ಸಹಜವಾಗಿ ಭಾವನೆಗಳೂ ನನ್ನೊಳಗೆ ಮಾತಾಡಿದ್ದವು. ನಿನ್ನ ಕುಡಿನೋಟ, ನಗು, ತಿಳಿಹಾಸ್ಯ, ಕೇಕೆಯ ಮಾತುಗಳು, ಅಕ್ಕರೆಯಿಂದ ನೀಡಿದ ಚಾಕಲೇಟು, ಕಿವಿ ಹಿಂಡಿದ್ದು, ಮಕ್ಕಳಂತೆ ಹೊಡೆದಾಟ..ನೋವಿನ ಕರಾಳತೆಯನ್ನೂ ಹಂಚಿಕೊಂಡ ಮನ..ಎಲ್ಲವೂ ಭವಿಷ್ಯದ ಕರಾಳ ನೆರಳಿನಲ್ಲಿ ಬರೇ ನೆನಪುಗಳು ಅಂತ ನಾನಂದುಕೊಂಡಿರಲಿಲ್ಲ..ರಣಬಿಸಿಲಿಗೆ ಮೈಯೊಡ್ಡಿ ಬೆಂದರೂ.. ಹೊಸ ಚಿಗುರು ಆ ನಿನ್ನ ನಗು..ನನ್ನ ಪಾಲಿಗೆ ನೀನೇ ಧರಿತ್ರೀ. ಬಿರುಮಳೆಗೆ ತೊಯ್ದರೂ ..ಪ್ರೀತಿ ಹೊಸ ಬೆಳೆಯ ಬೆಳೆಯುತ್ತಿತ್ತು. ನೋವೆಂಬ ಕಳೆಯ ಕಿತ್ತು ನಗುತಾ, ಸಹನೆಯಿಂದ ನನ್ನ ಜೊತೆಗೆ ನೀನೂ ಹೆಜ್ಜೆಹಾಕಿದ್ದೆ ಸ್ವಲ್ಪ ದೂರ..! ಸಹನೆ ನನಗೆಲ್ಲಿದೆ? ಎಂದಾಗ ಕಿವಿಹಿಂಡಿ ತಾಳಿಕೋ..ಎಂದು ಬುದ್ಧಿಹೇಳಿದವಳೂ ನೀನೇ.
ಕಷ್ಟವೇ ಇಷ್ಟವೆಂಬಂತೆ ..ಬದುಕುವ ಕಲೆ..ಹೇಗೆ ಕಲಿತೇ? ನನಗೂ ಕಲಿಸಿಕೊಡು ಗೆಳತೀ..ಎಂದಾಗ ಹುಣ್ಣಿಮೆಯ ಚಂದ್ರನಂತೆ ತುಂಬು ಬೆಳದಿಂಗಳ ನಗು ಚೆಲ್ಲಿದ್ದೆ.
ಆ ನಗುವಿನಲ್ಲಿ ನಿನ್ನ ಆ ಬೆಳ್ಳಿಮೂಗುತಿ ಎಷ್ಟು ಚೆನ್ನಾಗಿ ಹೊಳೆಯುತ್ತಿತ್ತು. ..ಚಂದಿರನಂತೆ, ಬೆಳದಿಂಗಳಂತೆ..ಆ ನಿನ್ನ ನಗುವಿನಂತೆ! ಅದಕ್ಕೆ ಕವಿಯೊಬ್ಬ ಹೇಳಿದ್ದು: "ಬೆಳಗು ಇಬ್ಬನಿಯಲ್ಲಿ ನಗುವ ಹುಲ್ಲ ಹನಿಗಿಂತ ಚೆಂದಕೆ ಮಿನುಗುವುದು ಅವಳ ಮೂಗುತಿ ಅಡಿಯ ನಗು"!!
ನೀನಿದ್ದ ಜೀವನದ ಹಾದಿಯಲ್ಲಿ ನಲಿವಿರದಿದ್ದರೂ..ಗೆಲುವಿತ್ತು. ಪ್ರೀತಿ ಹೃದಯಾನ ಭಾರವಾಗಿಸದೆ, ಹಗುರವಾಗಿಸಿತ್ತು. "ನಿನ್ನ ಜೊತೆ ಹೆಜ್ಜೆಹಾಕಿದವರಲ್ಲಿ ನನ್ನನ್ನು ಒಬ್ಬಳನ್ನಾಗಿಸಿ..ಕನಸುಗಳಲ್ಲಿ ಪುಟ್ಟ ತುಣುಕಕಾಗಿಸಿ..ನಿನ್ನ ಹಸುಳೆಗಣ್ಣಿನ ಪಟಲದ ಮೂಲೆಯಲ್ಲಿ ನನ್ನ ಬಚ್ಚಿಡ್ತೀಯಾ..ನಿನ್ನೆದೆ ಗೂಡಲ್ಲಿ ಪುಟ್ಟ ಮರಿಯಾಗಿ ಗರಿಬಿಚ್ಚಿ ಹಾರಾಡ್ತೀರ್ತೀನಿ.." ಎಂದು ಮುದ್ದಾದ ಅಕ್ಷರಗಳೊಂದಿಗೆ ಬರೆದು ಕಳಿಸಿದ ಪುಟ್ಟ ಪತ್ರ ಈಗಲೂ ನನ್ನನ್ನು ತುಂಬಾ ಡಿಸ್ಟರ್ಬ್ ಮಾಡುತ್ತೆ. ಭಾವನೆಗಳನ್ನು ಕೊಲ್ಲದಿರು...ಎಂದು ಪದೇಪದೇ ಮೆಸೇಜ್ ಮಾಡಿ, ಕಲ್ಲಾದ ಹೃದಯದಲ್ಲಿ ಮತ್ತೆ ಭಾವ-ಜೀವ ತುಂಬಿದವಳೂ ನೀನೇನೇ. ನೀನಿದ್ದಾಗ ಅಮಾವಾಸ್ಯೆಯ ಕರಾಳ ರಾತ್ರೀಯಲ್ಲೂ ಹುಣ್ಣಿಮೆಯ ಚಂದ್ರ ಮುಗ್ಧವಾಗಿ ನಗುತ್ತಿದ್ದ.
ಅದೇ ನೆನಪು..ಕನವರಿಕೆಯಲ್ಲಿ ದೇವರಿಗೆ ಹಿಡಿ ಹಿಡಿ ಶಾಪ ಹಾಕುತ್ತಿದ್ದೇನೆ. ಎಲ್ಲೋ ಓದಿದ ಹುಚ್ಚುಚ್ಚು ಕವನದ ಸಾಲುಗಳು, ಕವಿಯ ಮಾತುಗಳು ಮತ್ತೆ ಮತ್ತೆ ತಲೆ ಕೊರೆಯುತ್ತಿವೆ. "ಉಜ್ವಲ ಮುಖಗಳುಳ್ಳ ಈ ಸುಂದರ ಮಣ್ಣಿನ ಗೊಂಬೆಗಳನ್ನೇಕೆ ನೀನು ತಯಾರಿಸಿದೆ...ಇಷ್ಟೊಂದು ಪ್ರಿಯವಾದ ಭೂಮಿಯನ್ನು ಏಕೆ ಸೃಷ್ಟಿಸಿದೆ...ಜಗತ್ತಿನ ಆಟ ಹೂಡಿ ಅದರಲ್ಲಿ ಯೌವನದ ಜಾತ್ರೆ ಏರ್ಪಡಿಸುವ ಅವಶ್ಯಕತೆ ನಿನಗೇನಿತ್ತು?" ಕವಿಯೊಬ್ಬ ದೇವರಿಗೆ ಸವಾಲು ಹಾಕಿದ ಹಾಗೇ ನನಗೂ ದೇವರಲ್ಲಿ ಕೇಳಬೇಕೆನಿಸುತ್ತದೆ. ಆದರೆ ಆತನೂ ನಿನ್ನಂತ ಕಾಣುವ ಕಣ್ಣಿಗೂ ಕಾಣಲ್ಲ ನೋಡು. ಈ ಯೌವನದ ಯಾನ, ಮನಸ್ಸಿನ ತಾಕಲಾಟ..!ನಾವು ಮಣ್ಣಿನ ಸುಂದರವಾದ ಗೊಂಬೆಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಆದರೆ ಹಾಗಾಗಲಿಲ್ಲ...ಎಲ್ಲರಂತೆ ನನಗೂ ಮನಸ್ಸು, ಪ್ರೀತಿಸುವ ಹೃದಯ ಕೊಟ್ಟ. ಪ್ರೀತೀನ ಪ್ರೀತಿಯಿಂದಲೇ ಗೆಲ್ಲುವ ಕಲೆಯನ್ನೂ ಕಲಿಸಿಕೊಟ್ಟ. ಪ್ರೀತಿಸುವುದನ್ನು, ಮನಸ್ಸನ್ನು, ಬದುಕುವುದನ್ನು, ಮಿಲನದ ಸುಖವನ್ನು ಜೊತೆಗೆ ವಿರಹದ ಬೇಗೆಯನ್ನು ಜೊತೆಜೊತೆಗೆ ತಂದುಕೊಟ್ಟ ಸತ್ಯ ಎಂದು ಕರೆಯುವ ಆ ದೇವರ ಮೇಲೆಯೇ ಅಪನಂಬಿಕೆ ನನಗೆ.
ವಿರಹದಲ್ಲಿ ಮಮ್ಮರಗುವುದು ದೇವರಿಗೂ ಪ್ರೀತಿ ಅನಿಸುತ್ತೆ ನೋಡು...ನನ್ನನ್ನು ನೋಡಿ ಅವನೂ ಸಮಾಧಾನಿಸುವ ಬದಲು ಮೌನವಾಗಿದ್ದಾನೆ. ಪ್ರೀತಿಸಿದ ನಿನಗೂ ಇದನ್ನು ನೋಡಿ ಹೃದಯ ಭಾರವಾಗೋಲ್ವೆ? ನನಗಾಗಿ ಹನಿಬಿಂದು ಉದುರುವುದಿಲ್ಲವೇ..ಅಯ್ಯೋ ಎನಿಸಲ್ವೇ? ಬೇಡ ಬಿಡು...ಕಣ್ಣೀರಿನ ಅನುಕಂಪ ನನಗೇಕೆ? ಬದುಕಿನ ಕತ್ತಲು ಕೋಣೆಯಲ್ಲಿ..ಮಬ್ಬಿಗೆ ಹಣತೆ ಹಚ್ಚಿ..ಅಲ್ಲಿ ನಿನ್ನ ಮುಖ ಕಾಣಲು ಬಯಸುತ್ತೇನೆ..ಆದರೆ ತೈಲವಿಲ್ಲದೆ ಹಣತೆ ಹೇಗೆ ಬೆಳಗೀತು? ಬದಲಾಗಿ ಅದು ಉರಿಯುತ್ತದೆ..ಹೃದಯವನ್ನೇ ದಹಿಸಿ ಬೂದಿ ಮಾಡುತ್ತೆ. ಸಾಗರದ ಅಲೆಗಳಂತೆ ಭೋರ್ಗರೆಯುತ್ತಾ ಬರುವ ಭಾವದಲೆಗಳು..ಈ ನಡುವೆ ಯಾಕೋ ಮನ ತಂಪಾಗಿಸೋದು ಕೆ.ಎಸ್. ಎನ್ ಅವರ ಜೀವ ತುಂಬುವ ಭಾವಗೀತೆಗಳು. ನೆನಪುಗಳನ್ನಷ್ಟೇ ಬಿಚ್ಚಿದೆ..ಮನದ ಹಗುರಕ್ಕೆ..ನಿನಗೆ ಡಿಸ್ಟರ್ಬ್ ಮಾಡೋಕೆ ಅಲ್ಲ....
12 comments:
ಚಿತ್ರಾ,
ಮ್!:) ಏನು ಪ್ರತಿಕ್ರಿಯಿಸುವುದು? ಚೆಂದದ ಬರಹ. ನವಿರು ನಿರೂಪಣೆ. ಓದಿಸಿಕೊಂಡು ಹೋಯಿತು.
`ಬೆಳಗು ಇಬ್ಬನಿಯಲ್ಲಿ ನಗುವ ಹುಲ್ಲ ಹನಿಗಿಂತ ಚೆಂದಕೆ ಮಿನುಗುವುದು ಅವಳ ಮೂಗುತಿ ಅಡಿಯ ನಗು"! ಈ ಸಾಲು ಇಷ್ಟವಾಯಿತು.
ಚನಾಗ್ ಬರ್ದಿದೀಯ ತಂಗಮ್ಮಾ.. ಕಣ್ಣೀರೆಲ್ಲಾ ಬ್ಯಾಡ; ಓದಿದ ಹುಡ್ಗ ಓಡಿ ಬರ್ತಾನೆ..
ತುಂಬಾ ಸರಳ ಪ್ರೇಮ ನಿವೇದನೆ. ಚೆನ್ನಾಗಿತ್ತು.
ವಿರಹದಲ್ಲಿ ಮಮ್ಮರಗುವುದು ದೇವರಿಗೂ ಪ್ರೀತಿ ಅನಿಸುತ್ತೆ ನೋಡು...ನನ್ನನ್ನು ನೋಡಿ ಅವನೂ ಸಮಾಧಾನಿಸುವ ಬದಲು ಮೌನವಾಗಿದ್ದಾನೆ. ಪ್ರೀತಿಸಿದ ನಿನಗೂ ಇದನ್ನು ನೋಡಿ ಹೃದಯ ಭಾರವಾಗೋಲ್ವೆ? ನನಗಾಗಿ ಹನಿಬಿಂದು ಉದುರುವುದಿಲ್ಲವೇ..ಅಯ್ಯೋ ಎನಿಸಲ್ವೇ? ಬೇಡ ಬಿಡು...ಕಣ್ಣೀರಿನ ಅನುಕಂಪ ನನಗೇಕೆ? ಬದುಕಿನ ಕತ್ತಲು ಕೋಣೆಯಲ್ಲಿ..ಮಬ್ಬಿಗೆ ಹಣತೆ ಹಚ್ಚಿ..ಅಲ್ಲಿ ನಿನ್ನ ಮುಖ ಕಾಣಲು ಬಯಸುತ್ತೇನೆ..ಆದರೆ ತೈಲವಿಲ್ಲದೆ ಹಣತೆ ಹೇಗೆ ಬೆಳಗೀತು? ಬದಲಾಗಿ ಅದು ಉರಿಯುತ್ತದೆ..ಹೃದಯವನ್ನೇ ದಹಿಸಿ ಬೂದಿ ಮಾಡುತ್ತೆ. ಸಾಗರದ ಅಲೆಗಳಂತೆ ಭೋರ್ಗರೆಯುತ್ತಾ ಬರುವ ಭಾವದಲೆಗಳು..ಈ ನಡುವೆ ಯಾಕೋ ಮನ ತಂಪಾಗಿಸೋದು ಕೆ.ಎಸ್. ಎನ್ ಅವರ ಜೀವ ತುಂಬುವ ಭಾವಗೀತೆಗಳು. ನೆನಪುಗಳನ್ನಷ್ಟೇ ಬಿಚ್ಚಿದೆ..ಮನದ ಹಗುರಕ್ಕೆ..ನಿನಗೆ ಡಿಸ್ಟರ್ಬ್ ಮಾಡೋಕೆ ಅಲ್ಲ....
ಇದನ್ನ ಮತ್ತೆ ಮತ್ತೆ ಓದಿಕೊಂಡೆ..ತುಂಬಾ ದಿನಗಳ ನಂತರ ಒಂದೊಳ್ಳೆ ಲವ್ ಚೀಟಿ ಓದಿದ ಹಾಗಾಯಿತು..ನಿಮ್ಗೆ ಪ್ರೀತಿಯಿಂದ ನೂರಹನ್ನೊಂದು ಥ್ಯಾಂಕ್ಸು
ಚಂದ ಬರೆದಿದ್ದೀರಿ...
ವಾಹ್! ನಾನು usually ಲವ್ ಲೆಟ್ರುಗಳನ್ನ ಓದಲ್ಲ.
ಆದ್ರೆ ಇದನ್ನ ಓದಿದ ಮೇಲೆ ಮತ್ತೆ ಮತ್ತೆ ಓದಿಕೊಳ್ಳಬೇಕೆನಿಸಿತು ಕೆಲವು ಸಾಲುಗಳನ್ನ. ಹುಡುಗಿ ಹುಡುಗನಾಗಿ ಬರೆಯೋದು ಸುಲಭವೇನಲ್ಲ :)
TUMBA CHENNAGIDE ..SHABDAGALU.., NIROOPANE.. SULABHAVAAGI ODISIKONDU HOGUTTADE.
THANK YOU!!
ಚೆನ್ನಾಗಿದೆ ಚಿತ್ರಾ ,ಶರಧಿಯ ಹರಿವು ತೀವ್ರವಾಗುತ್ತಿದೆ.
@ಜೋಮನ್, ಚೇವಾರ್, ರಾಘವೇಂದ್ರ ಸಿಮೆಂಟು ಮರಳಿನ ಮಧ್ಯೆ, ಅಹರ್ನಿಶಿ..ತುಂಬಾ ಕೃತಜ್ಞತೆಗಳು...ಮತ್ತೆ ಮತ್ತೆ ಬನ್ನಿ ಶರಧಿಗೆ..ಒಂದಷ್ಟು ಹೊತ್ತು ಪಯಣಿಸಿ...
-ಒಲವಿಂದ,
ಚಿತ್ರಾ
@ಶುಶ್ರುತಣ್ಣ..ಥ್ಯಾಂಕ್ಯೂ..ಹುಡ್ಗ ಬಂದಿಲ್ಲಾಂದ್ರೆ ನೀನೇ ಹುಡುಕು..ಮಲೆನಾಡಿದಾದ್ರೂ ಓಕೆ..
-ತಂಗಮ್ಮ
@ವಿಕಾಸ್, ನವಿಲುಗರಿ ಹುಡುಗ...ಮತ್ತೆ ಮತ್ತೆ ಓದಬೇಕೆನಿಸಿತೇ? ಮತ್ತೆ ಮತ್ತೆ ಬರುತ್ತಿರಿ..ಅಂತಹ ಸಾಲುಗಳು ನಿಮಗಾಗಿ ಕಾಯುತ್ತಿರುತ್ತವೆ.
-ಒಲವಿನಿಂದ,
ಚಿತ್ರಾ
ಅದೆಷ್ಟೋ ಪತ್ರಗಳನ್ನು ಓದಿದ್ದೇನೆ...
ಬರೆದದ್ದೂ ಉಂಟು..
ಆದರೆ ಈ ಬಿನ್ನಹದಲ್ಲಿ ಇರುವ ಕೆಲವು ಸಾಲುಗಳು ಮನಸ್ಸನ್ನು ಮುದಗೊಳಿಸಿದ್ದಂತೂ ನಿಜ...
ಥ್ಯಾಂಕ್ಸ್..ಒಂದು ಒಳ್ಳೆಯ ನಿವೇದನೆಯನ್ನು ಓದಿಸಿದ್ದಕ್ಕೆ..
“ಬೆಳಗು ಇಬ್ಬನಿಯಲ್ಲಿ ನಗುವ ಹುಲ್ಲ ಹನಿಗಿಂತ ಚೆಂದಕೆ ಮಿನುಗುವುದು ಅವಳ ಮೂಗುತಿ ಅಡಿಯ ನಗು"!!”
touching..
ಮಾಂಬಾಡಿ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು
-ಚಿತ್ರಾ
enri edu? bega maduve agi namagella oota hakisi ella olleyadaguttade.
geleya
rajesh
Post a Comment