Wednesday, August 6, 2008

ಅಭಿವೃದ್ಧಿಯೋ ಬರೇ ಘೋಷಣೆಯೋ?

ಇತ್ತೀಚೆಗೆ ಇಬ್ಬರು ಐಎಎಸ್ ಅಧಿಕಾರಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕುರಿತು ಹಗುರವಾಗಿ ಮಾತನಾಡಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಒಂದೆರಡು ದಿನಗಳು ಮಾತ್ರ, ಅಷ್ಟೇ ವೇಗವಾಗಿ ಸುದ್ದಿ ಮಾಧ್ಯಮಗಳಿಗೆ, ಜನರಿಗೆ ಮರೆತೇಬಿಟ್ಟಿದೆ. ಬಳಿಕ ಯಾವುದೇ ಪತ್ರಿಕೆಗಳಿಗೂ ಈ ಸುದ್ದಿ ಮಹತ್ವ ಎನಿಸಿಲ್ಲ. ಒಂದು ಪತ್ರಿಕೇಲಿ ಕೆಲ್ಸ ಮಾಡುತ್ತಿರುವ ನಾನು ಹೀಗೆಲ್ಲ ಹೇಳಬಾರದು ಎಂದನಿಸಬಹುದು, ಆದರೆ ಕನ್ನಡದ ಜನಸಾಮಾನ್ಯನ ಮಾತನ್ನು ನಾನಿಲ್ಲಿ ಹೇಳಬಯಸುತ್ತೇನೆ.

ನಾಡು-ನುಡಿಯ ವಿಚಾರ ಬಂದಾಗ ಕರ್ನಾಟಕದಲ್ಲಿರುವವರೆಲ್ಲ ಮಾಡುವುದು ಇದನ್ನೇ. ಮೊನ್ನೆ ಮೊನ್ನೆ ಕುಚೇಲನ್ ಸಿನಿಮಾ ಬಿಡುಗಡೆಯಾದಾಗ ರಜನಿಕಾಂತ್ ಕನ್ನಡದ ಜನತೆಯ ಕ್ಷಮೆ ಕೋರಿದ್ದಾರೆ. ಭಾಷೆ ವಿಚಾರ ಬಂದಾಗ ದಿನಕ್ಕೊಂದು ನುಡಿ, ಅಭಿಪ್ರಾಯಗಳು ಬದಲಾವಣೆಯಾಗುತ್ತಲೇ ಇರುತ್ತವೆ. ಐಎಎಸ್ ಅಧಿಕಾರಿಗಳು ಹಗುರ ಮಾತಾಡಿದ್ದರು ಅನ್ನೋದೇ ಸುದ್ದಿಯಾಯಿತು ವಿನಃ ಇದರಿಂದ ಅವರ ಮೇಲೇ ಏನೂ ಪರಿಣಾಮ ಆಗಲಿಲ್ಲ. ನಮ್ಮ ಜನಪ್ರತಿಧಿಗಳು ಕನ್ನಡ ಭಾಷೆ ವಿಚಾರ ಬಂದಾಗ, ಯಾರು ಕನ್ನಡವನ್ನು ಆಲಕ್ಷ ಮಾಡುತ್ತಾರೋ ಅಂಥವರನ್ನು ಕರ್ನಾಟಕದಲ್ಲಿ ಇರಲು ಬಿಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿಬಿಡುತ್ತಾರೆ. ಆದರೆ ಇದರಿಂದ ಮಣ್ಣಂಗಟ್ಟಿಯೂ ಆಗಲ್ಲ. ಈವರೆಗೆ ಆಗಿಲ್ಲ. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಕೂಡ, ಸರ್ಕಾರಕ್ಕೆ ಬರುವ ಕಡತಗಳು ಕನ್ನಡದಲ್ಲೇ ಇರದಿದ್ದರೆ ಅದನ್ನು ಮುಟ್ಟಿಯೂ ನೋಡಲ್ಲ ಅಂದಿದ್ದಾರೆ. ಆದರೆ ಎಷ್ಟರಮಟ್ಟಿಗೆ ಕಾರ್ಯಗತವಾಗಿದೆ? ಇತ್ತೀಚೆಗೆ ಇದೇ ಮುಖ್ಯಮಂತ್ರಿ ಚಂದ್ರು ಅವರು, ಕನ್ನಡದಲ್ಲಿ ನಾಮಫಲಕಗಳಿಲ್ಲದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗುವುದು ಅಥವಾ ಐದರಿಂದ ಹತ್ತು ಸಾವಿರ ದಂಡ ಎಂದು ಘೋಷಿಸಿಬಿಟ್ಟಿದ್ದಾರೆ ಈ ಹಿಂದೆ ಸಿದ್ದಲಿಂಗಯ್ಯ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ ಇಂಥದ್ದೇ ಘೋಷಣೆ ಮಾಡಿದ್ದರು. ಆದರೆ ಯಾವುದೇ ಫಲ ನೀಡಿಲ್ಲ. ಚಂದ್ರು ಅವರೂ ಹೀಗೇ ಹೇಳಿದ್ದಾರೆ. ಆದರೆ ಆಮೇಲೆ ಅದರ ಪತ್ತೆಯೇ ಇಲ್ಲ. ಕನ್ನಡದ ಬಗ್ಗೆ ಜನಪ್ರತಿನಿಧಿಗಳು ನೀಡಿರುವ ಪ್ರತಿ ಭರವಸೆಗಳು ಬರೇ ಭರವಸೆಗಳಾಗಿಯೇ ಉಳಿಯುತ್ತವೆ. ಅದಕ್ಕೇ ಐಎಎಸ್ ಅಧಿಕಾರಿಗಳಿರಲಿ, ಎಲ್ಲರೂ ಕನ್ನಡದ ಬಗ್ಗೆ ಉಡಾಫೆಯ ಮಾತುಗಳನ್ನಾಡುತ್ತಲೇ ಇದ್ದಾರೆ. ಅವರಿಗೆ ಬಿಸಿತಟ್ಟುವ ಕೆಲಸಗಳನ್ನು ಯಾವುದೇ ಸರ್ಕಾರ ಮಾಡಿಲ್ಲ.

ಬಹುಶಃ ನಾನು ಹೇಳಿರುವ ಇದೇ ಮಾತನ್ನು ಅದೆಷ್ಟೋ ವರ್ಷಗಳಿಂದ ಕನ್ನಡಿಗರು ಕೇಳುತ್ತಲೇ ಇರಬಹುದು..ಇದೆಲ್ಲಾ ಹಳೆಯ ವಿಚಾರ ಅಂದುಬಿಡಬಹುದು. ಆದರೆ ಯಾಕೋ ನನ್ನ ತೃಪ್ತಿಗೆ ನಾನು ಬರೆಯುತ್ತಿದ್ದೇನೆ ಅಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟೇ ಉನ್ನತ ಅಧಿಕಾರಿಯಾಗಿರಲಿ, ಕನ್ನಡದ ಬಗ್ಗೆ ಉಡಾಫೆಯ ಮಾತನ್ನಾಡಿದ್ದರೆ, ಅವರನ್ನು ದಂಡಿಸಬೇಕು. ಕನ್ನಡಕ್ಕಾಗಿಯೇ ಇರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಬಗ್ಗೆ ಅವಹೇಳನ ಮಾಡಿದ್ದವವರನ್ನು ದಂಡಿಸುವ ಅಧಿಕಾರ ಪಡೆಯಬೇಕು. ಸುಮ್ನೆ ಕನ್ನಡ ಕನ್ನಡ ಅಂತ ಬಡ್ಕೊಂಡ್ರೆ ಸಾಲದು. ಕನ್ನಡ ಸಾಹಿತ್ಯ ಪರಿಷತ್ ಗೆ ಹೋದರೆ, ಬರೇ ಕಚ್ಚಾಡುವ ಸಾಹಿತಿಗಳೇ ಕಾಣುತ್ತಾರೆ. ಪ್ರತಿಯೊಬ್ಬರೂ ತಾ ಮೇಲೂ-ನಾ ಮೇಲೂ ಎಂದು ಥೇಟ್ ವಿಧಾನಸೌಧದಲ್ಲಿ ನಡೆಯುವ ಕಲಾಪಗಳ ತರ. ಇದರಿಂದ ಪ್ರಯೋಜನವೂ ಆಗಲ್ಲ. ರಾಜ್ಯೋತ್ಸವ ದಿನದಂದು ಬೇಕಾಬಿಟ್ಟಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿದ್ದರೆ ಕನ್ನಡ ಉದ್ಧಾರ ಆಗಲ್ಲ ಎನ್ನುವುದನ್ನು ಸರ್ಕಾರವೂ ಮನಗಾನಬೇಕು. ಹೀಗಿದ್ದರೆ ಅನಾಥ ಮಗುವಿನಂತೆ ಅಳುವ ನಮ್ಮ ಕನ್ನಡವನ್ನು ರಕ್ಷಿಸಬಹುದೇನೋ?

Thursday, July 31, 2008

ಹುಟ್ಟುಹಬ್ಬದಂದು ನನ್ನ ಮೊದಲ ಲೇಖನ ಪ್ರಕಟಗೊಂಡಾಗ..

ಹೌದು! ಆಗಸ್ಟ್ 2..ನಾನು ಹುಟ್ಟಿದ ದಿನ. ನೆನಪಾಯಿತು..ಹಳೆಯ ಒಂದಿಷ್ಟು ನೆನಪುಗಳು. ನಾನಗ ಪ್ರಥಮ ಡಿಗ್ರಿ. ಉಜಿರೆಯ ಎಸ್.ಡಿ. ಎಂ. ಕಾಲೇಜು. ನನ್ನ ಕಾಂಬೀನೇಷನ್ ಕನ್ನಡ, ಪತ್ರಿಕೋದ್ಯಮ ಮತ್ತು ಸೈಕಾಲಜಿ. ಕನ್ನಡ ಮತ್ತು ಪತ್ರಿಕೋದ್ಯಮ ಎರಡು ವಿಷಯಗಳು ನನಗೆ ತುಂಬಾ ಇಷ್ಟ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಓದುತ್ತಿದ್ದರೂ, ಮೇಷ್ಟ್ರು ಪಾಠ ಮಾಡಿದ್ದು ತಲೆಗೆ ಹೋಗುತ್ತಿರಲಿಲ್ಲ. ಯಾಕಂದ್ರೆ ನನಗೆ ವಿಜ್ಞಾನ ವಿಷಯ ಇಷ್ಟನೇ ಇಲ್ಲ. ಯಾರದ್ದೋ ಒತ್ತಾಯಕ್ಕೆ ತೆಗೆದುಕೊಂಡೆ. ಆವಾಗ್ಲೆ ಏನಾದ್ರೂ ಗೀಚಿ ಫೈಲ್ ನೊಳಗೆ ಇಡುವ ಚಾಳಿ ನನಗೆ. ಡಿಗ್ರಿಗೆ ಸೇರಿದ್ದೇ ತಡ, ಅದನ್ನೆಲ್ಲ ಪತ್ರಿಕೆಗಳಿಗೆ ಕಳುಹಿಸಲಾರಂಭಿಸಿದ್ದೆ. ಅದರಲ್ಲೂ ಕನ್ನಡಪ್ರಭದ ಕಾಲೇಜು ರಂಗಕ್ಕೆ ಕಳುಹಿಸಿದಷ್ಟು ಲೇಖನಗಳನ್ನು ಇನ್ಯಾವ ಪತ್ರಿಕೆಗೂ ಕಳುಹಿಸಿಲ್ಲ ಅನಿಸುತ್ತೆ.

ಒಂದು ವರ್ಷ ಎಷ್ಟು ಲೇಖನಗಳು ಏನೆಲ್ಲ ತಿಪ್ಪಾರಲಾಗ ಹಾಕಿ ಬರೆದು ಕಳಿಸಿದ್ರೂ ಪ್ರಕಟವಾಗಿಲ್ಲ. ನನ್ನ ಕ್ಲಾಸಿನ ಎಲ್ಲರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ನಮ್ಮ ಜರ್ನಲಿಸಂ ಸರ್ ಡಯಾಸ್ ಎದುರು ನಿಂತು ಅವ್ರ ಹೆಸರು ಹೇಳುವಾಗ, ಕುಳಿತವರೆಲ್ಲ ಚಪ್ಪಾಳೆ ತಟ್ಟುವಾಗ ಎದುರು ಬೆಂಚಿನಲ್ಲಿ ಕುಳಿತ ನನಗೆ ಅಳು ಬರುತ್ತಿತ್ತು. ಆಯಿತು ಒಂದು ವರ್ಷ ಆಯಿತು..ಆದ್ರೂ ಕಾಲೇಜುರಂಗಕ್ಕೆ ಕಳಹುಹಿಸೋದು ನಿಲ್ಲಿಸಿಲ್ಲ..ಬಹುಶಃ ಅದೆಲ್ಲ ಡಸ್ಟ್ ಬಿನ್ ಗೆ ಹೋಗುತ್ತಿತ್ತು.

ದ್ವಿತೀಯ ಬಿ.ಎ. ಆಗಸ್ಟ್ 2..ನನ್ನ ಹುಟ್ಟುಹಬ್ಬ. ಆವಾಗೆಲ್ಲ ಹುಟ್ಟುಹಬ್ಬ ಅಂದ್ರೆ ಹೊಸ ಡ್ರೆಸ್ಸು, ಸ್ವೀಟ್ ಹಂಚೋದು. ಆದ್ರೆ ಈಗ ಆ ಗೀಳು ಇಲ್ಲ. ಅಂದು ಹೊಸ ಚೂಡಿದಾರ ಹಾಕಿದ ನಾನು, ತಲೆತುಂಬಾ ಮಲ್ಲಿಗೆ ಮುಡಿದುಕೊಂಡಿದ್ದೆ. ಜೊತೆಗೆ ಸ್ವೀಟ್...ಲೈಬ್ರೆರಿಗೆ ಹೋಗಿ ಕನ್ನಡಪ್ರಭ ನೋಡಿದಾಗ ನನ್ನ 'ಸ್ನೇಹಿತರು ನಾವಾಗೋಣ' ಲೇಖನ ಪ್ರಕಟವಾಗಿತ್ತು. ಆ ದಿನ ನಂಗೊಂದು ರೀತಿಯಲ್ಲಿ ಹಬ್ಬ..ಆ ದಿನ ನನ್ನ ಹುಟ್ಟುಹಬ್ಬವೂ ಹೌದು! ಖುಷಿಯೋ ಖುಷಿ. ಆಮೇಲೆ ಎರಡು ವರ್ಷದಲ್ಲಿ ಅದೆಷ್ಟೋ ಲೇಖನಗಳು ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾದುವು. ಈಗಲೂ ನನ್ನ ಹುಟ್ಟುಹಬ್ಬ ಬಂದಾಗಲೆಲ್ಲಾ ಆ ಹಬ್ಬದ ದಿನ ನೆನಪಾಗುವುದುಂಟು.

Wednesday, July 30, 2008

'ಬೆಳಕಿನ ಪಾದ'ದ ಖುಷಿ ಖುಷಿ ಸಾಲುಗಳು

ಅದೇ 'ಬಾನಾಡಿ' ಬ್ಲಾಗ್ ನಿಮಗೆಲ್ಲ ಪರಿಚಯ ಅನಿಸುತ್ತೆ. ಬಾನಾಡಿ ಹೊಸ ಕವನಸಂಕಲನವೊಂದನ್ನು ಹೊರತಂದಿದ್ದಾರೆ. ಅದು ಅವರ ಮೊದಲ ಕವನಸಂಕಲನ. ಹೆಸರು 'ಬೆಳಕಿನ ಪಾದ'! ಮೊದಲೇ ಹೇಳುತ್ತೇನೆ..ನನಗೆ ಯಾವುದೇ ಕವನಸಂಕಲನ, ಬರಹಗಳನ್ನು ವಿಶ್ಲೇಷಸಲು ಬರುವುದಿಲ್ಲ. ಕವನದ ಸಾಲುಗಳನ್ನು ಹೇಳಿ ಇತರರ ಜೊತೆ ಹೇಳಿ ಖುಷಿಪಡಿಸಬಲ್ಲೆ..ನನ್ನೊಳಗೆಯೇ ಆಸ್ವಾದಿಸಬಲ್ಲೆ. ಓದುತ್ತಿದ್ದಂತೆ ನನ್ನೊಳಗಿನ ಭಾವಯಾನದಲ್ಲಿ ಪುಟ್ಟದೊಂದು ಪಯಣ ನನ್ನದಾಗಿಸಬಲ್ಲೆ. ಹೌದು! ಹೆಸರೇ ಹೇಳುವಂತೆ ಈ ಕವನಸಂಕಲದಲ್ಲಿ ಬೆಳಕಿಗೇ ಪ್ರಾಧಾನ್ಯತೆ. ಇಲ್ಲಿರುವ ಪ್ರತಿ ಕವನಗಳು ನಿಮ್ಮೊಳಗಿನ ಭಾವನೆಗಳೊಂದಿಗೆ ಮಾತಾಡಬಲ್ಲವು. ಅಮ್ಮನ ಅಪ್ಪುಗೆಯ ಅನುಭೂತಿ ನೀಡಬಲ್ಲವು. ಬದುಕು-ಬವಣೆ, ನೋವು-ನರಳಾಟ ಕವಿಯ ಮನದಾಳದಲ್ಲಿದ್ದ ನೋವಿನ ಪರಿಯನ್ನು ಕವಿತೆಗಳು ಪರಿಚಯಿಸದಿರವು. ಜೀವನದಾರಿಯಲ್ಲಿ ಬಗ್ಗಿ ನಡೆಯದೆ, ಎದ್ದು ನಡೆಯಬೇಕೆನ್ನುವ ಕವನಗಳು ನಮ್ಮ-ನಿಮ್ಮಂಥವರಿಗೆ ಸ್ಫೂರ್ತಿ ತುಂಬದೆ ಇರದು.
ಎದ್ದು ಹೋಗಿ ಗೆದ್ದು ಬರಬೇಕು
ಎದ್ದು ಹೋಗದಿದ್ದರೆ
ಗೆದ್ದಲಾಗುತ್ತೇವೆ!
ಹೌದು! ಗೆದ್ದಲಾಗುವ ಮೊದಲು ಎದ್ದು ನಿಲ್ಲಬೇಕು. ಪ್ರೀತಿ-ಪ್ರೇಮ ಹುಡುಗ-ಕನ್ಯೆ ಎಂದು ವರ್ಣಾತೀತವಾಗಿ ಬರೆಯುವ ಅದೆಷ್ಟೋ ಕವಿಗಳ ನಡುವೆ ಬೆಳಕಿನ ಜಾಡು ಹಿಡಿದು ಹೊರಟ 'ಬೆಳಕಿನ ಪಾದ' ಆಪ್ತವೆನಿಸುತ್ತದೆ. ನಮ್ಮೊಳಗೆಯೇ ನಿಲ್ಲುತ್ತದೆ. 'ಬೆಳಕಿನ ಪಾದ'ದಲ್ಲಿ ಬೆಳ-ಬೆಳಗುವ ಕೆಲವು ಕವನಗಳ ತುಣುಕುಗಳು ಇಲ್ಲಿವೆ.

ಆ ದಿಗಂತದಾಚೆ ಕಾಣುವ
ಹೊಸಬೆಳಕಿನ ಓ ಒಡೆಯ
ಸದಾ ಗಂಜಳದಲ್ಲಿ ಅದ್ದಿರುವ
ನನ್ನ ಕೈಗಳಿಂದ ನಿನ್ನ ಪಾದವನ್ನು
ಮುಟ್ಟಲೊಮ್ಮೆ ಬಿಡು-(ಬೆಳಕಿನ ಪಾದ)

ಸುಡಬೇಡ ನಿಟ್ಟುಸಿರಿನಲಿ
ನಿನ್ನೊಡಲ ಬೆಂಕಿಯನು
ತೆರೆದಿಡು ಮುಂಜಾನೆಯ ಮಂಜಿಗೆ
ಬೆಂಕಿಯಾರಿ ಉಳಿದ
ಬೂದಿಯೊಳಗಿನ ಕೆಂಡಗಳು ಸುಡಲಿ
ಆಡಲಾಗದ ಮಾತಿನೊಳಗಿನ ನೋವನು-(ಕತ್ತಲೆಯ ಬಾನಿನಲಿ)

ರಾತ್ರಿಯ ಸುಖ ನಿದ್ದೆಗೆ ಹಂಬಲಿಸುವ
ಮುಗ್ಧ ಎಳೆಕಂದನೇ
ಕಥೆಗಳಿಗೆ ಹಂಬಲಿಸಬೇಡ ನೀನು
ಅಪ್ಪ-ಅಮ್ಮನ ಮಧ್ಯ
ಎದ್ದಿದೆ ಯುದ್ಧ
ಅಜ್ಜ-ಅಜ್ಜಿಯರು ಇತಿಹಾಸ-(ಮಗುವಿಗೊಂದು ಕಥೆ ಹೇಳುವೆ)

ಸಂಜೆಯ ದೀಪಕ್ಕೆ ಬತ್ತಿಯಿಲ್ಲ, ಎಣ್ಣೆಯಿಲ್ಲ
ಗರ್ಭಗುಡಿಯ ಬೆಳಕು ಮಾತ್ರ-(ಸಂಜೆಯ ದೀಪ)

ತೆರೆದು ನೋಡುವ ಕಣ್ಣಿಗೆ
ತಿಂಗಳಿಗೊಂದೂ ಹುಣ್ಣಿಮೆಯಿಲ್ಲ
ಕತ್ತಲೊಳಗೆ ಎಲ್ಲವೂ
ಬೆಳಕೇ ಇಲ್ಲದೆ ಉರಿಯುವ ದೀಪದಂತೆ-(ಕ್ಷುದ್ರ ಮನಸ್ಸಿಗೆ)

ಬಿಡಿಸ ಹೊರಟಿರುವೆ ನಾನು ನನ್ನೊಳಗಿರುವ
ನಿನ್ನೊಳಗಿನ ಭಾವನೆಗಳ ಚಿತ್ರವನು
ಕೆಡಿಸಿ ಬಿಡಬೇಡ ಅದನು
ಸ್ರವಿಸಿ ಕಣ್ಣೊಳಗಿನ ತೇವವನು(ಬದುಕಿನ ಬಣ್ಣ)

ಹಣ್ಣು ಮಾರುವ ಹುಡುಗ
ಹೂವು ಮಾರುವ ಹುಡುಗಿ
ಗೊತ್ತಿಲ್ಲ ಅವರಿಗೆ
ಹೂವು ಕಾಯಿಯಾಗಿ ಹಣ್ಣಾಗುವುದು
ಹಣ್ಣಿನೊಳಗೆ ಬೀಜವಿರುವುದು
ಬೀಜ ಮತ್ತೆ ಗಿಡವಾಗುವುದು
ಗಿಡದಲ್ಲಿ ಹೂವಾಗುವುದು-(ಕನ್ಯಾಕುಮಾರಿ)

ಅರ್ಥವಾಗುವುದಿಲ್ಲ
ಆಗೊಮ್ಮೆ ಈಗೊಮ್ಮೆ
ಇಂಡಿಯಾಕ್ಕೆ ಬಂದಾಗ
ಇಲ್ಲಿನ ಫ್ಯಾಷನ್!
ಆತ್ಮಹತ್ಯೆ ಮಾಡಿಕೊಳ್ಳುವ ರೈತರು
ಅತ್ಯಾಚಾರಕ್ಕೊಳಗಾಗುವ ಬಾಲೆಯರು
ಪೊಲೀಸಿನೇಟಿಗೆ ಸಾಯುವ ಸಂತ್ರಸ್ತರು
ದಲಿತರೆಂದರೆ ಯಾರು?
ಹಳ್ಳಿಗಾಡಿನ ರಾಕ್ ಬ್ಯಾಂಡ್ ಗಳೇ?(ಅನುಭವ)
ಈ ಕವನಗಳನ್ನು ಓದಿ ನಿಮಗೇನಾದ್ರೂ ಅನಿಸಿದ್ರೆ ನನಗೂ ತಿಳಿಸಿಬಿಡಿ.

Friday, July 25, 2008

ಇದೆಲ್ಲ ಎಕ್ಸ್ ಕ್ಲೂಸಿವ್ ಸುದ್ದಿಗಳು ಕಣ್ರಿ..

ಅದೇ ನಿನ್ನೆ ಬಾಂಬು ಸ್ಪೋಟ..ಜತೆಗೆ ಜನರಷ್ಟೇ ಅಲ್ಲ, ಚಾನೆಲ್ಲುಗಳೂ ವದಂತಿಗಳನ್ನು ಸ್ಪೋಟಿಸುವುದರಲ್ಲಿ ನಿರತರಾಗಿದ್ದುದು ದುರದೃಷ್ಟ. ನಿನ್ನೆ ನಾನು ಮಧ್ಯಾಹ್ನ 1 ಗಂಟೆಗೇ ಆಫಿಸಿನಿಂದ ಮನೆಗೆ ತೆರಳಿದ್ದೆ. ಸ್ವಲ್ಪ ಜ್ವರವಿದ್ದುರದಿಂದ ಬೇಗನೇ ಮನೆಗೆ ಹೊರಟಿದ್ದೆ. ಮನೆಗೆ ತಲುಪುವಾಗಲೇ ಒಂದಷ್ಟು ಮೆಸೇಜ್ಗಳು ನನಗೆ ಬಾಂಬು ಸ್ಪೋಟದ ಬಗ್ಗೆ ತಿಳಿಸಿದ್ದವು. ಮತ್ತೆ ಟಿ.ವಿ. ನೋಡೋಣ ಅಂದ್ರೆ ಕೇಬಲ್ ಸಂಪರ್ಕವನ್ನೇ ಕಡಿತಗೊಳಿಸಲಾಗಿತ್ತು. ನಂತರ ಮೊಬೈಲು ಕೂಡ ಸ್ಥಗಿತ. ಅದರ್ಲಿ..ವಿಷ್ಯ ಅದಲ್ಲ, ಪ್ರತಿ ಚಾನೆಲ್ಲುಗಳು ತಾ ಮುಂದೆ-ತಾ ಮುಂದೆ ಎಂದು ಜಿದ್ದಿಗೆ ಬಿದ್ದವರಂತೆ ಸ್ಪೊಟದ ಕುರಿತು ಮಾಹಿತಿ ನೀಡುತ್ತಿದ್ದವು. ಎಲ್ಲವೂ ಎಕ್ಸ್ ಕ್ಲೂಸಿವ್! ಬೆಂಗಳೂರಿಗೆ ಬೆಂಗಳೂರೇ ಟಿ.ವಿ. ಮುಂದೆ ಕುಳಿತು ಸುದ್ದಿ ನೋಡುತ್ತಿದ್ದರು. ಇದು ಸಹಜ ಬಿಡಿ. ಆದ್ರೆ ನಾವು ಸರಿಯಾದ ಮಾಹಿತಿಯೇ ನೀಡಿದ್ದೇವೆಯೇ? ಎಂಬ ಕನಿಷ್ಠ ಪರಿಜ್ಞಾನ ಚಾನೆಲ್ಲುಗಳಿಗೆ ಬೇಡವೇ? ಕನ್ನಡದ ಚಾನೆಲ್ಲೊಂದು ನಿನ್ನೆ ಈ ಸ್ಪೋಟದ ಬಗ್ಗೆ ಎಕ್ಸ್ಕ್ಲೂಸಿವ್ ಸುದ್ದಿ ಹೊಡೆಯೋಕೆ ಶುರುಮಾಡಿದ್ದು ಇನ್ನು ಹೇಳಿದ್ದನ್ನೇ ಮತ್ತೆ ಮತ್ತೆ ಅಂದ್ರೆ ಜನರಿಗೆ ವಾಕರಿಕೆ ಬರೋ ರೀತಿ ಬಿತ್ತರಿಸ್ತಾ ಇದೆ. ಅಷ್ಟೇ ಅಲ್ಲ..ನಿನ್ನೆ ಮಡಿವಾಳದಲ್ಲಿ ಬಾಂಬು ಸ್ಪೋಟದಲ್ಲಿ ಸುಧಾ ಎಂಬಾಕೆ ಸಾವಿಗೀಡಾಗಿದ್ದರೂ, ಆ ಚಾನೆಲ್ನಲ್ಲಿ ಬಂದಿದ್ದು ಲಕ್ಷ್ಮಿ ಎಂಬಾಕೆ ಮೃತರು. ಅಷ್ಟೇ ಅಲ್ಲ, ಸ್ವಲ್ಪ ಹೊತ್ತಿನಲ್ಲಿ ಸುಧಾ ಎಂಬಾಕೆಯ ಸಾವು. ಒಟ್ಟು ಇಬ್ಬರ ಸಾವು. ನಮ್ಮನೆಯಲ್ಲೂ ಅದೇ ಚಾನೆಲ್ ನೋಡ್ತಾ ಇದ್ದೆ. ಒಟ್ಟಿನಲ್ಲಿ ಜನರಿಗೆ ಎಂಥ ಸುದ್ದಿ ನೀಡಬೇಕು ಎಂಬುದಕ್ಕಿಂತ ಏನಾದ್ರೂ ಆಗ್ಲಿ ಎಕ್ಸ್ ಕ್ಲೂಸಿವ್ ಆಗಿ ತೋರಿಸ್ಬೇಕು ಅನ್ನೋದೇ ಮಹಾಸಾಧನೆ ಅಂದುಕೊಂಡಂತಿತ್ತು ಆ ಚಾನೆಲ್ಲು. ನಮ್ಮೂರಿಂದಲೂ ಆ ಚಾನೆಲ್ ನೋಡಿ ಅಮ್ಮ, ತಮ್ಮ ಎಲ್ರರದು ಕಾಲ್. ಅದ್ರೆ ಆ ಚಾನೆಲ್ ಹೊರತುಪಡಿಸಿ, ಎಲ್ರೂ ಸರಿಯಾದ ಮಾಹಿತಿಯನ್ನೇ ನೀಡಿದ್ದವು.ಬಹುಶಃ ನೀವುಗಳೂ ಈ ಚಾನೆಲ್ಲನ್ನು ವೀಕ್ಷಿಸಿರಬಹುದು. ನಮ್ಮ ಸುದ್ದಿವಾಹಿನಿಗಳು ಎಷ್ಟು ನೀಚಮಟ್ಟಕ್ಕೆ ಇಳಿದಿವೆ ಎಂಬುದಕ್ಕೆ ಇದೊಂದು ನಿದರ್ಶನ. ಹೆಚ್ಚೆನೂ ಬರೆಯಲ್ಲ..ನೀವೇ ಹೇಳಿ.

Thursday, July 24, 2008

ಕನ್ನಡಪ್ರಭಕ್ಕೆ ನಾ ಅಭಾರಿ

22.07.2008 ರಂದು ಕನ್ನಡ ಪ್ರಭ ವೆಬ್ ಆವೃತ್ತಿಯಲ್ಲಿ ನಾನು ಬರೆದ ಅನುಭವ 'ಬದುಕಿನ ಪುಟಗಳಿಂದ' ಬರಹವನ್ನು ಪ್ರಕಟಿಸಲಾಗಿತ್ತು. ಒಂದಷ್ಟು ಗೆಳೆಯರು ಈ ಮೇಲ್, ಫೋನ್ ಮೂಲಕ ವಿಶ್ ಮಾಡಿದ್ರು. ಬ್ಲಾಗ್ ಬಗ್ಗೆ ಬೆಟ್ಟದಷ್ಟು ಕನಸುಗಳನ್ನಿಟ್ಟುಕೊಂಡು ಬ್ಲಾಗ್ ಆರಂಭಿಸಿದ್ದೆ. ಆದರೆ ಈ ಕೆಲ್ಸಗಳ ನಡುವೆ ಯಾಕೋ ಸರಿಯಾಗಿ update ಮಾಡಕ್ಕಾಗುತ್ತಿಲ್ಲ. ಕಳೆದ ನವೆಂಬರ್ನಲ್ಲಿ ನನ್ನ ಬ್ಲಾಗ್ ಹುಟ್ಟಿದ್ದು. ಫೆಬ್ರವರಿಯಲ್ಲಿ ನನ್ನ ಪ್ರೀತಿಯ ಶರಧಿ ಕೆಂಡಸಂಪಿಗೆಯಲ್ಲಿ ಹರಿದಿತ್ತು. ಇದೀಗ ಕನ್ನಡಪ್ರಭದಲ್ಲಿ ಶರಧಿಯ ಪಯಣ ಮುಂದುವರೆದಿತ್ತು. ಥ್ಯಾಂಕ್ಯೂ ಕನ್ನಡಪ್ರಭ.ಇದೇ ನನಗೆ ಪ್ರೋತ್ಸಾಹ..ಸ್ಪೂರ್ತಿ.

Friday, June 20, 2008

ಜೀವ ಉಳಿಬೇಕಾದ್ರೂ Influence ಬೇಕು?!

ಅದು ನಗರದ ಪ್ರತಿಷ್ಠಿತ ಆಸ್ಪತ್ರೆ. ರಾಜ್ಯದ ವಿವಿಧ ಭಾಗಗಳ ರೋಗಿಗಳ ಕೇಂದ್ರ. ಯಾರೇ ಕೇಳಿ ಈ ಆಸ್ಪತ್ರೆ ಬಗ್ಗೆ ಗೊತ್ತು..ಜನತೆಗೆ ಒಳ್ಳೆ ಅಭಿಪ್ರಾಯನೂ ಇದೆ. ಅದರ ನಿರ್ದೇಶಕರಂತೂ ಪದೇ ಪದೇ ಈ ಆಸ್ಪತ್ರೆ ಬಡವರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತೇವೆ, ಅದು ನೀಡುತ್ತೇವೆ ಇದು ನೀಡುತ್ತವೆ ಅಂತ ಪತ್ರಿಕಾಗೋಷ್ಠಿಯಲ್ಲಿ ಪುಂಖಾನುಪುಂಖವಾಗಿ ಬೊಬ್ಬಿಟ್ಟದ್ದೇ ಬಂತು. ನಾನು ಎರಡು ಸಲ ಪತ್ರಿಕಾಗೋಷ್ಠಿಗೆ ಹೋಗಿದ್ದೆ. ಆಸ್ಪತ್ರೆಯ ಹೆಸರು ಕೇಳಿದ್ರೆ ಮಹಾನ್ ದಾನಿಗಳು ಹಣ ಸುರೀತಾರೆ,ಹೊಗಳುತ್ತಾರೆ. ಒಟ್ಟಿನಲ್ಲಿ ಆ ಆಸ್ಪತ್ರೆಯ ಬಗ್ಗೆ ಒಳ್ಳೆ ಹೆಸರಿದೆ..
ಆದ್ರೆ ಮೊನ್ನೆ ಮೊನ್ನೆ ನನ್ನ ಫ್ರೆಂಡು ಒಬ್ಬರು ತಮ್ಮ ಅತ್ತೆಯ ಚಿಕಿತ್ಸೆಗೆಂದು ಮೈಸೂರಿಂದ ಬಂದಿದ್ದರು. ನಾನು ಸಹಜವೆಂಬಂತೆ ಕೇಳಿದ್ದೆ; ಹೇಗೆ ಬಡವ್ರು ಹೋಗ್ಬಹುದಾ? ಖರ್ಚು ಹೆಚ್ಚಾ?.ಅದ್ಕೆ ಅವ್ರು ಹೇಳಿದ್ದ ಉತ್ತರ ಹೇಗಿತ್ತು ಗೊತ್ತಾ? "ನಾವು (ಜೆಡಿಎಸ್ ನ ಪ್ರಮುಖ ಮುಖಂಡರ ಹೆಸರು ಹೇಳಿ) ಕಡೆಯಿಂದ ಬಂದವರು. ಹೌದಾ? ಅದ್ಕೂ influence ಬೇಕಾ? ಅಂದಾಗ "ಹೂಂ ಮತ್ತೆ, ಅದಿಲ್ಲದೆ ಯಾವುದೂ ಆಗಲ್ಲಮ್ಮ." ಅಂದ್ರು. ಅವರು ಹೇಳಿದ್ದನ್ನು ಕೇಳಿ ನಾನು ಆಸ್ಪತ್ರೆಯ ಒಳಹೊಕ್ಕೆ. ಐದಾರು ರೋಗಿಗಳನ್ನು ಮಾತಾಡಿಸಿದ್ದೆ. ಅವರೇನೂ ಬಡವರಲ್ಲ, ದುಡ್ಡನ್ನೇ ಹಾಸಿಗೆ ಮಾಡ್ಕೊಂಡವರು. ಆದ್ರೂ ಅವರಿಗೆ influence! ಬಡವರಿಗೆ ಅಲ್ಲಿನ ಡಾಕ್ಟರ್ ಗಳು ಹೇಳಿದ್ದೇ ಮದ್ದು..ಕೊಟ್ಟಿದ್ದೇ injection, ಹೇಳಿದಷ್ಟು ದುಡ್ಡು ಎನೀಸಿಕೊಡಬೇಕು..ಹಾಗಾಗಿ ಬಡವರು ಬಂದ್ರು ಸಾಲ ಮಾಡಿ, ಏನೇನೋ ಮಾಡಿ ಬರಬೇಕು. ಹಣವಿಲ್ಲಾಂದ್ರೆ ಅಲ್ಲಿಗೆ ಬರುವಂತಿಲ್ಲ. ಸಾಯುತ್ತಿರುವ ಜೀವವನ್ನು ಉಳಿಸಿಕೊಳ್ಲಲೂ ಸಾಧ್ಯವಿಲ್ಲ.
ಇದ್ಯಾಕಪ್ಪಾ ಬ್ಲಾಗಲ್ಲಿ ಬರೆದ್ಳು? ಇದು ಎಲ್ಲಾ ಕಡೆ ಆಗುತ್ತೆ ಅನ್ನಬಹುದು..ಅದರೆ ನನಗೇಕೋ ಆ ಆಸ್ಪತ್ರೆ ಮೇಲ್ನೋಟಕ್ಕೆ ಕಾಣುವ ಹಾಗೆ ಇಲ್ಲ ಅನಿಸುತ್ತೆ..ಹೌದು! ಈಗಿನ ಕಾಲದಲ್ಲಿ ಮನುಷ್ಯನ ಬದುಕೇ influence ಮೇಲೆ ನಿಂತಿದೆ. ಅನಿಸಲ್ವಾ?

ಖಂಡಿತಾ ಬರ್ತೀರಲ್ವಾ?

ಇದೊಂದು ಸಿನಿಮಾ. ಹೆಸರು 'ನಂಪ್ರೀತಿ'! ನಮ್ದೋ..ನಿಮ್ದೋ ಯಾರ ಪ್ರೀತಿನೋ ಗೊತ್ತಿಲ್ಲ. ಹೆಸರೇ 'ನಂಪ್ರೀತಿ'. ಸಬ್ ಟೈಟಲ್ 'ನಿರೀಕ್ಷೆ ಕೂಡದು'! ಹೀಗಿರುವಾಗ ಯಾವುದೇ ನಿರೀಕ್ಷೆಯಿಟ್ಟುಕೊಂಡು ಹೋಗಬೇಡಿ. ಕೇವಲ 20 ನಿಮಿಷದಲ್ಲೇ ಸಿನಿಮಾ ಮುಗಿದುಹೋಗುತ್ತೆ. ಕಥೆಯ ಕ್ಲೂ ಕೊಡಕ್ಕೂ ನನಗಾಗಲ್ಲ, ಏಕಂದ್ರೆ ನನಗೂ ಗೊತ್ತಿಲ್ಲ..ಯಾರೂ ಹೇಳಿಲ್ಲ. ಪ್ರದರ್ಶನಕ್ಕೆ ಮೊದ್ಲು ಕಥೆ ಹೇಳೋದು ಮೂರ್ಖತನ ಬಿಡಿ. ಇದೇ ಭಾನುವಾರ(22 ತಾರೀಕು) ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ 'ಸುಚಿತ್ರಾ ಫಿಲಂ ಸೊಸೈಟಿ'ಯಲ್ಲಿ ಶೋ ಇದೆ. ನೀವು ಬರಬಹುದು, ಮನೆಯವರೆಲ್ಲರನ್ನೂ ಕರೆಯಬಹುದು. ಕೇವಲ 20 ನಿಮಿಷ, ಟಿಕೇಟ್ ಗೆ ದುಡ್ಡು ಕೊಡಬೇಕಿಲ್ಲ..2.30 ಗಂಟೆ ಕತ್ತಲಲ್ಲಿ ಕುಳಿತು ಅಯ್ಯೋ ಟೈಮ್ ವೇಸ್ಟ್ ಅಂತ ಬೊಬ್ಬಿಡುವ ಅಗತ್ಯವಿಲ್ಲ. ಕೇವಲ 20 ನಿಮಿಷ..ಜೀವನದಲ್ಲಿ ಇಂಥ ಎಷ್ಟೋ 20 ನಿಮಿಷವನ್ನು ಕಳೆದುಕೊಂಡಿದ್ದೇವೆ..ವ್ಯಯಿಸಿದ್ದೇವೆ. ಹೀಗಿರುವಾಗ 'ನಂಪ್ರೀತಿ' ಗೋಸ್ಕರ 20 ನಿಮಿಷ ಮೀಸಲಿಟ್ಟರೆ ಅದು ವ್ಯರ್ಥವೆನಿಸದು.
ಹೇಳಕ್ಕೆ ಮರೆತೆ..ಇದರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಕವೀಶ್ ಶೃಂಗೇರಿ, ನಿರ್ಮಾಪಕ ಸಾಕ್ಷಿರಾಜ್, ನಾಯಕ ಕುಶಾಲ್ ರಾಘವೇಂದ್ರ, ನಾಯಕಿ ರಂಗಭೂಮಿ ಕಲಾವಿದೆ ನಿರ್ಮಾಲಾ. ಛಾಯಾಗ್ರಹಣ ಸುನೀಲ್ ಶಿವಮೊಗ್ಗ, ಸಂಗೀತ ಆನಂದ್ ಎನ್. ಕುಮಾರ್. ಇಲ್ಲಿ ಬರುವ ಎಲ್ಲಾ ಮುಖಗಳೂ ಹೊಸತು. ಈ ಪುಟ್ಟ ಸಿನಿಮಾಕ್ಕೆ ಬರೋಬ್ಬರಿ ದುಡ್ಡೇನು ಹಾಕಿಲ್ಲ. ಪ್ರಯತ್ನದ ಶ್ರಮವಿದೆ. ಭಾನುವಾರ ರಜಾ ಇದ್ದೇ ಇದೆ..ಬಿಡುವು ಮಾಡ್ಕೊಂಡು ಬನ್ನಿ. ಬರುತ್ತೀರಿ ತಾನೇ?
ಈ ಬಗ್ಗೆ ಇನ್ನೂ ಮಾಹಿತಿ ಬೇಕೇ?
ಸಾಕ್ಷಿರಾಜ್:9448171069
ರಾಘವೇಂದ್ರ: 9886683008