Wednesday, January 30, 2008

ರಜೆಯ ಮಜಾ..

ಏನಾದ್ರೂ ಬ್ಲಾಗಲ್ಲಿ ಬರೀಲೇಬೇಕು ಅಂದ್ರೆ ವಿಷಯಾನೇ ಹೊಳಿತಿಲ್ಲ. ಏನು ಮಾಡೋದು ಅಂದಾಗ ತಟ್ಟನೆ ಹೊಳೆದಿದ್ದು ರಜಾ ದಿನ ಮಜಾ..

ಅದೇ ಮೊನ್ನೆ ಜನವರಿ 26ರಂದು ಎಂ.ಜಿ. ರೋಡ್ ಮಾಣಿಕ್ ಶಾ ಪೆರೇಡ್ ಮೈದಾನಕ್ಕೆ ಹೋಗಿದ್ದೆ. ನನ್ ಕೊಲೀಗ್ ಅವ್ರ ತಂಗಿ. ಅವ್ರ ಫ್ರೆಂಡು ಜೊತೆಗಿದ್ದರು. ರಜಾ ದಿನ ಮಜಾ ಮಾಡೋಕೆ ಹೊರಟಿದ್ದು. ನಾನು ಬೆಳಿಗ್ಗೆ ಎಂಟು ಗಂಟೆಗೆ ಎಂ.ಜಿ. ರೋಡಲಿದ್ದರೆ, ಅವರೆಲ್ಲ ಬರುವಾಗ ಒಂಚೂರು ಲೇಟಾಗಿತ್ತು. ಮೊದಲನೇ ದಿನಾನೇ ಪ್ಲಾನ್ ಹಾಕಿದ್ದರಿಂದ ಪೆರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಹೊರಡುವಾಗ ಗಡಿಯಾರ ಹನ್ನೆರಡು ತೋರಿಸುತ್ತಿತ್ತು. ಅಲ್ಲಿಂದ ನಮ್ಮ ಪಯಣ ಲಾಲ್ ಬಾಗ್ ಫಲಪುಷ್ಪಪ್ರದರ್ಶನಕ್ಕೆ. ಟಿಕೇಟ್ಗಾಗಿ ನೂಕುನುಗ್ಗಲು ನಡೆಸಿ, ಕೆಲವರಿಗೆ ಬೈದು..ಆಮೇಲೆ ಗೇಟಲ್ಲಿ ಗೇಟ್ ಕೀಪರ್ ಗೂ ಹೇಗೋ ಲಾಲ್ ಬಾಗ್ ಒಳಗೆ ಪ್ರವೇಶಿಸಿದೆವು. ಕಡ್ಲೆಕಾಯಿ ಮೆಲ್ಲುತ್ತಾ..ತಮಾಷೆ ಮಾಡುತ್ತಾ ಲಾಲ್ ಬಾಗ್ ಕಾಲುದಾರಿಯಲ್ಲಿ ನಡೆಯುತ್ತಿದ್ದರೆ ಕೆಲ ಹುಡುಗ್ರ ಗುಂಪು ನಮಗೆ ತಮಾಷೆ ಮಾಡುತ್ತಿತ್ತು. ತಮಾಷೆ ಮಾಡಿದವರನ್ನು ಗುರಾಯಿಸುತ್ತಾ..ನಾವೂ ಕಡಿಮೆ ಇಲ್ಲ ಎಲ್ಲವಂತೆ..ಸಾಗುತ್ತಿದ್ದೆವು. ಕಿತ್ತಳೆ, ಜ್ಯೂಸ್..ಐಸ್ ಕ್ರೀಂ ಎಲ್ಲವೂ ನಮ್ಮ ಹೊಟ್ಟೆಯ ಪ್ರವೇಶ ಪಡೆದಿದ್ದವು. ಹೆಚ್ಚಾಗಿ ಇವುಗಳಿಗೆಲ್ಲ ಒಟ್ಟಾಗಿ ಪ್ರವೇಶ ಕೊಡುವುದು ತುಂಬಾ ಕಡಿಮೆ. ಆದ್ರೆ ಅವತ್ತು ಮಾತ್ರ ಎಲ್ಲಕ್ಕೂ ಟಿಕೇಟ್. ದುಡ್ಡುಕೊಟ್ಟು ನೀರು ಕುಡಿದೆವು. ನೀರಿಗೂ ದುಡ್ಡು ತೆಗೆದುಕೊಂಡವನನ್ನು ನೋಡಿ ನಮಗೆ ಸಿಟ್ ಬಂದು ರೇಗಾಡಿದೆವು.

ಅಲ್ಲಿಂದ ಗಾಜಿನ ಮನೆಗೆ ಫಲಪುಷ್ಪಪ್ರದರ್ಶನ ಅಂದ್ರೂ ಅಲ್ಲಿ ಬರೇ ಪುಷ್ಪಗಳೇ ಇದ್ದವು. ಫಲಗಳು
ಇರಲಿಲ್ಲ. ಅಂತೂ ಪ್ರತಿವರ್ಷ ಜನರು ಮಾತ್ರ ಹೆಚ್ಚೆಚ್ಚು ಇಲ್ಲಿಗೆ ಬರ್ತಾರೆ. ಬೇರೆ ದಿನಗಳಲ್ಲಿ ಕಲ್ಲುಹಾಸಿನ ಮೇಲೆ, ಹುಲ್ಲುಹಾಸಿನ ಮೇಲೆ ಬರೇ ಪ್ರೇಮಿಗಳು ಕೂತು ಹರರಟುತ್ತಿದ್ದರೆ, ಪುಷ್ಪಪ್ರದರ್ಶನ ಅಥವಾ ಇನ್ಯಾವ ಕಾರ್ಯಕ್ರಮಗಳಿದ್ದರೆ ಜನರು ಕುಟುಂಬ ಸಮೇತ ಭೇಟಿ ನೀಡುತ್ತಾರೆ. ಕಾಲಿಗೊಂದು ಕೈಗೊಂದು ಮಕ್ಕಳನ್ನು ಹಿಡಿದುಕೊಂಡಾದ್ರೂ ಟಿಕೇಟ್ ಪಡೆದು ಲಾಲ್ ಬಾಗ್ ಗೆ ಜನ ಬರ್ತಾರೆ. ಸಿಕ್ಕ ಸಿಕ್ಕಸಿಕ್ಕಲೆಲ್ಲಾ ಫೋಟೋ ಕ್ಕಿಕಿಸುತ್ತಾ ಖುಷಿಪಡೋಕೆ ಒಳ್ಳೆ ಜಾಗ ಇದು. ವಿದೇಶಿಗಳಿಗಂತೂ ಇದೇ ಸ್ವರ್ಗ.

ಅಲ್ಲೊಂದು ಕಡೆ ಒಬ್ಬ ಇಳಿವಯಸ್ಸಿನ ವ್ಯಕ್ತಿ ಖಾರ, ಉಪ್ಪು, ಹುಳಿ ಬೆರೆಸಿದ ಬೇಯಿಸಿದ ಕಡ್ಲೆ ಕಾಯಿ ಮಾರುತ್ತಿದ್ದ. ಅದನ್ನು ನೋಡಿ ತೆಗೆದುಕೊಳ್ಳೋಲು ನಾನು-ಗೆಳತಿ ಕಲಾ ಹೋದಾಗ ಆತ ಐದು ರೂಪಾಯಿಗೆ ಒಂದು ಹಿಡಿಯಷ್ಟು ಕಡ್ಲೆ ಕೊಡಬೇಕೆ? ಕಲಾ ಚೂರು ಹಾಕೀಪ್ಪಾ...ಅಂತ ಕೂಲ್ ಆಗಿ ಹೇಳಿದ್ರೆ..ನಾನು ಗುರ್ ಎನ್ನುತ್ತಾ ತುಳುವಲ್ಲೇ ಬೈಯುತ್ತಾ ಕಡ್ಲೆ ಕಾಯಿ ಕೇಳಿದೆ. ಆತ ನಗು ನಗುತ್ತಾ ಹಾಕಿ. ಆತ."ನೀವು ಮಂಗ್ಲೂರ..ನಾನು ಮಂಗ್ಳೂರು. ಜೀವನ ಕಷ್ಟ. ಅದ್ಕೆ ಈ ಕೆಲ್ಸ" ಅಂದಿದ್ದೆ ತಡ, ಹಿಂದಿನಿಂದ ಇಬ್ಬರು ಪೊಲೀಸರು ಬಂದು ಪಟಾರನೇ ಎರಡೂ ಕೆನ್ನೆ ಹೊಡೆದರು. ಕಡ್ಲೆ ಕಾಯಿ ಅಂಕಲ್ ತನ್ನ ಗೋಣಿ ಚೀಲವನ್ನೇ ಎತ್ತುಕೊಂಡು ಓಡತೊಡಗಿದ. ನಮಗಿಬ್ಬರಿಗೂ ಆತನ ಮೇಲೆ ಕರುಣೆ ಬರದೆ ಇರಲಿಲ್ಲ. ಸ್ವಲ್ಪ ಮುಂದೆ ನಡೆದುಕೊಂಡು ಬಂದಾಗ 'ತಿರುಗಾಟ ಮಾರಾಟ' ನಿಷೇಧ ಎಂಬ ದೊಡ್ಡ ಬೋರ್ಡ್ ಕಾಣಿಸುತ್ತಿತ್ತು. ಆಗ ಗೊತ್ತಾಯಿತು ಪೊಲೀಸರು ಆತನಿಗೇಕೆ ಹೊಡೆದಿದ್ದು ಎಂದು. ಅಲ್ಲಿಂದ ಸ್ವಲ್ಪ ಮುಂದೆ ಬಂದಾಗ ಅದೇ ಪೊಲೀಸರು ಪ್ರೇಮಿಗಳನ್ನು ಬೈದು ಓಡಿಸುತ್ತಿದ್ರು. ಎಲ್ಲಿ ಕೂತ್ರೂ ಪೊಲೀಸರ ಕಾಟ. ಅದು ಯಾಕಂದ್ರೆ ಇತ್ತೀಚೆಗೆ ವಿಶ್ರಾಂತಿ ಕಳೆಯಲು ಹೆಚ್ಚು ವಯಸ್ಸಾದವರು ಉದ್ಯಾನವನಕ್ಕೆ ಬರ್ತಾರೆ. ಅವ್ರು ದೂರು ನೀಡಿದ್ದಕ್ಕಾಗಿ ಈಗ ಪೊಲೀಸರಿಗೆ ಪ್ರೇಮಿಗಳನ್ನು ಕಂಡ್ರೆ ಆಗಲ್ಲ. ಇರ್ಲಿ ಬಿಡಿ. ಇಡೀ ರಜಾದಿನ ಅಂದು ಖುಷಿ ಖುಷಿಯಾಗಿ ಕಳೆದುಹೋಯಿತು. ಆಮೇಲೆ ರಂಗಶಂಕರದಲ್ಲಿ ನಡೆದ'ರೋಮಿಯೋ ಜ್ಯೂಲಿಯೆಟ್' ನಾಟಕದೊಂದಿಗೆ ನಮ್ಮ ರಜಾ ದಿನದ ಓಟ ನಿಂತಿತು. ಇನ್ನು ಮುಂದಿನ ಭಾನುವಾರ...? ರಂಗಶಂಕರದಲ್ಲಿ ಭಾನುವಾರ ನಡೆಯುವ ಜುಗಾರಿ ಕ್ರಾಸ್ ಟಿಕೇಟ್ ಇದೆ..ಅದ್ರ ಜೊತೆ ಇನ್ನೇನು ಅಂತ ಪ್ಲಾನ್ ಮಾಡ್ಬೇಕು..

8 comments:

chetana said...

ನಮಸ್ತೇ ಚಿತ್ರಾ.

ಹೇಗಿದ್ದೀರಿ?
ನಿಮ್ಮ ಬ್ಲಾಗ್ ಒಟ್ಟಾರೆಯಾಗಿ ಚೆನ್ನಾಗಿದೆ. ಹೌದು... ಕೆಂಡ ಸಂಪಿಗೆ ಜಾಡು ಹಿಡಿದೇ ಇಲ್ಲಿಗೆ ಬಂದೆ!

ಅಂದಹಾಗೆ, ಅಣ್ಣನ ಬ್ಲಾಗ್ ‘ನೆಲದ ಮಾತು’ ಲಿಂಕ್ ಬದಲಾಗಿದೆ. ಅದೀಗ,
www.neladamaatu.wordpress.com.

ವಂದೇ,
ಚೇತನಾ ತೀರ್ಥಹಳ್ಳಿ

ಅಹರ್ನಿಶಿ said...

ಚಿತ್ರಾ ಅವರೆ,

ಚೆನ್ನಾಗಿ ಬರೀತೀರಿ.ನಾನು ಅಹರ್ನಿಶಿ ಅವರ ಪತ್ನಿ.ಹೀಗೇ ಬರೀತಾ ಇರಿ.ಶುಭವಾಗಲಿ.

ಸವಿತಶ್ರೀಧರ್

ಚಿತ್ರಾ ಸಂತೋಷ್ said...

ಗೆಳತಿ ಚೇತನಾ..ತುಂಬಾ ಥಾಂಕ್ಸ್...ಎಲ್ಲರ ಬ್ಲಾಗ್ ನೋಡಿ ನೋಡಿ ನಾನು ಬರೆಯಕ್ಕೆ ಆರಂಭಿಸಿದ್ದು..ಅಣ್ಣನ ಬ್ಲಾಗ್ ನೋಡಿದ್ದಿನಿ..ಬದಲಾದ ವಿಳಾಸ ನೀಡಿದ್ದು ಒಳ್ಳೆದಾಯಿತು..ಆಗಾಗ ನನ್ ಬ್ಲಾಗ್ ಬುಟ್ಟಿಗೆ ಬರುತ್ತಿರಿ..ಸ್ವಾಗತ..
ಗೆಳತಿ
ಚಿತ್ರಾ

ಚಿತ್ರಾ ಸಂತೋಷ್ said...

ಸವಿತಾ ಅವರಿಗೆ ಕೃತಜ್ಞತೆಗಳು..ನಾನು ಬರೀತಾ ಇರ್ತೀನಿ..ನೀವು ನನ್ ಬ್ಲಾಗ್ ಬುಟ್ಟಿಗೆ ಬರುತ್ತಲೇ ಇರುತ್ತೀರಿ ತಾನೇ..?
ಪ್ರೀತಿಯಿಂದ,
ಚಿತ್ರಾ

ನಾವಡ said...

ಚಿತ್ರಾ ಅವರೇ,
ಬ್ಲಾಗ್ ಚೆನ್ನಾಗಿದೆ. ಲಾಲ್ ಬಾಗ್ ಲೇಖನ ಚೆನ್ನಾಗಿದೆ. ಸರಿದು ಹೋಗುವ ಕ್ಷಣಕ್ಕೆ ಬದುಕಿನ ನೆಲೆಯನ್ನು ಒದಗಿಸಿ ಚೆಂದಗೊಳಿಸಿದ್ದೀರಿ. ಶೈಲಿ ಚೆನ್ನಾಗಿದೆ. ನೀವೂ ಬರೆಯುತ್ತಾ ಇರಿ, ನಾವು ಓದುತ್ತಿರುತ್ತೇವೆ.
ನಾವಡ

ಚಿತ್ರಾ ಸಂತೋಷ್ said...

ಕೃತಜ್ಞತೆಗಳು ನಾವಡ ಅವರಿಗೆ..ಆಗಾಗ ಬರುತ್ತೀರಿ..ನನ್ ಬ್ಲಾಗ್ ಬುಟ್ಟಿಗೆ..

ಹೆಸರು ರಾಜೇಶ್, said...

Neevu karedare nanu nimma jote natakakke barutene
shubhashayagalondige
geleya
rajesh

ಚಿತ್ರಾ ಸಂತೋಷ್ said...

ರಾಜೇಶ್,
ಖಂಡಿತಾ ಬನ್ನಿ ಕರೆದುಕೊಂಡು ಹೋಗೋ ಕೆಲ್ಸ ನನ್ದು.....