Wednesday, October 29, 2008

ಕಂಡಿದ್ದು..ಕೇಳಿದ್ದು!

ಆಶೀರ್ವಾದ ಅಂದ್ರೆ....
ದೀಪಾವಳಿ ಹಬ್ಬ. ಆಫೀಸ್ನಲ್ಲಿ ಬಿಡುವಿಲ್ಲದ ಕೆಲಸ. ಹಾಗಾಗಿ ರಜೆ ಮಾಡಲಾಗಿಲ್ಲ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ನನ್ನ ತಮ್ಮನ ಕರೆದುಕೊಂಡು ಮನೆಯ ಸಮೀಪ ಇರುವ ದೇವಸ್ಥಾನವೊಂದಕ್ಕೆ ಹೋಗಿದ್ದೆ. ಅಲ್ಲಿ ಸುಮರು 80 ವರ್ಷದಷ್ಟು ವಯಸ್ಸಾಗಿರುವ ಅಜ್ಜನೊಬ್ಬ ಬಂದಿದ್ದರು. ದೇವಸ್ಥಾನಕ್ಕೆ ಹೋಗಲಾಯಿತು, ಪೂಜೆ ಆಯಿತು. ನಾವು ಹೊರಡಲನುವಾದೆವು. ಅ ದೇವಸ್ಥಾನದ ಅರ್ಚಕನೊಬ್ನನಿಗೆ ಸುಮಾರು 20-23 ವರ್ಷವಾಗಿರಬಹುದು. ಯುವಕ. ನಮ್ಮ ಪಕ್ಕದಲ್ಲೇ ಇದ್ದ ಅಜ್ಜ ಹೋಗಿ ಆ ಯುವಕನ ಕಾಲಿಗೆ ಅಡ್ಡ ಬಿದ್ದರು. ಅವನು ತಥಾಸ್ತು ಅಂದ. ಅಜ್ಜನಿಗೆ ಮೊಮ್ಮಗನಷ್ಟು ವಯಸ್ಸಿನ ಯುವ ಅರ್ಚಕ ಆಶೀರ್ವಾದ ಮಾಡಿದ್ದ. ನಂಗೆ ಯಾವ ದೇವಸ್ಥಾನಗಳಿಗೆ ಹೋದರೂ ಸ್ವಾಮೀಜಿ. ಅರ್ಚಕರಿಗೆ ಕಾಲಿಗೆ ಬೀಳುವ ಅಭ್ಯಾಸ ಇಲ್ಲ. ಅದಿರಲಿ, ಆಶೀರ್ವಾದ ಎಂದರೇನು? ಹಿರಿಯರು ನೀಡಬೇಕೋ/ಕಿರಿಯರು ನೀಡಬೇಕೋ ನಂಗಂತೂ ಹಿಂದಿನಿಂದಲೂ ಕನ್ ಪ್ಯೂಶನ್!

ಕಳ್ಳ ವರದಿಗಾರ!
ನಾನು ನಿನ್ನೆ ಕಾರ್ಯನಿಮಿತ್ತ ಕನ್ನಡದ ಜನಪ್ರಿಯ ಟಿವಿ ಚಾನೆಲ್ ಒಂದರ ಕಚೇರಿಗೆ ಹೋಗಿದ್ದೆ. ಕೈಯಲ್ಲಿ ನೇತಾಡುತ್ತಿದ್ದ ಬ್ಯಾಗ್, ಫೈಲ್ ಎಲ್ಲವನ್ನೂ ಕಾರಲ್ಲೇ ಬಿಟ್ಟು ಟಿವಿ ಕಚೇರಿಗೆ ಹೋದೆ. ನಮ್ಮ ಕಾರು ಡ್ರೈವರ್ ಏನು ಮಾಡಿದ್ದರೆಂದರೆ...ಪಕ್ಕದಲ್ಲೇ ಮಕ್ಕಳು ಪಟಾಕಿ ಹಚ್ಚುವುದನ್ನು ನೋಡುತ್ತಾ ನಿಂತಿದ್ದರು. ಕಾರಿಗೆ ಡೋರ್ ಹಾಕಿದ್ರೂ ಲಾಕ್ ಮಾಡಿರಲಿಲ್ಲ. ಅಲ್ಲೇ ಒಬ್ಬ ಅದೇ ಟಿವಿಯ ವರದಿಗಾರನೂ ನಿಂತು ಮಕ್ಕಳು ಪಟಾಕಿ ಹಚ್ಚುವುದನ್ನು ನೋಡಿ ಖುಷಿಪಡುತ್ತಿದ್ದ. ಈ ಡ್ರೈವರ್ ಅವರ ಪಾಡಿಗೆ ಅವರು ನೋಡುತ್ತಿದ್ದರು. ಕಾರಿನ ಡೋರ್ ತೆಗೆದ ಶಬ್ಧ ಬಂದಾಗ ತಿರುಗಿ ನೋಡಿದ್ದರು. ಆ ವರದಿಗಾರ ನನ್ನ ಬ್ಯಾಗ್ ಎತ್ತಿದ್ದ. ಟಿವಿ ಗುರುತಿನ ಚೀಟಿ ಕುತ್ತಿಗೆಗೆ ಹಾಕೊಂಡಿದ್ದ ಆ ಸುಂದರ ಯುವಕ, ನನ್ನ ಬ್ಯಾಗ್ ಕದಿಯಲು ನೋಡಿದ್ದ. ಆತನನ್ನು ಬೈದಾಗ ನಗುತ್ತಾ ಬ್ಯಾಗನ್ನು ಅಲ್ಲೇ ಬಿಟ್ಟು ಹೋದ. ನಾನು ನನ್ನ ಕೆಲಸ ಮುಗಿಸಿ ಬರುವಾಗ ಡ್ರೈವರ್ ಈ ಕಥೆ ನನಗೆ ಹೇಳಿದ್ದರು. ಇವನೂ ಒಬ್ಬ ಸಮಾಜದ ಧ್ವನಿ!!

ಇಂಥವರೂ ಇದ್ದಾರೆ!
ಇತ್ತೀಚೆಗೆ ಕೆಲಸದ ನಿಮಿತ್ತ ತಮಿಳುನಾಡು ಕಡೆ ಹೋಗಿದ್ದೆ. ಅದೇ ಮೊದಲು ಕರ್ನಾಟಕ-ತಮಿಳು ಗಡಿ ದಾಟಿ ಹೋಗಿದ್ದು. ಚೆಕ್ ಪೋಸ್ಟ್ ಬಳಿ ಗಾಡಿ ನಿಲ್ಲಿಸಿದೆವು. ನಡುವಯಸ್ಸಿನ ಭಿಕ್ಷುಕಿಯೊಬ್ಬಳು ತನ್ನ ಮಗುವನ್ನು ಕಂಕುಳಲ್ಲಿ ಹಾಕಿಕೊಂಡು 'ಅಮ್ಮಾ...' ಎನ್ನುತ್ತಾ ಬಂದಳು. ನಾನು ಚಿಲ್ಲರೆಗಾಗಿ ಹುಡುಕಾಡಿದಾಗ ಕೊನೆಗೂ ಚಿಲ್ಲರೆ ಸಿಗಲಿಲ್ಲ. ಇರ್ಲಿ ಬಿಡಿ ಅಂತ ಸುಮ್ಮನಾದೆ. ಆದ್ರೂ ಆ ಹೆಂಗಸು ಹೋಗವಂತೆ ಕಾಣಲಿಲ್ಲ. ಕಾರಿನ ಸಮೀಪ ನಿಂತು ಏನೇನೋ ಗೊಣಗುತ್ತಿದ್ದಳು. ಮತ್ತೆಲ್ಲೋ ಸಿಕ್ಕಿದ ಎರಡು ರೂ. ನಾಣ್ಯ ಕೈಗೆ ಹಾಕಿದೆ. 10 ನಿಮಿಷ ಆದ್ರೂ ಕಂಕುಳಲಿದ್ದ ಮಗು ಅಳಲಿಲ್ಲ, ಮಿಸುಕಾಡಲಿಲ್ಲ. ಮಗು ಕಾಣದಂತೆ ಪೂರ್ತಿಯಾಗಿ ಬಟ್ಟೆಯಿಂದ ಸುತ್ತಿದ್ದಳು. ಆವಾಗ್ಲೇ ನನಗೆ ಗೊತ್ತಾಗಿದ್ದು ಕಂಕುಳಲಿದ್ದುದು ಮಗುವಲ್ಲ, ಬಟ್ಟೆಯನ್ನೇ ಮಗು ರೀತಿ ಮಾಡಿ ಕಂಕುಳಿಗೆ ಹಾಕೊಂಡಿದ್ದಾಳೆಂದು!

Friday, October 10, 2008

ಕನ್ನಡದ ನುಡಿಮುತ್ತುಗಳನ್ನೊಳಗೊಂಡ ಟಿ-ಶರ್ಟ್ ಗಳು ಬೇಕೇ?

ಕನ್ನಡ ರಾಜ್ಯೋತ್ಸವ ಬರುತ್ತಿದ್ದಂತೆ ನಗರದ ಸಮಾಜ ಸೇವಕರ ಸಮಿತಿಯ ಯುವಕರು ಸಿದ್ಧಪಡಿಸಿದ ಡಿ.ವಿ. ಜಿ. ಅವರ ಕಗ್ಗ ಮತ್ತು ಜಿ. ಪಿ. ರಾಜರತ್ನಂ ಅವರ ನುಡಿಗಳನ್ನು ಒಳಗೊಂಡ ಸುಂದರ ಟಿ-ಶರ್ಟ್ ಗಳ ಭರಾಟೆ ಆರಂಭವಾದಂತಿದೆ. ನಿನ್ನೆ 200 ರೂ. ಕೊಟ್ಟು ನಾನೂ ಒಂದು ಕೊಂಡುಕೊಂಡೆ. ಈ ಸಮಾಜ ಸೇವಕರ ಸಮಿತಿ ವರ್ಷವಿಡೀ ಈ ಟಿ-ಶರ್ಟ್ಗಗಳನ್ನು ಸಿದ್ಧಪಡಿಸಿ, ಮಾರಾಟ ಮಾಡುತ್ತಿದ್ದರೂ ನಮ್ಮಲ್ಲಿ ಅದು ಸುದ್ದಿಯಾಗುವುದು ಕೇವಲ ರಾಜ್ಯೋತ್ಸವ ಬಂದಾಗ,...ಮಾತ್ರ! ಅದೇ ತಾಂಜಾನೀಯಾ, ಇಂಗ್ಲೇಡ್, ಫ್ರಾನ್ಸ್, ಸಿಂಗಾಪುರ ಸೇರಿದಂತೆ ಹೊರರಾಷ್ಟ್ರಗಳಲ್ಲಿ ಕನ್ನಡಿಗರನ್ನು ಆಕರ್ಷಿಸುತ್ತಿದ್ದರೂ, ನಮ್ಮಲ್ಲಿ ಮಾತ್ರ ಅಯ್ಯೋ ಮಾರಾಯ, ಇದ್ಯಾಕೆ..ಹೀಗೆಲ್ಲ ಬರೆದ ಟಿ-ಶರ್ಟ್ಗಳನ್ನು ಹಾಕೋಲ್ಲ. ಇನ್ನು ಸ್ಪಲ್ಪ ಹಣ ಕೊಟ್ಟರೆ ಜಾಕಿ ಟಿ-ಶರ್ಟ್ ಸಿಗುತ್ತೆ ಅನ್ನೋರೇ ಜಾಸ್ತಿ. ಏನೇ ಇರ್ಲಿ ಪ್ರತಿ ವರ್ಷದ ರಾಜ್ಯೋತ್ಸವ ದಿನದಂದು ಪ್ರೀತಿಯೋ, ಕನ್ನಡದ ಬಗೆಗಿನ ಅಭಿಮಾನವೋ ಅಕ್ಕರೆಯೋ ಅಥವಾ ಫ್ಯಾಶನ್ನೋ ಅದೇನೋ ಈ ಕನ್ನಡ ಟಿ-ಶರ್ಟ್ಗಳು ಕನ್ನಡಿಗರ ಮನಸ್ಸು ಆಕರ್ಷಿಸುತ್ತವೆ ಅನ್ನೋದು ಸುಳ್ಲಲ್ಲ. ಏನೇ ಆಗಲಿ, ಈ ಟಿ-ಶರ್ಟ್ಗಳ ಮಾರಾಟದಿಂದ ಬಂದ ಹಣವನ್ನುಸಮಾಜ ಸೇವಕರ ಸಮಿತಿ ತಮ್ಮ ಸಂಘದ ವತಿಯಿಂದ ಬಡಮಕ್ಕಳಿಗಾಗಿ ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗಿಸುತ್ತಿದೆ.ನಿಮಗೂ ಬೇಕನಿಸಿದ್ದಲ್ಲಿ..
Email: sssamaja@gmail.comsssglobal@yahoogroups.com ಸಂಪರ್ಕಿಸಬಹುದು.
ಅಥವಾ 9448171069, 9886683008 ಸಂಪರ್ಕಿಸಿ.


Sunday, October 5, 2008

ಬೇಡ ಬಿಡು...ಕಣ್ಣೀರಿನ ಅನುಕಂಪ ನನಗೇಕೆ?

ಪರಿಚಯಕ್ಕೆ ಕಾಲದ ಹಂಗುರಲಿಲ್ಲ. ಬದುಕು ಕುತರ್ಕದ ಪ್ರಶ್ನೆ ಎದುರಾದಾಗ ಬದುಕಿನ ಬಂಡಿಯಲ್ಲಿ ನಾವಿಬ್ಬರೇ ಪಯಣಿಗರು. ಸ್ನೇಹದ ಪ್ರತಿ ಸೀಮೆಯನ್ನು ದಾಟುವಾಗಲೂ..ನಾನು ನೀನಾಗಿದ್ದೆ, ನೀನು ನಾನಾಗಿದ್ದೆ. ನನ್ನ ಮನ ತಟ್ಟಿ ಮಡಿಲಲ್ಲಿ ಮಗುವಂತೆ ಹುದುಗಿಸಿ ಪ್ರೀತಿಯ ಕಚಗುಳಿಯಿಟ್ಟಾಗ ಬರಡು ಹೃದಯಕ್ಕೆ ಅಮೃತ ಕ್ಷಣ ನೀನು. ಕುರುಡುಕತ್ತಲಲ್ಲಿ ಕಣ್ಣು ಕೊಟ್ಟವಳು ನೀನಾಗಿದ್ದೆ.

ಸಹಜವಾಗಿ ಭಾವನೆಗಳೂ ನನ್ನೊಳಗೆ ಮಾತಾಡಿದ್ದವು. ನಿನ್ನ ಕುಡಿನೋಟ, ನಗು, ತಿಳಿಹಾಸ್ಯ, ಕೇಕೆಯ ಮಾತುಗಳು, ಅಕ್ಕರೆಯಿಂದ ನೀಡಿದ ಚಾಕಲೇಟು, ಕಿವಿ ಹಿಂಡಿದ್ದು, ಮಕ್ಕಳಂತೆ ಹೊಡೆದಾಟ..ನೋವಿನ ಕರಾಳತೆಯನ್ನೂ ಹಂಚಿಕೊಂಡ ಮನ..ಎಲ್ಲವೂ ಭವಿಷ್ಯದ ಕರಾಳ ನೆರಳಿನಲ್ಲಿ ಬರೇ ನೆನಪುಗಳು ಅಂತ ನಾನಂದುಕೊಂಡಿರಲಿಲ್ಲ..ರಣಬಿಸಿಲಿಗೆ ಮೈಯೊಡ್ಡಿ ಬೆಂದರೂ.. ಹೊಸ ಚಿಗುರು ಆ ನಿನ್ನ ನಗು..ನನ್ನ ಪಾಲಿಗೆ ನೀನೇ ಧರಿತ್ರೀ. ಬಿರುಮಳೆಗೆ ತೊಯ್ದರೂ ..ಪ್ರೀತಿ ಹೊಸ ಬೆಳೆಯ ಬೆಳೆಯುತ್ತಿತ್ತು. ನೋವೆಂಬ ಕಳೆಯ ಕಿತ್ತು ನಗುತಾ, ಸಹನೆಯಿಂದ ನನ್ನ ಜೊತೆಗೆ ನೀನೂ ಹೆಜ್ಜೆಹಾಕಿದ್ದೆ ಸ್ವಲ್ಪ ದೂರ..! ಸಹನೆ ನನಗೆಲ್ಲಿದೆ? ಎಂದಾಗ ಕಿವಿಹಿಂಡಿ ತಾಳಿಕೋ..ಎಂದು ಬುದ್ಧಿಹೇಳಿದವಳೂ ನೀನೇ.

ಕಷ್ಟವೇ ಇಷ್ಟವೆಂಬಂತೆ ..ಬದುಕುವ ಕಲೆ..ಹೇಗೆ ಕಲಿತೇ? ನನಗೂ ಕಲಿಸಿಕೊಡು ಗೆಳತೀ..ಎಂದಾಗ ಹುಣ್ಣಿಮೆಯ ಚಂದ್ರನಂತೆ ತುಂಬು ಬೆಳದಿಂಗಳ ನಗು ಚೆಲ್ಲಿದ್ದೆ.
ಆ ನಗುವಿನಲ್ಲಿ ನಿನ್ನ ಆ ಬೆಳ್ಳಿಮೂಗುತಿ ಎಷ್ಟು ಚೆನ್ನಾಗಿ ಹೊಳೆಯುತ್ತಿತ್ತು. ..ಚಂದಿರನಂತೆ, ಬೆಳದಿಂಗಳಂತೆ..ಆ ನಿನ್ನ ನಗುವಿನಂತೆ! ಅದಕ್ಕೆ ಕವಿಯೊಬ್ಬ ಹೇಳಿದ್ದು: "ಬೆಳಗು ಇಬ್ಬನಿಯಲ್ಲಿ ನಗುವ ಹುಲ್ಲ ಹನಿಗಿಂತ ಚೆಂದಕೆ ಮಿನುಗುವುದು ಅವಳ ಮೂಗುತಿ ಅಡಿಯ ನಗು"!!
ನೀನಿದ್ದ ಜೀವನದ ಹಾದಿಯಲ್ಲಿ ನಲಿವಿರದಿದ್ದರೂ..ಗೆಲುವಿತ್ತು. ಪ್ರೀತಿ ಹೃದಯಾನ ಭಾರವಾಗಿಸದೆ, ಹಗುರವಾಗಿಸಿತ್ತು. "ನಿನ್ನ ಜೊತೆ ಹೆಜ್ಜೆಹಾಕಿದವರಲ್ಲಿ ನನ್ನನ್ನು ಒಬ್ಬಳನ್ನಾಗಿಸಿ..ಕನಸುಗಳಲ್ಲಿ ಪುಟ್ಟ ತುಣುಕಕಾಗಿಸಿ..ನಿನ್ನ ಹಸುಳೆಗಣ್ಣಿನ ಪಟಲದ ಮೂಲೆಯಲ್ಲಿ ನನ್ನ ಬಚ್ಚಿಡ್ತೀಯಾ..ನಿನ್ನೆದೆ ಗೂಡಲ್ಲಿ ಪುಟ್ಟ ಮರಿಯಾಗಿ ಗರಿಬಿಚ್ಚಿ ಹಾರಾಡ್ತೀರ್ತೀನಿ.." ಎಂದು ಮುದ್ದಾದ ಅಕ್ಷರಗಳೊಂದಿಗೆ ಬರೆದು ಕಳಿಸಿದ ಪುಟ್ಟ ಪತ್ರ ಈಗಲೂ ನನ್ನನ್ನು ತುಂಬಾ ಡಿಸ್ಟರ್ಬ್ ಮಾಡುತ್ತೆ. ಭಾವನೆಗಳನ್ನು ಕೊಲ್ಲದಿರು...ಎಂದು ಪದೇಪದೇ ಮೆಸೇಜ್ ಮಾಡಿ, ಕಲ್ಲಾದ ಹೃದಯದಲ್ಲಿ ಮತ್ತೆ ಭಾವ-ಜೀವ ತುಂಬಿದವಳೂ ನೀನೇನೇ. ನೀನಿದ್ದಾಗ ಅಮಾವಾಸ್ಯೆಯ ಕರಾಳ ರಾತ್ರೀಯಲ್ಲೂ ಹುಣ್ಣಿಮೆಯ ಚಂದ್ರ ಮುಗ್ಧವಾಗಿ ನಗುತ್ತಿದ್ದ.

ಅದೇ ನೆನಪು..ಕನವರಿಕೆಯಲ್ಲಿ ದೇವರಿಗೆ ಹಿಡಿ ಹಿಡಿ ಶಾಪ ಹಾಕುತ್ತಿದ್ದೇನೆ. ಎಲ್ಲೋ ಓದಿದ ಹುಚ್ಚುಚ್ಚು ಕವನದ ಸಾಲುಗಳು, ಕವಿಯ ಮಾತುಗಳು ಮತ್ತೆ ಮತ್ತೆ ತಲೆ ಕೊರೆಯುತ್ತಿವೆ. "ಉಜ್ವಲ ಮುಖಗಳುಳ್ಳ ಈ ಸುಂದರ ಮಣ್ಣಿನ ಗೊಂಬೆಗಳನ್ನೇಕೆ ನೀನು ತಯಾರಿಸಿದೆ...ಇಷ್ಟೊಂದು ಪ್ರಿಯವಾದ ಭೂಮಿಯನ್ನು ಏಕೆ ಸೃಷ್ಟಿಸಿದೆ...ಜಗತ್ತಿನ ಆಟ ಹೂಡಿ ಅದರಲ್ಲಿ ಯೌವನದ ಜಾತ್ರೆ ಏರ್ಪಡಿಸುವ ಅವಶ್ಯಕತೆ ನಿನಗೇನಿತ್ತು?" ಕವಿಯೊಬ್ಬ ದೇವರಿಗೆ ಸವಾಲು ಹಾಕಿದ ಹಾಗೇ ನನಗೂ ದೇವರಲ್ಲಿ ಕೇಳಬೇಕೆನಿಸುತ್ತದೆ. ಆದರೆ ಆತನೂ ನಿನ್ನಂತ ಕಾಣುವ ಕಣ್ಣಿಗೂ ಕಾಣಲ್ಲ ನೋಡು. ಈ ಯೌವನದ ಯಾನ, ಮನಸ್ಸಿನ ತಾಕಲಾಟ..!ನಾವು ಮಣ್ಣಿನ ಸುಂದರವಾದ ಗೊಂಬೆಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಆದರೆ ಹಾಗಾಗಲಿಲ್ಲ...ಎಲ್ಲರಂತೆ ನನಗೂ ಮನಸ್ಸು, ಪ್ರೀತಿಸುವ ಹೃದಯ ಕೊಟ್ಟ. ಪ್ರೀತೀನ ಪ್ರೀತಿಯಿಂದಲೇ ಗೆಲ್ಲುವ ಕಲೆಯನ್ನೂ ಕಲಿಸಿಕೊಟ್ಟ. ಪ್ರೀತಿಸುವುದನ್ನು, ಮನಸ್ಸನ್ನು, ಬದುಕುವುದನ್ನು, ಮಿಲನದ ಸುಖವನ್ನು ಜೊತೆಗೆ ವಿರಹದ ಬೇಗೆಯನ್ನು ಜೊತೆಜೊತೆಗೆ ತಂದುಕೊಟ್ಟ ಸತ್ಯ ಎಂದು ಕರೆಯುವ ಆ ದೇವರ ಮೇಲೆಯೇ ಅಪನಂಬಿಕೆ ನನಗೆ.

ವಿರಹದಲ್ಲಿ ಮಮ್ಮರಗುವುದು ದೇವರಿಗೂ ಪ್ರೀತಿ ಅನಿಸುತ್ತೆ ನೋಡು...ನನ್ನನ್ನು ನೋಡಿ ಅವನೂ ಸಮಾಧಾನಿಸುವ ಬದಲು ಮೌನವಾಗಿದ್ದಾನೆ. ಪ್ರೀತಿಸಿದ ನಿನಗೂ ಇದನ್ನು ನೋಡಿ ಹೃದಯ ಭಾರವಾಗೋಲ್ವೆ? ನನಗಾಗಿ ಹನಿಬಿಂದು ಉದುರುವುದಿಲ್ಲವೇ..ಅಯ್ಯೋ ಎನಿಸಲ್ವೇ? ಬೇಡ ಬಿಡು...ಕಣ್ಣೀರಿನ ಅನುಕಂಪ ನನಗೇಕೆ? ಬದುಕಿನ ಕತ್ತಲು ಕೋಣೆಯಲ್ಲಿ..ಮಬ್ಬಿಗೆ ಹಣತೆ ಹಚ್ಚಿ..ಅಲ್ಲಿ ನಿನ್ನ ಮುಖ ಕಾಣಲು ಬಯಸುತ್ತೇನೆ..ಆದರೆ ತೈಲವಿಲ್ಲದೆ ಹಣತೆ ಹೇಗೆ ಬೆಳಗೀತು? ಬದಲಾಗಿ ಅದು ಉರಿಯುತ್ತದೆ..ಹೃದಯವನ್ನೇ ದಹಿಸಿ ಬೂದಿ ಮಾಡುತ್ತೆ. ಸಾಗರದ ಅಲೆಗಳಂತೆ ಭೋರ್ಗರೆಯುತ್ತಾ ಬರುವ ಭಾವದಲೆಗಳು..ಈ ನಡುವೆ ಯಾಕೋ ಮನ ತಂಪಾಗಿಸೋದು ಕೆ.ಎಸ್. ಎನ್ ಅವರ ಜೀವ ತುಂಬುವ ಭಾವಗೀತೆಗಳು. ನೆನಪುಗಳನ್ನಷ್ಟೇ ಬಿಚ್ಚಿದೆ..ಮನದ ಹಗುರಕ್ಕೆ..ನಿನಗೆ ಡಿಸ್ಟರ್ಬ್ ಮಾಡೋಕೆ ಅಲ್ಲ....