Friday, January 23, 2009

ನಮ್ಮೂರಲ್ಲೊಂದು 'ಟಾಕೀಸಲ್ಲ', ಬರೇ 'ಗುಲಾಬಿ'..!

ನಮ್ಮೂರ ಶೇಷಮ್ಮಕ್ಕ ಅಂದ್ರೆ ಅಕ್ಕರೆ, ಪ್ರೀತಿ. ನಮ್ಮನೆಯಿಂದ ಮೂರ್ನಾಲ್ಕು ಮೈಲಿ ನಡೆದರೆ ಶೇಷಮ್ಮಕ್ಕನ ಮನೆ. ೫೫ ದಾಟಿರುವ ಆಕೆ ಅತ್ತ ಅಜ್ಜಿಯೂ ಅಲ್ಲ, ಇತ್ತ ಆಂಟಿಯೂ ಅಲ್ಲ. ಕೂದಲೂ ನರೆತರೂ , ಅರ್ಧಡಜನ್ ಗಿಂತ ಹೆಚ್ಚು ಮಕ್ಕಳಿದ್ದರೂ, ಮೊಮ್ಮಕ್ಕಳದ್ರೂ ಅವಳದು ಇನ್ನೂ ಹರೆಯದ ಉತ್ಸಾಹ. ಶೇಷಮ್ಮಕ್ಕ ಅಂದ್ರೆ ಊರಿಗೆಲ್ಲಾ ಪ್ರೀತಿ. ತಮ್ಮ ಮಕ್ಕಳಂತೆ ಊರವರನ್ನೂ ತುಂಬಾನೇ ಪ್ರೀತಿಸುವ ವಿಶಾಲ ಹೃದಯ ಅವಳದ್ದು. ಅವಳಿಗೆ ಏಳು ಜನ ಮಕ್ಕಳಲ್ಲಿ ನಾಲ್ಕು ಹೆಣ್ಣು ಮತ್ತು ಮೂರು ಗಂಡು. ಮೂವರು ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಟ್ಟಾಗಿದೆ, ಕೊನೆಯವಳು ಬಾಕಿ..ಗಂಡು ಮಕ್ಕಳೆಲ್ಲಾ ಹೊರಗಡೆ ಒಳ್ಳೇ ಕೆಲ್ಸದಲ್ಲಿದ್ದಾರೆ.

ನಾನು ಊರಿಗೆ ಹೋದರೆ ಶೇಷಮ್ಮಕ್ಕನ ಮನೆಗೆ ಹೋಗೋದನ್ನು ಮರೆಯಲ್ಲ. ನಾನು ಬರ್ತೀನಿ ಅಂದ್ರೆ ಸಾಕು ರೊಟ್ಟಿ ಮತ್ತು ಮೀನು ಸಾರು ಮಾಡಿ ಕಾಯೋಳು ಶೇಷಮ್ಮಕ್ಕ. ಬಟ್ಟಲು ತುಂಬಾ ಪ್ರೀತಿನ ನೀಡೋಳು. ಆಕೆಯ ಅಮ್ಮನ ಮಮತೆಯನ್ನು ಮನತುಂಬಾ ತುಂಬಿಸಿಕೊಳ್ಳೋ ಹಂಬಲ ನನ್ನದು. ಕಳೆದ ಸಲ ಊರಿಗೆ ಹೋದಾಗ ಅವಳ ಮನೆಗೆ ಹೋಗಲು ಮರೆಯಲಿಲ್ಲ. ಒಂದು ಮಟಮಟ ಮಧ್ಯಾಃಹ್ನ ಶೇಷಮ್ಮಕ್ಕನ ಮನೆಗೆ ಹೋದೆ. ನಾನು ಹೋಗಿದ್ದೇ ತಡ..ದೊಡ್ಡ ಚೊಂಬಿನಲ್ಲಿ ನೀರು ತಕೊಂಡು ಬಂದು ನೆಂಟರಿಗೆ ಮನೆ ಒಳಗೆ ಹೋಗುವಾಗ ನೀರು ಕೊಡ್ತಾರಲ್ಲಾ..ಹಾಗೇ ನೀರು ಕೊಟ್ಟು ನನ್ನ ಬರಮಾಡಿಕೊಂಡಳು. ಮನೆ ನೋಡಿದರೆ ಎಂದಿನಂತೆ ಇರಲಿಲ್ಲ. ಎದುರಿನ ಚಾವಡಿಯಲ್ಲಿ ದೊಡ್ಡ ಸೋನಿ ಟಿವಿ ಮಾತಾಡುತ್ತಾ ಕುಳಿತಿತ್ತು. ಪದೇ ಪದೇ ಬೊಬ್ಬಿಡುವ ಫೋನ್ ಕೂಡ ಬಂದಿದೆ. ಚಿಕ್ಕಮಗಳು ಕಾಣಿಸಲಿಲ್ಲ..ಅವಳೂ ಯಾವುದೇ ಕೆಲಸಕ್ಕೆ ಹೊರಗೆ ಹೋಗುತ್ತಿದ್ದಾಳೆ. ನಾನು ಹೋದಾಗ ಶೇಷಮ್ಮಕ್ಕ ಒಬ್ಬಳೇ ಕುಳಿತು ಟಿವಿ ನೋಡುತ್ತಾ, ತನ್ನಷ್ಟಕ್ಕೆ ನಗುತ್ತಾ, ಖುಷಿಪಡುತ್ತಾ, ಆರಾಮವಾಗಿ ಕಾಲುಚಾಚಿ ಈಜಿ ಚಯರ್ ನಲ್ಲಿ ಕುಳಿತಿದ್ದಳು...ಥೇಟ್ ಒಂದೇ ಸಲ ನಂಗೆ ಕಾಸರವಳ್ಳಿಯವರ 'ಗುಲಾಬಿ ಟಾಕೀಸಿ'ನ ಗುಲಾಬಿಯ ಹಾಗೇ. ..

ಮೀನು ಸಾರು ಮತ್ತು ರೊಟ್ಟಿನೂ ರೆಡಿಯಾಗಿತ್ತು. ಆವಾಗ ಅವಳು ನಾನು ಹೇಗಿದ್ದೇನೆ? ಬೆಂಗಳೂರು ಹೇಗಿದೆ? ಕೆಲಸ ಹೇಗಾಗುತ್ತಿದೆ? ಎನ್ನುವ ಮಾಮೂಲಿ ಪ್ರಶ್ನೆಗಳ ಸುರಿಮಳೆ ಗೈಯಲಿಲ್ಲ. ಬೆಂಗಳೂರಿನಲ್ಲಿ ಅಂಬರೀಷ್ ಕಾಣಕ್ಕೆ ಸಿಗ್ತಾನಾ? ವಿಷ್ಣುವರ್ಧನ್ ಸಿಗ್ತಾನಾ? ಶ್ರುತಿ,ಶಶಿಕುಮಾರ್ ಸಿಗ್ತಾರಾ? ಅಂತ..ಯಪ್ಪಾ..ನಾನು ಟೋಟಲೀ ಕನ್ ಫ್ಯೂಸ್! ನನ್ನ ಉತ್ತರಕ್ಕೂ ಕಾಯದೆ, ಅಂಬರೀಷ್ , ವಿಷ್ಣುವರ್ಧನ್ ಸಿನಿಮಾ ಭಾಳ ಇಷ್ಟ..ಶ್ರುತಿಯ ಅಳುಮುಂಜಿ ಸಿನಿಮಾ ನೋಡಿದಾಗ..ಕರುಳು ಕಿತ್ತು ಬರುತಂತೆ...ಅವಳು ಸೀರೆ, ಲಂಗಧಾವಣಿಯಲ್ಲೇ ಇರ್ತಾಳಂತೆ..ಅರ್ಧಂಬರ್ಧ ಡ್ರೆಸ್ ಹಾಕೋಲ್ಲಂತೆ..ಹಾಗಾಗಿ ಭಾಳ ಇಷ್ಟ ನೋಡೋಕೆ" ಅಂತ ಒಂದೇ ಉಸಿರಿಗೆ ಹೇಳಿಬಿಟ್ಟಾಗ ಮೂಗಿನ ಮೇಲೆ ಬಂದು ನಿಂತಿದ್ದ ನನ್ನ ಬಂಪರ್ ಕೋಪ ಕೂಡ ಕರಗಿ ತಣ್ಣಗಾಗಿ ಹೋಗಿತ್ತು. ಆಕೆಯ ಮುಗ್ಧ, ಪ್ರಾಮಾಣಿಕ ಮಾತು..ಅದನ್ನು ಹೇಳೋ ಸ್ಟೈಲ್ ಹಾಗಿತ್ತು. ಅವಳಿಗೆ ಕುತೂಹಲ ಅಂದ್ರೆ..ಈ ನಟ-ನಟಿಮಣಿಯರೆಲ್ಲಾ ಬೆಂಗಳೂರಲ್ಲೇ ಇರ್ತಾರೆ..ಅಂತ ಮಕ್ಕಳು ಹೇಳಿರ್ತಾರೆ..ಹಾಗೇ ನಾನು ಬೆಂಗಳೂರಿನಲ್ಲಿ ಇರೋದ್ರರಿಂದ ಊರಲ್ಲಿದ್ದ ಹಾಗೇ ಅಕ್ಕ-ಪಕ್ಕನೇ ಇರ್ತಾರೆ..ಅಂಥ ಅವಳ ಮುಗ್ಧ ನಂಬಿಕೆ!.ಆಮೇಲೆ ಅವಳಿಗೆಲ್ಲಾ ವಿವರಿಸಿ ಹೇಳೋವಷ್ಟರಲ್ಲಿ..ಬಟ್ಟಲು ತುಂಬಾ ಹಾಕಿಕೊಟ್ಟ ಮೀನುಸಾರು, ರೊಟ್ಟಿ ಖಾಲಿಯಾಗಿ..ತಲೆನೂ ಖಾಲಿ ಖಾಲಿ ಅನಿಸಿ ಇನ್ನೊಂದು ಬಟ್ಟಲು ರೊಟ್ಟಿ ತಿನ್ನುವ ಮಟ್ಟಕ್ಕೆ ಬಂದು ತಲುಪಿದ್ದೆ ನಾನು. ಪಾಪ! ಶೇಷಮ್ಮಕ್ಕ ಒಬ್ಬಳೇ ಮನೇಲಿರ್ತಾಳಂತ ಮಕ್ಕಳು ಟಿವಿ ತಂದಿದ್ದರು..ಬೋರ್ ನಿವಾರಿಸೋದಕ್ಕೆ..ಇಳಿವಯಸ್ಸಿನತ್ತ ಸಾಗೋ ಒಂಟಿ ಜೀವಕ್ಕೆ ಕಂಪನಿ ಕೊಡಾಕೆ!!!

ಇಷ್ಟಕ್ಕೂ ನಂಗೆ ಈ ಶೇಷಮ್ಮಕ್ಕ ನೆನಪಾಗಿದ್ದು ಮೊನ್ನೆ ಗುರುವಾರ 'ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಪ್ರದರ್ಶನಗೊಂಡ ಕಾಸರವಳ್ಳಿಯವರ 'ಗುಲಾಬಿ ಟಾಕೀಸ್' ಎಂಬ ಒಳ್ಳೆ ಸಿನಿಮಾನ ನೋಡಿದಾಗಲೇ! ನಗರ ಎಷ್ಟೇ ಬದಲಾಗುತ್ತಾ ಹೋದರೂ, ಹಳ್ಳಿಯಲ್ಲಿರುವ ಮುಗ್ಧತೆ, ಪ್ರಾಮಾಣಿಕತೆ ಎಂದಿಗೂ ಬದಲಾಗಿಲ್ಲ..ಅದೇ ಕಾರಣದಿಂದ ಹಳ್ಳೀನ ಇನ್ನೂ ನಾವು ಪ್ರೀತಿಯಿಂದ ಅಪ್ಪಿಕೊಳ್ತಿವಿ ಅನಿಸುತ್ತೆ.

Thursday, January 15, 2009

ಅಂಚೆಯಣ್ಣಂದಿರ ಬದುಕು-ಭಾವ...

ಎಂಥ ಗೊತ್ತುಂಟಾ? ಈ ಬಾರಿ ನಮ್ಮೂರ ಪೋಸ್ಟ್ ಮ್ಯಾನ್ಗಳ ಕುರಿತು ಬರೆಯೋಣಾಂತ. ನಾನು ಒಂದನೇ ಕ್ಲಾಸಿನಿಂದ ಹತ್ತನೇ ಕ್ಲಾಸು ತನಕ ನಮ್ಮೂರಲ್ಲೇ ಓದಿದ್ದು. ಆವಾಗ ಪೋಸ್ಟ್ ಮ್ಯಾನ್ಗಳು ನಮ್ಮ ಕ್ಲಾಸಿಗೆ ಬಂದು ಪತ್ರ ಹಂಚುತ್ತಿದ್ದರು. ಮಧ್ಯಾಹ್ನ ೧೨ ರಿಂದ ೧ ಗಂಟೆಯೊಳಗೆ ಪೋಸ್ಟ್ಮ್ಯಾನ್ ಕ್ಲಾಸಿನಲ್ಲಿ ಬಂದು ಪೋಸ್ಟ್ ಪೋಸ್ಟ್....ಎನ್ನುತ್ತಿದ್ದರು. ನಾವೆಲ್ಲ ನಮ್ಮನೆಗೆ ಪೋಸ್ಟ್ ಇದೆಯಾ? ಯಾರದು ಇರಬಹುದು? ಯಾರಿಗಿರಬಹುದು...ಹೀಗೇ ಕುತೂಹಲಭರಿತ ಪ್ರಶ್ನೆಗಳೊಂದಿಗೆ ಚಿಲಿಪಿಲಿಗುಟ್ಟುವ ಹಕ್ಕಿಗಳಂತೆ ಕೈ-ಕಾಲು ಅಲ್ಲಾಡಿಸಕ್ಕೂ ಬಿಡದೆ ಪೋಸ್ಟ್ ಮ್ಯಾನ್ ಶೀನಪ್ಪಣ್ಣ ನನ್ನು ಸುತ್ತುವರಿಯುತ್ತಿದ್ದೇವು. ತರಗತಿ ಮುಂದೆ ನಿಂತು ಹೆಸರು, ಮನೆ, ವಿಳಾಸ ಕೂಗಿ ಹೇಳುವಾಗ ಪತ್ರ ತೆಗೆದುಕೊಳ್ಳಲು ತಾ ಮುಂದೆ-ತಾ ಮುಂದೆ ಎನ್ನುವ ಸರದಿ ನಮ್ಮದು. ನನ್ನ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಕುಸುಮನ ಮನೆಗೆ ಹೆಚ್ಚಾಗಿ ಪತ್ರಗಳು ಬರುತ್ತಿದ್ದರಿಂದ ಅವಳಿಗೆ ಸ್ವಲ್ಪ ಹೆಮ್ಮೆ. ಪ್ರತಿ ಕ್ಲಾಸಿಗೂ ಹೋಗಿ ಪೋಸ್ಟಮ್ಯಾನ್ ಶೀನಪ್ಪಣ್ಣ ಪತ್ರ ವಿತರಿಸಿ ಬರುವಾಗ ತಡವಾಗುತ್ತಿತ್ತು. ಆಮೇಲೆ ಮುಖ್ಯವಾದ ಪತ್ರಗಳನ್ನು ಹಿಡಿದುಕೊಂಡು ತಮ್ಮ ಹಳೇ ಸೈಕಲ್ ತುಳಿಯುತ್ತಾ ಮುಂದೆ ಸಾಗೋ ಶೀನಪ್ಪಣ್ಣನನ್ನು ನೋಡೋದೇ ಖುಷಿ. ಶಾಲೆಯ ಹೊರಗಡೆ ಸೈಕಲ್ ನಿಲ್ಲಿಸಿ ಒಂದು ಕ್ಲಾಸ್ ರೂಂಗೆ ಹೊಕ್ಕರೆ, ಮತ್ತೊಂದು ಕ್ಲಾಸಿನ ಮಕ್ಕಳಿಗೆ ಅವರ ಸೈಕಲ್ ರಿಪೇರಿ ಮಾಡೋದೇ ಕೆಲಸ. ಹಾಗಾಗಿ ಅವರ ಸೈಕಲ್ ಗೆ ಬೆಲ್ ಕೂಡ ಇರಲಿಲ್ಲ. ನಮ್ಮ ಕ್ಲಾಸಿನ ಕುಸುಮಾಧರ ಹ್ಯಾಂಡಲ್ ಮುರಿದಿದ್ದು ಈಗಲೂ ನೆನಪಿದೆ.

ಇನ್ನೊಬ್ಬ ಪೋಸ್ಟ್ ಮ್ಯಾನ್ ಮೋನಪ್ಪಣ್ಣ. ನಮ್ಮ ಮನೆ ಕಡೆ ಬರುವವರು ಮೋನಪ್ಪಣ್ಣ. ನಾನು ಹುಟ್ಟಿದಂದಿನಿಂದಲೂ ನಾನು ಅವರನ್ನೇ ನೋಡುತ್ತಿದ್ದೇನೆ. ಈಗಲೂ ಮೋನಪ್ಪಣ್ಣ ಹಾಗೇ ಇದ್ದಾರೆ ಗುಂಡುಗುಂಡಾಗಿ..ಅದೇ ಬಣ್ಣ ಮಾಸಿದ ಹಳೆಯ ಸೈಕಲ್, ಮದುವೆಯಾಗಿ ಮಕ್ಕಳಾದ್ರೂ ಪಟಪಟಾಂತ ಹೊಲ-ಗದ್ದೆ ದಾಟಿ, ಅದೇ ಯುವ ಉತ್ಸಾಹದಿಂದ ಬಿಸಿಲು, ಮಳೆಗಾಳಿ, ಚಳಿ ಇದ್ಯಾವುದನ್ನೂ ಲೆಕ್ಕಿಸದೆ ಪತ್ರ ರವಾನೆ ಮಾಡ್ತಾರೆ. ಆದ್ರೆ ಅವರಿಗೆ ಸೈಕಲ್ ಒಂದು ನೆಪ ಅಷ್ಟೇ..ಅರ್ಧ ದಾರಿವರೆಗೆ ಸೈಕಲ್ ನಲ್ಲಿ ಹೋಗಬಹುದು..ಆಮೇಲೆ ಬರೀ ಕಾಲ್ನಡಿಗೆ. ಸೂರ್ಯೋದಯದ ಸಮಯದಲ್ಲಿ ಎದ್ದು ಈ ಪೋಸ್ಟ್ ಮ್ಯಾನ್ ಗಳು ಸೂರ್ಯಾಸ್ತವಾದರೂ ಮನೆಗೆ ಮರಳುವುದು ಗ್ಯಾರಂಟಿ ಇಲ್ಲ. ಯಾಕಂದ್ರೆ ಪತ್ರ ಹಂಚಿ ಮುಗಿದಿರುವುದಿಲ್ಲ. ಸಿಗುವ ಸರ್ಕಾರದ ಪುಡಿಗಾಸಿಗೆ ಇವರ ಪ್ರಾಮಾಣಿಕ ಕೆಲಸ ನೋಡಿದಾಗ ಮನಸ್ಸು ಅಯ್ಯೋ ಅನಿಸುತ್ತೆ. ಸಂಜೆಯಾಗುತ್ತಿದ್ದಂತೆ ಮುಖ ಕಪ್ಪಿಟ್ಟುಕೊಂಡು, "ಎಂಚಿನ ಮಾರಾಯ್ರೆ ಈ ಬೇಲೆ ಏರ್ ಲಾ ಮಲ್ಪಯೆರ್(ಎಂಥದ್ದು ಮಾರಾಯ್ರೆ..ಈ ಕೆಲಸ ಯಾರೂ ಮಾಡಲಾರರು) " ಅನ್ತಾರೆ.

ಕಲಾಂಜೀ ರಾಷ್ಟ್ರಪತಿಯಾಗಿದ್ದಾಗ ಒಂದು ಬಾರಿ ದೇಶದ ಬೇರೆ ಬೇರೆ ಕಡೆಯ 150ಕ್ಕೂ ಹೆಚ್ಚು ಪೋಸ್ಟ್ ಮ್ಯಾನ್ ಗಳನ್ನು ಮನೆಗೆ ಕರೆಸಿಕೊಂಡಿದ್ದರಂತೆ. ಹಳ್ಳಿಯಲ್ಲಿ ತೆವಳುತ್ತಾ, ನಡೆಯುತ್ತಾ, ಸೈಕಲ್ ತುಳಿಯುತ್ತಾ ಪತ್ರವಿತರಿಸುವ ಪೋಸ್ಟ್ ಮ್ಯಾನ್ಗಳಿಗೆ ಹಳ್ಳಿ ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಅವರ ಕುರಿತು ಮಾತನಾಡಿದ ಕಲಾಂ, "ನೀವು ನಿಮ್ಮ ಜನ್ಮದಲ್ಲಿ ನಯಾಪೈಸೆ ಲಂಚ ಮುಟ್ಟಿದವರಲ್ಲ. ನಿಯತ್ತಾಗಿ ಕೆಲಸ ಮಾಡಿದವರು. ನೀವು ಈ ದೇಶಕ್ಕೆ ಸಲ್ಲಿಸಿದ ಸೇವೆ ಅಗಾಧವಾದುದು. ಅದಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಕ್ಕಿಲ್ಲದಿರಬಹುದು. ಆದರೂ ನೀವು ಅದಕ್ಕೆ ತಲೆಕೆಡಿಸಿಕೊಳ್ಳದೇ ಕರ್ತವ್ಯವನ್ನು ಕಡೆಗಣಿಸಿದವರಲ್ಲ. ಮಳೆಬರಲಿ, ಬಿಸಿಲು ಉಕ್ಕಲಿ, ಚಳಿ ಅಪ್ಪಲಿ ನೀವೆಂದೂ ಕೆಲಸಕ್ಕೆ ನೆಪ ಹೇಳಿದವರಲ್ಲ. ನಿಮ್ಮ ಕರ್ತೃತ್ವ ಶಕ್ತಿಗೆ ಶರಣೆಂಬೆ" ಎಂದರಂತೆ. "ಈಗ ನಿಮ್ಮ ವೃತ್ತಿಯೇ ಅವಸಾನದ ಅಂಚಿನಲ್ಲಿದೆ. ತಂತ್ರಜ್ಞಾನ ಮುಂದುವರಿದಂತೆ ಅಂಚೆ ಇಲಾಖೆಯನ್ನೇ ರದ್ದುಮಾಡಬಹುದು. 2020ರ ಹೊತ್ತಿಗೆ ಅಂಚೆ ಇಲಾಖೆಯನ್ನು ರದ್ದು ಮಾಡಬಹುದಾದ ಸ್ಥಿತಿ ನಿರ್ಮಾಣವಾಗಬಹುದು. ಇದು ಅನಿವಾರ್ಯ. ಇದು ಮುಪ್ಪಿನಲ್ಲಿ ಬೇಸರದ ಸಂಗತಿಯಾಗಿ ಕಾಡಬಾರದು. ಆಗ ಅಂಚೆ ಕಚೇರಿಯನ್ನು ಮಾಹಿತಿ ಕೇಂದ್ರವಾಗಿ ಪರಿವರ್ತಿಸಬೇಕಾಗುತ್ತದೆ. ಅದೇನೇ ಇರಲಿ ನಿಮ್ಮ ಸೇವೆ ಅನುಪಮ. ನಿಮ್ಮ ಕೆಲಸವನ್ನು ನಾ ಬೇರೆಯವರಿಗೆ ಹೋಲಿಸುವುದಾದರೆ ಅದು ಸೈನಿಕರಿಗೆ ಮಾತ್ರ" ಎಂದಾಗ ಅಂಚೆಯಣ್ಣರ ಕಣ್ಣಲ್ಲಿ ಖುಷಿಯ ಭಾಷ್ಪ ತುಂಬಿತ್ತಂತೆ.

ಕಲಾಂಜೀ ಹೇಳಿದ ಮಾತು ನಿಜವಾಗುವ ದಿನ ಬಹುದೂರವಿಲ್ಲ ಎಂದನಿಸುತ್ತೆ. ಪ್ರತಿಯೊಂದಕ್ಕೂ ತಂತ್ರಜ್ಞಾನವನ್ನೇ ಅವಲಂಬಿಸಿದ್ದೇವೆ. ಇದೇನು ತಪ್ಪಲ್ಲ..ಆದರೆ ಅಂಚೆಯಣ್ಣಂದಿರ ಬದುಕು ಏನಾದೀತು ಅನ್ನೋದೇ ಕಾಡುವ ಪ್ರಶ್ನೆ. ಹೆಚ್ಚೇನೂ ಹೇಳಲಾರೆ..ನಿಮ್ಮೂರಿನ ಅಂಚೆಯಣ್ಣರ ಕುರಿತು ನೆನಪಾದರೆ ಓದುವ ಜೊತೆಗೆ ಹಂಚಿಕೊಳ್ಳಿ..

Wednesday, January 14, 2009

ಕಂಡಿದ್ದು..ಕೇಳಿದ್ದು...!

ಇದೇ ಮೊನ್ನೆ ಮೊನ್ನೆ ಕೇಳಿದ್ದು ..ಕಂಡಿದ್ದು..ಏನಾದ್ರೂ ಬ್ಲಾಗಲ್ಲಿ ಹಾಕೋಣ ಅಂದಾಗ ಫಕ್ಕನೆ ತಲೆಯಲ್ಲಿ ಏನೂ ಹೊಳೆಲಿಲ್ಲ..ಹೊಳೆದಿದ್ದು ಇಷ್ಟೇ..ಪುಕ್ಸ್ಸಟ್ಟೆಯಾಗಿ..!

ಬ್ಯೂಟಿಪಾರ್ಲರ್ಗೂ ಗ್ರಾಹಕರ ಕೊರತೆ!
"ಈ ಬಾರಿ ರೆಂಟ್ ಕೊಡಕ್ಕೆ ಕಾಸಿಲ್ಲ ಮೇಡಂ" ಅಂದ ಬ್ಯೂಟಿ ಪಾರ್ಲರ್ ಮೇಡಂ ಒಬ್ರು.. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ತಮಗೂ ತಟ್ಟಿದೆ ಅನ್ನೋದನ್ನು ವಿವರಿಸಿಬಿಟ್ಟರು. ನಮ್ಮನೆ ಪಕ್ಕನೆ ಇರುವ ಬ್ಯೂಡಿಪಾರ್ಲರ್ ಆಂಟಿ, ಇಷ್ಟೊಂದು ತೊಂದರೆ ಆಗುತ್ತೆ ಅಂಥ ಕನಸಲ್ಲೂ ಅಂದುಕೊಂಡಿರಲಿಲ್ಲ ಅಂತೆ. ಅದೇ ಐಟಿ ಹುಡುಗೀರು, ಹಾಗೇ ದೊಡ್ಡ ಜಾಬ್ ನಲ್ಲಿರುವ ಹುಡುಗಿಯರು ಪ್ರತಿ ವಾರ ಫೇಶಿಯಲ್ ಮಾಡಿಸಿಕೊಳ್ಳ್ತಾ ಇದ್ರು. ಆದ್ರೆ ಈಗ ಬರೋದೇ ಕಡಿಮೆ. ಕೆಲ ಕಂಪನಿಯಲ್ಲಿ ಕೆಲಸದಿಂದಲೇ ಕಿತ್ತುಹಾಕಿಬಿಟ್ಟಿದ್ದಾರಂತೆ..ಹಾಗೆ ರೂಮ್ ಖಾಲಿ ಮಾಡಿಕೊಂಡು ಊರಿಗೆ ಹೋಗಬ್ಬಿಟ್ಟಿದ್ದಾರೆ. ಈ ಐಬ್ರೋ (೧೫ ರೂ)ಮಾಡಿಸೋಕೆ ಬಂದ್ರೆ..ಎಷ್ಟು ಜನ ಬಂದ್ರೂ ಅಷ್ಟೇ. ಈ ಬಾರಿಗೆ ಬಾಡಿಗೆ ಕಟ್ಟಕೆ ಕಷ್ಟ ಆಗಿಬಿಟ್ಟಿದೆ..ಮನೆಯಲ್ಲಿರುವವರು ಬ್ಯೂಟಿಪಾರ್ಲರ್ ಹೋಗೋ ಕುರಿತು ಅಷ್ಟೊಂದು ತಲೆಕೆಸಿಕೊಳ್ಳಲ್ಲ..ನೋಡಿ ಈ ಕ್ರೈಸ್ ಸಿನಿಂದ ನಾವೂ ಬೀದಿಗೆ ಬರುವಂತಾಗಿದೆ ಎಂದು ತಲೆಚಚ್ಚಿಕೊಳ್ತಾ ಇದ್ರು.

ಯುವಜನರೆಂದರೆ ಗೂಳಿಗಳ ತರ!
ಮೊನ್ನೆ ಮೊನ್ನೆ ಪ್ರೆಸ್ ಕ್ಲಬ್ನಲ್ಲಿ ವಿದ್ಯಾರ್ಥಿಗಳ ಪಡೆಯೊಂದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ಕುರಿತು ಪತ್ರಿಕಾಗೋಷ್ಠಿ ಕರೆದಿತ್ತು. ಎಲ್ಲಾ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು. ತಮ್ಮ ಬೇಡಿಕೆಗಳು, ಸರ್ಕಾರದ ವೈಫಲ್ಯತೆ, ಸರ್ಕಾರದ ವಿರುದ್ಧ ಒಂದಿಷ್ಟು ಟೀಕೆಗಳು, ತಮ್ಮ ನಿರೀಕ್ಷೆ, ವಿದ್ಯಾರ್ಥಿಗಳ ಪಾಡು, ವಿವಿಗಳಲ್ಲಿರುವ ಭ್ರಷ್ಟಾಸುರರ ಕುರಿತೆಲ್ಲ ಮಾತಾಡಿದ್ದೇ ಮಾತಾಡಿದ್ದು. ಅವರಿಗೆ ನೆರವೆಂಬಂತೆ ಕೆಲವರು 'ದೊಡ್ಡ'ವರು ಕೂಡ ಪತ್ರಿಕಾಗೋಷ್ಠಿಗೆ ಸಾಥ್ ನೀಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತಾಡ್ತಾ ಮಾತಾಡ್ತಾ ಪಿತ್ತ ನೆತ್ತಿಗೇರಿಸಿಕೊಂಡವ ವಿದ್ಯಾರ್ಥಿಯೊಬ್ಬ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದು ಹೇಗೇ ಗೊತ್ತಾ? "ಯುವಕರಂದ್ರೆ ಹೇಗಿರ್ತಾರೆ ಅಂತ ನಿಮಗೂ ಗೊತ್ತಲ್ವಾ? ಗೂಳಿ .....ಗೂಳಿಗಳ ಥರಾ..ಒಂದು ಬಾರಿ ಎದ್ದು ಮತ್ತೆ ತಿರುಗಿ ನೋಡೋರಲ್ಲ..ಗೂಳಿಗಳು ಹೊಲಕ್ಕೆ ನುಗ್ಗಿದ್ರೆ ಏನಾಗುತ್ತೆ? ಹಾಗೇ ಆಗುತ್ತೆ..ಹಾಗಾಗಿ ಸರ್ಕಾರ ಆದಷ್ಟು ಬೇಗ ನಮ್ ಬೇಡಿಕೆಗಳಿಗೆ ಸ್ಪಂದಿಸೋದು ಒಳಿತು" ಎಂದು ಬಿಸಿರಕ್ತದ ತರುಣ ಸರ್ಕಾರಕ್ಕೆ ಬೆದರಿಕೆ ಹಾಕಿಬಿಟ್ಟ!

Friday, January 9, 2009

ನಮ್ಮೊಳಗಿನ ಭಾವಬಂಧಗಳು ಸತ್ತು ಮಣ್ಣುಗೂಡುತ್ತಿವೆಯೇ..?!


"ಇಬ್ಬರೂ ಕಾಲೇಜು ಹುಡುಗಿಯರು ಸಿನಿಮಾಗಳಿಗೆ ಹೋಗುತ್ತಾ, ಇವರ ಮನೆಯಲ್ಲೋ ಗಂಟೆಗಟ್ಟಲೆ ಕಳೆಯುತ್ತಾ, ತಮ್ಮದು ಗಾಢ ಸ್ನೇಹವೆಂದುಕೊಳ್ಳುತ್ತಾರೆ. ಗೃಹಿಣಿಯೊಬ್ಬಳು ತಿಂಗಳ ಕೊನೆಯಲ್ಲಿ ತನಗೆ ಸಾಮಾನುಗಳನ್ನು ಕೈಬದಲು ಕೊಡುವ ಪಕ್ಕದ್ಮನೆ ಆಂಟಿ ತುಂಬಾ ಒಳ್ಳೆಯವಳೆಂದುಕೊಳ್ಳುತ್ತಾಳೆ. ಪಾರ್ಟಿಯೊಂದರಲ್ಲಿ ಸೇರುವ ಯುವಕರು ಆ ಸಂಜೆಯನ್ನು ಎಂಜಾಯ್ ಮಾಡುತ್ತಾರೆ. ಮಾರ್ನಿಂಗ್ ವಾಕ್ ಗೆ ಹೋಗುವ ವೃದ್ಧರು ತಮ್ಮದು ಒಳ್ಳೆಯ ಕಂಪನಿ ಎಂದುಕೊಳ್ಳುತ್ತಾರೆ. ಈ ರೀತಿ ಮನುಷ್ಯರೆಲ್ಲರೂ ಅಪಾಯರಹಿತವಾದ, ತಮಗೆ ತೊಂದರೆ ಕೊಡದ ಸಂಬಂಧಗಳಲ್ಲೇ ಬದುಕುತ್ತಾರೆ. ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಾಗ ಮನುಷ್ಯನ ಪೊರೆಗಳು ಬಿಚ್ಚಿಕೊಳ್ಳುತ್ತವೆ. ಪೊರೆಗಳು ಕಳಚಿಕೊಳ್ಳುತ್ತಿದ್ದಂತೆ ಸ್ನೇಹದ ಸಾಂದ್ರತೆ ಕಡಿಮೆ ಆಗುತ್ತದೆ. ಅದಕ್ಕೆ ಗಂಡ-ಹೆಂಡತಿಯರಲ್ಲಿ ಬಹಳಷ್ಟು ಜನ ಉತ್ತಮ ಸ್ನೇಹಿತರಾಗಿರುವುದಿಲ್ಲ"
"ಮನುಷ್ಯನ ಸಂಬಂಧಗಳೆಲ್ಲಾ ಈರುಳ್ಳಿಯಂತೆ. ಬಂಗಾರದ ಬಣ್ಣದಲ್ಲಿ ಹೊಳೆಯುವ ಸಿಪ್ಪೆ ಮೇಲಿದ್ದರೇನೇ ಅದು ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಕಣ್ಣೀರು ತರಿಸುತ್ತದೆ"
ಕೆಲ ವರುಷಗಳ ಹಿಂದೆ ಯಂಡಮೂರಿ ವೀರೇಂದ್ರನಾಥ್ ಅವರ 'ಈರುಳ್ಳಿ' ಕತೆಯನ್ನು ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಈ ಸಾಲುಗಳು ನಿನ್ನೆ ಹಳೆ ಡೈರಿಯನ್ನು ಮಗುಚುತ್ತಿದ್ದಂತೆ ಸಿಕ್ಕಿದುವು.

ಮನೆಯ ಓನರ್ ಆಂಟಿ ನಿತ್ಯ ನಗುನಗುತ್ತಾ ಮಾತಾಡಿಸೋರು..ನೀವು ನಮ್ ಮನೆಯವರ ಥರಾನೇ ಅನ್ನೋರು ತಿಂಗಳ ಕೊನೆಯಲ್ಲಿ ನಿಗದಿತ ತಾರೀಕಿನಂದು ಬಾಡಿಗೆ ಕೊಡದಿದ್ದರೆ ಮನೆಬಾಗಿಲಿಗೆ ಬಂದು ಥೂ! ಎಂದು ಉಗಿದು ಹೋಗುವಾಗ..ಮನುಷ್ಯ ಜೀವವೊಂದು ತಮ್ಮ ಗಾಡಿಯಡಿಗೆ ಬಿದ್ದು ಪ್ರಾಣ ಕಳಕೊಂಡಾಗ ಪಕ್ಕದಲ್ಲೇ ಇದ್ದ ಚರಂಡಿಗೆ ಎಸೆದು ಹೋಗೋರನ್ನು ಕಂಡಾಗ..ಜ್ವರದಿಂದ ನರಳುತ್ತಿದ್ದರೂ ನಿತ್ಯ ನಿಯತ್ತಾಗಿ ಕೆಲಸ ಮಾಡುವ ಸಿಬ್ಬಂದಿಯನ್ನು ಕನಿಷ್ಟ ಕನಿಕರವಿಲ್ಲದೆಯೇ ಬೈಯುವ ಬಾಸ್ ಗಳನ್ನು ನೋಡಿದಾಗ...ಆತ್ಮೀಯ ಗೆಳೆಯನೊಬ್ಬ ಸಾಲ ಕೇಳಿದಾಗ ತಾವು ಸಾಲ ಕೊಡದಿದ್ದರೆ ಮಾತಾಡುವುದನ್ನೇ ಬಿಡೋ ಮೂರ್ಖ ಗೆಳೆಯರನ್ನು ಕಂಡಾಗ..ಅದೇಕೋ 'ಮನುಷ್ಯನ ಸಂಬಂಧಗಳು ಈರುಳ್ಳಿಯಂತೆ' ಅನಿಸಿಬಿಡುತ್ತದೆ. ಪ್ರತಿಯೊಬ್ಬರೂ ಅಪಾಯರಹಿತವಾದ, ತೊಂದರೆ ಕೊಡದ ಸಂಬಂಧಗಳಲ್ಲೇ ಬದುಕುತ್ತಾರೆ ಎನ್ನುವ ಮಾತು ಅದೆಷ್ಟೋ ಸತ್ಯ ಅನಿಸಿಬಿಡುತ್ತದೆ. ಕೆಲವರಿಗೆ...ನಾಲ್ಕು ಸಲ ಪಾರ್ಟಿಗೆ ಕರೆದು, ಬೇಕಾಬಿಟ್ಟಿ ದುಡ್ಡು ಚೆಲ್ಲುವ ಗೆಳೆಯ ..ಕೆಲವೊಮ್ಮೆ.ಬಾಲ್ಯದಲ್ಲಿ ಸೈಕಲ್ ಮೇಲೆ ಕೂರಿಸಿಕೊಂಡು ಹೋಗುವ ಗೆಳೆಯನಿಗಿಂತ ಅದೇಕೆ ಇಷ್ಟವಾಗಿಬಿಡುತ್ತಾನೆ.?!...ಹೀಗೇ ಏನೇನೋ ತಲೆಹರಟೆಗಳು ನನ್ ತಲೆಯೊಳಗೇ..

ಈ ಸಂಬಂಧಗಳೇ ಹೀಗೇ..
ಗೊತ್ತುಗುರಿಯಿಲ್ಲದೆ ಮೂಡೋದು
ಬಾಂಧವ್ಯ ಬೆಸೆಯೋದು
ಪ್ರೀತಿಯ ತೀರದಲ್ಲಿ ತೇಲಿಬಿಡೋದು
ಮರೆತುಹೋಗದಷ್ಟು ಹೃದಯದಲ್ಲಿ ನೆಲೆಗೊಳ್ಳೋದು...

ಹತ್ತನೇ ಕ್ಲಾಸಿನಲ್ಲಿ ಡೈರಿಯಲ್ಲಿ ಗೀಚಿಟ್ಟ ಈ ಸಾಲುಗಳು ಬೆಂಗಳೂರಿನ ನನ್ನ ಪುಟ್ಟ ರೂಮ್ ನಲ್ಲಿ ಕುಳಿತು ಓದಿದಾಗ ಅದೇಕೋ ಈಗ ಸುಳ್ಳು ಅನಿಸಿಬಿಡ್ತು. ದಿನಾ ಟ್ರಾಫಿಕ್ ಮಧ್ಯೆ ಸಿಕ್ಕಹಾಕೊಂಡು, ಹೊಗೆ, ಧೂಳು ಸೇವಿಸುತ್ತಾ, ಹರಸಾಹಸ ಮಾಡಿ ಬಸ್ಸಲ್ಲಿ ಪ್ರಯಾಣಿಸುವುತ್ತಾ, ಹಗಲು ರಾತ್ರಿ ಎನ್ನದೆ ಚಲಿಸುವ ವಾಹನಗಳು, ಡಾಂಬರ್ ರಸ್ತೆಗಳು, ಪರಿಚಯ ಇಲ್ಲದಿದ್ದರೂ ಗಹಿಗಹಿಸಿ ನಗುವ ಕಳ್ಳ ಖದೀಮರು, ಕಾಮುಕ ಕಣ್ಣುಗಳು, ವಂಚಕರು, ದೊಡ್ಡ ದೊಡ್ಡ ಯಂತ್ರಗಳು, ನಿರಭ್ರ ಆಕಾಶವನ್ನು ಚುಂಬಿಸುವ ಬೃಹತ್ ಕಟ್ಟಡಗಳು, ಕೊಳೆತ ವಸ್ತುಗಳು ತುಂಬಿದ ಕೊಳಗಳು, ಯಂತ್ರಮಾನವರು..ಎಲ್ಲವನ್ನೂ ಕಂಡಾಗ ಮನುಷ್ಯನ ಸಂವೇದನೆಗಳು, ಭಾವನೆಗಳು ಬರಡಾಗುತ್ತಿವೆ ಎಂದನಿಸುತ್ತೆ. ಭಾವನಾತ್ಮಕವಾದ ಸಂಬಂಧಗಳ ಪೊರೆ ಕಳಚಿ ಕಣ್ಣೀರು ಸುರಿಸುವುದೇನೋ ಎಂದನಿಸುತ್ತದೆ. ಮಿದುಳಿಗೆ ಮಾತ್ರ ಕೆಲಸ ಕೊಡೋ ನಾವುಗಳು ಹೃದಯಕ್ಕೆ ಯಾಕೆ ಕೆಲಸ ಕೊಡುತ್ತಿಲ್ಲ..ಅದೇಕೋ ಹೃದಯ ಬರೀ ಖಾಲಿ ಖಾಲಿ ಅನಿಸಿಬಿಡುತ್ತೆ. ನೋವಿಗೆ, ಖುಷಿಗೆ ಸ್ಪಂದಿಸಬೇಕಾದ ಪ್ರೀತಿಯ ಸಂಬಂಧಗಳೇ ಅದೇಕೋ ಕೃತಕ ಎಂದನಿಸಿಬಿಡುತ್ತೆ. ಮೊನ್ನೆ ಮೊನ್ನೆ ಪ್ರೀತಿಸಿ ಮದುವೆಯಾದವರು ಒಂದೆರಡು ತಿಂಗಳಲ್ಲೇ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ...ಹಾಗಾದ್ರೆ ಸಂಬಂಧಗಳು ಎಲ್ಲಿ ಹೋದುವು? ನೊಂದ ಮನಸ್ಸೊಂದು ಸಾಂತ್ನಾನದ ಕೈಯ ಬಯಸಿದಾಗ ರಗಳೆಯೇ ಬೇಡವೆಂದು ದೂರ ಸರಿಸೋರೇ ಹೆಚ್ಚಾಗಿಬಿಡ್ತಾರೆ. ನಮ್ಮೊಳಗೆ ಭಾವನೆಗಳೇ ಇಲ್ಲವೇ? ಮನುಷ್ಯನ ಸಂಬಂಧಗಳ ಮೂಲ ಪ್ರೀತಿಗೆ ಅದೇಕೇ ಬರಗಾಲ ಕಂಡುಬರುತ್ತಿದೆ?

"ಸೃಷ್ಟಿಯ ಅನೇಕ ಅದ್ಭುತಗಳಲ್ಲಿ ನೀನೂ ಒಂದು..ನಿನ್ನ ಘನ ವ್ಯಕ್ತಿತ್ವ, ಸಾಂತ್ವಾನ ತುಂಬಿದ ಮಾತು..ಪ್ರೀತಿ, ಸ್ನೇಹ ಒಂದಿಷ್ಟು ಮೌನ...ಎಲ್ಲಾ ಎಷ್ಟು ಚೆಂದ ..." ಎಂದು ಆಟೋಗ್ರಾಫ್ ನಲ್ಲಿ ನಾಲ್ಕು ಸಾಲು ಗೀಚಿದ ಒಡನಾಡಿ ಗೆಳೆಯ/ಗೆಳತಿ ಅದೇ ಸಾಂತ್ನಾನದ 'ಕೈ'ಯನ್ನೇ ಮರೆತುಬಿಡ್ತಾರಲ್ಲ..ನಮಗೆ ಖುಷಿ ಕೊಡುವ ಸಂತೋಷನಾ ಹಂಚಿಕೊಳ್ಳಕೆ ಬಯಸೋರು..ದುಃಖದ ಕಣ್ಣೀರು ಒರೆಸಾಕೆ ಅದೇಕೆ ಹಿಂದೆ-ಮುಂದೆ ನೋಡ್ತಾರೆ..ಕಾಲಚಕ್ರ ಉರುಳಿದಂತೆ ನಮ್ಮೊಳಗೆ ಭಾವಗಳು ಸತ್ತು ಮಣ್ಣಾಗೂಡುತ್ತಿವೆಯೇ? ಪ್ರೀತೀನ ಪ್ರೀತಿಯಿಂದಲೇ ಗೆಲ್ಲುವ..ಹೆಸರೇ ಇಲ್ಲದ ಮನುಷ್ಯ ಬದುಕಿನ ಪ್ರೀತಿಯ ಸಂಬಂಧಗಳಿಗೆ ಮುನ್ನುಡಿ ಬರೆಯಲು ಸಾಧ್ಯವೇ ಇಲ್ಲವೇ?
ಏನೇ ಇರಲಿ...ನಾನು ಹೇಳಿರುವುದರಲ್ಲಿ ಕೆಲವೊಮ್ಮೆ ಅಪವಾದ ಎನ್ನುವ ನಿದರ್ಶನಗಳು ನಿಮ್ಮ ಮುಂದಿರಬಹುದು..ಆದರೆ ನನಗನಿಸಿದ್ದು ಬರೆದಿದ್ದೇನೆ. ವೇದನೆಗಳಾಚೆಗೂ ಬದುಕಿನಲ್ಲಿ ಸಾಧನೆಯ ಹುರುಪು ತುಂಬುವ ಮನುಷ್ಯ ಸಂಬಂಧಗಳನ್ನು ಉಳಿಸಿಕೋಬೇಕು...ಆಗಬಾರದು ಸಂಬಂಧಗಳು ಈರುಳ್ಳಿಯಂತೆ!!..



Saturday, January 3, 2009

ಅಮ್ಮನೂರಲ್ಲಿ ನಾನು..

ಅದೇ ಇತ್ತೀಚೆಗೆ ಅಮ್ಮನೂರಿಗೆ ಹೋಗಿದ್ದೆ. ಅಂದ್ರೆ ನಾ ತುಂಬಾ ಪ್ರೀತಿಸುವ ನನ್ನೂರಿಗೆ. ನಾ ಹುಟ್ಟಿ ಬೆಳೆದ ಪ್ರೀತಿಯ ಊರಿಗೆ. ಕಳೆದ ಏಳೆಂಟು ತಿಂಗಳಿಂದ ಅಮ್ಮ ದಿನಾ ಬೆಳಿಗೆದ್ದು ಮನೆಗೆ ಬಂದಿಲ್ಲವೆಂದು ಗೊಣಗಾಡುತ್ತಿದ್ದರೂ ಕೆಲ್ಸ ಕೆಲ್ಸ ಅಂತ ಹೋಗಿರಲಿಲ್ಲ. ಅದೇ ವರ್ಷದ ಕೊನೆ..ಒಂದಷ್ಟು ರಜೆಗಳು ಬಾಕಿ ಇವೆ. ಹೋಗಿಬರೋಣ ಅಂತ ಹೋಗಬಂದೆ.
ಅದೇ ಊರು..ಅದೇ ಮನೆ. ಅಮ್ಮನ ಸಾರಥ್ಯದಲ್ಲಿ ಅಂಗಳದಲ್ಲಿ ಬಣ್ಣಬಣ್ಣದ ಹೂವುಗಿಡಗಳು ಅರಳಿವೆ. ಹೊಸ ಹೊಸ ಹೂವುಗಿಡಗಳನ್ನು ತಂದು ನೆಟ್ಟಿದ್ದಾರೆ. ಚೆನ್ನಾಗಿ ಹೂವು ಬಿಟ್ಟು ಅವುಗಳು ಅರಳಿದನ್ನು ನೋಡೋದೇ ಖುಷಿಯಾಗಿತ್ತು. ಅದೇ ಬೆಂಗಳೂರಿನಷ್ಟು ಚಳಿಯ ತೀವ್ರತೆ ಇಲ್ಲಾಂದ್ರೂ ಬೆಳಿಗ್ಗೆ ಏಳುವಾಗ ಕೈ-ಕಾಲುಗಳೇ ಮರಗಟ್ಟಿಹೋಗುತ್ತವೆ. ಹನಿಹನಿ ಇಬ್ಬನಿ ಬಿಂದುಗಳು ಮುಂಜಾವು ಸ್ವಾಗತಿಸುತ್ತವೆ. ಮನೆಯ ಕೋಳಿ ನಾಲ್ಕು ಗಂಟೆಗೇ ಅಲಾರಂ ಹೊಡೆಯುತ್ತೆ.

ನಮ್ಮನೆಯ ಪ್ರೀತಿಯ ಹೆಣ್ಣು ನಾಯಿ ಸತ್ತಿದೆ. ಬಾವಿಯಲ್ಲಿ ಮುಕ್ಕಾಲು ಭಾಗ ನೀರು ಇದೆ. ಕಾಳು ಮೆಣಸು ಫಲ ಬರುತ್ತಿದೆ..ಅಮ್ಮ ಅದನ್ನು ಕೊಯ್ಯೋದ್ರಲ್ಲೇ ಭಾರೀ ಬ್ಯುಸಿಯಾಗಿದ್ದಾರೆ. ನೆರೆಹೊರೆಯ ಮೂರ್ನಾಲ್ಕು ಮನೆಯಲ್ಲಿ ಹೊಸ ಹೊಸ ಬೋರ್ ವೆಲ್ ಗಳು ಬಂದಿವೆ..ಹಾಗಾಗಿ ಬಾವಿ ನೀರನ್ನೇ ಅವಲಂಬಿಸಿದವರಿಗೇ ಬಾವಿ ನೀರು ಬೇಗನೇ ಬತ್ತಿಹೋಗೋದು ಗ್ಯಾರಂಟಿ ಅಂತ ಅಲ್ಲಲ್ಲಿ ಮಾತಾಡುತ್ತಿದ್ದಾರೆ. ಅಮ್ಮ ತರಕಾರಿ ಬೆಳೆಸಿದ್ದಾರೆ..ಇನ್ನೊಂದ್ಸಲ ಬರುವಾಗ ಕೆಜಿಗಟ್ಟಲೆ ಗೆಣಸು, ತರಕಾರಿ ಬೆಂಗಳೂರಿಗೆ ಕೊಂಡೋಗಬಹುದು ಎಂದರು ಪ್ರೀತಿಯಿಂದ. ಮತ್ತೆ ನಮ್ಮೂರಿನ ಮುದುಕರಿಬ್ಬರು...ಅಂದ್ರೆ ಅವರಿಬ್ಬರು ಅಣ್ಣ-ತಮ್ಮಂದಿರು ಎರಡು ದಿನಗಳ ಅಂತರದಲ್ಲಿ ತೀರಿಹೋಗಿದ್ದಾರೆ. ಕುಬೇರನ ಮಗಳೊಬ್ಬಳು ಯಾವುದೋ ಹುಡುಗನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಊರೆಲ್ಲ ಓಡಿಹೋದ್ಳು ಅಂತ ಬೊಬ್ಬಿಡುತ್ತಿದೆ. ಕುಬೇರನ ಮಗಳು ಬಡವನ ಮದುವೆಯಾದವಳು ಅನ್ನೋದೇ ಯುವಕರಿಂದ ಹಿಡಿದು ಹಣ್ಣು-ಹಣ್ಣು ಮುದುಕರವರೆಗೆ ಅನುಕಂಪ, ಅತೀ ಕಾಳಜಿ! ಹಳ್ಳಿಯಿಂದ ಹಿಡಿದು ೩೦ ಕಿ.ಮೀ. ದೂರದ ಪುತ್ತೂರು ಪೇಟೆ ತನಕವೂ ಅದೇ ಬಿಸಿಬಿಸಿ ಸುದ್ದಿ.

ಮತ್ತೆ ನಮ್ಮೂರ ರಸ್ತೆ ..ಅದೇ ವಿಧಾನಸಭೆ ಚುನಾವಣೆಗೆ ಮೊದಲು ಶತಾಯುಗತಾಯ ಪ್ರಯತ್ನ ಮಾಡಿ,,ರಸ್ತೆ ರಿಪೇರಿ ಮಾಡಿಬಿಟ್ರು. ಅದು ಪರ್ವಾಗಿಲ್ಲ..ಚೆನ್ನಾಗಿದೆ. ಜೊತೆಗೆ ಶೋಭಾ ಕರಂದ್ಲಾಜೆ ನಮ್ಮೂರಿಂದ ಸಚಿವೆ ಆಗಿದ್ದಾರೆ. ಆದ್ರೆ ಸಚಿವೆ ಆದ ಮೇಲೆ ಊರೇ ಮರೆತಿದ್ದಾರೆ ಅನ್ತಾರೆ ಊರ ಜನಗಳು. ನಮ್ಮೂರಲ್ಲಿ ದೀಪ ಕಾಣದ ಮನೆಗಳು ಎಂದಿನಂತೇ ಇವೆ. ಏನೂ ಬದಲಾಗಿಲ್ಲ. ಐದು ದಿನದಲ್ಲಿ ಮನೆಯಲ್ಲಿ ಖುಷಿ ಖುಷಿಯಾಗಿದ್ದೆ. ಅಮ್ಮ ಬಗೆಬಗೆ ಗಮ್ಮತ್ತು ಮಾಡಿದ್ರು. ಒಂದು ದಿನ ನನ್ ಪ್ರೀತಿಯ ಮೇಷ್ಟ್ರ ಜೊತೆ ಪುತ್ತೂರು ಸುತ್ತಾಡಿದ್ದೆ. ಹೊಸ ವರುಷದ ಆರಂಭ. ವರ್ಷಕ್ಕೆ ಬೇಕಾಗುವಷ್ಟು ಹಾರೈಕೆಗಳು.ಪ್ರೀತಿಯ ಹಿತನುಡಿಗಳು, ಬದುಕಿಡೀ ಸವಿಯುವಷ್ಟು ಪ್ರೀತಿನ ಮನತುಂಬಾ ತುಂಬಿಸಿಬಿಟ್ಟು ಕಳಿಸಿಕೊಟ್ಟರು.

ಮನೆಯಿಂದ ಹೊರಟ ದಿನ ಬದುಕು ಕಲಿಸಿದ ನನ್ನ ಪ್ರೀತಿಯ ಕಾಲೇಜು ಉಜಿರೆ ಕಡೆಯಿಂದಲೇ ಬಸ್ಸು ಸಾಗುವಾಗ ಕಾಲೇಜು, ಅಲ್ಲಿನ ಕಾರಿಡಾರ್, ಗುರುಗಳು ಧುತ್ತನೆ ಕಣ್ಣೆದುರು ಮೂಡಿಬಂದರು. ಕೆಲ ವರುಷಗಳ ನಂತರವೇ ಮತ್ತೊಮ್ಮೆ ಧರ್ಮಸ್ಳಳಕ್ಕೆ ಹೋಗಿದ್ದೆ. ಅಮ್ಮನ ಪ್ರೀತಿ, ಗುರುಗಳ ಪ್ರೀತಿ, ಕಾಲೇಜು, ಮನೆ, ಎಲ್ಲವನ್ನೂ ಮನಸ್ಸಲ್ಲಿ ತುಂಬುಕೊಂಡು ಬೆಂಗಳೂರು ಬಸ್ಸು ಹತ್ತಿದೆ. ಮತ್ತೆ ಮತ್ತೆ ಅಮ್ಮನೂರು ನೆನಪಾಗುತ್ತಿತ್ತು. ಕಳೆದ ರಾತ್ರಿ ಅಮ್ಮನ ಸೆರಗಿನಲ್ಲಿ ಹುದುಗಿ ಮಲಗಿದ್ದ ನೆನಪು ಕಣ್ಣು ತೇವವಾಗಿಸಿತ್ತು. ಕೋಟಿಗಟ್ಟಲೆ ಗುಳುಂ ಮಾಡಿದ ಹದೆಗೆಟ್ಟ, ಧೂಳು ತುಂಬಿದ ಶಿರಾಡಿ ಘಾಟ್ ಸೆಕೆಯೋ ಸೆಕೆ...ಚಳಿಗಾಲದಲ್ಲೂ ಈ ಬರೋಬ್ಬರಿ ಧೂಳು ಮೈ ಬೆವರಾಗಿಸಿತ್ತು.

ಏನೇ ಆಗಲಿ..ಊರಿಗೆ ಹೋಗಬಂದ ದಿನದಿಂದಲೇ ಇನ್ಯಾವಾಗ ಊರಿಗೆ ಹೋಗೋದು ಎಂಬ ಚಿಂತೆಯಿಂದಲೇ ದಿನಚರಿ ಆರಂಭವಾಗಿಬಿಟ್ಟಿದೆ. ಅಮ್ಮನೂರು ಏನೂ ಮಹಾ ಬದಲಾಗಿಲ್ಲ. ಹಳ್ಳಿಯ ಸೊಗಡು ಇನ್ನೂ ಜೀವಂತವಾಗಿದೆ. ಕಂಪ್ಯೂಟರ್ ಎದುರು ಕುಳಿತು ಮಾಹಿತಿ ಹುಡುಕೋರಿಗಿಂತ ಪುಸ್ತಕ ಖರೀದಿ ಮಾಡಿ ಓದೋರೇ ಹೆಚ್ಚಿದ್ದಾರೆ. ವಿದ್ಯುತ್ ಬಲ್ಬ್ ಗಳಿಲ್ಲದೆ ಹಣತೆಯಡಿ ಬದುಕು ಸಾಗಿಸೋರು ಇದ್ದಾರೆ. ಅದೇ ಕಾಡು..ಅದೇ ನಾಡು.ಕೆಲವೆಡೆ ಅದೇ ಗದ್ದೆಗಳು..ನೀರು..ಹಳ್ಳ..ಹರಿಯುತ್ತಿದೆ. ಕುಮಾರಧಾರ.. ನೇತ್ರಾವತಿ ತುಂಬಿ ಹರಿಯುತ್ತಿದ್ದಾರೆ. ನಮ್ಮೂರಿಗೆ ನಮ್ಮೂರೇ ಸಾಟಿ ಅನಿಸಿತ್ತು.

Friday, January 2, 2009

ಅಮ್ಮನಿಗೊಂದು ಕವನ

ಯಾವತ್ತೋ ಬರೆದ ಕವನ ನನ್ನ 'ಬೆಳದಿಂಗಳು' ಬ್ಲಾಗ್ನಲ್ಲಿ ಹಾಕಿದ್ದೆ. ಆದರೆ ಅದರಲ್ಲಿ ಮೂರು ಪೋಸ್ಟ್ ಮಾಡಿದ ಮೇಲೆ ಮತ್ತೆ ಮುಂದುವರೆಸಲಾಗಲಿಲ್ಲ. ಅದಕ್ಕೆ ಅದನ್ನು ಅಲ್ಲಿಂದ ತೆಗೆದು ಇಲ್ಲಿ ಹಾಕಿದ್ದೀನಿ...ಓದಬೇಕನಿಸಿದರೆ ಓದಿಕೊಳ್ಳಿ..ಖುಷಿಪಡಿ.

ಅಮ್ಮ ಎನ್ನುತ್ತಲಿ ಚಂಗನೆ ಹಾರಿದ್ದೆ
ಅಮ್ಮನ ಒಡಲಲ್ಲಿ ಪ್ರೀತಿಯ ಸವಿದಿದ್ದೆ
ರಾತ್ರಿ ಹಗಲೊಳ್ಲು ಮಡಿಲಲ್ಲಿ ಸವಿನಿದ್ದೆ
ತಿಂದುಂಡು ಮಲಗಿದ್ದೆ ರಾಗಿಯ ಸಿಹಿ ಮುದ್ದೆ

ದೂರದಿ ಕಂಡಿದ್ದ ಹಕ್ಕಿಯ ಪಡೆಯಲು
ಆಗಸದಿ ಹೊಳೆದಿದ್ದ ಚಂದಿರನ ಹಿಡಿಯಲು
ಹಠವನ್ನು ಮಾಡುತ್ತಲೀ..ಅಮ್ಮನ ಬೈಯುತಲಿ
ಕೋಪದಿ ಅಡಗಿದ್ದೆ ಮನೆಬದಿ ಪೊದೆಯಲ್ಲಿ

ಮರುದಿನ ಬೆಳಗೆದ್ದು ಅಮ್ಮಾ..ಎನ್ನುತ್ತಲೀ
ಜಿಂಕೆಯ ಮರಿಯಂತೆ ಚಂಗನೆ ಜಿಗಿದಿದ್ದೆ
ಅಮ್ಮನ ಎದೆಯೊಳಗೆ ಸಂತಸದಿ ಹುದುಗಿರಲಿ
ಎದೆ ತುಂಬಿ ಹಾಡೀತು ಲಾಲಿ..

ಅಮ್ಮಾ..ಅಮ್ಮಾ ಎನ್ನುತ್ತಲೀ ಮನವು
ಬಾಲ್ಯದ ನೆನಪಲ್ಲಿ ಸವೆಯುವ ಎದೆಯು
ಅಮ್ಮ ಹೇಳಿದ ಬದುಕಿನ ವ್ಯಥೆಯು
ಕಲಿಸಿತು ಎನಗೆ ಭವಿಷ್ಯದ ಕಥೆಯು

ಅಮ್ಮನ ಮಡಿಲಲ್ಲಿ ಹೂವಾದೆ ನಾನು
ಬದುಕಿಗೆ ಬೆಳಕಾದೆ ನೀನು
ಏಳೇಳು ಜನ್ಮವು ಭುವಿ ಮೇಲಿರಲು
ಮಗಳಾಗಿ ತುಂಬುವೆ ನಿನ್ನಯ ಒಡಲು