Tuesday, December 25, 2007

ಕರುಣಾಳು ಬಾ ಬೆಳಕೇ..

ಛಳಿ ಛಳಿಯಲೂ ಬಳಿ ಬಂದಿದೆ
ಹೊಸವರ್ಷದ ಬೆಳಕಿನ ಸ್ಪರ್ಶ
ಎಲೆ ಎಲೆಯಲ್ಲೂ ತಲೆದೋರಿದೆ
ಹೊಸ ಕಲೆಗಾರಿಕೆಯ ಹರ್ಷ
ಮಾತು ನಿಂತಿದೆ ಭಾವ ಹೊಳೆದಿದೆ
ಪ್ರೇಮದ ಎದೆಎದೆಯಲ್ಲಿ
ಅರಳಿ ನಿಂತಿದೆ ಬೆಳಕು ಹೀರಿದೆ
ಹೂವಿನ ದಳದಳಗಳಲ್ಲಿ..
ಹೌದು! ಮತ್ತೆ ಬಂದಿದೆ ಹೊಸ ವರ್ಷ. ಬದುಕಿನ ಹೊಸಿಲಲ್ಲಿ ಹೊಸ ವರ್ಷವನ್ನು ಸಡಗರ-ಸಂಭ್ರಮದಿಂದ ಸ್ವಾಗತಿಸಲು ಕಾತರದಿಂದ ಕಾಯುತ್ತಾ ನಿಂತಿದ್ದೇವೆ. ಇನ್ನೇನೋ ಕೆಲ ದಿನಗಳಲ್ಲಿ ಜನವರಿ 1 ಬಂದೇ ಬರುತ್ತೆ. ಹಳೆಯ ನೆನಪುಗಳನ್ನು ನೆನೆನೆನೆಯುತಲೀ..ಹೊಸ ಕನಸುಗಳು ಚಿಗುರೊಡೆಯುತ್ತವೆ. ಮೊನ್ನೆ ಮೊನ್ನೆ 2007ರ ಜನವರಿ 1ನ್ನು ಪ್ರೀತಿಯಿಂದ ಸ್ವಾಗತ ಮಾಡಿದ್ದೇವು. ಈಗ ಮತ್ತೆ ಹೊಸ ವರ್ಷ, ಮನಸ್ಸಿಗೆ ನವ ಸ್ಪರ್ಶ. ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯತ್ಯಾಸವುಂಟೇ? ಅದೇ ರಾಗ, ಅದೇ ಹಾಡು ಎಂಬಂತೆ ಅದೇ ಹಗಲು, ಅದೇ ರಾತ್ರಿ, ಅದೇ ಸೂರ್ಯ, ಅದೇ ಚಂದ್ರ. ಕಳೆದ ನಿನ್ನೆ-ಬರುವ ನಾಳೆ ಎಲ್ಲವೂ ಒಂದೇ..ಎಲ್ಲವೂ ಅದೇ. ಬಹುಶಃ ಮನುಷ್ಯನ ಕನಸು ಕಲ್ಪನೆಗಳನ್ನು ಮೂರ್ತ ರೂಪ ನೀಡಲು ವರ್ಷಕ್ಕೊಂದು ಆದಿ-ಅಂತ್ಯ ಮನುಷ್ಯ ಕಲ್ಪಿಸಿರಬಹುದೇನೋ..ಆದ್ರೂ ಏನೋ ಸಂಭ್ರಮ . ಹೊಸತಾದನ್ನು ಬಾಚಿ ಮುತ್ತಿಡುವ ಮನಸ್ಸು..ನವಿರುಭಾವಗಳ ಪುಳಕ. ಕನಸುಗಳನ್ನು ಸಾಕಾರಗೊಳಿಸಲುವ ಮಹತ್ತರ ಭರವಸೆ. ಇನ್ನೂ ಜಗವನ್ನು ಕಣ್ಣರಳಿಸಿ ನೋಡದ ಪುಟ್ಟ ಮಗುವಿನ ಹಾಲುಗಲ್ಲದಲ್ಲೂ ಹೊಸತನದ ಸ್ಪರ್ಶ.
ಹೊಸ ವರ್ಷವೆಂದರೆ ಮನಮನದಲ್ಲಿ ಹೊಸತನದ ಚಿಗುರು..ನವಹುರುಪಿನ ತಳಿರು
ನವಬದುಕಿಗೊಂದು ನೂತನ ಪಲ್ಲವಿ..ಹೊಸ ಮುನ್ನುಡಿ..

ಜಗತ್ತಿನಾದ್ಯಂತ ಹೊಸವರ್ಷವನ್ನು ಜನವರಿ 1ರಂದು ಆಚರಿಸಿದ್ದರೆ, ಭಾರತದಲ್ಲಿ ಚೈತ್ರಮಾಸದಲ್ಲಿ ಬರುವ ಯುಗಾದಿ ಹೊಸ ವರ್ಷ. ಆದರೆ ಬದಲಾದ ಜೀವನಶೈಲಿ, ಆಧುನಿಕರಣದ ಪರಿಣಾಮ, ಅಂತರ್ ರಾಷ್ಟ್ರೀಯದಲ್ಲಿ ಬೆಳಿಸಿಕೊಳ್ಳುವ ಹಂಬಲ..ಯುಗಾದಿಗಿಂತ ಜನವರಿ 1 ನೂತನ ವರ್ಷವಾಗಿಬಿಟ್ಟಿದೆ. ಇರಲಿ, 'ಕಾಲಕ್ಕೆ ತಕ್ಕ ಕೋಲ' ಜಗತ್ತಿನಾದ್ಯಂತ ಹೊಸ ವರ್ಷವನ್ನು ವಿಭಿನ್ನ ಶೈಲಿಯಲ್ಲಿ ಆಚರಿಸಲಾಗುತ್ತದೆ. ಜಾಗತಿಕವಾಗಿ ಪ್ರಸಿದ್ಧಿ ಹೊಂದಿರುವ ಗ್ರಿಗೋರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ 1ನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ರೋಮನ್ ದೇವತೆ ಜಾನುಸ್ಸನ ನೆನಪಿಗಾಗಿ ಜನವರಿ ಎನ್ನಲಾಗುತ್ತಿದೆಯಂತೆ. ಜಪಾನೀಯರು ಬಾಗಿಲಿಗೆ ಸ್ಟ್ರಾಗಳಿಂದ ಅಲಂಕಾರ ಮಾಡಿ, ದೇವರಲ್ಲಿ 'ಸುಖ-ಸಮೃದ್ಧಿ ನೀಡು, ದುಷ್ಟ ಶಕ್ತಿಗಳನ್ನು ದೂರವಿರಿಸು' ಎಂದು ಬೇಡುತ್ತಾರಂತೆ. ಚೀನಾದಲ್ಲಿ ಜನವರಿ 17ರಿಂದ ಫೆಬ್ರವರಿ 19ರ ನಡುವೆ ಬರುವ ಪಾಡ್ಯ ದಿನವನ್ನು 'ಯು ಆನ್ ಟ್ಯಾನ್' ಎಂದು ಕರೆದು ಹೊಸ ವರ್ಷವೆಂದು ಕರೆದು ಸಂಭ್ರಮಿಸುತ್ತಾರೆ. ಟಿಬೇಟಿಯನ್ನರಿಗೆ ಜನವರಿಯಿಂದ ಮಾರ್ಚ್ ತನಕ ಹೊಸ ವರ್ಷ.ಅದನ್ನೇ 'ಲೋಸರ್' ಎನ್ನುತ್ತಾರಂತೆ. ಇನ್ನು ಈಜಿಪ್ಟ್ನ ಬಹಳಷ್ಟು ಹಿಂದಿನ ಇತಿಹಾಸ ಗಮನಿಸಿದರೆ ಅಲ್ಲಿನ ಪವಿತ್ರ ನದಿ ನೈಲ್ ತುಂಬಿ ಹರಿದಾಗಲೇ ಅವರಿಗೆ ಹೊಸವರ್ಷವಂತೆ. ಹೀಗೆ ಜಗತ್ತಿನಾದ್ಯಂತ ಹೊಸ ವರ್ಷವನ್ನು ಸ್ವಾಗತಿಸುವ ಪರಿ ವಿಭಿನ್ನ.

ಹೌದು! ನಾವೂ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ದರಾಗಿದ್ದೇವೆ. ಏನ್ ಮಾಡೋದು ಹೊಸ ವರ್ಷಕ್ಕೆ..ಏನಾದ್ರೂ ಒಂದು ಮಾಡ್ಲೇಬೇಕು..ಕೆಲವರು ನಾನ್ ಇನ್ನು ಮುಂದೆ ಸಿಗರೇಟ್ ಸೇದಲ್ಲ, ಬಾರ್ -ಪಬ್ ಗೆ ಹೋಗಲ್ಲ, ಮದ್ಯ ಸೇವಿಸಲ್ಲ..ಅಮ್ಮ-ಅಪ್ಪನತ್ರ ಜಗಳ ಮಾಡಲ್ಲ..ಹೊಸ ಹುಡುಗೀನ/ಹುಡುಗನಾ ಲವ್ ಮಾಡ್ಬೇಕು..ಮದುವೆಯಾಗಬೇಕು..ಹೀಗೆ ಹತ್ತು ಹಲವು ಯೋಚನೆಗಳು..ಕನಸುಗಳು. ಅದ್ಸರಿ, ಪ್ರತಿಯೊಬ್ಬರಲ್ಲೂ ಇಂಥ ಹೊಸ ಹೊಸ ಕನಸುಗಳು ಇರಬೇಕು. ಹಾಗಂತ ಕುಡಿಯಲ್ಲ ಅಂದುಕೊಂಡು ಡಿಸೆಂಬರ್ 31 ರಾತ್ರಿ ಕಂಠಪೂರ್ತಿ ಕುಡಿದು ಬೀಡಿ ಬೀದಿಯಲ್ಲಿ ಬಿದ್ರೆ..?!ಎಷ್ಟೋ ಮಂದಿ ಇಂಥ ಸಂಕಲ್ಪಗಳನ್ನು ಮಾಡಿಬಿಟ್ಟು..ಮತ್ತೆ ತಮ್ಮ ಹಳೇ ಚಾಳಿಯನ್ನೇ ಮುಂದುವರೆಸುತ್ತಾರೆ. ಹೊಸ ವರ್ಷ ಬದುಕಿನಲ್ಲಿ ಹೊಸತನದ ಸುಪ್ರಭಾತ ಮೊಳಗಿ ಸಾಧನೆಯ ದಾರಿಗೆ ಪೂರಕವಾಗಬೇಕು..ಜ್ಞಾನದ ಮುನ್ನುಡಿಯಾಗಬೇಕು.

ಹೊಸ ಬೇರು ಹಳೆ ಚಿಗುರು ಕೂಡಿರಲು ಮರಸೊಬಗು..
ಕಳೆದ ದಿನಗಳ ಅನುಭವವು ಬರುವ ನಾಳೆಯಲ್ಲಿ ಸಮೃದ್ಧಿಯ ಬಾಳಿಗೆ ನಾಂದಿಯಾಗಬೇಕು
ಕವಿಋಷಿ ಕುವೆಂಪು ನೂತನ ವರ್ಷವನ್ನು
ತೆರೆದಿದೆ ಮನೆ ಓ ಬಾ ಅತಿಥಿ..
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ..
ಎನ್ನುತ್ತಾರೆ.
'ಅಂದವೇ ಆನಂದ, ಆನಂದವೇ ಮಕರಂದ'-ಹೊಸ ವರುಷದ ಸಂಭ್ರಮದ ಗಳಿಗೆ ನಿತ್ಯ ನೂತನವಾಗಿರಲಿ. ಬದುಕಿನ ಜಂಜಾಟಕ್ಕೆ ಸೋತ ಮೂಕಮನಸ್ಸಿಗೆ ಹೊಸತನ್ನು ಸಾಧಿಸುವ ಸ್ಪೂರ್ತಿ, ಚೈತನ್ಯ ತುಂಬಲಿ.
ಕರುಣಾಳು ಬಾ ಬೆಳಕೇ.
ಮುಸುಕಿದೀ ಮಬ್ಬಿನಲಿ
ಕೈಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ..
ಮನೆದೂರ ಕನಿಕರಿಸಿ,
ಕೈಹಿಡಿದು ನಡೆಸೆನ್ನನು
ಹೊಸ ವರುಷದ ಹೊಸಿಲಲ್ಲಿ ನಾವು ಬೆಳಕಿಗಾಗಿ ಬೇಡೋಣ..ಹೊಸತನದತ್ತ ಹೆಜ್ಜೆಹಾಕೋಣ. ಕ್ರಿಯಾಶೀಲ ಮನಸ್ಸಿನಿಂದ ಭವಿಷ್ಯದ ಬದುಕನ್ನು ಬೆಳಗೋಣ. ಕಳೆದ ವರ್ಷದಿಂದ ೀ ವರ್ಷಕ್ಕೆ ಬದಲಾವಣೆ ಆಗಿದೆಯೋ ಇಲ್ಲವೋ..ಆದರೆ ಉತ್ತಮ ಆಲೋಚನೆಗಳು ನಮ್ಮದಾಗಲಿ. ಸರ್ವರಿಗೂ ಹೊಸ ವರುಷದ ಶುಭಾಶಯಗಳು.

2 comments:

Rajesh said...

Hosa varushake nimage shubhashayagalu.
geleya
rajesh

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ತಮಗೂ ಸಹ,
"ಕಲ್ಲಾಗಿ ಇರಬೇಕು, ಕಠಿಣ ಭವದೊಳಗೆ
ಬಿಲ್ಲಾಗಿ ಇರಬೇಕು ತನ್ನವರೊಳಗೆ
ಮೆಲ್ಲನೆ ಮಾಧವಗೆ ಮನವ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಲ್ಲವರೊಳಗೆ"
-ಪುರಂದರದಾಸ
ಹೊಸ ವರುಷ ಹೊಸ ಸಂಕಲ್ಪ, ಬೆಳಗಿನ ಬದುಕಿಗೆ ನಾಂದಿಯಾಗಲಿ ಎಂದು ತುಂಬು ಮನದಿಂದ ಹಾರೈಸುತ್ತಿದ್ದೇನೆ.
ಇಂತಿ,
ಗೆಳತಿ ಚಿತ್ರ