Saturday, December 25, 2010

ನನ್ನ ಜಡೆ



ಭಾನುವಾರ ಬಂತೆಂದರೆ ಸಾಕು, ಕೊಬ್ಬರಿ ಎಣ್ಣೆಯ ದೊಡ್ಡ ಬಾಟಲನ್ನೇ ಹಿಡಿದು ಅಮ್ಮ ಜಗುಲಿ ಮೇಲೆ ಕೂರುವಳು. ನನಗಿನ್ನೂ ಏಳೆಂಟು ವರ್ಷ. ತಲೆಗೆ ಹಾಗೇ ಎಣ್ಣೆಯನ್ನು ಸುರಿದು, ತಲೆತುಂಬಾ ಎಣ್ಣೆಯ ಓಕುಳಿ. ದಪ್ಪವಾದ, ಗುಂಗುರು ಕೂದಲು. ಜಡೆ ಹಾಕಿದರೆ ಸೊಂಟದಿಂದ ಕೆಳಗೆ. ಅಮ್ಮನಿಗೆ ಜಡೆ ಹಾಕುವ ಖುಷಿ, ನನಗೆ ಅಮ್ಮನ ಕೈಯಿಂದ ಬಿಡಿಸಿಕೊಳ್ಳುವ ಆತುರ.

ಆ ಲೀಟರ್‌ಗಟ್ಟಗಲೆ ಎಣ್ಣೆ ಹಾಕಿ ಕೂದಲು ಬಾಚತೊಡಗಿದರೆ, ಸಿಕ್ಕು ಬಿಡಿಸಲು ಒಂದು ಗಂಟೆ. ಅದನ್ನು ಬಾಚಿ ಜಡೆ ಹೆಣೆಯಲು ಇನ್ನರ್ಧ ಗಂಟೆ. ಅಲ್ಲಿಗೇ ಅಮ್ಮನಿಗೆ ಸಮಾಧಾನವಿಲ್ಲ. ಮನೆಯಂಗಳದಲ್ಲಿ ಬೆಳೆದ ಆ ಕನಕಾಂಬರವನ್ನು ಕೊಯ್ದು ಮಾಲೆ ಕಟ್ಟುವಳು. ಜಡೆಯ ತುಂಬಾ ಕನಕಾಂಬರದ ಚೆಲುವು. ಮಗಳ ಜಡೆಗೆ ಹೂವು ಮುಡಿಸಿ ಅದನ್ನು ನೋಡುವುದೇ ಅಮ್ಮನಿಗೆ ಖುಷಿ. ಜಡೆ ಹಾಕಿಬಿಟ್ಟರೆ ಅವಳ ದೊಡ್ಡ ಕೆಲಸ ಮುಗಿದಂತೆ.

ಶಾಲೆಗೆ ಹೋಗುವಾಗಲೂ ಅಷ್ಟೇ, ಎರಡು ಜಡೆ ಹೆಣೆದು ಅದನ್ನು ಮಡಿಚಿ ಕಟ್ಟಬೇಕು. ಆ ತುರುಬಿಗೆ ಪುಟ್ಟದೊಂದು ಕೆಂಪು ಗುಲಾಬಿ ಇಡೋಳು. ಆದರೆ, ಭಾನುವಾರ ಬಂತೆಂದರೆ ವೈವಿಧ್ಯಮಯ ಜಡೆ ಹೆಣೆಯೋಳು. ಅದನ್ನು ನೋಡುವುದೇ ಚೆಂದ. ನನ್ನ ಜಡೆಯ ಮೇಲೆ ತಮ್ಮನಿಗೆ ಕಣ್ಣು. ಅದನ್ನು ಕದ್ದು ಹಿಡಿದೆಳೆದರೆನೇ ಅವನಿಗೆ ಸಮಾಧಾನ.

ಆ ಉದ್ದ ಜಡೆಯನ್ನು ಎದುರುಗಡೆ ಹಾಕೊಳ್ಳುವುದೇ ಸಂಭ್ರಮ. ಅಮ್ಮ ನನ್ನ ಜಡೆಯನ್ನು ಎಷ್ಟು ಜೋಪಾನವಾಗಿಡುತ್ತಿದ್ದಳೆಂದರೆ, ನನ್ನ ಸ್ನಾನ ಮಾಡುವಾಗಲೂ ಹೆಚ್ಚು ಬಿಸಿಯಾದ ನೀರು ಉಪಯೋಗಿಸಲ್ಲ. ಏನಿದ್ರೂ ಅರೆಬಿಸಿ ನೀರು. ಪ್ರತಿದಿನ ಎಣ್ಣೆ ಹಾಕಿ ಸಿಕ್ಕು ಬಿಡಿಸಿ ಬಾಚೋಳು. ಒಂದು ದಿನ ಅದಕ್ಕೆ ಕತ್ತರಿ ತಾಗಿಸಿದ್ದಿಲ್ಲ. ಯಾರಾದ್ರೂ ತಲೆಕೂದಲು ಕತ್ತರಿಸುವ ಬಗ್ಗೆ ಮಾತೆತ್ತಿದ್ದರೆ ನನ್ನ ಮಗಳ ತಲೆಕೂದಲು ಉದ್ದ ಬರಬೇಕು. ಹೆಣ್ಮಕ್ಕಳಿಗೆ ಜಡೆಯೇ ಸೌಂದರ್ಯ ಎಂದು ಉದ್ದುದ್ದ ಜಡೆ ಪುರಾಣ ತೆಗೆಯೋಳು.

ಪ್ರತಿ ಭಾನುವಾರ ನಮ್ಮೂರಲ್ಲಿ ಸಂತೆ ನಡೆಯೋದು. ಆ ಸಂತೆಗೆ ಅಮ್ಮ ತಪ್ಪದೆ ಹಾಜರ್. ಅಲ್ಲಿಗೆ ಹೊರಟಾಗ ಮಂಗಳೂರ ಮಲ್ಲಿಗೆ ತನ್ನಿಯೆಂದು ಅಮ್ಮನಿಗೆ ನನ್ನ ವಾರ್ನಿಂಗ್. ಜೊತೆಗೊಂದು ಕೆಂಪು ಗುಲಾಬಿ. ಉದ್ದವಾಗ ಜಡೆ ಹೆಣೆದು, ಜಡೆಯ ಬುಡಕ್ಕೊಂದು ಗುಲಾಬಿ ಇಟ್ಟರೆ ಸಾಕು. ಸಾವಿರ ಕಣ್ಣುಗಳು ಜಡೆಯ ಮೇಲೆ!
ಇಂದು ಜಡೆಯಿಲ್ಲ, ತುರುಬಲ್ಲಿ ಹೂವಿಲ್ಲ. ಜಡೆ ಹೆಣೆಯುವ ಅಮ್ಮನಿಲ್ಲ!

ಕೆ.ಎಸ್.ನ. ಹಾಡೊಂದು ನೆನಪಾಗುತ್ತಿದೆ.
ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುಂಬಾ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ

ಇವಳು ಯಾರು ಬಲ್ಲೆಯೇನು

ಇವಳ ಹೆಸರ ಹೇಳಲೇನು

ಇವಳ ದನಿಗೆ ತಿರುಗಲೇನು

ಇವಳು ಏತಕೋ ಬಂದು ನನ್ನ ಸೆಳೆದಳು...!!



ಪ್ರಕಟ: http://www.hosadigantha.in/epaper.php?date=12-23-2010&name=12-23-2010-13

Wednesday, October 20, 2010

ಅಪರಿಚಿತ ಭಾವ


ಅಮ್ಮಾ ನಿನ್ನ ಮಡಿಲಿಗೆ ಸೆಳೆದುಕೋ
ಈ ಪ್ರಶ್ನೆಗೆ ಉತ್ತರಿಸು

ಉದ್ದುದ್ಧ ಕಥೆ ಹೇಳಬೇಡ

ಇಂದು ರಾತ್ರಿ ನಾವು ಅಗಲುವುದಾದರೆ

ನೀನೇಕೆ ನನ್ನನ್ನು ಹೆತ್ತೆ?

ಆ ಕ್ಷಣ ಅಮೃತಾ ಪ್ರೀತಂ ಅವರು ಬರೆದಿರುವ ಕವನ ನೆನಪಾಗದಿರಲಿಲ್ಲ. ನೂರಾರು ಹೆಣ್ಣುಮಕ್ಕಳ ಅಂತರಂಗದಲ್ಲಿ ಅಣಕವಾಡುವ ಪ್ರಶ್ನೆಯಂತೆ ಭಾಸವಾಯಿತು. ಈ ಪ್ರಶ್ನೆಗೆ ಉತ್ತರವಿಲ್ಲ ಗೊತ್ತು. ಆದರೆ, ತವರು ತೊರೆವ ಹೆಣ್ಣಿನ ಮನದಲ್ಲಿ ಇಂಥ ಪ್ರಶ್ನೆ ಕಾಡುವುದು ತಪ್ಪಲ್ಲ. ಒಂಬತ್ತು ತಿಂಗಳು ಹೊತ್ತು, ಹೆತ್ತು ಬೆಳೆಸಿದ ಹೆಣ್ಣು ಜೀವವನ್ನು ನಾಳೆ ಇನ್ಯಾರದೋ ಮಡಿಲಿಗೆ ಹಾಕೋದಾದರೆ ಹೆಣ್ಣು ಮಗುವನ್ನು ದೇವ್ರು ಕರುಣಿಸುವುದಾದರೂ ಏಕೆ? ಇಂಥ ಗೊಂದಲಗಳ ನಡುವೆಯೇ ‘ಅಪರಿಚಿತ ಭಾವ’ವೊಂದು ನನ್ನೊಳಗೇ ಮಾತಿಗಿಳಿಯುತ್ತಿತ್ತು.

ಅಂದು ತಮ್ಮ ಹೇಳಿದ್ದ ‘ಅಕ್ಕಾ ನೀನು ಚೆನ್ನಾಗಿ ಡ್ರೆಸ್ ಮಾಡಿಕೋ. ನಿನ್ನ ನೋಡಕೆ ಯಾರೋ ಬರುತ್ತಿದ್ದಾರೆ’ ಎಂದಾಗ ಮೌನದ ಕಣ್ಣೀರು ಬರದಿರಲಿಲ್ಲ. ನಾ ಬೆಳೆದ ಆ ಪುಟ್ಟ ಮನೆ, ಸಣ್ಣವಳಿರುವಾಗ ನನ್ನ ಓದಿಗೆಂದೇ ಚಿಲ್ಲರೆ ಕೂಡಿಸಿ ಮಾಡಿಕೊಟ್ಟ ಪುಟ್ಟ ಟೇಬಲ್ಲು, ನಡುರಾತ್ರಿಯಲ್ಲೂ ನನ್ನ ಎಬ್ಬಿಸಿ ಓದು ಅನ್ನುತ್ತಿದ್ದ ಆ ಪುಟ್ಟ ಚಿಮಿಣಿ ದೀಪ, ಮನೆಮುಂದೆ ಬೆಳೆಸಿದ ಬಣ್ಣದ ಹೂಗಿಡಗಳು, ನಾ ಕೈಯಾರೆ ನೆಟ್ಟ ತೆಂಗಿನ ಮರ, ನನ್ನ ಪುಟ್ಟ ತಂಗಿಯಂತೆ ಬೆಳೆಸಿದ ಹಸು ಅಪ್ಪಿ...ಜೀವನಪ್ರೀತಿಯ ಸಂಕೇತ ಅಮ್ಮ...ಎಲ್ಲವನ್ನೂ ಬಿಟ್ಟು ಯಾರದೋ ಅಪರಿಚಿತರ ಮಡಿಲಿಗೆ ‘ಗಂಟು’ ಬೀಳಬೇಕಲ್ಲಾ ಅನಿಸಿತ್ತು.

ಅಂದು ನಾವಿಬ್ಬರೂ ಅಪರಿಚಿತರು. ನಿನಗೆ ನಾನು, ನನಗೆ ನೀನು ಪರಸ್ಪರ ಅಪರಿಚಿತರು. ಅಲ್ಲಿ ಪರಿಚಯದ ಯಾವ ‘ವಿಳಾಸ’ವೂ ಇರಲಿಲ್ಲ. ನಿನ್ನೆದುರಲ್ಲಿ ತುಟಿ ಮುಚ್ಚಿ ತಲೆಬಾಗಿ ತಾಳಿ ಕಟ್ಟಿಸಿಕೊಂಡಾಗಲೂ ನೀ ನನಗೆ
ಅಪರಿಚಿತ. ಸಪ್ತಪದಿ ತುಳಿದು ನಿನ್ನ ಮನೆಯಲ್ಲಿ ಸಿಹಿ ಊಟ ಮಾಡುವಾಗಲೂ ನೀನು ಪರಿಚಿತ ಅನಿಸಲಿಲ್ಲ. ಅಂದು ಶುಭರಾತ್ರಿಯಲ್ಲಿ ನನ್ನ ನಿನ್ನ ಮಡಿಲಿಗೆ ಸೆಳೆದುಕೊಳ್ಳುವವರೆಗೂ ನೀನು ಅಪರಿಚಿತನೇ ಅನಿಸಿದ್ದೆ! ಆದರೆ, ‘ಅಪರಿಚಿತ’ ಎನ್ನುವ ಕಪ್ಪು ಗೆರೆ ಮರೆಯಾಗಿದ್ದು ಯಾವಾಗ ಗೊತ್ತಾ? ನೀನು ನನ್ನೊಳಗೊಂದು ಸಂಬಂಧಗಳನ್ನು ಬೆಸೆದಾಗ. ಅಲ್ಲಿಯವರೆಗೆ ನನ್ನ ಸಂಬಂಧಗಳೊಳಗೆ ಮಾತ್ರ ನಾ ‘ಬಂಽ’ಯಾಗಿದ್ದೆ. ಅವುಗಳನ್ನಷ್ಟೇ ನಾ ಸಂಭ್ರಮಿಸಿದ್ದೆ. ಇಂದು ನನ್ನ ಸುತ್ತ ನೂರಾರು ಬದುಕಿನ ಸಂಬಂಧಗಳಿವೆ. ಅತ್ತೆ, ಮಾವ, ಚಿಕ್ಕಮ್ಮ-ಚಿಕ್ಕಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ....ಎಷ್ಟೊಂದು ಸಂಬಂಧಗಳನ್ನು ನನ್ನೆದುರಿಗೆ ತಂದಿಟ್ಟೆ ನೀನು?

ಆ ‘ಅಪರಿಚಿತ’ ಅನ್ನೋ ಭಾವ ಕಿತ್ತು ಬಿಸಾಕಿದ್ದು ಕೂಡ ಆ ಪ್ರೀತಿಯ ಸಂಬಂಧಗಳೇ. ಬಹುಶಃ ಜಗತ್ತಿನ ಸಮಸ್ತ ಹೆಣ್ಣು ಮಕ್ಕಳ ದನಿಯೂ ಇದೇ ಆಗಿರಬಹುದು. ಹೆಣ್ಣೊಬ್ಬಳ ಬದುಕು ಪರಿಪೂರ್ಣ ಎನಿಸೋದು ಇಲ್ಲೇ...ಹೆಣ್ಣು ಸಂಬಂಧಗಳ ಕೊಂಡಿ, ಬದುಕು ಬೆಸೆಯುವ ಸುಂದರ ಕೊಂಡಿ. ಹೆಣ್ಣೆಂದರೆ ಹಾಗೆನೇ..ಬದುಕಿನ ಸಂಬಂಧಗಳಿಂದ ಸಾರ್ಥಕ ಪಡೆಯುವವಳು!


ಪ್ರಕಟ: http://hosadigantha.in/epaper.php?date=10-21-2010&name=10-21-2010-15

Thursday, July 29, 2010

ಆಷಾಢದ ಒಂದು ದಿನ..


ಅಂದು ಅಕ್ಕ ಊರಿಗೆ ಬರುವೆನೆಂದು ಖುಷಿಯಿಂದಲೇ ಪತ್ರ ಬರೆದಿದ್ದಳು. ಮದುವೆಯಾಗಿ ಆಗ ತಾನೇ ಮೂರು ತಿಂಗಳು. ಆಗಲೇ, ಅಕ್ಕಾ ಒಂದು ತಿಂಗಳು ಊರಿಗೆ ಬರುವವಳಿದ್ದಳು.

ಅಕ್ಕ ಊರಿಗೆ ಬರುತ್ತೇನೆಂದು ಹೇಳಿದ್ದೇ ತಡ ಅಪ್ಪ ಆ ಧಾರಾಕಾರ ಮಳೆಯ ನಡುವೆಯೂ ಕೃಷಿಯ ಲೆಕ್ಕಾಚಾರದಲ್ಲಿ ತೊಡಗಿದ್ದ. ಅಕ್ಕ ಅಂತೂ ಊರಿಗೆ ಬರುತ್ತಾಳಲ್ಲಾ, ಕೃಷಿ ಕೆಲಸಕ್ಕೂ ಒಂದು ಜನ ಹೆಚ್ಚು ಸಿಗುತ್ತೆ ಅನ್ನೋದು ಅಪ್ಪನ ಲೆಕ್ಕಾಚಾರವಾದರೆ, ಅಮ್ಮ ಮನೆಗೆ ಬರುವ ಮಗಳಿಗೆ ಏನು ಸ್ಪೆಷಲ್ ಮಾಡಲಿ ಅನ್ನುವ ಚಿಂತೆ. ಹೊಸದಾಗಿ ಮದುವೆಯಾದ ಮೊಮ್ಮಗಳು ತವರಿಗೆ ಬರುತ್ತಾಳೆಂದು ಅಜ್ಜಿಗಂತೂ ಸ್ವರ್ಗಕ್ಕೆ ಮೂರೇ ಗೇಣು. ನಮಗೆಲ್ಲಾ ಅಕ್ಕನ ಜೊತೆ ಮತ್ತೊಮ್ಮೆ ಒಡನಾಡುವ ಆಸೆ, ಅವಳ ಜೊತೆ ಬೈಸಿಕೊಳ್ಳುವ, ಸಂಭ್ರಮಿಸುವ, ಮಳೆಗಾಲದಲ್ಲಿ ಹಪ್ಪಳ-ಸಂಡಿಗೆ ಜೊತೆಗೆ ಮೆಲ್ಲುವ ಖುಷಿ, ಒಟ್ಟಿನಲ್ಲಿ ಅಕ್ಕನನ್ನು ಮತ್ತೆ ನೋಡುವ ತವಕ, ಅಕ್ಕನಿಗೆ ಅಮ್ಮನ ಮನೆಗೆ ಬರುವ ಅಗಾಧ ಸಂಭ್ರಮ...ಇದಕ್ಕೆ ಎಲ್ಲೆಯುಂಟೇ?
ದಶಕಗಳ ಹಿಂದಿನ ಕಥೆ, ಬದುಕಿನ ದಾರಿಯಲ್ಲಿ ಎಷ್ಟೋ ವರ್ಷಗಳು ಸರಿದುಹೋಗಿವೆ.
ಹೌದು, ಅದೇ ಆಷಾಢ ಮಾಸ.

ಆಷಾಢದಲ್ಲಿ...
ಇದೀಗ ಮತ್ತೆ ಬಂದಿದೆ ಆಷಾಢ ಮಾಸ.
ಅಜ್ಜಿ ಹೇಳುತ್ತಿದ್ದಳು; ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು, ಅತ್ತೆ-ಸೊಸೆ ಒಂದೇ ಬಾಗಿಲಲ್ಲಿ ಓಡಾಡಬಾರದು, ಆಷಾಢ ಮಾಸ ಬಂದ್ರೆ ಮನೆ ಖರೀದಿಸಬಾರದು, ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು....ಹೀಗೇ ಆಷಾಢ ಮಾಸ ಬಂದ್ರೆ ಬರೇ ಕೆಟ್ಟದು, ಅದು ಅಶುಭ ಎಂದು. ಇಂದಿಗೂ ‘ಅಜ್ಜಿ’ಯರು ಅದೇ ಕಥೆ ಬಿಚ್ಚುತಾರೆ.

ಹೌದು, ಆಷಾಢ ಮಾಸ ಎಂದರೆ ಸಂಗಾತಿಗಳಿಗೆ ವಿರಹಕಾಲ. ಆಷಾಢ ಮಾಸಕ್ಕೆ ಇನ್ನೇನು ಒಂದು ವಾರದ ಇದೆಯೆಂದಾದರೆ ಸಾಕು ಮಗಳನ್ನು ಮನೆಗೆ ಕರೆತರುವ ಸಂಭ್ರಮ, ಸಡಗರ ತವರು ಮನೆಯವರದ್ದು. ಅತ್ತೆ ಮನೆಯಲ್ಲಿ ಸೊಸೆಯನ್ನು ತವರಿಗೆ ಕಳುಹಿಸಿಕೊಟ್ಟು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ಧ ಸಾಂಪ್ರದಾಯಿಕ ಪದ್ಧತಿಗೆ ಜೀವ ತುಂಬುವ ಆತುರ. ಆಗ ತಾನೇ ಮದುವೆಯಾಗಿದ್ವಿ ಅಂತ ಮಗ ಸೊಸೆ ತವರಿಗೆ ತೆರಳುವುದು ಬೇಡ ಎಂದರೂ, ನಾವೆಲ್ಲ ಗಂಡನ ಬಿಟ್ಟು ಒಂದು ತಿಂಗಳು ಇದ್ದಿಲ್ವಾ? ಎನ್ನುವ ಅತ್ತೆ ಸೊಸೆನ ತವರಿಗೆ ಕಳುಹಿಸಲು ಅಣಿಯಾಗುತ್ತಾಳೆ. ಅದಕ್ಕೆ ನೂತನ ವಧು-ವರರಿಗೆ ಆಷಾಢ ಎಂದರೆ ವಿರಹಕಾಲ. ಅದನ್ನು ಸಹಿಸಿಕೊಳ್ಳಲೇಬೇಕು, ಒಂದು ತಿಂಗಳು ಮುದ್ದಿನ ಮಡದಿಯನ್ನು ತವರಿಗೆ ಕಳುಹಿಸಲೇಬೇಕು. ಅದು ನಮ್ಮ ಸಂಪ್ರದಾಯ, ಪದ್ಧತಿ. ಸುತ್ತ ಸುತ್ತಿಕೊಂಡ ಈ ಆಚರಣೆಗಳಿಂದ ಬಿಡಿಸಿಕೊಳ್ಳುವಂತಿಲ್ಲ. ಹೆಂಡತಿಯ ನೆನಪಾದರೆ ತಕ್ಷಣ ಫೋನ್ ಮಾಡ್ತೀನಿ ಅಂದ್ರೆ ಆಗೆಲ್ಲಾ ನಿಮಿಷ ನಿಮಿಷಕ್ಕೆ ಮಾತನಾಡಲು ಫೋನ್‌ಗಳಿಲ್ಲ. ಏನಿದ್ರೂ ಪತ್ರ ಬರೆಯುವುದು. ಪತಿಯ ಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವ ಸರದಿ ಪತ್ನಿಯದ್ದು.
ಅದಕ್ಕೆ ಹಾಗಿರಬೇಕು..
ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ... ಪ್ರಣಯಗೀತೆ ಬಾಳೆಲ್ಲ...
ಎಂಬ ಹಾಡು ಹುಟ್ಟಿಕೊಂಡಿದ್ದು. ಆಷಾಢದ ನಂತರ ಬರುವ ಶ್ರಾವಣ ಮಾಸ ಹಬ್ಬ-ಹಬ್ಬ ಹರಿದಿನಗಳನ್ನು ಹೊತ್ತು ತರುವ ಜೊತೆಗೆ ತವರಿಗೆ ಹೋದ ಮಡದಿ ಮರಳಿ ಮನೆ ಸೇರುತ್ತಾಳೆ.

ಕಾಲಾಯ ತಸ್ಮೈ ನಮಃ
ಆದರೆ, ಇಂದು ‘ಕಾಲಾಯ ತಸ್ಮೈ ನಮಃ’ ಎಂಬ ಮಾತು ನೆನಪಾಗುತ್ತಿದೆ. ವಿದೇಶದಲ್ಲಿ ಗಂಡನ ಜೊತೆ ಇರುವ ಮಗಳು ಆಷಾಢ ಎಂದರೇನು? ಎಂದು ಅಮ್ಮ ಜೊತೆ ಕೇಳಿದರೆ, ಇತ್ತ ಇಲ್ಲೇ ಹುಟ್ಟಿ ಬೆಳೆದ ಮಗ ಅಥವಾ ಮಗಳು ಆಷಾಢ ಎಂದರೆ ಮೂಢನಂಬಿಕೆ, ಅದೆಲ್ಲಾ ಸುಮ್ ಸುಮ್ಮನೆ ಎಂದು ಮೌನವಾಗುತ್ತಾರೆ. ಹೊರಗೆ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಪತಿ-ಪತ್ನಿಯರು ಇದನ್ನು ಒಪ್ಪಲು ಸಿದ್ಧರಿಲ್ಲ. ಗ್ರಾಮ್ಯ ಪ್ರದೇಶದಲ್ಲಿ ಬಿಟ್ಟರೆ ನಗರಗಳಲ್ಲಿ ಯಾರೂ ಕೂಡ ಈ ಪದ್ಧತಿಯನ್ನು ಆಚರಿಸುವುದು ಕಂಡುಬರುತ್ತಿಲ್ಲ.

ಆಷಾಢ ಅಶುಭವೇ?
ಅಂದ ಹಾಗೇ ಇಂಥ ಪದ್ಧತಿ ಏಕಿತ್ತು?ಅದೇಗೆ ಆಷಾಢ ಅಶುಭ? ಎಂಬಿತ್ಯಾದಿ ನೂರಾರು ಪ್ರಶ್ನೆಗಳಿಗೂ ಬಲ್ಲವರ ಬುದ್ಧಿವಂತಿಕೆಯ ಮಾತುಗಳು ಸಾಥ್ ನೀಡುತ್ತಿವೆ.
ಹಿಂದೆಲ್ಲಾ ಆಷಾಢ ಮಾಸ ಬಂತೆಂದರೆ ಬಿತ್ತನೆಯಿಂದ ಹಿಡಿದು ಕಳೆ ಕೀಳೋದ್ರವರೆಗೆ ರೈತನಿಗೆ ಕೈತುಂಬಾ ಕೆಲಸ. ಹದವಾಗಿರುವ ಭೂಮಿಯಲ್ಲಿ ಕೃಷಿ ಕೆಲಸ ಮಾಡಲು ಆಷಾಢ ಒಳ್ಳೆಯ ಸಮಯ. ಹಾಗಾಗಿ ಹೊಸದಾಗಿ ಮದುವೆಯಾದ ವಧು-ವರರು ತಮ್ಮ ಜವಾಬ್ದಾರಿ ಮರೆಯಬಾರದು ಎಂಬ ಸೂಚನೆಯ ಮೇರೆಗೆ ಗಂಡ-ಹೆಂಡತಿ ಜೊತೆಗಿರಬಾರದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಆಷಾಢದಲ್ಲಿ ದಂಪತಿಗಳ ಮಿಲನವಾದರೆ ಚೈತ್ರದಲ್ಲಿ ಮಗು ಹುಟ್ಟುತ್ತದೆ. ಚೈತ್ರದ ಬಿರುಬಿಸಿಲು ಮಗುವಿನ ಅಥವಾ ಬಾಣಂತಿಯ ಆರೈಕೆಗೆ ಸೂಕ್ತ ಸಮಯವಲ್ಲ ಎನ್ನುವ ಕಾರಣವೂ ಇದೆ.

ಒಟ್ಟಿನಲ್ಲಿ ಆಷಾಢ ಎಂದರೆ ಭಯ ಮೂಡಿಸಿ, ವಿರಹ-ವೇದನೆಯ ಮೂಲಕ ಗಂಡ-ಹೆಂಡಿರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಜಾಣತನ ನಮ್ಮ ಹಿರಿಯರದ್ದೋ ಗೊತ್ತಿಲ್ಲ. ಆದರೆ, ಇಂದು ಆಷಾಢ, ಆಚರಣೆ ಎಲ್ಲವೂ ಕಾಲದ ತೆಕ್ಕೆಯಲ್ಲಿ ಮಗುಮ್ಮನೆ ಮಲಗಿವೆ.

ಈ ಲೇಖನ ಹೊಸದಿಗಂತ "ಧರಿತ್ರಿ' ಮಹಿಳಾ ಪುಟದಲ್ಲಿ ಪ್ರಕಟವಾಗಿದೆ:
ನೀವೂ ನೋಡಬಹುದು...

http://hosadigantha.in/epaper.php?date=07-22-2010&name=07-22-2010-೧೩

Saturday, June 12, 2010

ಅಜ್ಜಿಗೊಂದು ಪತ್ರ


ಅಜ್ಜಿ,

ಇಲ್ಲಿ ತುಂಬಾ ಮಳೆ. ಕಿಟಕಿಯಾಚೆ ಇಣುಕಿದರೆ ದೂರದಲ್ಲಿ ಕಾಣುವ ಖಾಲಿ ಮೈದಾನ ತುಂಬಾ ಆಲಿಕಲ್ಲುಗಳ ಓಕುಳಿಯಾಟ. ಮಕ್ಕಳ ಕಲರವಗಳಿಲ್ಲ. ಇಲ್ಲಿ ನಮ್ಮೂರಿನ ತರ ಹಸಿರು ಮರಗಿಡಗಳು ಕಾಣಸಿಗೊಲ್ಲ, ಬರೇ ಬಿಲ್ಡಿಂಗ್‌ಗಳು. ಆ ಬಿಲ್ಡಿಂಗ್ ಮೇಲೆ ಬಿದ್ದ ಮಳೆ ಹಾಗೇ ರಸ್ತೆಗಿಳಿಯುತ್ತೆ. ಆಗ ಆ ರಸ್ತೆಯೇ ನಮ್ಮೂರಿನ ದೊಡ್ಡ ಹೊಳೆಯಾಗುತ್ತೆ. ಎಂಥ ವಿಚಿತ್ರ ಅಂತೀಯಾ? ಈ ಬೆಂಗ್ಳೂರೇ ಹಾಗೇ ಅಜ್ಜಿ.

ಅಂದ ಹಾಗೇ, ಮಳೆ ಬಂದ ತಕ್ಷಣ ನಂಗೆ ನೀನೇ ನೆನಪಾಗ್ತಿಯಾ. ಮಳೆ ಬಂದಾಗಲೆಲ್ಲಾ ನಿನ್ನ ಸೆರಗ ಹಿಡಿದು ಹಲಸಿನ ಬೀಜ, ಹಪ್ಪಳ ಉರಿದು ಕೊಡು ಎಂದು ಬೆನ್ನಿಗೆ ಬಿದ್ದಾಗ ಬೈಯುತ್ತಲೇ ಪ್ರೀತಿಯಿಂದ ಮಾಡಿಕೊಡುತ್ತಿದ್ದಿ ಅಲ್ವಾ? ನಿನ್ನ ಬೈಗುಳ ಕೇಳೋದೇ ಒಂಥರಾ ಚೆಂದ ಅಜ್ಜಿ. ಅಮ್ಮ ಕೆಲ್ಸದಿಂದ ಬರೋದು ತಡವಾದಾಗ ನಿನ್ನ ತೊಡೆ ಮೇಲೆ ಕುಳಿತು ಜೋರಾಗಿ ಅಳುತ್ತಿದ್ದಾಗ ನೀನು ರಾಮಾಯಣ, ಮಹಾಭಾರತ ಕಥೆ ಹೇಳಿಯೇ ನನ್ನ ಸಮಧಾನಿಸುತ್ತಿದ್ದೆ.

ನೊಡು. ಅಜ್ಜಿ, ಈಗ ಯಾರು ಹೇಳ್ತಾರೆ ಕಥೆ? ಅಜ್ಜಿ ಕಥೆ ಅಂತ ಹೇಳಿದ್ರೆ ಈಗಿನ ಮಕ್ಕಳು ಅದೇನು ಅಜ್ಜಿ ಕಥೆ? ಅದು ಹೇಗಿರುತ್ತೆ? ಅಂಥ ಹೇಳೋ ಸ್ಥಿತಿ ಇದೆ ಗೊತ್ತಾ?

ರಜೆ ಬಂದ್ರೆ ಸಾಕು ಅಜ್ಜ-ಅಜ್ಜಿ ಮನೆಗೆ ಓಡಿಹೋಗುವ, ಒಂದು ತಿಂಗಳ ರಜಾದಲ್ಲಿ ಅಜ್ಜಿ ಜೊತೆ ಕಾಲ ಕಳೆಯುವ ಮಕ್ಕಳು ಎಲ್ಲಿ ಸಿಗ್ತಾರಲ್ವಾ? ಈ ಮಳೆಗೆ ತೊಡೆ ಮೇಲೆ ಕುಳ್ಳಿರಿಸಿಕೊಂಡು ಹಪ್ಪಳ ಸಂಡಿಗೆ ತಿನ್ನಿಸುತ್ತಾ, ಅತ್ತಾಗ ಮೆಲ್ಲಗೆ ಪ್ರೀತಿಯಿಂದ ಗದರುತ್ತಾ, ಲಾಲಿ ಹಾಡೋ ‘ಅಜ್ಜಿ ’ ನೀನು ನಮ್ಮ ದೇಶದಲ್ಲೇ ಇತಿಹಾಸದ ಪುಟ ಆಗ್ತಿದ್ದಿಯಲ್ಲಾ ಅದಕ್ಕಿಂತ ದುರಂತ ಇನ್ನೇನಿದೆ ಹೇಳು?

ಆದರೆ, ನಮ್ಮೂರ ಹಸಿರು ಹಳ್ಳಿಯಲ್ಲಿ ಹುಟ್ಟಿದ ನನಗೆ ನಿನ್ನಂಥ ಒಳ್ಳೆ ಅಜ್ಜಿ ಸಿಕ್ಕಿದ್ದಾಳೆ. ಅವಳ ಬಾಯಿಂದ ಉದುರುವ ಮುತ್ತಿನ ಕಥೆಗಳನ್ನು ಕೇಳೋ ಭಾಗ್ಯ ನನಗೂ ಸಿಕ್ತು. ರಜೆ ಸಿಕ್ಕಾಗಲೆಲ್ಲಾ ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ಯಕ್ಷಗಾನ ನೋಡೋ ಅವಕಾಶ ನಂಗೆ ಸಿಕ್ತು ಅನ್ನೋದನ್ನು ನೆನೆಸಿಕೊಂಡಾಗಲೆಲ್ಲಾ ನಾನು ಪುಳಕಿತಳಾಗುತ್ತೇನೆ.

ನೋಡಜ್ಜಿ, ಈ ಮಳೆ ಎಷ್ಟೆಲ್ಲಾ ನೆನಪಿಸ್ತು ಅಂತ. ಆ ಮಳೆನೇ ಹಾಗೇ ನೆನಪುಗಳ ಮೆರವಣಿಗೆ...

(ಪ್ರಕಟ: http://hosadigantha.in/epaper.php?date=06-10-2010&name=06-10-2010-೧೭)

Tuesday, May 11, 2010

ಅಕ್ಷರ ಕಲಿಯದ ಅಮ್ಮನಿಗೆ

ನಿನಗೆ ಪತ್ರ ಬರೆಯದೆ ತುಂಬಾ ದಿನಗಳಾಯ್ತು. ಇವತ್ತು ಬರೀಲೇಬೇಕು ಅಂದುಕೊಂಡು ಬರೀತಾ ಇದ್ದೀನಿ. ಹಾಗಂತ ಅಮ್ಮನ ದಿನ ಬಂದಾಗ ಪತ್ರ ಬರೀತಾಳೆ ಅಂದ್ಕೋಬೇಡ, ನನಗೆ ಅನುದಿನವೂ ಅಮ್ಮನ ದಿನವೇ. ಮದುವೆಯಾದ ಮೇಲೆ ಮನೆಗೆ ಬಂದಿಲ್ಲ ಅಂತ ನೀ ಮುನಿಸಿಕೊಂಡಿದ್ದೀಯಾ, ನೀನೆಷ್ಟು ಬೈದ್ರೂ, ಮುನಿಸಿಕೊಂಡ್ರೂ ನಾ ನಿತ್ಯ ನಿನ್ನದೆಯಲ್ಲಿ ಪಿಸುಗುಟ್ಟುವ ಪುಟ್ಟ ಮಗುನೇ ಅಮ್ಮಾ. ನಿನ್ನ ಸಿಟ್ಟು, ಕೋಪ, ಕಣ್ಣಿನಿಂದ ದುರುಗಟ್ಟಿ ನೋಡುವುದು, ಎತ್ತರದ ದನಿಯಲ್ಲಿ ಬೈದುಬಿಡೋದು ಇದೆಲ್ಲಾ ನನ್ನ ನಗು ನೋಡೋ ತನಕ ಅಂತ ನನಗೆ ಚೆನ್ನಾಗಿ ಗೊತ್ತಮ್ಮಾ.

ಮತ್ತೆ, ಹೇಗಿದ್ಯಾ? ಈ ಬೆಂಗಳೂರಲ್ಲಿ ದಿನಾ ಸಂಜೆ ಮಳೆರಾಯನ ಅಬ್ಬರ. ರಸ್ತೆಗಳೆಲ್ಲಾ ಸಮುದ್ರಗಳಾಗಿಬಿಡ್ತವೆ. ಅಂದ ಹಾಗೆ, ನಮ್ಮೂರಲ್ಲೂ ಮಳೆ ಬರುವುದೇ? ನಮ್ಮ ತೋಟದ ಕೆರೆ, ತೋಟದಾಚೆಗಿನ ಹೊಳೆ ತುಂಬಿ ಹರಿಯೋದೇ? ನೀ ಅಂಗಳದಲ್ಲಿ ನೆಟ್ಟು ಮಕ್ಕಳಂತೆ ಬೆಳೆಸಿದ ಬಣ್ಣದ ಹೂಗಿಡಗಳು ಹಸಿರಾಗಿವೆಯೇ? ನಾನು-ನಿನ್ನ ಅಳಿಯ ಇದೇ ಮಳೆಗಾಲದಲ್ಲಿ ನಿನ್ನನ್ನು, ನಮ್ಮೂರ ಹಸಿರ ತೋಟವನ್ನು, ತುಂಬಿ ಹರಿಯೋ ನದಿಯನ್ನು, ಮನೆಯಂಗಳದ ಕನಕಾಂಬರ ಸೊಬಗು, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯೋ ಅಜ್ಜ...ಎಲ್ಲರನ್ನೂ ನೋಡೋಕೆ ಬರ್‍ತಾ ಇದ್ದಿವಿ. ಒಂದಿಷ್ಟು ಹಲಸಿನ ಹಪ್ಪಳ, ಸಂಡಿಗೆ, ಮಾವಿನ ಮಿಡಿ ಉಪ್ಪಿನ ಕಾಯಿ ಎಲ್ಲವನ್ನೂ ರೆಡಿಮಾಡಿಬಿಡು.

ನಾನಿಲ್ಲಿ ತುಂಬಾ ಚೆನ್ನಾಗಿದ್ದೀನಿ, ಗುಂಡು-ಗುಂಡಾಗಿ ಬೆಳೆದಿದ್ದೀನಿ. ನೀನು ನೋಡಿದ್ರೆ ಇನ್ನೂ ಖುಷಿಪಡ್ತಿಯಾ. ಅತ್ತೆ-ಮಾವ ನನ್ನ ಪುಟ್ಟಿ ಅಂತಾರೆ. ಅವರು ಪ್ರೀತಿಯಿಂದ ಕರೆದಾಗಲೆಲ್ಲಾ ನೀನೇ ನೆನಪಾಗ್ತಿಯಾ. ಥೇಟ್ ನಿನ್ನ ತರನೇ ನೋಡ್ಕೋತಾರೆ. ನಿನ್ನ ತರನೇ ತಲೆಗೆ ಎಣ್ಣೆ-ಸೀಗೆ ಕಾಯಿ ಸ್ನಾನ ಮಾಡಿಸ್ತಾರೆ. ಹೂವು ತಂದು ಮುಡಿಸ್ತಾರೆ, ಚೆಂದದ ಡ್ರೆಸ್ ಕೊಡಿಸ್ತಾರೆ. ತಪ್ಪು ಮಾಡಿದಾಗ, ಪ್ರೀತಿಯಿಂದ ಬೈತಾರೆ. ಅವರಲ್ಲಿ ನಿನ್ನನೇ ನಾ ಕಾಣ್ತೀನಿ, ಅದಕ್ಕೆ ಖುಷಿಯಾಗಿದ್ದೀನಿ ಕಣಮ್ಮಾ. ನಂಗೊತ್ತು ಅಕ್ಷರ ಕಲಿಯದ ನೀನು ನನಗೆ ಅಕ್ಷರ ಕಲಿಸಿದ್ದಿ, ಬದುಕು ಕಲಿಸಿದ್ದಿ, ಭವಿಷ್ಯ ಕಟ್ಟಿಕೊಟ್ಟಿದ್ದಿ. ನೀನು ಖಂಡಿತಾ ಈ ಪತ್ರನಾ ಪಕ್ಕದ್ಮನೆ ಪುಟ್ಟಿ ಬಳಿ ಓದಿಸ್ತೀ ಅಂತ. ಸಧ್ಯದಲ್ಲೇ ಬಂದುಬಿಡ್ತೀನಿ. ನಾ ಸಣ್ಣ ಮಗುವಾಗಿದ್ದಾಗ ನಿನ್ನ ಕೈಯಿಂದ ಆ ಬೆಳದಿಂಗಳ ತಂಪಿನಲ್ಲಿ ಕುಳಿತು ತುತ್ತು ತಿಂದ ಅದೇ ಕಲ್ಲುಬೆಂಚಿನ ಮೇಲೆ ಕುಳಿತು ಮತ್ತೊಮ್ಮೆ ನಿನ್ನ ಸವಿತುತ್ತು ಮೆಲ್ಲುವಾಸೆ.
ಇಂತೀ
ಪ್ರೀತಿಯ ಮಗಳು

(ಹೊಸದಿಗಂತ ಪತ್ರಿಕೇಲಿ ಪ್ರತಿ ಗುರುವಾರದ ಧರಿತ್ರಿ ಮಹಿಳಾ ಪುಟದಲ್ಲಿ ಪ್ರಕಟವಾಗುವ ಭಾವಬಿಂದು ಅಂಕಣಕ್ಕೆ ಬರೆದ ಪುಟ್ಟ ಬರಹ
http://hosadigantha.in/epaper.php?date=05-06-2010&name=05-06-2010-೧೭

Sunday, April 18, 2010

ಅಕ್ಕರೆಯ ತಮ್ಮಂಗೆ ಶುಭಾಶಯ


ಈಗಲೂ ನೆನಪಾಗುವವನು ಅವನೇ.
ನನ್ನನ್ನು ಅಕ್ಕರೆಯಿಂದ ಅಕ್ಕಾ ಎನ್ನೋನು. ಒಡಹುಟ್ಟಿಲ್ಲಾಂದ್ರೂ ಒಡನಾಡಿ ಆದೋನು. ಬೆಂಗಳೂರೆಂಬ ಬೆಂಗಾಡಿನಲ್ಲಿ ಒಬ್ಬಂಟಿಯಾಗಿ ಅಲೆದಾಗ ನನಗೆ ಆಸರೆಯಾದೋನು, ಕಳೆದ ಆರು ವರುಷಗಳಿಂದ ಜೊತೆ ಜೊತೆಗೆ ಹೆಜ್ಜೆ ಹಾಕಿ, ನನ್ನೆಲ್ಲಾ ಭಾವಗಳಿಗೆ ಜೀವ ತುಂಬಿದೋನು, ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾದೋನು, ನನ್ನೆಲ್ಲಾ ಕೋಪ-ತಾಪಗಳ ಜೊತೆ ತಂಗಾಳಿಯಾಗಿ ಬೀಸಿದೋನು, ಸಣ್ಣ-ಸಣ್ಣ ವಿಷ್ಯಕ್ಕೆಲ್ಲಾ ತಲೆಕೆಡಿಸಿಕೊಂಡು ನಿತ್ಯ ನನ್ನ ಬಳಿ ಬೈಗುಳ ತಿಂದೋನು.

ನಾನು ಮದುವೆ ಆಗ್ತೀನಿ ಎಂದಾಗ ಖುಷಿಪಟ್ಟು ಪಾಯಸ ಮಾಡಿ ಸಿಹಿ ತಿನ್ನಿಸಿದೋನು, ಮದುವೆ ದಿನ ಬಾವನ ಕಾಲು ತೊಳೆಯೋದು ನಾನೇ ಎಂದು ಹಠ ಹಿಡಿದು ಕುಳಿತೋನು, ಮದುವೆಗೆ ಮುಂಚೆ ನನ್ನ ಜೊತೆಗಿದ್ದು ಅಕ್ಕಾ ನಿನ್ನ ಬಿಟ್ಟಿರೋಕೆ ಆಗೋಲ್ಲ ಎಂದು ಮಗುವಿನಂತೆ ಗಳ ಗಳನೆ ಅತ್ತೋನು, ಅತ್ತೆ ಮನೇಲಿ ಬೆಳಿಗೆದ್ದು ರಂಗೋಲಿ ಹಾಕಬೇಕೆಂದು ನನಗೆ ರಂಗೋಲಿ ಹಾಕೋಕೆ ಕಲಿಸಿಕೊಟ್ಟವನು, ನಾನು ಗಂಡನ ಮನೆಗೆ ಹೊರಟು ನಿಂತಾಗ ನನ್ನ ಕಣ್ಣೀರು ಒರೆಸಿ ನಕ್ಕು ನನ್ನ ಮರೀಬ್ಯಾಡ ಎಂದೋನು, ಈಗ್ಲೂ ಫೋನ್ ಮಾಡಿ ಅಕ್ಕಾ ನೀನಿಲ್ಲದ ಬೋರ್ ಎಂದು ಗೋಳಿಡುವವನು..
ಅವನು ನನ್ನ ಪ್ರೀತಿಯ ತಮ್ಮ, ಸಂದೇಶ. ನನ್ನ ಕೈಲಿ ಬೈಸಿಕೊಂಡ್ರೂ, ಉಗಿಸಿಕೊಂಡ್ರೂ, ಹೊಡೆಸಿಕೊಂಡ್ರೂ ಎಲ್ಲವನ್ನೂ ಸಹಿಸಿಕೊಳ್ತಾ ನನ್ನಳಗೊಂದು ನಗುವಿನ ಅಲೆ ಮೂಡಿಸಿದವನು ನನ್ನ ತಮ್ಮಾ...

ಏಪ್ರಿಲ್ 22 ಅವನ ಹುಟ್ಟುಹಬ್ಬ. ಶುಭವಾಗಲಿ ತಮ್ಮ ನಿನಗೆ...
-ಚಿತ್ರಾ ಸಂತೋಷ್

ಸುಂದರ ಕಾರ್ಯಕ್ರಮದಲ್ಲಿ ನೀವಿದ್ದರೆ ಚೆನ್ನ





ಹೌದಲ್ವಾ? ತುಂಬಾ ಒಳ್ಳೆ ಕಾರ್ಯಕ್ರಮ. ಭಾನುವಾರ, ರಜಾ ದಿನ ಬೇರೆ. ಭಾನುವಾರ ಸ್ವಲ್ಪ ಲೇಟಾಗಿ ಏಳಬೇಕು ಎಂದು ಪ್ರೋಗ್ರಾಂ ಹಾಕ್ಕೊಂಡವರು ಕೂಡ ಸ್ವಲ್ಪ ಬೇಗನೆ ಎದ್ದು ಈ ಕಾರ್ಯಕ್ರಮಕ್ಕೆ ರೆಡಿಯಾಗಿ. ವಿವೇಕ್ ಶಾನುಭಾಗ ಸರ್ ಪ್ರೀತಿಯಿಂದ ಆಮಂತ್ರಣ ಪತ್ರ ಕಳಿಸಿದ್ರು. ಛೇ! ನಾನು ಮಾತ್ರವಲ್ಲ ನೀವೆ;ಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದನಿಸಿತ್ತು.
ಬಂದೇ ಬರ್ತೀರಲ್ಲಾ...?
-ಚಿತ್ರಾ ಸಂತೋಷ್

Tuesday, March 30, 2010

ಪ್ರೀತಿಯ ಸಣ್ಣ ಬಿಂದಿಗೆ

ಬಿಂದಿಗೆಗೂ ಹುಡುಗಿಯರಿಗೂ ಅದೇನೋ ನಂಟು. ಮನೆಯಲ್ಲಿ ಬಿಂದಿಗೆಯಲ್ಲಿ ನೀರು ತರಬೇಕಂದ್ರೆ ಅದಕ್ಕೆ ಹುಡುಗಿರೇ ಬೇಕು. ಹುಡುಗ್ರಿಂದ ಅದು ಸಾಧ್ಯವಿಲ್ಲ. ಸಾಧ್ಯ ಇದ್ರೂ ಅವ್ರು ಮಾಡೋಲ್ಲ. ನನ್ನದೂ ಒಂದು ಪುಟ್ಟ ನೆನೆಪು. ನಾನಿನ್ನೂ ಸಣ್ಣ ಹುಡುಗಿ. ದೊಡ್ಡ ಬಿಂದಿಗೆಯನ್ನು ಎತ್ತಿ ಹಿಡಿಯಕ್ಕಾಗದ ವಯಸ್ಸು. ಅಮ್ಮ ದೊಡ್ಡ ಬಿಂದಿಗೆಯಲ್ಲಿ ನೀರು ತರುವಾಗ ನನಗೂ ಬಿಂದಿಗೆ ಬೇಕೆಂದು ಹಠ ಹಿಡಿದಿದ್ದೆ.

ಅಮ್ಮ ಬಾವಿಯಿಂದ ನೀರು ಎತ್ತುವಾಗ ನಾನೂ ನೀರು ಎತ್ತಬೇಕು, ನನಗೂ ಬಿಂದಿಗೆ ಬೇಕೆಂದು ಅಮ್ಮನ ಸೆರಗು ಹಿಡದೆಳೆಯುತ್ತಿದ್ದೆ. ಆವಾಗ ಅಮ್ಮ ನನ್ನ ಎತ್ತಿಕೊಳ್ಳದಿದ್ದರೆ ಮರಳ ಮೇಲೆ ಬಿದ್ದು ಹೊರಳಾಡುತ್ತಿದ್ದೆ. "ನೀನು ಸ್ವಲ್ಪ ದೊಡ್ಡ ಆಗು, ಬಿಂದಿಗೆ ತಂದುಕೊಡ್ತೀನಿ' ಎಂದು ಅಮ್ಮ ಸಮಾಧಾನಿಸುವಾಗ, ಹಾಗಾದ್ರೆ ಯಾವಾಗ ನಾನು ದೊಡ್ಡವಳಾಗ್ತೇನೆ, ನಿನ್ನಂತೆ ಉದ್ದ, ದಪ್ಪ ಆಗಿ, ಯಾವಾಗ ಸೀರೆ ಉಡುವವಳಾಗ್ತೀನಿ, ದೊಡ್ಡ ಬಿಂದಿಗೆಯನ್ನು ಯಾವಾಗ ನಾನು ಎತ್ತುವವಳಾಗ್ತೀನಿ' ಎಂದು ಪದೇ ಪದೇ ಪ್ರಶ್ನೆಗಳ ಮಳೆ ಸುರಿಸಿ ಅಮ್ಮನಿಗೆ ಬೋರ್ ಹೊಡಿಸ್ತಾ ಇದ್ದೆ.

ಒಂದು ದಿನ ಅಮ್ಮ ಬಿಂದಿಗೆ ತಂದೇ ಬಿಟ್ಟರು. ಹೊಸ ಬಿಂದಿಗೆ. ಸಣ್ಣ ಮತ್ತು ಮುದ್ದಾದ ಬಿಂದಿಗೆ. ಅಮ್ಮ ತಂದ ಹೊಸ ಬಿಂದಿಗೆಗೆ "ಚಿಕ್ಕ ಬಿಂದಿಗೆ' ಎಂದು ನಾಮಕರಣ ಮಾಡಲಾಗಿತ್ತು. ಅದು ಅಲ್ಯೂಮಿನಿಯಂ ಬಿಂದಿಗೆ, ಎತ್ತಲೂ ಅಷ್ಟೇನೂ ಭಾರವಿಲ್ಲ. ತುಂಬಾ ಮುದ್ದಾಗಿತ್ತು. ಅಮ್ಮ ಬಿಂದಿಗೆ ತಂದಿದ್ದೇ ತಡ, ಬಾವಿಯಿಂದ ನೀರು ಎತ್ತಕ್ಕಾಗದಿದ್ರೂ ಮನೆಯಲ್ಲಿದ್ದ ಪಾತ್ರೆಗಳಲ್ಲಿ ತುಂಬಿಸಿಟ್ಟ ನೀರನ್ನೆಲ್ಲಾ ನನ್ನ ಚಿಕ್ಕ ಬಿಂದಿಗೆಗೆ ಸುರಿಯುತ್ತಿದ್ದೆ. ಒಂದಷ್ಟು ಏಟುಗಳನ್ನೂ ತಿನ್ನುತ್ತಿದ್ದೆ. ಆಮೇಲೆ ನಾನು ಶಾಲೆಗೆ ಹೋಗೋವಷ್ಟರಲ್ಲಿ ಬಿಂದಿಗೆಯಲ್ಲಿ ನೀರು ತರುವವಳಾಗಿದ್ದೆ. ಕಷ್ಟಪಟ್ಟಾದ್ರೂ ನನ್ನ ಬಿಂದಿಗೆಯಲ್ಲಿ ನೀರು ತರುವುದೇ ನನಗೆ ಹೆಮ್ಮೆಯ ವಿಚಾರ. ಅದೂ ನಾನು ಬಿಂದಿಗೆಯನ್ನು ಸೊಂಟದಲ್ಲಿ ಹಿಡಿದುಕೊಂಡು ಬರುವಾಗ ಯಾರಾದ್ರೂ ನೋಡಿದ್ರೆ ಇನ್ನೂ ಖುಷಿ. ಒಳಗೊಳಗೇ ಬೀಗುತ್ತಿದ್ದೆ.

ಶಾಲೆಗೆ ಹೊರಡುವಾಗ ಅಮ್ಮನ ಬಳಿ, ನನ್ನ ಬಿಂದಿಗೆ ಮುಟ್ಟಬೇಡ ಎಂದು ಕಟ್ಟಪ್ಪಣೆ ಮಾಡಿಯೇ ಹೊರಡುತ್ತಿದ್ದೆ. ಶಾಲೆಯಿಂದ ಬಂದು ಬ್ಯಾಗ್ ನ್ನೊಂದು ಮೂಲೆಗೆ ಬಿಸಾಕಿ, ಬಳಿಕ ಅಮ್ಮ ಮಾಡಿಟ್ಟ ತಿಂಡಿಯನ್ನು ಹೊಟ್ಟೆಗೆ ಹಾಕಿಕೊಂಡು ಅದೇ ನನ್ನ ಪ್ರೀತಿಯ ಸಣ್ಣ ಬಿಂದಿಗೆಯನ್ನು ಎತ್ತಿಕೊಂಡು ಮನೆ ಸಮೀಪದ ತೊರೆಗೆ ಹೋಗುತ್ತಿದ್ದೆ. ಅದೊಂದು ಥರ ಖುಷಿ. ; ನನ್ನ ಬಿಟ್ಟು ಯಾರೇ ನನ್ನ ಬಿಂದಿಗೆ ಮುಟ್ಟಿದರೂ ನನಗೆ ತುಂಬಾ ಕೋಪ ಬರುತ್ತಿತ್ತು.
ಅದು ನನ್ನ ಚಿಕ್ಕಬಿಂದಿಗೆ

ನಾನು ಎಸ್ ಎಸ್ ಎಲ್ ಸಿ ಮುಗಿಸೋ ತನಕವೂ ಆ ಬಿಂದಿಗೆಯನ್ನು ಚೆಂದಕ್ಕೆ ಕಾಪಾಡಿಕೊಂಡು ಬಂದಿದ್ದೆ. ಆದರೆ, ಬಳಿಕ ದೂರದೂರಿನಲ್ಲಿ ನನ್ನ ವಿದ್ಯಾಭ್ಯಾಸ ನಡೆದಿದ್ದರಿಂದ ಮನೆಯಲ್ಲಿನ ಬಿಂದಿಗೆ ನನಗರಿವಿಲ್ಲದೆಯೇ ಮಾಯವಾಗಿತ್ತು. ಕೇಳಿದಾಗ, ಅಮ್ಮ ಆ ಬಿಂದಿಗೆ ತೂತು ಬಿದ್ದಿದೆ ಎಂದರು. ನನ್ನ ಪ್ರೀತಿಯ ಬಿಂದಿಗೆಯನ್ನು ಕಳೆದುಕೊಂಡ ನೆನಪು ಮತ್ತೆ ಮರುಕಳಿಸಿದ್ದು ಅತ್ತೆ ಮನೇಲಿ ಸಣ್ಣ ಬಿಂದಿಗೆಯಿಂದ ನಿತ್ಯ ಬೆಳಿಗೆದ್ದು ತುಳಸಿಗೆ ನೀರು ಎರೆಯುವಾಗ!!

Tuesday, March 23, 2010

ಮರಳಿ ಭಾವದೊಡಲಿಗೆ...

ಮದುವೆ ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.

ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.

ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...

ಪ್ರೀತಿಯಿಂದ

ಚಿತ್ರಾ ಸಂತೋಷ್

Monday, February 22, 2010

ಮದುವೆಯ ಈ ಬಂಧ...



ತುಂಬಾ ದಿನಗಳಾಯ್ತು ಬ್ಲಾಗ್ ಕಡೆ ಮುಖ ಹಾಕದೆ. ಕೆಲವೊಂದು ಕಾರಣಗಳಿಂದ ನನಗೆ ಬ್ಲಾಗ್ ಬರೆಯಲಾಗಲಿಲ್ಲ. ಇದೀಗ ಮದುವೆ ಕರೆಯೋಲೆಯೊಂದಿಗೆ ಮತ್ತೆ ಮರಳಿ ಬಂದಿದ್ದೇನೆ. ನಮ್ಮ ಮದುವೆಗೆ ನೀವು ಬಂದರೇನೇ ಚೆಂದ. ಖಂಡಿತಾ ಬರಬೇಕು.

ಬದುಕಿನ ಹೊತ್ತಗೆಯಲ್ಲಿ
ಒಲವಿನ ಕುಂಚ ಹಿಡಿದು
ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ.

ಈ ಶುಭಗಳಿಗೆಗೆ

ಹೊಸೆದ ಭಾವ ಕನಸುಗಳಿಗೆ

ನಿಮ್ಮ ಪ್ರೀತಿಯ ಹಾರೈಕೆ ಬೇಕು.


ನಮ್ಮ ಮದುವೆ: ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ

ಆರತಕ್ಷತೆ: ಮಾರ್ಚ್ 10, 2010; ನಂ.125/126, 9ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಆರ್ಎಂವಿ ಬಡಾವಣೆ, ಸದಾಶಿವನಗರ, ಬೆಂಗಳೂರು-80.
ಪ್ರೀತಿಯಿಂದ
ಸಂತೋಷ್-ಚಿತ್ರಾ