Friday, February 22, 2008

ನಾನು ಮೊದಲ ಬಾರಿ ಚರ್ಚಿಗೆ ಹೋಗಿದ್ದು..

ನಿನ್ನೆ ನಗರದ ಖ್ಯಾತ ಚರ್ಚೊಂದಕ್ಕೆ ಹೋಗಿದ್ದೆ. ಯಾವುದೇ ವಿಷ್ಯದಲ್ಲಿಯೂ ನಂಗೆ ಕುತೂಹಲ ಜಾಸ್ತಿ. ಹಿಂದೂ ದೇವಾಲಯಗಳ ಬಗ್ಗೆ ಗೊತ್ತು. ಆದರೆ ಚರ್ಚ್, ಮಸೀದಿಗಳಿಗೆ ಹೋಗಿ ತಿಳಿದಿರಲಿಲ್ಲ. ಯಾಕೋ ಚಿಕ್ಕಂದಿನಿಂದಲೂ 'ದೇವರೊಬ್ಬನೇ ನಾಮ ಹಲವು' ಎನ್ನುವುದನ್ನು ನಂಬಿದ ನಾನು, ಚರ್ಚ್ಗಳಿಗೆ ಅಥವಾ ಮಸೀದಿಗಳು, ಅಥವಾ ಇನ್ಯಾವ ಧರ್ಮದ ದೇವಾಲಯಗಳೇ ಆಗಲಿ ಹೋಗಿ ನೋಡಬೇಕು..ಅಲ್ಲಿ ನಮ್ ಹಿಂದೂ ಧರ್ಮದಲ್ಲಿದ್ದಂತೆ 'ಅರ್ಚಕರು' ಪೂಜೆ ಮಾಡುತ್ತಾರೆಯೇ?ಅಥವಾ ಹೆಂಗಸರರು ದೇವರಿಂದ ಬಹುದೂರ ನಿಂತು ನೋಡುತ್ತಾರೆಯೇ? ಅರ್ಚಕರು ಸ್ತ್ರೀಯರನ್ನು ಕಂಡರೆ ಮಾರು ದೂರದಿಂದ ಗಂಧ ಪ್ರಸಾದ ನೀಡುತ್ತಾರೆಯೇ?ಎಂಬಿತ್ಯಾದಿ ಪ್ರಶ್ನೆಗಳು ದಿನವೂ ನನ್ ತಲೆ ತಿನ್ತಾ ಇದ್ದುವು. ಹಾಗೇ ನಿನ್ನೆ ಚರ್ಚಿಗೆ ಹೋಗಿದ್ದೆ. ಒಂದು ಕುತೂಹಲ, ಹೋಗಿ ನೋಡುವ ಹಂಬಲ. ಅಲ್ಲಿದ್ದನ್ನು ತಿಳಿದುಕೊಳ್ಳುವ ಆಸಕ್ತಿಯಿಂದ ಚರ್ಚಿಗೆ ಭೇಟಿ ನೀಡಿದ್ದೆ.

ಚರ್ಚಿಗೆ ಹೋಗಿದ್ದೇ ಇದೇ ಮೊದಲು ಮತ್ತೆ ಹೇಗೆ ಗೊತ್ತಾಗಿತ್ತೆ?ಅಲ್ಲಿಯ ಬಗ್ಗೆ. ಹಿಂದು ದೇವಾಲಯದಲ್ಲಿ ಚಪ್ಪಲಿ ಹಾಕಿ ದೇವಾಲಯದೊಳಗೆ ಪ್ರವೇಶಿಸಬಾರದು. ಇಲ್ಲೂ ಹಾಗೆ ಅಂದುಕೊಂಡು, ಚಪ್ಪಲು ಕಳಚಿಟ್ಟು ನಾನು ಪ್ರವೇಶ ಮಾಡಿದ್ದೆ. ಬರೀ ಕಾಲಲ್ಲಿ ಪ್ರವೇಶಿಸಿದಾಗ ನಿಶ್ಸಬ್ಧ ವಾತಾವರಣ ಹೃದಯಕ್ಕೆ ತಂಪೆರಚಿತು. ಎಲ್ಲರ ಕೈಯಲ್ಲೂ ಕ್ಯಾಂಡಲ್ ಇದೆ. ನಾನು ಏನು ಮಾಡೋದು? ಪುನಃ ಬರೇ ಕಾಲಲ್ಲಿ ಹೊರಗಡೆ ಬಂದು, 101 ಕ್ಯಾಂಡಲ್ ಹಿಡಿದುಕೊಂಡು ಒಳಹೋದೆ. ನಾನು ಕ್ಯಾಂಡಲ್ ಉರಿಸಿ ಸರದಿ ಸಾಲಲ್ಲಿ ಹೊರಟೆ. ಕೈಯಲ್ಲಿದ್ದ ಕ್ಯಾಂಡನ್ನು ಒಬ್ರು ವಯಸ್ಸಾದ ಹೆಂಗಸು ತೆಗೆದುಕೊಂಡರು. ಆಮೇಲೆ ಯೇಸುವಿನ ಪಾದಕ್ಕೆ ಪ್ರತಿ ಹೆಂಗಸರೂ ಹೂ ಮಾಲೆ ಅರ್ಪಿಸುತ್ತಿದ್ದರು. ನಾನು ಎರಡು ಕೈಗಳನ್ನು ಜೋಡಿಸಿ ಕೈಮುಗಿದೆ. ನಾನು ಕೈಯೇನೋ ಮುಗಿದಿದ್ದೇ..ಆದರೆ ಸುತ್ತಲೂ ಕುತೂಹಲದಿಂದ ನೋಡುವುದರಲ್ಲೇ ಬ್ಯುಸಿಯಾಗಿದ್ದೆ. ನನ್ ಹಿಂದೆ ನಿಂತವರು ಮುಂದೆ ಹೋದ್ರೂ ನಾನು ಮಾತ್ರ ಕೈಮುಗಿದು ಸುತ್ತಲು ನೋಡುವುದು ಬಿಟ್ಟ್ರೆ ಮತ್ತೇನಿಲ್ಲ. ಅಷ್ಟೊತ್ತಿಗೆ ನನ್ ಹಿಂದೆ ನಿಂತ ಹೆಂಗಸೊಬ್ರು. ಮುಂದೆ ಹೋಗಮ್ಮಾ..ಏನ್ ನೋಡ್ತಾ ಇದ್ದಿಯಾ..ಮುಂದೆ ಹೋಗಿ ನೋಡಮ್ಮಾ.ಅಂದಾಗಲೇ ನನಗೆ ಗೊತ್ತಾಗಿದ್ದು. ಆಮೇಲೆ ಹೊರಗಡೆ ಬಂದಾಗ. ಅಲಲ್ಲಿ ಉಪ್ಪು, ಹೂವು, ಕ್ಯಾಂಡಲ್ ಪ್ರಸಾದದ ರೂಪದಲ್ಲಿ ನೀಡಿದ್ರು. ನಾನು ತೆಗೆದುಕೊಂಡು ಏನ್ ಮಾಡಬೇಕೆಂದು ಗೊತ್ತಾಗದೆ..ಸುಮ್ಮನೆ ನಿಂತುಕೊಂಡಿದ್ದೆ. ಆ ಕ್ಯಾಂಡಲನ್ನು ಪುನಃ ಹೋಗಿ ಹಚ್ಚಬೇಕಾ?ಅಥವಾ ಏನ್ ಮಾಡ್ಬೇಕು ಅನ್ನೋದೇ ಗೊತ್ತಿಲ್ಲ. ಆಗ ಹಿಂದೆ ನನ್ ಜೊತೆ ಮಾತಾಡಿದ್ದ ಹೆಂಗಸು ನಗುತ್ತಾ ಬಂದು, ನೋಡಮ್ಮಾ ಆ ಕ್ಯಾಂಡಲನ್ನು ಮನೆಗೆ ಹೋಗಿ ಹಚ್ಚಿ ಬಿಡು. ನಿನಗೆ ದೇವ್ರು ಒಳ್ಳೆದು ಮಾಡ್ತಾನೆ. ಯಾಕಮ್ಮ ಮೊದಲ ಬಾರಿ ಬಂದಿದ್ದಿ ಅನಿಸುತ್ತೆ. ಚಪ್ಪಲು ಯಾಕ್ ಬಿಟ್ಟುಬಂದೆ . ಹಾಕ್ಕೊಂಡು ಪ್ರವೇಶ ಮಾಡಬಹುದು ಅಂದ್ರು. ನಾನು ನಕ್ಕು ಮಾತಾಡಿಸಿದ್ದೆ.

ನಂತರ ಅಲ್ಲಿಂದ ಪ್ರಾರ್ಥನಾ ಮಂದಿರಕ್ಕೆ ಬಂದೆ. ಅಲ್ಲಿ ಪ್ರತಿಯೊಬ್ಬರೂ ಮೊಣಕಾಲೂರಿ ಮೌನವಾಗಿ ಬೈಬಲ್ ಪಠಿಸುವುದರಲ್ಲಿ ನಿರತರಾಗಿದ್ದರು. ನಾನು ಬೆಂಚಿ ಮೇಲೆ ಕುಳಿತು ಎದುರಿಗಿದ್ದ ಜೆರುಸಲೇಂ ಪಟ್ಟಣವನ್ನು ಹೋಲುವ ಕಲಾಕೃತಿಯನ್ನು ನೋಡುವುದರಲ್ಲೇ ಮಗ್ನಳಾಗಿದ್ದೆ. ಸಾಸಿವೆ ಬಿದ್ರೂ ಕೇಳುವಷ್ಟು ಪ್ರಶಾಂತತೆ ಅಲ್ಲಿತ್ತು. ಮೌನವೇ ಮನಸ್ಸನ್ನು ಸ್ಪರ್ಶಿಸುವಂತಿತ್ತು. ಧ್ಯಾನಾಸಕ್ತರನ್ನು ಕಂಡಾಗ ಮನ ತುಂಬಿ ಬಂತು. ದೇವರೊಬ್ಬನೇ ನಾಮ ಹಲವಿರಬೇಕು. ಹಿಂದುಗಳು, ಕ್ರೈಸ್ತರು, ಮುಸ್ಲಿಂ, ಸಿಖ್ಖ್ ಎಲ್ಲರೂ ದೇವರನ್ನು ಬೇರೆ ಬೇರೆ ಹೆಸರಿಂದ ಕರೀತಾ ಇದ್ದಾರೆ ಅಂದುಕೊಂಡ ನಾನು, ದೇವರ ಹೆಸರಿನಲ್ಲಿ ಜಗಳವಾಡುವಾಗ, ಸ್ರ್ತೀಯೊಬ್ಬಳು ದೇವಾಲಯ ಪ್ರವೇಶ ಮಾಡಿದಾಗ 'ಬ್ರಹ್ಮಕಲಶ' ಮಾಡುವವರನ್ನು ಕಂಡಾಗ, ದೇವರ ಕುರಿತು ಭಕ್ತಿಯಿಂದ ಜಪಿಸದವನನ್ನು ದೇವಾಲಯ ಪ್ರವೇಶಕ್ಕೆ ಅನರ್ಹ ಎಂದಾಗ ಈ ಜನರು ಯಾಕಪ್ಪ ಹಿಂಗಾಡ್ತಾರೆ, ದೇವರಿದ್ದಾನೋ ಇಲ್ಲವೋ ಎಂದು ಅನುಮಾನ ಪಟ್ಟಿದ್ದೂ ಇದೆ. ಇರಲಿ ಬಿಡಿ, ದೇವರು ಇದ್ದಾನೋ ಇಲ್ಲವೋ ಆತನನ್ನು ನೋಡಿದವರು ಯಾರೂ ಇಲ್ಲ ಬಿಡಿ. ಆತನಿದ್ರೆ ಅವನು ಮಾತ್ರ ಸ್ತ್ರೀ-ಪುರುಷ ಎಂದು ಭೇದ ಮಾಡಲಾರನು. ನಂಗೆ ನಿಜಕ್ಕೂ ಈ ಚರ್ಚಿನಲ್ಲಿ ಖುಷಿಯನಿಸಿದ್ದು ಮಹಿಳೆಯರೇ ಯೇಸುವಿನ ಪಾದಕ್ಕೆ ಪುಷ್ಟಹಾರ ಹಾಕುತ್ತಿದ್ದರು. ಜಾತಿ, ಧರ್ಮ, ಸಂಪ್ರದಾಯವನ್ನು ಮೀರಿದ ದಿಗಂತದಾಚೆ ಚರ್ಚ್ ದೃಷ್ಟಿಹಾಯಿಸುವಂತೆ ಮಾಡಿತ್ತು.

ಅಲ್ಲಿಂದ ಹೊರಗಡೆ ಬಂದೆ..ಆದರೆ ಚಪ್ಪಲಿ ಮಾತ್ರ ಕಾಣೆಯಾಗಿತ್ತು. ಬರೀಕಾಲಲ್ಲಿ ನಡೀಬೇಕು..ಚಪ್ಪಲು ಅಂಗಡಿ ಅಲ್ಲೆಲ್ಲೂ ಕಾಣ್ತಾ ಇಲ್ಲ. ಅಟೋ ಹಿಡಿದು ನೇರ ಮನೆಗೆ ಬಂದೆ. ಒಂದೆಡೆ ದೇವಾಲಯಕ್ಕೆ ಹೋಗಿ ಹೊಸತೊಂದನ್ನು ನೋಡಿದ, ಅನುಭವಿಸಿದ ಖುಷಿಯಿಂದ ಮನ ಪುಳಕಿತಗೊಂಡರೆ, ಇನ್ನೊಂದೆಡೆ ನಾನು ಇಷ್ಟಪಟ್ಟು ತೆಗೆದುಕೊಂಡಿದ್ದ ಚಪ್ಪಲು ಕಿಡ್ನಾಪ್ ಆಗಿದ್ದು ಬೇಜಾರಾಗಿತ್ತು.

ಏನೇ ಆಗಲಿ, ಚರ್ಚ್ ಹೋಗಿ ನೋಡಬೇಕು ಅನ್ನೋ ಕುತೂಹಲ ..ಕೊನೆಗೂ ನೋಡಿದ್ದೆ, ಖುಷಿಗೊಂಡೆ.

9 comments:

click4nothing said...

ಕ್ರೈಸ್ತರ ದೇವಾಲಯಕ್ಕೇನೋ ಹೋಗಿ ಬಂದ್ರಿ?....... ಮುಸ್ಲಿಮರ ಮಸೀದಿಗೆ ಯಾವಾಗ ಹೋಗ್ತೀರ?.....

ಇನ್ನೊಂದು ಅನುಮಾನ..... ಅಲ್ಲಿ ಉಪ್ಪು, ಹೂವು, ಕ್ಯಾಂಡಲ್ ಕೊಟ್ರಿ ಅಂದಿದ್ದೀರ... ಕ್ಯಾಂಡಲ್ ಮನೇಲಿ ಉರ್‍ಸೋದಕ್ಕೆ...... ಹೂವ ಮುಡ್ಕೋಬಹುದು..... ಇಲ್ಲ ಜೇಬಲಿಟ್ಕೋಬಹುದು..... ಉಪ್ಪೇನು ಮಾಡಿದ್ರಿ? ಉಪ್ಪು ಕೊಡೋ ಉದ್ದೇಶನಾದ್ರೂ ಏನು ಅಂತ ಒಂಚೂರು ತಿಳ್ಸಿದ್ರೆ ಚೆನ್ನಾಗಿರೋದು...

ವಿಜಯ್ ಜೋಶಿ said...

ಚಿತ್ರಾ,
ನಿಮ್ಮ ಬ್ಲಾಗ್ ಚೆನ್ನಾಗಿದೆ. ಓದಿ ಖುಷಿಯಾಯಿತು. ನಿಮ್ಮ ಹೆಸರನ್ನು ಮೊದಲೇ ಒಂದೆರಡು ಬಾರಿ ಕೇಳಿದ್ದೆ. ಚಕ್ರವರ್ತಿ ಸೂಲಿಬೆಲೆಯವರ ಪುಸ್ತಕದಲ್ಲಿ ಪ್ರಕಟವಾದ ನಿಮ್ಮ ಅಭಿಪ್ರಾಯವನ್ನೂ ನೋಡಿದ್ದೆ. ನಂದೂ ಒಂದು ಬ್ಲಾಗ್ ಇದೆ. ಸಾಧ್ಯವಾದಾಗ ನೋಡುತ್ತಿರಿ.

ಹೆಸರು ರಾಜೇಶ್, said...

Nimma lekhanada vivarane nannannu Nimma abhimaniyannagi madide. Nimma Anubhavagalannu heege haralu bidade. becchage Nimma hrudayadalle ettu swalpa poshisi ondu sundara kateyannagisidare Kannadakke obba olle kate heluva hudugi sikkalu.......... omme yochisi. Bloginallee Kaledu hogabedi.
geleya
rajesh

ವಿ.ರಾ.ಹೆ. said...

ಚಿತ್ರಾ,ಖುದ್ದಾಗಿ ವಿಷಯಗಳನ್ನು ತಿಳಿದುಕೊಳ್ಳುವ ನಿಮ್ಮ ಆಸಕ್ತಿಯ ಮನೋಭಾವ ಬಹಳ ಒಳ್ಳೆಯದು. ಇಂತಹ ದ್ವಂದ್ವಗಳಿಗೆ ಅವಕಾಶವಿರಬಾರದೆಂದು ನಾನು ಓದಿದ ಶಾಲೆಯಲ್ಲಿ ನಮ್ಮನ್ನು ಎಲ್ಲಾ ಧರ್ಮಗಳ ಪೂಜಾ, ಪ್ರಾರ್ಥನಾ ಸ್ಥಳಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರು.
ಇನ್ನು ಕ್ರೈಸ್ತರ ವಿಷ್ಯಕ್ಕೆ ಬಂದರೆ, ನಮ್ಮಲ್ಲಿಯ ಆಚರಣೆಗಳೆ ಒಂದು ತರದ್ದಾದರೆ ಅವರದ್ದು ಇನ್ನೊಂದು ತರಹ. ಭಾರತದಲ್ಲಿನ ಚರ್ಚುಗಳು ಅಗತ್ಯಕ್ಕೆ ತಕ್ಕಂತೆ ಮಾರ್ಪಟ್ಟಿರುವಂತವು. ಆದರೆ ಮೂಲ ಚರ್ಚುಗಳಲ್ಲಿ ನಮ್ಮಂತೆಯೇ ಬೇಕಾದಷ್ಟು ವಿಧಿವಿಧಾನಗಳಿವೆ. ಅವರು ಕಾಲಕ್ಕೆ , ಸ್ಥಳಕ್ಕೆ, ಉದ್ದೇಶಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಾರೆ, ಆದರೆ ನಾವು ಹಾಗಾಗುವುದಿಲ್ಲ .
ನಮ್ಮಲ್ಲಿ ಶಿಸ್ತು ಇಲ್ಲ. ಅಂದಹಾಗೆ, ಹಿಂದೂ ದೇವಾಲಯಗಳಲ್ಲಿ ಸ್ತ್ರೀಯರು ಮುಕ್ತವಾಗೇ ಪ್ರವೇಶಿಸಬಹುದಲ್ಲ! ಹಿಂದೂಗಳಲ್ಲಿ ಹೆಂಗಸರು ಪೂಜೆ ಮಾಡಬಾರದು ಅಂತೇನೂ ಇಲ್ಲವಲ್ಲ. ಅರ್ಚಕರು ಸ್ತ್ರೀಯರನ್ನು ಕಂಡರೆ ಮಾರು ದೂರದಿಂದ ಗಂಧ ಪ್ರಸಾದ ನೀಡುತ್ತಾರೆಯೇ?!!!!! ಎಲ್ಲಿ ಹೀಗಿದೆ?

ಮಹೇಶ್ ಪುಚ್ಚಪ್ಪಾಡಿ said...

ನಿಮ್ಮ ಆಸಕ್ತಿ ಒಳ್ಳೆಯದು.ಚರ್ಚ್ ನೋಡಿ ಬಂದ್ರಲ್ಲಾ. ನಿಮಗೆ ಅನಿಸಿದ್ದು ಇಷ್ಟೇನಾ? ನೀವು ಇನ್ನೊಂದು ಆಯಾಮದಲ್ಲಿ ನೋಡಿದಾಗ ಚರ್ಚ್ ಹೇಗೆನಿಸಿತು?.ನಮ್ಮ ದೇವಾಲಯದಲ್ಲಿ ಮಹಿಳೆಯರಿಗೆ ಪೂಜೆಗೆ ಅವಕಾಶ ಇದೆಯಲ್ಲಾ. "ಈರೆಗ್ ಗೊತ್ತಿಜ್ಯಾ"?

ಚಿತ್ರಾ ಸಂತೋಷ್ said...

ಕ್ಲೋಸಪ್ ಸರ್..ನಮಸ್ಕಾರ..
ಬ್ಲಾಗ್ ಬುಟ್ಟಿಗೆ ಬಂದು,ನಿಮಗನಿಸಿದನ್ನು ತಿಳಿಸಿದ್ದಿರಿ..ಧನ್ಯವಾದಗಳು.
ಮಸೀದಿಗೆ ಯಾವಾಗ ಹೊಗೋದು.?ಅಂತ ಕೇಳಿದ್ರಲ್ಲಾ..ಆದ್ರೆ ಅಲ್ಲಿ ಮಹಿಳೆಯರ ಪ್ರವೇಶ ಇಲ್ಲ ಅನ್ತಾರೆ..ನೋಡೋಣ ಸರ್..ಅವಕಾಶ ಸಿಕ್ರೆ ಹೋಗ್ಬೇಕು..

ಚಿತ್ರಾ ಸಂತೋಷ್ said...

ವಿಜಯ್ ಜೋಶಿ, ರಾಜೇಶ್ ,ವಿಕಾಸ್ ಹೆಗಡೆ,ಮಹೇಶ್ ಪುಣ್ಚಪ್ಪಾಡಿಗೆ ಧನ್ಯವಾದಗಳು..ನಿಮ್ಮ ಪ್ರತಿಕ್ರಿಎಗಳಿಗೆ ಸದಾ ಪ್ರೀತಿಯ ಸ್ವಾಗತ.
ಮಹೇಶ್ ಮತ್ತು ವಿಕಾಸ್ ಅವರೇ,
ಚರ್ಚಿಗಳಲ್ಲೂ ನಮ್ಮಂತೆ ವಿಧಿವಿಧಾನಗಳಿರಬಹುದು, ಆದರೆ ನಮ್ಮ ಹಿಂದೂ ಮಹಿಳೆಯರು ಪೂಜೆ ಮಾಡಲು ಅವಕಾಶವಿದೆ ಎಂಬುದು ನನಗೆ ತಿಳಿದಿಲ್ಲ.ಈವರೆಗೆ ನನಗಾದ, ನೋಡಿದ ಅನುಭವವನ್ನೇ ಹೇಳಿದ್ದೇನೆ. ಮಹಿಳೆಯರು ಪೂಜೆ ಮಾಡಲು ಅವಕಾಶ ವಿರುವ ದೇವಾಲಯುಗಳಿದ್ದರೆ ತಿಳಿಸಿಬಿಡಿ. ನನಗೂ ತಿಳಿದಂತಾಗುತ್ತದೆ ಅಲ್ವಾ? ಆಗಾಗ ನನ್ ಬ್ಲಾಗ್ ಬುಟ್ಟಿಗೆ ಬರುತ್ತೀರಿ.
ಚಿತ್ರಾ

ಮಹೇಶ್ ಪುಚ್ಚಪ್ಪಾಡಿ said...

ನೋಡಿ ಮಹಿಳೆಯರೇ ಪೂಜೆ ಮಾಡುವ ದೇವಸ್ಥಾನ ಇಲ್ಲಿದೆ.ಕೇರಳದ ಕಾಸರಗೋಡಿನಿಂದ ಮುಂದೆ ಅಟ್ಟುಕಾಲ್ ಭಗವತಿ ಕ್ಷೇತ್ರ.ಇದನ್ನು ಮಹಿಳೆಯರ ಶಬರಿಮಲೆ ಅಂತಲೇ ಕರೆಯುತ್ತಾರೆ.ಇಲ್ಲಿ ಪೂಜೆ ಕೂಡಾ ಮಹಿಳೆತರೇ ನೆರವೇರ್‍ಇಸುವುದು.
ಮಹಿಳೆಯರು ಪೂಜೆ ಮಾಡುಬುದಕ್ಕಿಂತ ಮಹಿಳೆಯರನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರಲ್ಲಾ.ಅದು ಬೇರೆ ಎಲ್ಲಿದೆ? ನಿಜ ದೇವರೆಂದು ಅಮೃತಾನಂದಮಯಿ ದೇಶದ ಎಷ್ಟು ಮಂದಿ ಪೂಜಿಸುವಿದಿಲ್ಲ?. ದೇವಿ,ದುರ್ಗೆ ಅಂತೆಲ್ಲಾ ಪೂಜಿಸುತ್ತಾರಲ್ಲಾ?. ಮಾತೃ ದೇವೋ ಭವ... ಬೇರೆ ಎಲ್ಲಿದೆ?

ಚಿತ್ರಾ ಸಂತೋಷ್ said...

ಪುಣ್ಚಪ್ಪಾಡಿ ಅವರೇ..ಕೃತಜ್ಞತೆಗಳು.
ಭಗವತಿ ಕ್ಷೇತ್ರದ ಬಗ್ಗೆ ನನಗೆ ತಿಳಿದಿದ್ದು ಸಂತೋಷ..ಇನ್ನೊಂದು ಸಲ ಖಂಡಿತಾ ಊರಿಗೆ ಬಂದಾಗ ಅಲ್ಲಿಗೆ ಹೋಗಿ ನೋಡ್ತೀನಿ..
ಆದರೆ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಪೂಜಿಸುತ್ತಾರೆ ಅಂದಿರಲ್ಲಾ? ಈಗ ಆ ಮಾತು ಪ್ರಸ್ತುತ ಅನಿಸುತ್ತಿಲ್ಲ. ಸಾಕಷ್ಟು ಬದಲಾಗಿದೆ.'ಹೆಣ್ಣು ದೇವತೆಗೆ ಸಮಾನ' ಅನ್ನೋದು ಹಿಂದೂಧರ್ಮದಲ್ಲಿ ಹೇಳುತ್ತಾರೆ. ಹೌದು. ಆದರೆ ಎಷ್ಟು ಮಂದಿ ಇದನ್ನು ಪಾಲಿಸುತ್ತಾರೆ..ಈ ಮಾತು ಪ್ರಸ್ತುತ ಅನಿಸುವುದೇ ನಿಮಗೆ?
ಗೆಳತಿ,
ಚಿತ್ರಾ