Wednesday, March 26, 2008

ಬ್ಯುಸಿ ಬ್ಯುಸಿಯಾದ ನಿತ್ಯ ಬದುಕು

ತುಂಬಾ ದಿನಗಳಾಯ್ತು. ದಿನ ಬರೀಬೇಕು ಅಂತ ಬ್ಲಾಗ್ ಶುರುಮಾಡಿದ್ದೆ. ನನ್ನ ಭಾವನೆಗಳು, ಕನಸುಗಳು, ಮನದ ಬರೆವಣಿಗೆಯ ತುಡಿತಕ್ಕೆ ಬ್ಲಾಗ್ ವೇದಿಕೆಯಾಗಬೇಕೆಂದು ಬರೆದೆ. ಆದ್ರೆ ಈಗ ದಿನವಿರಲಿ, ವಾರ ಕಳೆದು ತಿಂಗಳೂ ಹತ್ತಿರ ಬಂದ್ರೂ ಬರೆಯಕ್ಕಾಗಲ್ಲ. ಏನೇನೋ ಕೆಲಸ, ಮನಸ್ಸು ಗೊಂದಲದ ಬೀಡು..ಸಮಯವಿಲ್ಲ ಅನಿಸುತ್ತೆ.

ಇವತ್ತು ಬೆಳಿಗೆದ್ದಾಗ ಅಮ್ಮನ ಫೋನು. ಮುದ್ದಿನ ಮಗಳು ಜಾಸ್ತಿ ನಿದ್ದೆಮಾಡಬಾರದೇನೆಂದೋ ಪೋನು ಮಾಡಿದ್ದು ಸರಿಯಾಗಿ ಆರು ಗಂಟೆ. ಆಗ ನಾನಿನ್ನೂ ಮುಂಜಾವಿನ ಅರೆನಿದ್ದೆಯಲ್ಲಿದ್ದೆ. ಅದೇನೋ ಬೆಂಗಳೂರಿನಲ್ಲಿ ಮಳೆ..ಅಂತಾರೆ ಅಕಾಲಿಕ ಮಳೆ. ಸದ್ದುಗದ್ದಲ್ಲ ವಿಲ್ಲದೆ ಒಮ್ಮಗೆ ಸುರಿಯುವ ಮುಂಗಾರು ಮಳೇ. ನಿನ್ನೆ ರಾತ್ರಿ ಆಫೀಸಿನಿಂದ ಹೋಗುವಾಗಲೂ ತಡವಾಗಿದ್ದರಿಂದ, ಟ್ರಾಫಿಕ್ ನಡುವೆ ಮನೆಗೆ ತಲುಪುವಾಗ ಇನ್ನೂ ತಡವಾಗಿತ್ತು. ಮಳೆಯಲ್ಲಿ ನೆನೆದು, ತಲೆಯೆಲ್ಲಾ ಭಾರವಾಗಿ ಮನೆ ತಲುಪಿದ್ದೆ. ಊಟ ಮಾಡಿದ್ದೇ ತಡ, ನಿದ್ದೇಯೇ ನಿದ್ದೆ. ಹಾಗೆ ಅಮ್ಮನ ಫೋನು ಬರುವಾಗ ಬೆಚ್ಚಗೆ ನಿದ್ದೆ ಮಾಡಿದ್ದೆ. ಅಣ್ಣ ಗದರಿಸಿ, ತಕೋ ಅಮ್ಮನ ಪೋನು ಅಂದಾಗ ಅತ್ತಲಿಂದ ಅಮ್ಮ "ಎಷ್ಟು ಹೊತ್ತಿಗೆ ನಾನು ಫೋನು ಮಾಡಿದ್ರೂ ಬ್ಯುಸಿ, ಬ್ಯುಸಿ ಅಂತೀಯಾ, ಏಳೇ ಬೇಗ. ಸಮಯ ತಾನಾಗಿ ಬರಲ್ಲ, ನಾವು ಮಾಡ್ಕೋಬೇಕು. ನೋಡು ನಾನು ಎದ್ದು ಎಲ್ಲಾ ಕೆಲ್ಸ ಮುಗಿಸಿ, ಸೊಪ್ಪಿಗೆ ಹೋಗ್ತಾ ಇದ್ದೀನಿ. ಅದೇನು ಮಾಡ್ತಿಯೋ? ಅದೇಂಗೆ ಆರೋಗ್ಯನೋ" ಅಂದ್ರು. ಅಮ್ಮ ಬೈದ್ರೂ, ಅದ್ರೊಳಗೆ ಸಿಹಿ ಇದ್ದೇ ಇರುತ್ತೆ ಅಲ್ವಾ? ಅವರಿಗೆ ರೇಗದೆ ಅಣ್ಣನ ಜೊತೆ ರೇಗಾಡಿದೆ.
ನಂಗನಿಸೋದು ನಾವು ಕೆಲ್ಸ ಇಲ್ಲಾಂದ್ರು ಎಷ್ಟು ಬ್ಯುಸಿಯಾಗಿರ್ತೀವಿ ಅಂತ. ನಾನು ಬೆಳಿಗ್ಗೆ ಏಳೂವರೆಗೆ ಆಫೀಸಿಗೆ ಮನೆಯಿಂದ ಹೊರಟರೆ, ಸಂಜೆ ಮನೆಗೆ ತಲುಪುವಾಗ ಎಂಟು ಕಳೆದಿರುತ್ತೆ. ಆಮೇಲೆ ಸ್ನಾನ ಮಾಡಬೇಕು, ಆಡುಗೆ ಆಗಿಲ್ಲಾಂದ್ರೆ ಅಡುಗೆ ಆಗಬೇಕು, ಊಟ ಮಾಡಬೇಕು.. ಇಷ್ಟೆಲ್ಲ ಆಗುವಾಗ ಗಂಟೆ ಹತ್ತು ದಾಟಿರುತ್ತೆ. ಅದೇನೋ ಬೆಂಗಳೂರಂತನೋ ಸಮಯವನ್ನೇ ಹೊದ್ದು ಮಲಗಿದ್ರೂ ಇಲ್ಲಿ ಸಮಯವಿರಲ್ಲ ಅಂತಾನೇ ಅನಿಸುತ್ತೆ. ಅದೇನಪ್ಪಾ ಅದೊಂತರಾ ಯಂತ್ರವಾಗಿಬಿಡ್ತೀವಿ. ಕೆಲ್ಸ..ಕೆಲ್ಸ..ಕೆಲ್ಸ ..ನಿದ್ದೆಗೂ ಟೈಮಿಲ್ಲ. ಇದು ಬೆಂಗಳೂರು ಲೈಫ್ ಅಲ್ವಾ?

ನಮ್ಮಮ್ಮ ಅದೆಷ್ಟೋ ಚೆನ್ನಾಗಿ ಬೆಳೆಸ್ತಾರೆ..ನಮ್ ಬೆಟ್ಟದಷ್ಟು ಕನಸುಗಳನ್ನು ಕಾಣ್ತಾರೆ..ಆದ್ರೆ ಅವರು ಪ್ರೀತಿಯಿಂದ ಫೋನು ಮಾಡುವಾಗ ಅಮ್ಮ ಬ್ಯುಸಿ ಅಂದು ಪೋನು ಕಟ್ ಮಾಡಿದ್ನಲ್ಲಾ ಅಂತ ತುಂಬಾ ಸಲ ನೊಂದುಕೊಂಡೆ. ಇದು ನಾನು ಮಾತ್ರವಲ್ಲ, ಎಷ್ಟೋ ಮಕ್ಕಳು ಹಿಂಗೆ ಮಾಡ್ತಾರೆ. ಆದ್ರೆ ಅಮ್ಮಂಗೆ ಆ ಪ್ರೀತಿ ಹೆಚ್ಚಾಗುತ್ತೆ ಹೊರತು, ಕಡಿಮೆಯಾಗಲ್ಲ. ಅಮ್ಮ ಏನಾದ್ರೂ ಕೇಳಿದ್ರೆ 'ನಿಂಗದು ಅರ್ಥವಾಗಲ್ಲ, ಸುಮ್ಮಿರು' ಅಂತೀವಿ. ಆದ್ರೆ ಬದುಕಿನ ಅರ್ಥವನ್ನು ತಿಳಿಸಿಕೊಟ್ಟ, ಬದುಕನ್ನೇ ಧಾರೆಯೆರೆದ ಅಮ್ಮನಿಗೆ ನಾವು ಹೇಳಿದ್ದು, ಮಾಡಿದ್ದು ಖಂಡಿತ ಅರ್ಥವಾಗುತ್ತೆ ಅಲ್ವಾ? ನಾನು ತುಂಬಾ ಸಲ ಅಮ್ಮನ ಜೊತೆ ರೇಗಿ, ಆಮೇಲೆ ಪಶ್ಚಾತ್ತಾಪ ಪಟ್ಟಿದ್ದೀನಿ. ದಿನಸರಿದಂತೆ ಬದುಕಿನ ಪಯಣದಲ್ಲಿ ನಮಗರಿವಿಲ್ಲದಂತೆ ನಾವೆಷ್ಟು ಬ್ಯುಸಿಯಾಗಿಬಿಡ್ತೀವಿ ಅಲ್ಲಾ?

2 comments:

ಅಮರ said...

ಅಮ್ಮನ ಪ್ರೀತಿ ಅನ್ನೊದು ಸೇಫ್ ಡೆಪಾಸಿಟ್ ನಲ್ಲಿ ಇಟ್ಟ ದುಡ್ಡಿನ ಥರ ಸೇಫ್ ಅಂತ ಅನ್ಕೊಂಡು ಬಿಡ್ತಿವಿ .... ಯಾಕಂದ್ರೆ ನಾವು ಎಷ್ಟೆ ಮುನಿಸಿಕೊಂಡರು ಅವಳು ಮತ್ತೆ ಪ್ರೀತಿಸುತ್ತಾಳೆ ಅನ್ನೊ ಗ್ಯಾರಂಟಿ .... ಅದೆ ನಮ್ಮ ಗೆಳೆಯ ಗೆಳತಿಯರ ಜೊತೆ ಹಾಗೆ ವರ್ತಸ್ತಿವಾ.... ಇಲ್ಲ. ಇವತ್ತು ಅಮ್ಮನ ಜೊತೆ ಮಾತಾಡಿ .... ಕಡೆವರೆಗೂ ಆ ಪ್ರೀತಿಸುವ ಜೀವ ನೆಮ್ಮದಿಯಿಂದಿರಲಿ.

-ಅಮರ

ಸುಧೇಶ್ ಶೆಟ್ಟಿ said...

ನಾನು ಎಷ್ಟೋ ಸಲ ಹೀಗೆ ಮಾಡಿದ್ದೇನೆ. ಕೆಲವು ಸಲ ನನ್ನ ಬಗ್ಗೆ ನನಗೆ ಬೇಸರ ಎನಿಸುತ್ತದೆ. ಈಗೀಗ ಬದಲಾಗಲು ಪ್ರಯತ್ನಿಸುತ್ತಿದ್ದೇನೆ. ಅಮ್ಮ ಮಿಸ್ಡ್ ಕಾಲ್ ಕೊಟ್ಟು ನೆನೆಪು ಮಾಡುವ ಮೊದಲೇ ನಾನೇ ಕಾಲ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದನ್ನೇ ನನ್ನ ತ೦ಗಿಗೂ ಅನ್ವಯಿಸುವ೦ತೆ ಪ್ರಯತ್ನಿಸುತ್ತಿದ್ದೇನೆ.
ಹೌದು…ಈ ಬೆ೦ಗಳೂರಿನಲ್ಲಿ ಸಮಯವೇ ಸಾಕಾಗುವುದಿಲ್ಲ. ಊರಿನಲ್ಲಿದ್ದರೆ, ಏನೆಲ್ಲಾ ಹವ್ಯಾಸಗಳು, ಅಭಿರುಚಿಗಳು ಇದ್ದವೋ, ಅವುಗಳೆಲ್ಲಾ ಇಲ್ಲಿಗೆ ಬ೦ದ ಮೇಲೆ ಮೂಲೆ ಸೇರುತ್ತವೆ. ನನ್ನೊ೦ದಿಗೆ ನಾನು ಸ್ವಲ್ಪ ಸಮಯ ಕಳೆಯಬೇಕೆ೦ದೇ ಈ ಬ್ಲಾಗ್ ಲೋಕಕ್ಕೆ ಬ೦ದಿದ್ದು. ನಿಮ್ಮ ಬರಹ ತೀರಾ ಪ್ರಸ್ತುತವಾಗಿತ್ತು.