Thursday, August 7, 2008

ಮದುವೆ ಅನ್ನೋದು ಎಷ್ಟೊಂದು ಬದಲಾವಣೆ ತರುತ್ತೆ?

ಬೆಳಿಗ್ಗೆ ಆಫೀಸಿನಲ್ಲಿ ಬಂದು ಕುಳಿತಾಗ ಇದ್ದಕ್ಕಿದ್ದಂತೆ ಮಿಸ್ಡ್ ಕಾಲ್! ವಾಪಸ್ ಕರೆ ಮಾಡಿದ್ದೆ. ಮಮತಾ ನನ್ನ ಹಳೆಯ ಗೆಳತಿ. ಅದೂ ಒಂದು ವರ್ಷಗಳ ಬಳಿಕ ಅವಳ ಬಳಿ ಮಾತಿಗೆ ಶುರುಹಚ್ಚಿದೆ. ಅವಳನ್ನು ನೋಡದೆ ಮಾತ್ರ ಎರಡು-ಮೂರು ವರ್ಷಗಳೂ ಕಳೆದಿದ್ದವೆ. ನಾನು ಅವಳನ್ನು ನೋಡಿದಾಗ ನಿಶ್ಚಲ್ ಹುಟ್ಟಿ ಕೆಲವೇ ದಿನಗಳಾಗಿದ್ದವಷ್ಟೇ. ಈಗ ಮತ್ತೊಂದು ಪುಟ್ಟ ಮಗು ಮಡಿಲಲ್ಲಿದೆ. ನಾನು ಅವಳು ಪಿಯುಸಿಯಲ್ಲಿ ಒಂದೇ ಹಾಸ್ಟೇಲ್. ಉಜಿರೆಯ ಬಿಸಿಎಂ ಹಾಸ್ಟೇಲ್ ನಮಗೆ ಆ ಎರಡು ವರ್ಷ ಆಶ್ರಯ ಒದಗಿಸಿತ್ತು. ಬಹುಶಃ ಹಾಸ್ಟೇಲ್ ಅಂದ್ರೆ ಎಲ್ಲರೂ ಹಿಂಗೇ ಇರ್ತಾರೆ ಅನ್ನೋದು ಗೊತ್ತಿಲ್ಲ. ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯವಾಗಿದ್ದರೆ, ಅವಳದ್ದು ಕಲಾವಿಷಯ.

ನಮ್ಮ ಅಮ್ಮ -ಅವಳ ಅಮ್ಮ ಇಬ್ಬರು ಮಾತಾಡಿಕೊಂಡು ನಮ್ಮನ್ನು ಒಟ್ಟಿಗೆ ಒಂದೇ ಕಾಲೇಜಿಗೆ ಸೇರಿಸಿದ್ದರು. ಅಬ್ಬಬ್ಬಾ! ಇಬ್ಬರಿಗೂ ಹಾಸ್ಟೇಲ್ ಹೊಸದು. ಹಾಸ್ಟೇಲಿಗೆ ಹೋದ ಮೊದಲನೇ ದಿನ ಇಬ್ಬರೂ ಅಳುವುದನ್ನೇ ಕಾಯಕ ಮಾಡ್ಕೊಂಡು ಕ್ಲಾಸಿಗೆ ಚಕ್ಕರ್ ಹಾಕಿದ್ದೇವು. ನನ್ನ ಸರದಿ ಹಾಗೇ 5 ದಿನ ಮುಂದುವರೆದಿತ್ತು. ಪ್ರತಿ ದಿನ ನಮ್ಮಿಬ್ಬರದ್ದು ಪಕ್ಕಾ ಕೆಲ್ಸ ಅಳೋದು ಮಾತ್ರ. ಅದೂ ಎಲ್ಲರೆದುರು ಅಲ್ಲ, ಬಾತ್ ರೂಂಗೆ ಹೋಗಿ ಅಳೋದು. ನಮ್ಮ ಅಮ್ಮನವ್ರು ಎಂತಾ ನರಕಕ್ಕೆ ತಳ್ಳಿದ್ರು ನಮ್ಮನ್ನು ಅಂತ ಅಂದುಕೊಳ್ಳುತ್ತಿದ್ದೇವು. ಅಮ್ಮನವರನ್ನು ಹಿಗ್ಗಾ-ಮುಗ್ಗಾ ಬೈಯುತ್ತಿದ್ದೇವು.

ಒಂದು ರೀತೀಲಿ ಹಾಸ್ಟೇಲ್ ತೀರಾ ಹಿಂಸೆ ಆಗಿಹೋಗಿತ್ತು. ಬೆಳಿಗೆದ್ದು ಬಾತ್ ರೂಂಗೆ ಜಗಳ, ತಿಂಡಿಗೆ ಸಾಲಲ್ಲಿ ನಿಂತಾಗ ಜಗಳ, ಭಜನೆ ಮಾಡುವಾಗ ಜಗಳ, ಮಲಗುವಾಗ ಜಗಳ..ಇದನ್ನೆಲ್ಲ ಹಾಸ್ಟೇಲಲ್ಲಿ ಮಾತ್ರ ನೋಡಲು ಸಾಧ್ಯ. ಇದೆಲ್ಲ ನಮಗೆ ಹೊಸತು. ಈ ನಡುವೆ ನಾವಿಬ್ಬರೂ ಹೆಚ್ಚಾಗಿ ಜತೆಗೇ ಕಳೆಯುತ್ತಿದ್ದೇವು. ನಮಗೆ ಒಂದೇ ಬೆಡ್ ಶೀಟ್, ಒಂದೇ ಸೋಪು, ಒಂದೇ ಚಾಪೆ, ಒಂದೇ ಬಕೇಟ್..ಎಲ್ಲವೂ ನಮಗೊಂದೇ. ನಾವು ಯಾರ ಸುದ್ದಿಗೂ ಹೋಗದೆ ನಮ್ಮ ಪಾಡಿಗಿರುತ್ತಿದ್ದೇವು. ಬಾಯಿ ತೆಗೆದ್ರೆ ಯಾರಾದ್ರೂ ಬೈದುಬಿಟ್ಟರೆ ಅಂತ ಭಯ.

ಎರಡು ವರ್ಷ ಹೇಗೋ ಕಳೆದುಹೋಯಿತು. ಬಹುಶಃ ಯಾವುದೇ ರಜೆಯನ್ನು ಹಾಸ್ಟೇಲಿನಲ್ಲಿ ಕಳೆದಿಲ್ಲ. ಮನೆಗೆ ಬಂದುಬಿಡೋ ಚಾಳಿ. ಎರಡು ವರ್ಷ ಕಳೆದಿದ್ದೇ ತಡ, ಅವಳಿಗೆ ಮದುವೆನೂ ಆಯಿತು. ಆವಾಗ ನಾನು ಪ್ರಥಮ ಡಿಗ್ರಿ. ಅವಳ ಮದುವೆಯಲ್ಲಿ ನನ್ನದೇ ಉಸ್ತುವಾರಿ. ಎರಡು ವಾರ ಭರ್ಜರಿ ಚಕ್ಕರ್. ಅವಳ ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಅವಳ ಅಪ್ಪ-ಅಮ್ಮನ ಜೊತೆ ನಾನೇ ಇರ್ತಾ ಇದೆ. ಏಕೆಂದ್ರೆ ಅವಳು ಗಂಡನ ಮನೆಗೆ ಹೋದ ಮೇಲೆ ಮನೆನೇ ಬಿಕೋ ಅನ್ತಾ ಇತ್ತು. ಒಂದು ರೀತೀಲಿ ಅವಳ ಅಪ್ಪ-ಅಮ್ಮನಿಗೆ ನಾನೂ ಮಗಳು ಇದ್ದಂತೆ. ಮತ್ತೆರಡು ವರ್ಷ ಡಿಗ್ರಿ ಯಲ್ಲಿರುವಾಗ ನಾನು ಹೆಚ್ಚಾಗಿ ಅವರ ಮನೆಯಲ್ಲೇ ಇದ್ದೆ. ಈಗ್ಲೂ ಅಷ್ಟೇ ಉಪ್ಪಿನಂಗಡಿಯ ಆಂಟಿ-ಅಂಕಲ್ ಅಂದ್ರೆ ನನಗೆ ತುಂಬಾ ಇಷ್ಟ. ಅವರಿಗೂ ಅಷ್ಠೇ.

ಮಮತಾ ಮಾತಾಡಿದ್ದು ನನ್ನ ಮೊದಲಿನ ನೆನಪುಗಳನ್ನೆಲ್ಲಾ ಮತ್ತೊಮ್ಮೆ ನೆನೆಸಿಕೊಳ್ಳುವಂತಾಯಿತು. ಒಂದಷ್ಟು ಖುಷಿ ಖುಷಿ ಕ್ಷಣಗಳನ್ಮು ಅವಳೂ ಬಿಚ್ಚಿದ್ದಳು. ಆದರೆ ಅವಳ ಇಬ್ಬರೂ ಪುಟ್ಟ ಕಂದಮ್ಮಗಳು ಮೊಬೈಲ್ ಕೊಡು ಎಂದು ಅಮ್ಮನತ್ರ ಜಗಳ ಆಡುತ್ತಿದ್ದವು. ಅವಳು ಆಗಾಗ, ನಿಲ್ಲು ಚಿತ್ರಾ ಮಾತಾಡ್ತೀನಿ..ಇವ್ರದ್ದು ಯಾವಾಗ್ಲೂ ಹೀಗೇ ತಲೆಹರಟೆ,,ಅಂತೇಳಿ ಮಾತಾಡುತ್ತಿದ್ದಳು. ಹಾಸ್ಟೇಲಿನಲ್ಲಿರುವಾಗ ತುಂಟಿ-ತುಂಟಿಯಾಗಿದ್ದ ಮಮತಾನ ಮಾತಿನಲ್ಲಿ ಈಗ ಎಷ್ಟೋ ಬದಲಾವಣೆಯಾಗಿದೆ. ಮಾತು-ಮಾತಿಗೂ ಗಂಡ, ಅತ್ತೆ, ಮಾವ, ಮಕ್ಕಳು ಅನ್ತಾಳೆ. ಮಗೂನ ಫ್ಲೇ ಹೋಂ ಗೆ ಕಳಿಸ್ಬೇಕು ಅಂತಾಳೆ. ಜೊತೆಗೆ ನಮ್ಮನೆಯ ವಿಚಾರಗಳನ್ನೂ ಕೇಳಲು ಮರೆಯುತ್ತಿಲ್ಲ. ಜೀವನದಲ್ಲಿ ಒಂದೇ ಬಾರಿ ನಡೆಯುವ ಮದುವೆ ಅನ್ನೋದು ನಮ್ಮಲ್ಲಿ ಎಷ್ಟೆಲ್ಲ ಬದಲಾವಣೆ ಮಾಡಿಬಿಡುತ್ತೆ. ಎಷ್ಟೆಲ್ಲ ಜವಾಬ್ದಾರಿ ನೀಡುತ್ತೆ, ಬಾಲ್ಯದ ತುಂಟಾಟ, ಮಕ್ಕಳಾಟವನ್ನು ಮರೆತು ನಮ್ಮ ಮಕ್ಕಳಲ್ಲಿ 'ನಮ್ಮನ್ನು' ಕಾಣುತ್ತೇವೆ. ಸೃಷ್ಟಿ ವೈಚಿತ್ರ್ಯ ಅಲ್ಲವೇ? ಬಹುಶಃ ಮುಂದೆ ನನಗೆ ಮದುವೆಯಾದ್ರೂ ಹೀಗೇ ಇರಬಹುದೇನೋ ಅಲ್ಲವೇ?

6 comments:

Sushrutha Dodderi said...

"ಬಹುಶಃ ಮುಂದೆ ನನಗೆ ಮದುವೆಯಾದ್ರೂ ಹೀಗೇ ಇರಬಹುದೇನೋ ಅಲ್ಲವೇ?"

try madi nodi alla? ;)

ಚಿತ್ರಾಕರ್ಕೇರಾ, ದೋಳ್ಪಾಡಿ said...

ಪ್ರತಿಕ್ರಿಯೆಗೆ ಕೃತಜ್ಞತೆಗಳು..
ಖಂಡಿತಾ..tryಗಾಗಿ ಮದುವೆಯಾದಾಗ ನಿಮ್ಮನ್ನೂ ತಪ್ಪದೆ ಕರೆಯುತ್ತೇನೆ
ಪ್ರೀತಿಯಿಂದ,
ಚಿತ್ರಾ

ಮಾರುತಿ ಜಿ said...

Nimma nenapugalu Madhura

ಚಿತ್ರಾ ಸಂತೋಷ್ said...

Athmiya 'Marthi'.
nimma prathikriyege krathajnathegalu....heege agaga blogbuttige inukuthiri..
-Chitra

ವಿ.ರಾ.ಹೆ. said...

ಬಹುಶಃ ಮುಂದೆ ನನಗೆ ಮದುವೆಯಾದ್ರೂ ಹೀಗೇ ಇರಬಹುದೇನೋ ಅಲ್ಲವೇ?


ನಮ್ಮನ್ ಕೇಳಿದ್ರೆ ಹೆಂಗ್ ಗೊತ್ತಾಗತ್ತೆ. "ಇರಬಹುದು" ಅಂತೀವಿ ನಾವು ;-)

Unknown said...

ಮದುವೆ ವಿಚಾರದಲ್ಲಿ ಹೇಳೋದಾದ್ರೆ, ಯಾವುದಕ್ಕೂ ಒಮ್ಮೆ ಪ್ರಯತ್ನಿಸಿ ನೋಡುವುದೇ ಒಳಿತೇನೋ!

-ಜಿತೇಂದ್ರ