Friday, June 12, 2009

ಪ್ರೇಮಿಯಾಗಿರುತ್ತಿದ್ದರೆ, ನಾನೊಬ್ಬಳು ಸಂತಸ ಸವಿಯುವ ಮಾನವಜೀವಿಯಾಗುತ್ತಿದ್ದೆ!

ಇಲ್ಲ, ಮನೆಯ ಸಂತಸ, ಶುಭರಾತ್ರಿಯ ಮುತ್ತು...
'ಅತ್ಯಂತ ಪ್ರೀತಿಯ' ಎಂಬ ಪದದಿಂದ ಶುರುವಾಗುವ
ವಾರದ ಪತ್ರಗಳ ವಂಚಕ ಭರವಸೆಗಳು ನನಗಲ್ಲ.
ನನಗಲ್ಲ, ಟೊಳ್ಳು ಸಪ್ತಪದಿಯ ವಿಧಿ, ಹಾಸಿಗೆಯ ಮೇಲಿನ ಒಂಟಿತನ..
ಅದರ ಮೇಲೆ ಮಲಗಿ, ಒಬ್ಬ ಸಂಗಾತಿಯ ಕನಸು ಕಾಣುತ್ತಾನೆ.
ಬಹುಶಃ ಹೆಣ್ನೇ, ತನ್ನವಳಿಗಿಂತ ಹೆಚ್ಚು ಕಾಮಿಸುವವಳನ್ನು....
*******
ಕೊಡು ಅವನಿಗೂ ಉಡುಗೊರೆ
ಕೊಡು ಅವನಿಗೂ ನೀಳ ಕೇಶದ ಘಮ
ಸ್ತನದ್ವಯಗಳ ನಡುವಿನ ಕಸ್ತೂರಿ ಗಂಧ.
ಋತುಚಕ್ರದ ರಕ್ತದಾಘಾತ, ಇಂಗಿ ಹೋಗದ ಹೆಣ್ಣಿನ ಹಸಿವುಗಳನ್ನು...
*******
ಮುಂಜಾನೆ ಟೀ ಜತೆಗೆ, ಬಾಗಿಲಿನಿಂದ ತೂರಿಬಂದ
ಪ್ರೀತಿಯ ಮಾತುಗಳಿಂದ, ಹ್ಲಾಂ...ದಣಿದ ಕಾಮದಿಂದ
ಸುತ್ತ ನೀ ಹೆಣೆದ ರೇಷಿಮೆ ಗೂಡನ್ನು
ಬಿಟ್ಟು ನಾನು ಹೋಗುತ್ತೇನೆ, ಒಂದಲ್ಲ ಒಂದು ದಿನ
ರೆಕ್ಕೆ ಪಡೆದು ನಾನು ಹಾರಿ ಹೋಗುತ್ತೇನೆ..
*******
ಪುರುಷ ಋತುವಿನಂತೆ
ನೀನು ಅನಂತ
ಇದನ್ನು ಕಲಿಸಲು, ನೀನು
ನನ್ನ ಯೌವನವನ್ನು ನಾಣ್ಯದಂತೆ
ಹಲವು ಕೈಗಳಿಗೆ ಚಿಮ್ಮಲು ಬಿಡು,
ನೆರಳುಗಳ ಜೊತೆ ಸಮಾಗಮಕ್ಕೆ ಬಿಡು,
ಖಾಲಿ ದೇಗುಲಗಳಲ್ಲಿ ಹಾಡಲು ಬಿಡು
*******
ನಾನು ಸತ್ತ ಮೇಲೆ
ಮಾಂಸ, ಮೂಳೆಗಳನ್ನು ಹಾಗೇ ಎಸೆದುಬಿಡಿ.
ಒಂದೆಡೆ ರಾಶಿ ಹಾಕಿ,
ಅದರ ವಾಸನೆಗೆ
ಕಥೆ ಹೇಳಲು ಬಿಡಿ,
ಎಂಥ ಬದುಕಿಗೆ ಈ
ಭುವಿಯ ಮೇಲೆ ಬೆಲೆ
ಕೊನೆಗೆ ಎಂಥ ಪ್ರೀತಿಗೆ
ಸಿಕ್ಕುವುದು ಬೆಲೆ
*******
ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..
ಮುಚ್ಚಿದ ಕಿಟಕಿಗಳ ಹಿಂದೆ ನಿಂತ ತೆಳ್ಳನೆ ಆಕಾರಗಳಿಗೆ
ಭೇದವಿಲ್ಲದ, ಹಂಬಲ ಮಳೆಗೆ.
*******
ನಾನೊಬ್ಬಳು ಪ್ರೇಮಿಯಾಗಿದ್ದದ್ದರೆ,
ಪ್ರೇಮಿಸಲ್ಪಟ್ಟವಳಾಗಿದಿದ್ದರೆ, ನಾನು ಖಂಡಿತವಾಗಿಯೂ ಬರಹಗಾರಳೇ ಆಗುತ್ತಿರಲಿಲ್ಲ. ಬದಲಿಗೆ ನಾನು ಒಬ್ಬಳು ಸಂತಸ ಸವಿಯುವ ಮಾನವ ಜೀವಿಯಾಗುತ್ತಿದ್ದೆ.
*******
ಪ್ರತಿಯೊಂದು ಕವಿತೆಯೂ ನೋವಿನ ಬಸಿರಿನಿಂದಲೇ ಹುಟ್ಟುತ್ತದೆ. ಇಂಥ ನೋವನ್ನು ನಾನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ನೋವನ್ನು ಹಂಚಿಕೊಳ್ಳುವಂಥ ವ್ಯಕ್ತಿಯಾದರೂ ಇರಬೇಕಲ್ಲವೇ?ಆದರೆ ಇಂಥ ವ್ಯಕ್ತಿ ನಿಮಗೆಲ್ಲೂ ಕಾಣಸಿಗುವುದೇ ಇಲ್ಲ. ಇಂಥ ವ್ಯಕ್ತಿಯ ಶೋಧನೆಯಿಂದ ಕವಯತ್ರಿ ಬರೆಯುತ್ತಾಳೇ ಹೋಗುತ್ತಾಳೆ. ಕೊನೆಗೊಮ್ಮೆ ಇಂಥ ವ್ಯಕ್ತಿ ಸಿಕ್ಕಿಬಿಟ್ಟರೆ, ಅಲ್ಲಿಗೆ ಶೋಧನೆ ಮುಗಿಯುತ್ತದೆ. ಕವಿತೆಯೂ ಮುಗಿದುಹೋಗುತ್ತದೆ.
*******
ನಾನು ಯಾರನ್ನಾದರೂ ಪ್ರೇಮಿಸುವಾಗ, ಪ್ರೇಮಿಸುವುದಿದ್ದರೆ, ಅದನ್ನು ಹೃತ್ಪೂರ್ವಕವಾಗಿ ಮಾಡುತ್ತೇನೆ. ಆ ಇಳಿಹೊತ್ತಿನಲ್ಲಿ, ನಸುಕಿನ ತೆಕ್ಕೆಯಲ್ಲಿ
ನನಗೆ ಅತ್ಯಂತ ಸಂವೇದನಾಪೂರ್ಣ ಭಾವನೆಗಳ ಅಪೂರ್ಣ ಅನುಭವವಾಗುತ್ತದೆ. ಕವಿತೆ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ. ಉಕ್ಕಿ ಹರಿಯುತ್ತದೆ. ಒಂದೊಮ್ಮೆಗೆ ನನ್ನೊಳಗಿರುವ ನನ್ನ ಕವಿತೆ ಹೊರಬಂದುಬಿಟ್ಟಿತೆಂದರೆ, ನನ್ನ ಹೃದಯವೇ ಖಾಲಿಯಾಗುತ್ತದೆ. ವ್ಯಕ್ತಿಯೊಬ್ಬನಿಗಾಗಿ ನಾನು ಅನುಭವಿಸಿದ ಆ ಭಾವನೆಗಳೆಲ್ಲ ಆವಿಯಾಗುತ್ತವೆ. ಆಗ ಆ ವ್ಯಕ್ತಿ ಕೇವಲ ಹೆಣದಂತಾಗುತ್ತಾನೆ.
*******
ಸಂದರ್ಶನಕಾರ: ನಿಮ್ಮ ಮೊದಲ ಪ್ರೇಮಿ ಯಾರು? ಉತ್ತರ: ಶ್ರೀಕೃಷ್ಣ
ಯಾ...ಅಲ್ಲಾ...ಈಗಲಾದರೂ ನನ್ನನ್ನು ಶಿಕ್ಷಿಸು. ನಿನ್ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಅವನನ್ನೇ ನಾನು ಪ್ರೀತಿಸಿದೆ. ಸಂತಸದ ಆ ಸಂಪತ್ತನ್ನು ಹುಡುಕಲು ಆತನ ದೇಹವನ್ನಪ್ಪಿ, ಆ ದೇಹದಲ್ಲೇ ಕರಗಿ ಹೋದ ನನ್ನ ಕೈಗಳನ್ನು ಕತ್ತರಿಸಿ ಹಾಕು. ಪುರುಷನೊಬ್ಬನನ್ನು ಪೂಜಿಸಿದ ಮಹಾ ಪಾತಕಿ ನಾನು. ಶಿಕ್ಷೆ ಪಡೆಯಲು ಹಪಹಪಿಸುತ್ತಿರುವ ಒಬ್ಬ ಸೇವಕಿ..ಅದೇ ಈ ಸುರಯ್ಯಾ...!!

ಚಿತ್ರಕೃಪೆ: ಅಂತರ್ಜಾಲ

(ವಿ.ಸೂ: ಕಮಲದಾಸ್ ಬಗ್ಗೆ ಇತ್ತೀಚೆಗೆ ಕನ್ನಡಪ್ರಭದ ಸಾಪ್ತಾಹಿಕ ದಲ್ಲಿ ಟಿ.ಜೆ. ಎಸ್. ಜಾರ್ಜ್ ಹಾಗೂ ಎಸ್. ಕುಮಾರ್ ಅವರು ಬರೆದ ಲೇಖನದಲ್ಲಿ ಕಮಲದಾಸ್ ಅವರ ಕವಿತೆಗಳ ಸಾಲುಗಳನ್ನು ಬರೆದಿದ್ದರು. ಕಮಲದಾಸ್ ನನ್ನ ಇಷ್ಟದ ಬರಹಗಾರ್ತಿಗಳಲ್ಲಿ ಒಬ್ಬರಾಗಿದ್ದರಿಂದ ಅದನ್ನು ಹೆಕ್ಕಿ ಬ್ಲಾಗ್ ನಲ್ಲಿ ಹಾಕೊಂಡಿದ್ದಿನಿ. ಸಂಪರ್ಕಿಸಿ:http://www.kannadaprabha.com/pdf/epaper.asp?pdfdate=6/7/2009

ಚಿತ್ರಕೃಪೆ: ಅಂತರ್ಜಾಲ

Wednesday, June 3, 2009

ಬದುಕಿನ ಸತ್ಯ-ಮಿಥ್ಯಗಳ ನಡುವೆ ಒಂದಷ್ಟು ಹೊತ್ತು..!!

**ನಿನ್ನೆ ಆಸ್ಪತ್ರೆ ಕಡೆಗೆ ಸಾಗಿದ್ದೆ. ಸೂರ್ಯ ನೆತ್ತಿಗೇರಿದ್ದ..ನನ್ನ ನೆತ್ತಿಯನ್ನೂ ಬಿಸಿಮಾಡಿದ್ದ! ಕಾಲುಗಳು ಭಾರವೆನಿಸಿದರೂ, ನಡೆಯುತ್ತಿದ್ದವು. ಕುಳ್ಳಗಿನ ದೇಹ, ತಲೆಯಲ್ಲಿ ಒಂಚೂರು ಕೂದಲು ಇಲ್ಲದ ಆ ಯುವಕ ಕಣ್ಣುಮುಚ್ಚಿ ಬೀದಿ ಬದಿಯಲ್ಲಿ ಕುಳಿತು ಕೈಯೊಡ್ಡುತ್ತಿದ್ದ. ಆತನ ತಲೆ ಬಿಸಿಲಿಗೆ ಸುಡುವಂತೆ ಕಂಡುಬರಲಿಲ್ಲ..ಕನಸುಗಳಿದ್ದರೂ ಬದುಕನ್ನೇ ಮರೆತುಕೂತಿದ್ದ. ನನಗಿಂತ ಅನಾರೋಗ್ಯನಾದರೂ ಆತ ಆರೋಗ್ಯವಂತ. ಹೊಟ್ಟೆಯ ಹಸಿವು ಸುಡುವ ಬಿಸಿಲನ್ನೂ ಲೆಕ್ಕಿಸಲಿಲ್ಲ. ಆತನಿಗೆ ವೈದ್ಯರ ಅಗತ್ಯವಿರಲಿಲ್ಲ!

**ಮುಂದೆ ಸಾಗಿದಾಗ ಹಣ್ಣು ಮಾರುವವ. ಬಿರುಬಿಸಲನ್ನೂ ಲೆಕ್ಕಿಸದೆ ತರಕಾರಿ, ಹಣ್ಣುಗಳನ್ನು ತನ್ನ ಗಾಡಿ ಮೇಲೆ ಹಾಕೊಂಡು ದೂಡುತ್ತಾ ಸಾಗುತ್ತಿದ್ದ. ಚೌಕಾಸಿಯವರ ಚೌಕಾಸಿಗೆ ಮಣಿದು, ತಕೋಳ್ಳಿ ಅನ್ನುತ್ತಿದ್ದ ಆತನದೂ ಹೊಟ್ಟೆಪಾಡು.
**ಈ ಬೆಂಗಳೂರಿನಲ್ಲಿ ಸಿಗ್ನಲ್ ನಲ್ಲಿ ಒಂದಷ್ಟು ಹೊತ್ತು ನಿಮ್ಮ ವಾಹನಗಳು ನಿಂತಿರಲಿ..ನಿಮ್ಮನ್ನು ಹಿಂದೆ-ಮುಂದಿನಿಂದ ಪೀಡಿಸುವ ಹಿಜಡಾಗಳು ಕಣ್ಣಿಗೆ ಬೀಳುತ್ತಾರೆ. ಚಿಲ್ಲರೆ ನೀಡದಿದ್ರೆ ನಿಮ್ಮನ್ನು ಅವರು ಸುಮ್ಮನೆ ಬಿಡಲಾರರು..ನೀವು ಅಂಜಿ ನೀಡೇ ನೀಡುತ್ತೀರ. ಬೆಳಿಗ್ಗೆಯಿಂದ ಸಂಜೆತನಕ ಬದುಕು ಹೊರುವ ಕೆಲಸ..ನಿತ್ಯಪಾಡಿದು. ನಾನು ಬಸ್ಸಲ್ಲಿ ಬರುವಾಗ ಯಾವಾಗಲೂ ಕಣ್ಣಿಗೆ ಬೀಳೋ ಬದುಕಿನ ಸತ್ಯಗಳು!
**ಅಲ್ಲಿ ಬೀದಿ ಬದಿಯಲ್ಲಿ ಸುಲಭ ಶೌಚಾಲಯ, ಪಕ್ಕದಲ್ಲೇ ದೇವಸ್ಥಾನ. ಪುಟ್ಟ ಕಂಚಿನ ಪ್ರತಿಮೆ. ನಿತ್ಯ ನಡೆಯುವ ಪೂಜೆ-ಪುರಸ್ಕಾರಗಳು, ಜಾಗಟೆಯ ಸದ್ದು, ಮಂತ್ರಘೋಷ. ಟೂ ವೀಲರ್, ಕಾರಿನಲ್ಲಿ ಬರೋ ಮಂದಿ ಅಲ್ಲೇ ತಮ್ಮ ವಾಹನಗಳು ನಿಲ್ಲಿಸುತ್ತಾರೆ. ಒಂದಿಷ್ಟು ನೋಟುಗಳನ್ನು ಹುಂಡಿಗೆ ಹಾಕಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಬಿಎಂಟಿಸಿ ಬಸ್ಸಿನ ಕಿಟಕಿ ಬದಿಯಲ್ಲಿ ಕುಳಿತು ಹೊರಗೆ ಇಣುಕಿದ್ದ ನನ್ನ ಕಣ್ಣುಗಳಿಗೆ ಇದು ನಿತ್ಯದ ಸಂಗತಿ.

**ಆ ಪ್ರತಿಷ್ಠಿತ ಸ್ಕೂಲ್ ಎದುರಿನ ಬಸ್ ನಿಲ್ದಾಣದಲ್ಲಿ ನನ್ನ ಬಸ್ಸಿಗಾಗಿ ಕಾಯುತ್ತಿದ್ದೆ. ತಮ್ಮ ಮಕ್ಕಳನ್ನು ಕಾರಿನಲ್ಲಿ ತಂದು ಬಿಡುವ ಹೆತ್ತವರು ಮಗುವಿನ ಕೆನ್ನೆಗೆ ಮುತ್ತನಿಟ್ಟು, ಕ್ಲಾಸ್ ರೂಂಗೆ ಕಳಿಸುತ್ತಿದ್ದರು. ನೆನಪಾಯಿತು..ನನ್ನ ಯಜಮಾನ್ರಿಗೆ ಸಂಬಳ ಆಗಿಲ್ಲವೆಂದು..ಮಕ್ಕಳಿಗೆ ಪುಸ್ತಕ ತೆಗೆದುಕೊಟ್ಟಿಲ್ಲ. ಹಾಗಾಗಿ ಮಕ್ಕಳನ್ನು ಮುಂದಿನ ವಾರ ಶಾಲೆಗೆ ಕಳಿಸಬೇಕು ಎಂದಿರುವ ಆ ಅಮ್ಮ!
**ಹೊಟೇಲ್ ಎದುರುಗಡೆ ಇರುವ ಆ ಮೆಟ್ಟಿಲ ಮೇಲೆ ನಿಂತು ಆ ಕಪ್ಪು ಕನ್ನಡದ ಹುಡುಗಿ ಸಿಗರೇಟು ಸೇದುತ್ತಿದ್ದಳು, ಗ್ಲಾಸು ತೊಳೆಯುವ ಹುಡುಗ ಪಿಳಿಪಿಳಿಂತ ಆಕೆಯನ್ನೇ ದಿಟ್ಟಿಸುತ್ತಿದ್ದ..ಅವಳ ಕಾರು ಮರೆಯಾಗುವವರೆಗೂ!

**ರಾಶಿ ಹಾಕಿದ ಗೋಣಿಚೀಲಗಳ ಪಕ್ಕ ಕುಳಿತ ಆ ಪುಟ್ಟ ಕಂದಮ್ಮ ಸಿಕ್ಕಿದ್ದನ್ನು ಮೆಲ್ಲುತ್ತಾ, ಎದುರಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡೋ ಮಕ್ಕಳನ್ನು ಆಸೆ ಕಂಗಳಿಂದ ನೋಡುತ್ತಾ!

**ನೆನಪಾಯಿತು..ಪ್ರೀತಿಯ ಗೆಳೆಯ ಹೇಳಿದ ಕಥೆ ...'ಅವಳು ಮದುವೆಯಾಗಿದ್ದಳಂತೆ ಹುಡುಗನ ಸಂಬಳವನ್ನು ಪ್ರೀತಿಸಿ! 'ಸಂಬಳ ಪ್ರೀತಿಸಿದವಳಿಗೆ ' ಬದುಕಿನ ಒಲವು ಅರ್ಥವಾಗಲೇ ಇಲ್ಲವಂತೆ..ಆತನಿನ್ನೂ ಕೊರಗುತ್ತಿದ್ದನಂತೆ ಖಿನ್ನತೆಯಿಂದ....ಸಂಬಳ ಪ್ರೀತಿಗೆ ಬಲಿಯಾಗಿ'!

ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿಳಿದಿದ್ದೆ. ಮೆಜೆಸ್ಟಿಕ್ ಜನಜಂಗುಳಿ, ಕತ್ತಲಾಗುವಾಗ ಕಿತ್ತು ತಿನ್ನೋ ಕಣ್ಣುಗಳು, ಬದುಕೋ ದಾರಿಗಳು, ನಾನು ಬನಶಂಕರಿಯಲ್ಲಿ ರಸ್ತೆ ದಾಟಕ್ಕೆ ಪರದಾಡಿದ್ದು, ಪಾರ್ಕಲ್ಲಿ ಕುಳಿತು ಒಬ್ಬಳೇ ಅತ್ತಿದ್ದು, ಅಮ್ಮನ ನೆನಪಾಗಿ ದಿಂಬು ಒದ್ದೆಯಾಗಿಸಿದ್ದು, ಮನೆಗೆ ಹೋಗ್ತೀನಂತ ಅಣ್ಣ ಜೊತೆ ಜಗಳ ಆಡಿದ್ದು, ಅತ್ತಾಗ ಅವನು ಐಸ್ ಕ್ರೀಂ ಕೊಡಿಸಿದ್ದು, ಬೆಂಗಳೂರಿನ ಇಂಚಿಂಚನ್ನು ಪರಿಚಯ ಮಾಡಿಸಿದ್ದು, ಮೊದಲ ಬಾರಿಗೆ ಸಾನಿಯಾ ಮಿರ್ಜಾನ ಪ್ರೆಸ್ ಮೀಟ್ ಗೆ ಹೋಗಿ ಅರೆಬರೆ ಇಂಗ್ಲೀಷ್ ಬಾರದ ನಾನು ಅವಳ ಇಂಗ್ಲೀಷ್ ಅರ್ಥವಾಗದೆ..ಎಡಿಟರ್ ಜೊತೆ ಬೈಸಿಕೊಂಡಿದ್ದು....ಎಲ್ಲವೂ ನೆನಪಿನ ಪರದೆ ಮೇಲೆ ಸಾಗುತ್ತಲೇ ಇವೆ. ಬದುಕು ಸಾಗುತ್ತಲೇ ಇದೆ..ಮುಂದಕ್ಕೆ. ಬದುಕಿನ ಸತ್ಯ-ಮಿಥ್ಯಗಳನ್ನು ಕಣ್ಣಾರೆ ಕಾಣುತ್ತಾ, ಕೆಲವೊಮ್ಮೆ ಕಂಗಳು ಒದ್ದೆಯಾಗಿಸುತ್ತಾ, ಕೆಲವೊಮ್ಮೆ ಖುಷಿ ಖುಷಿಯಾಗುತ್ತಾ....!!
ಫೋಟೋ: ಎನ್.ಕೆ. ಸುಪ್ರಭಾ