Friday, November 28, 2008

ಇದೂ ನ್ಯೂಸ್ ಸೆನ್ಸಾ...?!


"ನಿಮ್ಮ ಮಗನ ಸಾವಿನ ಬಗ್ಗೆ ಹೇಳಿ" ಎಂದು ಮಗ/ಮಗಳ ಶವದ ಎದುರು ರೋಧಿಸುತ್ತಿರುವ ಅಪ್ಪ/ಅಮ್ಮನ ಬಳಿ ಕೇಳಿದರೆ...! ಹೌದು..ಇಂಥ ಪ್ರಶ್ನೆಗಳನ್ನು ನಿನ್ನೆ ವರದಿಗಾರರು ಕೇಳುತ್ತಿದ್ದುದನ್ನು ನೋಡಿ ವರದಿಗಾರರ ಇಂಥ ನೀಚತನದಿಂದ ಮನಸ್ಸು ರೋಸಿಹೋದರೆ, ಮಗನ ಕಳೆದುಕೊಂಡ ಹೆತ್ತ ಕರುಳ ದುಃಖ ನೋಡಿ ನಾನೂ ಕರಗಿ ಕಣ್ಣಿರಾದೆ. ನಿನ್ನೆ ಮುಂಬೈ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಮೇಜರ್ ಸಂದೀಪ್ ಅವರ ಶವ ಬೆಂಗಳೂರಿನ ಯಲಹಂಕಕ್ಕೆ ಬರಲು ಇನ್ನೇನು ಕೆಲ ಕ್ಷಣಗಳಿವೆ ಎಂದಾಗ ಟಿವಿ ಮಾಧ್ಯಮದ ಕೆಲ ವರದಿಗಾರರು ಇಂಥ ಪ್ರಶ್ನೆಗಳನ್ನು ಅವರ ತಂದೆ ಮತ್ತು ಸಂಬಂಧಿಕರ ಜೊತೆ ಕೇಳುತ್ತಿದ್ದರು. ನಿಮ್ಮ ಮಗನ ಬಗ್ಗೆ ಹೇಳಿ, ಅವನ ಸಾವಿನ ಕುರಿತು ಹೇಳಿ..ಹೀಗೆ ದುಃಖದ ಮನೆಯಲ್ಲಿ ಇನ್ನಷ್ಟು ದುಃಖ ತುಂಬಿಸುವ, ಈಗಾಗಲೇ 'ಸತ್ತಿರುವವರನ್ನು' ಮತ್ತೊಮ್ಮೆ ಸಾಯಿಸುವ ಪಾಪಕೃತಗಳಿಗೆ ಕೈ ಹಾಕುತ್ತಿರುವ ಇಂಥ ವರದಿಗಾರರಿಗೆ ಕನಿಷ್ಠ ಜ್ಞಾನವೂ ಇಲ್ಲ ಅನಿಸಿತ್ತು.
ನಾನು ಎಲ್ಲರನ್ನು ಬೈಯುತ್ತಿಲ್ಲ..ಎಲ್ಲಾ ವರದಿಗಾರರು ಹೀಗೆ ಮಾಡುತ್ತಾರಂತಲ್ಲ..ಆದರೆ ಕೆಲವು ವರದಿಗಾರರ ಅವಿವೇಕತನದಿಂದಾಗಿ ಇಂದು ಮಾಧ್ಯಮಗಳ ಮೇಲೆ ಜನ ಯಾವಾಗ ನಂಬಿಕೆ ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ. ನಿನ್ನೆಯ ಕೆಲ ಟಿವಿಗಳ ವರದಿ ನೋಡಿದ್ರೆ..ನ್ಯೂಸ್ ಕೊಡೋ ವೇಗದಲ್ಲಿ ಮುಂಬೈನಲ್ಲಿ ನಡೆಯುತ್ತಿರುವ ದಾಳಿಯೇ ಪೂರ ಕನ್ ಫ್ಯೂಸ್ ಆಗುತ್ತಿತ್ತು.
ಇತ್ತೀಚೆಗೊಬ್ಬರು ಆಸ್ಟ್ರೇಲಿಯಾದಲ್ಲಿ ನಮ್ಮ ದೇಶದ ಫೈಲಟ್ ಒಬ್ರು ಸತ್ತಿರುವುದು ನೆನಪಿರಬಹುದು(ಹೆಸರು ಮರೆತು ಹೋಗಿದೆ..ಗೊತ್ತಿದ್ರೆ ಹೇಳಿ)..ಅವರ ಹೆತ್ತವರ ಬಳಿ ಹೋಗಿ ನಿಮ್ಮ ಮಗನ ಸಾವಿನ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಿ ಅಂದಾಗ, ಅಯ್ಯೋ ನಮ್ಮ ಮಗನ ಸಾವಿನ ಬಗ್ಗೆ ಹೇಳಬೇಕಾಯ್ತಲ್ಲಾ..ಅಂತ ಗೋಳೋ ಅಂತ ಅತ್ತುಬಿಟ್ಟರು. ಎರಡು ವರ್ಷಗಳ ಹಿಂದೆ ರಾಯಾಚೂರಿನಲ್ಲಿ ಕೊಳವೆ ಬಾವಿ ಒಳಗೆ ಬಿದ್ದ ಸಂದೀಪ್ ಅನ್ನು ಹೊರತೆಗೆದರೂ ಆತ ಬದುಕಿ ಉಳಿಯಲಿಲ್ಲ. ಕೊಳವೆ ಬಾವಿ ಒಳಗೆ ಬಿದ್ದ ಮಗ ಬದುಕಿ ಉಳಿಯುತ್ತಾನೆ ಅನ್ನೋ ನಿರೀಕ್ಷೆಯಿಂದ ಮತ್ತು ದುಃಖ ತಡೆಯಲಾಗದೆ ಅಳುತ್ತಿದ್ದ ಅಪ್ಪನ ಬಳಿ, ಟಿವಿ ವರದಿಗಾರನೊಬ್ಬ ಹೋಗಿ, "ನಿಮ್ಮ ಮಗ ಬದುಕಿ ಉಳಿಯುತ್ತಾನೆ ಅಂತ ಅನಿಸುತ್ತದೆಯೇ? ' ಎಂದು ಕೇಳಿದಾಗ, ಯಾಕಪ್ಪ ಇಂಥ ಪ್ರಶ್ನೆಗಳನ್ನು ಕೇಳ್ತಿಯಾ,...ನನ್ ಮಗ ಬದುಕಿ ಬರ್ತಾನೆ ಅಂತ ಹೇಳುತ್ತಾ ಅಳುತ್ತಾನೇ ಇದ್ರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಳ್ಳಭಟ್ಟಿ ದುರಂತದ ಬಗ್ಗೆ ನೀವೂ ತಿಳಿದಿರಬಹುದು. ಅಲ್ಲಿ ಹೆಣಗಳು ಬಿದ್ದಿದ್ದರೆ, ಹೆಣಗಳ ಸುತ್ತ ಅಳುತ್ತಿರುವ ಅವರ ಸಂಬಂಧಿಕರ ಬಳಿ ಹೋಗಿ ಅವರನ್ನು ಮಾತಾಡಿಸೋದು...ಮಾತಾಡಿಸುವುದು ತಪ್ಪಲ್ಲ..ಆದರೆ ಇಂಥ ಅಸಂಬದ್ಧ ಪ್ರಶ್ನೆಗಳನ್ನು ಕೇಳುವಾಗ ನಿಜಕ್ಕೂ ಅಹನೀಯವೆನಿಸುತ್ತೆ. ಇದು ಖಂಡಿತಾ ಸರಿಯಲ್ಲ..ಅವನು ಪತ್ರಿಕಾ ಅಥವಾ ಟಿವಿ, ಯಾವ ವರದಿಗಾರನಾದ್ರೂ ಸರಿ..ಹೀಗೆ ಕೇಳೋದು ಸರಿಯಲ್ಲ. ಆದರೆ ಕೇಳೋರು ಕೇಳ್ತಾನೆ ಇರ್ತಾರೆ. ಮುಂಬೈನಲ್ಲಿ ಮದ್ಯಾಹ್ನ ನಡೆದ ಸ್ಫೋಟವನ್ನು ರಾತ್ರಿ ಒಂಬತ್ತು ಗಂಟೆಗೆ ಬರೋ ನ್ಯೂಸ್ ನಲ್ಲಿ "ಬನ್ನಿ..ತಾಜ್ನಲ್ಲಿ ನಡೆಯುತ್ತಿರುವ ಸ್ಫೋಟದ ಕುರಿತು ತಿಳ್ಕೋಳ್ಳದಕ್ಕೆ ನೇರವಾಗಿ ಅಲ್ಲಿ ಹೋಗಿ ಬರೋಣ" ಅಂದ್ರೆ ಮನೆಯಲ್ಲಿ ಟಿವಿ ಎದುರು ಕುಳಿತವರು ಏನಪ್ಪಾ..ಮಧ್ಯಾಹ್ನದ ಸ್ಫೋಟನೋ ಅಥವಾ ಮತ್ತೆ ಸ್ಫೋಟ ಆಯಿತಾ ಅಂತ ಗೊಂದಲದಲ್ಲಿ ಸಿಕ್ಕಿಬಿಡ್ತಾರೆ. ಇದು ನ್ಯೂಸ್ ಸೆನ್ಸಾ? ನಾನ್ ಸೆನ್ಸಾ? ಗೊತ್ತಾಗುತ್ತಿಲ್ಲ. ನಿನ್ನೆ ರಾತ್ರಿ ಕುಳಿತು ಮೇಜರ್ ಸಂದೀಪ್ ಸಾವು ಕುರಿತು ಟಿವಿ ಚಾನೆಗಳ ಅವಿವೇಕತನದ ಪ್ರಶ್ನೆಗಳನ್ನು ನೋಡಿದಾಗ ಮನದೊಳಗೆ ಬೈಯೋದು ಬಿಟ್ಟು ಬ್ಲಾಗ್ ನಲ್ಲಿ ತುಂಬಿಸೋಣ ಅನಿಸ್ತು.

20 comments:

ಹರೀಶ ಮಾಂಬಾಡಿ said...

ಇದು ನ್ಯೂಸ್ ಸೆನ್ಸಾ? ನಾನ್ ಸೆನ್ಸಾ? ಅಂತ ಕೇಳಿದ್ದೀರಿ...
ನನ್ನ ಪ್ರಕಾರ ಇದು ಹೊಟ್ಟೆಪಾಡು.

shivu K said...

ಚಿತ್ರಾ ನೀ ಹೇಳಿದಂತೆ ಖಂಡಿತ ಅದು ನಾನ್ ಸೆನ್ಸ್ ಅದು ಹರೀಶ್ ಹೇಳಿದ ಪ್ರಕಾರ ಹೊಟ್ಟೆ ಪಾಡು ಅಂದುಕೊಂಡರೂ ನಮ್ಮ ಮನೆಯಲ್ಲೇ ಅಂಥ ಘಟನೆ ನಡೆದಾಗ ನಾನು ಮಾಧ್ಯಮದಲ್ಲಿದ್ದುಕೊಂಡು ನನ್ನ ಮನೆಯವರನ್ನೇ ಆ ರೀತಿ ಕೇಳಿ ನೋಡಲು ಸಾಧ್ಯವೇ ?, ಅದು ಸಾದ್ಯವಾಯಿತು ಅಂದರೆ ನನ್ನಂತ ........... ಇನ್ನೊಬ್ಬನಿಲ್ಲವೆಂದಾಗುತ್ತದೆ. ಅದಕ್ಕೆ ನಮ್ಮಲ್ಲೂ ಸ್ವಲ್ಪ .........ಇರಬೇಕು

ಸಿಸ್ಟರ್, ನನಗನ್ನಿಸಿದನ್ನೇ ನೀನು ಬರೆದಿದ್ದೀಯಾ good. ಮುಂದುವರಿಸು.

Anonymous said...

one feels to shoot these so called media persons or do not want to see their news channels. They will not stop reporting their own mother's rape!!

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...
ಹೆತ್ತಕರುಳಿನ ಸಂಕಟ ಅರ್ಥವಾಗುವವರು ಅಂಥಹ ಸಂದರ್ಭದಲ್ಲಿ ಆ ಥರ ಮೂರ್ಖ ಪ್ರಶ್ನೆ ಕೇಳಲಾರರು.
ನಾನು ಸಂದೀಪರ ಅಂತ್ಯಕ್ರಿಯೆಯಲ್ಲಿ ಭಗವಹಿಸಲು ಹೋಗಿದ್ದೆ. ಅಲ್ಲಿ ಕಟೌಟ್ ಇದ್ದವು.
ಅದರಲ್ಲಿ ಸಂದೀಪರನ್ನು ಹೊಗಳಲಾಗಿತ್ತು. ಒಬ್ಬ ರಾಜಕಾರಣಿ ಕೆಳಗಡೆ ತನ್ನ ಹೆಸರನ್ನು ದೊಡ್ಡದಾಗಿ ಹಾಕಿಕೊಂಡಿದ್ದ. ಇದೂ ಕೂಡ ನಾನ್ಸೆನ್ಸ ಆಲ್ಲವಾ?

Anonymous said...

ನ್ಯೂಸ್ ಸೆನ್ಸ್ ಎನ್ನುವುದೇ ಈಗ ನೀವು ಹೇಳುವಂತೆ ಈಗ ಕಳೆದು ಹೋಗುತ್ತಿದೆ.
ದೃಶ್ಯ ಮಾಧ್ಯಮಗಳ ಬಾಯಲ್ಲಿ ಕನ್ನಡವೂ ಸರಿಯಾಗಿ ಉಳಿಯುತ್ತಿಲ್ಲ. ಸಂವೇದನಾಶೂನ್ಯರಾಗಿ ಎಲ್ಲವನ್ನೂ ಬಡಬಡಿಸುವ ಮೂಲಕ ಗದ್ದಲ ಬಿಟ್ಟು ಬೇರೇನೂ ಇರುವುದಿಲ್ಲ.
ಈ ಜನರಿಗೆ ಕಡಿಮೆ ಮಾತನಾಡುವುದು ಎನ್ನುವುದೆಂದರೆ ಹೇಗೆ ಎಂದು ಹೇಳಿಕೊಡಬೇಕಿದೆ.
ಅದನ್ನು ಮಾಡಬೇಕಾದವರು ಯಾರು?
-ಪರುಶುರಾಮ ಕಲಾಲ್

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

@ಹರೀಶ್ ಸರ್...ಹೊಟ್ಟೆಪಾಡು ಅಂದ ತಕ್ಷಣ ಏನೂ ಮಾಡಕ್ಕೂ ರೆಡಿನಾ? ಇಲ್ಲ ತಾನೇ..
ಶಿವಣ್ಣ, ಪ್ರಕಾಶ್ ಸರ್..ತುಂಬಾ ಧನ್ಯವಾದಗಳು..ಪ್ರಕಾಶ್ ಸರ್..ಸಂದೀಪ್ ತಂದೆ ಶವ ಅಂತ್ಯ ಸಂಸ್ಕಾರದಲ್ಲಿ
ರಾಜಕಾರಣಿಗಳಿಗೆ ಎಂಟ್ರಿ ಕೊಟ್ಟಿಲ್ಲ!
ಪರಶುರಾಮ್..ಹೇಳಿ ಕೊಟ್ಟು ಬರುವಂಥದ್ದಲ್ಲ. ರೂಢಿಸಿಕೊಳ್ಳಲ್ಲಿ ಅಲ್ವಾ?
@"one feels .... mother's rape!" ನಿಜವನ್ನೇ ಹೇಳಿದ್ದೀರಿ
-ಚಿತ್ರಾ

paranjape said...

ನಿಮ್ಮ ಬರಹ ತುಂಬ ಚೆನ್ನಾಗಿದೆ. ನಿಮ್ಮ ಅಭಿಪ್ರಾಯ ಸರಿ. ನನಗೂ ಬ್ಲಾಗಿಸಬೇಕೆಂಬ ಬಯಕೆ ಬಹಳ ದಿನಗಳಿಂದ ಇದೆ. ನನ್ನ ಬ್ಲಾಗ್ ವಿಳಾಸ www.thrinayanasuta.blogspot.com.

(ಹಾಲಿ ಬ್ಲಾಗು ಖಾಲಿ ಇದೆ). PARANJAPE

ವಿಕಾಸ್ ಹೆಗಡೆ said...

ಟಿವಿ ಮಾಧ್ಯಮಗಳ ಮೇಲೆ ಜನ ಯಾವಾಗ ನಂಬಿಕೆ ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ.

ಹೆಚ್ಚೇನು ಹೇಳುವುದಿಲ್ಲ, ಆಗಲೇ ನಂಬಿಕೆ ಕಳೆದುಕೊಂಡಾಗಿದೆ. :(

ಹರೀಶ ಮಾಂಬಾಡಿ said...

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.
‘ಸ್ಮಶಾನದಲ್ಲಿ ಹೆಣ ಹೊತ್ತಿಸುವವರು, ಪೋಸ್ಟ್ ಮಾರ್ಟಂ ಮಾಡುವವರಂತೆ ಮೈಕು ಹಿಡಿಯುವವರು ಆಗಿಬಿಟ್ತಿದ್ದಾರೆ. ಮೇಲಧಿಕಾರಿಗಳ ಸೂಚನೆ ಪಾಲಿಸುವ ಯಂತ್ರಗಳಂತೆ. ಹೀಗಾಗಿ ಭಾವನೆಗಳನ್ನು ಕಳಕೊಂಡು ಹೊಟ್ಟೆಪಾಡಿಗೆ ಯಂತ್ರಗಳಂತೆ ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಅವರಿಗೆ ಬೇರೆ ಕೆಲಸ ಮಾಡಲೂ ಬರುವುದಿಲ್ಲ...’
ಅದಕ್ಕೇ ನೋಡಿ ಗಾಯಾಳು ರಕ್ತ ಒಸರುವ ಕಯ್ಯನ್ನು ಹಿಡಿದು ಓಡುತ್ತಿದ್ದಾಗ ಫೊಟೋಗ್ರಾಫರ್ ಅವನನ್ನು ತಡೆದು ಕ್ಲಿಕ್ಕಿಸಿಕೊಂಡದ್ದು.(ಫೊಟೋಗ್ರಾಫರ್ ಮನಸ್ಸು ಯವ ಥರ ಇತ್ತು ನಮಗೆ ನಿಮಗೇನು ಗೊತ್ತು ಅಲ್ಲವೇ,) ಆ ಚಿತ್ರ ಪ್ರಸಾರವಾದರೆ ಮಾತ್ರ ಅವನಿಗೆ ಉದ್ಯೋಗ ಇಲ್ಲದಿದ್ದರೆ ಗೇಟ್ ಪಾಸ್. ಥೇಟ್ ಹೆಣ ಸುಡುವವರಂತೆ.
ಸಾವಿನ ಮನೆಯಲ್ಲಿ ಮೈಕು ಹಿಡಿದು ಬಡಬಡಿಸುವುದು ಮಾಧ್ಯಮದ ದುರಂತ. ಆದರೆ ಅದೇ ಮಾಧ್ಯಮಕ್ಕೇ ಸೇರಲು ಬೆಂಗಳೂರಿಗೆ ಓಡಿ ಬರುವವರೆಷ್ಟಿಲ್ಲ ಹೇಳಿ?

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಹರೀಶ್ ಸರ್..ನೀವು ಹೇಳಿದ್ದು ನಿಜವೇ. ಆದರೆ ಕೆಲವೊಮ್ಮೆ ಹೊಟ್ಟೆಪಾಡು, ದುರಂತ ಎಲ್ಲವನ್ನೂ ಬದಿಗಿಟ್ಟು ಮಾನವೀಯತೆ ಪ್ರದರ್ಶಿಸಬೇಕಾಗಿರೋದು ನಮ್ಮ ಕರ್ತವ್ಯ. ನಾನೂ ದೂರದ ಪುತ್ತೂರ ಹಳ್ಳಿಯಿಂದ ಬೆಂಗಳೂರಿಗೆ ಮಾಧ್ಯಮಗಳ ಕನಸ ಜಾಡು ಹಿಡಿದು ಬಂದವಳು. ಥ್ಯಾಂಕ್ಯೂ ಸರ್..
-ಚಿತ್ರಾ

ಪುಚ್ಚಪ್ಪಾಡಿ said...

ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಅದನ್ನು ನಾವೂ ಅದರ ಒಳಹೊಕ್ಕು ಗಮನಿಸಬೇಕಾಗಿದೆ.ಖಂಡಿತವಾಗೂ ಸಾವಿನ ಮನೆಯಲ್ಲಿ ಮೈಕ್ ಹಿಡಿಯುದು ಸಮಂಜಸವಲ್ಲ. ಒಂದರ್ಥದಲ್ಲಿ ಆ ಮನೆಯ ಸುತ್ತ ಮಾಧ್ಯಮ ಸುತ್ತಾಡುವುದೇ ಸರಿಯಲ್ಲ ಅಂತ ಹೇಳಬಹುದು.ಏಕೆಂದ್ರೆ ಮರುದಿನ ಪ್ರಕಟವಾಗುವ ಸುದ್ದಿಯೇ ಇರಬಹುದು ಅಥವಾ ಅದೇ ದಿನ ಬರಬಹುದಾದ ದೃಶ್ಯವೆ ಇರಬಹುದು ಅದು ಬೀರಬಹುದಾದ ಪರಿಣಾಮಗಳುಮ್ ಒಂದೆರಡು ದಿನವಲ್ಲ.ಹಲವಾರು ದಿನಗಳಿಗೆ ಆ ನೋವು ಮತ್ತೆ ಇರುತ್ತದೆ. ಆದರೆ ಇಂದು ಪರಿಸ್ಥಿತಿ ಹಾಗಿದೆಯೇ?. ನಾವೊಮ್ಮೆ ಆ ಪರಿಸ್ಥಿಯ ಒಳಹೊಕ್ಕರೆ ತಿಳಿಯುತ್ತದೆ. ಅಲ್ವೇ?

ಮನಸ್ವಿ said...

ಹೌದು ನೀವು ಹೇಳುವುದು ನಿಜ, ಟಿವಿ ಮಾದ್ಯಮದವರಿಗೆ ಕಾಮನ್ ಸೆನ್ಸೇ ಇಲ್ಲ, ಟಿವಿಯವರು ಯಾವುದೇ ಸುದ್ದಿ ಇದ್ದರೂ ಒಂದು ಬಾರಿ (ಒಂದು ಬಾರಿ ಹೇಳಿಕೊಳ್ಳಲಿ)ಸ್ಟುಡಿಯೋದಲ್ಲಿರುವ ವಾರ್ತಾ ವಾ(ಕೀ)ಚಕ (news reader) ವಿವರಣೆ ನೀಡಿದ ನಂತರ.. ಸಾವಿನ ಮನೆಯಲ್ಲಿರುವ ನಮ್ಮ ಪ್ರತಿನಿದಿಯಿಂದ ಹೆಚ್ಚಿನ ಮಾಹಿತಿ ಪಡೆಯೋಣ ಎಂದು "ಅಲ್ಲಿ ಏನು ನೆಡಿತಾ ಇದೆ, ವಾತಾವರಣ ಹೇಗಿದೆ ಅಂತ ವಿವರವಾಗಿ ಹೇಳ್ತೀರ" ಎಂದು ಕೇಳುತ್ತಾ ದುಃಖದಲ್ಲಿರುವವರನ್ನು ಮತ್ತಷ್ಟು ಅಳಿಸುತ್ತಾ ಅದೇ ಚಿತ್ರಣವನ್ನು ಪದೇ ಪದೇ ಟಿವಿ ನೋಡುಗರಿಗೆ ಕಣ್ಣಲ್ಲಿ ನೀರು ತರಿಸುವಷ್ಟರ ಮಟ್ಟಿನ ಮಾಹಿತಿ! ಒದಗಿಸುತ್ತಾರೆ... ಏನು ಹೇಳಿದರೂ ಇವರು ಬದಲಾಗೊಲ್ಲ....

NiTiN Hegde said...

ಈಗೀನ "ಬ್ರೆಕಿಂಗ್ ನ್ಯೂಸ್ " ಭರಾಟೆ ಯಲ್ಲಿ ನ್ಯಿಜ್ಯತೆ ಮರೆತು ವಿಜ್ರಂಬತೆ ಮೆರೆಯುತ್ತಿದೆ. ಟಿವಿ ಮಾದ್ಯಮದಲ್ಲಿ ಕೆಲಸ ಮಾಡುವವರು / ಇತರರು ಪ್ರಶ್ನೆ ಕೇಳುವಾಗ ಪರಿಸ್ಥಿತಿ ನೋಡಿ ಕೇಳಿದರೆ ಅನುಕೂಲ.
ಆದರೆ ಬೇರೆ ಯವರಿಗೆ ಆದ ಪೆಟ್ಟನ್ನು ಚಿತ್ರಿಕರಿಸ ದಿದ್ದರೆ ಇತನು ನಾಳೆ ಹೊಟ್ಟೆಪಾಡಿಗೆ ಏನು ಮಾಡಬೇಕು.?ನೈಜ ಚಿತ್ರಣ ಕೊಡುವ ಜವಬ್ದಾರಿ ಅವರಲ್ಲಿರ್ಯ್ತ್ತದೆ.ಅದನ್ನೇ ಅವರು ಕೊಡದಿದ್ದರೆ ಅವರನ್ನೇಕೆ ಇತ್ತು ಕೊಳ್ಳುತ್ತಾರೆ....

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

@ಮನಸ್ವಿ ತುಂಬಾ ಥ್ಯಾಂಕ್ಸ್
@ನಿತೀನ್, ಮಹೇಶ್ ..ಪ್ರತಿಕ್ರಿಯೆಗೆ ಧನ್ಯವಾದಗಳು. ಸಾವಿನ ಮನೆಗೆ ಹೋಗಿ ಮೈಕ್ ಹಿಡಿಯುವುದು ಅಂಥ ತಪ್ಪಲ್ಲ..ಆದರೆ ಅಲ್ಲಿ ಕೇಳೋ ಪ್ರಶ್ನೆಗಳು..!? ಹೊಟ್ಟೆಪಾಡಿಗೋಸ್ಕರ 'ಸತ್ತವರನ್ನು ಮತ್ತೊಮ್ಮೆ ಸಾಯಿಸುವ' ದುಷ್ಕೃತ್ಯಕ್ಕೆ ಕೈಹಾಕಬಾರದು ಎನ್ನುವುದು ನನ್ನ ವಿನಂತಿ ಅಷ್ಟೇ.
-ಚಿತ್ರಾ

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ,

ಚೆನ್ನಾಗಿ ತರಾಟೆ ತೆಗೆದು ಕೊ೦ಡಿದ್ದೀರಾ... ಇ೦ತಹ ನಾನ್ ಸೆನ್ಸ್ ಗಳನ್ನು ಸಹಿಸಲಾಗದೇ ನಾನು ಟಿ.ವಿ. ನೋಡುವುದನ್ನೇ ಬಿಟ್ಟು ಎಷ್ಟೋ ತಿ೦ಗಳುಗಳಾದವು.
ನೀವು ಹೇಳಿದ, ಆಸ್ಟ್ರೇಲಿಯಾದಲ್ಲಿ ಮರಣಿಸಿದ ಪೈಲೆಟ್ ಹೆಸರು ’ಆಕಾಶ್’ ಅ೦ತ.

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

@ಸುಧೇಶ್..ಥ್ಯಾಂಕ್ಯೂ. ಅದೇ ಹೆಸ್ರು ಮರೆತುಬಿಟ್ಟಿದ್ದೆ. ನೆನಪಿಸಿದ್ದಕ್ಕೆ ಥ್ಯಾಂಕ್ಸ್.
-ಪ್ರೀತಿಯಿಂದ,
ಚಿತ್ರಾ

Harish - ಹರೀಶ said...
This comment has been removed by the author.
Harish - ಹರೀಶ said...

ಇವತ್ತು ಈಟಿವಿ ನ್ಯೂಸ್ ನಲ್ಲಿ ಒಂದು ಮಗುವನ್ನು ಕುದಿಯುವ ನೀರಿನಲ್ಲಿ ಮುಳುಗಿಸಿ ಹರಕೆ ತೀರಿಸಿಕೊಂಡಿದ್ದನ್ನು ತೋರಿಸಿದರು. :-(

Anonymous said...

ನಿನ್ನ್ ತಲೆ ಕತ್ತೆ

vinayak said...

ಮಾನ್ಯ ಚಿತ್ರಾ ಕರ್ಕೇರಾ ಅವರೆ ನಿಮ್ಮ ಲೇಖನಕ್ಕೆ ತನ್ನ ಪ್ರತಿಕ್ರಿಯೆ ನೀಡಲು ಬಯಸುತ್ತೇನೆ.
ಸುನಾಮಿ ಬಂದಾಗ,ಭಯೋತ್ರಾದಕ ದಾಳಿ ನಡೆದಾಗ,ಬಹು ಮಹಡಿ ಕಟ್ಟದ ಕುಸಿದಾಗ ತಮ್ಮವರು ಇದ್ದಾರೆಯೋ ಅಥವಾ ಇಲ್ಲವೊ ಎಂದು ಎದೆ ಬಿಗಿ ಹಿಡಿದು ಕುಳಿತುಕೊಂಡಾಗ ಟಿವಿ ಮಧ್ಯಮದಲ್ಲಿ ಬದುಕುಳಿದವರ ಹೆಸರು ಪ್ರಕಟಿಸುಪತ್ತಿದ್ದಂತೆ ಬದುಕುಳಿದವರ ಸಂಭಂಧಿಗಳು ಕುಣಿದು ಕುಪ್ಪಳಿಸುತ್ತಾರೆ. ಟಿವಿ ಮಾಧ್ಯಮಗಳ ಈ ಉಪಕಾರವನ್ನು ಇಂದಿಗೂ ಜನರು ಸ್ಮರಿಸುತ್ತಾರೆ... ಸೋಮಾಲಿಯಾದಲ್ಲಿ ಕಡಲ್ಗಳ್ಳರಿಂದ ಒತ್ತೆಯಾಳುಗಳು ಬಿಡುಗಡೆಗೊಂಡಾಗ,ಪಾಕಿಸ್ಥಾನದ ಜೈಲಿನಿಂದ ಭಾರತೀಯ ಮೀನುಗಾರರು ಬಿಡುಗಡೆಗೊಂಡ ದೃಶ್ಯಗಳು ಟಿವಿ ಪರದೆಯ ಮೇಲೆ ಬಂದಾಗ ಭಾರತೀಯರಲ್ಲಿ ಹರ್ಷದ ಹೊನಲು ಮೂಡಲು ಇದೇ ಟಿವಿ ಮಾಧಮ ಒಂದಲ್ಲ ಒಂದು ರೀತಿಯಲ್ಲಿ ಕಾರಣರಾಗುತ್ತಾರೆ.ಅಷ್ಟೇ ಏಕೆ ವ್ಯವಸ್ಥೆಯಿಂದ ಅಥವಾ ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರ ಇಶ್ಯೂಗಳು ಪ್ರಿಂಟ್ ಗಿಂತ ಪರಿಣಾಮಕಾರಿಯಾಗಿ ಟಿವಿ ಮಾಧ್ಯಮ ಜನರಿಗೆ ಬಿಂಬಿಸುತ್ತದೆ ಎಂಬುವುದನ್ನು ನೀವು ಮನಗೊಂಡಿದ್ದೀರಿ ಎಂದು ತಿಳಿದಿದ್ದೀನಿ.ಚಿತ್ರಾರವರೆ ಮೇಜರ್ ಸಂದೀಪ್ ಸಾವು ಕೇವಲ ಅವರ ತಂದೆ-ತಾಯಿ ಅಥವಾ ಅವರ ಸಂಬಂಧಿಕರಿಗೆ ಮಾತ್ರ ನೋವು ತಂದಿದೆ ಎಂದು ತಿಳಿದುಕೊಳ್ಳಬೇಡಿ..ಸಂದೀಪ್ ದೇಶದ 104 ಕೋಟಿ ಜನರ ಹೆಮ್ಮೆಯ ಸುಪುತ್ರ. ಅವರು ಹುತಾತ್ಮನಾದಾಗ ದೇಶದ 104 ಕೋಟಿ ಜನರೂ ಸಹ ಮೇಜರ್ ಸಂದೀಪ್ ಅವರ ಪೋಷಕರು ಸಂಬಂಧಿಕರು ಹಾಗೂ ಅವರ ಬಾಲ್ಯದ ಕುರಿತು ತಿಳಿದುಕೊಳ್ಳುವ ತವಕದಲ್ಲಿರುತ್ತಾರೆ.104 ಕೋಟಿ ಜನರು ತವಕವನ್ನು ಟಿವಿ ಮಾಧ್ಯಮದವರು ಮಾಡಿದ್ದಾರೆ ವಿನಹ ವಯಕ್ತಿಕವಾಗಿ ಅವರ ತಂದೆ ಯಾಯಿವರನ್ನು ನೋಯಿಸುವ ದಷ್ಠಿಯಿಂದಲ್ಲ ೆಂದು ನಾನು ತಿಳಿದುಕೊಳ್ಳುತ್ತೇನೆ. ಬಟ್ ಪ್ರಶ್ನೆಗಳನ್ನು ಕೇಳುವಾಗ ಪತ್ರಕರ್ತರು ಬಹಳ ಸಮಯೋಚಿತವಾಗಿ ಕೇಳುಬೇಕು ಎನ್ನುವುದು ಸೂಕ್ತ ವಿನಹ ಮಾಧ್ಯಮವನ್ನು ಟೀಕಿಸುವುದು ಸೂಕ್ತವಲ್ಲ.