Wednesday, November 21, 2007

ಎಂಥ ಕನ್ನಡ ಪ್ರೇಮ?!

"ನಾವು ಕನ್ನಡಿಗರಮ್ಮಾ, ನಾವು ಕನ್ನಡ ಮಾತಾಡೋದು. ನಮಗೆ ಇಂಗ್ಲೀಷ್, ಹಿಂದಿ ಇದ್ಯಾವುದೂ ಬರಲ್ಲಮ್ಮ. ನಾವು ಕನ್ನಡದವ್ರು, ಕನ್ನಡ ನಮ್ ಭಾಷೆ. ಕನ್ನಡ ಮಾತಾಡೋದು ನಮಗೆ ಹೆಮ್ಮೆಯೆನಿಸುತ್ತದೆ. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಮಾತಾಡದೆ ಇನ್ಯಾರು ತಮಿಳರು ಕನ್ನಡ ಮಾತಾಡ್ತಾರಾ..." ಆಕೆ ತಮ್ಮ ಮಾತನ್ನು ಮುಂದುವರೆಸಿದ್ದರು.

ಅಂದು ಬೆಳಿಗ್ಗೆ ಆಫೀಸಿಗೆ ಹೊರಟಾಗ ಸ್ವಲ್ಪ ಲೇಟಾಗಿತ್ತು. ಒಂದೆಡೆ ಟ್ರಾಫಿಕ್ ಜಾಮ್, ಇನ್ನೊಂದೆಡೆ ಬಸ್ಸು ಪುಲ್ ರಶ್. ಹೇಗೋ ನುಗ್ಗಿಕೊಂಡು ಒಳಗೆ ನುಗ್ಗಿ ಕೈಕಾಲು ನೆಟ್ಟಗೆ ಮಾಡ್ಕೊಂಡು ನಿಂತವಳು ಮತ್ತೆ ಆಫೀಸ್ ಪಕ್ಕ ಬಸ್ಸು ತಲುಪಿದಾಗ ಇಳಿಯೋಕೆ ಹರಸಾಹಸ ಪಡಬೇಕಾಯಿತು. ಬಾಗಿಲ ಹತ್ರ ಒಬ್ಬರು ನಡುವಯಸ್ಸಿನ ಮಹಿಳೆ ನಿಂತಿದ್ದರು. ನಾನು ಇಳಿಬೇಕಾದರೆ ಅವರನ್ನು ದಾಟಿ ಇಳೀಬೇಕು. ಅವರತ್ತ ಮೆಲ್ಲಗೆ ಕೇಳಿದೆ 'ಇಳೀತೀರಾ ಆಂಟಿ'..ಅವರು ನನ್ನ ಮುಖವನ್ನೇ ದಿಟ್ಟಿಸಿದರು. ಮತ್ತೊಮ್ಮೆ ಅದೇ ಮಾತನ್ನು ಕೇಳಿದೆ, ಮತ್ತೂ ಅರ್ಥವಾಗಿಲ್ಲ. ಕೊನೆಗೆ ಇಂಗ್ಲೀಷ್ನಲ್ಲಿ ಕೇಳಿದೆ. ನನ್ನನ್ನೊಮ್ಮೆ ತಲೆಯಿಂದ ಕಾಲಿನ ತನಕ ನೋಡಿ, ಏನಮ್ಮಾ ಇಂಗ್ಲೀಷ್ ಮಾತಾಡ್ತೀಯಾ ಅಂದ್ರು. ನಿಮಗೆ ಕನ್ನಡ ಬರಲ್ಲ ಅಂತ ಇಂಗ್ಲೀಷ್ ಮಾತಾಡಿದೆ ಆಂಟಿ ಅಂದಾಗ ಅವರು ಮೇಲಿನ ಮಾತುಗಳನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿಬಿಟ್ಟಿದ್ದರು. ಮಾತ್ರವಲ್ಲ ನನ್ನ ಜೊತೆನೇ ಬಸ್ಸಿನಿಂದ ಇಳಿದು, ಮತ್ತೆ ಮಾತು ಆರಂಭಿಸಿದರು.

"ನೋಡಮ್ಮಾ ಕನ್ನಡ ಮಾತಾಡ್ಬೇಕು. ನನ್ ಮಕ್ಕಳು ಅಮೇರಿಕಾದಲ್ಲಿದ್ದಾರೆ. ನಾನೂ ಮುಂಬೈಯಲ್ಲಿ ಹುಟ್ಟಿ ಬೆಳೆದವಳು. ನನ್ನ ಗಂಡ ಬ್ಯಾಂಕ್ ಉದ್ಯೋಗಿ. ಕರ್ನಾಟಕದಲ್ಲಿ ನೆಲೆಸಿ 25 ವರ್ಷಗಳೇ ಕಳೆದುಹೋಗಿವೆ. ಈಗ ನಾನು ಕನ್ನಡತಿ..ನನ್ನನ್ನು ಬೆಳೆಸಿದ್ದು ಕನ್ನಡ, ಕರ್ನಾಟಕ. ನನಗೆ ಅನ್ನ ಕೊಟ್ಟಿದ್ದು ಕನ್ನಡ ನೆಲ. ಯಾವತ್ತೂ ಈ ನೆಲದಲ್ಲಿ ಇದ್ದುಕೊಂಡು, ಬೇರೆ ಭಾಷೆಯ ವ್ಯಾಮೋಹ ಬೆಳೆಸಿಕೊಳ್ಳಬೇಡಿ, ಅದು ಸರಿಯಲ್ಲ." ಎಂದರು. ನಂತರ ಒಂದಷ್ಡು ಎಲ್ಲಿ, ಏನು, ಎತ್ತ ಮಾತಾಡಿಸಿದ್ರು. ನಂತರ ಹೊರಟರು.
ಕನ್ನಡದ ಬಗ್ಗೆ ಇಷ್ಟೆಲ್ಲಾ ಮಾತಾಡೋ ಅವರು, ಓರ್ವ ಸಾಮಾನ್ಯ ಗೃಹಿಣಿ. ಯಾವುದೋ ಕೆಲಸದ ನಿಮಿತ್ತ ಬಸ್ಸಲ್ಲಿ ಬಂದಿದ್ದರು. ಹೆಸರು ಸುಜಾತ.

ಅಂತೂ-ಇಂತೂ ಅರ್ಧ ಗಂಟೆ ಕಳೆದು ನಮ್ಮ ಆಫೀಸ್ನತ್ತ ಹೆಜ್ಜೆ ಹಾಕಿದೆ. ಆದರೆ ಮನದಲ್ಲಿ ಅವರ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದ್ದವು. "ಕನ್ನಡವನ್ನು ಕನ್ನಡಿಗರು ಮಾತಾಡದೆ ಇನ್ಯಾರೂ ತಮಿಳರು ಮಾತಾಡ್ತಾರಾ?" ಈ ಮಾತು ಮನತುಂಬಾ ಮಾರ್ದನಿಸುತ್ತಿತ್ತು. ಕನ್ನಡನಾಡಲ್ಲೇ ಹುಟ್ಟಿ ಬೆಳೆದ ಕನ್ನಡಿಗರ ಮಾತೃಭಾಷಾ ಪ್ರೇಮದ ಬಗ್ಗೆ ....'ಏನನಿಸಿರಬಹುದು'?! ನೀವೇ ಯೋಚಿಸಿ.

ರಾಜ್ಯದ ರಾಜಧಾನಿ ಬೆಂಗಳೂರು. ಆದರೆ ಬೆಂಗಳೂರಿನಲ್ಲ ಒಂದಷ್ಟು ಹೊತ್ತು ಕಣ್ಣು-ಕಿವಿ ತೆರೆದುಕೊಂಡು ಸುತ್ತಲಿನ ಪರಿಸರದತ್ತ ಅವಲೋಕಿಸಿದರೆ ನಾವು ರಾಜ್ಯದ ರಾಜಧಾನಿಯಲ್ಲೇ ಇದ್ದೇವಾ? ಎಂಬ ಅನುಮಾನ ಬಂದುಬಿಡುತ್ತದೆ. ತಮಿಳು, ಮಲೆಯಾಳಂ, ತೆಲುಗು, ಇಂಗ್ಲೀಷ್ ನಡುವೆ ನಮ್ಮ ಕನ್ನಡ ಬಸವಳಿದಿದೆ. ಕನ್ನಡಕ್ಕಾಗಿ ಬೊಬ್ಬಿಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘಟನೆಗಳು, ಕನ್ನಡ ರಕ್ಷಣಾ ವೇದಿಕೆ..ಯಾವುದಿದ್ದರೂ ಕನ್ನಡಾಂಬೆ ನಿತ್ಯ ನರಳುತ್ತಿದ್ದಾಳೆ. ಕನ್ನಡ ಉಳಿಸಿ ಎಂದು ಬೊಬ್ಬಿಡುವ ಕನ್ನಡ ಪ್ರೇಮಿಗಳ ನಡುವೆ ಸುಜಾತರಂಥವರು 'ಕನ್ನಡ ಬೆಳಗುವ ಪುಟ್ಟ ಹಣತೆಯಂತೆ'!
ಕನ್ನಡ ನೆಲದಲ್ಲಿಯೇ ಹುಟ್ಟಿ ಬೆಳೆದು ಕನಿಷ್ಠ ಭಾಷಾಭಿಮಾನವನ್ನೂ ಬೆಳೆಸಿಕೊಳ್ಳದೆ, ಪರ ಭಾಷೆಗಳತ್ತ ಮುಖ ಮಾಡಿರುವ ನಾವು-ನೀವೆಲ್ಲರೂ 'ಸುಜಾತ' ಅವರಂಥವರನ್ನು ಕಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಏನಂತೀರಿ?



No comments: