Thursday, July 31, 2008

ಹುಟ್ಟುಹಬ್ಬದಂದು ನನ್ನ ಮೊದಲ ಲೇಖನ ಪ್ರಕಟಗೊಂಡಾಗ..

ಹೌದು! ಆಗಸ್ಟ್ 2..ನಾನು ಹುಟ್ಟಿದ ದಿನ. ನೆನಪಾಯಿತು..ಹಳೆಯ ಒಂದಿಷ್ಟು ನೆನಪುಗಳು. ನಾನಗ ಪ್ರಥಮ ಡಿಗ್ರಿ. ಉಜಿರೆಯ ಎಸ್.ಡಿ. ಎಂ. ಕಾಲೇಜು. ನನ್ನ ಕಾಂಬೀನೇಷನ್ ಕನ್ನಡ, ಪತ್ರಿಕೋದ್ಯಮ ಮತ್ತು ಸೈಕಾಲಜಿ. ಕನ್ನಡ ಮತ್ತು ಪತ್ರಿಕೋದ್ಯಮ ಎರಡು ವಿಷಯಗಳು ನನಗೆ ತುಂಬಾ ಇಷ್ಟ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಓದುತ್ತಿದ್ದರೂ, ಮೇಷ್ಟ್ರು ಪಾಠ ಮಾಡಿದ್ದು ತಲೆಗೆ ಹೋಗುತ್ತಿರಲಿಲ್ಲ. ಯಾಕಂದ್ರೆ ನನಗೆ ವಿಜ್ಞಾನ ವಿಷಯ ಇಷ್ಟನೇ ಇಲ್ಲ. ಯಾರದ್ದೋ ಒತ್ತಾಯಕ್ಕೆ ತೆಗೆದುಕೊಂಡೆ. ಆವಾಗ್ಲೆ ಏನಾದ್ರೂ ಗೀಚಿ ಫೈಲ್ ನೊಳಗೆ ಇಡುವ ಚಾಳಿ ನನಗೆ. ಡಿಗ್ರಿಗೆ ಸೇರಿದ್ದೇ ತಡ, ಅದನ್ನೆಲ್ಲ ಪತ್ರಿಕೆಗಳಿಗೆ ಕಳುಹಿಸಲಾರಂಭಿಸಿದ್ದೆ. ಅದರಲ್ಲೂ ಕನ್ನಡಪ್ರಭದ ಕಾಲೇಜು ರಂಗಕ್ಕೆ ಕಳುಹಿಸಿದಷ್ಟು ಲೇಖನಗಳನ್ನು ಇನ್ಯಾವ ಪತ್ರಿಕೆಗೂ ಕಳುಹಿಸಿಲ್ಲ ಅನಿಸುತ್ತೆ.

ಒಂದು ವರ್ಷ ಎಷ್ಟು ಲೇಖನಗಳು ಏನೆಲ್ಲ ತಿಪ್ಪಾರಲಾಗ ಹಾಕಿ ಬರೆದು ಕಳಿಸಿದ್ರೂ ಪ್ರಕಟವಾಗಿಲ್ಲ. ನನ್ನ ಕ್ಲಾಸಿನ ಎಲ್ಲರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ನಮ್ಮ ಜರ್ನಲಿಸಂ ಸರ್ ಡಯಾಸ್ ಎದುರು ನಿಂತು ಅವ್ರ ಹೆಸರು ಹೇಳುವಾಗ, ಕುಳಿತವರೆಲ್ಲ ಚಪ್ಪಾಳೆ ತಟ್ಟುವಾಗ ಎದುರು ಬೆಂಚಿನಲ್ಲಿ ಕುಳಿತ ನನಗೆ ಅಳು ಬರುತ್ತಿತ್ತು. ಆಯಿತು ಒಂದು ವರ್ಷ ಆಯಿತು..ಆದ್ರೂ ಕಾಲೇಜುರಂಗಕ್ಕೆ ಕಳಹುಹಿಸೋದು ನಿಲ್ಲಿಸಿಲ್ಲ..ಬಹುಶಃ ಅದೆಲ್ಲ ಡಸ್ಟ್ ಬಿನ್ ಗೆ ಹೋಗುತ್ತಿತ್ತು.

ದ್ವಿತೀಯ ಬಿ.ಎ. ಆಗಸ್ಟ್ 2..ನನ್ನ ಹುಟ್ಟುಹಬ್ಬ. ಆವಾಗೆಲ್ಲ ಹುಟ್ಟುಹಬ್ಬ ಅಂದ್ರೆ ಹೊಸ ಡ್ರೆಸ್ಸು, ಸ್ವೀಟ್ ಹಂಚೋದು. ಆದ್ರೆ ಈಗ ಆ ಗೀಳು ಇಲ್ಲ. ಅಂದು ಹೊಸ ಚೂಡಿದಾರ ಹಾಕಿದ ನಾನು, ತಲೆತುಂಬಾ ಮಲ್ಲಿಗೆ ಮುಡಿದುಕೊಂಡಿದ್ದೆ. ಜೊತೆಗೆ ಸ್ವೀಟ್...ಲೈಬ್ರೆರಿಗೆ ಹೋಗಿ ಕನ್ನಡಪ್ರಭ ನೋಡಿದಾಗ ನನ್ನ 'ಸ್ನೇಹಿತರು ನಾವಾಗೋಣ' ಲೇಖನ ಪ್ರಕಟವಾಗಿತ್ತು. ಆ ದಿನ ನಂಗೊಂದು ರೀತಿಯಲ್ಲಿ ಹಬ್ಬ..ಆ ದಿನ ನನ್ನ ಹುಟ್ಟುಹಬ್ಬವೂ ಹೌದು! ಖುಷಿಯೋ ಖುಷಿ. ಆಮೇಲೆ ಎರಡು ವರ್ಷದಲ್ಲಿ ಅದೆಷ್ಟೋ ಲೇಖನಗಳು ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾದುವು. ಈಗಲೂ ನನ್ನ ಹುಟ್ಟುಹಬ್ಬ ಬಂದಾಗಲೆಲ್ಲಾ ಆ ಹಬ್ಬದ ದಿನ ನೆನಪಾಗುವುದುಂಟು.

Wednesday, July 30, 2008

'ಬೆಳಕಿನ ಪಾದ'ದ ಖುಷಿ ಖುಷಿ ಸಾಲುಗಳು

ಅದೇ 'ಬಾನಾಡಿ' ಬ್ಲಾಗ್ ನಿಮಗೆಲ್ಲ ಪರಿಚಯ ಅನಿಸುತ್ತೆ. ಬಾನಾಡಿ ಹೊಸ ಕವನಸಂಕಲನವೊಂದನ್ನು ಹೊರತಂದಿದ್ದಾರೆ. ಅದು ಅವರ ಮೊದಲ ಕವನಸಂಕಲನ. ಹೆಸರು 'ಬೆಳಕಿನ ಪಾದ'! ಮೊದಲೇ ಹೇಳುತ್ತೇನೆ..ನನಗೆ ಯಾವುದೇ ಕವನಸಂಕಲನ, ಬರಹಗಳನ್ನು ವಿಶ್ಲೇಷಸಲು ಬರುವುದಿಲ್ಲ. ಕವನದ ಸಾಲುಗಳನ್ನು ಹೇಳಿ ಇತರರ ಜೊತೆ ಹೇಳಿ ಖುಷಿಪಡಿಸಬಲ್ಲೆ..ನನ್ನೊಳಗೆಯೇ ಆಸ್ವಾದಿಸಬಲ್ಲೆ. ಓದುತ್ತಿದ್ದಂತೆ ನನ್ನೊಳಗಿನ ಭಾವಯಾನದಲ್ಲಿ ಪುಟ್ಟದೊಂದು ಪಯಣ ನನ್ನದಾಗಿಸಬಲ್ಲೆ. ಹೌದು! ಹೆಸರೇ ಹೇಳುವಂತೆ ಈ ಕವನಸಂಕಲದಲ್ಲಿ ಬೆಳಕಿಗೇ ಪ್ರಾಧಾನ್ಯತೆ. ಇಲ್ಲಿರುವ ಪ್ರತಿ ಕವನಗಳು ನಿಮ್ಮೊಳಗಿನ ಭಾವನೆಗಳೊಂದಿಗೆ ಮಾತಾಡಬಲ್ಲವು. ಅಮ್ಮನ ಅಪ್ಪುಗೆಯ ಅನುಭೂತಿ ನೀಡಬಲ್ಲವು. ಬದುಕು-ಬವಣೆ, ನೋವು-ನರಳಾಟ ಕವಿಯ ಮನದಾಳದಲ್ಲಿದ್ದ ನೋವಿನ ಪರಿಯನ್ನು ಕವಿತೆಗಳು ಪರಿಚಯಿಸದಿರವು. ಜೀವನದಾರಿಯಲ್ಲಿ ಬಗ್ಗಿ ನಡೆಯದೆ, ಎದ್ದು ನಡೆಯಬೇಕೆನ್ನುವ ಕವನಗಳು ನಮ್ಮ-ನಿಮ್ಮಂಥವರಿಗೆ ಸ್ಫೂರ್ತಿ ತುಂಬದೆ ಇರದು.
ಎದ್ದು ಹೋಗಿ ಗೆದ್ದು ಬರಬೇಕು
ಎದ್ದು ಹೋಗದಿದ್ದರೆ
ಗೆದ್ದಲಾಗುತ್ತೇವೆ!
ಹೌದು! ಗೆದ್ದಲಾಗುವ ಮೊದಲು ಎದ್ದು ನಿಲ್ಲಬೇಕು. ಪ್ರೀತಿ-ಪ್ರೇಮ ಹುಡುಗ-ಕನ್ಯೆ ಎಂದು ವರ್ಣಾತೀತವಾಗಿ ಬರೆಯುವ ಅದೆಷ್ಟೋ ಕವಿಗಳ ನಡುವೆ ಬೆಳಕಿನ ಜಾಡು ಹಿಡಿದು ಹೊರಟ 'ಬೆಳಕಿನ ಪಾದ' ಆಪ್ತವೆನಿಸುತ್ತದೆ. ನಮ್ಮೊಳಗೆಯೇ ನಿಲ್ಲುತ್ತದೆ. 'ಬೆಳಕಿನ ಪಾದ'ದಲ್ಲಿ ಬೆಳ-ಬೆಳಗುವ ಕೆಲವು ಕವನಗಳ ತುಣುಕುಗಳು ಇಲ್ಲಿವೆ.

ಆ ದಿಗಂತದಾಚೆ ಕಾಣುವ
ಹೊಸಬೆಳಕಿನ ಓ ಒಡೆಯ
ಸದಾ ಗಂಜಳದಲ್ಲಿ ಅದ್ದಿರುವ
ನನ್ನ ಕೈಗಳಿಂದ ನಿನ್ನ ಪಾದವನ್ನು
ಮುಟ್ಟಲೊಮ್ಮೆ ಬಿಡು-(ಬೆಳಕಿನ ಪಾದ)

ಸುಡಬೇಡ ನಿಟ್ಟುಸಿರಿನಲಿ
ನಿನ್ನೊಡಲ ಬೆಂಕಿಯನು
ತೆರೆದಿಡು ಮುಂಜಾನೆಯ ಮಂಜಿಗೆ
ಬೆಂಕಿಯಾರಿ ಉಳಿದ
ಬೂದಿಯೊಳಗಿನ ಕೆಂಡಗಳು ಸುಡಲಿ
ಆಡಲಾಗದ ಮಾತಿನೊಳಗಿನ ನೋವನು-(ಕತ್ತಲೆಯ ಬಾನಿನಲಿ)

ರಾತ್ರಿಯ ಸುಖ ನಿದ್ದೆಗೆ ಹಂಬಲಿಸುವ
ಮುಗ್ಧ ಎಳೆಕಂದನೇ
ಕಥೆಗಳಿಗೆ ಹಂಬಲಿಸಬೇಡ ನೀನು
ಅಪ್ಪ-ಅಮ್ಮನ ಮಧ್ಯ
ಎದ್ದಿದೆ ಯುದ್ಧ
ಅಜ್ಜ-ಅಜ್ಜಿಯರು ಇತಿಹಾಸ-(ಮಗುವಿಗೊಂದು ಕಥೆ ಹೇಳುವೆ)

ಸಂಜೆಯ ದೀಪಕ್ಕೆ ಬತ್ತಿಯಿಲ್ಲ, ಎಣ್ಣೆಯಿಲ್ಲ
ಗರ್ಭಗುಡಿಯ ಬೆಳಕು ಮಾತ್ರ-(ಸಂಜೆಯ ದೀಪ)

ತೆರೆದು ನೋಡುವ ಕಣ್ಣಿಗೆ
ತಿಂಗಳಿಗೊಂದೂ ಹುಣ್ಣಿಮೆಯಿಲ್ಲ
ಕತ್ತಲೊಳಗೆ ಎಲ್ಲವೂ
ಬೆಳಕೇ ಇಲ್ಲದೆ ಉರಿಯುವ ದೀಪದಂತೆ-(ಕ್ಷುದ್ರ ಮನಸ್ಸಿಗೆ)

ಬಿಡಿಸ ಹೊರಟಿರುವೆ ನಾನು ನನ್ನೊಳಗಿರುವ
ನಿನ್ನೊಳಗಿನ ಭಾವನೆಗಳ ಚಿತ್ರವನು
ಕೆಡಿಸಿ ಬಿಡಬೇಡ ಅದನು
ಸ್ರವಿಸಿ ಕಣ್ಣೊಳಗಿನ ತೇವವನು(ಬದುಕಿನ ಬಣ್ಣ)

ಹಣ್ಣು ಮಾರುವ ಹುಡುಗ
ಹೂವು ಮಾರುವ ಹುಡುಗಿ
ಗೊತ್ತಿಲ್ಲ ಅವರಿಗೆ
ಹೂವು ಕಾಯಿಯಾಗಿ ಹಣ್ಣಾಗುವುದು
ಹಣ್ಣಿನೊಳಗೆ ಬೀಜವಿರುವುದು
ಬೀಜ ಮತ್ತೆ ಗಿಡವಾಗುವುದು
ಗಿಡದಲ್ಲಿ ಹೂವಾಗುವುದು-(ಕನ್ಯಾಕುಮಾರಿ)

ಅರ್ಥವಾಗುವುದಿಲ್ಲ
ಆಗೊಮ್ಮೆ ಈಗೊಮ್ಮೆ
ಇಂಡಿಯಾಕ್ಕೆ ಬಂದಾಗ
ಇಲ್ಲಿನ ಫ್ಯಾಷನ್!
ಆತ್ಮಹತ್ಯೆ ಮಾಡಿಕೊಳ್ಳುವ ರೈತರು
ಅತ್ಯಾಚಾರಕ್ಕೊಳಗಾಗುವ ಬಾಲೆಯರು
ಪೊಲೀಸಿನೇಟಿಗೆ ಸಾಯುವ ಸಂತ್ರಸ್ತರು
ದಲಿತರೆಂದರೆ ಯಾರು?
ಹಳ್ಳಿಗಾಡಿನ ರಾಕ್ ಬ್ಯಾಂಡ್ ಗಳೇ?(ಅನುಭವ)
ಈ ಕವನಗಳನ್ನು ಓದಿ ನಿಮಗೇನಾದ್ರೂ ಅನಿಸಿದ್ರೆ ನನಗೂ ತಿಳಿಸಿಬಿಡಿ.

Friday, July 25, 2008

ಇದೆಲ್ಲ ಎಕ್ಸ್ ಕ್ಲೂಸಿವ್ ಸುದ್ದಿಗಳು ಕಣ್ರಿ..

ಅದೇ ನಿನ್ನೆ ಬಾಂಬು ಸ್ಪೋಟ..ಜತೆಗೆ ಜನರಷ್ಟೇ ಅಲ್ಲ, ಚಾನೆಲ್ಲುಗಳೂ ವದಂತಿಗಳನ್ನು ಸ್ಪೋಟಿಸುವುದರಲ್ಲಿ ನಿರತರಾಗಿದ್ದುದು ದುರದೃಷ್ಟ. ನಿನ್ನೆ ನಾನು ಮಧ್ಯಾಹ್ನ 1 ಗಂಟೆಗೇ ಆಫಿಸಿನಿಂದ ಮನೆಗೆ ತೆರಳಿದ್ದೆ. ಸ್ವಲ್ಪ ಜ್ವರವಿದ್ದುರದಿಂದ ಬೇಗನೇ ಮನೆಗೆ ಹೊರಟಿದ್ದೆ. ಮನೆಗೆ ತಲುಪುವಾಗಲೇ ಒಂದಷ್ಟು ಮೆಸೇಜ್ಗಳು ನನಗೆ ಬಾಂಬು ಸ್ಪೋಟದ ಬಗ್ಗೆ ತಿಳಿಸಿದ್ದವು. ಮತ್ತೆ ಟಿ.ವಿ. ನೋಡೋಣ ಅಂದ್ರೆ ಕೇಬಲ್ ಸಂಪರ್ಕವನ್ನೇ ಕಡಿತಗೊಳಿಸಲಾಗಿತ್ತು. ನಂತರ ಮೊಬೈಲು ಕೂಡ ಸ್ಥಗಿತ. ಅದರ್ಲಿ..ವಿಷ್ಯ ಅದಲ್ಲ, ಪ್ರತಿ ಚಾನೆಲ್ಲುಗಳು ತಾ ಮುಂದೆ-ತಾ ಮುಂದೆ ಎಂದು ಜಿದ್ದಿಗೆ ಬಿದ್ದವರಂತೆ ಸ್ಪೊಟದ ಕುರಿತು ಮಾಹಿತಿ ನೀಡುತ್ತಿದ್ದವು. ಎಲ್ಲವೂ ಎಕ್ಸ್ ಕ್ಲೂಸಿವ್! ಬೆಂಗಳೂರಿಗೆ ಬೆಂಗಳೂರೇ ಟಿ.ವಿ. ಮುಂದೆ ಕುಳಿತು ಸುದ್ದಿ ನೋಡುತ್ತಿದ್ದರು. ಇದು ಸಹಜ ಬಿಡಿ. ಆದ್ರೆ ನಾವು ಸರಿಯಾದ ಮಾಹಿತಿಯೇ ನೀಡಿದ್ದೇವೆಯೇ? ಎಂಬ ಕನಿಷ್ಠ ಪರಿಜ್ಞಾನ ಚಾನೆಲ್ಲುಗಳಿಗೆ ಬೇಡವೇ? ಕನ್ನಡದ ಚಾನೆಲ್ಲೊಂದು ನಿನ್ನೆ ಈ ಸ್ಪೋಟದ ಬಗ್ಗೆ ಎಕ್ಸ್ಕ್ಲೂಸಿವ್ ಸುದ್ದಿ ಹೊಡೆಯೋಕೆ ಶುರುಮಾಡಿದ್ದು ಇನ್ನು ಹೇಳಿದ್ದನ್ನೇ ಮತ್ತೆ ಮತ್ತೆ ಅಂದ್ರೆ ಜನರಿಗೆ ವಾಕರಿಕೆ ಬರೋ ರೀತಿ ಬಿತ್ತರಿಸ್ತಾ ಇದೆ. ಅಷ್ಟೇ ಅಲ್ಲ..ನಿನ್ನೆ ಮಡಿವಾಳದಲ್ಲಿ ಬಾಂಬು ಸ್ಪೋಟದಲ್ಲಿ ಸುಧಾ ಎಂಬಾಕೆ ಸಾವಿಗೀಡಾಗಿದ್ದರೂ, ಆ ಚಾನೆಲ್ನಲ್ಲಿ ಬಂದಿದ್ದು ಲಕ್ಷ್ಮಿ ಎಂಬಾಕೆ ಮೃತರು. ಅಷ್ಟೇ ಅಲ್ಲ, ಸ್ವಲ್ಪ ಹೊತ್ತಿನಲ್ಲಿ ಸುಧಾ ಎಂಬಾಕೆಯ ಸಾವು. ಒಟ್ಟು ಇಬ್ಬರ ಸಾವು. ನಮ್ಮನೆಯಲ್ಲೂ ಅದೇ ಚಾನೆಲ್ ನೋಡ್ತಾ ಇದ್ದೆ. ಒಟ್ಟಿನಲ್ಲಿ ಜನರಿಗೆ ಎಂಥ ಸುದ್ದಿ ನೀಡಬೇಕು ಎಂಬುದಕ್ಕಿಂತ ಏನಾದ್ರೂ ಆಗ್ಲಿ ಎಕ್ಸ್ ಕ್ಲೂಸಿವ್ ಆಗಿ ತೋರಿಸ್ಬೇಕು ಅನ್ನೋದೇ ಮಹಾಸಾಧನೆ ಅಂದುಕೊಂಡಂತಿತ್ತು ಆ ಚಾನೆಲ್ಲು. ನಮ್ಮೂರಿಂದಲೂ ಆ ಚಾನೆಲ್ ನೋಡಿ ಅಮ್ಮ, ತಮ್ಮ ಎಲ್ರರದು ಕಾಲ್. ಅದ್ರೆ ಆ ಚಾನೆಲ್ ಹೊರತುಪಡಿಸಿ, ಎಲ್ರೂ ಸರಿಯಾದ ಮಾಹಿತಿಯನ್ನೇ ನೀಡಿದ್ದವು.ಬಹುಶಃ ನೀವುಗಳೂ ಈ ಚಾನೆಲ್ಲನ್ನು ವೀಕ್ಷಿಸಿರಬಹುದು. ನಮ್ಮ ಸುದ್ದಿವಾಹಿನಿಗಳು ಎಷ್ಟು ನೀಚಮಟ್ಟಕ್ಕೆ ಇಳಿದಿವೆ ಎಂಬುದಕ್ಕೆ ಇದೊಂದು ನಿದರ್ಶನ. ಹೆಚ್ಚೆನೂ ಬರೆಯಲ್ಲ..ನೀವೇ ಹೇಳಿ.

Thursday, July 24, 2008

ಕನ್ನಡಪ್ರಭಕ್ಕೆ ನಾ ಅಭಾರಿ

22.07.2008 ರಂದು ಕನ್ನಡ ಪ್ರಭ ವೆಬ್ ಆವೃತ್ತಿಯಲ್ಲಿ ನಾನು ಬರೆದ ಅನುಭವ 'ಬದುಕಿನ ಪುಟಗಳಿಂದ' ಬರಹವನ್ನು ಪ್ರಕಟಿಸಲಾಗಿತ್ತು. ಒಂದಷ್ಟು ಗೆಳೆಯರು ಈ ಮೇಲ್, ಫೋನ್ ಮೂಲಕ ವಿಶ್ ಮಾಡಿದ್ರು. ಬ್ಲಾಗ್ ಬಗ್ಗೆ ಬೆಟ್ಟದಷ್ಟು ಕನಸುಗಳನ್ನಿಟ್ಟುಕೊಂಡು ಬ್ಲಾಗ್ ಆರಂಭಿಸಿದ್ದೆ. ಆದರೆ ಈ ಕೆಲ್ಸಗಳ ನಡುವೆ ಯಾಕೋ ಸರಿಯಾಗಿ update ಮಾಡಕ್ಕಾಗುತ್ತಿಲ್ಲ. ಕಳೆದ ನವೆಂಬರ್ನಲ್ಲಿ ನನ್ನ ಬ್ಲಾಗ್ ಹುಟ್ಟಿದ್ದು. ಫೆಬ್ರವರಿಯಲ್ಲಿ ನನ್ನ ಪ್ರೀತಿಯ ಶರಧಿ ಕೆಂಡಸಂಪಿಗೆಯಲ್ಲಿ ಹರಿದಿತ್ತು. ಇದೀಗ ಕನ್ನಡಪ್ರಭದಲ್ಲಿ ಶರಧಿಯ ಪಯಣ ಮುಂದುವರೆದಿತ್ತು. ಥ್ಯಾಂಕ್ಯೂ ಕನ್ನಡಪ್ರಭ.ಇದೇ ನನಗೆ ಪ್ರೋತ್ಸಾಹ..ಸ್ಪೂರ್ತಿ.