
ಅಮ್ಮಾ ನಿನ್ನ ಮಡಿಲಿಗೆ ಸೆಳೆದುಕೋ
ಈ ಪ್ರಶ್ನೆಗೆ ಉತ್ತರಿಸು
ಉದ್ದುದ್ಧ ಕಥೆ ಹೇಳಬೇಡ
ಇಂದು ರಾತ್ರಿ ನಾವು ಅಗಲುವುದಾದರೆ
ನೀನೇಕೆ ನನ್ನನ್ನು ಹೆತ್ತೆ?
ಆ ಕ್ಷಣ ಅಮೃತಾ ಪ್ರೀತಂ ಅವರು ಬರೆದಿರುವ ಕವನ ನೆನಪಾಗದಿರಲಿಲ್ಲ. ನೂರಾರು ಹೆಣ್ಣುಮಕ್ಕಳ ಅಂತರಂಗದಲ್ಲಿ ಅಣಕವಾಡುವ ಪ್ರಶ್ನೆಯಂತೆ ಭಾಸವಾಯಿತು. ಈ ಪ್ರಶ್ನೆಗೆ ಉತ್ತರವಿಲ್ಲ ಗೊತ್ತು. ಆದರೆ, ತವರು ತೊರೆವ ಹೆಣ್ಣಿನ ಮನದಲ್ಲಿ ಇಂಥ ಪ್ರಶ್ನೆ ಕಾಡುವುದು ತಪ್ಪಲ್ಲ. ಒಂಬತ್ತು ತಿಂಗಳು ಹೊತ್ತು, ಹೆತ್ತು ಬೆಳೆಸಿದ ಹೆಣ್ಣು ಜೀವವನ್ನು ನಾಳೆ ಇನ್ಯಾರದೋ ಮಡಿಲಿಗೆ ಹಾಕೋದಾದರೆ ಹೆಣ್ಣು ಮಗುವನ್ನು ದೇವ್ರು ಕರುಣಿಸುವುದಾದರೂ ಏಕೆ? ಇಂಥ ಗೊಂದಲಗಳ ನಡುವೆಯೇ ‘ಅಪರಿಚಿತ ಭಾವ’ವೊಂದು ನನ್ನೊಳಗೇ ಮಾತಿಗಿಳಿಯುತ್ತಿತ್ತು.
ಅಂದು ತಮ್ಮ ಹೇಳಿದ್ದ ‘ಅಕ್ಕಾ ನೀನು ಚೆನ್ನಾಗಿ ಡ್ರೆಸ್ ಮಾಡಿಕೋ. ನಿನ್ನ ನೋಡಕೆ ಯಾರೋ ಬರುತ್ತಿದ್ದಾರೆ’ ಎಂದಾಗ ಮೌನದ ಕಣ್ಣೀರು ಬರದಿರಲಿಲ್ಲ. ನಾ ಬೆಳೆದ ಆ ಪುಟ್ಟ ಮನೆ, ಸಣ್ಣವಳಿರುವಾಗ ನನ್ನ ಓದಿಗೆಂದೇ ಚಿಲ್ಲರೆ ಕೂಡಿಸಿ ಮಾಡಿಕೊಟ್ಟ ಪುಟ್ಟ ಟೇಬಲ್ಲು, ನಡುರಾತ್ರಿಯಲ್ಲೂ ನನ್ನ ಎಬ್ಬಿಸಿ ಓದು ಅನ್ನುತ್ತಿದ್ದ ಆ ಪುಟ್ಟ ಚಿಮಿಣಿ ದೀಪ, ಮನೆಮುಂದೆ ಬೆಳೆಸಿದ ಬಣ್ಣದ ಹೂಗಿಡಗಳು, ನಾ ಕೈಯಾರೆ ನೆಟ್ಟ ತೆಂಗಿನ ಮರ, ನನ್ನ ಪುಟ್ಟ ತಂಗಿಯಂತೆ ಬೆಳೆಸಿದ ಹಸು ಅಪ್ಪಿ...ಜೀವನಪ್ರೀತಿಯ ಸಂಕೇತ ಅಮ್ಮ...ಎಲ್ಲವನ್ನೂ ಬಿಟ್ಟು ಯಾರದೋ ಅಪರಿಚಿತರ ಮಡಿಲಿಗೆ ‘ಗಂಟು’ ಬೀಳಬೇಕಲ್ಲಾ ಅನಿಸಿತ್ತು.
ಅಂದು ನಾವಿಬ್ಬರೂ ಅಪರಿಚಿತರು. ನಿನಗೆ ನಾನು, ನನಗೆ ನೀನು ಪರಸ್ಪರ ಅಪರಿಚಿತರು. ಅಲ್ಲಿ ಪರಿಚಯದ ಯಾವ ‘ವಿಳಾಸ’ವೂ ಇರಲಿಲ್ಲ. ನಿನ್ನೆದುರಲ್ಲಿ ತುಟಿ ಮುಚ್ಚಿ ತಲೆಬಾಗಿ ತಾಳಿ ಕಟ್ಟಿಸಿಕೊಂಡಾಗಲೂ ನೀ ನನಗೆ
ಅಪರಿಚಿತ. ಸಪ್ತಪದಿ ತುಳಿದು ನಿನ್ನ ಮನೆಯಲ್ಲಿ ಸಿಹಿ ಊಟ ಮಾಡುವಾಗಲೂ ನೀನು ಪರಿಚಿತ ಅನಿಸಲಿಲ್ಲ. ಅಂದು ಶುಭರಾತ್ರಿಯಲ್ಲಿ ನನ್ನ ನಿನ್ನ ಮಡಿಲಿಗೆ ಸೆಳೆದುಕೊಳ್ಳುವವರೆಗೂ ನೀನು ಅಪರಿಚಿತನೇ ಅನಿಸಿದ್ದೆ! ಆದರೆ, ‘ಅಪರಿಚಿತ’ ಎನ್ನುವ ಕಪ್ಪು ಗೆರೆ ಮರೆಯಾಗಿದ್ದು ಯಾವಾಗ ಗೊತ್ತಾ? ನೀನು ನನ್ನೊಳಗೊಂದು ಸಂಬಂಧಗಳನ್ನು ಬೆಸೆದಾಗ. ಅಲ್ಲಿಯವರೆಗೆ ನನ್ನ ಸಂಬಂಧಗಳೊಳಗೆ ಮಾತ್ರ ನಾ ‘ಬಂಽ’ಯಾಗಿದ್ದೆ. ಅವುಗಳನ್ನಷ್ಟೇ ನಾ ಸಂಭ್ರಮಿಸಿದ್ದೆ. ಇಂದು ನನ್ನ ಸುತ್ತ ನೂರಾರು ಬದುಕಿನ ಸಂಬಂಧಗಳಿವೆ. ಅತ್ತೆ, ಮಾವ, ಚಿಕ್ಕಮ್ಮ-ಚಿಕ್ಕಮ್ಮ, ಅಣ್ಣ-ತಂಗಿ, ಅಕ್ಕ-ತಮ್ಮ....ಎಷ್ಟೊಂದು ಸಂಬಂಧಗಳನ್ನು ನನ್ನೆದುರಿಗೆ ತಂದಿಟ್ಟೆ ನೀನು?
ಆ ‘ಅಪರಿಚಿತ’ ಅನ್ನೋ ಭಾವ ಕಿತ್ತು ಬಿಸಾಕಿದ್ದು ಕೂಡ ಆ ಪ್ರೀತಿಯ ಸಂಬಂಧಗಳೇ. ಬಹುಶಃ ಜಗತ್ತಿನ ಸಮಸ್ತ ಹೆಣ್ಣು ಮಕ್ಕಳ ದನಿಯೂ ಇದೇ ಆಗಿರಬಹುದು. ಹೆಣ್ಣೊಬ್ಬಳ ಬದುಕು ಪರಿಪೂರ್ಣ ಎನಿಸೋದು ಇಲ್ಲೇ...ಹೆಣ್ಣು ಸಂಬಂಧಗಳ ಕೊಂಡಿ, ಬದುಕು ಬೆಸೆಯುವ ಸುಂದರ ಕೊಂಡಿ. ಹೆಣ್ಣೆಂದರೆ ಹಾಗೆನೇ..ಬದುಕಿನ ಸಂಬಂಧಗಳಿಂದ ಸಾರ್ಥಕ ಪಡೆಯುವವಳು!
ಪ್ರಕಟ: http://hosadigantha.in/epaper.php?date=10-21-2010&name=10-21-2010-15
8 comments:
ಚಿತ್ರಾ,
ಹೆಣ್ಣುಮಗಳ ಬದುಕಿನ ಸಾರ್ಥಕ್ಯವನ್ನು ತುಂಬ ಚೆನ್ನಾಗಿ ತೋರಿಸಿರುವಿರಿ. ಅವಳಿಂದಲೇ ಈ ಎಲ್ಲ ಜೀವಜಾಲ; ಅವಳಿಂದಲೇ ಈ ಎಲ್ಲ ಸಂಬಂಧಗಳು.
ಚಿತ್ರಾ,
ನೋ ಕಾಮೆಂಟ್ಸ್ :) ಎಂದಿನಂತೆ ಚಂದ ನಿಮ್ಮ ಬರಹ...
ಸಂಬಂಧಗಳ ಸೂಕ್ಷ್ಮತೆ ಅರಿಯುವದು ಕಷ್ಟ. ಆದರೂ ಇದು ಪ್ರಕೃತಿ ನಿಯಮ . ಕೆಲವು ಸಾರಿ ದೇವರು ಕೊಟ್ಟ ವರವೋ ಅಥವಾ ಶಾಪವೋ ಎಂದು ಗೊಂದಲದಲ್ಲಿ ಬೀಳಿಸುತ್ತದೆ.
ಚಿತ್ರಾ,
ಅಪರಿಚಿತ ಭಾವದಿಂದ ಸುಪರಿಚಿತ ಭಾವವಾಗುವ ಬಗೆಯನ್ನು ತುಂಬಾ ಚೆನ್ನಾಗಿ ಮೂಡಿಸಿದ್ದೀರ.. ಸುಂದರ ಬರಹ !
ಬರಹ ಭಾವ ಚೆಂದ. ಭಾವನೆಗಳ ಭಾವಾಂತರಂಗ
ಹೆಣ್ಣಿನ ಬದುಕ ಎರಡು ಮಜಲಿನ ಅವಲೋಕನದಲ್ಲಿ ತಮ್ಮ ಬರಹ ಅಪೂರ್ವ ಅನುಭೂತಿಯನ್ನ ಹೆಣ್ಣ ಸಂಭ೦ಧದಲ್ಲಿ ನೋಡುವಲ್ಲಿ ಅದ್ಭುತ ಯಶಸ್ಸು ಹೊಂದಿದೆ.
super!!!!! endu hela ballenashte...
aparichatanannu nambi avana hejjeyondige hejje hakuvudu hennige matra sadhya...
ಚಿತ್ರಾ ..ಹೆಣ್ಣು ಜೀವದ ತೊಳಲಾಟಗಳು ಅಕ್ಷರಗಳಾಗಿ ಹರಿದಿವೆ ಚನ್ನಾಗಿದೆ ಲೇಖನ...
Post a Comment