Thursday, January 24, 2008

ನಮಗೂ ಒಬ್ಬ ಮಿತ್ತೆರಾಂದ್ ಬೇಕು..

ಹಣಕ್ಕಾಗಿ, ಅಧಿಕಾರಕ್ಕಾಗಿ ನಿತ್ಯ ಕೋಳಿ ಜಗಳ ತೆಗೆಯುವ ನಮ್ಮ ರಾಜಕಾರಣಿಗಳ ಕಂಡಾಗ ಫ್ರಾನ್ಸ್ನ ಅಧ್ಯಕ್ಷ ಮಿತ್ತೆರಾಂದ್ ನೆನಪಾಗುತ್ತಾರೆ. ನಿಸರ್ಗ ಮತ್ತು ಪುಸ್ತಕ ಪ್ರೆಮಿಯಾದ ಮಿತ್ತೆರಾಂದ್ ' ನಾನು ಮೂಲಭೂತವಾಗಿ ರಾಜಕಾರಣಿಯಲ್ಲ. ರಾಜಕಾರಣ ಮತ್ತು ತತ್ವಶಾಸ್ತ್ರವನ್ನು ತಿಳಿಯಲೆತ್ನಿಸುವ ನಮ್ರ ವಿದ್ಯಾರ್ಥಿ. ನಿಸರ್ಗದ ತಿಳುವಳಿಕೆ ಇಲ್ಲದೆ, ಜನಸಾಮಾನ್ಯನ ನಿತ್ಯ ಬದುಕನ್ನು ಅರಿಯಲಾಗದೆ ಈ ರಾಜಕೀಯ ಕೃತಕ ಹೂವಿನಂತಿದೆ" ಎನ್ನುತ್ತಿದ್ದರು. ನಮ್ಮ ರಾಜಕಾರಣಿಗಳಿಗೆ ನಿಸರ್ಗದ ತಿಳುವಳಿಕೆ ಬಿಡಿ, ಕನಿಷ್ಠ ತಮ್ಮನ್ನು ಮತ ಹಾಕಿ ಅಧಿಕಾರ ಗದ್ದುಗೇರುವಂತೆ ಮಾಡಿದ ಪ್ರಜೆಗಳ ನೆನಪೂ ಇರುವುದಿಲ್ಲ. ಪರಿಸರದ ಬಗ್ಗೆ ಮಾತಾಡಲು ಹೇಳಿದ್ರೆ..ಯಾರೋ ಬರೆದುಕೊಟ್ಟ ಭಾಷಣವನ್ನು ಗಿಳಿಪಾಠ ಮಾಡುತ್ತಾರೆ. ಗಿಳಿಪಾಠ ಮಾಡಿದವರಿಗೆ ತಾವು ಏನು ಹೇಳುತ್ತಿದ್ದೇವೆಂದೂ ಗೊತ್ತಾಗಲ್ಲ ಬಿಡಿ. ಅದು ಬರೆದುಕೊಟ್ಟವರಿಗೆ ಮಾತ್ರ ಗೊತ್ತು. ಆದ್ದರಿಂದಲೇ ನಮ್ಮವರಿಗೆ ಬರೇ ಆಶ್ವಾಸನೆ ನೀಡೋದು ಮಾತ್ರ ಗೊತ್ತು. ಸಮಾಜವಾದಿ ಪಕ್ಷದ ಮಿತ್ತೆರಾಂದ್, ಫ್ರಾನ್ಸ್ನನಲ್ಲಿ ಬಂಡವಾಳ ಶಾಹಿಗಳನ್ನು ಹಿಮ್ಮೆಟ್ಟಿಸಿ, ಪ್ರಜೆಗಳಿಗೆ ಏನು ನೀಡಬೇಕೋ ಅದನ್ನು ನೀಡಿದವರು. ಈತ ಚುನಾವಣೆ ಬಂದಾಗ ನಿಮ್ಮೂರಿಗೆ ರಸ್ತೆ ಮಾಡಿಸುತ್ಥೇನೆ, ಸಾಲ ನೀಡುತ್ತೇವೆ ಎಂದು ಭರವಸೆಗಳ ಮಳೆ ಸುರಿಯಲಿಲ್ಲ. ಬದಲಾಗಿ ಮಿತ್ತೆರಾಂದ್ ಅನ್ಯಾಯಕ್ಕೋಳಗಾದ ಜನರಿಗೆ ಬದುಕು ನೀಡುತ್ತೇವೆ ಎಂದರು. ಕಾರ್ಯಮುಖೇನ ಮಾಡಿ ತೋರಿಸಿಕೊಟ್ಟರು.

ಆದರೆ ಕರ್ನಾಟಕದ 'ಮಣ್ಣಿನ ಮಗ' ದೇಶದ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಹೇಳಿರುವ 'ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು. ಏನು ಮಾಡೋಣ, ಪಾಪ ಮಾಡಿ ಇಲ್ಲೇ ಹುಟ್ಟಿದ್ದೇನೆ' ಎಂಬ ಮಾತನ್ನು ಕರ್ನಾಟಕದ ಜನತೆ ಕಿವಿಯಾರೆ ಕೇಳಬೇಕಾಗಿರುವುದು ದುರಂತ.
ಪಿ.ಲಂಕೇಶ್ ತನ್ನ 'ಟೀಕೆ-ಟಿಪ್ಪಣಿ' ಪುಸ್ತಕದಲ್ಲಿ ಮಿತ್ತೆರಾಂದ್ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ. 'ಇಡೀ ಫ್ರಾನ್ಸ್ ದೇಶ ಬದಲಾಲಾವಣೆಗಾಗಿ ಸ್ಪಂದಿಸುತ್ತ ಕುರುಕ್ಷೇತ್ರವನ್ನು ಹೋಲುತ್ತಿದ್ದ ಚುನಾವಣೆಯ ಕದನದ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ ಪುಸ್ತಕ ಜೀವಿ, ಕಲೆಯ ಆರಾಧಕ ಮಿತ್ತೆರಾಂದ್ ತನ್ನ ಇಳಿವಯಸ್ಸಿನಲ್ಲಿ ಮಳೆಯ ಕಾರಣ, ಮೂರು ದಿನಗಳ ಸಂಗಮ, ಮೋಡಗಳು ಬೀಜಗಟ್ಟುವ ರೀರಿ, ತೇವವನ್ನು ಭೂಮಿ ಹೀರುವ ರೀತಿಯನ್ನು ಪತ್ರಿಕಾವರದಿಗಾರರೊಂದಿಗೆ ಚರ್ಚಿಸುತ್ತಿದ್ದ..ನಿಜವಾದ ತಟಸ್ಥ ನೀತಿಗೆ ರಾಜಕೀಯದಲ್ಲಿ ಸರಳತೆ, ಪ್ರಾಮಾಣಕತೆ, ಎಲ್ಲ ಜನರನ್ನೂ ಮನಸ್ಸು, ಹೃದಯವಿಳ್ಳ ಜೀವಿಗಳಾಗಿ ನೋಡುವುದು ಎಷ್ಟು ಮುಖ್ಯ ಎಂಬುದನ್ನು ಮಿತ್ತೆರಾಂದ್ ತೋರಿದ್ದ' ಎಂದು ಲಂಕೇಶ್ ಈ ಪುಸ್ತಕದಲ್ಲಿ ವಿವರಿಸುತ್ತಾರೆ.

ಮಿತ್ತೆರಾಂದ್ ಬಗ್ಗೆ ಕೇಳಿದಾಗಲೆಲ್ಲಾ ನಮಗೊಬ್ಬ ಅಂತ ರಾಜಕಾರಣಿ ಬೇಕು ಎಂದನಿಸುತ್ತೆ. ಮೊನ್ನೆ ಮೊನ್ನೆ ದೇವೇಗೌಡರು ಹುಟ್ಟಿದ್ದೇ ಪಾಪ ಅಂದಾಗ ನನಗೆ ತಟ್ಟನೆ ನೆನಪಾಗಿದ್ದು ಮಿತ್ತೆರಾಂದ್. ಒಂದು ಬಾರಿ ಮಿತ್ತೆರಾಂದ್ ಇಸ್ರೇಲಿಗೆ ಭೇಟಿ ಯಾದಾಗ ಮಿತ್ತೆರಾಂದ್ ಹೆಳಿದ ಮೊದಲ ಮಾತು 'ದಯವಿಟ್ಟು ನನ್ನ ಮಾತನ್ನು ನಂಬಿ. ನಿಮ್ಮ ನಿಜವಾದ ಸ್ನೇಹಿತನಾಗಿ ನಾನು ಇಸ್ರೇಲಿಗೆ ಬಂದಿದ್ದೇನೆ. ಫ್ರಾನ್ಸಿನ ಪ್ರತಿಯೊಬ್ಬ ಶುಭಕಾಮನೆ ನನ್ನೊಂದಿಗಿದೆ' ಎಂದು ಮಾತು ಶುರುಮಾಡಿದ್ದರು. ನಮ್ಮಲ್ಲಿ ಪ್ರತಿಯೊಬ್ಬ ಪ್ರಜೆಯ ಮತ ಪಡೆದು ಕುರ್ಚಿಯಲ್ಲಿ ಕುಳಿತ ಮೇಲೆ ನಮ್ಮ ಜನ ನಾಯಕರು ಮತ್ತೊಂದು ದೇಶದಲ್ಲಿ 'ಭಾರತದ ಪ್ರತಿ ಪ್ರಜೆಯ ಶುಭಕಾಮನೆ ನನ್ನೊಂದಿಗೆ ಇದೆ 'ಎನ್ನುವುದಿರಲಿ, ನಮ್ಮ ದೇಶದಲ್ಲಿನ ಜನಸಂಖ್ಯೆ ಎಷ್ಟು ಅಂಥ ಕೇಳಿದ್ರು ಸರಿಯಾಗಿ ಗೊತ್ತಿರಲಲ್ಲ ಬಿಡಿ. ಮತ್ತೆ ಹೇಳಕ್ಕೆಲ್ಲಿ ನೆನಪಿರುತ್ತೆ. ' ನಮಗೆ ಕಳ್ಳೇಕಾಯಿ ಕೊಳ್ಳಲು ಅಮೆರಿಕವೆಂಬ ಮಹಾರಾಷ್ಟ್ರದ ಅಪ್ಪಣೆ ಪಡೆಯಬೇಕೆ? ನಿಮಗೆ ಪ್ರಾಣಿಗಳ ಮನಸ್ಸು ಇಲ್ಲದಿದ್ದರೆ ಮನುಷ್ಯರ ಮನಸ್ಸು ಖಂಡಿತ ಅರ್ಥವಾಗುವುದಿಲ್ಲ" ಎಂದಿರುವ ಮಿತ್ತೆರಾಂದ್ ವ್ಯಕ್ತಿತ್ವ ವನ್ನು ಆತನ ಮಾತುಗಳಿಂದಲೇ ನಾವು ಗುರುತಿಸಬಹುದು.

ನಮ್ಮಲ್ಲೂ ಒಬ್ಬ ಮಿತ್ತೆರಾಂದ್ ಇರುತ್ತಿದ್ದರೆ..ನಮ್ಮ ರಾಜಕೀಯ ಇಷ್ಟೊಂದು ಪ್ರಪಾತಕ್ಕೆ ಇಳಿಯುತ್ತಿರಲಿಲ್ಲ. ಭ್ರಷ್ಟ ರಾಜಕಾರಣ ತಾಂಡವಾಡುತ್ತಿರಲಿಲ್ಲ. ಕನ್ನಡ ನೆಲದಲ್ಲಿ ಹುಟ್ಟಿ, ಕನ್ನಡ ನೆಲದ ಅನ್ನ ತಿಂದುಂಡು ಕನ್ನಡಕ್ಕೆ ಅನ್ಯಾಯವೆಸಗುವ ರಾಜಕಾರಣಿಗಳು ಹುಟ್ಟಿ ಬೆಳೆಯುತ್ತಿರಲಿಲ್ಲ. ನಮಗೂ ಇಂಥ ಒಬ್ಬ ಮಿತ್ತೆರಾಂದ್ ಬೇಕು..ಅನ್ಯಾಯಕ್ಕೊಳಗಾದವರ ಕೈಹಿಡಿದು ಎಬ್ಬಿಸಲು..ಬಂಡವಾಳಶಾಹಿ, ಭ್ರಷ್ಟತೆಯನ್ನು ಹತ್ತಿಕ್ಕಲು..ಭಾರತದಲ್ಲಿ ಸಮಾನತೆ ಸಾರಲು..ಸ್ವತಂತ್ರ ಭಾರತದಲ್ಲಿ ನೈಜ ಸ್ವಾತಂತ್ರ್ಯವನ್ನು ಜನತೆಗೆ ಕೊಡಲು..ನಮಗೂ ಒಬ್ಬ ಮಿತ್ತೆರಾಂದ್ ಬೇಕು..ಆದ್ರೆ ಹಾಗಾಗುತ್ತಾ????

2 comments:

ಹೆಸರು ರಾಜೇಶ್, said...

Lekhana Tumba Chennagi mudide. Nimma Abhiprayakke nanna Sahamathavide.
Geleya
rajesh

ತನ್ ಹಾಯಿ said...

ಚಿತ್ರಾ..
ನಮಗೂ ಒಬ್ಬ ಮಿತ್ತೆಂದಾರ್ ಅವಶ್ಯಕತೆ ಖಂಡಿತ ಇದೆ. ಒಳ್ಳೆಯ ಹೋಲಿಕೆ ನೀಡಿದಿಯಾ..ಇನ್ನಷ್ಟು ಇಂತಹ ಬರಹಗಳ ನಿರೀಕ್ಷೆಯಲ್ಲಿ..