Friday, December 14, 2007

ಹೀಗೊಂದು ಮದುವೆ, ಕರೆಯೋಲೆ

ನಾವು ಸೇವಿಸುವ ಆಹಾರ
ಗ್ರಾಮೀಣ ಮಹಿಳೆಯರ ಹಸಿವು ನೀಗಿಸಿದರೆ...
ನಾವು ಬೆಳಗುವ ಮಣ್ಣಿನ ದೀಪ
ಕುಂಬಾರರ ಬದುಕಿಗೂ ಬೆಳಕು ತಂದರೆ..
ನಾವು ಬಳಸುವ ಬಟ್ಟೆ
ಕೈ ಮಗ್ಗ ನೇಕಾರರ ಬಾಳು ಬೆಚ್ಚಗಾಗಿಸಿದರೆ..
ನಾವು ಕುಡಿಯುವ ಪಾನೀಯಗಳು
ರೈತರ ಹೊಟ್ಟೆ ತಣ್ಣಗಾಗಿಸಿದರೆ..
ನಾವು ದಿನನಿತ್ಯ ಕೊಂಡುಕೊಳ್ಳುವ ವಸ್ತುಗಳು
ಸ್ಥಳೀಯರ ಜೀವನ ನಿರ್ವಹಣೆಗೆ ದಾರಿಯಾದರೆ..
ದೇಶ ಸೇವೆ ಮಾಡಲಿಲ್ಲವೆಂಬ ಕೊರಗೇಕೆ?!! ಸ್ವದೇಶಿ ಬಳಸೋಣ, ದೇಶ ಉಳಿಸೋಣ. ಈ ಮಾತು ಎಲ್ಲಿಂದ ಅಂಥ ಆಶ್ಚರ್ಯನಾ? ಒಂದು ಮದುವೆ ಕಾಗದಲ್ಲಿದ್ದ ಮಾತುಗಳು. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗುವ ಸಂದರ್ಭಗಳು ತೀರ ಕಡಿಮೆಯಾದರೂ, ಮದುವೆ ಕರೆಯೋಲೆಗಳನ್ನು ವಿವಿಧ ಬಣ್ಣದಲ್ಲಿ, ವೈವಿಧ್ಯಮಯವಾದ ವಿನ್ಯಾಸಗಳಲ್ಲಿ ಮಾಡಿಸುವವರು ಇದ್ದಾರೆ. ಮಂಗಳೂರಿನ ಜಯಪ್ರಕಾಶ್ ಮತ್ತು ನಮಿತ ಎಂಬುವವರ ಮದುವೆ ಕರೆಯೋಲೆಯಿದು. ಇಷ್ಟು ಮಾತ್ರವಲ್ಲ 'ಪ್ಲಾಸ್ಟಿಕ್ ಅಂದ್ರೆ ವರವಲ್ಲ, ಶಾಪ' ಎಂಬ ಒಕ್ಕಣೆಯೊಂದಿಗೆ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳು, ಆಲ್ಕೋಹಾಲ್ ನಿಂದ ಆಗುವ ದುಷ್ಟರಿಣಾಮಗಳು ಎಲ್ಲವನ್ನು ಷಟ್ಬುಜ ಆಕಾರದ ಕರೆಯೋಲೆಯಲ್ಲಿ ಸುಂದರವಾಗಿ ಮುದ್ರಿಸಲಾಗಿತ್ತು. ಇಷ್ಟು ಮಾತ್ರವಲ್ಲ ಅವರ ಮದುವೆ ನಡೆದಿದ್ದು ತೀರ ವಿಭಿನ್ನವಾಗಿ. ಮದುವೆಯಲ್ಲಿ ಕಿವಿಗೆ ಬಡಿಯುವ ಅಬ್ಬರದ ಪಾಶ್ವಾತ್ಯ ಸಂಗೀತ ಇರಲಲ್ಲ, ಬದಲಾಗಿ ದಾಸರ ಪದಗಳು, ಯಕ್ಷಗಾನ ಮದುವೆಗೆ ಬಂದವರ ಮನಸ್ಸಿಗೆ ಮುದನೀಡಿತ್ತು.

ಈ ಮದುವೆ ಬಗ್ಗೆ ಬರೆದಾಗ ನಂಗೆ ಇತ್ತೀಚೆಗೆ ನಡೆದ ಪ್ರಮೀಳಾ ಕಾಪಿಕಾಡ್ ಎಂಬುವವರ ಮದುವೆಯ ನೆನಪಾಯಿತು. ಅದು ಇನ್ನೂ ವಿಶಿಷ್ಠ. ಈ ಮದುವೆಗೆ ಯಾವುದೇ ರೆಕಾರ್ಡಿಂಗ್ ಮಾಡಿರುವ ಚಿತ್ರಗೀತೆಗಳು ಅಥವಾ ಇನ್ಯಾವುದೇ ಗೀತೆಗಳನ್ನು ಬಳಸಿಲ್ಲ. ಮದುವೆಗೆ ಬಂದ ಬಂಧುಗಳನ್ನು ಸ್ವಾಗತಿಸಿದ್ದು ಬೆಲ್ಲದ ಪಾನಕ ಮತ್ತು ದ್ರಾಕ್ಷಿರಸ. ಯಾವುದೇ ಶಾಮಿಯಾನ ಬಳಸದೆ, ಬರೇ ಮಡಲು ಮತ್ತು ವೀಳ್ಯದೆಲೆ ಚಪ್ಪರ. ಬಂದವರನ್ನು ಮಾತಿನ ಮೂಲಕ ಸ್ವಾಗತಿಸಲು, ವಧು-ವರರ ಬಗ್ಗೆ ಒಂದಿಷ್ಟು ಪರಿಚಯಿಸಲು, ಧಾರಾಕಾರ್ಯಕ್ರಮ, ಒಂದಿಷ್ಟು ಬಿಸಿಬಿಸಿ ಜೋಕ್ಸ್ ಎಲ್ಲಕ್ಕೂ ಒಬ್ಬ ನಿರೂಪಕ, ಒಂದೆಡೆ ಸುಗಮ ಸಂಗೀತ, ನಂತರ ಮಕ್ಕಳ ಯಕ್ಷಗಾನ ಮದುವೆಗೆ ಬಂದ ಅತಿಥಿಗಳಿಗೆ ಖುಷಿನೀಡಿತು. ಇಷ್ಟು ಮಾತ್ರವಲ್ಲ ಪ್ರಮೀಳಾ ಅವರು ಬರೆದಿರುವ ಕವನ ಸಂಕಲನವೂ ಅಲ್ಲಿ ಬಿಡುಗಡೆ ಮಾಡಲಾಯಿತು.

ಇಂಥ ಮದುವೆಗಳು, ಸಾಮಾಜಿಕ ಕಳಕಳಿಯುಳ್ಳ ಮದುವೆ ಕರೆಯೋಲೆಗಳು ತೀರ ಅಪರೂಪ. ಮದುವೆನ್ನು ಅದ್ಧೂರಿಯಾಗಿ ನಡೆಸಿದ್ರೇನೇ ಗೌರವ ಅಂದುಕೊಂಡವರ ನಡುವೆ ಇಂಥ ಅಪೂರ್ವ ಜನರನ್ನು ಕಂಡಾಗ ಖುಷಿಯಾಗುತ್ತೆ. ಮದುವೆ ಕಾಗದದಲ್ಲಿ ಈ ರೀತಿಯ ನುಡಿಗಳನ್ನು ಬರೆದ್ರೆ ಒಂದು ರೀತಿಲಿ ಅದೊಂದು ಬಗೆಯ ಜಾಗೃತಿಯೇ. ಸಾಮಾಜಿಕ ಜಾಗೃತಿಗಾಗಿ ಕೋಟಿಗಟ್ಟಲೆ ಹಣ ನೀರಿನಂತೆ ಖರ್ಚು ಮಾಡುವ ಬದಲು, ಈ ರೀತಿಯಲ್ಲಿ ಮಾಡಿದ್ರೆ ತುಂಬಾ ಒಳ್ಳೆಯದು ಅನಿಸುತ್ತೆ. ರಾತ್ರೀಯಿಡೀ ಮೂಗಿನತನಕ ಕುಡಿದು, ಎಂಜಾಯ್ ಮದುವೆಗಳಿಗಿಂತ ಯಕ್ಷಗಾನ ನೋಡ್ತಾ ಕೂರೋದೇ ಚೆನ್ನ. ನಂಗಂತೂ ಈ ಮದುವೆ, ಮದುವೆ ಕರೆಯೋಲೆಗಳು ತುಂಬಾ ಇಷ್ಟವಾದುವು. ನೋಡೋಣ ಮುಂದೆ ನಮ್ ಮದುವೆ ಹೇಗೆ ಮಾಡೋದು ಅಂತ? ನಾನಂತೂ ಆ ಬಗ್ಗೆ ಸಕತ್ ಡೀಪ್ ಆಗಿ ಥಿಂಕ್ ಮಾಡ್ತಾ ಇದ್ದೀನಿ ಕಣ್ರೀ.

3 comments:

ಹೆಸರು ರಾಜೇಶ್, said...

maduve sambramada samaya kanri. adarallella jagruti, mahiti antella yochane madabaradu. maduveyadavaru samthoshadindirabeku mattu maduvege hodavarige olleya oota hakisabeku. aste. edarallella jagruti antella talekedisikollabedi. hogli bega oota haksi.
geleya
rajesh

ಚಿತ್ರಾ ಸಂತೋಷ್ said...

ಊಟ ಹಾಕಿಸೋಣ..ಅದೂ ನಿಮ್ಮನ್ನ ಅಂಬಾರಿಯಲ್ಲಿ ಕರೆತರೋಣ ಸರೀನಾ? ಬರುವ ವರ್ಷವೇ ಊಟ ಹಾಕಿಸ್ತೀನಿ ಕಣ್ರೀ..

Unknown said...

ನಮಸ್ಕಾರ ಕಣ್ರಿ,

ನನ್ನ ಹೆಸರು ಸಂತೋಷ್ ಅಂತ. ನನ್ನದೊಂದು ಲಿಂಕ್ ಇದೆ:

http://kannadahanigalu.com/

ನನ್ನ ಮನವಿಯಂದರೆ, ನೀವು ಆ ಲಿಂಕ್‍ನ್ನು ವೀಕ್ಷಿಸಿ, ನಿಮ್ಮ ಅಲೆಗಳ ಪಯಣದ ಜೊತೆಗಾರರುವಿನಲ್ಲಿ ಪ್ರಕಟಿಸಿದರೆ, ತುಂಬ ಉಪಯುಕ್ತವಾಗುತ್ತದೆ. ಅಂತೆಯೇ ನಾನೂ ಕೂಡ, ನನ್ನ ಲಿಂಕ್‍ನಲ್ಲಿ ನಿಮ್ಮ ಬ್ಲಾಗ್ ಬಗ್ಗೆ ಹಾಕುತ್ತೇನೆ.

ಇಂತಿ ನಿಮ್ಮ ಎದುರುನೋಡುತ್ತಿರುವ.