಕಥೆ ಹೇಳಿದ್ರೆ, 'ಅಯ್ಯೋ ರಾಮನಿಗೆ, ಸೀತೆಗೆ ಕಾಡಿನಲ್ಲಿ ಹೆದರಿಕೆಯಾಗುತ್ತಿರಲಿಲ್ಲವೇ? . ಪಾಪ,..ಅಪ್ಪನೇ ಮಗನನ್ನು ಕಾಡಿಗೆ ಕಳಿಸಬಾರದಿತ್ತು ಅಲ್ವಾ? ಕಾಡಿನಲ್ಲಿ ಮಳೆ, ಗುಡುಗು, ಗಾಳಿ ಬಂದಾಗ ಅವರು ಹೇಗೆ ಇರುತ್ತಿದ್ದರು?' ಇಂಥ ಅಸಂಬದ್ಧ ಪ್ರಶ್ನೆಗಳಿಗೆ ನಮ್ಮಮ್ಮ, ಅಜ್ಜಿ, ಮನೆಯವರೆಲ್ಲ ಉತ್ತರ ಹೇಳಿ ಹೇಳಿಯೇ ಸುಸ್ತಾಗುವರು. ವಾರ್ತೆಯಲ್ಲಿ ವೀರಪ್ಪನ್ ಸುದ್ದಿ ಏನಾದ್ರೂ ಹೇಳಿದ್ರೋ...ನಮ್ಮ ದೊಡ್ಡಣ್ಣನ ಪೂರ್ತಿ ವೀರಪ್ಪನ್ ಕಥೆ ಹೇಳಿಬಿಡುತ್ತಿದ್ದ. ಅಬ್ಬಾ! ನಮ್ಮೂರಿಗೂ ವೀರಪ್ಪನ್ ಬಂದ್ರೆ..ಅಂತ ನಾವೂ ಭಯಗೊಳ್ಳುತ್ತಿದ್ದೇವು.

ನಮ್ಮನೆಗೆ ಬಂದಿದ್ದು ಅದೇ ಒಂದು ರೇಡಿಯೋ..ತುಂಬಾ ವರ್ಷಗಳ ಕಾಲ ಬಾಳಿಕೆ ಬಂದಿತ್ತು. ಅದದ ಒಳಗೆ ಜಿರಲೆ ನುಗ್ಗಿದರೆ, ದೊಡ್ಡಣ್ಣ ರಿಪೇರಿಗೆ ಕೂರುವನು. ಅವನು ರಿಪೇರಿ ಮಾಡುವಾಗ ಇಷ್ಟೊಂದು ಮಾತನಾಡುವ ರೇಡಿಯೋ ಒಳಗೆ ಏನಿದೆ ಎನ್ನುವ ಕುತೂಹಲ ನಮಗೆ. ಮಕ್ಕಳೆಲ್ಲ ಸುತ್ತಲು ಕುಳಿತು ಅವನು ಅದನ್ನು ತೆರೆಯುವುದನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದೇವು. ಆದರೆ ಅದರ ಒಳಗಿರುವ ವಯರ್ ಗಳು, ಸಣ್ಣ ಸಣ್ಣ ಸಾಧನಗಳನ್ನು ಕಂಡಾಗಲೆಲ್ಲಾ ನಮಗೆ ನಿರಾಶೆಯಾಗುತ್ತಿತ್ತು. ಅದೇಗಪ್ಪಾ..ಈ ರೇಡಿಯೋದ ಒಳಗೆ ನುಗ್ಗಿ ಜನ ಮಾತಾಡ್ತಾರೆ..ಅನ್ನೋದಯ ನಮ್ಮ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.
ಮಳೆ ಬಂದರೆ ಸಾಕು..ನಮ್ಮ ರೇಡಿಯೋಗೆ ಜ್ಷರ ಬರುತ್ತಿತ್ತು..ಶೀತ ಆಗಿ ನೆಗಡಿಯಿಂದ ಬಳಲುತ್ತಿದ್ದವರಂತೆ ನಮ್ಮ ರೇಡಿಯೋನು ಕೊಯ್ ಕೊಯ್ ಅನ್ತಾ ಇತ್ತು ವಿನಹಃ ಮಾತಾಡುತ್ತಿರಲಿಲ್ಲ. ಆವಾಗ ಅಮ್ಮನವರು, ಮಳೆ ಅಲ್ವಾ? ರೇಡಿಯೋಗೂ ಜ್ವರ! ಅಂದು ಹೇಳುತ್ತಿದ್ದರು. ಆಮೇಲೆ ಏನಾಯ್ತೋ ರೇಡಿಯೋ ಕೆಟ್ಟು ಹೋಯಿತು..ಅದನ್ನು ದೊಡ್ಡಣ್ಣ ರಿಪೇರಿ ಮಾಡಿದರೂ ಅದು ಸರಿಯಾಗಲೇ ಇಲ್ಲ. ಅದಕ್ಕೆ ರಿಪೇರಿ ಅಂಗಡಿಗೆ ಕೊಟ್ಟ. ಆದರೆ ಮತ್ತೆ ರಿಪೇರಿ ಆಗಿ ವಾಪಸ್ ಮನೆಗೆ ಬರಲೇ ಇಲ್ಲ..! ಬೇರೇ ರೇಡಿಯೋನು ಮನೆಗೆ ಬರಲೇ ಇಲ್ಲ. ಬಹುಶಃ ನಮ್ಮನೆಯಲ್ಲೂ ರೇಡಿಯೋದ ನೆನಪಿನ ಹೆಜ್ಜೆಗಳೂ ಮರೆತೇ ಹೋಗಿರುವಂತಿದೆ. ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ!!

5 comments:

Chevar said...

Your post gave a some good old memories of mine also. Thanks for the posts. Three posts in a day!!!!!!!!!!

ವಿಕಾಸ್ ಹೆಗಡೆ said...

ಒಳ್ಳೇ ನೆನಪುಗಳು.ನಮ್ಮನೇಲ್ಲೂ ಕೂಡ ಒಂದು ಮರದ ಡಬ್ಬಿಯಂತಿದ್ದ ರೇಡಿಯೋ ಒಂದಿತ್ತು. ಅದರಲ್ಲಿ ಪ್ರದೇಶ ಸಮಾಚಾರ ಕೇಳುತ್ತಿದ್ದುದೇ ಮಜಾ. ನಮ್ಮದೂ ಹಾಗೇ ಕೆಟ್ಟು ಹೋಗಿ ರಿಪೇರಿಗೆ ಅಂಗಡಿಗೆ ಹೋದುದು ವಾಪಸ್ ಬರಲೇ ಇಲ್ಲ :(

ಈಗೇನಿದ್ದರೂ ರೇಡಿಯೋಗಳು ಸಖತ್ ಹಾಟ್ ಮಗಾ! :)

shivu K said...

ಮಧುರವಾದ ಬಾಲ್ಯದ ನೆನಪುಗಳನ್ನು ಮತ್ತೆ ನೆನೆಪಿಸಿದಿರಿ.

ಬರೆವಣಿಗೆಯು ಚಿತ್ರ ಕಣ್ಣಿಗೆ ಕಟ್ಟುವಂತಿದೆ. ಮುಂದುವರಿಸಿ
ದಿನಾ ಬರುತ್ತೇನೆ.

ಶಿವು.ಕೆ

KRISHNA said...

ಚಿಕ್ಕವನಿದ್ದಾಗ ರಾತ್ರಿ ಕಣ್ಣಿಗೆ ನಿದ್ರೆ ಹತ್ತೋ ವರೆಗೂ ಚಾಪೆ ಮೇಲೆ ವಿವಿಧ ಭಾರತಿಲಿ ಯಾವುದಾದರೂ ಹಳೆ ಹಾಡು ಕೇಳ್ತಾ ನಿದ್ದೆಗೆ ಜಾರ್ತಾ ಇದ್ದ ನೆನಪು. ಮತ್ತೆ.... ಬುಧವಾರದ ಯಕ್ಷಗಾನ ಕೇಳಲು ಕಷ್ಟಪಟ್ಟು ನಿದ್ದೆಗೆಟ್ಟು ಕೂತು... ಕೂತರೂ... ೯.೪೫ರ ಹೊತ್ತಿಗೆ ಅದು ಹೇಗೋ ನಿದ್ದೆಗೆ ಜಾರುತ್ತಿದ್ದೆ...

Basavaraj.S.Pushpakanda said...

Beautifully written.. U have taken me into older days by ur thoughts.I have also gone an experience like this and i will share with u.When i was in training for acting, me and my friends 5 of them were staying in hostel.then the entertainment media for us was only the FM.We were fighting for our stations (there was 10 stations and 5 of them)though we were not able to hear one complete song we used to change from station to station too many times.It got damaged and then it was not repaired at all .But amazing matter is that we were not in the situation to repair the FM because we were not let to go out.now we all are working for entertainment media and helping people to get entertainment at remote places too.i also wiash u to write some more thoughts like this which can take us to older days.....lets continue !!!!!