Thursday, January 3, 2008

ವಿವೇಕ ವಾಣಿ ಸ್ಪೂರ್ತಿಯಾಗಲಿ ಅನುದಿನ..

ಜನವರಿ 12, ರಾಷ್ಟ್ರೀಯ ಯುವದಿನ!
ವಿಶ್ವದೆಲ್ಲೆಡೆ ಭಾರತ ನೆಲದ ಸಂಸ್ಕೃತಿಯ ಕಂಪನ್ನು ಹಬ್ಬಿಸಿದ ಯುವ ಚೇತನ ಸ್ವಾಮೀ ವಿವೇಕಾನಂದರ ಜನ್ಮದಿನ. ತನ್ನ ಜೀವನಾದರ್ಶ, ತತ್ವಗಳಿಂದ ವಿಶ್ವಮಾನ್ಯರಾದ, ಯುವಜನತೆಗೆ ಸ್ಪೂರ್ತಿಯ ಸೆಲೆಯಾದ ವಿವೇಕಾನಂದರ ಹುಟ್ಟಿದ ದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸಲಾಗುತ್ತದೆ. 1998ರಲ್ಲಿ ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲು ಕರೆ ನೀಡಿದ ಭಾರತ ಸರ್ಕಾರ, 2003ರಲ್ಲಿ ರಾಷ್ಟ್ರೀಯ ಯುವನೀತಿಯನ್ನೂ ಅಂಗೀಕರಿಸಿದೆ.

ರಾಷ್ಟ್ರೀಯ ಯುವ ನೀತಿ
13ರಿಂದ 35 ವರ್ಷದೊಳಗಿನವರು ಯುವಜನರೆಂಬ ಪರಿಕಲ್ಪನೆ.
ಯುವಕರಿಗೆ ಅಗತ್ಯ ತರಬೇತಿಗಳನ್ನು ನೀಡಿ, ಸಾಮಾಜಿಕವಾಗಿ ರೂಪುಗೊಳ್ಳುವಂತೆ ಮಾಡಬೇಕು.
ಉದ್ಯೋಗವಕಾಶ ಪಡೆಯಲು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು.
ಸಾಮಾಜಿಕ ಕ್ಷೇತ್ರದಲ್ಲಿ ಯುವಕರಿಗೆ ಎಲ್ಲಾ ರೀತಿಯ ರಕ್ಷಣೆ ಒದಗಿಸಿಕೊಡಬೇಕು.
ಯುವಜನರ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ ವಿಶೇಷ ನಿಧಿಯನ್ನು ಯೋಜಿಸಬೇಕು.
ಯುವ ಕ್ರೀಡಾಪ್ರತಿಭೆಗಳಿಗೆ ಸರ್ಕಾರದ ವತಿಯಿಂದ ಮನ್ನಣೆ ಸಿಗಬೇಕು.

ಆದರೆ ಪ್ರಸ್ತುತ ಸನ್ನಿವೇಶದಲ್ಲಿ ದೇಶದಲ್ಲಿ ಯುವ ನೀತಿ ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳುತ್ತಿದೆ? ಸರ್ಕಾರ ಇದಕ್ಕೆ ಸ್ಪಂದಿಸಿದೆಯೇ? ಯುವ ಪೀಳಿಗೆ 'ಯುವ ಶಕ್ತಿ'ಯ ಕುರಿತು ಗಂಭೀರ ಚಿಂತನೆ ನಡೆಸಿದೆಯೇ? ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಖಂಡಿತ ಇದೆ.
ಯುವ ನೀತಿ ಜಾರಿಯಾಗಿ ನಾಲ್ಕು ವರ್ಷ ಕಳೆದರೂ ಸರ್ಕಾರ ಈ ಬಗ್ಗೆ ಹೆಚ್ಚು ಗಮನಹರಿಸಿಲ್ಲ. ಸಾಮಾಜಿಕವಾಗಿ ಯುವ ಜನತೆಯನ್ನು ಸುಶಿಕ್ಷಿತರನ್ನಾಗಿ ಮಾಡುವ ಕಾರ್ಯ ಸರ್ಕಾರದಿಂದ ನಡೆಯುತ್ತಿಲ್ಲ. ಯುವಕರಿಗೆ ಅಗತ್ಯ ಶಿಕ್ಷಣ ನೀಡಿ ಸ್ವಾವಲಂಬಿ ಬದುಕು ರೂಪಿಸಿಕೊಡುವಲ್ಲಿ ನಮ್ಮ ಸರ್ಕಾರ ವಿಫಲವಾಗುತ್ತಿದೆ. ಯುವ ಜನತೆಗೆ ಭದ್ರ ಅಡಿಪಾಯ ಹಾಕಿಕೊಡುವ ಮತ್ತು ಅವರಲ್ಲಿ ಆದರ್ಶಗಳನ್ನು ತುಂಬುವ ಕಾರ್ಯ ನಡೆಯುತ್ತಿಲ್ಲ. ಹಳ್ಳಿಗೆ ಭೇಟಿ ನೀಡಿ ದಿಲ್ಲಿಯ ಬಗ್ಗೆ ಮಾತಾಡುವ , ದಿಲ್ಲಿಯಲ್ಲಿ ನಿಂತು ಅಮೆರಿಕಾವನ್ನು ಹೊಗಳುವ ನಮ್ಮ ಜನಪ್ರತಿನಿಧಿಗಳಿಗೆ ನಮ್ಮೊಳಗೆ ನಶಿಸಿ ಹೋಗುತ್ತಿರುವ ಆದರ್ಶ, ಸಂಸ್ಕೃತಿ ಕಡೆ ಒಂದಿಷ್ಟು ಕಾಳಜಿಯಿಲ್ಲ. ಯುವ ನೀತಿಯ ಅಭಿವೃದ್ಧಿಗಾಗಿ 'ಯುವ ನೀತಿ' ಯೋಜನೆಯಡಿಯಲ್ಲಿ ವಿಶೇಷ ನಿಧಿಯನ್ನು ನೀಡಬೇಕೆಂದಿದ್ದರೂ ಕಾರ್ಯರೂಪಕ್ಕೆ ತರಲು ವಿಫಲವಾಗಿದೆ ಮತ್ತು ನಿರುದ್ಯೋಗಿಗಳಿಗೆ ಕನಿಷ್ಠ ಉದ್ಯೋಗ ಒದಗಿಸುವಲ್ಲಿಯೂ ಸರ್ಕಾರ ಹೆಣಗಾಡುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಎಷ್ಟೋ ಮಂದಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅವರಿಗೆ ಸಿಗುವ ಪ್ರೋತ್ಸಾಹವೆಷ್ಟು? ನಮ್ಮ ಸರ್ಕಾರಕ್ಕೆ ಕ್ರೀಡೆ ಅಂದ ತಕ್ಷಣ ಕ್ರಿಕೆಟ್ ಬಿಟ್ರೆ ಬೇರೆ ಯಾವ ಆಟಗಳು ಕಣ್ಣ ಮುಂದೆ ಬರಲ್ಲ. ಕ್ರಿಕೆಟ್ ಗೆ ಬೇಕಾದ್ರೆ ರಾಶಿ ಗಟ್ಟಲೆ ಹಣ ಸುರಿತಾರೆ. ವೇದಿಕೆಯ ಮೇಲೆ ಭರವಸೆಯ ಮಾತುಗಳನ್ನಾಡಿ, ಚಪ್ಪಾಳೆ ಗಿಟ್ಟಿಸಿಕೊಳ್ಲುವ ಹಲವಾರು ನಾಯಕರು ಹೊಟ್ಟೆ-ಬಟ್ಟೆಗಿಲ್ಲದೆ ತುತ್ತು ಅನ್ನವಿಲ್ಲದೆ ,ವಿದ್ಯೆಯಿಲ್ಲದೆ ಬೀದಿ ಬೀದಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಪುಟ ಮಕ್ಕಳ ಬಗ್ಗೆ ಯಾಕೆ ಗಂಭೀರ ಚಿಂತನೆ ನಡೆಸಬಾರದು? ಭವಿಷ್ಯದ ಯುವ ಜನರೂ ಆ ಪುಟ್ಟ ಕಂದಮ್ಮಗಳಲ್ಲವೇ?

"ಇಂದಿನ ಮಕ್ಕಳೇ ಮುಂದಿನ ಜನಾಂಗ ಅನ್ತಾರೆ, ಯುವ ಜನತೆ ದೇಶದ ಭವಿಷ್ಯ ಅನ್ತಾರೆ. ಆದ್ರೆ ಯುವ ಜನಾಂಗವನ್ನು ಸುವ್ಯವಸ್ಥಿತ ರೀತಿಯಲ್ಲಿ ಬೆಳೆಸುವ ಪ್ರಯತ್ನ ನಡೆಯುತ್ತಿಲ್ಲ. ಸರ್ಕಾರದ ನಿರ್ಲಕ್ಷ, ಕಾರ್ಯವೈಫಲ್ಯ ಇಂದು ಯುವಶಕ್ತಿಯ ಮೇಲೆ ಗಾಢ ಪರಿಣಾಮ ಬೀಳುತ್ತಿದೆ.
''ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಉಕ್ಕಿನಂಥ ಯುವಕರಿಂದ ದೇಶ ಕಟ್ಟಲು ಸಾಧ್ಯ"-ಸ್ವಾಮೀ ವಿವೇಕಾನಂದರ ಮಾತಿರು. ದೇಶ ಜಾಗೃತಿಗಾಗಿ ತನ್ನ ಜೀವನವನ್ಮೇ ಮುಡುಪಾಗಿಟ್ಟರು. ಅಂತಹ ಆದರ್ಶರು ನಮ್ಮೊಳಗೆ ಬೇಕಾಗಿದ್ದಾರೆ. ನಮ್ಮನ್ನೇ ಜಾಗೃತಗೊಳಿಸುವ ಮಹಾನ್ ಪುರುಷರು ನಮ್ಮಲ್ಲಿ ಮತ್ತೊಮ್ಮೆ ಹುಟ್ಟಿಬರಬೇಕು. ಬೆಂಕಿ ಯಾವುದು? ಬೆಳಕು ಯಾವುದು?ಅನ್ನೋದನ್ನು ಅರಿಯದ ಯುವ ಪೀಳಿಗೆಗೆ ಅದನ್ನು ಮನದಟ್ಟಾಗಿಸುವ ಕಾರ್ಯ ನಮ್ಮಲ್ಲಿ ನಡೆಯಬೇಕಿದೆ. ಯುವ ಜನರ ಬಗ್ಗೆ ಸರ್ಕಾರವೂ ಗಂಭೀರ ಚಿಂತನೆ ನಡೆಸದಿರುವುದು ಯುವಕರು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದೆ.

ಸಂಸ್ಕೃತಿ ಸದಾಚಾರಗಳಿಗೆ ಹೆಸರಾದ ಭಾರತ ನೆಲದಲ್ಲಿ ಸಂಸ್ಕೃತಿಯ ಪಲ್ಲಟದಿಂದಾಗಿ ಸಂಸ್ಕೃತಿಯ ಪಾಠ ಹೇಳಿಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಂಧಾನುಕರಣೆಯ ಮಬ್ಬನಲ್ಲಿ ನೈತಿಕತೆ ಮರೆಯಾಗಿ ಮಾನವೀಯ ಮೌಲ್ಯಗಳು ಮೌಢ್ಯದ ಕೊಚ್ಚೆಯಲ್ಲಿ ಕೊಚ್ಚಿ ಹೋಗುತ್ತಿವೆ. ಜಾಗತೀಕರಣ ಪ್ರಭಾವದಿಂದಾಗಿ ಹಣ ಗಳಿಸುವ ದಿಢೀರ್ ಶ್ರೀಮಂತನಾಗುವ ಕನಸು ಕಾಣುವ ಹಲವಾರು ಯುವಕರು ಭಯೋತ್ಪಾದನೆ, ಭ್ರಷ್ಟಾಚಾರದಂತಹ ದೇಶದ್ರೋಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಯುವಕರೇ ದೇಶದ ದೊಡ್ಡ ಸಮಸ್ಯೆ ಎಂಬಂತಾಗಿದೆ. ಇದು ನಿವಾರಣೆಯಾಗಬೇಕಾದರೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಯುವ ನೀತಿ ಕಡ್ಡಾಯವಾಗಿ ಕಾರ್ಯಗತಗೊಳ್ಳಬೇಕು.

"ಮನುಷ್ಯನಲ್ಲಿರುವ ದೌರ್ಬಲ್ಯವನ್ನು ಕುರಿತು ಚಿಂತಿಸುವುದೇ ಸರಿಯಲ್ಲ,, ಶಕ್ತಿಯನ್ನು ಕುರಿತು ಚಿಂತಿಸುವುದೇ ಪರಿಹಾರೋಪಾಯ" ಎನ್ನುತ್ತಾರೆ ಸ್ವಾಮೀ ವಿವೇಕಾನಂದರು. ಸರ್ಕಾರವನ್ನು ಕಾಯೋದಲ್ಲ, ನಾವು ಎಚ್ಚೆತ್ತುಕೊಳ್ಳಬೇಕು. ಯುವ ಶಕ್ತಿಯೇ ರಾಷ್ಟ್ರಶಕ್ತಿ ಇದು ನಿಜ. ಸಾಧನೆಗೆ ಬೇಕಾದ ಛಲ, ಆತ್ಮವಿಶ್ವಾಸ, ಎದೆಗಾರಿಕೆ ನಮ್ಮಲ್ಲಿದೆ. ಶಕ್ತಿಯೆಲ್ಲವೂ ನಮ್ಮೊಳಗಿದೆ, ಮಾನವೀಯ ಮೌಲ್ಯಗಳ ಪರಿಶೋಧನೆ, ಜನಮಾನಸದಲ್ಲಿ ಸತ್ ಚಿಂತನೆಗಳನ್ನು ತುಂಬುವ ಕಾರ್ಯ ನಮ್ಮಿಂದಾಗಬೇಕಿದೆ.

ಬಿಸಿ ರಕ್ತ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ..
ಕಟ್ಟುವೆವು ನಾವು ಹೊಸ
ನಾಡೊಂದನ್ನು ರಸದ ಬೀಡೊಂದನು
..
ಕವಿ ವಾಣಿ ನಮ್ಮ ಹೃದಯದಲ್ಲಿ ಯುವ ಶಕ್ತಿಯ ರಾಷ್ಟ್ರನಿರ್ಮಾಣದ ಕಹಳೆ ಮೊಳಗಿಸಲಿ. ಮೌಡ್ಯ, ಅಜ್ಞಾನದಿಂದ ಹೊರ ಬಂದು ದೇಶದ ಸಂಸ್ಕೃತಿ, ಸಂಪತ್ತು ಉಳಿಸಲು ಪಣ ತೊಡೋಣ.
ರಾಷ್ಟ್ರೀಯ ಯುವ ದಿನದ ಈ ಶುಭ ಸಂಧರ್ಭದಲ್ಲಿ ದೇಶದೇಳ್ಗೆಗೆ ಕನಿಷ್ಠ ಶ್ರಮವಾದರೂ ನಮ್ಮದಾಗಲಿ. ವಿವೇಕವಾಣಿ ಪ್ರತಿಯೊಬ್ಬರ ಬದುಕಿನಲ್ಲೂ ಸಾಮಾಜಿಕ ಕಳಕಳಿ ಉದ್ದೀಪಿಸಲಿ. ಸ್ವಾಮಿ ವಿವೇಕನಾಂದರು ಯುವ ದಿನಕ್ಕೆ ಮಾತ್ರ ಸೀಮಿತವಾಗದೆ, ವರ್ಷಪೂರ್ತಿ ಯುವ ಶಕ್ತಿಗೆ ಪ್ರೇರಣೆಯಾಗಲಿ. ಯುವ ದಿನದ ಶುಭಾಶಯಗಳು..

No comments: