Wednesday, August 6, 2008

ಅಭಿವೃದ್ಧಿಯೋ ಬರೇ ಘೋಷಣೆಯೋ?

ಇತ್ತೀಚೆಗೆ ಇಬ್ಬರು ಐಎಎಸ್ ಅಧಿಕಾರಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕುರಿತು ಹಗುರವಾಗಿ ಮಾತನಾಡಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಒಂದೆರಡು ದಿನಗಳು ಮಾತ್ರ, ಅಷ್ಟೇ ವೇಗವಾಗಿ ಸುದ್ದಿ ಮಾಧ್ಯಮಗಳಿಗೆ, ಜನರಿಗೆ ಮರೆತೇಬಿಟ್ಟಿದೆ. ಬಳಿಕ ಯಾವುದೇ ಪತ್ರಿಕೆಗಳಿಗೂ ಈ ಸುದ್ದಿ ಮಹತ್ವ ಎನಿಸಿಲ್ಲ. ಒಂದು ಪತ್ರಿಕೇಲಿ ಕೆಲ್ಸ ಮಾಡುತ್ತಿರುವ ನಾನು ಹೀಗೆಲ್ಲ ಹೇಳಬಾರದು ಎಂದನಿಸಬಹುದು, ಆದರೆ ಕನ್ನಡದ ಜನಸಾಮಾನ್ಯನ ಮಾತನ್ನು ನಾನಿಲ್ಲಿ ಹೇಳಬಯಸುತ್ತೇನೆ.

ನಾಡು-ನುಡಿಯ ವಿಚಾರ ಬಂದಾಗ ಕರ್ನಾಟಕದಲ್ಲಿರುವವರೆಲ್ಲ ಮಾಡುವುದು ಇದನ್ನೇ. ಮೊನ್ನೆ ಮೊನ್ನೆ ಕುಚೇಲನ್ ಸಿನಿಮಾ ಬಿಡುಗಡೆಯಾದಾಗ ರಜನಿಕಾಂತ್ ಕನ್ನಡದ ಜನತೆಯ ಕ್ಷಮೆ ಕೋರಿದ್ದಾರೆ. ಭಾಷೆ ವಿಚಾರ ಬಂದಾಗ ದಿನಕ್ಕೊಂದು ನುಡಿ, ಅಭಿಪ್ರಾಯಗಳು ಬದಲಾವಣೆಯಾಗುತ್ತಲೇ ಇರುತ್ತವೆ. ಐಎಎಸ್ ಅಧಿಕಾರಿಗಳು ಹಗುರ ಮಾತಾಡಿದ್ದರು ಅನ್ನೋದೇ ಸುದ್ದಿಯಾಯಿತು ವಿನಃ ಇದರಿಂದ ಅವರ ಮೇಲೇ ಏನೂ ಪರಿಣಾಮ ಆಗಲಿಲ್ಲ. ನಮ್ಮ ಜನಪ್ರತಿಧಿಗಳು ಕನ್ನಡ ಭಾಷೆ ವಿಚಾರ ಬಂದಾಗ, ಯಾರು ಕನ್ನಡವನ್ನು ಆಲಕ್ಷ ಮಾಡುತ್ತಾರೋ ಅಂಥವರನ್ನು ಕರ್ನಾಟಕದಲ್ಲಿ ಇರಲು ಬಿಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿಬಿಡುತ್ತಾರೆ. ಆದರೆ ಇದರಿಂದ ಮಣ್ಣಂಗಟ್ಟಿಯೂ ಆಗಲ್ಲ. ಈವರೆಗೆ ಆಗಿಲ್ಲ. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಕೂಡ, ಸರ್ಕಾರಕ್ಕೆ ಬರುವ ಕಡತಗಳು ಕನ್ನಡದಲ್ಲೇ ಇರದಿದ್ದರೆ ಅದನ್ನು ಮುಟ್ಟಿಯೂ ನೋಡಲ್ಲ ಅಂದಿದ್ದಾರೆ. ಆದರೆ ಎಷ್ಟರಮಟ್ಟಿಗೆ ಕಾರ್ಯಗತವಾಗಿದೆ? ಇತ್ತೀಚೆಗೆ ಇದೇ ಮುಖ್ಯಮಂತ್ರಿ ಚಂದ್ರು ಅವರು, ಕನ್ನಡದಲ್ಲಿ ನಾಮಫಲಕಗಳಿಲ್ಲದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗುವುದು ಅಥವಾ ಐದರಿಂದ ಹತ್ತು ಸಾವಿರ ದಂಡ ಎಂದು ಘೋಷಿಸಿಬಿಟ್ಟಿದ್ದಾರೆ ಈ ಹಿಂದೆ ಸಿದ್ದಲಿಂಗಯ್ಯ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ ಇಂಥದ್ದೇ ಘೋಷಣೆ ಮಾಡಿದ್ದರು. ಆದರೆ ಯಾವುದೇ ಫಲ ನೀಡಿಲ್ಲ. ಚಂದ್ರು ಅವರೂ ಹೀಗೇ ಹೇಳಿದ್ದಾರೆ. ಆದರೆ ಆಮೇಲೆ ಅದರ ಪತ್ತೆಯೇ ಇಲ್ಲ. ಕನ್ನಡದ ಬಗ್ಗೆ ಜನಪ್ರತಿನಿಧಿಗಳು ನೀಡಿರುವ ಪ್ರತಿ ಭರವಸೆಗಳು ಬರೇ ಭರವಸೆಗಳಾಗಿಯೇ ಉಳಿಯುತ್ತವೆ. ಅದಕ್ಕೇ ಐಎಎಸ್ ಅಧಿಕಾರಿಗಳಿರಲಿ, ಎಲ್ಲರೂ ಕನ್ನಡದ ಬಗ್ಗೆ ಉಡಾಫೆಯ ಮಾತುಗಳನ್ನಾಡುತ್ತಲೇ ಇದ್ದಾರೆ. ಅವರಿಗೆ ಬಿಸಿತಟ್ಟುವ ಕೆಲಸಗಳನ್ನು ಯಾವುದೇ ಸರ್ಕಾರ ಮಾಡಿಲ್ಲ.

ಬಹುಶಃ ನಾನು ಹೇಳಿರುವ ಇದೇ ಮಾತನ್ನು ಅದೆಷ್ಟೋ ವರ್ಷಗಳಿಂದ ಕನ್ನಡಿಗರು ಕೇಳುತ್ತಲೇ ಇರಬಹುದು..ಇದೆಲ್ಲಾ ಹಳೆಯ ವಿಚಾರ ಅಂದುಬಿಡಬಹುದು. ಆದರೆ ಯಾಕೋ ನನ್ನ ತೃಪ್ತಿಗೆ ನಾನು ಬರೆಯುತ್ತಿದ್ದೇನೆ ಅಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟೇ ಉನ್ನತ ಅಧಿಕಾರಿಯಾಗಿರಲಿ, ಕನ್ನಡದ ಬಗ್ಗೆ ಉಡಾಫೆಯ ಮಾತನ್ನಾಡಿದ್ದರೆ, ಅವರನ್ನು ದಂಡಿಸಬೇಕು. ಕನ್ನಡಕ್ಕಾಗಿಯೇ ಇರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಬಗ್ಗೆ ಅವಹೇಳನ ಮಾಡಿದ್ದವವರನ್ನು ದಂಡಿಸುವ ಅಧಿಕಾರ ಪಡೆಯಬೇಕು. ಸುಮ್ನೆ ಕನ್ನಡ ಕನ್ನಡ ಅಂತ ಬಡ್ಕೊಂಡ್ರೆ ಸಾಲದು. ಕನ್ನಡ ಸಾಹಿತ್ಯ ಪರಿಷತ್ ಗೆ ಹೋದರೆ, ಬರೇ ಕಚ್ಚಾಡುವ ಸಾಹಿತಿಗಳೇ ಕಾಣುತ್ತಾರೆ. ಪ್ರತಿಯೊಬ್ಬರೂ ತಾ ಮೇಲೂ-ನಾ ಮೇಲೂ ಎಂದು ಥೇಟ್ ವಿಧಾನಸೌಧದಲ್ಲಿ ನಡೆಯುವ ಕಲಾಪಗಳ ತರ. ಇದರಿಂದ ಪ್ರಯೋಜನವೂ ಆಗಲ್ಲ. ರಾಜ್ಯೋತ್ಸವ ದಿನದಂದು ಬೇಕಾಬಿಟ್ಟಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿದ್ದರೆ ಕನ್ನಡ ಉದ್ಧಾರ ಆಗಲ್ಲ ಎನ್ನುವುದನ್ನು ಸರ್ಕಾರವೂ ಮನಗಾನಬೇಕು. ಹೀಗಿದ್ದರೆ ಅನಾಥ ಮಗುವಿನಂತೆ ಅಳುವ ನಮ್ಮ ಕನ್ನಡವನ್ನು ರಕ್ಷಿಸಬಹುದೇನೋ?

No comments: