Wednesday, February 27, 2008

ನೋವಿನಲೆಗಳು...

ತಸ್ಲೀಮಾ ನಸ್ರೀನ್ ದೆಹಲಿಯಲ್ಲಿ 'ಗೃಹಬಂಧನ'ದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇದೀಗ ಗೃಹ ಬಂಧನದಲ್ಲಿದ್ದುಕೊಂಡು ಆಕೆಯ ನೋವು ' ಬಲವಂತವಾಗಿ ಕೂಡಿಟ್ಟ ಮನೆ' ಎಂಬ ಕವನದ ಮೂಲಕ ಹೊರಬಂದಿದೆ. ನೋಟಕ್ಕೆ ಸಿಕ್ಕಿದ ಅದರ ಕೆಲವು ಸಾಲುಗಳು ಇಲ್ಲಿವೆ..

ನಾನೊಬ್ಬ ಎಂತಹ ಅಪರಾಧಿ ಮತ್ತು ಮನುಷ್ಯತ್ವದ ವಿರೋಧಿ
ನಾನೊಬ್ಬ ದೇಶಭ್ರಷ್ಟ ಮೋಸಗಾತಿ
ನನ್ನದೇ ಎಂದು ಹೇಳಿಕೊಳ್ಳುವ ದೇಶ ಕೂಡ ನನಗಿಲ್ಲ..

..ನಾನು ಸತ್ಯ ಹೇಳಿದ್ದಕ್ಕಾಗಿ ಇಂದು ರಾಜದ್ರೋಹಿ
ನೀವು ಸುಳ್ಳು ಹೇಳುವವರ ಭುಜಕ್ಕೆ ಭುಜ ಕೊಟ್ಟು ನಡೆಯಿರಿ
ಆದರೆ ನಾನು ಮಾತ್ರ ರಾಜದ್ರೋಹಿಯಾದ ಮನುಷ್ಯಳು

ನಾನು ಕಿಟಕಿಗಳನ್ನು ಮುಚ್ಚಿದ ಒಂದು ಮನೆಯಲ್ಲಿ ವಾಸವಾಗಿದ್ದೇನೆ
ಇಚ್ಛಿಸಿದರೂ ಆ ಕಿಟಕಿಗಳನ್ನು ನಾನು ತೆಗೆಯಲಾಗುವುದಿಲ್ಲ
...ನಾನು ಇಷ್ಟವಿಲ್ಲದ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದೇನೆ
ಏಕೆಂದರೆ ನನ್ನನ್ನು ಬಲವಂತಾಗಿ ಇರಿಸಲಾಗಿದೆ
ನೋವು, ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುವಂತೆ ಒತ್ತಡ ಹೇರಲಾಗಿದೆ
ಈ ಪ್ರಜಾಪ್ರಭುತ್ವದಿಂದ(ಭಾರತ)
ಈ ಕೋಣೆಯಲ್ಲಿ ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವದ ಮೇಲಾಟ
ಈ ಕೋಣೆಯಲ್ಲಿ ಭರವಸೆಯ ಬೆಳಕಿಲ್ಲ, ಭಯ ಮಾತ್ರ
ಜಾತ್ಯತೀತ ಹೆಸರಲ್ಲಿ ಪ್ರತಿ ಕ್ಷಣವೂ ಆ ಕೋಣೆಯಲ್ಲಿ ನನ್ನ ಕೊಲೆಯಾಗುತ್ತಿದೆ
ನನ್ನ ಪ್ರೀತಿಯ ಭಾರತವೇ ನನ್ನ ಬಂಧಿಸಿಬಿಟ್ಟಿದೆ
ಇಲ್ಲಿ ಅತ್ಯಂತ ಕಾರ್ಯನಿರತ ಪ್ರಜೆಗಳಿದ್ದಾರೆ, ನನಗೊಂದು ಅನುಮಾನ
ಇವರಿಗೆ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಮಟ್ಟಿಗಾದರೂ
ಒಂದೆರಡು ನಿಮಿಷ ಕಾಲಾವಕಾಶ ಇದೆಯೇ?..

..ಹೆಚ್ಚೆಂದರೆ ಒಂದು ದಿನ ಪ್ರಜಾಪ್ರಭುತ್ವದ ಧ್ವಜದೊಂದಿಗೆ
ನನ್ನ ದೇಹವನ್ನು ಸುತ್ತಿ, ನನ್ನ ಪ್ರಿಯ ಭಾರತದಲ್ಲಿ,
ಯಾರಾದರೂ ಒಬ್ಬರು ನನ್ನನ್ನು ಗೋರಿಗೆ ಹಾಕುತ್ತಾರೆ, ಹೆಚ್ಚಿನ ಪಕ್ಷ
ಒಬ್ಬ ಅಧಿಕಾರಿ ಆ ಕೆಲಸ ಮಾಡಬಹುದು ಎಂಬ ಶಂಕೆ ನನ್ನದು..

Friday, February 22, 2008

ನಾನು ಮೊದಲ ಬಾರಿ ಚರ್ಚಿಗೆ ಹೋಗಿದ್ದು..

ನಿನ್ನೆ ನಗರದ ಖ್ಯಾತ ಚರ್ಚೊಂದಕ್ಕೆ ಹೋಗಿದ್ದೆ. ಯಾವುದೇ ವಿಷ್ಯದಲ್ಲಿಯೂ ನಂಗೆ ಕುತೂಹಲ ಜಾಸ್ತಿ. ಹಿಂದೂ ದೇವಾಲಯಗಳ ಬಗ್ಗೆ ಗೊತ್ತು. ಆದರೆ ಚರ್ಚ್, ಮಸೀದಿಗಳಿಗೆ ಹೋಗಿ ತಿಳಿದಿರಲಿಲ್ಲ. ಯಾಕೋ ಚಿಕ್ಕಂದಿನಿಂದಲೂ 'ದೇವರೊಬ್ಬನೇ ನಾಮ ಹಲವು' ಎನ್ನುವುದನ್ನು ನಂಬಿದ ನಾನು, ಚರ್ಚ್ಗಳಿಗೆ ಅಥವಾ ಮಸೀದಿಗಳು, ಅಥವಾ ಇನ್ಯಾವ ಧರ್ಮದ ದೇವಾಲಯಗಳೇ ಆಗಲಿ ಹೋಗಿ ನೋಡಬೇಕು..ಅಲ್ಲಿ ನಮ್ ಹಿಂದೂ ಧರ್ಮದಲ್ಲಿದ್ದಂತೆ 'ಅರ್ಚಕರು' ಪೂಜೆ ಮಾಡುತ್ತಾರೆಯೇ?ಅಥವಾ ಹೆಂಗಸರರು ದೇವರಿಂದ ಬಹುದೂರ ನಿಂತು ನೋಡುತ್ತಾರೆಯೇ? ಅರ್ಚಕರು ಸ್ತ್ರೀಯರನ್ನು ಕಂಡರೆ ಮಾರು ದೂರದಿಂದ ಗಂಧ ಪ್ರಸಾದ ನೀಡುತ್ತಾರೆಯೇ?ಎಂಬಿತ್ಯಾದಿ ಪ್ರಶ್ನೆಗಳು ದಿನವೂ ನನ್ ತಲೆ ತಿನ್ತಾ ಇದ್ದುವು. ಹಾಗೇ ನಿನ್ನೆ ಚರ್ಚಿಗೆ ಹೋಗಿದ್ದೆ. ಒಂದು ಕುತೂಹಲ, ಹೋಗಿ ನೋಡುವ ಹಂಬಲ. ಅಲ್ಲಿದ್ದನ್ನು ತಿಳಿದುಕೊಳ್ಳುವ ಆಸಕ್ತಿಯಿಂದ ಚರ್ಚಿಗೆ ಭೇಟಿ ನೀಡಿದ್ದೆ.

ಚರ್ಚಿಗೆ ಹೋಗಿದ್ದೇ ಇದೇ ಮೊದಲು ಮತ್ತೆ ಹೇಗೆ ಗೊತ್ತಾಗಿತ್ತೆ?ಅಲ್ಲಿಯ ಬಗ್ಗೆ. ಹಿಂದು ದೇವಾಲಯದಲ್ಲಿ ಚಪ್ಪಲಿ ಹಾಕಿ ದೇವಾಲಯದೊಳಗೆ ಪ್ರವೇಶಿಸಬಾರದು. ಇಲ್ಲೂ ಹಾಗೆ ಅಂದುಕೊಂಡು, ಚಪ್ಪಲು ಕಳಚಿಟ್ಟು ನಾನು ಪ್ರವೇಶ ಮಾಡಿದ್ದೆ. ಬರೀ ಕಾಲಲ್ಲಿ ಪ್ರವೇಶಿಸಿದಾಗ ನಿಶ್ಸಬ್ಧ ವಾತಾವರಣ ಹೃದಯಕ್ಕೆ ತಂಪೆರಚಿತು. ಎಲ್ಲರ ಕೈಯಲ್ಲೂ ಕ್ಯಾಂಡಲ್ ಇದೆ. ನಾನು ಏನು ಮಾಡೋದು? ಪುನಃ ಬರೇ ಕಾಲಲ್ಲಿ ಹೊರಗಡೆ ಬಂದು, 101 ಕ್ಯಾಂಡಲ್ ಹಿಡಿದುಕೊಂಡು ಒಳಹೋದೆ. ನಾನು ಕ್ಯಾಂಡಲ್ ಉರಿಸಿ ಸರದಿ ಸಾಲಲ್ಲಿ ಹೊರಟೆ. ಕೈಯಲ್ಲಿದ್ದ ಕ್ಯಾಂಡನ್ನು ಒಬ್ರು ವಯಸ್ಸಾದ ಹೆಂಗಸು ತೆಗೆದುಕೊಂಡರು. ಆಮೇಲೆ ಯೇಸುವಿನ ಪಾದಕ್ಕೆ ಪ್ರತಿ ಹೆಂಗಸರೂ ಹೂ ಮಾಲೆ ಅರ್ಪಿಸುತ್ತಿದ್ದರು. ನಾನು ಎರಡು ಕೈಗಳನ್ನು ಜೋಡಿಸಿ ಕೈಮುಗಿದೆ. ನಾನು ಕೈಯೇನೋ ಮುಗಿದಿದ್ದೇ..ಆದರೆ ಸುತ್ತಲೂ ಕುತೂಹಲದಿಂದ ನೋಡುವುದರಲ್ಲೇ ಬ್ಯುಸಿಯಾಗಿದ್ದೆ. ನನ್ ಹಿಂದೆ ನಿಂತವರು ಮುಂದೆ ಹೋದ್ರೂ ನಾನು ಮಾತ್ರ ಕೈಮುಗಿದು ಸುತ್ತಲು ನೋಡುವುದು ಬಿಟ್ಟ್ರೆ ಮತ್ತೇನಿಲ್ಲ. ಅಷ್ಟೊತ್ತಿಗೆ ನನ್ ಹಿಂದೆ ನಿಂತ ಹೆಂಗಸೊಬ್ರು. ಮುಂದೆ ಹೋಗಮ್ಮಾ..ಏನ್ ನೋಡ್ತಾ ಇದ್ದಿಯಾ..ಮುಂದೆ ಹೋಗಿ ನೋಡಮ್ಮಾ.ಅಂದಾಗಲೇ ನನಗೆ ಗೊತ್ತಾಗಿದ್ದು. ಆಮೇಲೆ ಹೊರಗಡೆ ಬಂದಾಗ. ಅಲಲ್ಲಿ ಉಪ್ಪು, ಹೂವು, ಕ್ಯಾಂಡಲ್ ಪ್ರಸಾದದ ರೂಪದಲ್ಲಿ ನೀಡಿದ್ರು. ನಾನು ತೆಗೆದುಕೊಂಡು ಏನ್ ಮಾಡಬೇಕೆಂದು ಗೊತ್ತಾಗದೆ..ಸುಮ್ಮನೆ ನಿಂತುಕೊಂಡಿದ್ದೆ. ಆ ಕ್ಯಾಂಡಲನ್ನು ಪುನಃ ಹೋಗಿ ಹಚ್ಚಬೇಕಾ?ಅಥವಾ ಏನ್ ಮಾಡ್ಬೇಕು ಅನ್ನೋದೇ ಗೊತ್ತಿಲ್ಲ. ಆಗ ಹಿಂದೆ ನನ್ ಜೊತೆ ಮಾತಾಡಿದ್ದ ಹೆಂಗಸು ನಗುತ್ತಾ ಬಂದು, ನೋಡಮ್ಮಾ ಆ ಕ್ಯಾಂಡಲನ್ನು ಮನೆಗೆ ಹೋಗಿ ಹಚ್ಚಿ ಬಿಡು. ನಿನಗೆ ದೇವ್ರು ಒಳ್ಳೆದು ಮಾಡ್ತಾನೆ. ಯಾಕಮ್ಮ ಮೊದಲ ಬಾರಿ ಬಂದಿದ್ದಿ ಅನಿಸುತ್ತೆ. ಚಪ್ಪಲು ಯಾಕ್ ಬಿಟ್ಟುಬಂದೆ . ಹಾಕ್ಕೊಂಡು ಪ್ರವೇಶ ಮಾಡಬಹುದು ಅಂದ್ರು. ನಾನು ನಕ್ಕು ಮಾತಾಡಿಸಿದ್ದೆ.

ನಂತರ ಅಲ್ಲಿಂದ ಪ್ರಾರ್ಥನಾ ಮಂದಿರಕ್ಕೆ ಬಂದೆ. ಅಲ್ಲಿ ಪ್ರತಿಯೊಬ್ಬರೂ ಮೊಣಕಾಲೂರಿ ಮೌನವಾಗಿ ಬೈಬಲ್ ಪಠಿಸುವುದರಲ್ಲಿ ನಿರತರಾಗಿದ್ದರು. ನಾನು ಬೆಂಚಿ ಮೇಲೆ ಕುಳಿತು ಎದುರಿಗಿದ್ದ ಜೆರುಸಲೇಂ ಪಟ್ಟಣವನ್ನು ಹೋಲುವ ಕಲಾಕೃತಿಯನ್ನು ನೋಡುವುದರಲ್ಲೇ ಮಗ್ನಳಾಗಿದ್ದೆ. ಸಾಸಿವೆ ಬಿದ್ರೂ ಕೇಳುವಷ್ಟು ಪ್ರಶಾಂತತೆ ಅಲ್ಲಿತ್ತು. ಮೌನವೇ ಮನಸ್ಸನ್ನು ಸ್ಪರ್ಶಿಸುವಂತಿತ್ತು. ಧ್ಯಾನಾಸಕ್ತರನ್ನು ಕಂಡಾಗ ಮನ ತುಂಬಿ ಬಂತು. ದೇವರೊಬ್ಬನೇ ನಾಮ ಹಲವಿರಬೇಕು. ಹಿಂದುಗಳು, ಕ್ರೈಸ್ತರು, ಮುಸ್ಲಿಂ, ಸಿಖ್ಖ್ ಎಲ್ಲರೂ ದೇವರನ್ನು ಬೇರೆ ಬೇರೆ ಹೆಸರಿಂದ ಕರೀತಾ ಇದ್ದಾರೆ ಅಂದುಕೊಂಡ ನಾನು, ದೇವರ ಹೆಸರಿನಲ್ಲಿ ಜಗಳವಾಡುವಾಗ, ಸ್ರ್ತೀಯೊಬ್ಬಳು ದೇವಾಲಯ ಪ್ರವೇಶ ಮಾಡಿದಾಗ 'ಬ್ರಹ್ಮಕಲಶ' ಮಾಡುವವರನ್ನು ಕಂಡಾಗ, ದೇವರ ಕುರಿತು ಭಕ್ತಿಯಿಂದ ಜಪಿಸದವನನ್ನು ದೇವಾಲಯ ಪ್ರವೇಶಕ್ಕೆ ಅನರ್ಹ ಎಂದಾಗ ಈ ಜನರು ಯಾಕಪ್ಪ ಹಿಂಗಾಡ್ತಾರೆ, ದೇವರಿದ್ದಾನೋ ಇಲ್ಲವೋ ಎಂದು ಅನುಮಾನ ಪಟ್ಟಿದ್ದೂ ಇದೆ. ಇರಲಿ ಬಿಡಿ, ದೇವರು ಇದ್ದಾನೋ ಇಲ್ಲವೋ ಆತನನ್ನು ನೋಡಿದವರು ಯಾರೂ ಇಲ್ಲ ಬಿಡಿ. ಆತನಿದ್ರೆ ಅವನು ಮಾತ್ರ ಸ್ತ್ರೀ-ಪುರುಷ ಎಂದು ಭೇದ ಮಾಡಲಾರನು. ನಂಗೆ ನಿಜಕ್ಕೂ ಈ ಚರ್ಚಿನಲ್ಲಿ ಖುಷಿಯನಿಸಿದ್ದು ಮಹಿಳೆಯರೇ ಯೇಸುವಿನ ಪಾದಕ್ಕೆ ಪುಷ್ಟಹಾರ ಹಾಕುತ್ತಿದ್ದರು. ಜಾತಿ, ಧರ್ಮ, ಸಂಪ್ರದಾಯವನ್ನು ಮೀರಿದ ದಿಗಂತದಾಚೆ ಚರ್ಚ್ ದೃಷ್ಟಿಹಾಯಿಸುವಂತೆ ಮಾಡಿತ್ತು.

ಅಲ್ಲಿಂದ ಹೊರಗಡೆ ಬಂದೆ..ಆದರೆ ಚಪ್ಪಲಿ ಮಾತ್ರ ಕಾಣೆಯಾಗಿತ್ತು. ಬರೀಕಾಲಲ್ಲಿ ನಡೀಬೇಕು..ಚಪ್ಪಲು ಅಂಗಡಿ ಅಲ್ಲೆಲ್ಲೂ ಕಾಣ್ತಾ ಇಲ್ಲ. ಅಟೋ ಹಿಡಿದು ನೇರ ಮನೆಗೆ ಬಂದೆ. ಒಂದೆಡೆ ದೇವಾಲಯಕ್ಕೆ ಹೋಗಿ ಹೊಸತೊಂದನ್ನು ನೋಡಿದ, ಅನುಭವಿಸಿದ ಖುಷಿಯಿಂದ ಮನ ಪುಳಕಿತಗೊಂಡರೆ, ಇನ್ನೊಂದೆಡೆ ನಾನು ಇಷ್ಟಪಟ್ಟು ತೆಗೆದುಕೊಂಡಿದ್ದ ಚಪ್ಪಲು ಕಿಡ್ನಾಪ್ ಆಗಿದ್ದು ಬೇಜಾರಾಗಿತ್ತು.

ಏನೇ ಆಗಲಿ, ಚರ್ಚ್ ಹೋಗಿ ನೋಡಬೇಕು ಅನ್ನೋ ಕುತೂಹಲ ..ಕೊನೆಗೂ ನೋಡಿದ್ದೆ, ಖುಷಿಗೊಂಡೆ.

Wednesday, February 20, 2008

ನನ್ ಪ್ರೀತಿಯ ಸರ್..ಕುಂಟಿನಿ ಅವರ ಆಹ್ವಾನ..ನನ್ ಮೂಲಕ ನಿಮ್ಗೂ..

ಕೊನೆಗೂ ಪುಸ್ತಕ ಸಿದ್ಧವಾಗಿದೆ.
ತಪ್ಪೆಲ್ಲಾ ನನ್ನದೇ.
ತುಂಬಾ ಸಮಯದಿಂದ ಇಂಥ ಪುಸ್ತಕ ಮಾಡೋಣ ಹೇಳುತ್ತಾ ಇದ್ದವರು ನನ್ನ ಮೇಸ್ಟ್ರು ಪುರಂದರ ಭಟ್ಟರು.ಅವರು ಕಾರಂತರು ಕಟ್ಟಿದ ಕರ್ನಾಟಕ ಸಂಘದ ಅಧ್ವರ್ಯು.
ನಾನು ತುಂಬಾ ಶೈ.
ಕತೆ ಬರೆಯುವುದು ಗೊತ್ತು ಆದರೆ ಈ ಪುಸ್ತಕ ಮಾಡುವುದು ಅದನ್ನು ಹೊರತರುವುದು ಇತ್ಯಾದಿ ಎಲ್ಲಾ ನನಗೆ ಆಗುವ ಹೋಗುವ ಸಂಗತಿಯಲ್ಲ ಅಂತ ಸುಮ್ಮನಿದ್ದೆ.
ನನಗೆ ನನ್ನ ಕತೆಗಳ ಬಗೆಗೆ ಸದಾ ಅನುಮಾನ.
ಅಂತೂ ನಾನು ಸರಿ ಸಾರೂ ಎಂದೆ.
ಹಾಗೇ ಹೇಳಲು ನಾನು ತೆಗೆದುಕೊಂಡ ಅವಧಿ ಕೇವಲ ಎರಡೂವರೆ ವರ್ಷ.
ತಾರೀಕು ೨೪ ಇದೇ ತಿಂಗಳು ಈ ಕತೆ ಪುಸ್ತಕವನ್ನು ನಿಮ್ಮ ಕೈಗೆ ಒಪ್ಪಿಸುತ್ತಿದ್ದಾರೆ ಇದನ್ನು ಪ್ರೀತಿಯಿಂದ ರೂಪಿಸಿದ ಕರ್ನಾಟಕ ಸಂಘ.
ಪುಸ್ತಕವನ್ನು ಎತ್ತಿ ತೋರಿಸುವುದಕ್ಕೆ ಬರುವವನು ನನಗೆ ಅವನಲ್ಲದೇ ಇನ್ಯಾರೂ ಅಲ್ಲದ ನನ್ನ ಒಡನಾಡಿ ಗೆಳೆಯ ಜೋಗಿ.
ಅವರ ಜೊತೆ ಹಿರಿಯ ಸ್ನೇಹಿತ ನಾಗತಿಹಳ್ಳಿ ಚಂದ್ರಶೇಖರ್.
ನೀವೂ ಅಲ್ಲಿಗೆ ಬರಬೇಕು ಅಷ್ಟೇ..
ಬೇರೇನೂ ನನಗೆ ಗೊತ್ತಿಲ್ಲ.
ಏನೆಲ್ಲಾ ಇದೆ ಅಂತ ಅಲ್ಲಿಗೆ ಬನ್ನಿ ಗೊತ್ತಾಗುತ್ತದೆ.
ಎಲ್ಲಿಗೆ ಅಂದರೆ ಪುತ್ತೂರಿಗೆ.
ಅನುರಾಗ ವಠಾರಕ್ಕೆ.
ಬರ್ತೀರಲ್ಲ?
-ಗೋಪಾಲಕೃಷ್ಣ ಕುಂಟಿನಿ

Tuesday, February 19, 2008

ಬದುಕಿನ ಹಾಡಿನ ಶ್ರುತಿಯೇ ಪ್ರೀತಿ..

ಕಳೆದ ಭಾನುವಾರ ಮುಸ್ಸಂಜೆಯಲ್ಲಿ ಮನಕ್ಕೆ ಮುದ ನೀಡಿದ್ದು ಮಾನಸಿ ಪ್ರಸಾದ್ ಅವರ 'ಒಲವೇ ಜೀವನ ಸಾಕ್ಷಾತ್ಕಾರ' ಗಾಯನ ಕಾರ್ಯಕ್ರಮ. ಬೆಳಿಗ್ಗೆ ಸ್ನೇಹಿತರೊಂದಿಗೆ ಜೋಧಾ ಅಕ್ಬರ್ ನೋಡಿ ಖುಷಿಪಟ್ಟರೆ, ಸಂಜೆಯ ಹೊತ್ತು ಮಾನಸಿ ಅವರ ಸುಶ್ರಾವ್ಯ ಗಾಯನ ಮನಸ್ಸಿಗೆ ತಂಪೆರಚಿತ್ತು. ನಂಗೆ ಹಾಡೋಕೆ ಬರದಿದ್ದರೂ, ಹಾಡುವುದನ್ನು ಕೇಳಿ ಮನ ಖುಷಿಪಡುತ್ತೆ..ಆ ಖುಷಿಯಲ್ಲಿ ಕಾರ್ಯಕ್ರಮದತ್ತ ಪುಟ್ಟದೊಂದು ನೋಟ ಹರಿಸಿದ್ದೇನೆ.
ಬದುಕಿನ ಪ್ರೀತಿ ನೀಡಿದ ಅಮ್ಮ, ಗುರು, ಪ್ರೀತಿಪಾತ್ರರನ್ನು ನೆನೆದ ಮಾನಸಿ ಅವರು, ಮೊದಲಿಗೆ ಬದುಕಿನ ಹಾಡಿನ ಶ್ರುತಿಯೇ ಪ್ರೀತಿ..ಬದುಕಿನ ಲಯ ಗತಿ ಮೈತ್ರಿ..ಪ್ರೀತಿಯ ಪರಿಕಲ್ಪನೆಯಲ್ಲಿ 'ಒಲವೇ ಜೀವನ ಸಾಕ್ಷಾತ್ಕಾರ' ಮೂಡಿಬಂದಿತ್ತು. ಅಮ್ಮ-ಮಕ್ಕಳು, ಕೃಷ್ಣ-ರಾಧೆ. ದುರ್ಯೋಧನ-ಕರ್ಣ, ಕುಂತಿ-ಕರ್ಣ ಇವರೆಲ್ಲರ ನಡುವಿನ ಪರಿಶುದ್ಧ ಪ್ರೀತಿಯ ವಿವಿಧ ಮುಖಗಳನ್ನು ತಮ್ಮ ಮಾನಸಿ ಹಾಡಿನ ಮೂಲಕ ಪ್ರಸ್ತುಪಡಿಸಿದ್ದರು.

ಕಳೆದ ವರ್ಷ 'ಮೀರಾ' ಎಂಬ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟ ಮಾನಸಿ, ಈ ವರ್ಷ 'ಒಲವೇ ಜೀವನ ಸಾಕ್ಷಾತ್ಕಾರ' ಎಂಬ ಉತ್ತಮ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮ ನಂಗೆ ತುಂಬಾ ಇಷ್ಟವಾಯಿತು. 'ಬೃಂದಾವನ ನಿಲಯೆ ರಾಧೆ..'ಅಂತರಂಗಗಳ ಬಿರುಕನ್ನು ಬೆಸೆಯಲು..ಚಿಂತಾ-ಚಿತೆಗಳ ಶಮನಿಸಲು, ಸದಾ ಮಧುರ ಸುಖ ಸದನವಾದ ಪ್ರೀತಿಯ ಅನುಭೂತಿ ಬೇಕು..ಪ್ರೀತಿಯಿದ್ದಲ್ಲಿ ಸರ್ವವೂ ಮಧುರ..
ಸುಮಾರು ಎರಡೂವರೆ ಗಂಡೆಗಳ ಕಾಲ ನಡೆದ ಈ ಸುಶ್ರಾವ್ಯ ಗಾಯನ ಕಾರ್ಯಕ್ರಮದಲ್ಲಿ ನಂಗಿಷ್ಟವಾದ ಕೆಲವು ಭಂಗಿಗಳನ್ನು ಇಲ್ಲಿ ನೀಡಿದ್ದೇನೆ..ನಿಮಗೂ ಇಷ್ಟವಾಗಬಹುದು ಎಂದು ನಂಬಿಕೆ. ಪ್ರೀತಿಯ ಪರಿಕಲ್ಪನೆಯಲ್ಲಿ ಮೂಡಿ ಬಂದ ಈ ಗಾಯನ ಕಾರ್ಯಕ್ರಮ ವಿಭಿನ್ನ ಅನಿಸಿತ್ತು. ಮುಸ್ಸಂಜೆಯಲ್ಲಿ ಮನಸ್ಸಿಗೆ ಅನುರಾಗದ ಮಳೆಗೈದ ಮಾನಸಿ ಅವರಿಗೆ ನನ್ನದೊಂದು ಅಭಿವಂದನೆ
ಶುಭವಾಗಲಿ ಮಾನಸಿ..ಇಂಥಹ ಇನ್ನಷ್ಟು ಕಾರ್ಯಕ್ರಮಗಳ ಆಶಯ ನನ್ನದು


Sunday, February 10, 2008

ಅವಳೇ ನನ್ನ ಮೊದಲ ಪ್ರೀತಿ

ಅವಳು ಮತ್ತೆ ಮತ್ತೆ ನನ್ನ ಕಾಡುತ್ತಾಳೆ.
ಅವಳ ನೆನಪಾದಾಗ ಭಾವನೆಗಳು ದಡಕ್ಕಪ್ಪಳಿಸುತ್ತವೆ
ಅವಳು ನನ್ನ ಬದುಕಿನಲ್ಲಿ ಬಂದ ಮೊದಲ ಹೆಣ್ಣು
ಸುಂದರ ಕೂದಲನ್ನು ಹೊಂದಿರುವ ಆಕೆಯೇ ಸೌಂದರ್ಯ

ಅವಳನ್ನು ನಾ ತುಂಬ ಪ್ರೀತಿಸುವೆ
ಅವಳಿಗೆ ನನ್ನ ಹೃದಯದಲ್ಲಿ ಮೊದಲ ಸ್ಥಾನ...
ಅವಳೇ ನನ್ನ ಬದುಕಿನ ಮೊದಲ ಪ್ರೀತಿ
ಅವಳೇ ನನ್ನ "ಅಮ್ಮ"


ಅಮ್ಮಾ,
ಈಗ ರಾತ್ರಿ 12 ಗಂಟೆ.ನಿನ್ನ ನೆನಪಾಯಿತು. ನಿದ್ದೆನೇ ಬಂದಿಲ್ಲ. ಅದ್ಕೆ ಎದ್ದು ಕುಳಿತು ಪತ್ರಾ ಬರೀತಾ ಇದ್ದೀನಿ. ನಿನ್ನಿಂದ ಅದೆಷ್ಟೋ ಮೈಲಿಗಳಷ್ಟು ದೂರದಲ್ಲಿರುವ ನನಗೆ ನಿನ್ ಬಿಟ್ರೆ ಬೇರ್ಯಾರು ನೆನಪಾಗುತ್ತಿಲ್ಲ. ನಿನ್ನಿಂದ ಅದೆಷ್ಟೋ ದೂರದಲ್ಲಿರುವ ನನ್ನ ಜೊತೆ ನೀನು ಕೊಟ್ಟ ಬದುಕಿದೆ. ಬದುಕಿನ ಸವಾಲುಗಳನ್ನು ಎದುರಿಸಲು ನೀನು ನನಗೆ ಧಾರೆಯೆರೆದ ಚೈತನ್ಯ ನನ್ನಲ್ಲಿದೆ. ನನ್ನ ಪ್ರತಿಹೆಜ್ಜೆ ಹೆಜ್ಜೆಯಲ್ಲೂ ನಿನ್ನ ಸ್ಫೂರ್ತಿಯಿದೆ. ಅದೆಷ್ಟೋ ಸಾರಿ ಯಾಂತ್ರಿಕ ಬದುಕಿಗೆ ಮರುಳಾಗಬೇಡ ಅನ್ನುತ್ತಿಯಲ್ವಾ? ಅಮ್ಮಾ..ನಿನ್ನ ನಿರ್ಮಲ ಪ್ರೀತಿಯೆದುರು ಯಾಂತ್ರಿಕ ಬದುಕು ಏನೂ ಅಲ್ಲಮ್ಮ.

ನಿನ್ನ ಪ್ರೀತಿ ನನಗೆ ಅಮೃತದಂತೆ. ಅದೇ ನನಗೆ ಎಲ್ಲಾ ರೀತಿಯ ಪ್ರೀತಿ. ಅದೇ ಬದುಕು. ಯಾಕಂದ್ರೆ ನೀನೇ ನನಗೆ ಅಪ್ಪ-ಅಮ್ಮ ಎರಡೂ ಅಲ್ಲವೇ?ಬದಲಾಗುವ ಬದುಕಿನಲ್ಲಿ ನಿನ್ನ ಪ್ರೀತಿಯೇ ನನಗೆ ಎಚ್ಚರಿಕೆಯ ಕರೆಗಂಟೆ. ನೀನು ನನ್ನೆದೆಯಲ್ಲಿ ಬಿತ್ತಿದ ಪ್ರೀತಿಯ ಬೀಜ ಹೆಮ್ಮರವಾಗಿ ಜಗತ್ತನ್ನೇ ಎದುರಿಸುವ ಶಕ್ತಿ ನೀಡಿದೆ. ನಿನ್ನ ಪ್ರೀತಿ ಎಂದೂ ನನಗೆ ಭಾರವಾಗಿಲ್ಲಮ್ಮ..ಮೊಗೆದಷ್ಟೂ ಇನ್ನೂ ಬೇಕೆಬಿಸುತ್ತೆ. ನಿನ್ನ ಪ್ರೀತಿಯೇ ಬತ್ತದ ತೊರೆ.

ಮಗಳು ಬಿಸಿಲುಗುದುರೆಯ ಬೆನ್ನ ಹತ್ತಿ ಬಿಡುವಳೋ ಅನ್ನೋ ಭಯ ಅಲ್ವಾ ನಿಂಗೆ? ಅಮ್ಮಾ..ನಾನು ನಿನ್ನ ಮಗಳು ತಾನೆ? ಆದ್ರೆ ನೀನು ಭಯಪಡೋದು ಸಹಜನೇ. ಬೆಂಗಳೂರಿಗೆ ನೀನು ಕಳಿಸಿಕೊಡುವಾಗ 'ಜೋಪಾನಮ್ಮಾ' ಅಂದ ಮಾತು ಈಗ್ಲೂ ನೆನಪಿದೆ.
ಬದುಕನ್ನು ಪ್ರೀತಿಸು, ಪ್ರಕೃತಿಯನ್ನು ಪ್ರೀತಿಸು, ಹಾರೋ ಹಕ್ಕಿಗಳನ್ನು ಪ್ರೀತಿಸು, ಹರಿಯೋ ನದಿಯನ್ನು ಪ್ರೀತಿಸು, ಪ್ರಶಾಂತ ಸಾಗರವನ್ನು ಪ್ರೀತಿಸು, ಬೀಸೋ ಗಾಳಿಯನ್ನು ಪ್ರೀತಿಸು, ನಿನಗೆ ಆಪ್ತವೆನಿಸುವ ಪುಸ್ತಕಗಳನ್ನು ಪ್ರೀತಿಸು,ದುಃಖವನ್ನು, ಮೌನವನ್ನು ಗಾಢವಾಗಿ ಪ್ರೀತಿಸುವವಳು ನೀನಾಗು ಮಗಳೇ ಅಂತ ಹರಸಿದ್ದಿಯಲ್ಲಾ ಅಮ್ಮ, ಬಾಯಿತಪ್ಪಿಯೂ ಹುಡುಗ್ರರನ್ನು ಪ್ರೀತಿಸು ಅಂತ ಹೇಳಿಲ್ಲ ಅಲ್ವಾ? ಅದ್ಕೆ ನೋಡು ನಿನ್ ಬಿಟ್ಟು ಬೆಂಗಳೂರಿಗೆ ಬಂದ ಮೇಲೆ ನಾನು ಒಬ್ಬ ಹುಡುಗನ್ನ ಪ್ರೀತಿಸ್ತಾ ಇದ್ದೀನಿ ಅಂತ ಸುಳ್ಳು ಹೇಳಿದೆ. ಬಹುಶಃ ಆ ರಾತ್ರಿ ನೀನು ನಿದ್ದೆ ಮಾಡಿಲ್ಲ ಅನಿಸುತ್ತೆ. ಅದು ಸುಳ್ಳು ಅಂತ ಹೇಳೋವರೆಗೂ ನಿನಗೆ ಸಮಾಧಾನ ಆಗಿಲ್ಲ. ನಿನ್ ಮಗಳು ಯಾವ ಹುಡುಗ್ರನ್ನು ಪ್ರೀತಿಸಿಲ್ಲ ಅಮ್ಮ. ಹೆದರಿಕೋಬೇಡ. ಫೆ.14ರಂದು ಯಾವ ಹುಡುಗ ನನ್ ಮುದ್ದು ಮಗಳಿಗೆ ಕೆಂಗುಲಾಬಿ ತಂದುಕೊಡುತ್ತಾನಂತ. ನಾನು ಯಾರು ಕೊಟ್ರೂ ತೆಕೊಳಲ್ಲ ಬಿಡು.

ಮೊನ್ನೆ ಬೆಂಗಳೂರಿನಲ್ಲಿ ಜೋರು ಮಳೆ ಬಂತು. ಬೆಂಗಳೂರಂದ್ರೆ ಹಾಗೆ ಮಳೆಗಾಲ, ಚಳಿಗಾಲ,ಬೇಸಿಗೆ ಕಾಲ ಯಾವುದನ್ನೂ ನಿಖರವಾಗಿ ಹೇಳಕ್ಕಾಗಲ್ಲ. ಅದ್ಕೆ ಮೊನ್ನೆ ಬಂದ ಹನಿಹನಿ ಮಳೆಗೆ ನೆನೆದು ಜೋರು ಶೀತ ಆಯ್ತು. ಆಗ ನೆನಪಾಗಿದ್ದೂ ನೀನೆ ಅಮ್ಮ. ಶೀತ ಆದಾಗಲೆಲ್ಲಾ ಕಾಳುಮೆಣಸು ಅರೆದು, ಜೇನುತುಪ್ಪ ಜೊತೆ ಕಲಸಿ ಕೊಡುತ್ತಿದ್ದಿಯಲ್ಲಾ. ಅದ್ಕೆ .
ಅಮ್ಮ..ಬೇಗನೆ ನಿನ್ನ ಬಂದು ನೋಡ್ಬೇಕು. ನಿನ್ನ ಮಡಿಲಲ್ಲಿ ಮಲಗಿ ಖುಷಿ ಅನುಭವಿಸಬೇಕು. ನೀನು ಮಾಡಿದ ಕೋಡುಬಳೆ, ಚಕ್ಕುಲಿ, ರೊಟ್ಟಿ ಹೊಟ್ಟೆತುಂಬಾ ತಿನ್ಬೇಕು. ಬೇಗ ಮನೆಗೆ ಬರ್ತೀನಿ ಆಯ್ತಾ..
ಅಮ್ಮಾ..ನಿನ್ನ ಮಡಿಲಲ್ಲಿ ಹೂವಾದೆ ನಾನು
ನನ್ನಯ ಬದುಕಿಗೆ ಬೆಳಕಾದೆ ನೀನು
ಏಳೇಳು ಜನ್ಮವು ಭುವಿ ಮೇಲಿರಲು
ಮಗಳಾಗಿ ಜನಿಸಿ ತುಂಬುವೆ ಒಡಲು
ಇಂತೀ,
ನಿನ್ನ ಮಗಳು

Wednesday, February 6, 2008

ಮಿಸ್ ಮಾಡ್ಕೋತಾ ಇರುವ ನಮ್ಮೂರ ಜಾತ್ರೆ 'ಒತ್ತೆಕೋಲ'

ವಿಷ್ಣುಮೂರ್ತಿ ಜೊತೆ 'ಪೂಜಾರಿ'ಗಳು
ನನ್ನ ಬಾಲ್ಯದ ಪುಟ್ಟ ಮನಸ್ಸು ಯಾವತ್ತೂ ಊರ ಜಾತ್ರೆ, ಮದುವೆ, ಯಕ್ಷಗಾನ ಯಾವುದನ್ನೂ ತಪ್ಪಿಸಿಲ್ಲ. ಯಾರೂ ಬಂದಿಲ್ಲಾಂದ್ರೆ ಸಿಕ್ಕವರ ಜೊತೆ ಜಾತ್ರೆಗೋ, ಯಕ್ಷಗಾನಕ್ಕೋ ಹೋಗಿ ಬರುತ್ತಿದೆ. ಅದೊಂದು ಹುಚ್ಚು. ಅಮ್ಮ ಕೊಟ್ಟ ಚಿಲ್ಲರೆ ಕಾಸು ಹಿಡ್ಕೊಂಡು ಹೋಗೋದು ನಂಗೊಂದು ಖುಷಿ. ಅಂಥದ್ದೇ ಒಂದು ಜಾತ್ರೆ 'ಒತ್ತೆಕೋಲ'. ಬಾಲ್ಯದಲ್ಲಿ 'ಒತ್ತೆಕೋಲಕ್ಕೆ' ಹೋಗಿ ಬಂದ ನೆನಪುಗಳನ್ನು ಬ್ಲಾಗ್ ಬುಟ್ಟಿಗೆ ಹಾಕಿದ್ದೀನಿ.
ಪ್ರತಿ ವರ್ಷ ಎಪ್ರಿಲ್ ತಿಂಗಳ ಮೊದಲ ವಾರ ನಮ್ಮೂರ ಪಕ್ಕದ 'ವಿಷ್ಣು ಮೂರ್ತಿ' ದೇವಾಲಯದ ಪಕ್ಕ ಒತ್ತೆಕೋಲ (ನೇಮೋತ್ಸವ) ನಡೆಯುತ್ತಿತ್ತು. ಮಾರ್ಚಿನಿಂದಲೇ ಈ ಜಾತ್ರೆಗೆ ಹಣ ಸಂಗ್ರಹಿಸಿಡುವ ಕೆಲ್ಸ ನನ್ದು. ಆಮೇಲೆ ಅಮ್ಮ ಕೊಟ್ಟ ಚಿಲ್ರೆ ಕಾಸು ಕೂಡಿ ಬಲೆ, ಮೀಠಾಯಿ ಕೊಳ್ಳೊದು. ರಾತ್ರಿ 9 ಗಂಟೆಗೆ ಅಜ್ಜಿ ಜೊತೆ ಹೋಗಿ ಕುಳಿತರೆ, ಮರುದಿನ 11 ಗಂಟೆಯವರೆಗೆ ಜಾತ್ರೆ ಮುಗಿಯುವ ತನಕ ಅಲ್ಲಿ ಕುಳಿತುಕೊಂಡು ನೇಮೋತ್ಸವ ನೋಡೋದು. ಪುಟ್ಟ ಶೀತದಿಂದ ಹಿಡಿದು, ದೊಡ್ಡ ರೋಗಗಳಿಗೂ ಈ ದೇವರಿಗೆ ಹರಕೆ ಹೊರುತ್ತಾರೆ. ಅಲ್ಲಿ ವಿಷ್ಣುಗೆ ಹರಕೆ ಕೊಡೋದು ಕಟ್ಟಿಗೆ. ನೇಮೋತ್ಸವ ನಡೆಯುವ ಸಮಯಕ್ಕೆ ರಾಶಿ ರಾಶಿ ಕಟ್ಟಿಗೆ ತಂದು ಹಾಕೋರು ಜಾಸ್ತಿ. ಆ ಕಟ್ಟಿಗೆಯನ್ನು ನೇಮೋತ್ಸವದ ಮೊದಲ ದಿನ ರಾತ್ರಿ ರಾಶಿ ಹಾಕಿ ಬೆಂಕಿ ಹಚ್ಚುತ್ತಾರೆ. ಅದು ಬೆಳಿಗ್ಗೆ ಆಗುವಾಗ ಪೂರ್ತಿ ಉರಿದು, ಕೆಂಪಗಿನ ಕೆಂಡದ ರಾಶಿ. ಆಗ ಸುಮಾರು ಬೆಳಿಗ್ಗೆ 5 ಗಂಟೆ. ವಿಷ್ಣುಮೂರ್ತಿ ನೇಮ. ಅದಕ್ಕೆ ಮುಂಚೆ ಇತರ ನೇಮಗಳು ನಡೆಯುತ್ತವೆ. ವಿಷ್ಣುಮೂರ್ತಿ ನೇಮ ನೋಡಕ್ಕೆಂದೇ ಬೆಳಿಗ್ಗಿನ ಹೊತ್ತು ತುಂಬಾ ಜನ ಸೇರುತ್ತಾರೆ. ಬಣ್ಣದ ವೇಷ, ಸೊಂಟಕ್ಕೆ ತಾಳೆ ಗರಿ ಕಟ್ಟಿದ್ದ ವ್ಯಕ್ತಿ ವಿಷ್ಣುಮೂರ್ತಿ. ಇದರ ನೇಮೋತ್ಸವ ನಡೆಯುವಾಗ ಅದರ ಜೊತೆ 'ಸೇವಕರು' ಇರುತ್ತಾರೆ. ಅವರನ್ನು ತುಳು ಭಾಷೆಯಲ್ಲಿ 'ಪೂಜಾರಿ'ಗಳು ಎನ್ನುತ್ತಾರೆ. ವಿಷ್ಣುಮೂರ್ತಿ ಎದ್ದು ಬಂದಾಗ, ಈ ಪೂಜಾರಿಗಳು ಜೊತೆಗೆ ಬಂದು ಉರಿಯುವ ಕೆಂಡದ ಮೇಲೆ ವೇಗವಾಗಿ ನಡೆಯುತ್ತಾರೆ. ಜೊತೆಗೆ ವಿಷ್ಣುಮೂರ್ತಿಯೂ ಕೆಂಡದ ಮೇಲೆ ಹೊರಳಾಡುತ್ತದೆ.

ಕೆಂಡದ ಮೇಲೆ ಹೊರಳಾಡುತ್ತಿರುವ 'ವಿಷ್ಣುಮೂರ್ತಿ'
ಕೆಂಡದ ಮೇಲೆ ಹೊರಳಾಡುತ್ತಿದ್ದರೂ ಅವರಿಗೆ ಏನೂ ಆಗುವುದಿಲ್ಲ. ಪ್ರತಿ ವರ್ಷವೂ ನಮ್ಮಮ್ಮ ಸಣ್ಣ ಪುಟ್ಟ ಜ್ವರಕ್ಕೂ ಹರಕೆ ಹೇಳಿ ನಮ್ಮನ್ನು ಕಟ್ಟಿಗೆ ಹೊರುವಂತೆ ಮಾಡುತ್ತಿದ್ದರು. ಒಂದೊಂದು ಸಲ ಅಮ್ಮನನ್ನೆ ಹೊರಿಸಿದ್ದೂ ಉಂಟು. ಆಗೆಲ್ಲ ಅಮ್ಮ ಸಂತೋಷದಿಂದ ಹೊತ್ತು, ತಂದು ಮಕ್ಕಳಿಗೆ ಒಳ್ಳೆದು ಮಾಡಿ ಅಂತ ಹೇಳಿ ಕಟ್ಟಿಗೆ ಹಾಕುತ್ತಿದ್ರು. ಆದ್ರೂ ಆ ಜಾತ್ರೆಯೆಂದರೆ ನಂಗೂ ನನ್ ತಮ್ಮಂಗೂ ಹಬ್ಬ.
ಈ ಜಾತ್ರೆಯಲ್ಲಿ ಇನ್ನೊಂದು ವಿಶೇಷ ಅಂದ್ರೆ 'ಮುಳ್ಳುಗುಳಿಗ' ನೇಮೋತ್ಸವ. ಅದು ಆರಂಭವಾಗೋದು ಒಂಬತ್ತು ಗಂಟೆ ನಂತರ. ಅದನ್ನು ಮಾತ್ರ ನಾವು ಎದುರಿಂದ ನೋಡುತ್ತಿರಲಿಲ್ಲ. ಗರ್ಜಿಸುತ್ತ ಅದು ಓಡುತ್ತಾ ಬಂದಾಗ, ಯಾರಾದ್ರೂ ಹಿಡಿದುಕೊಳ್ಳದಿದ್ರೆ ಎದುರಿದ್ದವರ ಮೇಲೆರಗುತ್ತಿತ್ತು. ಮಾತ್ರವಲ್ಲ ಓಡಿ ಹೋಗಿ ಮರದ ಮೇಲೆ ಹತ್ತಿ, ಅಥವಾ ಮುಳ್ಳಿನ ಬೇಲಿ ಮೇಲೆ ಎರಗಿ..ಅದು ಒರಳಾಡುವ ಅದ್ರ ಕಿತಾಪತಿ..ನೋಡೋಕೆ ಭಯದ ಜೊತೆಗೆ ಅಷ್ಟೇ ತಮಾಷೆ. ಹುಡುಗ್ರಿಗೆ ಬೇಕಾದ ಹಾಗೆ ತರ್ಲೆಮಾಡಿ ಮುಳ್ಳಿನ ಮೇಲೆ ಸಿಕ್ಕವರನ್ನು ದೂಡಿ ಹಾಕೋದು.
ಈ ಜಾತ್ರೆ ನೋಡದೆ ಈ ಏಳೆಂಟು ವರ್ಷ ಕಳೆಯಿತು. ಪ್ರತಿ ಬಾರಿಯೂ ಎಪ್ರಿಲ್ ಬಂದಾಗಲೆಲ್ಲಾ ಅಮ್ಮ ಕೊಟ್ಟ ಚಿಲ್ರೆ ಕಾಸು, ಸಿಟ್ಟಿನಿಂದ ಹರಕೆ ಕಟ್ಟಿಗೆ ಹೊತ್ತಿದ್ದು, ಅಜ್ಜ-ಅಜ್ಜಿಯಿಂದ ಸಂಗ್ರಹಿಸಿದ ಒಂದು ರೂಪಾಯಿ ನಾಣ್ಯ, ಕೈತುಂಬಾ ತೊಟ್ಟ ಬಲೆ, ಹೊಟ್ಟೆ ತುಂಬಾ ತಿಂದ ಮೀಠಾಯಿ, ಕೆಂಡದ ಮೇಲೆ ಬಿದ್ದ ವಿಷ್ಣುಮೂರ್ತಿ, ಮುಳ್ಳಿನ ಮೇಲೆ ಬಿದ್ದ ಮುಳ್ಳುಗುಳಿಗ..ಎಲ್ಲವೂ ನೆನಪಾಗದೆ ಇರುವುದಿಲ್ಲ. ಒಂದು ವರ್ಷವೂ ಮಿಸ್ ಮಾಡ್ಕೊಳ್ಳದ ಜಾತ್ರೇನ ಈಗ ಮಿಸ್ ಮಾಡ್ಕೋತಾ ಇದ್ದೀನಿ ಅಂತ ಅನಿಸುತ್ತೆ

ಪೋಟೋ: ದಯಾನಂದ ಕುಕ್ಕಾಜೆ, DAIJIWORLD