Thursday, December 6, 2007

ಕ್ರೀಮ್ ಆಫ್ ಕೈಲಾಸಂ

ಇತ್ತೀಚೆಗೆ ಆಧುನಿಕ ರಂಗಭೂಮಿಯ ಹರಿಕಾರ ಟಿ.ಪಿ.ಕೈಲಾಸಂ ಅವರ ಬಗ್ಗೆ ಅಂಕಿತ ಪುಸ್ತಕ ಪ್ರಕಟಿಸಿರುವ 'ಕ್ರೀಮ್ ಆಫ್ ಕೈಲಾಸಂ' ಪುಸ್ತಕ ಓದಿದೆ. ಬಿ.ಎಸ್. ಕೇಶವರಾವ್ ಅದ್ರ ಸಂಪಾದಕರು. 140 ಪುಟಗಳ ಈ ಪುಸ್ತಕದ ಬೆಲೆ 70 ರೂಪಾಯಿ. ಒಂದು ಸಲ ಓದೋಕೆ ಕೂತರೆ ಸಾಕು ಮತ್ತೆ ನೀವು ಪೂರ್ತಿ ಓದದೆ ಎದ್ದೇಳುವುದಿಲ್ಲ. ಯಾಕೆಂದರೆ ಕೈಲಾಸಂ ಅವರ ನಾಟಕದಲ್ಲಿ ಬರುವ ಸನ್ನಿವೇಶಗಳು, ಸಂಭಾಷಣೆ, ಕೈಲಾಸಂ ಅವರ ಹಾಸ್ಯಭರಿತ ಮಾತುಗಳು, ಬದುಕು ಎಲ್ಲವನ್ನೂ ಸಂಪೂರ್ಣವಾಗಿ ಈ ಪುಸ್ತಕದಲ್ಲಿ ತೆರೆದಿಡಲಾಗಿದೆ. ಕೈಲಾಸಂ ಅವರ ಕೆಲವು ಮಾತುಗಳನ್ನು ಓದುವಾಗಂತೂ ನೀವು ನಕ್ಕು ನಕ್ಕು ಹಣ್ಣಾಗಿ ಬಿಡ್ತೀರಾ.

ಒಂದು ಘಟನೆ ಹೇಳುತ್ತೇನೆ. ಕೈಲಾಸಂ ಹೈಸ್ಕೂಲಲ್ಲಿ ಓದುತ್ತಿರಬೇಕಾದರೆ, ರಸಾಯನ ಶಾಸ್ತ್ರ ಪಾಠ ಮಾಡುತ್ತಿದ್ದ ಮೇಷ್ಟ್ರು ಕ್ಲಾಸಲ್ಲಿ "ಆಲ್ಕೋಹಾಲ್ ಎಷ್ಟು ಕೆಟ್ಟದ್ದು ಎಂಬುವುದಕ್ಕೆ ಪ್ರಾಯೋಗಿಕ ವಿಚಾರವೊಂದನ್ನು ಹೇಳುತ್ತೇನೆ. ಒಂದು ಬಿಳಿ ಬಕೇಟ್ನಲ್ಲಿ ನೀರು ಮತ್ತು ಇನ್ನೊಂದು ಕರಿ ಬಕೇಟ್ನಲ್ಲಿ ಬೀರು ತುಂಬಿಸಿಟ್ಟಿದೆ ಅಂದುಕೊಳ್ಳಿ. ಅಲ್ಲಿ ಒಂದು ಕತ್ತೆಯನ್ನು ತಂದು ನಿಲ್ಲಿಸಿದ್ರೆ ಏನು ಮಾಡುತ್ತೆ ಗೊತ್ತೆ? ಅದು ಸಂತೋಷದಿಂದ ನೀರನ್ನು ಕುಡಿಯುತ್ತದೆ ಹೊರತು ಬೀರನ್ನು ಮುಟ್ಟುವುದೂ ಇಲ್ಲ, ಮೂಸುವುದೂ ಇಲ್ಲ. ಇದರಿಂದ ನಿಮಗೇನನಿಸುತ್ತೆ.?" ಎಂದಾಗ ಕೈಲಾಸಂ ಅವರು ತಕ್ಷಣ 'ಅದ್ಕೆ ಸಾರ್ ಅದನ್ನ ಕತ್ತೆ ಅನ್ನೋದು' ಅಂದ್ರತೆ. ಒಂದ್ಸಲ ಯಾರೋ ಕೈಲಾಸಂ ಹತ್ತ ಬಂದು "ಏನ್ಸಾರ್, ನೀವು ಇತ್ತೀಚೆಗೆ ತುಂಬ ಲೀನಾಗ್ತಿದ್ದೀರಲ್ಲಾ!" ಅಂದಾಗ ನಗುನಗುತ್ತಾ 'No No No...ಲೀನಾಗ್ತಿಲ್ಲಾಪ್ಪಾ, but ತಲ್ಲೀನನಾಗ್ತೀದ್ದೇನೆ' ಎಂದು ಉತ್ತರಿಸಿದ್ದರಂತೆ.

ಇಂಥ ಹಲವಾರು ಹಾಸ್ಯ ಪ್ರಸಂಗಗಳು, ಕೈಲಾಸಂ ಅವರ ಇಡೀ ಬದುಕಿನ ಬಗ್ಗೆ ತುಂಬಾ ಚೆನ್ನಾಗಿ ನಿರೂಪಿಸಲಾಗಿದೆ. ಚಾಮರಾಜಪೇಟೆಯ ಕೆ.ವಿ ಅಯ್ಯರ್ ಅವರ ವ್ಯಾಯಾಮ ಶಾಲೆ ಪಕ್ಕದ ಇನ್ನೊಂದು ಕೋಣೆಯಲ್ಲಿ ವಾಸಿಸುತ್ತಿದ್ದ ಕೈಲಾಸಂ ಕುದುರೆ, ಹಸುಗಳನ್ನು ಕಟ್ಟುತ್ತಿದ್ದ ಒಂದು ಬದಿಯಲ್ಲಿ ತನ್ನ ರೂಮನ್ನು ಆರಿಸಿಕೊಂಡಿದ್ದು, ಅದಕ್ಕೆ 'ನೂಕ್' ಅಂತ ಹೆಸರು ನೀಡಿದ್ದು, ಹೆಗ್ಗಣ-ಇಲಿಗಳ ಬಿಲವಾಗಿದ್ದ ಆ ಸ್ಥಳದಲ್ಲಿ ಕುಳಿತು ಕೈಲಾಸಂ 'ನಾಟಕ'ಗಳನ್ನು ಬರೆದಿದ್ದು ಎಲ್ಲವನ್ನೂ 'ಕ್ರೀಂ ಆಫ್ ಕೈಲಾಸ'ದಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಕೈಲಾಸಂ ಬದುಕನ್ನೇ ನಮ್ಮೆದುರು ಆ ಪುಟ್ಟ ಪುಸ್ತಕ ಕಟ್ಟಿಕೊಡುತ್ತದೆ.

ಕೆಲವು ತುಣುಕುಗಳು
"ಒಬ್ಬ ವ್ಯಕ್ತಿ ಬಚ್ಚಲಿನಲ್ಲಿ ಬದುಕುವ ಹಕ್ಕಿಯಾಗಬೇಕು! ಇದರಲ್ಲಿ ಕೂತುಕೊಂಡು ಆಕಾಶ ನೋಡಬೇಕು. ಸೂರ್ಯನನ್ನು ನೋಡಬೇಕು. ಸುತ್ತಲಿನ ಜಗತ್ತನ್ನು ನೋಡಬೇಕು. ಅದಕ್ಕೆ ಈ ಕೋಣೆಯಲ್ಲಿ ಸರಿಯಾದ ವಾತಾವರಣವಿದೆ! ನಾನು ಇಲ್ಲಿದ್ದು ಏನಾದರೂ ಬರೆಯಲು ಸಾಧ್ಯ"
( ತನ್ನ ನೂಕ್ ಬಗ್ಗೆ-ಅನು: ಡಾ.ಶ್ರೀನಿವಾಸ ಕುಲಕರ್ಣಿ)


"ಎಲ್ಲ ಪ್ರೇಮವೂ ಕಣ್ಣು ಕಾಣಿಸದು! ಹುಚ್ಚಾದುದು! ಸುಂದರವಲ್ಲದ
ಬಾತುಮರಿಗಳನ್ನು ರಾಜಹಂಸದ ಮರಿಗಳೆಂದೂ, ಸುರೂಪವಿಲ್ಲದ
ತನ್ನ ಮಸಿಬಣ್ಣದ ಕಾಗೆಮರಿಗಳನ್ನು ಕಾಮನಬಿಲ್ಲಿನ ಬಣ್ಣದ ಗರಿಗಳಿರುವ
ಕಲಕಂಠವೆಂದೂ ಕಾಣುವ ಪ್ರೇಮವನ್ನು ಏನೆಂದು ಹೇಳೋಣ!
ಪ್ರೇಮಗಳಿಗೆಲ್ಲಾ ಅತ್ಯಂತ ಕುರುಡಾದದ್ದೂ, ಅತ್ಯಂತ ಹುಚ್ಚಾದದ್ದೂ
ಎಂದರೆ ವಿಚಿತ್ರವೂ ಆಶ್ವರ್ಯಕರವೂ ಆದ ಮಾತೃಪ್ರೇಮವೇ
ಎಂದು ನನ್ನ ಖಂಡಿತವಾದ ಎಣಿಕೆ"
(ಅನು: ಜಿ.ಪಿ. ರಾಜರತ್ನಂ)


"ಅಮ್ಮ ಈಗಿಲ್ಲಿದ್ದಿದ್ರೆ ಎಷ್ಟು ಆನಂದಪಡ್ತಿದ್ಳೋ"
(ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕನ್ನಡ ಬಾವುಟ ಹಾರಿಸುವಾಗ ಮಾಸ್ತಿ ಅವರ ಕಿವಿಯಲ್ಲಿ)

ವಿಮರ್ಶಕ:
ಸಾರ್, ನಿಖರವಾಗಿ ನಿರ್ದಿಷ್ಟವಾಗಿ ನಿಮ್ಮ ಬರಹದ ಬಗ್ಗೆ ನಿಮಗೇನಿಸುತ್ತೆ ಎಂಬುದನ್ನು without any reservation ಹೇಳಿ
ಕೈಲಾಸಂ: frank ಆಗಿ ಹೇಳ್ಲೇ ಬೇಕೂ ಅಂದ್ರೆ, ಬರಹದಲ್ಲಿರೋದು ಕಾಲ್ಭಾಗ ವಿಸ್ಕಿ ಅನ್ನೋದಾದ್ರೆ ಮುಕ್ಕಾಲು ಭಾಗ ಬರೀ ಸೋಡ, ಅರ್ಥಾತ್ ಬರೇ ಗ್ಯಾಸು!


"ನಾನು ಜೋಕ್ಮಾಡ್ದಾಗ ನನ್ನನ್ನ ನೋಡಿ ನೀವ್ನಗ್ತೀರಿ, ಒಳ್ಳೇದು. ಆದ್ರೆ ನಾನು ಜೋಕ್ಮಾಡ್ದಿದ್ದಾಗ್ಲೂ ನಗೋ ನಿಮ್ಮನ್ನ ನೋಡಿ ನಾನು ನಗ್ತೀನಿ! ಎಂಥ ವಿಪರ್ಯಾಸ ಅಲ್ವೇ?"

"ಕಾಡಿಗ್ಹೋದ್ರೂ comfort ಇರ್ಬೇಕು"

ಒಬ್ಬ: cigarette-definition please sir,
ಕೈಲಾಸಂ: Fool on one side, fire on other side

ಒಬ್ಬ: well Mr. Kailasam, what is your conception of life?
ಕೈಲಾಸಂ: Life itself is a production of conception ಅಲ್ವೇನ್ರೀ?

No comments: