Wednesday, January 30, 2008

ರಜೆಯ ಮಜಾ..

ಏನಾದ್ರೂ ಬ್ಲಾಗಲ್ಲಿ ಬರೀಲೇಬೇಕು ಅಂದ್ರೆ ವಿಷಯಾನೇ ಹೊಳಿತಿಲ್ಲ. ಏನು ಮಾಡೋದು ಅಂದಾಗ ತಟ್ಟನೆ ಹೊಳೆದಿದ್ದು ರಜಾ ದಿನ ಮಜಾ..

ಅದೇ ಮೊನ್ನೆ ಜನವರಿ 26ರಂದು ಎಂ.ಜಿ. ರೋಡ್ ಮಾಣಿಕ್ ಶಾ ಪೆರೇಡ್ ಮೈದಾನಕ್ಕೆ ಹೋಗಿದ್ದೆ. ನನ್ ಕೊಲೀಗ್ ಅವ್ರ ತಂಗಿ. ಅವ್ರ ಫ್ರೆಂಡು ಜೊತೆಗಿದ್ದರು. ರಜಾ ದಿನ ಮಜಾ ಮಾಡೋಕೆ ಹೊರಟಿದ್ದು. ನಾನು ಬೆಳಿಗ್ಗೆ ಎಂಟು ಗಂಟೆಗೆ ಎಂ.ಜಿ. ರೋಡಲಿದ್ದರೆ, ಅವರೆಲ್ಲ ಬರುವಾಗ ಒಂಚೂರು ಲೇಟಾಗಿತ್ತು. ಮೊದಲನೇ ದಿನಾನೇ ಪ್ಲಾನ್ ಹಾಕಿದ್ದರಿಂದ ಪೆರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಹೊರಡುವಾಗ ಗಡಿಯಾರ ಹನ್ನೆರಡು ತೋರಿಸುತ್ತಿತ್ತು. ಅಲ್ಲಿಂದ ನಮ್ಮ ಪಯಣ ಲಾಲ್ ಬಾಗ್ ಫಲಪುಷ್ಪಪ್ರದರ್ಶನಕ್ಕೆ. ಟಿಕೇಟ್ಗಾಗಿ ನೂಕುನುಗ್ಗಲು ನಡೆಸಿ, ಕೆಲವರಿಗೆ ಬೈದು..ಆಮೇಲೆ ಗೇಟಲ್ಲಿ ಗೇಟ್ ಕೀಪರ್ ಗೂ ಹೇಗೋ ಲಾಲ್ ಬಾಗ್ ಒಳಗೆ ಪ್ರವೇಶಿಸಿದೆವು. ಕಡ್ಲೆಕಾಯಿ ಮೆಲ್ಲುತ್ತಾ..ತಮಾಷೆ ಮಾಡುತ್ತಾ ಲಾಲ್ ಬಾಗ್ ಕಾಲುದಾರಿಯಲ್ಲಿ ನಡೆಯುತ್ತಿದ್ದರೆ ಕೆಲ ಹುಡುಗ್ರ ಗುಂಪು ನಮಗೆ ತಮಾಷೆ ಮಾಡುತ್ತಿತ್ತು. ತಮಾಷೆ ಮಾಡಿದವರನ್ನು ಗುರಾಯಿಸುತ್ತಾ..ನಾವೂ ಕಡಿಮೆ ಇಲ್ಲ ಎಲ್ಲವಂತೆ..ಸಾಗುತ್ತಿದ್ದೆವು. ಕಿತ್ತಳೆ, ಜ್ಯೂಸ್..ಐಸ್ ಕ್ರೀಂ ಎಲ್ಲವೂ ನಮ್ಮ ಹೊಟ್ಟೆಯ ಪ್ರವೇಶ ಪಡೆದಿದ್ದವು. ಹೆಚ್ಚಾಗಿ ಇವುಗಳಿಗೆಲ್ಲ ಒಟ್ಟಾಗಿ ಪ್ರವೇಶ ಕೊಡುವುದು ತುಂಬಾ ಕಡಿಮೆ. ಆದ್ರೆ ಅವತ್ತು ಮಾತ್ರ ಎಲ್ಲಕ್ಕೂ ಟಿಕೇಟ್. ದುಡ್ಡುಕೊಟ್ಟು ನೀರು ಕುಡಿದೆವು. ನೀರಿಗೂ ದುಡ್ಡು ತೆಗೆದುಕೊಂಡವನನ್ನು ನೋಡಿ ನಮಗೆ ಸಿಟ್ ಬಂದು ರೇಗಾಡಿದೆವು.

ಅಲ್ಲಿಂದ ಗಾಜಿನ ಮನೆಗೆ ಫಲಪುಷ್ಪಪ್ರದರ್ಶನ ಅಂದ್ರೂ ಅಲ್ಲಿ ಬರೇ ಪುಷ್ಪಗಳೇ ಇದ್ದವು. ಫಲಗಳು
ಇರಲಿಲ್ಲ. ಅಂತೂ ಪ್ರತಿವರ್ಷ ಜನರು ಮಾತ್ರ ಹೆಚ್ಚೆಚ್ಚು ಇಲ್ಲಿಗೆ ಬರ್ತಾರೆ. ಬೇರೆ ದಿನಗಳಲ್ಲಿ ಕಲ್ಲುಹಾಸಿನ ಮೇಲೆ, ಹುಲ್ಲುಹಾಸಿನ ಮೇಲೆ ಬರೇ ಪ್ರೇಮಿಗಳು ಕೂತು ಹರರಟುತ್ತಿದ್ದರೆ, ಪುಷ್ಪಪ್ರದರ್ಶನ ಅಥವಾ ಇನ್ಯಾವ ಕಾರ್ಯಕ್ರಮಗಳಿದ್ದರೆ ಜನರು ಕುಟುಂಬ ಸಮೇತ ಭೇಟಿ ನೀಡುತ್ತಾರೆ. ಕಾಲಿಗೊಂದು ಕೈಗೊಂದು ಮಕ್ಕಳನ್ನು ಹಿಡಿದುಕೊಂಡಾದ್ರೂ ಟಿಕೇಟ್ ಪಡೆದು ಲಾಲ್ ಬಾಗ್ ಗೆ ಜನ ಬರ್ತಾರೆ. ಸಿಕ್ಕ ಸಿಕ್ಕಸಿಕ್ಕಲೆಲ್ಲಾ ಫೋಟೋ ಕ್ಕಿಕಿಸುತ್ತಾ ಖುಷಿಪಡೋಕೆ ಒಳ್ಳೆ ಜಾಗ ಇದು. ವಿದೇಶಿಗಳಿಗಂತೂ ಇದೇ ಸ್ವರ್ಗ.

ಅಲ್ಲೊಂದು ಕಡೆ ಒಬ್ಬ ಇಳಿವಯಸ್ಸಿನ ವ್ಯಕ್ತಿ ಖಾರ, ಉಪ್ಪು, ಹುಳಿ ಬೆರೆಸಿದ ಬೇಯಿಸಿದ ಕಡ್ಲೆ ಕಾಯಿ ಮಾರುತ್ತಿದ್ದ. ಅದನ್ನು ನೋಡಿ ತೆಗೆದುಕೊಳ್ಳೋಲು ನಾನು-ಗೆಳತಿ ಕಲಾ ಹೋದಾಗ ಆತ ಐದು ರೂಪಾಯಿಗೆ ಒಂದು ಹಿಡಿಯಷ್ಟು ಕಡ್ಲೆ ಕೊಡಬೇಕೆ? ಕಲಾ ಚೂರು ಹಾಕೀಪ್ಪಾ...ಅಂತ ಕೂಲ್ ಆಗಿ ಹೇಳಿದ್ರೆ..ನಾನು ಗುರ್ ಎನ್ನುತ್ತಾ ತುಳುವಲ್ಲೇ ಬೈಯುತ್ತಾ ಕಡ್ಲೆ ಕಾಯಿ ಕೇಳಿದೆ. ಆತ ನಗು ನಗುತ್ತಾ ಹಾಕಿ. ಆತ."ನೀವು ಮಂಗ್ಲೂರ..ನಾನು ಮಂಗ್ಳೂರು. ಜೀವನ ಕಷ್ಟ. ಅದ್ಕೆ ಈ ಕೆಲ್ಸ" ಅಂದಿದ್ದೆ ತಡ, ಹಿಂದಿನಿಂದ ಇಬ್ಬರು ಪೊಲೀಸರು ಬಂದು ಪಟಾರನೇ ಎರಡೂ ಕೆನ್ನೆ ಹೊಡೆದರು. ಕಡ್ಲೆ ಕಾಯಿ ಅಂಕಲ್ ತನ್ನ ಗೋಣಿ ಚೀಲವನ್ನೇ ಎತ್ತುಕೊಂಡು ಓಡತೊಡಗಿದ. ನಮಗಿಬ್ಬರಿಗೂ ಆತನ ಮೇಲೆ ಕರುಣೆ ಬರದೆ ಇರಲಿಲ್ಲ. ಸ್ವಲ್ಪ ಮುಂದೆ ನಡೆದುಕೊಂಡು ಬಂದಾಗ 'ತಿರುಗಾಟ ಮಾರಾಟ' ನಿಷೇಧ ಎಂಬ ದೊಡ್ಡ ಬೋರ್ಡ್ ಕಾಣಿಸುತ್ತಿತ್ತು. ಆಗ ಗೊತ್ತಾಯಿತು ಪೊಲೀಸರು ಆತನಿಗೇಕೆ ಹೊಡೆದಿದ್ದು ಎಂದು. ಅಲ್ಲಿಂದ ಸ್ವಲ್ಪ ಮುಂದೆ ಬಂದಾಗ ಅದೇ ಪೊಲೀಸರು ಪ್ರೇಮಿಗಳನ್ನು ಬೈದು ಓಡಿಸುತ್ತಿದ್ರು. ಎಲ್ಲಿ ಕೂತ್ರೂ ಪೊಲೀಸರ ಕಾಟ. ಅದು ಯಾಕಂದ್ರೆ ಇತ್ತೀಚೆಗೆ ವಿಶ್ರಾಂತಿ ಕಳೆಯಲು ಹೆಚ್ಚು ವಯಸ್ಸಾದವರು ಉದ್ಯಾನವನಕ್ಕೆ ಬರ್ತಾರೆ. ಅವ್ರು ದೂರು ನೀಡಿದ್ದಕ್ಕಾಗಿ ಈಗ ಪೊಲೀಸರಿಗೆ ಪ್ರೇಮಿಗಳನ್ನು ಕಂಡ್ರೆ ಆಗಲ್ಲ. ಇರ್ಲಿ ಬಿಡಿ. ಇಡೀ ರಜಾದಿನ ಅಂದು ಖುಷಿ ಖುಷಿಯಾಗಿ ಕಳೆದುಹೋಯಿತು. ಆಮೇಲೆ ರಂಗಶಂಕರದಲ್ಲಿ ನಡೆದ'ರೋಮಿಯೋ ಜ್ಯೂಲಿಯೆಟ್' ನಾಟಕದೊಂದಿಗೆ ನಮ್ಮ ರಜಾ ದಿನದ ಓಟ ನಿಂತಿತು. ಇನ್ನು ಮುಂದಿನ ಭಾನುವಾರ...? ರಂಗಶಂಕರದಲ್ಲಿ ಭಾನುವಾರ ನಡೆಯುವ ಜುಗಾರಿ ಕ್ರಾಸ್ ಟಿಕೇಟ್ ಇದೆ..ಅದ್ರ ಜೊತೆ ಇನ್ನೇನು ಅಂತ ಪ್ಲಾನ್ ಮಾಡ್ಬೇಕು..

ಚಿನ್ನು ಮತ್ತೆ ಬರಲೇ ಇಲ್ಲ..

ಅಂದು ಭಾನುವಾರ. ಭಾನುವಾರ ಆದ್ರೂ ಲೇಟ್ ಏಳೋ ಬುದ್ದಿ ನಂಗಿಲ್ಲ. ಎಂದಿನಂತೆ ಬೆಳಿಗ್ಗೆ 5.30 ಆಲಾರಂ ಬಡಿದುಕೊಳ್ಳತೊಡಗಿತ್ತು. ಕಣ್ಣ ಬಿಟ್ಟಾಗ ಬಿಳಿದಾದ ಪುಟ್ಟ ಬೆಕ್ಕಿನ ಮರಿಯೊಂದು ಎದೆ ಮೇಲೆ ಮಲಗಿ ನಿದ್ರಿಸುತ್ತಿದ್ದೆ. ಒಂದು ಸಲ ಹೆದರಿದರೂ ಬೆಕ್ಕಿನ ಮರಿ ಅಲ್ವಾ? ಪಾಪ ಅನಿಸುತ್ತಿತ್ತು. ಪುಟ್ಟ ಮಗುವಿನಂತೆ ಮುದ್ದಾಗಿ ಮಲಗಿ ನಿದ್ರಿಸುತ್ತಿದ್ದ ಅದನ್ನು ಎಬ್ಬಿಸಕ್ಕೂ ಮನಸ್ಸಾಗಲಿಲ್ಲ. ಹಾಗೆ ಮೆಲ್ಲ ದಿಂಬು ಮೇಲಿಟ್ಟುಬಿಟ್ಟೆ..ಆದ್ರೂ ಅದಕ್ಕೆ ನಿದ್ದೆಬಿಟ್ಟಿಲ್ಲ. ಪಕ್ಕದಲ್ಲಿ ಮಲಗಿದ್ದ ಅಣ್ಣ-ತಮ್ಮ ಇಬ್ರೂ ಮನೆಯಿಂದ ಹೊರಗೆ ಹೋಗಿ ಬೆಕ್ಕನ್ನು ಮಲಗಿಸಿಕೊಂಡು ಬಿಡು ಅಂತ ಬೈತಾನೆ ಇದ್ರು. ಆದ್ರೂ ಬಿಡಲಿಲ್ಲ. ಅದನ್ನು ಅಲ್ಲೇ ಮಲಗಿಸಿ ಬಿಸಿನೀರು ಇಟ್ಟು ಸ್ನಾನ ಮಾಡಿದೆ ಆದ್ರೂ ಬೆಕ್ಕು ಎದ್ದಿಲ್ಲ. ದೇವರಿಗೆ ದೀಪ ಹಚ್ಚಿದೆ.

ನಂತರ ಟೀ ಹೀರುತ್ತಾ ಕುಳಿತಿದ್ದಾಗ ಬೆಕ್ಕು ಮಿಯಾಂಮ್ ಅಂದಿತ್ತು. ಒಂದು ಕ್ಷಣ ಸುತ್ತಲೂ ಕಣ್ಣಾಡಿಸಿದ ಅದು ಜೋರಾಗಿ ಕೂಗಲಾರಂಭಿಸಿತ್ತು. ಆಗ ಗಂಟೆ 6.30. ಅಣ್ಣನವ್ರು ಜೋರಾಗಿ ನಂಗೆ ಬೈಯತೊಡಗಿದರು. ನನ್ನ ಹತ್ತಿರ ಬಂದ ಬೆಕ್ಕಿಗೆ ಹಾಲಲ್ಲಿ ಮುಳಗಿಸಿ ರಸ್ಕ್ ಹಾಕಿದೆ. ಅಳೋದನ್ನೆಲ್ಲಾ ಬಿಟ್ಟು ಅದು ತಿನ್ನೋದಕ್ಕೆ ಶುರು ಮಾಡಿತ್ತು. ಅಂದಿನಿಂದ ಆ ಬೆಕ್ಕು ನನಗೆ ತುಂಆ ಇಷ್ಟ. ಆಫೀಸಿಗೆ ಹೊರಡುವಾಗ್ಲೂ ಅದನ್ನು ಬಿಟ್ಟು ಬರಕ್ಕೆ ಮನಸ್ಸಿಲ್ಲ. ದಿನಾ ಮುದ್ದು ಮಾಡ್ತಿದ್ದೆ. ಯಾಕಂದ್ರೆ ಅದು ಮುದ್ದುಮುದ್ದಾಗಿ ನೋಡಾಕೂ ತುಂಬಾ ಚೆನ್ನಗಿತ್ತು. ನಾವ್ಯಾರು ಇಲ್ಲಾಂದ್ರೂ ಅದ್ರ ಪಾಡಿಗೆ ಅದು ಇರ್ತಾ ಇತ್ತು. ನಿಜ ಹೇಳಬೇಕೆಂದರೆ ಮನುಷ್ಯರಲ್ಲಿ ಕಾಣದ ಪ್ರಾಮಾಣಿಕ ಪ್ರೀತಿ ಆ ಬೆಕ್ಕಿನಲ್ಲಿತ್ತು. ದಿನಾ ನಾನು ಬರೋದನ್ನೇ ಎದುರು ನೋಡ್ತಾ ಇತ್ತು. ಒಂದು ರೀತಿಯಲ್ಲಿ ನಮ್ಮ ಮನೆಯ ಸದಸ್ಯೆ. ಅದನ್ನು ಚಿನ್ನು ಅಂತ ಕರೀತಾ ಇದ್ದೆ.

ಆದ್ರೆ ಇದ್ದಕ್ಕಿದ್ದಂತೆ ಆ ಬೆಕ್ಕು ಕಾಣೆಯಾಯಿತು. ಸಂಜೆ ಆಫೀನಿಂದ ಹೋಗಿ ಮನೆಯಲ್ಲಿ ನೋಡಿದ್ರೆ ಬೆಕ್ಕಿಲ್ಲ..ಇಡೀ ದಿನ ಹುಡುಕಾಡಿದೆ..ಯಾರ ಮನೆಯಲ್ಲಿ ಕೇಳಿದ್ರೂ ಬೆಕ್ಕಿಲ್ಲ..ಬದುಕಿನ ಪ್ರೀತಿ ನೀಡಿದ ಆ ನನ್ನ ಚಿನ್ನು...ನೆನಪು ಮತ್ತೆ ಮತ್ತೆ ಕಾಡುತ್ತಿತ್ತು..ಆದ್ರೆ ಅದು ಕಾನೆಯಾಗಿದ್ದಲ್ಲ..ಪಕ್ಕದಮನೆ ನಾಯಿ ಕೊಂದು ಹಾಕಿದೆ ಅನ್ನೋದು ಗೊತ್ತಾಗಿದ್ದು ಒಂದು ತಿಂಗಳ ನಂತರವೇ. ತಿಳಿದಾಗ ಕಣ್ಣಂಜಿನಲ್ಲಿ ನೀರು ಜಿನುಗಿತ್ತು..ನನ್ನ ಮುದ್ದು ಚಿನ್ನು ಮತ್ತೆ ಬರಲೇ ಇಲ್ಲ..

ಬೆಂಗಳೂರಿನ 'ಮಹಾತ್ಮಗಾಂಧಿ' ರಸ್ತೆ ನಿಜವಾಗ್ಲೂ ಗಾಂಧಿ ಜೀವನಾದರ್ಶಗಳನ್ನು ಪಾಲಿಸುತ್ತೆ!!

ನಿನ್ನೆಗೆ (ಜನವರಿ 30) ಮಹಾತ್ಮಾಗಾಂಧಿ ಗೋಡ್ಸೆಯಿಂದ ಹತರಾಗಿ 60 ವರ್ಷ ಆಯಿತು. ನಿನ್ನೆ ರಾತ್ರಿ ಆಫೀನಿಂದ ಹೊರಡುವಾಗ 8 ಗಂಟೆ ರಾತ್ರಿ. ನನ್ನ ಸ್ನೇಹಿತರೊಬ್ಬರು ಸಿಕ್ಕಿದ್ದರು. ಆಫೀಸ್ ಬಳಿಯಿಂದ ನನ್ ಮನೆತನಕ ಅವರ ಜೊತೆ ಕಾರಲ್ಲಿ ಹೋಗಿದ್ದೆ. ಹಾಗೆ ಮಾತಡುತ್ತಿರಬೇಕಾದ್ರೆ ಗಾಂಧೀಜಿ ವಿಷಯ ಮಾತಾಡುತ್ತಾ ಹೋದೆವು. ಮಾತಾಡುತ್ತಲೇ ಇರುವಾಗ ಅವರು " ಗಾಂಧೀಜಿ ಜೀವನಮಾರ್ಗವನ್ನು ಸರಿಯಾಗಿ ಪಾಲಿಸುವುದು ಎಂ.ಜಿ. ರೋಡ್ " ಮಾತ್ರ ಅಂದ ಅವರು " ಈ ಮಾತು ನಾನು ಹೇಳಿದ್ದಲ್ಲ, ಖ್ಯಾತ ಸಾಹಿತಿಯೊಬ್ಬರೇ ಹೇಳಿದ್ದಾರೆ" ಅಂದ್ರು. ಯಾಕೆ ಅಂತ ಕೇಳಿದಾಗ ನಕ್ಕು ಅವರು "ಅಲ್ಲಮ್ಮ ನಿಂಗೇನು ಗೊತ್ತಾಗುತ್ತೆ ಹೇಳು? ಗಾಂಧೀಜಿ ಸರಳ ಬದುಕನ್ನು ಅನುಸರಿಸಿದ್ದಾರೆ. ಹಾಗೆ ಎಂ.ಜಿ. ರೋಡ್ ಗೆ ಹೋಗೋರೆಲ್ಲರದು ಸರಳ ಬದುಕು, ಗಾಂಧೀಜಿ ಥರ ಒಂಚೂರು ಬಟ್ಟೆ.." ಹೀಗೆ ವಿವರಿಸಿ ನಗತೊಡಗಿದರು. ಈ ಮಾತು ತಮಾಷೆಗೆ ಹುಟ್ಟಿಕೊಂಡಿದ್ದು. ತನ್ನ ತತ್ವ, ಜೀವನಾದರ್ಶಗಳ ಮೂಲಕ ವಿದೇಶಿಯರ ಮನಗೆದ್ದವರು ಗಾಂಧೀಜಿ. ಈ ಎಂ.ಜಿ. ರೋಡ್ ಕೂಡ ವಿದೇಶಿಯರನ್ನೇ ಆಕರ್ಷಿಸುತ್ತದೆ. 'ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ಓಡಾಡುವಂತಾದರೆ, ಆಗ ಮಹಿಳೆಯೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ' ಅಂದವರು ಗಾಂಧೀಜಿ. ಆ ಮಾತು ಕೂಡ ಇಲ್ಲಿ ನೂರಕ್ಕೆ ನೂರುಭಾಗವೂ ನಿಜವಾಗುತ್ತಿದೆ. ನಡುರಾತ್ರಿಯಲ್ಲಿಯೂ ಇಲ್ಲಿ ಮಹಿಳೆಯರು ಬೇಕಾಬಿಟ್ಟಿ ಸ್ವತಂತ್ರರಾಗಿ ಸುತ್ತಾಡುತ್ತಾರೆ. ಥೇಟ್ ಗಾಂದಿಯಂತೆ ಮೈಯಲ್ಲಿ ಅರೆಬಟ್ಟೆ!! ಪಾಪ, ಈ ರಸ್ತೆಯಲ್ಲಿ ಒಂದೇ ಒಂದು ಅಪವಾದ ಅಂದ್ರೆ ಗಾಂಧೀಜಿಯ ಸಾರಾಯಿ ವಿರುದ್ಧದ ಧೋರಣೆ ಇನ್ನೂ ಇಲ್ಲಿನ ಜನತೆಗೆ ತಿಳಿದಿಲ್ಲ. ಹಗಲೂ ರಾತ್ರಿಯೆನ್ನದೆ, ಬೆಳಗ್ಗಿನಿಂದ ನಡುರಾತ್ರಿಯವರೆಗೂ ಇಲ್ಲಿನ ಬಾರ್. ಪಬ್ಗಳಲ್ಲಿ ಹೌಸ್ಪುಲ್. ಇದೊಂದು ವಿಷ್ಯ ಬಿಟ್ರೆ ಮತ್ತೆ ಎಲ್ಲ ರೀತಿಯಿಂದಲೂ ಮಹಾತ್ಮಗಾಂಧೀ ರಸ್ತೆ ಗಾಂಧೀಜಿಯ ಜೀವನಾದರ್ಶಗಳನ್ನು ಚಾಚು ತಪ್ಪದೆ ಪಾಲಿಸುತ್ತದೆ!!

**ದಯಾಶಂಕರ್ ಶುಕ್ಕ ಸಾಗರ್ ಬರೆದ 'ಬ್ರಹ್ಮಚರ್ಯ ಕೀ ಪ್ರಯೋಗ್' ಹೊಸ ಪುಸ್ತಕದ ಬಗ್ಗೆ ಪತ್ರಿಕೆಯಲ್ಲಿ ಓದಿದೆ. ಗಾಂಧೀಜಿ ಸಾಯುವಾಗ 'ಹೇ ರಾಮ್' ಅಂದಿಲ್ಲ, 'ಅಹ್' ಎಂದು ಹೇಳಿದ್ದಾರೆ ಎಂದು ಲೇಖಕರು ವಾದಿಸಿದ್ದಾರಂತೆ. ಬಹುಶಃ ಸತ್ತವರ ಬಗ್ಗೆ ಬದುಕಿದ್ದವರು ಸಧ್ಯದಲ್ಲಿಯೇ ವಿವಾದಗಳನ್ನು ಸೃಷ್ಟಿಸಬಹುದು.

Friday, January 25, 2008

ಲೇ ಅಣ್ಣ ಬೇಗ ಬಾರೋ..

ಲೇ ಅಣ್ಣಾ..ಹೇಗಿದ್ಯಾ? ಅದೇ ಕಣೋ..ನಿನ್ನ ನೆನಪಾಗುತ್ತೆ. ಮಾತುಮಾತಿಗೂ ಅಮ್ಮನ ಸೆರಗಹಿಡಿದು ಅಣ್ಣ ಕೊಡು ಅಂತ ಪೀಡಿಸ್ತೀನಿ. ಹೌದು. ಎಲ್ಲರು ಅಣ್ಣಾಂತ ಕೂಗುವಾಗ ನನ್ ಹೃದಯನೂ ಅಣ್ಣ ಅಂತ ಕೂಗುತ್ತೆ. ನನ್ನ ಜೊತೆಜೊತೆಯಲಿ ನಗುನಗುತ್ತಿರುವ ನಿನ್ನಂಥ ಅಣ್ಣ ಬೇಕು. ನನ್ನಮ್ಮನ ಹೊಟ್ಟೇಲಿ ನೀನೂ ಹುಟ್ಟಿ ಬರ್ಬೇಕಿತ್ತು ಕಣೋ. ಅದ್ಯಾಕೆ ದೂರದಲ್ಲಿ ನಿಂತು 'ತಂಗೀ ನೀ ನನ್ನದೆಯಲ್ಲಿ ಸ್ವಾತಿಮುತ್ತು' ಅನ್ತೀಯಾ? ಯಾವಾಗದರೊಮ್ಮೆ ನೀ ಸಿಕ್ಕಾಗ ನಿನ್ನ ಮಡಿಲಲ್ಲಿ ಮಗುವಾಗಿಬಿಡೋದು, ಒಡಲುತುಂಬಾ ಪ್ರೀತಿಯ ಹೂವು ನಾನಾಗೋದು, ನಿನ್ನ ಕೈಯಿಂದ ಕೆನ್ನೆಗೆ ಚಿವುಟಿಸಿಕೊಳ್ಳೋದು, ಚಿಲ್ಲರೆ ತಪ್ಪುಗಳನ್ನು ಮಾಡಿ ಬೈಸಿಕೊಳ್ಳೋದು, ಬೆಳದಿಂಗಳ ರಾತ್ರಿಯಲ್ಲಿ ಚಂದ್ರನಿಗೆ ತಮಾಷೆ ಮಾಡುತ್ತಾ ಚೆಂಡಾಟ ಆಡೋದು, ಸಿಟ್ಟಿನಿಂದ ಮೊಂಡಾಟ ಮಾಡೋದು...ಇಷ್ಟು ಮಾತ್ರ ಸಾಕಾಗಲ್ಲ ..ನಾ ನಿನ್ ಜೊತೆಯಲ್ಲೇ ಇರ್ಬೇಕು. ನಿತ್ಯ ನಿನ್ ಕೀಟಲೆ ಮಾಡಿ ರೇಗಿಸ್ಬೇಕು. ನಿನ್ನೊಂದಿಗೆ ಜಗಳವಾಡ್ಬೇಕು. ಮುಂಗೋಪಿ ಥರ ಮುಖ ಊದಿಸಿಕೋಬೇಕು. ಕೊನೆಗೆ ರಾಜಿಯಾಗಿ ಅಣ್ಣನಿಂದ ಮುದ್ದಿಸಲ್ಪಡುವ ಪುಟ್ಟ ತಂಗಿ ನಾನಾಗ್ಬೇಕು. ನಾ ಪ್ರತಿ ವರ್ಷ ನಿನ್ ಕೈಗೆ ಕಟ್ಟುವ ರಾಖಿ ನಾ ದಿನಾ ನೋಡುತ್ತಿರಬೇಕು. ನಿನ್ನ ಪ್ರೀತಿಯ ಮಡಿಲಲ್ಲಿ ಅಮ್ಮನ ವಾತ್ಸಲ್ಯದ ಸುಖವನ್ನು ನಾ ಕಾಣ್ಬೇಕಣ್ಣ. ..ನಿನ್ನ ಕಣ್ತುಂಬ ನೋಡುತ್ತಾ ಖುಷಿ ಖುಷಿಯಾಗಿ ನಿನ್ ಜೊತೆ ಸುತ್ತಬೇಕು ಅಣ್ಣ..ನೀ ಬರ್ತೀಯಾ ನನ್ ಜೊತೆ..

ಹೌದು. ಕಣೋ..ನೀನು ನನ್ನ ಅಣ್ಣ..ನಾನೇ ಮುದ್ದಿನ ತಂಗಿ ನೀ ನನ್ನ ತುಂಬಾ ಪ್ರೀತಿಸ್ತೀಯಾ..ನಂಗೆ ಸಣ್ಣ ಶೀತ, ಜ್ವರ ಬಂದ್ರೂ ಗೋಳೋ ಎಂದು ಅಳ್ತಿಯಾ..ನನ್ನ ಪ್ರೀತಿಗಾಗಿ ಹಂಬಲಿಸ್ತೀಯಾ..ನಿನ್ನ ಬಿಟ್ಟು ದೂರ ಬಂದಾಗ ನನ್ನೊಡನೆ ನೀನೂ ಕಣ್ಣೀರಾಗ್ತೀಯಾ..ನಿದ್ದೆಯ ಮಂಪರಿನಲ್ಲಿಯೂ ನೀ ನನ್ನ ಕರೆತೀಯಾ..ಇದನ್ನೆಲ್ಲಾ ನೆನೆದು ನನ್ನ ಹೃದಯ ಅಳುತ್ತೆ ಗೊತ್ತಾ? ಆದ್ರೆ ನಿಂಗೇನು ಗೊತ್ತು..ನೀನು ದಿನಾ ತಮಾಷೆ ಮಾಡ್ತೀಯಾ..ನನ್ ರೇಗಿಸ್ತೀಯ..ಬಂದಾಗ ಎಟ್ಲೀಸ್ಟ್ ಚಾಕಲೇಟ್ ಕೂಡ ಕೊಡಿಸಲ್ಲ ಕಣೋ..ನಂಗೆ ಎಷ್ಟು ಬೇಜಾರಾಗುತ್ತೆ ಗೊತ್ತೆ?

ನೋಡು ಅಣ್ಣ..ಬರುವ ಜನ್ಮವಿದ್ದರೆ ನಾನು-ನೀನ್ ಒಂದೇ ಅಮ್ಮನ ಹೊಟ್ಟೇಲಿ ಹುಟ್ಟಿಬಿಡೋಣ.. ನನ್ಗೆ ಚೆಂದದ ಬೊಂಬೆ, ಚಾಕಲೇಟ್ ಕೊಡಿಸುವ, ನಗುನಗುತ್ತಾ ನನ್ ಕೆನ್ನೆಗೊಡ್ದು ಸತಾಯಿಸುವ ತರ್ಲೆ ಅಣ್ಣ ನೀನಾಗಬೇಕು..ನಿನ್ಗೆ ರಾಖಿ ಕಟ್ಟಿದಾಗ..ಅದ್ಕೆ ಗಿಫ್ಟ್ ಕೊಡ್ಬೇಕು..ಅದನ್ನ ನೋಡಿ ನಾ ಖುಷಿ ಪಡ್ಬೇಕು. ..ಓಕೆ ನಾ..ನಿನ್ ನೆನಪಾಯಿತು. ಪತ್ರ ಬರೆದೆ. ನಿನಗಾಗಿ ರಾಖಿ ತಂದಿಟ್ಟು ಕಾಯ್ತಾ ಇದ್ದೀನಿ...ಬೇಗ ಬಾರೋ..
ನಿನ್ ತಂಗಿ,
ಚಿನ್ನು

Thursday, January 24, 2008

ನಮಗೂ ಒಬ್ಬ ಮಿತ್ತೆರಾಂದ್ ಬೇಕು..

ಹಣಕ್ಕಾಗಿ, ಅಧಿಕಾರಕ್ಕಾಗಿ ನಿತ್ಯ ಕೋಳಿ ಜಗಳ ತೆಗೆಯುವ ನಮ್ಮ ರಾಜಕಾರಣಿಗಳ ಕಂಡಾಗ ಫ್ರಾನ್ಸ್ನ ಅಧ್ಯಕ್ಷ ಮಿತ್ತೆರಾಂದ್ ನೆನಪಾಗುತ್ತಾರೆ. ನಿಸರ್ಗ ಮತ್ತು ಪುಸ್ತಕ ಪ್ರೆಮಿಯಾದ ಮಿತ್ತೆರಾಂದ್ ' ನಾನು ಮೂಲಭೂತವಾಗಿ ರಾಜಕಾರಣಿಯಲ್ಲ. ರಾಜಕಾರಣ ಮತ್ತು ತತ್ವಶಾಸ್ತ್ರವನ್ನು ತಿಳಿಯಲೆತ್ನಿಸುವ ನಮ್ರ ವಿದ್ಯಾರ್ಥಿ. ನಿಸರ್ಗದ ತಿಳುವಳಿಕೆ ಇಲ್ಲದೆ, ಜನಸಾಮಾನ್ಯನ ನಿತ್ಯ ಬದುಕನ್ನು ಅರಿಯಲಾಗದೆ ಈ ರಾಜಕೀಯ ಕೃತಕ ಹೂವಿನಂತಿದೆ" ಎನ್ನುತ್ತಿದ್ದರು. ನಮ್ಮ ರಾಜಕಾರಣಿಗಳಿಗೆ ನಿಸರ್ಗದ ತಿಳುವಳಿಕೆ ಬಿಡಿ, ಕನಿಷ್ಠ ತಮ್ಮನ್ನು ಮತ ಹಾಕಿ ಅಧಿಕಾರ ಗದ್ದುಗೇರುವಂತೆ ಮಾಡಿದ ಪ್ರಜೆಗಳ ನೆನಪೂ ಇರುವುದಿಲ್ಲ. ಪರಿಸರದ ಬಗ್ಗೆ ಮಾತಾಡಲು ಹೇಳಿದ್ರೆ..ಯಾರೋ ಬರೆದುಕೊಟ್ಟ ಭಾಷಣವನ್ನು ಗಿಳಿಪಾಠ ಮಾಡುತ್ತಾರೆ. ಗಿಳಿಪಾಠ ಮಾಡಿದವರಿಗೆ ತಾವು ಏನು ಹೇಳುತ್ತಿದ್ದೇವೆಂದೂ ಗೊತ್ತಾಗಲ್ಲ ಬಿಡಿ. ಅದು ಬರೆದುಕೊಟ್ಟವರಿಗೆ ಮಾತ್ರ ಗೊತ್ತು. ಆದ್ದರಿಂದಲೇ ನಮ್ಮವರಿಗೆ ಬರೇ ಆಶ್ವಾಸನೆ ನೀಡೋದು ಮಾತ್ರ ಗೊತ್ತು. ಸಮಾಜವಾದಿ ಪಕ್ಷದ ಮಿತ್ತೆರಾಂದ್, ಫ್ರಾನ್ಸ್ನನಲ್ಲಿ ಬಂಡವಾಳ ಶಾಹಿಗಳನ್ನು ಹಿಮ್ಮೆಟ್ಟಿಸಿ, ಪ್ರಜೆಗಳಿಗೆ ಏನು ನೀಡಬೇಕೋ ಅದನ್ನು ನೀಡಿದವರು. ಈತ ಚುನಾವಣೆ ಬಂದಾಗ ನಿಮ್ಮೂರಿಗೆ ರಸ್ತೆ ಮಾಡಿಸುತ್ಥೇನೆ, ಸಾಲ ನೀಡುತ್ತೇವೆ ಎಂದು ಭರವಸೆಗಳ ಮಳೆ ಸುರಿಯಲಿಲ್ಲ. ಬದಲಾಗಿ ಮಿತ್ತೆರಾಂದ್ ಅನ್ಯಾಯಕ್ಕೋಳಗಾದ ಜನರಿಗೆ ಬದುಕು ನೀಡುತ್ತೇವೆ ಎಂದರು. ಕಾರ್ಯಮುಖೇನ ಮಾಡಿ ತೋರಿಸಿಕೊಟ್ಟರು.

ಆದರೆ ಕರ್ನಾಟಕದ 'ಮಣ್ಣಿನ ಮಗ' ದೇಶದ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಹೇಳಿರುವ 'ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು. ಏನು ಮಾಡೋಣ, ಪಾಪ ಮಾಡಿ ಇಲ್ಲೇ ಹುಟ್ಟಿದ್ದೇನೆ' ಎಂಬ ಮಾತನ್ನು ಕರ್ನಾಟಕದ ಜನತೆ ಕಿವಿಯಾರೆ ಕೇಳಬೇಕಾಗಿರುವುದು ದುರಂತ.
ಪಿ.ಲಂಕೇಶ್ ತನ್ನ 'ಟೀಕೆ-ಟಿಪ್ಪಣಿ' ಪುಸ್ತಕದಲ್ಲಿ ಮಿತ್ತೆರಾಂದ್ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ. 'ಇಡೀ ಫ್ರಾನ್ಸ್ ದೇಶ ಬದಲಾಲಾವಣೆಗಾಗಿ ಸ್ಪಂದಿಸುತ್ತ ಕುರುಕ್ಷೇತ್ರವನ್ನು ಹೋಲುತ್ತಿದ್ದ ಚುನಾವಣೆಯ ಕದನದ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ ಪುಸ್ತಕ ಜೀವಿ, ಕಲೆಯ ಆರಾಧಕ ಮಿತ್ತೆರಾಂದ್ ತನ್ನ ಇಳಿವಯಸ್ಸಿನಲ್ಲಿ ಮಳೆಯ ಕಾರಣ, ಮೂರು ದಿನಗಳ ಸಂಗಮ, ಮೋಡಗಳು ಬೀಜಗಟ್ಟುವ ರೀರಿ, ತೇವವನ್ನು ಭೂಮಿ ಹೀರುವ ರೀತಿಯನ್ನು ಪತ್ರಿಕಾವರದಿಗಾರರೊಂದಿಗೆ ಚರ್ಚಿಸುತ್ತಿದ್ದ..ನಿಜವಾದ ತಟಸ್ಥ ನೀತಿಗೆ ರಾಜಕೀಯದಲ್ಲಿ ಸರಳತೆ, ಪ್ರಾಮಾಣಕತೆ, ಎಲ್ಲ ಜನರನ್ನೂ ಮನಸ್ಸು, ಹೃದಯವಿಳ್ಳ ಜೀವಿಗಳಾಗಿ ನೋಡುವುದು ಎಷ್ಟು ಮುಖ್ಯ ಎಂಬುದನ್ನು ಮಿತ್ತೆರಾಂದ್ ತೋರಿದ್ದ' ಎಂದು ಲಂಕೇಶ್ ಈ ಪುಸ್ತಕದಲ್ಲಿ ವಿವರಿಸುತ್ತಾರೆ.

ಮಿತ್ತೆರಾಂದ್ ಬಗ್ಗೆ ಕೇಳಿದಾಗಲೆಲ್ಲಾ ನಮಗೊಬ್ಬ ಅಂತ ರಾಜಕಾರಣಿ ಬೇಕು ಎಂದನಿಸುತ್ತೆ. ಮೊನ್ನೆ ಮೊನ್ನೆ ದೇವೇಗೌಡರು ಹುಟ್ಟಿದ್ದೇ ಪಾಪ ಅಂದಾಗ ನನಗೆ ತಟ್ಟನೆ ನೆನಪಾಗಿದ್ದು ಮಿತ್ತೆರಾಂದ್. ಒಂದು ಬಾರಿ ಮಿತ್ತೆರಾಂದ್ ಇಸ್ರೇಲಿಗೆ ಭೇಟಿ ಯಾದಾಗ ಮಿತ್ತೆರಾಂದ್ ಹೆಳಿದ ಮೊದಲ ಮಾತು 'ದಯವಿಟ್ಟು ನನ್ನ ಮಾತನ್ನು ನಂಬಿ. ನಿಮ್ಮ ನಿಜವಾದ ಸ್ನೇಹಿತನಾಗಿ ನಾನು ಇಸ್ರೇಲಿಗೆ ಬಂದಿದ್ದೇನೆ. ಫ್ರಾನ್ಸಿನ ಪ್ರತಿಯೊಬ್ಬ ಶುಭಕಾಮನೆ ನನ್ನೊಂದಿಗಿದೆ' ಎಂದು ಮಾತು ಶುರುಮಾಡಿದ್ದರು. ನಮ್ಮಲ್ಲಿ ಪ್ರತಿಯೊಬ್ಬ ಪ್ರಜೆಯ ಮತ ಪಡೆದು ಕುರ್ಚಿಯಲ್ಲಿ ಕುಳಿತ ಮೇಲೆ ನಮ್ಮ ಜನ ನಾಯಕರು ಮತ್ತೊಂದು ದೇಶದಲ್ಲಿ 'ಭಾರತದ ಪ್ರತಿ ಪ್ರಜೆಯ ಶುಭಕಾಮನೆ ನನ್ನೊಂದಿಗೆ ಇದೆ 'ಎನ್ನುವುದಿರಲಿ, ನಮ್ಮ ದೇಶದಲ್ಲಿನ ಜನಸಂಖ್ಯೆ ಎಷ್ಟು ಅಂಥ ಕೇಳಿದ್ರು ಸರಿಯಾಗಿ ಗೊತ್ತಿರಲಲ್ಲ ಬಿಡಿ. ಮತ್ತೆ ಹೇಳಕ್ಕೆಲ್ಲಿ ನೆನಪಿರುತ್ತೆ. ' ನಮಗೆ ಕಳ್ಳೇಕಾಯಿ ಕೊಳ್ಳಲು ಅಮೆರಿಕವೆಂಬ ಮಹಾರಾಷ್ಟ್ರದ ಅಪ್ಪಣೆ ಪಡೆಯಬೇಕೆ? ನಿಮಗೆ ಪ್ರಾಣಿಗಳ ಮನಸ್ಸು ಇಲ್ಲದಿದ್ದರೆ ಮನುಷ್ಯರ ಮನಸ್ಸು ಖಂಡಿತ ಅರ್ಥವಾಗುವುದಿಲ್ಲ" ಎಂದಿರುವ ಮಿತ್ತೆರಾಂದ್ ವ್ಯಕ್ತಿತ್ವ ವನ್ನು ಆತನ ಮಾತುಗಳಿಂದಲೇ ನಾವು ಗುರುತಿಸಬಹುದು.

ನಮ್ಮಲ್ಲೂ ಒಬ್ಬ ಮಿತ್ತೆರಾಂದ್ ಇರುತ್ತಿದ್ದರೆ..ನಮ್ಮ ರಾಜಕೀಯ ಇಷ್ಟೊಂದು ಪ್ರಪಾತಕ್ಕೆ ಇಳಿಯುತ್ತಿರಲಿಲ್ಲ. ಭ್ರಷ್ಟ ರಾಜಕಾರಣ ತಾಂಡವಾಡುತ್ತಿರಲಿಲ್ಲ. ಕನ್ನಡ ನೆಲದಲ್ಲಿ ಹುಟ್ಟಿ, ಕನ್ನಡ ನೆಲದ ಅನ್ನ ತಿಂದುಂಡು ಕನ್ನಡಕ್ಕೆ ಅನ್ಯಾಯವೆಸಗುವ ರಾಜಕಾರಣಿಗಳು ಹುಟ್ಟಿ ಬೆಳೆಯುತ್ತಿರಲಿಲ್ಲ. ನಮಗೂ ಇಂಥ ಒಬ್ಬ ಮಿತ್ತೆರಾಂದ್ ಬೇಕು..ಅನ್ಯಾಯಕ್ಕೊಳಗಾದವರ ಕೈಹಿಡಿದು ಎಬ್ಬಿಸಲು..ಬಂಡವಾಳಶಾಹಿ, ಭ್ರಷ್ಟತೆಯನ್ನು ಹತ್ತಿಕ್ಕಲು..ಭಾರತದಲ್ಲಿ ಸಮಾನತೆ ಸಾರಲು..ಸ್ವತಂತ್ರ ಭಾರತದಲ್ಲಿ ನೈಜ ಸ್ವಾತಂತ್ರ್ಯವನ್ನು ಜನತೆಗೆ ಕೊಡಲು..ನಮಗೂ ಒಬ್ಬ ಮಿತ್ತೆರಾಂದ್ ಬೇಕು..ಆದ್ರೆ ಹಾಗಾಗುತ್ತಾ????

Tuesday, January 22, 2008

'ದ ಸೀಕ್ರೇಟ್ ಆಫ್ ಸೈಲೆನ್ಸ್'

ಒಂದೇ ಒಂದು ಬಾರಿ www.thesecretsofsilence.cq.bz ಗೆ ಭೇಟಿ ನೀಡಿ. 'ದ ಸೀಕ್ರೇಟ್ ಆಫ್ ಸೈಲೈನ್ಸ್'! ಉತ್ತಮ ಪರಿಕಲ್ಪನೆ. ಪ್ರಸ್ತುತ ಆಧುನಿಕ ಜಗತ್ತಿನ ನಿತ್ಯ ಸತ್ಯ. ಆಧುನಿಕತೆಗೆ ಮರುಳಾಗಿ, ಅದಕ್ಕಾಗಿ ಹಂಬಲಿಸುವ ಯುವಕನೊಬ್ನನ ತುಡಿತ, ಆಧುನಿಕತೆಯ ಬದುಕಿನಲ್ಲಿನ ತಾಕಲಾಟ, ದ್ವಂದ್ವ ಮನಸ್ಸು, ಜೊತೆಗೆ ಮನಶಾಂತಿಯ ಹುಡುಕಾಟ ವನ್ನು ಬಿಂಬಿಸಲಾಗಿದೆ. ಎಸ್ ಡಿಎಂ ಕಾಲೇಜಿನ ತೃತೀಯ ಬಿ.ಎ.ಯ ವಿದ್ಯಾರ್ಥಿ ಕಾರ್ತಿಕ್ ಪರಾಡ್ಕರ್ ನಿರ್ದೇಶಿಸಿದ್ದಾರೆ. ಇದು ಕೇವಲ ಅರ್ಧ ಗಂಟೆಯ ಪುಟ್ಟ ಸಿನಿಮಾ. ಆದ್ರೆ ಅತೀ ಕಡಿಮೆ ಸಮಯದಲ್ಲಿ ಅತ್ಯಂತ ಚೊಕ್ಕವಾಗಿ ಹೇಳಬೇಕಾದನ್ನು ಹೇಳಿ ಮುಗಿಸಿದ್ದಾರೆ. ನಾಯಕನಾಗಿ ವೇಣುಗೋಪಾಲ್ ಅಭಿನಯಿಸಿದ್ದಾರೆ. ಹುಡುಗ್ರ ಸಾಧನೆಗೆ ಹಾಟ್ಸ್ ಆಫ್ ಅನ್ನೋಣ.

Wednesday, January 16, 2008

ಆ ಮಣಿಪುರಿ ಹುಡುಗ..

ಅಂದು ರಾತ್ರಿ 8 ಗಂಟೆಗೆ ಆಫೀಸ್ ನಿಂದ ಹೊರಟಾಗ ಬಸ್ಸುಗಳೆಲ್ಲಾ ಖಾಲಿ ಖಾಲಿ. ಸೀಟು ಸಿಕ್ರೆ ಸಾಕು..ಕಿವಿಗೆ ಇಯರ್ ಪೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ, ಏನಾದ್ರೂ ಪುಸ್ತಕ ಓದುತ್ತಾ ಹೋಗೋದು ನನ್ ಅಭ್ಯಾಸ. ಅದ್ರಲ್ಲಿ ಬೆಂಗ್ಳೂರಲ್ಲಿ ಟ್ರಾಪಿಕ್ ಜಾಮ್ ಲ್ಲಿ ಸಿಕ್ಕಹಾಕೊಂಡು ಹೋಗುವಾಗ ಇನ್ನೂ ಲೇಟ್. ಸೀಟ್ ಸಿಕ್ಕಾಗ ಓದೋಕೆ ಏನೂ ತೊಂದ್ರೆ ಆಗಲ್ಲ.

ಅಂದು ನನ್ ಸೀಟಲ್ಲಿ ಇನ್ನೊಬ್ಬ ಬಿಳಿ ಹುಡುಗ ಬಂದು ಕೂತಿದ್ದ. ಯಾಕೋ ಆತನನ್ನು ನೋಡುವಾಗ್ಲೆ ವಿಚಿತ್ರ ಅನಿಸ್ತು. ಬಿಳಿ ಟೀ ಶರ್ಟ್ , ಜಾರಿ ಬೀಳುತ್ತೇನೋ ಎನ್ನುವಂತ ದೊಗಲೆ ಜೀನ್ಸ್ ಪ್ಯಾಂಟ್, ಒಂದು ಕಿವಿಗೆ ಓಲೆ, ಕತ್ತಲ್ಲಿ ನಾಯಿಯನ್ನು ಕಟ್ಟಿಹಾಕಲು ಬಳಸುವಂತ ದೊಡ್ಡ ಸಂಕೋಲೆ, ಉದ್ದ ಜುಟ್ಟು ನೋಡುವಾಗ ಮಹಾಎಡಬಿಡಂಗಿ ಅನಿಸ್ತು. ನನ್ ಕೈಯಲ್ಲೊಂದು ಕನ್ನಡ ಮ್ಯಾಗಜಿನ್ ಇತ್ತು. ಆತ ನಾನು ಓದೊದನ್ನು ತುಂಬಾ ಕುತೂಹಲದಿಂದ ಇಣುಕಿ ಇಣುಕಿ ನೋಡ್ತಾ ಇದ್ದ. ಯಾಕಪ್ಪಾ ಈ ಮನುಷ್ಯ ಇಷ್ಟೊಂದು ನೋಡ್ತಾ ಇದ್ದಾನೆ..ಬುಕನ್ನೋ,..ನನ್ನನ್ನೋ..ಅನ್ನೋ ಕುತೂಹಲ ನಂಗೆ.

ಮುಖ ನೋಡಿದಾಗ ತಣ್ಣಗೆ ನಕ್ಕುಬಿಟ್ಟ. ನಂಗೊಂದು ಕೆಟ್ಟ ಅಭ್ಯಾಸ..ಯಾರಾದ್ರೂ ಹುಡುಗ್ರು ಸುಮ್ನೆ ತರ್ಲೆ ಮಾಡಿದ್ರೆ..ನಾನೂ ಬಿಡಲ್ಲ..ಅವ್ರು ಗುರಾಯಿಸಿದ್ರೆ ನಾನೂ ಗುರಾಯಿಸೋದು,,,ನೋಡ್ತಾ ಇದ್ರೆ..ನಾನೂ ನೋಡಿದ್ರೆ..ಮತ್ತೆ ಅವ್ರೂ ತಿರುಗಿನೇ ನೋಡಲ್ಲ. ಹಾಗೆ ಮಾಡೋಣ ಅಂದುಕೊಂಡೆ. ಆತ ನಕ್ಕನಲ್ಲ..ನಾನೂ ನಕ್ಕುಬಿಟ್ಟು ಬುಕ್ ಬೇಕಾ ಅಂದೆ. ಆ ಮನುಷ್ಯನಿಗೆ ಇಂಗ್ಲೀಷ್ ಬರಲ್ಲ..ನನ್ ಮುಖವನ್ನೇ ದಿಟ್ಟಿಸಿದ. ಪುನಃ ಇಂಗ್ಲೀಷ್ನಲ್ಲಿ ಕೇಳಿದೆ..ಆಗ ಮಾತಿಗಿಳಿದ..'ನೀವು ಓದ್ತಾ ಇರೋದು ಯಾವ ಭಾಷೆ ಅಂಥ ನನ್ ಕುತೂಹಲ ಮೇಡಂ..ನಂಗೆ ಕನ್ನಡ ಅಂದ್ರ ಇಷ್ಟ. ನಾನು ಮಣಿಪುರಿ. ಒಂದು ವರ್ಷ ಆಯ್ತು. ಬೆಂಗಳೂರಲ್ಲಿ ಸಾಫ್ಟ್ ವೇರ್." ಅಂದ ಅಚ್ಚ ಇಂಗ್ಲೀಷ್ನಲ್ಲಿ. 'ಓದಿದ್ದು ಎಲ್ಲಿ'? ಅಂದೆ. 'ನಾನು ಎಂಬಿಎ ಮಾಡಿದ್ದು ಇಲ್ಲೇ ' ಅಂದ. 'ಯಾಕೆ ನಿಮ್ಮಲ್ಲಿ ಓದಬಹುದಿತ್ತಲ್ಲ?'ಅಂದೆ. 'ಅಲ್ಲ ಮೇಡಂ ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಚೆನ್ನಾಗಿಲ್ಲ..ಅದ್ಕೆ ಇಲ್ಲಿಗೆ ಬಂದೆ. ಕರ್ನಾಟಕ ಚೆನ್ನಾಗಿದೆ. ನಂಗೆ ತುಂಬಾ ಖುಷಿಯಾಗುತ್ತೆ. ನನ್ ತಂಗೀನ ಇಲ್ಲೇ ಒದಿಸ್ಬೇಕು. ಯಾಕಂದ್ರೆ ನಮ್ಮಲ್ಲಿ ಹುಡುಗೀರಿಗೆ ರಕ್ಷಣೆ ಇಲ್ಲ. ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು. ಆದ್ರಿಂದ ಮುಂದಿನ ವರ್ಷ ನಮ್ ತಂಗೀನ ಇಲ್ಲಿ ಕರ್ಕೊಂಡು ಬರ್ಬೇಕು. ಅಲ್ಲಿ ಹುಡುಗೀರನ ಹೆತ್ತವರೇ ಹೊರ ರಾಜ್ಯಗಳಿಗೆ ಕಳಿಸ್ತಾರೆ..ಕಾರಣ ಹುಡುಗೀರು ಸುರಕ್ಷಿತವಾಗಿರಲು ಸಾಧ್ತವಿಲ್ಲ" ಅಂದ. 'ಯಾಕೆ ನಿಮ್ಮಲ್ಲಿ ಏನೇ ಮಾಡಿದ್ರೂ ಶಿಕ್ಷೆ ಇಲ್ವಾ?' ಅಂದೆ. "ಇರುತ್ತೆ. ಆದ್ರೆ ಯಾವುದೂ ಫಲಿಸಲ್ಲ. ಕಾನೂನಿದ್ರೂ ಅದರಂತೆ ಆಗಲ್ಲ' ಅಂದ.
"ಕನ್ನಡ ಕಲೀತೀರಾ?' ಅಂದ್ರೆ. ಹೂ ಕಲೀತಾ ಇದ್ದಿನಿ. ನನ್ನ ಫ್ರೆಂಡ್ಸ್ ಕನ್ನಡದೋರು. ತುಂಬಾ ಒಳ್ಳೆಯವರು" ಅಂದ..ಅಷ್ಟೊತ್ತಿಗೆ ನನ್ ಸ್ಟಾಪ್ ಬಂತು. ನಾನು ಸೀಟನಿಂದ ಇಳಿಯುತ್ತಿದ್ದಂತೆ..ನನ್ನ ಕೈಯಲ್ಲಿದ್ದ ಮ್ಯಾಗಜೀನ್ ಅವನಿಗೆ ಕೊಟ್ಟೆ. ಅವನ ನಂಬರು ಕೊಟ್ಟ. ನಗುತ್ತ ಬೈ ಅಂದ..ನಾ ಬಸ್ಸಿನಿಂದ ಇಳಿದೆ. ಆತ ಮಾತ್ರ ಮತ್ತೆ ನನ್ನತ್ತ ತಿರುಗಿ ನೋಡ್ತಾ ಬೈ ಅನ್ನುತ್ತಿದ್ದ.

ಕುತೂಹಲ ಮಾತಾಯಿತು..ಮಾತು ಹೊಸ ಅನುಭವ, ಹೊಸತೊಂದರ ಪರಿಚಯಿಸಿತ್ತು. ಕನ್ನಡದ ಬಗ್ಗೆ ನಮ್ಮವರಿಗಿಲ್ಲದ ಅಭಿಮಾನ, ದೇಶದ ಯಾವುದೋ ಮೂಲೆಯಲಲಿದ್ದವರಿಗೆ ಇರುವುದನ್ನು ಕಂಡು ನನಗೆ ನಮ್ಮ ಬಗ್ಗೆ ನಾಚಿಕೆಯೆನಿಸಿತ್ತು.

Wednesday, January 9, 2008

ಹುಡುಗ ಚಾಕಲೇಟ್ ಕೊಟ್ಟಾಗ..

"ಮೊನ್ನೆ ಶನಿವಾರ ಆಫೀಸ್ನಿಂದ ಹೊರಡುವಾಗ ರಾತ್ರಿ 9 ಗಂಟೆ. ಎಂಜಿ ರೋಡ್ನಿಂದ ಕಾರ್ಪೋರೇಷನ್ ಬಳಿ ಬಂದಾಗ 9.45. ಅಲ್ಲೊಬ್ಬ ಹುಡುಗ ನನ್ ಜೊತೆ ಮೆಜೆಸ್ಟಿಕ್ ಬಸ್ ಎಲ್ಲಿ ಬರುತ್ತೆ? ಅಂತ ಮಾತಾಡಿಸಿದ. ನಾನು ನಿಜ ಹೇಳಿದೆ. ನಾನೂ ಮೆಜೆಸ್ಟಿಕ್ ಹೋಗುವವನು. ನೀವೂ ಬರಬಹುದು ಅಂದೆ. ಪಟಪಟನೆ ಇಂಗ್ಲೀಷ್ ಮಾತಾಡುತ್ತಿದ್ದ ಆ ಹುಡುಗ, ನೋಡಲೂ ಲಕ್ಷಣವಾಗಿದ್ದ.

ಆತ ನನ್ ಪಕ್ಕನೆ ಕುಳಿತ. ನಗುನಗುತ್ತಾ ಮಾತಾಡುತ್ತ ನಂಗೊಂದು ಚಾಕಲೇಟ್ ಕೊಟ್ಟ. ನಾನು ಬೇಡವೇ ಬೇಡ ಅಂದ್ರೂ ಕೈಹಿಡಿದು ತುರುಕಿದ. ಆತನೂ ತಿಂದ. ನಂತ್ರ ನಾನೂ ಬಾಯಿಗೆ ಹಾಕಿದ. ಆ ಚಾಕಲೇಟ್ ಬಾಯಿಗೆ ಹಾಕಿದ್ದೇ ತಡ, ಏನಾಯ್ತೋ..ಆತ ನನ್ನನನ್ನು ದುರುಗುಟ್ಟಿ ಅಪರಿಚಿತನಂತೆ ನೋಡಲಾರಂಭಿಸಿದ. ನಾನು ಕಕ್ಕಾಬಿಕ್ಕಿ. ಹೀಗ್ಯಾಕೆ ನನ್ ನೋಡ್ತಾ ಇದ್ದಾನೆ? ...ನೋಡು ನೋಡುತ್ತಿದ್ದಂತೆ ಮೆಜೆಸ್ಟಿಕ್ ಅಂದಿರುವ ಆ ಮನುಷ್ಯ ಮುಂದಿನ ಬಸ್ ಸ್ಟಾಂಡಿನಲ್ಲೇ ಇಳಿದುಹೋದ. ನಂತ್ರ ನನ್ನ ಹೊಟ್ಟೆಯೊಳಗೆ ಒಂದೇ ಸಮನೆ ಉರಿ ಶುರುವಾಯ್ತು. ಬೆಂಕಿಯಂತೇ ಹೊಟ್ಟೆ ಸುಡುತ್ತಿತ್ತು. ತಲೆ ಸುತ್ತು ಬಂತು, ವಾಂತಿ ಮಾಡಿದೆ..ಅಷ್ಟೇ ಗೊತ್ತು. ಅಮೇಲೆ ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿ ಕುಳಿತು ರಾತ್ರಿ 11 ಗಂಟೆಗೆ ಕಣ್ತರೆದಾಗ ನನ್ ಪಕ್ಕ ನನ್ ಫ್ರೆಂಡ್ ರಾಘು ಕುಳಿತಿದ್ದ. ಪಕ್ಕದಲ್ಲಿ ಇನ್ನೊಬ್ಬ ಅಪರಿಚಿತ. ಈ ಅಪರಿಚಿತ ಯುವಕ ನನಗೆ ನೀರು ಕೊಟ್ಟು, ಕೈಯಿಂದ ಬಿದ್ದ ಮೊಬೈಲು, ಬ್ಯಾಗಗ ಎತ್ತುಕೊಂಡು ನನ್ ಮೊಬೈಲಲ್ಲಿ ಮೆಸೇಜ್ ನೋಡಿ..ನನ್ ಫ್ರೆಂಡ್ ರಾಘುಗೆ ಪೋನ್ ಮಾಡಿದ್ದ. ನಂತ್ರ ಅಲ್ಲಿಗೆ ರಾಘು ಬಂದ..ಅವನ ರೂಮಿಗೆ ಕರೆದುಕೊಂಡ ಹೋದ.."

ಭಾನುವಾರ ರಾತ್ರಿ ಕೆಲಸ ಮುಗಿಸಿ ರಾತ್ರಿ ಹನ್ನೊಂದು ಗಂಟೆಗೆ ಮನೆಗೆ ಬಂದು, ತಟ್ಟೆ ತುಂಬಾ ಅನ್ನ-ಸಾರು ಹಾಕೊಂಡು ನನ್ ತಮ್ಮ ಸಂದೇಶ್ ಹೇಳುತ್ತಿದ್ದಂತೆ ನಾನು ಗರಬಡಿದಂತೆ ನಿಂತಿದ್ದೆ. ಫ್ರೆಂಡ್ ಮನೆಗೆಂದು ಹೋದ ಸಂದೇಶ್ ಗೆ ಯಾರೊಬ್ಬ ಕಳ್ಳತನ ಮಾಡೋಕೆ ಈ ರೀತಿ ಮಾಡಿದ್ದಾನೆ. ಮರುದಿನ ಡಾಕ್ಟರ್ ಬಳಿ ಹೋದ್ರೆ 'ಡ್ರಗ್ಸ್ ಕೊಟ್ಟಿದ್ದಾನೆ' ಅಂದ್ರು. ದೊಡ್ಡ ಅನಾಹುತಗಳೇನೂ ಆಗಿಲ್ಲ. ಇಂಥವುಗಳು ಬೆಂಗಳೂರಿನಂಥ ಹೈಟೆಕ್ ಸಿಟಿಯಲ್ಲಿ ಮಾತ್ರ ನಡೆಯಲು ಸಾಧ್ಯ. ನಮ್ಮ ಮುಗ್ಧತೆ, ಪ್ರಾಮಾಣಿಕತೆ ಎಲ್ಲವನ್ನೂ ತಿಂದುಂಡು ತೇಗುವವರಿದ್ದಾರೆ. ಸಹಾಯ, ಅನುಕಂಪ, ಮಾನವೀಯತೆ ಯಾವುದಕ್ಕೂ ಇಲ್ಲಿ ಬೆಲೆಯಿಲ್ಲ. ಈ ಅನುಭವ ನಮಗೂ ಒಂದು ಎಚ್ಚರಿಕೆಯಷ್ಟೇ.

Saturday, January 5, 2008

ಸಿಕ್ಸ್-ಫೋರ್ ಚಚ್ಚಿದೋರು ಸಮಾಜಕ್ಕೇನು ಕೊಟ್ರು?

ನಿನ್ನೆ ರಾತ್ರಿ ಟಿವಿ ನೋಡುತ್ತಿದ್ದಂತೆ ಚಾನೆಲ್ಲೊಂದು ಒಂದು ವಿಷ್ಯದ ಬಗ್ಗೆ ಬಡ ಬಡಿಸುತ್ತಿತ್ತು. ಅದೂ ದೇಶದ ಪ್ರತಿಷ್ಠಿತ ಪುರಸ್ಕಾರ ಭಾರತ ರತ್ನದ ಬಗ್ಗೆ. ನಮ್ಮ ಕ್ರಿಕೆಟ್ ಕಲಿ ಸಚಿನ್ ತೆಂಡೂಲ್ಕರ್ ಗೆ ಭಾರತ ರತ್ನ ನೀಡಬಹುದೇ?ಇಲ್ಲವೇ ಎನ್ನುವ ಕುರಿತು ಚರ್ಚೆಯಾಗುತ್ತಿತ್ತು. ಏನೋ ತೋಚಿತ್ತು, ಒಂದಷ್ಟು ತಲೆಹರಟೆಗಳು ತಲೆಯನ್ನು ಕೊರೆಯತೊಡಗಿದವು. ನಮ್ಮನೆಯಲ್ಲಿ ನಾನು ಬಿಟ್ರೆ ಇನ್ಯಾರು ಕ್ರಿಕೆಟ್ ನೋಡಲ್ಲ, ಒಂದು ವೇಳೆ ರಾತ್ರಿ ಮ್ಯಾಚ್ ಇದ್ರೂ ಎಲ್ಲರೂ ನಿದ್ದೆಗೆ ಜಾರಿದಾಗ ನಾನೂ ನಿದ್ದೆಹೋಗಬೇಕು. ಟಿವಿ ಆನ್ ಮಾಡಿ ಕ್ರಿಕೆಟ್ ನೋಡೋ ಹಾಗಿಲ್ಲ. ಯಾರೂ ಕ್ರಿಕೆಟ್ ಸವಿಯದವರು ಇರುವಾಗ ನಾನು ಅವರತ್ರ ತೋಚಿದ್ದನ್ನು ಹೇಳಿಯೇನು ಪ್ರಯೋಜನ? ಅದ್ಕೆ ಈಗ ಬ್ಲಾಗ್ ಬುಟ್ಟೀಲಿ ಹಾಕೊಣ ಅನಿಸ್ತು. ತಪ್ಪೋ/ಸರಿಯೋ ಅದಲ್ಲ ನನ್ ಪ್ರಶ್ನೆ. ತೋಚಿದ್ದನ್ನು ಗೀಚೋದು ನನ್ ಹವ್ಯಾಸ, ಅಭ್ಯಾಸ.

ಟಿವಿ ಬಡಬಡನೆ ಬಡಿದುಕೊಳ್ಳುವಾಗ ನಂಗೂ ಅನಿಸ್ತು, ಸಚಿನ್ ಗೆ ಭಾರತ ರತ್ನ ನೀಡಬೇಕೆ? ಅಥವಾ ಈ ಚಾನೆಲ್ ಬೇರೆ ಏನೂ ಕೆಲ್ಸ ಇಲ್ಲದೆ ಈ ವಿಷ್ಯದ ಬಗ್ಗೆ ಪುಂಖಾನುಪುಂಖವಾಗಿ ಬಡಿದುಕೊಳ್ಳುತ್ತಿದೆಯೇ? ಎಂದು. ವೈಯಕ್ತಿಕವಾಗಿ ಹೇಳೊದಾದ್ರೆ ಸಚಿನ್ ಅಂದ್ರೆ ನಂಗೆ ತುಂಬಾ ಇಷ್ಟ. ಆತ ಫೋರ್, ಸಿಕ್ಸ್ ಹೊಡೆದಾಗ ನಾನೂ ಎಲ್ಲರಂತೆ ಖುಷಿಪಡೋಳು. ಕಾಲೇಜಲ್ಲಿರುವಾಗ ಕ್ಲಾಸಿಗೆ ಚಕ್ಕರ್ ಹಾಕಿ ಕಾಲೇಜು ಲೇಡಿಸ್ ರೂಮಲ್ಲಿ ಕುಳಿತು ಕ್ರಿಕೆಟ್ ನೋಡ್ತಾ ಇದ್ದೆ. ಸಚಿನ್ ಸಿಕ್ಸ್ ಹೊಡೆದ್ರೆ ಕ್ಲಾಸಲ್ಲಿದ್ದವರಿಗೆಲ್ಲ ಮೆಸೇಜ್ ಮಾಡಿ ಕಿರಿಕಿರಿ ಮಾಡ್ತಾ ಇದ್ದೆ. ಹಾಸ್ಟೇಲಲ್ಲಿರುವಾಗ ಏನಾದ್ರೂ ಮಾಡಿ ಬೈಸಿಕೊಂಡು, ಉಗಿಸಿಕೊಂಡು ಕ್ರಿಕೆಟ್ ನೋಡ್ತಾ ಇದ್ದೆ. ಇಂದೂ ನೋಡ್ತೇನೆ. ಇಂದಿಗೂ ಸಚಿನ್ ಬಗ್ಗೆ ಗೌರವವಿದೆ. ಹೌದು! ತುಂಬಾ ಚಂದ ಆಡ್ತಾನೆ. ಬೇಕಾದಷ್ಟು ಬಹುಮಾನ,ಬಿರುದುಗಳನ್ನು ಪಡೆದಿದ್ದಾನೆ. ಜನರು ದೇವರಂತೆ ಆತನನ್ನು ಪೂಜಿಸುತ್ತಿದ್ದಾರೆ. ತಪ್ಪೇನಿಲ್ಲ, ಸರಿಯೇ. ಸರಣಿ ಮ್ಯಾಚ್ಚಲ್ಲಿ ಹದಿನೈದು ಸಾವಿರಕ್ಕಿಂತಲೂ ಹೆಚ್ಚು ರನ್ ಗಳಿಸಿದ ಸಚಿನ್, ವನ್ ಡೇ ಮ್ಯಾಚಲ್ಲಿ ಹನ್ನೊಂದು ಸಾವಿರಕ್ಕಿಂತಲೂ ಹೆಚ್ಚು ರನ್ ಪಡೆದಿದ್ದಾರೆ. ಈ ಅಂಕಿ-ಅಂಶದಲ್ಲಿ ಹೆಚ್ಚು-ಕಡಿಮೆ ಇದ್ರೆ ಓದಿದವರು ಹೇಳಬಹುದು.

ಈಗ ಬರೋಣ ವಿಷ್ಯಕ್ಕೆ. ಸಚಿನ್ ರನ್ ಪಡೆದಿರಬಹುದು, ಹೌದು! ಅದು ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ಆದ್ರೆ ನನ್ ಪ್ರಶ್ನೆ ಅದಲ್ಲ, ನಮ್ಮ ಸರ್ಕಾರ, ಜನರು, ಸಂಘ-ಸಂಸ್ಥೆಗಳು ಎಲ್ಲರೂ ಸಚಿನ್ ಅಥವಾ ಇನ್ಯಾವ ಕ್ರಿಕೆಟ್ ಕ್ರೀಡಾಪಟುಗಳಿಗೆ ಬಹುಮಾನದ ರೂಪದಲ್ಲಿ ಬೇಕಾಬಿಟ್ಟಿ ಹಣ ಸುರೀತಾರೆ. ಜಾಹೀರಾತಿನಲ್ಲಿ ಕೋಟಿ ಗಟ್ಟಲೆ ಹಣ ಗಳಿಸುತ್ತಾರೆ. ಆದ್ರೆ ಇಂಥ ಮಹಾನ್ ಪುರುಷರು, ಇಂದಿನ ಯುವಜನರ ಆದರ್ಶ ಪುರುಷರು ಎಷ್ಟರಮಟ್ಟಿಗೆ ನಮ್ಮ ದೇಶ, ಸಮಾಜದ ಅಭಿವೃದ್ಧಿಯಲ್ಲಿ ಶ್ರಮಿಸಿದ್ದಾರೆ. ಅವರು ಸಮಾಜಕ್ಕೆ ಕೊಟ್ಟ ಪಾಲೆಷ್ಟು? ಸರ್.ಎಂ. ವಿ ಅಂತ ಮಹಾನ್ ವ್ಯಕ್ತಿಗಳು ತಾವು ದುಡಿದ್ದನೆಲ್ಲಾ ಸಮಾಜಕ್ಕೆ ನೀಡಿದ್ದಾರೆ. ಸಮಾಜಕ್ಕಾಗಿ ದುಡಿದಿದ್ದಾರೆ. ಅವರು ಇಂದಿಗೂ ಸಮಾಜದಲ್ಲಿ, ಜನಮಾನಸದಲ್ಲಿ ಪ್ರಸ್ತತ. ಭಾರತ ರತ್ನ ಅಂಥವರಿಗೆ ನೀಡಬೇಕಾದ ನಿಜವಾದ ಗೌರವ. ಬದುಕನ್ನೇ ಸಮಾಜದ ಉದ್ಶಾರಕ್ಕಾಗಿ ಸವೆಸಿದ ಇವರಿಗೆ ಇದಕ್ಕಿಂತ ದೊಡ್ಡ ಬಹುಮಾನ ಸಿಕ್ಕರೂ ಕಡಿಮೆನೇ. ಆದರೆ ನಮ್ಮ ಸಚಿನ್, ರನ್ ಮಾಡಿದ್ದು ಬಿಟ್ರೆ ದೇಶದ ಜನರಿಗೇನು ಕೊಟ್ಟಿದ್ದಾರೆ,? ದುಡಿದದ್ದನ್ನು ಪೂರ್ತಿ ಕೊಡಿ ಎಂದು ಹೇಳುತ್ತಿಲ್ಲ. ನಮ್ಮ ದೇಶದಲ್ಲಿ ಎಷ್ಟೋ ಜನರು ಬಡ ಜನರಿದ್ದಾರೆ. ಶಿಕ್ಷಣ ಪಡೆಯದ ಮಕ್ಕಳಿದ್ದಾರೆ. ಅವರಿಗೆ ಕನಿಷ್ಠ ಶಿಕ್ಷಣ ಕೊಡಿಸಲಿ. ದೇಶದ ಕೊಳೆಗೇರಿ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಬೆಳಕು ನೀಡಲಿ. ಆದ್ರೆ ಸಚಿನ್ ನಂಥವರು ಹಳೇ ಬ್ಯಾಟ್ ಮಾರಿದ್ರೂ ಹಣ ಕೊಡ್ಬೇಕು ಕಣ್ರೀ. ಅಂಥವರಿಗೆ ನಾವು ಭಾರತ ರತ್ನ ಕೊಡಬೇಕೋ/ ಬೇಡವೋ ನೀವೂ ಹೇಳಿ. ಸಚಿನ್ ನಂಥ ಕ್ರೀಡಾಪಟುಗಳಿಗೆ, ಅಥವಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದರಿಂದ ಹಣ ಹಳಿಸುವ ಇಂದಿನ 'ಉದರಿಗಳು' ಅಂಥವರಿಗೆ ಬಹುಮಾನ ರೂಪದಲ್ಲಿ ಸಿಕ್ಕ ಕಾರುಗಳೆಷ್ಟೋ/ ಗೌರವ ಬಿರುದುಗಳೆಷ್ಟೋ. ಇನ್ನೂ ನನಗೆ ನೆನಪಿದೆ ಕಳೆದ ಕೆಲ ವರ್ಷಗಳ ಹಿಂದೆ ಕನ್ನಡದ ಪ್ರಸಿದ್ಧ ಚಾನೆಲ್ಲೊಂದು ಓರ್ವ ಪ್ರಸಿದ್ಧ ಕ್ರೀಡಾಪಡುಗೆ ಕನ್ನಡಿಗ ಪ್ರಶಸ್ತಿ ನೀಡಿತ್ತು. ಆದ್ರೆ ಇತ್ತೇಚೆಗೆ ಅದೇ ಬಹುಮಾನ ಪಡೆದ ಆತನನ್ನು ಭೇಟಿಯಾಗುವ ಸುಯೋಗ ಸಿಕ್ಕಿತ್ತು. ಆ ಮಹಾತ್ಮನಲ್ಲಿ ಕನ್ನಡ ಮಾತಾಡಿದ್ರೆ 'ಪ್ಲೀಸ್ ಟೆಲ್ ಮೀ ಇನ್ ಇಂಗ್ಲೀಷ್' ಅನ್ನಬೇಕೆ?
ಸಚಿನ್ ದೇಶದ ಹೆಸರನ್ನು ಎತ್ತಿಹಿಡಿದಿದ್ದಾರೆ ಎಂದು ಕೆಲವರು ವಾದಿಸಬಹುದು. ಎತ್ತಿಹಿಡಿಯೋದು ಬೇರೆ, ಸಮಾಜ ನಿರ್ಮಾಣ ಬೇರೆ. ನಮ್ಮ ಕ್ರಿಕೆಟ್ ಪಟುಗಳು ಜಾಹೀರಾತಿನಲ್ಲಿ ಪಡೆದ ಹಣದ 10% ಆದ್ರೂ ಬಡಜನರ ಉದ್ಧಾರಕ್ಕೆ ನೀಡಲಿ. ಶಿಕ್ಷಣ ಕೊಡಿಸಲಿ. ಬಡಜನರಿಗೆ ಹೊಟ್ಟೆ-ಬಟ್ಟೆಗೆ ಒಂಚೂರು ಉಣ ಬಡಿಸಲಿ. ಆಗ ಅವರಿಗೆ ಕೊಡೋಣ ಭಾರತರತ್ನ. ಅವರೂ ಆಗ ನಿಜವಾದ 'ರತ್ನ' ಆಗಬಲ್ಲರು. ಏನಂತೀರಿ?

Friday, January 4, 2008

ಇಡೀ ಬದುಕನ್ನು ನರಕದ ಕೂಪಕ್ಕೆ ತಳ್ಳಿದವನಿಗೆ, 14 ದಿನ ಶಿಕ್ಷೆ!!

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪಾನಮತ್ತನಾದ ಪೊಲೀಸ್ ಪೇದೆಯೊಬ್ಬ 11 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದು ನಡೆದಿದ್ದು ಜನವರಿ 3ರ ನಡುರಾತ್ರಿ. ಈತನಿಗೆ ಶಿಕ್ಷೆಯೇನು? 14 ದಿನ ನ್ಯಾಯಾಂಗ ಬಂಧನ ಮತ್ತು ಸೇವೆಯಿಂದ ಅಮಾನತು!!!

ಇಲ್ಲಿನ ರಂಗೇಗೌಡರ ಬೀದಿಯಲ್ಲಿನ ಮಂಜುನಾಥ್ ಲಾಡ್ಜ್ ಮುಂಭಾಗದ ಪಾಳು ಕೊಠಡಿಯಲ್ಲಿ ಅತ್ಯಾಚಾರ ಎಸಗಿದ್ದಾನಂತೆ. ಜನರೇ ಇವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜನರಿಗಿಂತ ಒಪ್ಪಿಸಿದ ಮೇಲೆ ಇನ್ನೇನು ಬೇಕು ಸಾಕ್ಷಿ?! ಆದ್ರೆ ಅವನಿಗೆ ಸಿಕ್ಕ ಶಿಕ್ಷೆ ಮಾತ್ರ 14 ದಿನ, ಅಂದ್ರೆ ಇನ್ನೂ ಅರ್ಧ ತಿಂಗಳಿಗೆ ಒಂದು ದಿನ ಬಾಕಿ ಮತ್ತು ಅಮಾನತು. ಓರ್ವ ಹೆಣ್ಣಿನ ಬದುಕನ್ನು ಬುಡದಲ್ಲೇ ಚಿವುಟಿ ಹಾಕಿದ ಆ ನೀಚನಿಗೆ ಅರ್ಧತಿಂಗಳು ಶಿಕ್ಷೆ!!

ಇಂಥಹ ವ್ಯವಸ್ಥೇ ಇದ್ರೆ ಬಹುಶಃ ನಮ್ಮ ಭಾರತದಲ್ಲಿ ಮಾತ್ರ ಎನ್ನುವುದು ನನ್ನ ಅಭಿಪ್ರಾಯ. 'ಈತ ಅಪರಾಧ ಸಾಬೀತಾಗುವವರೆಗೂ ಆರೋಪಿ' ಎನ್ನಬಹುದು. ಹೌದು! ಕಾನೂನು ಪ್ರಕಾರ ಅದು ಸರಿ, ಒಪ್ಪಿಕೊಳ್ಳೋಣ. ಆದ್ರೆ ಇಂಥ ಎಷ್ಟೋ ಪ್ರಕರಣಗಳು ಇಂದು ನಮ್ಮೆದುರು ನಡೆಯುತ್ತವೆ. ರಾತ್ರಿ-ಹಗಲೆನ್ನದೆ ನಿರಂತರ ಅತ್ಯಾಚಾರಗಳು ನಡೆಯುತ್ತವೆ. ಬಡವರ ಮೇಲೆ ಅತ್ಯಾಚಾರಗಳು ನಡೆದರೆ ಪತ್ರಿಕೆಗಳಲ್ಲಿ ಒಂದು ದಿನ ಪ್ರಕಟವಾಗಿ, ಎಲ್ಲರೂ ಬಾಯಿ ತುಂಬಾ ಮಾತಾಡುವುದು ಬಿಟ್ಟರೆ ನಂತರ ಆ ಬಗ್ಗೆ ನಮ್ಮ ವ್ಯವಸ್ಥೆ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಡವರಿಗೆ ನ್ಯಾಯ ಮರೀಚಿಕೆಯೇ ಸರಿ. ಮಾತ್ರವಲ್ಲ ದುಷ್ಕೃತ್ಯಗಳು ನಡೆಯುವುದೂ ಬಡವರ ಮೇಲೆಯೇ. ಅದೂ ಪೊಲೀಸ್, ಶಿಕ್ಷಕ ಅಥವಾ ಇನ್ನಿತರ ಹಿರಿಯ ಅಧಿಕಾರಿಗಳಿಂದಲೇ ಈ ದುಷ್ಕೃತ್ಯ ನಡೆಯುತ್ತಿರುತ್ತದೆ. ಸಮಾಜ, ಇಡೀ ನಮ್ಮ ವ್ಯವಸ್ಥೆ ಇದನ್ನೆಲ್ಲಾ ಕಣ್ಣು ಬಿಟ್ಟು ನೋಡ್ತಾ ಇರುತ್ತದೆ. ಬಾಯ್ತುಂಬಾ ಇದ್ರ ಬಗ್ಗೆ ಮಾತಾಡ್ತಾ ಇರುತ್ತೆ. ಅಲ್ಲಿ ಅತ್ಯಾಚಾರ ಎಸಗಿದ ಆ ನೀಚ ಮನುಷ್ಯ ಮುಖ್ಯವಾಗುವುದಿಲ್ಲ, ಅಮಾಯುಕಳಂತೆ ಸಹಿಸಿಕೊಂಡ ಹೆಣ್ಣು ಜೀವ ಮುಖ್ಯವಾಗುತ್ತದೆ. ಅವಳು ಶೀಲ ಕಳಕೊಂಡವಳು, ಅವನು ಮಹಾನ್ ಶೀಲವಂತ. ಯಾರೂ ಈ ಬಗ್ಗೆ ವಿರೋಧ ಮಾತಾಡಲ್ಲ, ಬದಲಾಗಿ ಆ ಹುಡುಗೀನ ಅನುಮಾನದಿಂದ ಕಾಣ್ತಾರೆ. ಇಡೀ ಸಮಾಜ ಅವಳನ್ನು ಅಸ್ಪೃಶ್ಯಳಂತೆ ದೂರವಿಡುತ್ತದೆ. ಅವಳ ಇಡೀ ಜೀವನ ನರಕಯಾತನೆ ಅನುಭವಿಸುತ್ತಾಳೆ. ಆದ್ರೆ ಓರ್ವ ಹೆಣ್ಣಿನ ಇಡೀ ಬದುಕನ್ನು ನರಕದ ಕೂಪಕ್ಕೆ ತಳ್ಳಿದ ಭೂಪನಿಗೆ ಶಿಕ್ಷೆ 10 ದಿನ, 1 ತಿಂಗಳು, ಹೆಚ್ಚೆಂದರೆ 6 ತಿಂಗಳು. ಇದು ನಮ್ಮ ನಿಯಮ. ಯಾರೂ ಇದನ್ನು ವಿರೋಧಿಸುತ್ತಿಲ್ಲ, ಯಾಕೆ ಈ ಸಮಾಜ, ನಮ್ಮ ವ್ಯವಸ್ಥೆ ಹೀಗೆ? ನಮ್ಮ ಮಹಿಳಾ ಆಯೋಗ ಇದೆ. ಆದ್ರೆ ಅದು ಎಷ್ಟರಮಟ್ಟಿಗೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನೋದು ಎಲ್ಲರಿಗೂ ಗೊತ್ತು.. ಅಲ್ಲಿ ನಾವು ಯಾವುದೇ ದೂರು ಕೊಟ್ಟರೆ ಮೊದಲು ಪಕ್ಷ ಯಾವುದು ಎಂಬುದು ಮುಖ್ಯವಾಗುತ್ತದೆ.

ಅದೇ ಹಾಸನದಲ್ಲಿ ದುಷ್ಕೃತ್ಯ ಎಸಗಿದ ಆ ನೀಚ ಪೊಲೀಸ್ ಪೇದೆಯ ಹೆಸರು ಶಶಿಧರ್(33). ಈತನನ್ನು ಬಂಧಿಸಿದ ಪೊಲೀಸರು ಮುಖಕ್ಕೆ ಮುಸುಕು ಹಾಕಿ ಠಾಣೆಗೆ ಕರೆದೊಯ್ದಿದ್ದು ಆಶ್ಚರ್ಯ. ಈ ಹಿಂದೆ ಆತ ಸಕಲೇಶಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಇಂತಹುದೇ ಆರೋಪಕ್ಕೆ ಒಳಗಾಗಿ ಹುದ್ದೆಯಿಂದ ಅಮಾನತುಗೊಂದಿದ್ದನಂತೆ. ಆಗಲೂ ಇಂಥದ್ದೇ ಹಲ್ಕ ಕೆಲ್ಸ ಮಾಡಿ, ಅಮಾನತುಗೊಂಡು, ಮತ್ತೆ ಮರಳಿದ್ದ. ಈಗ ಮತ್ತೆ ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದ. ಈಗ್ಲೂ ಅವನಿಗೆ ಶಿಕ್ಷೆ ಅಮಾನತು, 14 ದಿನ ಕಂಬಿ ಎಣಿಸುವುದು. ಅದೂ ಓರ್ವ ಸಮಾಜವನ್ನು ರಕ್ಷಿಸುವ ಪೊಲೀಸ್ ಆಗಿ ಈತ ಮಾಡಿದ್ದ ಕೆಲ್ಸಕ್ಕೆ ಈತನಿಗೆ ಗಲ್ಲು ಶಿಕ್ಷೆ ನೀಡಿದ್ದರೂ ಕಡಿಮೆಯೇ. ಇನ್ನು ಕೆಲದಿನ ಅಮಾನತು ಮುಗಿಸಿ, ಮತ್ತೆ ಸೇವೆಗೆ ಸೇರ್ತಾನೆ, ಮತ್ತೆ ಹಳೆರಾಗ ಆರಂಭಿಸುತ್ತಾನೆ...ಅದೇ ಅತ್ಯಚಾರ, ಅದೇ ಅಮಾನತು, ಅದೇ 14 ದಿನ..!! ಇದು ನಮ್ಮ ವ್ಯವಸ್ಥೆ, ಬಹುಶಃ ದೇಶದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮಾತ್ರ. ಏನಂತೀರಿ?

Thursday, January 3, 2008

ವಿವೇಕ ವಾಣಿ ಸ್ಪೂರ್ತಿಯಾಗಲಿ ಅನುದಿನ..

ಜನವರಿ 12, ರಾಷ್ಟ್ರೀಯ ಯುವದಿನ!
ವಿಶ್ವದೆಲ್ಲೆಡೆ ಭಾರತ ನೆಲದ ಸಂಸ್ಕೃತಿಯ ಕಂಪನ್ನು ಹಬ್ಬಿಸಿದ ಯುವ ಚೇತನ ಸ್ವಾಮೀ ವಿವೇಕಾನಂದರ ಜನ್ಮದಿನ. ತನ್ನ ಜೀವನಾದರ್ಶ, ತತ್ವಗಳಿಂದ ವಿಶ್ವಮಾನ್ಯರಾದ, ಯುವಜನತೆಗೆ ಸ್ಪೂರ್ತಿಯ ಸೆಲೆಯಾದ ವಿವೇಕಾನಂದರ ಹುಟ್ಟಿದ ದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸಲಾಗುತ್ತದೆ. 1998ರಲ್ಲಿ ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲು ಕರೆ ನೀಡಿದ ಭಾರತ ಸರ್ಕಾರ, 2003ರಲ್ಲಿ ರಾಷ್ಟ್ರೀಯ ಯುವನೀತಿಯನ್ನೂ ಅಂಗೀಕರಿಸಿದೆ.

ರಾಷ್ಟ್ರೀಯ ಯುವ ನೀತಿ
13ರಿಂದ 35 ವರ್ಷದೊಳಗಿನವರು ಯುವಜನರೆಂಬ ಪರಿಕಲ್ಪನೆ.
ಯುವಕರಿಗೆ ಅಗತ್ಯ ತರಬೇತಿಗಳನ್ನು ನೀಡಿ, ಸಾಮಾಜಿಕವಾಗಿ ರೂಪುಗೊಳ್ಳುವಂತೆ ಮಾಡಬೇಕು.
ಉದ್ಯೋಗವಕಾಶ ಪಡೆಯಲು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು.
ಸಾಮಾಜಿಕ ಕ್ಷೇತ್ರದಲ್ಲಿ ಯುವಕರಿಗೆ ಎಲ್ಲಾ ರೀತಿಯ ರಕ್ಷಣೆ ಒದಗಿಸಿಕೊಡಬೇಕು.
ಯುವಜನರ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ ವಿಶೇಷ ನಿಧಿಯನ್ನು ಯೋಜಿಸಬೇಕು.
ಯುವ ಕ್ರೀಡಾಪ್ರತಿಭೆಗಳಿಗೆ ಸರ್ಕಾರದ ವತಿಯಿಂದ ಮನ್ನಣೆ ಸಿಗಬೇಕು.

ಆದರೆ ಪ್ರಸ್ತುತ ಸನ್ನಿವೇಶದಲ್ಲಿ ದೇಶದಲ್ಲಿ ಯುವ ನೀತಿ ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳುತ್ತಿದೆ? ಸರ್ಕಾರ ಇದಕ್ಕೆ ಸ್ಪಂದಿಸಿದೆಯೇ? ಯುವ ಪೀಳಿಗೆ 'ಯುವ ಶಕ್ತಿ'ಯ ಕುರಿತು ಗಂಭೀರ ಚಿಂತನೆ ನಡೆಸಿದೆಯೇ? ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಖಂಡಿತ ಇದೆ.
ಯುವ ನೀತಿ ಜಾರಿಯಾಗಿ ನಾಲ್ಕು ವರ್ಷ ಕಳೆದರೂ ಸರ್ಕಾರ ಈ ಬಗ್ಗೆ ಹೆಚ್ಚು ಗಮನಹರಿಸಿಲ್ಲ. ಸಾಮಾಜಿಕವಾಗಿ ಯುವ ಜನತೆಯನ್ನು ಸುಶಿಕ್ಷಿತರನ್ನಾಗಿ ಮಾಡುವ ಕಾರ್ಯ ಸರ್ಕಾರದಿಂದ ನಡೆಯುತ್ತಿಲ್ಲ. ಯುವಕರಿಗೆ ಅಗತ್ಯ ಶಿಕ್ಷಣ ನೀಡಿ ಸ್ವಾವಲಂಬಿ ಬದುಕು ರೂಪಿಸಿಕೊಡುವಲ್ಲಿ ನಮ್ಮ ಸರ್ಕಾರ ವಿಫಲವಾಗುತ್ತಿದೆ. ಯುವ ಜನತೆಗೆ ಭದ್ರ ಅಡಿಪಾಯ ಹಾಕಿಕೊಡುವ ಮತ್ತು ಅವರಲ್ಲಿ ಆದರ್ಶಗಳನ್ನು ತುಂಬುವ ಕಾರ್ಯ ನಡೆಯುತ್ತಿಲ್ಲ. ಹಳ್ಳಿಗೆ ಭೇಟಿ ನೀಡಿ ದಿಲ್ಲಿಯ ಬಗ್ಗೆ ಮಾತಾಡುವ , ದಿಲ್ಲಿಯಲ್ಲಿ ನಿಂತು ಅಮೆರಿಕಾವನ್ನು ಹೊಗಳುವ ನಮ್ಮ ಜನಪ್ರತಿನಿಧಿಗಳಿಗೆ ನಮ್ಮೊಳಗೆ ನಶಿಸಿ ಹೋಗುತ್ತಿರುವ ಆದರ್ಶ, ಸಂಸ್ಕೃತಿ ಕಡೆ ಒಂದಿಷ್ಟು ಕಾಳಜಿಯಿಲ್ಲ. ಯುವ ನೀತಿಯ ಅಭಿವೃದ್ಧಿಗಾಗಿ 'ಯುವ ನೀತಿ' ಯೋಜನೆಯಡಿಯಲ್ಲಿ ವಿಶೇಷ ನಿಧಿಯನ್ನು ನೀಡಬೇಕೆಂದಿದ್ದರೂ ಕಾರ್ಯರೂಪಕ್ಕೆ ತರಲು ವಿಫಲವಾಗಿದೆ ಮತ್ತು ನಿರುದ್ಯೋಗಿಗಳಿಗೆ ಕನಿಷ್ಠ ಉದ್ಯೋಗ ಒದಗಿಸುವಲ್ಲಿಯೂ ಸರ್ಕಾರ ಹೆಣಗಾಡುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಎಷ್ಟೋ ಮಂದಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅವರಿಗೆ ಸಿಗುವ ಪ್ರೋತ್ಸಾಹವೆಷ್ಟು? ನಮ್ಮ ಸರ್ಕಾರಕ್ಕೆ ಕ್ರೀಡೆ ಅಂದ ತಕ್ಷಣ ಕ್ರಿಕೆಟ್ ಬಿಟ್ರೆ ಬೇರೆ ಯಾವ ಆಟಗಳು ಕಣ್ಣ ಮುಂದೆ ಬರಲ್ಲ. ಕ್ರಿಕೆಟ್ ಗೆ ಬೇಕಾದ್ರೆ ರಾಶಿ ಗಟ್ಟಲೆ ಹಣ ಸುರಿತಾರೆ. ವೇದಿಕೆಯ ಮೇಲೆ ಭರವಸೆಯ ಮಾತುಗಳನ್ನಾಡಿ, ಚಪ್ಪಾಳೆ ಗಿಟ್ಟಿಸಿಕೊಳ್ಲುವ ಹಲವಾರು ನಾಯಕರು ಹೊಟ್ಟೆ-ಬಟ್ಟೆಗಿಲ್ಲದೆ ತುತ್ತು ಅನ್ನವಿಲ್ಲದೆ ,ವಿದ್ಯೆಯಿಲ್ಲದೆ ಬೀದಿ ಬೀದಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಪುಟ ಮಕ್ಕಳ ಬಗ್ಗೆ ಯಾಕೆ ಗಂಭೀರ ಚಿಂತನೆ ನಡೆಸಬಾರದು? ಭವಿಷ್ಯದ ಯುವ ಜನರೂ ಆ ಪುಟ್ಟ ಕಂದಮ್ಮಗಳಲ್ಲವೇ?

"ಇಂದಿನ ಮಕ್ಕಳೇ ಮುಂದಿನ ಜನಾಂಗ ಅನ್ತಾರೆ, ಯುವ ಜನತೆ ದೇಶದ ಭವಿಷ್ಯ ಅನ್ತಾರೆ. ಆದ್ರೆ ಯುವ ಜನಾಂಗವನ್ನು ಸುವ್ಯವಸ್ಥಿತ ರೀತಿಯಲ್ಲಿ ಬೆಳೆಸುವ ಪ್ರಯತ್ನ ನಡೆಯುತ್ತಿಲ್ಲ. ಸರ್ಕಾರದ ನಿರ್ಲಕ್ಷ, ಕಾರ್ಯವೈಫಲ್ಯ ಇಂದು ಯುವಶಕ್ತಿಯ ಮೇಲೆ ಗಾಢ ಪರಿಣಾಮ ಬೀಳುತ್ತಿದೆ.
''ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಉಕ್ಕಿನಂಥ ಯುವಕರಿಂದ ದೇಶ ಕಟ್ಟಲು ಸಾಧ್ಯ"-ಸ್ವಾಮೀ ವಿವೇಕಾನಂದರ ಮಾತಿರು. ದೇಶ ಜಾಗೃತಿಗಾಗಿ ತನ್ನ ಜೀವನವನ್ಮೇ ಮುಡುಪಾಗಿಟ್ಟರು. ಅಂತಹ ಆದರ್ಶರು ನಮ್ಮೊಳಗೆ ಬೇಕಾಗಿದ್ದಾರೆ. ನಮ್ಮನ್ನೇ ಜಾಗೃತಗೊಳಿಸುವ ಮಹಾನ್ ಪುರುಷರು ನಮ್ಮಲ್ಲಿ ಮತ್ತೊಮ್ಮೆ ಹುಟ್ಟಿಬರಬೇಕು. ಬೆಂಕಿ ಯಾವುದು? ಬೆಳಕು ಯಾವುದು?ಅನ್ನೋದನ್ನು ಅರಿಯದ ಯುವ ಪೀಳಿಗೆಗೆ ಅದನ್ನು ಮನದಟ್ಟಾಗಿಸುವ ಕಾರ್ಯ ನಮ್ಮಲ್ಲಿ ನಡೆಯಬೇಕಿದೆ. ಯುವ ಜನರ ಬಗ್ಗೆ ಸರ್ಕಾರವೂ ಗಂಭೀರ ಚಿಂತನೆ ನಡೆಸದಿರುವುದು ಯುವಕರು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದೆ.

ಸಂಸ್ಕೃತಿ ಸದಾಚಾರಗಳಿಗೆ ಹೆಸರಾದ ಭಾರತ ನೆಲದಲ್ಲಿ ಸಂಸ್ಕೃತಿಯ ಪಲ್ಲಟದಿಂದಾಗಿ ಸಂಸ್ಕೃತಿಯ ಪಾಠ ಹೇಳಿಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಂಧಾನುಕರಣೆಯ ಮಬ್ಬನಲ್ಲಿ ನೈತಿಕತೆ ಮರೆಯಾಗಿ ಮಾನವೀಯ ಮೌಲ್ಯಗಳು ಮೌಢ್ಯದ ಕೊಚ್ಚೆಯಲ್ಲಿ ಕೊಚ್ಚಿ ಹೋಗುತ್ತಿವೆ. ಜಾಗತೀಕರಣ ಪ್ರಭಾವದಿಂದಾಗಿ ಹಣ ಗಳಿಸುವ ದಿಢೀರ್ ಶ್ರೀಮಂತನಾಗುವ ಕನಸು ಕಾಣುವ ಹಲವಾರು ಯುವಕರು ಭಯೋತ್ಪಾದನೆ, ಭ್ರಷ್ಟಾಚಾರದಂತಹ ದೇಶದ್ರೋಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಯುವಕರೇ ದೇಶದ ದೊಡ್ಡ ಸಮಸ್ಯೆ ಎಂಬಂತಾಗಿದೆ. ಇದು ನಿವಾರಣೆಯಾಗಬೇಕಾದರೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಯುವ ನೀತಿ ಕಡ್ಡಾಯವಾಗಿ ಕಾರ್ಯಗತಗೊಳ್ಳಬೇಕು.

"ಮನುಷ್ಯನಲ್ಲಿರುವ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಸರಿಯಲ್ಲ,, ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ" ಎನ್ನುತ್ತಾರೆ ಸ್ವಾಮೀ ವಿವೇಕಾನಂದರು. ಸರ್ಕಾರವನ್ನು ಕಾಯೋದಲ್ಲ, ನಾವು ಎಚ್ಚೆತ್ತುಕೊಳ್ಳಬೇಕು. ಯುವ ಶಕ್ತಿಯೇ ರಾಷ್ಟ್ರಶಕ್ತಿ ಇದು ನಿಜ. ಸಾಧನೆಗೆ ಬೇಕಾದ ಛಲ, ಆತ್ಮವಿಶ್ವಾಸ, ಎದೆಗಾರಿಕೆ ನಮ್ಮಲ್ಲಿದೆ. ಶಕ್ತಿಯೆಲ್ಲವೂ ನಮ್ಮೊಳಗಿದೆ, ಮಾನವೀಯ ಮೌಲ್ಯಗಳ ಪರಿಶೋಧನೆ, ಜನಮಾನಸದಲ್ಲಿ ಸತ್ ಚಿಂತನೆಗಳನ್ನು ತುಂಬುವ ಕಾರ್ಯ ನಮ್ಮಿಂದಾಗಬೇಕಿದೆ.

ಬಿಸಿ ರಕ್ತ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ..
ಕಟ್ಟುವೆವು ನಾವು ಹೊಸ
ನಾಡೊಂದನ್ನು ರಸದ ಬೀಡೊಂದನು
..
ಕವಿ ವಾಣಿ ನಮ್ಮ ಹೃದಯದಲ್ಲಿ ಯುವ ಶಕ್ತಿಯ ರಾಷ್ಟ್ರನಿರ್ಮಾಣದ ಕಹಳೆ ಮೊಳಗಿಸಲಿ. ಮೌಡ್ಯ, ಅಜ್ಞಾನದಿಂದ ಹೊರ ಬಂದು ದೇಶದ ಸಂಸ್ಕೃತಿ, ಸಂಪತ್ತು ಉಳಿಸಲು ಪಣ ತೊಡೋಣ.
ರಾಷ್ಟ್ರೀಯ ಯುವ ದಿನದ ಈ ಶುಭ ಸಂಧರ್ಭದಲ್ಲಿ ದೇಶದೇಳ್ಗೆಗೆ ಕನಿಷ್ಠ ಶ್ರಮವಾದರೂ ನಮ್ಮದಾಗಲಿ. ವಿವೇಕವಾಣಿ ಪ್ರತಿಯೊಬ್ಬರ ಬದುಕಿನಲ್ಲೂ ಸಾಮಾಜಿಕ ಕಳಕಳಿ ಉದ್ದೀಪಿಸಲಿ. ಸ್ವಾಮಿ ವಿವೇಕನಾಂದರು ಯುವ ದಿನಕ್ಕೆ ಮಾತ್ರ ಸೀಮಿತವಾಗದೆ, ವರ್ಷಪೂರ್ತಿ ಯುವ ಶಕ್ತಿಗೆ ಪ್ರೇರಣೆಯಾಗಲಿ. ಯುವ ದಿನದ ಶುಭಾಶಯಗಳು..