Saturday, June 12, 2010

ಅಜ್ಜಿಗೊಂದು ಪತ್ರ


ಅಜ್ಜಿ,

ಇಲ್ಲಿ ತುಂಬಾ ಮಳೆ. ಕಿಟಕಿಯಾಚೆ ಇಣುಕಿದರೆ ದೂರದಲ್ಲಿ ಕಾಣುವ ಖಾಲಿ ಮೈದಾನ ತುಂಬಾ ಆಲಿಕಲ್ಲುಗಳ ಓಕುಳಿಯಾಟ. ಮಕ್ಕಳ ಕಲರವಗಳಿಲ್ಲ. ಇಲ್ಲಿ ನಮ್ಮೂರಿನ ತರ ಹಸಿರು ಮರಗಿಡಗಳು ಕಾಣಸಿಗೊಲ್ಲ, ಬರೇ ಬಿಲ್ಡಿಂಗ್‌ಗಳು. ಆ ಬಿಲ್ಡಿಂಗ್ ಮೇಲೆ ಬಿದ್ದ ಮಳೆ ಹಾಗೇ ರಸ್ತೆಗಿಳಿಯುತ್ತೆ. ಆಗ ಆ ರಸ್ತೆಯೇ ನಮ್ಮೂರಿನ ದೊಡ್ಡ ಹೊಳೆಯಾಗುತ್ತೆ. ಎಂಥ ವಿಚಿತ್ರ ಅಂತೀಯಾ? ಈ ಬೆಂಗ್ಳೂರೇ ಹಾಗೇ ಅಜ್ಜಿ.

ಅಂದ ಹಾಗೇ, ಮಳೆ ಬಂದ ತಕ್ಷಣ ನಂಗೆ ನೀನೇ ನೆನಪಾಗ್ತಿಯಾ. ಮಳೆ ಬಂದಾಗಲೆಲ್ಲಾ ನಿನ್ನ ಸೆರಗ ಹಿಡಿದು ಹಲಸಿನ ಬೀಜ, ಹಪ್ಪಳ ಉರಿದು ಕೊಡು ಎಂದು ಬೆನ್ನಿಗೆ ಬಿದ್ದಾಗ ಬೈಯುತ್ತಲೇ ಪ್ರೀತಿಯಿಂದ ಮಾಡಿಕೊಡುತ್ತಿದ್ದಿ ಅಲ್ವಾ? ನಿನ್ನ ಬೈಗುಳ ಕೇಳೋದೇ ಒಂಥರಾ ಚೆಂದ ಅಜ್ಜಿ. ಅಮ್ಮ ಕೆಲ್ಸದಿಂದ ಬರೋದು ತಡವಾದಾಗ ನಿನ್ನ ತೊಡೆ ಮೇಲೆ ಕುಳಿತು ಜೋರಾಗಿ ಅಳುತ್ತಿದ್ದಾಗ ನೀನು ರಾಮಾಯಣ, ಮಹಾಭಾರತ ಕಥೆ ಹೇಳಿಯೇ ನನ್ನ ಸಮಧಾನಿಸುತ್ತಿದ್ದೆ.

ನೊಡು. ಅಜ್ಜಿ, ಈಗ ಯಾರು ಹೇಳ್ತಾರೆ ಕಥೆ? ಅಜ್ಜಿ ಕಥೆ ಅಂತ ಹೇಳಿದ್ರೆ ಈಗಿನ ಮಕ್ಕಳು ಅದೇನು ಅಜ್ಜಿ ಕಥೆ? ಅದು ಹೇಗಿರುತ್ತೆ? ಅಂಥ ಹೇಳೋ ಸ್ಥಿತಿ ಇದೆ ಗೊತ್ತಾ?

ರಜೆ ಬಂದ್ರೆ ಸಾಕು ಅಜ್ಜ-ಅಜ್ಜಿ ಮನೆಗೆ ಓಡಿಹೋಗುವ, ಒಂದು ತಿಂಗಳ ರಜಾದಲ್ಲಿ ಅಜ್ಜಿ ಜೊತೆ ಕಾಲ ಕಳೆಯುವ ಮಕ್ಕಳು ಎಲ್ಲಿ ಸಿಗ್ತಾರಲ್ವಾ? ಈ ಮಳೆಗೆ ತೊಡೆ ಮೇಲೆ ಕುಳ್ಳಿರಿಸಿಕೊಂಡು ಹಪ್ಪಳ ಸಂಡಿಗೆ ತಿನ್ನಿಸುತ್ತಾ, ಅತ್ತಾಗ ಮೆಲ್ಲಗೆ ಪ್ರೀತಿಯಿಂದ ಗದರುತ್ತಾ, ಲಾಲಿ ಹಾಡೋ ‘ಅಜ್ಜಿ ’ ನೀನು ನಮ್ಮ ದೇಶದಲ್ಲೇ ಇತಿಹಾಸದ ಪುಟ ಆಗ್ತಿದ್ದಿಯಲ್ಲಾ ಅದಕ್ಕಿಂತ ದುರಂತ ಇನ್ನೇನಿದೆ ಹೇಳು?

ಆದರೆ, ನಮ್ಮೂರ ಹಸಿರು ಹಳ್ಳಿಯಲ್ಲಿ ಹುಟ್ಟಿದ ನನಗೆ ನಿನ್ನಂಥ ಒಳ್ಳೆ ಅಜ್ಜಿ ಸಿಕ್ಕಿದ್ದಾಳೆ. ಅವಳ ಬಾಯಿಂದ ಉದುರುವ ಮುತ್ತಿನ ಕಥೆಗಳನ್ನು ಕೇಳೋ ಭಾಗ್ಯ ನನಗೂ ಸಿಕ್ತು. ರಜೆ ಸಿಕ್ಕಾಗಲೆಲ್ಲಾ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ಯಕ್ಷಗಾನ ನೋಡೋ ಅವಕಾಶ ನಂಗೆ ಸಿಕ್ತು ಅನ್ನೋದನ್ನು ನೆನೆಸಿಕೊಂಡಾಗಲೆಲ್ಲಾ ನಾನು ಪುಳಕಿತಳಾಗುತ್ತೇನೆ.

ನೋಡಜ್ಜಿ, ಈ ಮಳೆ ಎಷ್ಟೆಲ್ಲಾ ನೆನಪಿಸ್ತು ಅಂತ. ಆ ಮಳೆನೇ ಹಾಗೇ ನೆನಪುಗಳ ಮೆರವಣಿಗೆ...

(ಪ್ರಕಟ: http://hosadigantha.in/epaper.php?date=06-10-2010&name=06-10-2010-೧೭)