Friday, February 27, 2009

ಥರಗುಟ್ಟುವ ಚಳಿಯಲ್ಲಿ ಆ ಬಾಲಕ ಬೂದಿಯಲ್ಲಿ ಮಲಗಿದ್ದ..!!

ಜ್ವರದಿಂದ ತಲೆಭಾರ, ನೆನಪುಗಳಿಂದ ಅದೇಕೋ ಮನಸ್ಸು ಭಾರ. ಆದರೆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಮನೆಯ ಟೆರೇಸ್ ಮೇಲೆ ಹೋಗಿ ನಿಂತರೆ, ಅದೇ ಖುಷಿ ನೀಡುವ ತಂಗಾಳಿ. ಗೂಡು ಸೇರುವ ಹಕ್ಕಿಗಳ ಕಲರವ. ಪುಟ್ಟ ಬಾಲಕನೊಬ್ಬ ತಾನು ಸಾಕಿದ ಪಾರಿವಾಳ ಜೊತೆ ಆಟವಾಡುತ್ತಿದ್ದ. ಕೆಳಗಡೆ ನೋಡಿದರೆ ರಾಶಿ ಮರಳ ಮೇಲೆ 'ಮರಳಾಗಿ' ಆಡುವ ಮಕ್ಕಳು, ಬ್ಯಾಟ್ ಹಿಡಿದು ಸಚಿನ್, ಗಂಗೂಲಿ ಕನಸು ಕಾಣುವ ಕಂದಮ್ಮಗಳು. ಇನ್ನೊಂದೆಡೆ ಇವೆಲ್ಲವನ್ನೂ ಅಕ್ಕರೆಯಿಂದ ನೋಡುತ್ತಾ ಅಚ್ಚರಿಪಡುವ 'ಚಿಂದಿ' ಪುಟಾಣಿಗಳು.

ಹೌದು, ಅಂದು ನನ್ನ ಹೃದಯ ಕಣ್ಣೀರಾದ ದಿನ. ಬದುಕಿನ ಇನ್ನೊಂದು ಮುಖವನ್ನು ನೋಡಿ ಬದುಕೆಂದರೆ ಹೀಗೂ ಇರುತ್ತಾ? ಎಂದು ಬೆರಗುಗಣ್ಣಿಂದ ಮಗುವಿನಂತೆ ಪಿಳಿಪಿಳಿ ನೋಡುತ್ತಾ ನಿಂತ ದಿನ, ಘಟನೆ ನೆನೆಸಿಕೊಂಡಾಗ ಈಗಲೂ ಮನ ಅಳುತ್ತೆ. ಅಸಹಾಯಕಳಾಗಿ ಮೌನವಾಗಿ ಮನ ರೋಧಿಸುತ್ತದೆ. ನವೆಂಬರ್ 3, 2006! ಮಲ್ಲೇಶ್ವರದ ದೇವಯ್ಯ ಪಾರ್ಕ್ ಬಳಿ ಇರುವ ರೈಲುಮಾರ್ಗ..ಕಸ ಕಡ್ಡಿ, 'ಬೇಡ'ದೆಲ್ಲವನ್ನೂ ತನ್ನೊಳಗೆ ತುಂಬಿಸಿಕೊಳ್ಳುವ ಜಾಗ ಅದು. ಏಳೆಂಟು ವರ್ಷದ ಪುಟ್ಟ ಬಾಲಕ. ಕಣ್ಣಲ್ಲಿ ಮುಗಿಲು ಮುಟ್ಟುವ ಕನಸು ತುಂಬಿಕೊಂಡಿದ್ದ. ಹರಿದ ಬಟ್ಟೆ ಮೈಮೇಲೆ. ಮಲದ ಬದಿಯಲ್ಲಿದ್ದ ಇಡ್ಲಿ ತುಂಡನ್ನು ಹೆಕ್ಕಿ ತಿನ್ನುತ್ತಿದ್ದ!! ನನ್ನೆರಡೂ ಕಣ್ಣುಗಳು ಒಂದು ಕ್ಷಣ ಮುಚ್ಚಿಕೊಂಡಿದ್ದವು. ತೆರೆದು ನೋಡಿದಾಗ 'ಅಕ್ಕಾ..'ಎನ್ನುತ್ತಾ ನನ್ನೆದುರು ಕೈಚಾಚಿದ್ದ. ವಾಸ್ತವದ ಇನ್ನೊಂದು ಮುಖ. ಅಲ್ಲೇ ಇರುವ ಇರುವ ಶಾಂತಿಸಾಗರ ಹೊಟೇಲಿನಲ್ಲಿ ದೋಸೆ ಕೊಡಿಸಿದೆ. ಒಂದಲ್ಲ..ಎರಡಲ್ಲ..ಮೂರು ದೋಸೆಗಳನ್ನು ತಿಂದ!! ಪ್ರೀತಿಯಿಂದ ತನ್ನೆರಡೂ ಕಣ್ಣುಗಳನ್ನು ತೆರೆದು ನನ್ನತ್ತಾ ನೋಡುತ್ತಾ ನಿಂತ...ಯಾವುದೋ 'ಹೆಸರಿಡದ ಸಂಬಂಧಿಕನಂತೆ'!!

ಆಗಸ್ಟ್ 14. ಅಂದು ಜೀವನದ ಮೊದಲ ಬಾರಿಗೆ ನಾವು ಹಂಪಿಗೆ ಹೊರಟ ದಿನ. ಥರಗುಟ್ಟುವ ಚಳಿ. ಆಕಾಶದಲ್ಲಿ ಚಂದ್ರ, ನಕ್ಷತ್ರಗಳು ಕಾಣುತ್ತಿಲ್ಲ. ಮೋಡಗಳ ಮೇಲಾಟಗಳೂ ಗೋಚರಿಸುತ್ತಿಲ್ಲ. ಚಿತ್ರದುರ್ಗದಿಂದ ಮುಂದೆ ಸಾಗುತ್ತಿದ್ದಂತೆ ಗಣಿಲಾರಿಗಳ ಧೂಳು, ಆವೇಗ.!ವೇಗದಿಂದ ಎದುರಿಗೆ ಬರುತ್ತಿದ್ದ ಲಾರಿಗಳನ್ನು ನೋಡಿ ನಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದೆವು. ಚಳಿಗೆ ಮೈ ಬೆಚ್ಚಗಾಗಿಸುವಾಸೆ. ಅಲ್ಲೇ ಒಂದು ಟೀ ಅಂಗಡಿ. ಟೀ ಅಂಗಡಿ ಮಾಲೀಕ ಗೊರಕೆ ಹೊಡೆಯುತ್ತಿದ್ದರೆ, ಇತ್ತ ಒಬ್ಬ ಬಾಲಕ ನಿದ್ದೆಯ ಮಂಪರಿನಲ್ಲಿ ತೂಕಾಡಿಸುತ್ತಿಸಿದ್ದ. ಮತ್ತೊಮ್ಮೆ ಬಾಲಕ ..???! ಬೂದಿಯಲ್ಲಿ ಮಲಗಿದ್ದ. ನಾವು ಹೋದ ಕೂಡಲೇ ಮಾಲೀಕ ಆ 'ಬೂದಿ ಬಾಲಕ'ಕನನ್ನು ಎಬ್ಬಿಸಿದ..ಇಲ್ಲ, ಆತ ಏಳಲೇ ಇಲ್ಲ. ಅಲ್ಲೇ ಇದ್ದ ಕೋಲಿನಲ್ಲಿ ಹೊಡೆದೇಬಿಟ್ಟ..! ಎದ್ದ..'ಬೂದಿ ಬಾಲಕ'..ಕಂಣ್ಣೊರೆಸಿಕೊಂಡು!!..ಕಾಲೆಳೆಯುತ್ತಲೇ ಬಂದು..ಟೀ ತಂದುಕೊಟ್ಟ. ಟೀ ಕುಡಿಯುವ ಬದಲು..ಆ ಬಾಲಕನ ಕಣ್ಣುಗಳನ್ನೇ ನೋಡುತ್ತಿದ್ದೆ...ಅಲ್ಲಿ ಆಪ್ತತೆಯಿತ್ತು, ಪ್ರೀತಿಯಿತ್ತು..ಅಸಹಾಯಕತೆಯಿತ್ತು., ಸಾವಿರ ಕನಸುಗಳ ಆಶಾಗೋಪುರ ಇತ್ತು..ಆದರೆ 'ಬದುಕಿರಲ್ಲಿಲ್ಲ'!!!

ಮೊನ್ನೆ ಮೊನ್ನೆ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರಕ್ಕೆ ಆಸ್ಕರ್ ಬಂತು...ಅದಕ್ಕೆ ಸಿಕ್ಕ ಪ್ರಚಾರ, ಆಸ್ಕರ್, 'ಕೊಳಗೇರಿ' ಮಕ್ಕಳೂ ಆಚರಿಸಿದ ಆ ಸಂಭ್ರಮದ ಕ್ಷಣಗಳನ್ನು ಕಂಡಾಗ ಯಾಕೋ ಮೇಲಿನ ಘಟನೆಗಳು ನೆನಪಾದುವು. ಆಸ್ಕರ್ ಬಂದ ಖುಷಿಯ ಭರದಲ್ಲಿ ಸೋನಿಯಾ ಗಾಂಧಿ, 'ಈ ಚಿತ್ರ ನಮಗೆ ಸ್ಪೂರ್ತಿ' ಎಂದರೆ ,. ಮಹಾರಾಷ್ಟ್ರ ಸರ್ಕಾರ, ಸ್ಲಂ ಡಾಗ್ ನಲ್ಲಿ ಅಭಿನಯಿಸಿದ ಬಾಲಕಲಾವಿದರಿಗೆ ಫ್ಲಾಟ್ ಒದಗಿಸುವ ಭರವಸೆ ನೀಡಿದ್ದಾರೆ..ಥೇಟ್ 'ಶರದ್ ಪವಾರ್' ನಂತೆ!! ಆಸ್ಕರ್ ಬಂದಿರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ..ಆದರೆ, ಈ ಸ್ಲಂ, ಈ ಬದುಕು, ಚಿಂದಿ ಪುಟಾಟಿಗಳು, ಅವರ ಕನಸುಗಳು, ಕಕ್ಕುಲತೆ...ಜೀವ ಹಿಂಡುವ ಬದುಕು, ಸರ್ಕಾರ ನೀಡಿರುವ ಭರವಸೆಗಳು, ವಿಜಯೋತ್ಸವ....ಯಾಕೋ ನನ್ನೊಳಗೊಂದು 'ನೋವಿಗೆ' ಕಾರಣವಾಯಿತು. ಅದನ್ನೇ 'ಶರಧಿ' ಜೊತೆ ಹಂಚಿಕೊಂಡೆ.

Wednesday, February 25, 2009

ಕಣ್ಣೀರು ಒರೆಸುವ 'ಕೈಗಳು' ನೀನ್ಯಾಕೆ ಆಗುತ್ತಿಲ್ಲ..?! ಎಂದು ಕೇಳುತ್ತಿದ್ದೆ.

"ನೋಡು ಪುಟ್ಟಾ..ಆಕಾಶದಲ್ಲಿ ಚಂದ್ರ ಕಾಣ್ತಾನೆ. ರಾತ್ರಿಗೆ ಅವನೇ ದೇವರು. ಅವನು ದೊಡ್ಡ ದೇವರು. ಅವನ ಸುತ್ತ ಇರುವುದು ನಕ್ಷತ್ರಗಳು, ಅದು ಚಿಕ್ಕ ದೇವರುಗಳು. ದೇವ್ರು ನೋಡುತ್ತಿರುವಾಗ ಊಟ ಮಾಡಿದ್ರೆ ಒಳ್ಳೆದಂತೆ. ದೇವ್ರು ಕೇಳಿದ್ದೆಲ್ಲವನ್ನೂ ಕೊಡ್ತಾನೆ" ಎನ್ನುತ್ತಾ ಅಮ್ಮ ತಮ್ಮನ ಬಾಯಿಗೆ ಅನ್ನ ತುರುಕಿಸುತ್ತಿದ್ದುದು ಹಾಗೇ ನೆನಪಲ್ಲಿ ಉಳಿದಿದೆ. ಬೆಳಗಾದರೆ ಸೂರ್ಯನಿಗೆ ನಮಸ್ಕರಿಸಬೇಕು..ಅವನು ಹಗಲಿನ ದೇವ್ರು ಎನ್ನುತ್ತಿದ್ದಳು. ದೇವಸ್ಥಾನಗಳಿಗೆ ಹೋದರೆ..ಮೂರ್ತಿಗಳನ್ನು ತೋರಿಸಿ, "ಇವ್ರು ಮಾತನಾಡದ ದೇವ್ರು, ಕೈಮುಗಿಯಬೇಕು..ಒಳ್ಳೆದಾಗ್ಲಿ ಅಂತ ಕೇಳಬೇಕು" ಎನ್ನುವಳು. ದೇವರಿಗೆ ಕೈಮುಗಿಯುವ ಭರದಲ್ಲಿ ನಾವು ನೆಲಕ್ಕೆ ಹಾಸಿದ ಸಗಣಿ-ಮಣ್ಣು ಎಲ್ಲವನ್ನೂ ಮೊಣಕಾಲಿನಲ್ಲಿ ಮೆತ್ತಿಕೊಳ್ಳುತ್ತಿದ್ದೆವು. ಕಲ್ಲು. ಮರಗಳು, ಹಾವುಗಳು, ದನಕರುಗಳು..ಎಲ್ಲವೂ ಅಮ್ಮನೆಂಬ ದೇವರಿಗೆ 'ದೇವರು'ಗಳು! ಶಾಲೆಯಲ್ಲಿ ಓದಿಸುವ ಮೇಷ್ಟ್ರು ಜನಗಣತಿ ಸಮಯದಲ್ಲಿ ಮನೆಗೆ ಬಂದರೆ ಅವರೂ 'ಮಹಾದೇವರು'. ಮನೆಗೆ ಬಂದ ಮೇಷ್ಟ್ರಿಗೆ ಕೈಮುಗಿಯಿರಿ ಅನ್ನೋಳು ಅಮ್ಮ. ಮನೆಗೆ ಹಿರಿಯರು ಬಂದರೆ ಅವರ ಕಾಲಿಗೆ ಅಡ್ಡಬೀಳಕೆ ಹೇಳೋಲು ಅಮ್ಮ. ಹೀಗೇ ಸಣ್ಣವರಿರುವಾಗ ಅಮ್ಮ ನಮ್ಮ ತಲೆಯೊಳಗೆ 'ತುಂಬಾ ದೇವರು'ಗಳನ್ನು ತಲೆಯಲ್ಲಿ ತುಂಬಿಸಿಬಿಟ್ಟಿದ್ದಳು. ಇಷ್ಟೆಲ್ಲಾ ದೇವರುಗಳಲ್ಲಿ ದೇವಸ್ಥಾನದಲ್ಲಿರುವ ಮೂರ್ತಿ ದೇವರು ಯಾಕೆ ಕಣ್ಣಿಗೆ ಕಾಣಲ್ಲ ಅಂದರೆ? ದಿನಾ ದೇವರಿಗೆ ಪೂಜಿಸಿ..ಎನ್ನುತ್ತಾ ಕನಸಕದಾಸರ ಕಥೆ ಆರಂಭಿಸುತ್ತಾಳೆ ಪ್ರೀತಿಯ ಅಮ್ಮ. ಹಾಗೇ ಪುಟ್ಟ ವಯಸ್ಸಿನಿಂದಲೂ ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಬೇಕು ಎನ್ನುವ ಅಮ್ಮ ಪರಿಪಾಠ ಈಗಲೂ ಮುಂದುವರೆದಿದೆ. ನಿತ್ಯ ದೇವರಿಗೆ ದೀಪ ಹಚ್ಚುವಾಗಲೂ ಅಮ್ಮ ಹೇಳಿದ್ದೆಲ್ಲಾ ನೆನಪಾಗುತ್ತೆ.

ಮೊನ್ನೆ ಶಿವರಾತ್ರಿ ದಿನ ನಮ್ಮ ಛಾಯಾಕನ್ನಡಿ ಬ್ಲಾಗ್ ಶಿವಣ್ಣ ದೇವಸ್ಥಾನಕ್ಕೆ ಹೋಗಿ ಬಂದು ನಂಗೆ ಪೋನು ಮಾಡಿದ್ದರು. ನಾನು, "ನಂಗೆ ದೇವರ ಬಳಿ ಏನು ಕೇಳಿಕೊಂಡೆ ಅಣ್ಣ?" ಎಂದಿದ್ದಕ್ಕೆ, ಅವರು "ನೋಡು ಮರೀ, ದೇವರು ಫ್ರೆಂಡ್ ಥರ..ಅವನ ಜೊತೆ ಏನೂ ಕೇಳಬಾರದು" ಎಂದುಬಿಟ್ಟರು! ನನ್ನ ತಲೆಯಲ್ಲಿ ವಿಚಿತ್ರ ತಲೆಹರಟೆಗಳು ಹೊಳೆಯತೊದಗಿದವು.

ದೇವ್ರು ಫ್ರೆಂಡ್ ಆದ್ರೆ....! ನಿಜವಾಗಲೂ ದೇವ್ರು ಫ್ರೆಂಡ್ ಆದ್ರೆ...!! ನನ್ನೆದುರು ಕುಳಿತು, "ನಿನ್ನ ದುಃಖವನ್ನೆಲ್ಲ ನನಗೆ ಕೊಡು, ಎನ್ನುತ್ತಲೇ ದುಃಖವನ್ನು ಸಹಿಸುವ ಶಕ್ತಿ ನೀಡುವ ಒಳ್ಳೆಯ ಗೆಳೆಯ ದೇವ್ರು ಆಗಿರ್ತಾ ಇದ್ರೆ..ನಂಗೆ 'ಒಳ್ಳೆಯ ಫ್ರೆಂಡ್ ಕೊಡೋ' ಎಂದು ದೇವರೆದುರು ಹಣತೆ ಹಚ್ಚಿ, ಆ ಮಂದ ಬೆಳಕಿನಲ್ಲಿ ನಿಂತು ಪ್ರಾರ್ಥಿಸೋ ಅಗತ್ಯವಿತ್ತಾ?!!" ....ದೇವರು ಮಾತನಾಡುತ್ತಿದ್ದರೆ...?! ಹೀಗೇ ಯೋಚನೆಗಳ ಸರಮಾಲೆ......

ಕಷ್ಟಗಳು ಎದುರಾದಾಗ..ದೇವರೆದುರು ನಿಂತು ಏಕಾಂಗಿಯಾಗಿ ಕಷ್ಟ ತೋಡಿಕೊಳ್ಳುವಾಗ..ನಮ್ಮ ಫ್ರೆಂಡ್ ಆಗಿ ನಮ್ಮ 'ಕಣ್ಣೀರು ಒರೆಸುವ ಕೈಗಳು' ಆತನಾಗಿದ್ದರೆ..ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವಾ? ಪ್ರತಿಯೊಂದು ಹೃದಯ ನೊಂದಾಗ..ದುಃಖ ಅರಿತುಕೊಳ್ಳುವ, ನಮ್ಮೊಂದಿಗೆ ಮಾತನಾಡುವ 'ಫ್ರೆಂಡು' ಆಗಿದ್ದರೆ...ನೋವು-ನಲಿವಿನ ತಿಕ್ಕಾಟ, ಬದುಕಿನ ಜಂಜಾಟಗಳಿಗೆ ಬಲಿಯಾಗಿ..ಬದುಕನ್ನೇ ಕಳೆದುಕೊಳ್ಳುವ ಕ್ಷಣದಲ್ಲಿ ನಮ್ಮನ್ನು ಅಪ್ಪಿ ಸಮಾಧಾನಪಡಿಸುವ ಫ್ರೆಂಡು ದೇವರಾಗಿದ್ದರೆ..ಬದುಕುವ ಪ್ರತಿಯೊಬ್ಬರಿಗೂ ಜೀವನ ಸುಂದರ ಅನಿಸ್ತಾ ಇತ್ತು ಅಲ್ವಾ?
ಅದೇಕೆ 'ಒಳ್ಳೆಯ ಫ್ರೆಂಡು' ಪ್ರತಿಯೊಬ್ಬರಲ್ಲೂ 'ಜೀವನಪ್ರೀತಿ 'ಹುಟ್ಟಿಸಲ್ಲ..ಗುರಿಸಾಧಿಸುವ ಛಲವನ್ನೇಕೆ ಬೆಳೆಸಲಿಲ್ಲ?ನಂಗೂ ಒಂಟಿಯಾಗಿದ್ದಾಗ..ಜೊತೆಗಾರರು ಬೇಕನ್ನಿಸುತ್ತೆ.,.ನೀನ್ಯಾಕೆ ಅದೆಷ್ಟೋ ಮಂದಿಯ ಒಂಟಿತನ ನೀಗಿಸುವ ಜೊತೆಗಾರನಾಗುವುದಿಲ್ಲ...?!


"ನಮ್ಮೆಲ್ಲಾ ದೌರ್ಬಲ್ಯ, ನ್ಯೂನತೆಗಳೊಂದಿಗೆ ನಮ್ಮನ್ನು ಪ್ರೀತಿಸುವವರು, ಆದರಿಸುವವರು ನಿಜವಾದ ಸ್ನೇಹಿತರು ಆಗಿರುತ್ತಾರೆ" ಅಂತಾರೆ ದೊಡ್ಡವರು., ಆದರೆ ನಾವು ಏನೋ ಸಣ್ಣ ತಪ್ಪು ಮಾಡಿ..ಕ್ಷಮಿಸು ಎಂದು ನಿನ್ನ ಮುಂದೆ ಗೋಳಾಡಿದ್ರೂ ನೀನ್ಯಾನೆ ಮೌನವಾಗಿರ್ತಿಯಾ? ಕನಿಷ್ಠ ನಮ್ಮನ್ನು ಸಮಾಧಾನ ಮಾಡಲ್ಲ? 'ಹಿಡಿಪ್ರೀತಿ' ತೋರಿಸಲ್ಲಾ..? ನಾವು ನಂಬಿದ ಆದರ್ಶಗಳೇ..ಕೆಲವೊಮ್ಮೆ ನಮ್ಮನ್ನು ಕೊಲ್ಲುವಾಗ ಫ್ರೆಂಡು ಆದವನು ನೀನ್ಯಾಕೆ ಸುಮ್ಮನಿರ್ತಿಯಾ? ಪರಿವರ್ತನಶೀಲವಾದ ಬದುಕಿನ ಸನ್ನಿವೇಶಗಳಿಗೆ ಸ್ಪಂದಿಸಿ, ಕಾಲದ ಸವಾಲುಗಳಿಗೆ ಉತ್ತರ ನೀಡಲಾಗದೆ ತಡಕಾಡುವ ನಿನಗೆ ಏನೂ ಅನಿಸಲ್ವಾ? ಅದೆಷ್ಟೋ ಹಸಿದ ಹೊಟ್ಟೆಗೆ 'ಅನ್ನ' ಯಾಕೆ ಆಗುತ್ತಿಲ್ಲ? ಅಳುವ ಕಂಗಳಿಗೆ 'ಕರ್ಚಿಪ್ ' ಯಾಕೆ ಆಗುತ್ತಿಲ್ಲ? ನಮ್ಮೊಂದಿಗೆ ಒಡನಾಡುವ, ಮಾತನಾಡುವ ಮೌನವನ್ನೂ ಮಾತಾಗಿಸುವ, ಗೆಳೆಯ ನೀನ್ಯಾಕೆ ಆಗಲಿಲ್ಲ..ಹೇಳು ನೀನು ಫ್ರೆಂಡ್ ಆಗಿದ್ದರೆ...ಒಂದೇ ಒಂದು ಬಾರಿ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ನನ್ನ 'ಹೃದಯ'ವನ್ನು ಹಂಚಿಕೊಳ್ಳಕೆ ಅವಕಾಶ ಯಾಕೆ ಕೊಡುತ್ತಿಲ್ಲ..!!!! ಎಂದು ದೇವರು ಮಾತನಾಡ್ತಾ ಇರುತ್ತಿದ್ದರೆ ಕೇಳುತ್ತಿದ್ದೆ..!

'ಅಕ್ಕಾ..' ಎಂದು ಬಾಗಿಲು ಬಡಿಯೋ ಸದ್ದು. ತಮ್ಮ ಆಫೀಸ್ನಿಂದ ಬಂದಿದ್ದ. ನನ್ನ ತಲೆಹರಟೆ ಯೋಚನೆಗಳಿಗೆ 'ಕಡಿವಾಣ' ಹಾಕಿದ್ದ.!

Saturday, February 21, 2009

ಹೀಗೊಬ್ಬ ಜಾಹೀರಾತು ಹುಡುಗ..!!

ನನಗಾಗ ಬೆಂಗಳೂರು ಹೊಸತು. ಬಹುಮಡಿಯ ಕಟ್ಟಡಗಳು, ಟ್ರಾಫಿಕ್ ಜಾಮ್, ಸಿಗ್ನಲ್ಲುಗಳು, ಪಾರ್ಕ್ ತುಂಬಾ ಮುತ್ತಿಕೊಂಡಿರುವ ಹುಡುಗ-ಹುಡುಗಿಯರು, ಪಾರ್ಟ್ ಟೈಮ್ ಕೆಲಸಕ್ಕಾಗಿ ಅಲೆದಾಡುವವರು, ನಿತ್ಯ ಮನೆಬಾಗಿಲು ಹಾಕಿಕೊಂಡೇ ಮನೆಯೊಳಗೆ'ಬಂಧಿತ;'ರಾಗಿರುವ ಗೃಹಿಣಿಯರು, ಮುಖ ನೋಡಿದರೆ ಗಹಿಗಹಿಸಿ ನಗುವ ವಿಚಿತ್ರ ಮಾನವಜೀವಿಗಳು..ಇವೆಲ್ಲವನ್ನೂ ಅಚ್ಚರಿಯಿಂದ ನೋಡಿ, ಬೆಂಗಳೂರಿಗೊಂದು 'ಡೆಫಿನೆಶನ್' ಕಂಡುಕೊಳ್ಳುತ್ತಿದ್ದ ಸಮಯ. ಆಗತಾನೇ ಹೊಸದಿಗಂತ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತ್ತು. ಬೆಂಗಳೂರು ಬಗ್ಗೆ ಎಂಥದ್ದೂ ಗೊತ್ತಿಲ್ಲ..ಕಣ್ಣಿಗೆ ಕಂಡಿದ್ದೇ ಬೆಂಗಳೂರು ನನ್ನ ಪಾಲಿಗೆ. ನಗರದ ಒಂದೊಂದು ಸಿಗ್ನಲ್ ದಾಟಲೂ..ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದ ಹುಡುಗಿ ನಾನಾಗಿದ್ದೆ. ಅಂದು ಮೆಜೆಸ್ಟಿಕ್ ನಿಂದ 96 ನಂಬರಿನ ಬಸ್ಸು ಹತ್ತಿ ಮಲ್ಲೇಶ್ವರಕ್ಕೆ ಹೊರಟಿದ್ದೆ. ಬಸ್ಸು ಎಲ್ಲೆಲ್ಲೋ ಸುತ್ತುತ್ತಾ..ಅದೇನೋ 'ಭಾಷ್ಯಂ' ಸರ್ಕಲ್ ಗೆ ಬಂದುಬಿಡ್ತು. ಏನು ಮಾಡೋದು? ಆ ಭಾಷ್ಯಂ ಸರ್ಕಲ್ ಕೂಡ ನನಗೆ ಹೊಸತು. ವಾಪಾಸ್ ಮಲ್ಲೇಶ್ವರಕ್ಕೆ ಬರಲು ಬಸ್ಸು ಎಲ್ಲಿ ನಿಲ್ಲುತ್ತೆ ಗೊತ್ತಿರಲಿಲ್ಲ. ಅಷ್ಟೊತ್ತಿಗೆ ನನ್ನ ಗೊಂದಲವನ್ನು ಗಮನಿಸಿದ ಹುಡುಗನೊಬ್ಬ ಬಂದು 'ನಿಮಗೆ ಎಲ್ಲಿ ಹೋಗಬೇಕು?' ಅಂದ. ನಾನು "ನಂಗೆ ಮಲ್ಲೇಶ್ವರಕ್ಕೆ ಹೋಗಬೇಕು. ಬಸ್ಸು ತಪ್ಪಿ ಇಲ್ಲಿ ಬಂತು. ಬಸ್ ಸ್ಟಾಂಡ್ ಎಲ್ಲಿ ಗೊತ್ತಾಗ್ತಿಲ್ಲ..ಹೇಳ್ತೀರಾ?'ಅಂದೆ. ನಾನೂ ಆ ಕಡೆ ಬರ್ತೀನಿ ಅಂತ ನನ್ನ ಮಾತನಾಡಿಸಿದ. ನನಗೆ ಹೋದ ಜೀವ ಬಂದಂತಾಯಿತು..ನಾನೇನೋ ನಮ್ಮ ಹಳ್ಳೀಲಿ ಇರೋ 'ಪಕ್ಕದ್ಮನೆ' ಹುಡುಗನಂತೆ ಭಾವಿಸಿದ್ದೆ. ನನ್ನ ಪರಿಚಯ ಫೋನ್ ನಂಬರು ಕೇಳಿದ. ಆಫೀಸ್ ನಂಬರ್ ಕೊಟ್ಟೆ. ತಾನೊಬ್ಬ ಸಾಫ್ಟ್ ವೇರ್ ಉದ್ಯೋಗಿ...ನನ್ನ ಕಂಪನಿಯ ಜಾಹೀರಾತು ಕೊಡಲು ಇದ್ರೆ ನಿಮ್ಮನ್ನು ಸಂಪರ್ಕಿಸಬಹುದಾ? ಅಂದಿದ್ದ. ಓಕೆ ಅಂದೆ. ಮೊಬೈಲ್ ನಂಬರ್ ಕೇಳಿದ ..ನನ್ನ ಕಸೀನ್ ಬ್ರದರ್ ನಂಬರು ಕೊಟ್ಟೆ..! ಯಾಕಂದ್ರೆ ನನ್ನ ಕಸಿನ್, ಅಪರಿಚಿತ ಹುಡುಗ್ರು ಸಿಕ್ಕಿ ನಿನ್ನ ನಂಬರ್ ಕೇಳಿದ್ರೆ..ನನ್ನ ನಂಬರು ಕೊಡು..ತಪ್ಪಿಯೂ ನಿನ್ನ ನಂಬರ್ ಕೊಡಬೇಡ, ಹೆಸರೂ ಹೇಳಬೇಡ ಅಂದಿದ್ದ. ನಾನು ಹಾಗೇ ಮಾಡಿದ್ದೆ.

ಬಳಿಕ ಅಣ್ಣನ ಮೊಬೈಲಿಗೆ ಒಂದೇ ಸಮನೆ ಮೆಸೇಜ್ ಬರ್ತಾ ಇತ್ತು. ಪ್ರೀತಿ, ಪ್ರೇಮ, ಪ್ರಣಯದ ಸುತ್ತಾನೇ ಸುತ್ತೋ ಆ ಮೆಸೇಜುಗಳಿಗೆ ಅಣ್ಣನೇ ರಿಪ್ಲೆ ಮಾಡುತ್ತಿದ್ದ. ಅದೃಷ್ಟ ಎಂದರೆ ಒಂದೇ ಒಂದು ಸಲ ಆ ಮನುಷ್ಯ ಫೋನ್ ಮಾಡಲಿಲ್ಲ. ಎರಡು-ಮೂರು ತಿಂಗಳು ಮೆಸೇಜ್ ಗಳಲ್ಲೇ ಕಳೆದುಹೋಯಿತು. ಮತ್ತೆ ಬಂದೇಬಿಟ್ಟಿತು..ಫ್ರೆಬ್ರುವರಿ 13. ರಾತ್ರಿ 10 ಗಂಟೆಗೆ ಫೋನ್ ಮಾಡಿದ್ದ. ಅಣ್ಣ ರಿಸೀವ್ ಮಾಡಲಿಲ್ಲ. ಮತ್ತೆ ಮೆಸೇಜ್ ಅವನಿಂದ, "ನೀನು ಸಿಗೋದಾದ್ರೆ ನಾಳೆ ಬೆಳಿಗ್ಗೆ 10 ಗಂಟೆಗೆ ಮೆಜೆಸ್ಟಿಕ್ ನಲ್ಲಿರ್ತೀನಿ. ನಮ್ಮ ಕಂಪನಿಯ ಜಾಹೀರಾತು ಬಗ್ಗೆನೂ ಮಾತನಾಡಬೇಕು" ಅಂತ ಮೆಸೇಜ್ ಮಾಡಿದ್ದಕ್ಕೆ ಅಣ್ಣ 'ಓಕೆ' ಅಂದಿದ್ದ.

ಈ ಸಲ ಹೊಸದಿಗಂತಕ್ಕೆ ಸಕತ್ ಲಾಭ'..ಒಳ್ಳೆ ಜಾಹೀರಾತು ಬಂದಿದೆ ಅಂತ ಅಣ್ಣ ತಮಾಷೆ ಮಾಡ್ತಿದ್ದ. ಫೆ.14ರ ಬೆಳಿಗ್ಗೆ 8 ಗಂಟೆಗೆ ಆತನಿಂದ ಫೋನು. ಅಣ್ಣ ರಿಸೀವ್ ಮಾಡಿ, 'ಯಾರು ಬೇಕಿತ್ತು?' ಎಂದಾಗ 'ನಾನು ಸಿಂಧು ಜೊತೆ ಮಾತನಾಡಬೇಕಿತ್ತು(ನಾನು ಅವನತ್ರ ನನ್ನ ಹೆಸರು ಸಿಂಧು ಅಂದಿದ್ದೆ)' ಅಂದ. ಅದಕ್ಕೆ ಅಣ್ಣ "ಏನಪ್ಪಾ ಜಾಹೀರಾತು ಕೊಡಬೇಕಿತ್ತಾ? ಇಲ್ಲಿ ಸಿಂಧುನೂ ಇಲ್ಲ, ಬಿಂದುನೂ ಇಲ್ಲ.." ಎನ್ನುವಾಗಲೇ ಫೋನ್ ಕಟ್. ಮತ್ತೆಂದೂ ಆತನ ಮೆಸೇಜ್ ಬರಲೇ ಇಲ್ಲ!! ಈ ಘಟನೆ ನಡೆದಿದ್ದು 2007ರ ಫೆ.14ರಂದು.!! ಈ ಸಲದ ವಿಶೇಷ ಮುಂದಿನ ಬಾರಿ ಹೇಳ್ತೀನಿ..ನಿರೀಕ್ಷಿಸಿ..!!!!

Thursday, February 19, 2009

ಅಮ್ಮಾ ...ನಿನ್ನ ಎದೆಯಾಳದಲ್ಲಿ...

ನಿನ್ನೆ ಅಮ್ಮ ಫೋನ್ ಮಾಡಿ, ಯಾವಾಗ ಬರ್ತೀಯಾ? ಸ್ವಲ್ಪ ಹಣ ಕಳಿಸಿಕೊಡು ಅಂದ್ರು. ಜಮೀನಿಗೆ ಸಂಬಂಧಿಸಿದಂತೆ ಯಾವುದೋ ವಿಷಯಕ್ಕೆ ಅಮ್ಮನಿಗೆ ಅರ್ಜೆಂಟಾಗಿ ಹಣ ಬೇಕಿತ್ತು. ಅಮ್ಮ ಯಾವತ್ತೂ ಹಾಗೇ ನೇರವಾಗಿ ಕೇಳಿದವರಲ್ಲ. ಆದರೆ, ನಿನ್ನೆ ಇದ್ದಕ್ಕಿದ್ದಂತೆ ಹಾಗೇ ಕೇಳಿದಾಗ ಮೊದಲೇ ಮುಂಗೋಪಿಯಾಗಿರುವ ನಾ ಬೈದುಬಿಟ್ಟೆ. 'ನಾನು ಹೇಗಿದ್ದೀನಿ..ಸತ್ತಿದ್ದೀನಾ? ಬದುಕಿದ್ದೀನಾ ಅಂತ 'ಕೇಳಲ್ಲ ಅಂತ ಬೈದೆ. ಅದಕ್ಕೆ ಕಾರಣನೂ ಇತ್ತು. ಮೂರು ದಿನದಿಂದ ಆಫೀಸಿಗೆ ರಜೆ. ನನ್ನ ಪಾಲಿನ ಕೆಲಸ ಬಾಕಿಯಿತ್ತು. ಆರೋಗ್ಯ ಸರಿಯಿರಲಿಲ್ಲ. ಆಸ್ಪತ್ರೆ, ಡಾಕ್ಟರ್ ಅಂತ ಅಲೆದಾಡಿದ್ದೆ. ಆವಾಗ ಯಾರೊಬ್ಬರೂ ಮನೆಯಿಂದ ಫೋನ್ ಕೂಡ ಮಾಡಿರಲಿಲ್ಲ. ತಮ್ಮನೂ ಫೋನ್ ಮಾಡುವಾಗ ರಿಸೀವ್ ಮಾಡಿರಲಿಲ್ಲ. ಆ ಸಿಟ್ಟು ಹಾಗೇ ಉಳಿದಿತ್ತು. ಅಮ್ಮ ಪೋನ್ ಮಾಡುವಾಗ..ಸಿಕ್ಕಿದ್ದೇ ಚಾನ್ಸ್ ಅಂತ ಬೈದೇ ಬಿಟ್ಟೆ! ಆದರೆ, ಅಮ್ಮ ಟೆನ್ಷನ್ ಮಾಡಿಕೊಳ್ಳೋದು ಬೇಡ ಅಂತ ಹುಷಾರಿಲ್ಲ ಅನ್ನೋ ಶಬ್ದವನ್ನೇ ಅಮ್ಮನತ್ರ ಮಾತನಾಡುವಾಗ ಹೊರಕ್ಕೆಸೆದು ಬಿಡ್ತೀನಿ. ಹಾಗಾಗಿ ಆರೋಗ್ಯ ಸರಿ ಇಲ್ಲ ಅಂತ ಹೇಳಲಿಲ್ಲ.
ಆದರೆ, ಬೈದಾಗ ಅಮ್ಮನಿಗೆ ಒಂಚೂರು ಕೋಪ ಬರಲಿಲ್ಲ. ನನ್ನ ಸಿಡುಕನ್ನು ಸಾವರಿಸಿಕೊಂಡು ಹೇಳಿದ್ರು.."ನೋಡಮ್ಮಾ..ನೀನು ಯಾವತ್ತೂ ಚೆನ್ನಾಗಿರ್ತೀಯಾ ಅಂತ ನನ್ನ ಮನಸ್ಸು ಹೇಳುತ್ತೆ. ಬೈದ್ರೆ, ಸಿಟ್ಟು ಮಾಡಿಕೊಂಡ್ತೆ ಸಮಸ್ಯೆ ಬಗೆಹರಿಯಲ್ಲ" ಅಂದ್ರು. ಅಮ್ಮನ ದೊಡ್ಡ ಮಾತಿನೆದುರು ಬಹಳ ಮುಜುಗರಪಟ್ಟೆ. ಆಯ್ತಮ್ಮ..ಎಷ್ಟು ಹಣ ಬೇಕು..ನಾ ಕಳಿಸ್ತೀನಿ ಅಂದು ಫೋನಿಟ್ಟೆ.

ಆದ್ರೆ ಅಮ್ಮನಿಗೆ ಬೈದ ವಿಚಾರ..ರಾತ್ರಿಯಿಡೀ ನನ್ನ ತಲೆಯನ್ನು ಕೆಡಿಸಿಬಿಡ್ತು. ಅಮ್ಮನಿಗೆ ಮುಖಕ್ಕೆ ಹೊಡೆದ ಹಾಗೆ ಬೈದೆನಲ್ಲ..ಎಂಥ ಮಾಡೋದು? ಕ್ಷಮೆ ಕೇಳಿದ್ರೂ ತಪ್ಪೇ..ಯಾಕಂದ್ರೆ ಬೈದಿದ್ದು ಅಮ್ಮನಿಗೆ..ಬೇರೆ ಯಾರಿಗಾದ್ರೂ 'ಸಾರಿ' ಅಂತ ಮೆಸೇಜ್ ಮಾಡಬಹುದಿತ್ತು. ರಾತ್ರಿ ಮಲಗಿದವಳಿಗೆ ಅದೇ ಗುಂಗು..ಬೆಳಿಗೆದ್ದು ತಿಂಡಿ ತಿನ್ನಕ್ಕೆ ಕೂತಾಗಲೂ ಅದೇ ಜ್ಞಾನ..ತಮ್ಮ ಬೇರೇ ಅಮ್ಮನಿಗೆ ಬೈದಿದ್ದಕ್ಕೆ ಕಪ್ಪೆ ಥರ ವಟವಟ ಅನ್ತಾನೆ ಇದ್ದ. ಆಫೀಸ್ಗೆ ಬಂದು ಐಪಾಡ್ ಕಿವಿಗೆ ಹಾಕೊಂಡು ಭಾವಗೀತೆಗಳನ್ನು ಕೇಳಿ ಸಮಾಧಾನ ಮಾಡಿಕೊಳ್ಳೋಣ ಅಂದ್ರೂ...ಮನಸ್ಸು ಸಮಾಧಾನ ಆಗ್ತಿಲ್ಲ. ..ಹಾಗೇ ಚಡಪಡಿಸ್ತಾನೇ ಇದ್ದೆ.
11 ಗಂಟೆಗೆ ಮೊಬೈಲ್ ರಿಂಗುಣಿಸಿತು. ಅಮ್ಮನ ಫೋನು. "ಎಲ್ಲಿದ್ದಿಮ್ಮ? ಹೇಗಿದ್ದಿ?ನಿನ್ನೆ ಏನದು ಬಡಬಡಾಂತ ಮಾತಾಡಿದ್ಯಲ್ಲ..ಅದ್ಕೆ ತಲೆಬಿಸಿ ಮಾಡಿಕೊಳ್ಳೋದು ಬೇಡಾಂತ ಫೋನ್ ಮಾಡಿದೆ.." ಅಂದ್ರು. ಒಂದೇ ಉಸಿರಿಗೆ ಅಮ್ಮ ಅಷ್ಟು ಹೇಳಿದಾಗ ಅಬ್ಬಾ! ಮನಸ್ಸು ಒಂದೇ ಕ್ಷಣ ಖುಷಿಯ ನಿಟ್ಟುಸಿರು ಚೆಲ್ತು. ಅಮ್ಮ ಅನ್ನೋ 'ಸತ್ಯ'ವೇ ಹಾಗೇ ಅಲ್ಲವೇ..ನಾವು ಬೈದ್ರೂ, ಮುನಿಸ್ಕೊಂಡ್ರೂ ಅದನ್ನು ನೋವುಂತ ಕಾಣಲ್ಲ. ಅದೇ ಗುಂಗಿನಲ್ಲಿ ಇದೀಗ ಬ್ಲಾಗ್ ಬರೀತಾ ಇದ್ದೀನಿ...ಖುಷಿ ಖುಷಿಯಾಗಿ!

ತವರಿನಿಂದ ದೂರದಲ್ಲಿದ್ರೆ..ಈ ಕೆಲಸ, ಈ ಒತ್ತಡ, ಜಂಜಾಟ..ನಮ್ಮ ಮನಸ್ಸನ್ನು ಎಷ್ಟು ಕೆಡಿಸಿಬಿಡುತ್ತೆ. ಬೆಂಗಳೂರಿಗೆ ಬಂದು ಎರಡೂವರೆ ವರ್ಷ ಆದ್ರೂ ಅಮ್ಮನಿಗೆ ಈ ರೀತಿ ಸಿಡಸಿಡ ಅನ್ನದ ಹುಡುಗಿ ಮೊನ್ನೆ ಇದ್ದಕಿದ್ದಂತೆ ಬೆಂಕಿಯಂತೆ ಧಗಧಗಿಸಿದ್ದೆ. ಮತ್ತೆ ಅಮ್ಮನತ್ರ ಹೇಳಿದೆ, ಅಮ್ಮ ಏನೋ ಆಫೀಸ್ ತಲೆಬಿಸಿಯಲ್ಲಿದ್ದೆ.,ನೀನೇನೂ ಟೆನ್ಷನ್ ಮಾಡಿಕೋಬೇಡ ಅಂತ. ಆದ್ರೆ, ಅಮ್ಮ ನಾವೇನು ಅಂದ್ರೂ, ಟೆನ್ಷನ್ ಮಾಡಿಕೊಳ್ಳಲ್ಲ..ನನ್ ಜೊತೆ 'ಟೂ' . ಅನ್ನಲ್ಲ. ಅಮ್ಮನೇ ಹಾಗೇ ಅಲ್ಲವೇ? " ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..ಮಿಡುಕಾಡುತ್ತಿರುವೆ ನಾನು..ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ..." ಹೀಗೆ ಮನ ಖುಷಿಯಿಂದ ಹಾಡುತ್ತಿದೆ.

ಕೊನೆಗೆ ಒಂದಿಷ್ಟು ನೆನಪಾಗಿದ್ದು: ಮೊನ್ನೆ ನಮ್ ಮನೆ ಓನರ್ ಮಗ ಮನೀಷ್ ಜೊತೆ ನಿನ್ನಮ್ಮ ನಿಂಗೆ ಯಾಕೆ ಇಷ್ಟ? ಅಂತ ನಿನ್ನೆ ಸುಮ್ ಸುಮ್ನೆ ಕೇಳಿದ್ದೆ..ಅವನಿನ್ನೂ ಚಿಕ್ಕವನು. ಅವನು ಹೇಳುತ್ತಿದ್ದ: "ಅಮ್ಮ ನಂಗೆ ಬೈಯಲ್ಲ, ಅಮ್ಮ ಕೆಲಸ ಮಾಡುತ್ತೆ, ಅಮ್ಮ ಸ್ನಾನ ಮಾಡಿಸುತ್ತೆ, ಮನೆ ಗುಡಿಸುತ್ತೆ, ನಂಗೆ ಜೋಜೋ ಮಾಡುತ್ತೆ. ಅಮ್ಮನಿಗೆ ಸುಸ್ತಾಗುತ್ತೆ. ನಂಗೆ ತುಂಬಾ ಪಪ್ಪಿ ಕೊಡುತ್ತೆ"!

Wednesday, February 11, 2009

ಎದೆಯಿಂದ-ಎದೆಗೆ ಸಂಬಂಧಗಳ ಕೊಂಡಿ ಬೆಸೆದುಬಿಡಮ್ಮಾ..!

ಮಗಳೇ...
ಪತ್ರ ನೋಡಿ ಅಚ್ಚರಿಯಿಂದ ಪಿಳಿಪಿಳಿಂತ ಕಣ್ಣು ಬಿಡ್ತಾ ಇದ್ಯಾ? ಯಾರ ಪತ್ರ ಅಂತ ಮತ್ತೆ ಮತ್ತೆ ಅಚ್ಚರಿ, ಅನುಮಾನಗಳ ಸುಳಿಯಲ್ಲಿ ವಿಲವಿಲ ಒದ್ದಾಡ್ತಾ ಇದ್ಯಾ? ಹೌದು, ನಿನ್ನ ಅನುಮಾನ, ಅಚ್ಚರಿಗಳು ಸಹಜವೇ. ನಿನ್ನೆ ಬೆಳಿಗೆದ್ದು ಪತ್ರಿಕೆ ತೆರೆದಾಗ ಕಂಡ ಹುಬ್ಬಳ್ಳಿಯ ಸರ್ಕಾರಿ ಶಾಲೆಯೊಂದರಲ್ಲಿ ಪ್ರೇಮಕ್ಕಾಗಿ ಆರನೇ ಕ್ಲಾಸಿನ ಪುಟ್ಟ, ಮುಗ್ಧ ಹುಡುಗನೊಬ್ಬ ಸಹಪಾಠಿಯಿಂದಲೇ ಕೊಲೆಯಾದ ಘಟನೆ ಮನಸ್ಸನ್ನು ಕಲಕಿಬಿಡ್ತು. ಇನ್ನೇನೋ ಹೊಸ ಜಗತ್ತಿಗೆ ತೆರೆದುಕೊಳ್ಳುವ ಆ ಮುಗ್ಧ ಕಂದಮ್ಮಗಳಲ್ಲಿ ಪ್ರೇಮ, ಅದಕ್ಕಾಗಿ ನಡೆದ ಕೊಲೆ..ಅಪರಾಧಿಗಳಂತೆ ಕಂಬಿ ಎಣಿಸುತ್ತಿರುವ ಮಕ್ಕಳನ್ನು ಕಂಡಾಗ ನನ್ನ ಜೀವ ರೋಧಿಸಿತ್ತು. ಕಣ್ಣೀರೇ ಬತ್ತಿಹೋದ ಹೃದಯದಲ್ಲಿ ಮತ್ತೆ ಕಣ್ಣೀರಧಾರೆ ಉಕ್ಕಿಹರಿಯಿತ್ತು. ನಿನ್ನ ಮುಗ್ಧ ಮುಖ ಕಣ್ಣೆದುರು ಬಂದು ನಿಂತಿತ್ತು. ನಿನಗೆ ಅಮ್ಮನಾಗಲಿಲ್ಲವಾದರೂ..ಅಮ್ಮನಾಗಿ ಕೆಲ ಮಾತುಗಳನ್ನು ಹೇಳಬೇಕನಿಸಿತ್ತು ಮಗಳೇ..ನನ್ನ ಮಾತುಗಳನ್ನು ತಿರಸ್ಕರಿಸಲ್ಲ ತಾನೇ?

ಆ ಜನಗಳ ಸದ್ದಿಲ್ಲದ ಪುಟ್ ಪಾತ್ ನಲ್ಲಿ ನಿನ್ನ ಹೆತ್ತು ಬಿಸಾಡಿದಾಗ ನನ್ನ ಕರುಳೂ ಅತ್ತಿದೆ. ಮಡಿಲಲ್ಲಿ ಜೋಕಾಲಿಯಾಡಿಸಬೇಕೆಂದು ಮನ ಹಂಬಲಿಸಿದೆ. ಪ್ರೀತಿ, ಮಮತೆಯ ಹಾಲುಣಿಸಿ ಎದೆಯಾಳದಲ್ಲಿ ನಿನ್ನ ಬಚ್ಚಿಡುವ ಅಮರ ಆಸೆ ನನಗೂ ಇತ್ತಮ್ಮ. ಆದರೆ, ಆ ಕ್ಷಣ ಅಮ್ಮನಾಗಿ ಮಗುವಿನ ಮನಸ್ಸು ಅರಿಯಲೂ ಶಕ್ತಳಾಗಿರಲಿಲ್ಲ . ನಿನಗೊಂದು ನೆಲೆ, ಬೆಚ್ಚಗಿನ ಆಸರೆ..ನಿತ್ಯ ನಿನ್ನ ನಗುವಿನಲ್ಲೇ ಬೆಳಕು ಕಾಣುವ ಆಸೆ ನನಗೂ ಇತ್ತು..ಆದರೆ ಹಾಗಾಗಲಿಲ್ಲ ನೋಡು!

ನನ್ನ ಮಡಿಲಲ್ಲಿ ಹುಟ್ಟಿ, ಯಾರದೋ ಬಾಟಲ್ ಹಾಲುಂಡು, ಯಾರೋ ತೂಗಿದ ಬದುಕಿನ ತೊಟ್ಟಿಲಲ್ಲಿ ಬೆಳೆದೆ. ನಮ್ಮ ದೇಶ, ನಮ್ಮ ಸಂಸ್ಖೃತಿ ಎಂದು ಬೀದಿ ಬೀದಿಯಲ್ಲಿ ನಿಂತು ಬೊಬ್ಬಿಡುವವರು..ಯಾರೋ ಒಬ್ಬ ಕಾಮುಕನ ಕ್ಷಣಿಕ ತೃಷೆಗೆ ಬಲಿಯಾಗಿ ನಿನ್ನ ಹೆತ್ತಾಗ ...ಬೆಳಕಾಗಲಿಲ್ಲ, ದಾರಿ ತೋರಿಲ್ಲ. ಸಮಾಜದ ಎದುರು ಹೆಣ್ಣಾಗಿ ನಿನ್ನ ಜೊತೆ ಬದುಕುವ ಹಕ್ಕನ್ನೂ ಸಮಾಜ ಕಿತ್ತುಕೊಂಡುಬಿಟ್ಟಿತ್ತು..ಆ ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ ಮಗಳೇ.. ಸಮಾಜಕ್ಕೆ ಹೆದರಿ ಅದೆಂಥ ನೀಚ ಕೆಲಸಮಾಡಿಬಿಟ್ಟೆ...ನಿನ್ನಿಂದ ಅಮ್ಮಾ ಅಂತ ಕರೆಸಿಕೊಳ್ಲಲು ನಾ ಅರ್ಹಳಲ್ಲ ಬಿಡು..ಆದರೂ ಹೆತ್ತ ಮಡಿಲು ಮರೆತೇತೇ? ಹೌದು! ಮಗಳೇ....ಸೂರ್ಯ-ಚಂದ್ರರಿರುವಷ್ಟೇ ಸತ್ಯ..ನಿನ್ನ ಕಣ್ತುಂಬಾ ನೋಡಬೇಕು..ನಿನ್ನ ಹೆಜ್ಜೇಲಿ ನನ್ನ ಹೆಜ್ಜೆಯಿಟ್ಟು ಮಗಳೇ ಅನ್ನಬೇಕು. ಹಾಲು, ತುತ್ತು ಬಾಯಿಗಿಡಲು ಹೃದಯ ಹಂಬಲಿಸುತ್ತೆ . ಒಂಬತ್ತು ತಿಂಗಳು ಹೊತ್ತು ಮೆರೆದವಳಿಗೆ ತುತ್ತು ನೀಡಿ ಸಾಕೋ ಧೈರ್ಯ ಇರಲಿಲ್ಲ ಅಂತ ನನ್ನ ನಾನೇ ಶಪಿಸಿಕೊಳ್ಳುತ್ತೇನೆ.

ನೀನು ತುಂಬಾನೇ ಚೆನ್ನಾಗಿದ್ದೀಯಾ..ಆದರೂ ಪತ್ರಿಕೇಲಿ ಓದಿದ ಘಟನೆ ಮನಸ್ಸನ್ನು ತಲ್ಲಣಿಸಿತ್ತು. ಎಲ್ಲಿ ನನ್ನ ಮಗಳು ಎಡವಿಬಿಡ್ತಾಳೋ ಅಂತ ಭಯ ನಂಗೆ. ಪ್ರೇಮದ ಗಾಥೆಯಲ್ಲಿ ಎಡವಿಬೀಳಬೇಡಮ್ಮಾ. ಪ್ರೇಮಿಸುವ ಬದಲು, ಪ್ರೀತಿಸು..ನಿನ್ನನ್ನು, ಜಗತ್ತನ್ನೂ, ಕೊಟ್ಟಿರುವ ಬದುಕನ್ನು! ಇದರಲ್ಲೇ ಜೀವನಸುಖ ಅಡಗಿದೆ ಪುಟ್ಟೀ..ಬೇರೆಯವರ ಪ್ರೀತಿ ಬಯಸುವ ಮೊದಲು ನಿನ್ನೊಳಗೆ ಪ್ರೀತಿಯ ಸಸಿ ಬೆಳೆಸಿಬಿಡು ಮಗಳೇ..

"ತಾರುಣ್ಯದ ಉನ್ಮಾದದಲ್ಲಿ ಜಗತ್ತೆಲ್ಲ ಸುಂದರಕಾಂಡ ಎನಿಸುತ್ತದೆ. ಜೀವನವೆಲ್ಲ 'ಉದ್ಯೋಗಪರ್ವ' ಎನಿಸುತ್ತದೆ. ಪ್ರತಿಯೊಬ್ಬ ಗದರ್ಭನೂ ಗಂಧರ್ವನಾಗುತ್ತಾನೆ. ಅಪಸ್ಮಾರಿಯೂ ಅಪ್ಸರೆಯೆನಿಸುತ್ತಾಳೆ" ಮತ್ತೆ ಮತ್ತೆ ನೆನಪಾಗುವ ಈ ಸಾಲನ್ನು ನಿನ್ನ ಕಿವಿಯಲ್ಲಿ ಮತ್ತೆ ಮತ್ತೆ ಗಟ್ಟಿಯಾಗಿ ಕೂಗಬೇಕನಿಸುತ್ತೆ.

ಕನಸ ಕನವರಿಕೆಯಲ್ಲಿ, ಮನದ ಮಾರ್ದನಿಯಲ್ಲಿ, ಕವಿಗಳ ಸಾಲಿನಲ್ಲಿ, ಸಂಗೀತದಲ್ಲಿ, ಕಲಾವಿದನ ಚಿತ್ರಪಟಗಳಲ್ಲಿ, ಸೃಷ್ಟಿ ಸಂಕುಲಕೆ ಸಾಮೀಪ್ಯ ದೇದಿಪ್ಯಮಾನವಾಗಿ ಹೊಳೆವ ಹೆಣ್ಣು..ಕ್ಷಣಮಾತ್ರದ ತಪ್ಪಿಗೆ ಯಾರಿಗೂ ಬೇಡವಾಗುತ್ತಾಳೆ. ಆಕೆಯ ಹೃದಯದಲ್ಲಿ ಹೆಪ್ಪುಗಟ್ಟಿದ ನೋವಿಗೆ ದನಿಗೂಡಿಸುವವರು ಯಾರೂ ಇರುವುದಿಲ್ಲ. ಮಗಳೇ..ಪ್ರೀತಿ, ಮಮತೆಯ ಮೂಲಕವೇ ಜಗದ ಎದೆಯಿಂದ -ಎದೆಗೆ ಸಂಬಂಧಗಳ ಕೊಂಡಿ ಬೆಸೆದುಬಿಡಮ್ಮಾ...ಆದರೆ ನಿನ್ನನ್ನು ಬಲಿಯಾಗಿಸಿ ಅಲ್ಲ!

ಮಗಳೇ ಒಂದೇ ಒಂದು ಆಸೆ..ನೀನು ಬರಡು ಎದೆಗೆ ತುಂತುರು ಹನಿ ಚಿಮುಕಿಸುವ ಜೀವನ್ಮುಖಿಯಾಗಬೇಕು. ಪ್ರೀತೀನ ಜಲಧಾರೆಯಂತೆ ಹರಿಸುವ, ಜಗತ್ತಿನ ಒಡಲಾಳದ ದನಿಯಾಗಬೇಕು. ಜೀವನದ ಸತ್ಯಗಳಿಗೆ ನಿನ್ನ ನೀ ತೆರೆದುಕೊಳ್ಳುವಾಗ ಜಗತ್ತಿನ ನೀರವತೆಯನ್ನು ಅರ್ಥಮಾಡಿಕೊಂಡು ಹೆಜ್ಜೆಯಿಡುವ ಮಗಳು ನೀನಾಗಬೇಕು.

ಈ ನಲವತ್ತು ವರುಷಗಳಲ್ಲಿ ಬೀದಿಬದಿಯನ್ನೇ ಬದುಕಾಗಿಸಿದ ನನಗೆ ಸಂಸಾರದ ಸುಖ-ದುಃಖಗಳಿಲ್ಲ. ಬೆಳದಿಂಗಳೂ ನನ್ನ ಪಾಲಿಗೆ ಬೆಳಕಾಗಿಲ್ಲ. ನನ್ನ ಕಣ್ಣಲ್ಲಿ ನಗು ತರಿಸಿಲ್ಲ. ಜಗದ ನಗುವೂ ನನ್ನ ಮುಖದಲ್ಲಿ ಮಂದಹಾಸ ಮೂಡಿಸಲಿಲ್ಲ. ಜೋಗುಳ ತೂಗುತ್ತಾ, ಮಮತೆಯ ಮಹಾಪೂರ ಹರಿಸುವ, ಮೈಮರೆತು ನಗುವ ನಿನ್ನಮ್ಮ ನಾನಾಗಲಿಲ್ಲ..ಕ್ಷಮಿಸಿಬಿಡು ಮಗಳೇ..
ಇಂತೀ,
ಅಮ್ಮ

....ಮೊನ್ನೆ ಮಾತನಾಡುತ್ತಾ ಕುಳಿತಂತೆ, ಪ್ರಕಾಶ್ ಹೆಗ್ಡೆ ಸರ್, ನಾನು ವ್ಯಾಲಂಟೈನ್ಸ್ ಡೇ ಗೆ 'ಬಾಂಬ್' ಹಾಕ್ತೀನಿ ಅಂದ್ರು..ಶಿವಣ್ಣ ಕೇಳಿದ್ರೆ ಒಂಚೂರು ಬಿಚ್ಚದೆ 'ಸಸ್ಪೆನ್ಸ್'ನಲ್ಲಿಟ್ರು. ಇನ್ನೊಬ್ಬ ಬ್ಲಾಗ್ ಗೆಳೆಯನ ಕೇಳಿದ್ರೆ..'ನಾನು ನನ್ನ ಗೆಳತಿಗೆ ಪತ್ರ ಬರೀಬೇಕು' ಅಂದ. ಗೆಳತಿನ ಕೇಳಿದ್ರೆ, 'ಹೇಳಕ್ಕಾಗಲ್ಲ' ಅಂದ್ಳು. ಇವರೆಲ್ಲರ ನಡುವೆ ನಾನೂ ಏನಾದ್ರೂ ಹೊಸತು ಬರೀಬೇಕು..ಈ ಬಾಂಬ್, ಸಸ್ಪೆನ್ಸ್ ಗಳ ನಡುವೆ ನನಗೆ ಕನಿಷ್ಠ ಪಕ್ಷ ನೂರಕ್ಕೆ ಮೂವತ್ತು ಅಂಕ ಆದ್ರೂ ಕೊಡಬೇಕು..ಅಂತ ಅಂದುಕೊಂಡವಳಿಗೆ 'ತಾಯಿ ಮಗಳಿಗೆ ಪತ್ರ ಬರೆದರೆ ಹೇಗೇ?' ....ಎಲ್ಲೋ ನೋಡಿದ್ದು...ಎಲ್ಲೋ ಕೇಳಿದ್ದು..ಮನದೊಂದಿಗೆ ಮಾತನಾಡಿದಾಗ ಈ ಪತ್ರ ಹುಟ್ಟಿದೆ.

Tuesday, February 10, 2009

ಅಣ್ಣನ ಪತ್ರದಲ್ಲಿ 'ಕರ್ವಾಲೋ' ಕಲರವ..

ಈ ಹಿಂದೆ ಅಣ್ಣನೊಬ್ಬ ಬರೆದ ಪತ್ರವನ್ನು ಇದೇ ಬ್ಲಾಗಿನಲ್ಲಿ ಹಾಕಿದ್ದೆ. ಇದೀಗ ಮತ್ತೆ 2005ರ ಅಕ್ಟೋಬರ್ 3!ರಂದು ಮೈಸೂರಿನ ಅನಿಲಣ್ಣ ಬರೆದ ಪತ್ರವನ್ನು ಇಲ್ಲಿ ಹಾಕಿದ್ದೀನಿ. ಪತ್ರ ಬರೆಯೋದು ಒಂದು ಕಲೆ. ಆತ ಪ್ರತಿ ಸಲ ಪತ್ರ ಬರೆದಾಗಲೂ ಅದರಲ್ಲಿ ಬೊಗಸೆ ತುಂಬಾ ಪ್ರೀತಿಯೊಂದಿಗೆ, ಆತ ಓದಿದ ಪುಸ್ತಕಗಳ ಕುರಿತು, ತಿಳಿದಿರುವ ಒಳ್ಳೆಯ ವಿಚಾರಗಳನ್ನು ಬರೆದು ಕಳುಹಿಸುತ್ತಿದ್ದ. ನೋಡಿ ಈ ಪತ್ರದೊಳಗೆ ತಮ್ಮೂರ ಸೋನೆ ಮಳೆ ಮಾತ್ರವಲ್ಲ ತೇಜಸ್ವಿ ಅವರ 'ಕರ್ವಾಲೋ' ಕಾದಂಬರಿ ಕುರಿತು ಅನಿಸಿದ್ದು ಹಂಚಿಕೊಂಡಿದ್ದಾನೆ,

ಹಾಯ್ ಮಾರಾಯ್ತಿ.. ಹೇಗಿದ್ದೀಯಾ? ಆಳ್ವಾಸ್ ನುಡಿಸಿರಿ ತುಂಬಾ ಇಷ್ಟವಾಗಿದೆ ಅನ್ಸುತ್ತೆ. ನೀನಂತೂ ನಿಜಕ್ಕೂ ಪುಣ್ಯವಂತೆ. ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಿಗೆ ನಿಮ್ಮೂರು ಒಂಥರಾ ಸುಂದರ ವೇದಿಕೆ. ನಮ್ಮೂರಲ್ಲೂ ಆ ರೀತಿಯ ಕಾರ್ಯಕ್ರಮಗಳು ನಡೆಯೋದು ತೀರ ಅಪರೂಪ. ನಿನ್ನ ಎರಡೂ ಪತ್ರಗಳು ಇವತ್ತೇ ಸಿಕ್ಕಿವೆ. ನಿನ್ನ ಮೊದಲ ಪತ್ರವೇ ತುಂಬಾ ಇಷ್ಟವಾಯಿತು. ನಂಗೆ ನವೆಂಬರ್ 20ಕ್ಕೆ ಸಿಇಟಿ ಪರೀಕ್ಷೆ ಇದೆ, ಯಾಕೋ ಅಷ್ಟೊಂದು ಚೆನ್ನಾಗಿ ಪತ್ರ ಬರೀಲಿಕೆ ಆಗ್ಲಿಲ್ಲ. 'ಕೋಪ ಮಾಡ್ಕೋಬೇಡವೇ ತಂಗೀ..ಈ ಪತ್ರನಾ ತುಂಬಾ ಶ್ರದ್ಧೆಯಿಂದ ಬರೀತಾ ಇದ್ದೀನಿ. o.k. ನಾ?" ನಾನು ನಿನ್ನೆದುರು ಇದ್ದರೆ ಕಿವಿ ಹಿಂಡ್ಕೊಂಡು ದಂಡ ಹೊಡೀತಾ ಇದ್ದೆ..ನಗ್ಬೇಡಾ...!

ಪಕ್ಕದ್ದಲ್ಲೇ ಟೇಪ್ ರೆಕಾರ್ಡರ್ ಬಾಯಿಯಿಂದ ನಿಸಾರ್ ಅಹಮ್ಮದ್ ಅವರ
'ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ....
ಯಾಕೋ ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆನ್ನ ಮನಸ್ಸು...."
ಹೊರಬರುತ್ತಿದೆ. ನಿಜಕ್ಕೂ ಈ ಹಾಡು ಅದ್ಭುತ. ಪ್ರತಿಯೊಬ್ಬ ಮನುಷ್ಯನಿಗೂ ವಿರಹದ ಹಾಡುಗಳೇ ಯಾಕೋ ಇಷ್ಟವಾಗುತ್ತದೆಯಂತೆ, ಅಪ್ಯಾಯಮಾನವಾಗಿ ಬಿಡುತ್ತದೆ. ಇನ್ನೂ ಮುಂದೆ ಈ ವಿಷಾದಗಳ ಹಾದಿಯಲ್ಲೇ ಮುಂದೆ ಸಾಗಿದರೆ 'ಬೇಂದ್ರೆ ಅಜ್ಜ' ಜೊತೆಯಾಗ್ತಾರೆ. ಅವರ 'ನೀ ಹಿಂಗ ನೋಡಬ್ಯಾಡ' 'ಹುಬ್ಬಳ್ಳಿಯಾಂವ' 'ಸಖೀಗೀತ'ದ ಕೆಲವು ಸಾಲುಗಳು ಎಷ್ಟೊಂದು ಮಧುರ ಅಲ್ವಾ?

ನಿನ್ನ ಪರೀಕ್ಷೆಗೆ ಶುಭ ಹಾರೈಕೆ. ಬರಹಲೋಕದಲ್ಲಿ ದಾಪುಗಾಲಿಟ್ಟು ಮುಂದೆ ಸಾಗುತ್ತಿದ್ದಿಯಾ...ಹಾಗೇ ಈ ಪಯಣ ಸಾಗಲಿ. ನಿನ್ನ ಪ್ರತಿ ಹೆಜ್ಜೆಗೂ ನಿನ್ನಣ್ಣನ ಪ್ರೀತಿಯ ಹಾರೈಕೆಗಳಿವೆ. ಉಮೇಶ್ ಗೆ ಫೋನ್ ಮಾಡಿದ್ದೆ. ಚಿತ್ರಾ ಮೂಡುಬಿದಿರೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಳೆ ಅಂತ ಹೇಳಿದ್ರು. ಬಹುಶಃ ಇವತ್ತು ಊರಿಗೆ ಬಂದಿರಬಹುದು, ನಾಳೆ ಭೇಟಿಯಾಗ್ತೇನೆ. ಮತ್ತೆ ಸುಮಾರು ಬಾರಿ ನಿನ್ನ ಫ್ರೆಂಡ್ ಮೊಬೈಲ್ ಗೆ ಕರೆ ಮಾಡಿದ್ದೆ..ಹ್ಞೂಂ..ನೀನೂ ಸಿಕ್ಕಲಿಲ್ಲ..ಸರಿಯಾಗಿ ಲೈನೂ ಸಿಗಲಿಲ್ಲ.

ಇದು ಅಂತಿಮ ವರ್ಷ ಮುಂದೆ ಏನ್ಮಾಡುಕಂತಿದ್ದೀಯಾ? ಎಲ್ಲಿಯಾದ್ರೂ ಒಳ್ಳೆ ಕಡೆ ಕೆಲಸ ಗಿಟ್ಟಿಸಿಕೊಂಡರೂ ಮುಂದೆ ಓದು. ಅಧ್ಯಯನ ನಿಲ್ಲಿಸಬೇಡ. 'ಚಿಲಿಪಿಲಿ ಚಿಣ್ಣರ ಮೇಳ' ಹೇಗಾಯ್ತು?
ನಮ್ಮೂರು ಕೂಡಾ ಒಂಥರಾ ಮಲೆನಾಡಿನ ರೀತಿ ಇದೆ. ಯಾವಾಗ ನೋಡಿದ್ರೂ ಜಡಿಮಳೆ..ಸೋನೆ ಮಳೆ..ತುಂತುರು ಮಳೆ. ಇಳೆಯ ಒಡಲಲ್ಲಿ ಪ್ರೀತಿಯ ಬೀಜನೆಟ್ಟು ಬೆಳೆಸುವ ಮಳೆಯೆಂಬ ಮಾಯೆಯೇ ಅದ್ಭುತ. ಚಹಾ ಗುಟುಕಿಸುತ್ತಾ ಮಳೆಯನ್ನೇ ದಿಟ್ಟಿಸಿ ನೋಡುತ್ತಿದ್ದರೆ, ಹುದುಗಿಹೋದ ನೆನಪುಗಳ ಖಜಾನೆಯಿಂದ ಸವಿಕ್ಷಣಗಳ ಮಳೆ, ಮೈ-ಮನ ತೋಯಿಸುತ್ತೆ. ಅದಕ್ಕೆ ಅಲ್ವಾ ಕವಿ ಹೇಳೋದು "ಮತ್ತೆ ಮಳೆ ಹುಯ್ಯುತ್ತಿದೆ..ಎಲ್ಲಾ ನೆನಪಾಗುತ್ತಿದೆ' ಎಂದು. ನಿಮ್ಮೂರಿನಲ್ಲಿ ಮಳೆ ಹೇಗೇ? ನೇಗಿಲಯೋಗಿ ಚೆನ್ನಾಗಿದ್ದಾನೆಯೇ?

ಸದ್ಯಕ್ಕೆ ತೇಜಸ್ವಿ ಅವರ ಕರ್ವಾಲೋ ಓದ್ತಾ ಇದ್ದೀನಿ. ಈ ಹಿಂದೆ ಮೂರು-ನಾಲ್ಕು ಬಾರಿ ಓದಿದ್ದೇನೆ. ನಿಜಕ್ಕೂ ಕರ್ವಾಲೋ ಅದ್ಭುತ ಪುಸ್ತಕ. ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿಕೊಂಡು ಯಕ್ಷ-ಗಂಧರ್ವರ ಕಥೆಯನ್ನು ಕೇಳುತ್ತಿದ್ದರೆ ಎಷ್ಟು ಸಂತೋಷವಾಗುತ್ತದೋ, ಅಷ್ಟೇ ಖುಷಿಯಾಗುತ್ತದೆ ಕರ್ವಾಲೋ ಓದುತ್ತಿದ್ದರೆ ...!

ಕನ್ನಡ ಸಾಹಿತ್ಯದಲ್ಲಿ ಕೆಲವೊಂದು ಪಾತ್ರಗಳಿವೆ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ 'ನಾಯಿಗುತ್ತಿ', ಕಾರಂತರ 'ಚೋಮ', ಭೈರಪ್ಪನವರ 'ಮಂದ್ರ'ದ 'ಮೋಹನಲಾಲ'...ಇವರ ಜೊತೆಗೆ ತೇಜಸ್ವಿಯ 'ಮಂದಣ್ಣ' ಒಬ್ಬ ಅತ್ಯದ್ಭುತ ವ್ಯಕ್ತಿ.
ನಿಗೂಢ ಕಾಡಿನ ಸಮಸ್ತ ಹೊಳಪುಗಳನ್ನು ತಿಳಿದುಕೊಂಡು ಕೂಡಾ, ತನ್ನ ಅರಿವಿನ ಬಗ್ಗೆ ಗೊತ್ತೇ ಇರದ ಮಂದಣ್ಣ, ಕರ್ವಾಲೋರ ಶಿಷ್ಯನಾಗಿ ಕರ್ವಾಲೋರಿಗೆ ಹಾರುವ ಓತಿಯ ಸಂಶೋಧನೆಯಲ್ಲಿ ಸಹಕರಿಸಿದ್ದು, ತೇಜಸ್ವಿಯವರು ಅದನ್ನು ನಿರೂಪಿಸುವ ಹಾಸ್ಯಮಯ ಶೈಲಿ, ಎಲ್ಲವೂ ಒಂದು ಸುಂದರ ತಾಣವೊಂದರಲ್ಲಿ ಪ್ರಯಾಣ ಮಾಡಿದ ಅನುಭವ ನೀಡುತ್ತದೆ. ಕಾದಂಬರಿಯ ಆರಂಭದಲ್ಲಿ 'ಜೇನುನೊಣ'ದ ಬಗ್ಗೆಯೇ ಹೆಚ್ಚಿನ ಕುತೂಹಲಕಾರಿ ಮಾಹಿತಿ ದೊರಕಿದರೂ, ನಂತರ ಪ್ರಭಾಕರ ಕರ್ವಾಲೋರ ಸಖ್ಯದಿಂದ ಜೀವಜಗತ್ತಿನ ವಿಸ್ಮಯಗಳನ್ನು ಅನಾವರಣಗೊಳುತ್ತದೆ. ಜೀಪಿಗೆ ಮುತ್ತಿಗೆ ಹಾಕಿದ ಜೇನು ನೊಣಗಳ ಪ್ರಸಂಗ, ಮಂದಣ್ಣ ಡೋಲು ಶಬ್ಧ ಮಾಡಿದ ಕೆಲಸ, ಮಂದಣ್ಣನ ಮದುವೆ, ದಪ್ಪಗಾಜಿನ ಕನ್ನಡಕದ ಗೂಬೆ ಮೊರೆಯಾತ, ಬಿರ್ಯಾನಿ ಕರಿಯಪ್ಪ, ನಾಯಿ ಕಿವಿ, ಪ್ಯಾರಾ, ಕಾಡಿನ ವರ್ಣನೆ..ಎಲ್ಲವೂ ಮನಸ್ಸಲ್ಲಿ ನೆಲೆನಿಂತುಬಿಡುವಷ್ಟು ಚೆನ್ನಾಗಿ ನಿರೂಪಿಸಿದ್ದಾರೆ ತೇಜಸ್ವಿ. ಕೊನೆಗೂ ಹಾರುವ ಓತಿ ಇವರ ಕೈಗೆ ಸಿಗೋದೇ ಇಲ್ಲ ಅಲ್ವಾ? ದಯಾಮಯಿ ಪ್ರಕೃತಿ ಮಾತೆ, ತನ್ನ ಅಗಾಧ ನಿಗೂಡತೆಯನ್ನು ಯಾವತ್ತೂ ಅಲ್ಪನಾದ ಮನುಷ್ಯನಿಗೆ ಬಿಟ್ಟುಕೊಡುವುದೇ ಇಲ್ಲ ಎಂದನಿಸಿತ್ತು ನನಗೆ. ಕರ್ವಾಲೋ ಥರದ ವಿಜ್ಞಾನಿ ನಮ್ಮ ನಡುವೆ ಇರಬೇಕಾದ್ದು ತೀರಾ ಅನಿವಾರ್ಯ.

ತಾವೋ ಎನ್ನುವ ಯಾವುದೋ ಅಪರಿಚಿತ ಕವಿಯೊಬ್ಬನ ಕನ್ನಡ ಅನುವಾದಿತ ಕವಿತೆಗಳ ಸಂಕಲನವೊಂದು ಓದಲು ಸಿಕ್ಕಿತ್ತು. ಒಂದೆರಡು ಸುಂದರ ಸಾಲುಗಳಿವೆ..ತಕೋ...
"ನನ್ನ ಹೃದಯದೊಳಗಿನಿಂದ ಹೊರನೆಗೆಯುವ ವಲಸೆ ಹಾಡುಗಳು. ನಿನ್ನ ಪ್ರೀತಿಯ ಸ್ತರದಲ್ಲಿ ಗೂಡು ಕಟ್ಟಲೆತ್ನಿಸುತ್ತವೆ"

"ಇರುಳ ಕತ್ತಲಿನಲ್ಲಿ ದೇಹ ಮತ್ತು ಆತ್ಮ ಸಂಯೋಗಗೊಂಡಿವೆ. ಕತ್ತಲ ಮಂಜು ಕರಗಿದಾಗ ಅವು ಬೇರೆ-ಬೇರೆ. ಹಗಲ ಬೆಳಕಿನಲ್ಲಿ ಎರಡೂ ಆತ್ಮಗಳು ಒಂದಾಗಲಾರವು. ಆದರೆ ಇರುಳಿನ ಶೂನ್ಯದಲ್ಲಿ ಏನಾದರೂ ಮಾಡಬಹುದು"

ತಾವೋ ತನ್ನ ಸ್ನೇಹಿತನಿಗೆ ಹೇಳುತ್ತಾನೆ..
"ದಯವಿಟ್ಟು ದೀಪವಾರಿಸು ಗೆಳೆಯಾ..ನನಗೆ ಬೆಳಕು ಬೇಕಿದೆ' "
ಈ ಪುಟ್ಟ ಸಾಲು ಎಷ್ಟೊಂದು ಅದ್ಭುತ ಅನಿಸುತ್ತೆ ಅಲ್ವಾ? ವಿಷಾದ, ನೋವುಗಳು ಕರಗಿ ಮನಸ್ಸಿಗೆ ಸಾಂತ್ನನ ನೀಡುವ ಸಾಮರ್ಥ್ಯ ವಿರುವುದು ಕತ್ತಲಿಗೆ ಮಾತ್ರ. ಕತ್ತಲು ಕರಾಳವಲ್ಲ ಸವಾಲು ಅಷ್ಟೇ.
ಪತ್ರ ಮುಗಿಸುತ್ತೇನೆ...ಪರೀಕ್ಷೆಗೆ ಚೆನ್ನಾಗಿ ಓದು. ಪ್ರತಿ ಕ್ಷಣಗಳೂ ನಿನ್ನ ಮುಗ್ಧ ಮನಸ್ಸಿಗೆ, ಪ್ರತಿಭೆಗೆ, ಪ್ರಫುಲ್ಲ ಭಾವನೆಗಳಿಗೆ ಉತ್ಸಾಹ, ಚೈತನ್ಯ, ಸ್ಫೂರ್ತಿ ತುಂಬಲಿ.
-ಪ್ರೀತಿಯಿಂದ ಅಣ್ಣ,
ಅನಿಲ್ ಕುಮಾರ.

Friday, February 6, 2009

ನನ್ನ ಅಮ್ಮ 'ಅಜ್ಹಿ'ಯಾದಾಗ....!!

ಏಳು ವರುಷಗಳ ಹಿಂದೆ. ನನ್ನ ಅಮ್ಮನ ಕೂದಲು ಸ್ವಲ್ಪ ಸ್ವಲ್ಪ ಹಣ್ಣಾಗುತ್ತಿದ್ದ ಸಮಯ. ಕೂದಲು ಹಣ್ಣಾದರೂ, ಉತ್ಸಾಹವನೇನೂ ಬತ್ತಿರಲಿಲ್ಲ. ನಾನು ಹತ್ತನೇ ಕ್ಲಾಸು ಪಾಸು..ಆಮೇಲೆ ಉಜಿರೆಗೆ ಪಿಯುಗೆ ಸೇರಬೇಕು ಎಂಬುದು ಅಮ್ಮನ ಹಠ. ಆಯ್ತು ಅಮ್ಮ ಹೇಳಿದ ಮೇಲೆ ಮುಗೀತು..ಅದು ಲಕ್ಷ್ಮಣ ರೇಖೆನೂ ಹೌದು, ಸುಗ್ರೀವಾಜ್ಞೆನೂ ಹೌದು. ಕಾಲೇಜಿಗೆ ಪ್ರವೇಶ ಪ್ರಕ್ರಿಯೆ ಎಲ್ಲಾ ಮುಗೀತು. ಹಾಸ್ಟೇಲ್ ಗೆ ಸೇರಿದ್ದೂ ಆಯಿತು. ಅಮ್ಮ ಕಾಲೇಜು ಆರಂಭವಾಗೋಕೆ ಮೊದಲು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಬರೋಣ ಅಂದ್ರು. ಆಯ್ತಮ್ಮ..ಅಂದೆ. ಹಾಗೇ ನಾನು ಮತ್ತು ಅಮ್ಮ ಕಾಲೇಜು ಶುರುವಾಗೋಕೆ ಒಂದು ದಿನ ಮೊದಲು ದೇವಸ್ಥಾನಕ್ಕೆ ಹೋದೆವು. ಹೋಗಿದ್ದು ಸಂಜೆ. ಮತ್ತೆ ಬರಕ್ಕಾಗಲ್ಲ..ಅಲ್ಲೇ ರೂಮ್ ಮಾಡಿ ಇರೋಣ ಅಂದ್ರು ಅಮ್ಮ.
ಆಯ್ತು..ಯಾವುದೋ ರೂಮ್ ಗಳಿಲ್ಲ..ಎಲ್ಲಾ ಬುಕ್ ಆಗಿತ್ತು. ಎಂಥ ಮಾಡೋದು? ..ಬರೋದು ಕಷ್ಟದ ಮಾತು. ಅಲ್ಲಿನ ವೈಶಾಲಿ ವಸತಿಗೃಹದ ಮೇನೇಜರ್ ಹತ್ರ ಕೇಳಿದ್ರೂ..ಅಂಗಲಾಚಿದ್ರೂ ರೂಮ್ ಇಲ್ಲ. ಕೊನೆಗೆ ಆ ಮೇನೇಜರ್ ಯಾರಿಗೋ ಫೋನಾಯಿಸಿ, "ಯಾವುದೋ ಒಬ್ಬ ಹುಡುಗಿ ಮತ್ತು ಅಜ್ಜಿ ಬಂದಿದ್ದಾರೆ..ಏನಾದ್ರೂ ಮಾಡಿ ರೂಮ್ ಕೊಡ್ತೀನಿ. ಪಾಪ ದೂರದಿಂದ ಬಂದಿದ್ದಾರೆ.." ಅಂದು ನಮಗೆ ರೂಮ್ ಮಾಡಿಕೊಟ್ರು.

ಅದಾಯಿತಾ..ನನ್ ತಲೆ ಗಿರ್ ರ್ ಅನಿಸ್ತು..'ಅಯ್ಯೋ ಅಮ್ಮ ಅಜ್ಜಿ ಆಗಿಬಿಟ್ರಾ?' ..ನಿಜವಾಗಲೂ ನಾನು ಫುಲ್ ಅಪ್ ಸೆಟ್ ಆಗಿದ್ದೆ. ವಯಸ್ಸಾಗೋದೇನು ಮಹಾ? ನಾನೂ ನಾಳೆ ಸೊಸೆಯಾಗ್ತೀನಿ..ಅತ್ತೆಯಾಗ್ತೀನಿ..ಅಜ್ಜಿಯಾಗ್ತೀನಿ...ಅದ್ರೆಲ್ಲೇನಿದೆ..?! ಮನುಷ್ಯನಿಗೆ ವಯಸ್ಸಾಗದೇ ಮರಗಳಿಗೆ ವಯಸ್ಸಾಗೋದಾ..?! ಹೀಗಂತ ಈವಾಗ ಅಂದುಕೊಳ್ಳೋ ನಾನು ಆವಾಗ ಅಂದುಕೊಂಡಿರಲಿಲ್ಲ. ಯಾಕೆ ಹಾಗಾಯ್ತು ಆವಾಗ..ನಾನು ಯಾಕೆ ಅಷ್ಟೊಂದು ಯೋಚನೆಗಿಳಿದುಬಿಟ್ಟೆ..ಒಂದೂ ಗೊತ್ತಿಲ್ಲ... .

ಅಮ್ಮ..! ಅಂತ ಮನಸ್ಸು ಒಂದೇ ಸಮನೆ ಚೀರುತ್ತಿತ್ತು.

ದೇವಸ್ಥಾನಕ್ಕೆ ಬಂದಿದ್ದೀನಿ ಅನ್ನೋದನ್ನೂ ಮರೆತು. ಇದ್ದಕಿದ್ದಂತೆ ಅಳಕೆ ಶುರುಮಾಡಿದ್ದನ್ನು ನೋಡಿದ ಅಮ್ಮನೂ ಗಲಿಬಿಲಿ. ಅಮ್ಮನತ್ರ ಅದನ್ನು ಹೇಳಕ್ಕಾಗುತ್ತಾ?...ಎಂದಿಗೂ ಅಮ್ಮ ನನ್ ಕಣ್ಣಲ್ಲಿ ನೀರು ಕಂಡವರಲ್ಲ..ನಾ ಅತ್ರೆ ಅವ್ರೂ ನೀರಾಗಿಬಿಡ್ತಾರೆ..ಅದಕ್ಕೆ ಅಮ್ಮನೆದುರು ಇಂದಿಗೂ ನಾ ಅಳಲ್ಲ. ಅಮ್ಮ ಏನಾಯ್ತು ಅಂದಾಗ, "ಇಲ್ಲಮ್ಮ, ನಾಳೆಯಿಂದ ಕಾಲೇಜಿಗೆ ಬರಬೇಕಲ್ಲ..ನಿಮ್ ಬಿಟ್ಟು ಬರಬೇಕಲ್ಲಾ..ಅಂತ ಬೇಜಾರಾಗುತ್ತೆ" ಅಂದೆ.ಅಮ್ಮ ನಂಬಿದ್ದರು. ಅದಕ್ಕೆ, "ಎರಡು ದಿನಕ್ಕೊಮ್ಮೆ ಹಾಸ್ಟೇಲಿಗೆ ಬಂದು ನೋಡ್ಕೊಂಡು ಹೋಗ್ತೀನಿ ಅಂದ್ರು"...ಹಾಗೇ ಮಾಡಿದ್ರು ಕೂಡ.

ತಲೆಯೊಳಗೆ ಏನೇನೋ ಯೋಚನೆಗಳು..

ಅಮ್ಮ ಇಷ್ಟು ಬೇಗ ಅಜ್ಜಿಯಾದ್ರೆ...ನಾನಿನ್ನೂ ಎಸ್ ಎಸ್ ಎಲ್ ಸಿ ಮುಗಿಸಿದ್ದೀನಿ. ಹತ್ತನೆ ತರಗತಿ ತನಕ ಸ್ನಾನದಿಂದ ಹಿಡಿದು ತಲೆ ಬಾಚೋದು, ಹೂವು ಮುಡಿಸೋದು, ಹಣೆಗೆ ತಿಲಕವಿಡೋದು ಎಲ್ಲವನ್ನೂ ಅಮ್ಮನೇ ಮಾಡುತ್ತಿದ್ದರು. ನಂಗೆ ಹುಚ್ಚುಚ್ಚು ಹೆದರಿಕೆ, ಆತಂಕ. ಅಮ್ಮ ಅಜ್ಜಿಯಾದ್ರೆ..ನಮ್ಮ ನೋಡಿಕೊಳ್ಳೋರು ಯಾರು? ಅಮ್ಮನಿಗೆ ಹುಷಾರಿಲ್ಲದೆ ಆದ್ರೆ ನಾನು ಕಾಲೇಜು ಬಿಟ್ಟು ಮನೆಗೆ ಹೋಗಿ ಅಮ್ಮನ ನೋಡಿಕೊಳ್ಳಬೇಕಲ್ಲಾ. ..ಮತ್ತೆ ಕಾಲೇಜಿಗೆ ನನ್ನ ನೋಡಲು ಬರೋದು ಯಾರು? ನಮ್ಮನೆ, ಜಮೀನನ್ನು ನೋಡೋರು ಯಾರು..ಮಾರ್ಕ್ಸ್ ಕಾರ್ಡ್ಗೆ ಸಹಿ ಹಾಕೋದು ಯಾರು..? ನಂಗೆ ಉಜಿರೆ ಹೊಸದು..ಏನ್ ಮಾಡೋದು..ಒಂದು ವರುಷದಲ್ಲಿ ಅಮ್ಮ ಪೂರ್ತಿ ಅಜ್ಜಿಯಾಗಿ ಬಿಡ್ತಾರೆ. ಹಾಸ್ಟೇಲಿನಿಂದ ಊರಿಗೆ ಹೋದ್ರೆ..ರೊಟ್ಟಿ, ಬಗೆಬಗೆಯ ಸಾರು ಮಾಡಿಕೊಡೋರು ಯಾರು? ತಮ್ಮನಿಗೆ ಅಡುಗೆ ಮಾಡಿ ಕೊಡೋದು...ಜಮೀನಿಂದ ಹಿಡಿದು ಎಲ್ಲಾ ಕೋರ್ಟ್ -ಕಟ್ಟಳೆ ಅಂತ ಅಲೆದಾಡೋ ಅಮ್ಮನೇ ಅಜ್ಜಿಯಾದ್ರೆ..ನಮಗೆ ಕಾನೂನು ಬಗ್ಗೆ ಹೇಳಿಕೊಡೋರು ಯಾರು...ಹೀಗೇ ತಲೆಯೆಲ್ಲಾ ಹಾಳುಮಾಡಿಕೊಂಡಿದ್ದೆ. ನಿಜವಾಗಲೂ ನನ್ನಮ್ಮನಿಗೆ 'ವಯಸ್ಸಾಯ್ತು' ಅನ್ನೋದು ಗೊತ್ತಾಗಿದ್ದೇ ಆವಾಗ. ಈಗಲೂ 'ಅಮ್ಮ ಅಜ್ಜಿಯಾಗಿದ್ದನ್ನು' ನೆನೆಸಿಕೊಂಡಾಗ ತುಂಬಾ ಡಿಸ್ಟರ್ಬ್ ಆಗ್ತೀನಿ. ಈಗಲೂ ಅದೇಕೆ ಹಾಗೆ ಆಯ್ತು..ಅನ್ನೋದು ನಂಗೆ ಗೊತ್ತಾಗ್ತಿಲ್ಲ. ಅಮ್ಮ ಅಜ್ಜಿಯಾಗುವುದನ್ನು ನನ್ ಮನಸ್ಸು ಇಂದಿಗೂ ಒಪ್ತಾ ಇಲ್ಲ...

ಆಂಟಿ, ಹಣ, ಓನರ್ರು..!!!

ಆಂಟಿ...ಕರೆದರೂ ಕೇಳದೇ..!
ಮೊನ್ನೆ ನಮ್ಮನೆ ಹತ್ತಿರದ ಅಂಚೆಕಛೇರಿಗೆ ಹೋಗಿದ್ದೆ. ಕಚೇರಿಯಲ್ಲಿ ಒಬ್ರು ಆಂಟಿ ಇದ್ರು. ನಾನು ಅಲ್ಲೇ ನಿಂತಿದ್ದೆ. ಆವಾಗ ಒಂದು ಬೇರೆ ಆಂಟಿ ಬಂದು..ಕಚೇರಿಯಲ್ಲಿದ್ದ ಆಂಟಿ ಬಳಿ.."ಆಂಟಿ, ಇದನ್ನು ಸ್ಪೀಡ್ ಪೋಸ್ಟ್ ಮಾಡಬೇಕಾದ್ರೆ ದುಡ್ಡೆಷ್ಟು ಆಗುತ್ತೆ?" ಎಂದರು. ಎದುರಿಗಿದ್ದ ಆಂಟಿ ಕೇಳಿಸಿದರೂ, ಸುಮ್ಮನಾದರು. ನಿಂತಿರುವ ಆಂಟಿ..ಮತ್ತೊಂದು ಸಲ ಕೇಳಿದರು...ಆವಾಗ.. ಯಪ್ಪಾ..ಕುಳಿತಿದ್ದ ಕನ್ನಡಕದ ಆಂಟಿ.."ಏನಮ್ಮಾ..ನಿಮಗೆ ನಾನು ಆಂಟಿನಾ? ನಾ ಆಂಟಿ ತರ ಕಾಣ್ತೀನಾ..ಮೇಡಂ ಅನ್ನಬೇಕು ಕಣ್ರೀ..ಅನ್ನಬೇಕೇ!! ನಿಂತಿದ್ದ ಆಂಟಿ ಇರಿಸುಮುರಿಸು.."ಇಲ್ಲಾರೀ ಮೇಡಂ, ಆಂಟಿ, ಅಕ್ಕ ಅಂದ್ರೆ ಒಂದೇ ತಾನೇ? ಆಂಟಿಂತ ಕರೆದ್ರೇನಾಗುತ್ತೆ?" ಎಂದಾಗ ಕನ್ನಡಕದ ಆಂಟಿ, "ರೀ, ಡಿಫರೆನ್ಸು ಇದೆ ಕಣ್ರೀ. ಅಕ್ಕಾ ಅನ್ನದಿದ್ರೂ ಪರ್ವಾಗಿಲ್ಲ..ಮೇಡಂ ಅನ್ರೀ" ಅಂತ ತಮ್ಮ ಕೆಲಸ ಮುಂದಿವರೆಸಿದರು!! ಕನ್ನಡದ ಆಂಟಿಗೆ ಅಂದಾಜು 45 ವರ್ಷ ವಯಸ್ಸಾಗಿರಬಹುದು. ನಂಗೆ ಆವಾಗ ನೆನಪಾಗಿದ್ದು ..ಹಿರಿಯ ಸಾಹಿತಿಯೊಬ್ಬರು ಬರೆದ 'ಪ್ರತಿ ಮಾನವನೂ ಎದೆಯಾಳದಲ್ಲಿ ಯಯಾತಿಯೇ ಆಗಿರುತ್ತಾನೆ" ಎಂಬ ತೂಕದ ಮಾತು.

ಶ್ ..ಹಣದ ವಿಚಾರ!
"ರೀ ಹಣದ ವಿಚಾರವನ್ನೆಲ್ಲ ಫೋನಲ್ಲಿ ಮಾತನಾಡಬಾರದು ಕಣ್ರೀ..ಏನಿದ್ರೂ ಡೈರೆಕ್ಟ್ ಆಗಿ ಆಫೀಸ್ ಗೆ ಬನ್ನಿ. ಎಷ್ಟೊತ್ತಿಗೆ ಬರ್ತೀರಾ ತಿಳಿಸಿ..ನಾ ಆಫೀಸ್ ಗೆ ಬರ್ತೀನಿ. ಅಲ್ಲಿ ಬಂದು ನನ್ನತ್ರ ಮಾತನಾಡೋದೇನೂ ಬೇಡ..ಹಣ ತಂದು ನನ್ನ ಟೇಬಲ್ ನಲ್ಲಿರುವ ಫೈಲ್ ನಲ್ಲಿಟ್ಟುಕೊಂಡು ಹೋಗೋದೇ..ಹಿಂದೆ ತಿರುಗಿ ನೋಡಂಗಿಲ್ಲ. ಮರುದಿನ ಡೈರೆಕ್ಟಾಗಿ ಕೆಲಸಕ್ಕೆ ಹಾಜರಾದ್ರೆ ಸಾಕು" ..ಇದು ಹೇಳಿದ್ದು ಯಾರು?..ನಾ..ನ..ಲ್ಲ! ನಮ್ಮ ರಾಜ್ಯದ ಶಿಕ್ಷಣ ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಯಂತೆ. ಅವನ ಸೈನ್ ಬಿದ್ರೆ, ನಮಗೆ ಕೆಲಸ ಸಿಗುತ್ತೆ..ಆದರೆ ಅವನಿಗೆ ಲಕ್ಷ ಲಕ್ಷ ನೀಡಬೇಕು. ಅಷ್ಟೇ. ಇತ್ತೀಚೆಗೆ ನನ್ನ ಆಪ್ತರೊಬ್ಬರ ಅಣ್ನನಿಗೆ ಉಪನ್ಯಾಸಕ ಕೆಲಸ ಸಿಕ್ತು..ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಯ ಸಹಿ ಬೇಕಿತ್ತು..ಆವಾಗ ಆತನಿಗೆ ಫೋನಲ್ಲಿ ಹೇಳಿದ್ದು ಹೀಗಂತ ನನಗೆ ಹೇಳಿದ್ರು. ಲೋಕಾಯುಕ್ತರಿಗೆ ತಿಳಿಸಿಬಿಟ್ಟು, ಹಣ ಕೊಡಕ್ಕೆ ಹೋಗು ಅಂದ್ರೆ..ಪಾಪ, ಅವ್ರು..ಬೇಡ ನಂಗೆ ಜಾಬ್ ಸಿಗುತ್ತಾ..ಜಾಬ್ ಸಿಗಲಿ ಹಣ ಹೋದ್ರು ಪರ್ವಾಗಿಲ್ಲ ಅನ್ನಬೇಕೆ!! ಹಾಗೇ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿದ್ದಾರೆ ಅವ್ರು.

ಓನರ್ ಕಾಟ...!
ಇದು ನನ್ನ ಸಹದ್ಯೋಗಿ ಮನೆಯ ಕಥೆ. ಪಾಪ, ಮೂರು ಜನ ಹುಡುಗ್ರು ವಿಜಯನಗರದಲ್ಲಿ ಡಬಲ್ ಬೆಡ್ ರೂಂ ಇರುವ ಒಳ್ಳೆ ಮನೆ ಬಾಡಿಗೆ ತೆಗೆದುಕೊಂಡಿದ್ದಾರೆ. ಅಲ್ಲಿ ಮನೆ ಮಾಲೀಕನ ಕಾಟ..ಥೇಟ್ ಮಳೆಹನಿ ಬ್ಲಾಗ್ ಮಾಲೀಕ ಜೋಮನ್ ಗೆ ಹುಂಜಕೋಳಿ ಕೊಟ್ಟಹಾಗೆ. ಮಲೆನಾಡಿನ ಈ ಮೂರೂ ಜನ ಹುಡುಗ್ರಿಗೆ ದೇವ್ರ ಮೇಲೆ ಭಕ್ತಿ ಜಾಸ್ತಿ. ಹಾಗಾಗಿ ಊರಿಂದ ಬರುವಾಗಲೇ ತಮ್ಮ ಬ್ಯಾಗ್ ನಲ್ಲಿ ದೇವ್ರ ಫೋಟೋಸ್ (ಕ್ಯಾಲೆಂಡರ್) ತೆಗೆದುಕೊಂಡು ಬಂದಿದ್ರು. ಅದನ್ನು ರೂಮ್ ನಲ್ಲಿಟ್ಟು ಪೂಜೆ ಮಾಡಬೇಕು...ಏನ್ ಮಾಡೋದು? ಮನೆ ಓನರ್ರು ಗುರ್ ಅಂದು ಬೇಡಪ್ಪಾ..ಮೊಳೆ ಹೊಡಿಬೇಡಿ ಅನ್ನಬೇಕೆ? ಅದಕ್ಕೆ ಈಗ ಪಾಪ ಹುಡುಗ್ರು ದಿನಾ ಬೆಳಿಗೆದ್ದು ಸ್ನಾನ ಮಾಡಿ, ಆ ದೇವ್ರ ಕ್ಯಾಲೆಂಡರನ್ನು ಗೋದ್ರೆಜ್ ನಿಂದ ತೆಗೆದು, ಲಾಕರ್ ಗೆ ನೇತಾಡಿಸಿ..ಅದಕ್ಕೆ ನಮಸ್ಕಾರ ಹೊಡೆದು ಮತ್ತೆ. ಮಡಿಚಿ ಹಾಗೇ ಬೆಚ್ಚಗೆ ಗೋದ್ರೇಜ್ ನೊಳಗೆ ಇಡ್ತಾರಂತೆ. ಅದಕ್ಕೆ ನಮ್ ಕೊಲೀಗ್ ಅನ್ತಾ ಇದ್ದ, ನಮ್ ಮನೆ ನೋಡಿದ್ರೆ ಮಠಕ್ಕೆ ಹೋದಂಗೆ ಆಗುತ್ತೆ. ಗೋಡೆಗೆ ಮೊಳೆ ಹೊಡೆಯೋಕೆ ಬಿಡಲ್ಲ..ನಾವು ಹುಡುಗ್ರು ಜೋರಾಗಿ ನಕ್ರು, ಮೊಬೈಲ್ ಜೊತೆ ಮಾತನಾಡಿದ್ರೂ..ಕೆಳಗೆ ಕೆಳಮಹಡಿಯಲ್ಲಿ ಮಾಲೀಕ ಗಂಡ-ಹೆಂಡತಿ ಇಬ್ರು ಸುಮ್ನಿರ್ರೋ ಅಂತ ಬೊಬ್ಬೆ ಹಾಕ್ತಾರೆ..! ಅಂತ. ಎಂಥ ಓನರ್ರೋ..?!

Wednesday, February 4, 2009

ಯಾವ ಸೀಮೆಯ ಸಂಸ್ಖತಿ...ಕಾಳಜಿ ಕಣ್ರೀ..?!

ಕಳೆದ ವಾರ ಮಂಗಳೂರಿನಲ್ಲಿ ನಡೆದ ಪಬ್ ದಾಳಿ, ಅದರ ಪರ-ವಿರೋಧ, ಆರೋಪ-ಪ್ರತ್ಯಾರೋಪ, ಮಹಿಳಾ ಸಂಘಟನೆಗಳ 'ಸ್ವಾತಂತ್ರ್ಯ'ದ ಕುರಿತಾದ ಹೋರಾಟ, ಮಹಿಳೆಯ ದಬ್ಬಾಳಿಕೆ-ಶೋಷಣೆ ಬಗ್ಗೆ ಕೇಳಿಬಂದ 'ಕಾಳಜಿ'ಯ ಮಾತುಗಳು..ಮಹಿಳಾ ಆಯೋಗದ ಸದಸ್ಯೆ ನಿರ್ಮಾಲಾ ವೆಂಕಟೇಶ್ ಮತ್ತು ಸಚಿವೆ ರೇಣುಕಾ ಚೌಧುರಿ, ಗಿರೀಜಾ ವ್ಯಾಸ್ ನಡುವಿನ 'ಕೋಳಿಜಗಳ', ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿ, ಬ್ಲಾಗ್ ಗಳಲ್ಲಿ ಬರುತ್ತಿರುವ 'ವಿಭಿನ್ನ' ಬರಹಗಳನ್ನು ಕಂಡಾಗ..ವ್ಯವಸ್ಥೆಯ ಕುರಿತಾಗಿ ನನ್ನೊಳಗೆ ದುಃಖದ ಛಾಯೆ ಆವರಿಸಿಬಿಡುತ್ತೆ. ದುಃಖ ಸಿಟ್ಟಾಗಿ ಮಾರ್ಪಾಡಾಗುತ್ತೆ.

ಈ ವ್ಯವಸ್ಥೆ ಯಾಕೇ ಹೀಗೇ? ....

ನನಗಾಗ ಪುಟ್ಟ ವಯಸ್ಸು...ಊರ ಶಾಲೆಯ ಏಳನೇ ಕ್ಲಾಸ್ ಹುಡುಗಿ ಮೇಲೆ, ಊರಿನ ಫಟಿಂಗ ರಾಜಕಾರಣಿಯೊಬ್ಬ ಹಾಡುಹಗಲೇ ಅತ್ಯಾಚಾರ ಮಾಡಿದ್ದ..ಆ ಹುಡುಗಿಯ ಫ್ಯಾಮಿಲಿ ತುಂಬಾ ಬಡವ್ರು..ಅಷ್ಟೇ ಅಲ್ಲ, ಬಾಲಕಿಯ ಅಮ್ಮ ಆ ಫಟಿಂಗನ ಮನೆಯಲ್ಲೇ ಕೆಲಸಕ್ಕಿದ್ದರು..ಮಗಳ ಮೇಲಾದ ಅತ್ಯಾಚಾರನ ಕಣ್ಣಾರೆ ಕಂಡ, ಆ ಅಮ್ಮ ನ್ಯಾಯಕ್ಕಾಗಿ ಊರೂರು ಅಲೆದಳು..ತಾಲ್ಲೂಕಲ್ಲಿರುವ ಮಹಿಳಾ ಸಂಘಟನೆಗಳು, 'ಸ್ತ್ರೀ ಶಕ್ತಿ' ಗುಂಪುಗಳು..ಸ್ವಸಹಾಯ ಗುಂಪುಗಳಿಗೆ ಮೊರೆಹೋದರು..ನ್ಯಾಯ ಸಿಗಲೇ ಇಲ್ಲ, ಆತ ರಾವಣನಾದರೂ 'ರಾಮ'ನಂತೆ ಮೆರೆದ..ಆ ಅಮಾಯಕ ಹೆಣ್ಣಿನ ಕಣ್ಣೀರ ಒರೆಸಲು, ಪರನಿಂತು ಹೋರಾಡಲು ಯಾವ 'ಸಂಘಟನೆ'ಗಳು ಮುಂದೆ ಬರಲಿಲ್ಲ..! ಕೆಲ ವರುಷಗಳ ಹಿಂದೆ ನಾನು ಡಿಗ್ರಿಯಲ್ಲಿರುವಾಗ ಆಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು..ಆತ್ಮಹತ್ಯೆ ಯಾಕಾಯಿತು ಅನ್ನೋದು ಯಾರಿಗೂ ತಿಳಿದಿಲ್ಲ..ಅದು ಮಹತ್ವದ 'ಸುದ್ದಿ'ಯಾಗಲೂ ಇಲ್ಲ.

ಕಳೆದ ವರ್ಷ ಜನವರಿ 3ರಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪಾನಮತ್ತನಾದ ಪೊಲೀಸ್ ಪೇದೆಯೊಬ್ಬ 11 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ. ಕೆಲವು ಪತ್ರಿಕೆಗಳಲ್ಲಿ ಮುಖಪುಟ ಸುದ್ದಿನೂ ಆಯಿತು..ಆತನಿಗೆ ಶಿಕ್ಷೆ: 14 ದಿನ ನ್ಯಾಯಾಂಗ ಬಂಧನ ಮತ್ತು ಸೇವೆಯಿಂದ ಅಮಾನತು!!!

ಇಂಥಹ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣೆರಿವೆ..ನಮ್ಮ-ನಮ್ಮ ಊರಿನ ಪೊಲೀಸ್ ಠಾಣೆಗಳಿಗೆ ಹೋದರೆ ಮಹಿಳೆಯರ, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಾದ ಅತ್ಯಾಚಾರಗಳ ದೊಡ್ಡ ಪಟ್ಟಿನೇ ಸಿಗುತ್ತೆ,....ಬೆಂಗಳೂರಿನ ನಗರ ಪೊಲೀಸ್ ಆಯುಕ್ತರಿಗೆ ಒಂದು ಫೋನಾಯಿಸಿ, ಕೇಳಿದರೂ ಸಾಕು...ಬನ್ನಿ ತೆಗೆದುಕೊಂಡು ಹೋಗಿ ಅಂತ ದೊಡ್ಡ ಪಟ್ಟಿನೇ ನಮ್ಮ ಮುಂದೆ ಇಡ್ತಾರೆ...ಹೌದು, ಹೆಣ್ಣಿನ ಮೇಲಾಗುವ ಶೋಷಣೆಯಲ್ಲಿ 'ಅತ್ಯಾಚಾರ'ದಂತ ಭೀಕರ ಶೋಷಣೆಗಳು ಯಾವುದಿಲ್ಲ ಎನ್ನುವುದು ನನ್ನ ಅನಿಸಿಕೆ.

ಮೊನ್ನೆ ಪಬ್ ದಾಳಿಯಲ್ಲಿ ಶ್ರೀರಾಮಸೇನೆಯವರು ಹುಡುಗಿಯರನ್ನು ಎರ್ರಾಬಿರ್ರಿ ಹೊಡೆದಿದ್ದು ತಪ್ಪು...ನನಗೂ ಅದನ್ನು ನೋಡಿ ಕಣ್ಣಲ್ಲಿ ನೀರು ಬಂತು..ಛೇ! ಏನಪ್ಪಾ ಇವ್ರು ಮನುಷ್ಯರಾ..? ಅಂತ ನನ್ನೊಳಗೆ ನಿಂದಿಸಿದೆ. ಪಬ್ಗಳಿಗೆ ಸರ್ಕಾರ ಅನುಮತಿ ಕೊಟ್ಟಿದೆ..ಹಾಗಿದ್ದ ಮೇಲೆ ಜನ ಅಲ್ಲಿ ಹೋಗೇ ಹೋಗ್ತಾರೆ..ಕುಡೀತಾರೆ..ಕುಡಿದಾಗ ಕಿಕ್ಕೇರಿ ಕುಣೀತಾರೆ. ಯಡಿಯೂರಪ್ಪ ಹೇಳಿದಂಗೆ ಕುಡೀರಿ, ಕುಣಿಬೇಡಿ ಅಂದ್ರೆ ಕೇಳೋರು ಬೇಕಲ್ಲಾ...!!! ಕೊನೆಗೆ ಪರಿಸ್ಥಿತಿ ನಿಯಂತ್ರಿಸಲು ಸ್ವತಃ ಯಡಿಯೂರಪ್ಪ ಅವರೇ ಕೋಲು ಹಿಡಿದು ನಿಂತರೂ, ಪರಿಸ್ಥಿತಿ ತಿಳಿಯಾಗಲ್ಲ ಬಿಡಿ. ..ಆಮೇಲೆ ಏನಾಗುತ್ತೆ ...ಯಾರಿಗೂ ಮೈ ಮೇಲೆ ಜ್ಞಾನ ಇರಲ್ಲ..ಆದ್ರೆ ಪಬ್ ಸಂಸ್ಕೃತಿ ಇಂದು ನಿನ್ನೆಯದಲ್ಲ...ಮಂಗಳೂರು ಇದಕ್ಕೆ ಹೊರತಾಗಿಲ್ಲ..ಈ ಶ್ರೀರಾಮ ಸೇನೆಯವರು 'ಸಂಸ್ಕೃತಿ' ಹೆಸರು ಇಟ್ಟುಕೊಂಡು ಹೋಗಿ ದಾಳಿ ಮಾಡಿದ್ದು ಖಡಾಖಂಡಿತವಾಗಿಯೂ ತಪ್ಪು. ಈ ರೀತಿ ದಾಳಿ ನಡೆಸಿ, ಎರ್ರಾಬಿರ್ರೀ ಹೊಡೆಯೋದನ್ನು ವಿರೋಧಿಸಲೇಬೇಕು... ವಿರೋಧಿಸೋಣ. ನಾನೂ ವಿರೋಧಿಸುತ್ತೇನೆ..

ಆದರೆ ನನ್ನ ಪ್ರಶ್ನೆ ಅದಲ್ಲ....

ಪಬ್ ದಾಳಿ ನಡೆಯಿತು..ಹುಡುಗೀರನ ಹೊಡೆದ್ರು ಅಂತೇಳಿ ದೆಹಲಿಯಿಂದ ಮಹಿಳಾ ಆಯೋಗವೇ ಬಂದು ಮಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಹೋಗಿ ವಿಚಾರಿಸಿತ್ತು....ರೇಣುಕಾ ಚೌಧುರಿ ಅವರು ದೆಹಲಿಯ ತಮ್ಮ ಕುರ್ಚಿನಲ್ಲೇ ಕುಳಿತು 'ತಾಲೀಬಾನೀಕರಣ' ಅಂದ್ರು..ಮಂಗಳೂರಿನಲ್ಲಿ ಮಹಿಳಾ ಸಂಘಟನೆಗಳು, ಮನೆಯಲ್ಲಿ ಕುಳಿತು ಆರಾಮವಾಗಿ ಬೀಡಿ ಕಟ್ಟುವ ಹೆಂಗಸರು ಕೂಡ.."ಇದು ದೌರ್ಜನ್ಯ, ಇದು ಸ್ವಾತಂತ್ರ್ಯಕ್ಕೆ ಧಕ್ಕೆ, ನಮ್ಮ ಹಕ್ಕುಗಳು ನಮಗೆ ಬೇಕೇ ಬೇಕು, ಸೇನೆಯವರನ್ನು ಹಿಡಿಯಿರಿ..ಶಿಕ್ಷಿಸಿ, ಇಂಥ ಶೋಷಣೆಗಳು ಭವಿಷ್ಯಕ್ಕೆ ಅಪಾಯಕಾರಿ.." ಎಂದು ಬೊಬ್ಬಿಟ್ಟ ಇವರ ಕಾಳಜಿಗೆ ಮೆಚ್ಚಲೇಬೇಕು..ಹೌದು, ಬೇಕೇ ಬೇಕು ಇಂಥ ಕಾಳಜಿ..ಮನೆಯಲ್ಲಿ ಕುಳಿತಿರುವ ಹೆಂಗಸರಲ್ಲೂ ಜಾಗೃತಿ ಮೂಡಲೇಬೇಕು..ಒಪ್ಪಿಕೊಳ್ಳೋಣ..ನಮ್ಮ ಮನೆ ಹುಡುಗಿರಿಗೆ ಹಾಗೇ ಹೊಡೆದ್ರೆ ತಡೆದುಕೊಳ್ಳಕ್ಕೆ ಆಗುತ್ತಾ..?! ಅದ್ಸರಿ...

ಆದರೆ, ನಮ್ಮೂರಲ್ಲಾದ ಪುಟ್ಟ ಬಾಲಕಿಯ ಅತ್ಯಾಚಾರ, ಹಾಸನದಲ್ಲಿ ಪೊಲೀಸ್ ಪೇದೆಯಿಂದಲೇ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ನಡೆದ ಅತ್ಯಾಚಾರ, ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರಿಂದಲೇ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣಗಳು...ರಾಷ್ಟ್ರಮಟ್ಟದ ಮಾಧ್ಯಮಗಳಲ್ಲೂ 'ರಾರಾಜಿಸಿವೆ'.ಇಂಥ ಪ್ರಕರಣಗಳು ನಡೆದಾಗ ಈ ಕಾಳಜಿಯುಳ್ಳ ಸಂಘಟನೆಗಳು ಎಲ್ಲಿ ಸತ್ತುಹೋಗಿದ್ದವೆ? ಹಿಂದೂ ಹುಡುಗೀರ ರಕ್ಷಣೆ ಬಗ್ಗೆ ಮಾತನಾಡುವ ಶ್ರೀರಾಮ ಸೇನೆಯವರಿಗೆ ಸಮಾಜದಲ್ಲಿ ಹೆಣ್ಣುಮಕ್ಕಳ..ಮೇಲೆ ಅದರಲ್ಲೂ ಬಡಹೆಣ್ಣುಮಕ್ಕಳ ಮೇಲೆ ನಡೆಯುತ್ತ್ತಿರುವ ಇತರ ಶೋಷಣೆಗಳು ಕಣ್ಣಿಗೆ ಕಾಣಲ್ಲವೇ? ಅತ್ಯಾಚಾರ ಮಾಡಿರುವುದು ಸಂಸ್ಕೃತಿಗೇಕೆ, ಹೆಣ್ಣುಮಗಳೊಬ್ಬಳ ಬದುಕನ್ನೇ ಕಿತ್ತುಕೊಂಡ ಅಮಾನವೀಯತೆ ಅಲ್ಲವೇ? ಯಾವ ಸೀಮೆಯ ಸಂಸ್ಕೃತಿ ಬಗ್ಗೆ ಮಾತನಾಡುತ್ತಿದ್ದೀರಿ ಕಣ್ರೀ? ಮಹಿಳಾ ಪರ ಸಂಘಟನೆಗಳು ಇಷ್ಟೊಂದು ಬೊಬ್ಬಿಡುತ್ತಲ್ಲಾ...ತಮ್ಮ ಜನ್ಮದಲ್ಲೂ ಮಂಗಳೂರುನ್ನು ಕಾಣದೆ..ದೆಹಲಿಯಲ್ಲಿ ಕುಳಿತು ಮಂಗಳೂರು ಪಬ್ ದಾಳಿ , ಹುಡುಗೀರ ಮೇಲೆ ಶೋಷಣೆ ನಡೆದಿದೆ ಎಂದು ಬೊಬ್ಬಿಡುವವವರು ಜೀವನಾದಲ್ಲಿ ಒಂದೇ ಒಂದು ಬಾರಿಯಾದರೂ, ಮಂಗಳೂರಿನ ಒಳಹೊಕ್ಕು ನೋಡಿ..

ನಮ್ಮ ಸುತ್ತಮುತ್ತ 'ಅತ್ಯಾಚಾರ'ದಂಥ ಪ್ರಕರಣಗಳು ನಡೆದಾಗ ಯಾಕೆ ಬೊಬ್ಬಿಡುವುದಿಲ್ಲ..ಒಂದು ಹೆಣ್ಣಿನ ಮೇಲೆ ಅತ್ಯಾಚಾರ ನಡೆದರೆ ಸಮಾಜದಲ್ಲಿ ಅವಳಿಗೆ ಯಾವ ಸ್ಥಾನ ಇದೆ,..ಅಮಾಯುಕಳಂತೆ ಸಹಿಸಿಕೊಂಡ ಹೆಣ್ಣು ಜೀವ .... ಅವಳು ಶೀಲ ಕಳಕೊಂಡವಳು,..ಅನುಮಾನ...ಇಡೀ ಸಮಾಜ ಅವಳನ್ನು ಅಸ್ಪೃಶ್ಯಳಂತೆ ದೂರವಿಡುತ್ತದೆ. ಅವಳ ಇಡೀ ಜೀವನ ನರಕಯಾತನೆ ಅನುಭವಿಸುತ್ತಾಳೆ. ಇದು ಯಾರ ಗಮನಕ್ಕೂ ಬರಲ್ಲವೇ? ಅದು ಶೋಷಣೆ ಅಲ್ವೇ? ಯಾಕೆ..ಮಾಧ್ಯಮಗಳಲ್ಲಿ ಸುದ್ದಿಯಾಗಲಿಲ್ಲ..ಹಾಗೇ ನಮಗೆ ತಿಳಿದೇ ಇಲ್ಲ ಅಂತೀರಾ..? ತಾಕತ್ತಿದ್ದರೆ ಈ 'ಸಂಘಟನೆ'ಗಳು ಸ್ವಯಂ ಕಾಳಜಿಯಿಂದ ಎಲ್ಲಿ? ಎಂಥ ಶೋಷಣೆಗಳು ನಡೆಯುತ್ತಿವೆ..ಎನ್ನುವುದನ್ನು ಕಂಡುಹಿಡಿದು ಬೀದಿಗಿಳಿದು ಈ ವಿರುದ್ಧ ಹೋರಾಟಕ್ಕೆ ನಿಲ್ಲಿ...ಏಕಂದ್ರೆ ಬಡವರಿಗೆ ದೆಹಲಿಗೆ ಅಥವಾ ಬೆಂಗಳೂರಿಗೆ ಬಂದು ಮಹಿಳಾ ಆಯೋಗ ಕಾಣುವ ತಾಕತ್ತಿಲ್ಲ..ಹಾಗೇ ಮಾಡಿದರೆ ಒಪ್ಪೊತ್ತಿನ ಊಟವನ್ನೂ ಕಳೆದುಕೊಳ್ಳಬೇಕಾಗುತ್ತದೆ..
ಇದು ಯಾಕೆ ಸಂಸ್ಕೃತಿ ಬಗ್ಗೆ ಮಾತಾಡುವ ಶ್ರೀರಾಮ ಸೇನೆ? ಅಥವಾ 'ಸ್ವಾತಂತ್ರ್ಯ'ದ ಕುರಿತು ಮಾತನಾಡುವ ಮಹಿಳಾ ಸಂಘಟನೆಗಳ ಗಮನಕ್ಕೆ ಬಂದಿಲ್ಲ?

ಏನಪ್ಪಾ..ಹುಡುಗಿಯಾಗಿ ಇವಳು ಹೀಂಗಾ ಬರೆಯೋದು? ಅಂತ ಅಂದುಕೊಂಡರೂ ಪರ್ವಾಗಿಲ್ಲ..ಒಂದು ಹೆಣ್ಣಾಗಿ ನನಗನಿಸಿದ್ದು .ನನ್ನ ನೋವನ್ನು ಇಲ್ಲಿ ಹಂಚಿಕೊಂಡೆ. ನಾನು ಹೇಳ್ತಾರೋದು ತಪ್ಪಾ..?!