Thursday, March 6, 2008

ನಿದ್ದೆಗೆಡಿಸಿದ 'ಶಿವರಾತ್ರಿ'

ಹೌದು. ನಿನ್ನೆ ಶಿವರಾತ್ರಿ. ಮನೇಲಿ ದೀಪ ಹಚ್ಚಿ ಪೂಜೆ ಮಾಡುವಷ್ಟು ಸಮಯ ನಂಗಿರಲಿಲ್ಲ. ಬೆಳಿಗ್ಗೆ ಏಳೂವರೆ ಆಫೀಸಿಗೆ ಬಂದವಳು ರಾತ್ರಿ 10 ಗಂಟೆಗೆ ಮನೆಗೆ ತಲುಪಿದ್ದೆ. ನನ್ ತಮ್ಮನಿಗೆ ರಜೆ ಆಗಿದ್ದರಿಂದ ದೇವರ ಪೊಟೋಗಳಿಗೆ ಹೂವು ಹಾಕಿ ಪೂಜೆ ಮಾಡಿ..ಮನೆಯೇ ಘಮ್ ಅಂತ ಪರಿಮಳ ಬರ್ತಾ ಇತ್ತು. ಮನೆ ಪಕ್ಕದ ದೇವಾಲಯವೊಂದರಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಕ್ಯೂ ನಿಂತು ಪ್ರಸಾದವೂ ತೆಗೆದುಕೊಂಡು ಬಂದಿದ್ದ. ಇಷ್ಟೆಲ್ಲಾ ಮಾಡಿ ಪಾಯಸನೂ ಮಾಡಿಟ್ಟಿದ್ದ ಮಹರಾಯ. ನಾನು ಮನೆಗೆ ಹೋಗಿದ್ದೆ ತಡ 'ಅಕ್ಕ ಇವತ್ತು ನೀನು ಪೂಜೆ ಮಾಡಬೇಕು. ಪಕ್ಕದ ಮನೆ ಆಂಟಿ ಭಾರೀ ಗ್ರ್ಯಾಂಡಾಗಿಯೇ ಪೂಜೆ ಮಾಜೆ ಮಾಡಿದ್ದಾರೆ. ನೀನೂ ಮಾಡ್ಬೇಕು' ಅಂದಾಗ ನನಗೆ ಸಿಟ್ಟು ನೆತ್ತಿಗೇರಿತ್ತು. ಮನೆಗೆ ತಲುಪುವಾಗಲೇ ಗಂಟೆ 10, ಇನ್ನು ಪೂಜೆ-ಪುರಸ್ಕಾರಗಳಿಗೆ ಸಮಯವೆಲ್ಲಿಂದ? ಅಂದು ಸ್ನಾನಕ್ಕೆ ಹೋಗಿ ಅವನ ಸಮಾಧಾನಕ್ಕೆ ದೀಪ ಹಚ್ಚಿ ಕೈಮುಗಿದೆ. ಎಲ್ಲಾ ಮುಗೀತು. ಊಟ ಮಾಡಿಯೂ ಆಯಿತು.

ಅಷ್ಟೊತ್ತಿಗೆ ಪಕ್ಕದ್ಮನೆ ಆಂಟಿ ಮಗ ಬಂದು, ನಾನು ಜಾಗರಣೆ ಮಾಡ್ತೀವಿ ಆಂಟಿ..ನೀವೂ ಬನ್ನಿ ಅನ್ಬೇಕೆ?ಅವನ ಮೇಲೆಯೇ ರೇಗಿಬಿಟ್ಟೆ. ಯಾಕಂದ್ರೆ ಸಂಜೆ ಆಫಿಸಿನಿಂದ ಹೊರಟಾಗ ಗಂಟೆ 8 ಆಗಿದ್ದರೂ, ಟ್ರಾಫಿಕ್ ಜಾಮ್ ಮುಗಿಸಿ ಹೋಗಕೆ 2 ಗಂಟೆ ಬೇಕಾಯಿತು. ಟ್ರಾಫಿಕ್ನಲ್ಲಿ ಸಿಕ್ಕಹಾಕೊಂಡ್ರೆ ..ಬಸ್ಸಿಂದಿಳಿದು ಅಟೋ ಹಿಡಿದು ಒಳದಾರಿ ಮೂಲಕ ಮನೆಗೆ ಹೋಗುತ್ತೇನೆ. ಬಸ್ಸಲ್ಲಿ ನಿಂತುಕೊಂಡು ಹೋಗುವಷ್ಟು ಸಹನೆ ನಂಗಿಲ್ಲ. ಮೊನ್ನೆ ಅಟೋನು ಸಿಗದೆ ಪರದಾಡಿದ್ದೆ.

ನಾವು ಊಟ ಮಾಡಿ ಮಲಗಿದೆವು. ನಮ್ ಪಕ್ಕದಮನೆವರೆಲ್ಲ ಜಾಗರಣೆಗೆ ಸಿದ್ದವಾಗುತ್ತಿದ್ದರು. ತಮಾಷೆಯೆಂದರೆ ಅವರ ಜಾಗರಣೆ ಜೊತೆಗೆ ನಮಗೂ ನಿದ್ದೆ ಇಲ್ಲದಂತೆ ಮಾಡಿದ್ದರು. ರಾತ್ರಿ 10 ಗಂಟೆಗೆ ಜಾಗರಣೆಗೆಂದು ಹೊರಗಡೆ ಕೂತು, ಪಟ್ಟಾಂಗ ಆಡೋಕೆ ಶುರು ಮಾಡಿದ ನಾಲ್ವರು ಆಂಟಿಯರು ಮತ್ತು ಐದಾರು ಹುಡುಗ್ರು ಬೆಳಿಗ್ಗೆ ತನಕವೂ ಶಿವ ಧ್ಯಾನ ಬಿಟ್ಟು ಪಕ್ಕದೂರಿನ ಸುದ್ದಿ ಮಾತಾಡುತ್ತಿದ್ದರು. ಹುಡುಗ್ರರು ಜೋರು ಬೊಬ್ಬೆ ಹಾಕಿ ಮಾತಾಡುತ್ತಿದ್ದರೆ, ಈ ಆಂಟಿಯವರು ಗಂಡನ-ಮಕ್ಕಳ, ಕಷ್ಟ, ಹಪ್ಪಳ, ಸಂಡಿಗೆ ಕಾಯಿಸೋದನ್ನು ಮಾತಾಡೋದ್ರು ಬಿಟ್ರೆ ಬೇರೆನೂ ಮಾತಾಡುತ್ತಿಲ್ಲ. ಮಾತಾಡುವುದು ಮಾತ್ರವಲ್ಲ ವಿವಿಧ ರೀತಿಯ ಮಿಮಿಕ್ರಿ, ಹಾಡು, ಡಬ್ಬ ಬಡಿಯೋದು ಎಲ್ಲವನ್ನೂ ಮಾಡುತ್ತಿದ್ದರು. ಅವರಿಗೆ ಬೈಯಾಕಾಗುತ್ತಾ? ಏನ್ ಮಾಡೋದು..ಮನಸಲ್ಲಿ ಬೈಯುತ್ತಾ ತಿರುವ ಫ್ಯಾನಿನ ಸದ್ದು ಆಲಿಸುತ್ತಾ ಕಣ್ಬಿಟ್ಟು ಮಲಗಿದ್ದೆವು ನಾವು. ಅಂತೂ-ಇಂತು ಕೊನೆಗೆ ಬೆಳಗೂ ಆಯಿತು. ಐದು ಗಂಟೆಗೆ ಎದ್ದು ಮತ್ತೊಮ್ಮೆ ನಿದ್ದೆಗಣ್ಣಲ್ಲಿ ಸ್ನಾನ ಮಾಡಿದ್ದೆ. ನಿದ್ರೆ ಹೋಗುತ್ತಾ? ಆಫೀಸಿನಲ್ಲಿಯೂ ನಿದ್ರೆಗಣ್ಣಲ್ಲಿಯೇ ಕೆಲಸ ಮಾಡಬೇಕಾಯಿತು.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಶಿವರಾತ್ರಿಯ ಅನುಭವ ಪಡೆದಿದ್ದೇನೆ. ಇದನ್ನೆಲ್ಲಾ ಕಂಡಾಗ ನಮ್ಮನೆಯಲ್ಲಿ ಶಿವರಾತ್ರಿ ಆಚರಿಸುತ್ತಿದ್ದ ಆ ಸನ್ನಿವೇಶಗಳು ಕಣ್ನಮುಂದೆ ಸುಳಿದಾಡುತ್ತವೆ. ನಮ್ಮಜ್ಜ, ಅಜ್ಜಿ, ಚಿಕ್ಕಮ್ಮ, ಅಮ್ಮ, ದೊಡ್ಡಮ್ಮ ಮತ್ತು ಅವರ ಮಕ್ಕಳು ಸೇರಿ ನಾವು ಶಿವ ರಾತ್ರಿ ಆಚರಿಸುತ್ತಿದ್ದೇವು. ಇಡೀ ದಿನ ಉಪವಾಸ, ರಾತ್ರಿಯಿಡಿ ಭಜನೆ ಮಾಡುವುದು. ಅತ್ಯಂತ ಭಕ್ತಿಯಿಂದ ಹಾಡಿ ಶಿವನನ್ನು ಭಜಿಸುತ್ತಿದ್ದೇವು. ಆದರೆ ಬೆಂಗಳೂರಲ್ಲಿ ಭಜನೆ ಬದಲು ಸಿನಿಮಾ, ಹಾಡು ಮುಂತಾದವುಗಳೂ ನಡೆಯುತ್ತವೆ, ಬಹುಶಃ ದೇವಾಲಯಗಳಲ್ಲಿ ಬಿಟ್ರೆ ಮತ್ತೆ ಜಾಗರಣೆ ಮಾಡುವವರ ಮನೇಲಿ ಇದೇ ರೀತಿ ಸಿನಿಮಾರಾತ್ರಿ ಆಗಿರಬಹುದು. ಶಿವರಾತ್ರಿಯಂದು ಜಾಗರಣೆ ಅಂದ್ರೆ ಬರೇ ನಿದ್ದೆಗೆಟ್ಟು ಮಜಾ ಮಾಡೋದು ಅಂದ್ಕೊಂಡಿದ್ದಾರೆ ಜನ. ಕಾಲ ಬದಲಾಗಿದೆ. ಏನು ಮಾಡಕ್ಕೆ ತಾನೇ ಸಾಧ್ಯ?

5 comments:

ಹೆಸರು ರಾಜೇಶ್, said...

makkalanna baibedri adu olleya vishayavalla. Ennu Shivaratri Jagarane, "AVARAVARA BHAVAKKE AVARAVARA BAKHUTIGE"
geleya
rajesh

ಶ್ರೀನಿಧಿ.ಡಿ.ಎಸ್ said...

haa haa!!paapa:)

ವಿನಾಯಕ ಕೆ.ಎಸ್ said...

ಲೇಖನ ಚೆನ್ನಾಗಿದೆ

Sushrutha Dodderi said...

ಪ್ರಿಯ ಚಿತ್ರಾ,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

bhadra said...

ಏನ್ಮಾಡೋದು! ಜನರನ್ನಂತೂ ಬದಲಾಯಿಸಾಗೋಲ್ಲ
ನಾವೇ ಬದಲಾಗ್ಬೇಕು. ನಿಂತಲ್ಲೇ ನಿದ್ರೆ ಮಾಡೋದನ್ನು ಕಲಿಯಬೇಕು (ಮುಂಬಯಿ ಲೋಕಲ್ ಟ್ರೈನ್‍ನಲ್ಲಿ ಹಾಗೆಯೇ ಮಾಡುವರು).
ಆದರೂ ನಾವು ಸಂತೋಷದಲ್ಲಿ ಇರಬೇಕೆಂದು, ಪಕ್ಕದವರಿಗೆ ತೊಂದರೆ ಕೊಡಬಾರದು. ಇದನ್ನು ಅಂತಹವರಿಗೆ ತಿಳಿಸಿಕೊಡಬೇಕು - ಹೇಗೆ ಅಂತೀರಾ? ಬ್ಲಾಗಿನಲ್ಲಿ ಬರೆದು, ’ಯಾರೋ ಇದನ್ನು ಬರೆದಿದ್ರು, ನನ್ನ ಪ್ರತಿಕ್ರಿಯೆ ಕೇಳ್ತಿದ್ದಾರೆ, ನನಗೇನೋ ನೀವು ಹೆಚ್ಚು ತಿಳಿದವರು ಎನ್ನಿಸುತ್ತಿದೆ, ಏನು ಬರೆಯಬಹುದು?’ ಎಂದು ಅವರ ತಲೆಯಲ್ಲೊಂದು ಹುಳ ಬಿಟ್ಬಿಡ್. :)

ಬ್ಲಾಗಿನ ಬಾಗಿಲೊಳಗೆ ಮೊದಲ ಹೆಜ್ಜೆ ಇಟ್ಟಿರುವೆ. ಬಹಳ ಚೆನ್ನಾಗಿ ನಿರೂಪಿಸುತ್ತಿದ್ದೀರಿ.
ಬರಹ ಕಾಯಕವು ಅನವರತವಾಗಿ ನಡೆಯಲಿ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ