Thursday, March 27, 2008

ಹಾಕಿ ಸೋತಾಗ ಯಾರಿಗಾದ್ರೂ ಹಾರ್ಟ್ ಅಟ್ಯಾಕ್ ಆಯ್ತಾ?

ಮೊನ್ನೆ ಮೊನ್ನೆ ನಮ್ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ ಬ್ರಿಟನ್ ತಂಡದೆದುರು ಸೋತು ಸುಣ್ಣವಾಗಿದೆ! ಆ ಸೋತು ಮಾಜಿ ಆಟಗಾರರು, ನಮ್ ದೇಶದ ಚಾನೆಲ್ಲುಗಳು, ಪತ್ರಿಕೆಗಳು ಒಂದಿಷ್ಟು ಬೈದು, ರೇಗಾಡಿ, ಕಣ್ಣೀರು ಹಾಕಿದ ಮೇಲೆ ನಾನು ನನ್ನ ಬ್ಲಾಗಲ್ಲಿ ಬರೆಯುತ್ತಿದ್ದೇನೆ. ಹೌದು! ಎಲ್ಲಾ ಪತ್ರಿಕೆಗಳು ಬರೆದಿದ್ದನ್ನು, ಚಾನೆಲ್ಲುಗಳಲ್ಲಿ ಬಂದಿದ್ದನ್ನು, ಮಾಜಿ ಆಟಗಾರರು ಅತ್ತು ಗೋಳಾಡಿದ್ದನ್ನು, ಸಿಟ್ಟಲ್ಲಿ ಕೋಚ್ ಗೆ ಉಪ್ಪು ಖಾರ ಬೆರೆಸಿ ಬೈದಿದನ್ನು ನೋಡಿದ ಮೇಲೆ ನನ್ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆಂದರೆ ಇದು ನಕಲು ಅಂತ ಭಾವಿಸಿದರೆ ಅದು ದೊಡ್ಡ ಅಪರಾಧವಾದೀತು ಅಂತ ನನ್ ಭಾವನೆ.

ಹೌದು! ಹಾಕಿ ಸೋತಿತ್ತು. ತಂಡದಲ್ಲಿಯೋ ಅಥವಾ ಕೋಚ್ ನಲ್ಲೋ ಯಾರಲ್ಲೋ ಏನೋ ಸ್ವಲ್ಪ ದೌರ್ಬಲ್ಯ. ಇದು ಸಹಜ. ಕೂಡ. ಎಲ್ಲಾ ಕಾಲದಲ್ಲಿಯೂ ನಾವು ಗೆಲ್ಲೇಬೇಕಂತಿಲ್ಲ, ಸೋಲೇ ಗೆಲುವಿನ ಸೋಪಾನ. ನಮ್ಮ ರಾಷ್ಟ್ರೀಯ ಕ್ರೀಡೆ ಒಲಿಂಪಿಕ್ ನಲ್ಲಿ ಭಾಗವಹಿಸಲು ಅರ್ಹತೆ ಕಳೆದುಕೊಂಡಿತ್ತು, ಅದು ಭಾರತಕ್ಕೆ ಅವಮಾನ ..ಅಂತ ಕೆಲವರು ಹೇಳಿದ್ರು. ಒಪ್ಪಿಕೊಳ್ಳೋಣ. ಆದ್ರೆ ಯಾರು ಈ ಬಗ್ಗೆ ಭಾರೀ ಪ್ರತಿಭಟನೆ ಮಾಡಿದ್ರು? ಸೋತ ಆಟಗಾರನ ಮನೆಯೆದುರು ಯಾರಾದ್ರೂ ಅವನ ಪ್ರತಿಕೃತಿ ಸುಟ್ರಾ? ಸೋತ ಆಟಗಾರನ ಮನೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ರಾ? ಸೋತ್ರೂ ಮುಂದಿನ ಸಲ ಗೆದ್ದು ಬನ್ನಿ ಅಂತ ಯಾರಾದ್ರೂ ಮುಂದೆ ಬಂದು ಹಾರೈಸಿದ್ರಾ? ನಾವ್ಯಾರಾದ್ರೂ ಈ ಬಗ್ಗೆ ಚಿಂತೆ ಮಾಡಿದ್ದೀವಾ? ಹಾಕಿ ಸೋತಿತು ಅಂತ ಯಾರಿಗಾದ್ರೂ ಹಾರ್ಟ್ ಅಟ್ಯಾಕ್ ಆಯಿತಾ? ನನ್ನ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ "ಇಲ್ಲ"!

ಕ್ರಿಕೆಟ್ ಸೋಲ್ತಾ ಇದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯುವ ತನಕವೂ ನಮ್ಮ ಅಭಿಮಾನ ಪ್ರೀತಿ ಬಂದಿರುತ್ತೆ. ಶರದ್ ಪವಾರ್ ಕೃಷಿಯನ್ನು ಬದಿಗಿಟ್ಟು, ಬ್ಯಾಟ್ ಹಿಡಿದು ಬೊಂಬಾಟ್ ಬಹುಮಾನ ಘೋಷಿಸಿಬಿಡ್ತಾರೆ. ಇದೆಲ್ಲ ಕ್ರಿಕೆಟ್ ನಲ್ಲಿ ಮಾತ್ರ ಹೀಗಾಗಲೂ ಸಾಧ್ಯ. ನಮ್ ಹಾಕೀನ ಯಾರು ಕೇಳ್ತಾರೆ? ಸೋತ ಆಟಗಾರರ ಬೆನ್ನು ಯಾರು ತಟ್ತಾರೆ.? ಅಂತೂ ಈ ಸೋಲಿನಿಂದ ಕೋಚ್ ರಾಜೀನಾಮೆ ನೀಡಬೇಕಾಯಿತು. ಕ್ರಿಕೆಟ್ ಅಂದ್ರೆ ಜನ ಹುಚ್ಚೆದ್ದು ಕುಣಿತಾರೆ, ಹಾಗೆಂದು ಕುಣಿಬಾರ್ದು ಅನ್ನಲ್ಲ. ನಮ್ಮ ಸಮಸ್ತ ದೇಶ ಕ್ರಿಕೆಟ್ ಬಿಟ್ರೆ ಇನ್ಯಾವ ಕ್ರೀಡೆಯನ್ನೂ ಪ್ರೋತ್ಸಾಹಿಸಲ್ಲ ಅನ್ನೋದಕ್ಕೆ ನಿದರ್ಶನವಷ್ಠೇ.

ನಮ್ಮ ದೇಶದಲ್ಲಿ ಕ್ರಿಕೆಟ್ ಬಿಟ್ರೆ ಇನ್ಯಾವ ಕ್ರೀಡೆಯೂ ಶೋಭಿಸುವುದಿಲ್ಲ, ಇದಕ್ಕೆ ಕಾರಣ ಪ್ರೋತ್ಸಾಹದ ಕೊರತೆ. ಜನ, ಸರ್ಕಾರ ಇತರೆ ಕ್ರೀಡೆಗಳನ್ನು ಪ್ರೋತ್ಸಾಹಿಸಲಿ. ಹಾಕಿಗೆ ಸ್ವಲ್ಪ ಜೀವ ಬಂದಿದ್ದು 'ಚಕ್ ದೇ ಇಂಡಿಯಾ' ತೆರೆ ಮೇಲೆ ಕಂಡ ಮೇಲೆ ಅನ್ತಾರೆ. ಆದರೆ ಅದ್ರಲ್ಲಿ ಹಾಕಿಗಿಂತ ಶಾರುಖ್ ಖಾನ್ ಗೆ ಪ್ರಚಾರದ ಲಾಭ ಸಿಕ್ಕಿದೆ ಅನ್ನೋದು ಎಲ್ರೂ ಅರಿಯಬೇಕಾದ ಸತ್ಯ. 'ಚಕ್ ದೇ ಇಂಡಿಯಾ' ನಿಜವಾಗಿಯೂ ಪ್ರಸ್ತುತ ದೇಶದಲ್ಲಿ ಹಾಕಿಯ ಪರಿಸ್ಥಿತಿಯನ್ನು ವಿವರಿಸಿದೆ. ಇಂದು ಕ್ರಿಕೆಟ್ ನಂತೆಯೇ ಎಲ್ಲಾ ಕ್ರೀಡೆಗಳಿಗೂ ಪ್ರೋತ್ಸಾಹ ಸಿಕ್ಕಿದರೆ ಖಂಡಿತ ಭಾರತ ಕ್ರೀಡಾರಂಗದಲ್ಲಿ ಸಾಧನೆಯ ಶೀಖರವೇರಲು ಸಾಧ್ಯ. ಇದಕ್ಕಿಂತ ಹಾಕಿ ಅನ್ನೋದು ನಮ್ಮ ರಾಷ್ಟ್ರೀಯ ಕ್ರೀಡೆ ಅನ್ನೋದು ನೆನಪಲ್ಲಿರಲಿ.

Wednesday, March 26, 2008

ಬ್ಯುಸಿ ಬ್ಯುಸಿಯಾದ ನಿತ್ಯ ಬದುಕು

ತುಂಬಾ ದಿನಗಳಾಯ್ತು. ದಿನ ಬರೀಬೇಕು ಅಂತ ಬ್ಲಾಗ್ ಶುರುಮಾಡಿದ್ದೆ. ನನ್ನ ಭಾವನೆಗಳು, ಕನಸುಗಳು, ಮನದ ಬರೆವಣಿಗೆಯ ತುಡಿತಕ್ಕೆ ಬ್ಲಾಗ್ ವೇದಿಕೆಯಾಗಬೇಕೆಂದು ಬರೆದೆ. ಆದ್ರೆ ಈಗ ದಿನವಿರಲಿ, ವಾರ ಕಳೆದು ತಿಂಗಳೂ ಹತ್ತಿರ ಬಂದ್ರೂ ಬರೆಯಕ್ಕಾಗಲ್ಲ. ಏನೇನೋ ಕೆಲಸ, ಮನಸ್ಸು ಗೊಂದಲದ ಬೀಡು..ಸಮಯವಿಲ್ಲ ಅನಿಸುತ್ತೆ.

ಇವತ್ತು ಬೆಳಿಗೆದ್ದಾಗ ಅಮ್ಮನ ಫೋನು. ಮುದ್ದಿನ ಮಗಳು ಜಾಸ್ತಿ ನಿದ್ದೆಮಾಡಬಾರದೇನೆಂದೋ ಪೋನು ಮಾಡಿದ್ದು ಸರಿಯಾಗಿ ಆರು ಗಂಟೆ. ಆಗ ನಾನಿನ್ನೂ ಮುಂಜಾವಿನ ಅರೆನಿದ್ದೆಯಲ್ಲಿದ್ದೆ. ಅದೇನೋ ಬೆಂಗಳೂರಿನಲ್ಲಿ ಮಳೆ..ಅಂತಾರೆ ಅಕಾಲಿಕ ಮಳೆ. ಸದ್ದುಗದ್ದಲ್ಲ ವಿಲ್ಲದೆ ಒಮ್ಮಗೆ ಸುರಿಯುವ ಮುಂಗಾರು ಮಳೇ. ನಿನ್ನೆ ರಾತ್ರಿ ಆಫೀಸಿನಿಂದ ಹೋಗುವಾಗಲೂ ತಡವಾಗಿದ್ದರಿಂದ, ಟ್ರಾಫಿಕ್ ನಡುವೆ ಮನೆಗೆ ತಲುಪುವಾಗ ಇನ್ನೂ ತಡವಾಗಿತ್ತು. ಮಳೆಯಲ್ಲಿ ನೆನೆದು, ತಲೆಯೆಲ್ಲಾ ಭಾರವಾಗಿ ಮನೆ ತಲುಪಿದ್ದೆ. ಊಟ ಮಾಡಿದ್ದೇ ತಡ, ನಿದ್ದೇಯೇ ನಿದ್ದೆ. ಹಾಗೆ ಅಮ್ಮನ ಫೋನು ಬರುವಾಗ ಬೆಚ್ಚಗೆ ನಿದ್ದೆ ಮಾಡಿದ್ದೆ. ಅಣ್ಣ ಗದರಿಸಿ, ತಕೋ ಅಮ್ಮನ ಪೋನು ಅಂದಾಗ ಅತ್ತಲಿಂದ ಅಮ್ಮ "ಎಷ್ಟು ಹೊತ್ತಿಗೆ ನಾನು ಫೋನು ಮಾಡಿದ್ರೂ ಬ್ಯುಸಿ, ಬ್ಯುಸಿ ಅಂತೀಯಾ, ಏಳೇ ಬೇಗ. ಸಮಯ ತಾನಾಗಿ ಬರಲ್ಲ, ನಾವು ಮಾಡ್ಕೋಬೇಕು. ನೋಡು ನಾನು ಎದ್ದು ಎಲ್ಲಾ ಕೆಲ್ಸ ಮುಗಿಸಿ, ಸೊಪ್ಪಿಗೆ ಹೋಗ್ತಾ ಇದ್ದೀನಿ. ಅದೇನು ಮಾಡ್ತಿಯೋ? ಅದೇಂಗೆ ಆರೋಗ್ಯನೋ" ಅಂದ್ರು. ಅಮ್ಮ ಬೈದ್ರೂ, ಅದ್ರೊಳಗೆ ಸಿಹಿ ಇದ್ದೇ ಇರುತ್ತೆ ಅಲ್ವಾ? ಅವರಿಗೆ ರೇಗದೆ ಅಣ್ಣನ ಜೊತೆ ರೇಗಾಡಿದೆ.
ನಂಗನಿಸೋದು ನಾವು ಕೆಲ್ಸ ಇಲ್ಲಾಂದ್ರು ಎಷ್ಟು ಬ್ಯುಸಿಯಾಗಿರ್ತೀವಿ ಅಂತ. ನಾನು ಬೆಳಿಗ್ಗೆ ಏಳೂವರೆಗೆ ಆಫೀಸಿಗೆ ಮನೆಯಿಂದ ಹೊರಟರೆ, ಸಂಜೆ ಮನೆಗೆ ತಲುಪುವಾಗ ಎಂಟು ಕಳೆದಿರುತ್ತೆ. ಆಮೇಲೆ ಸ್ನಾನ ಮಾಡಬೇಕು, ಆಡುಗೆ ಆಗಿಲ್ಲಾಂದ್ರೆ ಅಡುಗೆ ಆಗಬೇಕು, ಊಟ ಮಾಡಬೇಕು.. ಇಷ್ಟೆಲ್ಲ ಆಗುವಾಗ ಗಂಟೆ ಹತ್ತು ದಾಟಿರುತ್ತೆ. ಅದೇನೋ ಬೆಂಗಳೂರಂತನೋ ಸಮಯವನ್ನೇ ಹೊದ್ದು ಮಲಗಿದ್ರೂ ಇಲ್ಲಿ ಸಮಯವಿರಲ್ಲ ಅಂತಾನೇ ಅನಿಸುತ್ತೆ. ಅದೇನಪ್ಪಾ ಅದೊಂತರಾ ಯಂತ್ರವಾಗಿಬಿಡ್ತೀವಿ. ಕೆಲ್ಸ..ಕೆಲ್ಸ..ಕೆಲ್ಸ ..ನಿದ್ದೆಗೂ ಟೈಮಿಲ್ಲ. ಇದು ಬೆಂಗಳೂರು ಲೈಫ್ ಅಲ್ವಾ?

ನಮ್ಮಮ್ಮ ಅದೆಷ್ಟೋ ಚೆನ್ನಾಗಿ ಬೆಳೆಸ್ತಾರೆ..ನಮ್ ಬೆಟ್ಟದಷ್ಟು ಕನಸುಗಳನ್ನು ಕಾಣ್ತಾರೆ..ಆದ್ರೆ ಅವರು ಪ್ರೀತಿಯಿಂದ ಫೋನು ಮಾಡುವಾಗ ಅಮ್ಮ ಬ್ಯುಸಿ ಅಂದು ಪೋನು ಕಟ್ ಮಾಡಿದ್ನಲ್ಲಾ ಅಂತ ತುಂಬಾ ಸಲ ನೊಂದುಕೊಂಡೆ. ಇದು ನಾನು ಮಾತ್ರವಲ್ಲ, ಎಷ್ಟೋ ಮಕ್ಕಳು ಹಿಂಗೆ ಮಾಡ್ತಾರೆ. ಆದ್ರೆ ಅಮ್ಮಂಗೆ ಆ ಪ್ರೀತಿ ಹೆಚ್ಚಾಗುತ್ತೆ ಹೊರತು, ಕಡಿಮೆಯಾಗಲ್ಲ. ಅಮ್ಮ ಏನಾದ್ರೂ ಕೇಳಿದ್ರೆ 'ನಿಂಗದು ಅರ್ಥವಾಗಲ್ಲ, ಸುಮ್ಮಿರು' ಅಂತೀವಿ. ಆದ್ರೆ ಬದುಕಿನ ಅರ್ಥವನ್ನು ತಿಳಿಸಿಕೊಟ್ಟ, ಬದುಕನ್ನೇ ಧಾರೆಯೆರೆದ ಅಮ್ಮನಿಗೆ ನಾವು ಹೇಳಿದ್ದು, ಮಾಡಿದ್ದು ಖಂಡಿತ ಅರ್ಥವಾಗುತ್ತೆ ಅಲ್ವಾ? ನಾನು ತುಂಬಾ ಸಲ ಅಮ್ಮನ ಜೊತೆ ರೇಗಿ, ಆಮೇಲೆ ಪಶ್ಚಾತ್ತಾಪ ಪಟ್ಟಿದ್ದೀನಿ. ದಿನಸರಿದಂತೆ ಬದುಕಿನ ಪಯಣದಲ್ಲಿ ನಮಗರಿವಿಲ್ಲದಂತೆ ನಾವೆಷ್ಟು ಬ್ಯುಸಿಯಾಗಿಬಿಡ್ತೀವಿ ಅಲ್ಲಾ?

Thursday, March 20, 2008

ಎಲ್ಲವೂ ಜನ್ರ ಉದ್ಧಾರಕ್ಕಾಗಿ!

ಅದೇ ..ಎಲ್ಲವೂ ಮಾಡೋದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ..ಅನ್ನೋದಕ್ಕಿಂತಲೂ ಎಲ್ಲರೂ ಮಾಡೋದು ಜನ್ರ ಉದ್ದಾರಕ್ಕಾಗಿ! ಅಂದ್ರೆ ಇನ್ನೂ ಚೆನ್ನಾಗಿರುತ್ತೆ ಅಂತ ಅನಿಸುತ್ತೆ. ಈ ಪಕ್ಷಗಳು, ರಾಜಕಾರಣಿಗಳು ಎಲ್ರೂ ಮಾಡೋದು ಜನ್ರ ಉದ್ಧಾರಕ್ಕಾಗಿ! ಅದೂ ಕೇವಲ ಚುನಾವಣೆ ಬಂದಾಗ ಮಾತ್ರ. ಕಳೆದ ಶನಿವಾರ 15ನೇ ತಾರೀಕು ಬಿ.ಜೆ.ಪಿಯ ಭಾರೀ ದೊಡ್ಡ ಹೋರಾಟ ಇತ್ತು. ಯಾಕಂದ್ರೆ ರಾಜ್ಯಪಾಲರು ಸಂಧ್ಯಾ ಸುರಕ್ಷಾ ಯೋಜನೆಯನ್ನು ವಿಳಂಬ ಮಾಡಿದ್ರು ಅಂತೇಳಿ ..ಅವ್ರ ಹೋರಾಟ ಅಷ್ಟೇ.

.ಎಷ್ಟಾದ್ರೂ ಸರ್ಕಾರದ ಯೋಜನೆಗಳೆಲ್ಲ ಜನರಿಗೆ ಉಪಯೋಗವಾಗುವಂತವುಗಳು...ಅಷ್ಟೇ ಅಲ್ಲ ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಬಂದ್ರೆ ಅದ್ಕು ಉಪಯೋಗವಾಗುತ್ತೆ ಬಿಡಿ. ನಾನು ಅಂದು ಕೆಪಿಸಿಸಿ, ಬಿಜೆಪಿ ಮತ್ತು ಜೆಡಿಎಸ್ ಕಚೇರಿಗಳಿಗೆ ಹೊರಟಿದ್ದೆ. ಮಲ್ಲೇಶ್ವರದಲ್ಲಿರುವ ಬಜೆಪಿ ಕಚೇರಿಗೆ ಹೋದಾಗ ಮಲ್ಲೇಶ್ವರದ ಮುಖ್ಯರಸ್ತೆಯಿಂದಲೇ ಬಸ್ಸುಗಳು, ಕಾರುಗಳು, ವ್ಯಾನ್ ಗಳು ನಿಂತಿವೆ. ಅವ್ರ ಕಚೇರಿಗೆ ಹೋದಾಗ ಕಾರ್ಯಕರ್ತರೆಲ್ಲ ಪುಲ್ ಬ್ಯುಸಿ. ನನ್ ಕೆಲ್ಸ ಮುಗಿಸಿಕೊಂಡು ಕೆಪಿಸಿಸಿಗೆ ಬಂದು ಅಲ್ಲಿಂದ ಕೆಪಿಸಿಸಿಗೆ ಬರಬೇಕಾದ್ರೆ 4 ಗಂಟೆ ಬೇಕಾಯಿತು. ರಾಜಭವನ ರಸ್ತೆಯಲ್ಲಂತೂ ಗಂಟೆಗಟ್ಟಲೆ ನಡೆದೆ. ಎಲ್ಲಾ ಬಿಜೆಪಿ ಹೋರಾಟದ ಬಸ್ಸುಗಳು..ಟ್ರಾಫಿಕ್ ಜಾಮ್. ನಡೆದುಕೊಂಡೇ ವಿಧಾನಸೌಧ ಹತ್ರ ಬಂದೆ ಅಲ್ಲೂ ಜಾಮ್..ಕಬ್ಬನ್ ಪಾರ್ಕ್ ನಲ್ಲಿರುವ ತಂಪು ಮರಗಳ ನಡುವೆ ವಾಹನಗಳು, ಜನಜಂಗುಳಿ..ಅಲ್ಲೇ ತಿಂದು ಉಗಿಯುವ ಜನರು..ಅಬ್ಬಬ್ಬಾ ಇನ್ನೇನೋ ಎದ್ದುನಡೆಯಲಾಗದ ಅಜ್ಜ-ಅಜ್ಜಿಯರು, ಯಾಕೋ ಕೈಗೆ ಬ್ಯಾಂಡೆಜ್ ಹಾಕಿದವರು...ಮಕ್ಕಳು ಎಲ್ರೂ ಈ ಹೋರಾಟಗಳ ಪಾಲುದಾರರು. ಇಷ್ಟು ಬಂದ್ರೆ ಅವರಿಗೆ ಫ್ರೀ ಊಟ, ಬೇಕಾಂದ್ರೆ ಕಿರಿಕ್ಕು..ಆಮೇಲೆ 100ರೂಪಾಯಿಯಂತೆ! ಹಾಗಂತ ಅಲ್ಲೊಬ್ರು ಅಜ್ಜಿಯನ್ನು ಕೇಳಿದಾಗ ಹೇಳಿದ್ರು. ರಾಜ್ಯದ ಎಲ್ಲಾ ಮೂಲೆಗಳಿಂದಲೂ ಜನ ಬಂದಿದ್ರು. 100ಕ್ಕೂ ಹೆಚ್ಚು ಬಸ್ಸುಗಳು ಕಬ್ಬನ್ ಪಾರ್ಕ್ ತುಂಬಾ ನಿಂತಿದ್ದವು. ಅಲ್ಲೇಲ್ಲ ಗಲೀಜು, ಕಾಲಿಡಕ್ಕೂ ಜಾಗವಿಲ್ಲ. ಆ ಟ್ರಾಪಿಕ್ ನಲ್ಲಿ ಸಿಕ್ಕಹಾಕೊಂಡು ಕೇವಲ 2 ಗಂಟೆಯೊಳಗೆ ಮುಗಿಸಬೇಕಾದ ಕೆಲಸವನ್ನು ಮುಗಿಸಿ ನನ್ ಕಚೇರಿಗೆ ಬಂದಿದ್ದು ಸಂಜೆ ಸೂರ್ಯ ಮುಳುಗಿದ ನಂತರ ಅಂದ್ರೆ ಏಲು ಗಂಟೆಗೆ. ನಡೆದು ನಡೆದು ಕಾಲೆಲ್ಲ ಬಾತುಕೊಂಡಿತ್ತು..ಮನೆಗೆ ಬಂದು ಕಾಲಿಗೆ ಎಣ್ಣೆ ಸವರಿ ಬಿಸಿ ನೀರು ಹಾಕಿದ್ರೂ ಒಂದು ವಾರ ನೋವು ಹೋಗಿಲ್ಲ.


ನಮ್ ರಾಜಕಾರಣಿಗಳ ಹೋರಾಟ, ಜನಪರ ಕಾಳಜಿ ಎಲ್ಲಾ ಶುರುವಾಗೋದೇ ಚುನಾವಣೆ ಬಂದಾಗ. ಇನ್ನೆನೋ ಮೇ ನಲ್ಲಿ ಚುನಾವಣೆ ಗ್ಯಾರಂಟಿ ಅಂತ ಅನಿಸುತ್ತೆ. ಹೋರಾಟಗಳು, ರ್ಯಾಲಿಗಳು, ಸಮಾವೇಶಗಳು ಎಲ್ಲವೂ ಶುರುವಾಗಿವೆ. ರೈತ, ಜನಪರ ಸರ್ಕಾರದ ಕನಸಲ್ಲಿರುವ ಜನರಿಗೆ ಬೆಣ್ಣೆ ಸವರುವ ಕೆಲಸ ಆರಂಭವಾಗಿದೆ. ಕೇಂದ್ರದ ಕುರ್ಚಿಯಲ್ಲಿ ತಣ್ಣಗೆ ಕುಳಿತವರೆಲ್ಲ ಕರ್ನಾಟಕಕ್ಕೆ ಬಂದಿಳಿಯಲಿದ್ದಾರೆ. ಬೇಕಾಬಿಟ್ಟಿ ಭರವಸೆಗಳ ಸುರಿಮಳೆಗೈಲಿದ್ದಾರೆ.

Thursday, March 6, 2008

ನಿದ್ದೆಗೆಡಿಸಿದ 'ಶಿವರಾತ್ರಿ'

ಹೌದು. ನಿನ್ನೆ ಶಿವರಾತ್ರಿ. ಮನೇಲಿ ದೀಪ ಹಚ್ಚಿ ಪೂಜೆ ಮಾಡುವಷ್ಟು ಸಮಯ ನಂಗಿರಲಿಲ್ಲ. ಬೆಳಿಗ್ಗೆ ಏಳೂವರೆ ಆಫೀಸಿಗೆ ಬಂದವಳು ರಾತ್ರಿ 10 ಗಂಟೆಗೆ ಮನೆಗೆ ತಲುಪಿದ್ದೆ. ನನ್ ತಮ್ಮನಿಗೆ ರಜೆ ಆಗಿದ್ದರಿಂದ ದೇವರ ಪೊಟೋಗಳಿಗೆ ಹೂವು ಹಾಕಿ ಪೂಜೆ ಮಾಡಿ..ಮನೆಯೇ ಘಮ್ ಅಂತ ಪರಿಮಳ ಬರ್ತಾ ಇತ್ತು. ಮನೆ ಪಕ್ಕದ ದೇವಾಲಯವೊಂದರಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಕ್ಯೂ ನಿಂತು ಪ್ರಸಾದವೂ ತೆಗೆದುಕೊಂಡು ಬಂದಿದ್ದ. ಇಷ್ಟೆಲ್ಲಾ ಮಾಡಿ ಪಾಯಸನೂ ಮಾಡಿಟ್ಟಿದ್ದ ಮಹರಾಯ. ನಾನು ಮನೆಗೆ ಹೋಗಿದ್ದೆ ತಡ 'ಅಕ್ಕ ಇವತ್ತು ನೀನು ಪೂಜೆ ಮಾಡಬೇಕು. ಪಕ್ಕದ ಮನೆ ಆಂಟಿ ಭಾರೀ ಗ್ರ್ಯಾಂಡಾಗಿಯೇ ಪೂಜೆ ಮಾಜೆ ಮಾಡಿದ್ದಾರೆ. ನೀನೂ ಮಾಡ್ಬೇಕು' ಅಂದಾಗ ನನಗೆ ಸಿಟ್ಟು ನೆತ್ತಿಗೇರಿತ್ತು. ಮನೆಗೆ ತಲುಪುವಾಗಲೇ ಗಂಟೆ 10, ಇನ್ನು ಪೂಜೆ-ಪುರಸ್ಕಾರಗಳಿಗೆ ಸಮಯವೆಲ್ಲಿಂದ? ಅಂದು ಸ್ನಾನಕ್ಕೆ ಹೋಗಿ ಅವನ ಸಮಾಧಾನಕ್ಕೆ ದೀಪ ಹಚ್ಚಿ ಕೈಮುಗಿದೆ. ಎಲ್ಲಾ ಮುಗೀತು. ಊಟ ಮಾಡಿಯೂ ಆಯಿತು.

ಅಷ್ಟೊತ್ತಿಗೆ ಪಕ್ಕದ್ಮನೆ ಆಂಟಿ ಮಗ ಬಂದು, ನಾನು ಜಾಗರಣೆ ಮಾಡ್ತೀವಿ ಆಂಟಿ..ನೀವೂ ಬನ್ನಿ ಅನ್ಬೇಕೆ?ಅವನ ಮೇಲೆಯೇ ರೇಗಿಬಿಟ್ಟೆ. ಯಾಕಂದ್ರೆ ಸಂಜೆ ಆಫಿಸಿನಿಂದ ಹೊರಟಾಗ ಗಂಟೆ 8 ಆಗಿದ್ದರೂ, ಟ್ರಾಫಿಕ್ ಜಾಮ್ ಮುಗಿಸಿ ಹೋಗಕೆ 2 ಗಂಟೆ ಬೇಕಾಯಿತು. ಟ್ರಾಫಿಕ್ನಲ್ಲಿ ಸಿಕ್ಕಹಾಕೊಂಡ್ರೆ ..ಬಸ್ಸಿಂದಿಳಿದು ಅಟೋ ಹಿಡಿದು ಒಳದಾರಿ ಮೂಲಕ ಮನೆಗೆ ಹೋಗುತ್ತೇನೆ. ಬಸ್ಸಲ್ಲಿ ನಿಂತುಕೊಂಡು ಹೋಗುವಷ್ಟು ಸಹನೆ ನಂಗಿಲ್ಲ. ಮೊನ್ನೆ ಅಟೋನು ಸಿಗದೆ ಪರದಾಡಿದ್ದೆ.

ನಾವು ಊಟ ಮಾಡಿ ಮಲಗಿದೆವು. ನಮ್ ಪಕ್ಕದಮನೆವರೆಲ್ಲ ಜಾಗರಣೆಗೆ ಸಿದ್ದವಾಗುತ್ತಿದ್ದರು. ತಮಾಷೆಯೆಂದರೆ ಅವರ ಜಾಗರಣೆ ಜೊತೆಗೆ ನಮಗೂ ನಿದ್ದೆ ಇಲ್ಲದಂತೆ ಮಾಡಿದ್ದರು. ರಾತ್ರಿ 10 ಗಂಟೆಗೆ ಜಾಗರಣೆಗೆಂದು ಹೊರಗಡೆ ಕೂತು, ಪಟ್ಟಾಂಗ ಆಡೋಕೆ ಶುರು ಮಾಡಿದ ನಾಲ್ವರು ಆಂಟಿಯರು ಮತ್ತು ಐದಾರು ಹುಡುಗ್ರು ಬೆಳಿಗ್ಗೆ ತನಕವೂ ಶಿವ ಧ್ಯಾನ ಬಿಟ್ಟು ಪಕ್ಕದೂರಿನ ಸುದ್ದಿ ಮಾತಾಡುತ್ತಿದ್ದರು. ಹುಡುಗ್ರರು ಜೋರು ಬೊಬ್ಬೆ ಹಾಕಿ ಮಾತಾಡುತ್ತಿದ್ದರೆ, ಈ ಆಂಟಿಯವರು ಗಂಡನ-ಮಕ್ಕಳ, ಕಷ್ಟ, ಹಪ್ಪಳ, ಸಂಡಿಗೆ ಕಾಯಿಸೋದನ್ನು ಮಾತಾಡೋದ್ರು ಬಿಟ್ರೆ ಬೇರೆನೂ ಮಾತಾಡುತ್ತಿಲ್ಲ. ಮಾತಾಡುವುದು ಮಾತ್ರವಲ್ಲ ವಿವಿಧ ರೀತಿಯ ಮಿಮಿಕ್ರಿ, ಹಾಡು, ಡಬ್ಬ ಬಡಿಯೋದು ಎಲ್ಲವನ್ನೂ ಮಾಡುತ್ತಿದ್ದರು. ಅವರಿಗೆ ಬೈಯಾಕಾಗುತ್ತಾ? ಏನ್ ಮಾಡೋದು..ಮನಸಲ್ಲಿ ಬೈಯುತ್ತಾ ತಿರುವ ಫ್ಯಾನಿನ ಸದ್ದು ಆಲಿಸುತ್ತಾ ಕಣ್ಬಿಟ್ಟು ಮಲಗಿದ್ದೆವು ನಾವು. ಅಂತೂ-ಇಂತು ಕೊನೆಗೆ ಬೆಳಗೂ ಆಯಿತು. ಐದು ಗಂಟೆಗೆ ಎದ್ದು ಮತ್ತೊಮ್ಮೆ ನಿದ್ದೆಗಣ್ಣಲ್ಲಿ ಸ್ನಾನ ಮಾಡಿದ್ದೆ. ನಿದ್ರೆ ಹೋಗುತ್ತಾ? ಆಫೀಸಿನಲ್ಲಿಯೂ ನಿದ್ರೆಗಣ್ಣಲ್ಲಿಯೇ ಕೆಲಸ ಮಾಡಬೇಕಾಯಿತು.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಶಿವರಾತ್ರಿಯ ಅನುಭವ ಪಡೆದಿದ್ದೇನೆ. ಇದನ್ನೆಲ್ಲಾ ಕಂಡಾಗ ನಮ್ಮನೆಯಲ್ಲಿ ಶಿವರಾತ್ರಿ ಆಚರಿಸುತ್ತಿದ್ದ ಆ ಸನ್ನಿವೇಶಗಳು ಕಣ್ನಮುಂದೆ ಸುಳಿದಾಡುತ್ತವೆ. ನಮ್ಮಜ್ಜ, ಅಜ್ಜಿ, ಚಿಕ್ಕಮ್ಮ, ಅಮ್ಮ, ದೊಡ್ಡಮ್ಮ ಮತ್ತು ಅವರ ಮಕ್ಕಳು ಸೇರಿ ನಾವು ಶಿವ ರಾತ್ರಿ ಆಚರಿಸುತ್ತಿದ್ದೇವು. ಇಡೀ ದಿನ ಉಪವಾಸ, ರಾತ್ರಿಯಿಡಿ ಭಜನೆ ಮಾಡುವುದು. ಅತ್ಯಂತ ಭಕ್ತಿಯಿಂದ ಹಾಡಿ ಶಿವನನ್ನು ಭಜಿಸುತ್ತಿದ್ದೇವು. ಆದರೆ ಬೆಂಗಳೂರಲ್ಲಿ ಭಜನೆ ಬದಲು ಸಿನಿಮಾ, ಹಾಡು ಮುಂತಾದವುಗಳೂ ನಡೆಯುತ್ತವೆ, ಬಹುಶಃ ದೇವಾಲಯಗಳಲ್ಲಿ ಬಿಟ್ರೆ ಮತ್ತೆ ಜಾಗರಣೆ ಮಾಡುವವರ ಮನೇಲಿ ಇದೇ ರೀತಿ ಸಿನಿಮಾರಾತ್ರಿ ಆಗಿರಬಹುದು. ಶಿವರಾತ್ರಿಯಂದು ಜಾಗರಣೆ ಅಂದ್ರೆ ಬರೇ ನಿದ್ದೆಗೆಟ್ಟು ಮಜಾ ಮಾಡೋದು ಅಂದ್ಕೊಂಡಿದ್ದಾರೆ ಜನ. ಕಾಲ ಬದಲಾಗಿದೆ. ಏನು ಮಾಡಕ್ಕೆ ತಾನೇ ಸಾಧ್ಯ?

Tuesday, March 4, 2008

ಡಿ.ವಿ.ಜಿ. ಅವರ ಹುಟ್ಟುಹಬ್ಬಕ್ಕೆ ನೀವೂ ಬನ್ನಿ..

ಮುಂಬರುವ ಮಾರ್ಚ್ 17ಕ್ಕೆ ಆಧುನಿಕ ಸರ್ವಜ್ಞ ಎಂದೇ ಕರೆಯಲ್ಪಡುವ ಕವಿ ಡಿ.ವಿ. ಗುಂಡಪ್ಪ ಅವರಿಗೆ 121 ವರ್ಷ ತುಂಬುತ್ತೆ. ಅವರು ನಮ್ಮ-ನಿಮ್ಮ ನಡುವೆ ಇಲ್ಲವಾದರೂ ಬದುಕಿನ ಮೌಲ್ಯಗಳನ್ನೇ ತೆರೆದಿಟ್ಟ 'ಮಂಕುತಿಮ್ಮನ ಕಗ್ಗ' ಎಂಬ ಶ್ರೇಷ್ಠ ಕೃತಿಗಳನ್ನು ನೀಡಿದ್ದಾರೆ. ಇಂದಿಗೂ ನಮ್ಮಲ್ಲಿ ಡಿ.ವಿ.ಜಿ. ಚಿರಾಯು. ನಮ್ಮೆಲ್ಲರ ಬದುಕಿಗೆ ಜೀವನಾದರ್ಶವೂ ಹೌದು. ನಾನು ಕಗ್ಗ ಓದಿದ್ದು 10ನೇ ತರಗತಿಯಲ್ಲಿ. ಆಗ ಒಂದೂ ಅರ್ಥವಾಗಿರಲಿಲ್ಲ. ಆಮೇಲೆ ಅದಕ್ಕೆ 'ಕಗ್ಗಕ್ಕೊಂದು ಕೈಪಿಡಿ' ಪುಸ್ತಕ ಬಂತು. ಅದನ್ನು ಓದಿದಾಗಲೇ ನನಗೆ ಕಗ್ಗ ಅಂದ್ರೆ ಏನು?ಅದ್ರಲ್ಲಿ ಏನಿದೆ ಅಂತ ಅರ್ಥವಾಗಿದ್ದು.
ಇಂದು ಕಗ್ಗದಂಥ ಕೃತಿಗಳು ಕಡಿಯಾಗುತ್ತಿವೆ, ಜನತೆಗೆ ಹಿಂದಿನ ಉತ್ತ,ಮ ಕೃತಿಗಳನ್ನು ಓದುವವರೂ, ಅದರಲ್ಲಿದ್ದ ಜೀವನಾದರ್ಶಗಳನ್ನು ತಿಳಿದು ಆ ಬಗ್ಗೆ ಜನರಲ್ಲಿ ಅರಿವು ಉಂಟುಮಾಡುವವವರು ತೀರಾ ಕಡಿಮೆ. ಇಂಥ ಸನ್ನಿವೇಶದಲ್ಲಿ ಬೆಂಗಳೂರಿನ ಸಮಾಜ ಸೇವಕರ ಸಮಿತಿ ಬೆಂಗಳೂರಿನಲ್ಲಿ 'ಡಿವಿ.ಜಿ' ಅವರ ಹುಟ್ಟುಹಬ್ಬ ಆಚರಿಸಿ, ಆ ಮೂಲಕ ಡಿ.ವಿ.ಜಿ. ಅವರ ವಿಶಾಲ ಜೀವನಾದರ್ಶವನ್ನು ಜನಮನದಲ್ಲಿ ಹರಡುವ ಉತ್ತ,ಮ ಕಾರ್ಯ ಹಮ್ಮಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಡಿ.ವಿ.ಜಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾ ಬಂದಿರುವ ಸಮಾಜ ಸೇವಕ ಸಮಿತಿ, ಡಿ.ವಿ.ಜಿ. ಅವರ ಸಾಹಿತ್ಯವನ್ನು ನಾಡಿನೆಲ್ಲೆಡೆ ತಲುಪಿಸುವ ಉದ್ದೇಶ ಹೊಂದಿದೆ. ಟೀ-ಶರ್ಟ್ ಗಳ ಮೇಲೆ ಕಗ್ಗದ ನುಡಿಗಳನ್ನು ಬರೆಸುವುದು ಮತ್ತು ಖ್ಯಾತ ಕವಿಗಳ ಅಥವಾ ಕಗ್ಗದ ನುಡಿಗಳನ್ನೇ ಹೊಂದಿರುವ ಶುಭಾಶಯ ಪತ್ರಗಳನ್ನು ಸಮಾಜ ಸೇವಕರ ಸಮಿತಿ ಹೊರತಂದಿದೆ. ಆಶ್ಚರ್ಯವೆಂದರೆ, ಈ ಸಮತಿಯಲ್ಲಿರುವವರೆಲ್ಲರೂ ಐಟಿ ಉದ್ಯೋಗಿಗಳು. ಇಂದು ಬೆಂಗಳೂರಿನಂಥ ಮಹಾನಗರದಲ್ಲಿ ಸಾಹಿತ್ಯ, ಮೌಲ್ಯ, ಸಂಸ್ಕೃತಿ ಎಲ್ಲವೂ ಮರೆಯಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಸಮಾಜ ಸೇವಕರ ಸಮಿತಿಯ ಧ್ಯೇಯವನ್ನು ಮೆಚ್ಚಲೇಬೇಕು. ಇಷ್ಟು ಮಾತ್ರವಲ್ಲ ಬಳ್ಲಾರಿಯಲ್ಲಿ ಎರಡು ಬಡಮಕ್ಕಳಿಗೆ ಶಾಲೆಗಳನ್ನು ತೆರೆದು ಉಚಿತ ವಿದ್ಯಾಭ್ಯಾಸ ನೀಡುತ್ತಾರೆ.

ಕಾರ್ಯಕ್ರಮ ನಡೆಸುವ ಸ್ಥಳ: ಗಾಯನ ಸಮಾಜ ಬೆಂಗಳೂರು
ಸಮಯ: ಸಂಜೆ 6 ಗಂಟೆ


Monday, March 3, 2008

ಕೆಂಡಸಂಪಿಗೆಯಲ್ಲಿ ಶರಧಿಯ ಪಯಣ

ನಾನಂದು ಬಹಳ ಖುಷಿಪಟ್ಟಿದ್ದೆ. ಅಂದು 02.02.2008 ಕೆಂಡಸಂಪಿಗೆಯಲ್ಲಿ ನನ್ 'ಶರಧಿ'ಯ ಪುಟ್ಟ ಪಯಣ. ನಾನು ಬ್ಲಾಗ್ ಆರಂಭಿಸಿ ಇನ್ನೂ ಮೂರೇ ಮೂರು ತಿಂಗಳು ಅಂದಿಗೆ. 2007ರ ಜನವರಿ 02ರಂದು 'ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ?' ಬರೆದಿದ್ದೆ. ಆಮೇಲೆ ಸಮಯ ಸಿಕ್ಕಾಗಲೆಲ್ಲಾ ಬರೆಯುತ್ತಿದ್ದೆ. ನನಗೆ ಕವನ, ಕಥೆ ಬರೆಯಕೆ ಬರಲ್ಲ. ಆದ್ರೂ ಅನುಭವವನ್ನು ನನಗನಿಸಿದ ಹಾಗೆ ಗೀಚೋದು ಗೊತ್ತು. ಅಲ್ಲಿ-ಇಲ್ಲಿ ನೋಡಿದ್ದು, ಯಾರೋ ಹೇಳಿದ್ದು ಎಲ್ಲವೂ ನಂಗೆ ಬ್ಲಾಗ್ ಗೆ ವಸ್ತುಗಳಾಗಿವೆ. ಏನೋ ಗೊತ್ತಿಲ್ಲ ಬ್ಲಾಗ್ ಬರೆದ್ರೆ ಏನೋ ಖುಷಿ, ಸಂತೃಪ್ತಿ ಮನಸ್ಸಿಗೆ. ಬೆಳಗ್ಗಿನಿಂದ ಸಂಜೆ ತನಕ ಕೀ- ಬೋರ್ಡಗಳನ್ನು ಕುಟ್ಟುತ್ತಾ ಇರುವ ನನಗೆ ಬ್ಲಾಗಲ್ಲಿ ಏನಾದ್ರೂ ಹಾಕಿದ್ರೆ ಸಾಕು..ಎಲ್ಲಾ ನೋವನ್ನು ಮರೀತೇನೆ, ತುಂಬಾ ಖುಷಿಪಡುತ್ತೇನೆ. ಕೆಂಡಸಂಪಿಗೆಗೆ ನಾನು ಆಭಾರಿ.

ಕೆಂಡಸಂಪಿಗೆಯಲ್ಲಿ ಬರೆದ ಸಾಲುಗಳು ಇಲ್ಲಿವೆ.
ಈ ಬಾರಿಯ ಬ್ಲಾಗ್ ಬೊಗಸೆಯಲ್ಲಿ ಚಿತ್ರಾ ಕರ್ಕೇರಾ ಅವರ ಶರಧಿಯ ಸರದಿ. ನಿತ್ಯ ಜೀವನದ ಸಹಜ, ಸರಳ ಸಂಗತಿಗಳನ್ನು ನವಿರಾಗಿ ಹೆಣೆಯುವ ಚಿತ್ರ ಪುತ್ತೂರಿನಿಂದ ಬಂದಿರುವ ಯುವ ಪ್ರತಿಭೆ. ಅವರು ವಾಸ್ತವಕ್ಕೆ ಹತ್ತಿರವಾಗಿ ಬರೆಯುತ್ತಾರೆ. ಸುತ್ತಮುತ್ತ ನಡೆಯುವ ಸಣ್ಣಪುಟ್ಟ ಘಟನೆಗಳನ್ನು ಇದ್ದದ್ದು ಇದ್ದ ಹಾಗೆ ಬ್ಲಾಗಿಸುತ್ತಾರೆ. ಅಲ್ಲಿ ನೋಡಿ, ಇಲ್ಲಿ ಬಂದು ಕತೆ ಹೇಳಿದ ಹಾಗೆ ಇರುವ ಈ ಪ್ರಾಮಾಣಿಕ ಬರಹಗಳಿಗೆ ಚಿಂತನೆಯ ನವಿರಾದ ಸ್ಪರ್ಶವಿದೆ.
ಬಸ್ಸಿನಲ್ಲಿ ಭೇಟಿಯಾದ ಮಣಿಪುರಿ ಹುಡುಗ, ರಾತ್ರಿ ಕಾಣುವ ಎಂ.ಜಿ ರೋಡು, ಪುಸ್ತಕ ಪ್ರೀತಿಸುವ ಫ್ರಾನ್ಸಿನ ಅಧ್ಯಕ್ಷ, ರಾಖಿ ಕಟ್ಟಿ ಗಿಪ್ಟ್ ಕೊಡಲು ಬರುವ ಅಣ್ಣ ಈ ಎಲ್ಲಾ ಕತೆಗಳ ಹಿಂದಿರುವ ಮಾನವೀಯ ಆಯಾಮಗಳು ಗಮನ ಸಳೆಯುತ್ತದೆ. ಪಕ್ಕಾ ವ್ಯವಹಾರಿಯಂತಿರುವ ಬೆಂದಕಾಳೂರು, ಅದರೊಳಗಿನ ಕೃತಕ ನಗು, ಕಂಡು ಕಾಣದಂತಿರುವ ನೋವು ನರಳಾಟ, ಜನರ ಅವಸರ, ಉತ್ಸಾಹ ತಲ್ಲಣ ಎಲ್ಲವೂ ಶರಧಿಯ ಒಳನೋಟಕ್ಕೆ ಸಿಕ್ಕಿವೆ.
ರಜೆಯ ಮಜ ಅನುಭವಿಸಿದ ಕತೆ ಈ ಬಾರಿಯ ಪೋಸ್ಟಿನಲ್ಲಿದೆ. ವೃತ್ತಿ ಬದುಕಿನ ಒತ್ತಡದ ನಡುವೆ ಕಳೆದು ಹೋಗುವ ಒಂದು ವಾರ, ಅದರ ನಡುವೆ ಕೈಗೆ ಸಿಕ್ಕೂ ಸಿಗದಂತಿರುವ ಒಂದು ಭಾನುವಾರ, ಅದನ್ನು ಬೆಂಗಳೂರಿಗರು ಅನುಭವಿಸುವ ಸಂಭ್ರಮದ ವರ್ಣನೆ. ಮುಂದಿನ ಭಾನುವಾರಕ್ಕಾಗಿ ಕಾಯುತ್ತಾ, ಜುಗಾರಿ ಕ್ರಾಸ್‌ನ ಟಿಕೇಟ್ ಹಿಡಿದು ಎಲ್ಲರನ್ನೂ ಸ್ವಾಗತಿಸುವ ಶರಧಿಗೆ ಆರಾಮವಾಗಿ ಹೋಗಿ ಬರಬಹದು.