Sunday, February 10, 2008

ಅವಳೇ ನನ್ನ ಮೊದಲ ಪ್ರೀತಿ

ಅವಳು ಮತ್ತೆ ಮತ್ತೆ ನನ್ನ ಕಾಡುತ್ತಾಳೆ.
ಅವಳ ನೆನಪಾದಾಗ ಭಾವನೆಗಳು ದಡಕ್ಕಪ್ಪಳಿಸುತ್ತವೆ
ಅವಳು ನನ್ನ ಬದುಕಿನಲ್ಲಿ ಬಂದ ಮೊದಲ ಹೆಣ್ಣು
ಸುಂದರ ಕೂದಲನ್ನು ಹೊಂದಿರುವ ಆಕೆಯೇ ಸೌಂದರ್ಯ

ಅವಳನ್ನು ನಾ ತುಂಬ ಪ್ರೀತಿಸುವೆ
ಅವಳಿಗೆ ನನ್ನ ಹೃದಯದಲ್ಲಿ ಮೊದಲ ಸ್ಥಾನ...
ಅವಳೇ ನನ್ನ ಬದುಕಿನ ಮೊದಲ ಪ್ರೀತಿ
ಅವಳೇ ನನ್ನ "ಅಮ್ಮ"


ಅಮ್ಮಾ,
ಈಗ ರಾತ್ರಿ 12 ಗಂಟೆ.ನಿನ್ನ ನೆನಪಾಯಿತು. ನಿದ್ದೆನೇ ಬಂದಿಲ್ಲ. ಅದ್ಕೆ ಎದ್ದು ಕುಳಿತು ಪತ್ರಾ ಬರೀತಾ ಇದ್ದೀನಿ. ನಿನ್ನಿಂದ ಅದೆಷ್ಟೋ ಮೈಲಿಗಳಷ್ಟು ದೂರದಲ್ಲಿರುವ ನನಗೆ ನಿನ್ ಬಿಟ್ರೆ ಬೇರ್ಯಾರು ನೆನಪಾಗುತ್ತಿಲ್ಲ. ನಿನ್ನಿಂದ ಅದೆಷ್ಟೋ ದೂರದಲ್ಲಿರುವ ನನ್ನ ಜೊತೆ ನೀನು ಕೊಟ್ಟ ಬದುಕಿದೆ. ಬದುಕಿನ ಸವಾಲುಗಳನ್ನು ಎದುರಿಸಲು ನೀನು ನನಗೆ ಧಾರೆಯೆರೆದ ಚೈತನ್ಯ ನನ್ನಲ್ಲಿದೆ. ನನ್ನ ಪ್ರತಿಹೆಜ್ಜೆ ಹೆಜ್ಜೆಯಲ್ಲೂ ನಿನ್ನ ಸ್ಫೂರ್ತಿಯಿದೆ. ಅದೆಷ್ಟೋ ಸಾರಿ ಯಾಂತ್ರಿಕ ಬದುಕಿಗೆ ಮರುಳಾಗಬೇಡ ಅನ್ನುತ್ತಿಯಲ್ವಾ? ಅಮ್ಮಾ..ನಿನ್ನ ನಿರ್ಮಲ ಪ್ರೀತಿಯೆದುರು ಯಾಂತ್ರಿಕ ಬದುಕು ಏನೂ ಅಲ್ಲಮ್ಮ.

ನಿನ್ನ ಪ್ರೀತಿ ನನಗೆ ಅಮೃತದಂತೆ. ಅದೇ ನನಗೆ ಎಲ್ಲಾ ರೀತಿಯ ಪ್ರೀತಿ. ಅದೇ ಬದುಕು. ಯಾಕಂದ್ರೆ ನೀನೇ ನನಗೆ ಅಪ್ಪ-ಅಮ್ಮ ಎರಡೂ ಅಲ್ಲವೇ?ಬದಲಾಗುವ ಬದುಕಿನಲ್ಲಿ ನಿನ್ನ ಪ್ರೀತಿಯೇ ನನಗೆ ಎಚ್ಚರಿಕೆಯ ಕರೆಗಂಟೆ. ನೀನು ನನ್ನೆದೆಯಲ್ಲಿ ಬಿತ್ತಿದ ಪ್ರೀತಿಯ ಬೀಜ ಹೆಮ್ಮರವಾಗಿ ಜಗತ್ತನ್ನೇ ಎದುರಿಸುವ ಶಕ್ತಿ ನೀಡಿದೆ. ನಿನ್ನ ಪ್ರೀತಿ ಎಂದೂ ನನಗೆ ಭಾರವಾಗಿಲ್ಲಮ್ಮ..ಮೊಗೆದಷ್ಟೂ ಇನ್ನೂ ಬೇಕೆಬಿಸುತ್ತೆ. ನಿನ್ನ ಪ್ರೀತಿಯೇ ಬತ್ತದ ತೊರೆ.

ಮಗಳು ಬಿಸಿಲುಗುದುರೆಯ ಬೆನ್ನ ಹತ್ತಿ ಬಿಡುವಳೋ ಅನ್ನೋ ಭಯ ಅಲ್ವಾ ನಿಂಗೆ? ಅಮ್ಮಾ..ನಾನು ನಿನ್ನ ಮಗಳು ತಾನೆ? ಆದ್ರೆ ನೀನು ಭಯಪಡೋದು ಸಹಜನೇ. ಬೆಂಗಳೂರಿಗೆ ನೀನು ಕಳಿಸಿಕೊಡುವಾಗ 'ಜೋಪಾನಮ್ಮಾ' ಅಂದ ಮಾತು ಈಗ್ಲೂ ನೆನಪಿದೆ.
ಬದುಕನ್ನು ಪ್ರೀತಿಸು, ಪ್ರಕೃತಿಯನ್ನು ಪ್ರೀತಿಸು, ಹಾರೋ ಹಕ್ಕಿಗಳನ್ನು ಪ್ರೀತಿಸು, ಹರಿಯೋ ನದಿಯನ್ನು ಪ್ರೀತಿಸು, ಪ್ರಶಾಂತ ಸಾಗರವನ್ನು ಪ್ರೀತಿಸು, ಬೀಸೋ ಗಾಳಿಯನ್ನು ಪ್ರೀತಿಸು, ನಿನಗೆ ಆಪ್ತವೆನಿಸುವ ಪುಸ್ತಕಗಳನ್ನು ಪ್ರೀತಿಸು,ದುಃಖವನ್ನು, ಮೌನವನ್ನು ಗಾಢವಾಗಿ ಪ್ರೀತಿಸುವವಳು ನೀನಾಗು ಮಗಳೇ ಅಂತ ಹರಸಿದ್ದಿಯಲ್ಲಾ ಅಮ್ಮ, ಬಾಯಿತಪ್ಪಿಯೂ ಹುಡುಗ್ರರನ್ನು ಪ್ರೀತಿಸು ಅಂತ ಹೇಳಿಲ್ಲ ಅಲ್ವಾ? ಅದ್ಕೆ ನೋಡು ನಿನ್ ಬಿಟ್ಟು ಬೆಂಗಳೂರಿಗೆ ಬಂದ ಮೇಲೆ ನಾನು ಒಬ್ಬ ಹುಡುಗನ್ನ ಪ್ರೀತಿಸ್ತಾ ಇದ್ದೀನಿ ಅಂತ ಸುಳ್ಳು ಹೇಳಿದೆ. ಬಹುಶಃ ಆ ರಾತ್ರಿ ನೀನು ನಿದ್ದೆ ಮಾಡಿಲ್ಲ ಅನಿಸುತ್ತೆ. ಅದು ಸುಳ್ಳು ಅಂತ ಹೇಳೋವರೆಗೂ ನಿನಗೆ ಸಮಾಧಾನ ಆಗಿಲ್ಲ. ನಿನ್ ಮಗಳು ಯಾವ ಹುಡುಗ್ರನ್ನು ಪ್ರೀತಿಸಿಲ್ಲ ಅಮ್ಮ. ಹೆದರಿಕೋಬೇಡ. ಫೆ.14ರಂದು ಯಾವ ಹುಡುಗ ನನ್ ಮುದ್ದು ಮಗಳಿಗೆ ಕೆಂಗುಲಾಬಿ ತಂದುಕೊಡುತ್ತಾನಂತ. ನಾನು ಯಾರು ಕೊಟ್ರೂ ತೆಕೊಳಲ್ಲ ಬಿಡು.

ಮೊನ್ನೆ ಬೆಂಗಳೂರಿನಲ್ಲಿ ಜೋರು ಮಳೆ ಬಂತು. ಬೆಂಗಳೂರಂದ್ರೆ ಹಾಗೆ ಮಳೆಗಾಲ, ಚಳಿಗಾಲ,ಬೇಸಿಗೆ ಕಾಲ ಯಾವುದನ್ನೂ ನಿಖರವಾಗಿ ಹೇಳಕ್ಕಾಗಲ್ಲ. ಅದ್ಕೆ ಮೊನ್ನೆ ಬಂದ ಹನಿಹನಿ ಮಳೆಗೆ ನೆನೆದು ಜೋರು ಶೀತ ಆಯ್ತು. ಆಗ ನೆನಪಾಗಿದ್ದೂ ನೀನೆ ಅಮ್ಮ. ಶೀತ ಆದಾಗಲೆಲ್ಲಾ ಕಾಳುಮೆಣಸು ಅರೆದು, ಜೇನುತುಪ್ಪ ಜೊತೆ ಕಲಸಿ ಕೊಡುತ್ತಿದ್ದಿಯಲ್ಲಾ. ಅದ್ಕೆ .
ಅಮ್ಮ..ಬೇಗನೆ ನಿನ್ನ ಬಂದು ನೋಡ್ಬೇಕು. ನಿನ್ನ ಮಡಿಲಲ್ಲಿ ಮಲಗಿ ಖುಷಿ ಅನುಭವಿಸಬೇಕು. ನೀನು ಮಾಡಿದ ಕೋಡುಬಳೆ, ಚಕ್ಕುಲಿ, ರೊಟ್ಟಿ ಹೊಟ್ಟೆತುಂಬಾ ತಿನ್ಬೇಕು. ಬೇಗ ಮನೆಗೆ ಬರ್ತೀನಿ ಆಯ್ತಾ..
ಅಮ್ಮಾ..ನಿನ್ನ ಮಡಿಲಲ್ಲಿ ಹೂವಾದೆ ನಾನು
ನನ್ನಯ ಬದುಕಿಗೆ ಬೆಳಕಾದೆ ನೀನು
ಏಳೇಳು ಜನ್ಮವು ಭುವಿ ಮೇಲಿರಲು
ಮಗಳಾಗಿ ಜನಿಸಿ ತುಂಬುವೆ ಒಡಲು
ಇಂತೀ,
ನಿನ್ನ ಮಗಳು

4 comments:

ವಿ.ರಾ.ಹೆ. said...

Namaste Chitra.

I am visiting ur blog for first time. Totally a nice blog.

ಇದುವರೆಗೂ ಬರೀ ಪ್ರೇಮಿಗಳ ಪತ್ರ ನೋಡಿದ್ದೆ, ನೀವು ಅಣ್ಣ, ಅಮ್ಮರಿಗೆ ಬರ್ದಿರೋ ಪತ್ರಗಳನ್ನ ನೋಡಿ ಖುಶಿ ಆಯ್ತು. other posts are also good. liked it.

Thank you.

Unknown said...

ಪ್ರೀತಿಯಾ ಚೀತ್ರಾ,

ಅಮ್ಮನಿಗೆ ಬರೆದಿರುವ ಪತ್ರ ತುಂಬಾ ಚೆನ್ನಾಗಿದೆ.ನನ್ನ ಅಮ್ಮಕೂಡಾ ನೆನಪಿಗೆ ಬರ್ತಾರೆ.ಅಮ್ಮನ ಪ್ರೀತಿಯನ್ನು ಯಾವುದಕ್ಕು ಹೊಲಿಸುವುದಕ್ಕೆ ಸಾದ್ಯವಿಲ್ಲ ಅಲ್ವಾ.
ನಿಮಗೆ ಶುಭವಾಗಲಿ.

ಸವಿತಾಶ್ರೀಧರ್

ಚಿತ್ರಾ ಸಂತೋಷ್ said...

ಧನ್ಯವಾದಗಳು ವಿಕಾಸ್ ಮತ್ತು ಸವಿತಾ ಅವರಿಗೆ..ನಿಮ್ಮ ಸಲಹೆ ನನಗೆ ಸ್ಪೂರ್ತಿಯಾಗಲಿ
ಗೆಳತಿ,
ಚಿತ್ರಾ

ಹೆಸರು ರಾಜೇಶ್, said...

Ammanige Nanna vandaneyannu tilisi.
rajesh