ಅದೇ 'ಬಾನಾಡಿ' ಬ್ಲಾಗ್ ನಿಮಗೆಲ್ಲ ಪರಿಚಯ ಅನಿಸುತ್ತೆ. ಬಾನಾಡಿ ಹೊಸ ಕವನಸಂಕಲನವೊಂದನ್ನು ಹೊರತಂದಿದ್ದಾರೆ. ಅದು ಅವರ ಮೊದಲ ಕವನಸಂಕಲನ. ಹೆಸರು 'ಬೆಳಕಿನ ಪಾದ'! ಮೊದಲೇ ಹೇಳುತ್ತೇನೆ..ನನಗೆ ಯಾವುದೇ ಕವನಸಂಕಲನ, ಬರಹಗಳನ್ನು ವಿಶ್ಲೇಷಸಲು ಬರುವುದಿಲ್ಲ. ಕವನದ ಸಾಲುಗಳನ್ನು ಹೇಳಿ ಇತರರ ಜೊತೆ ಹೇಳಿ ಖುಷಿಪಡಿಸಬಲ್ಲೆ..ನನ್ನೊಳಗೆಯೇ ಆಸ್ವಾದಿಸಬಲ್ಲೆ. ಓದುತ್ತಿದ್ದಂತೆ ನನ್ನೊಳಗಿನ ಭಾವಯಾನದಲ್ಲಿ ಪುಟ್ಟದೊಂದು ಪಯಣ ನನ್ನದಾಗಿಸಬಲ್ಲೆ. ಹೌದು! ಹೆಸರೇ ಹೇಳುವಂತೆ ಈ ಕವನಸಂಕಲದಲ್ಲಿ ಬೆಳಕಿಗೇ ಪ್ರಾಧಾನ್ಯತೆ. ಇಲ್ಲಿರುವ ಪ್ರತಿ ಕವನಗಳು ನಿಮ್ಮೊಳಗಿನ ಭಾವನೆಗಳೊಂದಿಗೆ ಮಾತಾಡಬಲ್ಲವು. ಅಮ್ಮನ ಅಪ್ಪುಗೆಯ ಅನುಭೂತಿ ನೀಡಬಲ್ಲವು. ಬದುಕು-ಬವಣೆ, ನೋವು-ನರಳಾಟ ಕವಿಯ ಮನದಾಳದಲ್ಲಿದ್ದ ನೋವಿನ ಪರಿಯನ್ನು ಕವಿತೆಗಳು ಪರಿಚಯಿಸದಿರವು. ಜೀವನದಾರಿಯಲ್ಲಿ ಬಗ್ಗಿ ನಡೆಯದೆ, ಎದ್ದು ನಡೆಯಬೇಕೆನ್ನುವ ಕವನಗಳು ನಮ್ಮ-ನಿಮ್ಮಂಥವರಿಗೆ ಸ್ಫೂರ್ತಿ ತುಂಬದೆ ಇರದು.
ಎದ್ದು ಹೋಗಿ ಗೆದ್ದು ಬರಬೇಕು
ಎದ್ದು ಹೋಗದಿದ್ದರೆ
ಗೆದ್ದಲಾಗುತ್ತೇವೆ!
ಹೌದು! ಗೆದ್ದಲಾಗುವ ಮೊದಲು ಎದ್ದು ನಿಲ್ಲಬೇಕು. ಪ್ರೀತಿ-ಪ್ರೇಮ ಹುಡುಗ-ಕನ್ಯೆ ಎಂದು ವರ್ಣಾತೀತವಾಗಿ ಬರೆಯುವ ಅದೆಷ್ಟೋ ಕವಿಗಳ ನಡುವೆ ಬೆಳಕಿನ ಜಾಡು ಹಿಡಿದು ಹೊರಟ 'ಬೆಳಕಿನ ಪಾದ' ಆಪ್ತವೆನಿಸುತ್ತದೆ. ನಮ್ಮೊಳಗೆಯೇ ನಿಲ್ಲುತ್ತದೆ. 'ಬೆಳಕಿನ ಪಾದ'ದಲ್ಲಿ ಬೆಳ-ಬೆಳಗುವ ಕೆಲವು ಕವನಗಳ ತುಣುಕುಗಳು ಇಲ್ಲಿವೆ.
ಆ ದಿಗಂತದಾಚೆ ಕಾಣುವ
ಹೊಸಬೆಳಕಿನ ಓ ಒಡೆಯ
ಸದಾ ಗಂಜಳದಲ್ಲಿ ಅದ್ದಿರುವ
ನನ್ನ ಕೈಗಳಿಂದ ನಿನ್ನ ಪಾದವನ್ನು
ಮುಟ್ಟಲೊಮ್ಮೆ ಬಿಡು-(ಬೆಳಕಿನ ಪಾದ)
ಸುಡಬೇಡ ನಿಟ್ಟುಸಿರಿನಲಿ
ನಿನ್ನೊಡಲ ಬೆಂಕಿಯನು
ತೆರೆದಿಡು ಮುಂಜಾನೆಯ ಮಂಜಿಗೆ
ಬೆಂಕಿಯಾರಿ ಉಳಿದ
ಬೂದಿಯೊಳಗಿನ ಕೆಂಡಗಳು ಸುಡಲಿ
ಆಡಲಾಗದ ಮಾತಿನೊಳಗಿನ ನೋವನು-(ಕತ್ತಲೆಯ ಬಾನಿನಲಿ)
ರಾತ್ರಿಯ ಸುಖ ನಿದ್ದೆಗೆ ಹಂಬಲಿಸುವ
ಮುಗ್ಧ ಎಳೆಕಂದನೇ
ಕಥೆಗಳಿಗೆ ಹಂಬಲಿಸಬೇಡ ನೀನು
ಅಪ್ಪ-ಅಮ್ಮನ ಮಧ್ಯ
ಎದ್ದಿದೆ ಯುದ್ಧ
ಅಜ್ಜ-ಅಜ್ಜಿಯರು ಇತಿಹಾಸ-(ಮಗುವಿಗೊಂದು ಕಥೆ ಹೇಳುವೆ)
ಸಂಜೆಯ ದೀಪಕ್ಕೆ ಬತ್ತಿಯಿಲ್ಲ, ಎಣ್ಣೆಯಿಲ್ಲ
ಗರ್ಭಗುಡಿಯ ಬೆಳಕು ಮಾತ್ರ-(ಸಂಜೆಯ ದೀಪ)
ತೆರೆದು ನೋಡುವ ಕಣ್ಣಿಗೆ
ತಿಂಗಳಿಗೊಂದೂ ಹುಣ್ಣಿಮೆಯಿಲ್ಲ
ಕತ್ತಲೊಳಗೆ ಎಲ್ಲವೂ
ಬೆಳಕೇ ಇಲ್ಲದೆ ಉರಿಯುವ ದೀಪದಂತೆ-(ಕ್ಷುದ್ರ ಮನಸ್ಸಿಗೆ)
ಬಿಡಿಸ ಹೊರಟಿರುವೆ ನಾನು ನನ್ನೊಳಗಿರುವ
ನಿನ್ನೊಳಗಿನ ಭಾವನೆಗಳ ಚಿತ್ರವನು
ಕೆಡಿಸಿ ಬಿಡಬೇಡ ಅದನು
ಸ್ರವಿಸಿ ಕಣ್ಣೊಳಗಿನ ತೇವವನು(ಬದುಕಿನ ಬಣ್ಣ)
ಹಣ್ಣು ಮಾರುವ ಹುಡುಗ
ಹೂವು ಮಾರುವ ಹುಡುಗಿ
ಗೊತ್ತಿಲ್ಲ ಅವರಿಗೆ
ಹೂವು ಕಾಯಿಯಾಗಿ ಹಣ್ಣಾಗುವುದು
ಹಣ್ಣಿನೊಳಗೆ ಬೀಜವಿರುವುದು
ಬೀಜ ಮತ್ತೆ ಗಿಡವಾಗುವುದು
ಗಿಡದಲ್ಲಿ ಹೂವಾಗುವುದು-(ಕನ್ಯಾಕುಮಾರಿ)
ಅರ್ಥವಾಗುವುದಿಲ್ಲ
ಆಗೊಮ್ಮೆ ಈಗೊಮ್ಮೆ
ಇಂಡಿಯಾಕ್ಕೆ ಬಂದಾಗ
ಇಲ್ಲಿನ ಫ್ಯಾಷನ್!
ಆತ್ಮಹತ್ಯೆ ಮಾಡಿಕೊಳ್ಳುವ ರೈತರು
ಅತ್ಯಾಚಾರಕ್ಕೊಳಗಾಗುವ ಬಾಲೆಯರು
ಪೊಲೀಸಿನೇಟಿಗೆ ಸಾಯುವ ಸಂತ್ರಸ್ತರು
ದಲಿತರೆಂದರೆ ಯಾರು?
ಹಳ್ಳಿಗಾಡಿನ ರಾಕ್ ಬ್ಯಾಂಡ್ ಗಳೇ?(ಅನುಭವ)
ಈ ಕವನಗಳನ್ನು ಓದಿ ನಿಮಗೇನಾದ್ರೂ ಅನಿಸಿದ್ರೆ ನನಗೂ ತಿಳಿಸಿಬಿಡಿ.
Wednesday, July 30, 2008
Subscribe to:
Post Comments (Atom)
1 comment:
ಇದು ನಿವು ಪತ್ರಕರ್ತರು ಮಾಡುವ ಬ್ರೇಕಿಂಗ್ ನ್ಯೂಸ್...
no more comments!
Post a Comment