Wednesday, December 12, 2007

ಕುರ್ಚಿಗಾಗಿ ಮುನಿಸು!!

ಅಂತೂ-ಇಂತೂ ರೈಲು ಬಂತು. ಮೊನ್ನೆ ಡಿಸೆಂಬರ್ 8ರಂದು ಬೆಂಗಳೂರು-ಮಂಗಳೂರು ರೈಲು ಆರಂಭವಾಯಿತು. ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಬಂದು ರೈಲಿಗೆ ಚಾಲನೆ ನೀಡಿಯೂ ಆಯಿತು. ಅಂತೂ ಕೊನೆಗೂ ಬೆಂಗಳೂರು-ಮಂಗಳೂರು ಪ್ರಯಾಣ ಚುಕ್ ಬುಕ್ ರೈಲಿನಲ್ಲಿ ಆಗಬೇಕೆಂಬ ಬಹುದಿನಗಳ ಆಸೆ ನೆರವೇರಿದೆ. ಈ ನಡುವೆ ಒಂದು ತಮಾಷೆಯ ಸಂಗತಿ ನಿಮಗೆ ಹೇಳುತ್ತೇನೆ ಕೇಳಿ. ಈ ರೈಲು ಉದ್ಘಾಟನಾ ಸಮಾರಂಭ ನಡೆದಿದ್ದು ಮಂಗಳೂರಿನಲ್ಲಿ. ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೇಲಿ ಉಡುಪಿ ಸಂಸದೆ ಮನೋರಮಾ ಮಧ್ವರಾಜ್ ಹೆಸರು ಇರಲಿಲ್ಲವಂತೆ. ಹಾಗಂತ ಅವರು ತೆಪ್ಪಗೆ ಕೂತಿದ್ದಾರೆ? ಇಲ್ಲ, ಎಲ್ಲ ಗಣ್ಯರ ಜೊತೆ ವೇದಿಕೆಯಲ್ಲಿ ಕೂರುವುದು ಬಿಟ್ಟು, ಸಭಿಕರ ಗ್ಯಾಲರಿಯಲ್ಲಿ ಕೂತ್ರಂತೆ. ಕರೆದ್ರೂ ಬರಲಿಲ್ಲವಂತೆ. ಕೊನೆಗೂ ಲಾಲು ಕರೆದರೂ ಜಗ್ಗದ ಮನೋರಮಾ ಸಭಿಕರ ನಡುವೆ ಕೂತೇ ವೇದಿಕೆಯಲ್ಲಿದ್ದವರ ಭಾಷಣ ಕೇಳಿದ್ರಂತೆ! ಈ ಸಭೆಗೆ ನಾನೇನು ಹೋಗಿಲ್ಲ ಬಿಡಿ, ಆದರೆ ನನ್ನದು ಪ್ರಶ್ನೆ ಅದಲ್ಲ, ಅಲ್ರೀ ಆಹ್ವಾನ ಪತ್ರಿಕೇಲಿ ಹೆಸ್ರು ಮುಖ್ಯವೇ ಎಂಬುದು ನನ್ ಪ್ರಶ್ನೆ! ನಮ್ ರಾಜಕಾರಣಿಗಳಿಗೆ ಕಾಲಿಗೊಂದು ಆಳು, ಕೈಗೊಂದು ಆಳು, ಅವರು ಬರುವಾಗ ಆರತ್ತಿ ಬೆಳಗಿ ಸ್ವಾಗತಿಸಬೇಕು, ಕತ್ತುಬಗ್ಗಿಸಿ ನಮಸ್ಕಾರ ಅನ್ನಬೇಕು,
ಇಲ್ಲಾಂದ್ರೆ ಅವ್ರು ಮುನಿಸಿಕೊಳ್ತಾರೆ, ಸಭಾತ್ಯಾಗ ಮಾಡ್ತಾರೆ, ಕೊನೆಗೂ ಬೀದಿಗಿಳಿದು ಕೂಗಾಡಕ್ಕೂ ಶುರು ಮಾಡ್ತಾರೆ. ಇದೆಲ್ಲ ನಡೆದಿರುವುದು ಕೇವಲ ಆಹ್ವಾನ ಪತ್ರಿಕೇಲಿ ಹೆಸ್ರು ಇಲ್ಲದ್ದಕ್ಕೋ, ವೇದಿಕೇಲಿ ತನಗೂ ಒಂದು ಕುರ್ಚಿ ಇಡದ್ದಕ್ಕೋ ಅಥವಾ ಊಟಕ್ಕೆ ಕರೆಲಿಲ್ಲ ಅನ್ನೋದಕ್ಕೂ ಇಂಥ ಸಿಲ್ಲಿ ವಿಷ್ಯಗಳಿಗೆ ಜಗಳವಾಡೊದು, ಸಭಾತ್ಯಾಗ ಮಾಡೋದ್ರಲ್ಲಿ ನಮ್ 'ಜನನಾಯಕ'ರು ನಿಸ್ಸೀಮರು ಬಿಡಿ. ಇದಕ್ಕೆಲ್ಲಾ ಇಷ್ಟು ರಾದ್ಧಾಂತ ಮಾಡುವ ನಮ್ಮ ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳ ಬಗ್ಗೆ ಇಷ್ಟು ತಲೆಬಿಸಿ ಮಾಡ್ಕೋತಾರೆಯೇ? ನಮ್ಮದೇ ಊರಿನ ಜನಪ್ರತಿನಿಧಿಯೊಬ್ಬನ ಬಳಿ ನಾವೇ ಹೋಗಿ ಮಾತಾಡಬೇಕಾದ್ರೆ 'ಅರ್ಜಿ' ನೀಡಿ ಅಪ್ಪಣೆ ಪಡೆದು ಅವನತ್ರ ಮಾತಾಡ್ಬೇಕು. ಇಲ್ಲಾಂದ್ರೆ ಜಪ್ಪಯ್ಯ ಅಂದ್ರು ಆತ ಮುಖವೆತ್ತಿಯೂ ನೋಡಲ್ಲ ಬಿಡಿ. ಆಹ್ವಾನ ಪತ್ರಿಕೆ ನೀಡಿಲ್ಲ, ಹೆಸರು ಬರೆದಿಲ್ಲ, ಊಟಕ್ಕೆ ಕರೆದಿಲ್ಲ, ಸ್ವಾಗತ ಮಾಡಿಲ್ಲ ಅಂತ ಸಿಡ ಸಿಡ ಎನ್ನುವವರು, ತಮ್ಮದೇ ಊರಿನ ಕಾಲುಸೇತುವೆ ಬಗ್ಗೆ ಬೊಬ್ಬಿಡಲಿ ನೋಡೋಣ. ಓರ್ವ ಜನನಾಯಕನಿಗೆ ಬೇಕಾಗಿರುವುದು ಅದ್ದೂರಿಯ ಗೌರವವಲ್ಲ, ಆತ ಮಾಡಬೇಕಾಗಿರುವುದು ಅಭಿವೃದ್ದಿಯ ಕೆಲಸ. ಜನಸಾಮಾನ್ಯನ ನಡುವೆ ಕೂ ತಕ್ಷಣ ಆತನೇನು ಚಿಕ್ಕವನಾಗಿಬಿಡ್ತಾನಾ? ಒಂದು ವೇಳೆ ಎಷ್ಟೇ ದೊಡ್ಡ ನಾಯಕನೇ ಆಗಿರಲಿ, ಜನಸಾಮನ್ಯರೇ ಆತನನ್ನು ಆರಿಸಿ ಕಳಿಸಿದ್ದಲ್ವಾ? ಆದರೆ ನಮ್ಮ ರಾಜಕಾರಣಿಗಳಿಗೆ ಬೇಕಾಗಿರುವುದು ಪ್ರಚಾರ, ಕುರ್ಚಿ ಮತ್ತು ಹಣ! ಮಾತ್ರ. ಆದ್ರಿಂದ ಅವರು ಎಲ್ಲೇ ಹೋದ್ರೂ ಈ ಮೂರಕ್ಕೆ ಹೋರಾಡುತ್ತಾರೆ ಅಷ್ಟೇ. ಏನಂತೀರಿ?

No comments: