Tuesday, November 11, 2008

ಅಪ್ಪನಿಗೆ ಒಂದು ಪತ್ರ...

ಅಪ್ಪಾ..
ಯಾಕೋ ಮೊನ್ನೆಯಿಂದ ನಿನ್ನ ನೆನಪು ಭಾಳ ಕಾಡ್ತಿದೆ ಅಪ್ಪ. ಅದೇ ಮಕ್ಕಳ ದಿನಾಚರಣೆ ಬಂತಲ್ಲ..ಅದ್ಕೆ ಆಗಿರಬೇಕು. ನನ್ನ ಸ್ಲೂಲ್ ಮಕ್ಕಳೆಲ್ಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲು ತಮ್ಮ ಅಪ್ಪ-ಅಮ್ಮಂದಿರ ಜೊತೆ ಬರ್ತಾರೆ. ನಾನು ಮಾತ್ರ ಯಾವತ್ತೂ ಅಪ್ಪನ ಜೊತೆ ಹೋಗಲ್ಲ..ಅಮ್ಮನ ಜೊತೆ ಹೋಗ್ತಿನಿ. ಅದೇ ಕಳೆದ ಸಲ ಶಾಲೆಗೆ ಹೋದಾಗ ಅಮ್ಮನ ಜೊತೆ ಹೋದಾಗ, ಶಾಲೆಗೆ ಹೊಸದಾಗಿ ಸೇರಿದ ಟೀಚರ್ರು, ಅಪ್ಪನ ಯಾಕೆ ಕರೆದುಕೊಂಡು ಬಂದಿಲ್ಲಾ ಪುಟ್ಟಾ? ಎಂದು ನನ್ ಕೇಳಿದಾಗ ನಾನು ಅಮ್ಮನ ಮುಖ ನೋಡಿದೆ..ನೀನಿರಲಿಲ್ಲ ಅಲ್ವಾ? ಅಮ್ಮ ಒಡಲಲ್ಲಿ ದುಃಖ ತುಂಬಿಕೊಂಡು, ಕಣ್ಣಲ್ಲೇ ನಕ್ಕುಬಿಟ್ಟಳು. ನಾನೂ ನಗಬೇಕಲ್ಲಾ ಅದ್ಕೆ.
ಆದ್ರೂ ನಿನಗೆ ಒಂದು ದಿನವಾದ್ರೂ ನನ್ನ ಮಗಳ ಬೆಳಕಿನ ನಗು ಕಾಣಬೇಕು ಎಂದನಿಸಿದೆಯೇ? ಇಲ್ಲ ಬಿಡು. ಅಪ್ಪಾ, ನೀನು ನನ್ನ ಮತ್ತು ಅಮ್ಮನ ಬಿಟ್ಟು ಹೋಗಿ ಬಹುಶಃ ದಶಕಗಳೇ ಸರಿದುಹೋಗಿವೆ..ನೆನಪುಗಳೂ ಮರೆತುಹೋಗುವಷ್ಟು ದಿನಗಳಾಗಿವೆ..ಆದ್ರೂ 'ಅಪ್ಪ' ನಿನ್ನ ನೆನಪು ಕಾಡುತ್ತೆ. ಕಾಡಿಸುವ, ಪ್ರೀತಿಸುವ, ಮುದ್ದುಮಾಡುವ ಒಳ್ಳೆಯ ಅಪ್ಪ ನೀನಾಗಬೇಕಿತ್ತು ಎಂದನಿಸುತ್ತೆ..ಆಗಾಗ ನನ್ನೊಳಗೆಯೇ ಇದನ್ನೆಲ್ಲಾ ಅಂದುಕೊಳ್ತಿನಿ. ಹೌದು, ಅಪ್ಪ ನೀನು ತುಂಬಾ ಮೋಸಮಾಡಿದೆ. ಅಪ್ಪ, ಅಂದ್ರೇನು ಎಂದು ತಿಳಿಯುವ ಮೊದಲೇ ನೀನು ನನ್ನ ಮತ್ತು ಅಮ್ಮನಿಂದ ದೂರವಾಗಿ ಬೇರೊಂದು ಹೆಣ್ಣಿನ ಕತ್ತಿಗೆ 'ತಾಳಿ'ಯಾಗಿದ್ದೆ. ನೀನು ನಮ್ಮ ಜೊತೆ ಇದ್ದಷ್ಟು ದಿನ ನೀನು ಅಮ್ಮನಿಗೆ ನೀಡಿದ್ದು ಕ್ರೂರ ಹಿಂಸೆನೇ. ನಾನಿನ್ನೂ ಎದ್ದು-ಬಿದ್ದು ನಡೆಯುವ ಮಗುವಾಗಿದ್ದಾಗ ನೀನು ಮೂಗಿನತನಕ ಕುಡಿದು ಬಂದು ಅಮ್ಮನ ಪೀಡಿಸುತ್ತಿದ್ದೆ. ಅಮ್ಮ ದುಡಿದ ಚಿಲ್ಲರೆ ಕಾಸಿಗಾಗಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದೆ..ನೋಡು ಆವಾಗ ನಿನ್ನ ಕೊಲೆಮಾಡುವಷ್ಟು ಸಿಟ್ಟು ಬರ್ತಿತ್ತು. ಹೊಡೆದು, ಬಡಿದು ಅಮ್ಮನಿಂದ ಪುಡಿಗಾಸನ್ನೂ ಬಾಚಿಕೊಂಡು ಹೋದರೆ, ಮತ್ತೆ ನೀನು ಎದುರುಗೊಳ್ಳುತ್ತಿದ್ದು ಸಂಜೆಯ ಕಪ್ಪುಕತ್ತಲಲ್ಲಿ ತೂರಾಡುತ್ತಲೇ. ಸಂಜೆಯ ತನಕ 'ಗಂಡನೇ ದೇವರು' ಎಂದು ಬಟ್ಟಲು ತುಂಬಾ ಪ್ರೀತಿಯನ್ನಿಟ್ಟು ಕಾಯುತ್ತಿದ್ದ ನೀನು ಅಮ್ಮನಿಗೆ ಕೊಡುತ್ತಿದ್ದ ಉಡುಗೊರೆ ಬರೇ ಕಣ್ಣೀರು.
ಪುಟ್ಟ ಪುಟ್ಟ ಪಾದಗಳಿಂದ ಹೆಜ್ಜೆಗಳನ್ನೂರುತ್ತಾ ಸಾಗುತ್ತಿದ್ದ ನಾನು, ಎಲ್ಲವನ್ನೂ ಕಣ್ಣಾರೆ ನೋಡುತ್ತಿದ್ದೆ..ಆದರೆ ಅದ್ಯಾವುದಕ್ಕೂ ಆಗ ಅರ್ಥ ಇರಲಿಲ್ಲ. ನಿನ್ನ ಮೇಲೆ ಸಿಟ್ಟು ಮಾತ್ರ ಇತ್ತು..ಪ್ರೀತಿಯಲ್ಲ. ನನ್ನ ನಿನ್ನ ಸಂಬಂಧ, ಅಮ್ಮ-ನಿನ್ನ ಸಂಬಂಧ ಅದ್ಯಾವುದೂ ನನಗೆ ಆಗ ತಿಳಿಯಲೇ ಇಲ್ಲ..ಆದರೆ ಪ್ರಪಂಚಾನ ನನ್ನ ಕಣ್ಣುಗಳಿಂದ ನೋಡೋ ವಯಸ್ಸಲ್ಲಿ ನೋಡು ನೀನು ನೆನಪಾಗ್ತಿ, ಸಂಬಂಧಗಳು ನೆನಪಾಗ್ತವೆ,..ನಿನ್ನ ಪ್ರೀತಿ ಬೇಕು ಅನಿಸುತ್ತೆ..ಪ್ರೀತಿಯಿಂದ ಅಪ್ಪಾ ಎಂದು ಕರೆಯಲು ನನ್ನೆದುರು ಅಪ್ಪ ಇರಬೇಕಿತ್ತು...ಅಪ್ಪ-ಅಮ್ಮನ ಜೊತೆ ಖುಷಿಯಾಗಿರಬೇಕು ಎಲ್ಲಾ ಅನಿಸ್ತದೆ. ಎಂಥ ಮೋಸ, ಎಂಥ ಕ್ರೂರಿ ಅಪ್ಪ ನೀನು. ನಮ್ಮ ನೆನಪೇ ಆಗಲ್ವೇ ನಿಂಗೆ? ಅಮ್ಮನ ಕಣ್ನೀರು ನಿನಗೇ ಅರ್ಥವೇ ಆಗಲ್ವೇ? ಥೂ..ನಿನ್ನಂಥ ಅದೆಷ್ಟೋ ಗಂಡಸರನ್ನು ಭೂಮಿ ಇನ್ನೂ ಸಹಿಸಿಕೊಂಡಿದೆಯಲ್ಲಾ ಎಂದನಿಸುತ್ತದೆ. ಒಂದು ಹಿಡಿಯಷ್ಟು ಪ್ರೀತೀನ ನಿನಗೆ ಕೊಡಕ್ಕೆ ಆಗಿಲ್ಲ. ಹಾಗಾಗಿ ಅಪ್ಪ ಎನ್ನುವ ಪ್ರೀತೀನ ಪಡೆಯಲು ನನ್ನಿಂದಾಗಿಲ್ಲ.
ನೋಡಪ್ಪಾ, ಯಾಕೋ ನಿನ್ನ ನೆನಪಾಯಿತು..ಪತ್ರ ಬರೆದೆ. ಅಪ್ಪನ ಪ್ರೀತಿ ಬೇಕು ಅಂತ ಅನಿಸಿದ್ದರೂ, ನೀನು ಬೇಕು ಅಂತ ಅನಿಸುವುದೇ ಇಲ್ಲ. ನೀನು ಕೊಟ್ಟ ನೋವಿನ ಮಧ್ಯೆ ಪ್ರೀತಿ ಎಂಬ ಪದವೇ ಅರ್ಥ ಕಳಕೊಂಡಿದೆ. ನನಗೆ-ನಿನಗೆ ಸಂಬಂಧವೇ ಇಲ್ಲಂತ ಅನಿಸುತ್ತೆ. ನೀನು ಬೇಡಪ್ಪಾ. ನೀನು ಎಲ್ಲಿದ್ದಿಯೋ..ಆದ್ರೆ ನೋಡು ನಾನು-ಅಮ್ಮ ತುಂಬಾ ಖುಷಿಯಾಗಿದ್ದೀವಿ. ಅಮ್ಮ ನನ್ನ ಸುಖ, ನನ್ನ ಬದುಕು. ಈಗ ನಾನು ಐದನೇ ಕ್ಲಾಸು..ಅಮ್ಮ ನಂಗೆ ಒಳ್ಳೆ ಟೀಚರ್ ಆಗಿದ್ದಾಳೆ. ಅಮ್ಮ ನೀಡುವ ಪುಟ್ಟ ಪುಟ್ಟ ಸಂತೋಷಗಳು ನನಗೆ ಬದುಕು ನೀಡುತ್ತವೆ.
ಇಂತೀ,
ಮಗಳು

ಫೋಟೋ: http://www.flickr.com/

10 comments:

Rajesh said...

ಚಿತ್ರ ಪತ್ರ ಒದಿದೆ. ಭಾವನೆಗಳು ಲೆಖನದಲ್ಲಿ ಚೆನ್ನಾಗಿ ಮೂಡಿದೆ. ಎಲ್ಲ ಅಪ್ಪಂದೆರ ಜವಾಬ್ದಾರಿಯನ್ನು ನೆನಪಿಸಿದೆ.
ಗೆಳೆಯ,
ರಾಜೇಶ್

shivu K said...

ಚಿತ್ರ ಕರ್ಕೇರ ಸಾರ್,
ಅಪ್ಪನ ಬಗ್ಗೆ ನಿಮ್ಮ ಲೇಖನ ಓದಿ ನನಗೆ ಕಣ್ಣು ತೇವವಾಯಿತು.. ಕಾರಣ ಕಳೆದ ವರ್ಷ ನನ್ನ ತಂದೆ ಹೋಗಿಬಿಟ್ಟರು. ನಾನು ಬಾಲ್ಯದಲ್ಲಿ ಅವರನ್ನು ಸ್ಕೂಲಿಗೆ ಕರೆದುಕೊಂಡು ಹೋಗಿದ್ದು ನೆನಪಾಯಿತು.. ಮತ್ತೇನು ಬರೆಯಲಾರೆ ಅಪ್ಪನ ಬಗ್ಗೆ......

ಆಹಾಂ ! ನನ್ನ ಬ್ಲಾಗಿನಲ್ಲಿ ಹೊಸದಾಗಿ ಸಂತೆಯ ವಿಚಾರವೊಂದು ಬಂದಿದೆ ಬನ್ನಿ ....

ಹರೀಶ ಮಾಂಬಾಡಿ said...

ಮಗ-ಅಪ್ಪ ಸಂಬಂಧಕ್ಕಿಂತ ಒಂದು ಪಟ್ಟು ಹೆಚ್ಹು ಮಗಳು-ಅಪ್ಪ ಸಂಬಂಧ..
ಚೆನ್ನಾಗಿದೆ ಬರೆಹ

ಸಂದೀಪ್ ಕಾಮತ್ said...

ಮುದ್ದಾಗಿದೆ ಮಗು:)

ಸಿಮೆಂಟು ಮರಳಿನ ಮಧ್ಯೆ said...

ಬಹಳ ದಿನಗಳ ಹಿಂದೆ ರವಿ ಬೆಳಗೆರೆಯವರು "ಓ ಮನಸೆ" ಯಲ್ಲಿ "ಅಪ್ಪ ಅನ್ನುವ ಸ್ಟುಪಿಡ್ ಫ಼ೆಲೊ" ಅನ್ನುವ ಲೇಖನ ಬರೆದಿದ್ದರು. ಬಹಳ ಚೆನ್ನಾಗಿತ್ತು. ಅಪ್ಪನ ಮಹತ್ವವನ್ನು " ಅಪ್ಪ ಇಲ್ಲದ ಮಕ್ಕಳನ್ನು ಕೇಳಬೇಕು" ಎಂದಿದ್ದರು.. ಅದು ನಿಜ.. ಭಾವನೆಗಳು.. ಮನಸ್ಸಿಗೆ.. ತಾಗುವಂತಿದೆ..ಬಹಳ ಸುಂದರವಾಗಿ ಬರೆದಿದ್ದೀರಿ.. ನನಗೂ "ಇಲ್ಲದ ಅಪ್ಪನ" ನೆನಪು ಮಾಡಿಸಿದ್ದೀರಿ.
ಧನ್ಯವಾದಗಳು..

Chevar said...

ಮಹೇಶ್ ಚೇವಾರ್ ಅಂದಂಡಾ?

ನನ್ ಮನೆ said...

magu chitra chenaagide..

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

@ರಾಜೇಶ್, ಪ್ರಕಾಶ್, ಶಿವಣ್ಣಂಗೆ ನಮಸ್ಕಾರ..ಇಂಥ ಕ್ರೂರ ಅಪ್ಪಂದಿರ ತಪ್ಪಿಗೆ ಎಷ್ಟೋ ಮಕ್ಕಳ ಬದುಕು ಹೂವಾಗುವ ಬದಲು, ಮುಳ್ಳಾಗುತ್ತಿದೆ.ಶಿವಣ್ಣ ಸಂತೆಗೆ ಹೋಗಿ ಬಂದ ವಿಚಾರ ಓದಿದೆ.ಮಜಾ ಇತ್ತು.
@ಹರೀಶ್ ಸರ್ , ಸಂದೀಪ್, ನನ್ ಮನೆ..ಥ್ಯಾಂಕ್ಯೂಊಊಊ
@ಮಹೇಶ್...ಚೇವಾರ್...ಅಂದಂಡಾ? ದಾಲ ಆವೆರೆ ಇಜ್ಜಿ..ಈರೆನಾಂದ್ ತೆರಿಯೋನಾರ ಆತೆ..ಕೆಲವು ಸಲ ನಾಲೆಜ್ ಗ್ ಪೂರ ಉಂದು ಬೋಡಾಪುಂಡು..
-ಒಲವಿನಿಂದ,
ಚಿತ್ರಾ

Anonymous said...

pappa-maglu ondaagli annodu nan haaraike...
rohi

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ರೋಹಿಯಣ್ಣ..(:)