* ಸಿಎಂಗೆ ಎಂಗೇಜ್ ಮೆಂಟ್!
ಆಫೀಸಿಗೊಬ್ಬ ಬಾಸ್ ಇದ್ರೂ ಕೆಲವೊಮ್ಮೆ ಬಾಸ್ ನ ಪಿ.ಎ.ನೇ ಬಾಸ್ ಥರ ವರ್ತಿಸೋದುಂಟು ಅಥವಾ ಬಾಸ್ ಗಿಂತ ಎರಡು ಪಟ್ಟು ಹೆಚ್ಚೇ ಅಧಿಕ ಪ್ರಸಂಗ ತೋರಿಸುವುದುಂಟು. ಎಷ್ಟಾದ್ರೂ ಬಾಸ್ ನ ಪಿ.ಎ. ಅಲ್ವಾ? ಇತ್ತೀಚಗೆ ಅಂಥದ್ದೇ ಒಂದು ಅತಿ ಅಧಿಕ ಪ್ರಸಂಗದ ಘಟನೆ ನಡೆಯಿತು.
ನನಗೊಂದು ಚಾಳಿ..ಯಾರೇ ಸಚಿವರು ಅಥವಾ ಶಾಸಕರು ಅಥವಾ ಸರ್ಕಾರದ ಯಾರೇ ಅಧಿಕಾರಿಗಳಿರಲಿ..ಅವರ ಫೋನ್ ನಂಬರು ಬೇಕಾದ್ರೆ ಮೊದಲು ಸರ್ಕಾರದ ವೆಬ್ ಸೈಟ್ ನೋಡೋದು. ಅಲ್ಲಿ ಸಿಗದಿದ್ರೆ ಬಳಿಕ ಬೇರೇ ಪತ್ರಕರ್ತರ ಜೊತೆ ಕೆಳ್ತೀನಿ. ಒಂದು ದಿನ ನಮ್ಮ ಹಳೆ ಸಿಎಂ ಸಾಹೇಬ್ರಿಗೆ ಕಾಲ್ ಮಾಡಿದ್ದೆ. ಕಾಲ್ ಮಾಡಿದಾಗ ಫೋನು ಎತ್ತಿದ್ದು ಅವರ ಪಿ.ಎ. ಮಹಾಶಯ. ಕಂಡಾಪಟ್ಟೆ ಇಂಗ್ಲೀಷ್ ಮಾತಾಡ್ತಿದ್ದ. ನಾನೇನೋ ಕನ್ನಡದಲ್ಲೇ ಮಾತನಾಡಿದ್ದೆ. 'ಸಿಎಂ' ಗೆ ಇವತ್ತು ಯಾವುದಾದದರೂ ಎಂಗೇಜ್ ಮೆಂಟ್ಸ್ ಇದೆಯಾ?' ಅಂತ ಕೇಳಿದೆ. ಆತ ಫೋನೆತ್ತಿದೆ ತಡ, 'ಏನಮ್ಮಾ..ಸಿಎಂಗೆ ಎಂಗೇಜ್ ಮೆಂಟ್ಸ್? ಸಿಎಂ ಅನ್ನೋ ಪರಿಜ್ಞಾನ ಬೇಡ್ಬಾ? ಸಿಎಂಗೆ ಆವಾಗ್ಲೆ ಮದ್ವೆಯಾಗಿ..ದೊಡ್ಡ ದೊಡ್ಡ ಮಕ್ಳಿದ್ದಾರಮ್ಮಾ...'ಅಂತ ಏನೇನೋ ಬಡಬಡಸಿದ. ನಗು ಉಕ್ಕಿಬಂದು. 'ನೋಡಪ್ಪಾ..ಎಂಗೇಜ್ ಮೆಂಟ್ಸ್ ಅಂದ್ರೆ ಮದುವೆ, ನಿಶ್ಚಿತಾರ್ಥವಲ್ಲ. ಯಾವುದಾದರೂ ಪ್ರೋಗ್ರಾಂ ಇದೆಯಾ..ಅಂತ ಕೇಳ್ದೆ" ಎಂದೆ. ಮತ್ತೂ ಏನೋನೋ ಮಾತಾಡಕ್ಕೆ ಶುರುಮಾಡಿದ. ಆತನ ಮಾತಿಗೆ ಕೊನೆಹಾಡಲು, ಸರ್..ನಾನು ಚಿತ್ರಾ..ನಮ್ ಪತ್ರಿಕೆ ಹೆಸರ ಹೇಳ್ದೆ. ಆಗ ಮನುಷ್ಯ ಪುಲ್ ಚೇಂಜ್. 'ಮೇಡಂ..ನಾನು ...ನಾನು..ಯಾರೋ ಬೇರೆ ಅಂದುಕೊಂಡೆ. ತಮಾಷೆ ಮಾಡಿದ್ದೆ. ಕ್ಷಮಿಸಿ ಮೇಡಂ' ಅಂದು ಒಂದೇ ಉಸಿರಿಗೆ ಪ್ರೋಗ್ರಾಂ ಲಿಸ್ಟೇ ಹೇಳಿಬಿಟ್ಟ ಪಿ.ಎ..
* ಟಿಕೆಟ್, ಸೈಜ್ ಮೇಲೆ ಡಿಪೆಂಡ್ ಆಗುತ್ತಾ?
ಇತ್ತೀಚೆಗೆ ಬಿಎಂಟಿಸಿ ಬಸ್ಸುಗಳಲ್ಲಿ ಲೇಡಿ ಕಂಡಕ್ಡರ್ಗಳ ಸಂಖ್ಯೆ ಹೆಚ್ಚಾಗಿದೆ. ಒಂದು ರೀತೀಲಿ ಒಳ್ಳೆ ಬೆಳವಣಿಗೆ ಬಿಡಿ. ಮೊನ್ನೆ ವಿಧಾನಸೌಧದಿಂದ ಮೆಜೆಸ್ಟಿಕ್ ಬಸ್ಸು ಹತ್ತಿದೆ. ಆ ಬಸ್ಸಲ್ಲಿ ಲೇಡಿ ಕಂಡಕ್ಟರ್. ಆಕೆ ನೋಡಲೂ ತುಂಬಾ ಚೆನ್ನಾಗಿದ್ದಳು. ನನ್ನ ಜೊತೆಗೆ ಸುಮಾರು 60ರ ಆಸುಪಾಸಿನ ದಢೂತಿ ಹೆಂಗಸೊಬ್ಬರು ಬಸ್ಸು ಹತ್ತಿದ್ದರು. ಅವರೂ ಮೆಜೆಸ್ಟಿಕ್ಗೆ ಬರುವವರಿದ್ದರು. ಪಾಪ! ಅವರಲ್ಲಿ ಚಿಲ್ಲರೆ ಇಲ್ಲ...ನೂರು ನೋಟು ಕಂಡಕ್ಟರ್ ಕೈಗಿತ್ತಾಗ 'ಚೇಂಜ್ ಇಲ್ಲ..ಚೇಂಜ್ ಕೊಡಿ' ಅಂದ್ಳು ಕಂಡಕ್ಟರ್ ಹುಡುಗಿ. ಅದಕ್ಕೆ ಆ ಹೆಂಗಸು 'ನನ್ನತ್ರನೂ ಇಲ್ಲಮ್ಮ..ನೋಡು ಮೂರು ರೂ. ಇದೆ. ಅಂತೇಳಿ' ಕಂಡಕ್ಡರ್ ಕೈಗಿಡಲು ಮುಂದಾದರು. ಆವಾಗ ಅದೇನಾಯಿತೋ ಕಂಡಕ್ಟರ್ ಹುಡ್ಗಿ ಕೆಂಡಾಮಂಡಲವಾಗಿ 'ಚೇಂಜ್ ಮಾಡ್ಕೊಂಡು ಬಾ..ನಿನ್ ಸೈಜ್ ಗೆ ಮೂರು ರೂ. ಸಾಕಾ?" ಎನ್ನಬೇಕೆ?!! ಅಷ್ಟೇ ಅಲ್ಲ, ಬೈದು ಕೆ.ಆರ್. ಸರ್ಕಲ್ ಹತ್ರ ಆ ಹೆಂಗಸನ್ನು ಬಸ್ಸಿಂದಲೇ ಇಳಿಸಿಬಿಟ್ಳು. ತಕ್ಷಣ ಡ್ರೈವರ್ ನಗುತ್ತಾ , "ಏನಮ್ಮಾ ಟಿಕೆಟ್ ಸೈಜ್ ಮೇಲೆ ಡಿಫೆಂಡ್ ಆಗುತ್ತಾ?' ಎಂದಾಗ ಬಸ್ಸಿನಲ್ಲಿದ್ದವರೆಲ್ಲ ಗೊಳ್ಳನೆ ನಕ್ಕರು.
ತುಂಬಾ ಸಲ ನೋಡಿದ್ದೇನೆ..ಅದ್ಯಾಕೋ ಲೇಡಿ ಕಂಡಕ್ಟರ್ಗಳು ತಮ್ಮ ಕರ್ತವ್ಯದ ಮಿತಿಯನ್ನು ಮೀರಿ, ವಯಸ್ಸಾದವರೂ ಅನ್ನೋದನ್ನೂ ನೋಡದೆ ಅಸಂಬದ್ಧವಾಗಿ ಮಾತಾಡಿಬಿಡ್ತಾರೆ..ಅದೂ ಹೆಂಸರೆದುರು ಇನ್ನೂ ಎರಡು ಪಟ್ಟು ಹೆಚ್ಚೇ. ನನಗಾಗ 'ಹೆಣ್ಣಿಗೆ ಹೆಣ್ನೇ ಶತ್ರು' ಎನ್ನುವ ಮಾತು ನೆನಪಾಗದೆ ಇರಲಿಲ್ಲ!
Wednesday, August 27, 2008
Subscribe to:
Post Comments (Atom)
No comments:
Post a Comment