Friday, September 26, 2008

ಕಣ್ಣಂಚಿನಲ್ಲಿ ರೇಡಿಯೋ ನೆನಪು..

ಹೌದು..ನಮ್ಮನೆಲ್ಲೊಂದು ಫಿಲಿಪ್ ರೇಡಿಯೋ ಇತ್ತು. ಅಂದ್ರೆ ಸುಮಾರು 20 ವರ್ಷಗಳ ಹಿಂದೆ. ಆವಾಗ ನಮ್ಮ ಹಳ್ಳಿಯಲ್ಲಿ ಎಲ್ಲಿಯೂ ಟಿ.ವಿ. ಇರಲಿಲ್ಲ. ಎಲ್ಲರ ಮನೆಯಲ್ಲೂ ರೇಡಿಯೋ. ಬೆಳಿಗೆದ್ದಾಗ ಎಲ್ಲರ ಮನೆಯ ರೇಡಿಯೋ ಗಳಿಂದ ಸುಪ್ರಭಾತ, ವಾರ್ತೆ...! ರೇಡಿಯೋದಲ್ಲಿ ಬಂದ ವಾರ್ತೆ ಎಲ್ಲರ ಮನೆಮನೆಯಲ್ಲೂ ದೊಡ್ಡ ಸುದ್ದಿ. ಪ್ರತಿ ಮನೆಯವರೂ ವಾರ್ತೆಯಲ್ಲಿ ಏನು ಬರುತ್ತದೆ? ಎಂದು ಕಾದು ಕುಳಿತಿರುತ್ತಿದ್ದರು. ಪತ್ರಿಕೆ, ಟಿ.ವಿ.ಗಳ ಗಂಧಗಾಳಿಯೇ ಇಲ್ಲದ ನಮ್ಮ ಪುಟ್ಟ ಹಳ್ಳಿಗೆ ರೇಡಿಯೋ ನೇ ಎಲ್ಲ ಸುದ್ದಿಗಳನ್ನು ಹೇಳುತ್ತಿದ್ದು. ವಿಶೇಷವೆಂದರೆ, ಆ ಸುದ್ದಿಗಳು ಎಲ್ಲರಿಗೂ ಚೆನ್ನಾಗಿ ನೆನಪಿರುತ್ತಿದ್ದವು. ಆಮೇಲೆ ಕೆಲವು ಮಹತ್ವದ ಸುದ್ದಿಗಳು ಗದ್ದೆಗಳಲ್ಲಿ, ತೋಟಗಳಲ್ಲಿ, ಹುಲ್ಲು-ಸೊಪ್ಪು ಕೊಯ್ಯುಲು ಹೋಗುವ ಹೆಂಗಳೆಯರ ಬಾಯಲ್ಲಿ ದೊಡ್ಡ ಚರ್ಚೆಯಾಗುತ್ತಿದ್ದವು. ನಮ್ಮಜ್ಜ ಬೇಗನೆ ಮೂರ್ತೆಗೆ ಹೋದರೆ, ಆಮೇಲೆ ಬಂದು ವಾರ್ತೆಯಲ್ಲಿ ಏನಿತ್ತು? ಎಂದು ಅಜ್ಜಿಯನ್ನು ಕೇಳುವುದು ರೂಢಿ. ಗಡಿಯಾರಗಳೇ ಇಲ್ಲದ ಮನೆಯಲ್ಲಿ ರೇಡಿಯೋ ದಲ್ಲಿ ಗಂಟೆ ಹೇಳುವುದನ್ನೇ ಕಾಯುತ್ತಿದ್ದರು.

ನಮ್ಮನೆಯಲ್ಲಿಯೂ ಒಂದು ಫಿಲಿಪ್ ರೇಡಿಯೋ. ನಮ್ಮ ದೊಡ್ಡಮ್ಮನ ಮಗ ದೊಡ್ಡಣ್ಣ ಅದನ್ನು ಅಜ್ಜಿ ಮನೆಯಲ್ಲಿ ತಂದಿಟ್ಟಿದ್ದ. ಅವನಿಗೆ ಮನೆಗೆ ರೇಡಿಯೋ ತಂದಿದ್ದೇನೆಂಬ ಅಹಂ ಒಂದೆಡೆಯಾದರೆ, ನಮ್ಮನೆಯಲ್ಲಿ ಆ ರೇಡಿಯೋ ವನ್ನು 'ದೊಡ್ಡಣ್ಣನ ರೇಡಿಯೋ' ಅಂತಾನೇ ಕರೆಯುತ್ತಿದ್ದರು. ನಾವು ಮಕ್ಕಳಾರೂ ಮುಟ್ಟಬಾರದೆಂದು ಮಣ್ಣಿನ ಗೋಡೆಗೆ ದೊಡ್ಡ ಕಬ್ಬಿನ ಮೊಳೆ ಬಡಿದು ನೇತುಹಾಕಿದ್ದರು ನಮ್ಮಜ್ಜ..ಮುದ್ದಿನ ಮೊಮ್ಮಗನ ಪ್ರೀತಿಯ ರೇಡಿಯೋವನ್ನು. ನಮಗಂತೂ ದಿನ ಮೇಲೇ ಕತ್ತು ಮಾಡಿ..ರೇಡಿಯೋ ನೋಡಿ ನೋಡಿ ಕತ್ತೇ ನೋವಾಗಿಬಿಡ್ತಿತ್ತು. ರೇಡಿಯೋ ಕೇಳೊಂದ್ರೆ ನಮಗೆ ಏನೋ ಖುಷಿ, ಸಂಭ್ರಮ. ದೊಡ್ಡಣ್ಣ ಬಂದ ತಕ್ಷಣ ರೇಡಿಯೋ ಆನ್ ಮಾಡು ಅಂತಿದ್ದೀವಿ. ಬೆಳಿಗ್ಗಿನ ವಾರ್ತೆ ಕೇಳಕ್ಕೆ, ಮಧ್ಯಾಹ್ನದ ವಾರ್ತೆ, ಚಿತ್ರಗೀತೆಗಳು, ಸಂಜೆ ನಾಲ್ಕು ಗಂಟೆಯಿಂದ ಶುರುವಾಗುವ ಎಲ್ಲಾ ಕಾರ್ಯಕ್ರಮಗಳನ್ನು ನೋಡುತ್ತಿದ್ದೇವು. ಬುಧವಾರ ಬಂತೆಂದರೆ ರೇಡಿಯೋದಲ್ಲಿ ಬರುವ ಯಕ್ಷಗಾನ ಕೇಳಲು, ನಮ್ಮಮ್ಮನ ಜೊತೆ ಗಂಟು-ಮೂಟೆ ಕಟ್ಟಿಕೊಂಡು ಅಜ್ಜಿ ಮನೆಯಲ್ಲಿ ಹಾಜರ್. ಅವತ್ತು ಬೆಳಿಗ್ಗೆಯೇ ಮನೆಯಲ್ಲಿ ಎಲ್ಲರು ;'ಇವತ್ತು ಯಕ್ಷಗಾನ ಕೇಳಬೇಕು.,.ಯಾವ ಯಕ್ಷಗಾನವೋ.." ಅನ್ತಾ ಸಂಜೆಗೆ ಕಾಯುತ್ತಿರುತ್ತಾರೆ.

ವಾರದ ಕೆಲದಿನಗಳಲ್ಲಿ ಮಾತ್ರ ಮಂಗಳೂರು ಆಕಾಶವಾಣಿಯಿಂದ ಬಿತ್ತರವಾಗುತ್ತಿದ್ದ ತುಳು ಕಾರ್ಯಕ್ರಮಗಳನ್ನು ಮಾತ್ರ ಯಾರೂ ಮಿಸ್ ಮಾಡಿಕೊಳ್ಳುವಂತಿಲ್ಲ. ಅದನ್ನು ಕೇಳಿ ಆದ ಮೇಲೆ ಅಜ್ಜಿ ಮನೆಯ ಅಂಗಳದಲ್ಲಿ ಮನೆಯ ಎಲ್ಲರೂ ಕುಳಿತು ಚರ್ಚೆ ಮಾಡುತ್ತಾರೆ. ರಾಮಾಯಣ, ಮಹಾಭಾರತ ಕಥೆಗಳೇನಾದರೂ ಬಂದುವಾ..ಇಡೀ ರಾಮಾಯಣವೇ ಚರ್ಚೆಯ ವಸ್ತು. ನಾವು ಮಕ್ಕಳಂತೂ ಅದನ್ನೆಲ್ಲ ಅಚ್ಚರಿಯಿಂದ ಕೇಳುತ್ತಿದ್ದೇವು. ರಾಮಾಯಣದ ಕಥೆ ಹೇಳಿದ್ರೆ, 'ಅಯ್ಯೋ ರಾಮನಿಗೆ, ಸೀತೆಗೆ ಕಾಡಿನಲ್ಲಿ ಹೆದರಿಕೆಯಾಗುತ್ತಿರಲಿಲ್ಲವೇ? . ಪಾಪ,..ಅಪ್ಪನೇ ಮಗನನ್ನು ಕಾಡಿಗೆ ಕಳಿಸಬಾರದಿತ್ತು ಅಲ್ವಾ? ಕಾಡಿನಲ್ಲಿ ಮಳೆ, ಗುಡುಗು, ಗಾಳಿ ಬಂದಾಗ ಅವರು ಹೇಗೆ ಇರುತ್ತಿದ್ದರು?' ಇಂಥ ಅಸಂಬದ್ಧ ಪ್ರಶ್ನೆಗಳಿಗೆ ನಮ್ಮಮ್ಮ, ಅಜ್ಜಿ, ಮನೆಯವರೆಲ್ಲ ಉತ್ತರ ಹೇಳಿ ಹೇಳಿಯೇ ಸುಸ್ತಾಗುವರು. ವಾರ್ತೆಯಲ್ಲಿ ವೀರಪ್ಪನ್ ಸುದ್ದಿ ಏನಾದ್ರೂ ಹೇಳಿದ್ರೋ...ನಮ್ಮ ದೊಡ್ಡಣ್ಣನ ಪೂರ್ತಿ ವೀರಪ್ಪನ್ ಕಥೆ ಹೇಳಿಬಿಡುತ್ತಿದ್ದ. ಅಬ್ಬಾ! ನಮ್ಮೂರಿಗೂ ವೀರಪ್ಪನ್ ಬಂದ್ರೆ..ಅಂತ ನಾವೂ ಭಯಗೊಳ್ಳುತ್ತಿದ್ದೇವು.

ನಮ್ಮನೆಗೆ ಬಂದಿದ್ದು ಅದೇ ಒಂದು ರೇಡಿಯೋ..ತುಂಬಾ ವರ್ಷಗಳ ಕಾಲ ಬಾಳಿಕೆ ಬಂದಿತ್ತು. ಅದದ ಒಳಗೆ ಜಿರಲೆ ನುಗ್ಗಿದರೆ, ದೊಡ್ಡಣ್ಣ ರಿಪೇರಿಗೆ ಕೂರುವನು. ಅವನು ರಿಪೇರಿ ಮಾಡುವಾಗ ಇಷ್ಟೊಂದು ಮಾತನಾಡುವ ರೇಡಿಯೋ ಒಳಗೆ ಏನಿದೆ ಎನ್ನುವ ಕುತೂಹಲ ನಮಗೆ. ಮಕ್ಕಳೆಲ್ಲ ಸುತ್ತಲು ಕುಳಿತು ಅವನು ಅದನ್ನು ತೆರೆಯುವುದನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದೇವು. ಆದರೆ ಅದರ ಒಳಗಿರುವ ವಯರ್ ಗಳು, ಸಣ್ಣ ಸಣ್ಣ ಸಾಧನಗಳನ್ನು ಕಂಡಾಗಲೆಲ್ಲಾ ನಮಗೆ ನಿರಾಶೆಯಾಗುತ್ತಿತ್ತು. ಅದೇಗಪ್ಪಾ..ಈ ರೇಡಿಯೋದ ಒಳಗೆ ನುಗ್ಗಿ ಜನ ಮಾತಾಡ್ತಾರೆ..ಅನ್ನೋದಯ ನಮ್ಮ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.
ಮಳೆ ಬಂದರೆ ಸಾಕು..ನಮ್ಮ ರೇಡಿಯೋಗೆ ಜ್ಷರ ಬರುತ್ತಿತ್ತು..ಶೀತ ಆಗಿ ನೆಗಡಿಯಿಂದ ಬಳಲುತ್ತಿದ್ದವರಂತೆ ನಮ್ಮ ರೇಡಿಯೋನು ಕೊಯ್ ಕೊಯ್ ಅನ್ತಾ ಇತ್ತು ವಿನಹಃ ಮಾತಾಡುತ್ತಿರಲಿಲ್ಲ. ಆವಾಗ ಅಮ್ಮನವರು, ಮಳೆ ಅಲ್ವಾ? ರೇಡಿಯೋಗೂ ಜ್ವರ! ಅಂದು ಹೇಳುತ್ತಿದ್ದರು. ಆಮೇಲೆ ಏನಾಯ್ತೋ ರೇಡಿಯೋ ಕೆಟ್ಟು ಹೋಯಿತು..ಅದನ್ನು ದೊಡ್ಡಣ್ಣ ರಿಪೇರಿ ಮಾಡಿದರೂ ಅದು ಸರಿಯಾಗಲೇ ಇಲ್ಲ. ಅದಕ್ಕೆ ರಿಪೇರಿ ಅಂಗಡಿಗೆ ಕೊಟ್ಟ. ಆದರೆ ಮತ್ತೆ ರಿಪೇರಿ ಆಗಿ ವಾಪಸ್ ಮನೆಗೆ ಬರಲೇ ಇಲ್ಲ..! ಬೇರೇ ರೇಡಿಯೋನು ಮನೆಗೆ ಬರಲೇ ಇಲ್ಲ. ಬಹುಶಃ ನಮ್ಮನೆಯಲ್ಲೂ ರೇಡಿಯೋದ ನೆನಪಿನ ಹೆಜ್ಜೆಗಳೂ ಮರೆತೇ ಹೋಗಿರುವಂತಿದೆ. ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ!!

ಪುಟ್ಟಿಗೆ ಇಂದು ದಿಲ್ ಖುಷಿ..

ಇಂದು ಬೆಳಿಗ್ಗೆ ಬೇಗ ಆಫೀಸ್ ಗೆ ಬಂದಿದ್ದೆ. ಯಾವಾಗಲೂ ಅಷ್ಟೇ..ಆಫೀಸಿಗೆ ಬೇಗ ಬರುವುದು ನನ್ನ ಚಾಳಿ. ಬೇಗ ಬಂದ್ರೆ ಕೆಲಸ ಬೇಗ ಆಗುತ್ತೆ..ಆಫೀಸಿನಲ್ಲಿ ಏನೂ ಕಿರಿಕಿರಿ ಇರುವುದಿಲ್ಲ. ಅದರಿಲಿ, ಇವತ್ತು ಬಂದವಳೇ ಶಿವಪುರದ ಬಿ.ಸಿ.ರಾವ್ ಗೆ ಕರೆ ಮಾಡಿದ್ದೆ. ಯಾರಿಗೋ ಕರೆ ಮಾಡಿ..ಅಲ್ಲಿ ನನಗೆ ಬೇಕಾದ ಮಾಹಿತಿ ಸಿಗದಾಗ..ಕೊನೆಗೆ ಯಾರೋ ನಂಬರ್ ಕೊಟ್ಟು ಬಿ.ಸಿ.ರಾವ್ ಗೆ ಫೋನ್ ಮಾಡಿದ್ದೆ. ಮಾಹಿತಿನೂ ನೀಡಿದರು.
***
ಮೂರು ವರ್ಷಗಳ ಹಿಂದೆ. ಮಂಗಳೂರಿನ ಯುವವಾಹಿನಿ ಘಟಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪುರಸ್ಕಾರ ಪಡೆದವರಲ್ಲಿ ನಾನೂ ಒಬ್ಬಳಾಗಿದ್ದೆ. ಅಲ್ಲಿಗೆ ಹರಿದಾಸರೂ ಆಗಿದ್ದ ಬಿ.ಸಿ.ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು. ನಮಗೆ ಪುರಸ್ಕಾರ ಎಲ್ಲಾ ನೀಡಿ ಆದ ಮೇಲೆ ರಾವ್ ಅವರ ಉಪನ್ಯಾಸ. ಸುಮಾರು 500 ಜನ ಸೇರಿದ್ದರು. ರಾವ್ ಉಪನ್ಯಾಸ ಅಂದ್ರೆ..ಸೂಜಿ ಬಿದ್ದರೂ ಸದ್ದು ಕೇಳುತ್ತೆ ಎನ್ನುತ್ತಿದ್ದರು ಕೆಲವರು. ನಾನೂ ಅವರ ಹೆಸರು ಕೇಳಿದವಳು..ರಾವ್ ಯಾರೆಂಬುದೇ ಗೊತ್ತಿಲ್ಲ. ಸುಮಾರು ಎರಡೋ-ಮೂರು ಗಂಟೆಯೋ ಉಪನ್ಯಾಸ. ಸ್ವಲ್ಪನೂ ಬೋರ್ ಹಿಡಿಸುವುದಿಲ್ಲ. ಅವರು ಬಾಯಿತೆಗೆದರೆ ಮತ್ತೂ ಕೇಳೋಣ ಅನ್ನುವಷ್ಟು ವಿಚಾರಧಾರೆ. ರಾಮಾಯಣ, ಮಹಾಭಾರತ, ಕುವೆಂಪು, ಶಿಶುನಾಳ ಶರೀಫ, ವಿವೇಕಾನಂದ. ಯೇಸು. ಪೈಗಂಬರ..ಎಲ್ಲರನ್ನು ತಮ್ಮ ಉಪನ್ಯಾಸದಲ್ಲಿ ತಂದುಬಿಡುತ್ತಿದ್ದರು. ಉಪನ್ಯಾಸ..ಮಾತು..ಮಾತು
ನಾನೇನೂ ಎದುರಿನ ಚೇರ್ ನಲ್ಲೇ ಕುಳಿತಿದ್ದೆ. ಮಾತು-ಮಾತಿಗೂ ನನ್ನ ಬಳಿಗೆ ಪ್ರಶ್ನೆಗಳು ಬರುತ್ತಿದ್ದವು. ನನ್ನ ತಲೆಯಲ್ಲಿ ಹೊಳೆದೆದೆಲ್ಲ ಅವರ ಪ್ರಶ್ನೆಗೆ ಉತ್ತರವಾಗುತ್ತಿದ್ದವು. ಸರಿಯೋ/ತಪ್ಪೋ ಅವರ ಭಾಷಣ ನಮಗೇ ಪ್ರೇರಣೆ ಆದಂತೆ ಉತ್ತರ ಹೇಳುತ್ತಿದ್ದೆ. ಅವರಿಗಂತೂ ಖುಷಿಯೋ ಖುಷಿ. ಎಲ್ಲರೆದುರು ನನ್ನನ್ನು 'ಪುಟ್ಟಿ..ಪುಟ್ಟಿ..'ಅಂತ ಕರೆದು ಅವತ್ತಿನ ಸಮಾರಂಭದಲ್ಲಿ ನಾನೇ ನಾಯಕಿಯಾಗಿಬಿಟ್ಟೆ. ಮಧ್ಯದಲ್ಲಿ ಅವರು 'ಗಂಡಸರು ಸೀರೆ ಉಡುತ್ತಿದ್ದರೆ ಏನಾಗುತ್ತಿತ್ತು?' ಅಂತ ಕೇಳಿದ್ರು..ಅಬ್ಬಬ್ಬಾ! ಗೋಳೋ ನಗು..ನೆರೆದವರೆಲ್ಲರೂ ನಗುತ್ತಿದ್ದರು. ನನ್ನನ್ನು ಕೇಳಿದ್ರು..ಎಲ್ಲೋ ಓದಿದ ನೆನಪೋ..ಬೀಚಿ ಹೇಳಿದ್ದೋ..ನೆನಪಾಯಿತು. 'ಗಂಡಸರು ಸೀರೆ ಉಡುತ್ತಿದ್ದರೆ..ದಾರಿ ಬದಿಯಲ್ಲಿ ಮೂತ್ರ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿತ್ತು'!! ಅದನ್ನು ಬಾಯ್ಬಿಟ್ಟು ಹೇಳಿಬಿಟ್ಟೆ..ಸಭೆಯ ನಗು ಇನ್ನೂ ಹೆಚ್ಚಾಗಿತ್ತು..ಸ್ವಲ್ಪ ತರಲೆ ತಲೆ..ಮುಜುಗರ ಇಲ್ಲದೆ ಹೇಳುವಂತೆ ಮಾಡಿತ್ತು.
ರಾವ್ ಸರ್ ಅಂತೂ, ನಮ್ಮ ಪುಟ್ಟಿ ಉತ್ತರ ಹೇಳಿದ್ಳು..ಅಂತ ಖುಷಿಪಟ್ಟರು. ಸಂಜೆ ಉಪನ್ಯಾಸ ಮುಗಿದ ಮೇಲೂ..ಒಂದಿಷ್ಟು ವಿಚಾರಗಳನ್ನು ನನ್ನ ತಲೆಗೆ ತುರುಕಿ, ಬೆನ್ನು ತಟ್ಟಿದರು. ಅಂದು ಅವರ ದೂರವಾಣಿ ಸಂಖ್ಯೆ, ವಿಳಾಸ ಎಲ್ಲವನ್ನೂ ತೆಗೆದಿರಿಸಿಕೊಂಡಿದ್ದೆ. ಆದರೆ ಅಂದೇ ಬಸ್ಸಲ್ಲಿ ಕಳಕೊಂಡಿದ್ದೆ. ಮತ್ತೆ ಅವರನ್ನು ಭೇಟಿ ಆಗಲೇ ಇಲ್ಲ..
***
ಇಂದು ಮಾತನಾಡಬೇಕಾದರೆ, ನಾನು ಚಿತ್ರಾಕರ್ಕೇರಾ ಅಂಥ ಹೇಳಿಲ್ಲ..ಚಿತ್ರಾ ಬೆಂಗಳೂರಿಂದ ಮಾತನಾಡುತ್ತಿದ್ದೇನೆ ಅಂದೆ. ನಂಗೆ ಬೇಕಾದ ಎಲ್ಲಾ ಮಾಹಿತಿ ನೀಡಿದ ಮೇಲೆ ರಾವ್ ಅವರು, "ನಿನ್ನ ಹೆಸರು ಚಿತ್ರನಾ..ನಂಗೆ ಮಂಗಳೂರಿನಲ್ಲಿ ಭೇಟಿಯಾದ ನಿನ್ನ ಹೆಸರಿನ ಹುಡುಗಿಯ ನೆನಪಾಯತ್ತಮ್ಮ..ಅವಳು ತುಂಬಾ ಚೂಟಿ ಹುಡುಗಿ..ನಾನು ಕೇಳಿದ ಪ್ರಶ್ನೆಗೆ ತರಲೆ ಉತ್ತರಗಳನ್ನೂ ನೀಡಿದ್ದಳು. ಹೀಗೇ ಯುವವಾಹಿನಿ ಪ್ರತಿಭಾ ಪುರಸ್ಕಾರದಲ್ಲಿ ನಡೆದ ಕತೆಯನ್ನೆಲ್ಲ ಹೇಳಿಕೊಂಡರು. ಅಷ್ಟೇ ಅಲ್ಲ, ಅವಳನ್ನು ಪುಟ್ಟಿ ಅಂತ ಕರೆದಿದ್ದೆ ಅಂದರು.."! ಎಲ್ಲ ಕೇಳಿಸಿಕೊಂಡು ಆಮೇಲೆ ಹೇಳಿದೆ; ಸರ್..ಅದೇ ಚಿತ್ರಾಕರ್ಕೇರಾ ನಾನು...!! ನಂಗೂ ಖುಷಿ..ಅವರಿಗೂ ಖುಷಿ..ಪುಟ್ಟೀ ನಿನ್ ನಂಬರು ಕೊಡು ಅಂತ ಕೇಳಿಕೊಂಡು. ಒಂದಷ್ಟು ಹೊತ್ತು..ಹಿತನುಡಿಗಳನ್ನು ಹೇಳಿ, ಈ ಕಡೆ ಬಂದಾಗ ಮನೆಗೆ ಬಾಮ್ಮಾ..ಅನ್ನಲು ಮರೆಯಲಿಲ್ಲ.
ನಾನಂತೂ ಇವತ್ತು ಫುಲ್ ಖುಷಿ. ಮೂರು ವರ್ಷದ ಹಿಂದಿನ ಆ ಖುಷಿ ಖುಷಿ ದಿನಗಳ ಮೆಲುಕಿನಲ್ಲೇ ಇದ್ದೇನೆ.. ಮತ್ತೊ,ಮ್ಮೆ ಬಿ.ಸಿ.ರಾವ್ ಅವರ ಉಪನ್ಯಾಸ ಕೇಳಬೇಕು ಎಂದು ಮನಸ್ಸು ಹೇಳುತ್ತಿದೆ.

ಕಥೆ ಹೇಳುವ ಅಮ್ಮ..

ದಶಕಗಳ ಹಿಂದೆ ತಿರುಗಿ ಕಣ್ಣಾಯಿಸಿ. ಮನೆಯಲ್ಲಿ ಅಜ್ಜಿ ಇದ್ದರೆ ಕಥೆ ಹೇಳುತ್ತಿದ್ದರು. ಒಂದು ಕಾಲದಲ್ಲಿ ಅಜ್ಹಿ ಕತೆ ತುಂಬಾ ಫೇಮಸ್ಸು. ಅಷ್ಟೇ ಅಲ್ಲ, ಅಜ್ಜಿ ಕಥೆ ಹೇಳುವುದನ್ನು ಕೇಳಲೂ ಅಷ್ಟೇ ಹುಮ್ಮಸ್ಸು. ಆದರೆ ನಮ್ಮನೆಯಲ್ಲಿ ಅಮ್ಮ ಕತೆ ಹೇಳುತ್ತಿದ್ದ ನೆನಪು. ನಮ್ಮಮ್ಮನಿಗೆ ಮದುವೆ ಆದ ನಂತರ ಬೇರೆ ಮನೆ ಮಾಡಿಕೊಡಲಾಗಿತ್ತು. ಹಾಗಾಗಿ ದಿನಾ ಕತೆ ಹೇಳಕೆ ಅಜ್ಜಿ ನಮ್ಮ ಜೊತೆ ಇರುತ್ತಿರಲಿಲ್ಲ. ಅಮ್ಮನೇ ಕತೆ ಹೇಳುತ್ತಿದ್ದರು.

ಕಿಟ್ಟ-ಕಿಟ್ಟಿ ಕತೆ, ರಾಮ-ರಾವಣ ಕತೆ, ಪಾಂಡವರ ಕತೆ, ಮೊಲ-ಆಮೆಯ ಕತೆ, ಪುಣ್ಯಕೋಟಿಯ ಕತೆ. ಕೋಟಿ-ಚೆನ್ನಯ ಕಥೆ, ಗಣಪತಿ ಹುಟ್ಟಿದ ಕತೆ..ಹೀಗೆ ಎಷ್ಟೋ ಕತೆಗಳನ್ನು ಅಮ್ಮ ರಾತ್ರಿ ಹೊತ್ತು ನನ್ನ-ತಮ್ಮನ ತಲೆಗೆ ತುಂಬುತ್ತಿದ್ದರು.ಎಲ್ಲವೂ ಅಮ್ಮನಿಗೆ ನೀರು ಕುಡಿದಷ್ಟು ಸುಲಭ. ರಾತ್ರಿ ಹೊತ್ತು ನಾವು ನಿದ್ದೆ ಮಾಡಬೇಕಾದರೆ ಅಮ್ಮ ಕತೆ ಹೇಳಲೇಬೇಕು..ಅಮ್ಮ ಕತೆ ಹೇಳಕ್ಕೆ ಶುರು ಮಾಡಿದರೆ ಅದು ಎಕ್ಸ್ ಪ್ರೆಸ್ ಬಸ್ಸು ತರ..ನಿಲ್ಲಲು ತುಂಬಾ ಹೊತ್ತು ಬೇಕು.
ನಾನು , ತಮ್ಮ ಕಿವಿ-ಕಣ್ಣುಗಳನ್ನು ನೆಟ್ಟಗೆ ಮಾಡಿ ಅಮ್ಮನ ಬಾಯಿ ನೋಡುತ್ತಾ ಕುಳಿತರೆ, ಅಲ್ಲೇ ಬಾಕಿ. ಕಥೆ ಮುಗಿದ ಮೇಲೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಅಮ್ಮನಿಗೆ ತಲೆನೋವು ಬರಿಸುತ್ತಿದ್ದೇವು. ಆದರೆ ಅಮ್ಮನ ತಾಳ್ಮೆ ತಪ್ಪುತ್ತಿರಲಿಲ್ಲ..ತಾಳ್ಮೆಯಿಂದ ಕಥೆ ಹೇಳುತ್ತಿದ್ದರು. ನಾವು ಹಾಗೇ ಕೇಳುತ್ತಾ ನಿದ್ದೆ ಹೋಗುತ್ತಿದ್ದೇವು.

ಮರುದಿನ ರಾತ್ರಿ ಮತ್ತೆ ಕಥೆಯ ಆರಂಭ. ಆವಾಗ ಅಮ್ಮ ಹೇಳಿದ ಕಥೆಯನ್ನು ನಾವು ಮತ್ತೆ ಹೇಳುವುದು. ಆಗ ನನಗೂ-ತಮ್ಮಂಗೂ ಪೆಟ್ಟೇ ಪೆಟ್ಟು. ಆದರೂ ಅವನದೇ ಮೇಲುಗೈ..ಅವನೇ ಮೊದಲು ಕತೆ ಹೇಳುವುದು..ಆಮೇಲೆ ನನ್ನ ಸರದಿ. ಎಷ್ಟೋ ಬಾರಿ ನಮಗೆ ಕಥೆ ಅರ್ಥವಾಗದಿದ್ದರೆ ಅಮ್ಮ ಕಥಾಚಿತ್ರಗಳಿರುವ ಪುಸ್ತಕಗಳನ್ನು ತರುತ್ತಿದ್ದರು. ರಾಮಾಯಣ ಕಥೆ ಹೇಳಬೇಕಾದರೆ ಅಮ್ಮ ಕಥಾ ಪುಸ್ತಕಗಳನ್ನು ತಂದು ವಿವರಿಸುತ್ತಿದ್ದರು. ಅದರಲ್ಲಿ ರಾಮನ ವನವಾಸದಿಂದ ಹಿಡಿದು, ಸೀತಾ ಅಪಹರಣ, ರಾವಣನ ವಧೆ, ಹನುಮಂತ ಕಥೆ ಎಲ್ಲವನ್ನೂ ಘಟನಾವಳಿಗೆ ಸಂಬಂಧಪಟ್ಟಂತೆ ಚಿತ್ರಗಳಲ್ಲಿ ತೋರಿಸಲಾಗುತ್ತಿತ್ತು. ಆವಾಗ ಕಥೆ ಬೇಗನೆ ಅರ್ಥವಾಗುತ್ತಿತ್ತು. ಏಕೆಂದರೆ ಅಮ್ಮನಿಗೆ ಓದಲು ಬರುತ್ತಿರಲಿಲ್ಲ!

ನಮಗೆ ಅಮ್ಮ ಕಥೆ ಹೇಳುವುದು ಎಷ್ಟು ಅಭ್ಯಾಸವಾಗಿಬಿಟ್ಟಿತೆಂದರೆ ಅಮ್ಮ ಕಥೆ ಹೇಳದೆ ನಾವು ಮಲಗುತ್ತಿರಲೇ ಇಲ್ಲ. ಕಥೆಯಷ್ಟೇ ಅಲ್ಲ, ಅಮ್ಮ ಭಜನೆ, ಪಾಡ್ದನ, ಸಂದಿಗಳನ್ನೂ ಹೇಳಿಕೊಡುತ್ತಿದ್ದರು. ಅಮ್ಮ ಹೇಳುತ್ತಿದ್ದ "ಸೀತಾಪತಿ..ದಾಸರತೆ..ದಶರಥ ನಂದನ ದಯಾನಿಧಿ.." ಭಜನೆ ಈಗಲೂ ನೆನಪಿದೆ. ತುಂಬಾ ಚೆನ್ನಾಗಿ ಅಮ್ಮ ಹಾಡುತ್ತಿದುದನ್ನು ಕೇಳಿ, ನಮ್ಮ ಶಾಲೆಯಲ್ಲಿ ಶನಿವಾರ ನಡೆಯುವ ಭಜನೆಯಲ್ಲಿ ನಾನು ಹಾಡುತ್ತಿದ್ದೆ.

ಆದರೆ ಈಗ..
ಕೂತಲ್ಲಿ ಕೂರಲಾಗದ, ನಿಂತಲ್ಲಿ ನಿಲ್ಲಲಾಗದ ಕಥೆಹೇಳುವ ಅಜ್ಜಿ ಇದ್ದಾರೆಯೇ? ಗಡಿಬಿಡಿ ಕೆಲಸಗಳ ನಡುವೆ ಅಮ್ಮಂದಿರು ಕಥೆ ಹೇಳುತ್ತಾರೆಯೇ? ಹಲ್ಲು ಬರದ ಪುಟ್ಟ ಮಗುನೂ ಕಂಪ್ಯೂಟರ್ ಮೌಸ್ ಹಿಡಿದರೆ, ನಮ್ಮ ಮಕ್ಕಳು ಟಾಟಾ, ಅಂಬಾನಿ, ನಾರಾಯಣಮೂರ್ತಿ ಆಗ್ತಾರೆ ಅನೋ ಕನಸು ಹೆತ್ತವರದ್ದು. ಬೆಳಿಗೆದ್ದು ಬಾಟಲ್ ಹಾಲು, ಒಂದಿಷ್ಟು ಹರಕಲು ಬಿಸ್ಕೀಟು, ತಿಂಡಿ ಜೊತೆ ಬೇಬಿ ಸಿಟ್ಟಿಂಗ್ ನಲ್ಲಿ ಮಗುವನ್ನು ಹಾಕಿಬಿಟ್ರೆ ಮುಗೀತು..ಅಮ್ಮಂದಿರ ಜವಾಬ್ದಾರಿ. ಮಗು ಅಲ್ಲೇ ಆಟವಾಡುತ್ತಾ, ಹೇಳಿದ್ದನ್ನೇ ಹೇಳಿಕೊಡುವ ಟೀಚರ್ ಮುಖ ನೋಡುತ್ತಾ, ಸಂಜೆ ತನಕ ಆಟಿಕೆಗಳ ಜೊತೆ ಆಟವಾಡುತ್ತಾ..ಸಂಜೆ ಅಮ್ಮ ಆಫೀಸಿನಿಂದ ಬರುವ ಹೊತ್ತಿಗೆ ಮತ್ತೆ ಮನೆಗೆ ಬರುತ್ತೆ ಮಗು.
ಸಂಜೆ ಮನೆಗೆ ಬಂದ ಅಮ್ಮನಿಗೆ ರಾಶಿ ರಾಶಿ ಕೆಲಸಗಳು, ಅಷ್ಟೊತ್ತಿಗೆ ಗಂಡ ಆಫೀಸಿನಿಂದ ಬರ್ತಾನೆ..ಅವನಿಗೆ ಕುಳಿತಲ್ಲಿಗೇ ಎಲ್ಲ ರೆಡಿ ಮಾಡ್ಬೇಕು..ಆಮೇಲೆ ಊಟ ಮಾಡ್ಬೇಕು. ಊಟ ಆದ ಬಳಿಕ ಗಂಡ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುತ್ತಾ ಇರ್ತಾನೆ...ಹೆಂಡತಿನೂ ಅಲ್ಲೇ ಕುಳಿತುಬಿಟ್ಟರೆ ಮಾತು..ಮಾತು..ಮಗುವಿಗೆ ನಿದ್ದೆ ಬರುತ್ತದೆ..ಆಕಳಿಸುತ್ತೆ..ಅಲ್ಲೇ ಉಚ್ಚೆ ಒಯ್ಯುತ್ತೆ..ಕೊನೆಗೆ ನಿದ್ದೆ ಹೋಗುತ್ತೆ. ನಂತರ ತೊಟ್ಟಿಲಿಗೆ ಹಾಕಿದ್ರೆ ಮುಗೀತು..ಮಗು ತೆಪ್ಪಗೆ ನಿದ್ದೆ ಮಾಡುತ್ತೆ.
ಮರುದಿನ ಬೆಳಗಾಗುತ್ತದೆ..
ಅದೇ ಬೇಬಿಸಿಟ್ಟಿಂಗು, ಅದೇ ಆಟಿಕೆ, ಅದೇ ಹಾಲಿನ ಬಾಟಲು, ಅದೇ ಪ್ರಾಕ್ಟೀಸು...ಅದೇ ಡ್ಯಾನ್ಸು.....!!

Thursday, September 25, 2008

ಮಹಿಳೆಯರ ವಿಶೇಷ!!

ಇದು ಬಿಎಂಟಿಸಿ ವತಿಯಿಂದ ಮಹಿಳೆಯರಿಗಾಗಿ ಇರುವ ವಿಶೇಷ ಬಸ್ಸು! ಯಾರನ್ನು ಬೈಯಬೇಕು..ಚಾಲಕರನ್ನೋ? ನಿರ್ವಾಹಕರನ್ನೋ? ಬಸ್ಸಿಗೆ ಹತ್ತಿ ಕುಳಿತು ಮಹಿಳೆಯರಿಗೇ ಸೀಟೇ ಸಿಗದಂತೆ ಮಾಡಿದ ಪುರುಷರನ್ನೋ..ಅಥವಾ ಇದನ್ನೆಲ್ಲ ನೋಡಿಕೊಂಡು ಇರುವ ಬಿಎಂಟಿಸಿ ಮೇಲ್ವಿಚಾರಕರನ್ನೋ....ನೀವೇ ಹೇಳಿ!...
-ಚಿತ್ರಾ
(ಫಾರ್ವರ್ಡ್ ಫೋಟೋ)

Saturday, September 20, 2008

ಕೊನೆಗೂ ಅನಾಥರಾದ ಮಕ್ಕಳು...!!

ಅದೊಂದು ಪುಟ್ಟ ಸಂಸಾರ. ಇಬ್ಬರು ಮಕ್ಕಳು. ಆ ಮಕ್ಕಳಿಗೆ ತಂದೆ-ತಾಯಿ ಎರಡೂ ಅಮ್ಮನೇ. ಹೆಣ್ಣುಮಕ್ಕಳಿಗೆ ತಿಳಿವು ಬರುವ ಹೊತ್ತಿಗೆ ತಂದೆಯಾದವ ಎತ್ತಲೋ ಹೋಗಿದ್ದ! ತಂದೆಯ ಪ್ರೀತಿ, ಅಮ್ಮನ ಪ್ರೀತಿ ಎಲ್ಲವನ್ನೂ ಆ 'ಅಮ್ಮ ದೇವರು' ಧಾರೆಯೆರೆದಳು. ಬದುಕಿಗೊಂದು ರೂಪ ನೀಡಿದ್ದಳು. ಗಂಡ ಬಿಟ್ಟು ಹೋದ ಏಕೈಕ ಕಾರಣಕ್ಕಾಗಿ ಆ ಅಮ್ಮ ಇಡೀ ಕುಟುಂಬದಿಂದಲೇ ದೂರವಿರಬೇಕಾಯಿತು. ನೋವಿನಲೆಯಲ್ಲಿ ಕೊಚ್ಚಿಹೋಗುತ್ತಿದ್ದರೂ, ಆ ಅಮ್ಮನ ಮುಖದಲ್ಲಿ ಮಕ್ಕಳಿಗಾಗಿ ನಗು ತುಂಬಿತ್ತು. ಪ್ರೀತಿ ತುಂಬಿತ್ತು. ಮಕ್ಕಳ ಭವಿಷ್ಯದ ಕುರಿತು ಕನಸಿನ ಮಹಾಗೋಪುರವನ್ನೇ ಕಟ್ಟಿದ್ದಳು. ಬಡತನ ಬದುಕನ್ನೇ ಕಸಿದುಕೊಳ್ಳುತ್ತೇ ಎಂದಾಗ..ಭಿಕ್ಷೆಗೂ ಹಿಂಜರಿಯಲಿಲ್ಲ ಅಮ್ಮ! ಕಾಲಚಕ್ರದೊಂದಿಗೆ ಬಾಳರಥ ದೂಡುತ್ತಿದ್ದಳು.

ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಏಕೈಕ ಕಾರಣದಿಂದ ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದಳು. ತಾಯಿಮನೆಯೆಂಬ ಆಶ್ರಯ ಇದ್ದರೂ, ದಿಕ್ಕಿಲ್ಲದ ಮಕ್ಕಳಿಗಿರುವ ಅನಾಥಶ್ರಮದ ಮಕ್ಕಳಾದುವು ಆ ಇಬ್ಬರು ಹೆಣ್ಣು ಮಕ್ಕಳು. ಅದೇ ಅವರ ಮನೆಯಾಯಿತು. ಇತ್ತ ಮನೆಯಲ್ಲಿ ಅಮ್ಮನೊಬ್ಬಳೇ. ಗಂಡನಿದ್ದೂ ಇಲ್ಲದಾದ, ಮಕ್ಕಳೂ ಕಣ್ಣೆದುರಿಗಿಲ್ಲ. ಆ ಪುಟ್ಟ ಮಕ್ಕಳನ್ನು ಒಂಬತ್ತು ತಿಂಗಳು ಹೊತ್ತು ಸಲಹಿದ ಅಮ್ಮನಿಗೆ ಮಕ್ಕಳ ನೆನಪಿನಲ್ಲಿ ಬದುಕಲಾಗಲಿಲ್ಲ. ಮನೆಯೆಲ್ಲ ಬಿಟ್ಟು ಮಕ್ಕಳಿರುವ ಆಶ್ರಮದ ಹತ್ತಿರವೇ ಯಾವುದೋ ಒಂದು ಸಂಸ್ಥೆಯಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಳು. ಮಕ್ಕಳು ಹೈಸ್ಕೂಲು ಹಂತಕ್ಕೆ ತಲುಪಿದ್ದರು.

ಅದೊಂದು ದಿನ ಮಕ್ಕಳಲ್ಲಿ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಗೆ ವಾಪಾಸಾದಳು. ಅಂದೇ ರಾತ್ರಿ ಮನೆಯ ಹಿಂಬದಿಯಲ್ಲಿರುವ ಗೇರುಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು. ಹೋಗಿ ಬರುತ್ತೇನೆಂದು ಹೇಳಿದ ಅಮ್ಮ ಮತ್ತೆಂದೂ ಬರದ ಲೋಕಕ್ಕೆ ತೆರಳಿದಳು. ತಮ್ಮ ಬದುಕಿನ ಉಸಿರಾಗಿರುವ ಅಮ್ಮನೂ ತಬ್ಬಲಿಗಳನ್ನಾಗಿ ಮಾಡಿ ದೂರಾದಳು. ಕೊನೆಗೂ ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದು ಅನಾಥಾಲಯ!!

ಆಫೀಸ್ ನಲ್ಲಿ ಕುಳಿತಿದ್ದೆ. ನಾನು ಹೊರಡುವ ಸಮಯವೂ ಮೀರಿತ್ತು. ಮನೆಗೆ ಹೋಗಕ್ಕೆ ಮನಸ್ಸಾಗಲಿಲ್ಲ. ಕೆಲಸ ಮಾಡಕ್ಕೂ ಮನಸ್ಸಿಲ್ಲ. ಯಾವುದೋ ಒಂದು ಹಳೆಯ ಗೀತೆ ಕೇಳುತ್ತಿದ್ದೆ. ಮನಸ್ಸು ಯಾಕೋ ಐದು ವರ್ಷಗಳ ಹಿಂದೆ ನಮ್ಮೂರಲ್ಲಿ ನಡೆದ ಘಟನೆಯತ್ತ ಹೊರಳಿತ್ತು. ಯಾಕೋ ನನ್ನ ಕಣ್ಣೆದುರು ಓಡುತ್ತಿದ್ದ ಆ ಮಕ್ಕಳು, ಅಮ್ಮ ನೆನಪಾದರು. ಇತ್ತೀಚೆಗೆ ಊರಿಗೆ ಹೋದಾಗಲೂ ಆ ಮಕ್ಕಳನ್ನು ಕೇಳಿದೆ. ಯಾವುದೋ ಎನ್ ಜಿಒ ಅವರಿಗೆ ಆಶ್ರಯ ನೀಡಿ, ಕೆಲಸ ಕೊಡಿಸಿದೆ ಎಂದರು ಅಮ್ಮ. ಹೀಗಾಗಬಾರದಿತ್ತು..ಹೀಗಾಗಬಾರದು...!!

Wednesday, September 17, 2008

ನನ್ನವರು ಯಾರೂ ಇಲ್ಲ..ರೋಧಿಸುತ್ತಿತ್ತು ಆ ಜೀವ..!!

ಪ್ರಾಣ, ಬದುಕನ್ನು ಅಂಗೈಯಲ್ಲಿಯಲ್ಲಿಟ್ಟುಕೊಂಡು ಸಾಕಿದ, ಬಿಸಿಲನ್ನೇ ಬೆಳದಿಂಗಳಾಗಿಸಿದ ಅಮ್ಮ ಆತನಿಂದ ದೂರವಾಗಿ ಅದೆಷ್ಟೋ ದಶಕಗಳು ಸರಿದಿರಬಹುದು. ಆಗತಾನೇ ಹುಟ್ಟಿದ ಪುಟ್ಟ ಹಸುಗೂಸಿನ ಮುಖ ನೋಡಿ ಅಮ್ಮ ಹೆರಿಗೆ ನೋವನ್ನೂ ಮರೆತಿರಬಹುದು..ಆ ಮಗುವಿನ ನೋವಲ್ಲಿ ಆ ಅಮ್ಮ ಎಂಬ ದೇವರು ಅದೆಷ್ಟೋ ನೋವನ್ನು ಮರೆತಿರಬಹುದು. ಮಗ ದೊಡ್ಡವನಾದಾಗಿನ ಖುಷಿ.. ಹೀಗೇ ಏನೇನೋ ಯೋಚನೆಗಳು ನನ್ನ ತಲೆಯಲ್ಲಿ. ಆದರೆ!! ಆಸ್ಪತ್ರೆಯ ನಾರುವ ಶವಾಗಾರದಲ್ಲಿ ಮಲಗಿದ್ದ ಆ ಕೃಶಕಾಯಕ್ಕೆ ಇದ್ಯಾವುದೂ ನೆನಪಿದ್ದಂತೆ ಕಾಣಿಸುತ್ತಿರಲಿಲ್ಲ. ನನ್ನ ಮನಸ್ಸು 'ಬದುಕು ಇಷ್ಟೇನಾ..?" ಎಂದು ರೋಧಿಸುತ್ತಿತ್ತು.

ಕನಸುಗಳೇ ಬತ್ತಿ, ಗುಳಿಬಿದ್ದ ಕಂಗಳು, ಬಿಳಿಕೂದಲು, ಕೃಶಕಾಯ, ಶಕ್ತಿಹೀನ ಕೈ-ಕಾಲುಗಳು..ಆತನಿಗೆ ವಯಸ್ಸು 80 ಮೀರಿರಬಹುದು ಎಂಬುದನ್ನು ಸೂಚಿಸುತ್ತಿದ್ದವು. ಅದೇ ಜೀವನದಲ್ಲಿ ಮೊದಲ ಬಾರಿಗೆ ಶವಾಗಾರಕ್ಕೆ ಹೊಕ್ಕು ಶವಗಳನ್ನು ನೋಡಿದ್ದು ನನ್ನ ಕನಸು ತುಂಬಿರುವ ಕಣ್ಣುಗಳು. ಹೃದಯದಲ್ಲಿ ಒಂದಿಷ್ಟು ಭಾವಗಳು, ಜಗವನ್ನರಿತ ಮನ, ಯೋಚನೆಯ ಲಹರಿ ಹತ್ತಿರುವ ನನ್ನ ಮಿದುಳು..ಅಲ್ಲಿ ನಿಶ್ಯಬ್ಧವಾಗಿ ಮಲಗಿರುವ ಕೃಶಕಾಯದತ್ತ ದೃಷ್ಟಿ ನೆಟ್ಟಿದ್ದವು. ಆತನಿಗೆ ಕಣ್ಣುಗಳಿದ್ದವು, ಆದರೆ ಕನಸುಗಳಿದ್ದಂತೆ ಕಂಡುಬರುತ್ತಿರಲಿಲ್ಲ. ಹೃದಯ ಇತ್ತೇನೋ..ಲಬ್ ಡಬ್ ಬಡಿತ ಕೇಳಿಬರುತ್ತಿರಲಿಲ್ಲ. ನಾನು ನಗುವನ್ನು ಬಲ್ಲವಳಾಗಿದ್ದೆ..ಆದರೆ ಆತನ ತುಟಿ ನಗುತ್ತಿರಲಿಲ್ಲ..ಪ್ರಪಂಚವನ್ನೇ ಮರೆತು ಮಲಗಿತ್ತು ಆ ದೇಹ..ಯಾರಿಗೂ ಬೇಡವಾದವನಂತೆ!

ನನ್ನ ಹೃದಯ ಚಿರ್ರನೆ ಚೀರಿತ್ತು..ಮತ್ತೆ ಮತ್ತೆ ಬದುಕು ಇಷ್ಟೇನಾ...ಮನ ರೋಧಿಸುತ್ತಿತ್ತು. ಮನುಷ್ಯನ ಸಂಬಂಧಗಳು, ಭಾವನೆಗಳು, ಕನಸು-ಕಲ್ಪನೆಗಳಿಗೆ ಮೂರ್ತರೂಪವನ್ನಿಟ್ಟಂತೆ ಕಾಣುತ್ತಿದ್ದ ಆತ ಅಂದು ಇವೆಲ್ಲವುಗಳಿಂದ ದೂರವಾಗಿ, ಯಾರಿಗೂ ಬೇಡವಾದ ನಿಷ್ಪ್ರಯೋಜಕ ವ್ಯಕ್ತಿಯಂತೆ ಶವಾಗರದಲ್ಲಿ ಮಲಗಿದ್ದ. ಪಕ್ಕದಲ್ಲೇ ಆತನ ಸಂಬಂಧಿಕರ ಒಂದು ಗುಂಪು..ಕೆಲವರ ಕಣ್ಣುಗಳು ಅಳುತ್ತಿದ್ದವು..ಇನ್ನು ಕೆಲವರ ಹೃದಯ ರೋಧಿಸುತ್ತಿತ್ತು. ನನ್ನ ಕಣ್ಣು-ಕಿವಿಗಳು ಅವರನ್ನೇ ನೋಡುತ್ತಿದ್ದವು. ಆತನ ಆಸ್ತಿ ನಾಲ್ಕು ಎಕರೆ..ಐದು ಜನರು ಹೆಣ್ಣುಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ದೊಡ್ಡ ಮಗಳಿಗೆ 50 ವರ್ಷ ದಾಟಿರಬಹುದು..ಸತ್ತು ಮಲಗಿದ್ದ ವ್ಯಕ್ತಿಯ ಆಸ್ತಿ, ಹಂಚಿಕೆಯ ಮಾತುಗಳು ಶವಾಗಾರದ ಪಕ್ಕದಲ್ಲಿದ್ದ ಪಾಳುಕಟ್ಟೆಯ ಮೇಲೆ ಚರ್ಚೆಯಾಗುತ್ತಿದ್ದವು...ಇವೆಲ್ಲವೂ ನನ್ನ ಕಿವಿಗೆ ಬೀಳುತ್ತಲೇ ಇದ್ದವು....ಮನಸ್ಸು ಏನೇನೋ ಅಂದುಕೊಂಡಿತ್ತು. ಭೂತ-ವರ್ತಮಾನ-ಭವಿಷ್ಯದ ಮೂರು ಕಾಲಗಳನ್ನು ತೂಗಿನೋಡಿತ್ತು ನನ್ನ ಎಳೆಮನಸ್ಸು. ಅಷ್ಟೊತ್ತಿಗೆ ಕಿರಿಯ ಮಗಳು ಬಂದಳು..ಬರುವಾಗ ತಡವಾಗಿತ್ತು. ಅದೇನು ಪಾಲೋ ಅಲ್ಲಿದ್ದವರು ಮೊದಲೇ ಮಾತಾಡಿಕೊಂಡಿದ್ದರು. ಹಾಗಾಗಿ ಕಿರಿಮಗಳ ಸಿಟ್ಟು ನೆತ್ತಿಗೇರಿತ್ತು..ಆಮೇಲೆ ಏನೇನೋ ಸಮಾಧಾನದ ಮಾತುಗಳು..ಆದರೆ ಕೃಶಕಾಯ ಇದೆಲ್ಲವನ್ನೂ ಕೇಳಿಸಿಕೊಳ್ಳುವನೋ ಎಂದು ಅತ್ತ ತಿರುಗಿದೆ..ಆದರೆ ಆತನ ಕಣ್ಣುರೆಪ್ಪೆಗಳೂ ಮಿಸುಕಾಡುತ್ತಿರಲಿಲ್ಲ...ತಣ್ಣಗೆ ಮಲಗಿದ್ದ...ಯಾರಿಗೂ ಬೇಡದವನಂತೆ! ಆತ ಹುಟ್ಟಿದಾಗ..ಗಂಡುಮಗುವೆಂದು ಆರತಿ ಬೆಳಗಿದವರೂ ಅಲ್ಲಿ ಯಾರೂ ಇದ್ದಂತೆ ಕಂಡುಬರಲಿಲ್ಲ..ನನ್ನ ಕನಸುತುಂಬಿರುವ ಕಣ್ಣುಗಳಿಗೆ!! ನನ್ನವರು ಯಾರೂ ಇಲ್ಲ...ರೋಧಿಸುತ್ತಿತ್ತು ಆ ಜೀವ...!

Saturday, September 13, 2008

ಮಿಸ್ಡ್ ಕಾಲ್ ಕಿರಿಕಿರಿ!

ನಿಂಗೆ ತಾಳ್ಮೆಯಿಲ್ಲ.ಒಮ್ಮೊಮ್ಮೆ ಮುಖಕ್ಕೆ ರಾಚಿದ ಹಾಗೇ ಮಾತಾಡ್ತೀಯಾ..ಭವಿಷ್ಯದಲ್ಲಿ ಹಿಂಗಾದ್ರೆ ಕಷ್ಟ..ಏನ್ ಮಾತಾಡ್ತಿ ಅನ್ನೋದು ನಿಂಗೇ ಗೊತ್ತಿಲ್ಲ. ಮುಂದೆ ಮದುವೆಯಾದ ಗಂಡ ಹೀಗೆ ಸಿಡ ಸಿಡ ಅಂದ್ರೆ ಸಹಿಸ್ತಾನಾ? ಇಂಥ ಪಾಠಗಳು ನಂಗೆ ತೀರ ಸಾಮಾನ್ಯ. ಮನೆಯಲ್ಲಿ, ಆಫೀಸಿನಲ್ಲಿ ನಂಗೆ ತಾಳ್ಮೆಯ ಪಾಠ ಹೇಳಿದವ್ರು ಅದೆಷ್ಟೋ ಮಂದಿ. ಹೌದು! ಕೆಲವೊಮ್ಮೆ ತಾಳ್ಮೆ ನನ್ ಕೈಯಲ್ಲಿ ಇರಲ್ಲ..ಏನೇನೋ ಅಂತೀನಿ..ಎದುರಿಗಿದ್ದವರು ಯಾರೆನ್ನುವುದನ್ನೂ ನೋಡದೆ! ಆದ್ರೆ..ಮತ್ತೆ ಕ್ಷಮೆ ಕೇಳ್ತೀನಿ. ನಿನ್ನೆ ಇಂಥದ್ದೇ ಒಂದು ಆವಾಂತರ ನಡೆಯಿತು.

ನಿನ್ನೆ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆ. ಬೆಳಿಗ್ಗೆ ಹೊಟ್ಟೆಗೇನೂ ತಿಂದಿರಲಿಲ್ಲ. ಆಫೀಸಿಗೆ ಬಂದು ತಿನ್ನೋಣ ಅಂದ್ರೆ ಮೀಟಿಂಗ್ ಇತ್ತು..ಮೀಟಿಂಗು ಮುಗಿದಾಗ ಮಧ್ಯಾಹ್ನ ಆಗಿತ್ತು. ಅಗ ಪತ್ರಿಕಾಗೋಷ್ಟೀಗೆ ಹೋಗಬೇಕಾಯಿತು. ಹೊರಟೆ. ಯಾವುದೇ ರಾಜಕೀಯ ಕಾರ್ಯಕ್ರಮಗಳಾಗಿರಲಿ ಟ್ರಾಫಿಕ್ ಜಾಮ್ ಕಟ್ಟಿಟ್ಟ ಬುತ್ತಿ. ಆಟೋದಲ್ಲಿ ಹೋದ್ರೂ ಸಮಯ ಮೀರಿತ್ತು. ಆದರೆ ಬೆಳಿಗ್ಗೆ ಮೀಟಿಂಗ್ ನಲ್ಲಿ ಕೂತಲ್ಲಿಂದ ಒಂದೇ ಸಮನೆ ಮಿಸ್ಡ್ ಕಾಲ್! ವಾಪಸ್ ಕಾಲ್ ಮಾಡೋಣಂದ್ರೆ ಟೈಮಿಲ್ಲ. ಬಂತು..ಒಂದೆರಡಲ್ಲ..50ಕ್ಕಿಂತಲೂ ಹೆಚ್ಚು ಮಿಸ್ಡ್ ಕಾಲ್. ಪ್ರೆಸ್ ಮೀಟ್ ಮುಗೀತು..ಊಟ ಮಾಡಿದೆ..ಆಫೀಸಿಗೆ ಬಂದೆ. ಆಗಾಗ ಮಿಸ್ಡ್ ಕಾಲ್ ದು ಕಿರಿಕಿರಿ. ಇವನಿಗೆ ಒಂದು ಗತಿ ಕಾಣಿಸ್ಬೇಕು ಅಂದುಕೊಂಡು ಆಫಿಸಿಗೆ ಬಂದು ಫೋನು ಮಾಡಿದ್ರೆ ಆ ಮನುಷ್ಯ ಫೋನು ತೆಗೀತಾ ಇಲ್ಲ. ನಂಗೆ ಸಹಿಸಿಕೊಳ್ಳಕೇ ಆಗಿಲ್ಲ..ಏನೇನೋ ಬೈಬೇಕಂದ್ರೆ ಆತ ಫೋನು ತೆಗೀತಿಲ್ಲ..ಎಂಥ ಮಾಡೋದು? ಅದೇ ಸಿಟ್ಟಲ್ಲಿ ಮನೆಗೆ ಹೋಗಿ ತಮ್ಮನ ಮೊಬೈಲಿನಿಂದ ಕರೆ ಮಾಡಿದ್ದೆ. ಪುಣ್ಯಾತ್ಮ ಫೋನು ಎತ್ತಿದ "ಚಿತ್ರಾನಾ...?" ಅಂದಾಗ "ಹೌದು, ನಿಂಗೆ ಅರ್ಜೆಂಟಿದ್ರೆ ಫೋನ್ ಮಾಡ್ಬೇಕಿತ್ತು. ಮಿಸ್ಡ್ ಕಾಲ್ ಏಕೆ ಕೊಡ್ತೀಯಾ?" ಅಂತೇಳಿ ಏಕವಚನದಲ್ಲಿ ಎರ್ರಾಬಿರ್ರೀ ಬೈದೆ. ಆವಾಗ ಫೋನ್ ಕಟ್! ತಡೆದುಕೊಳ್ಳದೆ "ಬೈದು ಮೆಸೇಜ್ ಕಳಿಸಿದೆ..". ಆವಾಗ ಆ ಕಡೆಯಿಂದ ಮೆಸೇಜ್ "ನಾನು ಬಾವ..." ಅಂತೇಳಿ ಹೆಸರು ಬರೆದಿತ್ತು. ನಂಗೆ ಶಾಕ್! ಬಾವ..ಅವರಿಗೆ ಬೈಯೋದು ಬಿಡಿ..ಅವರ ಜೊತೆ ಸರಿಯಾಗಿ ಮಾತೇ ಆಡದವಳು ನಾನು. ಮತ್ತೆ ಫೊನಾಯಿಸಿದೆ,,ಕ್ಷಮೆ ಕೇಳೋಣವೆಂದು..ಆದರೆ ಅವರು ಫೋನೇ ಎತ್ತಿಲ್ಲ.. ಇನ್ನೂ ಬಾವ ಫೋನೇ ಎತ್ತಿಲ್ಲ..ಬಹುಶಃ ನನ್ ಥರನೇ ಅವರಿಗೂ ತಾಳ್ಮೆ ಕೆಟ್ಟಿರಬೇಕು.

ಆದ್ರೆ..ನನ್ ಒಂದೇ ಒಂದು ಮಾತು..
ಯಾರೇ ಆಗಿರಲಿ..ಮಿಸ್ ಕಾಲ್ಡ್ ಕೊಡಬೇಕು..ಅದ್ಕೂ ಒಂದು ಮಿತಿಯಿದೆ, ರೀತಿಯಿದೆ. ಯಾರೋ ಯಾವುದೇ ಟೆನ್ಯ್ಷನ್ ನಲ್ಲಿರ್ತಾರೆ..ಅವರಿಗೆ ಪದೇ ಪದೇ ಮಿಸ್ಡ್ ಕಾಲ್ ಕೊಟ್ಟಾಗ ಕಿರಿಕಿರಿ ಎನಿಸುವುದು ಸಹಜ. ದಯವಿಟ್ಟು..ಒಬ್ಬರಿಗೆ ಕಿರಿಕಿರಿ ಎನಿಸುವಷ್ಟು ಮಿಸ್ಡ್ ಕಾಲ್ ನ್ನೂ ಯಾರಿಗೂ ಯಾರೂ ಕೊಡಬಾರದು. ನನ್ ತಮ್ಮನೇ ಆಗಿರಲಿ..ಈ ರೀತಿ ಕಿರಿಕಿರಿ ಮಾಡಿದರೆ ಸರಿ ಬೈದು ಫೋನ್ ಇಡ್ತೀನಿ..ನಂಗಿದು ಇಷ್ಟ ಆಗಲ್ಲ..ಅಷ್ಟೂ ಅರ್ಜೆಂಟಾಗಿದ್ರೆ ಫೋನ್ ಮಾಡಿ ಮಾತಾಡಬೇಕು..ಅದು ಬಿಟ್ಟು ತೊಂದರೆ ಕೊಡಬಾರದು.

Thursday, September 4, 2008

ಬೇಕೇ ಬೇಕಾ? 'ಮದ್ಯ' ರಾತ್ರಿ..?

'ಇದೇನ ಸಭ್ಯತೆ? ಇದೇನ ಸಂಸ್ಕೃತಿ?
ಇದೇನ ಇಂದು ಸತ್ಯತೆ? ಇದೇನ ನಮ್ಮ ಜಾಗೃತಿ?'
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ.

ರಾಜ್‌ಕುಮಾರ್, ಕಲ್ಪನಾ ಅಭಿನಯದ 'ಮಣ್ಣಿನ ಮಗ' ಚಿತ್ರಕ್ಕಾಗಿ 'ಗೀತಪ್ರಿಯ' ಬರೆದ ಹಾಡು ಅದೇಕೋ ತಲೆಯಲ್ಲಿ ಗುನುಗುಟ್ಟುತ್ತಿದೆ. ಮೊನ್ನೆ ಮೊನ್ನೆ ಗಿರೀಶ್ ಕಾರ್ನಾಡ್ ಬಿದ್ದಪ್ಪ ಜೊತೆ ಬೀದಿಗಿಳಿದು, ಬೆಂಗಳೂರು ಇಮೇಜ್ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹರಡಿಸುವ ಉದ್ದೇಶದಿಂದ ಬೇಕೇ ಬೇಕು..ಬೆಂಗಳೂರು ಜನರು ರಾತ್ರಿಯಡೀ ಸಂಗೀತ ಪಾರ್ಟಿಗಳಲ್ಲಿ ಮೋಜು-ಮಸ್ತಿ ಮಾಡಲು ಅವಕಾಶ ಕೊಡಿ ಎಂದು ಪ್ರತಿಭಟನೆ ಮಾಡಿದ್ದಾರೆ. ಆದಾದ ಬಳಿಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬೀದಿಗಿಳಿದಿಲ್ಲ..ನೇರವಾಗಿ ಮುಖ್ಯಮಂತ್ರಿಗಳಿಗೇ ಪತ್ರ ಬರೆದಿದ್ದಾರಂತೆ. ಮುಂಬೈನಲ್ಲಿ ಮಧ್ಯರಾತ್ರಿ 1 ಗಂಟೆ ಮತ್ತು ದೆಹಲಿಯಲ್ಲಿ 12 ಗಂಟೆ ತನಕ ವಿನೋದಕ್ಕೆ ಅವಕಾಶ ಮಾಡಿಕೊಡುತ್ತಾರೆ. ನಾವೇನು ಕಡಿಮೆ? ನಮಗೂ ಅವಕಾಶ ಕೊಡಿ..ಮನುಷ್ಯ ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು ಎನ್ನುವ ಅರ್ಥದಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರಂತೆ. ಇದೀಗ ಕಿಂಗ್ ಫಿಶರ್ ದೊರೆ ವಿಜಯ್ ಮಲ್ಯ ಅವರು ಪತ್ರ ಬರೆದು ಸಮಯ ವ್ಯರ್ಥ ಮಾಡುವ ಬದಲು ಪೊಲೀಸರ ಕ್ರ,ಮದ ವಿರುದ್ಧ ಧರಣೆ ಕೂರುತ್ತೇನೆ ಎಂದಿದ್ದಾರೆ. 'ಬೆಂಗಳೂರು ಕಾಸ್ಮೋಪಾಲಿಟನ್ ನಗರ, ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ನೈಟ್ ಕ್ಲಬ್ ಮತ್ತು ಡಿಸ್ಕೋಥೆಕ್ ಗಳ ತಡರಾತ್ರಿ ಕಾರ್ಯನಿರ್ವಹಿಸಲು ತಡೆ ಹೇರಿರುವ ಪೊಲೀಸರ ಕ್ರಮದ ವಿರುದ್ಧ ಧರಣಿ ಕೂರುತ್ತೇನೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಬಿಟ್ಟಿದ್ದಾರೆ. ಇನ್ನೂ ಧರಣಿಗೆ ದಿನಾಂಕ ನಿಗದಿಯಾಗಿಲ್ಲ. ಏನ್ ಸ್ವಾಮಿ? ಈ 'ಮದ್ಯ' ರಾತ್ರಿಯ ವಿಷಯವನ್ನಿಟ್ಟುಕೊಂಡು ಎಷ್ಟು ಜನರು ಪ್ರತಿಭಟನೆ ಮಾಡ್ತಾರೆ? ಮನೆಯಲ್ಲಿ ತೆಪ್ಪಗೆ ಕುಳಿತವರೂ ಕೂಡ ಎದ್ದು ಬಂದು ಬೇಕೇ ಬೇಕು 'ಮದ್ಯ' ರಾತ್ರಿ ಎನ್ನುತ್ತಿದ್ದಾರೆ. ಏನ್ ಕಾಲ ಬಂತು ಸ್ವಾಮಿ? ಇದಕ್ಕೆಲ್ಲ ಕಾರಣ ಬೆಂಗಳೂರು ನಂ. 1. ಯಾವುದರಲ್ಲಿ..? ಐಟಿ-ಬಿಟಿಯಲ್ಲೇ? ಆಗಿರಬಹುದು ಜೊತೆಗೆ ಭ್ರಷ್ಟಾಚಾರ, ಭಯೋತ್ಪಾದನೆ, ಅತ್ಯಾಚಾರ. ಕೊಲೆ, ದರೋಡೆ, ಅಪಘಾತ, ಅಪರಾಧ, ಆತ್ಮಹತ್ಯೆ..ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಐಟಿ-ಬಿಟಿ ಬಿಟ್ಟರೆ ಈ ಪಟ್ಟಿಯಲ್ಲಿರುವ ಯಾವುದನ್ನೂ ಯಾವ ಮಹಾನುಭಾವರು ಪ್ರಸ್ತಾಪಿಸುವುದಿಲ್ಲ.

ಇತ್ತೀಚೆಗೆ ನವದೆಹಲಿಯ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ನಡೆಸಿದ್ದ ಸಮೀಕ್ಷೆಯ ಪ್ರಕಾರ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಗಳ 'ಲಂಚವತಾರ'ಗಳ ಜೊತೆ ಕರ್ನಾಟಕವೂ ನಂ. 1 ಆಗಿದೆ. 2005ರಲ್ಲಿ ಭ್ರಷ್ಟಾಚಾರದಲ್ಲಿ 20 ರಾಷ್ಟ್ರಗಳ ಪೈಕಿ ಕರ್ನಾಟಕ 17ನೇ ಸ್ಥಾನ ಪಡೆದರೆ, ಈಗ ಅತೀ ಭ್ರಷ್ಟ ರಾಷ್ಟ್ರಗಳ ಪೈಕಿ ಕನ್ನಡ ನಾಡೂ ಒಂದು. ಮಧ್ಯರಾತ್ರಿ ವರೆಗೂ ಮೋಜು-ಮಸ್ತಿ ಬೇಕೆಂದು ಧರಣಿ ಕೂರುವವರು 'ಅಯ್ಯೋ ನಮ್ ಕರ್ನಾಟಕ ಕೆಟ್ಟು ಹೋಯ್ತಪ್ಪ..ಭ್ರಷ್ಟಾಚಾರ, ಭಯೋತ್ಪಾದನೆಯನ್ನು ತೊಲಗಿಸಬೇಕು. ಇದಕ್ಕಾಗಿ ಎಂ.ಜಿ. ರೋಡ್ ನ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಅಮರಣಾಂತ ಉಪವಾಸ ಕೂರುತ್ತೇನೆ' ಎಂದವರು ಯಾರಾದ್ರೂ ಇದ್ದರೆಯೇ? ಇದ್ದರೆ ಹೇಳಿ. ಏನಪ್ಪಾ ಈ ಹುಡ್ಗಿ..ಸಂಸ್ಕೃತಿ, ಸಭ್ಯತೆ, ಸತ್ಯ, ಜಾಗೃತಿ ಬಗ್ಗೆ ಮಾತನಾಡುತ್ತಿದ್ದಾಳೆ ಅನಿಸ್ತಾ..?! ಹೌದು! ಬೆಂಗಳೂರು ಬೆಂಗಳೂರಾಗಿ ಉಳಿದಿಲ್ಲ..ಆದರೆ ಇಂಥ ವಿಚಾರಕ್ಕೆಲ್ಲಾ ಧರಣಿ ಕೂರುವ "ಧಣಿ'ಗಳನ್ನು ಕಂಡಾಗ, ಒಳ್ಳೆಯ ವಿಚಾರಕ್ಕೆ ಬೀದಿಗೆ ಬರಲಿ ಎನ್ನುವುದು ತಪ್ಪಲ್ಲವಲ್ಲ. ಇರ್ಲಿ ಬೆಂಗಳೂರಿನಲ್ಲಿ ಹಗಲು-ರಾತ್ರಿ ಎರಡೂ ಒಂದೇ..ಮಧ್ಯರಾತ್ರಿ ವರೆಗೂ ಸಂಗೀತ ಪಾರ್ಟಿಗಳಿಗೆ ಅವಕಾಶ ಕೊಡಲಿ..ಆದ್ರೆ ಈ ಸಂಗೀತದೊಂದಿಗೆ ಬಾಟಲಿಗಳೂ ಸರಬರಾಜಾಗುತ್ತವೆ...ಮಾದಕ ವಸ್ತುಗಳು ಮಾದಕತೆಗೆ ಇನ್ನಷ್ಟು ಹುರುಪು ತುಂಬುತ್ತವೆ. ತಡರಾತ್ರಿ ವರೆಗೂ ಸಂಗೀತ ಕೇಳಿದವರು ಅಡ್ಡಾದಿಡ್ಡಿಯಾಗಿ ವಾಯಹನ ಚಲಾಯಿಸಿ..ಯಾವುದೋ ಕರೆಂಟು ಕಂಬಕ್ಕೋ ಅಥವಾ ಇನ್ಯಾವುದೋ ವಾಹನಕ್ಕೋ ಢಿಕ್ಕಿ ಹೊಡಿತಾರೇ..ಇವರನ್ನು ನೋಡಿಕೊಳ್ಳೋರು ಯಾರು ಸ್ವಾಮಿ? ಪಾಪ ಪೊಲೀಸರಿಗೂ ನಿದ್ದೆ ಯಿಲ್ಲ..ಇಂಥದ್ದೆಕ್ಕೆಲ್ಲ ಅವಕಾಶ ನೀಡಬಾರದು ಎನ್ನುವುದೇ ಸಭ್ಯ ನಾಗರಿಕರ ಮತ್ತು ಪೊಲೀಸರ ಇಚ್ಚೆಯಷ್ಟೇ, ರಾತ್ರಿ ಪಬ್. ಬಾರ್, ಡಿಸ್ಕೋಥೆಕ್ ಗಳು ಕಾರ್ಯನಿರ್ವಹಿಸಿದರೆ ನಮ್ಮ ಇಮೇಜು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುವುದಲ್ಲ. ಯಾವುದೇ ಕಟ್ಟುನಿಟ್ಟಿನ ಕಾನೂನು ಇಲ್ಲದ ನಮ್ಮ ರಾಜ್ಯದ ಮಾನ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆಯಷ್ಟೇ.

ಗುರುವಿನ ಮಾತು ನೆನಪಲ್ಲ, ನಿತ್ಯ ಬದುಕು!

ಶಿಕ್ಷಕರ ದಿನಾಚರಣೆ ಮತ್ತೆ ಬಂದಿದೆ. ನಾಳೆ ಬೆಳಿಗೆದ್ದು ನನ್ನ ಪ್ರೀತಿಯ ಗುರುಗಳಿಗೆ ಶುಭಾಶಯ ಹೇಳ್ಬೇಕು. ಏನೋ ಒಂಥರಾ ಸಂಭ್ರಮ. ಶಿಕ್ಷಕರ ದಿನಾಚರಣೆ ಬಂದ ತಕ್ಷಣ ನನಗೆ ನೆನಪಾಗುವುದು ನಾನು ಓದಿದ ಪ್ರೀತಿಯ ಹೈಸ್ಕೂಲು ಕಾಣಿಯೂರು. ಯಾವುದೋ ಹಾಸ್ಟೇಲಿಗೆ ಹೋಗಬೇಕಾದವಳು ಕಾಣಿಯೂರು ಹೈಸ್ಕೂಲಿಗೆ ಸೇರಿದ್ದೆ. ನನಗೆ ಚಿಕ್ಕವಯಸ್ಸಿನಿಂದಲೂ ತುಂಬಾ ಭಯ. ಶಾಲೆಗೆ ಹೋದರೂ ಅಮ್ಮ ಜೊತೆಗೆ ಬರಬೇಕು..ಸಂಜೆ ಕರೆದುಕೊಂಡು ಬರಲೂ ಅಮ್ಮ ಬೇಕು. ಎಷ್ಟು ಅಂದ್ರೆ ಕ್ಲಾಸಲ್ಲಿ ಕುಳಿತುಕೊಂಡು ಅಮ್ಮನಿಗೆ ಯಾರಾದ್ರೂ ಏನಾದ್ರೂ ಮಾಡಿಯಾರು ಎಂಬ ಭಯ. ಆವಾಗನೇ ನಮ್ಮಪ್ಪ ನಮ್ಮ ಬಿಟ್ಟು ಹೋಗಿದ್ರು. ಅಮ್ಮ-ಅಪ್ಪ ಎರಡೂ ಅಮ್ಮನೇ. ಆವಾಗ ಏಳನೇ ತರಗತಿ ಮುಗಿಸಿದ ತಕ್ಷಣ ಅಮ್ಮ ನನ್ನನ್ನು ಪುತ್ತೂರಿನ ಹಾಸ್ಟೇಲೊಂದಕ್ಕೆ ಸೇರಿಸಿದ್ದರು. ಆದರೆ ಫೀಸು ಕೊಟ್ಟು, ಹಾಸ್ಟೇಲಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತೆಗೆದುಕೊಟ್ಟು, ಬೇಕಾದ ಯುನಿಫಾರ್ಮ ಡ್ರೆಸ್ಸು ಕೂಡ ತೆಗೆದುಕೊಟ್ಟಿದ್ದರು. ತುಂಬಾ ಖರ್ಚು ಮಾಡಿದ್ದರು ಅಮ್ಮ. ಆದರೆ ಶಾಲೆ ಆರಂಭದ ದಿನ ಹಾಸ್ಟೇಲಿಗೆ ಹೋಗು ಅಂದ್ರೆ, ನಾನು ಒಪ್ಪಲೇ ಇಲ್ಲ. ಅಳುವುದು ಬಿಟ್ಟರೆ ಬೇರೇನಿಲ್ಲ ಉತ್ತರ. ಒಟ್ಟಾರೆ ಅಮ್ಮ ಜೊತೆಗಿರಬ್ಬೇಕು..ನನ್ನ ಕಣ್ಣೀರು ನೋಡಿ ಅಮ್ಮ 'ಇಷ್ಟೆಲ್ಲಾ ಖರ್ಚು ಮಾಡಿದೆ..ನಿಲ್ಲಮ್ಮಾ..ಒಂದು ವರ್ಷ ನಿಲ್ಲು' ಅಂದ್ರೂ ನಾ ಒಪ್ಪಿಲ್ಲ. ಮತ್ತೇನು? ಲಗೇಜಿನೊಂದಿಗೆ ಮತ್ತೆ ಅಮ್ಮನ ಜೊತೆ ವಾಪಾಸಾದೆ. ಅದು ನಡು ಮಧ್ಯಾಹ್ನ. ಆವಾಗ ಕಾಣಿಯೂರಿನಲ್ಲಿ ಊಟಕ್ಕೆಂದು ಬಸ್ಸಿಂದ ಇಳಿದೆವು. ಕಾಣಿಯೂರಿನ ಪರಿಮಳ ಹೊಟೇಲ್ ನಲ್ಲಿ ಊಟಕ್ಕೆ ಕುಳಿತಿದ್ದೇವು. ನನ್ನ ಮುಖವೆಲ್ಲಾ ಅತ್ತು ಅತ್ತು ಚೀಣೀಕಾಯಿ ಥರ ಆಗಿತ್ತು. ಮತ್ತೂ ಅಳುತ್ತಾನೇ ಇತ್ತು. ಅಮ್ಮನ ಮನಸೇ ದುಃಖದ ಕಡಲಾಗಿದ್ದರೂ ತೋರಿಸಿಕೊಳ್ಳಲಿಲ್ಲ ಅಮ್ಮ. ಹಾಗೇ ಊಟ ಮಾಡುತ್ತಿರುವಾಗ ನಮ್ಮೂರ ಸೊಸೈಟಿಯ ಅಂಕಲ್ ಒಬ್ರು ಬಂದ್ರು 'ಏನಾಯ್ತು..ಏಕೆ ಮಗಳು ಅಳ್ತಾ ಇದ್ದಾಳೆ?'ಅಂದಾಗ ಅಮ್ಮ ಎಲ್ಲಾ ಕಥೆ ಹೇಳಿದ್ದರು. ಆವಾಗ ಏಳನೇ ತರಗತಿಯಲ್ಲಿ ಪುತ್ತೂರು ತಾಲ್ಲೂಕಿನಲ್ಲಿ ಡಿಸ್ಟಿಂಕ್ಷನ್ ಪಡೆದ ಕೆಲವರಲ್ಲಿ ನಾನೂ ಒಬ್ಬಳು. ಅಷ್ಟೇ ಅಲ್ಲ ಕಾಣಿಯೂರು ಹೈಸ್ಕೂಲಿಗೆ ಆವರೆಗೆ ಅಡ್ಮಿಷನ್ ಪಡೆದ ಯಾರಿಗೂ ನನ್ನಷ್ಟು ಅಂಕ ಇರಲಿಲ್ಲ. ಸೊಸೈಟಿ ಅಂಕಲ್ ಹೇಳಿದ್ರು, ಈಗಾಗಲೇ ಸೀಟುಗಳು ಭರ್ತಿಯಾಗಿವೆ..ಕೇಳಿನೋಡೋಣ ..ಒಳ್ಳೆ ಅಂಕಗಳಿವೆ..ಅಂತೇಳಿ ಅಲ್ಲಿಂದಲೇ ಲಗೇಜು ಸಹಿತ ಕಾಣಿಯೂರು ಹೈಸ್ಕೂಲಿಗೆ ಕರೆದುಕೊಂಡು ಹೋದರು. ಅಲ್ಲಿಯ ಪ್ರಾಂಶುಪಾಲರಿಗಂತೂ ಖುಷಿಯೇ ಖುಷಿಯೇ. ನನಗೆ ಫೀಜುನಲ್ಲೂ ತುಂಬಾ ಕಡಿಮೆ ಮಾಡಿ, ಅಡ್ಮಿಷನ್ ಮಾಡಿಸಿಕೊಂಡರು. ಅಷ್ಟೇ ಅಲ್ಲ, ನನ್ನನ್ನ ಹಾಡು ಹೇಳಕೆ ಹೆಳಿದ್ರು 'ಜೋಗದ ಸಿರಿ ಬೆಳಕಿನಲ್ಲಿ..' ಊದಿಕೊಂಡ ಮುಖ, ಒಂದೆಡೆ ಹಾಡು..ಅಮ್ಮನಿಗೆ ತುಂಬಾ ಖುಷಿಯಾಯಿತು.

ಅಲ್ಲಿಂದ ನನ್ನ ಹೈಸ್ಕೂಲು ಜೀವನ. ಅಲ್ಲಿ ನಾನೇ ಹೀರೋಯಿನ್. ಕ್ಲಾಸ್ ಟೀಚರಿಂದ ಹಿಡಿದು ಪ್ರಾಂಶುಪಾಲರವರೆಗೆ ನನಗೆ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಕೊಡುತ್ತಿದ್ದರು. ಮೂರು ವರ್ಷವೂ ಕ್ಲಾಸಿನಲ್ಲಿ ಅಂಕಗಳಿಸುವುದರಾಗಲಿ, ಪ್ರಬಂಧ, ಭಾಷಣ, ಹಾಡೋದು ಎಲ್ಲದ್ರಲ್ಲೂ ನಾನು ಮುಂಚೂಣಿಯಲ್ಲಿದ್ದೆ. ಅಮ್ಮನಿಗಂತೂ ಆವಾಗ ಹಬ್ಬ. ಮತ್ತೆ ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆ ಅಮ್ಮನ ಆರೋಗ್ಯವೂ ಕೆಟ್ಟಿತ್ತು. ತಮ್ಮನದೂ ಅದೇ ಪರಿಸ್ಥಿತಿ. ಮುಂದೆ ಪಿಯುಸಿ ಓದಬೇಕು..ಏನ್ ಮಾಡೋದು? ಎಂದಾಗ ನನ್ನ ನೆರವಿಗೆ ಬಂದಿದ್ದು ಇಡೀ ಕಾಣಿಯೂರು ಹೈಸ್ಲೂಲಿನ ಅಧ್ಯಾಪಕರುಗಳು. ಪ್ರತಿಯೊಬ್ಬ ಅಧ್ಯಾಪಕರೂ 'ಚಿತ್ರಾ ನೀನು ಇನ್ನೂ ಓದ್ಬೇಕಮ್ಮಾ..ನಾವಿದ್ದೇವೆ ಜೊತೆಗೆ' ಅಂತೇಳಿ ಸಹಾಯಧನದ ರೂಪದಲ್ಲಿ ನನಗೆ ಫೀಜಿನ ಹಣ ಕೊಟ್ಟಿದ್ದರು. ಬದುಕಿನ ಪ್ರತಿಯೊಂದು ಕ್ಷಣದಲ್ಲೂ ನನ್ನ ಗುರುವೃಂದವನ್ನು ನಿತ್ಯ ನೆನೆಸಿಕೊಳ್ಳುತ್ತೇನೆ..ಶಿಕ್ಷಕರ ದಿನದಂದು ಅವರಿಗೆ ಪುಟ್ಟದಾಗಿ ಶುಭಾಶಯ ಹೇಳುತ್ತೇನೆ..ಅದೇ ಅವರಿಗೆ ಖುಷಿ. ಚಿತ್ರಾ ಹೇಗಿದ್ಯಮ್ಮಾ..ಚೆನ್ನಾಗಿರು..ಬೆಂಗಳೂರು ಜೋಪಾನ..ಬಂದಾಗ ಕಾಲೇಜಿಗೆ ಬಾ ಅನ್ತಾರೆ..ನನ್ನ ಗುರುಗಳು. ಎಷ್ಟೊಂದು ಖುಷಿಯಾಗುತ್ತೆ ಅವರಿಗೆ. ನಮ್ಮ ಬದುಕಿಗೆ ಬೇಕಾದನ್ನೆಲ್ಲಾ ಧಾರೆ ಎರೆಯುವ ಗುರುಗಳಿಗೆ ವರ್ಷಕ್ಕೊಮ್ಮೆ ಶುಭಾಶಯ ಅಂದರೂ, ಅವರು ಹೇಳಿರುವ ಮಾತುಗಳು, ಹಿತನುಡಿಗಳು ಎಲ್ಲವೂ ನಿತ್ಯದ ನೆನಪಲ್ಲ, ಬದುಕು. ಮತ್ತೆ ಉಜಿರೆಗೆ ಹೋದೆ..ಅಲ್ಲೂ ನಂಗೇನೂ ಕಡಿಮೆಯಾಗಿಲ್ಲ..ಪ್ರೀತಿಯ ಮೇಡಂ ಶುಭದಾಸ್, ಸಂಪತ್ ಸರ್, ನಾಗಣ್ಣ ಸರ್, ಭಾಸ್ಕರ ಹೆಗಡೆ ಸರ್..ಎಲ್ಲರೂ ನನಗೆ ಕ್ಷಣ ಕ್ಷಣಕ್ಕೂ ಸ್ಫೂರ್ತಿಯಾಗಿದ್ದರು. ಮನೆಯಲ್ಲಿ ಅಮ್ಮನೇ ನನಗೆ ಗುರು, ಆದರೆ ಶಾಲೆ, ಕಾಲೇಜಿಗೆ ಬಂದಾಗ ನನಗೆ ಗುರುಗಳೇ ಅಮ್ಮ ನೂ ಆಗಿದ್ದರು.ಬದುಕನ್ನೇ ಕಲಿಸಿಕೊಟ್ಟ ನನ್ನ ಪ್ರೀತಿಯ ಗುರುಗಳೇ...ಶಿಕ್ಷಕರ ದಿನದ ಶುಭಾಶಯಗಳು.

Wednesday, September 3, 2008

ವೇದಿಕೆ ಮೇಲೆ ನಿಂತು ಬಡತನ ತೊಲಗಲಿ ಅಂದ್ರೆ..!

'ವಿಜ್ಞಾನ ಮತ್ತು ತಂತ್ರಜ್ಞಾನ ಬಡತನ ನೀಗಿಸಲಿ' ಎಂದು ವಿಜ್ಷಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಗಳಿಸಿದ ಮಹಾನ್ ವ್ಯಕ್ತಿಯೊಬ್ಬರು ಬೆಂಗಳೂರಿನ ಪ್ರತಿಷ್ಠಿತ ಹೊಟೇಲೊಂದರ ಡಯಾಸ್ ಮೇಲೆ ನಿಂತು ಮಾತನಾಡಿದಾಗ ನಗು ಉಕ್ಕಿ ಬಂತು. ಹೌದು! ತುಂಬಾ ಜನ ಹೀಗೇ ಮಾತಾಡ್ತಾರೆ..ನಿಂಗೆ ನಗು ಉಕ್ಕಿ ಬಂದಿಲ್ವಾ ಚಿತ್ರಾ? ಅಂತ ನೀವು ಕೇಳಬಹುದು..ಆದ್ರೆ ಹೀಗೆ ಹೇಳಿದ್ದು ವಿದೇಶದಿಂದ ಬಂದ ವ್ಯಕ್ತಿ ಅಲ್ಲ. ಕನ್ನಡಿಗ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದ, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಇವರು ಮುಕ್ಕಾಲು ಗಂಟೆ ಭಾಷಣ ಮಾಡಿದ್ದು ತೀರ ಹಾಸ್ಯಾಸ್ಪದ ಅನಿಸಿತ್ತು ನಂಗೆ. ಹೌದು! ಬೆಂಗಳೂರು ತಂತ್ರಜ್ಞಾನದಲ್ಲಿ ನಂ.1 ಸ್ಥಾನದತ್ತ ಸಾಗಿದೆ. ಇದಕ್ಕೆ ಕಾರಣಕರ್ತರಾದವರೂ ಇಲ್ಲೇ ಇದ್ದಾರೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಈ ರೀತಿಯ 'ಕರೆ'ಗಳನ್ನು ಕೊಡುತ್ತಲೇ ಇದ್ದಾರೆ. ವಿದೇಶದಲ್ಲಿ ಹೋಗಿ ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಐಟಿ-ಬಿಟಿಯಲ್ಲಿ ನಂ.1 ಆಗಲಿದೆ ಅನ್ತಾರೆ. ಅಲ್ಲೊಂದಿಷ್ಟು..ಇಲ್ಲೊಂದಿಷ್ಟು..ಚಪ್ಪಾಳೆಗಳ ಸದ್ದು. ಮರುದಿನ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿ ಅವರ ಭಾಷಣಗಳದ್ದೇ ಕಾರುಬಾರು..ಟಿ.ವಿ, ಚಾನೆಲ್ ಗಳಲ್ಲಿ ಅವರ ಮಾತುಗಳು ವಿಶೆಷ ವರದಿ..ಮಾಧ್ಯಮಗಳು ಪ್ರಚಾರ ನೀಡಬೇಕಾಗಿರುವುದೂ ಕರ್ತವ್ಯವೇ ಬಿಡಿ..ಆದರೆ ಅವರ ಮಾತಿಗೆಷ್ಟು ಪ್ರಚಾರ ಸಿಕ್ಕುತ್ತೆ ನೋಡಿ.

ಈ ರೀತಿ ಭಾಷಣ ಮಾಡೋವರಿಗೆ 'ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಬಡತನ ನೀಗಲಿ' ಎಂದು ಹೇಳಲಷ್ಟೇ ಗೊತ್ತು. ಅದನ್ನು ಹೇಗೆ ಮಾಡೋದು? ನಾವೇನು ಮಾಡಬೇಕು? ಇವರಿಗೇನೂ ಗೊತ್ತಿರಲ್ಲ. ಇನ್ನು ಇಂಥ ಕುಬೇರರಿಂದಲೇ ಅಭಿವೃದ್ಧಿ ಹೊಂದುವ ವಿಜ್ಷಾನ ಮತ್ತು ತಂತ್ರಜ್ಞಾನ ಬಡತನವನ್ನು ನೀಗಿಸುವುದಾದರೂ ಹೇಗೆ? ಮೊನ್ನೆ ಮೊನ್ನೆ ಒಂದು ಸಮೀಕ್ಷಾ ವರದಿ ಬಂದಿತ್ತು..ಅದೂ ವಿಶ್ವಬ್ಯಾಂಕ್ ಜಾಗತಿಕ ಬಡತನ ತಖ್ತೆಯಿಂದ ತಿಳಿದುಬಂದಿದ್ದು. .ಭಾರತದ ಒಟ್ಟು ಜನಸಂಖ್ಯೆಯ 1/3ರಷ್ಟು ಜನ ಬಡವರು! ಬೆಂಗಳೂರಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನ ಕೊಳಗೇರಿಗಳಲ್ಲಿ ವಾಸಿಸುತ್ತಾರೆ. ಇವರ ಮನೆಯಲ್ಲಿ ಬೆಳಕು ನೀಡುವ ವಿದ್ಯುತ್ ಬಲ್ಬ್ ಗಳಿಲ್ಲ..ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ಮಳೆ ಬಂದಾಗಲೆಲ್ಲಾ..ರಸ್ತೆ, ಚರಂಡಿಗಳ ನೀರು ಇವರ ಮನೆಗೆ ಹೋಗುತ್ತದೆ. ಇದು ಇಲ್ಲಿನ ಯಾವ ಮಹಾನ್ ಉದ್ಯಮಿಗಾದ್ರೂ ಅರಿವಿಗೆ ಬರುತ್ತದೆಯೇ? ಅರಿವು ಬಿಡಿ..ಯಾರೋಬ್ಬರ ಭಾಷಣದ ವಸ್ತುವೂ ಇದಾಗಲ್ಲ. ಜಾಗತಿಕ ಮಟ್ಟದಲ್ಲಿ ನಂ. 1ಆದವನು ಯಾವತ್ತೂ ಬಡಜನರ ಅಭಿವೃದ್ಧಿ ಬಗ್ಗೆ ಕನಸು ಕಾಣುವ ಮಾತನಾಡಿದರೆ ..ಅದು ಸತ್ಯವೆಂದು ನಂಬುವುದೇ ಅಪರಾಧವಾದೀತು. ಈ ರೀತಿ ಮೈಕ್ ಎದುರು ನಿಂತು 'ಬಡತನ ತೊಲಗಲಿ, ಬಡಜನರ ಉದ್ಧಾರ ಆಗ್ಲಿ..ಹಾಗೇ ಮಾಡಬೇಕು. ಹೀಗೇ ಮಾಡಬೇಕು' ಎಂದು ಹೇಳುವ ಬದಲು, ಸ್ವತಃ ನಾವೇನಾದ್ರೂ ಮಾಡಿದರೆ ಎಂದು ಯೋಚಿಸಬೇಕು. ತಾಕತ್ತಿದ್ರೆ ಬಡಜನರ ಮನೆಗೆ ಹೋಗಿ ನೋಡಲಿ..ಸತ್ತು ಬದುಕುವ ಬಡವರ ಬದುಕನ್ನು ಕಣ್ಣು ಬಿಟ್ಟು ನೋಡಬೇಕು. ನಮ್ಮ ಸರ್ಕಾರ, ಜನಪ್ರತಿನಿಧಿಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ನಂ.1 ಎನಿಸಿಕೊಂಡ ಉದ್ಯಮಿಗಳು, ವಿಜ್ಞಾನಿಗಳು ಮುಂತಾದವರು ಬಡತನ ಎಂಬ ಶಬ್ಧವನ್ನು ಭಾಷಣದ ವಸ್ತುವಾಗಿಸುವ ಬದಲು, ಬಡಜನರ ಬದುಕಿಗೆ ನೆರವಾಗುವುದು ಹೇಗೇ? ಎಂಬುದನ್ನು ಯೋಚಿಸಬೇಕು.
ಫೋಟೋ: ಎನ್.ಕೆ.ಎಸ್.

ಹೀಗೊಂದು ಸ್ವಾಮೀಜಿಯ ಕಥೆ!

ನನಗಾಗ ಪುಟ್ಟ ವಯಸ್ಸು. ಆವಾಗ ಊರ ಜಾತ್ರೆಗೆ ಹೋಗೋದಂದ್ರೆ ಭಾರೀ ಖುಷಿ. ಪ್ರತಿ ವರ್ಷ ಈ ಜಾತ್ರೆಗೆ ಯಾವುದಾದ್ರೂ ಮಠದ ಸ್ವಾಮೀಜಿಗಳು ವಿಶೇಷ ಅತಿಥಿಗಳಾಗಿ ಬರುತ್ತಿದ್ದರು. ಅವರದ್ದು ಪ್ರತ್ಯೇಕ ಧಾರ್ಮಿಕ ಉಪನ್ಯಾಸ..ಪಕ್ಕಾ ಭಯ, ಭಕ್ತಿ, ತ್ಯಾಗದ್ದೇ ಮಾತು. ನಾನು ಅಜ್ಜಿ ಜೊತೆ ಜಾತ್ರೆಗೆ ಹೋಗುತ್ತಿದ್ದೆ. ಅಮ್ಮನಿಗೆ ಜಾತ್ರೆ, ಜನಜಂಗುಳಿ ತುಂಬಾ ದೂರ. ಜಾತ್ರೆಗೆ ಹೋದಾಗ ಎಲ್ಲರಂತೆ ನಾನೂ ಸರತಿಯ ಸಾಲಿನಲ್ಲಿ ನಿಂತು ಸ್ವಾಮೀಜಿಗೆ ಚಿಲ್ಲರೆ ಹಾಕಿ, ಕಾಲಿಗೆ ನಮಸ್ಕರಿಸುತ್ತಿದ್ದೆ. ಅವರು ಪ್ರಸಾದ ಕೊಟ್ರೆ ಅದನ್ನೂ ಮನೆಗೆ ತರುತ್ತಿದ್ದೆ. ಅಲ್ಲಿ ಸ್ವಾಮೀಜಿಗಳು ಗಂಟೆಗಟ್ಟಲೆ ಹೇಳಿದ್ದನ್ನು ತಪ್ಪದೆ ಕೇಳಿಸಿಕೊಂಡು ಬಂದು ಅಮ್ಮನಿಗೊಪ್ಪಿಸುತ್ತಿದ್ದೆ. ಅಮ್ಮ ಅದನ್ನೆಲ್ಲಾ ಕೇಳಿಸಿಕೊಂಡು ಸ್ವಾಮೀಜಿ, ದೇವರು, ಭಕ್ತಿಯ ಬಗ್ಗೆ ನನಗೂ ಹೇಳುತ್ತಿದ್ದಳು. ಸ್ವಾಮೀಜಿಗಳ ಬಗ್ಗೆ ಹೇಳುವಾಗ ಅಮ್ಮನೆಂಬ ದೇವರ ಮಾತಿನಲ್ಲಿ ಗೌರವಿತ್ತು. ನನಗೆ ಇದೆಲ್ಲಾ ವಿಚಿತ್ರ ಅನಿಸ್ತಾ ಇತ್ತು. ಅದ್ಯಾಕಮ್ಮಾ ಸ್ವಾಮೀಜಿಗಳ ಪಾದಪೂಜೆ ಮಾಡಿ ನೀರು ಕುಡಿಯುತ್ತಾರೆ? ನೀನ್ಯಾಕೆ ದೇವರ ಪ್ರಸಾದವೆಂದರೆ ಅಷ್ಟೊಂದು ಭಕ್ತಿಯಿಂದ ಜೋಪಾನವಾಗಿಟ್ಟು ದಿನಾ ನನಗೆ ಸ್ನಾನ ಮಾಡಿಸಿ ಹಚ್ಚುತ್ತಿ? ಎಂದು ಕೇಳಿದಾಗ 'ಸ್ವಾಮೀಜಿಗೆ ಏನೂ ಹೇಳಬಾರದು ಮಗೂ. ಅವರು ಹೇಳಿದಂತೆ ಆಗುತ್ತದೆ. ಎಲ್ಲೇ ನೋಡಿದ್ರೂ ಅವರಿಗೆ ನಮಸ್ಕಾರ ಮಾಡ್ಬೇಕು" ಎನ್ನುತ್ತಿದ್ದಳು. ಅಮ್ಮ ಹೇಳಿದ ಮೇಲೆ ಮುಗಿದೇ ಹೋಗಿತು..ಮತ್ತೆ ಅದನ್ನು ಪ್ರಶ್ನಿಸುವ ಗೋಜಿಗೆ ನಾನ್ಯವತ್ತೂ ಹೋಗಲ್ಲ. ಸ್ವಾಮೀಜಿಗಳಂದ್ರೆ ಏನೋ ಗೌರವ, ಪ್ರೀತಿ, ಭಯ-ಭಕ್ತಿ. ಸಿಕ್ಕಾಗೆಲ್ಲಾ ಸ್ವಾಮೀಜಿಗಳನ್ನು ಹುಡುಕಿಕೊಂಡು ಹೋಗಿ ನಮಸ್ಕರಿಸುತ್ತಿದ್ದೆ. ಆದರೂ ಮನಸ್ಸಲ್ಲಿ ಹಲವಾರು ಪ್ರಶ್ನೆಗಳು: ಏಕೆ ಸ್ವಾಮೀಜಿಗಳನ್ನು ದೇವರಂತೆ ಕಾಣುತ್ತಾರೆ? ಅವರೇನು ಮಾನವರೂಪದ ದೇವರುಗಳೇ? ಹಿರಿಯರೆಂದು ಅವರನ್ನು ಗೌರವದಿಂದ ಕಾಣುತ್ತಾರೆಯೇ? ಅವರು ನಮ್ಮಂತೆ ನೆಲದ ಮೇಲೆ ನಡೆದಾಡುತ್ತಾರೆ..ಆದ್ರೂ ಥೂ! ಅವರ ಪಾದ ತೊಳೆದು ಅದ್ಯಾಕೆ ನೀರು ಕುಡಿಯಬೇಕು? ಶುದ್ದ ಸಸ್ಯಾಹಾರಿಗಳಾಗಿರಬಹುದು..ಮೂರು ಹೊತ್ತು ಸ್ನಾನ ಮಾಡುತ್ತಾರೆ..ಮದುವೆ ಆಗಲ್ಲ..ಇಷ್ಟಕ್ಕೂ ಅವರೂ ಮನುಷ್ಯರಲ್ವಾ? ಮುಂತಾದ ಪ್ರಶ್ನೆಗಳು ದಿನಾ ತಲೆ ತಿನ್ನುತ್ತಿದ್ದವು. ಇಂಥ ನನ್ನ ಪಾಲಿನ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಅಮ್ಮನದು ಮಾತ್ರ ಒಂದೇ ಉತ್ತರ 'ಹಾಗೆಲ್ಲ ಯೋಚಿಸಬಾರದು ಮಗೂ..ಸ್ವಾಮೀಜಿಗಳು ಮದುವೆ ಆಗಲ್ಲ.ಅವರು ದೇವರಿಗೆ ಸಮಾನ'! ಹೌದು! ಅಂತೆಯೇ ನಾನು ಆಮೇಲೆ ಕೇಳಿಲ್ಲ..ಓದು ಮುಗೀತು..ಬೆಂಗಳೂರಿಗೆ ಬಂದೆ..ಒಳ್ಳೆಯ ಉದ್ಯೋಗನೂ ಪಡೆದೆ.

ಆದರೆ ಬೆಂಗಳೂರು?! ನಮ್ಮೂರಿಗಿಂದ ತುಂಬಾ ಭಿನ್ನ. ಇಲ್ಲಿ ನೋಡಿದ್ದಲ್ಲಿ..ಹೆಜ್ಜೆಯಿಟ್ಟಲ್ಲಿ..ದೇವಸ್ಥಾನಗಳು, ಸ್ವಾಮೀಜಿಗಳು, ಜ್ಯೋತಿಷಿಗಳು ಅಬ್ಬಬ್ಬಾ! ನನಗೇನೋ ಹೊಸದು ಬೆಂಗಳೂರು. ಇಲ್ಲಿ ಬಂದೂ ನನಗೆ ಇಬ್ಬರು ಸ್ವಾಮೀಜಿಯಬರ ಪರಿಚಯವಾಗಿತ್ತು. ನೋಡುವ ಜನರಿಗೆ, ಬೆಂಗಳೂರಿಗೆ ಬೆಂಗಳೂರೇ ಗೌರವದಿಂದ ಕಾಣುವ ಈ ಮಹಾನ್ ಸ್ಮಾಮೀಜಿಗಳು ಮಾತ್ರ ಪಕ್ಕಾ ಬ್ಯುಸಿನೆಸ್ ಸ್ವಾ,ಮೀಜಿಗಳು. ನೈತಿಕತೆ ಬಗ್ಗೆ ಮಾತಾಡುತ್ತಿದ್ದ ಇವರಿನಿಗೆ ನೈತಿಕತೆ ಅಂದ್ರೆ ಏನೂಂತಾನೇ ಗೊತ್ತಿರಲಿಲ್ಲ. ಕಾವಿಧಾರಿ ಆ ಸ್ವಾಮೀಜಿಗಳು ಕಪಟ, ಮೋಸ, ವಂಚನೆ, ಅನೈತಿಕತೆಯ ಇನ್ನೊಂದು ರೂಪವಾಗಿದ್ದರು. ಸ್ವಲ್ಪ ದಿನಗಳ ನಂತರ ಒಟ್ಟಿನಲ್ಲಿ ಸ್ವಾಮೀಜಿಗಳ ಬಗ್ಗೆ ಶೋಧಿಸುವ ಕಾರ್ಯದಲ್ಲೇ ತೊಡಗಿದ್ದೆ. ಅಮ್ಮ ಹೇಳಿದ ಗೌರವ, ಭಕ್ತಿ, ಮಾನವರೂಪದ ದೇವರುಗಳು ಮೌಢ್ಯದ ರೂಪ ತಳೆದು ನಿಂತಿದ್ದವು. ಆವಾಗಲೇ ಅಮ್ಮನಿಗೆ ಫೋನು ಮಾಡಿ ಹೇಳಿದೆ, "ಅಮ್ಮಾ ನೀನು ಹೇಳಿದ್ದು ಸುಳ್ಳು..ನೋಡು ಎಲ್ಲವನ್ನೂ ಸತ್ಯವೆಂದು ನಂಬಬೇಡ". ಆದರೆ ಅಮ್ಮನಿಗೆ ದೇವರ ಬಗ್ಗೆ, ದೇವರ ಸ್ವರೂಪ ಎಂದು ಜನ ನಂಬುವ ಸ್ವಾಮೀಜಿಗಳ ಬಗೆಗಿದ್ದ ನೈಜ ಭಕ್ತಿ ಅವಳ ಮಾತನ್ನು ಸಮರ್ಥಿಸಿಕೊಳ್ಳುವಂತೆ ಮಾಡಿತ್ತು. ಅಮ್ಮನ ಮುಗ್ಧತೆ, ಪ್ರಾಮಾಣಿಕತೆಯೆದುರು ನಾನು ಮೌನವಾಗಿದ್ದೇನೆ. ಆದರೆ ಬೆಂಗಳೂರಿನಂಥ ನಗರಕ್ಕೆ ಬಂದು, ಜಗತ್ತಿನ ಇನ್ನೊಂದು ಮುಖವನ್ನು ನೋಡಿದ್ದೇನೆ. ಮನುಷ್ಯ ಎಷ್ಟೇ ಸುಶಿಕ್ಷಿತನಾಗಿದ್ದರೂ ಮೌಢ್ಯ ಅವನನ್ನು ಬಿಟ್ಟು ಹೋಗಿಲ್ಲ. ಸತ್ಯವನ್ನು ಶೋದಿಸುವ ಕಾರ್ಯ ಮನುಷ್ಯ ಮಾಡುತ್ತಿಲ್ಲ ಏಕೆ? ಎನ್ನುವ ಪ್ರಶ್ನೆ ನನ್ನದು. ಇತ್ತೀಚಿನ ದಿನಗಳಲ್ಲಿ ಹಣ ಮಾಡುವುದಕ್ಕಾಗಿ 'ಸ್ವಾಮೀಜಿ'ಗಳೆನಿಸಿಕೊಂಡವರು, ಕೊನೆಗೆ ಸಿಕ್ಕಿಬಿದ್ದ ನಕಲಿ ಸ್ವಾಮೀಜಿಗಳು ಎಲ್ಲವನ್ನೂ ಬೆಂಗಳೂರಲ್ಲಿ ನೋಡುತ್ತಿದ್ದೇನೆ. ಆದರೂ ಜನ ಹೀಗೇಕೆ? ಎನ್ನುವ ಪ್ರಶ್ನೆ ನನ್ನದು.

ಗೆಳೆಯ ಸಂಜು ಇಷ್ಟನ್ನೂ ಹೇಳಿ ಮುಗಿಸಿದಾಗ ನಾನು ಇಳಿಯುವ ಸ್ಥಳನೂ ಬಂದಿತ್ತು. ಕಾರಿಂದ ಇಳಿದೆ. ಮತ್ತಷ್ಟು ದೂರ ಹೋಗಬೇಕು..ಇನ್ನೊಂದು ಬಸ್ಸು. ಸೀಟುಗಳೆಲ್ಲಾ ಖಾಲಿ ಯಿದ್ದುವು..ಆರಾಮವಾಗಿ ಬಸ್ಸಲ್ಲಿ ಕೂತಾಗ ..ಆತನ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸಿದುವು. ನನ್ನ ಅನುಭವಗಳೂ ಮತ್ತೊಮ್ಮೆ ಕಣ್ಣೆದುರು ಮೂಡಿಬಂದುವು. ಖ್ಯಾತ ಚಿತ್ರನಟರೊಬ್ಬರ ಮನೆಯಲ್ಲಿ ಪೂಜೆಯಿತ್ತು. ಅಲ್ಲಿ ಅಂತರ್ ರಾಷ್ಟ್ರೀಯ ಮನ್ನಣೆ ಪಡೆದ ಸ್ವಾಮೀಜಿಗಳಿಂದ ಭಜನೆ ಕಾರ್ಯಕ್ರಮನೂ ಇತ್ತು. ಹಾಗೇ ಸ್ವಾಮೀಜಿಗಳು ತಮ್ಮ ಭಜನಾ ತಂಡದೊಂದಿಗೆ ಕಾರಿನಲ್ಲಿ ಬಂದಿದ್ದರು. ಅವರ ಕಾರಿನ ಚಾಲಕ ಹೇಳುತ್ತಿದ್ದ; ಸ್ವಾಮಿಗಳು ನಿನ್ನೆ ಫಾರಿನ್ ಟೂರ್ ಮುಗಿಸಿ ಬಂದಿದ್ರು...ಇವತ್ತು 2 ಕಡೆ ಭಜನೆ ಇತ್ತು. ಇವರೇನೋ ತಮ್ಮದು ದಾನ ಧರ್ಮ ಅಂತಾರೆ. ಆದರೆ ಇವರನ್ನು ಹೊರತುಪಡಿಸಿ ಭಜನೆ ಹಾಡುವವರು, ತಬಲ ಬಾರಿಸುವವರು ಎಲ್ಲರಿಗೂ ಪ್ರತ್ಯೇಕ ಸಂಬಳ ತೆಗೆದುಕೊಳ್ಳುವಂತೆ ಹೇಳಿರುತ್ತಾರೆ. ದುಬಾರಿ..ಕೆಲವರು ಸ್ವಾಮೀಜಿ ತಂಡವೆಂದು ಬೇಕಾಬಿಟ್ಟಿ ಹಣ ನೀಡುವವರೂ ಇದ್ದಾರೆ. ತಮಗೆ ಬೇಕಾದ ಹಣವನ್ನು ಭಜನೆ ತಂಡದಿಂದ ತೆಗೆದುಕೊಂಡು ಬಳಿಕ ಆ ತಂಡಕ್ಕೆ ಸಂಬಳ ನೀಡುತ್ತಾರೆ!
ಇದು ಸತ್ಯಾನೋ/ಸುಳ್ಲೋ ಎನ್ನುವುದಕ್ಕಿಂತ ಆತ ಹೇಳಿದ್ರಿಲ್ಲಿ ಸತ್ತಾಂಶವಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಪ್ರಸ್ತುತ ಸಮಾಜದಲ್ಲಿ ಹಣಕ್ಕಾಗಿ ಸ್ವಾಮೀಜಿಗಳಾಗಿದ್ದ ಎಷ್ಟೋ ಮಂದಿ ಇದ್ದಾರೆ ಎನ್ನುವುದು ನಂಬಲರ್ಹ ಸತ್ಯವೇ.