Monday, December 1, 2008

ಮೂರು ವರ್ಷಗಳ ಹಿಂದೆ ಅಣ್ಣನಿಂದ ಬಂದ ಪತ್ರ....

ಪದವಿ ಓದು ಮುಗಿಯುವವರೆಗೂ ಮನೆಯಿಂದ ಹಿಡಿದು ಸ್ನೇಹಿತರವರೆಗೆ 'ಪತ್ರ'ದ ಮೂಲಕವೇ ವ್ಯವಹಾರ. ಪತ್ರ ಎಂದರೆ ಭಾವ-ಬದುಕು ಬೆಸೆಯುವ ಕೊಂಡಿ. ಮೂರು ವರ್ಷಗಳ ಹಿಂದೆ ನಾನು ಉಜಿರೆಯಲ್ಲಿ ಪದವಿ ಓದುತ್ತಿದ್ದಾಗ ಮಂಗಳೂರಿನಿಂದ ನನ್ನಣ್ಣ ಜಯಣ್ಣ ಬರೆದ ಪತ್ರವೊಂದು ಇಲ್ಲಿದೆ. ಓದಬೇಕೆನಿಸಿದರೆ..ನೀವೂ ಓದಬಹುದು.

ತಂಗಿ ಚಿತ್ರಾಳಿಗೆ ನಿನ್ನ ಪ್ರೀತಿಯ ಅಣ್ಣ ಮಾಡುವ ಆಶೀರ್ವಾದಗಳು. ನಾವೆಲ್ಲ ಕ್ಷೇಮವಾಗಿದ್ದೇವೆ. ನೀನೂ ಕ್ಷೇಮವೆಂದು ಭಾವಿಸುತ್ತೇನೆ.
ಚಿತ್ರಾ ನಿನ್ನ ತಾರೀಕು ಹಾಕದ, ಗೊಂದಲದಿಂದ ಕೂಡಿದ, ಕಂಗ್ಲೀಷ್ ನಲ್ಲಿ ಬರೆದ, ಫೋನು ಮಾಡದೆ ಎರಡು ವಾರ ಆಯಿತೆಂದು ವೃಥಾರೋಪ ಮಾಡಿರುವ, ನುಡಿಮುತ್ತುಗಳಿಲ್ಲದ, ಪ್ರೀತಿ ತುಂಬಿದ, ಸುಂದರ ಅಕ್ಷರಗಳ ಪತ್ರವು ಆರನೇ ತಾರೀಕಿನಂದು ನನಗೆ ಸಿಕ್ಕಿತ್ತು. ಮೇ ಜೂನ್ ನಲ್ಲಿ ಬರಬೇಕಾದ ಮಳೆ ಆಗಸ್ಟ್ ವರೆಗೂ ಮಳೆ ಬರದೆ ನಂತರ ಅದನ್ನೇ ಕಾಯುತ್ತಿದ್ದ ರೈತನಿಗೆ ಸಂತೋಷವಾಗುವಷ್ಟು ಬರದ ನಾಡಲ್ಲಿ ಒಣಗಿದ ಇಳೆಗೆ ಮೊದಲ ಮಳೆ ತಂದ ತಂಪಿನಷ್ಟು ಸಂತಸವಾಯಿತು.
ಫೋನು ಏಕೆ ಮಾಡಲಿಲ್ಲ?
ಪತ್ರ ಏಕೆ ಬರೀಲಿಲ್ಲ?
ಕೋಪವೇ? ಬೇಸರವೇ
?
ನಿನ್ನ ಪ್ರಶ್ನೆ ಇದಲ್ಲವೇ...?!
ಕೇಳು ಉತ್ತರ....:
ಕೋಪ ಇಲ್ಲ, ಬೇಸರ ಇಲ್ಲ.
ಫೋನು ಮಾಡಿದೆ ಲೈನ್ ಸಿಗಲಿಲ್ಲ,
ಮತ್ತೆ ಪತ್ರ ಬರೀಲಿಲ್ಲ..?!
ನೀನೇ ಹೇಳಿದ್ದಲ್ವೇ ಓದಲು ಪುರುಸೋತ್ತಿಲ್ಲ!!

ಚಿತ್ರಾ ನಿನಗೆ ಪರೀಕ್ಷೆ ಇರುವುದರಿಂದ, ನೀನು ತುಂಬಾ 'ಬಿಸಿ' ಇರುವುದರಿಂದ, ಇನ್ನು ವಾರಕ್ಕೊಮ್ಮೆ ಫೋನು ಮಾಡುವುದೆಂದೂ ಸದ್ಯಕ್ಕೆ ಪತ್ರ ಬರೆಯಲು ನನಗೆ ಸಮಯವಿಲ್ಲವೆಂದು ನೀನೇ 'ಅಕ್ಟೋಬರ್ ಒಪ್ಪಂದ' ದಲ್ಲಿ ಹೇಳಿದ್ದಿಯಲ್ಲ. ಅದಲ್ಲದೆ ಈಗಾಗಲೇ ನಾನು ಬರೆದ ಪತ್ರವೊಂದು ನಿನ್ನ ಬಳಿಯಿತ್ತು. ಅದಕ್ಕೆ ಉತ್ತರ ಹಾಕಿರಲಿಲ್ಲ.(ಅಂದರೆ ಚೆಂಡು ನಿನ್ನ ಅಂಗಣದಲ್ಲಿತ್ತು.) ಅದಾಗ್ಲೂ ನಾನು ನಿನಗೆ ಪತ್ರ ಬರೀಲಿಲ್ಲ..ಫೋನು ಮಾಡದೆ 2 ವಾರ ಆಯ್ತೆಂದು(ಡಿಸೆಂಬರ್ 27ರಿಂದ ಜನವರಿ 4ನೇ ತಾರೀನಕಿನವರೆಗೆ 2 ವಾರವೇ?) ಆರೋಪ ಮಾಡಿದ್ದಿ. ಈ ಆರೋಪವನ್ನು ನಾನು ಬಲವಾಗಿ ನಿರಾಕರಿಸುತ್ತೇನೆ. ಮತ್ತು ಈ ಬಗ್ಗೆ ನಿನ್ನ ವಿರುದ್ಧ ಯಾಕೆ ಕೋರ್ಟು ಹತ್ತಬಾರದೆಂದು ಆಲೋಚಿಸುತ್ತಿದ್ದೇನೆ. ಎದುರಿಸಲು ಸಿದ್ಧಳಾಗು.

ಚಿತ್ರಾ ಯಾವಾಗ್ಲೂ ನಿನ್ನ ಪತ್ರವು ನಮ್ಮೂರ ಭಟ್ಟರ ಹೊಟೇಲಿನ ರುಚಿಕರ ಭೋಜನದಂತೆ ಇರುತ್ತಿತ್ತು. ಆದರೆ ಈ ಸಲ ಭಟ್ಟರ ಹೊಟೇಲಿಗೆ ಅಡುಗೆಯವರು ಹೊಸತು(New) ಬಂದಾಗ ರುಚಿಯಲ್ಲೂ ನ್ಯೂನತೆ(Newನತೆ) ಗಳಾಗುವಂತೆ ನಿನ್ನ ಪತ್ರದಲ್ಲೂ ಆಗಿದೆ.

ಯಾವಾಗಲೂ ರುಚಿಕರ ಭೋಜನದಂತಿರುತ್ತಿತ್ತು ನಿನ್ನ ಪತ್ರ,
ಆದರೀಸಲ ಏನೋ ಕೊರತೆ..ಯಾಕೆ ಚಿತ್ರ?
ಭಟ್ಟರ ಹೊಟೇಲಲ್ಲಿ ..
ಉತ್ತಮ ದರ್ಜೆಯ ಅಕ್ಕಿಯ ಅನ್ನ,
ರುಚಿಕರ ಸ್ವಾದದ ಬೇಳೆಯ ಸಾರು,
ಎಲೆಯ ತುದಿಯಲ್ಲಿ ಉಪ್ಪಿನ ಕಾಯಿ,
ಊಟದ ಕೊನೆಗೆ ಬೆಲ್ಲದ ಪಾಯಸ.,

ನಿನ್ನ ಪತ್ರದಲ್ಲಿ...
ಉತ್ತಮ ದರ್ಜೆಯ ಅಕ್ಷರದನ್ನ,
ರುಚಿಕರ ಸ್ವಾದದ ಬರಹದ ಸಾರು,
ಜೊತೆಗೆ ಪ್ರೀತಿಯ ಉಪ್ಪಿನಕಾಯಿ,
ಪತ್ರದ ಕೊನೆಗೆ ನುಡಿಮುತ್ತುಗಳ ಪಾಯಸ..,
ಆದರೆ ಈ ಸಲ..
ಕಲಬೆರೆಕೆಯ ಅಕ್ಕಿ ಬೇಯಲು ಇತ್ತು ಬಾಕಿ,
ಬೇಳೆಯ ಸಾರು ರುಚಿಯಿಲ್ಲದೆ ಬರೀ ನೀರು,
ಉರಿಯುತ್ತಿತ್ತು ಬಾಯಿ ಖಾರವಾಗಿ ಉಪ್ಪಿನಕಾಯಿ,
ಊಟದ ಕೊನೆಗೆ ಇಲ್ಲದೆ ಪಾಯಸ ನನಗಾಗಿತ್ತು ನೀರಸ..!


ಚಿತ್ರಾ ಚೆನ್ನಾಗಿದ್ದಿಯಾ ಎಂದು ತಿಳಿದು ಸಂತಸವಾಯಿತು. ಅಂಕಗಳು ಕಡಿಮೆಯಾಯಿತೆಂದು ಬೇಸರಪಡಬೇಡ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬೇಡ. ಆತಂಕಪಡಬೇಡ. ಅಂತಿಮ ಪರೀಕ್ಷೆಗೆ ತಯಾರಾಗು ಕಳೆದುದನ್ನು ಮರೆತುಬಿಡು. ಅಂತಿಮ ಪರೀಕ್ಷೆಯಲ್ಲಿ ನಿನಗೆ ಉತ್ತಮ ಅಂಕಗಳು ಬಂದೇ ಬರುತ್ತವೆ..ಶುಭವಾಗಲಿ.
ಚಿತ್ರಾ ಪತ್ರ ಹಾಕಿದ್ದೇನೆ ನೆನಪಿರಲಿ, ನಿನ್ನಿಂದ ಮುಂದಿನ ಪತ್ರವನ್ನು ಬೇಗನೆ ನಿರೀಖ್ಷಿಸುವುದಿಲ್ಲ ಕಾರಣ? ನಿನಗೆ ಪೂರ್ವತಯಾರಿ ಪರೀಕ್ಷೆ, ಅಂತಿಮ ಪರೀಕ್ಷೆ ಎಲ್ಲಾ ಇದೆ ಎಂದು ನನಗೆ ಗೊತ್ತು. ಆದರೂ ಪ್ರೀತಿಯಿರಲಿ.
ಇತೀ ನಿನ್ನ ಪ್ರೀತಿಯ
ಜಯಣ್ಣ

14 comments:

ಮಧು said...

ಹಳೇ ಪತ್ರಗಳನ್ನೆಲ್ಲಾ ಓದಿದರೆ ತುಂಬಾ ಖುಶಿಯಾಗುತ್ತದೆ ಅಲ್ವೇ?
ನನ್ನ ಬ್ಲಾಗಿನಲ್ಲೂ ಇದೇ ರೀತಿ ಒಂದು ಲೇಖನ ಹಾಕಿದ್ದೇನೆ, ನೋಡಿ

~ಮಧು

shivu K said...

ಚಿತ್ರ ಪುಟ್ಟಿ,

ಪತ್ರ ಓದಿ ಹೃದಯ ತುಂಬಿ ಬಂತು. ನಿಜಕ್ಕೂ ಇಂಥ ಪತ್ರ ಬರೆದ ಜಯಣ್ಣನ ಬಗ್ಗೆ ಏನು ಹೇಳಲಿ ? ಒಂದೊಂದು ಪದಗಳನ್ನು ಪ್ರೀತಿಯ ಪಾತ್ರೆಯಲ್ಲಿ ಅದ್ದಿ ಪ್ರೇಮದಿಂದ ಜೋಡಿಸಿದಂತಿದೆ. ಇದಕ್ಕಿಂತ ಹೆಚ್ಚಿಗೇನು ಹೇಳಲಾರೆ.......

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...
ನಿಮ್ಮ ಅಣ್ಣ ಇಂಥಹ ಪ್ರೀತಿಯ, ಮಮತೆಯ ಪತ್ರ ಬರೆಯುತ್ತಾರೆಂದರೆ ಅವರಿಗೆ ಫೋನೆ ಮಾಡಿ ವ್ರಥಾ ನಿಮ್ಮ ಹಣ ಖರ್ಚು ಮಾಡ ಬೇಡಿ.
ಅವರಿಗೆ ಪತ್ರದಿಂದಲೇ ಮಾತನಾಡಿಸಿ...
ಅಥವಾ
ಅವರಿಗೊಂದು ಬ್ಲೊಗ್ ಓಪನ್ ಮಡಿ ಕೊಡಿ..
ನಮ್ಮಂಥವರೂ ಆಸ್ವಾದಿಸಬಹುದು ಅವರ ಬರವಣಿಗೆಯ ಮೋಡಿ...
ಧನ್ಯವಾದಗಳು.

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

@ಮಧು..ಶರಧಿಗೆ ಸ್ವಾಗತ. ನಿಮ್ಮ ಬ್ಲಾಗ್ಗೆ ಖಂಡಿತಾ ಭೇಟಿ ಕೊಡುತ್ತೇನೆ.
@ಶಿವಣ್ಣ..ಥ್ಯಾಂಕ್ಯೂಊಊಊ ಅಣ್ಣ. ಅಣ್ಣಂದಿರ ಪ್ರೀತಿನೇ ಹಾಗೇ ಅಲ್ವಾ?
@ಪ್ರಕಾಶ್ ಸರ್..ಬೆಂಗಲೂರಿಗೆ ಬಂದ ಮೇಲೆ ಪತ್ರ ಬರೆಯೋದನ್ನೇ ನಿಲ್ಲಿಸಿದ್ದೇನೆ. ಅದಕ್ಕೆ ಅಣ್ಣನಿಂದ ಆಗಾಗ
ಕ್ಲಾಸು ತಕೋತಾ ಇದ್ದೀನಿ.
-ಪ್ರೀತಿಯಿಂದ,
ಚಿತ್ರಾ

Laxman said...

ಹಲೋ ಚಿತ್ರಾ,
ಚೆನ್ನಾಗಿದೆ ಚಿತ್ರಾ. ನಿನ್ನ ಬರವಣಿಗೆ ತುಂಬಾ ಹಿದಿಸಿತು.
ಹೀಗೆ ಬರಿತಾ ಇರು.
-ಲಕ್ಷ್ಮಣ

ರಾಘವೇಂದ್ರ ಕೆಸವಿನಮನೆ. said...

ಚಿತ್ರ,
(ಪತ್ರ)ಬರಹ ತುಂಬ ಚೆನ್ನಾಗಿತ್ತು.
ಎಂದೋ ನಮಗೆ ಬಂದ ಪತ್ರಗಳನ್ನು ಮುಂದೆಂದೋ ಒಮ್ಮೆ ಓದುವ ಖುಷಿಯೇ ಬೇರೆ ಅಲ್ವಾ? ಅದು ಮೊದಲ ಸಲ ಪತ್ರ ಓದಿದಾಗ ಭಾವಕ್ಕೇ ನಮ್ಮನ್ನು ಕರೆದೊಯ್ಯುತ್ತೆ!
ನಾನು ಡಿಗ್ರಿ ಓದುವಾಗ ಅಮ್ಮ ಹೀಗೇ ಒಂದು ಪತ್ರ ಬರೆದಿದ್ದರು. ಆಮೇಲೆ ಫೋನು ಬಂತು.ಅಕ್ಷರಗಳಲ್ಲಿ ಅಮ್ಮನನ್ನು ಕಾಣುವ ಸುಖವನ್ನೇ ಕಿತ್ತುಕೊಂಡಿತು. ಆ ಪತ್ರ ಮಾತ್ರ ಇಂದಿಗೂ ನನ್ನ ಬಳಿ ಭದ್ರವಾಗಿ ಉಳಿದುಕೊಂಡಿದೆ.
ನಿಮ್ಮ ಅಣ್ಣನನ್ನೂ ಬ್ಲಾಗ್ ಮನೆಗೆ ಕರೆದುಕೊಂಡು ಬನ್ನಿ ಮೇಡಂ.!!
- ರಾಘವೇಂದ್ರ ಕೆಸವಿನಮನೆ.

Anonymous said...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

ಕುಮಾರ ರೈತ said...

ನಿಮ್ಮಣ್ಣನ ಪತ್ರ ಆಪ್ತತೆ -ಮಮತೆಯಲ್ಲಿ ಅದ್ದಿ ತೆಗೆದಂತಿದೆ.
ಪತ್ರ ಕೊಡುತ್ತಿದ್ದ ಭಾವವೇ ಸೊಗಸು.ಇಂಥ ನೆನಪು ಮರುಕಳಿಸುವಂತೆ ಮಾಡಿದ್ದಕ್ಕೆ ಧನ್ಯವಾದ

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಲಕ್ಷ್ಮಣ ಸರ್..ರಾಘವೇಂದ್ರ, ಕುಮಾರ್..ಪ್ರತಿಕ್ರಿಯೆಗೆ ಧನ್ಯವಾದಗಳು.
ನೀಲಾಂಜಲ..ನಿಮ್ಮ ಮಾತಿಗೆ ಸ್ಪಂದಿಸಿದ್ದೇನೆ..
-ಚಿತ್ರಾ

Anonymous said...

nimma blog nannishTada bloggaLalli ondu...
thumbaane chennagi baritira...
aagaaga bartaa irtene nim blog kadege..
aadre istada lekahana odidaaga ondu mecchuge helona andre... comment blogger ge re-direct aagtade... blogger site nam officealli block...:(

Santhosh Chidambar said...

ಚೆನ್ನಾಗಿದೆ .. ನಾನೂ ಸಹ ನನ್ನ ಕಾಲೇಜು ದಿನಗಳಲ್ಲಿ ನನ್ನ ಅಣ್ಣನಿಗೆ ಪತ್ರ ಬರೆಯುತಿದ್ದೆ ... ಹೇಗೆಂದರೆ

ಅಣ್ಣ , ನಾನು ಕ್ಷೇಮ . ನೀನ್ ಹೇಗಿದ್ದೀಯ ? ಬೇಗ ಹಣ ಕಳ್ಸು
ಇಂತಿ
ಸಂತೋಷ್

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

@ವಿಜಯಕಾಂತ ಅವರೇ ತುಂಬಾನೇ ಧನ್ಯವಾದಗಳು.
@ಸಂತೋಷ್ ..ನಿಮ್ಮಣ್ಣ ತುಂಬಾ ಪಾಪ ಇರಬೇಕು! ಇರಲಿ ಬಿಡಿ..ಹಣಕ್ಕಾದ್ರೂ ಪತ್ರ ಬರೆದಿರಲ್ವಾ?
-ಚಿತ್ರಾ

Prabhuraj Moogi said...

eegella imche (e-Amche --> email) kaala... patra bareyode marethogide... patra illlaaMdroo phonaadroo maaDteeni manege.. kelasal adoo maDokaagalla...

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಪ್ರಭುರಾಜ್...ಪ್ರತಿಕ್ರಿಯೆಗೆ ಧನ್ಯವಾದಗಳು. ವೇಗದ ಬದುಕು ಎಲ್ಲವನ್ನೂ ಮರೆಸಿಬಿಡುತ್ತೆ..ಛೇ! ಹೀಗಾಗಬಾರದು ಅಲ್ವೇ?
-ಪ್ರೀತಿಯಿಂದ,
ಚಿತ್ರಾ