Thursday, March 27, 2008

ಹಾಕಿ ಸೋತಾಗ ಯಾರಿಗಾದ್ರೂ ಹಾರ್ಟ್ ಅಟ್ಯಾಕ್ ಆಯ್ತಾ?

ಮೊನ್ನೆ ಮೊನ್ನೆ ನಮ್ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿ ಬ್ರಿಟನ್ ತಂಡದೆದುರು ಸೋತು ಸುಣ್ಣವಾಗಿದೆ! ಆ ಸೋತು ಮಾಜಿ ಆಟಗಾರರು, ನಮ್ ದೇಶದ ಚಾನೆಲ್ಲುಗಳು, ಪತ್ರಿಕೆಗಳು ಒಂದಿಷ್ಟು ಬೈದು, ರೇಗಾಡಿ, ಕಣ್ಣೀರು ಹಾಕಿದ ಮೇಲೆ ನಾನು ನನ್ನ ಬ್ಲಾಗಲ್ಲಿ ಬರೆಯುತ್ತಿದ್ದೇನೆ. ಹೌದು! ಎಲ್ಲಾ ಪತ್ರಿಕೆಗಳು ಬರೆದಿದ್ದನ್ನು, ಚಾನೆಲ್ಲುಗಳಲ್ಲಿ ಬಂದಿದ್ದನ್ನು, ಮಾಜಿ ಆಟಗಾರರು ಅತ್ತು ಗೋಳಾಡಿದ್ದನ್ನು, ಸಿಟ್ಟಲ್ಲಿ ಕೋಚ್ ಗೆ ಉಪ್ಪು ಖಾರ ಬೆರೆಸಿ ಬೈದಿದನ್ನು ನೋಡಿದ ಮೇಲೆ ನನ್ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆಂದರೆ ಇದು ನಕಲು ಅಂತ ಭಾವಿಸಿದರೆ ಅದು ದೊಡ್ಡ ಅಪರಾಧವಾದೀತು ಅಂತ ನನ್ ಭಾವನೆ.

ಹೌದು! ಹಾಕಿ ಸೋತಿತ್ತು. ತಂಡದಲ್ಲಿಯೋ ಅಥವಾ ಕೋಚ್ ನಲ್ಲೋ ಯಾರಲ್ಲೋ ಏನೋ ಸ್ವಲ್ಪ ದೌರ್ಬಲ್ಯ. ಇದು ಸಹಜ. ಕೂಡ. ಎಲ್ಲಾ ಕಾಲದಲ್ಲಿಯೂ ನಾವು ಗೆಲ್ಲೇಬೇಕಂತಿಲ್ಲ, ಸೋಲೇ ಗೆಲುವಿನ ಸೋಪಾನ. ನಮ್ಮ ರಾಷ್ಟ್ರೀಯ ಕ್ರೀಡೆ ಒಲಿಂಪಿಕ್ ನಲ್ಲಿ ಭಾಗವಹಿಸಲು ಅರ್ಹತೆ ಕಳೆದುಕೊಂಡಿತ್ತು, ಅದು ಭಾರತಕ್ಕೆ ಅವಮಾನ ..ಅಂತ ಕೆಲವರು ಹೇಳಿದ್ರು. ಒಪ್ಪಿಕೊಳ್ಳೋಣ. ಆದ್ರೆ ಯಾರು ಈ ಬಗ್ಗೆ ಭಾರೀ ಪ್ರತಿಭಟನೆ ಮಾಡಿದ್ರು? ಸೋತ ಆಟಗಾರನ ಮನೆಯೆದುರು ಯಾರಾದ್ರೂ ಅವನ ಪ್ರತಿಕೃತಿ ಸುಟ್ರಾ? ಸೋತ ಆಟಗಾರನ ಮನೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ರಾ? ಸೋತ್ರೂ ಮುಂದಿನ ಸಲ ಗೆದ್ದು ಬನ್ನಿ ಅಂತ ಯಾರಾದ್ರೂ ಮುಂದೆ ಬಂದು ಹಾರೈಸಿದ್ರಾ? ನಾವ್ಯಾರಾದ್ರೂ ಈ ಬಗ್ಗೆ ಚಿಂತೆ ಮಾಡಿದ್ದೀವಾ? ಹಾಕಿ ಸೋತಿತು ಅಂತ ಯಾರಿಗಾದ್ರೂ ಹಾರ್ಟ್ ಅಟ್ಯಾಕ್ ಆಯಿತಾ? ನನ್ನ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ "ಇಲ್ಲ"!

ಕ್ರಿಕೆಟ್ ಸೋಲ್ತಾ ಇದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯುವ ತನಕವೂ ನಮ್ಮ ಅಭಿಮಾನ ಪ್ರೀತಿ ಬಂದಿರುತ್ತೆ. ಶರದ್ ಪವಾರ್ ಕೃಷಿಯನ್ನು ಬದಿಗಿಟ್ಟು, ಬ್ಯಾಟ್ ಹಿಡಿದು ಬೊಂಬಾಟ್ ಬಹುಮಾನ ಘೋಷಿಸಿಬಿಡ್ತಾರೆ. ಇದೆಲ್ಲ ಕ್ರಿಕೆಟ್ ನಲ್ಲಿ ಮಾತ್ರ ಹೀಗಾಗಲೂ ಸಾಧ್ಯ. ನಮ್ ಹಾಕೀನ ಯಾರು ಕೇಳ್ತಾರೆ? ಸೋತ ಆಟಗಾರರ ಬೆನ್ನು ಯಾರು ತಟ್ತಾರೆ.? ಅಂತೂ ಈ ಸೋಲಿನಿಂದ ಕೋಚ್ ರಾಜೀನಾಮೆ ನೀಡಬೇಕಾಯಿತು. ಕ್ರಿಕೆಟ್ ಅಂದ್ರೆ ಜನ ಹುಚ್ಚೆದ್ದು ಕುಣಿತಾರೆ, ಹಾಗೆಂದು ಕುಣಿಬಾರ್ದು ಅನ್ನಲ್ಲ. ನಮ್ಮ ಸಮಸ್ತ ದೇಶ ಕ್ರಿಕೆಟ್ ಬಿಟ್ರೆ ಇನ್ಯಾವ ಕ್ರೀಡೆಯನ್ನೂ ಪ್ರೋತ್ಸಾಹಿಸಲ್ಲ ಅನ್ನೋದಕ್ಕೆ ನಿದರ್ಶನವಷ್ಠೇ.

ನಮ್ಮ ದೇಶದಲ್ಲಿ ಕ್ರಿಕೆಟ್ ಬಿಟ್ರೆ ಇನ್ಯಾವ ಕ್ರೀಡೆಯೂ ಶೋಭಿಸುವುದಿಲ್ಲ, ಇದಕ್ಕೆ ಕಾರಣ ಪ್ರೋತ್ಸಾಹದ ಕೊರತೆ. ಜನ, ಸರ್ಕಾರ ಇತರೆ ಕ್ರೀಡೆಗಳನ್ನು ಪ್ರೋತ್ಸಾಹಿಸಲಿ. ಹಾಕಿಗೆ ಸ್ವಲ್ಪ ಜೀವ ಬಂದಿದ್ದು 'ಚಕ್ ದೇ ಇಂಡಿಯಾ' ತೆರೆ ಮೇಲೆ ಕಂಡ ಮೇಲೆ ಅನ್ತಾರೆ. ಆದರೆ ಅದ್ರಲ್ಲಿ ಹಾಕಿಗಿಂತ ಶಾರುಖ್ ಖಾನ್ ಗೆ ಪ್ರಚಾರದ ಲಾಭ ಸಿಕ್ಕಿದೆ ಅನ್ನೋದು ಎಲ್ರೂ ಅರಿಯಬೇಕಾದ ಸತ್ಯ. 'ಚಕ್ ದೇ ಇಂಡಿಯಾ' ನಿಜವಾಗಿಯೂ ಪ್ರಸ್ತುತ ದೇಶದಲ್ಲಿ ಹಾಕಿಯ ಪರಿಸ್ಥಿತಿಯನ್ನು ವಿವರಿಸಿದೆ. ಇಂದು ಕ್ರಿಕೆಟ್ ನಂತೆಯೇ ಎಲ್ಲಾ ಕ್ರೀಡೆಗಳಿಗೂ ಪ್ರೋತ್ಸಾಹ ಸಿಕ್ಕಿದರೆ ಖಂಡಿತ ಭಾರತ ಕ್ರೀಡಾರಂಗದಲ್ಲಿ ಸಾಧನೆಯ ಶೀಖರವೇರಲು ಸಾಧ್ಯ. ಇದಕ್ಕಿಂತ ಹಾಕಿ ಅನ್ನೋದು ನಮ್ಮ ರಾಷ್ಟ್ರೀಯ ಕ್ರೀಡೆ ಅನ್ನೋದು ನೆನಪಲ್ಲಿರಲಿ.

6 comments:

VENU VINOD said...

ಒಂದೋ ಎರಡೋ ಸೋಲಿಗೆ ಇಷ್ಟು ರಾದ್ಧಾಂತ ಬೇಕಿರಲಿಲ್ಲ.ಒಲಂಪಿಕ್ಸ್‌ಗೆ ಪ್ರವೇಶ ಪಡೆಯದ ಬೇಸರ ಬಹುಕಾಲ ಕಾಡುವುದು ನಿಜ. ಯುವಕರ ಸಮೂಹ ಕ್ರಿಕೆಟ್‌ನಲ್ಲಿ ಮಾಡಿದಂತೆ ಹಾಕಿಯಲ್ಲೂ ಮ್ಯಾಜಿಕ್ ಮಾಡುವ ಕಾಲವನ್ನು ನಿರೀಕ್ಷಿಸೋಣ

ಮಹೇಶ್ ಪುಚ್ಚಪ್ಪಾಡಿ said...

ಒಮ್ಮೊಮ್ಮೆ ಹಾಗಾಗುತ್ತೆ.ಈ ಸಮಾಜವೇ ಹಾಗಲ್ವೇ?

ನಿಮ್ಮೂರಿನವ...

ವಿ.ರಾ.ಹೆ. said...

ಎಲ್ಲದ್ದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಟೈಮ್ಸಾಫಿಂಡಿಯಾದ ’ಬ್ಯಾಂಗಲೋರ್ ಮಿರ್ರರ್’ ಪತ್ರಿಕೆಯು ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಸ್ಥಾನದಿಂದ ಕೆಳಗಿಳಿಸಿ ಅದರ ಜಾಗದಲ್ಲಿ ಕ್ರಿಕೆಟ್ ತರಬೇಕು ಎನ್ನುವಂತಹ ಲೇಖನವೊಂದನ್ನು ಪ್ರಕಟಿಸಿತ್ತು. ಇಂತಹ ಹೊಲಸು ಮಾಧ್ಯಮಗಳು ಇರುವೆಡೆ ಎಂತಹ ಪ್ರೋತ್ಸಾಹ ಅಪೇಕ್ಷಿಸಲು ಸಾಧ್ಯ !

ಸುಧೇಶ್ ಶೆಟ್ಟಿ said...

ವಿಷಯ ಗೊತ್ತಾದಾಗ ಮನಸಿಗೆ ತು೦ಬಾ ನೋವೆನಿಸಿತ್ತು. ವ್ಯವಸ್ಥೆಗಳು ಬದಲಾಗಬೇಕು ಅನ್ನುತ್ತೇವೆ. ಆದರೆ ವ್ಯವಸ್ಥೆ ಎಲ್ಲಿ೦ದ ಬದಲಾಗಬೇಕು? ನಮ್ಮಿ೦ದ ತಾನೇ? ನಮಗೋ ಕ್ರಿಕೆಟ್ ಹುಚ್ಚು. ಕ್ರಿಕೆಟ್ ಬಗ್ಗೆ ಮಾತನಾಡುವುದೇ ನಮಗೇ ಪ್ರತಿಷ್ಟೆಯೆನಿಸುತ್ತದೆ.
ಕ್ರಿಕೆಟಿಗರಿಗೆ ಇಲ್ಲಿ ಎಲ್ಲವೂ ಕೇಳದೇ ಸಿಗುತ್ತದೆ. ಆದರೆ ಇತರ ಆಟಗಾರರಿಗೆ? ಅವರೇ ಬಾಯಿಬಿಟ್ಟು ಸೌಲಭ್ಯ, ಸನ್ಮಾನಗಳನ್ನು ಕೇಳಬೇಕಾದ ಪರಿಸ್ಥಿತಿ!

ಹೆಸರು ರಾಜೇಶ್, said...

hovu re tumba bejaragutte
geleya
rajesh

ದೀಪಸ್ಮಿತಾ said...

ನಿಜ ಕ್ರಿಕೆಟಿಗಿರುವಷ್ಟು ಅಭಿಮಾನ, ಪ್ರಚಾರ ಬೇರೆ ಕ್ರೀಡೆಗಳಿಗಿಲ್ಲ. ಮಾಧ್ಯಮಗಳೂ ಕ್ರಿಕೆಟ್‍ಗೆ ಅತಿಯಾದ ಪ್ರಚಾರ ಮಾಡಿ, ಅದೊಂದೆ ಆಟ ಎನ್ನುವಂತೆ ಬಿಂಬಿಸುತ್ತವೆ. ನಾನೊಬ್ಬ ಹೊಸ ಬ್ಲಾಗಿಗ, ನನ್ನದು http://www.ini-dani.blogspot.com/. ದಯವಿಟ್ಟು ಓದಿ ವಿಮರ್ಶಿಸಿ.