Sunday, December 16, 2007

ಇದು ನ್ಯಾಯವೇ?

ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಹುಟ್ಟುಹಬ್ಬಕ್ಕೆ ನಮ್ಮ ಸರ್ಕಾರ ನಯಾಪೈಸೆ ಖರ್ಚು ಮಾಡಿಲ್ಲವಂತೆ. ಸರ್ಕಾರದ ಪರವಾಗಿ ಅಧಿಕೃತ ಜಾಹೀರಾತು ನೀಡುವ ಜಾಹೀರಾತು ಮತ್ತು ದೃಶ್ಯ ಪ್ರಸಾರ ನಿರ್ದೇಶನಾಲಯ ಅಕ್ಟೋಬರ್ 2ರ ಗಾಂಧೀ ಜಯಂತಿಗೆ 2.95 ಕೋಟಿ ಬಿಡುಗಡೆ ಮಾಡಿದ್ದರೆ, ಅದೇ ದಿನ ಹುಟ್ಟಿದ ಮಾಜಿ ಪ್ರಧಾನಿ ಹುಟ್ಟುಹಬ್ಬಕ್ಕೆ ಕವಡೆ ಕಾಸೂ ನೀಡಿಲ್ಲ ಅನ್ನೋ ಸತ್ಯ ಈಗ ಬಹಿರಂಗಗೊಂಡಿದೆ.

ಸಾಮಾಜಿಕ ಕಾರ್ಯಕರ್ತ ದೇವ್ ಆಶೀಶ್ ಭಟ್ಟಾಚಾರ್ಯ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಸಲ್ಲಿಸಿರುವ ಅರ್ಜಿಗೆ ಉತ್ತರಿಸಿರುವ ಕೇಂದ್ರ ಸರ್ಕಾರದ ಜಾಹೀರಾತು ಮತ್ತು ದೃಶ್ಯ ಪ್ರಸಾರ ನಿರ್ದೇಶನಾಲಯದ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ. ಜೈ ಕಿಸಾನ್, ಜೈ ಜವಾನ್ ಸಂದೇಶ ಹುಟ್ಟಿಕೊಂಡಿದ್ದೇ ಶಾಸ್ತ್ರೀಜಿ ಅವರಿಂದ. ಆದರೆ ಈ ಸಂದೇಶ ಸಾರುವುದಕ್ಕೆ ಸರ್ಕಾರ ಯಾವುದೇ ಆಸಕ್ತಿ ತೋರಿಸಿಲ್ಲ. ದೇಶದ ಎರಡನೇ ಪ್ರಧಾನಿಯಾಗಿ ಅತ್ಯಂತ ನಿಷ್ಟೆಯಿಂದ ಕೆಲಸ ಮಾಡಿದ್ವವರು ಶಾಸ್ತ್ರೀಜಿ. ಆದರೆ ಸರ್ಕಾರಕ್ಕೆ ಇವರ ನೆನಪೇ ಮರೆತುಹೋಗಿದೆ. ವಿದೇಶದಲ್ಲಿ ಸಾವುಂಡ ಏಕೈಕ ಪ್ರಧಾನಿ ಲಾಲ್ ಜೀ ಅವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ಕೇಂದ್ರ ಸರ್ಕಾರಕ್ಕೆ ನೆಹರೂ, ರಾಜೀವ್ ಗಾಂಧಿ, ಇಂದಿರಾಗಾಂಧಿ, ಅವರ ಹುಟ್ಟುಹಬ್ಬ ಬಹಳ ಬೇಗನೇ ನೆನಪಾಗುತ್ತದೆ. ಬೇಕಾದ್ರೆ ಒಂದು ವಾರಕ್ಕೆ ಮುಂಚೆನೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುವ ಬಗ್ಗೆ ಘೋಷಿಸಿಬಿಡುತ್ತಾರೆ. ಮಾತ್ರವಲ್ಲ ಇವ್ರ ಹುಟ್ಟುಹಬ್ಬದ ವಿಶೇಷವಾಗಿ ವಿವಿಧ ಯೋಜನೆಗಳನ್ನು ಜಾರಿಮಾಡಿಬಿಡುತ್ತಾರೆ. ಆದರೆ ಇದೇ ಸರ್ಕಾರಕ್ಕೆ ಲಾಲ್ ಜೀ ಅಂಥವರು ನೆನಪಾಗದಿರುವುದು ನಮ್ಮ ಧೀಮಂತ ಸರ್ಕಾರದ ದುರಂತ ಅನ್ನಬೇಕು. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ನೆನಪಾದ ಸರ್ಕಾರಕ್ಕೆ ಅದೇ ದಿನ ಹುಟ್ಟಿದ ಲಾಲ್ ಜೀ ಯಾಕೆ ನೆನಪಾಗುತ್ತಿಲ್ಲ? ಇದು ನಿರ್ಲಕ್ಷವಲ್ಲವೇ? ಅದೇ ಗಾಂಧಿ ಕುಟುಂಬದಲ್ಲಿ ಸತ್ತ ಎಲ್ಲರೂ ಯಾಕೆ ನೆನಪಾಗುತ್ತಾರೆ? ಇಂದು ಲಾಲ್ ಜೀ ಅಂಥವರನ್ನು ನೆನೆಸಿಕೊಳ್ಳುವುದು ಸ್ಕೂಲಲ್ಲಿರುವ ಪುಟ್ಟ ಮಕ್ಕಳು. ಏನು ಎತ್ತ? ಎಂದು ತಿಳಿದೇ ಇಲ್ಲದ ಪುಟ್ಟ ಮಕ್ಕಳು ಸ್ವಾತಂತ್ರ್ಯ ದಿನಾಚರಣೆ ಯಂದು 'ಲಾಲ್ ಬಹದ್ದೂರ್ ಶಾಸ್ತ್ರೀ ಜಿ ಕೆ ಜೈ' ಅಂದಾಗ ಮನಸ್ಸು ಖುಷಿಯಾಗುತ್ತದೆ. ಆದ್ರೂ ಗಾಂಧಿ ಕುಟುಂಬದವರಿಗೆ ಪಠ್ಯದಲ್ಲಿ ಕೊಟ್ಟಷ್ಟು ಪ್ರಾಧಾನ್ಯತೆ ಯಾವ ನಾಯಕರಿಗೂ ಕೊಡುತ್ತಿಲ್ಲ.

ಭಾರತ ಪ್ರಕಾಶಿಸುತ್ತಿದೆ! ಎಂದಾದರೆ ಅದು ಲಾಲ್ ಜೀ ಅಂಥ ತೆರೆಮರೆಯಲ್ಲಿ ಉಳಿದ ನಿಷ್ಠ ರಾಜಕಾರಣಿಗಳಿಂದ. ಆದರೆ ಇಂದು ಅವರಂಥವರನ್ನು ಜನರಿಂದ ಮರೆಯಾಗಿಸುವ ಪ್ರಯತ್ನ ಸರ್ಕಾರವೇ ಮಾಡುತ್ತಿದೆ. ಸುಭಾಷ್ ಚಂದ್ರ ಬೋಸ್ ದೇಶಕ್ಕಾಗಿ ಹೋರಾಡಿಯೇ ಇಲ್ಲ ಅನ್ನೋ ಮೂರ್ಖತನದ ವಾದ ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು. ಅವರ ಬಗ್ಗೆ ದಾಖಲೆಗಳೇ ಇಲ್ಲ ಅನ್ನಲಾಯಿತು. ಇಂದಿಗೂ ಅವರ ಸಾವು ನಿಗೂಢವೇ. ಇಂಥ ಮಹಾನ್ ವ್ಯಕ್ತಿಗಳ ಆದರ್ಶಗಳು ಏನಿದ್ದರೂ ಅವುಗಳು ರಾಜಕಾರಣಿಗಳ ಭಾಷಣಕ್ಕೆ ಭೂಷಣವಾಗುವುದು ನಿಜಕ್ಕೂ ವಿಪರ್ಯಾಸ. ಗಾಂಧೀಜಿಯ ಗ್ರಾಮೋದ್ದಾರದ ಬಗ್ಗೆ ಬಡಾಯಿ ಕೊಚ್ಚುವ ನಮ್ ಸರ್ಕಾರ ರೈತರ ಕೃಷಿ ಭೂಮಿಯಲ್ಲಿ ಎಸ್ ಯ ಝಡ್ ಸ್ಥಾಪನೆಗಾಗಿ ಅನ್ನದಾತರನ್ನೇ ಕೊಲ್ಲುತ್ತಿದೆ. ನೀವೇ ಹೇಳಿ ಇದು ನ್ಯಾಯವೇ?

2 comments:

Rajesh said...

huttu habbakella ashtondu talekedisikollabedi.
rajesh

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಸ್ವಾಮೀ..ಹುಟ್ಟಲಿ,ಸಾಯಲಿ ನಂಗೆ ಚಿಂತೆ ಅದಲ್ಲ, ಸರ್ಕಾರದ ಕಾಳಜಿಯನ್ನು ಒಂದು ನಿದರ್ಶನದ ಮೂಲಕ ಹೇಳಿದೆ. ನಿಮ್ಮ ಅಭಿಪ್ರಾಯಕ್ಕೆ ಸದಾ ಸ್ವಾಗತ