Wednesday, December 19, 2007

ಆದರ್ಶಗಳ ಬಗ್ಗೆ ಕೊರೆಯುವ ಶಿಕ್ಷಕರು ಬೇಡ, ಶಿಕ್ಷಕನೇ 'ಆದರ್ಶ'ವಾಗಬೇಕು..

"ಪಾಠ ಕೇಳದ ವಿದ್ಯಾರ್ಥಿಗಳಿಗೆ ಕರೆಂಟ್ ಶಾಕ್ ಕೊಟ್ಟ ಶಿಕ್ಷಕ"!!?? ಪತ್ರಿಕೆಯಲ್ಲಿ ಈ ಸುದ್ದಿ ಓದಿ ನನಗೂ ಶಾಕ್ ?! ಮುಂಬೈನ ಶಿಕ್ಷಕನೊಬ್ಬ ಪಾಠ ಸರಿಯಾಗಿ ಕೇಳದ ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾನೆ. ಮಹಾರಾಷ್ಟ್ರದ ಜಲಂಗಾವ್ ಜಿಲ್ಲೆಯ ಭೂಸವಲ್ನಲ್ಲಿರುವ ಸುಮಂತ್ ಮಿಶ್ರಾನೇ ಈ 'ಶಾಕ್ ಶಿಕ್ಷಕ'! ತನ್ನ ಪಾಠವನ್ನು ಸರಿಯಾಗಿ ಕೇಳುತ್ತಿಲ್ಲ ಎಂದು ಭಾವಿಸಿದ ಆತ, ಭೌತಶಾಸ್ತ್ರ ಪ್ರಯೋಗಾಲಯದಲ್ಲಿರುವ ಎಲಿಮೇಟರ್ನಲ್ಲಿ ಒಟ್ಟು 22 ವಿದ್ಯಾರ್ಥಿಗಳಿಗೆ ಶಾಕ್ ನೀಡಿದ್ದಾನೆ. ಅದೂ 8-9ನೇ ತರಗತಿ ವಿದ್ಯಾರ್ಥಿಗಳು. ಆದರೆ ಶಾಕ್ ಪ್ರಮಾಣ ಕಡಿಮೆ ಇದ್ದದ್ದರಿಂದ ಅನಾಹುತ ಏನೂ ಆಗಿಲ್ಲವಂತೆ. ಗಾಬರಿಪಟ್ಟ ವಿದ್ಯಾರ್ಥಿಗಳು ನಂತರ ಪೋಷಕರಿಗೆ ತಿಳೀಸಿದ್ದಾರೆ.

ಹೆತ್ತವರು ಪೊಲೀಸರಿಗೆ ದೂರು ಕೊಟ್ಟರು, ಆತನನ್ನು ಬಂಧಿಸಿಯೂ ಆಯ್ತು. ನಂತರ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಯಿತಂತೆ! ಇದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಡೆಯುತ್ತಿರುವ ಪುಟ್ಟ ಕಾನೂನು ಪ್ರಹಸನ. ಇಂಥ ಪ್ರಹಸನಗಳು ನಮ್ಮ ದೇಶದಲ್ಲೆನೂ ಬರಗಾಲ ಬಂದಿಲ್ಲ, ಬರಗಾಲ ಬಂದಿರೋದು ಬಡವರ ಹೊಟ್ಟೆಗೆ, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ, ಕುಡಿಯುವ ನೀರಿಗೆ, ನೈತಿಕತೆಗೆ..ಮಾತ್ರ ಬಿಡಿ. ಒಂದು ವೇಳೆ ಆ ಶಿಕ್ಷಕನ 'ಶಾಕ್. ನಿಜ ಪರಿಣಾಮವನ್ನೇ ಬೀರುತ್ತಿದ್ದರೆ? ಪುಟ್ಟ ಮಕ್ಕಳ ಬದುಕು ಏನಾಗುತ್ತಿತ್ತು? ಅದನ್ನು ಯಾರಾದರೂ ಯೋಚಿಸಿದ್ದಾರೆಯೇ?

ಇಂದು ದಿನೇ ದಿನೇ ಶಿಕ್ಷಕರ ಇಂಥ ಧೂರ್ತ ವರ್ತನೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಆರು ತಿಂಗಳ ಹಿಂದೆ ಶಿಕ್ಷಕಿಯ ಮಾತಿನಿಂದ ನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ. ವಿದ್ಯಾರ್ಥಿಗಳನ್ನು ಬಾಸುಂಡೆ ಬರುವಂತೆ ಹೊಡೆಯುವುದು, ಬೆತ್ತಲೆ ನಿಲ್ಲಿಸುವುದು ಇಂಥ ಸಂಗತಿಗಳು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದಕ್ಕೊಂದು ಕಟ್ಟುನಿಟ್ಟಿನ ಕ್ರಮ ಇನ್ನೂ ಜಾರಿಯಾಗಿಲ್ಲ.ವಿದ್ಯಾರ್ಥಿಯ ಸರ್ವಾಂಗೀಣ ಬದುಕಿನ ಮಾರ್ಗದರ್ಶಕ ಗುರು ಅನ್ನುತ್ತಾರೆ, ಆದರೆ ಅಂಥ ಗುರು ಏನು ಮಾಡುತ್ತಿದ್ದಾನೆ? ಕೇಳಿದ್ರೆ ಶಿಕ್ಷಕರು ಏನ್ ಹೇಳ್ತಾರೆ 'ಈಗಿನ ಮಕ್ಕಳೇ ಸರಿ ಇಲ್ಲ. ಆದ್ದರಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿಲ್ಲ,. ಶಿಕ್ಷೆ ಅನಿವಾರ್ಯವಾಗಿದೆ. ಮತ್ತೇನು ಮಾಡಲಿ?" ಇಂಥ ಅಸಹಾಯಕತೆಯ ಮಾತಾಡಿ ತಪ್ಪಿಸಿಕೊಳ್ಳುತ್ತಾರೆ. ಇಂದು ಆದರ್ಶ ಶಿಕ್ಷಕರು ಇರುವುದು ಬೆರಳಣಿಕೆಯಷ್ಟು.

ಹೌದು! ಸಮಾಜ ಬದಲಾಗಿದೆ ಒಪ್ಪಿಕೊಳ್ಳೋಣ. ಆದ್ರೆ ಬದಲಾದ ಸಮಾಜಕ್ಕನುಗುಣವಾಗಿ ವಿದ್ಯಾರ್ಥಿಯನ್ನು ರೂಪಿಸುವುದು ಶಿಕ್ಷಕನ ಕರ್ತವ್ಯ ಅಲ್ಲವೇ? ಆದ್ರೆ ಇಂದು ಪುಟ್ಟ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಕ್ಕೂ ನಮ್ಮ ಶಿಕ್ಷಕರು ಹಿಂದೆ-ಮುಂದೆ ನೋಡುತ್ತಿಲ್ಲ. ಶಿಕ್ಷಣ ವ್ಯವಸ್ಥೆ ಎಷ್ಟು ಕೆಟ್ಟದ್ದಾಗಿದೆ ನೋಡಿ. ಆದ್ರೆ ಅಂಥವರಿಗೆ ಶಿಕ್ಷೆ ಮಾತ್ರ ಏನೂ ಇಲ್ಲ. ಕಂಬಿಯೊಳಗೆ ಒಂದು ಬಾರಿ ನಿಲ್ಲಿಸಿ, ಆಮೇಲೆ 'ಜಾಮೀನು' ಮೂಲಕ ಬಿಡುಗಡೆ ಮಾಡುವುದು. ಒಂದು ರೀತಿಯಲ್ಲಿ ಮನೋರಂಜನಾ ಪ್ರಹಸನದಂತೆ. ಆತ ಅಪರಾಧಿಯೆಂದು ತಿಳಿದ ಪರಿಣಾಮಕಾರಿ ಶಿಕ್ಷೆಯಿಲ್ಲ. ಆದ್ದರಿಂದ ಕೆಲವು ನೀಚ ಶಿಕ್ಷಕರು ಈ ಪ್ರವೃತ್ತಿಯನ್ನು ಮುಂದುವರಿಸುತ್ತಲೇ ಇದ್ದಾರೆ. ಅವರಿಗೆ ಗೊತ್ತು ಶಿಕ್ಷೆ ಎಷ್ಟಾದ್ರೂ ಅಷ್ಟೇ...ಹೇಗಾದ್ರೂ ಬಚಾವ್ ಖಂಡಿತ ಎಂದು. ಮತ್ಯಾಕೆ ಹೆದರಿಕೆ? ಅಧ್ಯಾಪಕರೊಬ್ಬರು ಬರೆದ ಲೇಖನ ಓದಿದ್ದೆ. ಸುಮಾರು ಒಂದು ವರ್ಷದ ಹಿಂದೆ. ಅವರು ಹೇಳಿದ್ದ ಪರಿ ಹೇಗಿತ್ತು ಅಂದ್ರೆ ಮಾಡೋ ಅನಾಚರಗಳೆಲ್ಲ ವಿದ್ಯಾರ್ಥಿಗಳದ್ದೇ..ಆದ್ದರಿಂದ 'ಗುರು' 'ಲಘು'ವಾಗುತ್ತಾನೆ ಅನ್ನೋ ಅರ್ಥದಲ್ಲಿ ಹೇಳಿದ್ರು. ಬಹುಶಃ ಶಿಕ್ಷಕರ ಇಂಥ ನೀಚ ವರ್ತನೆಗಳ ಬಗ್ಗೆ ಅವರಿಗಿನ್ನೂ ತಿಳಿದಿಲ್ಲವೆನಿಸುತ್ತೆ. ಅಂಥವರು ತಿಳಿದುಕೊಳ್ಳಲಿ, ನೀಚ ಶಿಕ್ಷಕರಿಗೆ ಒಂದಿಷ್ಟು ಉತ್ತಮವಾದುದನ್ನು ಕಲಿಸಿಕೊಡಲಿ ಎಂಬುದೇ ನನ್ ಆಶಯ.

'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಅಂದಿದ್ದಾರೆ. ಆದರೆ ಬಹಳ ಹಿಂದೆ ಈ ಮಾತಿಗೂ ಮಹತ್ವವಿತ್ತು, ಗುರುಗಳೂ ಹಾಗೇ ಇದ್ರು. ಆದರೆ ಇಂದು ಅದಕ್ಕೆ ತದ್ವಿರುದ್ಧ. ಆದರೆ ಓರ್ವ ಉತ್ತಮ ಶಿಕ್ಷಕನಿಗೂ ವಿದ್ಯಾರ್ಥಿ ಇಂದಿಗೂ ತಲೆಬಾಗುತ್ತಾನೆ ಅನ್ನೋದು ನಿತ್ಯ ಸತ್ಯ. ಆದ್ರೆ ಪರಿಫೂರ್ಣ ಶಿಕ್ಷಣ ನೀಡುವ ಕೆಲ್ಸ ಶಿಕ್ಷಕನದು. ಕೇವಲ ಹೊಟ್ಟೆಪಾಡಿಗೆ ದುಡಿಯುವವನು ಶಿಕ್ಷಕನಾಗುವ ಬದಲು ವ್ಯಾಪಾರಿಯಾಗುತ್ತಾನಷ್ಟೇ. ಆದ್ರೆ ಪರಿಸ್ಥಿತಿಯ ಅನಿವಾರ್ಯತೆ ಹಿಂಗಿದೆ ಎನ್ನಬಹುದು..ಪರಿಸ್ಥಿತಿ ಹೇಗೆ ಇರಲಿ ಒಳ್ಳೆ ಶಿಕ್ಷಣ ಬೇಕು ಅನ್ನೋದು ಎಲ್ಲರ ಆಶಯ. ಬೇಕು ಕೂಡ. ಹೀಗಿರುವಾಗ ಶಿಕ್ಷಣ ರಂಗಕ್ಕೆ ಹೊಲಸು ತಂದಿಡುವ ನೀಚ ಶಿಕ್ಷಕರು ಬೇಕಾಗಿಲ್ಲ. ಅಂಥವರಿಗೆ ಕಠಿಣ ಶಿಕ್ಷೆ ನೀಡಬೇಕು. ವಿದ್ಯಾರ್ಥಿಯೊಬ್ಬ ಬದುಕು ಕಳಕೊಂಡ್ರೆ ಮತ್ತೆ ರೂಪಿಸಲು ಸಾಧ್ಯವಿಲ್ಲ. ನಮಗೆ ಆದರ್ಶ ಶಿಕ್ಷಕ ಬೇಕು. ಕ್ಲಾಸಿನಲ್ಲಿ ಪಠ್ಯಪುಸ್ತಕದಲ್ಲಿದ್ದ ಯಾರ್ಯಾರ ಆದರ್ಶಗಳ ಬಗ್ಗೆ ಗಂಟೆಗಟ್ಟಲೆ ಕೊರೆದು, ಹೊರಗೆ ಬಂದು 'ನೀಚ ಪ್ರವೃತ್ತಿ'ಯನ್ನು ಹುಟ್ಟುಹಾಕುವ ಶಿಕ್ಷಕರು ಬೇಕಿಲ್ಲ. ಅಂಥವರ ವಿರುದ್ಧ ಸೂಕ್ತ ಕ್ರಮ ಅಗತ್ಯವಿದೆ. ಸಮಾಜದಲ್ಲಿ ಕೆಟ್ಟದ್ದನ್ನು ಹುಟ್ಟುಹಾಕುವ ಶಿಕ್ಷಕರನ್ನು ಸಮಾಜದ ಸಮಸ್ತರೂ ವಿರೋಧಿಸಬೇಕು. ಏನಂತೀರಿ?

3 comments:

Mahantesh said...

ಆದರ್ಶಗಳ ಬಗ್ಗೆ ಕೊರೆಯುವ ಶಿಕ್ಷಕರು ಬೇಡ, ಶಿಕ್ಷಕನೇ 'ಆದರ್ಶ'ವಾಗಬೇಕು.. ಅನ್ನೋದು ನಿಜಾ.... ಆದ್ರೆ ಬೆಕ್ಕಿನ ಕೊರಳಿಗೆ ಘಮ್ಟೆ ಕಟ್ಟವವೂರು ಯಾರು? 2 ದಿನ T.V ನಲ್ಲಿ ನೊಡಿ ,ಒಂದು ದಿನ paperನಲ್ಲಿ ಓದಿ ಮರೆತುಬಿಡುವ ಜನರು ಎಚ್ಚತ್ತಕೊಳ್ಳವದು ಯಾವಾಗ?

ಹೆಸರು ರಾಜೇಶ್, said...

nammalli shikshakarannu rupisuva kramavinnu rupagondilla. adakke estella anahuta.
rajesh

ಚಿತ್ರಾ ಸಂತೋಷ್ said...

ಮಹಾಂತೇಶ್ ಮತ್ತು ರಾಜೇಶ್ ಅವರಿಗೆ ಕೃತಜ್ಞತೆಗಳು
ಹೌದು! ಜನರು ಎಚ್ಚೆತ್ತುಕೊಂಡಾಗ, ಉತ್ತಮ ಶಿಕ್ಷಕನನ್ನು ರೂಪಿಸಲು ಸಾಧ್ಯ.