Wednesday, December 26, 2007

ಕಮರ್ಶಿಯಲ್ ದೇವಾಲಯಗಳು?!

ಇತ್ತೀಚೆಗೆ ಜಗತ್ಪ್ರಸಿದ್ಧ ದೇವಾಲಯಕ್ಕೆ ಒಂದಕ್ಕೆ ಭೇಟಿಯಾಗಿದ್ದೆ. ಹೆಸ್ರು ಪ್ರಸ್ತಾಪಿಸಲ್ಲ. ನಾನು, ನನ್ ಅಂಕಲ್, ಅಣ್ಣ ಜೊತೆಗೇ ಹೋಗಿದ್ದು. ಈವರೆಗೆ ನಾನೂ ನೋಡಿರಲಿಲ್ಲ. ಅದ್ರ ಬಗ್ಗೆ ಹೇಳಿದ್ರೆ ಯಾರಾದ್ರೂ ಉರಿದುಬೀಳ್ತಾರೆ. ಆದ್ರೂ ಆ ದೇವಾಲಯದ ಆಡಳಿತ ಮಂಡಳಿ ಮಾತ್ರ ನಾವು ಮಹಾ ದಾನಿಗಳೆಂದೇ ಬಡಾಯಿ ಕೊಚ್ಚಿಕೊಳುತ್ತಿದ್ದಾರೆ. ಇರ್ಲಿ ಅಲ್ಲಿ ಹೋದ ಬಗ್ಗೆ ಒಂಚೂರು ಹೇಳ್ತೀನಿ.

ನಾವು ದೇವಾಲಯ ಹೊಕ್ಕಾಗ ಹಣ್ಣುಕಾಯಿ ಖರೀದಿಸಿದೆವು. ಮತ್ತೆ ಒಳಗಡೆ ಹೋಗಿ ಹಣ್ಣುಕಾಯಿ ದೇವರಿಗೆ ಅರ್ಪಿಸಬೇಕಲ್ಲಾ? ಹಾಗೆ ಹೋಗಿ ಒಬ್ಬ ಅರ್ಚಕನತ್ರ ಕೊಟ್ಟೆವು. ಆತನ ಕೈಗಿಗೆ ಹಣ್ಣುಕಾಯಿ ಇತ್ತಿತ್ತೇ ತಡ, 150 ರೂಪಾಯಿಯ ಚೀಟಿನ ನನ್ನ ಕೈಗೆ ತುರುಕಿ 'ತೆಕೊಳ್ಳಿ' ಎಂದು ಒತ್ತಾಯಿಸಿದ. ಮುಖ ಸಿಂಡರಿಸಿಕೊಂಡು, ಒಂದೆಡೆ ಮೊಬೈಲಲ್ಲಿ ಮಾತಾಡುತ್ತಿದ್ದ ಆತ ಯಾಕೆ ಈ ರೀತಿ ಒತ್ತಾಯಿಸುತ್ತಿದ್ದಾನೆ ಅನ್ನೊದೇ ತಿಳಿಯದು. ನಾನು ಕಕ್ಕಾಬಿಕ್ಕಿ. ಅಂತೂ ಆತ ಒತ್ತಾಯ ಮಾಡಿದಾಗ ತೆಗೆದುಕೊಳ್ಳಲೇಬೇಕು. ನಾನೂ ಹಾಗೆ ಮಾಡಿದೆ. ಮತ್ತೆ ನಮ್ಮನ್ನು ಕುಳಿತುಕೊಳ್ಳಿಸಿ ಒಂದಿಷ್ಟು ಆರತಿ ಬೆಳಗಿದ. ಆಮೇಲೆ ಈ ನೂರೈವತ್ತು ರೂಪಾಯಿ ಯಾಕೆ ಅಂತ ಕೇಳಿದಾಗ ಒಬ್ಬ ಹೇಳಿದ '50 ರೂಪಾಯಿಯ ಬುಕ್ ತೆಗೆದುಕೊಳ್ಳಿ. ಉಳಿದಿದ್ದು ಸೇವೆ' ಅಂತ. ನಮ್ಮ ಥರ ಹೊಸತಾಗಿ ಬಂದವರು ಅರ್ಚಕನ ಸಿಡಸಿಡ ಮುಖನೋಡಿ 150 ಕೊಟ್ಟು ಚೀಟಿ ಇಸ್ಕೊಳ್ತಾ ಇದ್ರು. ನಿತ್ಯ ಹೋಗೋರು ಅವರಷ್ಟಕ್ಕೆ ಹೋಗಿ ಕೈಮುಗಿದು ಬರ್ತಾ ಇದ್ರು. ಇಲ್ಲಿ 150 ವ್ಯರ್ಥ ಅಂತ ನಂಗೇನು ಚಿಂತೆಯಿಲ್ಲ. ಆ ದೇವಾಲಯದಲ್ಲಿ ಒತ್ತಾಯಪೂರ್ವಕವಾಗಿ ಹಣ ಕೀಳುತ್ತಿದ್ದ ಅಂತಹ ಪ್ರಸಿದ್ಧ ದೇವಾಲಯದ ಆಡಳಿತ ಮಂಡಳಿಯ ಅವಿವೇಕದ ಬಗ್ಗೆ ಹೇಸಿಗೆ ಮೂಡಿತು. ಇದು ಯಾವ ದೇವಸ್ಥಾನ ಅಂತ ಪ್ರತ್ಯೇಕ ಹೇಳಿ ಪ್ರಯೋಜನವಿಲ್ಲ, ಬದಲಾಗಿ 'ಬ್ಯುಸಿನೆಸ್ ದೇವಾಲಯ'ಗಳಿಗೆ ಇದೂ ಒಂದು ಉತ್ತಮ ನಿದರ್ಶನ ಅನ್ನೋದು ಮಾತ್ರ ಅಷ್ಟೇ ಸತ್ಯ.

ಇಂಥಹ ಹಲವಾರು ದೇವಸ್ಥಾನಗಳಿವೆ ಬಿಡಿ. ಆದ್ರೆ ದಿನನಿತ್ಯ ದೇಶ-ವಿದೇಶಗಳಿಂದ ಬರುವ ಅದೆಷ್ಟೋ ಭಕ್ತರಿಗೆ ಯಾವ ರೀತಿ ಮೋಸ ಮಾಡ್ತಾರೆ ನೋಡಿ. ನಾನು ಅಲ್ಲಿದ್ದಾಗಲೇ ಹಲವಾರು ಮಂದಿ ವಿದೇಶಿಯರು ಹಣ ಕೊಟ್ಟು ಚೀಟಿ ಪಡೆಯುತ್ತಿದ್ದರು. ಅರ್ಚಕ ಚೆನ್ನಾಗಿ ಇಂಗ್ಲಿಷ್ ನಲ್ಲಿ ಯೇ ಮಾತಾಡಿ ಬಂದವರನ್ನು ಮರುಳು ಮಾಡುತ್ತಿದ್ದ. ವಟವಟಗುಟ್ಟುವ ಕಪ್ಪೆಯಂತೆ ಪಟಪಟನೆ ಇಂಗ್ಲೀಷ್ ಮಾತಾಡಿ, ಸಿಡ ಸಿಡ ಎನ್ನುತ್ತಾ ಆತ ಭಕ್ತರಿಗೆ ಪೋಸ್ ನೀಡುತ್ತಿದ್ದುದು ನೋಡಿದ್ರೆ ಯಾರಾದ್ರೂ ಬೆರಗಾಗಬೇಕು. ಭಾಷೆ ತಿಳಿಯದ, ಇಲ್ಲಿನ ಆಚಾರ-ವಿಚಾರ ತಿಳಿಯದ, ಸೇವೆ ಅಂದ್ರೆ ಏನೂಂತ ಅರಿಯದ 'ಅಮಾಯಕ'ರು ಹಣ ಸುರಿದು ಹೋಗುತ್ತಿದ್ದರು. ಅರ್ಚಕನ ತಟ್ಟೆಗೆ, ದೇವರ ಡಬ್ಬಿಗೆ ಎಲ್ಲಾ ಕಡೆಯೂ ಹಣವೇ ಹಣ..ಯಾರೂ ಅಲ್ಲಿ ಒಂದು ರೂಪಾಯಿ, ಐದು ರೂಪಾಯಿ ಹರಕೆ ಹಾಕಲ್ಲ..ನೂರು, ಐನ್ನೂರರ ನೋಟುಗಳು..ಅದನ್ನು ನೋಡಿ ನಂಗೇ ವಿಚಿತ್ರ ಅನಿಸ್ತು. ನಾವು ದೇವಾಲಯಕ್ಕೆ ಬಂದಿದ್ದೇವೆಯೋ ಅಥವಾ ಯಾವುದಾದ್ರೂ ಬ್ಯುಸಿನೆಸ್ ಮಳಿಗೆಗೆ ಬಂದಿದ್ದೇವೋ ಅನುಮಾನ ಕಾಡತೊಡಗಿತ್ತು. ಒಂದು ರೀತೀಲಿ ಉಳ್ಳವರಿಗೆ ಮಾತ್ರ ಇದು ದೇವಾಲಯ..ನಿಜವಾದ ಭಕ್ತರಿಗೆ ಇದು 'ದೇವಸ್ಥಾನ' ಆಗದು. ಇಲ್ಲಿ ಹೋದವರೆಲ್ಲಾ 150 ಕೊಡಬೇಕಂದ್ರೆ..ತುತ್ತು ಅನ್ನಕ್ಕೂ ಗತಿಯಿಲ್ಲದ ಬಡವನೊಬ್ಬ ದೇವರ ಆಶೀರ್ವಾದ ಪಡೆದು ಬರ್ತೀನಿ ಅಂದ್ರೆ...ಇದ್ದ ನೂರು ರೂಪಾಯಿಯನ್ನೂ ಅರ್ಚಕರು ಕಿತ್ತುಕೊಳ್ಳಲ್ಲ ಅನ್ನೋದ್ರಲ್ಲಿ ಗ್ಯಾರಂಟಿ ಏನು? ಇದೆಲ್ಲಾ ಹಣ ಮಾಡುವ ಐಡಿಯಾ..ದೇವ್ರ ಸೇವೆನೋ..ಉಳ್ಳವರ ಉದರ ಸೇವೆನೋ ತಿಳಿತಾ ಇಲ್ಲ. ಈ ರೀತಿಯ ಬ್ಯುಸಿನೆಸ್ ಗಾಗಿ ಹುಟ್ಟಿಕೊಂಡಿರುವ ಕಮರ್ಶಿಯಲ್ ದೇವಸ್ಥಾನಗಳನ್ನು ಕೆಡವಿ ಹಾಕಿದ್ರೂ ಯಾವ ಪಾಪನೂ ಬರಲ್ಲ. ಸನಾತನ ಧರ್ಮದ ಉಳಿವಿಗಾಗಿ ದೇವಸ್ಥಾನಗಳು ಬೇಕು ಅಂತ ಬೊಬ್ಬಿಡುತ್ತೇವಲ್ಲಾ? ಈ ರೀತಿಯ ಹಣ ಮಾಡುವುದಕ್ಕಾಗಿ ಮೂರ್ತಿ ಸ್ಥಾಪಿಸಿ, ಪೂಜೆ ಮಾಡಿ ಹಣ ಕೀಳುವವರನ್ನು ಮೊದಲು ಹೊಡೆದೋಡಿಸಬೇಕು. ದಾನ ಮಾಡ್ತೀವಿ..ಲೋಕ ಕಲ್ಯಾಣಕ್ಕಾಗಿ ಹೋಮ ಹವನ ಮಾಡ್ತೀವಿ ಎನ್ನುತ್ತಾ ಪುಕ್ಕಟೆ ಪ್ರಚಾರ ಮಾಡುವ ಪ್ರಸಿದ್ಧ ದೇವಾಲಯಗಳು ಹೀಗಾದರೆ...?!!!

4 comments:

Rajesh said...

Devaru Ninna Hrucayadalle eddane. Devalayagalige Hogabedi.
shubhashayagalu
geleya
rajesh

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಥ್ಯಾಂಕ್ಯೂ ರಾಜೇಶ್,
ನೀವು ಹೇಳೋದು ಸತ್ಯ..ಆದ್ರೆ ದೇವಾಲಯಗಳಿಗೆ ನಮ್ಮ ದೇಶದಲ್ಲಿ ಅಷ್ಟೇ ಪ್ರಾಮುಖ್ಯತೆ ಇದೆ. ದೇವರು ಹೃದಯದಲ್ಲಿ ಇದ್ದಾನೆ ಎಂದು ಪೂಜಿಸುವವರು ಇರುವುದು ತೀರ ವಿರಳ. ನಂಗೆ ದೇವರಿದ್ದಾನೋ, ಇಲ್ವೋ ಅದು ಮುಖ್ಯವಲ್ಲ..ದೇವಸ್ಥಾನಕ್ಕೆ ಹೋಗಿ ಒಂದು ಕ್ಷಣ ಪ್ರಾರ್ಥನೆ ಸಲ್ಲಿಸಿ ಬರುತ್ತೇವಲ್ಲಾ? ಆಗ ಮನಸ್ಸಿಗೆ ಒಂದು ರೀತಿಯ ಪ್ರಶಾಂತತೆ, ನಿರ್ಮಲತೆ ಸಿಗುತ್ತೆ. ಶಾಂತಿ ದೊರೆಯುತ್ತೆ..ನಮ್ ಹೃದಯದಲ್ಲಿ ದೇವರಿದ್ದಾನೆ ಅಂದು ದೇವಸ್ತಾನಗಳಿಗೆ ಹೋಗದಿರಲು ಸಾಧ್ಯವಿಲ್ಲ..ಕಾರಣ ನಮ್ ನಂಬಿಕೆ ಅಷ್ಟೇ. ಆದ್ರೆ ಇಂಥ ಬ್ಯುಸಿನೆಸ್ ದೇವಾಲಯಗಳಿಗೆ ಮುಗ್ಧ ಭಕ್ತರು ಹಣ ಸುರೀತಾರಲ್ಲ..ಅದ್ಕೆ ಮನಸ್ಸು ಬೇಜಾರುಪಡುತ್ತೆ

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಥ್ಯಾಂಕ್ಯೂ ರಾಜೇಶ್,
ನೀವು ಹೇಳೋದು ಸತ್ಯ..ಆದ್ರೆ ದೇವಾಲಯಗಳಿಗೆ ನಮ್ಮ ದೇಶದಲ್ಲಿ ಅಷ್ಟೇ ಪ್ರಾಮುಖ್ಯತೆ ಇದೆ. ದೇವರು ಹೃದಯದಲ್ಲಿ ಇದ್ದಾನೆ ಎಂದು ಪೂಜಿಸುವವರು ಇರುವುದು ತೀರ ವಿರಳ. ನಂಗೆ ದೇವರಿದ್ದಾನೋ, ಇಲ್ವೋ ಅದು ಮುಖ್ಯವಲ್ಲ..ದೇವಸ್ಥಾನಕ್ಕೆ ಹೋಗಿ ಒಂದು ಕ್ಷಣ ಪ್ರಾರ್ಥನೆ ಸಲ್ಲಿಸಿ ಬರುತ್ತೇವಲ್ಲಾ? ಆಗ ಮನಸ್ಸಿಗೆ ಒಂದು ರೀತಿಯ ಪ್ರಶಾಂತತೆ, ನಿರ್ಮಲತೆ ಸಿಗುತ್ತೆ. ಶಾಂತಿ ದೊರೆಯುತ್ತೆ..ನಮ್ ಹೃದಯದಲ್ಲಿ ದೇವರಿದ್ದಾನೆ ಅಂದು ದೇವಸ್ತಾನಗಳಿಗೆ ಹೋಗದಿರಲು ಸಾಧ್ಯವಿಲ್ಲ..ಕಾರಣ ನಮ್ ನಂಬಿಕೆ ಅಷ್ಟೇ. ಆದ್ರೆ ಇಂಥ ಬ್ಯುಸಿನೆಸ್ ದೇವಾಲಯಗಳಿಗೆ ಮುಗ್ಧ ಭಕ್ತರು ಹಣ ಸುರೀತಾರಲ್ಲ..ಅದ್ಕೆ ಮನಸ್ಸು ಬೇಜಾರುಪಡುತ್ತೆ

ವಿಕಾಸ್ ಹೆಗಡೆ/Vikas Hegde said...

ಯಾವ ದೇವಸ್ಥಾನ ಅದು? ನೇರವಾಗಿ ಹೆಸರು ಹೇಳ್ಬೇಡಿ, ಸ್ವಲ್ಪ hints ಕೊಡಿ, ಗೊತ್ತಾಗತ್ತೋ ನೋಡ್ತೀನಿ