Thursday, July 29, 2010

ಆಷಾಢದ ಒಂದು ದಿನ..


ಅಂದು ಅಕ್ಕ ಊರಿಗೆ ಬರುವೆನೆಂದು ಖುಷಿಯಿಂದಲೇ ಪತ್ರ ಬರೆದಿದ್ದಳು. ಮದುವೆಯಾಗಿ ಆಗ ತಾನೇ ಮೂರು ತಿಂಗಳು. ಆಗಲೇ, ಅಕ್ಕಾ ಒಂದು ತಿಂಗಳು ಊರಿಗೆ ಬರುವವಳಿದ್ದಳು.

ಅಕ್ಕ ಊರಿಗೆ ಬರುತ್ತೇನೆಂದು ಹೇಳಿದ್ದೇ ತಡ ಅಪ್ಪ ಆ ಧಾರಾಕಾರ ಮಳೆಯ ನಡುವೆಯೂ ಕೃಷಿಯ ಲೆಕ್ಕಾಚಾರದಲ್ಲಿ ತೊಡಗಿದ್ದ. ಅಕ್ಕ ಅಂತೂ ಊರಿಗೆ ಬರುತ್ತಾಳಲ್ಲಾ, ಕೃಷಿ ಕೆಲಸಕ್ಕೂ ಒಂದು ಜನ ಹೆಚ್ಚು ಸಿಗುತ್ತೆ ಅನ್ನೋದು ಅಪ್ಪನ ಲೆಕ್ಕಾಚಾರವಾದರೆ, ಅಮ್ಮ ಮನೆಗೆ ಬರುವ ಮಗಳಿಗೆ ಏನು ಸ್ಪೆಷಲ್ ಮಾಡಲಿ ಅನ್ನುವ ಚಿಂತೆ. ಹೊಸದಾಗಿ ಮದುವೆಯಾದ ಮೊಮ್ಮಗಳು ತವರಿಗೆ ಬರುತ್ತಾಳೆಂದು ಅಜ್ಜಿಗಂತೂ ಸ್ವರ್ಗಕ್ಕೆ ಮೂರೇ ಗೇಣು. ನಮಗೆಲ್ಲಾ ಅಕ್ಕನ ಜೊತೆ ಮತ್ತೊಮ್ಮೆ ಒಡನಾಡುವ ಆಸೆ, ಅವಳ ಜೊತೆ ಬೈಸಿಕೊಳ್ಳುವ, ಸಂಭ್ರಮಿಸುವ, ಮಳೆಗಾಲದಲ್ಲಿ ಹಪ್ಪಳ-ಸಂಡಿಗೆ ಜೊತೆಗೆ ಮೆಲ್ಲುವ ಖುಷಿ, ಒಟ್ಟಿನಲ್ಲಿ ಅಕ್ಕನನ್ನು ಮತ್ತೆ ನೋಡುವ ತವಕ, ಅಕ್ಕನಿಗೆ ಅಮ್ಮನ ಮನೆಗೆ ಬರುವ ಅಗಾಧ ಸಂಭ್ರಮ...ಇದಕ್ಕೆ ಎಲ್ಲೆಯುಂಟೇ?
ದಶಕಗಳ ಹಿಂದಿನ ಕಥೆ, ಬದುಕಿನ ದಾರಿಯಲ್ಲಿ ಎಷ್ಟೋ ವರ್ಷಗಳು ಸರಿದುಹೋಗಿವೆ.
ಹೌದು, ಅದೇ ಆಷಾಢ ಮಾಸ.

ಆಷಾಢದಲ್ಲಿ...
ಇದೀಗ ಮತ್ತೆ ಬಂದಿದೆ ಆಷಾಢ ಮಾಸ.
ಅಜ್ಜಿ ಹೇಳುತ್ತಿದ್ದಳು; ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು, ಅತ್ತೆ-ಸೊಸೆ ಒಂದೇ ಬಾಗಿಲಲ್ಲಿ ಓಡಾಡಬಾರದು, ಆಷಾಢ ಮಾಸ ಬಂದ್ರೆ ಮನೆ ಖರೀದಿಸಬಾರದು, ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು....ಹೀಗೇ ಆಷಾಢ ಮಾಸ ಬಂದ್ರೆ ಬರೇ ಕೆಟ್ಟದು, ಅದು ಅಶುಭ ಎಂದು. ಇಂದಿಗೂ ‘ಅಜ್ಜಿ’ಯರು ಅದೇ ಕಥೆ ಬಿಚ್ಚುತಾರೆ.

ಹೌದು, ಆಷಾಢ ಮಾಸ ಎಂದರೆ ಸಂಗಾತಿಗಳಿಗೆ ವಿರಹಕಾಲ. ಆಷಾಢ ಮಾಸಕ್ಕೆ ಇನ್ನೇನು ಒಂದು ವಾರದ ಇದೆಯೆಂದಾದರೆ ಸಾಕು ಮಗಳನ್ನು ಮನೆಗೆ ಕರೆತರುವ ಸಂಭ್ರಮ, ಸಡಗರ ತವರು ಮನೆಯವರದ್ದು. ಅತ್ತೆ ಮನೆಯಲ್ಲಿ ಸೊಸೆಯನ್ನು ತವರಿಗೆ ಕಳುಹಿಸಿಕೊಟ್ಟು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ಧ ಸಾಂಪ್ರದಾಯಿಕ ಪದ್ಧತಿಗೆ ಜೀವ ತುಂಬುವ ಆತುರ. ಆಗ ತಾನೇ ಮದುವೆಯಾಗಿದ್ವಿ ಅಂತ ಮಗ ಸೊಸೆ ತವರಿಗೆ ತೆರಳುವುದು ಬೇಡ ಎಂದರೂ, ನಾವೆಲ್ಲ ಗಂಡನ ಬಿಟ್ಟು ಒಂದು ತಿಂಗಳು ಇದ್ದಿಲ್ವಾ? ಎನ್ನುವ ಅತ್ತೆ ಸೊಸೆನ ತವರಿಗೆ ಕಳುಹಿಸಲು ಅಣಿಯಾಗುತ್ತಾಳೆ. ಅದಕ್ಕೆ ನೂತನ ವಧು-ವರರಿಗೆ ಆಷಾಢ ಎಂದರೆ ವಿರಹಕಾಲ. ಅದನ್ನು ಸಹಿಸಿಕೊಳ್ಳಲೇಬೇಕು, ಒಂದು ತಿಂಗಳು ಮುದ್ದಿನ ಮಡದಿಯನ್ನು ತವರಿಗೆ ಕಳುಹಿಸಲೇಬೇಕು. ಅದು ನಮ್ಮ ಸಂಪ್ರದಾಯ, ಪದ್ಧತಿ. ಸುತ್ತ ಸುತ್ತಿಕೊಂಡ ಈ ಆಚರಣೆಗಳಿಂದ ಬಿಡಿಸಿಕೊಳ್ಳುವಂತಿಲ್ಲ. ಹೆಂಡತಿಯ ನೆನಪಾದರೆ ತಕ್ಷಣ ಫೋನ್ ಮಾಡ್ತೀನಿ ಅಂದ್ರೆ ಆಗೆಲ್ಲಾ ನಿಮಿಷ ನಿಮಿಷಕ್ಕೆ ಮಾತನಾಡಲು ಫೋನ್‌ಗಳಿಲ್ಲ. ಏನಿದ್ರೂ ಪತ್ರ ಬರೆಯುವುದು. ಪತಿಯ ಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವ ಸರದಿ ಪತ್ನಿಯದ್ದು.
ಅದಕ್ಕೆ ಹಾಗಿರಬೇಕು..
ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ... ಪ್ರಣಯಗೀತೆ ಬಾಳೆಲ್ಲ...
ಎಂಬ ಹಾಡು ಹುಟ್ಟಿಕೊಂಡಿದ್ದು. ಆಷಾಢದ ನಂತರ ಬರುವ ಶ್ರಾವಣ ಮಾಸ ಹಬ್ಬ-ಹಬ್ಬ ಹರಿದಿನಗಳನ್ನು ಹೊತ್ತು ತರುವ ಜೊತೆಗೆ ತವರಿಗೆ ಹೋದ ಮಡದಿ ಮರಳಿ ಮನೆ ಸೇರುತ್ತಾಳೆ.

ಕಾಲಾಯ ತಸ್ಮೈ ನಮಃ
ಆದರೆ, ಇಂದು ‘ಕಾಲಾಯ ತಸ್ಮೈ ನಮಃ’ ಎಂಬ ಮಾತು ನೆನಪಾಗುತ್ತಿದೆ. ವಿದೇಶದಲ್ಲಿ ಗಂಡನ ಜೊತೆ ಇರುವ ಮಗಳು ಆಷಾಢ ಎಂದರೇನು? ಎಂದು ಅಮ್ಮ ಜೊತೆ ಕೇಳಿದರೆ, ಇತ್ತ ಇಲ್ಲೇ ಹುಟ್ಟಿ ಬೆಳೆದ ಮಗ ಅಥವಾ ಮಗಳು ಆಷಾಢ ಎಂದರೆ ಮೂಢನಂಬಿಕೆ, ಅದೆಲ್ಲಾ ಸುಮ್ ಸುಮ್ಮನೆ ಎಂದು ಮೌನವಾಗುತ್ತಾರೆ. ಹೊರಗೆ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಪತಿ-ಪತ್ನಿಯರು ಇದನ್ನು ಒಪ್ಪಲು ಸಿದ್ಧರಿಲ್ಲ. ಗ್ರಾಮ್ಯ ಪ್ರದೇಶದಲ್ಲಿ ಬಿಟ್ಟರೆ ನಗರಗಳಲ್ಲಿ ಯಾರೂ ಕೂಡ ಈ ಪದ್ಧತಿಯನ್ನು ಆಚರಿಸುವುದು ಕಂಡುಬರುತ್ತಿಲ್ಲ.

ಆಷಾಢ ಅಶುಭವೇ?
ಅಂದ ಹಾಗೇ ಇಂಥ ಪದ್ಧತಿ ಏಕಿತ್ತು?ಅದೇಗೆ ಆಷಾಢ ಅಶುಭ? ಎಂಬಿತ್ಯಾದಿ ನೂರಾರು ಪ್ರಶ್ನೆಗಳಿಗೂ ಬಲ್ಲವರ ಬುದ್ಧಿವಂತಿಕೆಯ ಮಾತುಗಳು ಸಾಥ್ ನೀಡುತ್ತಿವೆ.
ಹಿಂದೆಲ್ಲಾ ಆಷಾಢ ಮಾಸ ಬಂತೆಂದರೆ ಬಿತ್ತನೆಯಿಂದ ಹಿಡಿದು ಕಳೆ ಕೀಳೋದ್ರವರೆಗೆ ರೈತನಿಗೆ ಕೈತುಂಬಾ ಕೆಲಸ. ಹದವಾಗಿರುವ ಭೂಮಿಯಲ್ಲಿ ಕೃಷಿ ಕೆಲಸ ಮಾಡಲು ಆಷಾಢ ಒಳ್ಳೆಯ ಸಮಯ. ಹಾಗಾಗಿ ಹೊಸದಾಗಿ ಮದುವೆಯಾದ ವಧು-ವರರು ತಮ್ಮ ಜವಾಬ್ದಾರಿ ಮರೆಯಬಾರದು ಎಂಬ ಸೂಚನೆಯ ಮೇರೆಗೆ ಗಂಡ-ಹೆಂಡತಿ ಜೊತೆಗಿರಬಾರದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಆಷಾಢದಲ್ಲಿ ದಂಪತಿಗಳ ಮಿಲನವಾದರೆ ಚೈತ್ರದಲ್ಲಿ ಮಗು ಹುಟ್ಟುತ್ತದೆ. ಚೈತ್ರದ ಬಿರುಬಿಸಿಲು ಮಗುವಿನ ಅಥವಾ ಬಾಣಂತಿಯ ಆರೈಕೆಗೆ ಸೂಕ್ತ ಸಮಯವಲ್ಲ ಎನ್ನುವ ಕಾರಣವೂ ಇದೆ.

ಒಟ್ಟಿನಲ್ಲಿ ಆಷಾಢ ಎಂದರೆ ಭಯ ಮೂಡಿಸಿ, ವಿರಹ-ವೇದನೆಯ ಮೂಲಕ ಗಂಡ-ಹೆಂಡಿರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಜಾಣತನ ನಮ್ಮ ಹಿರಿಯರದ್ದೋ ಗೊತ್ತಿಲ್ಲ. ಆದರೆ, ಇಂದು ಆಷಾಢ, ಆಚರಣೆ ಎಲ್ಲವೂ ಕಾಲದ ತೆಕ್ಕೆಯಲ್ಲಿ ಮಗುಮ್ಮನೆ ಮಲಗಿವೆ.

ಈ ಲೇಖನ ಹೊಸದಿಗಂತ "ಧರಿತ್ರಿ' ಮಹಿಳಾ ಪುಟದಲ್ಲಿ ಪ್ರಕಟವಾಗಿದೆ:
ನೀವೂ ನೋಡಬಹುದು...

http://hosadigantha.in/epaper.php?date=07-22-2010&name=07-22-2010-೧೩