Wednesday, April 29, 2009

ಇಂದಲ್ಲ ನಾಳೆ ಹೊಸ ಭಾನು ತೆರೆದೀತು...!

ಅಂದು ಅಮ್ಮ ಬೆಳ್ಳಂಬೆಳಿಗ್ಗೆ ಬೈದುಬಿಟ್ರು. ಹೆತ್ತ ಮಗಳು ಬೆಂಗಳೂರಿನಲ್ಲಿ ದುಡಿಯಾಕೆ ಶುರುಮಾಡಿ ವರ್ಷಗಳು ಸರಿದ್ರೂ ಕಿವಿಯಲ್ಲಿ ಮಿನುಗೋ ಓಲೆಗಳಿಲ್ಲ ಅಂತ ಅಮ್ಮನ ಹುಸಿಮುನಿಸು. ಹ್ಞಾಂ..ಮೊನ್ನೆ ಮೊನ್ನೆ ನನ್ನ ಆತ್ಮೀಯ ಗೆಳೆಯನೊಬ್ಬ 'ಎಂಥ ಮಾರಾಯ್ತಿ..ನಾ ಹುಟ್ಟಿ 25 ವರ್ಷ ಆಯಿತು, ಕೆಲಸಕ್ಕೆ ಸೇರಿ ಎರಡು ವರ್ಷ ಆಯಿತು. ನನಗಾಗಿ ಮಣ್ಣಂಗಟ್ಟಿಯೂ ಮಾಡಿಟ್ಟಿಲ್ಲ. ಅಮ್ಮಂಗೇನೂ ಕೊಡಿಲ್ಲ ಚಿತ್ರಾ' ಅಂತ ಗಳಗಳನೆ ಅತ್ತು ವಾರವಿಡೀ ಅದನ್ನೇ ಯೋಚಿಸಿ ತಲೆಕೆಡಿಸಿಕೊಂಡಿದ್ದ. ಭಾವಗೀತೆಗಳ ಜೊತೆ ಮಾತನಾಡುವ ಆತನಿಗೆ ಭಾವಗೀತೆಗಳೂ ಮುದ ನೀಡಲಿಲ್ಲ. ತಲೆತುಂಬಾ ಆಕಾಶ ತಲೆಮೇಲೆ ಬಿದ್ದಂಗೆ ಚಡಪಸುತ್ತಿದ್ದ. ಬರೋ ಕ್ಷಣಗಳನ್ನು ಪ್ರೀತಿಯಿಂದ ಸ್ವಾಗತಿಸದೆ, ಇರೋ ಪುಟ್ಟ ಖುಷಿಯ ಕ್ಷಣವನ್ನು ಕಳೆದುಕೊಳ್ಳೋದಕ್ಕೆ ಇದೊಂದು ಪುಟ್ಟ ಉದಾಹರಣೆ ಅಲ್ವೇ? ಇಂಥ ಸಾವಿರಾರು ತುಣುಕುಗಳು ಒಂದರ ಮೇಲೊಂದರಂತೆ ನನ್ನ ಮನದ ಪರದೆ ಮೇಲೆ ಹಾದುಹೋಗುತ್ತಲೇ ಇರುತ್ತವೆ.

ಪ್ರೀತಿಸಿದ ಹುಡುಗ/ಹುಡುಗಿ ಕೈ ಕೊಟ್ಟು ಹೋದಾಗ ಕೊರಗಿ ಕೊರಗಿ ಕಣ್ಣೀರಾಗ್ತೀವಿ. ಜೀವನದ ಜಂಜಾಟಗಳಲ್ಲಿ ಬಳಲಿ ಬೆಂಡಾಗಿ ಕತ್ತಲ ಕೂಪದಲ್ಲೇ ಮಲಗಿಬಡ್ತೀವಿ. ಹೆತ್ತು-ಹೊತ್ತು ಬೆಳೆಸಿದ ಅಪ್ಪ-ಅಮ್ಮ ನಮಗಾಗಿ ಕಷ್ಟದ ಕೋಡಿಯಲ್ಲೇ ಕೈ ತೊಳೆಯುವಾಗ ನಾ ಬದುಕಿದ್ದು ಪ್ರಯೋಜನ ವಿಲ್ಲಾಂತ ನಿರಾಶಾರಾಗ್ತೀವಿ. ಜೀವನ ಪರ್ಯಂತ ಜೊತೆಗಿರ್ತೀನಿ..ನಿನ್ನ ನೋವು-ನಲಿವಿನಲ್ಲೂ ನನ್ನ ಕಣ್ಣು ಪಾಲು ಪಡೆಯುತ್ತೆ ಎಂದ ಚಡ್ಡಿ ದೋಸ್ತ ದೂರಾದಾಗ ನಾ ನಿನ್ನ ಬಿಟ್ಟು ಹೇಗಿರಲಿ? ಎನ್ನುತ್ತಾ ಕೊರಗಿ ಕೊರಗಿ ಸುಣ್ಣವಾಗ್ತೀವಿ. ಒಂಟಿತನವನ್ನು ನೆನೆನೆನೆದು ದಿಂಬು ಒದ್ದೆಯಾಗಿಸ್ತೀವಿ.

ಪರೀಕ್ಷೆಯಲ್ಲಿ ಫೇಲ್ ಆದಾಗ..ಇದೇ ನನ್ನ ಜೀವನದ ಕೊನೆಯ ಮೆಟ್ಟಿಲು ಎಂದುಕೊಳ್ತೀವಿ. ಪುಟ್ಟ ತಪ್ಪಿಗಾಗಿ ಬಾಸ್ ಬೈದಾಗ ಆ ಕುರಿತು ರಾತ್ರಿಯಿಡೀ ತಲೆಕೆಡಿಸಿಕೊಂಡು ತಲೆ ಹಾಳು ಮಾಡಿಕೊಳ್ತೀವಿ. ತಂಗಿ-ಅಕ್ಕಂದಿರ ಮದುವೆ ಆಗಿರದಿದ್ರೆ ಛೇ! ನನ್ನ ಜವಾಬ್ದಾರೀನ ನಿರ್ವಹಿಸಿಲ್ಲ ಅಂದುಕೊಂಡು ನಮ್ಮೊಳಗೇ ದುಃಖಿಸ್ತೀವಿ. ಬೆಂಗಳೂರಿಗೆ ಕಾಲಿಟ್ಟು ವರ್ಷ ಸರಿದರೂ ನಯಾಪೈಸೆ ಸಂಪಾದಿಸಿಲಲ್ಲ, ನಮ್ಮ ಗೆಳೆಯ ಓಡಾಡೋ ಹಾಗೇ ಕಾರಲ್ಲಿ ಓಡಾಡೋ ಕನಸು ಕೈಗೂಡಿಲ್ಲ ಎನ್ನುತ್ತಾ ನಮ್ಮ ಬಗ್ಗೆನೇ ಜಿಗುಪ್ಸೆ ನಮಗೆ.

ಪುಟ್ ಪಾತ್ ನಲ್ಲಿ ಕಂಕುಳಲ್ಲಿ ಮಗುವನ್ನಿಟ್ಟುಕೊಂಡು ಚಿಲ್ಲರೆ ಹಣಕ್ಕಾಗಿ ಕೈಯೊಡ್ಡಿ ನಿಲ್ಲುವ ಕನಸುಗಳೇ ಬತ್ತಿ ಹೋದ ಕಂಗಳ ಹೆಣ್ಣನ್ನು ಕಂಡಾಗ, ಸಿಗ್ನಲ್ ಆನ್ ಆದ್ರೂ ವೇಗದಿಂದ ಚಲಿಸುವ ವಾಹನಗಳ ಮಧ್ಯೆ ಅಡ್ಡಾದಿಡ್ಡಿಯಾಗಿ ಓಡುವ ಹುಚ್ಚನನ್ನು ಕಂಡಾಗ, ಬೀದಿ ಬದಿಯಲ್ಲಿ ಅಪಘಾತ ಆದ್ರೂ ತಿರುಗಿ ನೋಡದೆ ಹೋಗೋರನ್ನು ಕಂಡಾಗ, ಅಯ್ಯೋ ಇದೇನಪ್ಪಾ ಬದುಕು..ಬೆಂಗಲೂರೇ ಬೇಡ ಅನ್ನುವಷ್ಟು ಮನಸ್ಸು ಮುದುಡಿಬಿಡುತ್ತೆ. ಹೀಗೇ ಪುಟ್ಟ ಕ್ಷಣಗಳನ್ನು ಕಳೆದುಕೊಂಡು ನಿರಾಶೆಯ ನಿಶೆಯನ್ನು ಅಪ್ಪಿಕೊಂಡು ಜೀವನವಿಡೀ ನಾ ಉದ್ದಾರವಾಗೊಲ್ಲ ಅಂದುಕೊಂಡುಬಿಡ್ತೀವಿ.

ಹೌದು, ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ತಲೆ ಹಾಕದೆ ಅಂತೇಳಿ ಯೋಚಿಸುತ್ತಿರುವಾಗಲೇ ನನಗೆ ಈ ವಿಷ್ಯ ಸಿಕ್ಕಿಬಿಡ್ತು. ಇದ್ದ ಕ್ಷಣವನ್ನು ಅನುಭವಿಸದೆ, ಇಲ್ಲದಕ್ಕೆ ಕೊರಗೋದನ್ನು ಬಹುಶಃ ನಾನೂ ಹಾಗೇ ಮಾಡ್ತಾ ಇರ್ತೀನಿ. ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ಕ್ಷಣದಲ್ಲಿ ನಿರಾಶೆಯ ಭಾವ ಹತ್ತಿಬಿಡುತ್ತೆ. ಆಂಗ್ಲ ಕವಿ ಡಗ್ನಸ್ ಮಲೋಕ್ ಮಾತು ಎಲ್ಲೋ ಓದಿದ್ದು ನೆನಪಾಗುತ್ತಿದೆ: ಬೆಟ್ಟದ ಮೇಲಿನ ದೇವದಾರು ಮರವಾಗಬೇಕಿಲ್ಲ, ಬೆಟ್ಟದ ತಪ್ಪಲಿನ ಸುಂದರವಾದ ಪೊದೆಯಾದರೂ ಬೆಳೆದಿದ್ದು ಸಾರ್ಥಕ. ಪೊದೆಯಾಗದಿದ್ದರೂ ಹುಲ್ಲಿನ ಗಿಡವಾಗು, ಬೆಳೆದ ದಾರಿಯಲ್ಲಿ ಅಲಂಕರವಾಗಬಹುದು" ಎಷ್ಟೊಂದು ಅರ್ಥಪೂರ್ಣವಾದ ಮಾತಲ್ವೇ?
ನಾಳಿನ ಕುರಿತಾಗಿ ಇಂದೇ ಕೊರಗಿ ಕೊರಗಿ ಸಾವಾಗುವ ಬಹಳಷ್ಟು 'ಬದುಕನ್ನು' ಕಂಡಾಗ ಯಾಕೋ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನ ನೆನಪಾಗುತ್ತಿದೆ.

ಅದೇ ..........
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ..
ಇಂದಲ್ಲ ನಾಳೆ ಹೊಸ ಭಾನು ತೆರೆದೀತು...
ಕರಗೀತು ಮುಗಿಲಾ ಬಳಗಾ..
ತುಂಬೀತು ಸೊಗೆಯ ಮಳೆ
ತುಂಬೀತು ಎದೆಯ ಹೊಳೆ
ತೊಳೆದೀತು ಒಳಗು ಹೊರಗಾ...!!

Thursday, April 2, 2009

ಬೆಳಗು ಹಣತೆಯ ಮುಂದೆ ನಾ ಹಾಡಿದಾಗ...

ಆವಾಗ ನನ್ನ ಪ್ರೀತಿಯ ಉಜಿರೆ ಬಿಸಿಎಂ ಹಾಸ್ಟೇಲ್ ನಲ್ಲಿದ್ದೆ. ಪಿಯುಸಿನಿಂದ ಡಿಗ್ರಿ ಮುಗಿಯುವ ತನಕ ಐದು ವರ್ಷಗಳ ಕಾಲ ಈ ಹಾಸ್ಟೇಲ್ ನನ್ನ ಮನೆಯಾಗಿತ್ತು. ಅಮ್ಮನಂತೆ ಪ್ರೀತಿಯಿಂದ ಪೋಷಿಸಿತ್ತು. ಈವಾಗಲೂ ಊರಿಗೆ ಹೋದರೆ ಆ ಹಾಸ್ಟೇಲ್, ಎದುರಿರುವ ಹೂವಿನ ಗಿಡಗಳು, ಅಡುಗೆ ಆಂಟಿಯವರು, ನಾನು ಓದೋಕೆ ಕೂರುತ್ತಿದ್ದ ಗಾಳಿ ಮರದ ಗಿಡಗಳು, ನಾವು ಗೇರು ಕದಿಯುತ್ತಿದ್ದ ಭಟ್ರ ಗೇರು ಬೀಜ ಮರ, ಈಗ ಅಪರಿಚತರೇ ತುಂಬಿರುವ ರೂ.ನಂ. 4, ನಾನು ದಿನದ ಎರಡು ಹೊತ್ತು ದೇವರ ನಾಮಗಳನ್ನು ಹಾಡುತ್ತಿದ್ದ ಆ ಸುಂದರ ಪ್ರಾರ್ಥನಾ ಮಂದಿರ....ಎಲ್ಲವನ್ನೂ ಒಂದು ಬಾರಿ ಕಣ್ತುಂಬಿಸಿಕೊಳ್ಳೋಕೆ ಉಜಿರೆ ತನಕ ಹೋಗಿಬರುತ್ತೇನೆ. ಹಾಸ್ಟೇಲ್ ಪಕ್ಕದಲ್ಲೇ ಇರುವ ಹಸಿರು ತೋಟಗಳ ನಡುವೆ ನಿಂತ ರತ್ನಮಾನಸ, ಇನ್ನೊಂದೆಡೆ ಸಂಜೆ ಹೊತ್ತು ಮನಸ್ಸು, ಹೃದಯಕ್ಕೆ ತಂಪು ನೀಡುವ ಗಡಾಯಿ ಕಲ್ಲು...ಎಷ್ಟು ಚೆನ್ನಾಗಿತ್ತು.
ಹೌದು..ನಾನು ಈಗ ಹೇಳಹೊರಟಿರುವುದು ನಮ್ಮ ಪ್ರಾರ್ಥನಾ ಮಂದಿರದ ಕುರಿತು, ನಾವು ಹಾಡೋ ಭಜನೆಗಳ ಕುರಿತು. ಸುಮಾರು 100 ಜನರನ್ನು ತುಂಬಿಕೊಳ್ಳುವ ಪುಟ್ಟ ಕೋಟೆಯದು. ಬೆಳಿಗ್ಗೆ ಮತ್ತು ಸಂಜೆ ಆರೂವರೆಗೆ ಪ್ರಾರ್ಥನೆ ಮಾಡುವ ಸಮಯ. ಬೆಳಿಗ್ಗೆ ಶಿವಸ್ತುತಿ ಹಾಡಿದರೆ, ಸಂಜೆಯ ಹೊತ್ತು ಕೋಣೆ ತುಂಬಾ ದೇವರ ಹಾಡುಗಳ ಘಮಘಮ. ಅದರಲ್ಲೂ ಸಂಜೆ ಹೊತ್ತಿನ ಭಜನೆ ಒಂದು ಥರ ಮನಸ್ಸಿಗೆ ತುಂಬಾ ಖುಷಿಕೊಡುತ್ತಿತ್ತು. ಪ್ರತಿಯೊಬ್ಬರೂ ಆರೂವರೆಗೆ ಪ್ರಾರ್ಥನಾ ಕೋಣೆಯಲ್ಲಿ ಸೇರುತ್ತಿದ್ದೇವು. ಒಬ್ಬರೂ ತಪ್ಪಿಸುವಂತಿರಲ್ಲಿಲ್ಲ. ಆರೂ ಗಂಟೆ ಆದಾಗಲೇ ಬಾತ್ ರೂಮ್ ನಲ್ಲಿದ್ದವರು, ಸುತ್ತಮುತ್ತ ಮರ, ಪೊದೆಗಳ ನಡುವೆ ಓದೋಕೆ ಕುಳಿತವರು, ಪಟ್ಟಾಂಗಗಕ್ಕೆ ಕುಳಿತವರು ಎಲ್ಲಾರೂ ಪ್ರಾರ್ಥನೆಗೆ ಹಾಜರಾಗಲೇಬೇಕು.

ಗಜಮುಖನೆ..ಗಣಪತಿಯೇ..ನಿನಗೆ ವಂದನೆ...

ಇದು ಮೊದಲ ಹಾಡು....ಆಮೇಲೆ ಮೂರೂ ಹಾಡುಗಳನ್ನು ಹಾಡೋ ಸರದಿ ನನ್ನದು. ನಂಗೆ ಭಜನೆಗಳಂದ್ರೆ ತುಂಬಾನೇ ಇಷ್ಟ. ರಾಗ, ಲಯ ಎಂಥದ್ದೂ ಗೊತ್ತಿಲ್ಲಾಂದ್ರೂ ಕೈಯಲ್ಲೊಂದು ತಾಳ ಹಿಡಿದುಕೊಂಡು ಹಾಡಕೆ ಕುಳಿತರೆ ಎಷ್ಟು ಹಾಡಿದ್ರೂ ಸಾಕೆನಿಸುತ್ತಿರಲಿಲ್ಲ. ಅದರಲ್ಲೂ ಹಾಸ್ಟೇಲ್ ಹುಡುಗಿಯರಿಗೆ ನಾನು ಹಾಡೋದಂದ್ರೆ ಭಾರೀ ಇಷ್ಟ. ಈ ಹಾಡು ಹಾಡಿ..ಅಂಥ ಅವರೇ ಸೂಚಿಸಿದ ಮೇಲೆ ನಾನು ಹಾಡುತ್ತಿದ್ದೆ. ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ, ಬಾಲಕೃಷ್ಣನೇ ಬಾರೋ, ಬಂದಾನೋ ಗೋವಿಂದ..ಚಂದದಿ ಆನಂದ, ಎಲ್ಲಿ ಹೋದ ನಮ್ಮ ಕೃಷ್ಣ ಎಲ್ಲಿ ಅಡಗಿದ...ಮುಂತಾದ ಕೃಷ್ಣನ ಕುರಿತಾದ ಗೀತೆಗಳನ್ನೇ ಹೆಚ್ಚಾಗಿ ಹಾಡುತ್ತಿದ್ದೆ. ಅದಕ್ಕೆ ಹಾಸ್ಟೇಲಿನಲ್ಲಿ ನನ್ನನ್ನು 'ರಾಧೆ' ಎಂದೇ ಕರೆಯುತ್ತಿದ್ದುದು ವಿಶೇಷ. ಒಂದೊಂದು ಬಾರಿ ಕರೆಂಟ್ ಹೋದ್ರೆ..ಸಮಯದ ಅರಿವೇ ಇಲ್ಲ..ಬೆಳಗುವ ಹಣತೆಯ ಸುಂದರ ಬೆಳಕಿನಲ್ಲಿ ಒಂದೆರಡು ಗಂಟೆ ಹಾಡಿದ್ರೂ ಸುಸ್ತಾಗುತ್ತಿರಲಿಲ್ಲ. ನನಗೆ ಸಂಗೀತದ ಬಗ್ಗೆ ಏನೂ ಗೊತ್ತಿಲ್ಲ..ಆದರೂ ಹಾಡೋದಂದ್ರೆ ತುಂಬಾ ಇಷ್ಟ. ಒಂದು ಸಲ ನಾವು ಖುಷಿಯಿಂದ ಹಾಡಿದರೆ ಮನಸ್ಸಿನ ಹಗುರಾಗುತ್ತಿತ್ತು. ಮನಸ್ಸು ಏನೋ ಒಂಥರ ಖುಷಿಯಿಂದ ನಲಿಯುತ್ತಿತ್ತು. ಈವಾಗ ಹಾಸ್ಟೇಲಿಗೆ ಹೋಗಿ ತಂಗಿದ್ರೂ ನಾನು ಭಜನೆಗಳನ್ನು ಹಾಡುತ್ತೇನೆ..ಅದೇ ಹಳೆಯ ಹಾಡು..ಅದೇ ಕೋಣೆ..ಅದೇ ಗಣಪತಿ ಫೊಟೋ..ಕೇಳೋ ಕಿವಿಗಳು ಬೇರೆ ಮಾತ್ರ. ನಾನು ಮತ್ತೆ ಮರಳಿ..ಅದೇ ಹಳೆಯ ಚಿತ್ರ ಆಗುತ್ತೇನೆ. ಮನಸ್ಸು ತುಂಬಾ ಖುಷಿಯಾಗುತ್ತೆ.

ಆದರೆ ಬೆಂಗಳೂರಿನಲ್ಲಿ....

ಮನಸ್ಸಿದ್ದರೆ ಮಾರ್ಗ ಅಂತಾರೆ...ಆದರೂ ಇದನ್ನು ಮುಂದುವರಿಸಲು ಸಾಧ್ಯವಾಗಲೇ ಇಲ್ಲ. ನಿತ್ಯ ಕೆಲಸ. ಬೆಳಿಗ್ಗೆ ಆರು ಗಂಟೆಗೆ ಎದ್ದು ಮನೆಗೆಲಸ ಮುಗಿಸಿ, ದೇವರಿಗೆ ದೀಪ ಹಚ್ಚಿ ಆಫಿಸಿಗೆ ಹೊರಡೋವಷ್ಟರಲ್ಲಿ ಸಮಯ ಮೀರಿರುತ್ತೆ. ಮತ್ತೆ ಸಂಜೆ, ಸಮಯದ ಮಿತಿಯಿಲ್ಲ..ನಮ್ ಕೆಲಸ ಮುಗಿದಾಗ ಮನೆಗೆ ಹೋಗಬೇಕು. ನಡುವೆ ಟ್ರಾಫಿಕ್, ಒಂದಷ್ಟು ಧೂಳು, ಆಫೀಸ್ ಕೆಲಸದ ತಲೆಹರಟೆಗಳು..ಇದನ್ನೆಲ್ಲಾ ಹೊತ್ತುಕೊಂಡು ಮನೆಗೆ ಹೋಗಬೇಕಾದರೆ ಎಂಟು ಗಂಟೆ ಮೀರಿರುತ್ತೆ. ಹೊಟ್ಟೆ ಮಾತನಾಡುತ್ತಿರುತ್ತೆ. ಮತ್ತೆ ಅಡುಗೆ ಆಗಬೇಕು. ಬಟ್ಟೆ ಬದಲಾಯಿಸೋದು ಆಮೇಲೆ..ಮೊದಲು ಅಡುಗೆ. ಆಮೇಲೆ ಊಟ..ಕಣ್ಣಲ್ಲಿ ನಿದ್ದೆ. ನಾಳಿನ ಚಿಂತೆ...ಮತ್ತೆಲ್ಲಿಂದ ಭಜನೆ, ದೇವರ ಚಿಂತೆ?

ನಿನ್ನೆ ಕೋರಮಂಗಲದ ಬೀದಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ದೇವಸ್ಥಾನವೊಂದರಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಹಳೇ ದೇವರ ನಾಮಗಳನ್ನು ತಂಡವೊಂದು ಹಾಡುತ್ತಿತ್ತು. ಒಂದಷ್ಟು ಹೊತ್ತು ಕೇಳಿ ಮನೆ ಕಡೆ ಸಾಗಿದವಳಿಗೆ ನೆನಪಾಗಿದ್ದು ನನ್ನ ಪ್ರೀತಿಯ ಹಾಸ್ಟೇಲಿನಲ್ಲಿ ನಾನಾಡುತ್ತಿದ್ದ ಭಜನೆಗಳು. ಇಲ್ಲಿ ಭಜನೆ ಹಾಡಕೆ ನನಗೆ ಸಮಯವಿಲ್ಲದಿದ್ದರೂ ಸುಂದರ ಭಾವಗೀತೆಗಳನ್ನು ನಿತ್ಯಕೇಳುತ್ತಾ ಮನಸ್ಸು ಖುಷಿಪಡುತ್ತೆ. ಈ ಖುಷಿಯನ್ನು ಮುಂದಿನ ಸಲ ಹಂಚಿಕೊಳ್ಳುತ್ತೇನೆ.