Friday, January 4, 2008

ಇಡೀ ಬದುಕನ್ನು ನರಕದ ಕೂಪಕ್ಕೆ ತಳ್ಳಿದವನಿಗೆ, 14 ದಿನ ಶಿಕ್ಷೆ!!

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪಾನಮತ್ತನಾದ ಪೊಲೀಸ್ ಪೇದೆಯೊಬ್ಬ 11 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದು ನಡೆದಿದ್ದು ಜನವರಿ 3ರ ನಡುರಾತ್ರಿ. ಈತನಿಗೆ ಶಿಕ್ಷೆಯೇನು? 14 ದಿನ ನ್ಯಾಯಾಂಗ ಬಂಧನ ಮತ್ತು ಸೇವೆಯಿಂದ ಅಮಾನತು!!!

ಇಲ್ಲಿನ ರಂಗೇಗೌಡರ ಬೀದಿಯಲ್ಲಿನ ಮಂಜುನಾಥ್ ಲಾಡ್ಜ್ ಮುಂಭಾಗದ ಪಾಳು ಕೊಠಡಿಯಲ್ಲಿ ಅತ್ಯಾಚಾರ ಎಸಗಿದ್ದಾನಂತೆ. ಜನರೇ ಇವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜನರಿಗಿಂತ ಒಪ್ಪಿಸಿದ ಮೇಲೆ ಇನ್ನೇನು ಬೇಕು ಸಾಕ್ಷಿ?! ಆದ್ರೆ ಅವನಿಗೆ ಸಿಕ್ಕ ಶಿಕ್ಷೆ ಮಾತ್ರ 14 ದಿನ, ಅಂದ್ರೆ ಇನ್ನೂ ಅರ್ಧ ತಿಂಗಳಿಗೆ ಒಂದು ದಿನ ಬಾಕಿ ಮತ್ತು ಅಮಾನತು. ಓರ್ವ ಹೆಣ್ಣಿನ ಬದುಕನ್ನು ಬುಡದಲ್ಲೇ ಚಿವುಟಿ ಹಾಕಿದ ಆ ನೀಚನಿಗೆ ಅರ್ಧತಿಂಗಳು ಶಿಕ್ಷೆ!!

ಇಂಥಹ ವ್ಯವಸ್ಥೇ ಇದ್ರೆ ಬಹುಶಃ ನಮ್ಮ ಭಾರತದಲ್ಲಿ ಮಾತ್ರ ಎನ್ನುವುದು ನನ್ನ ಅಭಿಪ್ರಾಯ. 'ಈತ ಅಪರಾಧ ಸಾಬೀತಾಗುವವರೆಗೂ ಆರೋಪಿ' ಎನ್ನಬಹುದು. ಹೌದು! ಕಾನೂನು ಪ್ರಕಾರ ಅದು ಸರಿ, ಒಪ್ಪಿಕೊಳ್ಳೋಣ. ಆದ್ರೆ ಇಂಥ ಎಷ್ಟೋ ಪ್ರಕರಣಗಳು ಇಂದು ನಮ್ಮೆದುರು ನಡೆಯುತ್ತವೆ. ರಾತ್ರಿ-ಹಗಲೆನ್ನದೆ ನಿರಂತರ ಅತ್ಯಾಚಾರಗಳು ನಡೆಯುತ್ತವೆ. ಬಡವರ ಮೇಲೆ ಅತ್ಯಾಚಾರಗಳು ನಡೆದರೆ ಪತ್ರಿಕೆಗಳಲ್ಲಿ ಒಂದು ದಿನ ಪ್ರಕಟವಾಗಿ, ಎಲ್ಲರೂ ಬಾಯಿ ತುಂಬಾ ಮಾತಾಡುವುದು ಬಿಟ್ಟರೆ ನಂತರ ಆ ಬಗ್ಗೆ ನಮ್ಮ ವ್ಯವಸ್ಥೆ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಡವರಿಗೆ ನ್ಯಾಯ ಮರೀಚಿಕೆಯೇ ಸರಿ. ಮಾತ್ರವಲ್ಲ ದುಷ್ಕೃತ್ಯಗಳು ನಡೆಯುವುದೂ ಬಡವರ ಮೇಲೆಯೇ. ಅದೂ ಪೊಲೀಸ್, ಶಿಕ್ಷಕ ಅಥವಾ ಇನ್ನಿತರ ಹಿರಿಯ ಅಧಿಕಾರಿಗಳಿಂದಲೇ ಈ ದುಷ್ಕೃತ್ಯ ನಡೆಯುತ್ತಿರುತ್ತದೆ. ಸಮಾಜ, ಇಡೀ ನಮ್ಮ ವ್ಯವಸ್ಥೆ ಇದನ್ನೆಲ್ಲಾ ಕಣ್ಣು ಬಿಟ್ಟು ನೋಡ್ತಾ ಇರುತ್ತದೆ. ಬಾಯ್ತುಂಬಾ ಇದ್ರ ಬಗ್ಗೆ ಮಾತಾಡ್ತಾ ಇರುತ್ತೆ. ಅಲ್ಲಿ ಅತ್ಯಾಚಾರ ಎಸಗಿದ ಆ ನೀಚ ಮನುಷ್ಯ ಮುಖ್ಯವಾಗುವುದಿಲ್ಲ, ಅಮಾಯುಕಳಂತೆ ಸಹಿಸಿಕೊಂಡ ಹೆಣ್ಣು ಜೀವ ಮುಖ್ಯವಾಗುತ್ತದೆ. ಅವಳು ಶೀಲ ಕಳಕೊಂಡವಳು, ಅವನು ಮಹಾನ್ ಶೀಲವಂತ. ಯಾರೂ ಈ ಬಗ್ಗೆ ವಿರೋಧ ಮಾತಾಡಲ್ಲ, ಬದಲಾಗಿ ಆ ಹುಡುಗೀನ ಅನುಮಾನದಿಂದ ಕಾಣ್ತಾರೆ. ಇಡೀ ಸಮಾಜ ಅವಳನ್ನು ಅಸ್ಪೃಶ್ಯಳಂತೆ ದೂರವಿಡುತ್ತದೆ. ಅವಳ ಇಡೀ ಜೀವನ ನರಕಯಾತನೆ ಅನುಭವಿಸುತ್ತಾಳೆ. ಆದ್ರೆ ಓರ್ವ ಹೆಣ್ಣಿನ ಇಡೀ ಬದುಕನ್ನು ನರಕದ ಕೂಪಕ್ಕೆ ತಳ್ಳಿದ ಭೂಪನಿಗೆ ಶಿಕ್ಷೆ 10 ದಿನ, 1 ತಿಂಗಳು, ಹೆಚ್ಚೆಂದರೆ 6 ತಿಂಗಳು. ಇದು ನಮ್ಮ ನಿಯಮ. ಯಾರೂ ಇದನ್ನು ವಿರೋಧಿಸುತ್ತಿಲ್ಲ, ಯಾಕೆ ಈ ಸಮಾಜ, ನಮ್ಮ ವ್ಯವಸ್ಥೆ ಹೀಗೆ? ನಮ್ಮ ಮಹಿಳಾ ಆಯೋಗ ಇದೆ. ಆದ್ರೆ ಅದು ಎಷ್ಟರಮಟ್ಟಿಗೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನೋದು ಎಲ್ಲರಿಗೂ ಗೊತ್ತು.. ಅಲ್ಲಿ ನಾವು ಯಾವುದೇ ದೂರು ಕೊಟ್ಟರೆ ಮೊದಲು ಪಕ್ಷ ಯಾವುದು ಎಂಬುದು ಮುಖ್ಯವಾಗುತ್ತದೆ.

ಅದೇ ಹಾಸನದಲ್ಲಿ ದುಷ್ಕೃತ್ಯ ಎಸಗಿದ ಆ ನೀಚ ಪೊಲೀಸ್ ಪೇದೆಯ ಹೆಸರು ಶಶಿಧರ್(33). ಈತನನ್ನು ಬಂಧಿಸಿದ ಪೊಲೀಸರು ಮುಖಕ್ಕೆ ಮುಸುಕು ಹಾಕಿ ಠಾಣೆಗೆ ಕರೆದೊಯ್ದಿದ್ದು ಆಶ್ಚರ್ಯ. ಈ ಹಿಂದೆ ಆತ ಸಕಲೇಶಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಇಂತಹುದೇ ಆರೋಪಕ್ಕೆ ಒಳಗಾಗಿ ಹುದ್ದೆಯಿಂದ ಅಮಾನತುಗೊಂದಿದ್ದನಂತೆ. ಆಗಲೂ ಇಂಥದ್ದೇ ಹಲ್ಕ ಕೆಲ್ಸ ಮಾಡಿ, ಅಮಾನತುಗೊಂಡು, ಮತ್ತೆ ಮರಳಿದ್ದ. ಈಗ ಮತ್ತೆ ತನ್ನ ಹಳೆ ಚಾಳಿಯನ್ನೇ ಮುಂದುವರಿಸಿದ್ದ. ಈಗ್ಲೂ ಅವನಿಗೆ ಶಿಕ್ಷೆ ಅಮಾನತು, 14 ದಿನ ಕಂಬಿ ಎಣಿಸುವುದು. ಅದೂ ಓರ್ವ ಸಮಾಜವನ್ನು ರಕ್ಷಿಸುವ ಪೊಲೀಸ್ ಆಗಿ ಈತ ಮಾಡಿದ್ದ ಕೆಲ್ಸಕ್ಕೆ ಈತನಿಗೆ ಗಲ್ಲು ಶಿಕ್ಷೆ ನೀಡಿದ್ದರೂ ಕಡಿಮೆಯೇ. ಇನ್ನು ಕೆಲದಿನ ಅಮಾನತು ಮುಗಿಸಿ, ಮತ್ತೆ ಸೇವೆಗೆ ಸೇರ್ತಾನೆ, ಮತ್ತೆ ಹಳೆರಾಗ ಆರಂಭಿಸುತ್ತಾನೆ...ಅದೇ ಅತ್ಯಚಾರ, ಅದೇ ಅಮಾನತು, ಅದೇ 14 ದಿನ..!! ಇದು ನಮ್ಮ ವ್ಯವಸ್ಥೆ, ಬಹುಶಃ ದೇಶದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮಾತ್ರ. ಏನಂತೀರಿ?