Friday, December 14, 2007

ಗೌಡ್ರು ಕುಂಬಳ ಕಾಯಿ ಕಳ್ಳರೇ..?!

ರವಿಬೆಳಗೆರೆ ನಿರ್ದೇಶನದ 'ಮುಖ್ಯಮಂತ್ರಿ ಐ ಲವ್ ಯೂ' ಸಿನಿಮಾ ತೆರೆಕಾಣೋಕೆ ಮುಂಚೆಯೇ ನಮ್ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಸಂಬಂಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಅಂದಾಗ ಯಾಕೋ ನನಗೆ 'ಕುಂಬ್ಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡ್ಕೊಂಡ' ಎಂಬ ಗಾದೆ ಮಾತು ನೆನಪಾಗುತ್ತಿದೆ. ಥೂ! ಈ ನೆನಪನ್ನಾ ಬಿಟ್ಟಾಕು ಅಂದ್ರೂ ಮನಸ್ಸಲ್ಲಿ ಅದೇ. ಯಾಕಪ್ಪ ಈ ಹಿರಿಗೌಡ್ರು ಈ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ತಾರೆ ಅಂತ. ಬೆಳಗೆರೆ ವಿರುದ್ಧ ಮುನಿಸಿಕೊಂಡ ಗೌಡ್ರು 10 ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರಂತೆ. ಬೆಳಗೆರೆ ತಮ್ಮ ಕುಟುಂಬದ ಬಗ್ಗೆ ಪೂರ್ವಾಗ್ರಹಪೀಡಿತರಾಗಿ ಲೇಖನ ಮತ್ತು ಸಂದರ್ಶನಗಳ ಮೂಲಕ ಮಾನಹರಣ ಮಾಡಿದ್ದಾರೆ. 'ಮುಖ್ಯಮಂತ್ರಿ ಐ ಲವ್ ಯೂ' ಸಿನಿಮಾನ ನಿಲ್ಲಿಸಬೇಕೆಂಬುದು ಗೌಡ್ರ ವಾದ.

ಈಗ ವಿಷಯಕ್ಕೆ ಬರೋಣ. ನಿಜಕ್ಕೂ ಈ ಸಿನಿಮಾದಲ್ಲಿ 'ಕುಮಾರಸ್ವಾಮಿ ಐ ಲವ್ ಯೂ' ಅಂತ ಇದೆಯಾ? ಅಷ್ಟಕ್ಕೂ ಈ ಸಿನಿಮಾ ತೆರೆ ಕಂಡಿಲ್ಲ. ತೆರೆಕಾಣೋಕೆ ಇನ್ನೂ ದಿನವಿದೆಯಲ್ಲಾ? ಈಗ್ಲೇ ದೇವೇಗೌಡ್ರಿಗೆ ಈ ಸಿನಿಮಾದಲ್ಲಿ ಇರೋದು ನನ್ ಮಗ ಕುಮಾರನೇ ಅಂತ ಹೇಗೆ ಗೊತ್ತಾಯ್ತು? ಅಥವಾ ಮುಖ್ಯಮಂತ್ರಿ ಅಂದ್ರೆ ಅದು ಕುಮಾರಸ್ವಾಮಿ ಮಾತ್ರನಾ? ಈ ಹಿಂದೆ ಮುಖ್ಯಮಂತ್ರಿ ಯಾರೂ ಆಗಿಲ್ವಾ? ತೆರೆಕಾಣೋ ಮೊದ್ಲು ಸಿನಿಮಾದ ಭವಿಷ್ಯ ಹೇಳಲು ಹೊರಟ ಗೌಡ್ರು 'ಕುಂಬಳ ಕಾಯಿ ಕದ್ದವನ ಥರ ಯಾಕಾಡ್ತಾರೆ?

ಒಂದು ವೇಳೆ ಈ ಸಿನಿಮಾದ ಕತೆ ಮುಖ್ಯಮಂತ್ರಿಗಳ ಹಗರಣ, ಭ್ರಷ್ಟಾಚಾರ ಎಲ್ಲವನ್ನೂ ಒಳಗೊಂಡಿದ್ದರೆ(ಇನ್ನೂ ಸಿನಿಮಾ ತೆರೆಕಾಣದೆ ನಮಗೆ ಕತೆ ತಿಳಿಯೊಲ್ಲ) ದೇವೇಗೌಡ್ರು ಅಥವಾ ಕುಮಾರಸ್ವಾಮಿ ತಪ್ಪಿತಸ್ಥರು ಆಗಲ್ವಾ? ಇಲ್ಲವಾದ್ರೆ ಗೌಡ್ರು ಯಾಕೆ ತಲೆಕೆಡಿಸಿಕೊಳ್ಳಬೇಕು? ಮೊನ್ನೆ ಮೊನ್ನೆ ತನಕ ಅಧಿಕಾರ ಹಸ್ತಾಂತರ ನಾಟಕದಲ್ಲಿ ಆಧುನಿಕ ಭಸ್ಮಾಸುರನೆಂದು ಜನರಿಂದ ಕರೆಸಿಕೊಂಡ ದೇವೇಗೌಡ್ರಿಗೆ ಮತ್ತೆ ಜನರಿಂದ ಉಗಿಸಿಕೊಳ್ಳುವ ಆಸೆಯೇ? 'ಮುಖ್ಯಮಂತ್ರಿ ಐ ಲವ್ ಯೂ' ಅಂದ ತಕ್ಷಣ ನನ್ ಮಗನನ್ನೇ ಸಿನಿಮಾದಲ್ಲಿ ಬೊಟ್ಟು ಮಾಡಿ ತೋರಿಸಲಾಗಿದೆ ಎನ್ನುವ ದೇವೇಗೌಡ್ರ ಮಾತು ಸರಿಯೆಂದಾದರೆ, ಸಿನಿಮಾದಲ್ಲಿ ಹಗರಣಗಳ ಬಣ್ಣ ಬಯಲು ಮಾಡಿದ್ರೆ. ಈವರೆಗೆ ಬಿಜೆಪಿಯವರು ಜೆಡಿಎಸ್ ಮೇಲೆ ಮಾಡಿರುವ ಆರೋಪಗಳೆಲ್ಲಾ ಸತ್ಯ ಅಂತಾನೇ ನಂಬಬೇಕು. ಈವರೆಗೆ 26 ಮಂದಿ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಅಂದ ತಕ್ಷಣ ನನ್ ಮಗ, ನನ್ ಮಗ ಕುಮಾರನೇ ಅಂತ ಬೊಬ್ಬಿಡುವ ಈ ದೇವೇಗೌಡ್ರಿಗೆ 'ಕುಟುಂಬ ರಾಜಕಾರಣದ ಸೂತ್ರದಾರ' ಅನ್ನೋದ್ರಲ್ಲಿ ಯಾವ ತಪ್ಪುನೂ ಇಲ್ಲ ಬಿಡಿ. ತಮಾಷೆ ಅಂದ್ರೆ ಗೌಡ್ರ ಮಾನನಷ್ಟ ಮೊಕದ್ದಮೆಗೆ ಬೆಳಗೆರೆ ಪ್ರತಿಕ್ರಿಯಿಸಿದ್ದು ತಮಾಷೆಯಾಗಿದೆ. ಅದೇನಂದ್ರೆ "ಫಿಲಂ ಬಿಡುಗಡೆ ಆಗೋಕೆ ಮುಂಚೆಯೇ ಜೆಡಿಎಸ್ ಗಾಬರಿ ಕಂಡಾಗ ಮರುಕ ಆಗುತ್ತಿದೆ" ಎಂದು. ಏನಂತೀರಾ? ನನ್ ಮಾತು ಸುಳ್ಳನಿಸುವುದೇ?

4 comments:

Anveshi said...

ಹೌದು,

ಹಿರೇಗೌಡ್ರು ಎಲ್ಲೋ ಇದ್ದ ಕುಂಬಳಕಾಯಿಯನ್ನು ತಮ್ಮ ಹೆಗಲ ಮೇಲೆ ತಂದಿಟ್ಟುಕೊಂಡು, ತಾನು ಕಳ್ಳ ಕಳ್ಳ ಅಂತ ಸಾರಿ ಸಾರಿ ಹೇಳ್ತಾ ಇದಾರೆ...

ಚಿತ್ರಾ ಸಂತೋಷ್ said...

ಪ್ರತಿಕ್ರಿಯೆ ಧನ್ಯವಾದಗಳು
ನಂಗ್ಯಾಕೋ ಡೌಟು..ಹಿರೇಗೌಡ್ರು ಎಲ್ಲೋ ಇದ್ದ ಕುಂಬ್ಳಕಾಯಿನ ತನ್ ಹೆಗಲ ಮೇಲೆ ಇಟ್ಟುಕೊಂಡಿದ್ದಾರೆ ಅನ್ನೋದ್ರಲ್ಲಿ...
ವೆರಿ ಥ್ಯಾಂಕ್ಸ್

ಹೆಸರು ರಾಜೇಶ್, said...

gowdaru kallaraddarinda tane hegalu muttukondaddu. tondareilla bidi. cinema nodona.
rajesh

ಚಿತ್ರಾ ಸಂತೋಷ್ said...

ತೊಂದರೆ ಇಲ್ಲ ಅನ್ನೋದಾದ್ರೆ ದೇವೇಗೌಡ್ರ ಕೋಟಿ ಕೋಟಿ ಕನ್ನಡಿಗರು ಗೌಡ್ರ ಬಗ್ಗೆ ತಲೆಕೆಡಿಸಿಕೊಳ್ತಾ ಇರಲಿಲ್ಲ. ಟಿಕೇಟ್ ಖರೀದಿಸಿ..ನಾನೂ ಬರ್ತೀನಿ ಸಿನಿಮಾಕ್ಕೆ..ಥ್ಯಾಂಕ್ಯೂ ಫ್ರೆಂಡ್