Wednesday, December 19, 2007

ಕನಸಿನ ಶರಧಿಯಲಿ ಪುಟ್ಟದೊಂದು ಪಯಣ..

"ಕನಸುಗಳೇ ಹೀಗೆ..ಮನದ ಹೂಬನದಲ್ಲಿ ಅರಳಿದ ಕಾಲ ಕುಸುಮದಂತೆ, ಮಗದೊಮ್ಮೆ ವಸಂತದ ಬಿರುಬಿಸಿಲಿಗೆ ನೊಂದು ಬಾಡಿ ಹೋಗುವ ಹತಾಶ ಪುಷ್ಡದಂತೆ..". ಈ ಕವಿವಾಣಿ ಆಗಾಗ ನೆನಪಾಗುತ್ತದೆ. ಕನಸು!! ಎಂದ ತಕ್ಷಣ ಮನಸ್ಸು ಪುಟ್ಟದೊಂದು ಪ್ರಪಂಚದಲ್ಲಿ ಸುತ್ತಾಡುತ್ತೆ. ಹೃದಯಪಂಜರದಲ್ಲಿ ಭಾವಹಕ್ಕಿ ರೆಕ್ಕೆಬಿಚ್ಚಿ ಕುಣಿಯುತ್ತೆ. ಕಲ್ಲು-ಬಂಡೆಗಳೂ ಮನೋಹರವಾಗಿ ಗೋಚರಿಸುತ್ತವೆ. ಕತ್ತಲೂ ಬೆಳಕಾಗುತ್ತದೆ. ಅಮಾವಾಸ್ಯೆಯೂ ಹುಣ್ಣಿಮೆಯಾಗುತ್ತದೆ. ಈ ಜಗತ್ತು, ಈ ಬದುಕು ಎಲ್ಲವೂ ಹೀಗೆ..ಕನಸು, ಕಲ್ಪನೆ, ನಿರೀಕ್ಷೆಗಳ ಮೂಟೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತೊಂದಿದೆ. ಜಗತ್ತಿನ ನಿತ್ಯ ಕನಸುಗಳ ಸುತ್ತ ಸುತ್ತಾಡುವ ಕವಿ, ತನ್ನ ಕನಸಿಗೆ ಭಾವ-ಕಲ್ಪನೆಗಳ ಮೆರುಗು ನೀಡುತ್ತಾನೆ.
"ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು
ಕನಸಿಲ್ಲದ ದಾರಿಯಲ್ಲಿ ನಡೆಯಬಹುದೇ?" ಯಯಾತಿ ನಾಟಕದಲ್ಲಿ ಬಂದಿರುವ ಮಾತೊಂದು ಈಗ ನೆನಪಿಗೆ ಬರುತ್ತದೆ.

ಹೌದು! ಪ್ರತಿಯೊಬ್ಬನ ಬದುಕು ಕನಸುಗಳ ಸಪ್ತ ಸಾಗರ, ಭಾವನೆಗಳ ಆಗರ. ಭವಿಷ್ಯದ ಕುರಿತು ನಿರೀಕ್ಷೆಗಳಿರುತ್ತವೆ. ಆಸೆ-ಕನಸುಗಳ ಹೊತ್ತ ಮನುಷ್ಯ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಾನೆ ಅಮ್ಮನ ಮಡಿಲಲ್ಲಿ ಮಲಗಿರುವ ಪುಟ್ಟ ಕಂದನ ಮನದಲ್ಲೂ ಕನಸುಗಳಿರುತ್ತವೆ. ಭಿಕ್ಷಾಂದೇಹಿ ಎಂದು ಪುಟ್ ಪಾತ್ ನಲ್ಲಿ ಭಿಕ್ಷೆಗಾಗಿ ಕೈಒಡ್ಡಿ ನಿಂತಿರುವ ಭಿಕ್ಷುಕನ ಹೃದಯವೂ ಕನಸುಗಳ ಆಗರ. ಬೆವರು ಬವೆದು ಅನ್ನಕ್ಕಾಗಿ ದುಡಿವ ರೈತನ ಒಡಲಾಳದಲ್ಲೂ ಕನಸುಗಳಿರುತ್ತವೆ. ಹೌದು! ಸ್ನೇಹಿತರೇ ಯಾಕೋ ಕನಸುಗಳ ಬಗ್ಗೆ ಸುಮ್ ಸುಮ್ನೇ ಗೀಚೋಣ ಅನಿಸ್ತು. ನಿತ್ಯ ನನ್ ಬ್ಲಾಗಲ್ಲಿ ಏನಾದ್ರೂ ತುಂಬಿಸಬೇಕೆನ್ನುವ ಹಂಬಲ ನನ್ನದೊಂದು ಪುಟ್ಟ ಕನಸು. ಏನೋ ಬರೀಬೇಕು ಅದೇ ನನ್ ಖುಷಿಗಾಗಿ. ನೀವು ಓದುತ್ತಿರೆಂದು ನಾನು ಬರೆಯುತ್ತಿಲ್ಲ..ನನ್ ತೃಪ್ತಿಗಾಗಿ..ಬರೆಯುವ ತುಡಿತಕ್ಕಾಗಿ..ಇದೂ ನನ್ ಕನಸು. ಹೌದು! ಕನಸಿನ ಪ್ರಪಂಚವೇ ಒಂದು ಸುಮಧುರ ಲೋಕ, ಕನಸುಗಳು ಹೊಸ ಸಂಕಲ್ಪ, ಚಿಂತನೆಗಳಿಗೆ ರಹದಾರಿಯಾಗಬೇಕು. ದೇಶದೆಲ್ಲೆಡೆ ಅಟ್ಟಹಾಸಗೈಯುತ್ತಿರುವ ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರಗಳ ವಿರುದ್ಧ ಸಿಡಿದೇಳುವ ಕನಸು ನಮ್ಮದಾಗಬೇಕಿದೆ. ಇಂಥ ದುಷ್ಕೃತ್ಯಗಳಿಗೆ ಅಂತ್ಯಹಾಡುವ ಕನಸುಗಳು ನಮ್ಮದಾಗಬೇಕು. ಮುಗ್ಧಜನರ ನಂಬಿಕೆಗಳಿಗೆ ಕೊಡಲಿಯೇಟು ನೀಡಿರುವ ಜನಪ್ರತಿನಿಧಿಗಳ ಲಂಪಟತನಕ್ಕೆ ತೆರೆ ಎಳೆಯಬೇಕು.

"ಎಲ್ಲಾ ಕನಸುಗಳು ನಿಜವಾಗುತ್ತವೆ . ಅವುಗಳನ್ನು ಸಾಕಾರಗೊಳೀಸುವ ಆತ್ಮಸ್ಥೈರ್ಯ ಮತ್ತು ಪ್ರಯತ್ನ ನಮ್ಮಲ್ಲಿರಬೇಕು" ವಾಲ್ಟ್ ಡಿಸ್ನಿ ಮಾತಿದು. ಇನ್ನೊಂದೆಡೆ ಡಗ್ನಸ್ ಮಾಲೋಕ್ ಎಂಬ ಇಂಗ್ಲೀಷ್ ಕವಿ ಮನುಷ್ಯನ ಕನಸುಗಳ ಬಗ್ಗೆ ಹೀಗೆನ್ನುತ್ತಾನೆ "ರಾಜ ಬೀದಿಯಾಗಲು ಸಾಧ್ಯವಿಲ್ಲವಾದರೂ, ಕಾಲುದಾರಿಯಾಗಲು ಸಾಧ್ಯ; ಸೂರ್ಯನಾಗಲೂ ಸಾಧ್ಯವಿಲ್ಲದಿದ್ದರೂ, ನಕ್ಷತ್ರವಾಗಲು ಸಾಧ್ಯ". ಹೇಗಿದೆ ಅಲ್ವಾ ಈ ಮಾತು? ಇರಲಿ ಬಿಡಿ..ಕನಸು ನನಗೂ ಇದೆ..ನಿಮಗೂ ಇದೆ. ಕನಸಿನ ಪುಟ್ಟ ಪ್ರಪಂಚ ನಮ್ಮದಾಗಲಿ..ನಮ್ಮಲ್ಲೊಂದು ಕನಸಿನ ಹಕ್ಕಿಗೆ ರೆಕ್ಕೆಬಿಚ್ಚಿ ಹಾರಿಬಿಡೋಣ..ನಿಮ್ಮ ಕನಸಿಗೂ ಹಾಟ್ಸ್ ಆಫ್ ಕಣ್ರೀ.

2 comments:

ಹೆಸರು ರಾಜೇಶ್, said...

nimma kanasu nanasagali
geleya
rajesh

ಚಿತ್ರಾ ಸಂತೋಷ್ said...

ನಿಮ್ಮ ಹಾರೈಕೆಗೆ ಧನ್ಯವಾದಗಳು ಸರ್