Friday, December 5, 2008

ಹೀಗೊಬ್ಬ ಪೇಪರ್ ಹುಡುಗ ಇದ್ದ...!

ಯಾಕೋ ಮನಸ್ಸು, ದುಃಖದ ಕಾರ್ಮೋಡ. ಮೊನ್ನೆ ಮೊನ್ನೆ ನಡೆದ ಮುಂಬೈ ಸ್ಫೋಟ, ಬದುಕಿನ ಕಣ್ಣೀರು, ನೆತ್ತರ ಕೋಡಿ..ಮನಸ್ಸಿನ್ನೂ ಚೇತರಿಸಿಗೊಂಡಿಲ್ಲ. 'ಶರಧಿ'ಗೆ ಬಂದು ಕಣ್ಣುಹಾಯಿಸಿದರೆ ಮನತುಂಬಾ ದುಃಖದ ಹನಿಬಿಂದುಗಳಷ್ಟೇ..ಬರೆಯಲು ಅಕ್ಷರಗಳೇ ಹೊಳೆಯುತ್ತಿಲ್ಲ. ಕೈಗಳು ಚಲಿಸುತ್ತಿಲ್ಲ. ನಿನ್ನೆ ಮಟಮಟ ಮದ್ಯಾಹ್ನ ಯಾವುದೇ ಕಾರ್ಯನಿಮಿತ್ತ ಹೊರಗಡೆ ಹೊರಟವಳಿಗೆ, ಸೂರ್ಯನ ಸುಡುವ ಬಿಸಿಲು ತಲೆನೇ ಒಡೆದುಹೋಗುವಷ್ಟು ತಲೆನೋವು ತರಿಸಿತ್ತು. ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ಮನೆ ಕಡೆ ಹೊರಟವಳಿಗೆ ನನ್ನ ಮನೆ ಕಡೆ ಹೋಗುವ ಬಸ್ಸು ಸಿಕ್ಕಿದ್ದು ಆಫೀಸ್ ನಿಂದ ಹೊರಟ ಮುಕ್ಕಾಲು ಗಂಟೆ ಬಳಿಕ.

ಜನರಿಂದ ಗಿಜಿಗಿಡುವ ಬಸ್ಸ ಸ್ಟಾಂಡಿನಲ್ಲಿ ಆವಾಗಲೇ ಕರೆಂಟು ಹೋಗಿ ಪೂರ್ಣ ಕತ್ತಲು. ಕರೆಂಟು ಬರುತ್ತಿದ್ದಂತೆ ಎದುರಿಗಿದ್ದ ಯುವಕನೊಬ್ಬ, ಹಾಯ್ ಚಿತ್ರಕ್ಕ ಹೇಗಿದ್ದೀರಿ? ಎಂದಾಗ ಯಾವ ಸೀಮೆ ತಮ್ಮ ಈತ? ಎಂದು ದುರುಗಟ್ಟಿ ನೋಡಿದ್ದೆ. ನಂಗೆ ನಂಬಲೇ ಆಗಲಿಲ್ಲ. ಯಾರಪ್ಪಾ ಈತ? ಮಾತು ಪರಿಚಯ, ಮುಖ ನೋಡಿದರೆ ಅಲ್ಪ-ಸ್ವಲ್ಪ ಪರಿಚಯ. ಗೊತ್ತಾಗಲಿಲ್ಲ..ತಾವು? ಎಂದೆ. "ನಿಮಗೆ ಯಾರದು ನೆನಪಿರುತ್ತೆ ಹೇಳಿ. ನಾನು ಅಜ್ಜು. .."ಅಂದಾಗ ನೆನಪಾಯಿತು, ನಮ್ಮೂರ ಪೇಪರ್ ಹುಡುಗ...ಅಜಯ್. ಆತನನ್ನು ಅಜ್ಜು ಎಂದು ನಾವೆಲ್ಲ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು. ತುಂಬಾ ಹಿಂದಿನ ಅಂದರೆ ನಾನಾಗ ಹತ್ತನೇ ಕ್ಲಾಸು. ಆವಾಗ ಅಜ್ಜು 8ನೇ ಕ್ಲಾಸು. ಅಜ್ಜು ಚಿಕ್ಕಂದಿನಿಂದಲೂ ಮನೆಮನೆಗೆ ಪೇಪರ್ ಹಾಗೂ ಹಾಲು ಹಾಕಿ ಓದುತ್ತಿದ್ದ. ನೋಡಲು ಮುದ್ದುಮುದ್ದಾಗಿದ್ದ ಅಜ್ಜು ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ತೀರ ಕಷ್ಟ. ಅವನ ಅಪ್ಪ ಬೇರೆ ಮಹಾ ಕುಡುಕ, ಯಾರಿಗೂ ಇರಬಾರದ ಕೆಟ್ಟ ಚಟಗಳೆಲ್ಲಾ ಆತನಿಗಿದ್ದವು. ಅಂಥವನನ್ನು ಅಪ್ಪನೆನನ್ನಲು ಯಾವ ಮಕ್ಕಳಿಗೂ ಸಹ್ಯ ಎನಿಸದು. ಅಮ್ಮ ರಾತ್ರಿ ಹಗಲೂ ಏನೇನೋ ಕೆಲ್ಸ ಮಾಡಿ ಮಗನನ್ನು ಓದಿಸಬೇಕೆಂಬ ಕನಸು ಕಂಡವರು.

ಅಜ್ಜು ಸೂರ್ಯ ಏಳೋಕೆ ಮುಂಚೆನೇ ಎದ್ದು ಮನೆ-ಮನೆಗೆ ಪೇಪರ್ ಹಾಕೋನು. ಹಾಲು ಹಾಕೋನು. ಊರಲೆಲ್ಲಾ ಈ ಕೆಲ್ಸಕ್ಕೆ ಸಂಬಳ ಕಡಿಮೆ. ಆದ್ರೂ ಅವನ ಬದುಕಿಗೆ, ಹಸಿವ ಹೊಟ್ಟೆಗಷ್ಟೇ ಸಾಕಾಗುತ್ತಿತ್ತು. ರಾತ್ರಿಯಿಡೀ ಕುಡುಕ ಅಪ್ಪನ ಕಾಟದಿಂದ ಸರಿಯಾಗಿ ನಿದ್ದೆ ಮಾಡದ ಅಜ್ಜು..ಅದು ಹೇಗೆ ಓದುತ್ತಿದ್ದೇನೋ/ ಹೇಗೆ ಕೆಲಸ ಮಾಡುತ್ತಿದ್ದಾನೋ ದೇವರೇ ಬಲ್ಲ. ನನಗೆ ಅಜ್ಜು ಅಂದ್ರೆ ತುಂಬಾ ಇಷ್ಟ. ಬೆಳಿಗ್ಗೆ, ಮದ್ಯಾಹ್ನ ಫ್ರೀಟ ಟೈಮಲ್ಲಿ ನನ್ನ ಹತ್ತಿರ ಓಡಿ ಬರುತ್ತಿದ್ದ. ಮನೆಯಲ್ಲಿ ಆದ ಕತೆಯನ್ನೆಲ್ಲಾ ಹೇಳುತ್ತಿದ್ದ. ಓದಿನಲ್ಲೂ ಚುರುಕು, ಆಟದಲ್ಲೂ ಚುರುಕು. ಹಾಗಾಗಿ ಅಧ್ಯಾಪಕರಿಗಳಿಗೂ ಅವನಂದ್ರೆ ಇಷ್ಟ, ನಮಗೂ ಪ್ರೀತಿ, ಅಕ್ಕರೆ.
ನಿನ್ನೆ ಇದ್ದಕ್ಕಿದ್ದಂತೆ ಅವನ ನೋಡಿದಾಗ ಖುಷಿಯ ಜೊತೆಗೆ ಅಚ್ಚರಿಯೂ ಆಯಿತು. ಒಳ್ಳೆ ಕೆಲಸದಲ್ಲಿದ್ದೀನಿ...ಅಮ್ಮನೂ ಜೊತೆಗೇ ಇದ್ದಾರೆ ಅಂದ. ಓದುತ್ತಿದ್ದಾಗಲೇ ಏನೇನೋ ಕೋರ್ಸುಗಳನ್ನು ಮಾಡಿ ಇದೀಗ ಬೆಂಗಳೂರಲ್ಲಿ ಒಳ್ಳೆ ಕೆಲ್ಸದಲ್ಲಿದ್ದಾನೆ. ನಂಗೆ ಹೆಮ್ಮೆ ಅನಿಸ್ತು.
ಹಸಿವಿಗಾಗಿ ಭಿಕ್ಷೆ ಬೇಡಲೂ ಹೇಸದ ಅಮ್ಮನೆಂಬ ದೇವರು, ಕಿತ್ತು ತಿನ್ನುವ ಬಡತನದ ನಡುವೆಯೂ ಬದುಕಬೇಕೆಂಬ ಹಂಬಲದ ಆ ಪುಟ್ಟ ಹುಡುಗನ ಕನಸು..ಇದೀಗ ನನಸಾಗಿದೆ. ದೇವರು ಒಳ್ಳೆಯವರಿಗೆ ಯಾವತ್ತೂ ಒಳ್ಳೆಯದನ್ನೇ ಮಾಡುತ್ತಾನೆ. "ಅಕ್ಕಾ ಬಡತನ ನಂಗೆ ತುಂಬಾ ಕಲಿಸಿದೆ" ಎಂದ. ನಿಜವಾಗಿಯೂ ಆತನ ಮಾತುಗಳನ್ನು ಕೇಳುತ್ತಿದ್ದಂತೆ ಅಜ್ಜು ಎಷ್ಟೊಂದು ಬೆಳೆದಿದ್ದಾನೆ..ಬದುಕು ಅವನಿಗೆ ಎಷ್ಟೊಂದು ಕಲಿಸಿದೆ ಅನಿಸಿತ್ತು. ಬದುಕಿನ ಕ್ಷಣಕ್ಷಣದಲ್ಲೂ ನೋವಿಗಷ್ಟೇ ಸಾಕ್ಷಿಯಾಗಿದ್ದ ಅಜ್ಜು..ಬದುಕಿನಲ್ಲಿ ಖುಷಿಯ ಬೆಳಕು ತುಂಬಿದೆ. ನೊಂದ ಬದುಕಿನ ಕಣ್ಣೀರ ಹಿಂದೆ ಸಾವಿರಾರು ಸುಖದನಿಗಳು ಸಾಲುಗಟ್ಟಿ ನಿಂತಿರುತ್ತವೆ ಎನ್ನೋದು ಇದಕ್ಕೆ ಅಲ್ಲವೇ? ಕೆಲವೊಮ್ಮೆ ಸಮಸ್ಯೆಗಳಿಗೂ ನಮ್ಮನ್ನು ಎದುರಿಸಲು ಧೈರ್ಯವಿರುವಿದಿಲ್ಲ..ಬದುಕೇ ಹಾಗೇ..ಅಜ್ಜು..!!
ಅಜ್ಜುನ ಜೊತೆ ಮಾತನಾಡಿ, ಅದೇ ನಮ್ಮ ಮನೆಗೆ ಹೋಗಿ ಅಡುಗೆ ಮುಗಿಸಿ ಕೋಣೆಯೊಳಗೆ ಕೂತವಳಿಗೆ ಇಷ್ಟೆಲ್ಲಾ ನೆನಪಾದುವು. ನನ್ ಖುಷಿಗೆ ಬ್ಲಾಗ್ ನಲ್ಲಿ ಹಾಕಿದೆ. ರೆಪ್ಪೆ ಮುಚ್ಚಿ ಮಲಗಿದರೂ ಯಾಕೋ ಅಜ್ಜುನ 'ಚಿತ್ರಕ್ಕ' ಧ್ವನಿ ಕೇಳಿಬರುತ್ತಿತ್ತು. ಬಡತನದ ಬದುಕು ತುಂಬಾ ಕಲಿಸಿದೆ ಎಂದ ಆತನ ಪ್ರೌಢ ಮಾತು ಮತ್ತೆ ಮತ್ತೆ ಪ್ರತಿಧ್ವನಿಸುತ್ತಿತ್ತು.

23 comments:

shivu K said...

iಚಿತ್ರಾ ಮರಿ,
ಈ ಕಥೆಯನ್ನು ಎಲ್ಲೋ ಕೇಳಿದಂತಿದೆಯಲ್ಲ! ನನ್ನ ಕಥೆಯೇ ಇರಬೇಕು. ನಾನ್ಯಾವತ್ತು ಇದನ್ನು ನಿನಗೆ ಹೇಳಿರಲಿಲ್ಲವಲ್ಲ ![ಸುಮ್ಮನೆ ತಮಾಷೆಗೆ ಹೇಳಿದೆ. ನೀನು ಬರೆದಿರುವ ಲೇಖನ ನನ್ನ ದಿನಪತ್ರಿಕೆ ವಿತರಣೆಯ ಪ್ರಾರಂಭದ ದಿನಗಳನ್ನು ನೆನಪಿಸುತ್ತದೆ]. ನಿಜಕ್ಕೂ ತುಂಬಾ ಚೆನ್ನಾಗಿದೆ. ಅಪ್ತವಾಗಿ ಕಾಡುತ್ತದೆ. ಅಜ್ಜುಗೆ ಒಳ್ಳೆಯದಾಗಲಿ.

ಪಾಲಚಂದ್ರ said...

ಒಳ್ಳೆಯ ಬರಹ, ಕಷ್ಟ ಪಟ್ಟು ಮೇಲೆ ಬಂದ ಅಜ್ಜುವಿಗೆ ನನ್ನ ಅಭಿನಂದನೆಗಳು!

--
ಪಾಲ

shreedevi kalasad said...

ಅಜಯನನ್ನ ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್ ಚಿತ್ರಾ.

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾರವರೆ....
ಪ್ರತಿಭೆ..ಪರಿಶ್ರಮ..ಇದ್ದರೆ..ಮೇಲೆಬರಬಹುದು..
ಅಜ್ಜು ನಮಗೂ ಇಷ್ಟವಾಗಿದ್ದಾನೆ...
ಅವನಿಗೆ ಶುಭ ಹಾರೈಕೆಗಳು..

ಹರೀಶ ಮಾಂಬಾಡಿ said...

ಅಜ್ಜುವಿಗೆ ಶುಭ ಹಾರೈಕೆ
ಒಳ್ಳೆಯದಾಗಲಿ

Harish kera said...

ನಿಮ್ಮ ಅಜ್ಜುಗೊಂದು ಅಭಿನಂದನೆ. ಹಾಗೇ ನಿಮಗೂ. ಖುಷಿ ಮೂಡಿಸುವ ಬರಹಗಳಿಗಾಗಿ.
- ಹರೀಶ್ ಕೇರ

ಅಂತರ್ವಾಣಿ said...

ಚಿತ್ರಾ ಅವರೆ,
ಎರಡು ದಿನದಿಂದ ಕಹಿ ಬರಹವನ್ನೇ ಓದುತ್ತಾಯಿದ್ದೀನಿ(ಹಲವಾರು ಬ್ಲಾಗುಗಳಿಂದ..ಶಿವು ಅವರ ಬ್ಲಾಗಿನ ಅಜ್ಜ ಕಥೆ ಸೇರಿ).
ಮೊದಲ ಪ್ಯಾರಾ ಶುರುಮಾಡಿದ ರೀತಿ ತುಂಬಾ ಮೆಚ್ಚುಗೆಯಾಯಿತು. ನಿಮ್ಮ ಟ್ಯಾಲೆಂಟ್ ಅದರಲ್ಲೇ ತಿಳಿಯುತ್ತೆ.

ಕನಸು said...

ಚಿತ್ರಾ ಮೇಡಂ,
ನಾನು ನಿಮ್ಮ ಲೇಖನಗಳನ್ನು ನೀವು ಪತ್ರಿಕೋದ್ಯಮ ಓದುತ್ತಿರುವಾಗಲಿಂದ ಹಿಡಿದು ಇಲ್ಲಿಯವರೆಗಿನ ಬರಹಗಳಲ್ಲಿಯ ಒಳ್ಳೆಯ ಅಂಶಗಳನ್ನು ಯೆತೆಚ್ಛವಾಗಿ ತಗೋತಾ ಇದ್ದೆನೆ. ಅದರಲ್ಲೂ ಈಂತಹ ಬರಹ ಯಾಕೋ ತುಂಬಾ ಕಾಡುತ್ತವೆ !!
ತುಂಬಾ ಚೆನ್ನಾಗಿದೆ .ಅಭಿನಂದನೆಗಳು
-ಕನಸು
ಬೆಳಗಾವಿ

Anonymous said...

http://nanisaha.blogspot.com/ Visit this blog and guess the blog subject

ಚಿತ್ರಾ ಕರ್ಕೇರಾ ದೋಳ್ಪಾಡಿ.. said...
This comment has been removed by the author.
ಚಿತ್ರಾ ಕರ್ಕೇರಾ ದೋಳ್ಪಾಡಿ.. said...

@ಶಿವಣ್ಣ ಹೌದು..ಕೇಳಿರಬಹುದು..ಅದೇ ಕಥೆ..ಮುಂಜಾನೆ ಸಂತೆ...
@ಪಾಲಚಂದ್ರ,ಹರೀಶ್ ಸರ್, ಪ್ರಕಾಶ್ ಸರ್, ಶ್ರೀದೇವಿ, ಜಯಶಂಕರ ಸರ್,..ಧನ್ಯವಾದಗಳು. ನಿಮ್ಮ ನೆನೆಕೆಗಳನ್ನು ಅಜ್ಜುಗೆ ತಿಳಿಸುತ್ತೇನೆ.
@ಹರೀಶ್ ಕೇರ ಸರ್..ಶರಧಿಗೆ ಸ್ವಾಗತ. ಧನ್ಯವಾದಗಳು.
@ಕನಸು..ತುಂಬಾ ಧನ್ಯವಾದಗಳು..ಹಾಗೇ ನೀವು...ಗೊತ್ತಾಗಲಿಲ್ಲವಲ್ಲ..
ಪ್ರೀತಿಯಿಂದ,
ಚಿತ್ರಾ

shivu K said...

ಪುಟ್ಟಿ,
ಟೋಪಿ ಫೋಟೊಗಳನ್ನು ನೋಡಿ ಟೋಪಿ ಹಾಕಿಸಿಕೊಂಡಿದ್ದಕ್ಕೆ ,
ಪ್ರತ್ಯಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಟೋಪಿಯ ವಿಚಾರದಲ್ಲಿ ನಿನ್ನ ಅಭಿಪ್ರಾಯ ಸರಿಯಾಗಿದೆ. ನೆಹರು ಟೋಪಿ ಮುಂದೆ ಬರಬಹುದು ಕಾಯುತ್ತಿರು....

ಕನಸು said...

ನೀವು 2007ರಲ್ಲಿ ಬರೆದ ಕವಿತೆ ಇಂದು ನೋಡಿದೆ. ಕವಿತೆಯಷ್ಟೇ ಅದಕ್ಕೆ ಬಳಸಿಕೊಂಡ ಚಿತ್ರ ಮೋಹಕವಾಗಿದೆ. ಇನಷ್ಟು ಕವಿತೆಗಳು ನಿಮ್ಮಂದ ನೀರಿಕ್ಷಿಸುತ್ತಿರುವ
ನಿಮ್ಮ ಅಭಿಮಾನಿ
-ಕನಸು
ಬೆಳಗಾವಿ

Mohan said...

Yes Madam good, keep it up.

ಪುಚ್ಚಪ್ಪಾಡಿ said...

ಶರ್ಟ್ ಬೇತೆಲಾ ಉಂಡಕ್ಕಾ... ಅವೊಂಜೇ ಅತ್ತ್ ....!!!!!!!!!!. ಎಂಕ್ಲೆನ್ ಬೇತೇ...!!!!!!!!!

Santhosh Chidambar said...

ಇಷ್ಟ ಆಯಿತು .. ಹೃದಯಸ್ಪರ್ಶಿ ಬರಹ

ರಾಧಾಕೃಷ್ಣ ಆನೆಗುಂಡಿ. said...

"ಅಕ್ಕಾ ಬಡತನ ನಂಗೆ ತುಂಬಾ ಕಲಿಸಿದೆ"

greeshma said...

ಚಿತ್ರಾ ಅವರೆ, ಹೀಗೆಯೇ ಕೆಲವರು ಕಷ್ಟಪಟ್ಟು ತಮ್ಮ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ ;ಮತ್ತೆ ಕೆಲವರು ಎಲ್ಲಾ ಸೌಕರ್ಯಗಳಿದ್ದೂ ಚೆಂದದ ಬದುಕನ್ನು ಹಾಳುಗೆಡವಿಕೊಂಡು ಸಬಂಧಿಸಿದವರಿಗೂ ನೋವುಕೊಡುತ್ತಾರೆ. ಇದನ್ನು ಓದಿದಾಗ ಹೀಗೆ ಹಲವು ಚಿತ್ರಗಳು ಕಣ್ ಮುಂದೆ ಬಂದವು. ಚೆಂದದ ಬರಹ.

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

@ಕನಸು..ಥ್ಯಾಂಕ್ಸ್ ಕಣ್ರೀ.
@ಮಹೇಶ್..(:)
@ಮೋಹನ್ ಸರ್, ಗ್ರೀಷ್ಮಾ, ಸಂತೋಷ್ ಸರ್..ಶರಧಿಗೆ ಸ್ವಾಗತ. ಧನ್ಯವಾದಗಳು
@ರಾಧಾಕೃಷ್ಣ ಅವರೇ ಥ್ಯಾಂಕ್ಯೂಊಊಊಊಊಊಊಊ
-ಪ್ರೀತಿಯಿಂದ,
ಚಿತ್ರಾ

agniprapancha said...
This comment has been removed by the author.
agniprapancha said...
This comment has been removed by the author.
agniprapancha said...

ಚಿತ್ರಾ...
ನಿಮ್ಮ ಬ್ಲಾಗಿಗೆ ನಾನು ಹೊಸ ಓದುಗ ಅನಿಸಿರಬೇಕು. ಕಂಡಿತ ಅಲ್ಲ. ಅಜ್ಜು ಕತೆ ಓದುವುದಕ್ಕಿಂತ ಮೊದಲಿನ ನಾಲ್ಕಾರು ಬರಹ ಓದಿದ್ದೇನೆ. ಅಲ್ಲಿಂದ ಇಲ್ಲಿಯ ತನಕ ಅನಿಸಿದ್ದನ್ನು ಹೇಳುತ್ತಿದ್ದೇನೆ. ಬರಹ ಚೆನ್ನಾಗಿಯೇ ಇರತ್ತೆ. ಆದರೆ ಕೆಲವು ಕಡೆ ಸರಳವಾಗಿ ಹೇಳುವುದನ್ನ ಎಳೆಯುತ್ತ ಹೋಗುತ್ತಿರಿ. ಸರಳವಾಗೆ ಹೇಳಿದರೆ ಇನ್ನೂಚೆನ್ನ.
ಅಜ್ಜು ಕತೆ ಚೆನ್ನಾಗಿದೆ. ಕತೆ ಬರೆಯುವ ಹವ್ಯಾಸವಿದ್ದರೆ ಬಳಸಿಕೊಳ್ಳಿ. ಆಲ್ ದಿ ಬೆಸ್ಟ್....
-ಅಗ್ನಿ

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಅಗ್ನಿಹೋತ್ರಿ ಸರ್..ನೀವು ಹೊಸಬರಲ್ಲ ಹೌದು. ಬಹುಶಃ ನಿಮ್ಮ ಮೊದಲ ಕಮೆಂಟಿಗೆ ನಾ ನಿಮ್ಮ ಬ್ಲಾಗ್ ಗೆ ಬಂದು ಕಮೆಂಟು ಮಾಡಿದ್ದೀನಿ. ನಿಮ್ಮ ಸಲಹೆಗಳಿಗೆ ಸ್ವಾಗತ. ಸರ್...ಹಾಗೇ ಜೀವನದಲ್ಲಿ ನಾ ಬರೆದದ್ದು ನಾಲ್ಕು ಕತೆ..ನಾಲ್ಕು ವರ್ಷಗಳ ಹಿಂದೆ...ಯಾಕೋ ಕತೆ ,ಕವನ ಬರೆಯಬೇಕನಿಸಿದರೂ ಬರೆಯಕ್ಕಾಗುತ್ತಿಲ್ಲ. ಖಂಡಿತಾ ಪ್ರಯತ್ನಿಸುತ್ತೇನೆ. ನಿಮ್ಮ ಸಲಹೆಗಳಿಗೆ ತುಂಬಾನೇ ಥ್ಯಾಂಕ್ಸ್ ಸರ್.
ಪ್ರೀತಿಯಿಂದ,
ಚಿತ್ರಾ