Wednesday, December 19, 2007

ತೃಪ್ತಿಗಾಗಿ ಏನಾದ್ರೂ ಗೀಚೋಣ..

"ನಾನು ಬರೆಯುತ್ತೇನೆ
ಋಷಿಯ ನೋವಿಗೆ
ರೊಚ್ಚಿಗೆ ಮತ್ತು ಹುಚ್ಚಿಗೆ
ಅಥವಾ
ನಂದಿಸಲಾರದ ಕಿಚ್ಚಿಗೆ"
ಕವಿಹೃದಯದ ಹಂಬಲವಿದು. ಬರೆಯುವ ತುಡಿತವಿದು. ಇವತ್ತು ಬೆಳಿಗ್ಗೆ ನನ್ನ ಆತ್ಮೀಯರೊಬ್ಬರು ಪೋನು ಮಾಡಿದ್ದರು. ಅವರೊಬ್ಬ ಗೀತರಚನೆಗಾರ. ಪ್ರಸಿದ್ಧ ಸಿನಿಮಾಗಳಿಗೆ ಹಾಡು ಬರೆದವರು. ದಿನಾ ನೋಡಿದ್ರೆ ಏನಾದ್ರೂ ಬರೆಯುತ್ತಾ ಇರುತ್ತಾರೆ. ಹೀಗೆ ಮಾತಾಡ್ತಿರಬೇಕಾದ್ರೆ ಅವರ ಅನುಭವಗಳನ್ನು ಹೇಳುತ್ತಿದ್ದರು. ಅವರು ಪ್ರತಿಷ್ಠಿತ ಕಾಲೇಜೊಂದಕ್ಕೆ ಸೇರಿ ಅಲ್ಲಿನ ವಾತಾವರಣ ಹಿಡಿಸದೆ, ವಾಪಾಸ್ ಮನೆಗೆ ಬಂದು ತನ್ನ ಹಳ್ಳಿಯಲ್ಲಿಯೇ ಓದು ಮುಗಿಸಿದರು. ಅವರು ಹೇಳಿದ ಧಾಟಿ ಹೀಗಿತ್ತು "ಆ ಕಾಲೇಜಿನಲ್ಲಿ ನಾ ಓದುತ್ತಾ ಇದ್ರೆ ಕಾಲೇಜಿನ ಪ್ರಸಿದ್ದಿಯೇ ನನ್ನ ಯಾವುದೋ ಒಬ್ಬ ಉನ್ನತ ಅಧಿಕಾರಿಯಾಗಿ ರೂಪಿಸುತ್ತಿತ್ತು. ಯಾಕಂದ್ರೆ ಆ ಕಾಲೇಜು ಅಂಥದ್ದು. ಆದ್ರೆ ನಾನು ಅಲ್ಲಿ ಇರಲಿಲ್ಲ. ಮನೆಗೆ ವಾಪಾಸ್ ಆಗಿ, ಹುಟ್ಟೂರಲ್ಲೇ ಓದಿದೆ.ಚಿಕ್ಕಂದಿನಿಂದಲೂ ನನ್ನ ಬರವಣಿಗೆಯ ತುಡಿತ ನನ್ನ ಕೈಬೀಸಿ ಕರೆಯುತ್ತಿತ್ತು. ನಾನು ಕವನ ಬರೆದ್ರೆ ಅದು ಸಕ್ಸಸ್ ಆಗಲಿ, ಏನೇ ಅಗ್ಲೀ..ಬರೆದ ಖುಷಿ ಇದೆಯಲ್ಲಾ ಅದು ಬೇರೆಲ್ಲೂ ಸಿಗದು. ನನ್ನ ಕವನಗಳಿಗೆ ಇಂದು ಒಳ್ಳೆ ಮಾರುಕಟ್ಟೆಯಿದೆ. ಹಾಗಂತ ನಂಗೆ ಹಣಬೇಡ, ತೃಪ್ತಿಯಿದೆಯಲ್ಲಾ ಅದು ಬೇಕು. ಒಂದು ವೇಳೆ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದ್ದರೆ ನಾನು ಯಾವುದೇ ಕಂಪನಿಯಲ್ಲಿ ದೊಡ್ಡ ಅಧಿಕಾರಿಯಾಗಿರುತ್ತಿದ್ದೆ. ಇಂಥಹ ಖುಷಿಯ ದಿನಗಳು ಇರುತ್ತಿದ್ದವೋ ಇಲ್ಲವೋ?" ಎಂದರು.


ನನಗೂ ಎಷ್ಟೋ ಬಾರಿ ಹೀಗನಿಸುವುದುಂಟು. ಹುಚ್ಚೋ, ಖುಷಿಯೋ, ಹವ್ಯಾಸವೋ ಈ ಬರವಣಿಗೆಗಳಲ್ಲಿ ಇರೋ ತೃಪ್ತಿ ಬೇರೆಲ್ಲೂ ಸಿಗದು. ಏನೇ ಆಗ್ಲಿ ಅದನ್ನು ಕಾಗದದಲ್ಲೋ, ಬ್ಲಾಗ್ ಮೇಲೋ ಎಲ್ಲದ್ರೂ ಗೀಚಬೇಕು. ತಪ್ಪೋ/ಸರಿಯೋ ಅನ್ನುವುದಕ್ಕಿಂತ ನಾನು ಬರೆಯಬೇಕು ಅನ್ನೋ ತುಡಿತ, ಹಂಬಲವಿದೆಯಲ್ಲಾ..ನಾವು ಬರೆಯುತ್ತಾ ಹೋದಂತೆ ಖುಷಿ ಕೊಡುತ್ತೆ. ಯಾರಾತ್ರನೂ ಮಾತಾಡಕ್ಕಾಗದೆ, ಏನೋ ಸಂಕೋಚವಿದ್ರೂ ಈ ಬರವಣಿಗೆಗೆ ಅದೆಲ್ಲ ಇರಲ್ಲ. ನಾನು ಬರೆಯುತ್ಥೇನೆಂಬ ಧನ್ಯತಾಭಾವ ಮಾತ್ರ.

ಮೊನ್ನೆ ವಿವೇಕ್ ಶಾನುಭಾಗ ಅವರು ಮಾತಾಡ್ತಿರಬೇಕಾದ್ರೆ 'ಬ್ಲಾಗ್ ಬರೆಯುವುದರಿಂದ ತೃಪ್ತಿ ಸಿಗುತ್ತೆ' ಅನ್ನುತ್ತಿದ್ದರು. ಇಂದು ಕೇವಲ ಸಾಹಿತಿಗಳು, ಉತ್ತಮ ಬರಹಗಾರರು ಮಾತ್ರವಲ್ಲ, ರಾತ್ರಿ-ಹಗಲೆನ್ನದೆ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುವವರೂ ಬ್ಲಾಗ್ ತೆರೆದು..ಕನಸೋ/ನನಸೋ ಅಚ್ಚಕನ್ನಡದಲ್ಲಿ ಗೀಚುತ್ತಾ ಹೋಗುತ್ತಾರೆ. ಅದನ್ನೆಲ್ಲ ನೋಡಿದಾಗ ಮನಸ್ದಸು ತುಂಬಿ ಬರುತ್ತದೆ. ಕಾರಂತರು ಹೇಳಿದಂತೆ 'ಬರಿ ಹರಿ' . ತಪ್ಪೋ/ಸರಿಯೋ ಬರೆಯಬೇಕು ಅಷ್ಟೇ.

No comments: