Friday, August 29, 2008

ಥ್ಯಾಂಕ್ಯೂ ಕನ್ನಡಪ್ರಭ

ಕನ್ನಡ ಪ್ರಭದ (29.08.2008) ಬ್ಲಾಗಾಯಣ ಅಂಕಣದಲ್ಲಿ ನನ್ನ 'ಶರಧಿ'ಯ ಬಗ್ಗೆ ಮೂಡಿಬಂದಿದ್ದು: ಬದುಕಿನ ಅನುಭವಗಳು ಹರಿದ ಹಾದಿ 'ಶರಧಿ'. ಶರಧಿಯಲ್ಲಿ ಪಯಣ ಬೆಳೆಸಿರುವ ಇವರು ಚಿತ್ರಾಕರ್ಕೇರಾ ದೋಳ್ಪಾಡಿ. ಕರಾವಳಿ ಮಡಿಲಲ್ಲಿರುವ ಪುತ್ತೂರಿನವರಾದರೂ ಈಗ ಬೆಂಗಳೂರಿನ ನಿವಾಸಿ. ಪತ್ರಕರ್ತೆಯಾಗಿರುವ ಇವರು ಸುದ್ದಿ, ಸುತ್ತಾಟಗಳ ಅನುಭವಗಳನ್ನೇ ಹೆಚ್ಚಾಗಿ ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಕನ್ನಡಪ್ರಭ...

Thursday, August 28, 2008

'ಬಿಟ್ಟಿ ಟಿಕೆಟ್,' 'ಸ್ಲೀವ್ ಲೆಸ್ ಸರಸ'ಕ್ಕೆ ಕೊನೆ ಎಂದು?

ಬಿಟ್ಟಿ ಟಿಕೆಟ್', ಸ್ಲೀವ್ ಲೆಸ್ ಸರಸ, ಬೊಂಬಾಟ್ ಭಾಮಾ, ಒನ್ಲಿ ಸೂಪರ್ ಹಿಟ್ ಕನ್ನಡ ಹಾಡುಗಳು, ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ....ಮುಂತಾದ ಪದಗಳನ್ನು ಎಲ್ಲಿ ಕೇಳಲು ಸಾಧ್ಯ? ಹೌದು! ನಿಮಗೂ ಗೊತ್ತು..ಎಫ್.ಎಂ.ಗಳಲ್ಲಿ ಮಾತ್ರವೆಂದು. ಬೆಳಿಗೆದ್ದು ಎಫ್.ಎಂ. ಕೇಳೋಣಾಂದ್ರೂ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ ಬೆಂಗಳೂರು ತಪ್ಪಿದ್ದಲ್ಲ. ಹೌದು! ಎಫ್.ಎಂ.ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ...ಸಮಯ ಕಳೆದಿದ್ದೇ ಗೊತ್ತಾಗಲ್ಲ ಎನ್ನೋರು ಇದ್ದಾರೆ. ಆದರೆ ಅದ್ಯಾಕೋ ಕೆಲವೊಮ್ಮೆ ಜೀವಂತ ನಾಲಗೆಯಿರುವ ಕನ್ನಡಿಗರ ಬಾಯಿಯಿಂದಲೇ ಕನ್ನಡದ ಕೊಲೆಯಾಗುತ್ತಿರುವಾಗ ಅತಿಯಾಯಿತೆನಿಸುತ್ತೆ, ಕೇಳಲೂ ಅಸಹ್ಯವಾಗುತ್ತೆ. ಕೇಳಲೂ ಮಹಾವೇದನೆ. ಮಾತಾಡುತ್ತಾ ಮಜಾ ಮಾಡ್ಲಿ..ವಿಷ್ಯ ಅದಲ್ಲ..ಕಂಗ್ಲೀಷ್ ಮಾತಾಡ್ತಾರಲ್ಲ..ಅದು ಕೇಳುಗರಿಗೇ ಮುಜುಗರ ತರಿಸುತ್ತದೆ.

ಈ ಬಗ್ಗೆ ಹಿಂದೊಮ್ಮೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಿದ್ಧಲಿಂಗಯ್ಯ, ಕಟ್ಟಪ್ಪಣೆ ಮಾಡಿದ್ದರು. ಆದದೆ ಅದರಿಂದ ನಯಾಪೈಸೆಯೂ ಲಾಭವಾಗಿಲ್ಲ. ಇದೇನು ಹೊಸತಲ್ಲ ಬಿಡಿ..ಸರ್ಕಾರ ಬುದ್ದಿಜೀವಿಗಳು, ಹಿರಿಯರು ಎಲ್ಲರೂ ಅನ್ಯಭಾಷೆಗಳ ಕುರಿತು ಭಾರೀ ಪ್ರೀತಿಯಿಂದಲೇ ಮಾತನಾಡಿದ್ದಾರೆ. ಆವಾಗೆಲ್ಲಾ ಅವರಿಗೆ ಇಂಥ ಸಣ್ಣ ತಪ್ಪುಗಳಿಂದಲೇ ಕನ್ನಡ ಭಾಷೆ ನೆನೆಗುದಿಗೆ ಬೀಳುತ್ತಿದೆ ಎನ್ನುವುದು ತಲೆಯಲ್ಲಿ ಹೊಳೆದಿರಲಿಕ್ಕಿಲ್ಲ. ಅನ್ಯಭಾಷೆಯನ್ನು ಗೌರವಿಸೊಣ, ಪ್ರೀತಿಸೋಣ. ಆದರೆ ಇದನ್ನೇ ಕನ್ನಡಿಗರ ದೌರ್ಬಲ್ಯವೆಂದು ನಡೆದುಕೊಂಡಾಗ ಕನ್ನಡಿಗರು ಎದುರು ನಿಲ್ಲಲೇಬೇಕಲ್ವೇ? ಬೆಂಗಳೂರಿನ ಎಫ್. ಎಂ., ರೇಡಿಯೋ ಕಾರ್ಯಕ್ರಮಗಳಲಲ್ಲಿ ಕಂಡುಬರುವ ಕಂಗ್ಲೀಷ್ ನ ಕೇಳಲು ಅಸಹ್ಯವೆನಿಸುವ 'ಸ್ಲಿವ್ ಲೆಸ್ ಸರಸ' ದಂತಹ ಮಾತುಗಳು ವ್ಯಾಪಾರ ಮನೋಭಾವದ ಬೇಳೆ ಬೇಯಿಸಿಕೊಳ್ಳಲು ಮಾಡುವ ತಂತ್ರಗಳೇ. ಹಿಂದಿ, ಇಂಗ್ಲೀಷ್, ಕನ್ನಡದಲ್ಲಿ ಹೆಚ್ಚು ಪ್ರಾಶಸ್ತ್ಯ ಇರುವುದು ಹಿಂದಿ ಅಥವಾ ಇಂಗ್ಲೀಷ್ ಗೆ. 'ಕೇವಲ ಮೂರು ಹಾಡುಗಳು ಬ್ಯಾಕ್ ಟು ಬ್ಯಾಕ್' ಅಬ್ಬರದ ಸಂಗೀತದ ಜೊತೆಗೆ.. ಇಂಥ ವಿಕಾರಗಳನ್ನು ಕೇಳುವಾಗ ಯಾರಿಗಾದ್ರೂ ಅಯ್ಯೋ ಎನಿಸದಿರದು. ಏನು ಬೇಕಾದ್ರೂ ಮಾಡ್ಲಿ..ಕನ್ನಡದಲ್ಲಿ ಒಳ್ಳೆಯ ಶಬ್ದಗಳಿವೆ, ಪದಗಳಿವೆ ಅವುಗಳನ್ನು ಕನ್ನಡದಲ್ಲೇ ಹೇಳಿದ್ರೇನು ನಷ್ಟ? ಇಂಗ್ಲೀಷ್, ಹಿಂದಿ..ಅಸಂಬದ್ಧವಾಗಿ ಮಾತಾಡುವಾಗ ಇಂಥ ಎಫ್.ಎಂ. ಗಳಿಗೆ ಕನಿಷ್ಠ ಸೌಜನ್ಯತೆಯೂ ಇಲ್ಲವೇ? ಎಂಬ ಪ್ರಶ್ನೆ ಮೂಡದಿರದು. ಕೆಲವೊಂದಿಷ್ಟು ನಿಮಿಷಗಳು ಬಿಟ್ಟರೆ ದಿನವಿಡೀ ಹಿಂದಿ-ಇಂಗ್ಲೀಷ್ ಕಾರ್ಯಕ್ರಮಗಳೇ ಜಾಸ್ತಿ ಪ್ರಸಾರವಾಗುತ್ತವೆ. ಇನ್ನು ಕನ್ನಡದ ಕಾರ್ಯಕ್ತಮಗಳಲ್ಲಿ 'ಕಂಗ್ಲೀಷ್' ನಲ್ಲಿ ಮಾತನಾಡಿ ಪದ-ಅರ್ಥಗಳನ್ನು ಏನೋನೋ ಮಾಡಿಬಿಡ್ತಾರೆ. ಪ್ರಸ್ತುತ ನಮ್ಮ ಪರಿಸ್ಥಿತಿ ಎಂಥ ಕೀಳುಮಟ್ಟಕ್ಕೆ ಇಳಿದಿದೆಯೆಂದರೆ ಕನ್ನಡದ ಬಗ್ಗೆ ಮಾತನಾಡುವುದೇ ತಪ್ಪು, ಕನ್ನಡಿಗರ ದೌರ್ಬಲ್ಯ ಎನ್ನುವವರೇ ಹೆಚ್ಚು. ಅಷ್ಟೇ ಅಲ್ಲ ಯಾವುದೇ ಕರ್ನಾಟಕದ,., ಸರ್ಕಾರದ ಇಲಾಖೆಗಳಲ್ಲಿ ಹೋಗಿ ಕನ್ನಡದಲ್ಲಿ ಮಾತನಾಡಿದ್ದರೆ ನಮ್ಮನ್ನು ಅಡಿಯಿಂದ ಮುಡಿಯವರೆಗೆ ನೋಡಿ, ಭಾಷೆಯಿಂದ ವ್ಯಕ್ತಿತ್ವ ಅಳೆಯುವವರೇ ಹೆಚ್ಚು. ನಮ್ಮ ಕನ್ನಡದಲ್ಲಿ ಶ್ರೇಷ್ಠರೆನಿಸಿಕೊಂಡ ಕೆಲವರು ಕನ್ನಡ, ನಾಡು-ನುಡಿ ಕುರಿತು ಏನೇ ಬೀದಿರಂಪ ಮಾಡಿದ್ರೂ ಬೆಚ್ಚಗೆ ಮನೆಯೊಳಗೆ ಕೂರುತ್ತಾರೆ. ಬೇಕಾದ್ರೆ ಆ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಕಲ್ಲು ಬಿದ್ದೀತೆಂಬ ಪುಕ್ಜಲುತನದಿಂದ ರಕ್ಷಣೆಗೆ ಪೊಲೀಸ್ ರನ್ನೂ ನೇಮಕ ಮಾಡಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಂಬು ಸ್ಪೋಟ ಆಯಿತು. ಎಷ್ಟು ಮಂದಿ ಕನ್ನಡದ ಶ್ರೇಷ್ಠರು ವಿರೋಧಿಸಿದ್ದಾರೆ? ಭಯೋತ್ಪಾದನೆಯನ್ನು ತಡೆಗಟ್ಟಿ ಎಂದು ವಿಧಾನಸೌಧ, ಮಹಾತ್ಮಾಗಾಂಧಿ ಪ್ರತಿಮೆ ಮುಂದೆ ನಿಂತು ಪ್ರತಿಭಟನೆ ಮಾಡಿದ್ದಾರೆ? ಆದರೆ ಅನಗತ್ಯವಾದ ವಿಚಾರಗಳಿದ್ದರೆ ತಕ್ಷಣ ಬೀದಿಗೆ ಬಂದು ಬೊಬ್ಬಿಡ್ತಾರೆ. ಆದರೆ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ನೋಡಿ..ಎಲ್ಲೋ ಇದ್ದವರು ತಕ್ಷಣ ಬೀದಿಗಿಳಿದು..ಸಂಜೆಯವರೆಗೆ ದುಡಿದು ದಣಿದ ದೇಹಕ್ಕೆ, ಮನಸ್ಸಿಗೆ ನೆಮ್ಮದಿ ಬೇಕು..ಅದ್ಕಾಗಿ ತಡರಾತ್ರಿವರೆಗೂ 'ಸಂಗೀತ ಕಚೇರಿಗಳು' ತೆರೆದಿರಬೇಕು ಎಂದು ಬೊಬ್ಬಿಟ್ಟರು! ಇದು ಬೇಕಿತ್ತೆ?

ಕನ್ನಡ ಭಾಷೆಯ ವಿಚಾರ ಬಂದಾಗಲೂ ಆಗುತ್ತಿರುವುದು ಹೀಗೆ. ಯಾರೋಬ್ಬರೂ ಮಾತಾಡಲ್ಲ..ಇಲ್ಲಿ ನಾನೊಬ್ಬಳು ಮಾತಾಡಿದ್ರೂ ಪ್ರಯೋಜನವಿಲ್ಲ. ಎಫ್.ಎಂ. ರೇಡಿಯೋ ಅಥವಾ ಇನ್ಯಾರೋ ಏನ್ ಬೇಕಾದ್ರೂ ಮಾತಾಡ್ಲಿ..ನಮಗೇನು ಎಂಬಂತೆ ತೆಪ್ಪಗಿರುತ್ತಾರಲ್ಲಾ..ಹಾಗಾಗಿಯೇ ಕನ್ನಡ ಸಾಯುತ್ತಿದೆ ನೋಡಿ. ಬಹುಶಃ ನನಗನಿಸಿದ ಪ್ರಕಾರ ಈ ಎಫ್.ಎಂ.ಗಳ ಅವತಾರಗಳನ್ನು ನಮ್ಮ ಗಣ್ಯರು ಆಲಿಸಿರಕ್ಕಿಲ್ಲ. ಪ್ರೇಮಿಗಳ ದಿನ, ಹೋಳಿ ಮುಂತಾದ ದಿನಗಳನ್ನು ವಿಶೇಷವಾಗಿ ಎಡೆಬಿಡದೆ ನಡೆಸಿಕೊಡುವ ಎಫ್.ಎಂ.ಗಳಿಗೆ ಕನ್ನಡದ ಶ್ರೇಷ್ಠ ನಾಟಕಕಾರರು, ನಟರು, ಸಾಹಿತಿಗಳು, ಗಾಯಕರ ದಿನಗಳನ್ನು ನಡೆಸಿಕೊಡಲಿ. ನಾನೇನು ಎಫ್.ಎಂ. ಗಳ ದ್ವೇಷಿಯಲ್ಲ..ಬದಲಾಗಿ ಅಸಂಬದ್ಧ ಮಾತುಗಳಿಂದ ಕನ್ನಡವನ್ನು ಕೊಲ್ಲುವ ಬದಲು ಶುದ್ಧ ಕನ್ನಡ ಬಳಸಿ, ಕನ್ನಡಕ್ಕೆ ತಮ್ಮಿಂದಾದ ಕೊಡುಗೆ ನೀಡಲಿ. ಕನ್ನಡದ ಅಭಿವೃದ್ಧಿ ಬಗ್ಗೆ ಮಾತನಾಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡಪರ ಸಂಘಟನೆಗಳು ಅದೇನು ನಿದ್ದೆ ಮಾಡುತ್ತಿವೆಯೇ?

ಮಳೆಗೆ ನಮ್ಮೂರ ತೋಟದಾಂಗ...

ಮೊನ್ನಯಿಂದ ಬೆಂಗಳೂರಿನಲ್ಲಿ ಮಳೆಯೋ ಮಳೆ..ಸಂಜೆ ಆಫೀಸಿನಿಂದ ಹೊರಡುತ್ತಿದ್ದಂತೆ ಗುಡುಗು-ಮಿಂಚು, ಮಳೆಯದ್ದೇ ಸ್ವಾಗತ. ಛತ್ರಿ ಇದ್ದರೂ ಬೆಂಗಳೂರು ಮಳೆ ಅಂದ್ರೆ ಮಳೆಗೆ ಪೂರ್ತಿ ನೆನೆಯಲೇಬೇಕು. ಮೊನ್ನೆ ರಾತ್ರಿ ಆಫೀಸಿನಿಂದ ಹೊರಟಾಗ ರಾತ್ರಿ ಎಂಟೂವರೆ ಗಂಟೆ. ಮಳೆಯೋನೋ ಬಿಟ್ಟಿತ್ತು..ಆಕಾಶನೂ ಶುಭ್ರವಾಗಿತ್ತು. ಆದರೆ ಅರ್ಧ ದಾರಿಗೆ ತಲುಪುವಾಗ ಜೋರಾಗಿ ಮಳೆ, ಗಾಳಿ. ರಸ್ತೆಗಳೆಲ್ಲ ಸಮುದ್ರಗಳಾದುವು..ಚಲಿಸುತ್ತಿದ್ದ ವಾಹನಗಳು ದಡಕ್ಕನೆ ನಿಂತುಬಿಟ್ಟವು. ನನ್ನ ಛತ್ರಿಯಂತೂ ಡಾನ್ಸ್ ಮಾಡಿ ಉಲ್ಟಾ ಆಗಿ, ಏನೇನೋ ಆಗಿ ಹೋಯಿತು. ಪುಲ್ ಒದ್ದೆ..ಚಳೀ.
ಚಿಕ್ಕದಿರುವಾಗ ಶಾಲೆಗೆ ಹೋಗುತ್ತಿದ್ದ ನೆನಪಾಯಿತು. ಮಳೆ ಬಂದ್ರೆ ಬಟ್ಟೆಗಳನ್ನೆಲ್ಲಾ ಎತ್ತಿಕಟ್ಟಿ ಊರ ಹಳ್ಳಗಳನ್ನು ದಾಟಿ ಮನೆಗೆ ಬರುವುದು, ಶಾಲೆಗೆ ಹೋಗುವುದು.. ಹಾಗೇ ಮಾಡಿದೆ. ಹೊಲದಲ್ಲಿ ಪೈರು ಕೊಯ್ಯುವಾಗ ಅಮ್ಮನವರೂ ಬಟ್ಟೆ ಎತ್ತಿ ಕಟ್ಟಿಕೊಳ್ಳುತ್ತಿದ್ದರು. ಹಾಗೇ ಮಾಡಿದೆ..ಚಪ್ಪಲು ಮಾತ್ರ ಎಲ್ಲೋ ತೇಲುತ್ತಾ ಹೋಗಿತ್ತು. ಕೈಯಲ್ಲೊಂದು ಬ್ಯಾಗ್ ಇರದಿದ್ದರೆ ನಾನಂತೂ ಆ ಮಳೆಯಲ್ಲಿ ಖುಷಿಯಾಗುತ್ತಿದ್ದೆ. ಬೆಂಗಳೂರಿನಲ್ಲಿ ಮಳೆ, ಗಾಳಿ ಬರಕ್ಕೆ ಆರಂಭವಾದರೆ ನಂಗೆ ಅಮ್ಮ ಜಾಸ್ತಿ ನೆನಪಾಗ್ತಾರೆ. ಯಾಕೋ ಊರಲ್ಲಿ ಮಳೆ ಬರುವಾಗ ಒಂಥರಾ ಚಂದ. ಸಣ್ಣವರಿರುವಾಗ ಮಳೆ ಬರೋದನ್ನೇ ಕಾಯುತ್ತಿದ್ದ ನಾವು, ಮೊದಲ ಮಳೆಯಲ್ಲೇ ನೆನೆದು ಶೀತ, ಜ್ವರದಲ್ಲಿ ಮಲಗುತ್ತಿದ್ದುಂಟು .ಅಮ್ಮ ಮನೆಯಲ್ಲಿ ಇಲ್ಲದಿದ್ದಾಗ ನಾನು-ತಮ್ಮ ಇಬ್ಬರು ಅಂಗಳದಲ್ಲಿ ಮಳೆಯಲ್ಲಿ ನೆನೆಯುತ್ತಿದ್ದೇವು. ಮತ್ತೆ ನಮ್ಮನೆ ತುಂಬಾ ಹಳ್ಳಿ..ಇರುವುದು ಕಾಡಿನ ಮಧ್ಯದಲ್ಲಿ..ಆ ಕಾಡಿಗೆ 'ಪೈಕದ ಮಲೆ' ಅಂತಾನೇ ಹೆಸರು. ನಮ್ಮಮ್ಮನಿಗೆ ಮದುವೆಯಾಗುವ ಮುಂಚೆ ಆ ಕಾಡಲ್ಲಿ ಹುಲಿ, ಆನೆಗಳೆಲ್ಲ ಇದ್ದವಂತೆ. ಅಮ್ಮನವರು ಮನೆಯಿಂದ ಹೊರಗೆ ಬರುತ್ತಿರಲಿಲ್ಲವಂತೆ. ದೊಡ್ಡ ದೊಡ್ಡ ಹೆಬ್ಬಲಸು ಮರಗಳಿವೆ. ಮಳೆಗಾಲದಲ್ಲಿ ಆ ಊರೇ ಕತ್ತಲು. ಈಗಲೂ ಅಲ್ಲಿ ಕೆಲವೆಡೆ ಕರೆಂಟಿಲ್ಲ. ವಿದ್ಯುತ್ ಕಂಬಗಳನ್ನು ಹಾಕಿದ್ರೆ ಮಳೆಗಾಲದಲ್ಲಿ ಮರಗಳು ಬಿದ್ದು ಕಂಬಗಳೆಲ್ಲ ನೆಲಕ್ಕೆ. ಕಾಡೇ ಆಗಿದ್ರೂ ಅದೇನೋ ಮಳೆ ಬರುವಾಗ ನಮ್ಮೂರೇ ಚಂದ...ನಮ್ಮೂರಿಗೆ ನಮ್ಮೂರೇ ಸಾಟಿ. ಹಸಿರು, ಕಾಡು, ಮರಗಳು..ಗದ್ದೆ..ಮಳೆ ಬರುವುದೇ ತಡ ನಮ್ಮಜ್ಜ ಹೊಲ ಉಳೋಕೆ ರೆಡಿ. ಆವಾಗ ನಮ್ಮನೆಯಲ್ಲಿ ಎತ್ತುಗಳು, ಕೋಣಗಳಿದ್ದವು. ಅವುಗಳನ್ನು ಕಂಬಳಕ್ಕೂ ಕರೆದುಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲ, ಊರ ಹೊಳೆಯಲ್ಲಿ ಯಾರ್ಯಾರ ತೋಡದ ತೆಂಗಿನ ಮರಗಳಿಂದ ಗಾಳಿಗೆ ಬಿದ್ದ ತೆಂಗಿನ ಕಾಯಿಗಳನ್ನು ಹಿಡಿಯಾಕೆ ಹೋಗುತ್ತಿದ್ದೇವು. ನಮ್ಮಜ್ಜ, ಪಕ್ಕದ್ಮನೆಯವರೆಲ್ಲ ಸೇರಿ ರಾತ್ರಿ ಮೀನು ಹಿಡಿಯಾಕೂ ಹೋಗುತ್ತಿದ್ದುಂಟು. ಮತ್ತೆ ಮಳೆಗಾಲ ಬಂದ್ರೆ ಸಾಕು. ದಿನಾ ಚಳಿಗೆ ತಿನ್ನಕ್ಕೆ ಏನಾದ್ರೂ ಅಮ್ಮ ಮಾಡಿ ಕೊಡುವರು. ಹಲಸಿನ ಬೀಜ, ಹುಣಸೆಬೀಜ, ಹಪ್ಪಳ..ಎಲ್ಲವೂ ಮಳೆಗಾಲಕ್ಕಂತಾನೇ ಮಾಡಿ ಇಡುತ್ತಿದ್ದರು ಅಮ್ಮ.
ನಮ್ಮ ಬಾವಿಯೆಲ್ಲ ಪೂರ್ತಿ ತುಂಬಿದಾಗ ನಮಗೆ ರಾಟೆಯಲ್ಲಿ ನೀರು ಎಳೆಯುವ ಕೆಲಸವಿಲ್ಲ..ಅದಂತೂ ಭಾರೀ ಖುಷಿ ನಮಗೆ. ನಮ್ಮ ಅಮ್ಮನಂತೂ ಮಳೆ ಬಂದ್ರೆ ಸಾಕು ಹಾರೆ, ಗುದ್ದಲಿ ಹಿಡಿದು ಕೆಲಸಕ್ಕೆ ರೆಡಿ. ದಿನವಿಡೀ ತೋಟದಲ್ಲಿ ಏನಾದ್ರೂ ಮಾಡ್ತಾನೇ ಇರ್ತಾರೆ. ಅವ್ರ ಜೊತೆ ನಾವುನೂ..ನಮಗೆ ಆಗ ಅಮ್ಮನೇ ಮಾಡಿದ 'ಮೂಡೆ' ಮಾಡಿ ಕೊಡುತ್ತಿದ್ದರು. ಮೂಡೆ ಅಂದ್ರೆ ಮಳೆಗಾಲದಲ್ಲಿ ಛತ್ರಿ ಬದಲು ಅಡಿಕೆ ಹಾಳೆಯಲ್ಲಿ ಮಾಡಿದ ಮೂಡೆ ಉಪಯೋಗಿಸುವುದು..ಅದು ಛತ್ರಿ ತರಾನೇ ಇರುತ್ತೆ. ಅದನ್ನು ಹಿಡಿದರೆ ನಾವು ಸ್ವಲ್ಪನೂ ನೆನೆಯುವುದಿಲ್ಲ. ಆವಾಗ ನಡೆದ ತಮಾಷೆ ಒಂದು ಹೇಳ್ತೀನಿ ಕೇಳಿ: ನನ್ನ ತಮ್ಮನಿಗೆ ಅಮ್ಮ ಯಾವಾಗಲೂ ಹುಡುಗಿ ತರ ಡ್ರೆಸ್ ಮಾಡೋದು. ಆತ ಪೆಟ್ಟಿಕೋಟ್, ನನಗೆ ತಂದ ಹಾಗೇ ಅವನಿಗೆ ಲಂಗ-ಧಾವಣಿ ತರುತ್ತಿದ್ದರು. ಯಾಕಂದ್ರೆ ಅವನಿಗೆ ನನ್ನ ಡ್ರೆಸ್ ಗಿಂತ ಸ್ವಲ್ಪ ಚೇಂಜ್ ಇದ್ರೆ...ನನ್ನ ಡ್ರೆಸ್ ಬೇಕೆಂದು ಅಳುತ್ತಿದ್ದ. ಹಾಗೇ ಒಂದು ದಿನ ಜೋರು ಮಳೆಯಲ್ಲಿ ನಾವಿಬ್ಬರೂ ಮೂಡೆ ಹಿಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನ ಜೊತೆ ಇದ್ದೇವು. ಆಗ ನಮ್ಮೂರ ಪಕ್ಕದೂರಿನ ಬೆಳ್ಯಪ್ಪಣ್ಣ ಬಂದು ಅಮ್ಮನಿಗೆ 'ಗೊತ್ತೇ ಇಜ್ಜಿಯೇ ಅಕ್ಕ. ಈರೆಗ್ 2 ಜನಲಾ ಪೊಣ್ಣು ಜೋಕುಲೆನಾ? ಅಮರ್ ಜೋಕುಲಾ ಎಂಚ?(ಗೊತ್ತೇ ಇರಲಿಲ್ಲ ಅಕ್ಕ,.ನಿಮಗೆ ಇಬ್ಬರೂ ಹೆಣ್ಣುಮಕ್ಖಳಾ? ಅವಳಿಗಳಾ?) ಅಂದಿದ್ದರು. ಈ ಮಳೆಗಾಲ, ಅಮ್ಮನ ಜೊತೆ ಮೂಡೆ ಹೊತ್ತು ಹೋಗುತ್ತಿದ್ದ ದಿನಗಳೆಲ್ಲಾ ತುಂಬಾ ಖುಷಿ ಕೊಡುತ್ತಿದ್ದವು. ಈವಾಗ ಮಳೆ ಬಂದ್ರೆ ಸಾಕು ಏನೋ ಒಂಟಿತನ, ಮನೆ, ಅಮ್ಮನ ನೆನಪಾಗುತ್ತೆ. ಮಳೆಗಾಲದಲ್ಲಿ ನಮ್ಮೂರ ಹಳ್ಳಿಯಲ್ಲಿ, ಗದ್ದೆಯಲ್ಲಿ, ತೋಟದಲ್ಲೇ ಇದ್ದುಬಿಡೋಣ ಅನಿಸಿಬಿಡುತ್ತೆ.
ಆದರೆ ಬೆಂಗಳೂರು?
ಮಳೆ ಬಂದ್ರೆ ರಸ್ತೆ ಕಾಣಿಸಲ್ಲ..ಬರೇ ಕಟ್ಟಡಗಳು..ಬರೇ ವಾಹನಗಳು..ಅಬ್ಬಬ್ಬಾ! ಹಸಿರೆಲ್ಲಿ ಕಾಣಿಸಿತು? ಹಸಿರು ಕಾಣಬೇಕಾದರೆ..ಲಾಲ್ ಬಾಗ್, ಕಬ್ಬನ್ ಪಾರ್ಕ್ ಗೆ ಹೋಗಬೇಕು. ಮಳೆ ಬಂದ್ರೆ ಸಾಕು, ರಸ್ತೆ ಬದಿಯಲ್ಲಿ ಕೇಬಲ್ ನವರು ತೆಗೆದ ಹೊಂಡಗಳು, ಬಿಬಿಎಂಪಿನವರು ವರ್ಷವಿಡೀ ಕಾಮಗಾರಿ ನಡೆಸುವ 'ಚರಂಡಿ ಹೊಂಡಗಳು' ಅವುಗಳೆಲ್ಲಾ ತುಂಬಿಕೊಂಡು..ಆ ಕೊಳಚೆ ನೀರು ರಸ್ತೆಗೆ ಹರಿದು..ಅಲ್ಲೇ ಜನರು ನಡೆದುಹೋಗಬೇಕು. ಅಬ್ಬಾ! ಮಳೆ ಬಂದ್ರೆ ಸಾಕು ಹೊರಗಡೆ ಹೋಗೋದೇ ಬೇಡ ಅನಿಸುವಷ್ಟು ಹಿಂಸೆಯೆನಿಸುತ್ತೆ. ಬೆಂಗಳೂರಿನಲ್ಲಿ ಕುಳಿತು ಮಳೇನೇ ಬೇಡಪ್ಪಾ ಅನ್ನೋರು ಹಳ್ಳಿಗಳಿಗೆ ಹೋಗಿ ಮಳೆ ಬರಲೀ ಎನ್ನುತ್ತೇವೆ. ನಮ್ಮೂರ ಹಳ್ಳಿಯಾಗೆ ಮಳೆ ಬಂದ್ರೆ ಎಷ್ಟು ಖುಷಿ ಆಗುತ್ತೆ ಅಲ್ವಾ?
ಫೋಟೋ: ಎನ್.ಕೆ.ಎಸ್.

Wednesday, August 27, 2008

ಕಂಡಿದ್ದು..ಕೇಳಿದ್ದು!

* ಸಿಎಂಗೆ ಎಂಗೇಜ್ ಮೆಂಟ್!
ಆಫೀಸಿಗೊಬ್ಬ ಬಾಸ್ ಇದ್ರೂ ಕೆಲವೊಮ್ಮೆ ಬಾಸ್ ನ ಪಿ.ಎ.ನೇ ಬಾಸ್ ಥರ ವರ್ತಿಸೋದುಂಟು ಅಥವಾ ಬಾಸ್ ಗಿಂತ ಎರಡು ಪಟ್ಟು ಹೆಚ್ಚೇ ಅಧಿಕ ಪ್ರಸಂಗ ತೋರಿಸುವುದುಂಟು. ಎಷ್ಟಾದ್ರೂ ಬಾಸ್ ನ ಪಿ.ಎ. ಅಲ್ವಾ? ಇತ್ತೀಚಗೆ ಅಂಥದ್ದೇ ಒಂದು ಅತಿ ಅಧಿಕ ಪ್ರಸಂಗದ ಘಟನೆ ನಡೆಯಿತು.

ನನಗೊಂದು ಚಾಳಿ..ಯಾರೇ ಸಚಿವರು ಅಥವಾ ಶಾಸಕರು ಅಥವಾ ಸರ್ಕಾರದ ಯಾರೇ ಅಧಿಕಾರಿಗಳಿರಲಿ..ಅವರ ಫೋನ್ ನಂಬರು ಬೇಕಾದ್ರೆ ಮೊದಲು ಸರ್ಕಾರದ ವೆಬ್ ಸೈಟ್ ನೋಡೋದು. ಅಲ್ಲಿ ಸಿಗದಿದ್ರೆ ಬಳಿಕ ಬೇರೇ ಪತ್ರಕರ್ತರ ಜೊತೆ ಕೆಳ್ತೀನಿ. ಒಂದು ದಿನ ನಮ್ಮ ಹಳೆ ಸಿಎಂ ಸಾಹೇಬ್ರಿಗೆ ಕಾಲ್ ಮಾಡಿದ್ದೆ. ಕಾಲ್ ಮಾಡಿದಾಗ ಫೋನು ಎತ್ತಿದ್ದು ಅವರ ಪಿ.ಎ. ಮಹಾಶಯ. ಕಂಡಾಪಟ್ಟೆ ಇಂಗ್ಲೀಷ್ ಮಾತಾಡ್ತಿದ್ದ. ನಾನೇನೋ ಕನ್ನಡದಲ್ಲೇ ಮಾತನಾಡಿದ್ದೆ. 'ಸಿಎಂ' ಗೆ ಇವತ್ತು ಯಾವುದಾದದರೂ ಎಂಗೇಜ್ ಮೆಂಟ್ಸ್ ಇದೆಯಾ?' ಅಂತ ಕೇಳಿದೆ. ಆತ ಫೋನೆತ್ತಿದೆ ತಡ, 'ಏನಮ್ಮಾ..ಸಿಎಂಗೆ ಎಂಗೇಜ್ ಮೆಂಟ್ಸ್? ಸಿಎಂ ಅನ್ನೋ ಪರಿಜ್ಞಾನ ಬೇಡ್ಬಾ? ಸಿಎಂಗೆ ಆವಾಗ್ಲೆ ಮದ್ವೆಯಾಗಿ..ದೊಡ್ಡ ದೊಡ್ಡ ಮಕ್ಳಿದ್ದಾರಮ್ಮಾ...'ಅಂತ ಏನೇನೋ ಬಡಬಡಸಿದ. ನಗು ಉಕ್ಕಿಬಂದು. 'ನೋಡಪ್ಪಾ..ಎಂಗೇಜ್ ಮೆಂಟ್ಸ್ ಅಂದ್ರೆ ಮದುವೆ, ನಿಶ್ಚಿತಾರ್ಥವಲ್ಲ. ಯಾವುದಾದರೂ ಪ್ರೋಗ್ರಾಂ ಇದೆಯಾ..ಅಂತ ಕೇಳ್ದೆ" ಎಂದೆ. ಮತ್ತೂ ಏನೋನೋ ಮಾತಾಡಕ್ಕೆ ಶುರುಮಾಡಿದ. ಆತನ ಮಾತಿಗೆ ಕೊನೆಹಾಡಲು, ಸರ್..ನಾನು ಚಿತ್ರಾ..ನಮ್ ಪತ್ರಿಕೆ ಹೆಸರ ಹೇಳ್ದೆ. ಆಗ ಮನುಷ್ಯ ಪುಲ್ ಚೇಂಜ್. 'ಮೇಡಂ..ನಾನು ...ನಾನು..ಯಾರೋ ಬೇರೆ ಅಂದುಕೊಂಡೆ. ತಮಾಷೆ ಮಾಡಿದ್ದೆ. ಕ್ಷಮಿಸಿ ಮೇಡಂ' ಅಂದು ಒಂದೇ ಉಸಿರಿಗೆ ಪ್ರೋಗ್ರಾಂ ಲಿಸ್ಟೇ ಹೇಳಿಬಿಟ್ಟ ಪಿ.ಎ..

* ಟಿಕೆಟ್, ಸೈಜ್ ಮೇಲೆ ಡಿಪೆಂಡ್ ಆಗುತ್ತಾ?
ಇತ್ತೀಚೆಗೆ ಬಿಎಂಟಿಸಿ ಬಸ್ಸುಗಳಲ್ಲಿ ಲೇಡಿ ಕಂಡಕ್ಡರ್ಗಳ ಸಂಖ್ಯೆ ಹೆಚ್ಚಾಗಿದೆ. ಒಂದು ರೀತೀಲಿ ಒಳ್ಳೆ ಬೆಳವಣಿಗೆ ಬಿಡಿ. ಮೊನ್ನೆ ವಿಧಾನಸೌಧದಿಂದ ಮೆಜೆಸ್ಟಿಕ್ ಬಸ್ಸು ಹತ್ತಿದೆ. ಆ ಬಸ್ಸಲ್ಲಿ ಲೇಡಿ ಕಂಡಕ್ಟರ್. ಆಕೆ ನೋಡಲೂ ತುಂಬಾ ಚೆನ್ನಾಗಿದ್ದಳು. ನನ್ನ ಜೊತೆಗೆ ಸುಮಾರು 60ರ ಆಸುಪಾಸಿನ ದಢೂತಿ ಹೆಂಗಸೊಬ್ಬರು ಬಸ್ಸು ಹತ್ತಿದ್ದರು. ಅವರೂ ಮೆಜೆಸ್ಟಿಕ್ಗೆ ಬರುವವರಿದ್ದರು. ಪಾಪ! ಅವರಲ್ಲಿ ಚಿಲ್ಲರೆ ಇಲ್ಲ...ನೂರು ನೋಟು ಕಂಡಕ್ಟರ್ ಕೈಗಿತ್ತಾಗ 'ಚೇಂಜ್ ಇಲ್ಲ..ಚೇಂಜ್ ಕೊಡಿ' ಅಂದ್ಳು ಕಂಡಕ್ಟರ್ ಹುಡುಗಿ. ಅದಕ್ಕೆ ಆ ಹೆಂಗಸು 'ನನ್ನತ್ರನೂ ಇಲ್ಲಮ್ಮ..ನೋಡು ಮೂರು ರೂ. ಇದೆ. ಅಂತೇಳಿ' ಕಂಡಕ್ಡರ್ ಕೈಗಿಡಲು ಮುಂದಾದರು. ಆವಾಗ ಅದೇನಾಯಿತೋ ಕಂಡಕ್ಟರ್ ಹುಡ್ಗಿ ಕೆಂಡಾಮಂಡಲವಾಗಿ 'ಚೇಂಜ್ ಮಾಡ್ಕೊಂಡು ಬಾ..ನಿನ್ ಸೈಜ್ ಗೆ ಮೂರು ರೂ. ಸಾಕಾ?" ಎನ್ನಬೇಕೆ?!! ಅಷ್ಟೇ ಅಲ್ಲ, ಬೈದು ಕೆ.ಆರ್. ಸರ್ಕಲ್ ಹತ್ರ ಆ ಹೆಂಗಸನ್ನು ಬಸ್ಸಿಂದಲೇ ಇಳಿಸಿಬಿಟ್ಳು. ತಕ್ಷಣ ಡ್ರೈವರ್ ನಗುತ್ತಾ , "ಏನಮ್ಮಾ ಟಿಕೆಟ್ ಸೈಜ್ ಮೇಲೆ ಡಿಫೆಂಡ್ ಆಗುತ್ತಾ?' ಎಂದಾಗ ಬಸ್ಸಿನಲ್ಲಿದ್ದವರೆಲ್ಲ ಗೊಳ್ಳನೆ ನಕ್ಕರು.
ತುಂಬಾ ಸಲ ನೋಡಿದ್ದೇನೆ..ಅದ್ಯಾಕೋ ಲೇಡಿ ಕಂಡಕ್ಟರ್ಗಳು ತಮ್ಮ ಕರ್ತವ್ಯದ ಮಿತಿಯನ್ನು ಮೀರಿ, ವಯಸ್ಸಾದವರೂ ಅನ್ನೋದನ್ನೂ ನೋಡದೆ ಅಸಂಬದ್ಧವಾಗಿ ಮಾತಾಡಿಬಿಡ್ತಾರೆ..ಅದೂ ಹೆಂಸರೆದುರು ಇನ್ನೂ ಎರಡು ಪಟ್ಟು ಹೆಚ್ಚೇ. ನನಗಾಗ 'ಹೆಣ್ಣಿಗೆ ಹೆಣ್ನೇ ಶತ್ರು' ಎನ್ನುವ ಮಾತು ನೆನಪಾಗದೆ ಇರಲಿಲ್ಲ!

Tuesday, August 26, 2008

ಹಂಪಿ ಎಂಬ ವಿಶ್ವ ಪಾರಂಪರಿಕ ಸ್ಥಳ

ಇದು ಜೀವನದ ಅಮೂಲ್ಯ ಕ್ಷಣ. ಒಂದನೇ ಕ್ಲಾಸಿನಿಂದ ಡಿಗ್ರಿ ತನಕ ಹಂಪಿ ಬಗ್ಗೆ ಓದಿದ್ದೇ ಓದಿದ್ದು. ಆದರೆ ಹಂಪಿ. ವಿಜಯನಗರ ಎಲ್ಲವನ್ನೂ ಕಲ್ಪನೆಯ ಗೂಡಲ್ಲಿ ಕಟ್ಟಿಕೊಂಡುಬಿಟ್ಟಿದೆ. ಮೊನ್ನೆ ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಫೀಸಿನಲ್ಲಿ ಗಲಾಟೆ ಮಾಡಿ ರಜಾ ತಕೋಂಡು ಹಂಪಿಗೆ ಹೋಗಿದ್ದೆ. ಹಂಪಿ ನೋಡೋದು ಎಷ್ಟೋ ದಿನಗಳ ಕನಸು, ಆಸೆ, ಹಂಬಲ, ಉತ್ಸಾಹ ಎಲ್ಲವೂ ಆಗಿತ್ತು. ಮೊದಲು ಪುಸ್ತಕದಲ್ಲಿ ಓದಿದ್ದು ಮಸ್ತಕದಲ್ಲಿ ಇಲ್ಲದಿದ್ದರೂ ಹಂಪಿಗೆ ಹೊರಡಲು ಕಾರಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಹಿಂದೆ ಓದಿದ ಪಾಠ, ಅದನ್ನು ಬೋಧಿಸಿದ ಮೇಷ್ಟ್ರು ಎಲ್ಲರೂ ನೆನಪಾದರು. ಅಂದು ಬೆಂಗಳೂರಲ್ಲಿ ಜಡಿಮಳೆ..ಆದರೂ ನಮ್ಮದು ಉತ್ಸಾಹದ ಪಯಣ!
ನನ್ನದು ಅದೇ ಮೊದಲ ಬಾರಿ ಉತ್ತರ ಕರ್ನಾಟಕ ಪ್ರವಾಸ. ನಮ್ಮ ಕಾರು ಚಿತ್ರದುರ್ಗ ಸಮೀಪಿಸುತ್ತಿದ್ದಂತೆ ಮಣ್ಣು ಮತ್ತಿದ ದೊಡ್ಡ ದೊಡ್ಡ ಗಣಿಲಾರಿಗಳು. ಯದ್ವತದ್ವವಾಗಿ ಓಡುವ ಲಾರಿಗಳು, ಎದುರಿಗೆ ಬರುವ ಸಣ್ಣ-ಪುಟ್ಟ ವಾಹನಗಳನ್ನೂ ಲೆಕ್ಕಿಸುವುದಿಲ್ಲ. ಅದರದ್ದೇ ಕಾರುಬಾರು! ಎದುರಿಂದ ಹೋಗುವ ಕಾರು, ಬಸ್ಸುಗಳು ಬೇಕಾದ್ರೆ ಹೊಂಡಕ್ಕೆ ಬಿದ್ದು-ಎದ್ದು ಹೋಗಬೇಕು. ರಸ್ತೆಯಂತೂ ಇದು ಹಂಪಿ ಎಂಬ ವಿಶ್ವ ಪಾರಂಪರಿಕ ಸ್ಥಳಕ್ಕೆ ಹೋಗುವ ರಸ್ತೆಯೇ ಅಲ್ಲ ಎನ್ನುವಷ್ಟು ಕೆಟ್ಟದಾಗಿದೆ. ಹೊಸ ಪೇಟೆ ಸಮೀಪಿಸುತ್ತಿದ್ದಂತೆ ಗಣಿಧೂಳಿನಿಂದಾಗಿ ರಸ್ತೆ ಪಕ್ಕದಲ್ಲಿರುವ ಮರಗಳೆಲ್ಲ ಕೆಂಪಾಗಿವೆ. ಎಲ್ಲೆಲ್ಲೂ ಧೂಳು, ಮಣ್ಣು. ಅದಕ್ಕಿಂತ ಮೊದಲು ಬೆಳಗ್ಗಿನ ಜಾವ ಚಿತ್ರದುರ್ಗ ಪ್ರವೇಶಿಸುತ್ತಿದ್ದಂತೆ 'ಚೆಂಬು ಹಿಡಿದು' ಹಿಂಡು ಹಿಂಡಾಗಿ ಗುಡ್ಡೆಗೆ ಹೋಗುವವರು ಕಾಣಸಿಗುತ್ತಾರೆ. ಬಹುಶಃ ಆ ಕಡೆ ಶೌಚಾಲಯಗಳೇ ಇಲ್ಲವೇನೋ? ಮಜಾ ಅಂದ್ರೆ ಕಚ್ಚೆ ಹಾಕಿ ಚೆಂಬು ಹಿಡಿದು ಹೋಗುವ ಅಜ್ಜ-ಅಜ್ಜಂದಿರನ್ನು ನೋಡೋದೇ. ಅಷ್ಟೇ ಅಲ್ಲ, ಬೆಳ್ಳಂಬೆಳ್ಳಗೆ ಜನರೆಲ್ಲ ಹೊಲದಲ್ಲಿ ಕೆಲ್ಸಮಾಡುತ್ತಿದ್ದರು!

ಅಂತೂ ನಮಗಾಗಿ ಕಾದಿರಿಸದ ಹೊಸಪೇಟೆಯ 'ಮಲ್ಲಿಗಿ' ವಸತಿಗೃಹದಲ್ಲಿ ಸ್ನಾನ ಮಾಡಿ, ತಿಂದು ಒಂದಷ್ಟು ನಿದ್ರೆ ಹೊಡ್ದು ಮದ್ಯಾಹ್ಮ ಹೊತ್ತಿನಲ್ಲಿ ಹಂಪಿಗೆ ನಮ್ಮ ಪಯಣ ಸಾಗಿತ್ತು. ಅಬ್ಬಬ್ಬಾ! ಕಲ್ಲುಗಳೇ ಇತಿಹಾಸವನ್ನು ಸಾರುವ ದೃಶ್ಯ ನೋಡಿ ತುಂಬಾ ಖುಷಿಯಾಯಿತು. ಪಾಪ! ಅನಾಥವಾಗಿ ಬಿದ್ದಿರುವ ಸ್ಮಾರಕಗಳನ್ನು ರಕ್ಷಿಸಲು ಅಲ್ಲಿ ಸಿಬ್ಬಂದಿಗಳೇ ಇಲ್ಲ. ಎಲ್ಲೆಂದರಲ್ಲಿ ಮೂತ್ರ ಮಾಡೋ ಗಂಡಸರು,ಸ ಬಿಯರ್ ಕುಡಿದು ಇಸ್ಪೀಟ್ ಆಡೋರು, (ಅಲ್ಲಿನ ಹುಡುಗರೇ ಈ ಬಿಯರ್ ತಂದುಕೊಡುತ್ತಿದ್ದರು. ಅವರಿಗೆ ಹಣ ನೀಡಲಾಗುತ್ತಿತ್ತು), ಕುಡಿದು ತೂರಾಡುವವರು, ಎಲ್ಲೆಂದರಲ್ಲಿ ಗಲೇಜೇ ಗಲೀಜು..ಕಾಲಿಡಲೂ ಅಸಹ್ಯವಾಗುವಷ್ಟು! ಇದೆಲ್ಲವನ್ನೂ ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಕಾಣಬಹುದು. ಆದರೆ ವಿಜಯವಿಠ್ಠಲ ದೇವಸ್ಥಾನದ ಸುತ್ತಮುತ್ತ ಸ್ಚಚ್ಛವಾಗಿದೆ. ಹಂಪಿಯಲ್ಲಿ ಹಲವಾರು ದೇವಾಲಯಗಳಿದ್ದರೂ ಪೂಜಾ ಕಾರ್ಯಕ್ರಮ ನಡೆಯುವ ದೇವಸ್ಥಾನ ವಿರೂಪಾಕ್ಷ ಮಾತ್ರ. ಆ ದೇವಾಲಯದ್ದೇ ಒಂದು ಬಾವಿಯಿದೆ.(ನಮ್ಮಲೆಲ್ಲ ದೇವರ ಬಾವಿ ಅಂದ್ರೆ ತುಂಬಾ ಸ್ಚಚ್ಛವಾಗಿ ಜನರೂ ಹತ್ತಿರ ಹೋಗುವಾಗಿಲ್ಲ) ಆ ಬಾವಿಯಲ್ಲಿ ಸ್ವಲ್ಪ ನೀರಿದ್ದರೂ, ಪ್ಲಾಸ್ಟಿಕ್ ಬಾಟಲುಗಳು, ಚಪ್ಪಲಿ, ಕಸಕಡ್ಡಿಗಳಿಂದ ತುಂಬಿಹೋಗಿದೆ. ಬಾವಿಗೆ ಇಣುಕಿದರೆ ಕೆಟ್ಟವಾಸನೆ! ಬಂದ ಭಕ್ತರೆಲ್ಲ ಅದಕ್ಕೆ ಉಗೀತಾರೆ, ಕಸ ಬಿಸಾಡ್ತಾರೆ. ಏನೇ ಮಾಡಿದ್ರೂ ಕೇಳೋರು ಯಾರೂ ಇಲ್ಲ.

ಮೊನ್ನೆ ಮೊನ್ನೆ ಯಾರೋ ವಿಗ್ರಹ ವಿರೂಪಗೊಳಿಸಿದ್ರು ಅನ್ನೋದು ಭಾರೀ ಸುದ್ದಿಯಾಗಿತ್ತು. ಯಾರೋ ಒಬ್ಬನನ್ನು ಬಂಧಿಸಿದ್ದಾರೆ ಕೂಡ. ಆದರೆ ವಿಗ್ರಹಗಳು ವಿರೂಪಗೊಳಿಸಿದ್ರು ಎನ್ನುವುದಕ್ಕಿಂತ ಮೊದಲು ಅಲ್ಲಿ ಸೆಕ್ಯೂರಿಟಿ ಗಾರ್ಡ್ಗಳೇ ಇಲ್ಲ. ತಮಾಷೆಗೆಂಬಂತೆ ಪುಢಾರಿಗಳು ಏನೇನೋ ಮಾಡ್ತಾ ಇರ್ತಾರೆ. ಅವರಿಗೇ ಅದೇ ಕೆಲ್ಸ. ಆದ್ರೆ ರಕ್ಷಣಿಗೂ ಜನ ಬೇಕಲ್ಲ? ಮೊನ್ನೆ ಬಂಧಿಸಿದ ಹುಡುಗನನ್ನು ವಿಚಾರಿಸದಾಗ ಆತ ಮೊದಲೊಮ್ಮೆ ತಮಾಷೆಗೆಂಬಂತೆ ಪ್ರಯತ್ನ ಮಾಡಿದ್ದ. ಆಗ ವಿಗ್ರಹಕ್ಕೆ ಏನು ಆಗಿಲ್ಲ..ಮತ್ತೊಮ್ಮೆ ಅದನ್ನೇ ಮಾಡಿದ್ದೇನೆಂದು ಹುಡುಗ ಹೇಳ್ತಾನೆ ಅಂತಾರೆ ಅಲ್ಲಿನ ಡಿಸಿ ಶಿವಪ್ಪ. ಭಯೋತ್ಪಾದಕರು, ಕಿಡಿಗೇಡಿಗಳು ಮೂರ್ತಿ ವಿರೂಪಗೊಳಿಸುವ ಹಲ್ಕ ಮಾಡಿದ್ದಾರೆಂದು ಬೊಬ್ಬಿಡುವ ನಮ್ಮ ಘನಧಾರಿಗಳು ಮೊದಲು ಅಲ್ಲಿನ ವಾಸ್ತವ ಅರಿಯಬೇಕಿದೆ. ಅಲ್ಲಿನ ಬೃಹತ್ ಬಂಡೆಗಳ ನಡುವೆ ಭಯೋತ್ಪಾದಕರು ಅಡಗಿದ್ದರೂ ಗೊತ್ತಾಗಲ್ಲ. ಆದರೆ ಅಲ್ಲಿ ಏನಾಗುತ್ತಿದೆ ಎನ್ನುವುದನ್ನೇ ತಿಳಿಯಲು ಯಾರೂ ಮುಂದಾಗುತ್ತಿಲ್ಲ. ಇದು ಹಂಪಿ ರಕ್ಷಣೆ ಬಗ್ಗೆ ಬೊಬ್ಬಿಡುವ ಮಹಾನುಭಾವರು ಮಾಡೋ ತಪ್ಪು ಕೆಲಸ.

ಆದರೆ ಹಂಪಿ ಹೇಗೇ ಇದ್ದರೂ ನೋಡುವ ಕಣ್ಣುಗಳಿಗೆ ದಣಿವಾಗದು. ಮತ್ತಷ್ಟು ನೋಡೋಣ..ನೋಡಿದಷ್ಟು ನೋಡದೆ ಮಿಸ್ ಮಾಡ್ಕೋತಾ ಇರುವ ಸ್ಥಳಗಳೇ ತುಂಬಾ. ನೂರು ದಿನ ಇದ್ರೂ ಹಂಪಿ ಪೂರ್ತಿ ನೋಡಿ ಆಗದು. ಇನ್ನು ಮೂರು ದಿನದಲ್ಲಿ ಏನು ನೋಡಲಿ? ಮೂರು ದಿನ ಅಲ್ಲೇ ಇದ್ದ ನಾವು, ಮಧ್ಯಾಹ್ನದ ಹೊತ್ನಲ್ಲಿ ದಾರಿ ಮಧ್ಯೆ ಊಟ ಮಾಡುತ್ತಿದ್ದೇವು. ಪ್ರವಾಹ, ಮಳೆಯಿಂದ ಮುನಿಸಿಕೊಂಡಿದ್ದ ತುಂಗಾ ಭದ್ರಾ ಕೂಡ ನಾವು ಹೋಗುವ ವೇಳೆ ಶಾಂತವಾಗಿ ಹರಿಯುತ್ತಿತ್ತು. ತುಂಗಾಭದ್ರಾ ಅಣೆಕಟ್ಟು ಮಾತ್ರ ರಾತ್ರಿ ಹೊತ್ತು ನೋಡೋದು ಕಣ್ಣಿಗೆ ಇಂಪಾಗಿತ್ತು. ಹಂಪಿಯಲ್ಲಿ ಮೂರು ದಿನದಲ್ಲಿ ಏನೇನೋ ನೋಡಕಾಯಿತೋ ಅದನ್ನೆಲ್ಲ ನೋಡಿಕೊಂಡ್ವಿ. ಆ ಕಲ್ಲುಬಂಡೆಗಳ ನಡುವೆ ನಡೆದು ನಡೆದೂ ನನ್ನ ಕಾಲುಗಳಂತೂ ಸೋತು ಹೋಗಿದ್ದುವು.

ನಂಗೇನೋ ಭಾನುವಾರ ಬೆಂಗಳೂರು ಕಡೆ ಬ್ಯಾಗ್ ಪ್ಯಾಕ್ ಮಾಡಿದಾಗಂತೂ ಅಲ್ಲೆ ಇದ್ದುಬಿಡೋಣ ಅನಿಸ್ತು. ಅಲ್ಲಿಂದ ದಾರಿಯಲ್ಲಿ ಚಿತ್ರದುರ್ಗದ ಕೋಟೆಗೂ ಬಂದೆವು. ಅಲ್ಲೊಂದು 3 ಗಂಟೆ ಸುತ್ತುವಾಗ ನಾನು ಬಿದ್ದುಬಿಟ್ಟಿದೆ. ಸುಸ್ತೋ ಸುಸ್ತು! ನಡೆಯಕ್ಕೂ ಆಗದ ಸ್ಥಿತಿ ಆಗಿತ್ತು. ಮತ್ತೆ ಬೆಂಗಳುರು ತಪ್ಪುವಾಗಲೇ ನಾನು ಸಾವರಿಸಿಕೊಂಡಿದ್ದು. ಇನ್ನೊಂದು ಸಲ ಹಂಪಿಗೆ ಹೋಗಬೇಕನಿಸಿದೆ. ಹೋಗಬೇಕು..ಅಂತೂ ಹಂಪಿಗೆ ಹೋಗುವ ಕನಸು ನನಸಾಗಿದೆ..ಜೀವನದಲ್ಲಿ ಒಂದೇ ಒಂದ್ಸಲ ಹಂಪಿನಾ ನೋಡಬೇಕು. ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯಲ್ಲಿ ಚಿನ್ನವನ್ನು ಸೇರಲ್ಲಿ ಅಳೆದು ವ್ಯಾಪಾರ ಮಾಡ್ತಾ ಇದ್ರಂತೆ..ಆದ್ರೆ ಈಗ ಹಂಪೀನೇ ವ್ಯಾಪಾರ ಮಾಡಕ್ಕೆ ಜನ ಕುಂತವ್ರೆ ಅನ್ತಾಳೆ ಅಲ್ಲೊಬ್ಬ ಅಜ್ಜಿ.

Wednesday, August 13, 2008

ಬಂತೂ..ಬಂತೂ..ರಾಖಿ ಹಬ್ಬ

ರಾಖಿಹಬ್ಬ ಬಂತೆಂದರೆ ಸಡಗರದ ಹಬ್ಬ. ಮನದಲ್ಲಿ ಖುಷಿಯ ಮಲ್ಲಿಗೆ. ಪ್ರೀತಿಯ ಅಣ್ಣಂದಿರಿಗೆ ರಾಖಿ ಕಟ್ಟೋದೇ ಹಬ್ಬ ಸಂಭ್ರಮ. ನನಗೆ ಒಡಹುಟ್ಟಿದ ಅಣ್ಣಂದಿರು ಯಾರೂ ಇಲ್ಲ. ಆದರೂ ತಂಗೀ..ತಂಗೀ ಎನ್ನುವ, ಬದುಕ ತುಂಬಾ ಪ್ರೀತಿಯ ಸವಿ ನೀಡುವ ಮಮತೆಯ ಅಣ್ಣಂದಿರ ಮಡಿಲು ನಂಗಿದೆ. ಪ್ರತಿ ವರ್ಷ ರಾಖಿ ಹಬ್ಬ ಬಂದಾಗಲೂ ಅವರಿಗೆ ರಾಖಿ ಕಟ್ಟುತ್ತೇನೆ. ಆದರೆ ಬೆಂಗಳೂರಿಗೆ ಬಂದು ಎರಡು ವರ್ಷ ಆದರೂ, ಕೈಯಾರೆ ರಾಖಿ ಕಟ್ಟುವ ಭಾಗ್ಯ ದೊರೆತಿಲ್ಲ. ಆದರೂ ಅಂಚೆ ಮೂಲಕ ರಾಖಿ ಕಳುಹಹಿಸಿಕೊಡುತ್ತೇನೆ. ಅಷ್ಟೇ ಪ್ರೀತಿಯಿಂದ ಅವರು ಸ್ವೀಕರಿಸುತ್ತಾರೆ ಕೂಡ.

ಜಗತ್ತಿನಲ್ಲಿ ಪ್ರೀತಿಗೆ ಅಗ್ರಸ್ಥಾನ. ಮನುಷ್ಯ ಸಂಬಂಧಗಳ ಮೂಲಕ್ಕೆ ಪ್ರೀತಿಯೇ ಕಾರಣ. ಪ್ರೀತಿಗೆ ಹಲವಾರು ಮುಖಗಳಿರಬಹುದು. ಆದರೆ ಪ್ರೀತಿಸುವ ಹೃದಯ, ಮನಸ್ಸು ಒಂದೇ. ಇಂತಹ ಅಮೂಲ್ಯ ಪ್ರೀತಿಯಲ್ಲಿ ಅಣ್ಣ-ತಂಗಿಯರ ಪ್ರೀತಿಯೂ ಒಂದು. ಬಾಲ್ಯದಿಂದಲೂ ಜೊತೆ-ಜೊತೆಯಾಗಿ ಬೆಳೆದು, ಬದುಕಿಗೆ ಪ್ರೀತಿಯ ಸ್ಪರ್ಶ ನೀಡುವ ಸಹೋದರ-ಸಹೋದರಿಯರಲ್ಲಿ ಮೊಗೆದಷ್ಟು ಬತ್ತದ ಪ್ರೀತಿಯಿರುತ್ತದೆ. ತಂಗಿಯನ್ನು ತುಂಬಾ ಪ್ರೀತಿಸುವ ಅಣ್ಣ, ಅಣ್ಣನನ್ನು ತುಂಬಾ ಪ್ರೀತಿಸುವ, ಗೌರವಿಸುವ ತಂಗಿಯಿದ್ದರೆ ಬದುಕೆಷ್ಟು ಚೆನ್ನ.

ಅಣ್ಣನೋರ್ವ ಒಳ್ಳೆಯ ಸ್ನೇಹಿತನಾಗಬಲ್ಲ. ಪ್ರೀತಿಯಿಂದ ಜೋಗುಳ ಹಾಡುವ ಅಮ್ಮನಾಗಬಲ್ಲ..ಬದುಕಿಗೆ ಕೈಗನ್ನಡಿಯಾಗಬಲ್ಲ. ಅಣ್ಣನ ಪ್ರೀತಿಯೆಂದರೆ ಅಮ್ಮನ ಮಮತೆ..ಅಣ್ಣನ ಮಡಿಲೆಂದರೆ ಅಮ್ಮನ ಒಡಲು..ಪ್ರೀತಿಯ ಕಡಲು. ಇಂಥ ಬಾಂಧವ್ಯ ಸದಾ ಚಿರಾಯು. ಭಾವನೆಗಳು ಮಣ್ಣಾಗುತ್ತಿರುವ ಈಗಿನ ಪ್ರಾಪಂಚಿಕ ಸನ್ನಿವೇಶದಲ್ಲಿ ರಾಖಿ ಹಬ್ಬದಂಥ ವಿಶೇಷ ದಿನಗಳು ಬಾಂಧವ್ಯ, ಭಾವನೆಗಳ ಬೆಸುಗೆಗೆ ಮುನ್ನುಡಿಯಾಗಬೇಕು. ಪ್ರೀತಿಯ ಅಣ್ಣಂದಿರಿಗೆ ರಾಖಿ ಹಬ್ಬದ ಶುಭಾಶಯಗಳು.

Thursday, August 7, 2008

ಜಾಣ ಜಾರಿ ಬಿದ್ದಾಗ...

ನಿಮಗೆ ತಿಳಿದಿದೆಯೋ ಇಲ್ಲವೋ. ಇದೊಂದು ಸುದ್ದಿಯಷ್ಟೇ. ಬರೆಯೋಣ ಅನಿಸ್ತು..ಬರೆದೆ. ಇತ್ತೀಚೆಗೆ(ಜುಲೈ 26-2008) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೈದರಾಬಾದ್ಗೆ ಭೇಟಿ ನೀಡಿದ್ದರು. ಹೋದಲೆಲ್ಲಾ ರೋಡ್ ಶೋ, ವಿದ್ಯಾರ್ಥಿಗಳು, ಯುವಕರ ಜೊತೆ ಸಂವಾದ ನಡೆಸುವ ಈ ಯುವ ರಾಜಕಾರಣಿ ಇಲ್ಲೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದರು. ಇದು ನಡೆದಿದ್ದು ಇಲ್ಲಿನ ರವೀಂದ್ರ ಭಾರತೀಯಲ್ಲಿ ನಡೆದ ಸಂವಾದದಲ್ಲಿ. ಪ್ರಮುಖವಾಗಿ ಅಣುಒಪ್ಪಂದದ ಬಗ್ಗೆಯೇ ಮಾತಾಡಿದ್ದರು. "ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುವುದು/ಸೋಲುವುದು ಮುಖ್ಯವಲ್ಲ. ಮಧ್ಯಮ ವರ್ಗ ಮತ್ತು ದೇಶದ ಪ್ರಗತಿಗೆ ಅಣು ಒಪ್ಪಂದ ಸಹಕಾರಿ. ಆದ್ದರಿಂದ ಅಣುಒಪ್ಪಂದವನ್ನು ನಾನು ಬೆಂಬಲಿಸುತ್ತೇನೆ" ಎಂದರು ರಾಹುಲ್. ಇದೇ ಮಾತನ್ನು ಮುಂದುರೆಸಿ, ಇದರಿಂದ ದೇಶದ ಜನತೆಗೆ ನೌಕರಿ ಸಿಗುತ್ತದೆ, ಬಡವರ ಮನೆಯಲ್ಲಿ ಬೆಳಕು ಸಿಗುತ್ತೆ, ವಿದ್ಯುತ್ ಉತ್ಪಾದನೆ ಹೆಚ್ಚಲಿದೆ..ಹೀಗೇ ತನ್ನ ಭಾಷಣ ಮುಂದುವರೆಸಿದರು.
ಹೀಗೇ ಮಾತು ಮುಂದುವರೆಯುತ್ತಿದ್ದಂತೆ, ಒಬ್ಬ ವಿದ್ಯಾರ್ಥಿನಿ ಐಎಇಎ(ಅಂತರ್ ರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ) ಪೂರ್ಣರೂಪ ಏನು ಸರ್? ಎಂದಾಗ ರಾಹುಲ್ ಕಕ್ಕಾಬಿಕ್ಕಿ! 'ಕ್ಷಮಿಸಿ ನನಗೆ ಗೊತ್ತಿಲ್ಲ' ಎಂದುಬಿಟ್ಟರು.

ಈ ಸುದ್ದಿ ಇಂಗ್ಲೀಷ್ ಚಾನೆಲ್ ಒಂದರಲ್ಲಿ ಪ್ರಸಾರವಾಯಿತು. ಕನ್ನಡದ ಚಾನೆಲ್ ನಲ್ಲಿ ಪ್ರಸಾರವಾಗಿಲ್ಲ. ಕನ್ನಡದ ಒಂದು ಪತ್ರಿಕೆ ಇದೇ ಸುದ್ದಿಯನ್ನು ಪ್ರಕಟಿಸಿದೆ,,ಇದು ನಾನು ತಿಳಿದ ಮಾಹಿತಿ. ಇಂಥ ಸುದ್ದಿಯನ್ನು ಮುಲಾಜಿಯಿಲ್ಲದೆ ಪ್ರಕಟಿಸಿದರೆ, ನಮ್ಮ ಜನನಾಯಕರ ಹಣೆಬರಹ ತಿಳಿಯುತ್ತದೆ. ಜಾಣರು ಜಾರಿ ಬೀಳುವುದು ಇಂಥ ವಿಚಾರದಲ್ಲಿಯೇ. ಏನೂ ಗೊತ್ತಿಲ್ಲದೆಯೇ ವೇದಿಕೆ ಮೇಲೆ ನಿಂತು ಚಪ್ಪಾಳೆ ಗಿಟ್ಟಿಸಲು ತೋರಿಗಷ್ಟೇ ಪುಂಖಾನುಪುಂಖವಾಗಿ ಮಾತಾಡುವ ಇಂಥ 'ಬುದ್ಧಿವಂತ'ರಿಂದ ದೇಶ ಎಷ್ಟರಮಟ್ಟಿಗೆ ಉದ್ಧಾರ ಆದೀತು? ರಾಹುಲ್ ಒಂದು ಪುಟ್ಟ ನಿದರ್ಶನ ಅಷ್ಟೇ.

ಮದುವೆ ಅನ್ನೋದು ಎಷ್ಟೊಂದು ಬದಲಾವಣೆ ತರುತ್ತೆ?

ಬೆಳಿಗ್ಗೆ ಆಫೀಸಿನಲ್ಲಿ ಬಂದು ಕುಳಿತಾಗ ಇದ್ದಕ್ಕಿದ್ದಂತೆ ಮಿಸ್ಡ್ ಕಾಲ್! ವಾಪಸ್ ಕರೆ ಮಾಡಿದ್ದೆ. ಮಮತಾ ನನ್ನ ಹಳೆಯ ಗೆಳತಿ. ಅದೂ ಒಂದು ವರ್ಷಗಳ ಬಳಿಕ ಅವಳ ಬಳಿ ಮಾತಿಗೆ ಶುರುಹಚ್ಚಿದೆ. ಅವಳನ್ನು ನೋಡದೆ ಮಾತ್ರ ಎರಡು-ಮೂರು ವರ್ಷಗಳೂ ಕಳೆದಿದ್ದವೆ. ನಾನು ಅವಳನ್ನು ನೋಡಿದಾಗ ನಿಶ್ಚಲ್ ಹುಟ್ಟಿ ಕೆಲವೇ ದಿನಗಳಾಗಿದ್ದವಷ್ಟೇ. ಈಗ ಮತ್ತೊಂದು ಪುಟ್ಟ ಮಗು ಮಡಿಲಲ್ಲಿದೆ. ನಾನು ಅವಳು ಪಿಯುಸಿಯಲ್ಲಿ ಒಂದೇ ಹಾಸ್ಟೇಲ್. ಉಜಿರೆಯ ಬಿಸಿಎಂ ಹಾಸ್ಟೇಲ್ ನಮಗೆ ಆ ಎರಡು ವರ್ಷ ಆಶ್ರಯ ಒದಗಿಸಿತ್ತು. ಬಹುಶಃ ಹಾಸ್ಟೇಲ್ ಅಂದ್ರೆ ಎಲ್ಲರೂ ಹಿಂಗೇ ಇರ್ತಾರೆ ಅನ್ನೋದು ಗೊತ್ತಿಲ್ಲ. ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯವಾಗಿದ್ದರೆ, ಅವಳದ್ದು ಕಲಾವಿಷಯ.

ನಮ್ಮ ಅಮ್ಮ -ಅವಳ ಅಮ್ಮ ಇಬ್ಬರು ಮಾತಾಡಿಕೊಂಡು ನಮ್ಮನ್ನು ಒಟ್ಟಿಗೆ ಒಂದೇ ಕಾಲೇಜಿಗೆ ಸೇರಿಸಿದ್ದರು. ಅಬ್ಬಬ್ಬಾ! ಇಬ್ಬರಿಗೂ ಹಾಸ್ಟೇಲ್ ಹೊಸದು. ಹಾಸ್ಟೇಲಿಗೆ ಹೋದ ಮೊದಲನೇ ದಿನ ಇಬ್ಬರೂ ಅಳುವುದನ್ನೇ ಕಾಯಕ ಮಾಡ್ಕೊಂಡು ಕ್ಲಾಸಿಗೆ ಚಕ್ಕರ್ ಹಾಕಿದ್ದೇವು. ನನ್ನ ಸರದಿ ಹಾಗೇ 5 ದಿನ ಮುಂದುವರೆದಿತ್ತು. ಪ್ರತಿ ದಿನ ನಮ್ಮಿಬ್ಬರದ್ದು ಪಕ್ಕಾ ಕೆಲ್ಸ ಅಳೋದು ಮಾತ್ರ. ಅದೂ ಎಲ್ಲರೆದುರು ಅಲ್ಲ, ಬಾತ್ ರೂಂಗೆ ಹೋಗಿ ಅಳೋದು. ನಮ್ಮ ಅಮ್ಮನವ್ರು ಎಂತಾ ನರಕಕ್ಕೆ ತಳ್ಳಿದ್ರು ನಮ್ಮನ್ನು ಅಂತ ಅಂದುಕೊಳ್ಳುತ್ತಿದ್ದೇವು. ಅಮ್ಮನವರನ್ನು ಹಿಗ್ಗಾ-ಮುಗ್ಗಾ ಬೈಯುತ್ತಿದ್ದೇವು.

ಒಂದು ರೀತೀಲಿ ಹಾಸ್ಟೇಲ್ ತೀರಾ ಹಿಂಸೆ ಆಗಿಹೋಗಿತ್ತು. ಬೆಳಿಗೆದ್ದು ಬಾತ್ ರೂಂಗೆ ಜಗಳ, ತಿಂಡಿಗೆ ಸಾಲಲ್ಲಿ ನಿಂತಾಗ ಜಗಳ, ಭಜನೆ ಮಾಡುವಾಗ ಜಗಳ, ಮಲಗುವಾಗ ಜಗಳ..ಇದನ್ನೆಲ್ಲ ಹಾಸ್ಟೇಲಲ್ಲಿ ಮಾತ್ರ ನೋಡಲು ಸಾಧ್ಯ. ಇದೆಲ್ಲ ನಮಗೆ ಹೊಸತು. ಈ ನಡುವೆ ನಾವಿಬ್ಬರೂ ಹೆಚ್ಚಾಗಿ ಜತೆಗೇ ಕಳೆಯುತ್ತಿದ್ದೇವು. ನಮಗೆ ಒಂದೇ ಬೆಡ್ ಶೀಟ್, ಒಂದೇ ಸೋಪು, ಒಂದೇ ಚಾಪೆ, ಒಂದೇ ಬಕೇಟ್..ಎಲ್ಲವೂ ನಮಗೊಂದೇ. ನಾವು ಯಾರ ಸುದ್ದಿಗೂ ಹೋಗದೆ ನಮ್ಮ ಪಾಡಿಗಿರುತ್ತಿದ್ದೇವು. ಬಾಯಿ ತೆಗೆದ್ರೆ ಯಾರಾದ್ರೂ ಬೈದುಬಿಟ್ಟರೆ ಅಂತ ಭಯ.

ಎರಡು ವರ್ಷ ಹೇಗೋ ಕಳೆದುಹೋಯಿತು. ಬಹುಶಃ ಯಾವುದೇ ರಜೆಯನ್ನು ಹಾಸ್ಟೇಲಿನಲ್ಲಿ ಕಳೆದಿಲ್ಲ. ಮನೆಗೆ ಬಂದುಬಿಡೋ ಚಾಳಿ. ಎರಡು ವರ್ಷ ಕಳೆದಿದ್ದೇ ತಡ, ಅವಳಿಗೆ ಮದುವೆನೂ ಆಯಿತು. ಆವಾಗ ನಾನು ಪ್ರಥಮ ಡಿಗ್ರಿ. ಅವಳ ಮದುವೆಯಲ್ಲಿ ನನ್ನದೇ ಉಸ್ತುವಾರಿ. ಎರಡು ವಾರ ಭರ್ಜರಿ ಚಕ್ಕರ್. ಅವಳ ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಅವಳ ಅಪ್ಪ-ಅಮ್ಮನ ಜೊತೆ ನಾನೇ ಇರ್ತಾ ಇದೆ. ಏಕೆಂದ್ರೆ ಅವಳು ಗಂಡನ ಮನೆಗೆ ಹೋದ ಮೇಲೆ ಮನೆನೇ ಬಿಕೋ ಅನ್ತಾ ಇತ್ತು. ಒಂದು ರೀತೀಲಿ ಅವಳ ಅಪ್ಪ-ಅಮ್ಮನಿಗೆ ನಾನೂ ಮಗಳು ಇದ್ದಂತೆ. ಮತ್ತೆರಡು ವರ್ಷ ಡಿಗ್ರಿ ಯಲ್ಲಿರುವಾಗ ನಾನು ಹೆಚ್ಚಾಗಿ ಅವರ ಮನೆಯಲ್ಲೇ ಇದ್ದೆ. ಈಗ್ಲೂ ಅಷ್ಟೇ ಉಪ್ಪಿನಂಗಡಿಯ ಆಂಟಿ-ಅಂಕಲ್ ಅಂದ್ರೆ ನನಗೆ ತುಂಬಾ ಇಷ್ಟ. ಅವರಿಗೂ ಅಷ್ಠೇ.

ಮಮತಾ ಮಾತಾಡಿದ್ದು ನನ್ನ ಮೊದಲಿನ ನೆನಪುಗಳನ್ನೆಲ್ಲಾ ಮತ್ತೊಮ್ಮೆ ನೆನೆಸಿಕೊಳ್ಳುವಂತಾಯಿತು. ಒಂದಷ್ಟು ಖುಷಿ ಖುಷಿ ಕ್ಷಣಗಳನ್ಮು ಅವಳೂ ಬಿಚ್ಚಿದ್ದಳು. ಆದರೆ ಅವಳ ಇಬ್ಬರೂ ಪುಟ್ಟ ಕಂದಮ್ಮಗಳು ಮೊಬೈಲ್ ಕೊಡು ಎಂದು ಅಮ್ಮನತ್ರ ಜಗಳ ಆಡುತ್ತಿದ್ದವು. ಅವಳು ಆಗಾಗ, ನಿಲ್ಲು ಚಿತ್ರಾ ಮಾತಾಡ್ತೀನಿ..ಇವ್ರದ್ದು ಯಾವಾಗ್ಲೂ ಹೀಗೇ ತಲೆಹರಟೆ,,ಅಂತೇಳಿ ಮಾತಾಡುತ್ತಿದ್ದಳು. ಹಾಸ್ಟೇಲಿನಲ್ಲಿರುವಾಗ ತುಂಟಿ-ತುಂಟಿಯಾಗಿದ್ದ ಮಮತಾನ ಮಾತಿನಲ್ಲಿ ಈಗ ಎಷ್ಟೋ ಬದಲಾವಣೆಯಾಗಿದೆ. ಮಾತು-ಮಾತಿಗೂ ಗಂಡ, ಅತ್ತೆ, ಮಾವ, ಮಕ್ಕಳು ಅನ್ತಾಳೆ. ಮಗೂನ ಫ್ಲೇ ಹೋಂ ಗೆ ಕಳಿಸ್ಬೇಕು ಅಂತಾಳೆ. ಜೊತೆಗೆ ನಮ್ಮನೆಯ ವಿಚಾರಗಳನ್ನೂ ಕೇಳಲು ಮರೆಯುತ್ತಿಲ್ಲ. ಜೀವನದಲ್ಲಿ ಒಂದೇ ಬಾರಿ ನಡೆಯುವ ಮದುವೆ ಅನ್ನೋದು ನಮ್ಮಲ್ಲಿ ಎಷ್ಟೆಲ್ಲ ಬದಲಾವಣೆ ಮಾಡಿಬಿಡುತ್ತೆ. ಎಷ್ಟೆಲ್ಲ ಜವಾಬ್ದಾರಿ ನೀಡುತ್ತೆ, ಬಾಲ್ಯದ ತುಂಟಾಟ, ಮಕ್ಕಳಾಟವನ್ನು ಮರೆತು ನಮ್ಮ ಮಕ್ಕಳಲ್ಲಿ 'ನಮ್ಮನ್ನು' ಕಾಣುತ್ತೇವೆ. ಸೃಷ್ಟಿ ವೈಚಿತ್ರ್ಯ ಅಲ್ಲವೇ? ಬಹುಶಃ ಮುಂದೆ ನನಗೆ ಮದುವೆಯಾದ್ರೂ ಹೀಗೇ ಇರಬಹುದೇನೋ ಅಲ್ಲವೇ?

Wednesday, August 6, 2008

ಅಭಿವೃದ್ಧಿಯೋ ಬರೇ ಘೋಷಣೆಯೋ?

ಇತ್ತೀಚೆಗೆ ಇಬ್ಬರು ಐಎಎಸ್ ಅಧಿಕಾರಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕುರಿತು ಹಗುರವಾಗಿ ಮಾತನಾಡಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಒಂದೆರಡು ದಿನಗಳು ಮಾತ್ರ, ಅಷ್ಟೇ ವೇಗವಾಗಿ ಸುದ್ದಿ ಮಾಧ್ಯಮಗಳಿಗೆ, ಜನರಿಗೆ ಮರೆತೇಬಿಟ್ಟಿದೆ. ಬಳಿಕ ಯಾವುದೇ ಪತ್ರಿಕೆಗಳಿಗೂ ಈ ಸುದ್ದಿ ಮಹತ್ವ ಎನಿಸಿಲ್ಲ. ಒಂದು ಪತ್ರಿಕೇಲಿ ಕೆಲ್ಸ ಮಾಡುತ್ತಿರುವ ನಾನು ಹೀಗೆಲ್ಲ ಹೇಳಬಾರದು ಎಂದನಿಸಬಹುದು, ಆದರೆ ಕನ್ನಡದ ಜನಸಾಮಾನ್ಯನ ಮಾತನ್ನು ನಾನಿಲ್ಲಿ ಹೇಳಬಯಸುತ್ತೇನೆ.

ನಾಡು-ನುಡಿಯ ವಿಚಾರ ಬಂದಾಗ ಕರ್ನಾಟಕದಲ್ಲಿರುವವರೆಲ್ಲ ಮಾಡುವುದು ಇದನ್ನೇ. ಮೊನ್ನೆ ಮೊನ್ನೆ ಕುಚೇಲನ್ ಸಿನಿಮಾ ಬಿಡುಗಡೆಯಾದಾಗ ರಜನಿಕಾಂತ್ ಕನ್ನಡದ ಜನತೆಯ ಕ್ಷಮೆ ಕೋರಿದ್ದಾರೆ. ಭಾಷೆ ವಿಚಾರ ಬಂದಾಗ ದಿನಕ್ಕೊಂದು ನುಡಿ, ಅಭಿಪ್ರಾಯಗಳು ಬದಲಾವಣೆಯಾಗುತ್ತಲೇ ಇರುತ್ತವೆ. ಐಎಎಸ್ ಅಧಿಕಾರಿಗಳು ಹಗುರ ಮಾತಾಡಿದ್ದರು ಅನ್ನೋದೇ ಸುದ್ದಿಯಾಯಿತು ವಿನಃ ಇದರಿಂದ ಅವರ ಮೇಲೇ ಏನೂ ಪರಿಣಾಮ ಆಗಲಿಲ್ಲ. ನಮ್ಮ ಜನಪ್ರತಿಧಿಗಳು ಕನ್ನಡ ಭಾಷೆ ವಿಚಾರ ಬಂದಾಗ, ಯಾರು ಕನ್ನಡವನ್ನು ಆಲಕ್ಷ ಮಾಡುತ್ತಾರೋ ಅಂಥವರನ್ನು ಕರ್ನಾಟಕದಲ್ಲಿ ಇರಲು ಬಿಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿಬಿಡುತ್ತಾರೆ. ಆದರೆ ಇದರಿಂದ ಮಣ್ಣಂಗಟ್ಟಿಯೂ ಆಗಲ್ಲ. ಈವರೆಗೆ ಆಗಿಲ್ಲ. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಕೂಡ, ಸರ್ಕಾರಕ್ಕೆ ಬರುವ ಕಡತಗಳು ಕನ್ನಡದಲ್ಲೇ ಇರದಿದ್ದರೆ ಅದನ್ನು ಮುಟ್ಟಿಯೂ ನೋಡಲ್ಲ ಅಂದಿದ್ದಾರೆ. ಆದರೆ ಎಷ್ಟರಮಟ್ಟಿಗೆ ಕಾರ್ಯಗತವಾಗಿದೆ? ಇತ್ತೀಚೆಗೆ ಇದೇ ಮುಖ್ಯಮಂತ್ರಿ ಚಂದ್ರು ಅವರು, ಕನ್ನಡದಲ್ಲಿ ನಾಮಫಲಕಗಳಿಲ್ಲದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗುವುದು ಅಥವಾ ಐದರಿಂದ ಹತ್ತು ಸಾವಿರ ದಂಡ ಎಂದು ಘೋಷಿಸಿಬಿಟ್ಟಿದ್ದಾರೆ ಈ ಹಿಂದೆ ಸಿದ್ದಲಿಂಗಯ್ಯ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ ಇಂಥದ್ದೇ ಘೋಷಣೆ ಮಾಡಿದ್ದರು. ಆದರೆ ಯಾವುದೇ ಫಲ ನೀಡಿಲ್ಲ. ಚಂದ್ರು ಅವರೂ ಹೀಗೇ ಹೇಳಿದ್ದಾರೆ. ಆದರೆ ಆಮೇಲೆ ಅದರ ಪತ್ತೆಯೇ ಇಲ್ಲ. ಕನ್ನಡದ ಬಗ್ಗೆ ಜನಪ್ರತಿನಿಧಿಗಳು ನೀಡಿರುವ ಪ್ರತಿ ಭರವಸೆಗಳು ಬರೇ ಭರವಸೆಗಳಾಗಿಯೇ ಉಳಿಯುತ್ತವೆ. ಅದಕ್ಕೇ ಐಎಎಸ್ ಅಧಿಕಾರಿಗಳಿರಲಿ, ಎಲ್ಲರೂ ಕನ್ನಡದ ಬಗ್ಗೆ ಉಡಾಫೆಯ ಮಾತುಗಳನ್ನಾಡುತ್ತಲೇ ಇದ್ದಾರೆ. ಅವರಿಗೆ ಬಿಸಿತಟ್ಟುವ ಕೆಲಸಗಳನ್ನು ಯಾವುದೇ ಸರ್ಕಾರ ಮಾಡಿಲ್ಲ.

ಬಹುಶಃ ನಾನು ಹೇಳಿರುವ ಇದೇ ಮಾತನ್ನು ಅದೆಷ್ಟೋ ವರ್ಷಗಳಿಂದ ಕನ್ನಡಿಗರು ಕೇಳುತ್ತಲೇ ಇರಬಹುದು..ಇದೆಲ್ಲಾ ಹಳೆಯ ವಿಚಾರ ಅಂದುಬಿಡಬಹುದು. ಆದರೆ ಯಾಕೋ ನನ್ನ ತೃಪ್ತಿಗೆ ನಾನು ಬರೆಯುತ್ತಿದ್ದೇನೆ ಅಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟೇ ಉನ್ನತ ಅಧಿಕಾರಿಯಾಗಿರಲಿ, ಕನ್ನಡದ ಬಗ್ಗೆ ಉಡಾಫೆಯ ಮಾತನ್ನಾಡಿದ್ದರೆ, ಅವರನ್ನು ದಂಡಿಸಬೇಕು. ಕನ್ನಡಕ್ಕಾಗಿಯೇ ಇರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಬಗ್ಗೆ ಅವಹೇಳನ ಮಾಡಿದ್ದವವರನ್ನು ದಂಡಿಸುವ ಅಧಿಕಾರ ಪಡೆಯಬೇಕು. ಸುಮ್ನೆ ಕನ್ನಡ ಕನ್ನಡ ಅಂತ ಬಡ್ಕೊಂಡ್ರೆ ಸಾಲದು. ಕನ್ನಡ ಸಾಹಿತ್ಯ ಪರಿಷತ್ ಗೆ ಹೋದರೆ, ಬರೇ ಕಚ್ಚಾಡುವ ಸಾಹಿತಿಗಳೇ ಕಾಣುತ್ತಾರೆ. ಪ್ರತಿಯೊಬ್ಬರೂ ತಾ ಮೇಲೂ-ನಾ ಮೇಲೂ ಎಂದು ಥೇಟ್ ವಿಧಾನಸೌಧದಲ್ಲಿ ನಡೆಯುವ ಕಲಾಪಗಳ ತರ. ಇದರಿಂದ ಪ್ರಯೋಜನವೂ ಆಗಲ್ಲ. ರಾಜ್ಯೋತ್ಸವ ದಿನದಂದು ಬೇಕಾಬಿಟ್ಟಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿದ್ದರೆ ಕನ್ನಡ ಉದ್ಧಾರ ಆಗಲ್ಲ ಎನ್ನುವುದನ್ನು ಸರ್ಕಾರವೂ ಮನಗಾನಬೇಕು. ಹೀಗಿದ್ದರೆ ಅನಾಥ ಮಗುವಿನಂತೆ ಅಳುವ ನಮ್ಮ ಕನ್ನಡವನ್ನು ರಕ್ಷಿಸಬಹುದೇನೋ?