Friday, November 28, 2008

ಇದೂ ನ್ಯೂಸ್ ಸೆನ್ಸಾ...?!


"ನಿಮ್ಮ ಮಗನ ಸಾವಿನ ಬಗ್ಗೆ ಹೇಳಿ" ಎಂದು ಮಗ/ಮಗಳ ಶವದ ಎದುರು ರೋಧಿಸುತ್ತಿರುವ ಅಪ್ಪ/ಅಮ್ಮನ ಬಳಿ ಕೇಳಿದರೆ...! ಹೌದು..ಇಂಥ ಪ್ರಶ್ನೆಗಳನ್ನು ನಿನ್ನೆ ವರದಿಗಾರರು ಕೇಳುತ್ತಿದ್ದುದನ್ನು ನೋಡಿ ವರದಿಗಾರರ ಇಂಥ ನೀಚತನದಿಂದ ಮನಸ್ಸು ರೋಸಿಹೋದರೆ, ಮಗನ ಕಳೆದುಕೊಂಡ ಹೆತ್ತ ಕರುಳ ದುಃಖ ನೋಡಿ ನಾನೂ ಕರಗಿ ಕಣ್ಣಿರಾದೆ. ನಿನ್ನೆ ಮುಂಬೈ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಮೇಜರ್ ಸಂದೀಪ್ ಅವರ ಶವ ಬೆಂಗಳೂರಿನ ಯಲಹಂಕಕ್ಕೆ ಬರಲು ಇನ್ನೇನು ಕೆಲ ಕ್ಷಣಗಳಿವೆ ಎಂದಾಗ ಟಿವಿ ಮಾಧ್ಯಮದ ಕೆಲ ವರದಿಗಾರರು ಇಂಥ ಪ್ರಶ್ನೆಗಳನ್ನು ಅವರ ತಂದೆ ಮತ್ತು ಸಂಬಂಧಿಕರ ಜೊತೆ ಕೇಳುತ್ತಿದ್ದರು. ನಿಮ್ಮ ಮಗನ ಬಗ್ಗೆ ಹೇಳಿ, ಅವನ ಸಾವಿನ ಕುರಿತು ಹೇಳಿ..ಹೀಗೆ ದುಃಖದ ಮನೆಯಲ್ಲಿ ಇನ್ನಷ್ಟು ದುಃಖ ತುಂಬಿಸುವ, ಈಗಾಗಲೇ 'ಸತ್ತಿರುವವರನ್ನು' ಮತ್ತೊಮ್ಮೆ ಸಾಯಿಸುವ ಪಾಪಕೃತಗಳಿಗೆ ಕೈ ಹಾಕುತ್ತಿರುವ ಇಂಥ ವರದಿಗಾರರಿಗೆ ಕನಿಷ್ಠ ಜ್ಞಾನವೂ ಇಲ್ಲ ಅನಿಸಿತ್ತು.
ನಾನು ಎಲ್ಲರನ್ನು ಬೈಯುತ್ತಿಲ್ಲ..ಎಲ್ಲಾ ವರದಿಗಾರರು ಹೀಗೆ ಮಾಡುತ್ತಾರಂತಲ್ಲ..ಆದರೆ ಕೆಲವು ವರದಿಗಾರರ ಅವಿವೇಕತನದಿಂದಾಗಿ ಇಂದು ಮಾಧ್ಯಮಗಳ ಮೇಲೆ ಜನ ಯಾವಾಗ ನಂಬಿಕೆ ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ. ನಿನ್ನೆಯ ಕೆಲ ಟಿವಿಗಳ ವರದಿ ನೋಡಿದ್ರೆ..ನ್ಯೂಸ್ ಕೊಡೋ ವೇಗದಲ್ಲಿ ಮುಂಬೈನಲ್ಲಿ ನಡೆಯುತ್ತಿರುವ ದಾಳಿಯೇ ಪೂರ ಕನ್ ಫ್ಯೂಸ್ ಆಗುತ್ತಿತ್ತು.
ಇತ್ತೀಚೆಗೊಬ್ಬರು ಆಸ್ಟ್ರೇಲಿಯಾದಲ್ಲಿ ನಮ್ಮ ದೇಶದ ಫೈಲಟ್ ಒಬ್ರು ಸತ್ತಿರುವುದು ನೆನಪಿರಬಹುದು(ಹೆಸರು ಮರೆತು ಹೋಗಿದೆ..ಗೊತ್ತಿದ್ರೆ ಹೇಳಿ)..ಅವರ ಹೆತ್ತವರ ಬಳಿ ಹೋಗಿ ನಿಮ್ಮ ಮಗನ ಸಾವಿನ ಬಗ್ಗೆ ಏನು ಹೇಳಲು ಇಷ್ಟಪಡುತ್ತೀರಿ ಅಂದಾಗ, ಅಯ್ಯೋ ನಮ್ಮ ಮಗನ ಸಾವಿನ ಬಗ್ಗೆ ಹೇಳಬೇಕಾಯ್ತಲ್ಲಾ..ಅಂತ ಗೋಳೋ ಅಂತ ಅತ್ತುಬಿಟ್ಟರು. ಎರಡು ವರ್ಷಗಳ ಹಿಂದೆ ರಾಯಾಚೂರಿನಲ್ಲಿ ಕೊಳವೆ ಬಾವಿ ಒಳಗೆ ಬಿದ್ದ ಸಂದೀಪ್ ಅನ್ನು ಹೊರತೆಗೆದರೂ ಆತ ಬದುಕಿ ಉಳಿಯಲಿಲ್ಲ. ಕೊಳವೆ ಬಾವಿ ಒಳಗೆ ಬಿದ್ದ ಮಗ ಬದುಕಿ ಉಳಿಯುತ್ತಾನೆ ಅನ್ನೋ ನಿರೀಕ್ಷೆಯಿಂದ ಮತ್ತು ದುಃಖ ತಡೆಯಲಾಗದೆ ಅಳುತ್ತಿದ್ದ ಅಪ್ಪನ ಬಳಿ, ಟಿವಿ ವರದಿಗಾರನೊಬ್ಬ ಹೋಗಿ, "ನಿಮ್ಮ ಮಗ ಬದುಕಿ ಉಳಿಯುತ್ತಾನೆ ಅಂತ ಅನಿಸುತ್ತದೆಯೇ? ' ಎಂದು ಕೇಳಿದಾಗ, ಯಾಕಪ್ಪ ಇಂಥ ಪ್ರಶ್ನೆಗಳನ್ನು ಕೇಳ್ತಿಯಾ,...ನನ್ ಮಗ ಬದುಕಿ ಬರ್ತಾನೆ ಅಂತ ಹೇಳುತ್ತಾ ಅಳುತ್ತಾನೇ ಇದ್ರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಳ್ಳಭಟ್ಟಿ ದುರಂತದ ಬಗ್ಗೆ ನೀವೂ ತಿಳಿದಿರಬಹುದು. ಅಲ್ಲಿ ಹೆಣಗಳು ಬಿದ್ದಿದ್ದರೆ, ಹೆಣಗಳ ಸುತ್ತ ಅಳುತ್ತಿರುವ ಅವರ ಸಂಬಂಧಿಕರ ಬಳಿ ಹೋಗಿ ಅವರನ್ನು ಮಾತಾಡಿಸೋದು...ಮಾತಾಡಿಸುವುದು ತಪ್ಪಲ್ಲ..ಆದರೆ ಇಂಥ ಅಸಂಬದ್ಧ ಪ್ರಶ್ನೆಗಳನ್ನು ಕೇಳುವಾಗ ನಿಜಕ್ಕೂ ಅಹನೀಯವೆನಿಸುತ್ತೆ. ಇದು ಖಂಡಿತಾ ಸರಿಯಲ್ಲ..ಅವನು ಪತ್ರಿಕಾ ಅಥವಾ ಟಿವಿ, ಯಾವ ವರದಿಗಾರನಾದ್ರೂ ಸರಿ..ಹೀಗೆ ಕೇಳೋದು ಸರಿಯಲ್ಲ. ಆದರೆ ಕೇಳೋರು ಕೇಳ್ತಾನೆ ಇರ್ತಾರೆ. ಮುಂಬೈನಲ್ಲಿ ಮದ್ಯಾಹ್ನ ನಡೆದ ಸ್ಫೋಟವನ್ನು ರಾತ್ರಿ ಒಂಬತ್ತು ಗಂಟೆಗೆ ಬರೋ ನ್ಯೂಸ್ ನಲ್ಲಿ "ಬನ್ನಿ..ತಾಜ್ನಲ್ಲಿ ನಡೆಯುತ್ತಿರುವ ಸ್ಫೋಟದ ಕುರಿತು ತಿಳ್ಕೋಳ್ಳದಕ್ಕೆ ನೇರವಾಗಿ ಅಲ್ಲಿ ಹೋಗಿ ಬರೋಣ" ಅಂದ್ರೆ ಮನೆಯಲ್ಲಿ ಟಿವಿ ಎದುರು ಕುಳಿತವರು ಏನಪ್ಪಾ..ಮಧ್ಯಾಹ್ನದ ಸ್ಫೋಟನೋ ಅಥವಾ ಮತ್ತೆ ಸ್ಫೋಟ ಆಯಿತಾ ಅಂತ ಗೊಂದಲದಲ್ಲಿ ಸಿಕ್ಕಿಬಿಡ್ತಾರೆ. ಇದು ನ್ಯೂಸ್ ಸೆನ್ಸಾ? ನಾನ್ ಸೆನ್ಸಾ? ಗೊತ್ತಾಗುತ್ತಿಲ್ಲ. ನಿನ್ನೆ ರಾತ್ರಿ ಕುಳಿತು ಮೇಜರ್ ಸಂದೀಪ್ ಸಾವು ಕುರಿತು ಟಿವಿ ಚಾನೆಗಳ ಅವಿವೇಕತನದ ಪ್ರಶ್ನೆಗಳನ್ನು ನೋಡಿದಾಗ ಮನದೊಳಗೆ ಬೈಯೋದು ಬಿಟ್ಟು ಬ್ಲಾಗ್ ನಲ್ಲಿ ತುಂಬಿಸೋಣ ಅನಿಸ್ತು.

ಮನಸ್ಸು ಹಗುರವಾಗಿಸಲು...

ಮೊನ್ನೆ ಬುಧವಾರ ರಾತ್ರಿ ಮುಂಬೈಯ ತಾಜ್ ಹೊಟೇಲ್ ನಲ್ಲಿ ಸಿಡಿದ ಬಾಂಬುಗಳ ಸದ್ದು. ನೂರಾರು ಜೀವಗಳ ಮಾರಣಹೋಮ, ಗಾಯಾಳುಗಳು, ಕುಟುಂಬದವರ ಆಕ್ರಂದನ. ಆ ರಕ್ತದೋಕುಳಿಯನ್ನು ನೋಡುತ್ತಿದ್ದ ಮನಸ್ಸೇಕೋ ಅಸಹನೀಯವಾಗಿ ನೋವನನ್ನುಭವಿಸುತ್ತಿದೆ. ಭಾರತ ಎಂದರೆ ಭಯೋತ್ಪಾದನೆ, ಭಾರತ ಎಂದರೆ ಭ್ರಷ್ಟಾಚಾರ ಅನ್ನುವ ಸ್ಥಿತಿ ನಮ್ಮದು. ಅಂದು ಜೈಪುರದಲ್ಲಿ ಬಾಂಬು ಸ್ಫೊಟವಾದಾಗ ಪ್ರಧಾನಿ, ಗೃಹಸಚಿವರು ಹೇಳಿದ್ದು ; ಇನ್ನೆಂದೂ ದೇಶದಲ್ಲಿ ಬಾಂಬು ದಾಳಿ ನಡೆಸದಂತೆ ಎಚ್ಚರಿಕೆ ವಹಿಸುತ್ತೇವೆ. ಆಮೆಲೆ ಬೆಂಗಳೂರು, ಅಹಮದಾಬಾದ್, ದೆಹಲಿ ಎಲ್ಲಿ ರಕ್ತದೋಕುಳಿ ನಡೆದರೂ ಇದೇ ಮಾತನ್ನು ಪುನರುಚ್ಚರಿಸಿದರು. ಇದೀಗ ಮುಂಬೈ ಇನ್ನೂ ಚೇತರಿಸಿಕೊಂಡಿಲ್ಲವಾದರೂ ಇದೇ ಮಾತು ಗಣ್ಯರ ಬಾಯಿಂದ ಉದುರುತ್ತಿದೆ. ಒಂದೇ ಸಮನೆ ಚಾನೆಲ್ ಗಳು ಪ್ರಸಾರ ಮಾಡುತ್ತಲೇ ಇವೆ..ನಿರಂತರ ಕಾರ್ಯಾಚರಣೆ, ಬಿಳುವ ಹೆಣಗಳ ರಾಶಿ ನೋಡಿ ಬದುಕೇ ಬೇಡ ಅನ್ನುವಷ್ಟು ಮನಸ್ಸು ರೋಸಿಹೋಗುತ್ತಿದೆ. ಬೆಳಿಗೆದ್ದು ಟಿವಿ ಆನ್ ಮಾಡಿದರೆ ರಕ್ತದೋಕುಳಿಯ ಸುಫ್ರಭಾತ, ಪೇಪರ್ ನೋಡಿದ್ರೂ ಅದೇ. ಆಫಿಸ್ ನಲ್ಲಿ ಬಂದು ಕುಳಿತರೆ ಕೆಲಸ ಮಾಡಕ್ಕಾಗದಷ್ಟು ದುಃಖವಾಗುತ್ತಿದೆ. ಭಯೋತ್ಪಾದನೆ ದಾಳಿ ಆದಾಗಲೆಲ್ಲಾ ಸತ್ತವರಿಗೆ, ಗಾಯಾಳುಗಳಿಗೆ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತದೆ ನಮ್ಮ ಆಡಳಿತ ವ್ಯವಸ್ಥೆ. ಮತ್ತದೇ ರಾಗ..ಅದೇ ನರಕದ ಬದುಕು. ಉಗ್ರರು ದಾಳಿ ಮಾಡಿದ ತಕ್ಷಣ, ಪೇಪರ್, ಟಿವಿ ಯವ್ರು ದುಂಬಾಲು ಬಿದ್ದಾಗ ನಮ್ಮ ಗೃಹಸಚಿವರು ಹೇಳೋ ಮಾತು, "ಉಗ್ರರ ಮಹತ್ವದ ಸುಳಿವು ಸಿಕ್ಕಿದೆ. ತನಿಖೆ ಮುಂದುವರೆಯುತ್ತಿದೆ" . ಶಿವರಾಜ್ ಪಾಟೀಲ್ ಇಂದೂ ಅದೇ ಮಾತನ್ನು ಹೇಳುತ್ತಿದ್ದಾರೆ. ಅವರನ್ನು ರಾಜೀನಾಮೆಗೆ ಒತ್ತಾಯಿಸುವ, ಸರ್ಕಾರದ ವೈಫಲ್ಯ, ಪಿತೂರಿ ಅನ್ನೋ ಟೀಕಿಸುವ ಎದುರು ಪಕ್ಷಗಳು ಅಧಿಕಾರದಲ್ಲಿದ್ದರೂ ಶಿವರಾಜ್ ಪಾಟೀಲ್ ಗೆ ಮತ್ತು ದೂರೋವರಿಗೆ ಏನೂ ವ್ಯತ್ಯಾಸ ಕಾಣುತ್ತಿರಲಿಲ್ಲ ಬಿಡಿ.

ಅಮೇರಿಕದಲ್ಲಿ ನಡೆದ 9/11 ಘಟನೆ ಬಳಿಕ ಅಲ್ಲಿ ಒಂದೇ ಒಂದು ಭಯೋತ್ಪಾದನಾ ಕೃತ್ಯಗಳು ನಡೆದಿಲ್ಲ. ಕಾರಣ? ಅಲ್ಲಿಯ ಕಾನೂನು, ಆಡಳಿತ ವ್ಯವಸ್ಥೆ. ನಮ್ಮಲ್ಲಿ ನಿತ್ಯ ಬಾಂಬುಗಳದ್ದೇ ಸುದ್ದಿ. ಬಾಂಬುಸ್ಫೋಟ ಆಗಿ ಒಂದು ವಾರದ ತನಕ ಭಾರೀ ಸುದ್ದಿಗಳಬ್ಬುತ್ತವೆ..ಆಮೇಲೆ ಸುದ್ದಿ ತಣ್ಣಗಾಗುತ್ತದೆ. ಉಗ್ರರು, ಬಂಧನ ಅದೇನಾಯಿತೋ ಯಾರಿಗೂ ಗೊತ್ತಾಗಲ್ಲ. ನಮ್ಮವರು ಬಿಗಿಭದ್ರತೆ ಎಂದರೆ ವಿಧಾನಸೌಧ, ಇಂಡಿಯಾ ಗೇಟ್, ಪಾರ್ಲಿಮೆಂಟ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಎಂದಷ್ಟೇ ತಿಳಿದುಕೊಂಡಿದ್ದಾರೆ.

ಮೊನ್ನೆ ಮಂಗಳವಾರ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಓದಿದೆ. ಭವಿಷ್ಯದ ಪ್ರಧಾನಿ ಎಂದು ಆಗಾಗ ಹಳಸಲು ಸುದ್ದಿಯಾಗುತ್ತಿರುವ ಯುಪಿ ಮುಖ್ಯಮಂತ್ರಿ ಮಾಯಾವತಿ ಭದ್ರತೆಗೆ 350 ಪೊಲೀಸ್, 34 ವಾಹನಗಳಂತೆ! ಅಷ್ಟೇ ಅಲ್ಲ, ಮಾಯಾವತಿ ಬೀದಿಗಿಳಿದು ಹೊರಟೆಂದರೆ ಆ ಪ್ರದೇಶದಲ್ಲಿ ಸಂಪೂರ್ಣ ಬಂದೋಬಸ್ತು ಅಂತೆ.!! ಮಾಯಾವತಿ ಒಬ್ಬರಿಗೆ 350 ಮಂದಿ ಭದ್ರತಾ ಸಿಬ್ಬಂದಿಗಳಿದ್ದರೂ, ನಮ್ಮ ದೇಶದ ಪೊಲೀಸ್ ಠಾಣೆಗಳನ್ನು ನೋಡಿದ್ರೆ ಪೊಲೀಸ್ ಸಿಬ್ಬಂದಿಗಳ ಕೊರತೆ, ಭದ್ರತಾ ಸಿಬ್ಬಂದಿಗಳ ಕೊರತೆ. ದೇಶದಲ್ಲಿ ಬಾಂಬು ದಾಳಿಯಾದಾಗಲೆಲ್ಲಾ ಅಗತ್ಯ ಭದ್ರತಾ ಸಿಬ್ಬಂದಿಗಳ ಮಾತು ಕೇಳಿ ಬಂದರೂ, ಆಮೇಲೆ ಅದಕ್ಕೆ ಬೆಲೆನೇ ಇಲ್ಲ. ಮಾಯಾವತಿ ಅಥವಾ ನಮ್ಮ ಕೆಲಸಕ್ಕೆ ಬಾರದ ಜನನಾಯಕರಿಗೆ ಇಷ್ಟೊಂದು ದೊಡ್ಡ ಮಟ್ಟದ ಭದ್ರತೆ ಒದಗಿಸುವ ಬದಲು, ಈ ರೀತಿಯ ಬಾಂಬು ದಾಳಿಗಳಿಂದ ಏನೂ ತಪ್ಪು ಮಾಡದ ಅಮಾಯಕರು ಬಲಿಯಾಗುತ್ತಿದ್ದಾರೆ. ಅದನ್ನು ತಪ್ಪಿಸಿ. ಬಾಂಬು ದಾಳಿಯಂಥ ಘೋರ ಸನ್ನಿವೇಶಗಳು ಎದುರಾದಾಗ ನಮ್ಮ ರಾಜಕೀಯ ಪಕ್ಷಗಳು ಟೀಕಿಸುವ ಬದಲು ಜೊತೆಯಾಗಿ ಹೆಜ್ಜೆಹಾಕಬೇಕು. ಪರಸ್ಪರ ದೂರುತ್ತಿರುವುದರಿಂದ ಯಾವುದೇ ಪ್ರಯೋಜವಿಲ್ಲ. ಮತ ಬ್ಯಾಂಕ್ ಗಾಗಿ ತಪ್ಪಿತಸ್ಥರನ್ನು ಶಿಕ್ಷಿಸದೆ ಸುಮ್ಮನಿರುವ ನೀಚ ಬುದ್ಧಿ ಬಿಟ್ಟುಬಿಡಬೇಕು. ಆದರೆ ಯಾರು ಬಿಡ್ತಾರೆ ಬೇಕಲ್ಲಾ..?! ಮೊನ್ನೆಯಿಂದ ಬಾಂಬು ದಾಳಿಯ ನಿರಂತರ ಸನ್ನಿವೇಶವನ್ನು ನೋಡುತ್ತಿದ್ದಂತೆ ಏನೇನೋ ನೆನಪಾಗುತ್ತದೆ. ಭಾರವಾದ ಮನಸ್ಸು, ಹೃದಯನ ಇಲ್ಲಿ ಹಂಚಿಕೊಂಡೆ. ಭಯೋತ್ಪಾದಕರನ್ನು ಮಟ್ಟಹಾಕಲೂ ನಾವು ದುರ್ಬಲರೇ? ದೇಶಕ್ಕೆ ಎಂಥ ದುರ್ಗತಿ ಬಂತು? ಬದಲಾವಣೆ ಸಾಧ್ಯನೇ ಇಲ್ವಾ?!...

Thursday, November 27, 2008

ಕಂಡಿದ್ದು..ಕೇಳಿದ್ದು..!

ಜೋಕೆ ಸುಳ್ಳು ಹೇಳ್ತಾರೆ
ನಮ್ಮ ತಂದೆ, ತಾತ, ಮುತ್ತಾತರ ಕಾಲದಲ್ಲಿ ಬಸ್ಸಲ್ಲಿ ಯಾರು ಎಲ್ಲಿ ಬೇಕಾದ್ರೂ ಕುಳಿತುಕೊಳ್ಳಬಹುದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರಿಗೆ ಮತ್ತು ಗಂಡಸರಿಗೆ ಪ್ರತ್ಯೇಕ ಸೀಟುಗಳಿವೆ. ಇಂತಹ ನಿಮಯ ಇಲ್ಲಾಂದ್ರೆ ಬಸ್ಸಲ್ಲಿ ಆಗುವ ಕೆಲವು ಅನಾಹುತಗಳಿಂದ ತಪ್ಪಿಸಿಕೊಳ್ಳಬೇಕಲ್ಲಾ?ಎರಡು ದಿನದ ಹಿಂದೆ ಬಿಎಂಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆ. ಬಸ್ಸಲ್ಲಿ ತುಂಬಾ ರಶ್. ಮಹಿಳೆಯರಿಗಾಗಿ ಮೀಸಲಿಟ್ಟ ಸೀಟಿನ ಪಕ್ಕ ಅಂಗವಿಕರಿಗೆ ಎಂದು ಬರೆದ ಸೀಟಿತ್ತು. ಅದರಲ್ಲಿ ಇಬ್ಬರು ಮಧ್ಯವಯಸ್ಸಿನ ವ್ಯಕ್ತಿಗಳು ಕುಳಿತಿದ್ದರು. ಇಬ್ಬರು ಹುಡುಗೀರು ಬಸ್ಸು ಹತ್ತಿ ದಬಾಯಿಸಿದ್ದೇ ದಬಾಯಿಸಿದ್ದು. "ಏನ್ರೀ ಮಹಿಳೆಯರ ಸೀಟಲ್ಲಿ ಕುಳಿತಿದ್ದೀರಿ. ಏಳ್ರೀ.." ಎಂದಾಗ ಆ ಇಬ್ಬರೂ "ನಾವು ಅಂಗವಿಕಲರು ಕಣ್ರೀ. ಬೇಕಾದ್ರೆ ಇಳಿವಾಗ ನೋಡ್ರೀ" ಎಂದುಬಿಟ್ಟರು. ಅಷ್ಟೋತ್ತಿಗೆ ಬಸ್ಸಲ್ಲಿರುವ ಗಂಡಸರೆಲ್ಲರೂ ಅವರಿಬ್ಬರ ಪರ ಮಾತಾಡಿದ್ರೆ, ಹೆಂಗಸರೆಲ್ಲ ಹುಡುಗೀರ ಪರ ಮಾತಾಡಿದ್ರು. ಯಾರ ಪರ ಮಾತಾಡಬೇಕೆಂದು ತೋಚದ ಕಂಡಕ್ಟರ್ "ಬಸ್ಸು ಸ್ಟ್ಯಾಂಡಿನಲ್ಲಿ ಇಳಿತಾರಮ್ಮ..ನೋಡ್ಕೊಳ್ಳಿ" ಅಂದುಬಿಟ್ಟ.ಕೋರಮಂಗಲ ಕೊನೆಯ ಸ್ಟಾಪಿನಲ್ಲಿ ಇಳಿದ ಆ ಇಬ್ಬರು ಅಂಗವಿಕಲ ಗಂಡಸರು, 25 ವರ್ಷದ ಉತ್ಸಾಹದ ಯುವಕರಂತೆ ನಗುತ್ತಾ, "ಇನ್ನು ನೋಡ್ಕೊಳ್ಳಿ' ಅಂತ ಅವರ ಪಾಡಿಗೆ ಹೋದರು. ಹೇಗಿದೆ ಬಸ್ಸು ಪುರಾಣ..ಜೋಕೆ ಸುಳ್ಳು ಹೇಳ್ತಾರೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆ
ಆತ ನಮ್ಮೂರ ಪಕ್ಕದವನು. ಬೆಂಗಳೂರಿನ ಪ್ರಮುಖ ಕಂಪನಿಯಲ್ಲಿ ಕೆಲ್ಸ. ಆರು ತಿಂಗಳ ಹಿಂದೆ ಮದುವೆಯಾಗಿತ್ತು. ಮನೆಯವರು ನೋಡಿದ ಹುಡುಗೀನ ಮದುವೆಯಾದ. ಆಕೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯೆ. ವರದಕ್ಷಿಣೆನೂ ಈತ ಕೇಳಿಲ್ಲ..ಚಿನ್ನನ್ನೂ ಕೇಳಿಲ್ಲ. ಅಂತೂ ತುಂಬಾ ಗ್ಯ್ರಾಂಡ್ ಆಗಿ ಊರಲ್ಲೇ ಮದುವೆಯಾಯಿತು. ಗಂಡ-ಹೆಂಡತಿ ಇಬ್ಬರೂ ಬೆಂಗಳೂರಿಗೆ ಬಂದರು. ಆವಾಗಿನಿಂದ ಏನಾಯಿತೋ? ಇಬ್ಬರಿಗೂ ಜಗಳ. ಆಕೆ ದಿನಾ ಹುಚ್ಚರಂತೆ ವರ್ತಿಸುತ್ತಿದ್ದಳು. ಆಸ್ಪತ್ರೆಗೆ ಹೋದರೆ ಅವಳಿಗೇನೂ ಆಗಿಲ್ಲ ಅನ್ನೋರು ಡಾಕ್ಟರ್. ಸರಿಯಾಗಿ ದಿನಾ ಡ್ಯೂಟಿಗೆ ಹೋಗುತ್ತಿದ್ದಳು..ಆದರೆ ಡ್ಯೂಟಿ ಸಮಯದಲ್ಲಿ ಅವಳೆಂದೂ ಹುಚ್ಚಳಂತೆ ವರ್ತಿಸಿಲ್ಲ. ರಾತ್ರಿ ಮನೆಗೆ ಬಂದ್ರೆ..ಗಂಡನಿಗೆ ಹೊಡೆಯುವುದು,...ಏನೇನೋ ಹೇಳೋದು ಬೈಯೋದು..ಹಾಗೇ ಆರು ತಿಂಗಳು ಕಳೆಯಿತು. ಅಂದಿನಿಂದಲೇ ಆತ ಕುಡಿಯಾಕೆ ಆರಂಭಿಸಿದ. ನೆಮ್ಮದಿಯಿಲ್ಲ...ಯಾರಲ್ಲೂ ಹೇಳಿಕೊಳ್ಳಲಾಗದ ಅರ್ಥವಾಗದ ಸಮಸ್ಯೆ. ಆತ ತುಂಬಾ ಒಳ್ಳೆ ಹುಡುಗ. ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ. ಅದೇನಾಯಿತೋ,,ಕುಡಿಯಾಕೆ ಆರಂಭಿಸಿದ. ಹಾಗೇ ಆರು ತಿಂಗಳು ಬದುಕು ಸಾಗಿತ್ತು. ಮೊನ್ನೆ ಆಕೆ ಅವಳ ಅಪ್ಪ-ಅಮ್ಮನ ಜೊತೆ ಹೋಗಿ ಇವನ ಮೇಲೆ, ಇವನ ಇಡೀ ಕುಟುಂಬದ ಮೇಲೆ 'ಕೌಟುಂಬಿಕ ದೌರ್ಜನ್ಯ ಕಾಯ್ದೆ' ಯಡಿಯಲ್ಲಿ ಕೇಸು ಕೊಟ್ಟಿದ್ದಾಳೆ. ಆತ ವರದಕ್ಷಿಣೆಗೆ ಪೀಡಿಸಿದ ಇನ್ನು ಏನೇನೋ ಹೇಳಿದ್ದಾಳೆ. ಇದು ಕೌಟುಂಬಿಕ ದೌರ್ಜನ್ಯ...ಆತನ ತಪ್ಪೇನಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಕಾನೂನು ಎದುರು ಅವನು ತಲೆಬಾಗಬೇಕು..ಜೈಲಿಗೂ ಹೋಗಬೇಕು. ಕೌಟುಂಬಿಕ ದೌರ್ಜನ್ಯ ಕಾಯ್ದೆ ಹೇಗೆ ದುರುಪಯೋಗವಾಗುತ್ತಿದೆ ಎಂಬುದಕ್ಕೆ ಇಂಥ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ.

ವಿದ್ಯುತ್ ಕ್ಷಾಮ
ಈಗ ವಿದ್ಯುತ್ ಸಮಸ್ಯೆ ಅಲ್ಲ, ವಿದ್ಯುತ್ ಕ್ಷಾಮ ಆರಂಭವಾಗಿಬಿಟ್ಟಿದೆ. ಬೆಳಿಗ್ಗೆ ನಾನು ಹೆಚ್ಚೆಂದರೆ ಆರು ಗಂಟೆಗೇ ಎದ್ದೇಳುತ್ತೇನೆ. ಎದ್ದಾಗ ನನ್ನ ಚಿಂತೆ ಬೇರೇನಲ್ಲ...ಅಯ್ಯೋ ಕರೆಂಟು ಹೋಗಿಬಿಟ್ರೇ..ಅಂತ. ಬೆಳಿಗ್ಗೆ ಏಳೋದೇ ತಿಂಡಿ ರೆಡಿ ಮಾಡೋ ಹೊತ್ತಿಗೆ ಕರೆಂಟು ಮಾಯ. ನಮ್ಮದು ಕೋರಮಂಗಲ..ಇಲ್ಲಿ ಬೆಳಿಗ್ಗೆ ಏಳು ಗಂಟೆಗೇ ಕರೆಂಟು ಹೋಗಿರುತ್ತೆ. ಕರೆಂಟಿಲ್ಲಾಂದ್ರೆ ನೀರೂ ಬರಲ್ಲ..ಮಿಕ್ಸಿ ತಿರುಗಲ್ಲ. ಮಧ್ಯಾಹ್ನಕ್ಕೆ ಅಡುಗೆ..ಸಾರು ರೆಡಿ ಆಗಬೇಕು..ನಮ್ಮ ಸರ್ಕಾರಕ್ಕೆ ಶಾಪ ಹಾಕೊಂಡು ಬೆಳಿಗ್ಗೆ ಆರು ಗಂಟೆಗೆ ಎದ್ದು ಅಡುಗೆ ರೆಡಿ ಮಾಡುವುದು. ಇದು ಬೆಳಿಗ್ಗೆಯ ಕತೆ ಆದ್ರೆ..ನಾನು ಸಂಜೆ ಆರು ಗಂಟೆಗೆ ಆಫೀಸು ಬಿಟ್ಟು ಹೋದಾಗಲೂ ..ಸಂಜೆ ಏಳು ಗಂಟೆಗೆ ಹೋದ ಕರೆಂಟು ಮತ್ತೆ ಬರೋದು 10.30ಗೆ. ಅಷ್ಟೊತ್ತಿನವರೆಗೆ ಕ್ಯಾಂಡಲ್ ಅಡಿಯಲ್ಲಿ ಪರದಾಡಬೇಕು. ಕರ್ಮಕಾಂಡ..ಆಮೇಲೆ ಸಾರು ರೆಡಿ. ಮಲಗುವಾಗಲೂ ತಡ ಆಗಿ ಹೋಗುತ್ತೆ. ಮತ್ತೆ ಊರಲೆಲ್ಲ ಇಡೀ ದಿನ ಕರೆಂಟಿಲ್ಲಂತೆ..ಕರೆಂಟು ನಂಬಿದ್ರೆ ಕೆಲ್ಸಾಸನೇ ಆಗಲ್ಲ ಅಂತಾರೆ. ಬಹುಶಃ ಎಲ್ಲರಿಗೂ ವಿದ್ಯುತ್ ಕ್ಷಾಮದ ಅನುಭವ ಆಗಿರಬೇಕು. ಆದರೆ ನಮ್ಮ ಮುಖ್ಯಮಂತ್ರಿ ಹೇಳೋದೇನು? ಉತ್ತರ ಭಾರತದ ರಾಜ್ಯಗಳಲ್ಲಿ ಚುನಾವಣೆ ನಡೆದೇ ಬಳಿಕವೇ ಕರೆಂಟು ಕೊಡ್ತಾರಂತೆ. ಅವತ್ತಿನವರೆಗೆ ಕರೆಂಟಿಲ್ಲದೆ, ನೀರಿಲ್ಲದೆ ಸಾಯುವವರೆಲ್ಲ ಸಾಯಲಿ ಅಂತೇನು? ಹೌದು.. 'ಬಿಜೆಪಿಯೇ ಪರಿಹಾರ'!!! ಅಂತೆ.

Wednesday, November 26, 2008

ಕಲ್ಲಿನಲ್ಲೂ ಅಡಗಿದೆ ಸೌಂದರ್ಯ....!

ನಿತ್ಯ ತೂರಿಬರುವ ಸೂರ್ಯನ ಹೊಂಗಿರಣ ಚೆಲುವನ್ನು ಆತ ಕಂಡವನಲ್ಲ. ಬೆಳದಿಂಗಳ ರಾತ್ರೀಲಿ ನಗುವ ತಂಪು ಚಂದಿರ, ನಕ್ಷತ್ರ ಪುಂಜಗಳ ಮಿನುಗನ್ನೂ ಆತ ಕಂಡಿಲ್ಲ. ಹೂವು, ಹಣ್ಣು ಪ್ರಕೃತಿಯ ರಮ್ಯತೆ ನೋಡಿಲ್ಲ. ಝುಳು ಝುಳು ಹರಿಯುವ ನದಿ ನಿನಾದವನ್ನು ಕೇಳುತ್ತಾನೆ, ಆದರೆ ನದಿಯ ಸೌಂದರ್ಯ ಕಣ್ಣಾರೆ ನೋಡೀ ಭಾಗ್ಯ ಆತನಿಗಿಲ್ಲ. ಸಂಜೆಯ ಶುಭ್ರ ಕಾಂತಿಯ ಖುಷಿಯನ್ನು ಆತ ಅನುಭವಿಸಿಲ್ಲ. ಆದರೂ ಆತನ ಕಣ್ಣುಗಳಲ್ಲಿ ನಗುವಿನ ಬೆಳಕಿತ್ತು. ಅಮಾವಾಸ್ಯೆಯ ರಾತ್ರಿಗಳನ್ನು ಹುಣ್ಣಿಮೆಯ ಬೆಳದಿಂಗಳನ್ನಾಗಿಸುವ ಕಲೆ ಅವನಿಗೆ ಗೊತ್ತಿತ್ತು. ಮುಖದಲ್ಲಿ ಖುಷಿ ಖುಷಿಯ ಮಂದಹಾಸವಿತ್ತು. ಆತ ನಡೆದಿದ್ದು ಕತ್ತಲಲ್ಲೇ...ಆತನಿಗೆ ನಡೆದಿದ್ದೆಲ್ಲಾ ದಾರಿ. ನಡೆದಿದ್ದೆಲ್ಲಾ ಬದುಕು. ಇದು ಬದುಕುವ ಕೆಲವರ ಬದುಕು.

ನಿನ್ನೆ ರಾತ್ರಿ Zee TV Sa Re Ga Ma Little Champs ಕಾರ್ಯಕ್ರಮದ ಹಳೆಯ ಎಪಿಸೋಡ್ ಗಳನ್ನು ನೋಡುತ್ತಿದೆ. ಲೇಖನಿ ಹಿಡಿದು ಕುಳಿತೆ. ಕಾರ್ಯಕ್ರಮದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಯಿತು. ಮೊದಲ ಬಹುಮಾನವನ್ನು ಸಂಚಿತಾ(14) ಎಂಬ ಕೋಲ್ಕತ್ತಾ ಬಾಲಕಿ ಪಡೆದರೆ, 13 ವರ್ಷದ ದಿವಾಕರ್ ಎಂಬ ದೆಹಲಿಯ ಅಂಧ ಬಾಲಕ ದ್ವಿತೀಯ ಬಹುಮಾನ ಪಡೆದ. ವೇದಿಕೆ ಎದುರು ಸಾವಿರಾರು ಜನರು. ನಿರೀಕ್ಷೆಯಿಂದ ಕಣ್ಣು, ಕಿವಿಗಳನ್ನು ಬಿಟ್ಟು ನೋಡುತ್ತಿದ್ದಾರೆ. ಶಾರುಖ್ ಖಾನ್ ವಿಜೇತರ ಹೆಸರುಗಳನ್ನು ಘೋಷಿಸುತ್ತಿದ್ದಂತೆ ಚಪ್ಪಾಳೆ, ನಗುವಿನ ಸಂಭ್ರಮ ಮುಗಿಲುಮುಟ್ಟಿತ್ತು. ಒಂದೆಡೆ ಪುಷ್ಯಗಳ ಸುರಿಮಳೆ. ಖುಷಿಯಿಂದ ನನ್ನ ಕಣ್ಣಾಲಿಗಳು ತುಂಬಿ ನದಿಯಾದುವು. ಆ ಹುಡುಗನ ಹೆತ್ತವರ ಪ್ರೀತಿಯ ಸಂತೋಷ, ಸಂಭ್ರಮ ವನ್ನು ಕಣ್ಣಾರೆ ಕಾಣಲು ದೇವರು ಮೋಸ ಮಾಡಿದ್ದಾನೇನೋ, ಇದು ಸರಿಯೇ? ಅನಿಸಿತ್ತು..ಆದರೆ ಆತನ ಮುಖದಲ್ಲಿ ಅರಳಿದ ಸಂತೋಷ ಕಂಡು ನಾನೂ ಖುಷಿಪಟ್ಟೆ..ಆತನ ನಗುವಿನಲ್ಲಿ ನಾನೂ ಒಂದಾಗಿ.

ಎರಡು ವರ್ಷಗಳ ಹಿಂದೆ. ಧಿಢೀರ್ ಬೆಂಗಳೂರಿಗೆ ಬಂದವಳು ನಾನು. ಕಾಲೇಜು ಪ್ರೀತಿ, ಅಮ್ಮನ ಮಡಿಲು ಎಲ್ಲವನ್ನೂ ಬಿಟ್ಟು ಈ ಕಾಂಕ್ರೀಟ್ ನಗರಕ್ಕೆ ಬಂದಾಗ ಬದುಕಿನ ಇನ್ನೊಂದು ಮುಖ ಪರಿಚಯವಾಗಿತ್ತು. ಹಳ್ಳಿಯ ಮಡಿಲಿಂದ ಬಂದ ನನಗೆ ಏಕಾಂತ ಸವಿಯಲು ಮನತಣಿಸುವ ಜಾಗಗಳೇ ಇಲ್ಲ. ಬತ್ತದ ಪ್ರೀತಿಯ ತೊರೆ ಹರಿಸುವ ಜೀವಗಳಿಲ್ಲ. ಕುರುಡರು, ಕಿವುಡರು, ಭಿಕ್ಷುಕರು, ಕೈ-ಕಾಲು ಇಲ್ಲದವ್ರು, ಹುಚ್ವರು..ರಸ್ತೆ ಬದಿಯಲ್ಲೇ ಆಕ್ಸಿಡೆಂಟ್ ಆಗಿ ಹೆಣ ಬಿದ್ದರೂ ಏನಾಯ್ತು ಎನ್ನೋರೇ ಇಲ್ಲ..! ಅಬ್ಬಬ್ಬಾ! ನೋಡಿ ಹಳ್ಳಿಯ ಮಡಿಲಿಗೆ ಹೋಗಿಬಿಡೋಣ..ಇಲ್ಲಿ ಜೀವನ ಪ್ರೀತಿನೇ ಇಲ್ಲ ಎಂದನಿಸುತ್ತಿತ್ತು.

ನಾನು ಬಸ್ಸಲ್ಲಿ ಬರುವಾಗ ಹೆಚ್ಚಾಗಿ ಕುರುಡರನ್ನು ನೋಡುತ್ತೇನೆ..ಅವರು ಬಸ್ಸಿಗೆ ಹತ್ತೋದು, ಇಳಿಯೋದು, ರಸ್ತೆ ದಾಟೋದು, ಫೋನಲ್ಲಿ ಮಾತಾಡೋದು, ಕಂಪ್ಯೂಟರ್ ಎದುರು ಕುಳಿತು ಕೆಲಸ ಮಾಡೋದು..ಎಲ್ಲವನ್ನು ಕಂಡಾಗ ನಿಜಕ್ಕೂ ಅವರು ಅಂಗವಿಕಲರಂತಾನೇ ಅನಿಸಲ್ಲ. ನಾವೇ ಕಣ್ಣಿದ್ದರೂ ಕುರುಡರು ಅನಿಸುತ್ತೆ. ದೇವ್ರು ಜಗತ್ತು ನೋಡಕ್ಕೆ ನಮಗೆ ಕಣ್ಣುಗಳನ್ನು ಕೊಟ್ಟಿದ್ದಾನೆ. ಕೈ-ಕಾಲು ನೀಡಿದ್ದಾನೆ. ಆದರೆ ನಾವು ನಡೆಯುತ್ತಿರುವುದು ಬೆಳಕಿನಲ್ಲಿ...ಹಾಗಾಗಿ ನಮಗೆ ನಡೆದಿದ್ದೆ ದಾರಿ. ಕತ್ತಲಲ್ಲಿ ನಡೆದವಂಗೆ ನಡೆದಿದ್ದೆಲ್ಲಾ ದಾರಿ. ಕಣ್ಣಿಲ್ಲದವ್ರು ಜಗತ್ತು ಕಾಣ್ತಾರೆ..ಬದುಕು ಕಾಣ್ತಾರೆ..ಆದರೆ ನಮಗೆ ಕಣ್ಣಿದ್ದರೂ ಕೆಲವೊಮ್ಮೆ ಕುರುಡರಾಗಿರುತ್ತೇವೆ.
ಕೆಲವರು ಅಂಗವಿಕರನ್ನು ಕಂಡಾಗ ಅಯ್ಯೋ ಪಾಪ ಅಂತಾರೆ..ಬೇಡ ಬಿಡಿ ಕನಿಕರದ ಮಾತು. ಅವರಿಗೆ ಬೇಕಾಗಿರೋದು ಪ್ರೀತಿ, ಸ್ಫೂರ್ತಿ, ನಮ್ಮಂತೆ ಅವರನ್ನು ಭಾವಿಸಬೇಕು. ಜಗತ್ತನ್ನು ಕಣ್ಣಾರೆ ಕಾಣದವರಾದರೂ, ಮನದಲ್ಲಿ ಜಗತ್ತು ಕಾಣೋರು ಅವರು. ಅವರಿಗೆ ಜೀವ ಪ್ರೀತೀನ ನೀಡಬೇಕು. ನಮ್ಮಂತೆ ಅವರೂ ಎಂದು ಭಾವಿಸಬೇಕು. ಅಂಧ ಮಕ್ಕಳಿದ್ದರೆ, ಅವರನ್ನು ಅಂಧರ ಆಶ್ರಮಕ್ಕೆ ಸೇರಿಸಿಬಿಡುವ ಎಷ್ಟೋ ಹೆತ್ತವರಿದ್ದಾರೆ..ಬೇಡ, ಬೇಡ..ನಮ್ಮ ಮಡಿಲಲ್ಲಿ ಮಲಗಿಸಿ ಪ್ರೀತೀನ ಉಣಬಡಿಸಿ. ಇತರ ಮಕ್ಕಳಂತೆ ಕಾಣಿ. ಪ್ರೋತ್ಸಾಹ ನೀಡಿ..ಅವರಿಗೂ ದೇವರು ಅದ್ಯಾವುದೋ ಒಂದು ಶಕ್ತಿ, ಚೈತನ್ಯ ನೀಡೇ ನೀಡಿರುತ್ತಾನೆ. ಇಂದು ದಿವಾಕರ್ ನಂತಹ ಎಷ್ಟೋ ಮಕ್ಕಳಿದ್ದಾರೆ. ಅವರಲ್ಲಿ ಪ್ರತಿಭೆಗಳಿವೆ. ಅದನ್ನು ಹೆಕ್ಕಿ ತೆಗೆಯೋ ಕೆಲಸ ನಮ್ಮಿಂದಾಗಬೇಕು. ಅವರಿಗೆ ಬೇಕಾಗಿರೋದು ಪ್ರೀತಿ..ಪ್ರೋತ್ಸಾಹ ಅಷ್ಟೇ. ಆ ಪುಟ್ಟ ಬಾಲಕನನ್ನು ನೋಡುತ್ತಿದ್ದಂತೆ ನನಗೆ ನೆನಪಾಯಿತು..ಎಫ್. ಅಸಾದುಲ್ಲಾ ಬೇಗ್ ಅವರ ಒಂದು ಶಾಯರಿ:
ಕಲ್ಲಿನಲ್ಲೂ ಅಡಗಿದೆ
ಸೌಂದರ್ಯ
ಕೆತ್ತುವ ಸಾಮರ್ಥ್ಯವಿದ್ದರೆ!
ಪ್ರತಿ ಮಾತಿನಲ್ಲೂ ಅಡಗಿದೆ
ಸಾಹಿತ್ಯ
ಗ್ರಹಿಸುವ ಸಾಮರ್ಥ್ಯವಿದ್ದರೆ!

Monday, November 24, 2008

I Hate U...

I hate u..ಥತ್! ನಿಮಗಲ್ಲ..ಸಿಟ್ಟಿಗೆ..ಸಿಟ್ಟನ್ನು ನಾ ತುಂಬಾ ದ್ವೇಷಿಸುತ್ತೇನೆ. ಆದರೆ ಸಿಟ್ಟು ನನ್ನ ಬೆಂಬಿಡದ ಬೇತಾಳ. ಬೆಳಿಗೆದ್ದಾಗ ಕರೆಂಟಿಲ್ಲಾದ್ರೆ ಸಿಟ್ಟು..ಸರಿಯಾಗಿ ಏಳು ಗಂಟೆಗೆ ನನ್ ತಮ್ಮ ಬೆಡ್ ಶಿಟ್ ಹೊದ್ದು ಗೊರಕೆ ಹೊಡೆದ್ರೆ ಅದ್ಕೂ ಸಿಟ್ಟು, ನಲ್ಲಿ ತಿರುಗಿಸಿದಾಗ ನೀರು ಬರದಿದ್ರೆ ಅದ್ಕೂ ಕೆಟ್ಟ ಸಿಟ್ಟು..ಪೇಪರ್ ಹುಡುಗ ಸರಿಯಾದ ಸಮಯಕ್ಕೆ ಪೇಪರ್ ತಂದು ಮನೆಯೆದುರು ಬಿಸಾಡದಿದ್ರೆ ಸಿಟ್ಟು..ಬೆಳಿಗೆದ್ದಾಗಲೇ ಅಮ್ಮ ಫೋನು ಮಾಡಿ ಮನೆಯಲಿದ್ದ ತಮ್ಮನ ಬಗ್ಗೆ ದೂರು ಕೇಳಿದಾಗಲೂ ಮುಸು ಮುಸು ಅಂತೀನಿ..ಸಿಗ್ನಲ್ ಹತ್ರ ನಿಂತ ಬಸ್ಸಿಗೆ ಹತ್ತಿದಾಗ ಡ್ರೈವರ್ ದುರುಗುಟ್ಟಿ ನೋಡಿದರೆ..ಅದ್ಕೂ ರೇಗಾಡಿಬಿಡ್ತೀನಿ..
ಹೀಗೇ ನಾ ಎದ್ದಾಗ, ಕುಂತಾಗ..ಮಲಕೊಂಡಾಗ..ನಿದ್ದೆಯಲ್ಲಿ ಗೊರಕೆ ಹೊಡೆದಾಗ, ಕನಸಿನಾಂಗ...ಸಿಟ್ಟು ನನ್ನ ಬೆನ್ನು ಬಿಡಲ್ಲ. ನಡೆಯೋ ದಾರಿಯ ಪ್ರತಿ ಹೆಜ್ಜೆಯಲ್ಲೂ ಸಿಟ್ಟು ನನ್ನ ಜೊತೆ ಇರುತ್ತೆ..ಬೇಡ ಬೇಡ ಹೋಗು ಹೋಗು ಎಂದರೂ ..ಮತ್ತೆ ಮತ್ತೆ ನನ್ನ ಕಾಡಿಸುತ್ತೆ. ರೇಗುವಂತೆ ಮಾಡುತ್ತೆ...ಮತ್ತೆ ನನ್ನ ಪಶ್ಚಾತ್ತಾಪ ಪಡುವಂತೆ ಮಾಡುತ್ತೆ.
ಆಫೀಸ್ ನಲ್ಲಿ ಬಾಸ್..ಬೆಳಿಗ್ಗೆಯಿಂದ ಏನು ಮಾಡಿದ್ರಿ ಅಂದ್ರೆ ಗುರ್ ರ್ ಅಂತೀನಿ..ಸಂಜೆ ಮನೆಗೆ ಹೊರಟಾಗ ಲೇಟಾಗಿ ಮನೆಗೆ ಹೋಗುವ ಬಾಸ್ ನಾಳೆ ಬಂದು ಏನ್ ಮಾಡ್ತೀರಿ ಎಂದು ಕೇಳಿದಾಗಲೂ ಇಲ್ಲದ ಉಸಾಬರಿ ಇವರಿಗ್ಯಾಕೆ ಅಂತ ಮುಖ ಸಿಂಡರಿಸ್ತೀನಿ.. ಮೊನ್ನೆ ಮೊನ್ನೆ ಸಿಕ್ಕ ನಮ್ಮೂರ ಗೆಳೆಯನತ್ರ ಪರಿಚಯ ಆದ ಮೂರೇ ದಿನದಲ್ಲಿ ಮುನಿಸಿಕೊಂಡಿದ್ದೀನಿ...ಚಾಟ್ ಮಾಡುತ್ತಿದ್ದ ಗೆಳತಿ ಇದ್ದಕಿದ್ದಂತೆ ಆಫ್ ಲೈನ್ ಆದಾಗ ಮತ್ತೆ ಫೋನ್ ಮಾಡಿ ಬೈದು ಬಿಡ್ತೀನಿ..ಪ್ರೀತಿಯ ಗೆಳೆಯ/ಗೆಳತೀರು ಪ್ರೀತಿಯಿಂದ ತಮಾಷೆ ಮಾಡಿದ್ರೂನು ಒಮ್ಮೊಮ್ಮೆ ..i dont like ಅಂತೀನಿ..ಹಾಗಾಗಿ ಎಲ್ರ ದೃಷ್ಟೀಲಿ ನಾ 'ರೆಬೆಲ್ ಸ್ಟಾರ್ 'ಆಗಿಬಿಟ್ಟಿದ್ದೀನಿ.
ನಂಗೊತ್ತು ಸಿಟ್ಟು ನಮ್ಮನ್ನು ತುಂಬಾ ಕೆಟ್ಟವರನ್ನಾಗಿ ಮಾಡುತ್ತೆ..ನೋಡೋರ ಕಣ್ಣಲ್ಲಿ ತೀರ ಕೆಟ್ಟವಳು ಅನಿಸಿಕೊಂಡಿದ್ದೀನಿ..ನಿತ್ಯ ನನ್ ತಮ್ಮ ಆಫೀಸಿಗೆ ಹೊರಡುವಾಗ ಅಕ್ಕ..ನೀಟಾಗಿ ಕೆಲ್ಸ ಮಾಡು..ಬಾಸ್ ಜೊತೆ ಜಗಳ ಮಾಡ್ಬೇಡ ಅಂತಾನೆ...ಅಮ್ಮ ಫೋನು ಮಾಡಿ ಪ್ರೀತಿಯಿಂದ 'ಮಂಡೆ ಬೆಚ್ಚ ಮಲ್ಪೊಡ್ಚಿ ಮ್ಮ" ಅಂತಾರೆ..ಇಷ್ಟಾದ್ರೂ ನನ್ ಸಿಟ್ಟು ಹಾಗೇ ಇದೆ..ಯಾಕೋ ಬಿಟ್ಟು ಹೋಗ್ತಿಲ್ಲ.ಸಿಟ್ಟು ಮಾಡ್ಕೊಂಡು ಎದುರಿಗಿದ್ದವರಿಗೂ ಸಿಟ್ಟು ಬರಿಸ್ತೀನಿ. ಮತ್ತೆ ಪಶ್ಚಾತ್ತಾಪ ಪಡ್ತೀನಿ.
ಮೊದ್ಲು ಹಾಸ್ಟೇಲ್ ಜೀವನ. ಅಲ್ಲೂ ಅಷ್ಟೇ. ನಾನು ಗುರ್ ಅಂದ್ರೆ ಒಂಬತ್ತು ರೂಂಗಳ ಹುಡುಗೀರು ಸುಮ್ಮನಾಗುತ್ತಿದ್ರು. ಶೌಚಾಲಯದಲ್ಲಿ ಕಸ ಬಿದ್ರೆ, ಹೂವಿನ ಗಿಡಗಳಿಗೆ ನೀರು ಹಾಕದಿದ್ರೆ, ಸಂಜೆ ಶುರುವಾಗುವ ಭಜನೆಗೆ ಚಕ್ಕರ್ ಹಾಕಿದ್ರೆ..ರಂಪಾಟ ಮಾಡೋ ನನ್ನ ಮನಸ್ಸು ಮತ್ತೆ ಸ್ವಲ್ಪ ಹೊತ್ತಿನಲ್ಲಿ ಹೋಗಿ ಅವರನ್ನು ಸಮಧಾನಿಸುತ್ತಿತ್ತು. ಆದರೆ ಆವಾಗಲೇ ಕಾಲ ಮಿಂಚಿ ಹೋದ ಘಟನೆಗಳು ಅದೆಷ್ಟೋ. ನಂಗೆ ಶಾಪ ಹಾಕಿದೋರು ಅದೆಷ್ಟೋ ಮಂದಿ.
ಸಿಟ್ಟು ನಮ್ಮನ್ನು ತುಂಬಾ ಹಾಳು ಮಾಡುತ್ತೆ..ಸಿಟ್ಟು ಬೇಡ ಪ್ರೀತಿಯಷ್ಟೇ ಸಾಕು. ಅಸಹನೆ, ಕೆಟ್ಟ ಸಿಟ್ಟು ಬೇಡ..ಪ್ರೀತಿಯ ಹುಸಿಮುನಿಸು, ಪ್ರೀತಿಯ ಸಿಟ್ಟು ಬೇಕು..ಆದ್ರೆ ನಂಗಿನೂ ಇದರಿಂದ ಬಿಡುಗಡೆ ಸಿಕ್ಕಿಲ್ಕ. ಸಿಟ್ಟು ಬರುತ್ತೆ..ಹೋಗುತ್ತೆ...ಏನೋ ಮಾಡುತ್ತೆ..ನನ್ನ ತೀರ ಕೆಟ್ಟವಳನ್ನಾಗಿ..ಕೆಲವರ ಶತ್ರುವನ್ನಾಗಿ. ಇದಕ್ಕೆ ಏನು ಪರಿಹಾರ ಅಂತೀರಾ?

Saturday, November 15, 2008

ನಿದ್ದೆಯಲ್ಲಿ ನನ್ನ 'ಯಕ್ಷಗಾನ'...!

"ಪೊಂಜನಕುಳು, ಆಂಜನಕುಳು, ಜೋಕುಳು, ಅಕ್ಕನಕುಲು, ಅಣ್ಣನಕುಳು, ಅಜ್ಜಿ-ಅಜ್ಜನಕುಳು ಮಾತೆರ್ಲ ಬಲೇ..ಒಂಜೆ ಒಂಜಿ ಆಟೋ ರಾತ್ರಿ 9 ಗಂಟೆಗ್..ದೇವಿಮಹಾತ್ಮೆ..ಮಾತೆರ್ಲ ಬಲೆ..."ಹೀಗೆಂದ ತಕ್ಷಣ ಸಂಜೆಯ ಅಡುಗೆ ಕೆಲಸ ಮುಗಿಸಿ ಮನೆ ಜಗುಲಿಯಲ್ಲಿ ಕುಳಿತು ಹರಟುತ್ತಿದ್ದ ಅಜ್ಜಿಯರು, ಕೂಲಿ ಕೆಲಸ ಮುಗಿಸಿ ಮನೆಗೆ ಆತುರದಿಂದ ಓಡಿಬರುತ್ತಿದ್ದ ಹೆಂಗಸರು, ಗದ್ದೆ ಕಟ್ಟೆಯ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ ಗಂಡಸರು, ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ನಮ್ಮಂಥ ಫೋಲಿ ಹುಡುಗರು ಎಲ್ಲರ ಕಿವಿಗಳೂ ಈ ಪ್ರಚಾರದ ಅಬ್ಬರಕ್ಕೆ ನೆಟ್ಟಗಾಗುತ್ತಿದ್ದವು.

ಆವಾಗ ನಾನಿನ್ನೂ ಪುಟ್ಟ ಹುಡುಗಿ. ಯಕ್ಷಗಾನ ಎಂದರೆ ಪಂಚಪ್ರಾಣ. ಊರಿಗೆ ಬಂದ ಯಕ್ಷಗಾನಗಳನ್ನೆಲ್ಲ ನೋಡೋ ಚಾಳಿ. ದೇವಿ ಮಹಾತ್ಮೆ, ಕಂಸವಧೆ. ಕೃಷ್ಣಲೀಲೆ..ಹೀಗೇ ನೋಡಿದ ಯಕ್ಷಗಾನಗಳಿಗೆ ಲೆಕ್ಕವೇ ಇಲ್ಲ. ಚಳಿಗಾಲ ಶುರುವಾಗುತ್ತಿದ್ದಂತೆ ಕರಾವಳಿಯಲ್ಲಿ ಯಕ್ಷಗಾನ ಮೇಳಗಳ ಅಬ್ಬರದ ಹಬ್ಬ. ಊರಲ್ಲೊಂದು ಯಕ್ಷಗಾನ ನಡೆಯೋದಾದ್ರೆ ..ಒಂದು ವಾರಕ್ಕೆ ಮೊದಲೇ ಪ್ರಚಾರ ಶುರುವಾಗುತ್ತೆ..ಥೇಟ್ ಚುನಾವಣಾ ಪ್ರಚಾರದಂತೆ! ಊರಲ್ಲಿ ಯಾರಾದ್ರೂ ಒಳ್ಳೆ ಮಾತುಗಾರ ಇದ್ರೆ ಆಟದ ಪ್ರಚಾರಕ್ಕೆ ಅವನೇ ಪ್ರಚಾರ ಮಾಡೋನು. ಒಂದಿಷ್ಟು ಜೋಕ್...ಮಸಾಲೆ ಸೇರಿಸಿ ಅವನ ಪ್ರಚಾರ ಕೇಳೋ ಕಿವಿಗೆ ಖುಷಿ ಕೊಡುತ್ತೆ..ಹಾಗಾಗಿ ಆಟ(ಯಕ್ಷಗಾನ) ಪ್ರಚಾರ ಮಾಡುವವನು ಯಾರು? ಏನ್ ಹೇಳ್ತಾನೆ? ಅನ್ನೋದೇ ಕೆಲವರಿಗೆ ಕುತೂಹಲದ ಸಂಗತಿ.

ಪ್ರಚಾರ ಕಿವಿಗೆ ಬಿದ್ದ ದಿನವೇ ನಾನು, ತಮ್ಮಾ ಅಮ್ಮನತ್ರ ಟಿಕೆಟ್ ಗೆ ಹಣ ಫಿಕ್ಸ್ ಮಾಡಿ ಇಡ್ತೀವಿ. ಹೆಚ್ಚಾಗಿ ಶನಿವಾರನೇ ಯಕ್ಷಗಾನ ಆಗೋದು..ಮರುದಿನ ಜನರಿಗೆ ನಿದ್ದೆ ಮಾಡಲೂ ಅನುಕೂಲವಾಗುತ್ತೆ ಅದ್ಕೆ. ಆವಾಗಲ್ಲೆ ಯಕ್ಷಗಾನ ಎಂದರೆ ಊರಿಗೆ ಊರೇ ಯಕ್ಷಗಾನ ಹೋಗುತ್ತಿತ್ತು..ಸುಮಾರು ರಾತ್ರಿ 9 ಗಂಟೆಗೆ ಯಕ್ಷಗಾನ ಶುರುವಾಗುವುದೆಂದರೆ, ಅಂದಿನ ಬೆಳಿಗ್ಗೆಯೇ ಜನ ಎಲ್ಲಾ ರೆಡಿಯಾಗುತ್ತಿದ್ದರು. ಹಣ್ಣು ಹಣ್ಣು ಅಜ್ಜ-ಅಜ್ಜಂದಿರು ಕೂಡ ದೊಣ್ಣೆ ಕುಟ್ಟುತ್ತಾ ಮೊಮ್ಮಕ್ಕಳ ಜೊತೆ ಹೋಗುತ್ತಿದ್ದರು. ನಮ್ಮ ಅಮ್ಮ ಯಾವಾಗ್ಲೂ ಯಕ್ಷಗಾನಕ್ಕೆ ಬರೋಲ್ಲ..ಹಾಗಾಗಿ ನಾವು ಹಿಂಡು ಹಿಂಡಾಗಿ ಹೋಗುತ್ತಿದ್ದ ಊರಮಂದಿ ಜೊತೆಗೇ ಹೋಗುತ್ತಿದ್ದವು. ನಮಗೆ ಬೆಡ್ ಶೀಟ್ ಕೊಟ್ಟು ಅಮ್ಮ ಕಳಿಸುತ್ತಿದ್ರು. ಯಾಕಂದ್ರೆ ರಾತ್ರಿಯ ಚಳಿ ಸಹಿಸಾಕೆ ಆಗಲ್ಲ. ಯಾರ ಜೊತೆಗಾದ್ರೂ ಹೋಗಿ ವೇದಿಕೆಯ ಎದುರು ಮುಂದಿನ ಸಾಲಿನಲ್ಲೇ ಕುಳಿತುಕೊಳ್ಳುತ್ತಿದ್ದೇವು. ನಾನು ರಾತ್ರಿ ಇಡೀ ಬಿಟ್ಟ ಕಣ್ಣುಗಳಿಂದ ಪಿಳಿಪಿಳಿ ಎಂದು ಯಕ್ಷಗಾನ ನೋಡುತ್ತಿದ್ದರೆ, ನನ್ನ ತಮ್ಮ ಚಂಡೆಯ ಸದ್ದಿಗೆ ಏಳೋದು...ಭಾಗವತಿಕೆ ಕೇಳಿದಾಗ ಮಲಗೋದು ಮಾಡುತ್ತಿದ್ದ. ಮಧ್ಯರಾತ್ರೀಲಿ ದೊಡ್ಡ ವೇಷಗಳು ವೇದಿಕೆಗೆ ಬಂದು, ಆಕಾಶ ಭೂಮಿ ಒಂದಾಗುವಂತೆ ಕುಣಿದು ಅಬ್ಬರಿಸಿದಾಗ ನನ್ನ ತಮ್ಮ ಬೆದರಿ ಅದೆಷ್ಟು ಬಾರಿ ಉಚ್ಚೆ ಮಾಡಿದ್ನೋ. ಆದ್ರು ಅವ ಬರೋದನ್ನು ಬಿಡಲ್ಲ.

ಯಕ್ಷಗಾನ ನೋಡಿದ ಮರುದಿನ ನನ್ನ ಕಿತಾಪತಿಯೇ ಬೇರೆ. ಬಂದು ಮನೆಯಲ್ಲಿ ನಿದ್ದೆ ಮಾಡಿದ್ರೆ, ನಿದ್ದೆ ಅಮಲಿನಲ್ಲಿ ಎದ್ದು ರಾತ್ರಿ ನಡೆದ ಯಕ್ಷಗಾನ ಡೈಲಾಗ್ ಗಳು, ಚಂಡೆ ಬಡಿಯೋದು ಎಲ್ಲವನ್ನು ಮಾಡುತ್ತಿದ್ದ ನಾನು ಕೊನೆಗೆ ಎದ್ದು ಕುಣಿಯುತ್ತಿದ್ದೆ ಅಂತೆ. ಅದ್ಕೆ ಅಮ್ಮ ನಿದ್ದೆ ಮಾಡುವಾಗ ನನ್ನ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆ ಹುಚ್ಚು ಕನಸು ಎಷ್ಟರಮಟ್ಟಿಗೆ ಇತ್ತೆಂದರೆ ಅಡುಗೆ ಮನೆಗೆ ಹೋಗಿ ಸೌಟು ಮತ್ತು ಪಾತ್ರೆ ತಂದು ಚೆಂಡೆ ಎಂದು ಬಡಿಯುತ್ತಿದ್ದೆ! ಈಗ ನೆನೆಸಿದಾಗ ನಗು ಬರುತ್ತಿದೆ. ಎಂಥ ಅವಸ್ಥೆ ನನ್ನದೂಂತಾ.

ಈಗ ಯಕ್ಷಗಾನ ನೋಡದೆ ಏಳೆಂಟು ವರ್ಷಗಳಾಯ್ತು. ಹೈಸ್ಕೂಲು ಮುಗ್ಸಿ ಪಿಯು, ಡಿಗ್ರಿಗೆ ಹಾಸ್ಟೇಲು ಸಹವಾಸ..ಈಗ ಈ ರೀತಿ ಯಕ್ಷಗಾನ ನೋಡೋದೇ ಅಪರೂಪ. ಅಷ್ಟೇ ಅಲ್ಲ, ಈಗ ಊರಿಗೆ ಹೋದರೆ ಎಂದಿನಂತೆ ಜನ ಯಕ್ಷಗಾನ ಅಂದ್ರೆ ಕಿವಿ ನೆಟ್ಟಗೆ ಮಾಡಲ್ಲ. ಮನೆಯಲ್ಲಿ ಟಿವಿ ಇದೆ, ಸಿಡಿ ತರೋಣ ಹೊಸ ಸಿನಿಮಾ ನೋಡೊಣ ಅಂತಾರೆ. ಕಲೆಗಳು ಜೀವಂತವಾಗಿರುತ್ತವೆ..ಆದರೆ ಜನರ ಅಭಿರುಚಿಗಳು....?!
ಫೋಟೋ: flickr.com

Tuesday, November 11, 2008

ಅಪ್ಪನಿಗೆ ಒಂದು ಪತ್ರ...

ಅಪ್ಪಾ..
ಯಾಕೋ ಮೊನ್ನೆಯಿಂದ ನಿನ್ನ ನೆನಪು ಭಾಳ ಕಾಡ್ತಿದೆ ಅಪ್ಪ. ಅದೇ ಮಕ್ಕಳ ದಿನಾಚರಣೆ ಬಂತಲ್ಲ..ಅದ್ಕೆ ಆಗಿರಬೇಕು. ನನ್ನ ಸ್ಲೂಲ್ ಮಕ್ಕಳೆಲ್ಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲು ತಮ್ಮ ಅಪ್ಪ-ಅಮ್ಮಂದಿರ ಜೊತೆ ಬರ್ತಾರೆ. ನಾನು ಮಾತ್ರ ಯಾವತ್ತೂ ಅಪ್ಪನ ಜೊತೆ ಹೋಗಲ್ಲ..ಅಮ್ಮನ ಜೊತೆ ಹೋಗ್ತಿನಿ. ಅದೇ ಕಳೆದ ಸಲ ಶಾಲೆಗೆ ಹೋದಾಗ ಅಮ್ಮನ ಜೊತೆ ಹೋದಾಗ, ಶಾಲೆಗೆ ಹೊಸದಾಗಿ ಸೇರಿದ ಟೀಚರ್ರು, ಅಪ್ಪನ ಯಾಕೆ ಕರೆದುಕೊಂಡು ಬಂದಿಲ್ಲಾ ಪುಟ್ಟಾ? ಎಂದು ನನ್ ಕೇಳಿದಾಗ ನಾನು ಅಮ್ಮನ ಮುಖ ನೋಡಿದೆ..ನೀನಿರಲಿಲ್ಲ ಅಲ್ವಾ? ಅಮ್ಮ ಒಡಲಲ್ಲಿ ದುಃಖ ತುಂಬಿಕೊಂಡು, ಕಣ್ಣಲ್ಲೇ ನಕ್ಕುಬಿಟ್ಟಳು. ನಾನೂ ನಗಬೇಕಲ್ಲಾ ಅದ್ಕೆ.
ಆದ್ರೂ ನಿನಗೆ ಒಂದು ದಿನವಾದ್ರೂ ನನ್ನ ಮಗಳ ಬೆಳಕಿನ ನಗು ಕಾಣಬೇಕು ಎಂದನಿಸಿದೆಯೇ? ಇಲ್ಲ ಬಿಡು. ಅಪ್ಪಾ, ನೀನು ನನ್ನ ಮತ್ತು ಅಮ್ಮನ ಬಿಟ್ಟು ಹೋಗಿ ಬಹುಶಃ ದಶಕಗಳೇ ಸರಿದುಹೋಗಿವೆ..ನೆನಪುಗಳೂ ಮರೆತುಹೋಗುವಷ್ಟು ದಿನಗಳಾಗಿವೆ..ಆದ್ರೂ 'ಅಪ್ಪ' ನಿನ್ನ ನೆನಪು ಕಾಡುತ್ತೆ. ಕಾಡಿಸುವ, ಪ್ರೀತಿಸುವ, ಮುದ್ದುಮಾಡುವ ಒಳ್ಳೆಯ ಅಪ್ಪ ನೀನಾಗಬೇಕಿತ್ತು ಎಂದನಿಸುತ್ತೆ..ಆಗಾಗ ನನ್ನೊಳಗೆಯೇ ಇದನ್ನೆಲ್ಲಾ ಅಂದುಕೊಳ್ತಿನಿ. ಹೌದು, ಅಪ್ಪ ನೀನು ತುಂಬಾ ಮೋಸಮಾಡಿದೆ. ಅಪ್ಪ, ಅಂದ್ರೇನು ಎಂದು ತಿಳಿಯುವ ಮೊದಲೇ ನೀನು ನನ್ನ ಮತ್ತು ಅಮ್ಮನಿಂದ ದೂರವಾಗಿ ಬೇರೊಂದು ಹೆಣ್ಣಿನ ಕತ್ತಿಗೆ 'ತಾಳಿ'ಯಾಗಿದ್ದೆ. ನೀನು ನಮ್ಮ ಜೊತೆ ಇದ್ದಷ್ಟು ದಿನ ನೀನು ಅಮ್ಮನಿಗೆ ನೀಡಿದ್ದು ಕ್ರೂರ ಹಿಂಸೆನೇ. ನಾನಿನ್ನೂ ಎದ್ದು-ಬಿದ್ದು ನಡೆಯುವ ಮಗುವಾಗಿದ್ದಾಗ ನೀನು ಮೂಗಿನತನಕ ಕುಡಿದು ಬಂದು ಅಮ್ಮನ ಪೀಡಿಸುತ್ತಿದ್ದೆ. ಅಮ್ಮ ದುಡಿದ ಚಿಲ್ಲರೆ ಕಾಸಿಗಾಗಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದೆ..ನೋಡು ಆವಾಗ ನಿನ್ನ ಕೊಲೆಮಾಡುವಷ್ಟು ಸಿಟ್ಟು ಬರ್ತಿತ್ತು. ಹೊಡೆದು, ಬಡಿದು ಅಮ್ಮನಿಂದ ಪುಡಿಗಾಸನ್ನೂ ಬಾಚಿಕೊಂಡು ಹೋದರೆ, ಮತ್ತೆ ನೀನು ಎದುರುಗೊಳ್ಳುತ್ತಿದ್ದು ಸಂಜೆಯ ಕಪ್ಪುಕತ್ತಲಲ್ಲಿ ತೂರಾಡುತ್ತಲೇ. ಸಂಜೆಯ ತನಕ 'ಗಂಡನೇ ದೇವರು' ಎಂದು ಬಟ್ಟಲು ತುಂಬಾ ಪ್ರೀತಿಯನ್ನಿಟ್ಟು ಕಾಯುತ್ತಿದ್ದ ನೀನು ಅಮ್ಮನಿಗೆ ಕೊಡುತ್ತಿದ್ದ ಉಡುಗೊರೆ ಬರೇ ಕಣ್ಣೀರು.
ಪುಟ್ಟ ಪುಟ್ಟ ಪಾದಗಳಿಂದ ಹೆಜ್ಜೆಗಳನ್ನೂರುತ್ತಾ ಸಾಗುತ್ತಿದ್ದ ನಾನು, ಎಲ್ಲವನ್ನೂ ಕಣ್ಣಾರೆ ನೋಡುತ್ತಿದ್ದೆ..ಆದರೆ ಅದ್ಯಾವುದಕ್ಕೂ ಆಗ ಅರ್ಥ ಇರಲಿಲ್ಲ. ನಿನ್ನ ಮೇಲೆ ಸಿಟ್ಟು ಮಾತ್ರ ಇತ್ತು..ಪ್ರೀತಿಯಲ್ಲ. ನನ್ನ ನಿನ್ನ ಸಂಬಂಧ, ಅಮ್ಮ-ನಿನ್ನ ಸಂಬಂಧ ಅದ್ಯಾವುದೂ ನನಗೆ ಆಗ ತಿಳಿಯಲೇ ಇಲ್ಲ..ಆದರೆ ಪ್ರಪಂಚಾನ ನನ್ನ ಕಣ್ಣುಗಳಿಂದ ನೋಡೋ ವಯಸ್ಸಲ್ಲಿ ನೋಡು ನೀನು ನೆನಪಾಗ್ತಿ, ಸಂಬಂಧಗಳು ನೆನಪಾಗ್ತವೆ,..ನಿನ್ನ ಪ್ರೀತಿ ಬೇಕು ಅನಿಸುತ್ತೆ..ಪ್ರೀತಿಯಿಂದ ಅಪ್ಪಾ ಎಂದು ಕರೆಯಲು ನನ್ನೆದುರು ಅಪ್ಪ ಇರಬೇಕಿತ್ತು...ಅಪ್ಪ-ಅಮ್ಮನ ಜೊತೆ ಖುಷಿಯಾಗಿರಬೇಕು ಎಲ್ಲಾ ಅನಿಸ್ತದೆ. ಎಂಥ ಮೋಸ, ಎಂಥ ಕ್ರೂರಿ ಅಪ್ಪ ನೀನು. ನಮ್ಮ ನೆನಪೇ ಆಗಲ್ವೇ ನಿಂಗೆ? ಅಮ್ಮನ ಕಣ್ನೀರು ನಿನಗೇ ಅರ್ಥವೇ ಆಗಲ್ವೇ? ಥೂ..ನಿನ್ನಂಥ ಅದೆಷ್ಟೋ ಗಂಡಸರನ್ನು ಭೂಮಿ ಇನ್ನೂ ಸಹಿಸಿಕೊಂಡಿದೆಯಲ್ಲಾ ಎಂದನಿಸುತ್ತದೆ. ಒಂದು ಹಿಡಿಯಷ್ಟು ಪ್ರೀತೀನ ನಿನಗೆ ಕೊಡಕ್ಕೆ ಆಗಿಲ್ಲ. ಹಾಗಾಗಿ ಅಪ್ಪ ಎನ್ನುವ ಪ್ರೀತೀನ ಪಡೆಯಲು ನನ್ನಿಂದಾಗಿಲ್ಲ.
ನೋಡಪ್ಪಾ, ಯಾಕೋ ನಿನ್ನ ನೆನಪಾಯಿತು..ಪತ್ರ ಬರೆದೆ. ಅಪ್ಪನ ಪ್ರೀತಿ ಬೇಕು ಅಂತ ಅನಿಸಿದ್ದರೂ, ನೀನು ಬೇಕು ಅಂತ ಅನಿಸುವುದೇ ಇಲ್ಲ. ನೀನು ಕೊಟ್ಟ ನೋವಿನ ಮಧ್ಯೆ ಪ್ರೀತಿ ಎಂಬ ಪದವೇ ಅರ್ಥ ಕಳಕೊಂಡಿದೆ. ನನಗೆ-ನಿನಗೆ ಸಂಬಂಧವೇ ಇಲ್ಲಂತ ಅನಿಸುತ್ತೆ. ನೀನು ಬೇಡಪ್ಪಾ. ನೀನು ಎಲ್ಲಿದ್ದಿಯೋ..ಆದ್ರೆ ನೋಡು ನಾನು-ಅಮ್ಮ ತುಂಬಾ ಖುಷಿಯಾಗಿದ್ದೀವಿ. ಅಮ್ಮ ನನ್ನ ಸುಖ, ನನ್ನ ಬದುಕು. ಈಗ ನಾನು ಐದನೇ ಕ್ಲಾಸು..ಅಮ್ಮ ನಂಗೆ ಒಳ್ಳೆ ಟೀಚರ್ ಆಗಿದ್ದಾಳೆ. ಅಮ್ಮ ನೀಡುವ ಪುಟ್ಟ ಪುಟ್ಟ ಸಂತೋಷಗಳು ನನಗೆ ಬದುಕು ನೀಡುತ್ತವೆ.
ಇಂತೀ,
ಮಗಳು

ಫೋಟೋ: http://www.flickr.com/

Thursday, November 6, 2008

'ಶರಧಿ'ಗೆ ವರ್ಷ! ನನ್ನೊಳಗೆ ಹರ್ಷ...

ನನ್ನ ಕನಸು, ಭಾವನೆ, ಬರಹಗಳಿಗೆ ವೇದಿಕೆಯಾಗಿದ್ದ ಪ್ರೀತಿಯ 'ಶರಧಿ'ಗೆ ಇದೀಗ ವರ್ಷ ತುಂಬಿದೆ. ಕಳೆದ ನವೆಂಬರ್ 2ರಂದು 'ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ?' ಎಂಬ ಪುಟ್ಟ ಬರಹವನ್ನು 'ಶರಧಿ'ಯೊಳಗೆ ಹಂಚಿಕೊಂಡಿದ್ದೆ. ಭಾವನೆಗಳ ಸಂತೆಯೊಳಗೆ ಕನಸುಗಳ ಮೂಟೆ ಹೊತ್ತು, ಹುಡುಕಾಟದಲ್ಲೇ ಕಳೆಯುತ್ತಿದ್ದ ನನ್ನ ಬರಹಗಳ ತುಡಿತಕ್ಕೆ 'ಶರಧಿ' ವೇದಿಕೆಯಾಯಿತು. ನಾನು 'ದ ಸಂಡೆ ಇಂಡಿಯನ್' ಪತ್ರಿಕೆಗೆ ಸೇರಿದಾಗ ಪರಿಚಯವಾಗಿದ್ದ ತರ್ಲೆ ಗೆಳತಿ ಕಲಾ ಕನ್ನಡ ಬ್ಲಾಗ್ ಲೋಕವನ್ನು ಪರಿಚಯಿಸಿದವಳು. ಆವಾಗ ಬ್ಲಾಗ್ ಅಂದರೆ ಏನು? ಎಂಬುದೇ ನನಗೇ ಗೊತ್ತಿರಲಿಲ್ಲ. ಸಮಯವಿದ್ದಾಗ, ಮನಸ್ಸು ಸರಿಯಿದ್ದಾಗ ಏನಾದ್ರೂ ಗೀಚಿ ಡೈರಿಯೊಳಗೇ ಮುಚ್ಚಿಡುವ ಅಭ್ಯಾಸ ನನ್ನದು. ಅದೇನೋ ಅವಳು ಯಾವಾಗ ನೋಡಿದರೂ ಅವಳ ಅಣ್ಣನ ಬ್ಲಾಗ್ 'ತುಂತುರು ಹನಿಗಳು'(ಶ್ರೀನಿಧಿ) ಸೇರಿದಂತೆ ತುಂಬಾ ಬ್ಲಾಗ್ ಗಳನ್ನು ತೆರೆದು ಓದುತ್ತಿದ್ದಳು. ನಾನು ಕುತೂಹಲದಿಂದ ಏನೇ ಅದು, ನಂಗೂ ಹೇಳಿಕೊಡು ಎನ್ನುತ್ತಿದ್ದೆ. ಕೊನೆಗೆ ಅವಳೇ ನನ್ನ ಹೆಸರಲ್ಲಿ ಬ್ಲಾಗ್ ತೆರೆದು, ಅಲ್ಲಿ ಬರೆಯುವ ಕುರಿತೆಲ್ಲಾ ಹೇಳಿದಳು. ಅಲ್ಲಿಂದ ಶರಧಿಯಲ್ಲಿ 'ಭಾವದಲೆಗಳ ಪಯಣ' ಮುಂದುವರಿದಿತ್ತು. ನನ್ನ ಗೆಳತಿಗೆ ಪ್ರೀತಿಯಿಂದ ಥ್ಯಾಂಕ್ಸ್ ಹೇಳಲೇಬೇಕು. ಜೊತೆಗೆ ಒಳ್ಳೆಯ ವಿನ್ಯಾಸವನ್ನೂ ಮಾಡಿಕೊಟ್ಟ ನನ್ನ ಪ್ರೀತಿಯ ಅಣ್ಣ' ರೋಹಿ'ಗೂ...

ಒಂದು ವರ್ಷದ ಪಯಣ ನೋಡಿದರೆ ನಾನು ಬರೆದಿದ್ದು ತೀರಾ ಕಡಿಮೆ. ಕೇವಲ 91 ಬರಹಗಳನ್ನು ಮಾತ್ರ ಬರೆದಿದ್ದೇನೆ. ಸೆಂಚುರಿ ಬಾರಿಸಕ್ಕೂ ನನಗೆ ಆಗಲಿಲ್ಲ. ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಬ್ಲಾಗ್ ಕಡೆ ಕಣ್ಣುಹಾಯಿಸಲೂ ಸಮಯವಿರಲಿಲ್ಲ..ಕಾರಣ ಚುನಾವಣೆ! ತುಂಬಾ ಭರವಸೆಯಿಂದ, ಆಸಕ್ತಿಯಿಂದ ಆರಂಭಿಸಿದ ಶರಧಿಯಲ್ಲಿ ನಿತ್ಯ ಪಯಣಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಈಗ್ಲೂ ನಂಗಿದೆ. ಆದರೆ ಇಷ್ಟಾದರೂ ಬರೆದೆನಲ್ಲ ಅಂತ ನನಗೆ ಖುಷಿಯಿದೆ, ಏನೋ ಒಂದು ರೀತಿಯ ತೃಪ್ತಿ. ಯಾವತ್ತೂ ನ್ಯಾಯಬದ್ಧವಾದ ಬರಹ, ಸಾಹಿತ್ಯವನ್ನು ಬ್ಲಾಗ್ ಮೂಲಕ ನೀಡಬೇಕನ್ನುವ ಉದ್ದೇಶ ನನ್ನದಾಗಿರಿಲಿಲ್ಲ. ಅದು ನನ್ನಿಂದ ಸಾಧ್ಯನೂ ಇಲ್ಲ. ನನ್ನಾಸೆ ಇಷ್ಟೇ: ಮನಸ್ಸಿಗೆ ತೋಚಿದ್ದನ್ನು, ಕಂಡಿದ್ದನ್ನು , ಕೇಳಿದ್ದನ್ನು ಬ್ಲಾಗ್ ನಲ್ಲಿ ಬರೆಯುವುದು. ಅದೂ ನನ್ನ ತೃಪ್ತಿಗಾಗಿ ಅಷ್ಟೇ.

ನನ್ನ ಬ್ಲಾಗಿನಲ್ಲಿ ತುಂಬಾ ಒಳ್ಳೆಯ ಬರಹಗಳನ್ನು ನಾನೆಂದೂ ಬರೆದಿಲ್ಲ. ಆದರೂ ಬರೆದಿರುವುದಕ್ಕೆ ಎಷ್ಟೋ ಜನ ಬೆನ್ನುತಟ್ಟಿದ್ದಾರೆ. ಇನ್ನಷ್ಟು ಬರೆ ಅಂದಿದ್ದಾರೆ. ಏನೋ ಸುಮ್ನೆ ಗೀಚಿದಾಗ ಬರಹ ಚೆನ್ನಾಗಿತ್ತು, ಆದರೆ ಹೀಗಿರಬೇಕಿತ್ತು ಎಂದಿದ್ದಾರೆ..ಅದೇ ನನಗೆ ತುಂಬಾ ಖುಷಿ ತಂದಿರುವ ವಿಚಾರ. ನಾನು ಅಕ್ಷರಲೋಕಕ್ಕೆ ಹೆಜ್ಜೆಯಿಟ್ಟ ದಿನಗಳಿಂದಲೇ 'ಚಿತ್ರಾ , ಬ್ಲಾಗ್ ಶುರು ಮಾಡು' ಎನ್ನುತ್ತಿದ್ದವರು, ಪ್ರೀತಿಯಿಂದ ಪ್ರೋತ್ಸಾಹ ನೀಡುತ್ತಿದ್ದವರು, ಒಂದು ರೀತೀಲಿ ನನ್ನ ಪಾಲಿಗೆ 'ಮೇಷ್ಟ್ರು' ಆಗಿದ್ದ 'ಕುಂಟಿನಿ'ಸರ್ ಗೆ ಎಷ್ಟೇ ಥ್ಯಾಂಕ್ಸ್ ಹೇಳಿದ್ರೂ ಸಾಲದು. ಬ್ಲಾಗ್ ಬರೆದಾಗ 'ಆಗಲ್ಲ..ಹೀಗೆ ಬರೀಮ್ಮಾ' ಎನ್ನುತ್ತಿದ್ದ ರಶೀದ್ ಸರ್, ಆರಂಭದಿಂದಲೇ ಪ್ರತಿ ಬರಹಗಳನ್ನು ಓದಿ 'ನೋಡಮ್ಮಾ ಚಿತ್ರಾ..ಯಾರಿಗೂ ನೋವಾಗದಂತೆ ನಿನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸು' ಎನ್ನುತ್ತಿದ್ದ ಗೆಳೆಯ ರಾಜೇಶ್, ನನ್ನ ಬ್ಲಾಗ್ ಅನ್ನು ಪ್ರಕಟಿಸಿ ಪ್ರೋತ್ಸಾಹಿಸಿರುವ ಕೆಂಡಸಂಪಿಗೆ, ಕನ್ನಡಪ್ರಭ, ಅವಧಿ ಎಲ್ಲರೂ ನನ್ನನ್ನು ಬೆನ್ನುತಟ್ಟಿದವರೇ. ..ಜೊತೆಗೆ ಒಂದಷ್ಟು 'ಬ್ಲಾಗ್ ಗೆಳೆಯರೇ' ನನಗೆ ಸ್ಫೂರ್ತಿ.

'ಶರಧಿ' ಅಂದ್ರೆ ನನ್ನ ಕನಸು. ಇದು ನಾನು ತುಂಬಾ ಇಷ್ಟಪಟ್ಟ ಹೆಸರು. ನನ್ನ ಅಮ್ಮನ ಜೊತೆ ಹೇಳ್ತಾ ಇದ್ದೆ, 'ಜಗತ್ತಿನಲ್ಲಿ ಒಳ್ಳೊಳ್ಳೆ ಹೆಸ್ರು ಇರುವಾಗ ನನಗೇಕೆ ಈ ಚಿತ್ರಾ ಅನ್ನೋ 'ವಿಚಿತ್ರ ಹೆಸರು ಇಟ್ಟೆಂತ?'. ಅದಕ್ಕೇ ಪ್ರೀತಿಯಿಂದ 'ಶರಧಿ' ಅಂತ ಹೆಸರಿಟ್ಟೆ. ನನ್ನ ಶರಧಿ ಇನ್ನೂ ಪುಟ್ಟದಾದ, ಒಂದು ವರ್ಷದ ಹಸುಗೂಸು. ನಾನಿಲ್ಲಿ ಇನ್ನೂ ತುಂಬಾ ದೂರ ದೂರ ಪಯಣಿಸಬೇಕಿದೆ. ಏನೇನೋ ಬರೆಯಬೇಕೆಂದುಕೊಂಡಿದ್ದೇನೆ..ಕತೆ, ಕವನ, ವಿಮರ್ಶೆಗಳನ್ನು ಬಿಟ್ಟು. ಯಾಕೆಂದರೆ ಎಂಥ ಪುಸ್ತಕಗಳನ್ನು ಓದಿದರೂ ಈ ಮೂರು ಅಭ್ಯಾಸಗಳಿನ್ನೂ ಒಲಿದಿಲ್ಲ. ಇದಕ್ಕೆ ಮಂಡೆನೇ ಒಡುತ್ತಿಲ್ಲ. ಆದರೂ ನನ್ನ ಪ್ರೀತಿಯ ಶರಧಿಯಲ್ಲಿ ಏನಾದ್ರೂ ಬರೆಯಲೇಬೇಕು...ಬರೀತಾಲೇ ಇರಬೇಕು..ಶರಧಿ ನಿರಂತರವಾಗಿ ಹರಿಯುತ್ತಲೇ ಇರಬೇಕು. ನನ್ನೊಳಗಿನ ಖುಷಿ, ಅಳಲಿನ ಭಾವಗಳ 'ಸವಿಹಾಡು'ಗಳು ಆಗಾಗ 'ಶರಧಿಯಲ್ಲಿ' ಪಯಣಿಸುತ್ತಿರಬೇಕು ಎಂಬುದು ನನ್ನಾಸೆ. ನನ್ನೊಳಗಿನ ಭಾವದಲೆಗಳ ಪಯಣಕ್ಕೆ 'ಶರಧಿ' ಪುಟ್ಟ ವೇದಿಕೆ. ನನಗೆ ಬೆನ್ನು ತಟ್ಟಬೇಕು,.ಶರಧಿಯಲ್ಲಿ ನನ್ನ ಜೊತೆಗೆ ನೀವೂ ಖುಷಿಖುಷಿಯಾಗಿ ಪಯಣಿಸಬೇಕು. ''ಶರಧಿ' ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.
ಪ್ರೀತಿಯಿಂದ,
ಚಿತ್ರಾ
(ಫೋಟೋ: ರೋಹಿ ಅಣ್ಣ)