Wednesday, November 28, 2007

ಟೀಚರ್ ಕಲಿಸಿದ ಅಕ್ಷರಗಳೆಲ್ಲಿ?

ಒಮ್ಮೊಮ್ಮೆ ನಂಗನಿಸೋದು 'ಚಾರ್ಲ್ಸ್ ಬಾಬ್ಬೇಜ್' ಯಾಕಾದ್ರೂ ಕಂಪ್ಯೂಟರ್ ಕಂಡುಹಿಡಿದಾಂತ?! ಕಾರಣ? ಕಂಪ್ಯೂಟರ್ ಬಂದ ಮೇಲೆ ಪೆನ್ನು ಹಿಡಿಯೋಕೆ ಆಗ್ತಾ ಇಲ್ಲ ಅನ್ನೋದೇ ದೊಡ್ಡ ಸಮಸ್ಯೆ. ಮನೇಲಿ, ಆಫೀಸಲ್ಲಿ ಎಲ್ಲ ಕಡೆಯೂ ಕಂಪ್ಯೂಟರ್. ಬರೆಯಬೇಕಾದುದನ್ನೆಲ್ಲಾ ಕಂಪ್ಯೂಟರ್ ನಲ್ಲೇ ಟೈಪ್ ಮಾಡ್ತೀವಿ. ಬರೆಯೋಕೆ ಟೈಮ್ ಎಲ್ಲಿದೆ ಅಲ್ವಾ?

ಎಲ್ಲವೂ ಆಧುನೀಕರಣ ಮಹಿಮೆ ಅನ್ತಿರಾ? ಖಂಡಿತ ಹೌದು! ಆದರೆ ನಾವು ಆಧುನೀಕರಣವನ್ನು ಅಪ್ಪಿಕೊಂಡಿದ್ದೇವೆ ವಿನಹಃ ಆಧುನಿಕರಣ ನಮ್ಮನ್ನು ಅಪ್ಪಿಕೊಂಡಿಲ್ಲ. ನಾನು ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟು ಇನ್ನೇನೋ ಎರಡು ವರ್ಷ. ಡಿಗ್ರಿ ಮುಗ್ಸಿ ತಕ್ಷಣ ಬೆಂಗಳೂರಿಗೆ ಹಾರಿ ಬಂದೆ. ಒಳ್ಳೆದೋ/ಕೆಟ್ಟದ್ದೋ ಬೆಂಗಳೂರಿಗೆ ಬಂದಂತಾಯಿತು. ಆಗ ನನ್ನತ್ರ ಮೊಬೈಲು ಪೋನು ಇಲ್ಲ. ಬದಲಾಗಿ ಮನೆಗೆ, ಸ್ನೇಹಿತರಿಗೆಲ್ಲ ಪತ್ರಾನೇ ಬರೆಯೋದು. ಕಾಲೇಜಲ್ಲಿ ಇರುವಾಗ ಯಾವುದೇ ಗೈಡು ಓದಿದವಳಲ್ಲ. ಎಲ್ಲಾ ನೋಟ್ಸನ್ನು ನಾನೇ ನೆಟ್ಟಗೆ ಬರೆಯೋದು ನನ್ ಅಭ್ಯಾಸ. ಅದ್ರ ಎಲ್ಲಾ ಜೆರಾಕ್ಸ್ ಕಾಫಿ ನಮ್ಮ ಕಾಸ್ ಹುಡುಗ್ರುಗೆ. ಇನ್ನೊಂದು ಹುಚ್ಚು ಅಂದ್ರೆ ನನ್ನ ಲೇಖನಗಳಿಗೆ ಬೇರೆಯಾರಾದ್ರೂ ಪತ್ರ ಬರೆದರೆ, ಅವರಿಗೆ ಉತ್ತರಿಸುವುದು. ಆಗ ನನ್ನತ್ರ ಪತ್ರ ಬರೆಯಲು ಪೋಸ್ಟ್ ಕಾರ್ಡ್ಗಳ ದೊಡ್ಡ ಕಟ್ಟೇ ಇರುತ್ತಿತ್ತು. ಏನಿದ್ರೂ ಕಾರ್ಡಲ್ಲಿ ಬರೆಯೋದು. ಪ್ರತಿದಿನ ಕನಿಷ್ಠ ಹತ್ತು ಪತ್ರಗಳಾದ್ರೂ ಪೋಸ್ಟ್ ಮಾಡ್ತಿದ್ದೆ. ಅದೂ ನೀಟಾಗಿ ಪತ್ರ ಬರೀತಾ ಇದ್ದೆ. ಬೆಂಗಳೂರಿಗೆ ಬಂದದ್ದೆ ತಡ, ಪತ್ರ ಅಥವ ಏನೇ ಬೇಕಾದ್ರೂ ಕಂಪ್ಯೂಟರ್ ಟೈಪಿಂಗ್. ಮೊಬೈಲ್ ಬಂದ್ರೂ ಬರೆಯೋ ಹುಚ್ಚು ಹೋಗಿರಲಿಲ್ಲ. ಆದ್ರೆ ಕಂಪ್ಯೂಟರ್ ಎದುರು ಕುಳಿತಿದ್ದೆ ತಡ, ಎಲ್ಲವೂ ಟೈಪಿಂಗ್.

ಈಗ ಪೆನ್ನು ಹಿಡಿದ್ರೆ ಕೈ ಗಡ ಗಡ ನಡುಗುತ್ತೆ. ಬರೆಯೋಕೆ ಹೋದ್ರೆ ಕಂಡಕ್ಟರ್ ಅಕ್ಷರ ಆಗಿಬಿಡುತ್ತೆ. ನನ್ನ ಫ್ರೆಂಡ್ ಅನಿಲ್ ಹೇಳ್ತಾ ಇದ್ದ. 'ನಿನ್ ಅಕ್ಷರ ನೋಡದೆ ಒಂದು ವರ್ಷವೇ ಕಳೆದುಹೋಯಿತು. ಒಂದು ಪತ್ರ ಬರೀ,' ಅನ್ತಾನೇ ಇರ್ತಾನೆ. ಯಾಕೋ ಆಗುತ್ತಿಲ್ಲ. ನಾನು ಎಷ್ಟೊಂದು ಆರ್ಟಿಫಿಶಿಯಲ್ ಆಗಿದ್ದೇನೆ ಅನಿಸುತ್ತೆ. ಮುದ್ದು ಮುದ್ದಾಗಿರುತ್ತಿದ್ದ ನನ್ ಅಕ್ಷರಗಳು ಈಗ ಕಾಗೆ ಕಾಲಿನ ಥರ ಆಗ್ತಾವೆ. ನನ್ ಅಕ್ಷರದ ಬಗ್ಗೆ ಅದೆಷ್ಟೋ ಸಲ ನಮ್ ಸರ್ ತಮಾಷೆ ಮಾಡ್ತಾ ಇದ್ರು. "ಏನಮ್ಮಾ ಸ್ಕೂಲ್ ಮೇಷ್ಟ್ರು ನಿನಗೆ ಜಾಸ್ತಿ ಕಾಫಿ ಬರೆಸಿದ್ದಾರ?" ಅಂತ. ನಮ್ಮ ಅಕ್ಷರ ಚೆನ್ನಾಗಿ ಆಗಬೇಕಾದ್ರೆ ನಮ್ಮ ಟೀಚರ್ ಎಷ್ಟು ಸಲ ಕಾಫಿ ಬರೆಸಿದ್ರು? ಎಷ್ಟು ಕಷ್ಟ ಪಟ್ಟು ನಾವು ಬರೀತಾ ಇದ್ದೀವಿ. ಮನೇಲಿ ಅಕ್ಕನೋ, ಅಣ್ಣನನ್ನೋ ಸತಾಯಿಸಿ, ಅತ್ತು-ಹೊರಳಾಡಿ ಅವರತ್ರ ಬರೆಸಿಕೊಂಡು ಕೊನೆಗೆ ಅದಕ್ಕೆ ಮತ್ತೆ ಟೀಚರ್ ನಿಂದ ಪೆಟ್ಟು ತಿಂದು , ಪುನಃ ನೂರು ಸಲ ಬರೆಯುತ್ತಿದ್ದೇವು. ಹಾಗೆ ಎಷ್ಟು ನೂರು ಸಲ ಬರೆದಿವಾ ಅಲ್ವಾ? ನನಗಿನ್ನೂ ನೆನಪಿದೆ. ಒಂದನೇ ಕ್ಲಾಸಿನಲ್ಲಿ ನಮಗೊಬ್ಬರು ಬೇಬಿ ಟೀಚರ್ ಇರ್ತಾ ಇದ್ರು. ನಮ್ಮ ಬಳಪದಲ್ಲಿ ಅವರು ' ಅ, ಆ, ಇ, ಈ' ನಾಲ್ಕು ಅಕ್ಷರ ಬರೆದುಕೊಡುತ್ತಿದ್ರು. ನಾವು ಬೆಳಿಗ್ಗೆಯಿಂದ ಸಂಜೆ ತನಕ ಒಂದೇ ಸಮನೆ ಅದ್ರ ಮೇಲೆ ಬರೆಯಬೇಕು. ಅಯ್ಯೋ ಬರೆದು ಬರೆದು ಸುಸ್ತಾಗಿಬಿಡ್ತಾ ಇದ್ದೀವಿ. ಆಮೇಲೆ ನಮ್ಮಮ್ಮ ಆಯುಧ ಪೂಜೆ ದಿನ ನಮ್ಮನ್ನು ಅಕ್ಕಿ ರಾಶಿಯ ಮೇಲೆ ಬರೆಸಿದ್ರು. ಇದೆಲ್ಲಾ ಅವ್ರು ಮಾಡಿಸಿದ್ದು ಮಕ್ಕಳು ಅಕ್ಷರ ಕಲಿಯಿಲಿ ಅಂತ. ಈಗ್ಲೂ ಶಾಲೆಯಲ್ಲಿ ಹಾಗೆಯೇ ಮಾಡ್ತಾರೆ. ಆದ್ರೆ ನಾವದನ್ನು ಮರೆತುಬಿಡ್ತೀವಿ. ನಂಗನಿಸುತ್ತೆ ನಿತ್ಯ ಹೊಸತನ್ನು ಅಪ್ಪಿಕೊಳ್ಳುವ ನಾವು ಎಷ್ಟೆಲ್ಲಾ ಒಳ್ಳೆಯ ಅಂಶಗಳನ್ನು ಮಿಸ್ ಮಾಡಿಕೊಳ್ತಾ ಇದ್ದೀವಿ ಅಂತ. ಯಂತ್ರಗಳ ಜೊತೆ ನಾವು ಯಂತ್ರಗಳಾಗಿಬಿಟ್ಟಿದ್ದೇವೆನೋ ಅನಿಸುತ್ತೆ.

ಹಣತೆ

ಅಲ್ಲಿ ಬರೇ ಕತ್ತಲು

ಸುತ್ತಲೂ ಮೌನ

ದೂರದಲ್ಲಿ ಪುಟ್ಟ ಹಣತೆ

ಉರಿಯುತ್ತಿತ್ತು.. ತನ್ನ ಪಾಡಿಗೆ

ಸುತ್ತಲೂ ಬೆಳಕು ಸೂಸುತ್ತಾ


ಆಕೆ ಕುಳಿತಿದ್ದಳು..ಒಂಟಿಯಾಗಿ

ಆಕೆಗೆ ವಯಸ್ಸು ಎಪ್ಪತ್ತು!

ಸುತ್ತಲ ಕತ್ತಲನ್ನೂ

ಕಣ್ತುಂಬ ತುಂಬಿಕೊಂಡು

ಆಕೆ ನಗುತ್ತಿದ್ದಳು

ತನ್ನ ಬಟ್ಟಲು ಕಣ್ಣುಗಳನ್ನು ಅರಳಿಸಿ,

ದೂರದಲ್ಲಿದ್ದ ಹಣತೆಯ ಕಂಡು

ಹಣತೆಯೂ ಕತ್ತಲ ಕಂಡು ಹೆದರಲಿಲ್ಲ

ತನ್ನ ಪಾಡಿಗೆ ತಾನು ಬೆಳಗುತ್ತಲೇ ಇತ್ತು.

Tuesday, November 27, 2007

ಬೆಂಗ್ಳೂರು ಸಿಟಿ ಬಸ್ಸುಗಳೇ ಸಮಸ್ಯೆ ಮಾರಾಯ್ರೆ..

ನಿಮಗೆ ಗೊತ್ತುಂಟಾ? ಈ ಬೆಂಗಳೂರು ಸಿಟಿ ಬಸ್ಸಲ್ಲಿ ಹೋಗುವುದೇ ದೊಡ್ಡ ಸಮಸ್ಯೆ ಮಾರಾಯ್ರೆ. ನನ್ನ ಮನೆಯಿಂದ ನನ್ನ ಆಫೀಸಿಗೆ ಬಸ್ಸಲ್ಲಿ ಬಂದ್ರೆ ಇರೋದು ಕೇವಲ 15 ನಿಮಿಷದ ದಾರಿ. ಆದ್ರೆ ಈ ಟ್ರಾಫಿಕ್ ಜಾಮ್ಗಳ ನಡುವೆ ಸಿಕ್ಕಿಕೊಂಡ್ರೆ 1.30ಗಂಟೆಯ ಭರ್ಜರಿ ಜರ್ನಿ ನನ್ದು. ಮೊನ್ನೆ ನಾನು ಆಫೀಸಿನಿಂದ ಹೊರಟಾಗ ರಾತ್ರಿ 8.30. ಬೆಂಗಳೂರಿನಲ್ಲಿ ಇದೇನು ತಡರಾತ್ರಿಯಲ್ಲ ಬಿಡಿ. ಆಫೀಸಿನಿಂದ ಹೊರಟವಳು ಅರ್ಧ ಗಂಟೆ ಬಸ್ಸ್ಟಾಂಡಿನಲ್ಲಿ ಕಾದೆ. 9 ಗಂಟೆಗೆ ಬಸ್ಸು ಹತ್ತಿದೆ. ಅದೇನು ಕರ್ಮವೋ ಟ್ರಾಫಿಕ್ ಜಾಮ್! ಬಸ್ಸು ಎಲ್ಲೆಲ್ಲೋ ಸುತ್ತಾಡಿಕೊಂಡು ಹೋಗಿ, ನಾನಿಳಿಯುವ ಸ್ಥಳಕ್ಕೆ ಬಂದಾಗ 10.30 ಗಂಟೆ. ನಂತ್ರ ಇನ್ನೊಂದು ಬಸ್ಸು ಹತ್ತಿ ಹೋಗಬೇಕು. ಆಟೋದಲ್ಲೊ ಹೋಗೋಣವೆಂದರೆ 10 ನಿಮಿಷದ ದಾರಿಗೆ 100 ರೂಪಾಯಿ ಕೇಳ್ತಾರೆ. ಬಸ್ಸಿಗೆ ಕಾದು ಬಸ್ಸಲ್ಲೇ ಹೋದೆ. ಲೇಟ್ ನೈಟ್ ರಾತ್ರಿ ಅಲ್ವಾ? ಕುಡುಕ್ರ ಕಾಟ ಅಂದ್ರೆ ಅವರು ಕುಡಿದಿರುವ ಸ್ಮೆಲ್ಲು ನಮ್ ಮೂಗಿಗೆ. ಎಂಥ ಮಾರಾಯ್ರೆ ಅವರಿಗೆ ಹೇಳಿದ್ದಾದ್ದರೂ ಅರ್ಥ ಆಗುತ್ತಾ ಅದೂ ಇಲ್ಲ. ಅಷ್ಟು ಹೊತ್ತು ರಾತ್ರೀಲಿ ಹೋಗೋ ಹುಡುಗೀರೆಲ್ಲ ಸಾಮಾನ್ಯುವಾಗಿ ಬಸ್ಸಲ್ಲಿ ಹೋಗಲ್ಲ. ಟು ವೀಲರ್ ಅಥವ ಕಾರಲ್ಲೇ ಹೋಗ್ತಾರೆ. ಇದೊಂದು ರೀತಿಯ ಕಿರಿಕಿರಿ ಆದ್ರೆ ಇನ್ನೊಂದೆಡೆ ಕಂಡಕ್ಟ್ರ್ರು ರಾತ್ರಿ ಡ್ಯೂಟಿ ಮಾಡೋ ಟ್ರಾಫಿಕ್ ಪೊಲೀಸ್ ಥರ ಆಡ್ತಾನೆ. ಪ್ರಯಾಣಿಕರ ಟಿಕೇಟ್ ಮಾಡಕ್ಕೂ ಅವನಿಗ್ಗೆ ಮೂಗಿನ ಮೇಲೆ ಸಿಟ್ಟು. ಬೇಕಾಬಿಟ್ಟಿ ಬೈಯುತ್ತಾ, ರಶ್ನಲ್ಲಿ ನುಗ್ಗಿಕೊಂಡು ಬೆವರು ಒರೆಸಿಕೊಳ್ಳುತ್ತಾ, ಸ್ಟಾಪ್ ಬಂದಾಗ 'ವಿಸಿಲ್ ' ಹಾಕೋಕೂ ಅವನಿಗೆ ನೆನಪಿರಲ್ಲ. ಕೆಲವರಂತೂ ಹತ್ತಿ ಮುಂದಿನ ಸ್ಟಾಪ್ನಲ್ಲಿ ಇಳೀಯುವವರೆಗೂ ಆತ ಎಲ್ಲೋ ಮಧ್ಯದಲ್ಲಿ ಸಿಕ್ಕಹಾಕೊಂಡು ಟಿಕೇಟ್ ಟಿಕೇಟ್ ಅನ್ತಾನೆ ಇರ್ತಾನೆ, ಇತ್ತ ಪಾಸ್ ಎಂದು ಸುಳ್ಳು ಹೇಳಿ ಹತ್ತಿದವರೂ ಮೆಲ್ಲಗೆ ತಮ್ಮ ಸ್ಟಾಪ್ನಲ್ಲಿ ಇಳದುಕೊಳ್ಳುತ್ತಾರೆ. ಇನ್ನೊಂದೆಡೆ 'ಎಲ್ರೂ ಪಾಸ್ ಪಾಸ್ ಅನ್ತಾರೆ. ಬೋಲಿಮಕ್ಳು ಒಳಗೋಗದೆ ಡೋರಲ್ಲಿ ನೇತಾಡ್ತಾರೆ, ನಮ್ ಕಷ್ಟ ಯಾರ್ ಕೇಳ್ತಾರೆ..ನಮ್ಗೂ ಹೆಂಡ್ತಿ ಮಕ್ಳು ಇದ್ದಾರೆ..ಹೊಟ್ಟೆಪಾಡಿಗೆಲ್ಲ.."ಕಂಡಕ್ಟ್ರ ಗೊಣಗಾಟ ಬೇರೆ. ಯಾರಾದ್ರೂ 3-5 ರೂಪಾಯಿ ಕೊಟ್ಟು ಟಿಕೇಟ್ ಕೊಡದೆ ತನ್ನ ಕಿಸೆಗಿಳಿಸಿಕೋಳ್ಳುವ ಆಸೆ ಪಾಪ ಅವನಿಗೆ. ಕೆಲವರಂತೂ ಟಿಕೇಟ್ ನೀಡಿ, ನೂರರ ನೋಟು ತೆಗೆದುಕೊಂಡು ಆಮೇಲೆ ಚಿಲ್ಲರೆ ಕೊಡದೆ ಬೇಗನೇ ರೈಟ್ ಅಂದುಬಿಡ್ತಾರೆ. ಬೆಂಗ್ಳೂರು ಬಸ್ಸುಗಳಲ್ಲಿ ಹೀಗೆ ದುಡ್ಡು ಮಾಡೋ ಕಂಡಕ್ಟ್ರಣ್ಣ ನವ್ರುಗೇನೂ ಬರವಿಲ್ಲ ಬಿಡಿ. ಇನ್ನು ಡ್ರೈವರಣ್ಣನ ಕತೆ ಕೇಳೋದೆ ಬೇಡಪ್ಪ. ರಾತ್ರಯಂತೂ ಅವನಿಗೆ ಕಂಡಕ್ಟ್ರ ಸಿಳ್ಳೆ ಕೇಳೋದೇ ಇಲ್ಲ, ಅವನೇನೂ ಉದ್ದಕ್ಕೆ ಹೋಗ್ತಾನೇ ಇರ್ತಾನೆ. ಇಳೇಬೇಕಾದ್ರೆ ನಾವೇ ಅವ್ನ ಹತ್ರ ಬಂದು ಇಳಿತೀವಿ ಅನ್ಬೇಕು. ಅಬ್ಬಾಬ್ಬಾ ಬೆಂಗ್ಳೂರು ಸಿಟಿ ಬಸ್ಸುಗಳ ಪ್ರಯಾಣ ನೋಡಿದ್ರೆ, ಯಾವ ಜನ್ಮದ ಪಾಪದ ಫಲ ಅನ್ನದೆ ಅಡ್ಡಿಯಿಲ್ಲ.

Friday, November 23, 2007

ಪ್ರೀತಿಯಿಲ್ಲದ ಮೇಲೆ..

ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗುರುಳಿ
ನೆಲಕೆ ಹಸಿರು ಮೂಡೀತು ಹೇಗೆ?
-ಜಿಎಸ್ಎಸ್ ಅವರ ಕವನ ಪ್ರೀತಿಗೆಂದೇ ಹುಟ್ಟಿದೆ ಅನಿಸುತ್ತೆ.

ಯಾಕೋ ಪ್ರೀತಿಯ ಬಗ್ಗೆ ಒಂದಿಷ್ಟು ಬರೆಯೋಣ ಅನಿಸ್ತು. ಎಷ್ಟೋ ಕವಿಗಳು ಪ್ರೀತಿಯ ಬಗ್ಗೆ ಬರೆದಿದ್ದಾರೆ. ಹಾಡಿ ಹೊಗಳಿದ್ದಾರೆ. ಆದ್ರೂ ಪ್ರೀತಿಯನ್ನು ಸೀಮಿತವಾಗಿರಿಸಲು ಸಾಧ್ಯನಾ? ಈ ಶಬ್ಧವೇ ಅದೆಷ್ಟು ಚೆನ್ನ. ಪ್ರೀತಿಯ ಕಲ್ಪನೆಯೇ ಅದೆಷ್ಟು ಖುಷಿ ನೀಡುತ್ತೆ. ಆದರೆ ಪ್ರೀತಿಯೆಂದರೆ ಅದೊಂದು ಕಲ್ಪನೆ ಅಲ್ಲ, ಅದೊಂದು ನಿತ್ಯ ಸತ್ಯ. ಪ್ರೀತಿಯೆಂದರೆ ಮನುಷ್ಯ ಬದುಕಿನ ಸ್ಪೂರ್ತಿ. ಪ್ರೀತಿಯೆಂದರೆ..ಅನುಭೂತಿ , ಬದುಕು ಇನ್ನು ಏನೇನೋ...

"ಪ್ರೀತಿಗೆ ಹೆಸರು ಕೊಡಬೇಡಿ. ನೀವು ಪ್ರೀತಿಗೆ ಹೆಸರಿಟ್ಟಾಗ ಅದೊಂದು ಸಂಬಂಧವಾಗುತ್ತದೆ. ಸಂಬಂಧಗಳು ಪ್ರೀತಿಯನ್ನು ಸೀಮಿತಗೊಳಿಸುತ್ತವೆ. ಸಂಬಂಧವನ್ನು ಹೇರುವುದರಿಂದ ಪ್ರೀತಿ ನಿರ್ಬಂಧಿತವಾಗುತ್ತದೆ" ರವಿಶಂಕರ್ ಗುರೂಜಿ ಅವರ ಮಾತಿದು. ಹೌದು! ಪ್ರೀತಿ ಸಂಬಂಧಗಳನ್ನೂ ಮೀರಿದ್ದು. ಮನುಷ್ಯನೊಬ್ಬ ಪ್ರೀತಿಯನ್ನು ಪ್ರೀತಿಸಿದಾಗ ಮಾತ್ರ ಪರರನ್ನೂ ಪ್ರೀತಿಸಲು ಸಾಧ್ಯ. ಜಗತ್ತಿನ ಪ್ರೀತಿಯೊಂದಿಗೆ ಅಂತರ್ಗತನಾಗಲು ಸಾಧ್ಯ. ಅದಕ್ಕಾಗಿ ಕವಿ ಜಿಎಸ್ಎಸ್ ಕೇಳಿರುವುದು 'ಪ್ರೀತಿಯಿಲ್ಲದ ಮೇಲೆ...".

ಪ್ರೀತಿಯಲ್ಲಿ ಅದ್ದಿ ತೆಗೆದ ಬದುಕು ಅದೆಷ್ಟು ಚೆನ್ನ ಅನಿಸುತ್ತೆ ಅಲ್ವೇ? ಪ್ರೀತಿ ಸೀಮಿತವಲ್ಲ, ಅದು ವಿಶಾಲ. ಅಮ್ಮ ನಮ್ಮನ್ನು ಪ್ರೀತಿಸ್ತಾರೆ, ಅಪ್ಪ ನಮ್ಮನ್ನ ಪ್ರೀತಿಸ್ತಾರೆ..ಅಕ್ಕ, ತಮ್ಮ,ಅಣ್ಣ-ತಂಗಿ ನಮ್ಮನ್ನು ಪ್ರೀತಿಸ್ತಾರೆ..ಪುಟ್ಟ ಮಕ್ಕಳೂ ಪ್ರೀತಿಸ್ತಾರೆ..ಜಗತ್ತೇ ನಮ್ಮನ್ನು ಪ್ರೀತಿಸುತ್ತೆ ಅಂದಾಗ ಪ್ರೀತಿಯನ್ನು ಯಾವುದೋ ಸಂಕುಚಿತ ಅರ್ಥಕ್ಕೆ ಸೀಮಿತವಾಗಿಸೋದು ಎಷ್ಟೊಂದು ತಪ್ಪು ಅನಿಸುತ್ತೆ ಅಲ್ಲ? ಯಾರಾದರೇನು ಪ್ರೀತಿಸಬೇಕು..ಮನುಷ್ಯರನ್ನ, ಪ್ರಾಣಿಗಳನ್ನ, ಪಕ್ಷಿಗಳನ್ನ, ಪೃಕೃತಿಯ ಮಡಿಲನ್ನ, ಸಮಸ್ತ ಜೀವ ಪ್ರಪಂಚವನ್ನೇ ಪ್ರೀತಿಸಿಬೇಕೆಂದು ಅನಿಸುತ್ತೆ ಅಲ್ವೇ? ನಾವು ನಮ್ಮನ್ನು ಪ್ರೀತಿಸಬೇಕು, ನಮ್ಮೊಳಗಿನ ತೇಜಸ್ಸನು ನಾವು ಪ್ರೀತಿಸಬೇಕು, ನಮ್ಮ ಬದುಕು, ಪ್ರೀತಿಯನ್ನು ಪ್ರೀತಿಸಲು ಕಲಿಯಬೇಕು, ಹೀಗಿದ್ದಲ್ಲಿ ನಮ್ಮ ಬದುಕು ಹೇಗಿರಬಹುದು ಅಲ್ವೇ?

ದ.ರಾ. ಬೇಂದ್ರೆ ಅವರು ಪ್ರೀತಿಯ ಬಗ್ಗೆ ಹೀಗೆನ್ನುತ್ತಾರೆ;
ಒಲವೆಂಬ ಹೊತ್ತಗೆಯ ಓದಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುವಿಯಾ ಹುಚ್ಚ?
ಹಗಲಿರುಳೂ ದುಡಿದರೂ, ಹಲಜನುಮ ಕಳೆದರೂ
ನೀ ತೆತ್ತಲಾರೆ ಬರೇ ಅಂಚೆ ವೆಚ್ಚ!!

ಪ್ರೀತಿಯ ಆಳವನ್ನು ತಿಳಿಸಿರುವ ತಾವೋ, "ನನ್ನ ಹೃದಯದೊಳಗಿಂದ ಹೊರನೆಗೆಯುವ ವಲಸೆ ಹಾಡುಗಳು ನಿನ್ನ ಪ್ರೀತಿಯ ಸ್ತರದಲ್ಲಿ ಗೂಡು ಕಟ್ಟಲೆತ್ನಿಸುತ್ತವೆ" ಪ್ರೀತಿ ಇರಲಿ, ನಮ್ಮೊಳಗೆ, ಜಗದೊಳಗೆ. ನಮ್ಮನ್ನು ಸಮಸ್ತ ಜಗತ್ತನ್ನು ಪ್ರೀತಿಸೋಣ. ಪ್ರೀತೀನ ಪ್ರೀತಿಯಿಂದ ಗೆಲ್ಲೋಣ. ಗೊತ್ತುಗುರಿಯಿಲ್ಲದೆ ಮೂಡುವ ಬದುಕಿನ ಸಂಬಂಧಗಳನ್ನು ಪ್ರೀತಿಯ ಮೂಲಕ ಬೆಸೆಯೋಣ. ಮರೆತುಹೋಗದಷ್ಟು ಹೃದಯದಲ್ಲಿ ನೆಲೆಸಿಬಿಡೋಣ..ಪ್ರೀತಿಯ ಸ್ತರದಲ್ಲಿ ಬದುಕನ್ನು ಕಟ್ಟೋಣ. ಏನೋ ಅಂದೆ ಪ್ರೀತಿ..ಪ್ರೀತಿ. ಬದುಕಿನ ಪ್ರೀತಿ..ಬದುಕುವ ಪ್ರೀತಿ..ನಮ್ಮೆಲ್ಲರ ಬದುಕನ್ನು ಬೆಳಗುವ ಪ್ರೀತಿಯೆಂಬ ಪುಟ್ಟ ಹಣತೆ..ಸದಾ ನಾವಿದನ್ನು ಬೆಳಗಬೇಕು. ಜಗತ್ತು ಏನೇ ಆಗಲಿ, ನಾವು ಪ್ರೀತಿಸಬೇಕು..ಪ್ರತಿಯೊಬ್ಬರಿಗೂ ಪ್ರೀತಿಯ ತುತ್ತನ್ನು ಉಣಬಡಿಸಬೇಕು..ಜೋಪಾನವಾಗಿ ಪ್ರೀತಿನ ಹೃದಯದಲ್ಲಿಬಚ್ಚಿಡೋಣ..ಬಿಚ್ಚಿಡೋಣ..ಅದೊಂದು ಶುಭ್ರ ಕನ್ನಡಿ..ಒಡೆಯದಂತೆ ಜೋಪಾನವಾಗಿರಿಸೋಣ.. ಬದುಕೋಣ.. ನಿಷ್ಕಲ್ಮಶ ಪ್ರೀತಿಯ ಸವಿ ಸವಿಯೋಣ..ಪ್ರೀತಿಯ ಮಳೆ ಸುರಿಸೋಣ.. ಕೊನೆಗೊಂದಿಷ್ಟು..
ಕವಿದ
ಕಾರ್ಮೋಡಗಳ ಸರಿಸಿ..
ಪ್ರೀತಿಯ ದೀಪ ಹಚ್ಚೋಣ..
ನಿನ್ನೆ-ನಾಳೆಗಳ ನಡುವೆ..
ಪ್ರೀತಿಯ ಅಲೆಯಲಿ
ತೇಲೋಣ
ಏನಂತೀರಿ?

Thursday, November 22, 2007

ಉಡುಪಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

74ನೇ ಕನ್ನಡ ಸಾಹಿತ್ಯ ಸಮ್ಮೇಳನ, ದಿನಗಳು ಸಮೀಪಸುತ್ತಿವೆ..ಇದೇ ಡಿಸೆಂಬರ್ 12ರಿಂದ 17ರ ತನಕ ಕರಾವಳಿಯ ಮಡಿಲು ಉಡುಪಿಯಲ್ಲಿ. ಎಲ್.ಎಸ್ ಶೇಷಗಿರಿರಾವ್ ಸಮ್ಮೇಳನದ ಅಧ್ಯಕ್ಷ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ ಎನ್ನುವುದು ಸುದ್ದಿ. ಅಧ್ಯಕ್ಷ ಸ್ಥಾನ ಸಿಕ್ಕಿಲ್ಲವೆಂದು ಮುನಿಸಿಕೊಂಡಿದ್ದ ವ್ಯಾಸರಾಯ ಬಲ್ಲಾಳ, ಸಮ್ಮೇಳನದ ನಿಗದಿತ ದಿನಾಂಕ ಮುಂದೂಡಿಕೆ..ಎಲ್ಲವುಗಳ ನಡುವೆ ಇದೀಗ ಡಿಸೆಂಬರ್ 12ರಂದು ಸಾಹಿತ್ಯ ಸಮ್ಮೇಳನಕ್ಕೆ ಉಡುಪಿ ಸಿಂಗಾರಗೊಳ್ಳುತ್ತಿದೆ. ಸಮ್ಮೇಳನದ ಉಸ್ತುವಾರಿಯನ್ನು ಡಿ. ವಿರೇಂದ್ರ ಹೆಗ್ಗಡೆ ಮತ್ತು ಕೆ.ಕೆ. ಪೈ ವಹಿಸಿಕೊಳ್ಳಲಿದ್ದಾರೆ.

ಸಮ್ಮೇಳನದ ಲಾಂಛನವನ್ನು ಕಲಾವಿದ ಯು. ಮಂಜುನಾಥ ಮಯ್ಯ ರಚಿಸಿದ್ದಾರೆ. ಕರಾವಳಿ ಕಲೆ ಯಕ್ಷಗಾನದ ಮುಕುಟವನ್ನು ಹೋಲುವ ಸಿದ್ಧಗೊಂಡಿದೆ. ಸಮ್ಮೇಳನದ ಒಟ್ಟು ನಿರ್ವಹಣೆಗೆ 43 ಸಮಿತಿಗಳ ರಚನೆಯಾಗಿದೆ. ಪುಸ್ತಕಗಳ ಮಾರಾಟಗಾರರು, ಸಾಹಿತ್ಯಾಸಕ್ತರು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಅಲ್ಲಿ ಹೋಗೋದೇ ದೊಡ್ಡ ವಿಷಯವಲ್ಲ. ಸಾಹಿತ್ಯ ಸಮ್ಮೇಳನ ಹೇಗೆ ನಡೆಯುತ್ತೆ? ಸಮಯ ಪಾಲನೆ ಹೇಗಾಗುತ್ತೇ? ಎಷ್ಟೋ ಕೋಟಿ ಹಣ ಖರ್ಚು ಮಾಡಿ ಸಾಹಿತ್ಯ ಪೋಷಣೆ ಆಗುತ್ತೋ ಅಥವ ಉದರ ಪೋಷಣೆ ಮುಖ್ಯವೆನಿಸುತ್ತೋ ಇದು ಮುಂದಿರುವ ಪ್ರಶ್ನೆಗಳು.

ಪ್ರತಿಬಾರಿಯೂ ಅಷ್ಟೇ. ಸಾಹಿತ್ಯ ಸಮ್ಮೇಳನ ಸಾಹಿತ್ಯ ಸಮ್ಮೇಳನಕ್ಕಿಂತ ಉದರ ಪೋಷಣೆಯೇ ಮುಖ್ಯವಾಗುತ್ತದೆ. ಊಟದ ಛತ್ರದಲ್ಲಿ ತುಂಬಿ ತುಳುಕುವ ಮಂದಿ, ಸಮ್ಮೇಳನದಲ್ಲಿ ಗೋಷ್ಟಿ, ಭಾಷಣಗಳನ್ನು ಕೇಳಲು ಕುಳಿತಿರುವುದಿಲ್ಲ. ಎಷ್ಟೋ ಬಾರಿ ಬರೇ ಕುರ್ಚಿಗಳೇ ಕವಿಗೋಷ್ಠಿ ಆಲಿಸುವ ಸಂದರ್ಭ ಬಂದಿತ್ತು. ಬೀದರಿನಲ್ಲಿ ನಡೆದ ಸಮ್ಮೇಳನದಲ್ಲಿ ಆಗಿದ್ದೂ ಅದೆ. ಮಧ್ಯರಾತ್ರಿ ವರೆಗೆ ಕವಿಗೋಷ್ಠಿ ಮುಂದುವರೆದಾಗ, ಬರೇ ಕುರ್ಚಿಗಳೇ ಸಭಿಕರಾಗಿದ್ದರು. ಅಚ್ಚುಕಟ್ಟಾದ ಸಾಹಿತ್ಯ ಸಮ್ಮೇಳನ ಅಂದ ತಕ್ಷಣ ಥಟ್ಟನೆ ನೆನಪಾಗುವುದು 2003ರಲ್ಲಿ ನಡೆದ ಮೂಡುಬಿದಿರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ನಡೆದಾಗ ಸಮಯ ಪಾಲನೆ, ಸಭಿಕರ ಕೊರತೆ ಕಂಡುಬಂದಿಲ್ಲ. ಆ ಬಗ್ಗೆ ಡಾ. ಮೋಹನ್ ಆಳ್ವರ ಕಾಳಜಿಯನ್ನು ಮೆಚ್ಚಲೇಬೇಕು. ಅದನ್ನೇ ಹನಿಕವಿ ಡುಂಡಿರಾಜ್ ಹೀಗೆಂದಿದ್ದರು;
ಕವಿಗಳು
ಮಾಡುತ್ತಾರೆ
ಕವನ
ವಾಚನ,
ಆಳ್ವರು
ನೋಡುತ್ತಾರೆ
ತಮ್ಮ ವಾಚನ್ನ!!
ಕವನ ತಮಾಷೆಯಾಗಿ ಕಂಡರೂ ಅಷ್ಟೇ ಅರ್ಥಪೂರ್ಣ.
ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಲಿ ಎಂಬುವುದೇ ನಮ್ಮ ಆಶಯ.

ಚಿಕಾಗೋದಲ್ಲಿ ಸ್ವಾಮೀ ವಿವೇಕಾನಂದ..

ವಿಶ್ವ ಭಾತೃತ್ವ ಸಂದೇಶ ಸಾರಿದ ಸ್ವಾಮೀ ವಿವೇಕಾನಂದರು 1893ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿರುವ ಭಾಷಣದ ಸಾರ ಇಲ್ಲಿದೆ.
ಅಮೇರಿಕಾದ ಸಹೋದರ ಸಹೋದರಿಯರೇ,
ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳನ್ನು ಸಲ್ಲಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದಿದಿಂದ ತುಂಬಿ ತುಳುಕುತ್ತಿದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸನ್ಯಾಸಿಗಳ ಸಂಘದ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ. ವಿವಿಧ ಧರ್ಮಗಳ ಮಾತೆಯ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಹಿಂದೂ ಜನಾಂಗಕ್ಕೆ ಸೇರಿದ ಎಲ್ಲ ವರ್ಗಗಳ, ಎಲ್ಲ ಪಂಥಗಳ ಕೋಟ್ಯಾನು ಕೋಟಿ ಜನರ ಪರವಾಗಿ ನಿಮಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಬಹಳ ದೂರದಿಂದ ಬಂದಿರುವ, ಧಾರ್ಮಿಕ ಸಹನೆಯ ಭಾವನೆಯನ್ನು ವಿವಿಧ ದೇಶಗಳಿಗೆ ಒಯ್ಯುವ ಗೌರವಕ್ಕೆ ಪಾತ್ರರಾಗಿರುವ ಎಲ್ಲ ಭಾಷಣಕಾರರಿಗೂ ನಾನು ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ. ಧಾರ್ಮಿಕ ಸಹನೆಯನ್ನೂ, ಎಲ್ಲ ಧರ್ಮಗಳೂ ಸ್ವೀಕಾರಯೋಗ್ಯ ಎಂಬುವುದನ್ನೂ ಜಗತ್ತಿಗೆ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು; ಅಷ್ಟೇ ಅಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ, ಎಲ್ಲ ಧರ್ಮಗಳಲ್ಲಿ ಯಾರು ಯಾರು ಹಿಂಸೆಗೆ ಒಳಗಾದರೋ ಅವರಿಗೆಲ್ಲ ಆಶ್ರಯವನ್ನು ನೀಡಿದ ದೇಶಕ್ಕೆ ಸೇರಿದವರು ನಾವು ಎಂಮ ಹೆಮ್ಮೆ ನನ್ನದು. ಯಾವ ವರ್ಷ ರೋಮನ್ನರ ದೌರ್ಜನ್ಯದಿಂದ ಯಹೂದ್ಯರ ಪವಿತ್ರ ದೇವಾಲಯ ಒಡೆದು ಪುಡಿಪುಡಿಯಾಯಿತೋ ಅದೇ ವರ್ಷ ಅಳಿದುಳಿದ ಶುದ್ಧ ಯಹೂದಿಗಳು ಆಶ್ರಯವನ್ನು ಬಯಸಿ ದಕ್ಷಿಣ ಭಾರತಕ್ಕೆ ಬಂದರು. ಅವರಿಗೆ ಆಶ್ರಯ ನೀಡಿದ ದೇಶದವನು ನಾನು ಎಂಬ ಹೆಮ್ಮೆ ನನ್ನದು. ಝೋರತೂಷ್ಟ್ರ ರಾಷ್ಟ್ರದ ನಿರಾಶ್ರಿತರಿಗೆ ಆಶ್ರಯ ನೀಡಿ ಇಂದಿಗೂ ಅವರನ್ನು ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆ ನನ್ನದು. ಸೋದರರೇ, ಚಿಕ್ಕಂದಿನಿಂದ ನಾನು ಪಠಿಸುತ್ತಿದ್ದ, ಇಂದಿಗೂ ಕೋಟ್ಯಾಂತರ ಜನರು ಪಠಿಸುತ್ತಿರುವ ಶ್ಲೋಕವೊಂದರ ಕೆಲವು ಪಂಕ್ತಿಗಳನ್ನು ನಿಮ್ಮ ಮುಂದೆ ಹೇಳುತ್ತೇನೆ; "ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ನದಿಗಳು ಕೊನೆಗೆ ಸಾಗರದಲ್ಲಿ ಸಂಗಮಗೊಳ್ಳುವಂತೆ, ಹೇ ಭಗವಾನ್, ಮಾನವರು ತಮ್ಮ ತಮ್ಮ ಸಂಸ್ಕಾರಗಳಿಗೆ ತಕ್ಕಂತೆ, ನೇರವಾಗಿಯೋ ವಕ್ರವಾಗಿಯೋ ಇರುವ ಪಥಗಳನ್ನು ಅನುಸರಿಸುತ್ತಾರೆ. ಅವೆಲ್ಲವನ್ನೂ ನಿನ್ನೆಡೆಗೆ ಕರೆದೊಯ್ಯುತ್ತೇವೆ"

"ಯಾವುದೇ ರೂಪದಲ್ಲಿ ನನ್ನ ಬಳಿಗೆ ಬಂದರೆ ನಾನು ಸ್ವೀಕರಿಸುತ್ತೇನೆ; ಅಂತಿಮವಾಗಿ ನನ್ನ ಬಳಿಗೆ ಬರುವ ವಿವಿಧ ಪಥಗಳಲ್ಲಿ ಸಾಗಿ ಬಂದು ನನ್ನನ್ನೇ ಸೇರಲು ಎಲ್ಲ ಜನರೂ ಪ್ರಯತ್ನಿಸುತ್ತಿದ್ದಾರೆ" -ಎಂಬ ಗೀತೆಯ ಅದ್ಭುತ ತತ್ವದ ಸತ್ಯವನ್ನು ಜಗತ್ತಿಗೆ ಸಾರುವುದಕ್ಕೆ ಈ ಸಭೆಯೊಂದೇ ಸಾಕು. ಸಂಕುಚಿತ, ಪಂಥಭಾವನೆ, ಸ್ವಮತಾಭಿಮಾನ, ಅದರ ಭೀಕರ ಸಂತಾನವಾದ ಮತಾಂಧತೆ ಬಹುಕಾಲದಿಂದ ಪೃಥ್ವಿಯನ್ನು ಬಾಧಿಸುತ್ತವೆ. ಇವು ಈ ಭೂಮಿಯನ್ನು ಹಿಂಸೆಯಿಂದ ತುಂಬಿಸಿವೆ, ಅದನ್ನು ಮತ್ತೆ ಮತ್ತೆ ನರ ರಕ್ತದಿಂದ ತೋಯಿಸಿವೆ, ನಾಗರಿಕತೆಯನ್ನು ನಾಶಗೊಳಿಸಿವೆ, ರಾಷ್ಟ್ರ ರಾಷ್ಟ್ರಗಳನ್ನೆ ನಿರಾಶೆಯ ಕೂಪಕ್ಕೆ ತಳ್ಳಿವೆ. ಇಂಥ ಭಯಂಕರ(ಧರ್ಮಾಂಧತೆಯ) ರಾಕ್ಷಸರು ಇಲ್ಲದೆಯೇ ಇದ್ದಿದ್ದರೆ ಮಾನವ ಸಮಾಜ ಈಗಿರುವುದಕ್ಕಿಂತಲೂ ಎಷ್ಟೋ ಪಾಲು ಮುಂದುವರಿದಿರುತ್ತಿತ್ತು. ಆದರೆ ಅವರ ಕಾಲ ಮುಗಿದಿದೆ. ಇಂದು ಬೆಳಿಗ್ಗೆ ಈ ಸಭೆಯ ಶುಭಾರಂಭವನ್ನು ಸೂಚಿಸಲು ಮೊಳಗಿದ ಘಂಟಾನಾದ ೆಲ್ಲ ಮತಾಂಧತೆಯ, ಖಡ್ಗ ಇಲ್ಲವೇ ಲೇಖನಿಯಿಂದ ಸಾಧಿಸಿದ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಅನಾದಾರವಾದ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟನಾದವೂ ಆಗಲಿ ಎಂಬುದೇ ನನ್ನ ಆಶಯ.
ಚಿಕ್ಕಂದಿನಿಂದಲೂ ಈ ಭಾಷಣ ನನಗೆ ತುಂಬಾ ಇಷ್ಟವಾಗಿದ್ದವು. ಆಗಾಗ ಓದಿ ಖುಷಿಪಡುತ್ತಿದೆ. ನೀವೂ ಓದಿ ಖುಷಿಪಡಿ...

Wednesday, November 21, 2007

ಎಂಥ ಕನ್ನಡ ಪ್ರೇಮ?!

"ನಾವು ಕನ್ನಡಿಗರಮ್ಮಾ, ನಾವು ಕನ್ನಡ ಮಾತಾಡೋದು. ನಮಗೆ ಇಂಗ್ಲೀಷ್, ಹಿಂದಿ ಇದ್ಯಾವುದೂ ಬರಲ್ಲಮ್ಮ. ನಾವು ಕನ್ನಡದವ್ರು, ಕನ್ನಡ ನಮ್ ಭಾಷೆ. ಕನ್ನಡ ಮಾತಾಡೋದು ನಮಗೆ ಹೆಮ್ಮೆಯೆನಿಸುತ್ತದೆ. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಮಾತಾಡದೆ ಇನ್ಯಾರು ತಮಿಳರು ಕನ್ನಡ ಮಾತಾಡ್ತಾರಾ..." ಆಕೆ ತಮ್ಮ ಮಾತನ್ನು ಮುಂದುವರೆಸಿದ್ದರು.

ಅಂದು ಬೆಳಿಗ್ಗೆ ಆಫೀಸಿಗೆ ಹೊರಟಾಗ ಸ್ವಲ್ಪ ಲೇಟಾಗಿತ್ತು. ಒಂದೆಡೆ ಟ್ರಾಫಿಕ್ ಜಾಮ್, ಇನ್ನೊಂದೆಡೆ ಬಸ್ಸು ಪುಲ್ ರಶ್. ಹೇಗೋ ನುಗ್ಗಿಕೊಂಡು ಒಳಗೆ ನುಗ್ಗಿ ಕೈಕಾಲು ನೆಟ್ಟಗೆ ಮಾಡ್ಕೊಂಡು ನಿಂತವಳು ಮತ್ತೆ ಆಫೀಸ್ ಪಕ್ಕ ಬಸ್ಸು ತಲುಪಿದಾಗ ಇಳಿಯೋಕೆ ಹರಸಾಹಸ ಪಡಬೇಕಾಯಿತು. ಬಾಗಿಲ ಹತ್ರ ಒಬ್ಬರು ನಡುವಯಸ್ಸಿನ ಮಹಿಳೆ ನಿಂತಿದ್ದರು. ನಾನು ಇಳಿಬೇಕಾದರೆ ಅವರನ್ನು ದಾಟಿ ಇಳೀಬೇಕು. ಅವರತ್ತ ಮೆಲ್ಲಗೆ ಕೇಳಿದೆ 'ಇಳೀತೀರಾ ಆಂಟಿ'..ಅವರು ನನ್ನ ಮುಖವನ್ನೇ ದಿಟ್ಟಿಸಿದರು. ಮತ್ತೊಮ್ಮೆ ಅದೇ ಮಾತನ್ನು ಕೇಳಿದೆ, ಮತ್ತೂ ಅರ್ಥವಾಗಿಲ್ಲ. ಕೊನೆಗೆ ಇಂಗ್ಲೀಷ್ನಲ್ಲಿ ಕೇಳಿದೆ. ನನ್ನನ್ನೊಮ್ಮೆ ತಲೆಯಿಂದ ಕಾಲಿನ ತನಕ ನೋಡಿ, ಏನಮ್ಮಾ ಇಂಗ್ಲೀಷ್ ಮಾತಾಡ್ತೀಯಾ ಅಂದ್ರು. ನಿಮಗೆ ಕನ್ನಡ ಬರಲ್ಲ ಅಂತ ಇಂಗ್ಲೀಷ್ ಮಾತಾಡಿದೆ ಆಂಟಿ ಅಂದಾಗ ಅವರು ಮೇಲಿನ ಮಾತುಗಳನ್ನು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿಬಿಟ್ಟಿದ್ದರು. ಮಾತ್ರವಲ್ಲ ನನ್ನ ಜೊತೆನೇ ಬಸ್ಸಿನಿಂದ ಇಳಿದು, ಮತ್ತೆ ಮಾತು ಆರಂಭಿಸಿದರು.

"ನೋಡಮ್ಮಾ ಕನ್ನಡ ಮಾತಾಡ್ಬೇಕು. ನನ್ ಮಕ್ಕಳು ಅಮೇರಿಕಾದಲ್ಲಿದ್ದಾರೆ. ನಾನೂ ಮುಂಬೈಯಲ್ಲಿ ಹುಟ್ಟಿ ಬೆಳೆದವಳು. ನನ್ನ ಗಂಡ ಬ್ಯಾಂಕ್ ಉದ್ಯೋಗಿ. ಕರ್ನಾಟಕದಲ್ಲಿ ನೆಲೆಸಿ 25 ವರ್ಷಗಳೇ ಕಳೆದುಹೋಗಿವೆ. ಈಗ ನಾನು ಕನ್ನಡತಿ..ನನ್ನನ್ನು ಬೆಳೆಸಿದ್ದು ಕನ್ನಡ, ಕರ್ನಾಟಕ. ನನಗೆ ಅನ್ನ ಕೊಟ್ಟಿದ್ದು ಕನ್ನಡ ನೆಲ. ಯಾವತ್ತೂ ಈ ನೆಲದಲ್ಲಿ ಇದ್ದುಕೊಂಡು, ಬೇರೆ ಭಾಷೆಯ ವ್ಯಾಮೋಹ ಬೆಳೆಸಿಕೊಳ್ಳಬೇಡಿ, ಅದು ಸರಿಯಲ್ಲ." ಎಂದರು. ನಂತರ ಒಂದಷ್ಡು ಎಲ್ಲಿ, ಏನು, ಎತ್ತ ಮಾತಾಡಿಸಿದ್ರು. ನಂತರ ಹೊರಟರು.
ಕನ್ನಡದ ಬಗ್ಗೆ ಇಷ್ಟೆಲ್ಲಾ ಮಾತಾಡೋ ಅವರು, ಓರ್ವ ಸಾಮಾನ್ಯ ಗೃಹಿಣಿ. ಯಾವುದೋ ಕೆಲಸದ ನಿಮಿತ್ತ ಬಸ್ಸಲ್ಲಿ ಬಂದಿದ್ದರು. ಹೆಸರು ಸುಜಾತ.

ಅಂತೂ-ಇಂತೂ ಅರ್ಧ ಗಂಟೆ ಕಳೆದು ನಮ್ಮ ಆಫೀಸ್ನತ್ತ ಹೆಜ್ಜೆ ಹಾಕಿದೆ. ಆದರೆ ಮನದಲ್ಲಿ ಅವರ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದ್ದವು. "ಕನ್ನಡವನ್ನು ಕನ್ನಡಿಗರು ಮಾತಾಡದೆ ಇನ್ಯಾರೂ ತಮಿಳರು ಮಾತಾಡ್ತಾರಾ?" ಈ ಮಾತು ಮನತುಂಬಾ ಮಾರ್ದನಿಸುತ್ತಿತ್ತು. ಕನ್ನಡನಾಡಲ್ಲೇ ಹುಟ್ಟಿ ಬೆಳೆದ ಕನ್ನಡಿಗರ ಮಾತೃಭಾಷಾ ಪ್ರೇಮದ ಬಗ್ಗೆ ....'ಏನನಿಸಿರಬಹುದು'?! ನೀವೇ ಯೋಚಿಸಿ.

ರಾಜ್ಯದ ರಾಜಧಾನಿ ಬೆಂಗಳೂರು. ಆದರೆ ಬೆಂಗಳೂರಿನಲ್ಲ ಒಂದಷ್ಟು ಹೊತ್ತು ಕಣ್ಣು-ಕಿವಿ ತೆರೆದುಕೊಂಡು ಸುತ್ತಲಿನ ಪರಿಸರದತ್ತ ಅವಲೋಕಿಸಿದರೆ ನಾವು ರಾಜ್ಯದ ರಾಜಧಾನಿಯಲ್ಲೇ ಇದ್ದೇವಾ? ಎಂಬ ಅನುಮಾನ ಬಂದುಬಿಡುತ್ತದೆ. ತಮಿಳು, ಮಲೆಯಾಳಂ, ತೆಲುಗು, ಇಂಗ್ಲೀಷ್ ನಡುವೆ ನಮ್ಮ ಕನ್ನಡ ಬಸವಳಿದಿದೆ. ಕನ್ನಡಕ್ಕಾಗಿ ಬೊಬ್ಬಿಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘಟನೆಗಳು, ಕನ್ನಡ ರಕ್ಷಣಾ ವೇದಿಕೆ..ಯಾವುದಿದ್ದರೂ ಕನ್ನಡಾಂಬೆ ನಿತ್ಯ ನರಳುತ್ತಿದ್ದಾಳೆ. ಕನ್ನಡ ಉಳಿಸಿ ಎಂದು ಬೊಬ್ಬಿಡುವ ಕನ್ನಡ ಪ್ರೇಮಿಗಳ ನಡುವೆ ಸುಜಾತರಂಥವರು 'ಕನ್ನಡ ಬೆಳಗುವ ಪುಟ್ಟ ಹಣತೆಯಂತೆ'!
ಕನ್ನಡ ನೆಲದಲ್ಲಿಯೇ ಹುಟ್ಟಿ ಬೆಳೆದು ಕನಿಷ್ಠ ಭಾಷಾಭಿಮಾನವನ್ನೂ ಬೆಳೆಸಿಕೊಳ್ಳದೆ, ಪರ ಭಾಷೆಗಳತ್ತ ಮುಖ ಮಾಡಿರುವ ನಾವು-ನೀವೆಲ್ಲರೂ 'ಸುಜಾತ' ಅವರಂಥವರನ್ನು ಕಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಏನಂತೀರಿ?Friday, November 16, 2007

ಪುರುಷರಿಗೂ 'ದಿನ' ಬಂದಿದೆ..?!

ಮಕ್ಕಳ ದಿನ, ವೃದ್ಧರ ದಿನ,ಯುವಕರ ದಿನ, ಮಹಿಳೆಯರ ದಿನ..ಹೀಗೆ ತುಂಬಾ ದಿನಗಳ ಬಗ್ಗೆ ಕೇಳಿದ್ದೇವೆ. ಪುರುಷರ ದಿನ?! ಎಂದಾದ್ದರೂ ಕೇಳಿದ್ದೀರಾ? ಹಾಗಂದ್ರೆ ಈಗ ಕೇಳಿ. ನವೆಂಬರ್ 19ರಂದು ಪುರುಷರ ದಿನವಂತೆ! ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ (ಎಸ್ ಐ ಎಫ್ ಎಫ್) ಈ ನವೆಂಬರ್ 19ನ್ನು ಅಂತರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಪುರುಷರ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಸಂಸ್ಥೆ ಪುರುಷರ ದಿನ ಆಚರಿಸಲು ಮುಂದೆ ಬಂದಿದೆಯಂತೆ.
ಕಳೆದ ಆರು ತಿಂಗಳ ಹಿಂದೆ ಪ್ರೆಸ್ ಕ್ಲಬ್ನಲ್ಲೊಂದು ಪತ್ರಿಕಾಗೋಷ್ಠಿ ಇತ್ತು. ಅದು ಪುರುಷರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಎನ್ ಜಿ ಒ ವೊಂದು ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ವಿಷ್ಯ ಏನೆಂದ್ರೆ ಅದು ಬರೇ ಪುರುಷರ ಮೇಲಾಗುತ್ತಿರುವ ದೌರ್ಜನ್ಯದ ಬಗೆಗಿನ ಪತ್ರಿಕಾಗೋಷ್ಠಿ ಅಲ್ಲ. ಮಹಿಳೆಯರು ಪುರುಷರ ಮೇಲೇ ಮಾಡುತ್ತಿರುವ ದೌರ್ಜನ್ಯ!! ಪತ್ರಿಕಾಗೋಷ್ಟಿ ಮಾಡಿದವರ ಮಾತು ಹೀಗೆ ಸಾಗಿತ್ತು...
"ಮಹಿಳೆಯರನ್ನು ಪುರುಷರು ಶೋಷಣೆ ಮಾಡುತ್ತಿಲ್ಲ..ಮಹಿಳೆಯರೇ ಪುರುಷರ ಶೋಷಣೆ ಮಾಡುತ್ತಿದ್ದಾರೆ..ಗಂಡ ಹೆಂಡತಿಗೆ ಹೊಡೆದ್ರೆ ಶಿಕ್ಷೆಯಿದೆ, ಆದ್ರೆ ಹೆಂಡತಿಯೇ ಗಂಡನನ್ನು ಮನೆಯಿಂದ ಹೊರಗೆ ಹಾಕಿದ್ರೂ ಅವಳಿಗೆ ಯಾವ ಶಿಕ್ಷೆನೂ ಇಲ್ಲ...ಪುರುಷನೋರ್ವ ಮಹಿಳೆಗೆ ಏನ್ ಮಾಡಿದ್ರೂ ತಪ್ಪೇ..ವಿಚ್ಚೇದಿತ ಪತ್ನಿಗೆ ಗಂಡ ಹಣ ನೀಡ್ಬೇಕು..ಹೆಂಡತಿ ಏನೇ ಮಾಡಿದ್ರೂ ಗಂಡನ ಮೇಲೆ ಅನುಮಾನ..ಹಾಗಾದ್ರೆ ನಮ್ ಯಾವ ಸಮಸ್ಯೆಗೂ ಪರಿಹಾರ ಇಲ್ವೇ?ನಾವು ಹೆಂಡತೀನ ಸಾಕ್ತೀವಿ..ಅಪ್ಪ-ಅಮ್ಮನ ನೋಡಿಕೊಳ್ತಿವಿ..ಇಂದು ಗಂಡಸರು ಆತ್ಮಹತ್ಯೆ ಮಾಡಿಕೊಳ್ಳೋಕೆ ಹೆಂಗಸರೇ ಕಾರಣ...ನಮಗೂ ಒಂದು ಕಾಯ್ದೆ ಬೇಕು..ಇದರಡಿಯಲ್ಲಿ ಹೆಂಗಸರಿಗೂ ಶಿಕ್ಷೆ ನೀಡಬೇಕು....ಮಹಿಳಾ ದಿನದಂತೆ ನಮಗೂ ಒಂದು ದಿನ ಬೇಕು..ನಮ್ ಸಮಸ್ಯೆಗಳನೂ ಸರ್ಕಾರ ಅರ್ಥಮಾಡಿಕೋಬೇಕು....." ಹೀಗೆ ಅರ್ಧ ಗಂಟೆ ಇದನ್ನೇ ಕೊರೆದ ಆ ಮನುಷ್ಯ..ಮತ್ತೆ ಪತ್ರಕರ್ತರಿಗೆ ಪ್ರಶ್ನೆ ಕೇಳೋಕೂ ಅಲ್ಲಿ ಸಮಯವೂ ಉಳಿಯಲಿಲ್ಲ.
ಬಹುಶಃ ಈ ಪುರುಷರ ದಿನದಿಂದ ಪುರುಷರ ಬಹುತೇಕ ಬೇಡಿಕೆಗಳು ಈಡೇರಬಹುದೆಂದು ನನ್ ಊಹೆ. ಇನ್ ಮುಂದೆ ವಿಚ್ಚೇದಿತ ಪತಿಗೂ ಹೆಂಡತಿಯಿಂದ ಪರಿಹಾರದ ದೊರೆಯಬಹುದೇನೋ? ಎಸ್ ಐ ಎಫ್ ಎಫ್ ನವೆಂಬರ್ 19ರಂದು ಪುರುಷರ ಸಮಸ್ಯೆಗಳ ಕುರಿತು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಮನವಿ ಸಲ್ಲಿಸಲಿದೆಯಂತೆ. ಇಷ್ಟು ಮಾತ್ರವಲ್ಲ ಈ ಸಂಘಟನೆ ಸಾಫ್ಟ್ ವೇರ್ ಉದ್ಯೋಗಿಗಳಿಗೆ ವಿಶೇಷ ಕೊಡುಗೆ ನೀಡಿದೆಯಂತೆ. ಅದೇನಂದರೆ ಇವ್ರು ಐನಾಕ್ಸ್ ಮತ್ತು ಪಿವಿಆರ್ ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಿಸಲು ಟಿಕೇಟ್ ನೀಡಿದ್ದಾರಂತೆ..ಸಿನಿಮಾ ನೋಡುವವರು ಬಿಳಿ ಉಡುಪಿನಲ್ಲೇ ಸಿನಿಮಾ ಟಾಕೀಸಿಗೆ ಹೋಗಿ ಸಿನಿಮಾ ನೋಡ್ಕೊಂಡು ಬರ್ಬೇಕಂತೆ..ಇದು ನಿಯಮ!!
ಅದಿರಲಿ ಈ ಎಸ್ ಐ ಎಫ್ ಎಫ್ ನಿರ್ಧಾರ ಒಳ್ಳೆಯದೇ. ಆದ್ರೆ ದುಡ್ಡಿನ ಮೇಲೆ ಮಲಗೋ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಮಾತ್ರ ಮಲ್ಟಿಫ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ ಸಿನಿಮಾ ವೀಕ್ಷಣೆಗೆ ಟಿಕೇಟ್ ಹಂಚುವ ಈ ಸಂಘಟನೆಗೆ ಬಡ ಕೂಲಿಕಾರ್ಮಿಕರು, ದಿನಾ ದುಡಿದಿದ್ದನ್ನು ಕುಡಿದು ಮನೆಗೆ ಬಂದಾಗ ಹಂಡತಿಯಿಂದಲೇ ಹೊರಗೆ ದಬ್ಬಲ್ಪಟ್ಟ 'ಗಂಡಸರು' ಕಣ್ಣಿಗೆ ಬಿದ್ದಿಲ್ಲವೇ? ಹಾಗಾದ್ರೆ ಪುರುಷರ ದಿನವನ್ನು ಶೋಕಿಗಾಗಿ ಆಚರಿಸಿ, ಮಹಿಳೆಯರ ಮೇಲೆ ಗೂಬೆ ಕೂರಿಸುವ ಪ್ರಯತ್ನವೇ? ಐಟಿ ಉದ್ಯೋಗಿಗಳಿಗೆ ಟಿಕೇಟ್ ಹಂಚಿ ಅವ್ರು ಸಿನಿಮಾ ನೋಡಿದ್ರೆ ಪುರುಷರ ಸಮಸ್ಯೆಗಳು ಪರಿಹಾರವಾಗುವುದೇ? ಅಥವ 'ಕೆಲವರಿಗೆ' ಮಾತ್ರ ಸೀಮಿತ ಎಂದಾಯ್ತು..ರಾಜ್ಯಪಾಲರಿಗೆ ಸಮಸ್ಯೆಗಳ ಪಟ್ಟಿ ನೀಡಿ..ಕೈಗೆ ಸಿಕ್ಕಿದ್ದನ್ನು ಬಾಚಿಕೊಳ್ಳುವ ಯತ್ನವೇ? ಏನೆನ್ನಬೇಕು ಇದಕ್ಕೆ. ಪುರುಷರಿಗೆ ಸಮಸ್ಯೆಗಳು ಇಲ್ಲವೆಂದಲ್ಲ. ಹೆಂಡತಿ ಕಾಟದಿಂದ ಗಂಡ ರೋಸಿಹೋಗಿರಬಹುದು..ಹೆಂಡತಿ ಕೈಕೊಟ್ಟ ಮೇಲೆ ಹೊಟ್ಟೆ ತುಂಬಾ ವಿಸ್ಕಿ, ಬೀರ್ ಕುಡಿದು..ರಸ್ತೆಯನ್ನೇ 'ಹಾಸಿಗೆ'ಯನ್ನಾಗಿ ಮಾಡಿಕೊಂಡ ಪುರುಷರಿರಬಹುದು..ಅಥವ ಪ್ರೀತಿಸಿದ ಹುಡುಗೀನ ಬಿಟ್ಬಿಟ್ಟು ಯಾರ್ಯಾರ ಹಿಂದೆಬಿದ್ದು..ಬದುಕನ್ನೇ 'ರಕ್ತಕಣ್ಣೀರು' ಮಾಡಿದ ಪುರುಷರಿರಬಹುದು..ಇದೆಲ್ಲಾ ಸಮಸ್ಯೆನೇ..ಈ ಸಮಸ್ಯೆಗಳಿಗೆ ಪರಿಹಾರ ಬೇಕೇ ಬೇಕು..ಆದ್ರೆ ಸಿನಿಮಾ ನೋಡಿ ಪುರುಷರ ದಿನವನ್ನು ಆಚರಿಸಿಕೊಳ್ಳುವುದರಲ್ಲಿ ಅರ್ಥವಿದೆಯೇ? ಅಥವ ಪುರುಷರಿಗೆ ಸಿನಿಮಾ ನೋಡೋದ್ರಲ್ಲಿ ಏನಾದ್ರೂ ಸಮಸ್ಯೆಯಿದೆಯೇ? ನೀವೇ ಹೇಳಿ..

ಕತ್ತಲು-ಬೆಳಕು

"ದಯವಿಟ್ಟು ದೀಪವಾರಿಸು ಗೆಳೆಯಾ, ನನಗೆ ಬೆಳಕು ಬೇಕಿದೆ.." 'ತಾವೋ' ಮಾತು ನೆನಪಾಗುತ್ತಿದೆ..ನಿತ್ಯ ಜಗದ ಸತ್ಯವನ್ನು ಕವಿಯು ಕೇವಲ ಒಂದೇ ಒಂದು ಸಾಲಿನಲ್ಲಿ ಹೇಳಿದ ಪರಿ ಅದೆಷ್ಟು ಚೆನ್ನ ಅನಿಸಲ್ವಾ? ಬದುಕಿನುದ್ದಕ್ಕೂ ಬೆಳಕಿಗಾಗಿ ಪರದಾಡುವ ನಾವು, ಕತ್ತಲೆಯ ನಡುವೆಯೇ ಬೆಳಕಿನ ಹುಡುಕಾಡದಲ್ಲಿರುವ ಈ ಕವಿ..ನಮಗೂ-ಅವಂಗೂ ಎಷ್ಟೊಂದು ವ್ಯತ್ಯಾಸ? ಕತ್ತಲಿದ್ದರೆನೇ ಬೆಳಕಿನರಿವು ಅಲ್ವೆ?

Thursday, November 15, 2007

ನನ್ನ ಕಣ್ಣೀರಿಗೆ ಕರ್ಚಿಫ್ ಆಗೋ..


ಪ್ರೀತಿಯ ಸ್ವೆಟರ್,
ಬದುಕು ಏನಾದರೂ,ಬಲುದೂರ ಹೋದರೂ..
ಬರಲಾರದಿಂತ ನೂರೊಂದು ನೆನಪು..
ಏನೆಲ್ಲಾ ಮರೆತರೂ ಯಾರೊಡನೆ ಬೆರೆತರೂ..
ಮರುಕಳಿಸುತಿಹುದು ನೂರೊಂದು ನೆನಪು..
ಯಾಕೋ ಗೊತ್ತಿಲ್ಲ ಕಣೇ.ಕಳೆದ ಎರಡು ದಿನದಿಂದ ನೀನು ತುಂಬಾ ನೆನಪಾಗುತ್ತಿ ಕಣೇ. ಅದೆಷ್ಟೋ ವರ್ಷದಿಂದ ನಿನ್ ನೆನಪಾಗದ ನನಗೆ ಬೆಂಗಳೂರಲ್ಲಿ ತೀರ ನಿನ್ ನೆನಪು ಕಾಡುತ್ತೆ ಕಣೇ. ನೀನಿಲ್ಲದೆ ನಾನು ಸತ್ತೇ ಹೋಗ್ತೀನಿ ಅನಿಸುತ್ತೆ. ಸಂಜೆಯ ಹೊತ್ತು ಸೂರ್ಯ ಪಡುವಣದಲ್ಲಿ ಮುಳುಗಲಾರಂಭಿಸಿದಂತೆ, ನಾನ್ ಆಫಿಸಲ್ಲಿ ಕುಳಿತುಕೊಂಡು ನಿನ್ ನೆನಪು ಮಾಡ್ಕೋತೇನೆ ಗೊತ್ತಾ? ಪಟಪಟನೆ ಅದೇನನ್ನೋ ಕೀ ಮಾಡುತ್ತಿದ್ದ ನನ್ ಕೈ ತಟ್ಟನೆ ನಿಂತು ಬಿಡುತ್ತೆ. ನಿನ್ ನೆನಪೇ ತಲೆತುಂಬಾ. ನಿನ್ ಬಂದು ನನ್ ತಬ್ಬಿಕೊಂಡ್ರೆ..ಅದೆಷ್ಟು ಖುಷಿ ಅನಿಸುತ್ತೆ. ಸದಾ ನಿನ್ ಜೊತೆ ನಾನು, ನನ್ ಜೊತೆ ನೀನ್ ಇರ್ಬೇಕು ಅನಿಸುತ್ತೆ. ಮತ್ತೆ ಬೆಳಿಗ್ಗೆ ಕೇಳೋದೇ ಬೇಡ..ಕುಂತ್ರೆ ನಿಂತ್ರೆ ನಿನ್ನದೇ ಧ್ಯಾನ..ಜೀವಕ್ಕಿಲ್ಲ ಸಮಾಧಾನ.. ಸೂರ್ಯ ನೆತ್ತಿಗೇರಿದ್ರೂ ನಿನ್ನದೇ ನೆನಪಲ್ಲಿ ತೆಪ್ಪಗೆ ಮಲಗಿಬಿಡ್ತೀನಿ.
ನಂಗೆ ನೀನ್ ಬೇಕು, ನಿನ್ ಪ್ರೀತಿ ಬೇಕು..ನಿನ್ ನಾ ತುಂಬಾ ಪ್ರೀತಿ ಮಾಡ್ತೀನಿ ಕಣೇ.ನಿನಗಾಗಿ ನನ್ ಹೃದಯದಲ್ಲಿ ಮೊಗೆದಷ್ಟು ಬತ್ತದ ಪ್ರೀತಿ ಇದೆ ಕಣೇ..ಇದು ಸುಳ್ಳಲ್ಲ ಕಣೇ..ನನ್ ಪಕ್ಕ ಮಲಗೋ ಚಿಂಟು ಆಣೆಗೂ ನಾನು ಹೇಳುತ್ತಿರೋದು ಸತ್ಯ ಕಣೇ.ನಿದ್ರೆಯಲ್ಲೂ ನಿನ್ದೇ ನೆನಪು..ರಾತ್ರಿಯೆಲ್ಲಾ ಕನವರಿಸ್ತೇನೆ ಅಂತೆ...
ಮೊನ್ನೆ ಒಂದು ತಮಾಷೆ ಆಯ್ತು ಗೊತ್ತಾ? ನೀನು ಅಂತ ತಿಳ್ಕೊಂಡು ನಾನು ಚೀಂಟುನ ಅಪ್ಪಿಕೊಂಡಿದ್ದೆ ಅಂತೆ. ಅವಳು ಕೊಸರಾಡಿದಾಗ್ಲೇ ಗೊತ್ತು ಅದು ನೀನಲ್ಲ ಎಂದು. ಚಿಂಟು ಅದೆಷ್ಟು ಬೈದ್ಲು ಗೊತ್ತಾ? ಏನೆಲ್ಲಾ ಬೇಡದ ಭಾಷೇಲಿ ಬೈದ್ಲು. ಆ ದಿನದಿಂದ ನಂಗೆ ಫುಲ್ ಟೆನ್ಶನ್ ಕಣೇ..ಊಟವಿಲ್ಲ, ತಿಂಡಿಯಿಲ್ಲ...ಹೊಟ್ಟೆ ಪೂರ ಖಾಲಿ ಖಾಲಿ..ಇದೆಲ್ಲಾ ನಿನಗಾಗಿ..ಎದೆತುಂಬಾ ನಿನ್ನದೇ ಕನಸು..ನಿನ್ನದೇ ಮನಸ್ಸು..
ನೂರೋದು ನೆನಪು ಎದೆಯಾಳದಿಂದ..
ಹಾಡಾಗಿ ಬಂತು ಆನಂದದಿಂದ..
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದೂ ಇರಲಮ್ಮ ಈ ದಿವ್ಯ ಬಂಧ..
ನನ್ ಪತ್ರ ನೋಡಿಯಾದ್ರೂ ನನ್ ಮೇಲೆ ಕನಿಕರ ತೋರಿಸೋ..ಹೌದು! ನಾನ್ ಒಬ್ಬ ಮೀಸೆಯಿರುವ ಹುಡ್ಗ..ನಂಗೂ ಹೃದಯವಿದೆ..ನನ್ ಹೃದಯನೂ ಅಳುತ್ತೆ...ದಿನಾ ನಿನಗಾಗಿ ಹಂಬಲಿಸುತ್ತೆ..ಕಲ್ಲಂತೆ ನಿಂತು ಕಣ್ನೀರು ಹಾಕ್ತೀನಿ..ನಿನ್ ಥರ ಗಳಗಳನೆ ಅಳೋಕೆ ಬರಲ್ಲ..ಸುಮ್ನೆ ಸುಮ್ನೆ ಸತಾಯಿಸೋಕೆ ಬರಲ್ಲ..ನಾನೇನಾದ್ರೂ ನೇರ ಮನಸ್ಸಿನವ..ನಿಂಗೆ ಕೆಂಡದಂಥ ಕೋಪ ಬಂದ್ರೂ ಪರರ್ವಾಗಿಲ್ಲ..ಇದ್ದದ್ದನ್ನು ಇದ್ದ ಹಾಗೆ ಹೇಳೋನು..ಈಗ್ಲಾದ್ರೂ ನಿನ್ ಮನಸ್ಸು ಕರಗಬಹುದು..ನನ್ ಅಳು ನೋಡಿ ನೀ ಬಂಡೆಗಲ್ಲಾಗಬೇಡ..ನನ್ ಅರ್ಥಮಾಡ್ಕೋ..ಈ ಬೆಂಗಳೂರಲ್ಲಿ ನೀನಿಲ್ಲದೆ ನಾನಿಲ್ಲ..ನೀನಿದ್ದರೆ ನಾನು ಎಲ್ಲಾ.. ನನ್ ನೋಡಿ ಒಂಚೂರು ಪ್ರೀತಿ ತೋರಿಸು ಕಣೇ..ನಂಗೊತ್ತು ನಿನ್ ಅಪ್ಪ-ಅಮ್ಮನಿಗೆ ನೀನ್ ಹೆದರುತ್ತಿ ಅಂತ...ಆದ್ರೂ ಎಟ್ಲೀಸ್ಟ್ ಮೂರು-ನಾಲ್ಕು ತಿಂಗಳಾದ್ರೂ ನನ್ ಜೊತೆ ಇರ್ತೀಯಾ..ನನ್ ಕಣ್ಣೀರ ಒರೆಸೋ ಸಣ್ಣ ಕರ್ಚಿಫ್ ಆಗ್ತೀಯಾ? ಇಷ್ಟೆಲ್ಲಾ ಹೇಳಿದ್ದು ನಿನ್ ಮೇಲಿನ ನಂಬಿಕೆಯಿಂದ. ನೀನ್ ಯಾವಾಗ ಬರ್ತೀಯಾ? ಎಂದು ಬೊಗಸೆತುಂಬಾ ಪ್ರೀತಿ ತುಂಬಿ ಕಾಯ್ತಾ ಇದ್ದೀನಿ.. ನಿನ್ ನೆನಪಾದ ಮೇಲೆ ಊಟ, ನಿದ್ದೆ, ಕೆಲ್ಸ ಯಾವುದೂ ಇಲ್ಲ..ಮುಖ ತುಂಬಾ ಮುತ್ತಿಕೊಂಡಿರುವ ಗಡ್ಡನೂ ತೆಗೆದಿಲ್ಲ...
ಓ ಸ್ವೆಟರ್ರು..
ನಿನ್ನ ಪ್ರೀತಿ ಮಳೆಯಲಿ ತೊಯ್ದ ಮುಗಿಲು ನಾನಾಗಬೇಕು..
ಮುಗಿಲ ಮಳೆಯಲಿ ಮಿನುಗುವ ಚಿನ್ನದ ಚುಕ್ಕಿ ನೀನಾಗಬೇಕು..
ನಿನ್ನದೇ ನೆನಪಲ್ಲಿ,
ಮೋನು.

ಕಸ ಬಿಸಾಡಿದ್ರೂ ದಂಡ?!

ಬೆಂಗಳೂರಿನಲ್ಲಿರುವ ನಮ್ಮ ಮಂತ್ರಿಗಳೇ ಹೀಗೆ. ಮೊದಲ ಬಾರಿ ಅಧಿಕಾರ ಗದ್ದುಗೇರಿ, ತನ್ನ ಕಾರ್ಯಕ್ರಮಗಳಿಗೆ ಶುರುವಿಟ್ಟಾಗ ಟ್ರಾಫಿಕ್ ಜಾಮ್, ಕಸದ ರಾಶಿ ನೋಡಿ ನೋಡಿ ಸುಸ್ತಾಗಿ ವೇದಿಕೆಯಲ್ಲಿ ನಿಂತು ಏನ್ ಭಾಷಣ ಬಿಗೀತಾರೆ ಗೊತ್ತೇ? 'ಒಂದೇ ವರ್ಷದಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡ್ತೇನೆ'!! ಇದು ಬೆಂಗಳೂರಿನ ಜನತೆಗೆ ಮಂತ್ರಿಗಳು ನೀಡುವ ಮೊದಲ ಆಶಯ. ಅವ್ರು ಸಿಂಗಾಪುರ ಹೇಗಿದೆ ಎಂದು ಸ್ವತಃ ಕಣ್ಣಾರೆ ನೋಡಿದ್ದರೋ ಇಲ್ವೋ(ಪೋಟೋ ಆದ್ರೂ ನೋಡಿರ್ತಾರೆ) ಅದು ಬೇರೆ ವಿಷಯ. ಅಂತೂ-ಇಂತೂ ರಾಶಿ ರಾಶಿ ಕಸ, ರಸ್ತೆ ಬದೀಲಿ ಉಯ್ದ ಮೂತ್ರದ ಅಸಹ್ಯ ವಾಸನೆ ಮೂಗಿಗೆ ಬಡಿದಾಗ ಈ ರೀತಿ ಹೇಳದೆ ಬೇರೆ ದಾರಿಯೇ ಇಲ್ಲ.

ಇಂಥಹ ಮಾತುಗಳನ್ನು ಬೆಂಗಳೂರಿಗರು ಕೇಳಿ ಕೇಳಿ ರೋಸಿಹೋಗಿದ್ದಾರೆ. ಇದೀಗ ಬಿಬಿಎಂಪಿ ಕೂಡ ಇಂಥದ್ದೇ ಒಂದು ಆದೇಶ ಹೊರಡಿಸಿದೆ. ನಗರದ ಯಾವುದೇ ಸ್ಥಳದಲ್ಲಿ ಕಸ ಬಿಸಾಕಿದ್ರೆ...?? .."ದಂಡ"!!! 100ರಿಂದ 5000ದ ತನಕ ಭರ್ಜರಿ ದಂಡ. ಕಿಸೆಯಲ್ಲಿ ಸುಲಭ್ ಶೌಚಾಲಯಕ್ಕೆ ಹೋಗಲು ಒಂದು ರೂಪಾಯಿನೂ ಇಲ್ಲದೆ ಪರದಾಡುವವನು ರಸ್ತೆ ಬದೀಲಿರುವ ಕೌಂಪೌಂಡುಗೆ ಮೂತ್ರ ಮಾಡಿದ್ರೆ ಅವ್ನ ಗತಿಯೇನೋ? ದೇವ್ರೆ ಬಲ್ಲ. ಪಾಪ! ದಿನ ಗಾಡಿಯಲ್ಲಿ ಕಸ ತುಂಬಿಸಿ ತುಂಬಿಸಿ ಸುಸ್ತಾಗಿ, ಈ ರೀತಿ ಆದೇಶಿಸಿದೆ. ಇದು ಒಳ್ಳೆಯದೇ. ಆದ್ರೆ ಎಷ್ಟರಮಟ್ಟಿಗೆ ಇದು ಸಾಧ್ಯವಾಗಬಹುದು? ಎಂಬುದೇ ದೊಡ್ಡ ಪ್ರಶ್ನೆ.

ಇದು ದೇಶದಲ್ಲೇ ಮೊದಲ ಕ್ರಮವಂತೆ. ರಸ್ತೆ ಬದೀಲಿ ಕಸ ಹಾಕುವವರು, ಮೂತ್ರ ಮಾಡೋರನ್ನು ಕಸ ಪರಿವೀಕ್ಷಕರ ತಂಡ ಪೋಟೋ ತೆಗೆಯುತ್ತಾರಂತೆ. ಆ ಮೂಲಕ ತಪ್ಪಿತಸ್ಥನಿಗೆ ದಂಡ ಶಿಕ್ಷೆ ವಿಧಿಸೋದು ಎಂದು ಬಿಬಿಎಂಪಿ ಆಯುಕ್ತ ಎಸ್. ಸುಬ್ರಹ್ಮಣ್ಯ ಅವರ ಐಡಿಯಾ. ಅಮೇರಿಕ, ಲಂಡನ್ಗಳಲ್ಲಿ ಈ ವ್ಯವಸ್ಥೆ ಇದೆ. ಇದನ್ನು ಬೆಂಗಳೂರಿನಲ್ಲಿಯೂ ಸಮರ್ಪಕವಾಗಿ ಜಾರಿಗೊಳಿಸಲಾಗುವುದು, ಕಸ ಪರಿವೀಕ್ಷಕರು ದಿನದ 24 ಗಂಟೆನೂ ಸ್ವಚ್ಚತೆಯ ಕಾಳಜಿ ವಹಿಸಲಿದ್ದಾರೆಂಬುವುದು ಆಯುಕ್ತರು ಗಟ್ಟಿ ಭರವಸೆಯ ಮಾತುಗಳನ್ನೇ ಆಡಿದ್ದಾರೆ. ನಿರೀಕ್ಷೆಯಂತೆ ನಡೆದ್ದಲ್ಲಿ ಅದರಷ್ಟು ಒಳ್ಳೆಯ ಕಾರ್ಯ ಬೇರೊಂದಿರದು.

ಬೆಂಗಳೂರಿನಲ್ಲಿ ಪ್ರತಿದಿನ ಎಷ್ಟು ಕಸ ಉತ್ಪತ್ತಿ ಆಗುತ್ತೆ ಗೊತ್ತೆ? ಬರೋಬ್ಬರಿ 2,200 ಮೆಟ್ರಿಕ್ ಟನ್!!! ಇಷ್ಟು ಮಾತ್ರವಲ್ಲ ಕಾರ್ಖಾನೆ, ಕಟ್ಟಡಗಳ ಅವಶೇಷ ಎಲ್ಲವೂ ರಸ್ತೆ ಬದೀಲಿ ಇರುವ ಚರಂಡಿಗೆ. ಜನರಿಗೆ ಕಸ ಹಾಕೋಕೆ, ಉಗುಳೋಕೆ, ಮೂತ್ರ ಮಾಡೋಕೆ..ಎಲ್ಲಾ ಪುಟ್ಪಾತೇ ತಾಣ.

ಇನ್ನೊಂದು ವಿಷ್ಯ ಅಂದ್ರೆ ಈವರೆಗೆ ಇಂಥಹ ಬಹಳಷ್ಟು ಭರವಸೆಯ ಮಾತುಗಳನ್ನು ಕೇಳಿಯಾಗಿದೆ. ಕಳೆದ ವರ್ಷ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಅಂಗಡಿ-ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲೇ ಇರಬೇಕೆಂದು ಆದೇಶ ಹೊರಡಿಸಿತ್ತು. ಕೆಲವೊಂದು ಇಂಗ್ಲೀಷ್ ಅಂಗಡಿಗಳನ್ನು ಮುಚ್ಚುವಂತೆಯೂ ಆದೇಶಿಸಲಾಯ್ತು. ಪತ್ರಿಕೆಗಳ ಮುಖಪುಟ ತುಂಬಾ ಸುದ್ದೀನೂ ಆಯ್ತು. ಅದೇ ರೀತಿ ಎಫ್ಎಂ ರೈನ್ಬೋದಲ್ಲಿ ಕನ್ನಡ ಕಡ್ಡಾಯ ಬಳಸಬೇಕೆಂದು ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಬಡಬಡಿಸಿಕೊಂಡ್ರು...ತುಂಬಾ ದಿನ. ಆಮೇಲೆ ಮೆಲ್ಲನೆ ತಣ್ಣಗಾದ್ರು..ಯೋಜನೆ, ಭರಸೆಗಳು ಮರೆತೇ ಹೋದವು..ಕಡ್ಡಾಯವೆಲ್ಲಾ ಸಡಿಲಗೊಂಡವು..ಜನರು ಮತ್ತೇ ಅದೇ ರಾಗ, ಅದೇ ಹಾಡು ಎಂಬಂತೆ ಮತ್ತೆ ತಮ್ಮ ಹಳೆ ಚಾಳಿಯನ್ನೇ ಮುಂದುವರೆಸಿದ್ರು..

ಇಂಥ ಬೇಕಾದಷ್ಟು ನಿದರ್ಶನಗಳಿವೆ...ಅಂತೆಯೇ ಬಿಬಿಎಂಪಿಯ ಯೋಜನೆಗಳು ಆದವೇ? ಎಂಬ ಸಂಶಯ ನಮಗೆಲ್ಲಾ. ಯಾಕೆಂದ್ರೆ ಈವರೆಗೆ ಆಗಿದ್ದು ಅದೇ. ಆದ್ರೀಂದ ಜನರ್ರು ನಂಬ್ಕೆ ಕಳಕೊಂಡಿದ್ದಾರೆ. ಸಿಂಗಾಪುರ ಮಾಡ್ತಾನೆಂದವನ್ನು ಅವ್ನ ಮನೆಗೆ ಹೋಗುವ ದಾರಿಗೆ ಡಾಂಬರು ಹಾಕಿಸ್ತಾನೆ, ಅದೇ ರಸ್ತೆ ಬದೀಲಿ ಗಾರ್ಡನ್ ಮಾಡಿಸ್ತಾನೆ..ಆದ್ರೆ ನಿತ್ಯ ನಾವು ನಡೆಯೋ ದಾರಿಯಲ್ಲಿ ಕಲ್ಲು-ಮಣ್ಣು ಹಾಕ್ಸಿ ಗುಂಡಿ ಮುಚ್ಚೋ ಕೆಲ್ಸ ಯಾವ ನಾಯಕನೂ ಮಾಡಲ್ಲ. ಆ ದಾರಿಯಾಗಿ ಮತ್ತೆಂದೂ ಅವ್ನು ಬರಲ್ಲ. ಜನರು ಮಾತ್ರ ಅದೇ ಕೊಳೆತು ನಾರುವ ಕಸದ ರಾಶೀಲಿ ಮೂಗು-ಬಾಯಿ ಮಚ್ಚುಕೊಂಡು ನಡೆದುಹೋಗಬೇಕು...ಮತ್ತೆ ನಂಬೋದು ಹೇಗೆ?

ಇರ್ಲಿ ಬಿಡಿ..ಆಯುಕ್ತರ ಭರವಸೆ ಈಡೇರಿದ್ದರೆ, ಬೆಂಗಳೂರಿನ ಸಮಸ್ತ ನಾಗರಿಕರ ಆಸೆ ಈಡೇರಿದಂತೆ.. ಇದು ಈಡೇರಲಿ ಎಂದು ಹಾರೈಸೋಣ. ಆದ್ರೆ ಕಸ ಹಾಕೋವರನ್ನು, ಉಗುಳೋರನ್ನಾದರೂ ಕಂಡುಹಿಡೀಬಹುದು. ಆದ್ರೆ ಗೋಡೆಗೆ ಮುಖ ಮಾಡಿ ಮೂತ್ರ ಮಾಡೋವರನ್ನ ಹೆಂಗೆ ಕಂಡುಹಿಡೀತಾರೋ..?!


ದೇಶಿ ವಿಮಾನದಲ್ಲಿ 'ಕಿಂಗ್ಫಿಶರ್'?!

ವಿಮಾನದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಿದ್ರೆ?! ವಾಹ್! ಪ್ರಯಾಣ ಸೂಪರ್ಬ್ ಅನ್ತಾರೆ ಕೆಲವರು ಅಲ್ವಾ? ವಿಮಾನದಲ್ಲಿ ಪ್ರಯಾಣಿಸುವಾಗ ಪಬ್, ಡ್ಯಾನ್ಸ್ ಬಾರ್ ಎಂದಾಗ ಕೆಲವರಿಗಂತೂ ಬಾಯಲ್ಲಿ ನೀರೂರಬಹುದು. ಹೌದು! ನಮ್ಮ ಕೇಂದ್ರ ಸರ್ಕಾರ ದೇಶಿ ವಿಮಾನದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡುವ ಕುರಿತು ಚಿಂತನೆ ಮಾಡುತ್ತಿದೆ ಎಂಬುವುದು ಸುದ್ದಿ.

ಅಲ್ರೀ ನಮ್ ಸರ್ಕಾರಕ್ಕೆ ಇಂಥದ್ದೆಲ್ಲಾ ಬೇಗನೆ ತಲೆಗೆ ಹೊಳೆಯುತ್ತೆ. ಆದ್ರೆ ನಮ್ ದೇಶದ ಬಡಜನರ ಅಭಿವೃದ್ಧಿಯ ಬಗ್ಗೆ ನೆನಪಾಗುತ್ತಾ? ಬಡತನ, ನಿರುದ್ಯೋಗ ಅಥವ ಇನ್ನಿತರ ಯಾವುದೇ ಸಮಸ್ಯೆಗಳಿರಲಿ ನಮ್ಮ ಸರ್ಕಾರ, ರಾಜಕಾರಣಿಗಳಿಗೆ ನೆನಪಾಗುವುದು ಭಾಷಣ ಮಾಡುವಾಗ ಮಾತ್ರ. ದೇಶದ ಸಮಸ್ಯೆಗಳು ನಮ್ ರಾಜಕಾರಣಿಗಳ ಭಾಷಣಕ್ಕೆ ಮಾತ್ರ ಭೂಷಣ. 'ಬಾರ್ 'ನಡೆಸುವ ಬದಲು ಅದೇ ಹಣವನ್ನು ದೇಶದ ಉದ್ಧಾರಕ್ಕೆ ಬಳಸಿದ್ರೆ? ರೈಲು, ಬಸ್ಸುಗಳಲ್ಲಿ ಕುಡಿದು ಪ್ರಯಾಣಿಸಿದವ್ರು ಏನೆಲ್ಲಾ ಕಿತಾಪತಿ ನಡೆಸ್ತಾರಂಥ ನಮಗೆಲ್ಲಾ ಗೊತ್ತು ಬಿಡಿ. ಇನ್ನು ನಮ್ ದೇಶೀ ವಿಮಾನದಲ್ಲಿ ಪ್ರಯಾಣಿಕರಿಗೆ ಮದ್ಯ ಕುಡಿಸಿ ಇದರಿಂದ ದೇಶ ಉದ್ಧಾರ ಮಾಡೋ ಯೋಚನೆ ನಮ್ ಸರ್ಕಾರದ್ದು.

ನಾಗರಿಕ ವಿಮಾನಯಾನ ಕುರಿತ ಸಂಸದೀಯ ಸಮಿತಿ, ದೇಶೀ ವಿಮಾನದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಬೇಕೆಂದು ಕೇಳಿಕೊಂಡಿದೆಯಂತೆ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆಯಿಡುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಇನ್ನೊಂದು ವಿಷಯವೆಂದರೆ ಈ ಶಿಫಾರಸು ಸಮಿತಿಯಲ್ಲಿ ಯುವ ನೇತಾರನೆಂದು ಕರೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ಮತ್ತು 'ಕಿಂಗ್ಫಿಶರ್ ಕಿಂಗ್ ' ವಿಜಯಮಲ್ಯರೂ ಇದ್ದಾರಂತೆ. ಹೀಗಿದ್ದ ಮೇಲೆ ಸರ್ಕಾರ ಮದ್ಯಪ್ರೀಯರಿಗೆ ವಿಮಾನದಲ್ಲಿ ಬಾಟಲ್ ಒದಗಿಸುವ ಕೆಲ್ಸ ಕಷ್ಟವೇನಲ್ಲ ಬಿಡಿ. ತನ್ನ ಬ್ಯುಸಿನೆಸ್ಗಾಗಿ ಮಲ್ಯ ಕೈಜೋಡಿಸಿದ್ರೆ, ಸರ್ಕಾರ ಮಲ್ಯರಿಂದ ಬೇಳೆ ಬೇಯಿಸಿಕೊಳ್ಳುವುದು ಹೇಗೆಂದು ಕಾಯುತ್ತಿದೆ.

ಒಂದು ವೇಳೆ ಸರ್ಕಾರ ಜಾರಿಗೊಳಿಸಿದ್ರೆ ಮದ್ಯಪ್ರಿಯರಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದ ಅನುಭವ. ಸಿಕ್ಕಾಪಟ್ಟೆ ಕುಡಿಯಬಹುದು, ಹೊಟ್ಟೆತುಂಬಾ ಚಿಕನ್-ಮಟನ್, ಬೇಕಾದ್ರೆ ತಲೆಯಿಂದ ಇಳಿಯುವವರೆಗೂ ಡ್ಯಾನ್ಸ್..ಏನು ಬೇಕೋ ಅದೆಲ್ಲಾ ನಮ್ ಧೀಮಂತ ಸರ್ಕಾರದ ಅನುಮತಿ ಮೇರೆಗೆ ದೊರೆಯಲಿದೆ. ಮಸ್ತ್ ಮಜಾ ಮಾಡಬಹುದು. ಯುವ ಜನಾಂಗದ ಬೆಳಕು, ಶಕ್ತಿ ಎಂದೆಲ್ಲಾ ಮಾಧ್ಯಮಗಳಲ್ಲಿ ವೈಭವದಿಂದ ಮೆರೆಯುತ್ತಿರುವ ರಾಹುಲ್ ಗಾಂಧಿ ಇದಕ್ಕೆ ಹುಂಗುಟ್ಟುವರೇ ಕಾದು ನೋಡೋಣ..

Tuesday, November 13, 2007

ಶಿವಲಿಂಗಕ್ಕೆ ಪ್ರದಕ್ಷಿಣೆ ಹಾಕಿದ್ರೆ..ಮಂತ್ರಿಯಾಗ್ತಾರಂತೆ!!

ಆಕೆ ವಿಜಾಪುರದ ಮಹಿಳೆ. ಜೆಡಿಎಸ್ -ಬಿಜೆಪಿ ಮೈತ್ರಿ ಹಾಗೂ ಯಡಿಯೂರಪ್ಪ ಸಿಎಂ ಆಗ್ಬೇಕೆಂದು ಹರಕೆ ಹೊತ್ತಿದ್ರಂತೆ. ಆ ಹರಕೆಯೇನು ಗೊತ್ತೇ? ಇಲ್ಲಿನ ತಿಡಗುಂದಿ ಗ್ರಾಮದ ಓಂ ಶ್ರೀ ಬಾಲತಪಸ್ವಿ ಮಲ್ಲಿನಾಥ ಮಹಾರಾಜರ ಆಶ್ರಮದಲ್ಲಿರುವ 'ಶಿವಲಿಂಗಕ್ಕೆ ಒಂದು ಲಕ್ಷ ಪ್ರದಕ್ಷಿಣೆ ಹಾಕೋದು'!! ಅಬ್ಬಾ ಇದೇನಪ್ಪಾ?! ಸುಳ್ಳೋ/ನಿಜನೋ ಅಂತ ಡೌಟು ಬಂದ್ರೆ ಇವತ್ತಿನ ಸಂಯುಕ್ತ ಕರ್ನಾಟಕ ಪೇಪರ್ ಓದಿ.(ನವೆಂಬರ್ 14). ಆಕೆಯ ಹೆಸ್ರು ರೇಖಾ ಬಾಪುಗೌಡ ಪಾಟೀಲ. ದಿನಕ್ಕೆ ಹತ್ತು ಸಾವಿರ ಪ್ರದಕ್ಷಿಣೆ ಹಾಕಿ, ಹತ್ತು ದಿನದಲ್ಲಿ ಹರಕೆ ತೀರಿಸೋದು. ನಿನ್ನೆ ಹತ್ತು ಸಾವಿರ ಪ್ರದಕ್ಷಿಣೆ ಮುಗಿಸಿದ್ದಾರಂತೆ. ಇಷ್ಟು ಮಾತ್ರವಲ್ಲ ಈಗಿನ ಹೊಸ ಸರ್ಕಾರ ಸಚಿವ ಸಂಪುಟದಲ್ಲಿ ಶಾಸಕ ಅಪ್ಪೂಸಾಹೇಬ ಪಟ್ಟಣಶೆಟ್ಟಿಗೆ ಸ್ಥಾನ ದೊರೆಯಲೆಂದು ಇನ್ನೂ 50 ಸಾವಿರ ಪ್ರದಕ್ಷಿಣೆಯ ಹರಕೆ ಹೇಳಿದ್ರಂತೆ..ಅಂತೂ -ಇಂತೂ ಪ್ರದಕ್ಷಿಣೆ ಹಾಕಿ, ಹಾಕಿ ಮಂತ್ರಿಪಟ್ಟ ಪಡೆಯೋ ಹುನ್ನಾರ ಅನಿಸುತ್ತೆ..

ಅಲ್ರೀ ಪ್ರದಕ್ಷಿಣೆ ಹರಕೆಯಿಂದಲೇ ಎಲ್ಲವೂ ಆಗ್ತಿದ್ರೆ ನಮ್ ರಾಜಕಾರಣಿಗಳು ಜನರಿಂದ ಛೀ! ಥೂ! ಎಂದು ಉಗಿಸಿಕೊಳ್ತಿದ್ದರಾ? ಅಥವ ದೇವೇಗೌಡ್ರು ಇಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯವಿತ್ತೇ? ಯಡಿಯೂರಪ್ಪ ಸಿಕ್ಕ ಸಿಕ್ಕ ಮಠಾಧೀಶರ ಕಾಲಿಗೆ ಬೀಳಬೇಕಿತ್ತೇ? ಕೇಂದ್ರದ ಮಂತ್ರಿ ಮಹಾಶಯರು ದೆಹಲಿಯಿಂದ ಬೆಂಗಲೂರಿಗೆ ಬಂದು ಸುಸ್ತಾಗಬೇಕಿತ್ತಾ? ಅಥವ ನಮ್ ರಾಜ್ಯದ ಮಂತ್ರಿ, ಸಚಿವರು ರಾತೋರಾತ್ರಿ ದೆಹಲಿಗೆ ಹೋಗೋ ಅವಶ್ಯಕತೆ ಇತ್ತಾ? ನಾಯಕ ಮಹಾಶಯರು ರಾಜಭವನದ ಎದುರು ತಮ್ಮ ಬಲಾಬಲ ಪ್ರದರ್ಶಿಸಿದ್ದರಿಂದ ಪಾಪ ಜನರೆಲ್ಲಾ ಟ್ರಾಪಿಕ್ ಜಾಮ್ನಲ್ಲಿ ಸಿಕ್ಹಾಕೋಳ್ತಾ ತೊಂದ್ರೆ ಅನುಭವಿಸ್ತಾ ಇದ್ರಾ? ಇನ್ನೂ ಹೇಳಬೇಕಂದ್ರೆ ಅಧಿಕಾರ ಹಸ್ತಾಂತರ ದಿನ ಸಮೀಪಿಸುತ್ತಿದ್ದಂತೆ ನಗರದ ರಾಜಕೀಯ ಸುದ್ದಿ ಸಂಗ್ರಹಿಸುವ ನಮ್ಮ ಸ್ನೇಹಿತರೆಲ್ಲಾ ಊಟ,ನಿದ್ದೆ ಬಿಟ್ಟು ಅಲ್ಲೇ ಬೀಡುಬಿಟ್ಟಿದ್ರು..ನನ್ ಮಿತ್ರರೊಬ್ರು ನಾನು ಪೋನು ಮಾಡಿದಾಗ 'ಏನ್ ಚಿತ್ರಾ ನಾನು ಸಕತ್ ಬ್ಯುಸಿ, ವಿಧಾನಸೌಧ-ರಾಜಭವನ ಸುತ್ತಿ ಸುತ್ತಿ ಸುಸ್ತಾಯಿತು. ಈ ಕೊಳಕು ರಾಜಕೀಯ' ಅಂಥ ಬಡಬಡಿಸುತ್ತಿದ್ರು. ಪಾಪ ಪೋಟೋಗ್ರಾಫರ್ಗಳ ಕತೆ ಕೇಳೋದೇ ಬೇಡ. ಯದ್ವಾತದ್ವಾ ನುಗ್ಗಿ, ಬೊಬ್ಬೆ ಹೊಡೆದು..'ಸೈಡ್, ಸ್ಮೈಲ್,ಓರೆ-ಕೋರೆ' ಹೇಳಿ ಹೇಳಿ ಸುಸ್ತೋ ಸುಸ್ತು. ತಲೆತಿರುಗಿ ಆಯತಪ್ಪಿ ಬಿಳೋ ಪರಿಸ್ಥಿತಿ ಅವರದು. ಶಿವಲಿಂಗಕ್ಕೆ ಸುತ್ತು ಬಂದ್ರೆ 'ಮಂತ್ರಿಗಿರಿ' ಸುಗಮವಾಗುವುದಾದ್ರೆ ಈ ಕಷ್ಟವನ್ನೆಲ್ಲಾ ಅನುಭವಿಸಬೇಕಿತ್ತಾ?

-ಆಫೀಸ್ನಲ್ಲಿ ಬಂದು ಪೇಪರ್ ಓದಿದಾಗ ಈ ಪ್ರದರ್ಶನದ ಫಲದ ಬಗ್ಗೆ ಕೇಳಿದ್ದೇ ತಡ, ನನ್ ತಲೇಲಿ ಇಂಥ ನೂರಾರು ಪ್ರಶ್ನೆಗಳು ತಲೆತಿನ್ತಾ ಇದ್ದುವು. ಈ ಪ್ರದರ್ಶನ, ಪೂಜೆ ಯಾರ ಹಿತಕ್ಕೆ? ಪಕ್ಷದ ಹಿತಕ್ಕೋ, ಜನರ ಹಿತಕ್ಕೋ ದೇವ್ರೆ ಬಲ್ಲ. ಕರ್ನಾಟಕದ ಈಗಿನ ಸಮ್ಮೀಶ್ರ ಸರ್ಕಾರದ ಸ್ಥಿತಿಯಂತೂ ರಾಜ್ಯದ ಯಾವ ಪ್ರಜೆಗೂ ಬೇಡ.

ಅಲ್ರೀ..ಒಂದು ದೇವಸ್ಥಾನಕ್ಕೆ 9 ಸುತ್ತು ಬಂದಾಗ, ಸುಸ್ತಾಗುವ ನಮಗೆ ಈ ಹೆಂಗಸು 1 ಲಕ್ಷ ಸುತ್ತು ಬಂದ್ರೆ ಹೇಗಾದೀತು ಅಂಥ ನನ್ ಯೋಚನೆ..! ಹೀಗೆ ಸುತ್ತು ಬಂದ್ರೆ, ನಮ್ ಬೇಡಿಕೆಗಳನ್ನು ಕೆಳಿಸಿಕೊಂಡು ದೇವ್ರು ಎಲ್ಲದಕ್ಕೂ 'ವರ' ನೀಡಿದ್ರೆ ನಮಗೂ ಮಂತ್ರಿಗಿರಿಯು ಅಶೆಯೇನಾದ್ರೂ ಇದ್ರೆ ಈಡೇರುತ್ತಿತ್ತೋ ಏನೋ ಅಲ್ವಾ?

ಆ ದಿನಗಳು..

ಇಂದು ಬೆಳಿಗ್ಗೆ ಎದ್ದಾಗಲೇ ಆರುಗಂಟೆ ಕಳೆದಿತ್ತು. ಅಣ್ಣ ಆಗಲೇ ಎದ್ದು ಸ್ನಾನ, ದೇವ್ರ ಪೂಜೆ ಮುಗಿಸಿದ್ದ. ನನ್ಗೆ ಪುಳಿಯೊಗರೆಯೂ ರೆಡಿ ಆಗಿತ್ತು. ಟೀ ಮಾಡಕ್ಕೆ ಮಾತ್ರ ಬಾಕಿ. ರೇಡಿಯೋದಲ್ಲಿ ನೆಹರು ಬಗ್ಗೆ ಹಾಡುಗಳು ಕೇಳಿಬರುತ್ತಿದ್ದವು. ಆಗಲೇ ಗೊತ್ತಾಗಿದ್ದು ಇಂದು ಮಕ್ಕಳ ದಿನಾಚರಣೆ! ತಕ್ಷಣ ಮನದ ಪರದೆಯಲ್ಲಿ ಅದೆಷ್ಟೋ ಖುಷಿ ಖುಷಿ ಘಟನೆಗಳು ಹಾದುಹೋದವು. ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಿದ್ದ ಆ ದಿನಗಳನ್ನು ಮನಸ್ಸು ಮೆಲುಕುಹಾಕಿತು..

ಆಗ ನಾನಿನ್ನು ಎರಡನೇ ತರಗತಿ. ಕ್ಲಾಸಿನಲ್ಲಿ ನಾನೇ ಎಲ್ಲರಿಗಿಂತ ನಾನೇ ಮುಂದು. ಏನಿದ್ರೂ ನನ್ದೆ ಕಾರುಬಾರು. ಆಗೆಲ್ಲಾ ನನ್ ಕ್ಲಾಸಿನಲ್ಲಿ ನನ್ನನ್ನು 'ಅವ್ಳು ಸಕತ್ ಜೋರು' ಅನ್ತಾ ಇದ್ರು. ಆದ್ರೂ ನಮ್ ಕ್ಲಾಸ್ ಟೀಚರಿಗೆ ನಾನಂದ್ರೆ ತುಂಬಾ ಇಷ್ಟ. ಮಕ್ಕಳ ದಿನಾಚರಣೆ ದಿವ್ಸ ನಮ್ಮನ್ನು ಬೆಳಿಗ್ಗೆ ಬೇಗ ಬರಕ್ಕೆ ಹೇಳಿದ್ರು. ಅಂದು ನಮಗೆಲ್ಲಾ ಹೊಸ ಡ್ರೆಸ್ಸು. ಶಾಲೆಯಲ್ಲಿ ಟೀಚರ್ ಹೊಸ ಡ್ರೆಸ್ ಹಾಕಿ ಅನ್ನದಿದ್ರೂ, ನಮ್ ಮನಸ್ಸಲ್ಲಿ ಅವತ್ತು ನಮಗೆ ಹೊಸ ಡ್ರೆಸ್ ಆಗಬೇಕು. ಮಕ್ಕಳ ದಿನ ಅಂದ್ರೆ ಏನೋ ಒಂಥರಾ ಖುಷಿ. ನಾನು ಅಮ್ಮನ ಕಾಡಿಸಿ-ಪೀಡಿಸಿ ಹೊಸ ಡ್ರೆಸ್ ತರಿಸಿದ್ದೆ. ಅದೊಂದು ಚಿಕ್ಕದಾದ ಚೂಡಿದಾರ. ಎರಡು ಜಡೆ..ಜಡೆತುಂಬಾ ಸೇವಂತಿಗೆ ಮುಡಿದು ತುಂಬಾ ಖುಷಿಯಿಂದ ಕ್ಲಾಸಿಗೆ ಹೊರಟಿದ್ದೆ.

ಅವತ್ತು ನಮಗೆ ಶಾಲೆಯಲ್ಲಿ ಬಿಸ್ಟೀಟ್ ಕಚ್ಚಿ ಓಡುವ ಸ್ಪರ್ಧೆ ಏರ್ಪಡಿಸಿದ್ದರು. ಮೊದಲ ಎರಡು ಸುತ್ತಿನಲ್ಲಿ ನಾನೇ ಫಸ್ಟ್. ನಂತರ ಕೊನೆ ಸುತ್ತು. ಆರು ಜನ ಹುಡುಗೀರನ್ನು ಓಡಿಸಿದ್ರು. ನಾನೇನೋ ತುಂಬಾ ಖುಷಿಯಿಂದ ನಾನೇ ಫಸ್ಟ್ ಬರ್ತೇನೆ ಎಂದು ಓಡಿದ್ದೆ. ಆದ್ರೆ ಎಲ್ಲರಿಗಿಂತ ಮೊದ್ಲು ಓಡುತ್ತಿದ್ದ ನಾನು ಬಿಸ್ಕೇಟ್ ಇಟ್ಟಿರುವ ಬೆಂಚಿಗೆ ಮುಖ ತಾಕಿ, ಅಲ್ಲೆ ಬಿದ್ದಿಬಿಟ್ಟೆ. ಅದನ್ನು ಕಚ್ಚಿ ವಾಪಾಸ್ ಬರಕ್ಕೆ ಆಗಿಲ್ಲ. ತುಂಬಾ ಗಾಯ ಆಗಿ ಮುಖತುಂಬಾ ರಕ್ತ. ನನ್ ಹಳದಿ ಬಣ್ಣದ ಚೂಡಿದಾರ್ ತುಂಬಾ ರಕ್ತವೇ ರಕ್ತ. ನಮ್ ಸೀನಿಯರ್ಸ್, ಟೀಚರ್ಸ್ ಎಲ್ರು ಸೇರಿ ಏನೇನೋ ಹಚ್ಚಿ ರಕ್ತ ಬರೋದು ಕಡಿಮೆಯಾಯಿತು. ಆಸ್ಪತ್ರೆಗೂ ಸೇರಿಸಿದ್ರು. ಅಂದಿನ ಮಕ್ಕಳ ದಿನಾಚರಣೆ ನಂತ್ರ ನಾನೆಂದೂ ಯಾವುದೇ ಓಟದಲ್ಲಿ ಭಾಗವಹಿಸಿಲ್ಲ. ಇದು ನನ್ದೊಂದು ಮಕ್ಕಳ ದಿನಾಚರಣೆಯ ಒಂದು ಕಹಿ ಅನುಭವವಷ್ಟೇ.

ನಿಜ ಹೇಳಬೇಕೆಂದರೆ ನಮ್ಮ ಪ್ರಾಥಮಿಕ ಶಾಲೆಯ ಆರಂಭ, ಜಗತ್ತೇನೆಂದು ತಿಳಿಯದ ಮುಗ್ಧ, ಪುಟ್ಟ ವಯಸ್ಸಿನಲ್ಲಿ ಈ ಮಕ್ಕಳ ದಿನಾಚರಣೆ ಆಚರಿಸುವುದೇ ಅದೊಂಥರ ವಿಭಿನ್ನ ಖುಷಿ. ಈ ಖುಷಿನಾ ಈಗ ಹೇಳೋದಕ್ಕಿಂತಲೂ, ಆ ಪುಟ್ಟ ವಯಸ್ಸಲ್ಲಿ ಅನುಭವಿಸುವುದು ಇನ್ನಷ್ಟು ಖುಷಿ. ಹೊಸ ಡ್ರೆಸ್, ನೆಹರೂ ಭಾವಚಿತ್ರಕ್ಕೆ ಹೂಹಾರ ಹಾಕಿ ಭಕ್ತಿಯಿಂದ ನಮಿಸೋದು, ಶಾಲೆಯಲ್ಲಿ ಕೊಡುವ ಚಾಕಲೇಟ್ ಆಸೆಗಾದ್ರೂ ಆ ದಿನ ಚಕ್ಕರ್ ಹಾಕದೆ ಬೆಳಿಗ್ಗೆ ಬೇಗ ಎದ್ದು ಶಾಲೆಗೆ ಹೋಗೋದು..ಆ ದಿನ ಮಧ್ಯಾಹ್ನವೇ ಮನೆಗೆ ಬರೋದು ಮತ್ತೊಂದು ಖುಷಿ. ಯಾವಾಗ್ಲೂ ಬೆತ್ತ ಹಿಡಿದು ಗದರಿಸುತ್ತಿದ್ದ ಟೀಚರ್ಸ್, ಮಕ್ಕಳ ದಿನದಂದೂ ನಗುನಗುತ್ತಾ ಮಾತಾಡ್ತಾರೆ..ನಾವು ಹಾಡೋದು, ಆಡೋದು..ಮನೇಲಿ ಅಕ್ಕನೋ, ಅಣ್ಣನೋ ಬರೆದುಕೊಟ್ಟ ಭಾಷಣವನ್ನು ಓದಿ ಹೇಳೋದು..ಅಥವ ಬಾಯಿಪಾಠ ಮಾಡಿ ಸ್ಟೇಜ್ ಮೇಲೆ ನಿಂತಾಗ, ಮರೆತುಹೋದ್ರೆ 'ಹು ಹು..'ಅಂತ ಹೇಳಿ ವಾಪಾಸ್ ಬರೋದು..ಇದನ್ನೆಲ್ಲಾ ನೆನೆದಾಗ ಮನದೆಲ್ಲೇನೋ ಪುಳಕ, ಅವ್ಯಕ್ತ ಆನಂದದ ಅಲೆ ತೇಲಿ ತೇಲಿ ಬರುತ್ತದೆ ಅಲ್ವೇ? ಆ ಬಾಲ್ಯದ ಖುಷಿ ಖುಷಿಯಾದ ನೆನಪಿನ ಮೆರವಣೆಯಲ್ಲಿ ನಾವೂ ಪಯಣಿಸಿದಾಗ, ಛೇ! ನಾವಿನ್ನೂ ಚಿಕ್ಕವರಾಗಿದ್ರೆ..!!?ಮನಸ್ಸು ಬಾಲ್ಯದತ್ತ ಹೊರಳದೆ ಇರದು ಅಲ್ವೇ? ಆ ದಿನಗಳು ಅದೆಷ್ಟು ಚೆನ್ನ ಅನಿಸುತ್ತಲ್ಲಾ?

ಇಂದು ನಮ್ ರೂಮ್ ಅಕ್ಕ-ಪಕ್ಕದ ಮಕ್ಳೆಲ್ಲಾ ಹೊಸ ಡ್ರೆಸ್, ಹೊಸ ಬಳೆ, ಶಾಲೆಯಲ್ಲಿ ಡಾನ್ಸ್ ಮಾಡಲು ಒಂದಿಷ್ಟು ಹೂವು ಹಿಡಿದುಕೊಂಡು ಹೋಗುತ್ತಿದ್ದ ನನಗೆ ಮನತುಂಬಾ ಬಾಲ್ಯದ ನೆನಪುಗಳ ಕನವರಿಕೆ. ಬಸ್ಸಲ್ಲಿ ನೋಡಿದ್ರೆ ಪುಟ್ಟ ಪುಟ್ಟ ಮಕ್ಳಳದು ಹಬ್ಬದ ಸಂಭ್ರಮ. ಯಾವಾಗ್ಲೂ ಬೆನ್ನು ತುಂಬಾ ತಮಗಿಂತ ಹೆಚ್ಚಿನ ಭಾರದ ಚೀಲಗಳನ್ನು ಹೊತ್ತುಕೊಂಡು ಹೋಗುವ ಮಕ್ಕಳು ಇಂದು ಲವಲವಿಕೆಯಿಂದ ಕಾಣುತ್ತಿದ್ದರು. ಕೈಯಲ್ಲಿ ಭಾರವಾದ ಬ್ಯಾಗ್ ಇಲ್ಲ, ಅದನ್ನ ಹೊತ್ತುಕೊಂಡು ಕಂಡಕ್ಟರ್ ಕೈಯಿಂದ ಬೈಗುಳ ತಿನ್ಬೇಕಾಗಿಲ್ಲ..ಹೀಗೆ ಮುದ್ದು ಮಕ್ಕಳ ಖುಷಿಗೆ ಹಲವು ಕಾರಣಗಳು. ಆಫೀಸಲ್ಲಿ ಬಂದು ನನ್ ಕಂಪ್ಯೂಟರ್ ಎದ್ರು ಕೂತ್ರೂ ಮಕ್ಕಳ 'ಮಕ್ಕಳ ದಿನಾಚರಣೆ' ಸಂಭ್ರಮವೇ ತಲೆತುಂಬಾ. ಹಾಗೆ ನೋಡಿದ್ರೆ ನಾವು ಸ್ಕೂಲಿಗೆ ಹೋಗುತ್ತಿದ್ದಾಗ ಪುಸ್ತಕದ ಭಾರ ಇಷ್ಟೊಂದು ಇರುತ್ತಿರಲಿಲ್ಲ. ಹಾಗಂತ ನಮಗೇನೂ ಅದ್ರಿಂದ ಸಮಸ್ಯೆಯೂ ಆಗಿಲ್ಲ. ಆದ್ರೆ ಈಗ ಮಕ್ಕಳ ತಲೆ ತುಂಬೋ ಜ್ಞಾನಕ್ಕಿಂತ, ಬೆನ್ನಿಗೆ ಪುಸ್ತಕಗಳ ಭಾರವೇ ಹೆಚ್ಚಾಗಿದೆ.

ಏನೇ ಆಗ್ಲಿ..ಮಕ್ಕಳ ದಿನಾಚರಣೆ ಮಕ್ಕಳ ಪಾಲಿಗೆ ಸಂತಸದ ಹಬ್ಬ. ದೀಪಾವಳಿ ದಿನದಂದು ಪಟಾಕಿ ಸಿಡಿಸಿ ಪಡೋ ಖುಷಿಗಿಂತಲೂ, ಈ ಮಕ್ಕಳ ದಿನದಂದು ಮಕ್ಕಳು ತುಂಬಾ ಖುಷಿ ಪಡ್ತಾರೆ ಅನ್ನೋದು ಮಾತ್ರ ಸತ್ಯ. ನಾವು-ನೀವೆಲ್ಲಾ ಈ ಖುಷೀನ ಅನುಭವಿಸಿರಬಹುದಲ್ಲವೇ?

Wednesday, November 7, 2007

ಹೆಂಗಿದೆ ಐಡಿಯಾ?

ನಾನು ಆಫೀಸಿಗೆ ಬರುವ ಡೈಲಿ ಬಸ್ಸಲ್ಲಿ ತುಂಬಾ ಕಾಲೇಜ್ ಸ್ಟೂಡೆಂಟ್ಗಳು ಸಿಗ್ತಾರೆ. ಕ್ಲಾಸಿನ ಬಗ್ಗೆ, ಮೇಷ್ಟ್ರ ಬಗ್ಗೆ, ಕ್ಲಾಸಲ್ಲಿ ಚೀಟಿ ಪಾಸ್ ಮಾಡಿದ ಬಗ್ಗೆ, ನಿದ್ದೆ ಹೊಡ್ದ ಬಗ್ಗೆ...ಹೀಗೆ ಅವರುಗಳ ಸಂಭಾಷಣೆ ಆಗಾಗ ನನ್ ಕಿವಿಗೆ ಬೀಳುತ್ತಿರುತ್ತೆ. ಇಲ್ಲೊಂದು ಅಂಥ ತುಣುಕು ನಿಮಗಾಗಿ..ಇದು ಕಾಲೇಜ್ ಹುಡ್ಗ-ಹುಡ್ಗಿ ತನ್ನ ಫ್ರೆಂಡ್ ಒಬ್ನಿನಿಗೆ ತನ್ನ ಕ್ಲಾಸ್ಮೆಟನ್ನು ಮದುವೆ ಮಾಡಿಸುವ ಯೋಚನೆ..

ಹುಡ್ಗಿ: ಅಲ್ಲ ಕಣೋ ಅನಿತಾಂಗೆ ಇನ್ನೂ 18 ವರ್ಷ ಆಗಿಲ್ಲವಲ್ಲ.
ಹುಡ್ಗ: ವಯಸ್ಸು ಬಗ್ಗೆ ಜಾಸ್ತಿ ತಲೆ ಕೆಡಿಸ್ಕೋಬೇಡ.
ಹುಡ್ಗಿ: ಯಾಕೋ?
ಹುಡ್ಗ: ನಿಂಗೊತ್ತಿಲ್ಲ ಕಣೇ. ಹಣ ಕೊಟ್ರೆ ಡುಬ್ಲಿಕೇಟ್ ಏಜ್ ಸರ್ಟಿಫಿಕೇಟ್ ಸಿಗುತ್ತೆ.
ಹುಡ್ಗಿ: ಅಯ್ಯೋ, ಏನಂತೀಯಾ? ಸುಮ್ನೆ ಅದೆಲ್ಲ.
ಹುಡ್ಗ: ನಿಂಗೊತ್ತಿಲ್ಲ, ಅದ್ನೆಲ್ಲಾ ನವೀನ್ ಮಾಡಿ ತರ್ತಾನೆ
ಹುಡ್ಗಿ: ರೇಷನ್ ಕಾರ್ಡು ಕೂಡ ಬೇಕಂತೆ
ಹುಡ್ಗ: ಅದೂ ಡುಬ್ಲಿಕೇಟ್ ಆಗುತ್ತೆ ಅಂತೆ
ಹುಡ್ಗಿ: ಬೇಡ ನಾವು ಆ ತಂಟೆಗೆ ಹೋಗೋದು ಬೇಡ
ಹುಡ್ಗ:ಏನಾಯ್ತು?
ಹುಡ್ಗಿ: ಅಯ್ಯೋ ನಂಗೆ ಭಯಪ್ಪಾ..ಮತ್ತೆ ನಮ್ನ್ನ ಪೊಲೀಸ್ರು ನಮ್ನ ಜೈಲಿಗೆ ಹಾಕ್ತಾರೆ ಅಷ್ಟೇ.
ಹುಡ್ಗ: ಏನೇ ಆದ್ರೂ ನಾವು ಹೆಲ್ಫ್ ಮಾಡ್ಲೇಬೇಕು. ಇಲ್ಲಾಂದ್ರೆ ನವೀನಿಂದ ಏನೂ ಆಗಲ್ಲ.
ಹುಡ್ಗಿ: ಹಂಗಾದ್ರೇ ನಾವೂ ಜೈಲಿಗೆ ಹೋಗೋಣ ಅನ್ತಿಯಾ?
ಹುಡ್ಗ: ಅಲ್ಲ ಕಣೇ.ಪಾಪ! ನವೀನ್ ಒಂದು ವರ್ಷದಿಂದ ಅನಿತಾಳ ಲವ್ವ್ ಮಾಡ್ತಾ ಇದ್ದಾನೆ ಗೊತ್ತಾ? ಇನ್ನೂ ಲೇಟ್ ಆದ್ರೆ ಅನಿತಾನ ಅಪ್ಪ ಅವ್ಳಿಗೆ ಬೇರೆ ಮದುವೆ ಮಾಡ್ತಾರೆ.
ಹುಡ್ಗಿ: ಅದ್ಕೆ..ಓಡಿಹೋಗಲಿ ಅಂತೀಯಾ?
ಹುಡ್ಗ:ಹೂಂ.ಮತ್ತೆ. ರಿಜಿಸ್ಟ್ರ ಮ್ಯಾರೇಜ್ ಆಗಿ, ಸ್ವಲ್ಪ ದಿವ್ಸ ಇರ್ಲಿ. ಆಮೇಲೆ ಬಂದ್ರಾಯಿತು. ಮತ್ತೆ ಅವ್ರ ಅಪ್ಪ- ಅಮ್ಮ ಏನ್ ಮಾಡ್ತಾರೆ? ಒಪ್ಪದೆ ವಿಧಿಯಿಲ್ಲ.
ಹುಡ್ಗಿ: ಯಾಕೋ ಈ ಐಡಿಯಾ ತುಂಬಾ ಡೇಂಜರ್ ಅನಿಸುತ್ತೆ ಕಣೋ..
ಅಷ್ಟೋತ್ತಿಗೆ ನನ್ ಸ್ಟಾಪ್ ಬಂತು..ನಾನು ಇಳಿದು ಆಫೀಸ್ನತ್ತ ಹೆಜ್ಜೆ ಹಾಕಿದೆ...ಮನದಲ್ಲಿ ಮಾತ್ರ ಅವ್ರ ಮ್ಯಾರೇಜ್ ಐಡಿಯಾ ಗುಣುಗುಟ್ಟುತ್ತಿತ್ತು.
ಹೇಗಿದೆ ಈ ಐಡಿಯಾ?

Tuesday, November 6, 2007

'ರಾಮ'ನಿದ್ದಾನೆ..ಸೀತೆ?!

"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ" ಅಬ್ಬಬ್ಬಾ! ಏನು ಮಾತೋ? ಕೇಳಿದ್ರೆ ಹುಡುಗೀರಿಗೆ ಹೀಗೂ ಅನ್ತಾರಾ? ಅಂತ ಇಂದಿನ ಪೀಳಿಗೆ ಜನ ಮೂಗಿನ ಮೇಲೆ ಬೆರಳಿಡುವುದರಲ್ಲಿ ಅಚ್ಚರಿಯೇನಿಲ್ಲ. ಕಾರಣ ಪ್ರಸ್ತುತ ಹುಡುಗೀರನ್ನು ಕಾಣೋ ದೃಷ್ಟಿಕೊನ ಹಂಗಿದೆ. ಹುಡುಗೀರೇ ಚೇಂಜ್ ಆಗಿದ್ದಾರೆ ಅನ್ತಾರೆ ಕೆಲವರು, ಈ ಮಾತನ್ನು ಅಲ್ಲಗಳೆಯಲ್ಲ. ಆದ್ರೆ ಇದರಲ್ಲಿ ಸಮಾಜದ ಪಾತ್ರವೂ ಇದೆ ಎಂಬುವುದನ್ನು ಮರೆಯಬಾರದು. ಮಾತ್ರವಲ್ಲ ಹುಡುಗೀರು ಎಷ್ಟೇ ಮುಂದುವರೆಯಲಿ ಸಮಾಜ ಹುಡುಗೀರನ್ನು ಕಾಣುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ.

'ಒಳಗೊಳಗೆ ಕುದಿದ ಭೂಕಂಪವಿದ್ದರೂ ಮೇಲೆ ಹುಲ್ಲಿನ ಹಸಿರು ತಂಪನ್ನೂ ಹೂವಿನ ನರುಗಂಪನ್ನೂ ಹಬ್ಬಿಸುವ ಭೂತಾಯಂತೆ ಹೆಣ್ಣಿನ ಹೃದಯ' ಇದು ಖ್ಯಾತ ಸಾಹಿತಿ ಗೌರೀಶ ಕಾಯ್ಕಿಣಿ ಮಾತು. ಹೆಣ್ಣನ್ನು ಶಕ್ತಿ, ದೇವತೆ, ಹೆಣ್ಣು ಸತ್ಯ ಎಂದೆಲ್ಲಾ ಸಮಾಜ ಹೊಗಳಿದೆ. ಕವಿಗಳಂತೂ ಹೆಣ್ಣನ್ನು ಹೇಗೆ ಬೇಕೋ ಹಾಗೆ ಹೊಗಳಿ, ಹೋಲಿಸಿ ಖುಷಿಪಟ್ಟಿದ್ದಾರೆ. ಆದರೆ ಹೆಣ್ಣನ್ನು ದೇವತೆಗಳಿಗೆ ಹೋಲಿಸಿದ ಸಮಾಜವೇ ಹೆಣ್ಣಿಗೆ ಕಳಂಕಪಟ್ಟ ಕಟ್ಟುತ್ತಿದೆ. ಪುರುಷ ಪ್ರಧಾನ ಸಮಾಜ ಮರೆಯಾಗಿದೆ ಅನ್ನುತ್ತಿದ್ದಾರೆ. ಹೆಣ್ಣು ಮುಂದುವರೆದಿದ್ದಾಳೆ, ಹೆಣ್ಣು ಅಬಲೆಯಲ್ಲ, ಸಬಲೆ, ಆಕೆ ಸ್ವತಂತ್ರಳು ಎಂದು ಅದೆಷ್ಟೋ ವರ್ಷಗಳಿಂದ ಈ ಮಂತ್ರ ಜಪಿಸುತ್ತಾಳೆ ಇದೆ ಸಮಾಜ. ಕೆಲವರಂತೂ ವೇದಿಕೆ ಮೇಲೊಂದು ಮೈಕ್ ಸಿಕ್ರೆ ಸಾಕು..ಹೆಣ್ಣನ್ನು ಹೊಗಳಿ ಅಟ್ಟಕೇರಿಸುತ್ತಾರೆ. ಇದು ನಡೆದುಕೊಂಡು ಬಂದಿದ್ದ ಹಾಗೂ ಬರುತ್ತಿದ್ದ ರೀತಿ. ಆದರೆ ಹೆಣ್ಣಿನ ಮೇಲೆ ನೀಚ ಪುರುಷನೊಬ್ಬ ಅತ್ಯಾಚಾರ ಎಸಗಿದರೆ...? ತನ್ನದಲ್ಲದ ತಪ್ಪಿಗೆ ಆಕೆ ಜೀವನವಿಡೀ ನರಕಯಾತನೆ ಅನುಭವಿಸಬೇಕು. ಅಲ್ಲಿ ಆಕೆಯದು ಕಿಂಚಿತ್ತೂ ತಪ್ಪಿಲ್ಲ..ಆದರೆ ಯಾರೋ ಮಾಡಿದ ತಪ್ಪಿಗೆ ಆಕೆಗೆ ಶಿಕ್ಷೆ. ಇಡೀ ಊರಿಗೆ ಊರೇ ಆಕೆಯತ್ತ ಸಂಶಯದಲ್ಲಿ ನೋಡುತ್ತೆ. ಆಕೆ ಒಳ್ಳೆಯವಲ್ಲ, ಶೀಲ ಕೆಟ್ಟವಳು. ಯಾರೋ ಅವಳ್ನ ಅತ್ಯಾಚಾರ ಮಾಡಿದನಂತೆ.. ಆಕೆಗೊಂದು ಬದುಕು ಕೊಡಲು ಯಾವುದೇ ಪುರುಷ ಮುಂದೆ ಬರಲ್ಲ. ಆದರೆ ಅತ್ಯಾಚಾರ ಮಾಡಿದ ಆ ನೀಚ ಸದ್ಘುಣಶೀಲ ಶ್ರೀರಾಮ!!. ತಪ್ಪಿತಸ್ಥನಾಗಿದ್ದರೂ ರಾಜಾರೋಷವಾಗಿ ಬದುಕುತ್ತಾನೆ. ಅವನಿಗೆ ಹೆಣ್ಣು ಕೊಟ್ಟು ಮದುವೆ ಮಾಡಿಸುವವರಿದ್ದಾರೆ...ಆದರೆ ಅಪರಾಧಿಗೆ ಮಣೆಹಾಕಿ 'ಶ್ರೀರಾಮ'ನೆಂದು ಬಿರುದು ನೀಡುವ ನಮ್ಮ ಸಮಾಜ, ಯಾರೋ ಮಾಡಿದ ತಪ್ಪಿಗೆ ಜೀವನವನ್ನೇ ಕಣ್ಣೀರಾಗಿಸಿದ ನಿರ್ದೋಷಿ ಹೆಣ್ಣಿಗೆ 'ಶೀಲವಂತೆ ಸೀತೆ' ಎನ್ನುವುದೇ?

ಇಂದು ಅತ್ಯಾಚಾರದಂಥ ನೀಚ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗುವುದು ಬಲು ಅಪರೂಪ. ಮುಗ್ಧ ಮಕ್ಕಳ ಮೇಲೆಯೂ ಇಂಥಹ ಕೃತ್ಯ ನಡೆಯುತ್ತಲೇ ಇರುತ್ತದೆ. ಆದರೆ ಅಪರಾಧಿಗೆ ಸರಿಯಾದ ಶಿಕ್ಷೆ ನೀಡುವ ಕ್ರಮ ಇನ್ನೂ ಜಾರಿಯಾಗಿಲ್ಲ. ಯಾಕೆ ನಮ್ಮ ಸಮಾಜಕ್ಕೆ ಇದೆಲ್ಲಾ ಅರ್ಥವಾಗಲ್ಲ? ತನ್ನದಲ್ಲದ ತಪ್ಪಿಗೆ ಹೆಣ್ಣೊಬ್ಬಳು ಯಾಕೆ ಕೊರಗಬೇಕು? ಅವಳಿಗೂ ಕನಸಿದೆ, ಬದುಕಿನೊಂದಿಗೆ ಬದುಕಬೇಕು..ಸಮಾಜದಲ್ಲಿ ಆಕೆಗೂ ಒಂದು ಸ್ಥಾನಮಾನ ಬೇಕೆಂಬುವುದು ಯಾಕೆ ಅರ್ಥವಾಗಲ್ಲ? ಮತ್ತೊಂದು ಹೆಣ್ಣ ಮೇಲೆ ಪಾಪಕೃತ್ಯ ಎಸಗುವುವ ನೀಚರಿಗೆ ತನ್ನ ತಾಯಿಯೂ ಒಬ್ಳು ಹೆಣ್ಣೆಂಬ ಪ್ರಜ್ಞೆ ಯಾಕಿಲ್ಲ? ಶ್ರೀಮಂತ ಕುಟುಂಬದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರದಂಥ ಕೃತ್ಯಗಳು ನಡೆಯುವುದು ತೀರ ವಿರಳ. ಬಡಕುಟುಂಬದ ಹೆಣ್ಣುಮಕ್ಕಳ ಪಾಡು ಮಾತ್ರ ಕೇಳೋದೇ ಬೇಡ. ಇದು ನಮ್ಮ ಸಮಾಜದ ರೀತಿ-ನೀತಿ. ಹೆಣ್ಣನ್ನು ಕಾಣುವ ಸಮಾಜದ ದೃಷಿಕೋನ ಬದಲಾಗುವುದೆಂದು?

ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯ ಸಂಪುಟದಿಂದ ಕೆಲವೊಂದು ತುಣುಕುಗಳು(ಹೆಣ್ಣಿನ ಬಗ್ಗೆ) ಇಲ್ಲಿವೆ ...
-ಗಂಡು ಕ್ರಾಂತಿಯ ಅಗ್ರದೂತ-ಪ್ರಗತಿ-ಪರಿವರ್ತನದ ಪ್ರವರ್ತಕ, ಹೆಣ್ಣು ಮಾನವ ವಂಶದ ಪರಂಪರೆಯ ಪ್ರಾಣಾಧಾರ, ಸ್ಥಿತಿಸ್ಥಾಪಕ ಶಕ್ತಿ.
-ಬಾಳೆಂಬ ಬಂಟನಿಗೆ ಗಂಡು ತ್ರಾಣ, ಹೆಣ್ಣು ಪ್ರಾಣ
-ಗಂಡಿಗಿಂತ ಹೆಣ್ಣು ಹೆಚ್ಚು ಧಾರ್ಮಿಕಳು, ಸಾಮಾಜಿಕಳು, ಸಮಾಜಪ್ರಿಯಳು.
-ಪ್ರೇಮವನ್ನು ಅನಿವರ್ಚನೀಯ ಭಕ್ತಿಯಾಗಿ ಮಾರ್ಪಡಿಸುವ ಮಾಟ ಹೆಣ್ಣಿಗೇ ಶಕ್ಯ.

Monday, November 5, 2007

ಹುಡುಗ್ರು ಹಿಂಗ್ಯಾಕೆ?

'ಈ ಹುಡುಗ್ರು ಹಿಂಗ್ಯಾಕೆ?' ಈ ಕ್ವಶನ್ನು ದಿನಾ ನನ್ ತಲೆ ತಿನ್ತಿದೆ. 'ಮೊನ್ನೆ ನನ್ ಕಣ್ಣೆದುರಲ್ಲೇ ಚಡ್ಡಿ ಹಾಕ್ಕೊಂಡು ಓಡಾಡುತ್ತಿದ್ದ ಪ್ರಕಾಶ ಮೀಸೆ ಬರೋ ಮುಂಚೆನೇ ಕಾಲೇಜು ಹುಡುಗೀರಿಗೆ ಕೀಟ್ಲೆ ಮಾಡ್ತಾನಂತೆ. ಅದೇನಪ್ಪಾ ಕಾಲ ಕೆಟ್ಟುಹೋಯ್ತು..ಅದೇನು ಹುಡುಗ್ರೋ.." ಪಕ್ಕದ್ಮನೆ ಹಣ್ಣು ಹಣ್ಣು ಸೀತಜ್ಜಿ ಬಾಯ್ ಬಡ್ಕೊಂಡಾಗ ನನಗೆ ಅಚ್ಚರಿ. ಈ ಹಣ್ಣು ಹಣ್ಣು ಮುದುಕೀರೇ ಇಷ್ಟು ಥಿಂಕ್ ಮಾಡುವಾಗ ನಾನು ಥಿಂಕ್ ಮಾಡಿದ್ರಲ್ಲಿ ತಪ್ಪೇನಿಲ್ಲ ಬಿಡಿ.

ಅದ್ಯಾಕೆ ಹುಡುಗ್ರು ಹಿಂಗೋ..ಅದ್ಯಾಕೆ ಹುಡುಗೀರುಗೆ ದುಂಬಾಲು ಬೀಳ್ತಾರೋ ನಾ ಕಾಣೆ. ಒಂದು ಸಲ ರಾಂಗ್ ನಂಬರಿಗೆ ಹುಡುಗಿಯೊಬ್ಬಳು ಮೆಸೇಜ್ ಮಾಡಿದ್ರೆ ಸಾಕು..ಹುಡುಗನಾದ್ರೆ ತಕ್ಷಣ ಪೋನು.."ಹಲೋ ಮೆಸೇಜ್ ಮಾಡಿದ್ರಲ್ಲಾ..ಯಾರು..ಕೇಳಬಹುದೇ?" ಇತ್ತಲಿಂದ ಹುಡುಗಿ ಪೋನು ಕಟ್ ಮಾಡಿದ್ರೂ ಮತ್ತೆ ಪೋನು ಮಾಡಿ 'ನನ್ಗೆ ನಿಮ್ ಜೊತೆ ಮಾತಾಡ್ಬೇಕಿತ್ತು..' ಆಗ್ಲೂ ಹುಡುಗಿ ಪೋನ್ ಕಟ್ ಮಾಡ್ತಾಳೆ. ಆಮೇಲೆ ಅದೇ ಹುಡುಗ ತನ್ನ ಫ್ರೆಂಡ್ಸ್ಗಳಿಗೆಲ್ಲಾ ನಂಬರು ಕೊಟ್ಟು 'ಆ ಹುಡುಗಿ ಜೊತೆ ಮಾತಾಡಿ ಅನ್ತಾನೆ. ಅಲ್ಲಿಂದ ಹುಡುಗೀರಿಗೆ ಕಿರಿಕಿರಿ...ಯಾರ್ಯಾರೋ ಪೋನು ಮಾಡಿ 'ಐ ಲವ್ ಯೂ' ಅಂದು ಹುಡುಗಿ ಬಾಯಿಂದ ಮುಖ ತುಂಬಾ ಉಗಿಸಿಕೊಂಡ್ರೂ ಕೆಲವರಿಗೆ ತೃಪ್ತಿಯೇ ಇಲ್ಲ ಬಿಡಿ.

ಇನ್ನು ಕೆಲವರು ಹಾಗಲ್ಲ. ನಿತ್ಯ ಪ್ರಯಾಣಿಸುವ ಬಸ್ಸಲ್ಲಿ ಚೆಂದದ ಹುಡುಗೀನ ನೋಡಿದ್ರೆ ಸಾಕು ಮತ್ತೆ ನಿತ್ಯ ಅದೇ ಬಸ್ಸಲ್ಲಿ, ಅದೇ ಸ್ಥಳದಲ್ಲಿ ಅವ್ಳ ಮುಖದರ್ಶನ ಮಾಡದೆ ಸಮಾಧಾನವೇ ಇರಲ್ಲ. ಯಾವತ್ತೂ ಶೇವ್ ಮಾಡದವ್ರು ಅವತ್ತು ನೀಟಾಗಿ ಶೇವ್ ಮಾಡ್ಕೊಂಡು ಬರ್ತಾರೆ. ಬಾರ್ಗೆ ಹೋಗಿ ಕುಡಿದು ತೂರಾಡ್ತಾ ಇದ್ದ ಹುಡುಗ್ರೂ ಸ್ನಾನ ಮಾಡಿ ಸಭ್ಯನ ಥರ ಡ್ರೆಸ್ ಮಾಡ್ಕೊಂಡು ರೆಡಿ. ಯಾರೂ ಈ ಹುಡ್ಗ 'ಚಾಕಲೇಟ್ ಹೀರೋ' ಅನ್ನದೆ ವಿಧಿಯಿಲ್ಲ. ಬೆಳಿಗೆದ್ದು ತಿಂಡಿ-ಕಾಫಿನೂ ಕುಡಿಯದೆ ಮನೆಯಲ್ಲಿ ಅಮ್ಮನಿಂದ ಮುಖಕ್ಕೆ ಮಂಗಳಾರತಿ ಮಾಡಿಸ್ಕೋಂಡು ಬಸ್ಸ್ಟಾಂಡಿನಲ್ಲಿ ಕಾಯ್ತಾ ಕೂತಿರ್ತಾರೆ.

ಅಲ್ರೀ ಈ ಹುಡುಗ್ರೂ ಹಿಂಗ್ಯಾಕೆ? ಅದ್ಯಾಕೆ ಹುಡುಗೀರಿಗೆ ಕಾಟ ಕೊಡ್ತಾರೋ? ಮೊನ್ನೆ ನಾನು ಮೆಜೆಸ್ಟಿಕ್ಗೆ ಹೊರಟಿದ್ದೆ. ಭಾನುವಾರ. ತುಂಬಾ ರಶ್ ಇತ್ತು. ನಾಲ್ಕು ಹುಡುಗೀರು ಬಸ್ಸು ಹತ್ತಿದ್ರು. ಹತ್ತಿರ ನಿಂತಿದ್ದ ಹುಡುಗನೊಬ್ಬ ತರ್ಲೆ ಮಾಡಿದ್ದ ಅನಿಸುತ್ತೆ. ಒಬ್ಳು ಹುಡುಗಿ ಅವ್ನ ಮೂತಿ ನೋಡದೆ ಕೆನ್ನೆಗೆ ಬಾರಿಸಿದ್ಳು. ಆ ಹುಡುಗ ಏನು ಹೇಳ್ಬೋಕೋ ತಿಳಿಯದೆ ಸುಮ್ಮನಾಗಿದ್ದಾನೆ. ಮತ್ತೆ ಮೂವರು ಹುಡುಗೀರು 'ನಾನ್ಸೆನ್ಸ್' ಅಂದು ಆತ ಕಾಲರ್ ಹಿಡಿದಿದ್ದಾರೆ. ನಂತ್ರ ಕಂಡಕ್ಟರ್ ಬಂದು ವಿಲ್ಸನ್ಗಾರ್ಡನ್ನಲ್ಲಿ ಅವ್ನನ್ನು ಬಸ್ಸಿಂದಿಳಿಸಿದ.

ಎಲ್ರೂ ಈ ರೀತಿ ಇರಲ್ಲ ಬಿಡಿ. ಆದ್ರೆ ಮಾಕ್ಸಿಮಂ ಆ ರೀತಿ ಇರ್ತಾರೆ ಬಿಡಿ. ಅಲ್ರೀ ಅದೇನು ಲವ್ವೋ? ಅದೇನು ಅಟ್ರಾಕ್ಕ್ಷನೋ ದೇವ್ರೇ ಬಲ್ಲ. ಪೆಟ್ಟು ತಿಂದ್ರೂ, ಹಲ್ಲು ಉದುರಿಸಿಕೊಂಡ್ರೂ ಅದ್ಯಾಕೆ ಹುಡುಗ್ರು ಹಿಂಗಾಡ್ತಾರೋ? ಹುಡುಗೀರಿಗಾಗಿ ಅದ್ಯಾಕೆ ಹುಡುಗ್ರು ಊಟ ನಿದ್ದೆ ಬಿಡ್ತಾರೋ? ಅದ್ಯಾಕೆ ಟೈಮ್ ವೇಸ್ಟ್ ಮಾಡ್ತಾರೋ? ಅಲ್ರೀ ಹುಡುಗೀ 'ಒಲ್ಲೆ' ಅಂದ್ರೂ ನೀನೇ ನನ್ 'ನಲ್ಲೆ' ಅಂದು ದುಂಬಾಲು ಬೀಳೋರಿಗೆ ಏನೆನ್ನಬೇಕು? ಪೆದ್ರನ್ನಬೇಕೋ? ಹುಚ್ಚ್ರನ್ನಬೇಕೋ? ನೀವೇ ಹೇಳಿ. (ಎಲ್ಲ ಹುಡುಗ್ರುಗೆ ಇದು ಅನ್ವಯ ಆಗಲ್ಲ)

ಕೊನೆಗೆ ಒಂದಿಷ್ಟು..
ಸಂಚಿಹೊನ್ನಮ್ಮ ತನ್ನ 'ಹದಿಬದೆಯ ಧರ್ಮ' ಕೃತಿಯಲ್ಲಿ ಹೀಗೆನ್ನುತ್ತಾರೆ..
ಪೆಣ್ಣಲ್ಲವೇ ತಮ್ಮನೆಲ್ಲಾ ಪಡೆದ ತಾಯಿ
ಪೆಣ್ಣಲ್ಲವೇ ಪೊರೆದವಳು
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು!!

ನೆನಪಿನ ಗೆಳತಿಗೆ..

ತುಂಬಾ ಟೈಮ್ ಆಗೋಯ್ತು ಕಣೇ ಪತ್ರ ಬರೆಯದೆ. ಯಾಕೋ ತಟ್ಟನೆ ನೀ ನೆನಪಾದೆ..ನಿನ್ನ ನಾ ನೋಡದೆ-ನನ್ನ ನೀ ನೋಡದೆ ಕಳೆದ ದಿನಗಳೆಷ್ಟೋ, ತಿಂಗಳುಗಳೆಷ್ಟೋ, ವರ್ಷಗಳೇ ಸರಿದುಹೋದುವು ಅಲ್ವಾ?

ಯಾಕೋ ಇಂದು ಆಫೀಸಿಗೆ ರಜೆ. ಸೂರ್ಯ ನೆತ್ತಿಗೇರಿದ್ದರೂ ಬೆಡ್ ಬಿಟ್ಟು ಕದಲದ ನನ್ನನ್ನು ಬೈದು ಬೈದು ಅಮ್ಮ ಎಬ್ಬಿಸಿದ್ಳು. ಬೆಳಗಿನ ತಿಂಡಿ ತಿನ್ನುವಷ್ಟರಲ್ಲಿ ಮಧ್ನಾಹ್ನ ಹನ್ನೆರಡು ಗಂಟೆ. ಮತ್ತೆ ಅಮ್ಮನ ಮಂಗಳಾರತಿ ಮಾಡಿಸ್ಕೊಂಡೆ. ಮತ್ತೆ ರೂಮಿಗೆ ಬಂದು ಆಟೋಗ್ರಾಪ್ ತಿರುವಿ ಹಾಕುತ್ತಾ ಕುಳಿತೆ. ಅದೆಷ್ಟೋ ನುಡಿಮುತ್ತುಗಳು, ಕವನಗಳನ್ನು ತನ್ನದೇ ಶಬ್ಧದಲ್ಲಿ ಪೋಣಿಸಿದ ನಿನ್ನ ಮುತ್ತಿನಂಥ ಅಕ್ಷರಗಳು. ಬದುಕು ಬಲುದೂರ ಹೋದರೂ, ಮನತುಂಬಾ ನೆನಪಿನ ಮೆರವಣಿಗೆ ಅಲ್ವೇ?

ನೋಡು ಮೊದ್ಲೆ ಹೇಳ್ತಿನಿ..ನಂಗೆ ನಿನ್ ಥರ ಭಾವನೆಗಳನ್ನು ಪೋಣಿಸೋಕೆ ಬರಲ್ಲ. ಕವನ ರಚಿಸೋಕೆ ಬರಲ್ಲ. ಹಾಡು ಹಾಡೋಕೆ ಬರಲ್ಲ. ಹೀಗೆ ನಾ ಅಂದಾಗೆಲ್ಲ 'ನಿಂಗೇನು ಮತ್ತೆ ತಿನ್ನೋಕೆ ಬರುತ್ತಾ?' ಅಂತ ಮುಖ ಕುಂಬಳಕಾಯಿ ಮಾಡಿ ನೀನ್ ಕೇಳ್ತಾ ಇದ್ದಿ. ಆಗೆಲ್ಲಾ ನಿನ್ಗೆ ತಮಾಷೆ ಮಾಡೋದೇ ಆಯ್ತು. ಹೀಗ್ಲೂ ನಮ್ ಜತೆಯಿದ್ದ ಮೋನು ನಿನ್ ಬಗ್ಗೆ ಹೇಳ್ತಾನೇ ಇರ್ತಾಳೆ. ಅಲ್ಲ ಕಣೇ..ನೀನ್ಯಾಕೆ ನನ್ ಮೇಲೆ ಸಿಟ್ ಆದ್ರೆ ಮುಖ ಚೀಣಿಕಾಯೋ, ಕುಂಬಳಕಾಯಿ ಆಗುತ್ತಿತ್ತುಂತಾ?

ನಿನ್ಗೆ ನೆನಪಿದ್ಯಾ ನಮ್ ಬೋರೇಗೌಡ ಮೇಷ್ಟ್ರು ನಮ್ಮಿಬ್ಬರನ್ನು ಒಂದು ಸಲ ಬೈದು ಹೊರಗೆ ಕಳಿಸಿದ್ದು. ಅದ್ರಲ್ಲಿ ನಿನ್ ತಪ್ಪಿಲ್ಲ ಪಾಪ! ನಂಗೆ ಬೋರೇಗೌಡ್ರ ಪಾಠ ಬರೇ ಬೋರು. ಅದ್ಕೆ ಮುಂದಿನ ಬೆಂಚಿಯ ಹುಡುಗೀರುಗೆ ಚೀಟಿ ಕಳಿಸೋದು. ಅಲ್ಲ ಕಣೀ ಬೋರ್ ಹೋಡೆಯುತ್ತಿದ್ದ ಕ್ಲಾಸಲ್ಲಿ ತರ್ಲೆ ಮಾಡೋದು ಅದೆಷ್ಟು ಮಜಾ ಆಗ್ತಿತ್ತಲ್ವಾ? ಅರಳಿಕಟ್ಟೆಯಲ್ಲಿ ಮಧ್ಯಾಹ್ನ ಕುಳಿತು ನೆಲಗಡಲೆ ಮೆಲ್ಲೋದು ಇನ್ನು ಖುಷಿಯೇ ಖುಷಿ. ಇನ್ನು ನಾವು ಕಾಲೇಜಲ್ಲೇ ಇರ್ಬೇಕಿತ್ತು..ಫೈಲಾದ್ರೂ ಓಕೆ..ಅಂತ ಅನಿಸುತ್ತೆ ನಂಗೆ. ಈಗ ನೀನು ನನ್ನೆದುರು ಇರುತ್ತಿದ್ದರೆ "ನೀನೇನು ತಿನ್ನೋಕೆ ಹುಟ್ಟಿದ್ದೀಯ ಸೋಮಾರಿ ಸೋಮಣ್ಣ?" ಎಂದು ಬೈಯುತ್ತಿದ್ದಿಯೇನು..ಅಲ್ವಾ? ನಿಂಗೊತ್ತಲ್ಲಾ ನಮ್ ಕ್ಲಾಸಲ್ಲಿ ಹಿಂದಿನ ಬೆಂಚಿನಲ್ಲಿ ದಿನಾ ನಿದ್ದೆಹೊಡೆಯುತ್ತಿದ್ದ ನಿಂಗಣ್ಣ ಅವನು ನನ್ದೇ ಕಂಪನಿಯಲ್ಲಿ ಕೆಲ್ಸ ಮಾಡ್ತಾ ಇದ್ದಾನೆ..ಅಂದಿನ ನಿದ್ರೆ ನಿಂಗಣ್ಣ ಈಗ ತಿಂಗಳಿಗೆ 50 ಸಾವಿರ ರೂಪಾಯಿ ಸಂಪಾದಿಸ್ತಾನೆ ಕಣೇ.

ಇನ್ನು ಹೇಳ್ಬೇಂಕಂದ್ರೆ ನಿನ್ ನೋಡದೆ 10 ವರ್ಷವೇ ಕಳೆದುಹೋಯ್ತು. ನೀನು ಹೇಗಿದ್ಯೋ ಅದೇ ರೀತಿ ಡುಮ್ಮಿ ಡುಮ್ಮಿಯಾಗಿದ್ಯೋ ನಾ ಕಾಣೆ. ಆದ್ರೆ ನಾನು ಮಾತ್ರ ಹಿಂದಿನ ನರಪೇತಳನ ಥರ ಇಲ್ಲ. ಒಂಚೂರು ತೋರ, ಒಂದೆರಡು ಕುರುಚಲು ಗಡ್ಡ, ನೀಟಾದ ಮೀಸೆ..ಅಂತೂ-ಇಂತೂ ಯಾರದ್ರೂ ನೋಡಿದ್ರೆ ಹುಡ್ಗ ನಾಲಾಯಕ್ಕು ಅನ್ನಲಾರರು.

ಓಹ್! ಪತ್ರ ಬರೀತಾ ಕೂತಿದ್ದೆ. ಹೊತ್ತು ಮೀರಿದ್ದು ಗೊತ್ತೇ ಆಗಿಲ್ಲ.ನಿನ್ ನೆನಪಿನೊಂದಿಗೆ ಒಂದಿಷ್ಟು ಹೊತ್ತು ಹರಟಿದ್ದೆ. ಇರ್ಲಿ ಬಿಡು..ಇನ್ನೊಂದು ಸಲ ಪತ್ರ ಬರೀತೀನಿ..ತುಂಬಾ ಬರೀತೀನಿ...ಓಕೆ ನಾ?
ಬೈ ಬೈ
ಪ್ರೀತಿಯಿಂದ,
ಚಿಂಟು

Friday, November 2, 2007

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ?

ಅಮ್ಮ ಎಂದರೆ ಏನೋ ಹರುಷವೋ... ನಮ್ಮ ಪಾಲಿಗೆ ಅವಳೇ ದೈವವೋ... ಹೌದು! ಅಮ್ಮನೇ ನಮ್ಮ ಪಾಲಿನ ದೇವರು. ಒಂಬತ್ತು ತಿಂಗಳು ತನ್ನ ಉದರದಲ್ಲಿ ಹೊತ್ತು ಹೆತ್ತ ನಮ್ಮಮ್ಮ ನಮ್ಮ ಸರ್ವಸ್ವ. ನಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ಅಮ್ಮನ ಮಮತೆಯ ಸೆಲೆಯಿದೆ...ನಮಗಾಗಿ ಅಮ್ಮ ಸುರಿಸಿದ ಬೆವರಿನ ಸ್ಪರ್ಶವಿದೆ..ನಮಗಾಗಿ ತುತ್ತು ಅನ್ನವಿಟ್ಟು ಕಾದಿದ್ದಾಳೆ..ನಾವು ನಕ್ಕಾಗ ನಕ್ಕು, ಅತ್ತಾಗ ಮುದ್ದಿಸಿ ಸಲಹಿದ್ದಾಳೆ..ನಾವು ಕಷ್ಟಪಟ್ಟಾಗ ನಮ್ಮ ಕಷ್ಟದೊಂದಿಗೆ ಆಕೆಯೂ ಕೈಜೋಡಿಸಿದ್ದಾಳೆ..ಜಗವೆಲ್ಲಾ ನಮ್ಮನ್ನು ದೂರಿದರೂ, ನಮ್ಮಮ್ಮ ಪ್ರೀತಿಯಿಂದ ಅಪ್ಪಿ ಮುದ್ದಿಸಿ ಸಂತೈಸಿದ್ದಾಳೆ..ಸೋತಾಗ ಬೆನ್ನು ತಟ್ಟಿ ಗೆಲುವಿನತ್ತ ದಾರಿ ತೋರಿಸಿದ್ದಾಳೆ. ಹೌದು! ಮಾತೃದೇವೋಭವ...ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ.
*********
ಇತ್ತೀಚಿಗೆ ಮಹಾನಗರಿಯ ಬೀದಿಯೊಂದರಲ್ಲಿ ನಡೆದುಹೋಗುತ್ತಿದೆ. ಜಡಿಮಳೆ ಬೇರೆ. ರಸ್ತೆಯೇ ನದಿಯಾಗಿತ್ತು. ಮಳೆ-ಗಾಳಿಗೆ ನನ್ನ ಛತ್ರಿಯೂ ಸರ್ಕಸ್ ಮಾಡುತ್ತಿತ್ತು. ಹೇಗೋ ನಡೆದುಕೊಂಡು ಹೋಗುತ್ತಿದ್ದೆ... ಅಲ್ಲೊಂದು ಪುಟ್ಟ ಮನೆ. ಅಮ್ಮ-ಮಗ ಇಬ್ಬರೇ ಆ ಮನೆಯಲ್ಲಿ. ಅಮ್ಮ ಬದುಕೋದಕ್ಕೆ ತರಕಾರಿ ಮಾರಾಟ ಮಾಡುತ್ತಿದ್ದರೆ, ಮಗ ತಿನ್ನೋದಕ್ಕೆಂದೇ ಬದುಕುತ್ತಿದ್ದ. ಸಣ್ಣ ಪುಟ್ಟ ಕೆಲ್ಸ ಮಾಡಿ ಏನೋ ಅವನಿಗೆ, ತಿನ್ನೋಕೆ ಕುಡಿಯೋಕೆ ಮಾತ್ರ. ಆದ್ರೂ ಆ ಅಮ್ಮ..ನನ್ನ ಮಗ ಖಂಡಿತ ಒಳ್ಳೆಯವನಾಗುತ್ತಾನೆ.. ಆ ರೀತಿ ಹೇಳುವಾಗೆಲ್ಲಾ ಆ ಅಮ್ನನ ಕಣ್ಣಲ್ಲಿ ಆಶಾಕಿರಣ ಹೊಳೆಯುತ್ತಿತ್ತು...ಮಗ ಮುಂದೆ ತನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ..ಎಂದೇ ಆಕೆಯ ಬಲವಾದ ನಂಬಿಕೆ...ತನ್ನ ಮಗ, ಮನೆ ಎಲ್ಲದರ ಬಗ್ಗೆ ಆ ಅಮ್ಮ (ನಾನು ಆಂಟಿ ಅನ್ನುತ್ತಿದ್ದೆ) ನನ್ನತ್ರ ಹೇಳುತ್ತಿದ್ರು. ಎಷ್ಟೋ ಬಾರಿ ನನ್ನ ಮನೆಯಿಂದ ತಂದ ಮಂಗಳೂರು ರೊಟ್ಟಿಯನ್ನು ಅಮ್ಮನಿಗೆ ಕೊಟ್ಟಿದ್ದೆ. ನಾನು-ನಮ್ಮಣ್ಣ ಅಂದ್ರೆ ಅವರಿಗೆ ತುಂಬಾ ಇಷ್ಟ. ಅಂದು ಮಳೆಗಾಳಿಗೆ ನಡೆದುಹೋಗುತ್ತಿದ್ದ ನನಗೆ ಆ ಅಮ್ಮ ಮಳೆಗೆ ನೆನೆಯುತ್ತ ಮನೆಯ ಜಗುಲಿಯಲ್ಲಿ ಕುಳಿತಿದ್ದು ಕಂಡುಬಂತು. ಕೆದರಿದ ಕೂದಲು, ಅತ್ತು ಅತ್ತು ಸೊರಗಿದ ಮುಖ ನೋಡಿದಾಗಲೇ ನಂಗೆ ಮಗ ಏನೋ ಕಿತಾಪತಿ ಮಾಡಿದ್ದಾನೆ ಅಂದುಕೊಂಡೆ. ನನ್ನ ನೋಡಿದ ತಕ್ಷಣ ಅಮ್ಮ ಜೋರಾಗಿ ಅಳಲಾರಂಭಿಸಿದರು. ಕಾರಣ..??? 'ಮಗ ಇನ್ನೊಂದು ಹುಡುಗೀನ ಕರೆದುಕೊಂಡು ಬಂದು ಅಮ್ಮನ ಹೊರಗೆ ಹಾಕಿದ್ದ' ನನ್ನತ್ರ ಹೇಳದೆ ಯಾಕೆ ಕರೆದುಕೊಂಡು ಬಂದೆ ಎಂದು ಅಮ್ಮ ಕೇಳಿದ್ದಕ್ಕೆ ಮಗನಿಗೆ ಸಿಟ್ಟು ಬಂದು ಹೊರಗೆ ತಳ್ಳಿದ್ದಾನೆ..ಅಮ್ಮನ ಕತೆ ಕೇಳಿದರೂ ನಾನಾದರೂ ಏನು ಮಾಡಲಿ? ಕೈಯಲ್ಲಿದ್ದ ಒಂದು ಪ್ಯಾಕ್ ಬಿಸ್ಕೇಟ್ ಮತ್ತು 100 ರೂಪಾಯಿ ಕೊಟ್ಟೆ..ಆಗ ಆ ಅಮ್ಮ ಹೇಳಿದ ಮಾತೇನು ಗೊತ್ತೇ? "ನನಗೂ ಒಬ್ಬ ಮಗಳಿದ್ಳು..ಥೇಟ್ ನಿನ್ ಥರಹಾನೇ..ಆದರೆ ಅವಳೂ ಬಸ್ಸಿನಡಿಗೆ ಬಿದ್ದು ಸತ್ತು ಹೋದ್ಳು..ಇದ್ದಿದ್ದರೆ ಅವಳಾದರೂ ನೋಡಿಕೊಳ್ಳುತ್ತಿದ್ದಳು... ಆದ್ರೆ ಮುಂದೊಂದು ದಿನ ನನ್ ಮಗ ನನ್ನ ಬಳಿ ಖಂಡಿತ ಬರ್ತಾನೆ" ಎಂದು. ನಂತರ ಅಮ್ಮ ತನ್ನ ಹುಟ್ಟೂರು ದಾವಣಗೆರೆಗೆ ಹೋಗುವುದಾಗಿ ನನ್ನದೊಂದಿಗೆ ಹೇಳಿದ್ರು... ಅವರು ಬಸ್ಸು ಹತ್ತಿದ ಮೇಲೆ ನಾನು ನನ್ನ ದಾರಿ ಹಿಡಿದೆ.. ಈ ಘಟನೆ ನಡೆದು 2 ತಿಂಗಳೇ ಕಳೆದುಹೋಯ್ತು...ಆದರೆ ಅಮ್ಮನ ನೋವು ಇಂದಿಗೂ ನನ್ನ ಕಣ್ಣಲ್ಲಿ ನೀರೂರಿಸುತ್ತೆ...ಅಮ್ಮ ಎಂದಾಗಲೆಲ್ಲಾ ಆ 45 ವರ್ಷದ ಆ ಅಮ್ಮ ಕಣ್ಣೆದುರು ಬರುತ್ತಾರೆ..ಅವರು ನನ್ನೆದುರು ಕಣ್ಣಿರಿಟ್ಟಾಗ ನನ್ನ ಕಣ್ನೂ ಕಣ್ನೀರಾಗಿದೆ..ಮನಸ್ಸು ಗೋಳಾಡಿದೆ..ನಾನಾದರೂ ಏನು ಮಾಡಲಿ..? ಇಂದು ಇಂಥ ಸನ್ನಿವೇಶಗಳು ತೀರ ಸಾಮಾನ್ಯವಾಗಿಬಿಟ್ಟಿವೆ. ಆಧುನಿಕತೆ, ಜಾಗತೀಕರಣ ಮಾನವೀಯ ಸಂಬಂಧಗಳನ್ನು ಕಳಚುವಂತೆ ಮಾಡುತ್ತವೆ. ಭಾವನೆ, ಪ್ರೀತಿ ಇದ್ಯಾವುದೂ ಇಂದಿನ ಆಧುನಿಕ ಯುಗದಲ್ಲಿ ಕಾಣಸಿಗುವುದು ತೀರ ವಿರಳ..ತಂದೆ-ತಾಯಿ,ಗುರುಗಳನ್ನು ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು.. ಆದರೆ ಅವುಗಳ ಸ್ಪರ್ಶವೇ ಕ್ರಮೇಣವಾಗಿ ಮರೆಯಾಗುತ್ತಿವೆ..ನಾವು ಸಣ್ಣವರಾಗಿದ್ದಾಗ 'ಅರ್ಥವಾಗದ್ದನ್ನು' ವಿವರಿಸುವ ಅಮ್ಮನಿಗೆ, ಇಂದು ನಾವೇನಾದರೂ ಮಾತಾಡುತ್ತುದ್ದಾಗ ಅಮ್ಮ ಮಧ್ಯೆ ಬಾಯಿಗೆ ಹಾಕಿದರೆ ನಾವು ಹೇಳುವ ಮಾತೇನು ಗೊತ್ತೆ? "ಅಮ್ಮ ನಿನಗದೆಲ್ಲಾ ಅರ್ಥವಾಗಲ್ಲಮ್ಮ, ಸುಮ್ನೆ ನಿನ್ ಕೆಲ್ಸ ಮಾಡು". ಬಾಡಿದ ಮುಖದಿಂದ ಮಕ್ಕಳ ಮಾತು ಕೇಳಿ ಅಮ್ಮ ಸುಮ್ಮನಾಗುತ್ತಾಳೆ..ಅಲ್ವಾ? ಹೀಗಾಗಬಾರದಿತ್ತು! ಆದರೆ ಕಾಲ ಬದಲಾಗಿದೆ.. ಆದರೂ ತಂದೆ-ತಾಯಿಯ ಜವಾಬ್ದಾರಿ ಮಕ್ಕಳದೇ..ಅಮ್ಮನ ಸಾಕಲು ಸಾಧ್ಯವಾಗದಿದ್ದರೂ..ಅಮ್ಮನಿಗೆ ಕನಿಷ್ಠ ಪ್ರೀತಿಯಾದ್ರೂ ತೋರಿಸಿದ್ರೆ ಆಕೆಯ ಹೊಟ್ಟೆ ತುಂಬುತ್ತೆ...ಎಂದೆಂದೂ ಅಮ್ಮನ ಋಣ ತೀರಿಸಲು ಯಾವ ಮಕ್ಕಳಿಂದಲೂ ಸಾಧ್ಯವಿಲ್ಲ..ನಮ್ಮ ಕೆಲ್ಸ, ಒತ್ತಡದ ಜೀವನದ ನಡುವೆ ಅಮ್ಮನ ಜೋಪಾನವಾಗಿ ನೋಡಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ ಅಲ್ಲವೆ? ಕೊನೆಗೊಂದಿಷ್ಟು ... "ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ? ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ?-ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ