Wednesday, December 31, 2008

ನಿಮ್ಮ ಪ್ರೀತಿಗಾಗಿ..ಖುಷಿ ಖುಷಿ ಸಾಲುಗಳು!

ಬೆಳ್ಳಂಬೆಳಗ್ಗಿನ ಚುಮು ಚುಮು ಚಳಿಗೆ ಮುಂಜಾವು ಊರಿಂದ ಬೆಂಗಳೂರಿಗೆ ಬಂದು ಇಳಿದವಳಿಗೆ ಬಸ್ಸ್ಟಾಂಡ್, ಬಸ್ಸುಗಳಲ್ಲಿ ಏನೋ ಹೊಸವರ್ಷದ ಗುಂಗಿತ್ತು. ಯುಗಾದಿ ನಮಗೆ ಹೊಸವರ್ಷ ಆದ್ರೂ ಜನವರಿ 1 ಅಂದ್ರೆ ಅದೇ ಸಡಗರದ ಹೊಸವರ್ಷವಾಗಿಬಿಟ್ಟಿದೆ.. .ಇರಲಿ ಬಿಡಿ, ಈಗ ಮತ್ತೊಂದು ಜನವರಿ 1 ಬಂದಿದೆ..ಡುಂಡಿರಾಜ್ ಹೇಳಿದಂತೆ ಅದೇ ಹಳೆಯ ಮೊಳೆಗೆ ಹೊಸ ಕ್ಯಾಲೆಂಡರ್ ನೇತುಹಾಕುವುದು. ಏನೇ ಇರಲಿ..ಹೆಚ್ಚೇನೂ ಬರೆಯಲ್ಲ...ಒಂದಿಷ್ಟು ಖುಷಿ ಖುಷಿ ಸಾಲುಗಳನ್ನು ನಿಮಗಾಗಿ...ನಿಮ್ಮ ಪ್ರೀತಿಗಾಗಿ ಇಲ್ಲಿ ಚೆಲ್ಲಿ ಬಿಟ್ಟಿದ್ದೀನಿ..ಎಲ್ಲೋ ಓದಿದ್ದು,...ಯಾರೋ ಹೇಳಿದ್ದು..ಯಾರೋ ಬರೆದಿದ್ದು..ನನ್ನ ಕಿವಿಗೆ ಕೇಳಿದ್ದು ಎಲ್ಲವೂ ಇಲ್ಲಿದೆ...ಪುರುಸೋತ್ತು ಇದ್ರೆ ಓದಿಕೊಳ್ಳಬಹುದು.

"ಗೆದ್ದ ಕಲಿಗಳು ಬಾಳನ್ನು ಆಳಿ ಇತಿಹಾಸಕ್ಕೆ ವಸ್ತುವಾಗುತ್ತಾರೆ. ಸೋತ ವೀರರು ತಮ್ಮ ಬಾಳಿನ ಇತಿಹಾಸ ತಾವೇ ಬರೆಯುತ್ತಾರೆ"

"ನಿಟ್ಟುಸಿರಿನ ಬಿರುಗಾಳಿಯೊಡನೆ ಸುರಿಸುವ ಕಣ್ಣೀರಿನ ಜಡಿಮಳೆಯಲ್ಲಿ ಗಂಡಿನ ಸಿಡಿಗುಂಡುಗಳೆಲ್ಲ ತೊಯ್ದು ಹಾಳಾಗುವುವು. ಅವನ ಗಂಡೆದೆಯೂ ಕರಗಿ ತಣ್ಣಗಾಗುವುದು. ಕಣ್ಣೀರಿನ ಈ ಪರ್ಜನ್ಯಾಸ್ತ್ರದ ಪ್ರಯೋಗ ತಂತ್ರ ಹೆಣ್ಣಿಗೆ ಚೆನ್ನಾಗಿ ಗೊತ್ತು"

"ಒಳಗೊಳಗೆ ಕುದಿವ ಭೂಕಂಪವಿದ್ದರೂ ಮೇಲೆ ಹುಲ್ಲಿನ ಹಸಿರು ತಂಪನ್ನೂ ಹೂವಿನ ನರುಗಂಪನ್ನೂ ಹಬ್ಬಿಸುವ ಭೂತಾಯಂತೆ ಹೆಣ್ಣಿನ ಹೃದಯ"

"ಒಲವೆಂಬ ಹೊತ್ತಗೆಯ ಓದಬಯಸುವ ನೀನು
ಬೆಲೆಯೆಷ್ಟು ಎಂದು ಕೇಳುವಿಯೋ ಹುಚ್ಚ?
ಹಗಲಿರುಳು ದುಡಿದರೂ ಹಲಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆ ವೆಚ್ಚ"

"ತಾರುಣ್ಯದ ಉನ್ಮಾದದಲ್ಲಿ ಜಗತ್ತೆಲ್ಲ ಸುಂದರಕಾಂಡ ವೆನಿಸುತ್ತದೆ. ಜೀವನವೆಲ್ಲ ಉದ್ಯೋಗಪರ್ವ ವೆನಿಸುತ್ತದೆ. ಪ್ರತಿಯೋರ್ವ ಗರ್ದಭನೂ ಗಂಧರ್ವನಾಗುತ್ತಾನೆ. ಅಪಸ್ಮಾರಿಯೂ ಅಪ್ಸರೆಯೆನಿಸುತ್ತಾಳೆ"

"ತನ್ನ ಕಿರಣ ತನಗೆ ಹಗಲು ಉಳಿದ ಬೆಳಕು ಕತ್ತಲು"

"ಧರ್ಮ ಎಂದರೆ ಆತ್ಮಸಾಕ್ಷಾತ್ಕಾರ, ಆತ್ಮಜ್ಞಾನ"

"ಪೆಟ್ಟಾಗಿರುವ ಕಡೆಗೆ ಏಟು ಬೀಳುವುದು, ಒಂಟಿ ಮರಕ್ಕೆ ಸಿಡಿಲು ಬಡಿಯೋದು ಪ್ರಕೃತಿ ನಿಯಮ"

"ಮನುಷ್ಯರನ್ನು ಪ್ರೀತಿಸುವುದಕ್ಕಿಂತ ನಿಸರ್ಗವನ್ನು ಪ್ರೀತಿಸುವುದರಲ್ಲೇ ನಿರಾಶೆಗೊಳಗಾಗುವ ಭೀತಿ ಕಡಿಮೆ"

"ಭಾವನೆ ಅಳಿದ ಮೇಲೆ ಉಳಿಯೋದು ಕೊಳೆತು ನಾರುವ ಶವ ಮಾತ್ರ"

"ನಿಜವಾದ ಅಪ್ಪ ಹೇಗಿರಬೇಕೆಂದರೆ ಯಾವ ಕಾರಣಕ್ಕೂ ಅನಾಥ ಮಕ್ಕಳೆದುರು ತಮ್ಮ ಮಕ್ಕಳನ್ನು ಮುದ್ದು ಮಾಡಬಾರದು"

"ಪುಟವಿಟ್ಟ ಚಿನ್ನದಂತಹ ಪಾರದರ್ಶಕರ ಸಾಲಿನಲ್ಲಿ ಇಂದಿನ ಅಧಿಕಾರಶಾಹಿಗಳ ನಂಬಿಕೆ, ನಡವಳಿಕೆಗಳು ಫ್ರಟ್ ಸಲಾಡ್ ನಲ್ಲಿ ಸಿಕ್ಕ ಸಿಕ್ಕೆ"

"ಒಬ್ಬ ಲಕ್ಷಾಧೀಶನ ಜೀವನ ಒಂದು ಕತೆಯಾಗಬಹುದಾದರೆ, ಭಿಕ್ಷುಕನ ಬಾಳು ಇನ್ನೂ ಸ್ವಾರಸ್ಯಕರವಾದ ಕತೆಯಾಗುವುದರಲ್ಲಿ ಸಂಶಯವಿಲ್ಲ. ಕತ್ತೆ ಜೀವನವೂ ಒಂದು ಸುಂದರವಾದ ಜೀವನಚರಿತ್ರೆಯಾಗಲಾರದೇ?"

"ರಾಜಬೀದಿಯಾಗಲು ಸಾಧ್ಯವಿಲ್ಲದಿದ್ದರೂ, ಕಾಲುದಾರಿಯಾಗಲು ಸಾಧ್ಯವಿದೆ. ಸೂರ್ಯನಾಗಲು ಸಾಧ್ಯವಾಗದಿದ್ದರೂ ಪುಟ್ಟ ನಕ್ಷತ್ರವಾಗಿ ಹೊಳೆಯುವುದು ಕಷ್ಟವೇನಲ್ಲ"

"ಕೆಲವೊಮ್ಮೆ ಸಮಸ್ಯೆಗಳಿಗೂ ನಮ್ಮನ್ನು ಸೋಲಿಸಲು ಧೈರ್ಯವಿರುವುದಿಲ್ಲ"

"ಮನುಷ್ಯನಲ್ಲಿರುವ ದೌರ್ಬಲ್ಯಕ್ಕೆ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಔಷಧವಲ್ಲ. ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ"

"ಮಾಡದಿರು ಬಾಳನ್ನು ಬೇಳೆಯಂತೆ..ಮಾಡು ಬಾಳನ್ನು ಇಡಿಗಾಳಿನಂತೆ"

"ಕಣ್ಣೀರು ತುಂಬಾ ಬೆಲೆಬಾಳಿವಂತದ್ದು. ಕಣ್ಣೀರಿನ ಬೆಲೆ ಅರಿಯದವರೆದುರು ಕಣ್ಣೀರು ಹಾಕಬಾರದು"

"ನಿನ್ನ ಕಣ್ಣು ಮತ್ತು ನಗುವನ್ನು ನಾ ಪ್ರೀತಿಸುವೆ..ನೀ ಖುಷಿಯಲ್ಲಿದ್ದಾಗ ಬೆಳಕು ನೀಡು"

"ಪ್ರೀತಿಯ ಸ್ಪರ್ಶವಿಲ್ಲದವನು ಕತ್ತಲಲ್ಲಿ ನಡೆಯುತ್ತಾನೆ"

Tuesday, December 23, 2008

ನೋಡಲು ಬಂದ..ಮೊಬೈಲು ಹುಡುಗ..!!

ಆವಾಗ ದ್ವಿತೀಯ ಪಿಯುಸಿ..ಅಕ್ಟೋಬರ್ ರಜಾ ಸಮಯ. ರಜೆಯಲ್ಲಿ ಮನೆಗೆ ಬಂದು
ಆರಾಮವಾಗಿ ಮನೆಯಲ್ಲಿ ಅಮ್ಮ ಮಾಡಿಟ್ಟಿದ್ದನ್ನು ತಿಂದು ತೇಗೋ ದೀನಗಳು. ನಮ್ಮೂರಿನ ಆನಂದನಿಗೆ ಊರ ಹುಡುಗಿಯರಿಗೆಲ್ಲ ಗಂಡು ಹುಡುಕೋ ಚಾಳಿ. ನಮ್ಮನೆಗೆ ಬಂದರೆ 'ಬಾಲೆಕ್ಕ'ನಿಗೆ ಹುಡುಗ ನೋಡ್ತೀನಿ ಅಂತ ಹೇಳುತ್ತಲೇ ಇದ್ದ. ಬಾಲೆಕ್ಕ ಅಂತ ಅಮ್ಮ ಪ್ರೀತಿಯಿಂದ ಕರೆಯುವ ಹೆಸರು. ಆನಂದನ ನೋಡಿದರೆ ನಂಗೆ ಎಲ್ಲಿಲ್ಲದ ಸಿಟ್ಟು ಬರುತ್ತಿತ್ತು. ಕೆಟ್ಟ ಕೆಟ್ಟ ಪದದಲ್ಲಿ ಬೈಯುತ್ತಿದ್ದೆ. ಅಷ್ಟಾದರೂ ಒಂದು ದಿನ ಹುಡುಕಿಯೇ ಬಿಟ್ಟ!

ಹುಡುಗ ಹುಡುಕಿದ ಖುಷಿಯಲ್ಲಿ ಬೆಳ್ಳಂಬೆಳಿಗ್ಗೆ ನಮ್ಮನೆಗೆ ಬಂದು ಅಮ್ಮನ ಜೊತೆ ರಾಗ ಎಳೆದ. ಆವಾಗಿನ್ನೂ ಹಳ್ಳಿಗಳಿಗೆ ಮೊಬೈಲು ಹೊಸತು. ಆನಂದ ಬಂದು ಅಮ್ಮನ ಜೊತೆ ಹುಡುಗನ ಬಗ್ಗೆ ಹೇಳಿದ್ದೇ , "ಬಾಲೆಕ್ಕನಿಗೆ ಒಳ್ಳೆ ಹುಡುಗ ಹುಡುಕಿದ್ದೀನಿ..ಗೌರ್ನಮೆಂಟ್ ಕೆಲಸದಲ್ಲಿದ್ದಾನೆ. ಓಡಾಟಕ್ಕೆ ಬೈಕ್ ಇದೆ. ಮನೆಯಲ್ಲೊಂದು ಜೀಪು ಇದೆ. ಅವನಿಗೊಂದು ಮತ್ತು ಅವನ ಮನೆಯಲ್ಲೊಂದು ಮೊಬೈಲ್ ಸೆಟ್ ಇದೆ. ಒಬ್ಬನೇ ಮಗ..ತುಂಬಾ ಒಳ್ಳೆಯವನು..." ಹೀಗೇ ಅವನ ಮೊಬೈಲು ಪ್ರತಿಷ್ಠೆ, ಮೈಬಣ್ಣ, ಕುಟುಂಬ, ಅವನ ಸರ್ಕಾರಿ ಕೆಲಸ..ಎಲ್ಲವನ್ನೂ ಪುಂಖಾನುಪುಂಖವಾಗಿ ಕೊಂಡಾಡಿದ್ದೇ ಕೊಂಡಾಡಿದ್ದು. ಅವನು ಹೇಳೋ ಪರಿ ಹೇಗಿತ್ತೆಂದರೆ..ನಮ್ಮಮ್ಮ ಮಗಳಿಗೆ ಮದುವೆನೇ ಆಗಿಬಿಡ್ತು ಅನ್ನುವ ಸಂಭ್ರಮದಲ್ಲಿದ್ದರು!!. ಅಬ್ಬಾ..! ಇವನಿಗೊಂದು ಗತಿ ಕಾಣಿಸಬೇಕು ಅಂದುಕೊಂಡು..ಸುಮ್ಮನಾದೆ. ಅಮ್ಮ, "ಆಯ್ತು..ಆನಂದ ನೋಡಿಕೊಂಡು ಹೋಗಲಿ..ಬಾಲೆಕ್ಕನಿಗೆ ರಜೆ ಮುಗಿಯಕೆ ಮೊದಲು ಕರೆದುಕೊಂಡು ಬಾ" ಅಂದ್ರು. ಬೈಕಿರುವ, ಜೀಪು ಇರುವ, ಮೊಬೈಲು ಹುಡುಗ ಮನೆಗೆ ಹೆಣ್ಣು ನೋಡೋ ದಿನ ಬಂದೇಬಿಟ್ಟಿತ್ತು..ಇನ್ನು ಒಂದೇ ದಿನ ಬಾಕಿಯಿರುವುದು. ಅಮ್ಮನಿಗಂತೂ ಖುಷಿಯೇ ಖುಷಿ..ಅಮ್ಮನತ್ರ ಹೇಳಿದೆ..ಅರ್ಜೆಂಟಾಗಿ ಕಾಲೇಜಿಗೆ ಹೋಗಬೇಕಂತೆ..ಫೋನ್ ಬಂದಿದೆ..ಹುಡುಗನ ಇನ್ನೊಂದ್ಸಲ ನೋಡಿಕೊಂಡು ಹೋಗಕ್ಕೆ ಹೇಳಿ..! ಅಮ್ಮನಿಗೆ ಸಿಟ್ಟು ಬಂತು. ಯಾಕಂದ್ರೆ ಮರುದಿನ ಹುಡುಗ ಬರುವವನಿದ್ದ. ಅಮ್ಮ ಹೇಳೋದನ್ನು ಕೇಳದೆ ಸೀದಾ ಉಜಿರೆಗೆ ಹೋಗಿಬಿಟ್ಟೆ. ನಾಲ್ಕು ದಿವಸ ಹಾಸ್ಟೇಲ್ ನಲ್ಲಿ ಹೋಗಿ ಕುಳಿತು ಆಮೇಲೆ ಮನೆಗೆ ಬಂದೆ. ಅಮ್ಮ ಒಳ್ಳೆ ಹುಡುಗ ಕೈ ತಪ್ಪಿ ಹೋದ ಅಂತ ರೇಗಾಡುತ್ತಿದ್ದರೆ, ಇತ್ತ ಆನಂದ 'ಮೊಬೈಲು, ಜೀಪು ಹುಡುಗ' ತಪ್ಪಿಹೋದನಲ್ಲಾ ಅಂತ ಗೊಣಗುತ್ತಿದ್ದ! ಅವನಿಗೆ ಸಿಗು ಪುಡಿಗಾಸೂ ಕೂಡ ಸಿಗದೆ ಹೋಯ್ತಲ್ಲಾ ಅಂತ ಅವನಿಗೆ ತಲೆಬಿಸಿ ಬೇರೆ.

ಮತ್ತೆ ಕಾಲೇಜು ಆರಂಭವಾಯಿತು. ನಾನು ಉಜಿರೆಗೆ ಹೋದೆ. ಪ್ರತಿ ಎರಡು ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದೆ ನಾನು. ಹಾಗೇ ಒಂದು ದಿನ ಶನಿವಾರ ಕಾಲೇಜಿಂದ ಮನೆಗೆ ಬರುವಾಗ ಪುತ್ತೂರು ಬಸ್ ಸ್ಟಾಂಡಿನಲ್ಲಿ ಆನಂದ ಹುಡುಗನ ಜೊತೆ ಪ್ರತ್ಯಕ್ಷ ಆಗಿದ್ದ. ನಿಜವಾಗಿಯೂ ಆತ ಮೊಬೈಲು ಹುಡುಗನೇ..ಕೈಯಲ್ಲಿರುವ ಮೊಬೈಲನ್ನು ಕುಟ್ಟುತ್ತಾ..ಯಾರಿಯಾರಿಗೋ ಕಾಲ್ ಮಾಡಿ ಏನೇನೋ ಮಾತಾಡುತ್ತಿದ್ದ. ಮೊಬೈಲ್ ಇಲ್ಲದ ನಾನು ಮಾತ್ರ ಅವನ ವಿಚಿತ್ರ ವರ್ತನೆಯನ್ನು ನೋಡಿ ದಂಗಾಗಿದ್ದೆ. ನೇರವಾಗಿ ಆನಂದನಿಗೆ ಹೇಳಿದೆ, "ಇನ್ನು ಮುಂದೆ ಯಾರನ್ನಾದ್ರೂ ಕರೆದುಕೊಂಡು ಬಂದ್ರೆ ನೆಟ್ಟಗಿರಲ್ಲ. ಮೊಬೈಲು, ಜೀಪು ಅಂತ ಗೊಣಗಾಡಿದ್ರೆ...ನೋಡು ನಿನ್ನ. ಅವನ ಮೊಬೈಲು, ಜೀಪನ್ನು ಹಿಡಿದುಕೊಂಡು ನಾನೇನು ಮಾಡ್ಲಿ?" ಅಂದಾಗ ಆ ಹುಡುಗ ಮತ್ತು ಆನಂದ ಇಬ್ಬರು ಬೆಪ್ಪರಂತೆ ನನ್ನನ್ನೆ ನೋಡುತ್ತಿದ್ದರು. ಮನೆಗೆ ಬಂದವಳು..ಅಮ್ಮನೆದುರು ಕೂಡ ರೇಗಾಡಿ ಬಾಯಿ ಮುಚ್ಚಿಸಿದೆ. ಕೊನೆಗೆ ಗಂಡು ನೋಡುವ ಕೈಂಕರ್ಯಕ್ಕೆ ಮಂಗಳ ಹಾಡಿದ್ದೆ.

ನಮ್ಮೂರು ಈಗಲೂ ಹಳ್ಳಿ. ಕೆಲ ಮನೆಗಳಲ್ಲಿ ಟಿವಿ, ಬಲ್ಬ್ ಉರಿಯುತ್ತಿದೆ. ಆವಾಗೆಲ್ಲ ಮೊಬೈಲು ನೆಟ್ ವರ್ಕ್ ಸಿಗ್ತಾ ಇರಲಿಲ್ಲ..ಮೊಬೈಲ್ ಕಾಣಿಸಿಕೊಳ್ಳುತ್ತಿದ್ದೂ ಅಪರೂಪವೇ. ಮೊಬೈಲ್ ಹಳ್ಳಿಗೆ ಕಾಲಿಡುವ ಸಮಯದಲ್ಲಿ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಈವಾಗ ಭಿಕ್ಷುಕರ ಕೈಯಲ್ಲೂ ಮೊಬೈಲು ಇದೆ.

Saturday, December 20, 2008

ನನ್ನಜ್ಜನ ಮೂರ್ತೆ ಕೆಲಸ..ಒಂದು ನೆನಪು...

ಳೆದ ತಿಂಗಳಿಂದ ಬರೇ, ನೋವು ವಿಷಾದಗಳೇ ಅಕ್ಷರರೂಪ ಪಡೆಯುತ್ತಿವೆ. ಅದೇ ಯಾಕೋ ಗೊತ್ತಿಲ್ಲ..ಇನ್ನು ತೀರ ಹಾಸ್ಯಮಯವಾಗಿ, ಚೆನ್ನಾಗಿ, ಖುಷಿಖುಷಿಯಾಗಿ ಬರೆಯೋಕೆ ನಂಗೆ ಬರಲ್ಲ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ.

ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ. ನನ್ನಜ್ಜ ಮೂರ್ತೆದಾರ(ಶೇಂದಿ ತೆಗೆಯುತ್ತಿದ್ದರು). ಬೆಳ್ಳಂಬೆಳಿಗ್ಗೆ ಅಜ್ಜ ಶೇಂದಿ ತೆಗೆಯೋ ಕಥೆ ಹೇಳುತ್ತೇನೆ. ಇದು ನನ್ನಜ್ಜನ ಕಥೆ ಅನ್ನೋದಕ್ಕಿಂತಲೂ ಶೇಂದಿ ತೆಗೆಯೋದು ನಮ್ಮ ಕುಲಕಸುಬು ಅದು. ನಾವು ಚಿಕ್ಕವರಿರುವಾಗ ಅಜ್ಜ ಶೇಂದಿ ತೆಗೆಯುತ್ತಿದ್ದರು. ಆವಾಗ ಅಜ್ಜ ಶೇಂದಿ ತೆಗೆಯೋದ್ರಲ್ಲಿ ನಿಸ್ಸೀಮರು, ಹಾಗೇ ಊರೆಲ್ಲಾ ಭಾರೀ ಫೇಮಸ್ಸು. ನಮ್ಮ ತಲಾತಲಾಂತರಗಳಿಂದ ಮಾಡಿಕೊಂಡು ಬರುತ್ತಿದ್ದ ಕುಲಕಸುಬಿದು. ನಮ್ಮ ಮುತ್ತಜ್ಜನ್ನೂ ಅದೇ ಮಾಡುತ್ತಿದ್ದರು. ಅಜ್ಜ ರಾತ್ರಿ ೪.30ಗೆ ಸರಿಯಾಗಿ ಶೇಂದಿ ತೆಗೆಯೋಕೆ ಹೊರಡೋರು. ಸೊಂಟಕ್ಕೆ ಒಡಂಕ್(ಪಟ್ಟಿ) ಹಾಗೂ ಕೈಯಲ್ಲಿ ಅರ್ಕತ್ತಿ(ಕಳ್ಳು ತೆಗೆಯುವ ಹರಿತವಾದ ಕತ್ತಿ) ಕಟ್ಟಿಕೊಂಡು, ಬೆನ್ನಿಗೆ ಪ್ಲಾಸ್ಟಿಕ್ ಕೊಡಗಳನ್ನು(ಕಳ್ಳು ತುಂಬಿಸಿಕೊಂಡು ಬರಲು) ಹೋಗುವ ಹಣ್ಣು ಹಣ್ಣು ಮುದುಕ ನಮ್ಮಜ್ಜ ಥೇಟ್ ನಮ್ ಥರದ ತರಲೆ ಹುಡುಗರ ಥರ ಕಾಣುತ್ತಿದ್ದರು.

ಹಾಗೇ ಹೋದ ಅಜ್ಜ ತಾಳೆಮರದ ಬುಡಕ್ಕೆ ಹೋದಂತೆ ಅಲ್ಲಿ ಊರಿನ ಗೌಡರೆಲ್ಲ ಶೇಂದಿ ತೆಗೆದು ಮರದಿಂದ ಇಳಿಯುವ ಅಜ್ಜನಿಗಾಗಿ ಕಾಯುತ್ತಿದ್ದರು. ಲೀಟರ್ ನಲ್ಲಿ ಅಜ್ಜ ಅಳೆದು ಶೇಂದಿ ಕೊಡುತ್ತಿದ್ದರು. ಕೆಲವೊಮ್ಮೆ ಶೇಂದಿ ಬೆಳ್ಳಂಬೆಳಿಗ್ಗೆ ತಾಳೆ ಮರದ ಬುಡದಲ್ಲೇ ಶೇಂದಿ ಮೂರ್ತಿ ಮಾರಾಟವಾಗುತ್ತಿತ್ತು. ಉಳಿದರೆ ಮಾತ್ರ ಗುತ್ತಿಗೆಗೆ( ಪರವಾನಗಿ ಶೇಂದಿ ಅಂಗಡಿ) ಮಾರುತ್ತಿದ್ದರು. ಹಾಗೇ ೧೦ ಗಂಟೆಗೆ ಶೆಂದಿ ಮಾರಾಟ ಮುಗಿದು ಬರುವಾಗಲೇ ಅಜ್ಜನೂ ಒಂದು ಲೀಟರ್ ಕುಡಿದು ಬಂದವರೇ ಅಜ್ಜಿಗೆ ಗದರುತ್ತಿದ್ದರು. ಬಂದ ತಕ್ಷಣ ತಂಗಳನ್ನು ಮೊಸರು ತಿಂದು ಮಲಗಿದವರೆ ಮತ್ತೆ ಮದ್ಯಾಹ್ನ ೧೨ ಗಂಟೆಗೆ ಮೂರ್ತೆ ಕೆಲಸಕ್ಕೆ ಹೋಗೋರು...ಆಮೇಲೆ ೨ ಗಂಟೆಗೆ ಬಂದು ಊಟ ಮಾಡಿ..ಮತ್ತದೆ ಸಂಜೆಗೆ ಮತ್ತೆ ಹೋಗುವರು. ಎಷ್ಟು ನಿಯತ್ತಾಗಿ ಅವರು ಮೂರ್ತೆ ಕೆಲಸ ಮಾಡೋರಂದ್ರೆ ಒಂದು ದಿನನೂ ಚಕ್ಕರ್ ಹಾಕಲ್ಲ. ಒಂದು ವೇಳೆ ಆ ಸಮಯಕ್ಕೆ ಸರಿಯಾಗಿ ಹೋಗಕ್ಕಾಗಲಂದ್ರೆ ಬೇರೆ ಯಾರನ್ನಾದ್ರೂ ಸಂಬಳಕ್ಕೆ ನೇಮಿಸಿ ಹೋಗುವರು ಅಜ್ಜ. ಆವಾಗ ಕುಟಂಬ ನಡೆಯುತ್ತಿದ್ದುದೇ ಮೂರ್ತೆಯಿಂದ. ಶೇಂದಿ ಮಾರಾಟ ಮಾತ್ರವಲ್ಲ ಅದರಿಂದ ಬೆಲ್ಲನೂ (ಓಲೆ ಬೆಲ್ಲ) ಮಾಡುತ್ತಿದ್ದರು. ಅದ್ರಲ್ಲಿ ತುಂಬಾ ಹಣ ಬರುತ್ತಿತ್ತು. ಕೈತುಂಬಾ ಹಣ ಬರುವಾಗ ಮನೆಯ ಯಜಮಾನನಾದ ಅಜ್ಜನ ಮುಖದಲ್ಲಿ ಯಜಮಾನಿಕೆ ಒಂಥರಾ ಏನೋ , ಗತ್ತು -ಗಡುಸು ಇದ್ದಂತೆ ಕಾಣುತ್ತಿತ್ತು. ಮಕ್ಕಳಾದ ನಾವೆಲ್ಲ..ಅಜ್ಜ ಕ್ಯಾಂಡಿಗೆ 5 ಪೈಸೆ ಕೊಡಿ ಅಂದ್ರು ಅಜ್ಜ ಮುಖ ಮೂತಿ ನೋಡದೆ ಬೈಯುತ್ತಿದ್ದರು. ಆವಾಗ ೫ ಪೈಸೆ ಕ್ಯಾಂಡಿಗೆ ಇತ್ತೆನ್ನುವುದು ನೆನಪು.

ಮೇಲೆ ನಮ್ಮಜ್ಜ ಶೇಂದಿಯಿಂದ ಊರಲೆಲ್ಲಾ ಫೇಮಸ್ಸು..ಯಾರಿಗೆ ಶೇಂದಿ ಬೇಕಾದ್ರೂ ಮೊದಲ ದಿನವೇ ಹೇಳಿ ಹೋಗುವರು. ಊರಿನ ಗೌಡ್ರೆಲ್ಲ ಹೇಳಿದ್ರೆ..ಅದನ್ನು ಹಾಗೇ ಇಡಬೇಕೆನ್ನುವುದು ಗೌಡರ ತಾಕತ್ತು. ಮಾರಿದ್ರೆ..ಅಜ್ಜನ ತಲೆನೇ ಹೋಗಬಹುದು. ಆ ನಮ್ಮ ಹಳ್ಳಿಯಲ್ಲಿ ಇದ್ದ ತಾಳೆಮರಗಳೆಲ್ಲ ಹೆಚ್ಚಿನವು ನಮ್ಮ ಅಜ್ಜನ ವ್ಯಾಪ್ತಿಗೆ ಬರುತ್ತಿದ್ದವು. ವರ್ಷಕ್ಕೆ ಇಷ್ಟು ಹಣಕ್ಕೆ ಅಂತ ಬೇರೆಯವರಿಂದ ಗುತ್ತಿಗೆ ಆಧಾರದಲ್ಲಿ ತಾಳೆಮರಗಳನ್ನು ಕೊಂಡುಕೊಳ್ಳಲಾಗುತ್ತಿತ್ತು. ಮತ್ತೆ ತಾಳೆಮರ ಮಾಲೀಕನಿಗೆ ವರ್ಷಕ್ಕೆ ಇಂತಿಷ್ಟು ಹಣದ ಜೊತೆಗೆ ದಿನಾ ಬೆಳಿಗ್ಗೆ ಉಚಿತವಾಗಿ ಒಂದು ಲೀಟರ್ ಗಟ್ಟಲೆ ಶೇಂದಿ ಕೊಡಬೇಕು..ಅದೂ ಬೆಳ್ಳಂಬೆಳಿಗ್ಗೆ ಆತ ತಮ್ಮ ಮನೆಯವರನ್ನು ಕಳಿಸಿಕೊಡುತ್ತಿದ್ದ ಶೇಂದಿ ಮರದ ಬುಡಕ್ಕೆ. ಒಂದು ವೇಳೆ ಕೊಟ್ಟಿಲ್ಲವೋ...ಬರುವ ವರ್ಷ ಅಜ್ಜನಿಗೆ ತಾಳ ಮರ ಇಲ್ಲ! ಕೊಡಲ್ಲಂದ್ರೆ...ಸಂಸಾರದ ಗತಿ?! ಹಾಗೇ ಹೆದರಿಕೊಂಡೇ ಅವರಿಗೆ ಶೇಂದಿ ಕೊಡುತ್ತಿದ್ದರು. ಮತ್ತೆ ಕೆಲವರು ತಾಳೆಮರಕ್ಕಾಗಿಯೇ ಶೇಂದಿ ಕೊಡೋದ್ರಲ್ಲಿ ಪೈಪೋಟಿ ಇರುತ್ತಿತ್ತು.

ಷ್ಟೇ ಅಲ್ಲ, ಶೇಂದಿ ತೆಗೆಯೋದು ಕೂಡ ಒಂದು ಕಲೆ. ನಮ್ಮ ಜಾತೀಲಿ ಅದೊಂದು ಗೌರವ, ಪ್ರತಿಷ್ಠೆಯ ಕೆಲಸ. ಎಲ್ಲರೂ ಮರಕ್ಕೆ ಹತ್ತಿ ಶೇಂದಿ ತೆಗೆಯಕ್ಕೆ ಆಗಲ್ಲ..ಅದಕ್ಕೆ ಅಭ್ಯಾಸ ಬೇಕು. ಆಗಿನ ಕಾಲದಲ್ಲಿ ಶೇಂದಿ ತೆಗೆಯಕನೇ ತರಬೇತಿ ಕೊಡುತ್ತಿದ್ದರು. ಅಷ್ಟುದ್ಧದ ತಾಳೆಮರಕ್ಕೆ ಹತ್ತಬೇಕು..ಅದು ಕತ್ತಿ, ಬಿಂದಿಗೆಗಳನ್ನು ಹಿಡಕೊಂಡು ತುಂಬಾ ಕಷ್ಟ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಅಂಚುಗಳಲ್ಲಿ ಮಾತ್ರ ಇಂಥ ತಾಳೆಮರಗಳು, ಶೇಂದಿ ತೆಗೆಯೋದು ಕಾಣಬಹುದು.

ಹೌದು..ನಮ್ಮ ಕುಲಕಸುಬು ಅಂದೆ. ಈವಾಗ? ಆ ಕಸುಬು ಏನೂಂತ ಗೊತ್ತಿಲ್ಲ. ಹಳ್ಳಿಗಳಲ್ಲಿ ತಾಳೆಮರಗಳೇ ಕಾನುತ್ತಿಲ್ಲ. ಈಗ ಕೆಲವೆಡೆ ತೆಂಗಿನ ಮರದಿಂದಲೂ ಶೇಂದಿ ತೆಗೆಯುತ್ತಾರೆ..ಅದಕ್ಕೆ ಏನೇನೂ ಮಿಶ್ರ ಮಾಡಿ ಶೇಂದಿಯ ನಿಜವಾದ ರುಚಿಯೇ ಸಿಗಲ್ಲ. ನಾವು ಚಿಕ್ಕದಿರುವಾಗ ಶೇಂದಿ ಕುಡಿಯುತ್ತಿದ್ವಿ..ಅದೂ ಚಳಿಗಾಲದಲ್ಲಿ ಸಿಹಿ ಇರುತ್ತೆ..ಅದನ್ನು ಕುಡಿಯಕೆ ಖುಷಿಯಾಗುತ್ತಿತ್ತು. ನಮ್ಮಜ್ಜ ನಮಗೆಲ್ಲಾ ೨-೩ ನಷ್ಟು ಶೇಂದಿ ಬಾಯಿಗೆ ಹಾಕೋರು..ಆದ್ರೆ ಅದೇ ಅಮಲು. ಥೇಟ್ ಇಂಗು ತಿಂದ ಮಂಗನ ಪಾಡು ನಮ್ಮದು. ಈವಾಗ ಊರಿಗೆ ಹೋದ್ರೆ..ಯಾರು ಶೇಂದಿ ತೆಗೆಯಲ್ಲ. ನಮ್ಮ ಕುಟುಂಬದಲ್ಲೇ ಇಲ್ಲ. ಇಡೀ ಹಳ್ಳಿಯಲ್ಲಿ ಒಬ್ಬರಷ್ಟೇ ಶೇಂದಿ ತೆಗೆಯೋದನ್ನು ಉದ್ಯೋಗ ಮಾಡಿಕೊಂಡು ಬಂದಿದ್ದಾರೆ. ಯಾರಾದ್ರೂ ಆ ಬಗ್ಗೆ ಮಾತಾಡಿದ್ರೆ.."ಅಯ್ಯೋ ಅದನ್ನಾರು ಮಾಡುತ್ತಾರೆ" ಎಂದು ಉದಾಸೀನ ತೋರುವವರೇ ಜಾಸ್ತಿ.

ಷ್ಟು ಬೇಗ ಬದುಕು ಬದಲಾಗುತ್ತೆ ನೋಡಿ. ಒಂದು ಸಂಸಾರಕ್ಕೆ ಅನ್ನ ಹಾಕುತ್ತಿದ್ದ ಮೂರ್ತೆ ಕೆಲಸ ಈಗ ಯಾರಿಗೆ ಬೇಕು? ಯಾರೂ ಇಷ್ಟಪಡಲ್ಲ. ಹೊಲದಲ್ಲಿ ದುಡಿಯೋದನ್ನು ಯಾರು ಇಷ್ಟಪಡುತ್ತಾರೆ? ನನ್ನ ಮಗ ಹುಟ್ಟುವಾಗಲೇ ಕಂಪ್ಯೂಟರ್ ಮೌಸ್ ಹಿಡಿಬೇಕು..ಅವನ್ನ ನೋಡಿ ಜಗತ್ತು ಮೂಗಿನ ಮೇಲೆ ಕೈ ಇಡಬೇಕು..ಅನ್ನೋ ಹೆತ್ತವರೇ ಜಾಸ್ತಿ. ಮೊನ್ನೆ ಮೊನ್ನೆ ಆರ್ಥಿಕ ತಜ್ಷರೊಬ್ರು 'ಆರ್ಥಿಕ ಬಿಸಿ' ಕುರಿತು ಮಾತಾಡಿ ಇನ್ನು ವ್ಯವಸಾಯನೇ ಗತಿ ಅನ್ನುತ್ತಿದ್ದರು. ಇನ್ನು 'ಕಂಪ್ಯೂಟರ್ ಮೌಸ್' (ನಾನೂ ಹೊರತಾಗಿಲ್ಲ)ಹಿಡಿದವ್ರು ಏನು ಮಾಡಬೇಕೋ?...!

Friday, December 19, 2008

ಅಂತರ್ವಾಣಿ ಕವನ

'ಏನೂ ಬೇಡ ಹಿಡಿ ಪ್ರೀತಿ ಕೊಡ್ತೀರಾ...? ಬರಹದ ಚಿತ್ರ ನೋಡಿ ಅಂತರ್ವಾಣಿ ಬ್ಲಾಗ್ ನ ಜಯಶಂಕರ್ ಕಳಿಸಿರುವ ಪುಟ್ಟದಾದ ಸರಳ ಕವನ ಇಲ್ಲಿದೆ. ..

ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು,
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?

ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?

ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?

ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!

Monday, December 15, 2008

ಏನೂ ಬೇಡ..ಒಂದು ಹಿಡಿ ಪ್ರೀತಿ ಕೊಡ್ತೀರಾ..?!

ಹಾಲು ಬೆಳದಿಂಗಳಲ್ಲಿ ಚಂದಿರ ಕಣ್ಣಮುಚ್ಚಾಲೆಯಾಡುತ್ತಿದ್ದ. ಮನೆಯ ಟೆರೇಸ್ ಮೇಲೆ ಕುಳಿತು ವಿದ್ಯುತ್ ಬಲ್ಬುಗಳಿಂದ ಝಗಝಗಿಸುತ್ತಿದ್ದ ನಗರವನ್ನ, ಅರ್ಜೆಂಟಾಗಿ, ವೇಗದಿಂದ ಓಡುವ ವಾಹನಗಳನ್ನು ನೋಡುತ್ತಿದ್ದಂತೆ,..ಥತ್! ಪವರ್ ಕಟ್ ಆಗ್ಲಿ..ಈಗ್ಲೇ ಕತ್ತಲಾಗಲೀ ಅನಿಸಿತ್ತು. ಬರೇ ಬೆಳದಿಂಗಳಲ್ಲಿ ಚಂದಿರನ ಕಣ್ತುಂಬಾ ತುಂಬಿಕೊಳ್ಳುವ ಹಂಬಲ ನನ್ನದಾಗಿತ್ತು. "ದಯವಿಟ್ಟು ದೀಪವಾರಿಸು ಗೆಳೆಯಾ, ನನಗೆ ಬೆಳಕು ಬೇಕಿದೆ"ಎನ್ನುವ ತಾವೋ ಬರೆದ ಕವಿತೆಯ ಸಾಲು ನೆನಪಾಯಿತು. ಆದರೆ ಪವರ್ಕಟ್ ಆಗಲಿಲ್ಲ. ಕತ್ತಲಲಲ್ಲಿ 'ಬೆಳದಿಂಗಳು' ನೋಡೋ ನನ್ನಾಸೆ ಫಲಿಸಲಿಲ್ಲ. ಒಬ್ಬಳೇ ಕುಳಿತವಳಿಗೆ ಪುಸ್ತಕ, ಪೆನ್ನು ಸಾಥ್ ನೀಡಿದ್ದವು. ಏನಾದ್ರೂ ಬರೆಯೋಣ ಎಂದುಕೊಂಡವಳಿಗೆ ..ಹೊಳೆದದ್ದು 'ಬದುಕಿನ ಪ್ರೀತಿ'!

ಪ್ರೀತಿ..ಯಾರಿಗೆ ತಾನೇ ಇಷ್ಟವಾಗಲ್ಲ? ನನಗೂ ಇಷ್ಟವಾಗುತ್ತೆ..ನಿಮ್ಮ ಹೃದಯಕ್ಕೂ ಆಪ್ತವಾಗುತ್ತೆ. ಪ್ರೀತಿ..ನಿತ್ಯ ನಮ್ಮ ಪೀಡಿಸಲ್ಲ, ಸವಿಸವಿಯಾಗಿ ಕಾಡಿಸುತ್ತೆ. ಇಡೀ ಜಗತ್ತಿಗೆ ಅಪ್ಯಾಯಮಾನವಾಗುತ್ತೆ. ಸಮಸ್ತ ಜೀವಸಂಕುಲಕ್ಕೂ ಪ್ರೀತಿ ಹತ್ತಿರವೆನಿಸುತ್ತೆ. ನಮಗೆ ಖುಷಿ ಕೊಡುತ್ತೆ..ಮಾತು ಬಾರದ ಪ್ರಾಣಿ ಪ್ರಪಂಚ, ಚಿಲಿಪಿಲಿ ಎನ್ನುವ ಹಕ್ಕಿ ಪ್ರಪಂಚ, ಘಮ್ಮೆನ್ನುವ ಪುಷ್ಪಲೋಕ..ಹೀಗೆ ಎಲ್ಲೆಲ್ಲೂ ಪ್ರೀತಿ ಇರಬಹುದೇನೋ ಅಲ್ವೇ? ಮೊನ್ನೆಮೊನ್ನೆ ತಂದ ನಾಯಿಮರಿ ನನ್ನ ಕಂಡರೆ..ಬಾಲ ಅಲ್ಲಾಡಿಸುತ್ತೆ...ಮನೆಯಲ್ಲಿದ್ದ ಬೆಕ್ಕು ಮರಿ..ಮಿಯಾಂ ಮಿಯಾಂ ಅನ್ನುತ್ತಾ ನಮ್ಮ ಹಿಂದೆ ಸುತ್ತುತ್ತೆ...ನಮ್ಮ ಮುಖ ಕಾಣದಿದ್ದಾಗ ಹಟ್ಟಿಯಲ್ಲಿದ್ದ ಹಸು ಅಂಬಾ ಎಂದು ಕರೆಯುತ್ತೆ..ಗೆಳೆಯ/ಗೆಳತಿ ನಿತ್ಯ ಶುಭೋದಯ ಅಂದಾಗ ಮನಸ್ಸೆಕೋ ಖುಷಿಗೊಳ್ಳುತ್ತೆ..ಅಣ್ಣನೊಂದಿಗೆ ಪುಟ್ಟ ಪುಟ್ಟ ವಿಷ್ಯಗಳಿಗೂ ಜಗಳವಾಡುವುದು..ಅಮ್ಮನತ್ರ ಬೆಳ್ಳಂಬೆಳಿಗ್ಗೆ ಮುನಿಸಿಕೊಳ್ಳೋದು ..ಹೊಸೆದ ಹೊಂಗನಿಸಿದೆ ಅಕ್ಷರ ರೂಪ ನೀಡಿದ ಗುರು ನಿತ್ಯ ಬೈಯುತ್ತಿದ್ದರೂ ನಮ್ಮನ್ನೆಷ್ಟು ಪ್ರೀತಿಸುತ್ತಿದ್ದರು? ಪುಟ್ಟ ಮಗುವಾಗಿದ್ದಾಗ ಎತ್ತಿ ಆಡಿಸಿದ ನಮ್ಮೂರ ಹಣ್ಣು ಹಣ್ಣು ಅಜ್ಜಿ..ನಾನು ಮನೆಗೆ ಹೋದ ತಕ್ಷಣ..ಮನೆಯೆದುರು ಪ್ರತ್ಯಕ್ಷ ಆಗ್ತಾಳೆ...ಈ ಎಲ್ಲವೂ ಪ್ರೀತಿಯ ಒಂದು ಭಾಗ ಎಂದನಿಸುತ್ತೆ.
ಥತ್! ಪ್ರೀತಿಯ ವಿವಿಧ ಮಗ್ಗುಲುಗಳನ್ನು ತೆರೆಯುತ್ತಾ ಹೋದಂತೆ...ಜಗತ್ತಿನ ಇನ್ನೊಂದು ಮುಖ ಕಣ್ಣೆದುರು ಬಂದು ನಿಲ್ಲುತ್ತೆ. ನಾನು ಪ್ರೀತಿ ಪ್ರೀತಿ ಅಂತ ಬಡ್ಕೋತಾ ಇದ್ದೀನಿ. ಆದರೆ..ಜಗತ್ತು?! ಬೆಳಿಗೆದ್ದು ಪತ್ರಿಕೆ ತೆರೆದರೆ, ಟಿವಿ ಆನ್ ಮಾಡಿದರೆ..ಲೋಕಾನ ಕಣ್ತೆರೆದು ನೋಡಿದರೆ..ಬರೇ ರಕ್ತಪಾತ, ಕೊಲೆ, ಮಾರಣಹೋಮ, ವಂಚನೆ, ಮೋಸ, ಕಳ್ಳತನ, ಸುದ್ದಿಗಳೇ ಕಣ್ಣಿಗೆ ಬೀಳುತ್ತವೆ. ಪ್ರೀತಿಯ ಅಕ್ಷಯ ಪಾತ್ರೆ ನೆತ್ತರಲೋಕದಂತೆ ಭಾಸವಾಗುತ್ತೆ. ಉಗ್ರರು ಬಾಂಬು ಹಾಕ್ತಾರೆ, ಅಮಾಯಕರನ್ನು ಕೊಲ್ತಾರೆ..ಹಸಿದ ಹೊಟ್ಟೆಗೆ ಅನ್ನ ಇಲ್ಲದಂತೆ ಮಾಡುತ್ತಾರೆ..ಎಷ್ಟೋ ಬದುಕುವ ಜೀವಗಳಿಗೆ ಜೀವಗಳಿಗೆ ಅಪ್ಪ-ಅಮ್ಮನೆಂಬ ದೇವರನ್ನು ಇಲ್ಲದಂತೆ ಮಾಡ್ತಾರೆ..ಅವರೆದುರು ಪ್ರೀತಿ ಬಗ್ಗೆ ಬೊಬ್ಬಿಟ್ಟರೆ ಅವರಿಗೆ ಕೇಳಿಸುವುದೇ? ಅವರೆದುರು 'ಪ್ರೀತಿಸುತ್ತಿವಿ..ಹಿಡಿಯಷ್ಟು ಪ್ರೀತಿ ನೀಡಿ. ಜಗತ್ತು ನೆಮ್ಮದಿಯಾಗಿರಲಿ' ಅಂದ್ರೆ ಅದಕ್ಕೆ ಅರ್ಥವಿರುತ್ತಾ? ಇಲ್ಲ..ಇಲ್ಲ.
ಜಗತ್ತು ಹೀಗಿದ್ದರೂ ಹಿಡಿಪ್ರೀತಿ ತೋರಿಸಿದ್ದರೆ?! ಹಸಿದ ಹೊಟ್ಟೆ ತುಂಬುತ್ತೆ..ಖಾಲಿ ಹೃದಯದಲ್ಲಿ ಬೆಳಕು ಬೆಳಗಬಹುದು. ದುಃಖದ ಕಾರ್ಮೋಡ ತುಂಬಿದ ಮನಸ್ಸು ಹಗುರವಾಗಬಹುದು. ಬೊಗಸೆ ಹನಿ ಪ್ರೀತಿಯಿಂದ ಜಗತ್ತು ತುಂಬಾ ನೆಮ್ಮದಿಯಿಂದ ಇರಬಹುದು ಅನಿಸಲ್ವೇ? ಜಗದ ನೆಮ್ಮದಿಗೆ, ಸುಖನಿದ್ರೆಗೆ ಸುಖ ಸುಪ್ಪತ್ತಿಗೆ ಬೇಡ..ಮೊಗೆದಷ್ಟು ಬತ್ತದ ಪ್ರೀತಿ ಬೇಕು..ಕೊನೆಗೆ ಒಂದು ಬೊಗಸೆಯಷ್ಟು ಪ್ರೀತಿ ನೀಡಿ..ಅಷ್ಟೇ ಸಾಕು..ಆದ್ರೆ ಒಡೆದ ಕನ್ನಡಿನಾ ಒಂದಾಗಿಸುವವರು ಯಾರು?! ಹಿಡಿಪ್ರೀತಿ ಕುರಿತು ಯೋಚಿಸುತ್ತಾ ಕುಳಿತವಳಿಗೆ..ಕವನ ಹುಟ್ಟಲಿಲ್ಲ..ಬರಹ ಹುಟ್ಟಿತು. ಇದು ನನಗನಿಸಿದ್ದು..ತೋಚಿದ್ದು ಗೀಚಿದ್ದೇನೆ ಅಷ್ಟೇ.

Wednesday, December 10, 2008

ನೆನಪಾಗುವಳು ಅಪ್ಪಿ....

ಅದ್ಯಾಕೋ ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ಅಪ್ಯಾಯಮಾನವಾಗಿ ಬಿಡುತ್ತವೆ.
ಮನುಷ್ಯರಿಗಿಂತ ಅವೇ ಹೆಚ್ಚು ಪ್ರೀತಿ ತೋರಿಸುತ್ತವೆ. ಮೊನ್ನೆ ಮೊನ್ನೆ ಪ್ರಕಾಶ್ ಹೆಗ್ಡೆ ಅವರ ಬ್ಲಾಗ್ ನಲ್ಲಿ ಅವರ ಪ್ರೀತಿಯ ನಾಯಿ ಕುರಿತು ಬರೆದಿರುವುದನ್ನು ಓದುತ್ತಿದ್ದಂತೆ ನನ್ನ ಮುದ್ದಿನ ಅಪ್ಪಿ ನೆನಪಾದಳು. ಚಿಕ್ಕವಳಿರುವಾಗ ನಾನು ತುಂಬಾನೇ ಪ್ರೀತಿ ಮಾಡಿದ್ದ, ನನ್ನ ತಟ್ಟೆಯಲ್ಲೇ ಆಕೆಗೂ ಊಟ ಹಾಕಿದ್ದ, ಅವಳೊಂದಿಗೆ ನಾನು ಮಗುವಾಗುತ್ತಾ, ನನ್ನ ಮಡಿಲಲ್ಲಿ ಮಲಗಿ ಜೋಗುಳ ಹಾಡುತ್ತಿದ್ದ ಆ ಪ್ರೀತಿಯ ಅಪ್ಪಿ ಜೊತೆ ಮೂರು ವರ್ಷ ಕಳೆದ ದಿನಗಳು ನೆನಪಾದುವು.
ನನಗಾಗ ಮೂರ್ನಾಲ್ಕು ವರ್ಷವಾಗಿರಬಹುದು. ನಮ್ಮನೆ ಕೆಂಪಿ ಹಸುವಿನ ಮಗಳು ಅಪ್ಪಿ ಆಗಿನ್ನೂ ಹಸುಗೂಸು. ಕೆಂಪಿಗೆ ಅಪ್ಪಿ ಹುಟ್ಟಿದಾಗ ನನಗಂತೂ ಹೊಸ ಗೆಳತಿ ಸಿಕ್ಕ ಸಂಭ್ರಮ. ಮನೆಯಲ್ಲಿ ಅಮ್ಮನಿಗಿಂತಲೂ ಅಪ್ಪಿ ಜೊತೆ ಇರೋದು ಅಂದ್ರೆ ಭಾಳ ಇಷ್ಟ. ನೋಡಲೂ ಮುದ್ದಾಗಿದ್ದ ಅವಳು ಚಂಗನೆ ನಗೆಯುತ್ತಾ ಬರೋದು, ಅಂಗಳವಿಡೀ ಖುಷಿ ಖುಷಿಯಿಂದ ಓಡುವಾಗ ಅವಳ ಬಾಲ ಹಿಡಿಯಲು ಓಡಿ ನಾನೂ ಎಡವಿ ಬೀಳೋದು..ಅವಳಿಂದ ತುಳಿಸಿಕೊಳ್ಳೋದು ಎಲ್ಲವೂ ಯಾಕೋ ಅಪ್ಯಾಯಮಾನ. ಅದೇ ಖುಷಿ.
ಅಮ್ಜಮ ಬೆಳಿಗ್ಗೆ ಹಾಲು ಕೊಡಕೆ ಡಿಪೋಗೆ ಹೋದರೆ, ನಾನು ಆಗಿನಿಂದಲೇ ನನ್ನ ಬೆಡ್ ಶೀಟ್ ಕೊಂಡೋಗಿ ಅಪ್ಪಿಯನ್ನು ಕಟ್ಟಿಹಾಕುವ ಜಾಗದಲ್ಲಿ ಅವಳ ಜೊತೆ ಮಲಗುತ್ತಿದ್ದೆ. ಅವಳ ಮೈಯಲ್ಲಿದ್ದ ಮಣ್ಣು ತೊಳೆಯುವುದು, ಕಿವಿ ತೊಳೆಯುವುದು, ಮೈಯಲ್ಲಿದ್ದ ಉನುಗು ತೆಗೆಯೋದು..ಹೀಗೆ ಅಲ್ಲಿ ಸ್ಚಚ್ಛಗೊಳಿಸಿ ನಾನು ತಿನ್ನುವ ಆಹಾರವನ್ನೇ ಅವಳಿಗೆ ಕೊಡೋದು..ಅವಳ ಕೊರಳಿಗೆ ಚೆಂದದ ಮಣಿಯುಳ್ಳ ಹಾರ ಹಾಕೋದು ಎಲ್ಲಾವನ್ನೂ ಮಾಡುತ್ತಿದ್ದೆ. ಅಪ್ಪಿನೂ ಅಷ್ಟೇ..ಬೆಳಿಗ್ಗೆ ಹಾಕು ಕುಡಿದ ಮೇಲೆ ನನ್ನ ಬರುವಿಗಾಗಿ ಅಂಬಾ ಎನ್ನುತ್ತಿದ್ದಳು. ಹಟ್ಟಿಯಿಂದ ಓಡಿ ಸೀದಾ ಮನೆಯೊಳಗೆ ಬರುವಳು. ನನ್ನ ಕೈಯನ್ನೆಲ್ಲ ನೆಕ್ಕೋಳು. ಥೇಟ್ ಮನುಷ್ಯರಂತೆ ಆಕೆನೂ ನನ್ನ ತುಂಬಾ ಪ್ರೀತಿ ಮಾಡುತ್ತಿದ್ದಳು. ಒಂದೊಂದು ಬಾರಿ ಅವಳ ಕಣ್ಣಿಂದ ನೀರು ಸುರಿಯುತ್ತಿದ್ದಾಗ, ಅದನ್ನು ಒರೆಸುತ್ತಾ ನಾನೂ ಅಳುತ್ತಿದ್ದೆ. ಪಾಪ! ಮೂಕಪ್ರಾಣಿಗೆ ಹೇಳಲೇನೂ ಬರದು. ಅಮ್ಮ ಹಾಲು ಮಾರಿ ಬರುವಾಗ ದಿನಾ ಬೇಬಿ ಬಿಸ್ಕೀಟು ತರೋದು..ಅದ್ರಲ್ಲಿ ಹೆಚ್ಚು ಪಾಲು ಅಪ್ಪಿಗೆ. ಆವಾಗ ಬೇಬಿ ಬಿಸ್ಕಿಟ್ ಗೆ ಒಂದು ಪ್ಯಾಕ್ ಗೆ ೧.೩೦ ರೂ. ಈಗ? ಅದೇ ಬಬೇಬಿ ಬಿಸ್ಕಿಟು ಇದೆಯಾ ಅಂತಾನೇ ಗೊತ್ತಿಲ್ಲ.
ಅಪ್ಪಿ ಜೊತೆ ಮಲಗಿದ ನನ್ನ ಕಿವಿಯಲ್ಲೂ ಒಂದು ಸಲ ಉನುಗು ಸೇರಿಕೊಂಡಿದ್ದು ದೊಡ್ಡ ಕತೆ. ಉನುಗು ಸೇರಿದ್ರೆ ಈಗ ಆಪರೇಷನ್ ಮಾಡ್ತಾರೆ. ನನ್ನ ಕಿವಿ ಜೋರಾಗಿ ನೋವಾಗಲೂ ಶುರುವಾದಾಗ ಅಮ್ಮ ಕಾಣಿಯೂರಿನ ಡಾಕ್ಟರ್ ಶಶಿಧರ ಹತ್ರ ಕರೆದುಕೊಂಡು ಹೋದಾಗ ಅವರೇನೋ ಕಿವಿಗೆ ಹಾಕೋ ಮದ್ದು ಕೊಟ್ಟರು .ಅದ್ಕೆ ನಮ್ಮಜ್ಜಿ ಇಲ್ಲ, ಈ ಮದ್ದಿಂದ ಎಲ್ಲಾ ಆಗಲ್ಲ..ಅಂತ ಹೇಳಿ ಅಮ್ಮ ಎಲ್ಲೊ ಹೊರಗಡೆ ಹೋದ ಸಮಯದಲ್ಲಿ ಉನುಗು ಹೊರಬರಕ್ಕೆ ಹಲಸಿನ ಹಸಿ ಹಸಿ ಅಂಟು ಕಿವಿಗೆ ಸುರಿದದ್ದು. ಅಬ್ಬಾ! ಬೇಕಾ..ಯಾರಾದ್ರೂ ಅಂಟು ಸುರೀತಾರ? ಸುರಿದ ದಿನ ಏನೂ ಆಗಲಿಲ್ಲ..ನೋವು ನಿಂತುಹೋಯಿತು. ಯಾಕಂದ್ರೆ ಉನುಗು ಅಂಟು ಜೊತೆ ಅಂಟಿ ಸತ್ತೇ ಹೋಗಿತ್ತು. ಆದರೆ ಕಿವಿ ಕೇಳಬೇಕಲ್ಲಾ? ನಂತರ ನನ್ನ ಏಳನೇ ತರಗತಿ ಯವರೆಗೆ ಒಂದು ಕಿವಿನೇ ಕೆಳಿಸಲಿಲ್ಲ. ಆವಾಗಲೇ ಡಾಕ್ಟರ್ ಅದನ್ನು ತೆಗೆದದ್ದು. ಆಮೇಲೆ ಕಿವಿ ಸರಿಯಾಯಿತು ಬಿಡಿ. ಇದು ಅಜ್ಜಿ ಆವಾಂತರ. ಇರಲಿ ಬಿಡಿ.
ಹಾಗೇ ಮೂರು ವರ್ಷ ನಾನು ಅಪ್ಪಿ ಜೊತೆನೇ ಇದ್ದೆ. ರಾತ್ರಿ ಅಮ್ಮನ ಮಡಿಲು, ಹಗಲು ಅಪ್ಪಿ ಜೊತೆ. ಮತ್ತೆ ಅಪ್ಪಿ ದೊಡ್ಡ ಆದ ಮೇಲೆ ಮತ್ತೊಂದು ಕರು ಹಾಕಿದ್ಳು. ಅದಕ್ಕೆ ಅಕತ್ತಿ ಅಂತ ಹೆಸರಿಟ್ಟಿದ್ದೆ. ಆವಾಗ ಮೂರು ಹಸುಗಳನ್ನು ಸಾಕಲು ಆಗುವುದಿಲ್ಲವೆಂದು ಅಮ್ಮ ಮಾರಿಬಿಟ್ಟರು. ಅದ್ರಲ್ಲಿ ಬಂದ ಹಣದಲ್ಲಿ ಅಮ್ಮ ಅಪ್ಪಿ ನೆನಪಿಗೆ ನಂಗೊಂದು ಮೂಗುತಿ ತೆಗೆದುಕೊಟ್ಟಿದ್ದಾರೆ. ಅಪ್ಪಿ ಎಲ್ಲಿದ್ದಾಳೋ ಗೊತ್ತಿಲ್ಲ..ಮೂಗುತಿ ನನ್ನ ಮೂಗ ಮೇಲೆ ಈಗಲೂ ಮಿನುಗುತ್ತಿದೆ..ಥೇಟ್ ಅಪ್ಪಿಯ ಪ್ರೀತಿ ಥರಾನೇ.!
ಫೋಟೋ: flickr.com

Friday, December 5, 2008

ಹೀಗೊಬ್ಬ ಪೇಪರ್ ಹುಡುಗ ಇದ್ದ...!

ಯಾಕೋ ಮನಸ್ಸು, ದುಃಖದ ಕಾರ್ಮೋಡ. ಮೊನ್ನೆ ಮೊನ್ನೆ ನಡೆದ ಮುಂಬೈ ಸ್ಫೋಟ, ಬದುಕಿನ ಕಣ್ಣೀರು, ನೆತ್ತರ ಕೋಡಿ..ಮನಸ್ಸಿನ್ನೂ ಚೇತರಿಸಿಗೊಂಡಿಲ್ಲ. 'ಶರಧಿ'ಗೆ ಬಂದು ಕಣ್ಣುಹಾಯಿಸಿದರೆ ಮನತುಂಬಾ ದುಃಖದ ಹನಿಬಿಂದುಗಳಷ್ಟೇ..ಬರೆಯಲು ಅಕ್ಷರಗಳೇ ಹೊಳೆಯುತ್ತಿಲ್ಲ. ಕೈಗಳು ಚಲಿಸುತ್ತಿಲ್ಲ. ನಿನ್ನೆ ಮಟಮಟ ಮದ್ಯಾಹ್ನ ಯಾವುದೇ ಕಾರ್ಯನಿಮಿತ್ತ ಹೊರಗಡೆ ಹೊರಟವಳಿಗೆ, ಸೂರ್ಯನ ಸುಡುವ ಬಿಸಿಲು ತಲೆನೇ ಒಡೆದುಹೋಗುವಷ್ಟು ತಲೆನೋವು ತರಿಸಿತ್ತು. ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ಮನೆ ಕಡೆ ಹೊರಟವಳಿಗೆ ನನ್ನ ಮನೆ ಕಡೆ ಹೋಗುವ ಬಸ್ಸು ಸಿಕ್ಕಿದ್ದು ಆಫೀಸ್ ನಿಂದ ಹೊರಟ ಮುಕ್ಕಾಲು ಗಂಟೆ ಬಳಿಕ.

ಜನರಿಂದ ಗಿಜಿಗಿಡುವ ಬಸ್ಸ ಸ್ಟಾಂಡಿನಲ್ಲಿ ಆವಾಗಲೇ ಕರೆಂಟು ಹೋಗಿ ಪೂರ್ಣ ಕತ್ತಲು. ಕರೆಂಟು ಬರುತ್ತಿದ್ದಂತೆ ಎದುರಿಗಿದ್ದ ಯುವಕನೊಬ್ಬ, ಹಾಯ್ ಚಿತ್ರಕ್ಕ ಹೇಗಿದ್ದೀರಿ? ಎಂದಾಗ ಯಾವ ಸೀಮೆ ತಮ್ಮ ಈತ? ಎಂದು ದುರುಗಟ್ಟಿ ನೋಡಿದ್ದೆ. ನಂಗೆ ನಂಬಲೇ ಆಗಲಿಲ್ಲ. ಯಾರಪ್ಪಾ ಈತ? ಮಾತು ಪರಿಚಯ, ಮುಖ ನೋಡಿದರೆ ಅಲ್ಪ-ಸ್ವಲ್ಪ ಪರಿಚಯ. ಗೊತ್ತಾಗಲಿಲ್ಲ..ತಾವು? ಎಂದೆ. "ನಿಮಗೆ ಯಾರದು ನೆನಪಿರುತ್ತೆ ಹೇಳಿ. ನಾನು ಅಜ್ಜು. .."ಅಂದಾಗ ನೆನಪಾಯಿತು, ನಮ್ಮೂರ ಪೇಪರ್ ಹುಡುಗ...ಅಜಯ್. ಆತನನ್ನು ಅಜ್ಜು ಎಂದು ನಾವೆಲ್ಲ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು. ತುಂಬಾ ಹಿಂದಿನ ಅಂದರೆ ನಾನಾಗ ಹತ್ತನೇ ಕ್ಲಾಸು. ಆವಾಗ ಅಜ್ಜು 8ನೇ ಕ್ಲಾಸು. ಅಜ್ಜು ಚಿಕ್ಕಂದಿನಿಂದಲೂ ಮನೆಮನೆಗೆ ಪೇಪರ್ ಹಾಗೂ ಹಾಲು ಹಾಕಿ ಓದುತ್ತಿದ್ದ. ನೋಡಲು ಮುದ್ದುಮುದ್ದಾಗಿದ್ದ ಅಜ್ಜು ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ತೀರ ಕಷ್ಟ. ಅವನ ಅಪ್ಪ ಬೇರೆ ಮಹಾ ಕುಡುಕ, ಯಾರಿಗೂ ಇರಬಾರದ ಕೆಟ್ಟ ಚಟಗಳೆಲ್ಲಾ ಆತನಿಗಿದ್ದವು. ಅಂಥವನನ್ನು ಅಪ್ಪನೆನನ್ನಲು ಯಾವ ಮಕ್ಕಳಿಗೂ ಸಹ್ಯ ಎನಿಸದು. ಅಮ್ಮ ರಾತ್ರಿ ಹಗಲೂ ಏನೇನೋ ಕೆಲ್ಸ ಮಾಡಿ ಮಗನನ್ನು ಓದಿಸಬೇಕೆಂಬ ಕನಸು ಕಂಡವರು.

ಅಜ್ಜು ಸೂರ್ಯ ಏಳೋಕೆ ಮುಂಚೆನೇ ಎದ್ದು ಮನೆ-ಮನೆಗೆ ಪೇಪರ್ ಹಾಕೋನು. ಹಾಲು ಹಾಕೋನು. ಊರಲೆಲ್ಲಾ ಈ ಕೆಲ್ಸಕ್ಕೆ ಸಂಬಳ ಕಡಿಮೆ. ಆದ್ರೂ ಅವನ ಬದುಕಿಗೆ, ಹಸಿವ ಹೊಟ್ಟೆಗಷ್ಟೇ ಸಾಕಾಗುತ್ತಿತ್ತು. ರಾತ್ರಿಯಿಡೀ ಕುಡುಕ ಅಪ್ಪನ ಕಾಟದಿಂದ ಸರಿಯಾಗಿ ನಿದ್ದೆ ಮಾಡದ ಅಜ್ಜು..ಅದು ಹೇಗೆ ಓದುತ್ತಿದ್ದೇನೋ/ ಹೇಗೆ ಕೆಲಸ ಮಾಡುತ್ತಿದ್ದಾನೋ ದೇವರೇ ಬಲ್ಲ. ನನಗೆ ಅಜ್ಜು ಅಂದ್ರೆ ತುಂಬಾ ಇಷ್ಟ. ಬೆಳಿಗ್ಗೆ, ಮದ್ಯಾಹ್ನ ಫ್ರೀಟ ಟೈಮಲ್ಲಿ ನನ್ನ ಹತ್ತಿರ ಓಡಿ ಬರುತ್ತಿದ್ದ. ಮನೆಯಲ್ಲಿ ಆದ ಕತೆಯನ್ನೆಲ್ಲಾ ಹೇಳುತ್ತಿದ್ದ. ಓದಿನಲ್ಲೂ ಚುರುಕು, ಆಟದಲ್ಲೂ ಚುರುಕು. ಹಾಗಾಗಿ ಅಧ್ಯಾಪಕರಿಗಳಿಗೂ ಅವನಂದ್ರೆ ಇಷ್ಟ, ನಮಗೂ ಪ್ರೀತಿ, ಅಕ್ಕರೆ.
ನಿನ್ನೆ ಇದ್ದಕ್ಕಿದ್ದಂತೆ ಅವನ ನೋಡಿದಾಗ ಖುಷಿಯ ಜೊತೆಗೆ ಅಚ್ಚರಿಯೂ ಆಯಿತು. ಒಳ್ಳೆ ಕೆಲಸದಲ್ಲಿದ್ದೀನಿ...ಅಮ್ಮನೂ ಜೊತೆಗೇ ಇದ್ದಾರೆ ಅಂದ. ಓದುತ್ತಿದ್ದಾಗಲೇ ಏನೇನೋ ಕೋರ್ಸುಗಳನ್ನು ಮಾಡಿ ಇದೀಗ ಬೆಂಗಳೂರಲ್ಲಿ ಒಳ್ಳೆ ಕೆಲ್ಸದಲ್ಲಿದ್ದಾನೆ. ನಂಗೆ ಹೆಮ್ಮೆ ಅನಿಸ್ತು.
ಹಸಿವಿಗಾಗಿ ಭಿಕ್ಷೆ ಬೇಡಲೂ ಹೇಸದ ಅಮ್ಮನೆಂಬ ದೇವರು, ಕಿತ್ತು ತಿನ್ನುವ ಬಡತನದ ನಡುವೆಯೂ ಬದುಕಬೇಕೆಂಬ ಹಂಬಲದ ಆ ಪುಟ್ಟ ಹುಡುಗನ ಕನಸು..ಇದೀಗ ನನಸಾಗಿದೆ. ದೇವರು ಒಳ್ಳೆಯವರಿಗೆ ಯಾವತ್ತೂ ಒಳ್ಳೆಯದನ್ನೇ ಮಾಡುತ್ತಾನೆ. "ಅಕ್ಕಾ ಬಡತನ ನಂಗೆ ತುಂಬಾ ಕಲಿಸಿದೆ" ಎಂದ. ನಿಜವಾಗಿಯೂ ಆತನ ಮಾತುಗಳನ್ನು ಕೇಳುತ್ತಿದ್ದಂತೆ ಅಜ್ಜು ಎಷ್ಟೊಂದು ಬೆಳೆದಿದ್ದಾನೆ..ಬದುಕು ಅವನಿಗೆ ಎಷ್ಟೊಂದು ಕಲಿಸಿದೆ ಅನಿಸಿತ್ತು. ಬದುಕಿನ ಕ್ಷಣಕ್ಷಣದಲ್ಲೂ ನೋವಿಗಷ್ಟೇ ಸಾಕ್ಷಿಯಾಗಿದ್ದ ಅಜ್ಜು..ಬದುಕಿನಲ್ಲಿ ಖುಷಿಯ ಬೆಳಕು ತುಂಬಿದೆ. ನೊಂದ ಬದುಕಿನ ಕಣ್ಣೀರ ಹಿಂದೆ ಸಾವಿರಾರು ಸುಖದನಿಗಳು ಸಾಲುಗಟ್ಟಿ ನಿಂತಿರುತ್ತವೆ ಎನ್ನೋದು ಇದಕ್ಕೆ ಅಲ್ಲವೇ? ಕೆಲವೊಮ್ಮೆ ಸಮಸ್ಯೆಗಳಿಗೂ ನಮ್ಮನ್ನು ಎದುರಿಸಲು ಧೈರ್ಯವಿರುವಿದಿಲ್ಲ..ಬದುಕೇ ಹಾಗೇ..ಅಜ್ಜು..!!
ಅಜ್ಜುನ ಜೊತೆ ಮಾತನಾಡಿ, ಅದೇ ನಮ್ಮ ಮನೆಗೆ ಹೋಗಿ ಅಡುಗೆ ಮುಗಿಸಿ ಕೋಣೆಯೊಳಗೆ ಕೂತವಳಿಗೆ ಇಷ್ಟೆಲ್ಲಾ ನೆನಪಾದುವು. ನನ್ ಖುಷಿಗೆ ಬ್ಲಾಗ್ ನಲ್ಲಿ ಹಾಕಿದೆ. ರೆಪ್ಪೆ ಮುಚ್ಚಿ ಮಲಗಿದರೂ ಯಾಕೋ ಅಜ್ಜುನ 'ಚಿತ್ರಕ್ಕ' ಧ್ವನಿ ಕೇಳಿಬರುತ್ತಿತ್ತು. ಬಡತನದ ಬದುಕು ತುಂಬಾ ಕಲಿಸಿದೆ ಎಂದ ಆತನ ಪ್ರೌಢ ಮಾತು ಮತ್ತೆ ಮತ್ತೆ ಪ್ರತಿಧ್ವನಿಸುತ್ತಿತ್ತು.

Thursday, December 4, 2008

ಪ್ರೀತಿಯ ಅಭಿನಂದನೆಗಳು

ಬ್ಲಾಗ್ ಲೋಕದಲ್ಲಿ ತಮ್ಮ ವಿಭಿನ್ನ ಮತ್ತು ಆಕರ್ಷಣೀಯ ಛಾಯಾಚಿತ್ರಗಳ ಮೂಲಕ ಮನತಟ್ಟುವ ಫೋಟೋಗ್ರಾಪರುಗಳಾದ ಶಿವಣ್ಣ ಮತ್ತು ಮಲ್ಲಿಯಣ್ಣ ಇದೀಗ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ತೃತೀಯ ಪುರಸ್ಕಾರ ಪಡೆದಿದ್ದಾರೆ.
"ನೆಲದ ಮೇಲೆ ಕಾಮನಬಿಲ್ಲು"
ದಿನಾಂಕ: ೪.೧೨.೨೦೦೮ ರಂದು ಮೈಸೂರಿನಲ್ಲಿ ನಡೆದ ಫೆಡರೇಷನ್ ಅಪ್ ಇಂಡಿಯನ್ ಫೋಟೋಗ್ರಪಿಯಿಂದ ಅಂಗೀಕೃತಗೊಂಡ ಮೈಸೂರಿನ ಡಿಸ್ಟ್ರಿಕ್ಟ್ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಸ್ಥೆ ನಡೆಸಿದ ಸ್ಪರ್ದೆಯಲ್ಲಿ ಶಿವಣ್ಣ ಅವರ ಚಿತ್ರ "ನೆಲದ ಮೇಲೆ ಕಾಮನಬಿಲ್ಲು" ಪ್ರಥಮ ಮತ್ತು ಡಿ.ಜಿ. ಮಲ್ಲಿಕಾರ್ಜುನ ರವರ "ನೀರಿನಾಟ" ತೃತೀಯ ಬಹುಮಾನ ಪಡೆದಿದೆ. ಅವರಿಗೆ ಪ್ರೀತಿಯ ಅಭಿನಂದನೆಗಳು . ಈ ಸ್ಪರ್ಧೆಯಲ್ಲಿ ದೇಶದಾದ್ಯಂತ ೨೦೦ಕ್ಕೂ ಹೆಚ್ಚು ಛಾಯಾಚಿತ್ರಕಾರರು ಸ್ಪರ್ದಿಸಿದ್ದರು. ಮತ್ತು ೨೦೦೦ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧೆಗೆ ಬಂದಿದ್ದವು.
"ನೀರಿನಾಟ"
ಅವರ ಬ್ಲಾಗ್ ಗೆ ನೀವೂ ಭೇಟಿನೀಡಬಹುದು. .http://chaayakannadi.blogspot.com/(ಶಿವು) ಹಾಗೂ http://dgmalliphotos.blogspot.com(ಮಲ್ಲಿಕಾರ್ಜುನ/

Monday, December 1, 2008

ಮೂರು ವರ್ಷಗಳ ಹಿಂದೆ ಅಣ್ಣನಿಂದ ಬಂದ ಪತ್ರ....

ಪದವಿ ಓದು ಮುಗಿಯುವವರೆಗೂ ಮನೆಯಿಂದ ಹಿಡಿದು ಸ್ನೇಹಿತರವರೆಗೆ 'ಪತ್ರ'ದ ಮೂಲಕವೇ ವ್ಯವಹಾರ. ಪತ್ರ ಎಂದರೆ ಭಾವ-ಬದುಕು ಬೆಸೆಯುವ ಕೊಂಡಿ. ಮೂರು ವರ್ಷಗಳ ಹಿಂದೆ ನಾನು ಉಜಿರೆಯಲ್ಲಿ ಪದವಿ ಓದುತ್ತಿದ್ದಾಗ ಮಂಗಳೂರಿನಿಂದ ನನ್ನಣ್ಣ ಜಯಣ್ಣ ಬರೆದ ಪತ್ರವೊಂದು ಇಲ್ಲಿದೆ. ಓದಬೇಕೆನಿಸಿದರೆ..ನೀವೂ ಓದಬಹುದು.

ತಂಗಿ ಚಿತ್ರಾಳಿಗೆ ನಿನ್ನ ಪ್ರೀತಿಯ ಅಣ್ಣ ಮಾಡುವ ಆಶೀರ್ವಾದಗಳು. ನಾವೆಲ್ಲ ಕ್ಷೇಮವಾಗಿದ್ದೇವೆ. ನೀನೂ ಕ್ಷೇಮವೆಂದು ಭಾವಿಸುತ್ತೇನೆ.
ಚಿತ್ರಾ ನಿನ್ನ ತಾರೀಕು ಹಾಕದ, ಗೊಂದಲದಿಂದ ಕೂಡಿದ, ಕಂಗ್ಲೀಷ್ ನಲ್ಲಿ ಬರೆದ, ಫೋನು ಮಾಡದೆ ಎರಡು ವಾರ ಆಯಿತೆಂದು ವೃಥಾರೋಪ ಮಾಡಿರುವ, ನುಡಿಮುತ್ತುಗಳಿಲ್ಲದ, ಪ್ರೀತಿ ತುಂಬಿದ, ಸುಂದರ ಅಕ್ಷರಗಳ ಪತ್ರವು ಆರನೇ ತಾರೀಕಿನಂದು ನನಗೆ ಸಿಕ್ಕಿತ್ತು. ಮೇ ಜೂನ್ ನಲ್ಲಿ ಬರಬೇಕಾದ ಮಳೆ ಆಗಸ್ಟ್ ವರೆಗೂ ಮಳೆ ಬರದೆ ನಂತರ ಅದನ್ನೇ ಕಾಯುತ್ತಿದ್ದ ರೈತನಿಗೆ ಸಂತೋಷವಾಗುವಷ್ಟು ಬರದ ನಾಡಲ್ಲಿ ಒಣಗಿದ ಇಳೆಗೆ ಮೊದಲ ಮಳೆ ತಂದ ತಂಪಿನಷ್ಟು ಸಂತಸವಾಯಿತು.
ಫೋನು ಏಕೆ ಮಾಡಲಿಲ್ಲ?
ಪತ್ರ ಏಕೆ ಬರೀಲಿಲ್ಲ?
ಕೋಪವೇ? ಬೇಸರವೇ
?
ನಿನ್ನ ಪ್ರಶ್ನೆ ಇದಲ್ಲವೇ...?!
ಕೇಳು ಉತ್ತರ....:
ಕೋಪ ಇಲ್ಲ, ಬೇಸರ ಇಲ್ಲ.
ಫೋನು ಮಾಡಿದೆ ಲೈನ್ ಸಿಗಲಿಲ್ಲ,
ಮತ್ತೆ ಪತ್ರ ಬರೀಲಿಲ್ಲ..?!
ನೀನೇ ಹೇಳಿದ್ದಲ್ವೇ ಓದಲು ಪುರುಸೋತ್ತಿಲ್ಲ!!

ಚಿತ್ರಾ ನಿನಗೆ ಪರೀಕ್ಷೆ ಇರುವುದರಿಂದ, ನೀನು ತುಂಬಾ 'ಬಿಸಿ' ಇರುವುದರಿಂದ, ಇನ್ನು ವಾರಕ್ಕೊಮ್ಮೆ ಫೋನು ಮಾಡುವುದೆಂದೂ ಸದ್ಯಕ್ಕೆ ಪತ್ರ ಬರೆಯಲು ನನಗೆ ಸಮಯವಿಲ್ಲವೆಂದು ನೀನೇ 'ಅಕ್ಟೋಬರ್ ಒಪ್ಪಂದ' ದಲ್ಲಿ ಹೇಳಿದ್ದಿಯಲ್ಲ. ಅದಲ್ಲದೆ ಈಗಾಗಲೇ ನಾನು ಬರೆದ ಪತ್ರವೊಂದು ನಿನ್ನ ಬಳಿಯಿತ್ತು. ಅದಕ್ಕೆ ಉತ್ತರ ಹಾಕಿರಲಿಲ್ಲ.(ಅಂದರೆ ಚೆಂಡು ನಿನ್ನ ಅಂಗಣದಲ್ಲಿತ್ತು.) ಅದಾಗ್ಲೂ ನಾನು ನಿನಗೆ ಪತ್ರ ಬರೀಲಿಲ್ಲ..ಫೋನು ಮಾಡದೆ 2 ವಾರ ಆಯ್ತೆಂದು(ಡಿಸೆಂಬರ್ 27ರಿಂದ ಜನವರಿ 4ನೇ ತಾರೀನಕಿನವರೆಗೆ 2 ವಾರವೇ?) ಆರೋಪ ಮಾಡಿದ್ದಿ. ಈ ಆರೋಪವನ್ನು ನಾನು ಬಲವಾಗಿ ನಿರಾಕರಿಸುತ್ತೇನೆ. ಮತ್ತು ಈ ಬಗ್ಗೆ ನಿನ್ನ ವಿರುದ್ಧ ಯಾಕೆ ಕೋರ್ಟು ಹತ್ತಬಾರದೆಂದು ಆಲೋಚಿಸುತ್ತಿದ್ದೇನೆ. ಎದುರಿಸಲು ಸಿದ್ಧಳಾಗು.

ಚಿತ್ರಾ ಯಾವಾಗ್ಲೂ ನಿನ್ನ ಪತ್ರವು ನಮ್ಮೂರ ಭಟ್ಟರ ಹೊಟೇಲಿನ ರುಚಿಕರ ಭೋಜನದಂತೆ ಇರುತ್ತಿತ್ತು. ಆದರೆ ಈ ಸಲ ಭಟ್ಟರ ಹೊಟೇಲಿಗೆ ಅಡುಗೆಯವರು ಹೊಸತು(New) ಬಂದಾಗ ರುಚಿಯಲ್ಲೂ ನ್ಯೂನತೆ(Newನತೆ) ಗಳಾಗುವಂತೆ ನಿನ್ನ ಪತ್ರದಲ್ಲೂ ಆಗಿದೆ.

ಯಾವಾಗಲೂ ರುಚಿಕರ ಭೋಜನದಂತಿರುತ್ತಿತ್ತು ನಿನ್ನ ಪತ್ರ,
ಆದರೀಸಲ ಏನೋ ಕೊರತೆ..ಯಾಕೆ ಚಿತ್ರ?
ಭಟ್ಟರ ಹೊಟೇಲಲ್ಲಿ ..
ಉತ್ತಮ ದರ್ಜೆಯ ಅಕ್ಕಿಯ ಅನ್ನ,
ರುಚಿಕರ ಸ್ವಾದದ ಬೇಳೆಯ ಸಾರು,
ಎಲೆಯ ತುದಿಯಲ್ಲಿ ಉಪ್ಪಿನ ಕಾಯಿ,
ಊಟದ ಕೊನೆಗೆ ಬೆಲ್ಲದ ಪಾಯಸ.,

ನಿನ್ನ ಪತ್ರದಲ್ಲಿ...
ಉತ್ತಮ ದರ್ಜೆಯ ಅಕ್ಷರದನ್ನ,
ರುಚಿಕರ ಸ್ವಾದದ ಬರಹದ ಸಾರು,
ಜೊತೆಗೆ ಪ್ರೀತಿಯ ಉಪ್ಪಿನಕಾಯಿ,
ಪತ್ರದ ಕೊನೆಗೆ ನುಡಿಮುತ್ತುಗಳ ಪಾಯಸ..,
ಆದರೆ ಈ ಸಲ..
ಕಲಬೆರೆಕೆಯ ಅಕ್ಕಿ ಬೇಯಲು ಇತ್ತು ಬಾಕಿ,
ಬೇಳೆಯ ಸಾರು ರುಚಿಯಿಲ್ಲದೆ ಬರೀ ನೀರು,
ಉರಿಯುತ್ತಿತ್ತು ಬಾಯಿ ಖಾರವಾಗಿ ಉಪ್ಪಿನಕಾಯಿ,
ಊಟದ ಕೊನೆಗೆ ಇಲ್ಲದೆ ಪಾಯಸ ನನಗಾಗಿತ್ತು ನೀರಸ..!


ಚಿತ್ರಾ ಚೆನ್ನಾಗಿದ್ದಿಯಾ ಎಂದು ತಿಳಿದು ಸಂತಸವಾಯಿತು. ಅಂಕಗಳು ಕಡಿಮೆಯಾಯಿತೆಂದು ಬೇಸರಪಡಬೇಡ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬೇಡ. ಆತಂಕಪಡಬೇಡ. ಅಂತಿಮ ಪರೀಕ್ಷೆಗೆ ತಯಾರಾಗು ಕಳೆದುದನ್ನು ಮರೆತುಬಿಡು. ಅಂತಿಮ ಪರೀಕ್ಷೆಯಲ್ಲಿ ನಿನಗೆ ಉತ್ತಮ ಅಂಕಗಳು ಬಂದೇ ಬರುತ್ತವೆ..ಶುಭವಾಗಲಿ.
ಚಿತ್ರಾ ಪತ್ರ ಹಾಕಿದ್ದೇನೆ ನೆನಪಿರಲಿ, ನಿನ್ನಿಂದ ಮುಂದಿನ ಪತ್ರವನ್ನು ಬೇಗನೆ ನಿರೀಖ್ಷಿಸುವುದಿಲ್ಲ ಕಾರಣ? ನಿನಗೆ ಪೂರ್ವತಯಾರಿ ಪರೀಕ್ಷೆ, ಅಂತಿಮ ಪರೀಕ್ಷೆ ಎಲ್ಲಾ ಇದೆ ಎಂದು ನನಗೆ ಗೊತ್ತು. ಆದರೂ ಪ್ರೀತಿಯಿರಲಿ.
ಇತೀ ನಿನ್ನ ಪ್ರೀತಿಯ
ಜಯಣ್ಣ